ಉತ್ಖನನದ ವರದಿ

ಉತ್ಖನನದ ವರದಿ

ಉತ್ಖನನವು ಪರಿಪೂರ್ಣವಾಗಿದೆ ಎಂದು ಗೊತ್ತಾಗಲು ಉತ್ಖನನಕಾರನು ನೀಡುವ ವರದಿಯೇ ಕಾರಣವಾಗುತ್ತದೆ. ಉತ್ಖನನದ ಸಂದರ್ಭದಲ್ಲಿ ಸಂಗ್ರಹ ಮಾಡಲಾದ ವಸ್ತುಗಳ ಹಾಗೂ ಪುರಾವೆಗಳನ್ನು ವಿಂಗಡಿಸಿ ಅವುಗಳನ್ನು ಪರಾಮರ್ಶಿಸಿ ಮತ್ತು ವಿಶ್ಲೇಷಣೆಗೆ ಒಳಪಡಿಸಿ ಸಮಗ್ರವಾದ ವರದಿಯನ್ನು ತಯಾರಿಸುವ ಹೊಣೆಗಾರಿಕೆ ಉತ್ಖನನಕಾರನ ಮೇಲಿದೆ. ಯಾವಾಗ ವರದಿಯು ಪ್ರಕಟವಾಗುತ್ತದೆಯೋ ಆಗ ಮಾತ್ರ ಉತ್ಖನನ ಕಾರ್ಯ ಪೂರ್ಣಗೊಂಡಿದೆ ಎಂದರ್ಥ. ಉತ್ಖನನದಲ್ಲಿ ಸಿಕ್ಕ ವಸ್ತುಗಳ ವರದಿಗಳು ಮುಂದಿನ ಪೀಳಿಗೆಗೆ ಸಂಶೋಧನಾ ಆಕರಗಳಾಗಬಹುದು. ಹಾಗಾಗಿ ಈ ವರದಿಯನ್ನು ಜನಸಾಮಾನ್ಯರಿಂದ ಹಿಡಿದು ವಿದ್ವಾಂಸರವರೆಗೆ ತಲುಪಿಸುವುದು ಪುರಾತತ್ವ ಶಾಸ್ತ್ರಜ್ಞರ ಕೆಲಸವಾಗಿದೆ. ಉತ್ಖನನದ ವರದಿಯನ್ನು ಪ್ರಮುಖವಾಗಿ 2 ಭಾಗಗಳನ್ನಾಗಿ ಗುರುತಿಸಲಾಗಿದೆ. ಅವುಗಳೆಂದರೆ.

1. ಉತ್ಖನನದ ಸಮಯದಲ್ಲಿ ಸಿಕ್ಕ ಐತಿಹಾಸಿಕ ಪುರಾವೆಗಳನ್ನು ಹೆಚ್ಚಿನ ವಿಮರ್ಶೆಗೆ ಒಳಪಡಿಸದೇ ಇದ್ದಂತೆ ವಿವರಿಸುವುದು. ಈ ವಿವರಗಳಿಗೆ ಪೂರಕವಾದ ಚಿತ್ರಗಳು, ಛಾಯಾಚಿತ್ರಗಳು ಹಾಗೂ ಸಾಮಗ್ರಿಗಳನ್ನು ಓದುಗರ ಮುಂದೆ ತರುವುದು.

2. ಉತ್ಖನನದಲ್ಲಿ ಸಿಕ್ಕ ಪುರಾವೆಗಳ ವಿಷಯಗಳನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿಮರ್ಶೆಗೆ ಒಳಪಡಿಸುವುದು. ಇದರಲ್ಲಿ ಉತ್ಖನನದ ವೇಳೆ ಅವುಗಳ ಅಧ್ಯಯನ, ವಿಮರ್ಶೆ ಹಾಗೂ ವಿಂಗಡಣೆಗೆ ಸಹಕರಿಸಿದ ಪುರಾತತ್ವ ಶಾಸ್ತ್ರಜ್ಞರ ವರದಿಗಳನ್ನು ಸೇರಿಸಬೇಕು.

3. ಉತ್ಖನನದಲ್ಲಿ ದೊರಕಿದ ಆಧಾರಗಳನ್ನು ಹೇಗಿದೆಯೋ ಹಾಗೆಯೇ ವಿಮರ್ಶೆ ಮಾಡಿ ವರದಿ ನೀಡುವುದು ಉತ್ಖನನಕಾರರ ನೈಜ ಕೆಲಸವಾಗಿದೆ.

 ಉತ್ಖನನದ ಮಧ್ಯಂತರ ವರದಿ:  ಸಾಮಾನ್ಯವಾಗಿ ಐತಿಹಾಸಿಕ ಪ್ರದೇಶಗಳ ಉತ್ಖನನ ಅತಿ ಹೆಚ್ಚು ಅಂದರೆ ಒಂದು ವರ್ಷದವರೆಗೆ ನಡೆಯಬಹುದು. ಆದರೆ ಕೆಲವು ಪ್ರದೇಶಗಳಲ್ಲಿ 10 ರಿಂದ 20 ವರ್ಷಗಳವರೆಗೂ ನಡೆದ ಉದಾಹರಣೆಗಳು ಇವೆ. ಅಂತಹ ಸಂದರ್ಭದಲ್ಲಿ ಪ್ರತಿ ವರ್ಷದ ಉತ್ಖನನ ಕಾರ್ಯ ಮುಕ್ತಾಯಗೊಂಡ ನಂತರ ಅದರ ಮಧ್ಯಂತರ ವರದಿಯನ್ನು ಪ್ರಕಟಿಸಲಾಗುವುದು. ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಹೊರ ತರುವ Indian Archaeology – A Review  ಎಂಬ ವಾರ್ಷಿಕ ಪತ್ರಿಕೆಯಲ್ಲಿ ಈ ರೀತಿಯ ವರದಿಯನ್ನು ಪ್ರಕಟಿಸುತ್ತದೆ. ಹಾಗೆಯೇ ಕೆಲವು ವಿಶ್ವವಿದ್ಯಾಲಯಗಳು ಸಹ ಸಂಶೋಧನಾ ನಿಯತಕಾಲಿಕೆಗಳನ್ನು ಪ್ರಕಟಿಸಿದಾಗ ಅದರಲ್ಲಿ ಉತ್ಖನನದ ಮಧ್ಯಂತರ ವರದಿಯನ್ನು ಕಾಣಬಹುದಾಗಿದೆ. ಹಿಂದೆ ಮುದ್ರಣ ವೆಚ್ಚದ ಕಾರಣದಿಂದ ವರದಿ ಪ್ರಕಟಣೆಯಾಗುವುದು ತಡವಾಗುತ್ತಿತ್ತು. ಆದರೆ ಇದು ಗಣಕಯಂತ್ರದ ಯುಗ. ವರದಿಯನ್ನು ಬೇಗ ಬೇಗನೆ ಪ್ರಕಟಿಸಿ ಜನತೆಯ ಮುಂದೆ ಇಡುವ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡುತ್ತದೆ. ಹಿಂದೆ 15-20 ವರ್ಷಗಳಾದರೂ ವರದಿಗಳು ಪ್ರಕಟಗೊಳ್ಳುತ್ತಿರಲಿಲ್ಲ. ಇದರಿಂದ ಪುರಾತತ್ವ ವಿಷಯದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ನಿರಾಶೆಯಾಗುತ್ತಿದ್ದುದು ಸತ್ಯ. ಇದು ಅಲ್ಲದೆ ಪುರಾತತ್ವ ಶಾಸ್ತ್ರದ ಬೆಳವಣಿಗೆ ಸಹ ಆಮೆಗತಿಯಲ್ಲಿ ಸಾಗುತ್ತಿತ್ತು. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಮಧ್ಯಂತರ ವರದಿಗಳನ್ನು ನೀಡಲಾಗುತ್ತಿತ್ತು. 

 ಉತ್ಖನನ ವರದಿಯು ಎಷ್ಟು ಒಳ್ಳೆಯ ಗುಣಗಳನ್ನು ಹೊಂದಿದೆಯೋ ಅಷ್ಟೇ ಕುಂದು ಕೊರತೆಗಳನ್ನು ಸಹ ಹೊಂದಿದೆ. ಉದಾ: ಉತ್ಖನನದ ಸಂದರ್ಭದಲ್ಲಿ ದೊರಕಿದ ವಸ್ತುಗಳ ಕುರಿತು ಸಾರಾಂಶ ರೂಪದಲ್ಲಿ ಹೇಳುವುದರಿಂದ ಕೆಲವು ಪುರಾವೆಗಳು ಕೈತಪ್ಪಿ ಹೋಗಬಹುದು. ಆಗ ಕೆಲವು ಕಡೆ ಬರೆದ ಒಂದೇ ಸಂಗತಿಯು ನಿಜವೆಂದು ನಂಬಿಕೆಗೆ ಅರ್ಹವಾಗುತ್ತದೆ. ಹಾಗಾಗಿ ಸಂಶೋಧಕರು, ವಿದ್ಯಾರ್ಥಿಗಳು, ಶಿಕ್ಷಕರು, ಇತಿಹಾಸಕಾರರು ಹಾಗೂ ಪುರಾತತ್ವ ಶಾಸ್ತ್ರಜ್ಞರು ಇವುಗಳ ವಸ್ತುಗಳೇ ನಿಜವಾದ ಆಧಾರವಾಗಿವೆ ಎಂದು ನಂಬಿ ಅವುಗಳನ್ನು ಅಧ್ಯಯನ ಮಾಡುವುದು ಸೂಕ್ತವಲ್ಲ.

ಉತ್ಖನನ ನೀಡಿದ ಮಧ್ಯಂತರ ವರದಿಯಲ್ಲಿ ವಿವರವಾದ ನಕ್ಷೆಗಳನ್ನು ನೀಡದಿದ್ದರೆ ವರದಿಯಲ್ಲಿನ ವಿವರಗಳು ನಿಖರವಾಗಿರುವುದಿಲ್ಲ. ಈ ಕಾರಣದಿಂದ ಮಧ್ಯಂತರ ವರದಿಯು ಅತ್ಯಂತ ನಿಖರ, ನಿಷ್ಪಕ್ಷಪಾತ ಹಾಗೂ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿರಬೇಕು. ವಿವರಗಳೊಂದಿಗೆ ಚಿತ್ರಗಳು, ಛಾಯಾಗ್ರಹಣ, ಲಂಬಛೇದ ಚಿತ್ರಗಳು, ನಕ್ಷೆಗಳು ಮೊದಲಾದವುಗಳನ್ನು ವರದಿಯಲ್ಲಿ ಸೇರಿಸುವುದು ಸೂಕ್ತವಾದುದು. 

ಉತ್ಖನನದ ವಿವರವಾದ ವರದಿ: 

ಉತ್ಖನನದ ನಂತರ ಪ್ರಕಟವಾಗುವ ವರದಿಗಳು ಸಾಮಾನ್ಯವಾಗಿ ಸ್ವತಂತ್ರವಾಗಿ ಹೊತ್ತಿಗೆ ರೂಪದಲ್ಲಿ ಪ್ರಕಟವಾಗುತ್ತವೆ. ಉದಾ:  ಮಾರ್ಶಲ್‌ರವರು ʻʻMohenjodaro and the Indus civilizationʼʼ ಎಂಬ ಸ್ವತಂತ್ರವಾಗಿ ಮೂರು ಪ್ರಕಟಣೆಗಳನ್ನು ಹೊರ ತಂದಿದ್ದಾರೆ.

ಟಿ ನರಸೀಪುರ, ಹೆಮ್ಮಿಗೆ ಹಾಗೂ ಚಂದ್ರವಳ್ಳಿ ಮುಂತಾದ ಸ್ಥಳಗಳ ಉತ್ಖನನದ ವರದಿಯು ಸ್ವತಂತ್ರ ಹೊತ್ತಿಗೆಯ ರೂಪದಲ್ಲಿ ಹೊರಬಂದಿವೆ. ಹಾಗೆಯೇ ಮಾರ್ಟಿಮಾರ್‌ ವೀಲರನ ಬ್ರಹ್ಮಗಿರಿ ಉತ್ಖನನದ ವರದಿ, ಬಿ.ಕೆ. ಥಾಪರ್ ಬರೆದ ಮಸ್ಕಿ ನೆಲೆಯ ಕುರಿತು ವರದಿ ಮೊದಲಾದವುಗಳು ಪ್ರಕಟಗೊಂಡಿವೆ. ಉತ್ಖನನದ ಪ್ರಮುಖವಾದ ವರದಿಯು ಈ ಕೆಳಗಿನಂತಿವೆ.

1. ತಲೆಬರಹ: ಉತ್ಖನನದ ವರದಿಯು ಸಾಮಾನ್ಯವಾಗಿ ತಲೆಬರಹ (ಶಿರೋನಾಮೆ)ವನ್ನು ಹೊಂದಿದ್ದು ಅದು ಆ ಸ್ಥಳದ ಹೆಸರು ಹಾಗೂ ಉತ್ಖನನ ನಡೆದ ವರ್ಷವನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಆ ಸ್ಥಳದ ಸಾಂಸ್ಕೃತಿಕ ಸ್ವರೂಪ ಅಥವಾ ಕಾಲಘಟ್ಟವನ್ನು ತಲೆಬರಹದಲ್ಲಿ ಸೇರಿಸಲಾಗುತ್ತದೆ. ಉದಾಹರಣೆಗೆ Arikamedu – an Indo Roman Site (1945) ಇಲ್ಲಿ ಅರಿಕಮೇಡು ಎಂಬ ಸ್ಥಳದ ಹೆಸರಿನ ಜೊತೆಗೆ ಅದು ಇಂಡೋ-ರೋಮನ್ ಕಾಲಕ್ಕೆ ಸೇರಿದು ಎಂಬ ಮಾಹಿತಿ ಇದೆ. ಮಸ್ಕಿ ಉತ್ಖನನದ ವರದಿಗೆ “Maski 1954 – A Chalcolithic Site of the Southern Deccan” ಎಂಬ ತಲೆಬರಹವನ್ನು ನೀಡಲಾಗಿದೆ. ಇದು ಆ ಪ್ರದೇಶದ ಚಾಲ್ಕೊಲಿಥಿಕ್ ಹಿನ್ನೆಲೆಯನ್ನು ತೋರಿಸುತ್ತದೆ. ಒಟ್ಟಿನಲ್ಲಿ ಇಂದು ವೈಜ್ಞಾನಿಕ ವರದಿಗೆ ತಲೆಬರಹವು ಅತ್ಯಂತ ಅವಶ್ಯವಾದುದು ಮತ್ತು ಅದು ಓದುಗರಿಗೆ ಮತ್ತು ಸಂಶೋಧಕರಿಗೆ ಆ ಸಂಶೋಧನಾ ವ್ಯಾಪ್ತಿ ಹಾಗೂ ಕಾಲದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುತ್ತದೆ.

2. ಸಾರಾಂಶ: ಇದು ಉತ್ಖನನ ವರದಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಉತ್ಖನನದ ಪ್ರಕ್ರಿಯೆ ಮುಕ್ತಾಯವಾದ ನಂತರ ಆ ಸ್ಥಳದ ಉತ್ಖನನದಿಂದ ಲಭ್ಯವಾದ ಪ್ರಮುಖ ವಿಷಯಗಳನ್ನು ಒಳಗೊಂಡ ಸಾರಾಂಶವನ್ನು ನೀಡಲಾಗುತ್ತದೆ. ಈ ಸಾರಾಂಶ ಕೇವಲ ಒಂದು ಅಥವಾ ಎರಡು ಪ್ಯಾರಾಗಳಷ್ಟು ಇರುತ್ತದೆ. ಓದುಗರು ಕೇವಲ ಸಾರಾಂಶವನ್ನು ತಿಳಿದುಕೊಳ್ಳುವುದಲ್ಲ. ಬದಲಿಗೆ ಉತ್ಖನನ ಕಾರ್ಯದ ಪೂರ್ಣ ವಿವರಗಳನ್ನು ಅಧ್ಯಯನ ಮಾಡುವುದು ಮುಖ್ಯವಾದುದು.

ಸಾರಾಂಶದಲ್ಲಿ ಒಂದು ಭಾಗದಲ್ಲಿ ಉತ್ಖನನವನ್ನು ಕೈಗೊಂಡ ಉದ್ದೇಶವನ್ನು ವಿವರಿಸುವುದರ ಜೊತೆಗೆ ಈ ಹಿಂದೆ ಏನಾದರೂ ಆ ಸ್ಥಳದ ಬಗ್ಗೆ ಬೇರೆ ಯಾರಾದರೂ ಸಂಶೋಧನೆಯನ್ನು ಮಾಡಿದ್ದರೆ ಅದರ ಕುರಿತು ಸಾರಾಂಶ ರೂಪದಲ್ಲಿ ವಿವರಿಸಲಾಗುತ್ತದೆ. ಈ ಸಾರಾಂಶದಲ್ಲಿ ಉತ್ಖನನಕ್ಕೆ ಕಾರಣಗಳೇನು? ಅದಕ್ಕೆ ಪ್ರೇರಣೆಯಾದ ಅಂಶಗಳು ಯಾವುವು? ಎಂಬುದು ಒತ್ತಿ ಹೇಳಲಾಗುತ್ತದೆ.

3. ಪರಿಚಯ: ಇದು ಪುರಾತತ್ವ ಅಥವಾ ಇತಿಹಾಸಕ್ಕೆ ಸಂಬಂಧಿಸಿದ ವರದಿಯ ಒಂದು ಭಾಗದಂತೆ ಕಾಣುತ್ತದೆ. ಪರಿಚಯದಲ್ಲಿ ಉತ್ಖನನ ಅಥವಾ ಅಧ್ಯಯನವನ್ನು ಕೈಗೊಂಡ ಮೂಲ ಉದ್ದೇಶವನ್ನು ವಿವರಿಸಲಾಗುತ್ತದೆ. ಜೊತೆಗೆ ಉತ್ಖನನ ಕುರಿತು ಸವಿವರಗಳನ್ನು ಒದಗಿಸಲಾಗುತ್ತದೆ. ನೆಲೆಯು ಇರುವ ಸರಿಯಾದ ಸ್ಥಳ. ಅದನ್ನು ತಲುಪುವ ದಾರಿ, ನೆಲೆಯ ಸುತ್ತಲಿನ ಭೌಗೋಳಿಕ ಲಕ್ಷಣ ಮುಂತಾದವುಗಳನ್ನು ವಿವರಿಸುವುದರ ಜೊತೆಗೆ ಅದಕ್ಕೆ ಪೂರಕವಾಗುವ ನಕ್ಷೆಗಳು, ತಲನಕ್ಷೆಗಳು. ಮಟ್ಟಗಳನ್ನು ಸೂಚಿಸುವ ನಕ್ಷೆಗಳು, ಛಾಯಾಚಿತ್ರಗಳನ್ನು ಸೇರಿಸಲಾಗುತ್ತದೆ. ಹವಾಮಾನ, ಮಳೆಯ ಪ್ರಮಾಣ, ಸಸ್ಯ ಹಾಗೂ ಪ್ರಾಣಿ ಸಂಪತ್ತು, ಮಣ್ಣಿನ ಸ್ವರೂಪ, ಸ್ಥಳದ ಇಂದಿನ ಪರಿಸ್ಥಿತಿ ಮೊದಲಾದ ವಿವರಗಳನ್ನು ನೀಡಲಾಗುತ್ತದೆ. ಜೊತೆಗೆ ಉತ್ಖನನ ಕಾರ್ಯದಲ್ಲಿ ಸಹಕರಿಸಿದ ಸಿಬ್ಬಂದಿ, ಉತ್ಖನನಕ್ಕೆ ಪರವಾನಗಿ ನೀಡಿದವರು, ಧನ ಸಹಾಯ ಮಾಡಿದ ಸಂಸ್ಥೆ ಮೊದಲಾದವುಗಳನ್ನು ಸ್ಮರಿಸಿದ ಬಗ್ಗೆ ಉಲ್ಲೇಖಿಸಲಾಗುತ್ತದೆ. ಉತ್ಖನನದಲ್ಲಿ ಸಿಕ್ಕ ವಸ್ತುಗಳನ್ನು ಯಾವ ವಸ್ತು ಸಂಗ್ರಹಾಲಯದಲ್ಲಿ ಶೇಖರಿಸಿಡಲಾಗಿದೆ, ಉತ್ಖನನದ ದಾಖಲೆಗಳು ಎಲ್ಲಿವೆ? ಎಂಬುದನ್ನು ಸೂಚಿಸಲಾಗುತ್ತದೆ.

4. ಉತ್ಖನನದಲ್ಲಿ ಬಳಸಲಾದ ವಿನ್ಯಾಸ ವ್ಯವಸ್ಥೆ: ಉತ್ಖನನ ಮಾಡುವ ಮೊದಲು ಆ ಪ್ರದೇಶವನ್ನು ವಿಂಗಡಿಸಿದ ಬಗೆಯನ್ನು ಇದು ವಿವರಿಸುತ್ತದೆ. ಅಂದರೆ ಯಾವ ಭಾಗದಲ್ಲಿ ಉತ್ಖನನ ಮಾಡಬೇಕು, ಯಾವ ಗುಂಡಿಗಳನ್ನು ಎಲ್ಲಿ ತೋಡಬೇಕು, ಅವುಗಳ ನಿಖರವಾದ ಅಳತೆ ಎಷ್ಟು ಮತ್ತು ಸ್ಥಳವನ್ನು ಗುರುತಿಸುವುದು ಹೇಗೆ ಎಂಬುದರ ಕುರಿತು ವಿವರಗಳು ಇರುತ್ತವೆ. ಇದು ಅಲ್ಲದೆ ಉತ್ಖನನವು ಎಷ್ಟು ವಿಸ್ತಾರವಾಗಿರಬೇಕು ಹಾಗೂ ಮಣ್ಣಿನ ಯಾವ ಸ್ತರವನ್ನು ತೋಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಉತ್ಖನನ ಎಂದರೆ ಕೇವಲ ನೆಲವನ್ನು ಅಗೆಯುವುದಲ್ಲ, ಬದಲಾಗಿ ವ್ಯವಸ್ಥಿತವಾಗಿ ಹಂತ ಹಂತಗಳಲ್ಲಿ ಭೂಮಿಯ ಪದರುಗಳನ್ನು ಪರೀಕ್ಷಿಸುವುದಾಗಿದೆ.

5.ಸ್ತರ ವಿಂಗಡನೆಯ ವಿವರ ಮತ್ತು ಸಂಸ್ಕೃತಿಯ ಕಾಲಾನುಪೂರ್ವ: ಈ ವಿಭಾಗವು ಭೂಮಿಯ ಪದರುಗಳಲ್ಲಿ ಕಂಡುಬರುವ ಐತಿಹಾಸಿಕ ಕುರುಹುಗಳನ್ನು ಆಧರಿಸಿ ಪ್ರಾಚೀನ ಸಂಸ್ಕೃತಿಯನ್ನು ಹೇಗೆ ಗುರುತಿಸಲಾಗುವುದು ಎಂಬುದನ್ನು ಇದು ವಿವರಿಸುತ್ತದೆ. ನೈಸರ್ಗಿಕ ಮಣ್ಣಿನ ಮಟ್ಟದಿಂದ ಮೇಲ್ಮೈವರೆಗೆ ಕಂಡುಬರುವ ವಿವಿಧ ಪದರುಗಳ ಬಣ್ಣ, ಘಟಕ ಮತ್ತು ಅವುಗಳ ನಡುವಿನ ಸಂಬಂಧವನ್ನು ಅನುಕ್ರಮವಾಗಿ ಈ ಭಾಗದಲ್ಲಿ ವಿವರಿಸಲಾಗುವುದು. ಇದರೊಂದಿಗೆ ನೈಸರ್ಗಿಕ ಕ್ರಿಯೆಯಲ್ಲಿ ಉಂಟಾಗುವ ಏರಿಳಿತಗಳು ಅಥವಾ ಬದಲಾವಣೆಗಳಿಂದಾಗಿ ಈ ಸ್ತರದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಸ್ತರ ವಿಂಗಡಣೆಯ ವರದಿಯಲ್ಲಿಯೇ ಗುರುತಿಸಲಾಗುವುದು. ಉತ್ಖನನದ ಸಂದರ್ಭದಲ್ಲಿ ಸಿಕ್ಕ ಸಾಂಸ್ಕೃತಿಕ ಅವಶೇಷಗಳನ್ನು ಆಧರಿಸಿ ಆಯಾ ಕಾಲದ ಸಾಂಸ್ಕೃತಿಕ ಹಂತಗಳನ್ನು ನಿರ್ಧರಿಸಲಾಗುವುದು. ಮಡಿಕೆ ಚೂರುಗಳು, ನಾಣ್ಯಗಳು ಹಾಗೂ ಇತರೇ ಪ್ರಾಚೀನ ಅವಶೇಷಗಳನ್ನು ವಿಶ್ಲೇಷಿಸುವ ಮೂಲಕ ಪ್ರಧಾನ ಸಂಸ್ಕೃತಿ ಹಾಗೂ ಉಪಸಂಸ್ಕೃತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ದಾಖಲಾತಿಗಾಗಿ ಸ್ತರವಿಂಗಡನೆಯ ವಿವರಗಳಿಗೆ ಅನುಸಾರವಾಗಿ ಛಾಯಾಚಿತ್ರಗಳು ಹಾಗೂ ರೇಖಾಚಿತ್ರಗಳನ್ನು ಬಳಸಲಾಗುತ್ತದೆ. ಇದು ಸಂಸ್ಕೃತಿಗಳ ಕಾಲಾನುಕ್ರಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸಂಸ್ಕೃತಿಯಲ್ಲಿ ಬಳಕೆ ಮಾಡಲಾಗುತ್ತಿದ್ದ ಉಪಕರಣಗಳ ಮಾದರಿಗಳು, ಮಡಿಕೆಗಳ ಲಕ್ಷಣಗಳು, ಆರ್ಥಿಕ ಸ್ಥಿತಿ, ಆಭರಣಗಳು ಹಾಗೂ ಅಂತ್ಯಕ್ರಿಯೆ ಪದ್ಧತಿಗಳಂತಹ ವಿವಿಧ ಮುಖಗಳನ್ನು ಪರಿಚಯಿಸಲಾಗುತ್ತದೆ.

 6. ಕಾಲಮಾನ: ಉತ್ಖನನದ ಸ್ಥಳದಲ್ಲಿ ಕಂಡುಬರುವ ವಿವಿಧ ಸಂಸ್ಕೃತಿಗಳ ಕಾಲಾನುಕ್ರಮವನ್ನು ನಿರ್ಧರಿಸುವುದು ಸಂಶೋಧನೆಯ ಪ್ರಮುಖ ಗುರಿಯಾಗಿದೆ. ಸ್ತರ ವಿಂಗಡನೆಯ ವಿವರಗಳಿಂದ ಆಯಾ ಕಾಲದ ಸಂಸ್ಕೃತಿಗಳ ಪರಿಸ್ಥಿತಿಯನ್ನು ಅರಿಯಬಹುದು. ಅಂದರೆ ಯಾವ ಸಂಸ್ಕೃತಿಯು ಮೊದಲು ಆರಂಭವಾಯಿತು ಹಾಗೂ ಯಾವುದು ನಂತರದಲ್ಲಿ ಬೆಳಕಿಗೆ ಬಂದಿತು ಎಂಬುದನ್ನು ನಿಖರವಾಗಿ ಗುರುತಿಸಲು ಈ ಕಾಲಮಾನವು ಸಹಾಯಕವಾಗುತ್ತದೆ. ಯಾವುದೇ ಸಂಸ್ಕೃತಿಯ ಕಾಲವನ್ನು ನಿರ್ಧರಿಸಲು ಅಲ್ಲಿ ದೊರಕಿದ ಪ್ರಾಚೀನ ವಸ್ತುಗಳು ನಿಖರವಾಗಿ ಮಾಹಿತಿಯನ್ನು ನೀಡುತ್ತವೆ. ಇತಿಹಾಸ ಪೂರ್ವಕಾಲದ್ದೋ ಅಥವಾ ಇತಿಹಾಸ ಕಾಲದ್ದೋ ಎಂಬ ಅಂಶಗಳು ಅಲ್ಲಿ ದೊರಕಿದ ನಾಣ್ಯಗಳ ಆಧಾರದ ಮೇಲೆ ತೀರ್ಮಾನ ಮಾಡಬಹುದಾಗಿದೆ.

 7. ಕಟ್ಟಡದ ರಚನೆಗಳು ಹಾಗೂ ಮತ್ತಿತರ ಆಕೃತಿಗಳು: ಭೂಮಿಯ ಉತ್ಖನನದ ಸಂದರ್ಭಗಳಲ್ಲಿ ದೊರಕಿದ ಕಟ್ಟಡಗಳು ಮತ್ತು ಅವುಗಳ ತಳನಕ್ಷೆಗಳು, ಛೇದಚಿತ್ರಗಳು ಹಾಗೂ ಆ ಕಟ್ಟಡವು ಹೇಗಿದ್ದಿರಬಹುದೆಂಬ ಕಾಲ್ಪನಿಕ ಚಿತ್ರಗಳ ಮೂಲಕ ವಿವರಿಸಲಾಗುತ್ತದೆ. ಈ ರಚನೆಗಳು ಯಾವ ಲಕ್ಷಣಗಳನ್ನು ಹೊಂದಿವೆ. ಅವುಗಳ ಗುರಿಗಳೇನು? ಅವು ಯಾವ ಸ್ಥಳಕ್ಕೆ ಸೇರಿವೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಉತ್ಖನನದ ಅಧ್ಯಯನದ ಸಮಯದಲ್ಲಿ ಮುಖ್ಯವಾಗಿ ಕಟ್ಟಡದ ಗಾತ್ರ ಹಾಗೂ ಅಳತೆ, ನಿರ್ಮಾಣಕ್ಕೆ ಬಳಸಲಾದ ಪದಾರ್ಥಗಳು ಇಟ್ಟಿಗೆ, ಕಲ್ಲು ಇತ್ಯಾದಿ ನಿರ್ಮಾಣ ಹಾಗೂ ಶೈಲಿ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ. ಅಗೆಯುವ ಸ್ಥಳದಲ್ಲಿ ದೊರಕಿದ ಇತರ ವಾಸ್ತು ಲಕ್ಷಣಗಳೊಂದಿಗೆ ಇವುಗಳನ್ನು ಹೋಲಿಸಿ ಆ ಕಾಲದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

 8. ಮಡಿಕೆಗಳು: ಪುರಾತತ್ವ ಶಾಸ್ತ್ರದಲ್ಲಿ ಮಡಿಕೆಗಳ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಉತ್ಖನನದ ಸಂದರ್ಭದಲ್ಲಿ ದೊರಕುವ ಮಡಿಕೆಗಳ ಆಧಾರದ ಮೇಲೆ ಆ ಕಾಲದ ಸಂಸ್ಕೃತಿಯನ್ನು ಗುರುತಿಸಬಹುದು. ಸಿಕ್ಕ ಮಡಿಕೆಗಳ ಆಕಾರ, ಬಣ್ಣ, ತಯಾರಿಸಿದ ವಿಧಾನ ಮತ್ತು ಅವುಗಳ ಮೇಲಿರುವ ವಿನ್ಯಾಸದ ಆಧಾರದ ಮೇಲೆ ವರ್ಗೀಕರಣ ಮಾಡಿ ಅಧ್ಯಯನ ಮಾಡಲಾಗುತ್ತದೆ. ಹಾಗೆಯೇ ಒಂದು ಗೊತ್ತಾದ ಪ್ರದೇಶದಲ್ಲಿ ದೊರೆಯುವ ಮಡಿಕೆಗಳ ಮಾದರಿಯು ಮತ್ತೊಂದು ಕಡೆಯಲ್ಲಿ ಕಂಡು ಬಂದರೆ ಆ ಎರಡು ಪ್ರದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಅಥವಾ ಜನರ ವಲಸೆಯನ್ನು ಹೋಲಿಕೆ ಮಾಡಿ ನೋಡಬಹುದು. ಉತ್ಖನನದಲ್ಲಿ ಸಿಕ್ಕ ಮಡಿಕೆಗಳ ಗಾತ್ರ, ಅವುಗಳ ಮೇಲೆ ಇರಬಹುದಾದ ಚಿತ್ರಗಳು ಮತ್ತು ಗುರುತಿನ ಆಧಾರದ ಮೇಲೆ ವಿವರಗಳನ್ನು ಬರೆದಿಡಬೇಕು.

 9. ಇತರ ಪ್ರಾಚ್ಯವಸ್ತುಗಳು: ಪ್ರಾಚ್ಯವಸ್ತುಗಳನ್ನು ಅವುಗಳಿಗೆ ಬಳಕೆ ಮಾಡುವ ಸಾಮಗ್ರಿಗಳು, ಆಕೃತಿ ಹಾಗೂ ಸ್ವರೂಪವನ್ನು ಆಧರಿಸಿ ವರ್ಗೀಕರಣ ಮಾಡಲಾಗಿದೆ. ಉದಾ: ಬಳೆಗಳು, ನಾಣ್ಯಗಳು, ಮಣಿಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು ಮುಂತಾದವುಗಳು.

        * ಮಣಿಗಳು: ಮಣಿಗಳನ್ನು ಗಾಜಿನ ಮಣಿಗಳು, ಚಿನ್ನದ ಮಣಿಗಳು, ಮಣ್ಣಿನ ಮಣಿಗಳು ಹಾಗೂ ಶಿಲೆಯ ಮಣಿಗಳಾಗಿ ವರ್ಗೀಕರಣ ಮಾಡಲಾಗಿದೆ.

        * ಉದ್ದನೆಯ ಮಣಿಗಳು, ಶಂಖಾಕಾರದ ಮಣಿಗಳು, ದ್ವಿಶಂಖಾಕಾರದ ಮಣಿಗಳು, ಚಪ್ಪಟೆಯಕಾರದ ಮಣಿಗಳು ಹಾಗೂ ವೃತ್ತಾಕಾರದ ಮಣಿಗಳು.

        * ಲೋಹದ ವಸ್ತುಗಳು:  ಚಿನ್ನದ ವಸ್ತುಗಳು, ಬೆಳ್ಳಿಯ ವಸ್ತುಗಳು, ತಾಮ್ರದ ವಸ್ತುಗಳು, ಕಂಚಿನ ವಸ್ತುಗಳು, ಸೀಸದ ವಸ್ತುಗಳು, ಕಬ್ಬಿಣದ ವಸ್ತುಗಳು ಇತ್ಯಾದಿ.

         *  ಮಣ್ಣಿನ ವಸ್ತುಗಳು:  ಮುದ್ರೆಗಳು, ಗೊಂಬೆಗಳು, ಮಾನವನಾಕೃತಿಗಳು, ಪ್ರಾಣಿಗಳು ಮೊದಲಾದ ವಸ್ತುಗಳ ಶಾಸ್ತ್ರೀಯ ಅಧ್ಯಯನ ಮಾಡುವುದರಿಂದ ಅವುಗಳ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಗುಣಮಟ್ಟವನ್ನು ಅರಿಯಬಹುದು.

ಕೊಡಲಿ, ಚಾಕು, ಹಾರೆ ಮತ್ತು ಕುಡುಗೋಲು ಅವರ ದೈನಂದಿನ ಜೀವನ ಶೈಲಿಯನ್ನು ಪರಿಚಯಿಸುತ್ತವೆ. ಖಡ್ಗ, ಬಾಣ, ಬಿಲ್ಲು ಈ ಮೊದಲಾದವುಗಳು ಯುದ್ಧದ ಸೂಚನೆಯನ್ನು ನೀಡುತ್ತವೆ.

10. ವಿಶೇಷ ತಾಂತ್ರಿಕ ವರದಿಗಳು: ಉತ್ಖನನದ ನಂತರ ಸ್ಥಳದಲ್ಲಿ ದೊರಕಿದ ವಿವಿಧ ವಸ್ತು, ವಿಷಯಗಳ ವಿಶೇಷ ಅಧ್ಯಯನ ಮಾಡಲೆಂದು ನಿರ್ದಿಷ್ಟ ಪಡಿಸಿದ ವಿವಿಧ ತಜ್ಞರು ನೀಡಿದ ವಿಶೇಷ ತಾಂತ್ರಿಕ ವರದಿಯನ್ನು ಉತ್ಖನನದ ವರದಿಯಲ್ಲಿ ಪ್ರಕಟಿಸಲಾಗುತ್ತದೆ. ಉದಾ: ಮಾನವನ ಅವಶೇಷಗಳಾದ ತಲೆ ಬುರುಡೆ, ಅಸ್ತಿಪಂಜರ ಹಾಗೂ ಎಲುಬುಗಳ ಕುರಿತು ಶಾರೀರಿಕ ಮಾನವಶಾಸ್ತ್ರಜ್ಞರು ವರದಿ ನೀಡಿದರೆ, ಪ್ರಾಣಿಗಳ ಅವಶೇಷಗಳ ಕುರಿತು ಪ್ರಾಣಿಶಾಸ್ತ್ರಜ್ಞರು ವರದಿಯನ್ನು ನೀಡುತ್ತಾರೆ. ಹಾಗೆಯೇ ಸಸ್ಯಗಳ ಅವಶೇಷಗಳ ಬಗ್ಗೆ ಸಸ್ಯಶಾಸ್ತ್ರಜ್ಞರು ವರದಿಯನ್ನು ಸಿದ್ಧಪಡಿಸುತ್ತಾರೆ. ಲೋಹಶಾಸ್ತ್ರಜ್ಞರು ಲೋಹಗಳ ಅವಶೇಷಗಳ ಕುರಿತು ಮತ್ತು ನಾಣ್ಯಶಾಸ್ತ್ರಜ್ಞರು ನಾಣ್ಯಗಳ ಬಗ್ಗೆ ವರದಿ ನೀಡುತ್ತಾರೆ. ಇಂಗಾಲ 14 ಮತ್ತು ಥರ್ಮೋಲುಮಿನೆಸೆನ್ಸ್‌ ನಂತಹ ವೈಜ್ಞಾನಿಕ ವಿಧಾನಗಳನ್ನು ಬಳಸಿ ವಸ್ತುಗಳ ಕಾಲವನ್ನು ನಿರ್ಧರಿಸುವ ವರದಿ ಇದರಲ್ಲಿರುತ್ತದೆ. ಈ ವರದಿಯಲ್ಲಿ ವಿಷಯಗಳನ್ನು ನಿಖರವಾಗಿ ಹೇಳಲು ನಕ್ಷೆಗಳು, ಕೋಷ್ಟಕಗಳು, ರೇಖಾಚಿತ್ರಗಳು ಹಾಗೂ ಛಾಯಾಚಿತ್ರಗಳನ್ನು ಬಳಸಲಾಗುತ್ತದೆ. ಹೀಗಾಗಿ ಆಯಾ ಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿದ ತಜ್ಞರಿಗೆ, ಸಂಶೋಧಕರಿಗೆ ವರದಿಗಳಲ್ಲಿ ನೀಡಿರುವ ವಿಷಯಗಳನ್ನು ಸರಿಯಾಗಿ ಪರಾಮರ್ಶೆ ಮಾಡಲು ಸಾಧ್ಯವಾಗುತ್ತದೆ.

 11.  ಪರಾಮರ್ಶೆ ಹಾಗೂ ಉಪಸಂಹಾರ: ಈ ಮೇಲಿನ ಉಲ್ಲೇಖಿತ ವರದಿಯ ವಿವಿಧ ಭಾಗಗಳಲ್ಲಿ ದೊರೆತ ಪುರಾವೆಗಳ ಹಾಗೂ ವಿವರಗಳ ಹೆಚ್ಚಿನ ಪರಾಮರ್ಶೆ ಮಾಡದೆ ಅದನ್ನು ಹಾಗೆಯೇ ಮಂಡಿಸಲಾಗುತ್ತದೆ. ವರದಿಯನ್ನು ಮಾಡುವಾಗ ಪರಾಮರ್ಶೆ ಹಾಗೂ ಉಪಸಂಹಾರಕ್ಕಾಗಿ ಬೇರೆಯದೇ ಭಾಗವನ್ನು ಕಲ್ಪಿಸಿಕೊಡಲಾಗುತ್ತದೆ. ಈ ಭಾಗದಲ್ಲಿ ಉತ್ಖನನಕಾರನು ತಾನು ಉತ್ಖನನದಲ್ಲಿ ಕಂಡುಕೊಂಡಿದ್ದ ಎಲ್ಲಾ ಪುರಾವೆಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿ ಪರೀಕ್ಷಿಸಿ ತನ್ನ ಅನಿಸಿಕೆಯನ್ನು ಬರೆಯುತ್ತಾನೆ. ಈ ಹಂತದಲ್ಲಿ ಉತ್ಖನನ ಸ್ಥಳದಲ್ಲಿ ದೊರಕಿದ ಪುರಾವೆಗಳನ್ನು ಬೇರೆ ಸಮಕಾಲೀನ ಅಥವಾ ಹತ್ತಿರದ ಸ್ಥಳದಲ್ಲಿ ನಡೆದ ಉತ್ಖನನದ ಮಾಹಿತಿಯೊಂದಿಗೆ ಹೋಲಿಸಿ ನೋಡುತ್ತಾನೆ. ನಂತರ ನಿರ್ದಿಷ್ಟ ಸ್ಥಳದಲ್ಲಿದ್ದ ಸಾಂಸ್ಕೃತಿಕ ವಿಸ್ತಾರ, ಜನರ ಜೀವನ ಶೈಲಿ ಹಾಗೂ ಇತರ ಸಂಸ್ಕೃತಿಗಳೊಂದಿಗೆ ಅವುಗಳ ಸಂಪರ್ಕ ಸಂಬಂಧವನ್ನು ಸೂಚಿಸುತ್ತಾನೆ. ಇದು ಅಲ್ಲದೆ ಉತ್ಖನನದಿಂದ ಗೊತ್ತಾದ ಹೊಸ ವಿಷಯಗಳನ್ನು ಒತ್ತಿ ಹೇಳಿ ಅದರಿಂದ ಉದ್ಭವಿಸಿದ ಹೊಸ ಸಮಸ್ಯೆಗಳನ್ನು ಉತ್ಖನನಕಾರನು ಸೂಚಿಸುತ್ತಾನೆ. ಸಮಸ್ಯೆಗೆ ಪರಿಹಾರಗಳೇನಾದರೂ ಕಂಡುಬಂದರೆ ಸಲಹೆ ಸೂಚನೆಗಳನ್ನು ನೀಡುತ್ತಾನೆ.

 12. ಅನುಬಂಧಗಳು, ಆಕರ ಗ್ರಂಥಗಳ ಪಟ್ಟಿ ಮತ್ತು ಛಾಯಾಚಿತ್ರಗಳು: ಯೋಜನಾ ವರದಿಯ ಕೊನೆಯ ಹಂತಗಳಾದ ಅನುಬಂಧಗಳು, ಆಕರ ಗ್ರಂಥಗಳ ಪಟ್ಟಿ ಹಾಗೂ ಛಾಯಾಚಿತ್ರಗಳ ಕುರಿತು ಇಲ್ಲಿ ಬರೆಯಲಾಗಿದೆ.

* ವರದಿಯಲ್ಲಿ ವಿವರಿಸಲಾದ ವಿಷಯಗಳಿಗೆ ಪುಷ್ಠಿ ನೀಡುವ ಹೆಚ್ಚುವರಿ ದಾಖಲೆಗಳು ಅಥವಾ ವಿವರಗಳನ್ನು ಇಲ್ಲಿ ಸೇರಿಸಲಾಗುತ್ತದೆ. ಇದರಿಂದ ಈ ಸಂಶೋಧನೆ ಮಾಡಲು ಸಹಕಾರಿಯಾಗುತ್ತವೆ.

* ವರದಿ ಸಿದ್ದಪಡಿಸಲು ಬಳಸಿದ ಅಥವಾ ಉಲ್ಲೇಖಿಸಿದ ಪುಸ್ತಕಗಳು, ಲೇಖನಗಳು, ಇತರೆ ಪ್ರಕಟಣೆಗಳು ಹಾಗೂ ಇದರಲ್ಲಿ ಲೇಖಕರ ಹೆಸರಿನ ಆಕಾರಾದಿ ಕ್ರಮದಲ್ಲಿ ವ್ಯವಸ್ಥಿತ ಪಟ್ಟಿಮಾಡಿ ಆಯಾ ಲೇಖಕರ ಹೆಸರಿನ ಮುಂದೆ ಕೃತಿಯ ಹೆಸರು, ಪ್ರಕಟವಾದ ಸ್ಥಳ ಮತ್ತು ಪ್ರಕಟವಾದ ವರ್ಷ ಮುಂತಾದ ವಿವರಗಳಿರಬೇಕು.

* ವರದಿಯಲ್ಲಿ ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಳಸಲಾದ ಫೋಟೋಗಳನ್ನು ವರದಿಯ ಕೊನೆಯಲ್ಲಿ ಅನುಕ್ರಮವಾಗಿ  ಮುದ್ರಿಸಬೇಕು. ಫೋಟೋಗಳ ಸಂಖ್ಯೆ, ಅದರ ವಿವರ ಹಾಗೂ ವರದಿಯಲ್ಲಿ ಅದು ಉಲ್ಲೇಖವಾಗಿರುವ ಪುಟದ ಸಂಖ್ಯೆಯನ್ನು ಆಯಾ ಚಿತ್ರಗಳ ಕೆಳಭಾಗದಲ್ಲಿ ಸೂಚಿಸಬೇಕು.

* ಈ ಮೇಲಿನ ವರದಿಗಳು ಮುಂದಿನ ಉತ್ಖನನಕಾರರು ಹಾಗೂ ಸಂಶೋಧಕರಿಗೆ ಮೂಲ ಸಾಮಗ್ರಿಗಳನ್ನು ಒದಗಿಸುವುದರಿಂದ ಉತ್ಖನನಕಾರರ ಗುಣಮಟ್ಟವನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.

ಡೇಟಿಂಗ್ C-14

ಡೇಟಿಂಗ್ C-14

ಇಂಗಾಲದ ವಿಕಿರಣಶೀಲ ಐಸೋಟೋಪ್ ಆಗಿರುವ ರೇಡಿಯೋ ಕಾರ್ಬನ್ ಗುಣಲಕ್ಷಣಗಳನ್ನು ಬಳಸಿಕೊಂಡು ಸಾವಯವ ವಸ್ತುಗಳನ್ನು ಹೊಂದಿರುವ ವಸ್ತುವಿನ ವಯಸ್ಸನ್ನು ನಿರ್ಧರಿಸುವ ವಿಧಾನವಾಗಿದೆ. ಇದನ್ನು ಕಾರ್ಬನ್ ಡೇಟಿಂಗ್ ಅಥವಾ ಕಾರ್ಬನ್ c14 ಡೇಟಿಂಗ್ ಎಂದು ಕರೆಯುತ್ತಾರೆ.

ಈ ವಿಧಾನವನ್ನು 1940ರ ದಶಕದಲ್ಲಿ ಚಿಕಾಗೋ ವಿಶ್ವವಿದ್ಯಾಲಯ ವಿಲ್ಲಾರ್ಡ್‌ ಲಿಬ್ಬಿ ಎಂಬುವವರು ಅಭಿವೃದ್ಧಿಪಡಿಸಿದರು.ಅವರಿಗೆ ನೋಬೆಲ್ ಪ್ರಶಸ್ತಿಯೂ ಲಭಿಸಿದೆ. ಈ ವಿಧಾನವು ವಿಶೇಷವಾಗಿ ಪುರಾತತ್ವಶಾಸ್ತ್ರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅಂದಿನಿಂದ c14 ಕಾಲ ನಿರ್ಣಯವು ಪುರಾತತ್ವ ಶಾಸ್ತ್ರದಲ್ಲಿ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮೂಲ ತತ್ವ (Principle)

ಎಲ್ಲ ಜೀವಿಗಳು ಬದುಕಿರುವಾಗ ವಾತಾವರಣದಿಂದ ಕಾರ್ಬನ್-14 ಅನ್ನು ತೆಗೆದುಕೊಳ್ಳುತ್ತವೆ.

  • ಜೀವಿ ಬದುಕಿರುವಾಗ → ಕಾರ್ಬನ್-14 ಮಟ್ಟ ಸ್ಥಿರವಾಗಿರುತ್ತದೆ
  • ಜೀವಿ ಸತ್ತ ನಂತರ → ಕಾರ್ಬನ್-14 ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತದೆ
  • ನಂತರ → ಕಾರ್ಬನ್-14 ನಿಧಾನವಾಗಿ ಕುಗ್ಗುತ್ತದೆ (Radioactive decay)

ಉಳಿದಿರುವ ಕಾರ್ಬನ್-14 ಪ್ರಮಾಣವನ್ನು ಅಳೆಯುವ ಮೂಲಕ ವಯಸ್ಸನ್ನು ಲೆಕ್ಕಿಸಲಾಗುತ್ತದೆ.

ಅರ್ಧ ಆಯುಷ್ಯ (Half-life)

ಕಾರ್ಬನ್-14 ನ ಅರ್ಧ ಆಯುಷ್ಯ = 5730 ವರ್ಷಗಳು

  • 5730 ವರ್ಷಗಳ ನಂತರ → ಅರ್ಧ ಪ್ರಮಾಣ ಉಳಿಯುತ್ತದೆ
  • 11,460 ವರ್ಷಗಳ ನಂತರ → ¼ ಪ್ರಮಾಣ ಉಳಿಯುತ್ತದೆ

ಈ ನಿಯಮಿತ ಕುಗ್ಗುವಿಕೆಯ ಆಧಾರದಿಂದ ಕಾಲವನ್ನು ಅಂದಾಜಿಸಲಾಗುತ್ತದೆ.

ವಿಧಾನ (Method / Procedure)

ರೇಡಿಯೋ ಕಾರ್ಬನ್ ಡೇಟಿಂಗ್ ಕ್ರಮದಲ್ಲಿ ಕೆಳಗಿನ ಹಂತಗಳು ಒಳಗೊಂಡಿರುತ್ತವೆ:

  1. ಮಾದರಿ ಸಂಗ್ರಹಣೆ (ಎಲುಬು, ಮರದ ತುಂಡು, ಕಲ್ಲುಕೋಲು)
  2. ಪ್ರಯೋಗಾಲಯದಲ್ಲಿ ಶುದ್ಧೀಕರಣ (Cleaning)
  3. ಕಾರ್ಬನ್-14 ಪ್ರಮಾಣವನ್ನು ಅಳೆಯುವುದು
  4. ಮೂಲ ಪ್ರಮಾಣದೊಂದಿಗೆ ಹೋಲಿಕೆ
  5. ಗಣಿತೀಯ ಲೆಕ್ಕಾಚಾರದಿಂದ ವಯಸ್ಸು ನಿರ್ಧಾರ

ಉಪಯೋಗಗಳು (Uses / Importance)

ರೇಡಿಯೋ ಕಾರ್ಬನ್ ಡೇಟಿಂಗ್‌ನ ಪ್ರಮುಖ ಉಪಯೋಗಗಳು:

  • ಪ್ರಾಚೀನ ನಾಗರಿಕತೆಗಳ ಕಾಲವನ್ನು ನಿರ್ಧರಿಸುವುದು
  • ಪುರಾತತ್ವ ತಾಣಗಳ ವಯಸ್ಸು ತಿಳಿಯುವುದು
  • ಪ್ರಾಚೀನ ಮಾನವರ ಜೀವನ ಅಧ್ಯಯನ
  • ಹವಾಮಾನ ಮತ್ತು ಪರಿಸರ ಇತಿಹಾಸ ಅರಿವು
  • ಪುರಾತತ್ವ ಸಂಶೋಧನೆಗೆ ವೈಜ್ಞಾನಿಕ ಆಧಾರ ಒದಗಿಸುವುದು

ಮಿತಿಗಳು (Limitations)

  • ಇದು ಜೀವಂತವಾಗಿದ್ದ ವಸ್ತುಗಳಿಗೆ ಮಾತ್ರ ಅನ್ವಯಿಸುತ್ತದೆ
  • ಸುಮಾರು 50,000 ವರ್ಷಗಳವರೆಗೆ ಮಾತ್ರ ಪರಿಣಾಮಕಾರಿ
  • ಮಾದರಿಯಲ್ಲಿ ಮಲಿನತೆ (contamination) ಇದ್ದರೆ ಫಲಿತಾಂಶ ತಪ್ಪಾಗಬಹುದು

ಕೆಲವೊಮ್ಮೆ ಅಂದಾಜು ಮಾತ್ರ ಸಿಗುತ್ತದೆ (Exact date ಅಲ್ಲ)

ಉದಾಹರಣೆ (Example)

ಒಂದು ಮರದ ತುಂಡಿನಲ್ಲಿ 50% ಕಾರ್ಬನ್-14 ಉಳಿದಿದ್ದರೆ, ಅದು ಸುಮಾರು 5730 ವರ್ಷ ಹಳೆಯದು ಎಂದು ಅರ್ಥ.

ವಿವರ:

ಇದ್ದಿಲು ಹಾಗೂ ಎಲುಬು ಮುಂತಾದ ಸಾವಯವ ವಿಶೇಷಗಳಲ್ಲಿ ಅಳಿದುಳಿದಿರುವ ಇಂಗಾಲ 14 (c14 )ದ ಪ್ರಮಾಣವನ್ನು ಅಳೆದು ಅವುಗಳ ಕಾಲಮಾನವನ್ನು ನಿರ್ಧರಿಸುವುದಾಗಿದೆ. ಇದು ರೇಡಿಯೋ ಕಾರ್ಬನ್ (c14 ) ವಾತಾವರಣದ ಸಾರಜನಕದೊಂದಿಗೆ ಕಾಸ್ಮಿಕ್‌ ಕಿರಣಗಳ ಪರಸ್ಪರ ಕ್ರಿಯೆಯಿಂದ ಭೂಮಿಯ ವಾತಾವರಣದಲ್ಲಿ ನಿರಂತರವಾಗಿ ಸೃಷ್ಟಿಯಾಗುತ್ತದೆ. ಇದರ ಪರಿಣಾಮದಿಂದ c14 ವಾತಾವರಣದ ಆಮ್ಲಜನಕದೊಂದಿಗೆ ಸೇರಿ ವಿಕಿರಣಶೀಲ ಇಂಗಾಲದ ಡೈ ಆಕ್ಸೈಡ್‌ನ್ನು ರೂಪಿಸುತ್ತದೆ. ಇದು ದ್ಯುತಿ ಸಂಶ್ಲೇಷಣೆಯ ಮೂಲಕ ಸಸ್ಯಗಳಲ್ಲಿ ಸಂಯೋಜನೆ ಹೊಂದುತ್ತದೆ. ನಂತರ ಪ್ರಾಣಿಗಳು c14 ಸಸ್ಯಗಳನ್ನು ತಿನ್ನುವ ಮೂಲಕ ಪ್ರಾಣಿ ಅಥವಾ ಸಸ್ಯ ಸತ್ತನಂತರ ಅದು ಪರಿಸರದಲ್ಲಿ ಇಂಗಾಲದ ವಿನಿಮಯವಾಗುವುದನ್ನು ನಿಲ್ಲಿಸುತ್ತದೆ. ಅದೇ ರೀತಿ ವಾತಾವರಣದಲ್ಲಿಯ ಇಂಗಾಲಾಮ್ಲವು ಸಾಗರದ ನೀರಿನಲ್ಲಿ ಕರಗಿ ಸಾಗರ ಜೀವಿಗಳ ದೇಹವನ್ನು ಸಹ ಸೇರುತ್ತದೆ. ಹೀಗೆ ಕಾಸ್ಮಿಕ್‌ಕಿರಣ ನ್ಯೂಟ್ರಾನುಗಳಿಂದ ಉಂಟಾದ c14 ವಾತಾವರಣ. ಜೀವಗೋಳ ಹಾಗೂ ಸಾಗರ ಇವು ಜೊತೆಗೂಡಿ ಆಗುವ ಇಂಗಾಲದ ವಿನಿಮಯ ಜಲಾಶಯದಲ್ಲಿ ಸಮನಾಗಿ ಹಂಚಿಹೋಗುತ್ತವೆ.  c14 ಅರ್ಧ ಜೀವಾವಧಿಗೆ ಹೋಲಿಸಿದರೆ ಅದು ಹಂಚಿಹೋಗಲು ಹಿಡಿಯುವ ಅವಧಿ ಬಹಳ ಕಡಿಮೆಯೆನಿಸುತ್ತದೆ. ಕಾಸ್ಮಿಕ್ ಕಿರಣ ನ್ಯೂಟ್ರಾನುಗಳು ಪ್ರತಿ ವರ್ಷ ಸುಮಾರು  7.5 ಕಿ. ಗ್ರಾಂ ಉತ್ಪಾದಿಸುತ್ತವೆ. ಆದರೆ c14 5730 ವರ್ಷಗಳ ಅರ್ಧ ಜೀವಾವಧಿ ಪ್ರಮಾಣದಲ್ಲಿ ಬೀಟಾ ಕಣಗಳನ್ನು ಹೊರಗೆ ಹಾಕಿ ಕ್ಷಯಿಸುತ್ತಾ ಹೋಗಿ ಮತ್ತೆ N14 ಆಗಿ ಪರಿವರ್ತನೆ ಹೊಂದುತ್ತವೆ.

 ವಾತಾವರಣದಲ್ಲಿನ N14 ದಿಂದ c14 ಆಗಿ ಉತ್ಪತ್ತಿಯಾಗುವ ಕಾಲವು c14 ದಿಂದ ಮತ್ತೆ N14 ಆಗುವ ಕಾಲದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಜಲಾಶಯದಲ್ಲಿ ಇಂಗಾಲ ವಿನಿಮಯವು ಸುಮಾರು 62 ಟನ್‌ಗಳಷ್ಟು c14 ಯಾವಾಗಲೂ ಒಂದೇ ರೀತಿಯದಾಗಿರುತ್ತದೆ. ಪ್ರಾಣಿ ಹಾಗೂ ಸಸ್ಯಗಳು ಸತ್ತ ನಂತರ ಅವುಗಳಲ್ಲಿ ಇಂಗಾಲಾಮ್ಲವನ್ನು ಪಡೆದುಕೊಳ್ಳುವ ಕ್ರಿಯೆಯೇ ನಿಂತು ಹೋಗುತ್ತದೆ. ಸತ್ತ ನಂತರ ಅವುಗಳಲ್ಲಿ c12 ಹಾಗೆಯೇ ಉಳಿಯುತ್ತದೆ. ಆದರೆ c14 ನ ಸಾಯುವ ಕ್ರಿಯೆ ಹಾಗೆಯೇ ಮುಂದುವರೆಯುತ್ತದೆ. ಸತ್ತ ಪ್ರಾಣಿಗಳು ಹಾಗೂ ಸಸ್ಯಗಳಲ್ಲಿನ c14 ಪ್ರಮಾಣವು ಪ್ರತಿ 83 ವರ್ಷಗಳಿಗೆ ಶೇ 1 ರಷ್ಟು ಮಾತ್ರ ಕಡಿಮೆಯಾಗುತ್ತದೆ. ಈ ವಿದ್ಯಮಾನಗಳ ಆಧಾರದ ಮೇಲೆ ಸಾವಯವ ಅವಶೇಷಗಳಲ್ಲಿನ c14 ಪ್ರಮಾಣವನ್ನು ನಿರ್ಧರಿಸಿ ಅವುಗಳ ಕಾಲ ನಿರ್ಣಯವನ್ನು ಮಾಡಲಾಗುತ್ತದೆ. 

ಉತ್ಖನನದ ಸಮಯದಲ್ಲಿ ಹೊರತೆಗೆಯಲಾದ ಇದ್ದಿಲು c14 ಕಾಲ ನಿರ್ಣಯ ಮಾಡುವಲ್ಲಿ ಹೆಚ್ಚು ಪ್ರಶಸ್ತವಾಗಿದೆ. ಇದರ ಜೊತೆಗೆ ಚಿಪ್ಪು ಹಾಗೂ ಎಲುಬುಗಳನ್ನು ಸಹ ಪರೀಕ್ಷೆ ಮಾಡಿ ಅವುಗಳ ಅವಧಿಯನ್ನು ನಿರ್ಧರಿಸಬಹುದು. ಇದ್ದಲಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕಾದಾಗ ಕೇವಲ 10 ಗ್ರಾಂ ಇದ್ದಿಲು ಸಾಕಾಗುತ್ತದೆ. ಆದರೆ ಚಿಪ್ಪು ಹಾಗೂ ಎಲುಬುಗಳ ಮಾದರಿಯನ್ನು ಪರೀಕ್ಷಿಸಲು ಸಾಮಾನ್ಯವಾಗಿ 200 ಗ್ರಾಂಗಳಷ್ಟು ಬೇಕಾಗುತ್ತದೆ. ವಿಶೇಷ ಉಪಕರಣಗಳ ಸಹಾಯದಿಂದ ಮಾದರಿ ಕಾಲನಿರ್ಣಯ ಮಾಡಬೇಕಾಗುತ್ತದೆ. c14   ದಿಂದ ಮರಳಿ N14 ಆಗಿ ಬದಲಾಗುವಾಗ ಬೀಟಾ ಕಣಗಳು ಹೊರದೂಡಲ್ಪಡುತ್ತವೆ. ಪ್ರಾಗೈತಿಹಾಸಿಕ ಕಾಲದ ಒಂದು ಗ್ರಾಂ ಸಾವಯವ ಮಾದರಿಯು ಪ್ರತಿನಿಮಿಷಕ್ಕೆ 15 ಬೀಟಾ ಕಣಗಳನ್ನು ಹೊರಹಾಕುತ್ತದೆ. ಅದೇ 5730 ವರ್ಷಗಳ ಹಳೆಯ ಮಾದರಿಯು 7.5 ಬೀಟಾಕಣಗಳನ್ನು 11460 ವರ್ಷಗಳ ಹಳೆಯ ಮಾದರಿಯು 7.5 ಬೀಟಾಕಣಗಳನ್ನು ಹೊರಹಾಕುತ್ತದೆ. ಸುಮಾರು 70,000 ವರ್ಷಗಳ ಹಳೆಯ ಮಾದರಿಯಲ್ಲಿ c14 ಉಳಿಯುವುದಿಲ್ಲವಾದ ಕಾರಣ ಬೀಟಾ ಕಣಗಳು ಹೊರಗೆ ಹೋಗುವುದೇ ಇಲ್ಲ. ಬೀಟಾ ಕಣಗಳನ್ನು ಗೀಜರ್ ಕೌಂಟರ್ ಎಂಬ ಉಪಕರಣದ ಸಹಾಯದಿಂದ ನಿರ್ಧರಿಸಲಾಗುತ್ತದೆ. ಈ ವಿಧಾನವು 50,000 ವರ್ಷಗಳಷ್ಟು ಹಳೆಯ ಸಾವಯವ ಮಾದರಿಗಳನ್ನು ಮಾತ್ರ ಕಾಲ ನಿರ್ಣಯಕ್ಕೆ ಒಳಪಡಿಸುತ್ತದೆ.

ಪ್ರಯೋಗಶಾಲೆಯಲ್ಲಿನ ತಾಂತ್ರಿಕ ದೋಷ ಹಾಗೂ ಅಲ್ಲಿನ ಸ್ಥಿತಿಗತಿ ಚೆನ್ನಾಗಿಲ್ಲದೆ ಹೋದರೆ c14 ಕಾಲಮಾನದ ತೀರ್ಮಾನದಲ್ಲಿ ನಿರ್ದಿಷ್ಟವಾದ ಫಲಿತಾಂಶ ದೊರಕುವುದಿಲ್ಲ. ಹಾಗಾಗಿ ಇದರ ಸಾಧ್ಯತೆಗಳನ್ನು c14 ಕಾಲದ ವಿವರ +- ದೋಷದ ಅಂಕೆ ಹಾಗೂ ಸಂಖ್ಯೆಗಳ ರೂಪದಲ್ಲಿ ಉಲ್ಲೇಖಿಸಲಾಗುತ್ತದೆ. ಉದಾ: 2700+-300 B.P (Before Present) ಎಂಬ ಉಲ್ಲೇಖವನ್ನು ಮಾಡಬೇಕು. ಅಂದರೆ ನಾವು ಇಂದಿನಿಂದ ಹಿಂದಕ್ಕೆ 6900 ಮತ್ತು 7500 ವರ್ಷಗಳ ನಡುವಿನ ಸಂಗತಿ ಎಂದು ತಿಳಿಯಬೇಕು.

ಭಾರತೀಯ ಪುರಾತತ್ವ ಶಾಸ್ತ್ರದಲ್ಲಿ c14 ಕಾಲಮಾನದ ಬಳಕೆಯನ್ನು ಸಾಕಷ್ಟು ಸಲ ಮಾಡಲಾಗಿದೆ. ಇದಕ್ಕಾಗಿ ಅಹಮ್ಮದಾಬಾದ್‌ನಲ್ಲಿ ʻʻಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್‌ (TIFR) ಸಂಸ್ಥೆಯ ಸ್ಥಾಪನೆಯಾಗಿದೆ. ಇದು c14 ಕಾಲ ನಿರ್ಣಯವನ್ನು ಪ್ರಯೋಗ ಮಾಡುವ ಗಮ್ಯ ಸ್ಥಳವಾಗಿದೆ. ಇದೇ ಪ್ರಯೋಗ ಶಾಲೆಯಲ್ಲಿ ಹರಪ್ಪಾ ನೂತನ ಶಿಲಾಯುಗ ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಗಳ ಕಾಲಮಾನವನ್ನು ನಿರ್ಧರಿಸಲಾಯಿತು. ಕರ್ನಾಟಕದ ಟೀ ನರಸೀಪುರ, ತೆಕ್ಕಲಕೋಟೆ, ಹಳ್ಳೂರು, ತೇರದಾಳ್ ಹಾಗೂ ಕೊಡೇಕಲ್‌ ಮುಂತಾದವುಗಳಲ್ಲಿ ಕಂಡು ಬಂದ ನೂತನ ಶಿಲಾಯುಗ, ಕಬ್ಬಿಣ ಯುಗಗಳನ್ನು ಪತ್ತೆ ಮಾಡಿ ಅವುಗಳ ಕಾಲಮಾನವನ್ನು ನಿರ್ಣಯಿಸಲಾಯಿತು.

ರೇಡಿಯೋ ಕಾರ್ಬನ್ ಡೇಟಿಂಗ್ ವಿಧಾನವು ಪುರಾತತ್ವಶಾಸ್ತ್ರದಲ್ಲಿ ಕ್ರಾಂತಿಕಾರಕ ಸಾಧನವಾಗಿದೆ. ಇದು ಹಳೆಯ ವಸ್ತುಗಳ ವಯಸ್ಸನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ. ಆದರೂ, ಇದರ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಬಳಸಬೇಕು. ಈ ವಿಧಾನವು ಮಾನವ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಬಹುಮುಖ್ಯವಾಗಿದೆ.

ಸಾರಾಂಶ:
ರೇಡಿಯೋ ಕಾರ್ಬನ್ ಡೇಟಿಂಗ್ ಎಂದರೆ ಕಾರ್ಬನ್-14 ಕುಗ್ಗುವಿಕೆಯ ಆಧಾರದಲ್ಲಿ ಹಳೆಯ ವಸ್ತುಗಳ ವಯಸ್ಸನ್ನು ತಿಳಿಯುವ ವೈಜ್ಞಾನಿಕ ವಿಧಾನ.

ಛಾಯಾಚಿತ್ರ ದಾಖಲಾತಿ ವಿಧಾನ

ಛಾಯಾಚಿತ್ರ ದಾಖಲಾತಿ ವಿಧಾನ

ಛಾಯಾಚಿತ್ರ ದಾಖಲಾತಿ ವಿಧಾನ:  ಉತ್ಖನನ, ಅನ್ವೇಷಣೆ ಹಾಗೂ ವಿಮರ್ಶೆ ಮುಂತಾದವುಗಳನ್ನು ಅಧ್ಯಯನ ಮಾಡುವಾಗ ಪ್ರತಿಯೊಂದು ಹಂತದಲ್ಲಿ ಛಾಯಾಚಿತ್ರದ ಪಾತ್ರ ಅತ್ಯಂತ ಹಿರಿದಾದುದು. ಉತ್ಖನನದಲ್ಲಿ ಸಿಗುವ ಪ್ರಾಚ್ಯವಸ್ತುಗಳು, ಕಟ್ಟಡಗಳು ಮುಂತಾದವುಗಳನ್ನು ಛಾಯಾಚಿತ್ರಿಸಿಕೊಂಡ ಹಾಗೆ ಇನ್ನಿತರ ಐತಿಹಾಸಿಕ ಪುರಾವೆಗಳು ದೊರಕಿದಾಗ ಅವುಗಳು ಹೇಗೆ ಇವೆಯೋ ಹಾಗೆಯೇ ಛಾಯಾಚಿತ್ರಗಳ ರೂಪದಲ್ಲಿ ಅವುಗಳನ್ನು ದಾಖಲಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಛಾಯಾಚಿತ್ರಗಳು ನಕ್ಷೆಕಾರನಿಗೆ ತಲಚಿತ್ರ ಹಾಗೂ ಛೇದ ಚಿತ್ರ ಮುಂತಾದವುಗಳನ್ನು ತಯಾರಿಸಲು ನೆರವಾಗುತ್ತದೆ. ಛಾಯಾಚಿತ್ರಗಳು ಸಾಮಾನ್ಯವಾಗಿ ನಿಖರ ದಾಖಲೆಗಳು ಆಗಿರುವುದರಿಂದ ಉತ್ಖನನದ ಕಾಲದಲ್ಲಿ ಅವುಗಳ ಅವಶ್ಯಕತೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಉತ್ಖನನದ ಛಾಯಾಚಿತ್ರಗಳು, ಸ್ತರಗಳು, ಕಟ್ಟಡ ರಚನೆಗಳು, ಪ್ರಾಚ್ಯ ವಸ್ತುಗಳು ಮುಂತಾದವುಗಳು ಛಾಯಾಚಿತ್ರಗಾರನಿಗೆ ನಿಖರ ದಾಖಲೆಗಳನ್ನು ಒದಗಿಸುತ್ತವೆ. ಹೀಗಾಗಿ ಉತ್ಖನನದ ಅರ್ಧ ಕಾರ್ಯ ಪರಿಪೂರ್ಣಗೊಳ್ಳಲು ಛಾಯಾಚಿತ್ರದ ಅಗತ್ಯತೆ ಬೇಕೇ ಬೇಕು.

ನಿವೇಶನಗಳನ್ನು ಉತ್ಖನನ ಮಾಡುವಾಗ ನಿರ್ದೇಶಕನು ನೀಡುವ ಕೆಲವು ಸೂಚನೆಗಳನ್ನು ಛಾಯಾಗ್ರಾಹಕನು ಚಾಚು ತಪ್ಪದೆ ಪಾಲಿಸಬೇಕು. ಯಾವ ಯಾವ ಕೋನಗಳ ಮುಖಾಂತರ ವಿಷಯಗಳನ್ನು ಕರಗತ ಮಾಡಿಕೊಂಡು ಛಾಯಾಗ್ರಹಣ ಮಾಡಿದರೆ ಉತ್ಖನನ ಕಾರ್ಯಕ್ಕೆ ಸಹಾಯವಾಗುತ್ತದೆ ಎಂಬ ವಿಷಯದ ಕುರಿತು ನಿರ್ದೇಶಕನು ಛಾಯಾಗ್ರಾಹಕನಿಗೆ ಸೂಚನೆಗಳನ್ನು ನೀಡುತ್ತಾ ಹೋಗುತ್ತಾನೆ. ಯಾವ ವಿಷಯಗಳು ಪ್ರಮುಖವಾಗಿವೆ ಮತ್ತು ಯಾವ ವಿಷಯಗಳು ಪ್ರಮುಖವಾಗಿಲ್ಲ. ಯಾವ ವಿಷಯಗಳು ಚಿತ್ರದಲ್ಲಿ ಎದ್ದು ಕಾಣಬೇಕು ಮತ್ತು ಯಾವ ವಿಷಯಗಳು ಚಿತ್ರದಲ್ಲಿ ಅಷ್ಟೇನೂ ಪ್ರಾಮುಖ್ಯವನ್ನು ಪಡೆದಿಲ್ಲ ಎಂಬುದು ನಿರ್ದೇಶಕನಿಗೆ ಗೊತ್ತಿರುತ್ತದೆ. ಆ ಪ್ರಕಾರ ಅವನು ಛಾಯಾಗ್ರಾಹಕನನ್ನು ತಯಾರು ಮಾಡುತ್ತಾನೆ. ಯಾವ ವಿಷಯಗಳು ಉತ್ಖನನದ ಕಾಲದಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಯಾವ ಛಾಯಾಚಿತ್ರ ಅಗತ್ಯವಾಗಿ ಬೇಕು ಎಂಬುದನ್ನು ಇಲ್ಲಿ ಕೊಡಲಾಗಿದೆ ಅವುಗಳೆಂದರೆ,

  1. ಉತ್ಖನನ ಮಾಡುವ ಮೊದಲು ಸ್ಥಳದ ವಸತಿ ದಿಬ್ಬದ ಆಕಾರ, ಸ್ವರೂಪ, ಎತ್ತರ ಮೊದಲಾದ ಅಂಶಗಳನ್ನು ಸೂಚಿಸುವ ಕುರಿತು ವ್ಯೋಮ ಛಾಯಾಚಿತ್ರಗಳನ್ನು ತೆಗೆಯಬೇಕು.
  1. ಸ್ತರ ಸಂಖ್ಯೆಯನ್ನು ಸೂಚಿಸುವ ಪಟ್ಟಿಗಳು ಹಾಗೂ ಎತ್ತರವನ್ನು ಸೂಚಿಸುವ ಸ್ಕೇಲು ಮೊದಲಾದವುಗಳ ಛಾಯಾಚಿತ್ರಗಳು ಬಹುಮುಖ್ಯವಾಗಿ ಉತ್ಖನನಕಾರನಿಗೆ ಸಹಾಯ ಮಾಡುತ್ತವೆ.
  1. ಕಟ್ಟಡಗಳ ಅವಶೇಷಗಳು, ಅಡಿಪಾಯಗಳು ಹಾಗೂ ಗುಂಡಿಗಳು ಮುಂತಾದವುಗಳ ತಲ ವಿನ್ಯಾಸ ಛೇದಿಸುವುದನ್ನು ಸೂಚಿಸುವ ಚಿತ್ರಗಳು.
  1. ಪ್ರಾಚ್ಯ ವಸ್ತುಗಳು ದೊರಕಿದ ಸಂದರ್ಭವನ್ನು ಸೂಚಿಸುವ ಚಿತ್ರಗಳು.
  1. ವಿಂಗಡಣೆ ಯಾದ ಪ್ರಾಚ್ಯ ವಸ್ತುಗಳ ಛಾಯಾಚಿತ್ರಗಳು.

ಛಾಯಾಗ್ರಹಣದಲ್ಲಿ ಗಮನಿಸಬೇಕಾದ ಅಂಶಗಳು: 

  1. ಛಾಯಾಚಿತ್ರವನ್ನು ತೆಗೆಯುವ ಮುಂಚೆ ಉತ್ಖನನಕಾರನು ಪ್ರಾಚ್ಯ ವಸ್ತುಗಳು ಹಾಗೂ ಅವಶೇಷಗಳನ್ನು ಕುಂಚದಿಂದ ಸರಿಯಾಗಿ ಸ್ವಚ್ಛಗೊಳಿಸಬೇಕು. ಇದರಿಂದ ಅವಶೇಷಗಳಿಗೆ ಅಂಟಿದ ಧೂಳು ಕಡಿಮೆಯಾಗುತ್ತದೆ. ಉತ್ಖನನ ಮಾಡಿದಾಗ ಗುಂಡಿಯ ಗೋಡೆಗಳಲ್ಲಿ ಚಿಕ್ಕ ಚಿಕ್ಕ ಬೇರುಗಳು ಜೊತುಬಿದ್ದಿರುವುದರಿಂದ ಅವುಗಳನ್ನು ಕತ್ತರಿಸಿ ಹಾಕಬೇಕು. ವಿಷಯ ಸ್ಪಷ್ಟವಾದಷ್ಟು ಛಾಯಾಚಿತ್ರವೂ ಸ್ಪಷ್ಟವಾಗಿ ಗೋಚರಿಸುತ್ತದೆ.
  1. ಪ್ರಾಚ್ಯ ವಸ್ತುಗಳ ಕುರಿತು ಛಾಯಾಚಿತ್ರವನ್ನು ಮಾಡುವಾಗ ಅವುಗಳಿಗೆ ಸಂಬಂಧಪಟ್ಟ ವಸ್ತುಗಳಾದ ಕುಣಿಗಳು, ಗುಂಡಿಗಳು ಅಥವಾ ಸ್ತರಗಳನ್ನು ಎದ್ದು ಕಾಣುವ ಹಾಗೆ ಗುರುತು ಹಾಕಬೇಕು.
  1. ಪ್ರಾಚ್ಯವಸ್ತುಗಳ ಆಕಾರ ಮತ್ತು ಗಾತ್ರವನ್ನು ತೋರಿಸಲು ಉತ್ತಮವಾದ ಸ್ಕೇಲನ್ನು ಬಳಸಬೇಕು. ಈ ಸ್ಕೇಲು ಚಿಕ್ಕದಾಗಿರಬಾರದು ಆದಷ್ಟು ದೊಡ್ಡದಾಗಿರಲಿ.
  1. ಸೂರ್ಯನ ಕಿರಣಗಳು ಪ್ರಖರವಾಗಿರುವಾಗ ಛಾಯಾಚಿತ್ರವನ್ನು ತೆಗೆಯಬಾರದು. ಏಕೆಂದರೆ ಇಂತಹ ಸಮಯದಲ್ಲಿ ವಸ್ತುಗಳ ಛಾಯಾಚಿತ್ರವನ್ನು ಮಾಡಿದರೆ ಅವುಗಳು ಸ್ಪಷ್ಟವಾಗಿ ಕಾಣುವುದಿಲ್ಲ.
  1. ಭಾರತದ ಹವಾಗುಣದ ಪರಿಸ್ಥಿತಿಗೆ ಅನುಗುಣವಾಗಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಛಾಯಾಚಿತ್ರ ತೆಗೆಯುವುದು ಒಳ್ಳೆಯದು.
  1. ಚಿಕ್ಕದಾದ ಪ್ರಾಚ್ಯ ವಸ್ತುಗಳ ಚಿತ್ರವನ್ನು ಬೆಳಕಿನಲ್ಲಿಯೇ ತೆಗೆಯಬೇಕು. ಯಾವುದೇ ಕಾರಣಕ್ಕೂ ಪ್ಲ್ಯಾಶ್‌ ಬ್ಯಾಕ್‌ನ್ನು ಉಪಯೋಗಿಸಬಾರದು. ಹಾಗೆ ಮಾಡಿದರೆ ವಸ್ತುಗಳ ಉತ್ತಮ ಫಲಿತಾಂಶ ಸಿಗಲಾರದು. ಕೆಲವು ಸಂದರ್ಭಗಳಲ್ಲಿ ಕೃತಕ ಬೆಳಕಿನಿಂದಲೂ ಛಾಯಾಚಿತ್ರವನ್ನು ತೆಗೆಯಲು ಅವಕಾಶವಿದೆ. ಪ್ರಾಚ್ಯವಸ್ತುಗಳ ಚಿತ್ರ ಚೆನ್ನಾಗಿ ಮೂಡಿ ಬರಬೇಕಾದರೆ ಅದರ ಹಿಂದೆ ಸರಿಹೊಂದುವ ಒಂದು ಬಟ್ಟೆಯನ್ನು ಇರಿಸಬಹುದು. ಕೆಲವು ಸಲ ಒಂದೇ ಛಾಯಾಚಿತ್ರದಲ್ಲಿ ಎರಡು ಪ್ರಾಚ್ಯವಸ್ತುಗಳ ಚಿತ್ರಗಳನ್ನು ತೆಗೆಯಬೇಕಾದ ಸಂದರ್ಭ ಬಂದರೆ ಅವುಗಳಿಗೆ ಕ್ರಮ ಸಂಖ್ಯೆಯನ್ನು ನಮೂದಿಸಬೇಕು. ಇದರಿಂದ ಪ್ರಾಚ್ಯ ವಸ್ತು ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಬಣ್ಣದ ಛಾಯಾಚಿತ್ರವಾದರೆ ಯಾವ ವಸ್ತುಗಳನ್ನು ಚಿತ್ರಿಸಲಾಗುವುದೋ ಅಂತಹ ವಸ್ತುಗಳ ಮೂಲ ಬಣ್ಣವನ್ನು ಇದ್ದ ಹಾಗೆ ತೋರಿಸಲು ಸಾಧ್ಯವಾಗುತ್ತದೆ.
  1. ಬೃಹತ್ ಕಟ್ಟಡಗಳ ಛಾಯಾಚಿತ್ರಗಳನ್ನು ನೆಲಮಟ್ಟದಿಂದ ತೆಗೆಯಬೇಕಾದ ಕಾರಣ ಅವುಗಳು ನಿಖರವಾದ ಫಲಿತಾಂಶವನ್ನು ನೀಡಲಾರವು. ಆದುದರಿಂದ ಇಂತಹ ಸಂದರ್ಭಗಳಲ್ಲಿ ಎತ್ತರವಾದ ಮರದ ವೇದಿಕೆಯನ್ನು ಬಳಸಬೇಕು. ಈ ವೇದಿಕೆಯ ಮೇಲೆ ಹತ್ತಿ ಛಾಯಾಚಿತ್ರವನ್ನು ತೆಗೆಯುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.
  1. ಉತ್ಖನನದ ನಂತರ ಪ್ರಾಚ್ಯ ವಸ್ತುಗಳ ಛಾಯಾಚಿತ್ರವನ್ನು ತೆಗೆದು ತಕ್ಷಣವೇ ಅದನ್ನು ನಿರ್ದೇಶಕನಿಗೆ ತೋರಿಸಬೇಕು. ನಿರ್ದೇಶಕನಿಗೆ ಸಮಾಧಾನವಾಗದಿದ್ದರೆ ಮತ್ತೊಮ್ಮೆ ಅದೇ ಛಾಯಾಚಿತ್ರವನ್ನು ತೆಗೆಯಬೇಕು.
  1. ಇತ್ತೀಚಿನ ವರ್ಷಗಳಲ್ಲಿ ಹೊಸ ಮಾದರಿಯ ಡಿಜಿಟಲ್ ಕ್ಯಾಮರಾಗಳು ಬಂದಿವೆ. ಹಾಗಾಗಿ ಉತ್ಖನನದ ಛಾಯಾಚಿತ್ರವನ್ನು ತೆಗೆದು ತಕ್ಷಣವೇ ಪಲಿತಾಂಶವನ್ನು ಗುರುತಿಸಬಹುದು. ಇದು ಅಲ್ಲದೆ ಮೊಬೈಲ್ ಕ್ಯಾಮರಾಗಳು ಬಂದಿದ್ದು ಅವುಗಳ ರೆಸಲ್ಯೂಷನ್‌ ಉತ್ತಮ ಗುಣಮಟ್ಟದಾಗಿದೆ.
  1. ವಿಡಿಯೋ ಕ್ಯಾಮರಾಗಳ ಸಹಾಯದಿಂದ ಉತ್ಖನನದ ಪ್ರಗತಿಯನ್ನು ಅಗತ್ಯವಾದ ದಾಖಲಾತಿಗಳೊಂದಿಗೆ ಉತ್ಖನನದ ಫಲಿತಾಂಶವನ್ನು ಪಡೆಯಬಹುದು.
  1. ಉತ್ಖನನದ ಫಲಿತಾಂಶವನ್ನು ಫೇಸ್‌ ಬುಕ್‌, ವಾಟ್ಸ್‌ ಅಪ್‌, ಟ್ವಿಟರ್‌, ವಿಚಾಟ್‌, ಷೇರ್‌ ಚಾಟ್‌, ಇನ್‌ಸ್ಟಾ ಗ್ರಾಮ್‌, ಪಿಂಟರೆಸ್ಟ್‌, ಲಿಂಕ್ಡ್‌ ಇನ್‌, ಇಂಟರ್‌ ನೆಟ್ ಮುಂತಾದ ಸಾಮಾಜಿಕ ಮಾಧ್ಯಮಗಳ ಅಥವಾ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ತೋರಿಸಿ ಸಾಂಸ್ಕೃತಿಕ ಸಂಪತ್ತಿನ ಮಹತ್ವವನ್ನು ತಿಳಿಸಬಹುದು.

  1. ಉತ್ಖನನದ ಪ್ರಾಚ್ಯವಸ್ತುಗಳ ಸ್ಥಿತಿಗತಿಗಳನ್ನು ಕ್ಯಾಮರ ಅಥವಾ ಮೊಬೈಲ್‌ನಲ್ಲಿ ಸೆರೆಹಿಡಿದು ಅವುಗಳನ್ನು ಪೆನ್‌ಡ್ರೈವ್‌ಗೆ ವರ್ಗಾಯಿಸಿ ಅವುಗಳನ್ನು ಬೇಕೆಂದಾಗ ನೋಡಬಹುದು.

ಛಾಯಾಚಿತ್ರಗಳ ನೋಂದಣಿ:  ಉತ್ಖನನದ ಸಮಯದಲ್ಲಿ ತೆಗೆಯಲಾದ ಛಾಯಾಚಿತ್ರಗಳ  ಮುದ್ರಿತ ಪ್ರತಿಗಳನ್ನು ಸರಿಯಾಗಿ ನೋಂದಾಯಿಸಿ ಇಡುವ ಜವಾಬ್ದಾರಿ ಛಾಯಾಗ್ರಾಹಕನದಾಗಿದೆ. ಪ್ರತಿ ಛಾಯಾಚಿತ್ರಕ್ಕೂ ಕ್ರಮ ಸಂಖ್ಯೆಯನ್ನು ನೀಡಬೇಕು. ಛಾಯಾಚಿತ್ರ ತೆಗೆದ ದಿನಾಂಕ, ನೆಲೆ, ಸ್ಥಳ, ದಿಕ್ಕು, ಮುಂತಾದವುಗಳ ಸವಿವರಗಳನ್ನು ಬರೆದಿಡಬೇಕು. ಇದೇ ವಿವರಗಳನ್ನು  ನೊಂದಣಿ ಪುಸ್ತಕದಲ್ಲಿ ಬರೆಯಬೇಕು. ಡಿಜಿಟಲ್ ಚಿತ್ರಗಳನ್ನು ಸಿ.ಡಿ,‌ ಪೆನ್‌ಡ್ರೈವ್‌, ಹಾರ್ಡ್‌ ಡಿಸ್ಕ್, ವಿಸಿಡಿ, ಡ್ರೈವ್‌ ಅಥವಾ ಕ್ಲೌಡ್‌ನಲ್ಲಿ ರಕ್ಷಿಸಿ ಇಡಬೇಕು.

ಛಾಯಾಚಿತ್ರಗಳ ಆಲ್ಬಮ್:  ಪ್ರತಿ ಛಾಯಾಚಿತ್ರಗಳ  ಮುದ್ರಿತ ಪ್ರತಿಯನ್ನು ಅದರ ಕ್ರಮ ಸಂಖ್ಯೆಯ ಅನುಸಾರವಾಗಿ ಮೇಲೆ ತಿಳಿಸಿದ ಎಲ್ಲಾ ವಿವರಗಳೊಂದಿಗೆ ಆಲ್ಬಮ್‌ನಲ್ಲಿ ಅಂಟಿಸಬೇಕು. ಇದರಿಂದ ಯಾವುದೇ ಪ್ರಾಚ್ಯವಸ್ತುವಿನ ಅಥವಾ ಪ್ರಾಚ್ಯ ಅವಶೇಷಗಳ ಛಾಯಾಚಿತ್ರದ ಪ್ರತಿ ಯಾವಾಗ ಬೇಕು ಅನಿಸುತ್ತದೆಯೋ ಆಗ ಅದನ್ನು ಬೇಗನೆ ಗುರುತಿಸಲು ಅನುಕೂಲವಾಗುತ್ತದೆ.

ಛಾಯಾಚಿತ್ರ ಮತ್ತು ವಿವರಗಳ ಕಾರ್ಡುಗಳು:  ಪ್ರತಿ ಪ್ರಾಚ್ಯವಸ್ತುವಿನ ಬಗ್ಗೆ ಕೇವಲ ರಿಜಿಸ್ಟರ್ ಅಥವಾ ಆಲ್ಬಮ್ ಮಾತ್ರವಲ್ಲದೆ ಪ್ರತ್ಯೇಕವಾದ ಕಾರ್ಡುಗಳನ್ನು ಸಿದ್ಧಪಡಿಸುವುದು ತುಂಬಾ ಉಪಯುಕ್ತವಾದುದು. ಈ ಕಾರ್ಡುಗಳಲ್ಲಿ ವಸ್ತುವಿನ ಛಾಯಾಚಿತ್ರದೊಂದಿಗೆ ಅದರ ಹೆಸರು, ಬಳಸಿದ ಸಾಮಾಗ್ರಿ ಹಾಗೂ ಅದು ದೊರೆತ ಸ್ಥಳದ ವಿವರಗಳನ್ನು ಕಾರ್ಡಿನ ಮೇಲೆ ಬರೆದಿಡಬೇಕು. ಇದಲ್ಲದೆ ಈ ಕೆಳಗಿನ ವಿವರಗಳು ಸಹ ಅದರಲ್ಲಿರಬೇಕು.

  1. ಪ್ರಾಚ್ಯ ವಸ್ತುವಿನ ಆಕಾರ, ಉದ್ದ, ಅಗಲ, ದಪ್ಪ, ವ್ಯಾಸ, ಭಾರ ಮೊದಲಾದವುಗಳು.
  2. ಪ್ರಾಚ್ಯ ವಸ್ತುವನ್ನು ಇರಿಸಲಾಗಿರುವ ಸ್ಥಳ, ಪೆಟ್ಟಿಗೆಯ ಸಂಖ್ಯೆ, ಚೀಲದ ಸಂಖ್ಯೆ ಇತ್ಯಾದಿ.
  3. ಛಾಯಾಚಿತ್ರದ ಕ್ರಮ ಸಂಖ್ಯೆ, ಅದಕ್ಕೆ ಬಳಸಿದ ಡ್ರಾಯಿಂಗ್ ಪೇಪರ್ ಸಂಖ್ಯೆ.
  4.  ಪ್ರಾಚ್ಯವಸ್ತುವಿನ ಸರಿಯಾದ ವಿವರಣೆ.
  5. ಪ್ರತಿ ಕಾರ್ಡಿನ ಮೇಲೆ ಛಾಯಾಚಿತ್ರದ ಒಂದು ಚಿಕ್ಕ ಪ್ರತಿಯೊಂದು ಅಂಟಿಸುವುದು.

ಈ ರೀತಿಯ ಕಾರ್ಡುಗಳನ್ನು ತಯಾರಿಸುವುದರಿಂದ ಮುಂದಿನ ಅಧ್ಯಯನಕ್ಕೆ ದಾರಿ ಸುಲಭವಾಗುತ್ತದೆ ಮತ್ತು ಅಗತ್ಯಕ್ಕೆ ತಕ್ಕ ಹಾಗೆ ಕಾರ್ಡುಗಳನ್ನು ವಿಂಗಡನೆ ಮಾಡಬಹುದು. ಉದಾ: ಉತ್ಖನನದ ಸಂದರ್ಭದಲ್ಲಿ ಸಿಕ್ಕ ಆಭರಣಗಳ ಕವರುಗಳನ್ನು ಬೇರೆ ಮಾಡಿ ಅವುಗಳನ್ನು ಕಾಲಾನುಕ್ರಮದಲ್ಲಿ ವಿಂಗಡಿಸಬೇಕು. ಇದರಿಂದ ಅವುಗಳ ಅಧ್ಯಯನಕ್ಕೆ ಅನುಕೂಲವಾಗುತ್ತದೆ ಮತ್ತು ಅವುಗಳ ವಿವರಣೆಯನ್ನು ಬರೆಯುವುದಕ್ಕೂ ಸಹಾಯವಾಗುತ್ತದೆ. ಈ ಕಾರ್ಡುಗಳನ್ನು ಪ್ರತ್ಯೇಕವಾಗಿ ನಾಣ್ಯಗಳು, ಪ್ರಾಣಿಗಳು, ಆಭರಣಗಳು, ಮಣಿಗಳು, ಮಣ್ಣಿನ ಗೊಂಬೆಗಳು, ಮುದ್ರೆಗಳು, ಕಟ್ಟಡದ ಅವಶೇಷಗಳು, ಅಗ್ನಿಕುಂಡ ಮೊದಲಾದವುಗಳನ್ನು ಗುರುತಿಸಲು ತಯಾರಿಸಬೇಕು. ಇತ್ತೀಚಿಗೆ ಕಂಪ್ಯೂಟರ್ ಬಳಕೆಯಾಗುತ್ತಿರುವುದರಿಂದ ಉತ್ಖನನ ಕಾರ್ಯ ಸುಲಭವಾಗುತ್ತಿದೆ.

ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ

ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ

ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ: ಗತಕಾಲದ ಸಂಸ್ಕೃತಿಯ ಅಧ್ಯಯನ ಮತ್ತು ಉತ್ಖನನಗಳಲ್ಲಿ ಮಣ್ಣಿನ ಪಾತ್ರೆಗಳ  ಪಾತ್ರ ಹಿರಿದಾಗಿದೆ. ಭಾರತದ ಯಾವುದೇ ಮೂಲೆಗಳಲ್ಲಿ ಉತ್ಖನನ ನೆಡೆಸಿದಾಗಲೂ ಬೆಳಕಿಗೆ ಬರುವ  ಪ್ರಾಚ್ಯವಸ್ತುಗಳಲ್ಲಿ ಮಣ್ಣಿನ ಮಡಿಕೆಗಳು ಹಾಗೂ ಮಡಿಕೆಯ ಚೂರುಗಳೇ ಅಧಿಕ ಪ್ರಮಾಣದಲ್ಲಿ ಸಿಗುತ್ತವೆ. ಲೋಹಗಳ ಬಳಕೆ ಇಲ್ಲದ ಪ್ರಾಚೀನ ಕಾಲದಲ್ಲಿ ಮಣ್ಣಿನ ಪಾತ್ರೆಗಳನ್ನು ಜನರು ಹೆಚ್ಚು ಬಳಸುತ್ತಿದ್ದರು. ಇಂತಹ ಪಾತ್ರೆಗಳು ಹೆಚ್ಚಿನ ಬಾಳಿಕೆ ಬರದೆ ಬೇಗನೆ ನಾಶಹೊಂದುವ ಗುಣವನ್ನು ಹೊಂದಿರುತ್ತವೆ. ಹಾಳಾದ ಮಡಿಕೆಗಳನ್ನು ಪುನ ಉಪಯೋಗಿಸಲು ಅಸಾಧ್ಯವಾದ ಕಾರಣ ಹೊಸ ಹೊಸ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದರು. ಸಮಾಜದಲ್ಲಿ ವಾಸಿಸುತ್ತಿದ್ದ ಎಲ್ಲಾ ವರ್ಗದ ಮತ್ತು ಜನಾಂಗದವರು ಮಣ್ಣಿನ ಮಡಿಕೆಗಳನ್ನೇ ಬಳಸುತ್ತಿದ್ದುದ್ದು ಇತಿಹಾಸದಿಂದ ಅರಿವಿಗೆ ಬರುತ್ತದೆ. ಹೀಗಾಗಿ ಮಣ್ಣಿನ ಪಾತ್ರೆಗಳ ತಯಾರಿಕೆ ನಿರಂತರವಾಗಿ ನಡೆಯುತ್ತಿತ್ತು. ಆ ಕಾಲದಲ್ಲಿಯೂ ಚಿನ್ನ, ಬೆಳ್ಳಿ, ತಾಮ್ರಗಳು ಉಪಯೋಗವಿದ್ದಿತಾದರೂ ಅದರ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಹೀಗಾಗಿ ವಸತಿ ನಿವೇಶನಗಳಲ್ಲಿ ಜನ ಬೆಲೆ ಬಾಳುವ ವಸ್ತುಗಳನ್ನು ಜಾಗರೂಕತೆಯಿಂದ ಬಳಸುತ್ತಿದ್ದರು. ಉತ್ಖನನದಲ್ಲಿ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳಿಗಿಂತ ಮಣ್ಣಿನ ಪಾತ್ರೆಗಳೆ ಹೆಚ್ಚಿನ ಪ್ರಮಾಣದಲ್ಲಿ ದೊರಕಿದ್ದು, ಈ ಮಡಿಕೆಗಳು ಇತಿಹಾಸ ಅಧ್ಯಯನಕ್ಕೆ ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳೋಣ.

 1.ಪುರಾತನ ಸಂಸ್ಕೃತಿಗಳ ಅಧ್ಯಯನದಲ್ಲಿ ಮಣ್ಣಿನ ಪಾತ್ರೆಗಳ ಅವಶೇಷಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಏಕೆಂದರೆ ಅವುಗಳು ಅಂದಿನ ಜನರ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತವೆ.

 2. ಉತ್ಖನನದ ಸಮಯದಲ್ಲಿ ವಸತಿ ನಿವೇಶನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಡಿಕೆಗಳ ಅವಶೇಷಗಳು ದೊರೆಯುತ್ತವೆ. ಇದು ಆ ಪ್ರದೇಶದಲ್ಲಿನ ಜನವಸತಿಯನ್ನು ದಾಖಲಿಸುತ್ತದೆ.

 3. ಮಣ್ಣಿನ ಪಾತ್ರೆಗಳ ತಯಾರಿಕೆ, ಶೈಲಿ ಹಾಗೂ ವಿನ್ಯಾಸದ ಆಧಾರದ ಮೇಲೆ ಪುರಾತತ್ವ ಶಾಸ್ತ್ರಜ್ಞರು ಆ ನಾಗರಿಕತೆಯ ಕಾಲಮಾನವನ್ನು ಸುಲಭವಾಗಿ ಗುರುತಿಸುತ್ತಾರೆ.

 4. ಮಣ್ಣಿನ ಪಾತ್ರೆಗಳು ಒಡೆದು ಹೋದರೂ ಅವುಗಳ ಚೂರುಗಳು ಮಣ್ಣಿನಲ್ಲಿ ಕೊಳೆಯದೆ ಹಾಗೆಯೇ ಉಳಿದು ಬರುತ್ತದೆ. ಇದು ಇತಿಹಾಸ ಪುನನಿರ್ಮಾಣಕ್ಕೆ ಸಹಕಾರಿಯಾಗಿದೆ.

 ಹಲವು ಸಂಸ್ಕೃತಿಯ ಜನರು ಹಲವು ಬಗೆಯ ಮಡಿಕೆಗಳನ್ನು ಉಪಯೋಗಿಸುತ್ತಿದ್ದರು ಎಂಬುದಕ್ಕೆ ಉತ್ಖನನ ಕಾಲದಲ್ಲಿ ಸಿಕ್ಕ ವಿವಿಧ ರೀತಿಯ ಮಡಿಕೆಗಳೆ ಕಾರಣಗಳಾಗಿವೆ. ಉದಾ: ಸಿಂಧೂ ನದಿ ನಾಗರಿಕತೆಯ ಜನರು ಕೆಂಪುವರ್ಣದ ಮಡಿಕೆಗಳನ್ನು ಉಪಯೋಗಿಸುತ್ತಿದ್ದರು ಮತ್ತು ಅವುಗಳ ಮೇಲೆ ಕಪ್ಪು ಬಣ್ಣದ ವರ್ಣ ಚಿತ್ರಗಳಿಂದ ಬರೆಯುತ್ತಿದ್ದರೆಂದು ಇತಿಹಾಸದ ಅಧ್ಯಯನದಿಂದ ತಿಳಿದಿದೆ. ಗಂಗಾನದಿಯ ಬಯಲಿನ ಕಬ್ಬಿಣ ಯುಗದ ಸಂಸ್ಕೃತಿಯ ಜನರು ವಿಶಿಷ್ಟ ರೀತಿಯ ಬೂದು ಬಣ್ಣದ ಮಡಿಕೆಗಳನ್ನು ಬಳಕೆ ಮಾಡುತ್ತಿದ್ದರು. ದಕ್ಷಿಣ ಭಾರತದ ಬೃಹತ್ ಶಿಲಾ ಸಮಾಧಿ ಸಂಸ್ಕೃತಿಯ ಜನರು ಕಪ್ಪು ಹಾಗೂ ಕೆಂಪು ಬಣ್ಣದ ಎರಡೂ ವಿವಿಧ ಮಡಿಕೆಗಳನ್ನು ಬಳಕೆ ಮಾಡುತ್ತಿದ್ದರು. ತಾಮ್ರ ಶಿಲಾಯುಗಕ್ಕೆ ಸೇರಿದ ಆಹಾರ್‌, ಕಾಯಥ, ಮಾಳವ ಹಾಗೂ ಜೋರ್ವೆ ಸಂಸ್ಕೃತಿಯ ಜನರು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಮಡಿಕೆಗಳನ್ನು ಬಳಸಿದ ಉದಾಹರಣೆಗಳು ಇವೆ. ಮಡಿಕೆಗಳ ಆಧಾರವನ್ನು ಇಟ್ಟುಕೊಂಡು ಆಯಾ ಕಾಲದ ಶಿಲಾಯುಗದ ಜನರನ್ನು ಗುರುತಿಸಬಹುದಾಗಿದೆ. ದಕ್ಷಿಣ ಭಾರತದ ಆರಂಭ ಕಾಲದ ಅನೇಕ ಸ್ಥಳಗಳಲ್ಲಿ ದೊರಕಿದ ಸ್ಥಳೀಯ ಮಡಿಕೆಗಳೊಂದಿಗೆ ರೋಮನ್ನರ ಕಾಲದಲ್ಲಿ ಆಮದಾಗುತ್ತಿದ್ದ ರೌಲೆಟ್‌ ಚಿತ್ರದ ಮಡಿಕೆಗಳು, ಸರಾಯಿ ಕುಂಭಗಳು ದೊರಕಿದ್ದು ರೋಮನ್ನರೊಂದಿಗಿನ ಭಾರತದ ಸಂಬಂಧವನ್ನು ಪುಷ್ಟೀಕರಿಸುತ್ತದೆ. ಸಿಕ್ಕ ಮಡಿಕೆಯ ಲಕ್ಷಣಗಳು ಶಿಲಾಯುಗ ಸಂಸ್ಕೃತಿಯ ಏರಿಳಿತಗಳನ್ನು ಸೂಚಿಸುತ್ತವೆ.

 ತಾಮ್ರಶಿಲಾಯುಗದ ಜೋರ್ವೆ ಸಂಸ್ಕೃತಿಯ ಕಾಲದ ಮಡಿಕೆಗಳು ಒಳ್ಳೆಯ ಗುಣಮಟ್ಟದವುಗಳಾಗಿದ್ದು ಅದೇ ಸಂಸ್ಕೃತಿ ಅವನತಿ ಹೊಂದುವ ವೇಳೆಯಲ್ಲಿ ತಯಾರಿಸಿದ ಮಡಿಕೆಗಳು ಕೆಳಮಟ್ಟದವುಗಳಾಗಿದ್ದವು. ಪ್ರಾಚೀನರು ತಾವು ತಯಾರಿಸಿದ ಮಡಿಕೆಗಳ ಮೇಲೆ ವಿವಿಧ ಚಿತ್ರಗಳು, ಲಿಪಿಗಳು ಹಾಗೂ ಸಂಕೇತಗಳನ್ನು ಬರೆದಿದ್ದಾರೆ. ಹೀಗಾಗಿ ಅವುಗಳ ಆಧಾರದ ಮೇಲೆ ಅವರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಗುಣಲಕ್ಷಣಗಳನ್ನು ತಿಳಿಯಬಹುದಾಗಿದೆ.

 ಇನಾಮಗಾಂವ್ ಎಂಬಲ್ಲಿ ದೊರಕಿದ ಮಡಿಕೆಗಳ ಮೇಲೆ ಎತ್ತುಗಳು ಹಾಗೂ ಎತ್ತಿನ ಬಂಡಿಯ ಚಿತ್ರವಿರುವುದು ಒಂದು ವಿಶೇಷವಾಗಿದೆ.  ಹಾಗೆಯೇ ಕಾಲಿಬಂಗನ್‌ನಲ್ಲಿ ಸಿಕ್ಕ ಮಡಿಕೆಯ ಚೂರೊಂದರ ಮೇಲೆ ಸಿಂಧೂ ಜನರ ಲಿಪಿಯನ್ನು ಕಾಣಬಹುದಾಗಿದೆ. ಹಾಗಾಗಿ ಮಡಿಕೆಗಳು ʻʻಪುರಾತತ್ವ ಶಾಸ್ತ್ರದ ಅಕ್ಷರಮಾಲೆʼʼ ಎಂದು ಹೆಸರಾಗಿವೆ.

ಮಡಿಕೆಗಳ ವಿಂಗಡಣೆಗೆ ಅಂಕಣ:  ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ದೊರೆಯಬಹುದಾದ ಪ್ರಾಚ್ಯ ವಸ್ತುಗಳಲ್ಲಿ ಮಡಿಕೆಗಳ ಅವಶೇಷಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಹಾಗಾಗಿ ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಬೇಕಾಗುತ್ತದೆ. ಮತ್ತು ಮಡಿಕೆಗಳನ್ನು ಅಷ್ಟೇ ಜಾಗರೂಕವಾಗಿ ವಿಂಗಡನೆ ಮಾಡಬೇಕಾಗುತ್ತದೆ. ಉತ್ಖನನದಲ್ಲಿ ಅಪಾರ ಪ್ರಮಾಣದಲ್ಲಿ ಮಡಿಕೆ ಚೂರುಗಳು ಸಿಗುವುದರಿಂದ ಅವುಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಬೇಕು. ನಂತರ ಉತ್ಖನನ ನಡೆಯುವ ಗುಂಡಿಗಳ ಪಕ್ಕದಲ್ಲಿಯೇ ಮಡಿಕೆಗಳನ್ನು ವಿಂಗಡಿಸಲು ʻʻಅಂಕಣʼʼ ಎಂಬ ಪ್ರತ್ಯೇಕ ಸ್ಥಳವನ್ನು ಸ್ಥಾಪಿಸಬೇಕು. ಈ ಅಂಕಣದಲ್ಲಿ ಚೌಕಾಕಾರದ ಪೆಟ್ಟಿಗೆಗಳಂತಹ ವ್ಯವಸ್ಥಿತವಾದ ಜಾಲಂದರ ವಿನ್ಯಾಸವನ್ನು ಮಾಡಲಾಗುವುದು. ಪ್ರತಿಯೊಂದು ಗುಂಡಿಯಲ್ಲಿನ ವಿನ್ಯಾಸದ ಚೌಕುಗಳು ಉತ್ಖನನ ಗುಂಡಿಯ ಚೌಕಗಳಷ್ಟು ಇರಬೇಕೆಂದೇನಿಲ್ಲ. ಮಡಿಕೆ ಚೂರುಗಳನ್ನು ಗುಂಪು ಗುಂಪಾಗಿ ಹಾಕಲು ಸಾಧ್ಯವಾಗುವಷ್ಟು ಇದ್ದರೆ ಸಾಕು. ಉತ್ಖನನದಲ್ಲಿ ಸಿಕ್ಕ ಮಡಿಕೆಗಳ ಅವಶೇಷಗಳನ್ನು ಅವುಗಳ ವಿವರಗಳೊಂದಿಗಿನ ಪಟ್ಟಿಯೊಂದಿಗೆ ಮಡಿಕೆಯ ಅಂಕಣಕ್ಕೆ ಕಳುಹಿಸಿಕೊಡಲಾಗುತ್ತದೆ. ನೆಲೆಯ ಹೆಸರು, ಮಡಿಕೆಗಳ ಸಂಖ್ಯೆ, ಸ್ತರದ ಸಂಖ್ಯೆ ಆಳ, ಉತ್ಖನನ ಗುಂಡಿಯ ಮೇಲ್ವಿಚಾರಕನ ಹೆಸರು ಮುಂತಾದ ವಿವರಗಳನ್ನು ಆ ಪಟ್ಟಿಯು ಒಳಗೊಂಡಿರಬೇಕು.

 ಮಡಿಕೆಗಳ ಅಂಕಣದ ಮೇಲ್ವಿಚಾರಕ ಈ ಮೇಲಿನ ವಿವರಗಳಿಗನುಗುಣವಾಗಿ ಅಂಕಣಕ್ಕೆ ತರಲಾದ ಮಡಿಕೆಗಳ ಅವಶೇಷಗಳನ್ನು ವಿಂಗಡಿಸಿ ಗೊತ್ತುಪಡಿಸಿದ ಚೌಕಗಳಲ್ಲಿ ಇರಿಸುತ್ತಾನೆ. ತದನಂತರ ತಂದ ಮಡಿಕೆ ಚೂರುಗಳ ಒಂದೊಂದೇ ಗುಂಪುಗಳನ್ನು ತಿಳಿನೀರಿನಿಂದ ತೊಳೆಯಬೇಕು. ಇದರಿಂದ ಮಡಿಕೆಗಳಿಗೆ ಅಂಟಿದ ಧೂಳು, ಮಣ್ಣು ಬಿಡುತ್ತದೆ. ಆಗ ಮಡಿಕೆಗಳ ಮೂಲ ಬಣ್ಣ ಹಾಗೂ ಅದರ ಮೇಲಿನ ಚಿತ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಹೀಗೆ ನೀರಿನಿಂದ ತೊಳೆದ ಮಡಿಕೆಗಳು ಒಣಗಿದ ನಂತರ ಮಡಿಕೆ ಚೂರಿನ ಒಳಭಾಗದಲ್ಲಿ ಅದರ ಗುರುತಿಗಾಗಿ ವಿವರಗಳನ್ನು ಬರೆಯಲಾಗುತ್ತದೆ. ವಿವರಗಳಲ್ಲಿ ಸ್ಥಳದ ಹೆಸರು, ಗುಂಡಿ ಅಥವಾ ಚೌಕದ ಹೆಸರು, ಸ್ತರ ಸಂಖ್ಯೆ ಮೊದಲಾದವುಗಳನ್ನು ಅಳಿಸಿ ಹೋಗದ ಹಾಗೆ ಭಾರತೀಯ ನೀಲಿ ಶಾಹಿಯಿಂದ ಬರೆಯಬೇಕು. ಇದರಿಂದ ಮುಂದಿನ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಒಂದು ವೇಳೆ ಮಡಿಕೆ ಚೂರುಗಳು ಅದಲು ಬದಲಾದರೂ ಸುಲಭವಾಗಿ ಗುರುತಿಸಬಹುದು ಇದಾದ ನಂತರ ಆಯಾ ಉತ್ಖನನ ಗುಂಡಿಯ ಅಥವಾ ಸ್ತರಗಳಿಗೆ ಅನುಸಾರವಾಗಿ ಮಡಿಕೆಗಳನ್ನು ಬೇರೆ ಬೇರೆ ಚೀಲಗಳಲ್ಲಿ ತುಂಬಲಾಗುವುದು. ಪ್ರತಿ ಚೀಲದ ಮೇಲೆ ಮಡಿಕೆಗಳ ವಿವರಗಳ ಪಟ್ಟಿ ಒಂದನ್ನು ಅಂಟಿಸಬೇಕು.

ಮಡಿಕೆಗಳ ವಿಂಗಡನೆ, ಜೋಡಣೆ ಹಾಗೂ ಪ್ರಾಥಮಿಕ ಅಧ್ಯಯನ ಮುಂತಾದ ಕೆಲಸಗಳು ಮುಕ್ತಾಯಗೊಂಡ ನಂತರ ಮಡಿಕೆ ಚೀಲಗಳನ್ನು ಲೋಹದ ಅಥವಾ ಮರದ ಪೆಟ್ಟಿಗೆಗಳಲ್ಲಿ ಇಟ್ಟು ಅವುಗಳಿಗೆ ಹಾನಿಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮುಂದಿನ ಅಧ್ಯಯನಕ್ಕಾಗಿ ಉತ್ಖನನಕಾರರ ಅಧ್ಯಯನದ ಕೊಠಡಿಗೆ ಸಾಗಿಸಲಾಗುತ್ತದೆ.

 ಮಡಿಕೆಗಳ ವರ್ಗೀಕರಣ:  ಉತ್ಖನನದ ಸಮಯದಲ್ಲಿ ಸಿಕ್ಕ ಮಡಿಕೆಗಳನ್ನು ವಿವಿಧ ದೃಷ್ಟಿಕೋನಗಳಿಂದ ವರ್ಗಿಕರಣ ಮಾಡಿ ವಿಮರ್ಶೆಗೆ ಒಳಪಡಿಸುವ ಕಾರ್ಯವನ್ನು ಉತ್ಖನನ ನಿರ್ದೇಶಕರು ಮಾಡಬೇಕಾಗುತ್ತದೆ. ಹೀಗೆ ವರ್ಗೀಕರಣವನ್ನು ಮಾಡಿದ ನಂತರ ಮಡಿಕೆಗಳನ್ನು ತಯಾರಿಸಿದ ರೀತಿ, ಅವುಗಳ ಆಕೃತಿ, ಬಣ್ಣ, ವಿನ್ಯಾಸ, ಮಡಿಕೆಗೆ ಬಳಸಿದ ಮಣ್ಣಿನ ವಿಧ, ಅದರ ಮೇಲೆ ಬರೆದಿರುವ ಚಿತ್ರಗಳ ಲಕ್ಷಣ ಮೊದಲಾದವುಗಳನ್ನು ಅಧ್ಯಯನ ಮಾಡಲಾಗುತ್ತದೆ. ಉದಾ: ಪಾತ್ರೆಯ ಆಕಾರವನ್ನು ಆಧರಿಸಿ ಒಂದು ಸಂಸ್ಕೃತಿಯ ಮಡಿಕೆಗಳನ್ನು ತಟ್ಟೆ, ಕುಂಭ, ಹೂಜಿ, ಥಾಲಿ, ಲೋಟ, ದುಂಡಾದ ಪಾತ್ರೆ ಹಾಗೂ ಮುಚ್ಚಳ ಎಂಬ ವಿಧಗಳನ್ನಾಗಿ ವಿಂಗಡಿಸಬಹುದು. ಜೊತೆಗೆ ಕೆಂಪು ಮಡಿಕೆ, ಕಪ್ಪು ಮಡಿಕೆ, ಬೂದು ಮಡಿಕೆ, ಕೆಂಪು ಮತ್ತು ಕಪ್ಪು ಮಡಿಕೆ ಹಾಗೂ ಹೊಳಪಾದ ಮಡಿಕೆ ಎಂಬುದಾಗಿ ಬಣ್ಣಗಳ ಆಧಾರದ ಮೇಲೆ ವರ್ಗೀಕರಿಸಬಹುದು. ಈ ವರ್ಗೀಕರಣವು ಆ ಕಾಲದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬಹಳ ಉಪಯುಕ್ತವಾಗಿದೆ.

 ಮಡಿಕೆಗಳನ್ನು ಚಿತ್ರಿಸುವ ವಿಧಾನ:  ಉತ್ಖನನದ ವರದಿಯಲ್ಲಿ ಮಡಿಕೆಯ ಚಿತ್ರವನ್ನು ವಿಶಿಷ್ಟವಾದ ರೀತಿಯಲ್ಲಿ ಬರೆಯಲಾಗುತ್ತದೆ. ಮಡಿಕೆಯ ಎಡ ಭಾಗದ ಅರ್ಧಭಾಗವು ಮಡಿಕೆಯ ದಪ್ಪವನ್ನು ಹಾಗೂ ಒಳಗಿನ ಮೈಯನ್ನು ಸೂಚಿಸುತ್ತದೆ. ಉಳಿದ ಅರ್ಧ ಭಾಗವು ಹೊರ ಮೈಯನ್ನು ಸೂಚಿಸುತ್ತದೆ. ಒಂದು ಮಡಿಕೆಯ ಚಿತ್ರವನ್ನು ಬರೆಯುವಾಗ ಮೊದಲು ಅದರ ಬಾಯಿಯ ಅಗಲವನ್ನು ಕಂಡುಹಿಡಿಯಬೇಕು. ವಿವಿಧ ತ್ರಿಜ್ಯಗಳಿಗೆ ಅನುಸಾರವಾಗಿ ಬರೆದ ಒಂದು ಕೇಂದ್ರೀಕೃತ ವೃತ್ತದ ಮೇಲೆ ಮಡಿಕೆಯ ಬಾಯಿಯನ್ನು ಇಟ್ಟು ಅದರ ಸರಿಯಾದ ಸುತ್ತಳತೆಯನ್ನು ಕಂಡುಕೊಳ್ಳಬಹುದು. ಮಡಿಕೆಯ ಬಾಯಿಯು ಯಾವ ವೃತ್ತಕ್ಕೆ ಸರಿ ಹೊಂದುತ್ತದೆಯೋ ಆ ವೃತ್ತದ ಅಗಲವೇ ಮಡಿಕೆಯ ಬಾಯಿಯ ವ್ಯಾಸವಾಗಿರುತ್ತದೆ. ಈಗ ಎಡಅರ್ಧ ಭಾಗದ ಮಡಿಕೆ ದಪ್ಪವನ್ನು ಹಾಗೂ ಬಲ ಅರ್ಧಭಾಗದಲ್ಲಿ ಹೊರಮೈಯ ರೂಪರೇಷೆಗಳನ್ನು ಸ್ಕೇಲಿಗೆ ತಕ್ಕ ಹಾಗೆ  ಬರೆಯಬೇಕು.

ದಾಖಲೆಯ ವಿಧಾನಗಳು

ದಾಖಲೆಯ ವಿಧಾನಗಳು

ಶಿಲಾಯುಗದ ಮಾನವನ ಸಂಸ್ಕೃತಿಯ ಪುನರಚನೆಗೆ ಆಕರಗಳಾಗಿರುವ ಮೂಲ ಸಾಮಗ್ರಿಗಳನ್ನು ಸಮಗ್ರವಾಗಿ ಹಿಡಿದಿಟ್ಟುಕೊಳ್ಳುವುದು ಪುರಾತತ್ವ ಉತ್ಖನನದ ಬಹುಮುಖ್ಯವಾದ ಗುರಿಯಾಗಿದೆ. ಒಂದು ಪ್ರದೇಶದಲ್ಲಿ ಉತ್ಖನನ ಮಾಡಿದಾಗ ಆ ಪ್ರದೇಶದಲ್ಲಿ ಹೂತು ಹೋಗಿರುವ ಸಾಂದರ್ಭಿಕ ಪುರಾವೆಗಳು ನಾಶವಾಗುತ್ತವೆ. ಹಾಗಾಗಿ ಉತ್ಖನನದ ಕೊನೆಯಲ್ಲಿ ಟಿಪ್ಪಣಿಗಳು, ಚಿತ್ರಗಳು, ಛಾಯಾಚಿತ್ರಗಳು ಹಾಗೂ ಪ್ರಾಚ್ಯವಸ್ತುಗಳು ಮೊದಲಾದ ದಾಖಲೆಗಳು ಮಾತ್ರ ಉಳಿದುಕೊಳ್ಳುತ್ತವೆ. ಈ ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ಕಳೆದು ಹೋದರೆ ಅದು ಎಂದೆಂದಿಗೂ ಮರಳಿ ದೊರಕುವುದಿಲ್ಲ. ಉತ್ಖನನವು ಎಷ್ಟೇ ಪ್ರಾಮಾಣಿಕವಾಗಿ ನಡೆದರೂ ಅದರಿಂದ ದೊರಕಿದ ದಾಖಲೆಗಳು ಸಂಪೂರ್ಣವಾಗಿ ಸಂರಕ್ಷಣೆ ಆಗದೆ ಹೋದರೆ ಅಥವಾ ಬರವಣಿಗೆಯ ರೂಪದಲ್ಲಿ ಪ್ರಕಟವಾಗದೆ ಉಳಿದರೆ ಅದರಿಂದ ಕೇವಲ ಹಣ ಮತ್ತು ಕಾಲದ ಅಪವ್ಯಯವಾದಂತೆ ಸರಿ. ಈ ಕಾರಣದಿಂದ ಉತ್ಖನನದಿಂದ ರಕ್ಷಿಸಲ್ಪಡುವ ದಾಖಲೆಗಳೇ ಉತ್ಖನನಕಾರನಿಗೆ ನಿಜವಾದ ಅಳತೆಗೋಲಾಗಿದೆ.

ಉತ್ಖನನ ಪ್ರದೇಶದ ಸರಿಯಾದ ಜಾಗವನ್ನು ಗುರುತಿಸುವ ನಕ್ಷೆ, ಸ್ಥಳದ ಮೇಲ್ಮೈಯ ಏರುತಗ್ಗುಗಳಿರುವ ಪ್ರದೇಶದ ನಕ್ಷೆ, ಉತ್ಖನನದ ಗುಂಡಿಯನ್ನು ಸರಿಯಾಗಿ ಸೂಚಿಸುವ ನಕ್ಷೆ, ಸ್ಥಳದ ಕಾಲಾನುಕ್ರಮವನ್ನು ಸೂಚಿಸುವ ಲಂಬ ಛೇದದ ಚಿತ್ರಗಳು, ಪ್ರಾಚ್ಯವಸ್ತುಗಳ ಛಾಯಾಚಿತ್ರಗಳು, ಮೊದಲಾದ ದಾಖಲೆಗಳನ್ನು ಇಡುವುದರ ಜೊತೆಗೆ ದಿನನಿತ್ಯದ ಉತ್ಖನನದ ಪ್ರಗತಿಯನ್ನು ಸೂಚಿಸುವ ಟಿಪ್ಪಣಿ ಪುಸ್ತಕಗಳು, ಪ್ರಾಚ್ಯ ವಸ್ತುಗಳ ನೋಂದಣಿ ಬುಕ್ಕುಗಳು ಮೊದಲಾದ ಲಿಖಿತ ದಾಖಲೆಗಳನ್ನು ಸಹ ಇಡಬೇಕು. ಇದು ಉತ್ಖನನಕಾರನ ಪ್ರಮುಖ ಕರ್ತವ್ಯವಾಗಿದೆ. ಉತ್ಖನನದ ದಾಖಲೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆ ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು. ಯಾವ ದಾಖಲೆಗಳು ಬಹು ಮುಖ್ಯವಾಗಿವೆ ಎಂಬುದನ್ನು ಉತ್ಖನನದ ಮೊದಲು ವ್ಯವಸ್ಥಿತವಾಗಿ ಸಂಗ್ರಹ ಮಾಡಿಕೊಳ್ಳಬೇಕು. ದಾಖಲೆಗಳನ್ನು ಸಂಗ್ರಹಿಸುವಾಗ ಬೇರೆ ಬೇರೆ ಹಂತಗಳಲ್ಲಿ ಈ ಕೆಳಕಂಡ ದಾಖಲೆಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

  1. ಸರ್ವೇಕ್ಷಣೆ ದಾಖಲೆಯ ವಿಧಾನ
  2. ಸ್ತರವಿಂಗಡಣೆಯ ದಾಖಲೆಯ ವಿಧಾನ
  3. ಉತ್ಖನನದ ಪ್ರಗತಿಯನ್ನು ತೋರಿಸುವ ಟಿಪ್ಪಣಿ ಪುಸ್ತಕದ ದಾಖಲೆ 
  4. ಆಯಾಮತ್ರಯ ಹಾಗೂ ತ್ರಿಕೋಣೀಕರಣ ವಿಧಾನ   
  5. ಪ್ರಾಚ್ಯವಸ್ತುವನ್ನಿಡುವ ಪೆಟ್ಟಿಗೆಗಳ ದಾಖಲೆಯ ವಿಧಾನ 
  6. ಪ್ರಾಚ್ಯ ವಸ್ತುಗಳ ನೊಂದಣಿ ದಾಖಲಾತಿ ವಿಧಾನ 
  7. ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ   
  8. ಛಾಯಾಚಿತ್ರ ದಾಖಲಾತಿ ವಿಧಾನ 

1. ಸರ್ವೇಕ್ಷಣೆ ದಾಖಲೆಯ ವಿಧಾನ: ಸರ್ವೇಕ್ಷಣೆ ಮಾಡುವವರು ಯಾವುದಾದರೂ ಒಂದು ಪ್ರಾಚ್ಯವಸ್ತು ಸ್ಥಳವನ್ನು ಉತ್ಖನನಕ್ಕೆ ಆಯ್ಕೆ ಮಾಡಿಕೊಂಡರೆ ಆ ಸ್ಥಳವು ಎಲ್ಲಿದೆ ಎಂಬುದನ್ನು ಸೂಚಿಸುವ ನಕ್ಷೆಯನ್ನು ತಯಾರಿಸಿಕೊಳ್ಳಬೇಕು. ಹೀಗೆ ನಕ್ಷೆಯನ್ನು ತಯಾರಿಸಿದ ನಂತರ ಅದರ ಹತ್ತಿರ ಅಥವಾ ಸುತ್ತಮುತ್ತ ಯಾವುದಾದರೂ ಗ್ರಾಮ, ಪಟ್ಟಣ, ಗುಡ್ಡ, ಗಿರಿ, ಗುಹೆ, ಹಳ್ಳ, ಕೊಳ್ಳ ಹಾಗೂ ಕೆರೆ ಮುಂತಾದ ಭೂ ಲಕ್ಷಣಗಳು ಇದ್ದರೆ ಅವುಗಳನ್ನು ನಕ್ಷೆಯಲ್ಲಿ ಸ್ಪಷ್ಟವಾಗಿ ತೋರಿಸಬೇಕು. ಈ ರೀತಿಯ ನಕ್ಷೆಯನ್ನು ತಯಾರಿಸುವಲ್ಲಿ 1 ಇಂಚು = 4 ಮೈಲಿ ಸುತ್ತಳತೆಯ ಸ್ಕೇಲ್‌ನ ಫೋಟೋ ಶೀಟುಗಳು ಬಹಳ ಉಪಯೋಗವಾಗುತ್ತವೆ. ಉತ್ಖನನದ ಸ್ಥಳವನ್ನು ನಿಖರವಾಗಿ ಗುರುತಿಸುವುದಕ್ಕೆ ನಕ್ಷೆಯಲ್ಲಿ ರೇಖಾಂಶ ಹಾಗೂ ಅಕ್ಷಾಂಶಗಳನ್ನು ಗುರುತಿಸಬೇಕು. ಉತ್ಖನನದ ಸ್ಥಳವು ಕೋಟೆಯ ಒಳಗಡೆ ಇದ್ದರೆ ಕೋಟೆಯ ಗೋಡೆಗಳು ಹಾಗೂ ಕಂದಕಗಳು ಮುಂತಾದ ಎಲ್ಲಾ ಲಕ್ಷಣಗಳನ್ನು ಜೊತೆಗೆ ಉತ್ಖನನದ ಗುಂಡಿಗಳನ್ನು ಸಹ ನಕ್ಷೆಯಲ್ಲಿ ತೋರಿಸಬೇಕು. ಹೀಗೆ ಮಾಡುವುದರಿಂದ ಮುಂದಿನ ಉತ್ಖನನಕಾರರಿಗೆ ಹೆಚ್ಚಿನ ಅನುಕೂಲತೆಗಳಾಗುತ್ತವೆ. ನಕ್ಷೆ ತಯಾರಿಸಲು ʻʻಸಮತಲ ಮೇಜನ್ನುʼʼ ಬಳಸಬೇಕು. ಇದರೊಂದಿಗೆ ಅಳತೆಮಾಡಲು ಚೈನನ್ನು ಬಳಸುವುದು ಮತ್ತು ಲೆವೆಲಿಂಗ್‌ ಎಂಬ ಉಪಕರಣಗಳನ್ನು ಬಳಸಬೇಕು.

ಪುರಾತತ್ವ ನೆಲೆಗಳನ್ನು ಗುರುತಿಸಲು ಸರಳ ಸರ್ವೇಕ್ಷಣ ಸಾಕಾಗುತ್ತದೆ. ಇದಕ್ಕಿಂತ ಮೊದಲು ಒಂದು ಮೂಲ ಸೂತ್ರ ರೇಖೆಯ ಸಹಾಯದಿಂದ ಸ್ಥಳದ ಬಿಂದುವನ್ನು ಕಂಡುಹಿಡಿಯಲು ಸರ್ವೇ ಕಂಬಗಳನ್ನು ಒಂದೇ ಸಾಲಿನಲ್ಲಿ ಬರುವಂತೆ ನೆಡಬೇಕು. ನಂತರ ಸರ್ವೆ ಕಂಬಗಳನ್ನು ನೆಟ್ಟ ಸ್ಥಳದಲ್ಲಿ ಸುಮಾರು 5 x 5 ಸೆಂಟಿ ಮೀಟರ್  ಅಳತೆಯ ನೆತ್ತಿಯಲ್ಲಿ ಮೊಳೆಯನ್ನು ಹೊಡೆದ ಗೂಟವನ್ನು ನೆಡಬೇಕು. ಈಗ ಗೂಟದ ಮೇಲೆ ಸರಿಯಾದ ಮೂಲ ನೆಲೆಯ ನಿರ್ದಿಷ್ಟ ಬಿಂದುವಿನಿಂದ ಇರುವ ದೂರವನ್ನು ದಾಖಲಿಸಬೇಕು. ಅಗತ್ಯ ಬಿದ್ದರೆ ಮಧ್ಯದಲ್ಲಿ ತಾತ್ಕಾಲಿಕ ಗೂಟಗಳನ್ನು ನೆಡಬೇಕು.

ಉತ್ಖನನದ ನಂತರ ಕಂಡುಹಿಡಿದ ಕಟ್ಟಡ ಮುಂತಾದವುಗಳ ತಳವಿನ್ಯಾಸದ ಚಿತ್ರವನ್ನು ರಚಿಸಲು ಸಮತಟ್ಟಾದ ಮೇಜು ಹಾಗೂ ಅಲಿಡೇಡ್‌ ಎಂಬ ಉಪಕರಣಗಳು ಬೇಕು. ಸಮತಟ್ಟಾದ ಮೇಜಿನ ಮೇಲೆ ಕೂಡಿಸಿದ ಡ್ರಾಯಿಂಗ್ ಫಲಕವನ್ನು ನೆಲೆಯಲ್ಲಿ ಮೂಲ ಸೂತ್ರ ರೇಖೆಯಲ್ಲಿಯ ನಿರ್ದಿಷ್ಟ ಮೂಲ ಬಿಂದುವನ್ನು ಸೂಚಿಸುವ ಗೂಟದ ಮೇಲೆ ಬರುವಂತೆ ಇಡಬೇಕು. ನಂತರ ಡ್ರಾಯಿಂಗ್ ಫಲಕಕ್ಕೆ ಡ್ರಾಯಿಂಗ್ ಹಾಳೆಯನ್ನು ಹಚ್ಚಿ ಮೂಲಗೂಟ ಇರುವ ಸ್ಥಳವನ್ನು ನಿಖರವಾಗಿ ಗುರುತಿಸಲಾಗುತ್ತದೆ. ನಂತರ ಅಲಿಡೇಡನ್ನು ಉಪಯೋಗಿಸಿ ಆ ಬಿಂದುವಿನಿಂದ ಸೂತ್ರ ರೇಖೆಗೆ ಸರಿಹೊಂದುವ ಹಾಗೆ ಸರಳ ರೇಖೆಯನ್ನು ಎಳೆಯಬೇಕು. ಈಗ ಸಮತಲ ಮೇಜನ್ನು ಕದಲಿಸದೆ ನೆಲೆಯಲ್ಲಿಯೇ ಯಾವ ಬಿಂದುವನ್ನು ಹಾಳೆಯ ಮೇಲೆ ಗುರುತಿಸಲಾಗಿದೆಯೋ ಆ ಬಿಂದು ಅಲಿಡೇಡದ ಅಂಚು ಹಾಗೂ ಮೂಲಬಿಂದು ಇವು ಸರಳ ರೇಖೆಯಲ್ಲಿ ಬರುವಂತೆ ಮಾಡಲಾಗುತ್ತದೆ.

ಪ್ಲೇನ್ ಟೇಬಲ್ ಸರ್ವೇ ವಿಧಾನದಲ್ಲಿ ಕ್ಷೇತ್ರದ ಅವಲೋಕನ ಮತ್ತು ನಕ್ಷೆ ಬರವಣಿಗೆ ಒಂದೇ ಸಮಯದಲ್ಲಿ ನಡೆಯುತ್ತದೆ. ಪ್ಲೇನ್ ಟೇಬಲ್ ಅನ್ನು ಟ್ರೈಪಾಡ್ ಮೇಲೆ ಅಳವಡಿಸಿ, ಸಮತಟ್ಟಾಗಿ ಮಾಡಿ, ಕೇಂದ್ರಿಕರಣ ಮತ್ತು ದಿಕ್ಕು ಹೊಂದಿಕೆ ಮಾಡಲಾಗುತ್ತದೆ. ಅಲಿಡೇಡ್ ಉಪಯೋಗಿಸಿ ವಸ್ತುಗಳನ್ನು ದೃಷ್ಟಿಸಿ, ಅವುಗಳ ದಿಕ್ಕಿನಲ್ಲಿ ರೇಖೆಗಳನ್ನು ಎಳೆಯಲಾಗುತ್ತದೆ. ಅಂತರಗಳನ್ನು ಅಳೆಯುವ ಮೂಲಕ ನಕ್ಷೆಯಲ್ಲಿ ಗುರುತಿಸಲಾಗುತ್ತದೆ. ಈ ವಿಧಾನವನ್ನು ಪುರಾತತ್ವ ಉತ್ಖನನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

 ಮಟ್ಟ ಸರ್ವೇಕ್ಷಣೆ:  ಭೂಮಿಯ ಮೇಲ್ಮೈಯಲ್ಲಿರುವ ವಿವಿಧ ಬಿಂದುಗಳ ನಡುವಿನ ಎತ್ತರ ಹಾಗೂ ಆಳದ ವ್ಯತ್ಯಾಸವನ್ನು ಅಳೆಯುವ ಪ್ರಕ್ರಿಯೆಗೆ ʻʻಮಟ್ಟ ಸರ್ವೇಕ್ಷಣೆʼʼ ಎಂದು ಹೆಸರು.

 ಒಂದು ನಿರ್ದಿಷ್ಟ ಬಿಂದುವಿಗೆ ಹೋಲಿಸಿದರೆ ಉಳಿದ ಸ್ಥಳಗಳು ಎಷ್ಟು ಎತ್ತರದಲ್ಲಿವೆ ಅಥವಾ ಎಷ್ಟು ಆಳದಲ್ಲಿವೆ ಎಂದು ತಿಳಿಯುವುದು ಈ ಸರ್ವೇಕ್ಷಣೆಯ ಮೂಲ ಗುರಿಯಾಗಿದೆ. ಮಟ್ಟ ಸರ್ವೇಕ್ಷಣೆಯಲ್ಲಿ ʻಡಂಪಿ ಲೆವೆಲ್ʼ ಎಂಬ ಉಪಕರಣವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ದೂರದರ್ಶಕದಂತಹ ರಚನೆಯನ್ನು ಹೊಂದಿದ್ದು ಸಮತಟ್ಟಾದ ರೇಖೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಸರ್ವೇಕ್ಷಣಾ ಉಪಕರಣವನ್ನು ಒಂದು ಸಮತಟ್ಟಾದ ಜಾಗದಲ್ಲಿ ನಿಲ್ಲಿಸಲಾಗುತ್ತದೆ. ಅದನ್ನು ದೂರದರ್ಶಕದ ಮೂಲಕ ನೋಡಿ ವಿವಿಧ ಬಿಂದುಗಳಲ್ಲಿ ಹಿಡಿದಿರುವ ಸ್ಕೇಲ್ ಅಥವಾ ಲೆವೆಲ್ಲಿಂಗ್ ಸ್ಟ್ಯಾಂಪ್‌ನ ರೀಡಿಂಗ್‌ಗಳನ್ನು ಪಡೆದುಕೊಳ್ಳಲಾಗುತ್ತದೆ. ಈ ರೀಡಿಂಗ್‌ಗಳ ಆಧಾರದ ಮೇಲೆ ಆ ಪ್ರದೇಶದ ಏರಿಳಿತವನ್ನು ಲೆಕ್ಕ ಹಾಕಲಾಗುತ್ತದೆ.

ರಸ್ತೆ, ರೈಲು, ಹಳಿ ಮತ್ತು ಕಾಲುವೆಗಳನ್ನು ನಿರ್ಮಿಸುವಾಗ ಸರಿಯಾದ ಇಳಿಜಾರನ್ನು ನೀಡಲು ಇದನ್ನು ಬಳಸಲಾಗುತ್ತದೆ. ಕಟ್ಟಡದ ಪಾಯವನ್ನು ಒಂದೇ ಮಟ್ಟದಲ್ಲಿ ಹಾಕಲು ಹಾಗೂ ನೀರು ಹರಿವ ದಾರಿಗಳನ್ನು ವಿನ್ಯಾಸಗೊಳಿಸಲು ಈ ಸರ್ವೇಕ್ಷಣೆಯು ಉಪಯುಕ್ತವಾಗಿದೆ.

ಡಂಪಿ ಲೆವೆಲ್ (Dumpy Level)

ಡಂಪಿ ಲೆವೆಲ್ (Dumpy Level) ಎಂದರೆ ಸಮತಲ ದೃಷ್ಟಿ ರೇಖೆಯನ್ನು ಸ್ಥಾಪಿಸಿ, ಎರಡು ಬಿಂದುಗಳ ನಡುವಿನ ಎತ್ತರದ ವ್ಯತ್ಯಾಸವನ್ನು ಅಳೆಯುವ ಸರ್ವೇಯಿಂಗ್ ಸಾಧನವಾಗಿದೆ.

2. ಸ್ತರವಿಂಗಡಣೆಯ ದಾಖಲೆಯ ವಿಧಾನ:  ಸ್ಥಳವೊಂದರಲ್ಲಿ ಉತ್ಖನನ ನಡೆಸುವಾಗ ದೊರಕುವ ಪುರಾತತ್ವ ಪುರಾವೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಲು ಮತ್ತು ಅವುಗಳ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಈ ಸ್ತರ ವಿಂಗಡಣೆ ಅಗತ್ಯವಾಗಿದೆ.

 ಉತ್ಖನನದ ವೇಳೆಯಲ್ಲಿ ದೊರಕುವ ಕಟ್ಟಡದ ಅವಶೇಷಗಳು ಹಾಗೂ ಇತರ ಸಾಂಸ್ಕೃತಿಕ ಕುರುಹುಗಳ ಕಾಲಾನುಕ್ರಮವನ್ನು ಸ್ಪಷ್ಟವಾಗಿ ಗುರುತಿಸಲು ಈ ಸ್ತರವಿಂಗಡಣೆಯು ಸಹಾಯ ಮಾಡುತ್ತದೆ. ಉತ್ಖನನಗೊಂಡ ಪ್ರದೇಶದ ಲಂಬಛೇದ ಮತ್ತು ತಲ ವಿನ್ಯಾಸಗಳ ಮೂಲಕ ಸ್ತರ ವಿಂಗಡನೆಯನ್ನು ದಾಖಲಿಸಲಾಗುತ್ತದೆ. ಉತ್ಖನನವು ಸಾಗಿದಂತೆ ನೆಲೆಯ ಹೊಸ ಹೊಸ ಸ್ತರಗಳು ಕಂಡುಬರುತ್ತವೆ. ಒಂದು ಸ್ತರ ಕಂಡು ಬಂದೊಡನೆ ಅದರ ರೂಪರೇಷೆಗಳನ್ನು ಸರಿಯಾಗಿ ಅವಲೋಕಿಸಬೇಕು. ತದನಂತರ ಉತ್ಖನನದ ಗುಂಡಿಯ ಅಡ್ಡಗೋಡೆಯಲ್ಲಿ ಎದ್ದು ಕಾಣುವಂತೆ ಒಂದು ಹರಿತವಾದ ಸಾಧನದಿಂದ ಗುರುತಿಸಬೇಕು. ಹೀಗೆ ಗುರುತಿಸಿದ ಸ್ತರದ ಸಂಖ್ಯೆಯನ್ನು ಸ್ಪಷ್ಟವಾಗಿ ಸೂಚಿಸುವ ಪಟ್ಟಿಯನ್ನು ಅಂಟಿಸಬೇಕು. ನಂತರ ಅಲ್ಲಿ ಸಿಕ್ಕ ಅವಶೇಷಗಳ ವಿವರಗಳನ್ನು ಬರೆಯಲು ಎಡಬದಿಗೆ ಗ್ರಾಫ್ ಹಾಳೆಯನ್ನು ಮತ್ತು ಬಲಬದಿಗೆ ಗೆರೆ ಹಾಳೆಯನ್ನು ಬಳಸಿ ಟಿಪ್ಪಣಿ ಬರೆದುಕೊಳ್ಳಬೇಕು. ಉತ್ಖನನವು ಮುಂದೆ ಸಾಗಿದಂತೆ ಆಗಾಗ ಲಂಬ ಛೇದದಲ್ಲಿ ಗುರುತು ಮಾಡಲಾದ ಸ್ತರವಿಂಗಡನೆಯನ್ನು ಚಿತ್ರಿಸಬೇಕು. ಯಾವಾಗ ಉತ್ಖನನವು ಕೊನೆಯಾಗುವುದೋ ಆಗ ಗುಂಡಿಯ ಗೋಡೆಗಳಲ್ಲಿ ಕಂಡುಬರುವ ಸ್ತರ ವಿಂಗಡನೆಯನ್ನು ಸರಿಯಾಗಿ ಚಿತ್ರಿಸಲು ಅನುಕೂಲವಾಗುತ್ತದೆ.

 ಉತ್ಖನನ ಗುಂಡಿಯ ಸ್ತರ ವಿಂಗಡಣೆಯನ್ನು, ಚಿತ್ರ ಸೂಚಿಸುವ ಲಂಬ ಛೇದದ ಚಿತ್ರವನ್ನು ರಚಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸಬೇಕು. ಮೊದಲು ಉತ್ಖನನ ಗುಂಡಿಯ ಗೋಡೆಯ ಮೇಲೆ ಒಂದು ದಾರವನ್ನು ಸಮನಾಗಿರುವಂತೆ ಕಟ್ಟಬೇಕು. ದಾರವು ಸಮ ರೀತಿಯಲ್ಲಿ ಇದೆ ಎಂಬುದನ್ನು ಸ್ಪಿರಿಟ್ ಲೆವೆಲ್ ಎಂಬ ಉಪಕರಣದ ಸಹಾಯದಿಂದ ಕಂಡುಹಿಡಿಯಬೇಕು. ಈಗ ಆ ದಾರವು ಸೂಚಿಸುವ ರೇಖೆಯು ಗ್ರಹಿತರೇಖೆ ಎನಿಸುತ್ತದೆ. ಈ ದಾರದ ಜೊತೆಗೆ ಅಳತೆಯ ಟೇಪನ್ನು ಸೇರಿಸಬೇಕು. ನಂತರ ಸ್ಪ್ರಿಂಗ್ ಟೇಪ್ ಹಾಗೂ ತೂಗುಗುಂಡು ಇವುಗಳನ್ನು ಉಪಯೋಗಿಸಿ ಗೋಡೆಗುಂಟ ನಿರ್ದಿಷ್ಟ ಅಂತರದಲ್ಲಿ ಸ್ತರ ಗಾತ್ರವನ್ನು ಸೂಚಿಸುವ ಲಂಬ ಅಳತೆಯನ್ನು ಸರಿಯಾಗಿ ಬರೆದುಕೊಳ್ಳಬೇಕು. ನೆಲೆಯ ಎಲ್ಲಾ ಸ್ಥಳಗಳಲ್ಲಿ ಲಂಬ ಛೇದದ ಚಿತ್ರವನ್ನು ಬರೆಯಲು ಒಂದೇ ಸ್ಕೇಲನ್ನು ಬಳಸಬೇಕು.

ಸ್ಪಿರಿಟ್ ಲೆವೆಲ್ (Spirit Level)

ಸ್ಪಿರಿಟ್ ಲೆವೆಲ್ ಎಂಬ ಉಪಕರಣವು ಸಮತಲ (Horizontal) ಮಟ್ಟವನ್ನು ತಿಳಿಯಲು ಬಳಸುವ ಸಾಧನವಾಗಿದೆ. ಇದು ಗಾಜಿನ ಟ್ಯೂಬ್ + ದ್ರವ + ಗಾಳಿಯ ಬಬಲ್ ರಚನೆಯನ್ನು ಹೊಂದಿದೆ. ಬಬಲ್‌  ಮಧ್ಯದಲ್ಲಿ ಬಂದರೆ ಸಮತಲ ಸರಿಯಾಗಿದೆ ಎಂದು ಅರ್ಥ

Plumb Bob

 ಪ್ಲಂಬ್ ಬಾಬ್ ಎಂದರೆ ಹಗ್ಗಕ್ಕೆ ಕಟ್ಟಿದ ತೂಕವಾಗಿದ್ದು, ಇದು ಲಂಬ ದಿಕ್ಕನ್ನು ಕಂಡುಹಿಡಿಯಲು ಮತ್ತು ಸರ್ವೇಯಿಂಗ್‌ನಲ್ಲಿ ಕೇಂದ್ರ ಸ್ಥಾಪನೆಗಾಗಿ ಬಳಸಲಾಗುತ್ತದೆ.

3. ಉತ್ಖನನದ ಪ್ರಗತಿಯನ್ನು ತೋರಿಸುವ ಟಿಪ್ಪಣಿ ಪುಸ್ತಕದ ದಾಖಲೆ: ಉತ್ಖನನ ಮಾಡುವಾಗ ಮೇಲ್ವಿಚಾರಕನಾದವನು ಉತ್ಖನನದ ಎಲ್ಲಾ ಪ್ರಗತಿಯನ್ನು ಸೂಚಿಸುವ ಕ್ಷೇತ್ರ ಟಿಪ್ಪಣಿ ಪುಸ್ತಕವನ್ನು ಇಡಬೇಕಾದುದು ಬಹಳ ಅಗತ್ಯವಾದುದು. ಈ ಟಿಪ್ಪಣಿ ಪುಸ್ತಕವು ಒಂದು ಬದಿಗೆ ಗ್ರಾಫ್ ಹಾಗೂ ಇನ್ನೊಂದು ಬದಿಗೆ ಗೆರೆಗಳುಳ್ಳ ನೋಟು ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಉತ್ಖನನದ ಸಮಯದಲ್ಲಿ ಸಿಕ್ಕ ಪ್ರಾಚ್ಯವಸ್ತುಗಳ ಚಿತ್ರ ಬರೆಯುವುದು ಹಾಗೂ ಉತ್ಖನನದ ಸ್ತರ ವಿಂಗಡನೆಯ ವಿವರಗಳ ಚಿತ್ರಗಳನ್ನು ಗ್ರಾಫ್ ಹಾಳೆಯಲ್ಲಿ ಹಾಗೂ ಪ್ರತಿದಿನದ ಉತ್ಖನನದ ಪ್ರಗತಿಯ ಕುರಿತು ವಿವರಗಳನ್ನು ಗೆರೆಗಳುಳ್ಳ ಹಾಳೆಯ ಮೇಲೆ ಬರೆಯಬೇಕು.

 ಕ್ಷೇತ್ರ ಟಿಪ್ಪಣಿ ಪುಸ್ತಕದಲ್ಲಿ ಉತ್ಖನನದ ಸವಿವರಗಳನ್ನು ಚಾಚು ತಪ್ಪದೇ ದಾಖಲಿಸಬೇಕು. ಇದರ ಜೊತೆಗೆ ಟಿಪ್ಪಣಿ ಪುಸ್ತಕವು ಉತ್ಖನನವನ್ನು ಮಾಡುವ ಸ್ಥಳದ ಹೆಸರು, ಉತ್ಖನನ ಗುಂಡಿ ಅಳತೆಯ ಸಂಖ್ಯೆ, ಉತ್ಖನನ ಮಾಡುವವರ ಹೆಸರು, ಉತ್ಖನನ ನಡೆಯುವ ವರ್ಷ ಮೊದಲಾದವುಗಳನ್ನು ಹೊಂದಿರಬೇಕಾಗುತ್ತದೆ. ಉತ್ಖನನ ಕಾಲದಲ್ಲಿ ಉತ್ಖನನಕಾರನಿಗೆ ಎದುರಾದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳು ಇತ್ಯಾದಿ, ವಿಷಯಗಳನ್ನು ಸಹ ಟಿಪ್ಪಣಿ ಪುಸ್ತಕದಲ್ಲಿ ದಾಖಲು ಮಾಡಿರಬೇಕು. ಸ್ತರ ವಿಂಗಡನೆಯನ್ನು ಗುರುತಿಸುವುದು, ಅಲ್ಲಿ ಸಿಕ್ಕ ಕಟ್ಟಡಗಳ ರಚನೆಯ ಹಂತಗಳನ್ನು ಗುರುತಿಸುವುದು ಮತ್ತು ಉದ್ಭವಿಸಿದ ಸಮಸ್ಯೆಗಳು ಮತ್ತು ಆ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದು ಮಾಡಿರಬೇಕು. ಬೇಡವಾದ ಮತ್ತು ಸಂರಕ್ಷಣೆ ಮಾಡಲಾರದ ವಸ್ತುಗಳೆಂದು ಕಡೆಗಣಿಸದೆ ಅವುಗಳ ಕುರಿತು ಹೆಚ್ಚು ಅಧ್ಯಯನ ಮಾಡಿ ದಾಖಲೆ ಬರೆಯಬೇಕು. ಉತ್ಖನನದಲ್ಲಿ ದೊರಕಿದ ವಸ್ತುಗಳು ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಸಂರಕ್ಷಣೆ ಮಾಡದಿರಲಿ ಅಥವಾ ನಿರ್ಲಕ್ಷಕ್ಕೆ ಒಳಗಾಗಿರಲಿ ಅವುಗಳನ್ನು ದೊರೆತ ಕ್ರಮಕ್ಕೆ ಅನುಗುಣವಾಗಿ ಅವುಗಳು ದೊರಕಿದ ಸ್ಥಳ, ಅನುಕ್ರಮ ಸಂಖ್ಯೆ ಮುಂತಾದವುಗಳನ್ನು ಪುಸ್ತಕದಲ್ಲಿ ಬರೆದಿರಬೇಕು.

ದಿನನಿತ್ಯದ ಉತ್ಖನನದ ಪ್ರಗತಿ ಹಾಗೂ ಸಂಶೋಧನೆಗಳನ್ನು ಸರಿಯಾಗಿ ತಪ್ಪಿಲ್ಲದಂತೆ ಹಾಗೂ ಸಂಶಯಕ್ಕೆ ಎಡೆ ಮಾಡಿಕೊಡದ ಹಾಗೆ ಟಿಪ್ಪಣಿ ಪುಸ್ತಕದಲ್ಲಿ ದಾಖಲು ಮಾಡಬೇಕು. ಆದ್ದರಿಂದ ಗುಂಡಿಯ ಮೇಲ್ವಿಚಾರಕನು ಒಂದು ವೇಳೆ ಬದಲಾದರೂ ನಂತರ ಬಂದ ಹೊಸ ಮೇಲ್ವಿಚಾರಕನಿಗೆ ಉತ್ಖನನವನ್ನು ಮುಂದುವರಿಸಲು ಯಾವುದೇ ಗಂಭೀರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಮೇಲ್ವಿಚಾರಕರ ಟಿಪ್ಪಣಿ ಪುಸ್ತಕಗಳನ್ನು ಆಗಾಗ ಪರಿಶೀಲನೆಗೆ ಒಳಪಡಿಸಿ ಉತ್ಖನನಕ್ಕೂ ಹಾಗೂ ಟಿಪ್ಪಣಿ ಪುಸ್ತಕದಲ್ಲಿ ದಾಖಲೆಗೂ ಇರುವ ಸಾಮ್ಯತೆಯನ್ನು ನೋಡುವ ಜವಾಬ್ದಾರಿ ನಿರ್ದೇಶಕ ಮಾಡಬೇಕಾಗುತ್ತದೆ. ಒಂದು ವೇಳೆ ಸಮಸ್ಯೆಗಳೇನಾದರೂ ಕಂಡು ಬಂದರೆ ಮೇಲ್ವಿಚಾರಕರಿಗೆ ನಿರ್ದೇಶಕರು ನಿರ್ದೇಶನವನ್ನು ನೀಡುತ್ತಾನೆ. ಉತ್ಖನನದ ಫಲಿತಾಂಶಕ್ಕೆ ಕ್ಷೇತ್ರ ಟಿಪ್ಪಣಿಯ ಪುಸ್ತಕವೇ ಮೂಲಾಧಾರವಾಗುತ್ತದೆ. ಇವು ಸ್ಪಷ್ಟವಾಗಿ ಮತ್ತು ನಿಖರವಾಗಿ ಇದ್ದರೆ ಉತ್ಖನನದ ಫಲಿತಾಂಶವೂ ಅಷ್ಟೇ ನಿಖರವಾಗಿರುತ್ತದೆ.

4. ಆಯಾಮತ್ರಯ ಹಾಗೂ ತ್ರಿಕೋಣೀಕರಣ ವಿಧಾನ: ಉತ್ಖನನದಲ್ಲಿ ದೊರೆಯುವ ಯಾವುದೇ ಪುರಾತತ್ವ ಅವಶೇಷಗಳನ್ನು ಅವುಗಳ ನಿಖರವಾದ ಸ್ಥಾನವನ್ನು ಗುರುತಿಸಲು ಈ ವಿಧಾನವನ್ನು ಬಳಸಲಾಗುತ್ತದೆ. ಒಂದು ಉತ್ಖನನದ ಸ್ಥಾನವನ್ನು ನಿರ್ಧರಿಸಲು ಉತ್ಖನನದಲ್ಲಿ ಸಿಗುವ ವಿಶಿಷ್ಟ ಪುರಾತತ್ವ ವಸ್ತುಗಳನ್ನು ಆಯಾಮತ್ರಯ ಹಾಗೂ ತ್ರಿಕೋಣೀಕರಣದ ವಿಧಾನದ ಮೂಲಕ ದಾಖಲಿಸಲಾಗುತ್ತದೆ.

  ಈ ವಿಧಾನದಲ್ಲಿ ವಸ್ತುವಿನ ಸಮತಲ ಮತ್ತು ಲಂಬ ಅಳತೆಗಳನ್ನು ನಿಖರವಾಗಿ ಅಳೆಯಲಾಗುತ್ತದೆ. ಅಂದರೆ ಗುಂಡಿಯ ನಿಗದಿತ ಮೂಲೆಯ ಗೂಟಗಳಿಂದ ವಸ್ತುವಿನ ದೂರವನ್ನು ಅಳೆದು ಅದರ ನಿಖರವಾದ ಸ್ಥಾನವನ್ನು ನಕ್ಷೆಯಲ್ಲಿ ಗುರುತಿಸಲು ಇದು ಸಹಾಯಮಾಡುತ್ತದೆ. ಒಂದು ವಸ್ತು ಗುಂಡಿಯ ಯಾವುದೇ ಪದರಿನಲ್ಲಿ ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ಆಳದಲ್ಲಿ ದೊರಕಿದೆ ಎಂಬುದನ್ನು ವೈಜ್ಞಾನಿಕವಾಗಿ ದಾಖಲು ಮಾಡುವುದು ಇದರ ಮೂಲ ಗುರಿಯಾಗಿದೆ. ಇದು ಮುಂದಿನ ಉತ್ಖನನಕ್ಕೆ ಮತ್ತು ವಿಶ್ಲೇಷಣೆಗೆ ಆಧಾರವಾಗುತ್ತದೆ.

5. ಪ್ರಾಚ್ಯವಸ್ತುವನ್ನಿಡುವ ಪೆಟ್ಟಿಗೆಗಳ ದಾಖಲೆಯ ವಿಧಾನ: ಪ್ರಾಚ್ಯವಸ್ತುಗಳನ್ನು ಇಡುವ ಪೆಟ್ಟಿಗೆಗಳು ಪುರಾತತ್ವ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಪುರಾತತ್ವ ಇಲಾಖೆಯವರು ಉತ್ಖನನವನ್ನು ನಡೆಸುವಾಗ ದೊರಕುವ ಗತಕಾಲದ ವಸ್ತುಗಳನ್ನು ಸುರಕ್ಷಿತವಾಗಿಡಲು ಈ ವಿಶೇಷ ಪೆಟ್ಟಿಗೆಗಳನ್ನು ಬಳಸುತ್ತಾರೆ. ಉತ್ಖನನ ಮಾಡಿದಾಗ ಸಿಗುವ ಗತಕಾಲ ಅಥವಾ ಇತಿಹಾಸ ಕಾಲದ ನಾಣ್ಯಗಳು, ಮಣ್ಣಿನ ಪಾತ್ರೆಗಳ ಚೂರುಗಳು, ಶಾಸನಗಳು ಅಥವಾ ಆಭರಣಗಳ ಕಾಲಮಾನ ಹಾಗೂ ಅವುಗಳ ಸಿಕ್ಕ ಸ್ಥಳಗಳ ಆಧಾರದ ಮೇಲೆ ಅವುಗಳನ್ನು ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಶೇಖರಣೆ ಮಾಡಿ ಸಂಗ್ರಹಿಸಿಡಲಾಗುತ್ತದೆ. ಪೆಟ್ಟಿಗೆಗಳು ಸಾವಿರಾರು ವರ್ಷಗಳ ಹಳೆಯ ಪಳೆಯುಳಿಕೆಗಳು, ವಸ್ತುಗಳು ಗಾಳಿ, ಬೆಳಕು ಅಥವಾ ತೇವಾಂಶಕ್ಕೆ ತುತ್ತಾಗಿ ಹಾಳಾಗದಂತೆ ರಕ್ಷಣೆಯನ್ನು ಒದಗಿಸುತ್ತವೆ. ಉತ್ಖನನದ ನಂತರ ಸಿಕ್ಕ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಇರಿಸಿದಾಗ ಪ್ರತಿ ಪೆಟ್ಟಿಗೆಯ ಮೇಲೆ ಆ ವಸ್ತು ಎಲ್ಲಿ ಸಿಕ್ಕಿತು, ಯಾವ ಪ್ರದೇಶದಲ್ಲಿ ದೊರಕಿತು ಹಾಗೂ ಅದರ ಸಂಭಾವ್ಯ ಇತಿಹಾಸವೇನು ಎಂಬ ವಿವರಗಳನ್ನು ದಾಖಲು ಮಾಡಲಾಗುತ್ತದೆ.

ಕರ್ನಾಟಕದ ಹಂಪಿ, ಬನವಾಸಿ ಹಾಗೂ ತಲಕಾಡಿನಂತಹ ಐತಿಹಾಸಿಕ ಸ್ಥಳಗಳಲ್ಲಿ ಸಂಶೋಧನೆ ಮಾಡುವಾಗ ಇಂತಹ ಪೆಟ್ಟಿಗೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಮೊದಲು ಅವುಗಳನ್ನು ಇಂತಹ ಪೆಟ್ಟಿಗೆಯಲ್ಲಿ ಸಂರಕ್ಷಿಸಿ ಇಡಲಾಗುತ್ತದೆ.

6. ಪ್ರಾಚ್ಯ ವಸ್ತುಗಳ ನೊಂದಣಿ ದಾಖಲಾತಿ ವಿಧಾನ:  ಉತ್ಖನನದಲ್ಲಿ ದೊರಕಿದ ವಸ್ತುಗಳ ನಿಖರ ಮಾಹಿತಿಗಾಗಿ ಒಂದು ನೋಂದಣಿ ಪುಸ್ತಕವನ್ನು ಇಡಲಾಗಿರುತ್ತದೆ. ಉತ್ಖನನದ ವೇಳೆ ಸಿಕ್ಕ ಹೊಸ ಹೊಸ ಪ್ರಾಚ್ಯವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿ ಸಂಗ್ರಹ ಮಾಡಿ ಇಡಲಾಗಿರುತ್ತದೆ. ಪ್ರತಿದಿನ ಉತ್ಖನನದ ನಂತರ ಕೊನೆಗೆ ದಾಖಲು ಮಾಡಲಾದ ಪ್ರಾಚ್ಯ ವಸ್ತುಗಳನ್ನು ಕಾಲಾನುಕ್ರಮವಾಗಿ ಅವುಗಳ ಸಂಪೂರ್ಣ ವಿವರಗಳೊಂದಿಗೆ ನೋಂದಣಿ ಪುಸ್ತಕದಲ್ಲಿ ಬರೆದಿಡಬೇಕು. ಪ್ರಾಚ್ಯ ವಸ್ತುಗಳನ್ನು ಉತ್ಖನನದಿಂದ ಹೊರ ತೆಗೆದ ನಂತರ ಅದರ ಸಂಪೂರ್ಣ ಚಿತ್ರಣವು ಈ ದಾಖಲಾತಿ ಪುಸ್ತಕದಲ್ಲಿ ಸಿಗುತ್ತದೆ. ಆಗ ಅಧ್ಯಯನದ ವೇಳೆ ಅಗತ್ಯವಾದ ಪ್ರಾಚ್ಯ ವಸ್ತುಗಳನ್ನು ಹುಡುಕುವುದಕ್ಕೆ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.