1945 ರ ನಂತರ ಭಾರತದ ಪ್ರವಾಸೋದ್ಯಮ  (Indian Tourism After 1945)

1945 ರ ನಂತರ ಭಾರತದ ಪ್ರವಾಸೋದ್ಯಮ (Indian Tourism After 1945)

ಸರ್. ಜಾನ್ ಸಾರ್ಜೆಂಟ್ ಆಯೋಗ.

ಭಾರತದ ಪ್ರವಾಸೋದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕ್ರಮ ಕೈಗೊಂಡಿತು. ಇದರ ಪರಿಣಾಮವೇ ಸಾರ್ಜೆಂಟ್ ಆಯೋಗ. 1945ರಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸರ್. ಜಾನ್ ಸಾರ್ಜೆಂಟ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈತ ಭಾರತ ಸರ್ಕಾರದ ಶೈಕ್ಷಣಿಕ ಸಲಹೆಗಾರನಾಗಿದ್ದ. ನಾಡಿನ ಪ್ರವಾಸಿ ಸಂಚಾರದ ಸಾಧಕ ಭಾದಕಗಳನ್ನು ಸಮೀಕ್ಷಿಸುವುದು ಸಾರ್ಜೆಂಟ್ ವರದಿಯ ಮುಖ್ಯ ಉದ್ದೇಶವಾಗಿತ್ತು.

 ಉದ್ದೇಶಗಳು (Objectives)

ಸಾರ್ಜೆಂಟ್ ಸಮಿತಿಯ ಉದ್ದೇಶಗಳು ಈ ಕೆಳಗಿನಂತಿವೆ.

  1. ಪ್ರಪಂಚದ ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳ ಮೊದಲು ಭಾರತದ ದೇಶಿಯ ಹಾಗೂ ವಿದೇಶಿ ಪ್ರವಾಸಿಗರ ಸಂಚಾರ ಸ್ವರೂಪ ಹಾಗೂ ವ್ಯಾಪ್ತಿಯ ಕುರಿತು ಅಧ್ಯಯನ ಮಾಡುವುದು.
  2.  ಭಾರತದ ಒಳಗೆ ಹಾಗೂ ಹೊರಗೆ ಭಾರತದ ಪುರಾತತ್ವ ನೆಲೆಗಳು, ತೀರ್ಥಯಾತ್ರೆ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ಸುಂದರ ತಾಣಗಳು, ಹವಾಮಾನ ಸ್ಥಳಗಳು, ರಜೆಯ ವಿಶ್ರಾಂತಿ ಕೇಂದ್ರಗಳು, ಐತಿಹಾಸಿಕ ಕೇಂದ್ರಗಳು ಹಾಗೂ ಪ್ರಾಕೃತಿಕ ದೃಶ್ಯಾವಳಿಗಳ ಕುರಿತು ಹೆಚ್ಚು ಪ್ರಚಾರ ಮಾಡುವುದು.
  3.  ದೇಶಿಯ ಹಾಗೂ ವಿದೇಶಿ ಪ್ರವಾಸಿಗರಿಗೆ ಒದಗಿಸುವ ಸಾರಿಗೆ, ವಸತಿ, ಊಟ, ಮಾರ್ಗದರ್ಶಿ ಪುಸ್ತಕಗಳು, ಮಾರ್ಗದರ್ಶಕರು, ಸಾಹಿತ್ಯ ಪೂರೈಕೆ ಮೊದಲಾದ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
  4. ಭಾರತದ ಪ್ರಾಂತ, ಸ್ಥಳೀಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಕ್ರಮ ಕೈಗೊಳ್ಳುವುದು.
  5.  ಪ್ರವಾಸಿ ಪ್ರಯಾಣದ ಬಗ್ಗೆ ಕ್ರಮ ಕೈಗೊಳ್ಳುವುದು.
  6.  ಬಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡುವುದು.
  7.  ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರಿಗೆ ಸೂಕ್ತ ತರಬೇತಿ ನೀಡುವುದು.
  8.  ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ಸಂಗ್ರಹಿಸುವುದು.

ವರದಿಯ ಶಿಫಾರಸ್ಸುಗಳು (Reports)

ಸಾರ್ಜೆಂಟ್ ಸಮಿತಿಯು  1946 ರ ಅಕ್ಟೋಬರ್‌ನಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ಅದರ ಮುಖ್ಯಾಂಶಗಳು ಹೀಗಿವೆ.

  1. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಪ್ರತ್ಯೇಕ ಸ್ವತಂತ್ರ ಪ್ರವಾಸೋದ್ಯಮವನ್ನು ಸ್ಥಾಪಿಸುವುದು.
  2.  ಪ್ರವಾಸಿ ಪ್ರಚಾರ ಕಚೇರಿಗಳನ್ನು ಮುಂಬೈ, ದೆಹಲಿ, ಕಲ್ಕತ್ತಾ ಹಾಗೂ ಮದ್ರಾಸ್‌ಗಳಲ್ಲಿ ಸ್ಥಾಪಿಸುವುದು.
  3.  ಭಾರತದ ಪ್ರವಾಸೋದ್ಯಮದ ಕುರಿತು ಭಾರತದ ಒಳಗೆ ಹಾಗೂ ವಿದೇಶಗಳಲ್ಲಿ ಪ್ರಚಾರ ಮಾಡುವುದು.
  4.  ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳು, ಮಾರ್ಗದರ್ಶಿ ಪುಸ್ತಕಗಳು, ಕೈಪಿಡಿಗಳು ಹಾಗೂ ಬಿತ್ತಿ ಪತ್ರಗಳನ್ನು ಹಂಚುವುದು.
  5. ಹೋಟೆಲ್‌ಗಳಲ್ಲಿ ಊಟ ವಸತಿಗಳನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ಹೋಟೆಲ್ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಏರ್ಪಡಿಸುವುದು.
  6.  ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ತಯಾರಿಸುವುದು.
  7.  ವಿಮಾನ, ಬಸ್ಸು ಹಾಗೂ ರೈಲು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇಟ್ಟುಕೊಳ್ಳುವುದು.
  8.  ಪ್ರವಾಸಿಗರಿಗಾಗಿ ಗುಣಮಟ್ಟದ ಹೋಟೆಲ್‌ಗಳನ್ನು ನಿರ್ಮಿಸುವುದು.
  9.  ವಿದೇಶಗಳಲ್ಲಿ ಭಾರತೀಯ ಪ್ರವಾಸೋದ್ಯಮ ಪ್ರಚಾರ ಕಚೇರಿಗಳನ್ನು ಸ್ಥಾಪಿಸುವುದು.

ಅನುಷ್ಠಾನ:  ಭಾರತದ ಬ್ರಿಟಿಷ್ ಸರ್ಕಾರವು ಸಾರ್ಜೆಂಟ್ ವರದಿಯನ್ನು ಒಪ್ಪಿಕೊಂಡು ಅದನ್ನು 1948 ರಲ್ಲಿ ಜಾರಿಗೊಳಿಸಿತು. ಆ ಪ್ರಕಾರ ಸಾರಿಗೆ ಸಚಿವಾಲಯದ ಅಡಿಯಲ್ಲಿ ಪ್ರವಾಸಿ ಸಂಚಾರಿ ಸಮಿತಿಯನ್ನು ನೇಮಕ ಮಾಡಲಾಯಿತು. 1949ರಲ್ಲಿ ಸಚಿವಾಲಯದ ಅಡಿಯಲ್ಲಿದ್ದ ಪ್ರವಾಸಿ ಸಂಚಾರಿ ಶಾಖೆಯನ್ನು ಪ್ರತ್ಯೇಕಿಸಿ ಸ್ವತಂತ್ರ ಶಾಖೆಯನ್ನು ತೆರೆಯಲಾಯಿತು. 1956ರಲ್ಲಿ ಈ ಸಂಚಾರಿ ಪ್ರವಾಸಿ ಶಾಖೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ.

  1. ಪ್ರವಾಸಿ ಸಂಚಾರಿ ವಿಭಾಗ: ಈ ವಿಭಾಗವು ಹೋಟೆಲ್, ವಸತಿ, ವಿಶ್ರಾಂತಿ ಗೃಹ ಮೊದಲಾದವುಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಅಂಕಿ ಅಂಶಗಳನ್ನು ಸಂಗ್ರಹಿಸುವುದು, ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡುವುದು ಹಾಗೂ ಪ್ರವಾಸಿ ಏಜೆಂಟರ ನೇಮಕ ಮೊದಲಾದವುಗಳನ್ನು ನೋಡಿಕೊಳ್ಳಬೇಕಾಗಿತ್ತು.

2.. ಪ್ರವಾಸಿ ಆಡಳಿತ ವಿಭಾಗ:  ನೂತನ ಪ್ರವಾಸಿ ಕಚೇರಿ ತೆರೆಯುವುದು, ವಾರ್ಷಿಕ ಆಯವ್ಯ ತಯಾರಿಸುವುದು ಪ್ರವಾಸಿ ಕಚೇರಿಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಕಚೇರಿಗಳ ತಪಾಸಣೆ ಮಾಡುವುದು, ಪ್ರವಾಸಿ ಆಡಳಿತ ವಿಭಾಗದ ಕರ್ತವ್ಯಗಳಾಗಿವೆ.

  1. ಪ್ರವಾಸಿ ಪ್ರಚಾರ ವಿಭಾಗ: ಪ್ರವಾಸೋದ್ಯಮ ಇಲಾಖೆಯು ಪ್ರಚಾರಕ್ಕಾಗಿ ಜಾಹೀರಾತು ನೀಡುವುದು, ಮಾರ್ಗದರ್ಶಿ ಕೈಪಡಿ ತಯಾರಿಸುವುದು, ಪ್ರವಾಸಿ ಸಾಹಿತ್ಯವನ್ನು ಪ್ರಕಟಿಸಿ ಹಂಚುವುದು, ಕಿರು ಹೊತ್ತಿಗೆ ಹಾಗೂ ಬಿತ್ತಿ ಪತ್ರ ಪ್ರಕಟಿಸುವುದು ಪ್ರವಾಸಿ ಪ್ರಚಾರ ವಿಭಾಗದ ಕಾರ್ಯಗಳಾಗಿವೆ.
  1. ಪ್ರವಾಸಿ ಮಾಹಿತಿ ವಿತರಣಾ ವಿಭಾಗ: ಪ್ರವಾಸ ಸಾಹಿತ್ಯವನ್ನು ವಿದೇಶಗಳಲ್ಲಿ ಹಂಚುವುದು, ಪ್ರಕಟಿಸುವುದು, ಇದರ ಕಾರ್ಯಗಳಾಗಿವೆ. ಸಾರ್ಜೆಂಟ್ ವರದಿಯ ಪ್ರಕಾರ ಭಾರತ ಸರ್ಕಾರವು 10 ಪ್ರವಾಸಿ ಕಚೇರಿಗಳನ್ನು ತೆರೆಯಿತು ಅವುಗಳಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ದೆಹಲಿ, ಕಲ್ಕತ್ತಾ, ಮದ್ರಾಸ್ ಹಾಗೂ ಮುಂಬೈಗಳಲ್ಲಿ ತೆರೆಯಲಾಯಿತು. ಉಳಿದ ಆರು ಮಾಹಿತಿ ಕೇಂದ್ರಗಳನ್ನು ಆಗ್ರ, ಕೊಚ್ಚಿನ್, ಬೆಂಗಳೂರು, ಔರಂಗಬಾದ್, ಪಣಜಿ, ಪೋರ್ಟ್ ಬ್ಲೈರ್, ಭುವನೇಶ್ವರ, ಜೈಪುರ ಖಜುರಾಹೋ ಹಾಗೂ ವಾರಣಾಸಿಗಳಲ್ಲಿ ತೆರೆಯಲಾಯಿತು. ವಿದೇಶಗಳಲ್ಲಿಯೂ ಸಹ ಭಾರತದ ಪ್ರವಾಸೋದ್ಯಮ ಕಚೇರಿಗಳನ್ನು ನ್ಯೂಯಾರ್ಕ್‌, ಲಂಡನ್, ಪ್ಯಾರಿಸ್, ಫ್ರಾಂಕ್‌ಫರ್ಟ್ ಮೆಲ್ಬೋರ್ನ್ ಹಾಗೂ ಕೊಲಂಬೋಗಳಲ್ಲಿ ಸ್ಥಾಪಿಸಲಾಯಿತು. 1958ರ ವೇಳೆಗೆ ಪ್ರತ್ಯೇಕ ಪ್ರವಾಸೋದ್ಯಮ ಇಲಾಖೆಯನ್ನು ತೆರೆಯಲಾಯಿತು.

ಎಲ್ .ಕೆ. ಜಾ ಸಮಿತಿ  (L.K Jha Committee)

1962 ರಲ್ಲಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಯಿತು. ಹೀಗಾಗಿ ಭಾರತ ಸರ್ಕಾರವು ಎಲ್ ಕೆ ಜಾ ಸಮಿತಿಯನ್ನು ರಚಿಸಿತು. ಎಲ್ ಕೆ ಜಾ ಸಮಿತಿ ನೀಡಿದ ಶಿಫಾರಸ್ಸುಗಳು ಈ ಕೆಳಗಿನಂತಿವೆ.

  1. ವಿದೇಶಿ ಪ್ರವಾಸಿಗರಿಗೆ ವೀಸಾರಹಿತ ಅವಕಾಶ ನೀಡುವುದು.
  2.  ವಿದೇಶಗಳಲ್ಲಿ ಹೆಚ್ಚಿನ ಸೇವಾ ಕಚೇರಿಗಳನ್ನು ತೆರೆಯುವುದು.
  3.  ಮುಂದಿನ ಐದು ವರ್ಷಗಳಲ್ಲಿ 5500 ಹೆಚ್ಚುವರಿ ಹೋಟೆಲ್ ಕೊಠಡಿಗಳ ಸ್ಥಾಪನೆ.
  4.  ಏರ್ ಇಂಡಿಯ ಹಾಗೂ ಇಂಡಿಯನ್ ಏರ್‌ಲೈನ್ ಪ್ರವಾಸಿಗರಿಗೆ ತುರ್ತು ಕಾಯ್ದಿರಿಸುವಿಕೆ ಸೌಲಭ್ಯ ನೀಡುವುದು.
  5.  ಖಾಸಗಿ ಪ್ರವಾಸಿ ಸಂಸ್ಥೆಗಳು, ಹೋಟೆಲ್, ವಸತಿಗೃಹಗಳು ಮೊದಲಾದವುಗಳನ್ನು ತೆರೆಯಲು ಅನುಮತಿ ನೀಡುವುದು.
  6.  ಪ್ರವಾಸ ಅಧಿಕಾರಿಗಳಿಗೆ ತರಬೇತಿ ನೀಡುವುದು.
  7.  ವಿವಿಧ ಸರ್ಕಾರಿ ಇಲಾಖೆಗಳ ನಡುವೆ  ಪ್ರವಾಸ ಉದ್ಯಮಕ್ಕೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದು.
  8.  ವಿದೇಶಗಳಲ್ಲಿ ನೂತನ ಪ್ರವಾಸಿ ಕಚೇರಿಗಳನ್ನು ಸ್ಥಾಪಿಸುವುದು.
  9.  ಪ್ರವಾಸಿ ತಾಣಗಳಲ್ಲಿ ಖರೀದಿ ಹಾಗೂ ಮನರಂಜನೆಗೆ ಅವಕಾಶ ಕಲ್ಪಿಸುವುದು.

1967ರಲ್ಲಿ ಇಂದಿರಾಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಪ್ರವಾಸೋದ್ಯಮ ಹಾಗೂ ನಾಗರೀಕ ವಿಮಾನಯಾನ ಸಚಿವಾಲಯವನ್ನು ಪ್ರತ್ಯೇಕಿಸಿ ಪ್ರವಾಸೋದ್ಯಮ ಸಚಿವಾಲಯವನ್ನು ಆರಂಭಿಸಲಾಯಿತು.

 1956 ರಲ್ಲಿ ಭಾರತಕ್ಕೆ 17000 ವಿದೇಶಿ ಪ್ರವಾಸಿಗರು ಬಂದಿದ್ದರೆ 2014 4863 ಕೋಟಿಗೆ ಏರಿತು. 2003 ರಲ್ಲಿ ಅದು 1593 ಮಿಲಿಯನ್ ಗೆ ಏರಿತು.  2025ರಲ್ಲಿ ಅದು ಕೇವಲ 9.6 ಮಿಲಿಯನ್ ಗೆ ಇಳಿಕೆಯಾಗಿದೆ.

ಭಾರತದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಭಾರತದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

 ಪೀಠಿಕೆ:

ಇಡೀ ಪ್ರಪಂಚದಲ್ಲಿಯೇ ಭಾರತವು ವಿಶಿಷ್ಟವಾದ ಭೌಗೋಳಿಕ ಸ್ಥಾನವನ್ನು ಹೊಂದಿದೆ. ಇಲ್ಲಿ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಅಗಾಧವಾಗಿದೆ. ಭಾರತವು ಪ್ರಾಚೀನ ಕಾಲದಿಂದಲೂ ಯಾತ್ರಿಕರ ಸ್ವರ್ಗ ಎಂದು ಹೆಸರಾಗಿದೆ. ಭಾರತವು ಎಲ್ಲಾ ಋತುಮಾನಗಳಿಗೂ ಪ್ರವಾಸಕ್ಕೆ ಸರಿಹೊಂದುವ ದೇಶವಾಗಿದೆ. ಹೀಗಾಗಿ ಅಲೆಕ್ಸಾಂಡರ್ ಭಾರತವು ಹಾಲು-ಜೇನಿನ ನಾಡು ಎಂದು ಹೇಳಿದ್ದಾರೆ. ಮ್ಯಾಕ್ಸ್ ಮುಲ್ಲರ್, ಭಾರತವು ಭೂಮಿಯ ಮೇಲಿನ ಸ್ವರ್ಗ ಎಂದು ಹೇಳಿದ್ದಾರೆ. ಭಾರತದ ಯಾವುದೇ ಮೂಲೆಗೆ ಹೋದರು ಐತಿಹಾಸಿಕ ಸ್ಮಾರಕಗಳು, ಗಿರಿಧಾಮಗಳು, ಜಲಪಾತಗಳು, ವನ್ಯ ಪ್ರಾಣಿಧಾಮಗಳು, ಹುಲ್ಲುಗಾವಲುಗಳು, ನದಿಗಳು, ಸಾಗರ, ಸಮುದ್ರಗಳು, ಮಸೀದಿಗಳು, ಚರ್ಚುಗಳು, ಕೋಟೆ ಕತ್ತಲುಗಳು ಕಂಡುಬರುತ್ತವೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರಾಚೀನ ಕಾಲದಲ್ಲಿ ಪ್ರವಾಸಿಗರು ಭಾರತಕ್ಕೆ ವಿವಿಧ ಕಾರಣಗಳಿಗಾಗಿ ಬರುತ್ತಿದ್ದರು ಅವುಗಳನ್ನು ಈ ಕೆಳಗಿನಂತೆ ನೋಡೋಣ.

1. ಸಿಂಧೂ ನದಿ ನಾಗರಿಕತೆಯ ಕಾಲ: ಸಿಂಧೂ ನಾಗರಿಕತೆಯ ಜನರು ಪ್ರಪಂಚದ ವಿವಿಧ ನಾಗರಿಕತೆಗಳ ಜೊತೆಗೆ ಆಗಲೇ ಸಂಪರ್ಕದಲ್ಲಿದ್ದ ಸಾಕಷ್ಟು ದಾಖಲೆಗಳು ನಮಗೆ ಸಿಕ್ಕಿವೆ. ಅವರು ಮೆಸಪೊಟಮಿಯ, ಈಜಿಪ್ಟ್‌, ಬ್ಯಾಬಿಲೋನಿಯ, ಪರ್ಶೀಯ ,ಚೀನಿ, ಗ್ರೀಕ್ ಹಾಗೂ ರೋಮನ್ ನಾಗರಿಕತೆಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೊಂದಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿ ಹಾಗೂ ಹಡಗುಗಳನ್ನು ಪ್ರಯಾಣಕ್ಕಾಗಿ ಬಳಕೆ ಮಾಡುತ್ತಿದ್ದರು. ಪಶ್ಚಿಮ ಏಷ್ಯಾ ನಗರಗಳಲ್ಲಿ ಸಿಂಧೂ ನಾಗರಿಕತೆಯ ಕಾಲದ ಮುದ್ರೆಗಳು ಭತ್ತದ ಕಾಳುಗಳು ದೊರಕಿವೆ. ಭಾರತದ ಪೂರ್ವ ಕರಾವಳಿಯ ತನಕ  ರೋಮನ್ ಹಡಗುಗಳು ಬರುತ್ತಿದ್ದವು ಎಂಬುದಕ್ಕೆ ಅರಕ ಮೆಡುವಿನಲ್ಲಿ ರೋಮನ್ ನಾಣ್ಯಗಳು ದೊರಕಿವೆ.

2. ವೈದಿಕ ಕಾಲ :  ವೈದಿಕ ಕಾಲ ದಲ್ಲಿಯೂ  ಕಾಶಿ, ಪ್ರಯಾಗ, ಅಮರನಾಥ ಮುಂತಾದ ನಗರಗಳ ನಡುವೆ ಪ್ರಯಾಣಕ್ಕಾಗಿ ಉತ್ತಮ ಮಾರ್ಗಗಳನ್ನು ನಿರ್ಮಿಸಲಾಗಿತ್ತು.

3. ಬೌದ್ಧ ಮತ್ತು ಜೈನ ಯುಗ :  ಗೌತಮ ಬುದ್ಧನು ಜ್ಞಾನೋದಯ ಪಡೆದ ನಂತರ ತನ್ನ ಧರ್ಮ ಪ್ರಚಾರಕ್ಕಾಗಿ ಊರೂರು ಪ್ರವಾಸ ಕೈಗೊಳ್ಳುತ್ತಿದ್ದನು. ಹಾಗಾಗಿ ತಾಮ್ರ ಲಿಪ್ತಿ, ಪಾಟಲೀಪುತ್ರ, ಕೌಶಂಬಿ, ವಿಧಿಸ, ಕಾಶಿ, ಉಜ್ಜಯಿನಿ ಮೊದಲಾದ ಕಡೆಗಳಲ್ಲಿ ರಸ್ತೆ ಮಾರ್ಗಗಳು ಹಾಕಲ್ಪಟ್ಟವು. ಮಹಾವೀರ ಕುಂದ ಗ್ರಾಮ, ಜೃಂಬಿಕವನ, ಕಾಶಿ, ಪ್ರಯಾಗಳಿಗೆ ಸಂಚಾರ ಕೈಗೊಳ್ಳುತ್ತಿದ್ದನು.

4. ಧಾರ್ಮಿಕ ಯುಗ:   ಭಾರತೀಯ ಸಾಧು ಸಂತರು, ಧರ್ಮ ಗುರುಗಳು ಭಾರತದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಭೇಟಿ ನೀಡುತ್ತಿದ್ದರು. ಹಾಗೆಯೇ ಅಜಂತಾ, ಎಲ್ಲೋರಾ, ಕಾರ್ಲೆ ಹಾಗೂ ನಾಗಾರ್ಜುನಕೊಂಡಗಳಿಗೂ ಭೇಟಿ ನೀಡುತ್ತಿದ್ದರಿಂದ ಪ್ರವಾಸದ ಪರಿಕಲ್ಪನೆಗಳು ಆಗಲೇ ಬೆಳೆದು ಬಂದವು. ಚಂದ್ರಗುಪ್ತನು ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡು ಶ್ರವಣಬೆಳಗೊಳದಲ್ಲಿ ನೆಲೆಸಿ ಅಲ್ಲಿಗೆ ಸಲ್ಲೇಖನ ವ್ರತವನ್ನು ಕೈಗೊಂಡನು. ಅಂದಿನಿಂದ ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಭೇಟಿ ನೀಡಲು ಆರಂಭಿಸಿದರು.

5. ಅಶೋಕನ ಕಾಲ: ಅಶೋಕನು ಬೌದ್ಧ ಧರ್ಮಪ್ರಚಾರಕ್ಕಾಗಿ ತನ್ನ ಮಗ ಮಹೇಂದ್ರ ಹಾಗೂ ಮಗಳಾದ ಸಂಗಮಿತ್ರೆಯರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದ್ದನು. ಮೌರ್ಯರ ಕಾಲದಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಪ್ರವಾಸಿಗರ ಯೋಗ ಕ್ಷೇಮಕ್ಕಾಗಿ ಮೌರ್ಯರು ಒಂದು ನಿಗಮವನ್ನು ಸ್ಥಾಪಿಸಿದರು.

6. ಗುಪ್ತರ ಯುಗ: ವಿದೇಶದಿಂದ ಭಾರತಕ್ಕೆ ಬಂದ ಪ್ರವಾಸಿಗರನ್ನು ನೋಡಿಕೊಳ್ಳುವುದಕ್ಕಾಗಿ ಗುಪ್ತರು ʻʻಅಂತಪಾಲʼʼ ಎಂಬ ಅಧಿಕಾರಿಯನ್ನು ನೇಮಕ ಮಾಡಿದ್ದರು. ದರೋಡೆಕೋರರಿಂದ ಪ್ರವಾಸಿಗರನ್ನು ರಕ್ಷಿಸಲು ಗುಪ್ತರ ಆಡಳಿತ ಸದಾ ಎಚ್ಚರವಹಿಸುತ್ತಿತ್ತು. ಪ್ರವಾಸಿಗರು ಹಗಲು ಸಂಚರಿಸಿ ರಾತ್ರಿ ಧರ್ಮ ಶಾಲೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಹಸ್ತಿನಾಪುರ, ಅಯೋಧ್ಯ, ಪಂಪಾ ಕ್ಷೇತ್ರ ಮುಂತಾದ ಕಡೆಗಳಲ್ಲಿ ಉತ್ತಮ ಮಾರ್ಗಗಳನ್ನು ನಿರ್ಮಿಸಲಾಗಿತ್ತು.

7. ಹರ್ಷನ ಯುಗ: ಹರ್ಷವರ್ಧನ ಕಾಲದಲ್ಲಿ ಪ್ರಸಿದ್ಧ ವಿದ್ವಾಂಸನಾದ ಬಾಣಬಟ್ಟ ಅತ್ಯಂತ ಕಿರಿಯ ವಯಸ್ಸಿನಲ್ಲಿ ತನ್ನ ಸಂಗಡಿಗರೊಂದಿಗೆ ದೀರ್ಘಕಾಲ ಪ್ರವಾಸ ಕೈಗೊಂಡಿದ್ದನೆಂದು ಇತಿಹಾಸ ಹೇಳುತ್ತದೆ. ಆತ ಅಜಂತಾ, ಎಲ್ಲೋರಾ, ಕಾರ್ಲೆ, ಬಾಜ, ಬೇಡ್ಕ ಹಾಗೂ ನಾಸಿಕ್‌ಗಳಿಗೆ ಭೇಟಿ ನೀಡಿದ್ದನಂತೆ. ಅವುಗಳೆ ಮುಂದೆ ಹೆದ್ದಾರಿಗಳಾದವು. ವಿದೇಶಿ ಪ್ರವಾಸಕರು ಭಾರತಕ್ಕೆ ಬಂದಿಲ್ಲದೆ ಇಲ್ಲಿನ ತಕ್ಷಶಿಲಾ, ವಿಕ್ರಮಶೀಲ, ದಗ್ದ, ಕಂಚಿ ಹಾಗೂ ನಲಂದಗಳಿಗೂ ಭೇಟಿ ನೀಡುತ್ತಿದ್ದರು. ಕೆಲವರಂತೂ ಇಂತಹ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ತಮ್ಮ ಜೀವನದ ಕನಸಾಗಿ ಹೊಂದಿದ್ದರು.

8. ಮಧ್ಯಯುಗ :   ಮಧ್ಯಯುಗದಲ್ಲಿ ಹಾಗೆಯೇ ಮುಸ್ಲಿಂರ ಕಾಲದ ಮಸೀದಿಗಳು, ಅರಮನೆಗಳು, ಗೋರಿಗಳು, ಮಿನಾರ್‌ಗಳು, ಗುಮ್ಮಟಗಳು, ತಾಜ್‌ಮಹಲ್ ಕೆಂಪುಕೋಟೆ, ಮೋತಿ ಮಸೀದಿ, ಗೋಲಗುಮ್ಮಟ, ಚಾರ್ಮಿನಾರ್, ಭಾರ ಕಮಾನ್, ಕುತುಬ್ ಮಿನಾರ್ ಮೊದಲಾದವುಗಳು ಇಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

9. ವಿದೇಶಿ ಪ್ರವಾಸಿಗಳ ಯುಗ: ಮಧ್ಯಯುಗದಲ್ಲಿ ವಿದೇಶ ಪ್ರವಾಸಿಗರಾದ ನಿಕೋಲೋ ಕೋಂತಿ, ಬಾರ್ಬೊಸಾ, ಅಬ್ದುಲ್‌ ರಜಾಕ್‌, ಅಲ್‌ಬುರನಿ, ಮಾರ್ಕೊಪೋಲೊ ಮುಂತಾದವರು ಭಾರತಕ್ಕೆ ಬೇಟಿನೀಡಿದ್ದರು.  ನಂತರದ ಕಾಲಘಟ್ಟದಲ್ಲಿ  ಪೋರ್ಚುಗೀಸರು, ಡಚ್ಚರು ಹಾಗೂ ಆಂಗ್ಲರು ಹೀಗೆ ಪ್ರವಾಸಿಗರ ದಂಡೇ ಭಾರತಕ್ಕೆ ಹರಿದು ಬಂದಿತು. ಅವರು ತಮ್ಮ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಕೃತಿಗಳಲ್ಲಿ ವಿವರಿಸಿದ್ದಾರೆ.  

1೦. ಆಧುನಿಕ ಯುಗ: ಆಧುನಿಕ ಯುಗದಲ್ಲಿ ಭಾರತದ ಅನೇಕ ನಾಯಕರು ವಿದೇಶಗಳಿಗೆ ಶಿಕ್ಷಣ, ಆಡಳಿತ ಹಾಗೂ ಆರ್ಥಿಕ ಬೆಳವಣಿಗೆಯ ಅನುಭವ ಪಡೆಯಲು ಪ್ರವಾಸ ಮಾಡುತ್ತಿದ್ದರು. ಅಂತವರಲ್ಲಿ ರಾಜರಾಮ ಮೋಹನ್‌ರಾಯ್‌, ಸ್ವಾಮಿ ವಿವೇಕಾನಂದ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ಜವಹರಲಾಲ್ ನೆಹರು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಮೊದಲಾದವರು ಪ್ರಮುಖರಾಗಿದ್ದಾರೆ.

ಪ್ರವಾಸಿ ಪ್ರಮುಖ ಸ್ಥಳಗಳು: ಸಿಂಧೂ ನಾಗರಿಕತೆಯ ಅವಶೇಷಗಳು, ಜೈನ, ಬೌದ್ಧ ಹಾಗೂ ವೈದಿಕ ಧರ್ಮಕ್ಕೆ ಸೇರಿದ ದೇವಾಲಯಗಳು, ಶಿಲ್ಪಗಳು ಅಜಂತಾ, ಎಲ್ಲೋರಾ, ನಾಗಾರ್ಜುನಕೊಂಡ, ಸಾಂಚಿ, ಸಾರನಾಥ, ಎಲಿಫೆಂಟಾ, ಪಾಟಲೀಪುತ್ರ, ಖಜರಾಹೋ, ಐಹೊಳೆ, ಪಟ್ಟದಕಲ್ಲು, ಮಹಾಬಲಿಪುರಂ, ತಾಂಜಾವೂರು ಹಾಗೂ ಹಂಪಿ ಮೊದಲಾದವುಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿ ಪ್ರಖ್ಯಾತಿ ಹೊಂದುತ್ತಿರುವುದು ಈಗ ಇತಿಹಾಸ.

ಸ್ವಾತಂತ್ರ್ಯವನ್ನು ಗಳಿಸಿದ ನಂತರ ಭಾರತದಲ್ಲಿ ಪ್ರವಾಸೋದ್ಯಮವು ಪ್ರಗತಿಪಥದತ್ತ ಮುನ್ನಡೆಯುತ್ತಿದೆ.  ಹೆಚ್ಚುತ್ತಿರುವ ಪ್ರವಾಸಿಗರ ಬೇಡಿಕೆಯನ್ನು ಈಡೇರಿಸಲು ಸಮರ್ಥವಾಗುತ್ತಿದೆ. ಊಟ, ವಸತಿ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರವಾಸೋದ್ಯಮವು ಸಾಕಷ್ಟು ಬಲಶಾಲಿಯಾಗಿದೆ. ಭಾರತದ ಹೋಟೆಲ್‌ಗಳು ಉತ್ತಮ ಸೌಕರ್ಯಗಳನ್ನು ಒದಗಿಸುತ್ತಿವೆ. ಆದುದರಿಂದ ಭಾರತದಲ್ಲಿ ಹೋಟೆಲ್‌ಗಳ ಸಂಖ್ಯೆಯು ಹೆಚ್ಚಾಗಿದೆ. ಬಸ್ಸು, ರೈಲು, ವಿಮಾನ ಪ್ರಯಾಣವು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಸಾವಿರಾರು ವಿಮಾನಗಳು, ಲಕ್ಷಾಂತರ ಬಸ್ಸುಗಳು, ಸಾವಿರಾರು ರೈಲುಗಳು, ಪ್ರಯಾಣಿಕರನ್ನು ಹೊತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಗಳಿಗೆ ಸಂಚರಿಸುತ್ತಿವೆ.

ಆಧುನಿಕ ಪ್ರವಾಸೋದ್ಯಮ (Modern Tourism)

ಆಧುನಿಕ ಪ್ರವಾಸೋದ್ಯಮ (Modern Tourism)

ಆಧುನಿಕ ಪ್ರವಾಸೋದ್ಯಮದ ಅಂಶಗಳು ಈ ಕೆಳಗಿನಂತಿವೆ.

1. ರೈಲ್ವೆ ಪ್ರವಾಸ (Rail Tour)

19ನೇ ಶತಮಾನದ ಆರಂಭದಲ್ಲಿ ಪ್ರಪಂಚದಲ್ಲಿ ರೈಲು ಮಾರ್ಗದ ನಿರ್ಮಾಣದಿಂದ ಪ್ರಯಾಣದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಯಿತು. ಅತಿಯಾದ ವೇಗ, ಸುರಕ್ಷತೆ ಹಾಗೂ ಕಡಿಮೆ ವೆಚ್ಚದ ರೈಲ್ವೆ ಸಾರಿಗೆ ಬಹುಬೇಗನೆ ಜನಪ್ರಿಯವಾಯಿತು. 1825 ರಲ್ಲಿ ಪ್ರಪ್ರಥಮ ಬಾರಿಗೆ ಸರಕು ಸಾಗಾಣಿ ರೈಲು ಆರಂಭವಾಯಿತು. ತದನಂತರ 1830 ರ ಅವಧಿಯಲ್ಲಿ ಇಂಗ್ಲೆಂಡಿನ ಲಿವರ್‌ಫೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಪ್ರಥಮ ರೈಲು ಮಾರ್ಗ ನಿರ್ಮಾಣವಾಯಿತು. 1841ರ ವೇಳೆಗೆ ಇಂಗ್ಲೆಂಡಿನ ಥಾಮಸ್ ಕುಕ್‌ ಕಂಪನಿಯು 570 ಪ್ರವಾಸಿಗರ ತಂಡವನ್ನು ಇಂಗ್ಲೆಂಡಿನ ಲೈಸೆಸ್ಟರ್ ನಿಂದ ಲಾಬೋರಾಗೆ ರೈಲಿನಲ್ಲಿ ಕರೆದುಕೊಂಡು ಹೋಯಿತು. ಇದು ಪ್ರಪಂಚದ ಮೊದಲ ರೈಲು ಪ್ರಯಾಣ ಎಂಬ ಕೀರ್ತಿಗೆ ಪಾತ್ರವಾಯಿತು. 1843ರಲ್ಲಿ ಸುಮಾರು 3000 ವಿದ್ಯಾರ್ಥಿಗಳನ್ನು ಕರೆದುಕೊಂಡು. ಡರ್ಬಿಯವರೆಗೆ ಪ್ರಯಾಣಿಸಿತು. 1845ರಲ್ಲಿ ಮಾಸ್‌ ಪ್ರವಾಸ ಆರಂಭವಾಯಿತು. 1848ರಲ್ಲಿ ಸ್ಕಾಟ್‌ಲ್ಯಾಂಡಿಗೆ ಪ್ರವಾಸ ಏರ್ಪಡಿಸಿತು. ಈ ಕಂಪನಿ ಆಲ್ಪ್‌ ಪರ್ವತಗಳಿಗೆ ಪ್ರವಾಸ ಏರ್ಪಡಿಸಿತು.  1855 ರಲ್ಲಿ ಖಂಡಾಂತರ ಪ್ರವಾಸ ಏರ್ಪಡಿಸಲಾಯಿತು. ಈ ಕಂಪನಿಯು ಪ್ರಪಂಚದ ಅತ್ಯಂತ ದೊಡ್ಡ ಪ್ರವಾಸಿ ಏಜೆನ್ಸಿಯಾಗಿ ಬೆಳೆಯಿತು. ವಿಶ್ವದಾದ್ಯಂತ ಇದರ ಶಾಖೆಗಳಿವೆ. ಹೀಗಾಗಿ ಥಾಮಸ್ ಕುಕ್‌ನನ್ನು ವಿಶ್ವದ ಪ್ರವಾಸ ಉದ್ಯಮದ ಪಿತಾಮಹ ಎಂದು ಕರೆಯುತ್ತಾರೆ.

 ಫುಲ್‌ಮನ್ ಕಂಪನಿ: ಇಂಗ್ಲೆಂಡಿನಿಂದ ಸ್ಪೂರ್ತಿಗೊಂಡ ಆಸ್ಟ್ರಿಯಾ, ಫ್ರಾನ್ಸಿಸ್, ಸ್ವಿಜರ್ಲ್ಯಾಂಡ್ ಹಾಗೂ ಅಮೆರಿಕೆಗಳು ಸಹ ರೈಲು ಸಂಚಾರದಲ್ಲಿ ಪ್ರಗತಿಯನ್ನು ಸಾಧಿಸಿದವು. ಹಾಗೆಯೇ  1853ರಲ್ಲಿ ಭಾರತದಲ್ಲಿಯೂ ರೈಲು ಮಾರ್ಗವನ್ನು ಹಾಕಲಾಯಿತು. ಪ್ರಥಮ ರೈಲು ಬಾಂಬೆ ಇಂದ ಠಾಣಾದ ವರೆಗೆ ಸಂಚರಿಸಿತು. 1870ರಲ್ಲಿ ಅಮೆರಿಕಾದ ಪುಲ್‌ಮನ್ ಗ್ರ್ಯಾಂಡ್ ಟೂರನ್ನು ರೈಲಿನಲ್ಲಿ ಏರ್ಪಡಿಸಿದನು. ಅದು ಪ್ರತಿರಾತ್ರಿಗೆ 2 ಡಾಲರ್ ಶುಲ್ಕವನ್ನು ವಿಧಿಸಿತು. ತದನಂತರ ಅಮೆರಿಕದಲ್ಲಿ ತಯಾರಾದ ಪುಲ್‌ಮನ್ ಕಾರುಗಳನ್ನು  ಇಂಗ್ಲೆಂಡಿಗೆ ಆಮದು ಮಾಡಿಕೊಳ್ಳಲಾಯಿತು.  1872 ರಲ್ಲಿ ಪುಲ್‌ಮನ್ ಕಂಪನಿ 750 ಕಾರುಗಳನ್ನು ತಯಾರಿಸಿತ್ತು. ಈ ಕಂಪನಿಯಲ್ಲಿ ಆಗಲೇ ರೂ.30,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. 150 ದೇಶಗಳಲ್ಲಿ ಈ ಕಂಪನಿ ತನ್ನ ಶಾಖೆಗಳನ್ನು ತೆರೆದಿತ್ತು. 1950ರ ವೇಳೆ ಅತಿ ವೇಗದ ರೈಲು ಪ್ರಯಾಣ ಆರಂಭವಾಯಿತು. 1960ರಲ್ಲಿ ವಿದ್ಯುತ್ ರೈಲು ತಯಾರಾಯಿತು. ಆಗ ಅದು 160 ಕಿಮೀ ವೇಗದಲ್ಲಿ ಚಲಿಸಿತು. ಜಪಾನಿನ ರೈಲು 210 ಕಿಮೀ ವೇಗದಲ್ಲಿ ಕೇವಲ 3 ಗಂಟೆಗಳಲ್ಲಿ ಟೋಕಿಯೋ ಮತ್ತು ಒಸಾಕಗಳ ನಡುವೆ ಓಡಲು ಆರಂಭಿಸಿತು. 1981ರ ವೇಳೆಗೆ 360 ಕಿ.ಮೀ ವೇಗದಲ್ಲಿ ಓಡುವ ರೈಲನ್ನು ಫ್ರಾನ್ಸ್‌ ಶೋಧಿಸಿತು.  ಅದು ಈಗ 560 ಕಿಮೀ ಅಂತರವನ್ನು 1 ಗಂಟೆ 48 ನಿಮಿಷಗಳಲ್ಲಿ ಕ್ರಮಿಸುತ್ತದೆ. ಚೀನಾದಲ್ಲಿ ಇತ್ತೀಚಿಗೆ ಗಂಟೆಗೆ 700 ರಿಂದ 1000 ಕಿ.ಮೀ ವೇಗದ ರೈಲನ್ನು ಓಡಿಸಲಾಗುತ್ತಿದೆ. ಭಾರತದಲ್ಲಿಯೂ ಬುಲೆಟ್ ರೈಲು ಹಾಗೂ ವಂದೇ ಭಾರತ ರೈಲುಗಳು ಓಡಾಡುತ್ತಿವೆ. ದೇಶದಲ್ಲಿ ಇವುಗಳಲ್ಲದೆ ಸೂಪರ್ ಫಾಸ್ಟ್ ರೈಲುಗಳು ಸಾಕಷ್ಟಿವೆ.

2. ಹಡಗು ಪ್ರವಾಸ:  ಜಲ ಸಾರಿಗೆಯು ಅತ್ಯಂತ ಅಗ್ಗದ ಸಾರಿಗೆಯಾಗಿದೆ. ಉಪ್ಪು ನೀರಿನ ಸ್ನಾನವು ಆರೋಗ್ಯಕ್ಕೆ ಹಿತಕರವಾದುದು ಎಂಬ ಭಾವನೆ ಜನರಲ್ಲಿ ಬೆಳೆದ ಹಾಗೆ ಸಮುದ್ರದಲ್ಲಿನ ಹಡಗು ಸಂಚಾರ ಹೆಚ್ಚಾಯಿತು. 1758 ರಲ್ಲಿ ʻಕಾಕ್ಸ್‌ ಅಂಡ್‌ ಕಿಂಗ್‌ʼ ಎಂಬ ಪ್ರವಾಸಿ ಸಂಸ್ಥೆ ಶ್ರೀಮಂತರನ್ನು ಹಡಗಿನ ಮೂಲಕ ಅಮೇರಿಕಾ ಪ್ರವಾಸಕ್ಕೆ ಕರೆದುಕೊಂಡು ಹೋಯಿತು. 1840 ರಲ್ಲಿ ಕುನಾರ್ಡ್‌ ಸ್ಟೀಮ್‌ ಶಿಪ್‌ ಕಂಪನಿ ಪ್ರಥಮ ಬಾರಿಗೆ ಹಡಗು ಪ್ರವಾಸವನ್ನು ಏರ್ಪಡಿಸಿತು. 1866 ರಲ್ಲಿ ಥಾಮಸ್‌ ಕುಕ್‌ ಕಂಪನಿಯು ಸಹ ಪ್ರವಾಸ ಹಮ್ಮಿಕೊಂಡಿತು. 19 ನೇ ಶತಮಾನದ ಅಂತ್ಯದಲ್ಲಿ ಜಲಸಾರಿಗೆ ತೀವ್ರವಾಗಿ ಬೆಳೆಯಿತು. ಆದರೆ 20 ನೇ ಶತಮಾನದ ಮಧ್ಯ ಭಾಗದಲ್ಲಿ ವಿಮಾನ ಸಾರಿಗೆ ಆರಂಭವಾದ ಮೇಲೆ ಹಡಗು ಸಾರಿಗೆ ಪ್ರಯಾಣ ಕಡಿಮೆಯಾಯಿತು.

3. ಮೋಟಾರು ವಾಹನಗಳ ಪ್ರವಾಸ (Motars Tours)

1890 ರಿಂದ ಈಚೆಗೆ ಮೋಟಾರ್ ವಾಹನಗಳು ಪ್ರವಾಸಕ್ಕೆ ಬಳಕೆಯಾದವು. ಜರ್ಮನಿಯ ಕಾರ್ಲಬೆಂಜ್ ಪ್ರಥಮ ಬಾರಿಗೆ ಮೋಟಾರು ಕಾರು ತಯಾರಿಸಿದನು. ಅಂದಿನಿಂದ ಭೂಸಾರಿಗೆ ಆರಂಭವಾಯಿತು. 1908ರ ವೇಳೆಗೆ ಹೆನ್ರಿ ಫೋರ್ಡ್ ತಯಾರಿಸಿದ ಮಾಡೆಲ್ ಟೀ ಕಾರುಗಳು ರೈಲ್ವೆ ಏಕಸ್ವಾಮ್ಯವನ್ನು ಮುರಿದವು. 1930ರಲ್ಲಿ ಪ್ರವಾಸಕ್ಕೆ ಬಸ್ಸುಗಳು ಬಳಕೆಯಾದವು.

4. ವಿಮಾನ ಸಾರಿಗೆ (Air Transport)

1900ರಲ್ಲಿ ರೈಟ್ ಸಹೋದರರಿಂದ ವಿಮಾನ ಕಂಡು ಹಿಡಿಯಲ್ಪಟದಟ್ಟಂದಿನಿಂದ ಇಂದಿನವರೆಗೆ ವಾಯು ಸಂಚಾರ ದ್ವಿಗುಣಗೊಂಡಿದೆ. ಇದು ಪ್ರವಾಸೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ವೇಗ, ಸುರಕ್ಷಿತ ಹಾಗೂ ಸೌಕರ್ಯಕ್ಕೆ ವಿಮಾನ ಸಾರಿಗೆ ಹೆಸರಾಯಿತು. ವಾಯು ಸಾರಿಗೆ ಹೆಚ್ಚದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ರನ್ ವೇಗಳು ಸ್ಥಾಪನೆಯಾದವು. ಕಡಿಮೆ ವೇಗದಿಂದ ಅತಿ ವೇಗದ ವಿಮಾನಗಳು ಹಾರಾಟವನ್ನು ಆರಂಭಿಸಿದವು. ಎಲ್ಲಾ ಸಾರಿಗೆಗಳಿಗಿಂತ ವಿಮಾನ ಸಾರಿಗೆ ಇಂದು ಹೆಚ್ಚು ಜನಪ್ರಿಯವಾಗಿದೆ.

ಪ್ರವಾಸೋದ್ಯಮ ನಡೆದು ಬಂದ ದಾರಿ (Tourism Through the ages)

ಪ್ರವಾಸೋದ್ಯಮ ನಡೆದು ಬಂದ ದಾರಿ (Tourism Through the ages)

ಮಾನವ ತನ್ನ ಕುತೂಹಲಕ್ಕಾಗಿ ಪ್ರಾಚೀನ ಕಾಲದಿಂದಲೂ ಪ್ರವಾಸ ಹೋಗುತ್ತಿದ್ದನು. ಉದಾಹರಣೆಗೆ ಆಹಾರವನ್ನು ಅರಸಿ ಬೇರೆಡೆ ವಲಸೆ ಹೋಗುವುದು, ಕೃಷಿ ಭೂಮಿಯ ಹುಡುಕಾಟಕ್ಕಾಗಿ ಪ್ರವಾಸಕೈಗೊಳ್ಳುವುದು ಮಾಡುತ್ತಿದ್ದನು. ಆದರೆ ಆಧುನಿಕ ಕಾಲದಲ್ಲಿ ಮಾತ್ರ ಪ್ರವಾಸೋದ್ಯಮಕ್ಕೆ ಒಂದು ನಿರ್ದಿಷ್ಟವಾದ ಅರ್ಥ ಬಂದಿದೆ.

 1. ಪ್ರಾಚೀನ ಕಾಲ (Ancient age)

ಕ್ರಿಸ್ತಪೂರ್ವದಲ್ಲಿ ಅಲೆಮಾರಿ ಜನಾಂಗವು ಆಗಾಗ ಆಹಾರ ಮತ್ತು ವಲಸೆಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರವಾಸ ಹೋಗುತ್ತಿದ್ದರು. ಅದು ಇಂದಿನ ಆಧುನಿಕ ಜಗತ್ತಿನಲ್ಲಿ ಸುಸಂಘಟಿತವಾದ ಹಾಗೂ ಸ್ಥಿರವಾದ ಪ್ರವಾಸೋದ್ಯಮವಾಗಿ ಬೆಳೆದು ಬಂದಿತ್ತು.

ಕ್ರಿಸ್ತಪೂರ್ವದಲ್ಲಿ ಅಂದರೆ ಸುಮಾರು ಸಾವಿರಾರು ವರ್ಷಗಳ ಹಿಂದೆ ಬಿಡುವಿನ ಅವಧಿಯಲ್ಲಿ ಪ್ರವಾಸಗಳು ಈಜಿಪ್ಟ್‌ ಹಾಗೂ  ಬ್ಯಾಬಿಲೋನಿಯದಲ್ಲಿ ಆರಂಭವಾದವು. ಅದರಂತೆ ಭಾರತದಲ್ಲಿ ಸಿಂಧೂ ನಾಗರಿಕತೆ ಹಾಗೂ ವೇದಗಳ ಕಾಲದ ನಾಗರಿಕತೆಯ ಜನರು ನಿಸರ್ಗ ತಾಣಗಳಿಗೆ ಅಥವಾ ಅರಣ್ಯಗಳಿಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದರು. ಈಜಿಪ್ಟ್‌ನಲ್ಲಿ  ಪಿರಮಿಡ್‌ಗಳು ನಿರ್ಮಾಣವಾದ ನಂತರ ಅವುಗಳನ್ನು ನೋಡಲು ಏಷ್ಯಾ ಮೈನರ್, ಗ್ರೀಸ್ ಹಾಗೂ ರೋಮನ್ ಪ್ರವಾಸಿಗಳು ಬರುತ್ತಿದ್ದರು. ಕ್ರಿ.ಪೂ 6ನೇ ಶತಮಾನದ ವೇಳೆಗೆ ಪರ್ಶಿಯನ್ನರು ಭಾರತಕ್ಕೆ ಬಂದರು. ಇಲ್ಲಿಗೆ ಆಗಮಿಸಿದ ಪ್ರವಾಸಿಗರು ತಮ್ಮ ಅನುಭವಗಳನ್ನು ಕಥನ ರೂಪದಲ್ಲಿ ರಚಿಸಿದರು. ಹೆರೋಡೋಟಸ್‌, ಅರಿಸ್ಟಾಟಲ್, ಪೈಥಾಗೋರಸ್ ಮುಂತಾದವರು ಏಷ್ಯಾ ಮೈನರ್‌ಗೆ ಸಂಚರಿಸಿ ಪ್ರವಾಸ ಮಾಹಿತಿ ನೀಡಿದ್ದಾರೆ. ಪ್ರಾಚೀನ ಈಜಿಪ್ಟ್‌ನಲ್ಲಿ ಅನೇಕ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಿದ್ದರು. ಇವುಗಳನ್ನು ನೋಡಲೆಂದು ದೂರದ ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಈಜಿಪ್ಟಿಯನ್ನರು ಬಂದ ಪ್ರವಾಸಿಗರಿಗೆ ಕೆಲವೊಂದು ಸೇವೆಗಳನ್ನು ನೀಡುತ್ತಿದ್ದರು. ಅವರಿಗೆ ಉತ್ತಮವಾದ ಆಹಾರ, ಪಾನೀಯ, ಮಾರ್ಗದರ್ಶನ, ತಿಂಡಿ ತಿನಿಸುಗಳು, ಕಲಾ ವಸ್ತುಗಳು ಕೊನೆಗೆ ವೇಶ್ಯೆಯರನ್ನು ನೀಡಲಾಗುತ್ತಿತ್ತು.

 ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಗೌತಮ ಬುದ್ಧನು ಪ್ರತಿದಿನ 20-30 ಕಿಲೋ ಮೀಟರ್ ಕಾಲ್ನಡಿಗೆಯಿಂದ ಪ್ರಯಾಣಿಸಿ ಧರ್ಮಬೋಧೆ ಮಾಡುತ್ತಿದ್ದರು. ಜನರು ಬುದ್ಧನ ಯಾತ್ರಾಸ್ಥಳಗಳಿಗೆ ನಿರಂತರವಾಗಿ ಪ್ರವಾಸವನ್ನು ಕೈಗೊಳ್ಳುತ್ತಿದ್ದರು.

ಪ್ರಾಚೀನ ರೋಮನ್ನರು ಆಧುನಿಕ ಪ್ರವಾಸೋದ್ಯಮದ ಅನೇಕ ಲಕ್ಷಣಗಳನ್ನು ಅಂದೇ ಜಾರಿಗೆ ತಂದಿದ್ದರು. ಸಮುದ್ರ ಪ್ರದೇಶಗಳು ಸುರಕ್ಷಿತವಾದ ಕಾರಣ ಪ್ರವಾಸಿಗರು ನಿರ್ಭಯವಾಗಿ ಪ್ರವಾಸ ಮಾಡುತ್ತಿದ್ದರು. ಅವರ ಅಂದಿನ holy-days  ಇಂದಿನ Holidays ಆಗಿದೆ.  ಅವರ ನಾಣ್ಯಗಳು ವಿಶ್ವದಾದ್ಯಂತ ಚಲಾವಣೆಯಲ್ಲಿ ಇದ್ದವು. ರೋಮನ್ನರು ನಗರ ಜೀವನದಿಂದ ಬೇಸತ್ತು ನೇಪಲ್ಸ್‌, ಸಿಸಲಿ, ಟ್ರಾಯ್‌, ಈಜಿಪ್ಟ್, ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿಯೇ ಪ್ರವಾಸಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆ ರೂಪಗೊಂಡಿತು. ಗ್ರೀಕ್ ಬರಹಗಾರರು ಸಹ ರೋಮನ್ ಸಾಮ್ರಾಜ್ಯದ ಪ್ರವಾಸದ ಬಗ್ಗೆ ತಿಳಿದುಕೊಂಡಿದ್ದರು.

  1. ಮಧ್ಯಯುಗದ ಕಾಲ (Medieval age)

ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ಮಧ್ಯ ಯುಗ ಆರಂಭವಾಯಿತು. ಕ್ರಿಸ್ತಶಕ 1453ರಲ್ಲಿ ಕಾನ್‌ಸ್ಟಾಂಟಿನೋಪಾಲ್‌ನ್ನು ಆಟೋಮನ್ ತುರ್ಕರು ವಶಪಡಿಸಿಕೊಳ್ಳುವ ಮೂಲಕ ಮಧ್ಯಯುಗದ ಆರಂಭಕ್ಕೆ ನಾಂದಿ ಹಾಡಿದರು. ಆ ಕಾಲದಲ್ಲಿ ಹೆದ್ದಾರಿ ದರೋಡೆ ಸಾಮಾನ್ಯವಾಗಿ ಜನರು ತಮ್ಮ ಹತ್ತಿರದ ನಗರಗಳಿಗೆ ಪ್ರವಾಸ ಹೋಗುತಿದ್ದರು. ಆದರೆ ಸಾಹಸ ಪ್ರವೃತ್ತಿಯುಳ್ಳವರು ಮಾತ್ರ ಹಣ ಸಂಪಾದನೆ ಹಾಗೂ ಕೀರ್ತಿ ಪಡೆಯಲು ಪ್ರವಾಸ ಮಾಡುತ್ತಿದ್ದರು. ವರ್ತಕರು ಹೊಸ ವ್ಯಾಪಾರದ ಅವಕಾಶಗಳನ್ನು ಹುಡುಕಿ ಪ್ರವಾಸ ಕೈಗೊಳ್ಳುತ್ತಿದ್ದರು. ಆ ಕಾಲದಲ್ಲಿ ಕುದುರೆ, ಕಾಲ್ನಡಿಗೆ ಹಾಗೂ ಪಲ್ಲಕ್ಕಿಗಳ ಮೂಲಕ ಸವಾರಿ ಹೋಗುತ್ತಿದ್ದರು.

ಮಧ್ಯಯುಗದ ಕೊನೆಯ ಶತಮಾನದಲ್ಲಿ ಪ್ರಯಾಣಕ್ಕೆ ವ್ಯಾಪಾರ ಮತ್ತು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶಗಳು ಪ್ರೇರಣೆ ನೀಡಿದವು. ಕ್ರೈಸ್ತರು ರೋಂ, ಇಂಗ್ಲೆಂಡಿನ ಕ್ಯಾಂಟರ್‌ಬರಿ, ಜೆರುಸಲೇಂ, ಬೆತ್ಲೆಹೆಮ್‌, ಜೂಡಿಯಾ ಇಸ್ರೇಲ್‌ಗಳಿಗೆ ಭೇಟಿ ನೀಡಲು ಆರಂಭಿಸಿದರು. ಮುಸಲ್ಮಾನರು ಮೆಕ್ಕಾ, ಮದೀನಾ ಹಾಗೂ ಬಾಗ್ದಾದ್‌ಗಳಿಗೆ ಹೋಗಿ ಬರುತ್ತಿದ್ದರು. ಇವರನ್ನು ಹಜ್‌ ಯಾತ್ರಿಗಳು ಎಂದು ಕರೆಯುತ್ತಿದ್ದರು. ಹಾಗೆಯೇ ಮುಸ್ಲಿಮರು ಸಂತರ ದರ್ಗಾ ಗಳಿಗೆ ಭೇಟಿ ನೀಡುತ್ತಿದ್ದರು. ಉದಾ:  ಶೇಕ್‌ ಸಲೀಂ ಚಿಸ್ತಿ, ಗುಲ್ಬರ್ಗದ ಬಂದೇನವಾಜ್‌ ದರ್ಗಾ, ಹಿಂದೂಗಳು ಕಾಶಿ, ಬದರಿನಾಥ, ರಾಮೇಶ್ವರಂ, ತಿರುಪತಿ, ಕೇದಾರಗಳಿಗೆ ಭೇಟಿ ನೀಡುತ್ತಿದ್ದರು. ಬೌದ್ಧ ಧರ್ಮಕ್ಕೆ ಮಾರುಹೋಗಿ ಹುಯೆನ್‌ತ್ಸ್ಯಾಂಗ್‌, ಫಾಹಿಯಾನ್‌, ಇತ್ಸಿಂಗ್‌, ಮಾರ್ಕೊಪೋಲ್‌, ನಿಕೋಲೊ ಪೋಲೊ, ಚೀನಾ ಹಾಗು ಭಾರತಕ್ಕೆ ಸಂಚರಿಸಿ ತಮ್ಮ ಅನುಭವಗಳನ್ನು ತಮ್ಮದೇ ಆದ ಕಥಾನಕದಲ್ಲಿ ಬರೆದಿದ್ದಾರೆ. ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದ ನಂತರ ಹಡಗು ಸಂಚಾರ ಸುಲಭವಾಯಿತು. ತದನಂತರ ಕೋಲಂಬಸ್‌, ವಾಸ್ಕೋಡಗಾಮಾ, ಫ್ರಾನ್ಸಿಸ್ಕೋ ಜಲಮಾರ್ಗದ ಮೂಲಕ ಹೊಸ ಸಮುದ್ರ ಮಾರ್ಗಗಳನ್ನು ಕಂಡುಹಿಡಿದರು. ಇಸ್ಲಾಂ ವಿದ್ವಾಂಸನಾದ ಇಬ್ನ ಬತೂತ ಸುಮಾರು 7500 ಮೈಲಿಗಳಷ್ಟು ಪ್ರಯಾಣ ಮಾಡಿ ತನ್ನ ಪ್ರವಾಸದ ಅನುಭವಗಳನ್ನು ತನ್ನ ಗ್ರಂಥವಾದ ʻʻರಿಹ್ಲʼʼದಲ್ಲಿ ದಾಖಲಿಸಿದ್ದಾನೆ.  ʻʻರಿಹ್ಲʼʼ  ಎಂದರೆ ಪ್ರಯಾಣ ಎಂದರ್ಥ.

  1. ಆಧುನಿಕ ಕಾಲ (Modern Age) 

ಯುರೋಪಿನಲ್ಲಿ ಕ್ರಿಸ್ತಶಕ 1500 ರಲ್ಲಿ ನವೋದಯ ಯುಗ ಆರಂಭವಾಯಿತು. ಆಗ ಶ್ರೀಮಂತರು ಬಾರಿ ಪ್ರಮಾಣದ ಪ್ರವಾಸವನ್ನು ಆರಂಭ ಮಾಡಿದರು. ಪುನರುಜ್ಜೀವನ, ಮತ ಸುಧಾರಣೆ, ಭೌಗೋಳಿಕ ಅನ್ವೇಷಣೆಯಿಂದ ವಾಣಿಜ್ಯ ಬೆಳವಣಿಗೆ ಹಾಗೂ ಸಾರಿಗೆ ಸೌಲಭ್ಯಗಳ ವಿಸ್ತರಣೆಯಾಯಿತು. ಉತ್ಸಾಹಿ ಪ್ರವಾಸಿಗರು ಹೊಸ ನಾಡುಗಳತ್ತ ಪ್ರಯಾಣ ಬೆಳೆಸಿದರು. ಉದಾ:  ಆಂಗ್ಲರು ಅಮೆರಿಕಗೆ ಹೊರಟರು ಈ ಸಮಯದಲ್ಲಿ ವಾಹನಗಳು, ರೇಡಿಯೋ, ಹಡಗು ಸಂಪರ್ಕ, ಆಧುನಿಕ ವಸತಿಗೃಹಗಳ ನಿರ್ಮಾಣದಿಂದಾಗಿ ಪ್ರವಾಸಿ ಚಟುವಟಿಕೆ ಜೋರಾಯಿತು. ಹೀಗಾಗಿ ಸಮುದ್ರ ವಿಹಾರ ಧಾಮಗಳು ಮತ್ತು ಸ್ಪಾಗಳು ಬೆಳೆದು ಬಂದವು. ಇದೇ ಸಂದರ್ಭದಲ್ಲಿ ಗ್ರ್ಯಾಂಡ್ ಟೂರ್ ಕಲ್ಪನೆ ಬೆಳೆದು ಬಂದಿತು.

  1. ಗ್ರ್ಯಾಂಡ್ ಟೂರ್: ಇಂಗ್ಲೆಂಡಿನಲ್ಲಿ ಗ್ರ್ಯಾಂಡ್ ಟೂರ್ ಕಲ್ಪನೆ ಬಂದುದು 18ನೇ ಶತಮಾನದ ವೇಳೆಗೆ. ಇಂಗ್ಲೆಂಡಿನ ಸುಮಾರು 20000 ಪ್ರವಾಸಿಗರು ಇತರೆ ದೇಶಗಳ ಗೃಹ ನಿರ್ಮಾಣ, ಪುರಾತನ ನಿರ್ಮಾಣ, ಉದ್ಯಾನವನಗಳು ಹಾಗೂ ರಸ್ತೆಗಳ ನಿರ್ಮಾಣಗಳ ಮಾಹಿತಿ ತಿಳಿದು ತಮ್ಮ ದೇಶದಲ್ಲಿ ಹಾಗೆಯೇ ನಿರ್ಮಿಸಲು ಯೋಚಿಸಿ ಪ್ರಪಂಚದ ಯೂರೋಪ್ ಖಂಡಕ್ಕೆ ಪ್ರವಾಸ ಹೊರಟರು. ಈ ಪ್ರವಾಸ 3 ರಿಂದ 4 ವಾರಗಳ ಅವಧಿಯದಾಗಿತ್ತು. 1763 ರಿಂದ 1793ರ 30 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡಿನ ಜನಸಾಮಾನ್ಯರು ತಮ್ಮ ಸಂಪತ್ತನ್ನು ಗ್ರ್ಯಾಂಡ್ ಟೂರಿಗೆ ಸುರಿದರು. ಅವರಲ್ಲಿ ಹಲವರು ಶೈಕ್ಷಣಿಕ ಪ್ರವಾಸ ಕೈಗೊಂಡರು.

ರಷ್ಯಾದ ಪೀಟರ್ ರವರು ಯುರೋಪಿನಾದ್ಯಂತ ಪ್ರವಾಸ ಕೈಗೊಂಡು ಅಲ್ಲಿನ ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಸ್ಥಿತಿ, ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ ಹಾಗೂ ಕೈಗಾರಿಕಾ ಬೆಳವಣಿಗೆಯ ಕುರಿತು ಅಧ್ಯಯನ ಮಾಡಿದನು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಗ್ರ್ಯಾಂಡ್ ಟೂರ್ ಹೋಗುತ್ತಿದ್ದರು. ಇಂತಹ ಪ್ರವಾಸಿಗರಿಗೆ ವಸತಿ ಊಟ ನೀಡಲು ಅಲ್ಲಿನ ರೆಸಾರ್ಟ್ ಗಳು ಹಾಗೂ ಹೋಟೆಲ್‌ಗಳು ಸಿದ್ಧಗೊಂಡವು. ಪ್ರವಾಸಿಗರಿಗೆ ಹಣ ನೀಡಲು ಬ್ಯಾಂಕುಗಳು ಆರಂಭವಾದವು. 1760ರಲ್ಲಿ ಪ್ರವಾಸಿ ಚೆಕ್ ಸೌಲಭ್ಯ ಜಾರಿಗೆ ಬಂದಿತು.

ಕೈಗಾರಿಕಾ ಕ್ರಾಂತಿಯ ಪ್ರಭಾವ:  ಕೈಗಾರಿಕಾ ಕ್ರಾಂತಿಯು ಪ್ರವಾಸೋದ್ಯಮಕ್ಕೆ ಸ್ಪೂರ್ತಿಯಾಯಿತು. ಅದಕ್ಕೆ ಈ ಕೆಳಗಿನ ಅಂಶಗಳು ಕಾರಣವಾದವು.

  1. ಸಾರಿಗೆ ಸಂಪರ್ಕಗಳ ತೀವ್ರ ಬೆಳವಣಿಗೆ.
  2.  ತಾಂತ್ರಿಕ ಅಭಿವೃದ್ಧಿಯ ಪರಿಣಾಮದಿಂದ ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಯಾದುದು.
  3. ಕಾರ್ಮಿಕರಿಗೆ ವೇತನ ಸಹಿತ ರಜೆ ಹಾಗೂ ಪ್ರವಾಸಕ್ಕೆ ತಗುಲುವ ವೆಚ್ಚವನ್ನು ವಹಿಸಿಕೊಳ್ಳಲು ಮುಂದಾದದ್ದು.
  4. ಸಮಯ ಮತ್ತು ಸಂಪತ್ತಿನ ಹೆಚ್ಚಳ.
  5. ಪ್ರವಾಸೋದ್ಯಮ ನಡೆಸುವ ಉದ್ಯಮದ ಬೆಳವಣಿಗೆ
  6.  ಸುರಕ್ಷತೆಯ ಪ್ರಯಾಣ ಸೌಲಭ್ಯಗಳು
  7.  ನಗರೀಕರಣ ಕೈಗಾರಿಕರಣದ ಪ್ರಭಾವ
  8.  ವಾರ್ಷಿಕ ರಜೆ ಸೌಲಭ್ಯಗಳ ರೂಢಿ.

ವೇತನ ಸಹಿತ ರಜೆ ಸೌಲಭ್ಯಗಳು (Paid Holidays)

19ನೇ ಶತಮಾನಕ್ಕಿಂತ ಮೊದಲು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಡಿಮೆ ವೇತನವನ್ನು ನೀಡಿ ಹೆಚ್ಚು ಸಮಯದವರೆಗೆ ದುಡಿಸಿಕೊಳ್ಳಲಾಗುತ್ತಿದ್ದು ಕಾರ್ಮಿಕರು ದೈಹಿಕ ಹಾಗೂ ಮಾನಸಿಕ ವೇದನೆಯಿಂದ ಬಳಲುತ್ತಿದ್ದರು. ಇದು ಪ್ರವಾಸೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿತು. ಕೈಗಾರಿಕಾ ಕ್ರಾಂತಿಯು ಸಂಪತ್ತಿನ ಹೆಚ್ಚಳ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ವೇತನವನ್ನು ನೀಡಲು ಉತ್ತೇಜನ ನೀಡಿತು. ಜೊತೆಗೆ ವೇತನ ಸಹಿತ ರಜೆಯನ್ನು ನೀಡಿ ಕಾರ್ಮಿಕರನ್ನು ಪ್ರವಾಸಕ್ಕೆ ಹೋಗಿ ಬರುವಂತೆ ಪ್ರೋತ್ಸಾಹಿಸಲಾಯಿತು. ಇದರಿಂದ ಸಾಮೂಹಿಕ ಪ್ರವಾಸದ ಪರಿಕಲ್ಪನೆಗೆ ನಾಂದಿಯಾಯಿತು. ಇದರಿಂದ ಕಾರ್ಮಿಕರು ಬಿಡುವು ಮಾಡಿಕೊಂಡು ಪ್ರವಾಸ ಹೋಗಲು ಆರಂಭಿಸಿದರು.

ಪ್ರವಾಸೋದ್ಯಮದ ವಿಧಗಳು (Types of Tourism)

ಪ್ರವಾಸೋದ್ಯಮದ ವಿಧಗಳು (Types of Tourism)

ಐತಿಹಾಸಿಕ ಪ್ರವಾಸೋದ್ಯಮ (Historical Tourism)

ಪರಿಚಯ
ಐತಿಹಾಸಿಕ ಪ್ರವಾಸೋದ್ಯಮವು ಪ್ರವಾಸೋದ್ಯಮದ ಪ್ರಮುಖ ಶಾಖೆಯಾಗಿದ್ದು, ಸ್ಮಾರಕಗಳು, ಕೋಟೆಗಳು, ಅರಮನೆಗಳು, ದೇವಾಲಯಗಳು ಹಾಗೂ ಪುರಾತತ್ವ ತಾಣಗಳನ್ನು ಅನ್ವೇಷಿಸಲು ಜನರನ್ನು ಪ್ರೇರೇಪಿಸುತ್ತದೆ. ಇದು ಭೂತಕಾಲವನ್ನು ತಿಳಿದುಕೊಳ್ಳಲು ಆಸಕ್ತಿದಾಯಕ ಮಾರ್ಗವನ್ನು ಒದಗಿಸುತ್ತದೆ. ಇದರಿಂದ ಜನರು ನಾಗರಿಕತೆಗಳ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಸಮಾಜದ ಅಭಿವೃದ್ಧಿ, ಆಡಳಿತ ವ್ಯವಸ್ಥೆಗಳು, ಕಲೆ, ವಾಸ್ತುಶಿಲ್ಪ ಮತ್ತು ಸಂಪ್ರದಾಯಗಳು ಕಾಲಕ್ರಮೇಣ ಹೇಗೆ ರೂಪುಗೊಂಡವು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ಇತಿಹಾಸ ಹೊಂದಿರುವ ದೇಶಗಳಲ್ಲಿ ಐತಿಹಾಸಿಕ ಪ್ರವಾಸೋದ್ಯಮವು ಜನರನ್ನು ತಮ್ಮ ಬೇರುಗಳೊಂದಿಗೆ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಕೇವಲ ಜ್ಞಾನವನ್ನು ವೃದ್ಧಿಸುವುದಷ್ಟೇ ಅಲ್ಲದೆ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಗುರುತಿನ ಮೇಲಿನ ಗೌರವವನ್ನು ಉತ್ತೇಜಿಸುತ್ತದೆ.

ಐತಿಹಾಸಿಕ ಪ್ರವಾಸೋದ್ಯಮ – ವಿವರಣೆ
ಐತಿಹಾಸಿಕ ಪ್ರವಾಸೋದ್ಯಮವೆಂದರೆ ಐತಿಹಾಸಿಕ ಸ್ಥಳಗಳು, ಘಟನೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಲು, ತಿಳಿಯಲು ಮತ್ತು ಮೆಚ್ಚಲು ಕೈಗೊಳ್ಳುವ ಪ್ರವಾಸ. ಇದರಲ್ಲಿ ತಾಜ್ ಮಹಲ್, ಹಂಪಿಯ ಪ್ರಾಚೀನ ಅವಶೇಷಗಳು ಮತ್ತು ದೆಹಲಿಯ ಕೆಂಪುಕೋಟೆ ಮುಂತಾದ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುವುದು ಒಳಗೊಂಡಿದೆ. ಈ ತಾಣಗಳು ಮೊಘಲ್ ಯುಗ, ವಿಜಯನಗರ ಸಾಮ್ರಾಜ್ಯ ಮತ್ತು ವಸಾಹತು ಕಾಲದಂತಹ ವಿವಿಧ ಇತಿಹಾಸದ ಅವಧಿಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತವೆ.

ಐತಿಹಾಸಿಕ ಪ್ರವಾಸೋದ್ಯಮದ ಮುಖ್ಯ ಲಕ್ಷಣವೆಂದರೆ ಇದರ ಪರಂಪರೆ ಆಧಾರಿತ ಸ್ವರೂಪ. ಪ್ರವಾಸಿಗರು ಹಿಂದಿನ ಕಾಲದ ವಾಸ್ತುಶಿಲ್ಪದ ಮಹತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸುವ ಸ್ಮಾರಕಗಳು, ಕೋಟೆಗಳು, ದೇವಾಲಯಗಳು ಮತ್ತು ಪ್ರಾಚೀನ ನಗರಗಳಿಗೆ ಭೇಟಿ ನೀಡುತ್ತಾರೆ. ಉದಾಹರಣೆಗೆ, ದೇವಾಲಯಗಳ ಶಿಲ್ಪಕಲೆ ಅಥವಾ ಕೋಟೆಗಳ ವಿನ್ಯಾಸವು ಹಿಂದಿನ ಸಮಾಜಗಳ ತಾಂತ್ರಿಕ ಮತ್ತು ಕಲಾತ್ಮಕ ನೈಪುಣ್ಯವನ್ನು ಪ್ರತಿಬಿಂಬಿಸುತ್ತದೆ.

ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಇದರ ಶೈಕ್ಷಣಿಕ ಮೌಲ್ಯ. ಐತಿಹಾಸಿಕ ಪ್ರವಾಸೋದ್ಯಮವು “ಜೀವಂತ ತರಗತಿ ಕೊಠಡಿ”ಯಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಇತಿಹಾಸವನ್ನು ಪ್ರಾಯೋಗಿಕ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಕಲಿಯಬಹುದು. ಪುಸ್ತಕಗಳನ್ನು ಓದುವಷ್ಟರಲ್ಲಿ ಮಾತ್ರ ಸೀಮಿತವಾಗದೇ, ಅವರು ಐತಿಹಾಸಿಕ ಕಟ್ಟಡಗಳು, ಶಾಸನಗಳು ಮತ್ತು ಕಲಾವಸ್ತುಗಳನ್ನು ನೇರವಾಗಿ ಗಮನಿಸಿ ಅಧ್ಯಯನ ಮಾಡಬಹುದು. ಇದರಿಂದ ಕಲಿಕೆಯು ಹೆಚ್ಚು ಪರಿಣಾಮಕಾರಿ ಮತ್ತು ನೆನಪಿನಲ್ಲಿ ಉಳಿಯುವಂತಾಗುತ್ತದೆ.

ಐತಿಹಾಸಿಕ ಪ್ರವಾಸೋದ್ಯಮವು ಸಾಂಸ್ಕೃತಿಕ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ. ಪ್ರವಾಸಿಗರು ಪರಂಪರೆ ತಾಣಗಳಿಗೆ ಭೇಟಿ ನೀಡುವ ಮೂಲಕ ಆದಾಯ ಬರುತ್ತದೆ. ಇದನ್ನು ಸಂರಕ್ಷಣೆ ಮತ್ತು ನಿರ್ವಹಣೆಗೆ ಬಳಸಬಹುದು. ಸರ್ಕಾರಗಳು ಮತ್ತು ಸಂಸ್ಥೆಗಳು ಈ ತಾಣಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳುತ್ತವೆ, ಇದರಿಂದ ಭವಿಷ್ಯದ ಪೀಳಿಗೆಗಳಿಗೂ ಅವುಗಳನ್ನು ಅನುಭವಿಸುವ ಅವಕಾಶ ಸಿಗುತ್ತದೆ. ಈ ರೀತಿಯಾಗಿ, ಪ್ರವಾಸೋದ್ಯಮವು ಸಾಂಸ್ಕೃತಿಕ ಗುರುತನ್ನು ಕಾಪಾಡುವ ಸಾಧನವಾಗುತ್ತದೆ.

ಈ ಪ್ರವಾಸೋದ್ಯಮವನ್ನು ವಿವಿಧ ವಿಧಗಳಾಗಿ ವರ್ಗೀಕರಿಸಬಹುದು. ಸ್ಮಾರಕ ಪ್ರವಾಸೋದ್ಯಮವು ಕೋಟೆಗಳು, ಅರಮನೆಗಳು ಮತ್ತು ಸ್ಮಾರಕಗಳಂತಹ ಪ್ರಸಿದ್ಧ ಕಟ್ಟಡಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ. ಪುರಾತತ್ವ ಪ್ರವಾಸೋದ್ಯಮವು ಪ್ರಾಚೀನ ಅವಶೇಷಗಳು ಮತ್ತು ಉತ್ಕನನ ತಾಣಗಳನ್ನು ಅನ್ವೇಷಿಸುವುದಾಗಿದೆ. ಪರಂಪರೆ ಪ್ರವಾಸೋದ್ಯಮವು ಸಂಪ್ರದಾಯಗಳು, ಆಚರಣೆಗಳು ಮತ್ತು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಮೇಲೆ ಒತ್ತು ನೀಡುತ್ತದೆ. ಯುದ್ಧಭೂಮಿ ಪ್ರವಾಸೋದ್ಯಮವು ಪ್ರಮುಖ ಐತಿಹಾಸಿಕ ಘಟನೆಗಳು ಅಥವಾ ಯುದ್ಧಗಳು ನಡೆದ ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ.

ಐತಿಹಾಸಿಕ ಪ್ರವಾಸೋದ್ಯಮವು ಆರ್ಥಿಕ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಇದು ಮಾರ್ಗದರ್ಶನ, ಆತಿಥ್ಯ, ಸಾರಿಗೆ ಮತ್ತು ಹಸ್ತಕಲೆಗಳಂತಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ಸಮುದಾಯಗಳು ಪ್ರವಾಸೋದ್ಯಮದಿಂದ ಲಾಭ ಪಡೆಯುತ್ತವೆ, ಏಕೆಂದರೆ ಇದು ಆದಾಯವನ್ನು ಹೆಚ್ಚಿಸಿ ಸಣ್ಣ ವ್ಯಾಪಾರಗಳಿಗೆ ಬೆಂಬಲ ಒದಗಿಸುತ್ತದೆ.

ಆದಾಗ್ಯೂ, ಐತಿಹಾಸಿಕ ಪ್ರವಾಸೋದ್ಯಮಕ್ಕೆ ಕೆಲವು ಸವಾಲುಗಳೂ ಇವೆ. ಅತಿಯಾದ ಪ್ರವಾಸಿಗರ ಸಂಖ್ಯೆ (Over-tourism) ಸ್ಮಾರಕಗಳ ಹಾನಿಗೆ ಕಾರಣವಾಗಬಹುದು. ಮಾಲಿನ್ಯದಂತಹ ಪರಿಸರ ಸಮಸ್ಯೆಗಳು ಪರಂಪರೆ ತಾಣಗಳ ಸುಸ್ಥಿತಿಗೆ ಹಾನಿ ಉಂಟುಮಾಡಬಹುದು. ಆದ್ದರಿಂದ, ಈ ತಾಣಗಳನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗಳಿಗಾಗಿ ಉಳಿಸಿಕೊಳ್ಳಲು ಸುಸ್ಥಿರವಾದ (sustainable) ವಿಧಾನಗಳನ್ನು ಅನುಸರಿಸುವುದು ಅಗತ್ಯ.

ಉಪಸಂಹಾರ
ಐತಿಹಾಸಿಕ ಪ್ರವಾಸೋದ್ಯಮವು ಭೂತಕಾಲವನ್ನು ಅರ್ಥಮಾಡಿಕೊಳ್ಳಲು ಮತ್ತು ಸಂರಕ್ಷಿಸಲು ಅತ್ಯಂತ ಪ್ರಮುಖ ಸಾಧನವಾಗಿದೆ. ಇದು ಜನರನ್ನು ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕಿಸಿ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೂ ಸಹಕಾರ ನೀಡುತ್ತದೆ. ಆದರೆ, ಐತಿಹಾಸಿಕ ತಾಣಗಳನ್ನು ಹಾನಿಯಿಂದ ರಕ್ಷಿಸಲು ಜವಾಬ್ದಾರಿಯುತ ನಿರ್ವಹಣೆ ಅಗತ್ಯವಿದೆ. ಸುಸ್ಥಿರ ಪ್ರವಾಸೋದ್ಯಮ ಕ್ರಮಗಳನ್ನು ಉತ್ತೇಜಿಸುವ ಮೂಲಕ, ಮಾನವಕುಲದ ಶ್ರೀಮಂತ ಪರಂಪರೆಯನ್ನು ಭವಿಷ್ಯದ ಪೀಳಿಗೆಗಳಿಗಾಗಿ ಉಳಿಸಿಕೊಳ್ಳುತ್ತಾ, ವಿಶ್ವದ ಜನರಿಗೆ ಶಿಕ್ಷಣ ಮತ್ತು ಪ್ರೇರಣೆಯನ್ನು ನೀಡುವ ಕಾರ್ಯವನ್ನು ಮುಂದುವರಿಸಬಹುದು.

ಸಾಂಸ್ಕೃತಿಕ ಪ್ರವಾಸೋದ್ಯಮ (Cultural Tourism)

ಪರಿಚಯ
ಸಾಂಸ್ಕೃತಿಕ ಪ್ರವಾಸೋದ್ಯಮವು ಪ್ರವಾಸೋದ್ಯಮದ ಒಂದು ಪ್ರಮುಖ ವಿಧವಾಗಿದ್ದು, ನಿರ್ದಿಷ್ಟ ಪ್ರದೇಶ ಅಥವಾ ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳು, ಆಚರಣೆಗಳು ಮತ್ತು ಜೀವನಶೈಲಿಯನ್ನು ಖುದ್ದಾಗಿ ಗಮನಿಸುವುದಕ್ಕೆ ಒತ್ತು ನೀಡುತ್ತದೆ. ಇದು ಪ್ರವಾಸಿಗರಿಗೆ ಜನರ ಜೀವನ ಶೈಲಿ, ನಂಬಿಕೆಗಳು, ಕಲಾರೂಪಗಳು, ಹಬ್ಬಗಳು, ಆಹಾರ ಪದ್ಧತಿ ಮತ್ತು ಸಾಮಾಜಿಕ ಆಚರಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಂಸ್ಕೃತಿಕ ಪ್ರವಾಸೋದ್ಯಮವು ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮಹತ್ವದ ಪಾತ್ರವಹಿಸುತ್ತದೆ, ಜೊತೆಗೆ ಅರ್ಥಪೂರ್ಣ ಪ್ರವಾಸ ಅನುಭವಗಳನ್ನು ಒದಗಿಸುತ್ತದೆ.

ಸಾಂಸ್ಕೃತಿಕ ಪ್ರವಾಸೋದ್ಯಮ
ಸಾಂಸ್ಕೃತಿಕ ಪ್ರವಾಸೋದ್ಯಮವು ಹಬ್ಬಗಳಲ್ಲಿ ಭಾಗವಹಿಸುವುದು, ಪರಂಪರೆಯ ಕಲೆ ಮತ್ತು ಹಸ್ತಕಲೆಗಳನ್ನು ಅನ್ವೇಷಿಸುವುದು, ಸಂಗ್ರಹಾಲಯಗಳಿಗೆ ಭೇಟಿ ನೀಡುವುದು ಮತ್ತು ಸ್ಥಳೀಯ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಮುಂತಾದ ಚಟುವಟಿಕೆಗಳನ್ನು ಒಳಗೊಂಡಿದೆ. ಉದಾಹರಣೆಗೆ, ವಾರಾಣಸಿ ಘಾಟ್‌ಗಳಲ್ಲಿ ನಡೆಯುವ ಆಧ್ಯಾತ್ಮಿಕ ವಿಧಿವಿಧಾನಗಳನ್ನು ನೋಡುವುದು, ರಾಜಸ್ಥಾನದ ಜನಪದ ಸಂಪ್ರದಾಯಗಳನ್ನು ಅನುಭವಿಸುವುದು ಅಥವಾ ಕೊಲ್ಕತ್ತಾದ ಸಂಗ್ರಹಾಲಯಗಳಿಗೆ ಭೇಟಿ ನೀಡುವುದು, ಈ ರೀತಿಯ ಪ್ರವಾಸೋದ್ಯಮವು ವೈವಿಧ್ಯಮಯ ಅನುಭವಗಳನ್ನು ನೀಡುತ್ತದೆ.

ಸಾಂಸ್ಕೃತಿಕ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಇದರ ಸಂಪ್ರದಾಯಗಳು ಮತ್ತು ಜೀವನಶೈಲಿಯ ಮೇಲಿನ ಒತ್ತು. ಪ್ರವಾಸಿಗರಿಗೆ ಸ್ಥಳೀಯ ಸಂಪ್ರದಾಯಗಳು, ಉಡುಪು, ಭಾಷೆ ಮತ್ತು ಆಹಾರವನ್ನು ಅನುಭವಿಸುವ ಅವಕಾಶ ಸಿಗುತ್ತದೆ, ಇದರಿಂದ ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಕುತೂಹಲ ಮತ್ತು ಗೌರವ ಹೆಚ್ಚುತ್ತದೆ. ಉದಾಹರಣೆಗೆ ಕಾಶ್ಮೀರ, ರಾಜಸ್ತಾನಕ್ಕೆ ಹೋಗುವ ಪ್ರವಾಸಿಗರು ಅಲ್ಲಿಯ ಉಡುಪನ್ನು ಧರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷಪಡುವ ಸಂಗತಿಯೂ ಉಂಟು.

ಸಾಂಸ್ಕೃತಿಕ ಪ್ರವಾಸೋದ್ಯಮವು ಪರಂಪರೆಯ ಸಂರಕ್ಷಣೆಗೆ ಸಹಕಾರ ನೀಡುತ್ತದೆ. ಇದು ಪರಂಪರೆಯ ಕಲೆ, ಹಸ್ತಕಲೆ ಮತ್ತು ಆಚರಣೆಗಳನ್ನು ಕಾಪಾಡಲು ಉತ್ತೇಜಿಸುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಹಸ್ತಕಲೆ, ಕಲಾಪ್ರದರ್ಶನಗಳು ಮತ್ತು ಆತಿಥ್ಯ ಸೇವೆಗಳ ಮೂಲಕ ಸ್ಥಳೀಯ ಸಮುದಾಯಗಳು ಆರ್ಥಿಕವಾಗಿ ಲಾಭ ಪಡೆಯುತ್ತವೆ.

ಆದಾಗ್ಯೂ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಕೆಲವು ಸವಾಲುಗಳೂ ಇವೆ. ಅತಿಯಾದ ವ್ಯಾಪಾರೀಕರಣವು (commercialization)ಸಾಂಸ್ಕೃತಿಕ ಆಚರಣೆಗಳ ಮೂಲತತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ಉಂಟುಮಾಡುತ್ತದೆ. ಅತಿಯಾದ ಪ್ರವಾಸಿಗರ ಪ್ರವಾಹವು ಸ್ಥಳೀಯ ಸಮುದಾಯಗಳು ಮತ್ತು ಸಂಪ್ರದಾಯಗಳಿಗೆ ಅಡಚಣೆ ಉಂಟುಮಾಡಬಹುದು. ಆದ್ದರಿಂದ, ಜವಾಬ್ದಾರಿಯುತ ಮತ್ತು ಸ್ಥಿರವಾದ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಅತ್ಯಂತ ಅಗತ್ಯ.

ಉಪಸಂಹಾರ

ಸಾಂಸ್ಕೃತಿಕ ಪ್ರವಾಸೋದ್ಯಮವು ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳೊಂದಿಗೆ ಜನರನ್ನು ಸಂಪರ್ಕಿಸುವ ಶಕ್ತಿಯುತ ಸಾಧನವಾಗಿದೆ. ಇದು ವಿಭಿನ್ನ ಸಮುದಾಯಗಳ ಜೀವನಶೈಲಿ ಮತ್ತು ಪರಂಪರೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವ ಮೂಲಕ ಪ್ರವಾಸ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ಜೊತೆಗೆ ಇದು ಸಾಂಸ್ಕೃತಿಕ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತದೆ. ಇದರ ದೀರ್ಘಕಾಲಿಕ ಲಾಭಗಳನ್ನು ಪಡೆಯಲು, ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಯೋಜನಾಬದ್ಧವಾಗಿ ಅನುಸರಿಸಬೇಕು, ಸ್ಥಳೀಯ ಸಂಸ್ಕೃತಿಗಳ ವೈಶಿಷ್ಟ್ಯತೆ ಮತ್ತು ಮೂಲತತ್ವವನ್ನು ಕಾಪಾಡಬೇಕು.

ಧಾರ್ಮಿಕ ಪ್ರವಾಸೋದ್ಯಮ

(Religious Tourism)

ಪರಿಚಯ
ಧಾರ್ಮಿಕ ಪ್ರವಾಸೋದ್ಯಮವು ಅತ್ಯಂತ ಹಳೆಯ ಮತ್ತು ಮಹತ್ವದ ಪ್ರವಾಸೋದ್ಯಮದ ರೂಪಗಳಲ್ಲಿ ಒಂದಾಗಿದೆ. ಇದರಲ್ಲಿ ಜನರು ಧಾರ್ಮಿಕ ಅಥವಾ ಆಧ್ಯಾತ್ಮಿಕ ಮಹತ್ವ ಹೊಂದಿರುವ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಇದು ಭಕ್ತಿ, ನಂಬಿಕೆ ಮತ್ತು ಆಶೀರ್ವಾದವನ್ನು ಪಡೆಯುವ, ಪೂಜೆ-ವಿಧಿವಿಧಾನಗಳನ್ನು ನೆರವೇರಿಸುವ ಅಥವಾ ಆಧ್ಯಾತ್ಮಿಕ ಶಾಂತಿಯನ್ನು ಪಡೆಯುವ ಆಶಯದಿಂದ ಪ್ರೇರಿತವಾಗಿರುತ್ತದೆ. ವಿಶ್ವದಾದ್ಯಂತ, ಧಾರ್ಮಿಕ ಪ್ರವಾಸೋದ್ಯಮವು ಸಾಂಸ್ಕೃತಿಕ ಗುರುತನ್ನು ರೂಪಿಸುವುದಲ್ಲದೆ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಧಾರ್ಮಿಕ ಪ್ರವಾಸೋದ್ಯಮ – ವಿವರಣೆ
ಧಾರ್ಮಿಕ ಪ್ರವಾಸೋದ್ಯಮವೆಂದರೆ ಯಾತ್ರೆ (Pilgrimage), ಪೂಜೆ ಅಥವಾ ಧಾರ್ಮಿಕ ಹಬ್ಬಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಕೈಗೊಳ್ಳುವ ಪ್ರವಾಸ. ಇದರಲ್ಲಿ ದೇವಾಲಯಗಳು, ಮಸೀದಿಗಳು, ಚರ್ಚುಗಳು, ಮಠಗಳು ಮತ್ತು ಇತರೆ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು ಒಳಗೊಂಡಿದೆ. ಉದಾಹರಣೆಗೆ, ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡುವುದು, ಮಕ್ಕಾಕ್ಕೆ ಹಜ್ ಯಾತ್ರೆ ಮಾಡುವುದು, ಗೋಲ್ಡನ್ ಟೆಂಪಲ್‌ನಲ್ಲಿ ಆಶೀರ್ವಾದ ಪಡೆಯುವುದು ಅಥವಾ ಮಹಾಬೋಧಿ ದೇವಾಲಯದಲ್ಲಿ ಧ್ಯಾನ ಮಾಡುವುದನ್ನು ಧಾರ್ಮಿಕ ಪ್ರವಾಸೋದ್ಯಮದ ಉದಾಹರಣೆಗಳಾಗಿ ಹೇಳಬಹುದು.

ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಇದರ ಆಧ್ಯಾತ್ಮಿಕ ಪ್ರೇರಣೆ. ಇತರ ಪ್ರವಾಸೋದ್ಯಮದ ರೂಪಗಳಿಗಿಂತ ಭಿನ್ನವಾಗಿ, ಇದು ಮನರಂಜನೆಗಿಂತ ಭಕ್ತಿ ಮತ್ತು ನಂಬಿಕೆಯಿಂದ ಪ್ರೇರಿತವಾಗಿರುತ್ತದೆ. ಇದು ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುತ್ತದೆ, ಏಕೆಂದರೆ ವಿಭಿನ್ನ ಪ್ರದೇಶಗಳು ಮತ್ತು ಹಿನ್ನೆಲೆಗಳಿಂದ ಬಂದ ಜನರು ಪೂಜಾ ಸ್ಥಳಗಳಲ್ಲಿ ಒಂದಾಗುತ್ತಾರೆ.

ಧಾರ್ಮಿಕ ಪ್ರವಾಸೋದ್ಯಮವು ಆರ್ಥಿಕವಾಗಿ ಕೂಡ ಮಹತ್ವದ್ದಾಗಿದೆ. ಇದು ಆತಿಥ್ಯ, ಸಾರಿಗೆ ಮತ್ತು ಸ್ಥಳೀಯ ವ್ಯಾಪಾರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅನೇಕ ಯಾತ್ರಾ ಕೇಂದ್ರಗಳು ಪ್ರವಾಸಿಗರಿಗಾಗಿ ರಸ್ತೆ, ವಸತಿ ಮತ್ತು ಇತರೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತವೆ.

ಆದಾಗ್ಯೂ, ಧಾರ್ಮಿಕ ಪ್ರವಾಸೋದ್ಯಮವು ಕೆಲವು ಸವಾಲುಗಳನ್ನು ಎದುರಿಸುತ್ತದೆ. ದೊಡ್ಡ ಪ್ರಮಾಣದ ಜನದಟ್ಟಣೆ (overcrowding), ಪರಿಸರ ಮಾಲಿನ್ಯ ಮತ್ತು ಸ್ಥಳೀಯ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ವ್ಯಾಪಾರೀಕರಣವು ಈ ಸ್ಥಳಗಳ ಆಧ್ಯಾತ್ಮಿಕ ಮಹತ್ವವನ್ನು ಕಡಿಮೆ ಮಾಡಬಹುದು. ಆದ್ದರಿಂದ, ಸಮರ್ಪಕ ಯೋಜನೆ ಮತ್ತು ಸ್ಥಿರ ನಿರ್ವಹಣೆ ಅಗತ್ಯವಾಗಿದೆ.

ಉಪಸಂಹಾರ
ಧಾರ್ಮಿಕ ಪ್ರವಾಸೋದ್ಯಮವು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಶಕ್ತಿಯುತ ಅಭಿವ್ಯಕ್ತಿಯಾಗಿದೆ. ಇದು ಜನರನ್ನು ಅವರ ನಂಬಿಕೆಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಪರ್ಕಿಸುತ್ತದೆ. ಇದು ಸಾಂಸ್ಕೃತಿಕ ಸೌಹಾರ್ದತೆ, ಆರ್ಥಿಕ ಅಭಿವೃದ್ಧಿ ಮತ್ತು ವೈಯಕ್ತಿಕ ಸುಖಶಾಂತಿಗೆ ಸಹಕಾರ ನೀಡುತ್ತದೆ. ಇದರ ನಿಜವಾದ ಅರ್ಥವನ್ನು ಕಾಪಾಡಲು, ಪರಿಸರ ಮತ್ತು ಧಾರ್ಮಿಕ ತಾಣಗಳ ಪಾವಿತ್ರ್ಯವನ್ನು ಗೌರವಿಸುವ ಜವಾಬ್ದಾರಿಯುತ ಮತ್ತು ಸ್ಥಿರ ಕ್ರಮಗಳನ್ನು ಉತ್ತೇಜಿಸುವುದು ಅತ್ಯಗತ್ಯ.

ಆಧ್ಯಾತ್ಮಿಕ ಪ್ರವಾಸೋದ್ಯಮ

(Spiritual Tourism)

ಪರಿಚಯ
ಆಧ್ಯಾತ್ಮಿಕ ಪ್ರವಾಸೋದ್ಯಮವು ಆಂತರಿಕ ಶಾಂತಿ, ಸ್ವಯಂ ಅರಿವು ಮತ್ತು ಮಾನಸಿಕ ಕ್ಷೇಮವನ್ನು ಹುಡುಕುವ ಪ್ರವಾಸೋದ್ಯಮದ ಬೆಳೆಯುತ್ತಿರುವ ರೂಪವಾಗಿದೆ. ಇತರ ಪ್ರವಾಸೋದ್ಯಮದ ಪ್ರಕಾರಗಳಿಗಿಂತ ಭಿನ್ನವಾಗಿ, ಇದು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಆಚರಣೆಗೆ ಕಡ್ಡಾಯವಾಗಿ ಸಂಬಂಧಪಟ್ಟಿಲ್ಲ. ಬದಲಾಗಿ, ಇದು ವೈಯಕ್ತಿಕ ಅಭಿವೃದ್ಧಿ, ಮನೋನಿಬಂಧನೆ (mindfulness) ಮತ್ತು ಸ್ವಂತ ಅಂತರಂಗವನ್ನು ಅನ್ವೇಷಿಸುವುದಕ್ಕೆ ಒತ್ತು ನೀಡುತ್ತದೆ. ಇಂದಿನ ವೇಗದ ಜೀವನಶೈಲಿಯಲ್ಲಿ, ಅನೇಕ ಜನರು ಸಮತೋಲನ ಕಂಡುಕೊಳ್ಳಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಜೀವನದ ಗಾಢ ಅರ್ಥವನ್ನು ಅರಿಯಲು ಆಧ್ಯಾತ್ಮಿಕ ಪ್ರವಾಸೋದ್ಯಮದತ್ತ ತಿರುಗುತ್ತಿದ್ದಾರೆ.

ಆಧ್ಯಾತ್ಮಿಕ ಪ್ರವಾಸೋದ್ಯಮ – ವಿವರಣೆ
ಆಧ್ಯಾತ್ಮಿಕ ಪ್ರವಾಸೋದ್ಯಮವೆಂದರೆ ಆಂತರಿಕ ಶಾಂತಿ, ಆತ್ಮಸಾಕ್ಷಾತ್ಕಾರ ಮತ್ತು ಭಾವನಾತ್ಮಕ ಕ್ಷೇಮವನ್ನು ಸಾಧಿಸುವ ಉದ್ದೇಶದಿಂದ ಕೈಗೊಳ್ಳುವ ಪ್ರಯಾಣ. ಇದರಲ್ಲಿ ಧ್ಯಾನ, ಯೋಗ, ಆರೋಗ್ಯ ಶಿಬಿರಗಳು (wellness retreats) ಮತ್ತು ಶಾಂತವಾದ ಪರಿಸರಗಳಿಗೆ ಭೇಟಿ ನೀಡುವಂತಹ ಚಟುವಟಿಕೆಗಳು ಒಳಗೊಂಡಿವೆ. ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಪ್ರಸಿದ್ಧ ತಾಣಗಳಲ್ಲಿ “ಯೋಗದ ರಾಜಧಾನಿ” ಎಂದು ಕರೆಯಲ್ಪಡುವ ಋಷಿಕೇಶ್, ಧ್ಯಾನ ಮತ್ತು ಸಮೂಹ ಜೀವನಕ್ಕಾಗಿ ಪ್ರಸಿದ್ಧವಾದ ಪಾಂಡಿಚೇರಿಯ ಅರೊವಿಲೆ(Auroville), ಕೊಯಮತ್ತೂರು ಮತ್ತು ಚಿಕ್ಕಬಳ್ಳಾಪುರಗಳಲ್ಲಿರುವ ಇಶಾ ಫೌಂಡೇಶನ್ ಮತ್ತು ಶಾಂತ ಆಧ್ಯಾತ್ಮಿಕ ವಾತಾವರಣದಲ್ಲಿ ಧ್ಯಾನ ಮತ್ತು ಚಿಂತನೆಗೆ ಪ್ರಸಿದ್ಧವಾದ ಬೋಧಗಯಾ ಸೇರಿವೆ.

ಆಧ್ಯಾತ್ಮಿಕ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಇದರ ಅಂತರಂಗದ ಅಭಿವೃದ್ಧಿಯ ಮೇಲಿನ ಒತ್ತು. ಪ್ರವಾಸಿಗರು ಯೋಗ ಮತ್ತು ಧ್ಯಾನದಂತಹ ಅಭ್ಯಾಸಗಳಲ್ಲಿ ತೊಡಗಿ ಮನಸ್ಸಿನ ಸ್ಪಷ್ಟತೆ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಆರೋಗ್ಯ ಮತ್ತು ಚೇತರಿಕೆಯನ್ನು ಉತ್ತೇಜಿಸಿ, ಒತ್ತಡ, ಆತಂಕ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಇದರ ಧರ್ಮಾತೀತ ಮತ್ತು ಸಾಮಾನ್ಯ ಸ್ವರೂಪ. ಧಾರ್ಮಿಕ ಪ್ರವಾಸೋದ್ಯಮದಂತಿಲ್ಲದೆ, ಆಧ್ಯಾತ್ಮಿಕ ಪ್ರವಾಸೋದ್ಯಮವು ನಿರ್ದಿಷ್ಟ ಧರ್ಮವನ್ನು ಅನುಸರಿಸುವ ಅಗತ್ಯವಿಲ್ಲ. ವಿಭಿನ್ನ ಹಿನ್ನೆಲೆಯ ಜನರು ಇದರಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಅಭ್ಯಾಸಗಳಿಂದ ಲಾಭ ಪಡೆಯಬಹುದು.

ಆಧ್ಯಾತ್ಮಿಕ ಪ್ರವಾಸೋದ್ಯಮವು ಸ್ಥಳೀಯ ಆರ್ಥಿಕತೆಗೆ ಸಹ ಸಹಕಾರ ನೀಡುತ್ತದೆ, ವಿಶೇಷವಾಗಿ ಆರೋಗ್ಯ ಶಿಬಿರಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳಿಗೆ ಪ್ರಸಿದ್ಧವಾದ ಪ್ರದೇಶಗಳಲ್ಲಿ. ಆದಾಗ್ಯೂ, ಇದು ಕೆಲವು ಸವಾಲುಗಳನ್ನು ಎದುರಿಸುತ್ತದೆ. ವ್ಯಾಪಾರೀಕರಣವು ಆಧ್ಯಾತ್ಮಿಕತೆಯ ನಿಜವಾದ ಅರ್ಥವನ್ನು ಕುಗ್ಗಿಸಬಹುದು ಮತ್ತು ಕೆಲವು ತಾಣಗಳಲ್ಲಿ ಸೂಕ್ತ ನಿಯಂತ್ರಣದ ಕೊರತೆ ಕಂಡುಬರುತ್ತದೆ.

ಉಪಸಂಹಾರ
ಆಧ್ಯಾತ್ಮಿಕ ಪ್ರವಾಸೋದ್ಯಮವು ಆಂತರಿಕ ಶಾಂತಿ, ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಕ್ಷೇಮವನ್ನು ಉತ್ತೇಜಿಸುವ ಮಹತ್ವದ ಪ್ರವಾಸೋದ್ಯಮದ ರೂಪವಾಗಿದೆ. ಇದು ದಿನನಿತ್ಯದ ಒತ್ತಡದಿಂದ ದೂರವಾಗಿ ಸ್ವಂತ ಅಂತರಂಗದೊಂದಿಗೆ ಮರುಸಂಪರ್ಕ ಸಾಧಿಸಲು ಅವಕಾಶ ಒದಗಿಸುತ್ತದೆ. ಇದು ಅನೇಕ ಪ್ರಯೋಜನಗಳನ್ನು ನೀಡುತ್ತಿದ್ದರೂ, ಇದರ ನಿಜಸ್ವರೂಪವನ್ನು ಕಾಪಾಡಿಕೊಳ್ಳುವುದು ಮತ್ತು ಜವಾಬ್ದಾರಿಯುತವಾಗಿ ಅನುಸರಿಸುವುದು ಅತ್ಯಗತ್ಯ. ಈ ರೀತಿಯಾಗಿ, ಆಧ್ಯಾತ್ಮಿಕ ಪ್ರವಾಸೋದ್ಯಮವು ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಮುಂದುವರಿಸಬಹುದು.

ಶೈಕ್ಷಣಿಕ ಪ್ರವಾಸೋದ್ಯಮ (Educational Tourism)

ಪರಿಚಯ
ಶೈಕ್ಷಣಿಕ ಪ್ರವಾಸೋದ್ಯಮವು ಪ್ರವಾಸದ ಮೂಲಕ ಕಲಿಕೆ ಮತ್ತು ಜ್ಞಾನವನ್ನು ಸಂಪಾದಿಸುವುದಕ್ಕೆ ಒತ್ತು ನೀಡುವ ಪ್ರವಾಸೋದ್ಯಮದ ಒಂದು ರೂಪವಾಗಿದೆ. ಇದರಲ್ಲಿ ಐತಿಹಾಸಿಕ ತಾಣಗಳು, ಸಂಗ್ರಹಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಂತಹ ಶೈಕ್ಷಣಿಕ ಸ್ಥಳಗಳಿಗೆ ಭೇಟಿ ನೀಡುವುದು ಒಳಗೊಂಡಿದೆ. ಈ ರೀತಿಯ ಪ್ರವಾಸೋದ್ಯಮವು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಶಿಕ್ಷಣವನ್ನು ನೈಜ ಜೀವನದ ಅನುಭವದೊಂದಿಗೆ ಸಂಯೋಜಿಸಿ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ.

ಶೈಕ್ಷಣಿಕ ಪ್ರವಾಸೋದ್ಯಮ – ವಿವರಣೆ
ಶೈಕ್ಷಣಿಕ ಪ್ರವಾಸೋದ್ಯಮವೆಂದರೆ ತರಗತಿ ಕೊಠಡಿಯ ಹೊರಗಿನ ಜ್ಞಾನ, ಕೌಶಲ್ಯ ಮತ್ತು ಪ್ರಾಯೋಗಿಕ ಅರಿವುಗಳನ್ನು ಪಡೆಯಲು ಕೈಗೊಳ್ಳುವ ಪ್ರವಾಸ. ಇದರಲ್ಲಿ ಅಧ್ಯಯನ ಪ್ರವಾಸಗಳು (study tours), ಕ್ಷೇತ್ರ ಭೇಟಿ (field trips), ವಿನಿಮಯ ಕಾರ್ಯಕ್ರಮಗಳು (exchange programs) ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಸಂಸ್ಥೆಗಳ ಭೇಟಿ ಒಳಗೊಂಡಿವೆ. ಉದಾಹರಣೆಗೆ ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ತಿಳಿಯಲು ನಳಂದಾ ವಿಶ್ವವಿದ್ಯಾಲಯದ ಅವಶೇಷಗಳಿಗೆ ಭೇಟಿ ನೀಡುವುದು, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದ ಪ್ರದರ್ಶನಗಳನ್ನು ಅನ್ವೇಷಿಸುವುದು ಅಥವಾ ದೆಹಲಿಯ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಾಗಾರಗಳಲ್ಲಿ ಭಾಗವಹಿಸುವುದು—ಇವೆಲ್ಲವು ಶೈಕ್ಷಣಿಕ ಪ್ರವಾಸೋದ್ಯಮದ ಭಾಗಗಳಾಗಿವೆ.

ಶೈಕ್ಷಣಿಕ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಇದರ ಪ್ರಾಯೋಗಿಕ ಕಲಿಕೆಯ ವಿಧಾನ. ಇದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಗತಿಗಳನ್ನು ೈೆಗಳ ಭೇಟಿ ಒಳಗೊಂಡಿವೆ. ಉದಾಹರಣೆಗೆ,ನೇರವಾಗಿ ಗಮನಿಸಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಇದರಿಂದ ಶಿಕ್ಷಣವು ಹೆಚ್ಚು ಆಕರ್ಷಕ ಮತ್ತು ನೆನಪಿನಲ್ಲಿ ಉಳಿಯುವಂತಾಗುತ್ತದೆ. ಇದು ಅನುಭವಾತ್ಮಕ ಕಲಿಕೆಯನ್ನು ಉತ್ತೇಜಿಸುತ್ತದೆ, ಅಲ್ಲಿ ಜ್ಞಾನವನ್ನು ಪುಸ್ತಕಗಳ ಮೂಲಕ ಮಾತ್ರವಲ್ಲದೆ ನೈಜ ಅನುಭವಗಳ ಮೂಲಕ ಪಡೆಯಲಾಗುತ್ತದೆ.

ಶೈಕ್ಷಣಿಕ ಪ್ರವಾಸೋದ್ಯಮವು ಸಾಂಸ್ಕೃತಿಕ ಜಾಗೃತಿಯನ್ನು ಮತ್ತು ಜಾಗತಿಕ ಅರಿವನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿಗಳು ವಿವಿಧ ಪ್ರದೇಶಗಳಿಗೆ ಪ್ರಯಾಣ ಮಾಡುವಾಗ ವಿಭಿನ್ನ ಸಂಸ್ಕೃತಿಗಳು, ಭಾಷೆಗಳು ಮತ್ತು ಜೀವನಶೈಲಿಗಳನ್ನು ತಿಳಿದುಕೊಳ್ಳುತ್ತಾರೆ. ಇದರಿಂದ ಅವರ ದೃಷ್ಟಿಕೋನ ವಿಸ್ತಾರಗೊಳ್ಳುತ್ತದೆ. ಇದು ಸಂವಹನ, ಗಮನಿಸುವಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯಂತಹ ಪ್ರಮುಖ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಇದರ ಜೊತೆಗೆ, ಶೈಕ್ಷಣಿಕ ಪ್ರವಾಸೋದ್ಯಮವು ವಿದ್ಯಾರ್ಥಿಗಳ ವೈಯಕ್ತಿಕ ಅಭಿವೃದ್ಧಿಗೆ ಸಹಕಾರ ನೀಡುತ್ತದೆ. ಇದು ಆತ್ಮವಿಶ್ವಾಸ, ಸ್ವತಂತ್ರತೆ ಮತ್ತು ಕುತೂಹಲವನ್ನು ಬೆಳೆಸುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೂಲಕ ಸ್ಥಳೀಯ ಆರ್ಥಿಕತೆಗೂ ಇದು ಬೆಂಬಲ ನೀಡುತ್ತದೆ.

ಆದಾಗ್ಯೂ, ಇದಕ್ಕೆ ಕೆಲವು ಸವಾಲುಗಳಿವೆ. ಹೆಚ್ಚಿನ ವೆಚ್ಚ, ಸರಿಯಾದ ಯೋಜನೆಯ ಕೊರತೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತ ಚಿಂತನೆಗಳು ಪ್ರಮುಖವಾಗಿವೆ. ಆದ್ದರಿಂದ, ಯಶಸ್ವಿಯಾದ ಶೈಕ್ಷಣಿಕ ಪ್ರವಾಸೋದ್ಯಮಕ್ಕಾಗಿ ಸಮರ್ಪಕ ಯೋಜನೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ.‌ SOP(Standard Operating Procedure)ಯನ್ನು ಬಳಸುವ ತುರ್ತು ಅಗತ್ಯವಿದೆ.

ಉಪಸಂಹಾರ
ಶೈಕ್ಷಣಿಕ ಪ್ರವಾಸೋದ್ಯಮವು ಪ್ರವಾಸವನ್ನು ಕಲಿಕೆಯೊಂದಿಗೆ ಸಂಯೋಜಿಸುವ ಪರಿಣಾಮಕಾರಿ ವಿಧಾನವಾಗಿದೆ. ಇದು ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸಾಂಸ್ಕೃತಿಕ ಅರಿವನ್ನು ಉತ್ತೇಜಿಸಿ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಸಹಕಾರ ನೀಡುತ್ತದೆ. ನೈಜ ಅನುಭವಗಳನ್ನು ಒದಗಿಸುವುದರಿಂದ ಶಿಕ್ಷಣವನ್ನು ಹೆಚ್ಚು ಅರ್ಥಪೂರ್ಣ ಮತ್ತು ಆಸಕ್ತಿದಾಯಕವಾಗಿಸುತ್ತದೆ. ಸರಿಯಾದ ಯೋಜನೆ ಮತ್ತು ಬೆಂಬಲದೊಂದಿಗೆ, ಶೈಕ್ಷಣಿಕ ಪ್ರವಾಸೋದ್ಯಮವು ಜ್ಞಾನವಂತ ಮತ್ತು ಜವಾಬ್ದಾರಿಯುತ ವ್ಯಕ್ತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಬಹುದು.

ವಾಣಿಜ್ಯ ಪ್ರವಾಸೋದ್ಯಮ (Commercial Tourism)

ಪರಿಚಯ
ವಾಣಿಜ್ಯ ಪ್ರವಾಸೋದ್ಯಮವು ಮುಖ್ಯವಾಗಿ ವ್ಯಾಪಾರ, ವಹಿವಾಟು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಪ್ರೇರಿತವಾಗಿರುವ ಪ್ರವಾಸೋದ್ಯಮವಾಗಿದೆ. ಇದರಲ್ಲಿ ವ್ಯಾಪಾರ ಮೇಳಗಳು, ಪ್ರದರ್ಶನಗಳು, ಸಮ್ಮೇಳನಗಳು, ವ್ಯವಹಾರ ಸಭೆಗಳು ಮತ್ತು ಖರೀದಿ (shopping)ಗಾಗಿ ಕೈಗೊಳ್ಳುವ ಪ್ರಯಾಣಗಳು ಒಳಗೊಂಡಿವೆ. ಆಧುನಿಕ ಜಾಗತೀಕರಣದ ಯುಗದಲ್ಲಿ, ವಾಣಿಜ್ಯ ಪ್ರವಾಸೋದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಮಾರುಕಟ್ಟೆಗಳನ್ನು ಸಂಪರ್ಕಿಸುವುದು, ವ್ಯಾಪಾರವನ್ನು ಉತ್ತೇಜಿಸುವುದು ಮತ್ತು ಆರ್ಥಿಕ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ.

ವಾಣಿಜ್ಯ ಪ್ರವಾಸೋದ್ಯಮ – ವಿವರಣೆ
ವಾಣಿಜ್ಯ ಪ್ರವಾಸೋದ್ಯಮವೆಂದರೆ ಮನರಂಜನೆಗಾಗಿ ಅಲ್ಲದೆ, ವ್ಯವಹಾರ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಕೈಗೊಳ್ಳುವ ಪ್ರವಾಸ. ಇದರಲ್ಲಿ ಅಂತರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದು, ಕಾರ್ಪೊರೇಟ್ ಸಭೆಗಳಿಗೆ ಹಾಜರಾಗುವುದು, ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವುದು ಮತ್ತು ದೊಡ್ಡ ಮಟ್ಟದ ಖರೀದಿ ಚಟುವಟಿಕೆಗಳಲ್ಲಿ ತೊಡಗುವುದು ಸೇರಿವೆ. ಉದಾಹರಣೆಗೆ, ಮುಂಬೈಯಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸುವ ವ್ಯವಹಾರಸ್ಥ ಪ್ರವಾಸಿಗರು, ದುಬೈಯಲ್ಲಿ ನಡೆಯುವ ವ್ಯಾಪಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಅಥವಾ ಬ್ಯಾಂಕಾಕ್‌ನಂತಹ ನಗರಗಳಲ್ಲಿ ಜಾಗತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಖರೀದಿಗಾಗಿ ಭೇಟಿ ನೀಡುವವರು—ಎಲ್ಲವೂ ವಾಣಿಜ್ಯ ಪ್ರವಾಸೋದ್ಯಮದ ಭಾಗಗಳಾಗಿವೆ.

ವಾಣಿಜ್ಯ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಇದರ ವ್ಯವಹಾರ ಮೇಲಿನ ಕೇಂದ್ರೀಕರಣ. ಪ್ರವಾಸಿಗರು ನೆಟ್‌ವರ್ಕಿಂಗ್, ಒಪ್ಪಂದಗಳನ್ನು ಮಾಡುವಿಕೆ ಮತ್ತು ಮಾರುಕಟ್ಟೆ ವಿಸ್ತರಣೆಗಳಂತಹ ವೃತ್ತಿಪರ ಚಟುವಟಿಕೆಗಳ ಮೇಲೆ ಗಮನ ಹರಿಸುತ್ತಾರೆ. ಇದು ವ್ಯಾಪಾರ, ಹೂಡಿಕೆ ಮತ್ತು ಅಂತರಾಷ್ಟ್ರೀಯ ವ್ಯವಹಾರ ಸಂಬಂಧಗಳನ್ನು ಉತ್ತೇಜಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುತ್ತದೆ.

ವಾಣಿಜ್ಯ ಪ್ರವಾಸೋದ್ಯಮವು ಸಮ್ಮೇಳನ ಕೇಂದ್ರಗಳು, ಹೋಟೆಲ್‌ಗಳು, ಸಾರಿಗೆ ವ್ಯವಸ್ಥೆಗಳು ಮತ್ತು ಶಾಪಿಂಗ್ ಸಂಕೀರ್ಣಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದು ಆತಿಥ್ಯ, ಕಾರ್ಯಕ್ರಮ ನಿರ್ವಹಣೆ ಮತ್ತು ಚಿಲ್ಲರೆ ವ್ಯಾಪಾರ (retail) ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಶಾಪಿಂಗ್ ಪ್ರವಾಸೋದ್ಯಮ. ಪ್ರವಾಸಿಗರು ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಡ್ಯೂಟಿ-ಫ್ರೀ ಖರೀದಿಗೆ ಪ್ರಸಿದ್ಧವಾಗಿರುವ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ದುಬೈ ಮತ್ತು ಬ್ಯಾಂಕಾಕ್‌ನಂತಹ ನಗರಗಳು ಸ್ಪರ್ಧಾತ್ಮಕ ಬೆಲೆಗೆ ವಸ್ತುಗಳನ್ನು ಖರೀದಿಸಲು ಬಯಸುವ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಸಿದ್ಧವಾಗಿವೆ.

ಆದಾಗ್ಯೂ, ವಾಣಿಜ್ಯ ಪ್ರವಾಸೋದ್ಯಮವು ಕೆಲವು ಸವಾಲುಗಳನ್ನು ಎದುರಿಸುತ್ತದೆ. ಹೆಚ್ಚಿನ ವೆಚ್ಚ, ಸಮಯದ ಮಿತಿಗಳು ಮತ್ತು ನಿರಂತರ ಪ್ರಯಾಣದಿಂದ ಉಂಟಾಗುವ ಪರಿಸರದ ಮೇಲೆ ಪರಿಣಾಮಗಳು ಮುಖ್ಯ ಸಮಸ್ಯೆಗಳಾಗಿವೆ. ಜೊತೆಗೆ, ಅತಿಯಾದ ವಾಣಿಜ್ಯೀಕರಣವು ಕೆಲವು ತಾಣಗಳ ಸಾಂಸ್ಕೃತಿಕ ಮೌಲ್ಯವನ್ನು ಕಡಿಮೆ ಮಾಡಬಹುದು.

ಉಪಸಂಹಾರ

ವಾಣಿಜ್ಯ ಪ್ರವಾಸೋದ್ಯಮವು ವ್ಯಾಪಾರ, ವ್ಯವಹಾರ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಜನರು ಮತ್ತು ಮಾರುಕಟ್ಟೆಗಳನ್ನು ಸಂಪರ್ಕಿಸಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗೆ ಸಹಕಾರ ನೀಡುತ್ತದೆ. ಇದು ಅನೇಕ ಲಾಭಗಳನ್ನು ನೀಡುತ್ತಿದ್ದರೂ, ಪರಿಸರದ ಮೇಲೆ ದುಷ್ಪರಿಣಾಮವನ್ನು ಕಡಿಮೆ ಮಾಡಲು ಮತ್ತು ವಾಣಿಜ್ಯ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಸಂರಕ್ಷಣೆ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಜವಾಬ್ದಾರಿಯುತ ನಿರ್ವಹಣೆ ಅಗತ್ಯವಾಗಿದೆ.

ಋತುಮಾನ ಪ್ರವಾಸೋದ್ಯಮ (Seasonal Tourism)

ಪರಿಚಯ
ಋತುಮಾನ ಪ್ರವಾಸೋದ್ಯಮವೆಂದರೆ ವರ್ಷದಲ್ಲಿನ ನಿರ್ದಿಷ್ಟ ಕಾಲಗಳಲ್ಲಿ ನಡೆಯುವ ಪ್ರವಾಸವಾಗಿದ್ದು, ಹವಾಮಾನ, ವಾತಾವರಣ ಮತ್ತು ರಜಾ ಅವಧಿಗಳಿಂದ ಪ್ರೇರಿತವಾಗಿರುತ್ತದೆ. ವಿವಿಧ ಋತುಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತು ಚಟುವಟಿಕೆಗಳು ಬದಲಾಗುತ್ತವೆ. ಕೆಲವು ತಾಣಗಳು ಪೀಕ್‌ ಸೀಸನ್‌ನಲ್ಲಿ(Peak Season) ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದರೆ, ಆಫ್‌ ಸೀಸನ್‌(Off-Season)ನಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಆಕರ್ಷಿಸುತ್ತವೆ. ನೈಸರ್ಗಿಕ ಪರಿಸ್ಥಿತಿಗಳು ಪ್ರಯಾಣದ ಮಾದರಿಯನ್ನು ಬಹಳವಾಗಿ ಪ್ರಭಾವಿಸುವ ಪ್ರದೇಶಗಳಲ್ಲಿ ಈ ರೀತಿಯ ಪ್ರವಾಸೋದ್ಯಮ ಸಾಮಾನ್ಯವಾಗಿದೆ.

ಋತುಮಾನ ಪ್ರವಾಸೋದ್ಯಮ – ವಿವರಣೆ
ಋತುಮಾನ ಪ್ರವಾಸೋದ್ಯಮವೆಂದರೆ ಬೇಸಿಗೆ, ಚಳಿಗಾಲ, ಮಳೆಗಾಲ ಅಥವಾ ಹಬ್ಬದ ಅವಧಿಗಳಂತಹ ನಿರ್ದಿಷ್ಟ ಋತುಗಳಲ್ಲಿ ನಿರ್ದಿಷ್ಟ ತಾಣಗಳಿಗೆ ಪ್ರವಾಸಿಗರು ತೆರಳುವ ಪ್ರಕ್ರಿಯೆ. ಉದಾಹರಣೆಗೆ, ಗೋವಾದ ಕಡಲತೀರಗಳು ಚಳಿಗಾಲದಲ್ಲಿ ತುಂಬಾ ಜನಪ್ರಿಯವಾಗುತ್ತವೆ. ಮನಾಲಿ ಮುಂತಾದ ಹಿಲ್‌ ಸ್ಟೇಷನ್‌ಗಳು ಬೇಸಿಗೆ ಮತ್ತು ಹಿಮಪಾತದ ಕಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದೇ ರೀತಿ, ಕೇರಳವು ಮಳೆಗಾಲದಲ್ಲಿ ಅದರ ಪ್ರಕೃತಿಯ ಸೌಂದರ್ಯದಿಂದ ಪ್ರಸಿದ್ಧವಾಗುತ್ತದೆ, ಮತ್ತು ಲಡಾಖ್‌ನಲ್ಲಿ ತೀವ್ರ ಚಳಿಗಾಲದ ಕಾರಣದಿಂದಾಗಿ ಹೆಚ್ಚಿನವರು ಬೇಸಿಗೆಯಲ್ಲಿ ಭೇಟಿ ನೀಡುತ್ತಾರೆ. ಮಲೆನಾಡಿನಲ್ಲಿ ಹೆಚ್ಚಾಗಿ ಮಳೆ ಬೀಳುವ ಸಂದರ್ಭದಲ್ಲಿ ಅತಿಹೆಚ್ಚಿನ ಪ್ರವಾಸಿಗರು ಜೋಗ ಜಲಪಾತವನ್ನು ವೀಕ್ಷಿಸಲು ತೆರಳುತ್ತಾರೆ.

ಋತುಮಾನ ಪ್ರವಾಸೋದ್ಯಮದ ಪ್ರಮುಖ ಲಕ್ಷಣವೆಂದರೆ ಹವಾಮಾನ ಮತ್ತು ವಾತಾವರಣದ ಮೇಲೆ ಇರುವ ಅವಲಂಬನೆ. ಪ್ರವಾಸಿಗರು ವರ್ಷದಲ್ಲಿನ ನಿರ್ದಿಷ್ಟ ಕಾಲದಲ್ಲಿ ಸುಖಕರ ಮತ್ತು ಅನುಕೂಲಕರ ವಾತಾವರಣವನ್ನು ನೀಡುವ ತಾಣಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಪೀಕ್‌ ಸೀಸನ್ ಮತ್ತು ಆಫ್‌ ಸೀಸನ್ ಎಂಬ ಕಲ್ಪನೆ ಉಂಟಾಗುತ್ತದೆ, ಅಲ್ಲಿ ಕೆಲವು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು, ಇತರ ತಿಂಗಳಲ್ಲಿ ಕಡಿಮೆ ಇರುತ್ತದೆ.

ಋತುಮಾನ ಪ್ರವಾಸೋದ್ಯಮವು ಆರ್ಥಿಕವಾಗಿ ಮಹತ್ವದ್ದಾಗಿದೆ. ಪೀಕ್‌ ಸೀಸನ್‌ನಲ್ಲಿ ಇದು ಹೆಚ್ಚಿನ ಆದಾಯವನ್ನು ಸೃಷ್ಟಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಹೋಟೆಲ್‌ಗಳು, ಸಾರಿಗೆ ಮತ್ತು ಮಾರುಕಟ್ಟೆಗಳಂತಹ ಸ್ಥಳೀಯ ವ್ಯಾಪಾರಗಳಿಗೆ ಉತ್ತೇಜನ ನೀಡುತ್ತದೆ. ಆದರೆ ಆಫ್‌ ಸೀಸನ್‌ನಲ್ಲಿ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ ಮತ್ತು ಉದ್ಯೋಗದ ಕೊರತೆ ಉಂಟಾಗಬಹುದು.

ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಪರಿಸರ ಮತ್ತು ಮೂಲಸೌಕರ್ಯಗಳ ಮೇಲೆ ಬೀರುವ ಪರಿಣಾಮ. ಪೀಕ್‌ ಸೀಸನ್‌ನಲ್ಲಿ ಜನಸಂದಣಿ ಹೆಚ್ಚುವುದರಿಂದ ಪರಿಸರ ಹಾನಿ, ಮಾಲಿನ್ಯ ಮತ್ತು ಸ್ಥಳೀಯ ಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗಬಹುದು. ಮತ್ತೊಂದೆಡೆ, ಆಫ್‌ ಸೀಸನ್‌ನಲ್ಲಿ ಸೌಲಭ್ಯಗಳ ಬಳಕೆ ಕಡಿಮೆಯಾಗುವುದರಿಂದ ಆರ್ಥಿಕ ಅಸಮರ್ಥತೆ ಉಂಟಾಗಬಹುದು.

ಉಪಸಂಹಾರ
ಋತುಮಾನ ಪ್ರವಾಸೋದ್ಯಮವು ನೈಸರ್ಗಿಕ ಮತ್ತು ಹವಾಮಾನ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುವ ಪ್ರವಾಸ ಮಾದರಿಯಾಗಿದೆ. ಇದು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರೂ, ಜನಸಂದಣಿ ಮತ್ತು ಆದಾಯದ ಅಸಮತೋಲನದಂತಹ ಸವಾಲುಗಳನ್ನು ಕೂಡ ಉಂಟುಮಾಡುತ್ತದೆ. ಆದ್ದರಿಂದ, ಸ್ಥಿರ ಅಭಿವೃದ್ಧಿ ಮತ್ತು ವರ್ಷಪೂರ್ತಿ ಸಮತೋಲನ ಸಾಧಿಸಲು ಸರಿಯಾದ ಯೋಜನೆ ಮತ್ತು ಆಫ್‌ ಸೀಸನ್ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಅಗತ್ಯವಾಗಿದೆ.