ಉತ್ಖನನದ ವಿಧಾನಗಳು

ಉತ್ಖನನದ ವಿಧಾನಗಳು

ಉತ್ಖನನದ ವಿಧಾನಗಳು

  1. ನಿರಂಕುಶ ಉತ್ಖನನ (Arbitrary Excavation)
  2. ಸ್ತರವಿಂಗಡನಾತ್ಮಕ ಉತ್ಖನನ:

                1.  ವಸತಿ ನಿವೇಶನ ಉತ್ಖನನದ ವಿಧಾನಗಳು:

                                  ಎ. ಲಂಬ ಉತ್ಖನನ(Vertical Excavation )

                                  ಬಿ. ಆಯತಾಕಾರದ ಉತ್ಖನನ

                                  ಸಿ.  ಟ್ರೆಂಚಿಂಗ್ ಉತ್ಖನನ

                                  ಡಿ. ಜಾಲಂದರ ಉತ್ಖನನ                       

                 2.   ಸ್ಮಶಾನ ನಿವೇಶನ ಉತ್ಖನನ ಚತುರ್ಭಾಗ ಪದ್ಧತಿ

 ಉತ್ಖನನದ ವಿಧಾನಗಳಲ್ಲಿ ಎರಡು ಪ್ರಕಾರಗಳಿವೆ. ಅವುಗಳೆಂದರೆ ನಿರಂಕುಶ ಉತ್ಖನನ ಹಾಗೂ ಸ್ತರ ವಿಂಗಡನಾತ್ಮಕ ಉತ್ಖನನ. 

  1. ನಿರಂಕುಶ ಉತ್ಖನನ (Arbitrary Excavation): ಈ ವಿಧಾನದಲ್ಲಿ ವೈಜ್ಞಾನಿಕ ಸ್ತರವಿನ್ಯಾಸವನ್ನು ಅನುಸರಿಸುವ ಬದಲಾಗಿ ಒಂದು ನಿರ್ದಿಷ್ಟ ಆಳದ ಆಧಾರದ ಮೇಲೆ ಮಣ್ಣನ್ನು ಅಗೆಯುವುದಾಗಿದೆ. ಈ ವಿಧಾನದಲ್ಲಿ ನೈಸರ್ಗಿಕ ಮಣ್ಣಿನ ಪದರುಗಳನ್ನು ಲೆಕ್ಕಿಸದೇ ಮೊದಲೇ ನಿರ್ಧಾರ ಮಾಡಿದಂತೆ. (ಉದಾ 10 ಅಥವಾ 20 ಸೆಂಟಿ ಮೀಟರ್) ಸಮತಟ್ಟಾಗಿ ಅಗೆಯುತ್ತಾ ಹೋಗುವುದು. ಹೀಗೆ ಅಗೆಯುವಾಗ ಪ್ರತಿ ಹಂತಗಳಲ್ಲಿ ಸಿಗುವ ಅವಶೇಷಗಳನ್ನು ಆಯಾ ಆಳದ ಆಧಾರದ ಮೇಲೆ ದಾಖಲು ಮಾಡಿಕೊಳ್ಳುವುದು. ಉತ್ಖನನದ ಸಮಯದಲ್ಲಿ ಮಣ್ಣಿನ ಪದರುಗಳು ಸ್ಪಷ್ಟವಾಗಿ ಗೋಚರವಾಗದಿದ್ದಾಗ ಅಥವಾ ಆರಂಭಿಕ ಹಂತದ ಶೋಧದಲ್ಲಿ ಈ ರೀತಿಯ ಉತ್ಖನನ ಮಾಡುತ್ತಾರೆ. ಆದರೆ ಅವಶೇಷಗಳು ದೊರೆತಾಗಲೂ ಕೇವಲ ಆಳದ ಆಧಾರದ ಮೇಲೆ ಅಗೆಯುವ ಈ ಕ್ರಮವು ಪುರಾತತ್ವಶಾಸ್ತ್ರಕ್ಕೆ ಬಗೆದ ಅನ್ಯಾಯವಾಗುತ್ತದೆ.  
  1. ಸ್ತರವಿಂಗಡನಾತ್ಮಕ ಉತ್ಖನನ: ಇದು ಅವಶೇಷಗಳ ಕಾಲಾನುಕ್ರಮಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಗೆಯುವ ವಿಧಾನವಾಗಿದೆ. ನೆಲದ ಅಡಿಯಲ್ಲಿ ದೊರೆಯುವ ವಿವಿಧ ಮಣ್ಣಿನ ಪದರಿನ ಆಧಾರದ ಮೇಲೆ ಪುರಾತನ ನಾಗರಿಕತೆಯ ಕಾಲ ಹಾಗೂ ಸಂಸ್ಕೃತಿಯನ್ನು ಗುರುತಿಸುವುದು ಇದರ ಮುಖ್ಯ ಗುರಿಯಾಗಿದೆ. ಉತ್ಖನನ ಮಾಡುವಾಗ ನಿವೇಶನದ ಸ್ವರೂಪವನ್ನು ಅಧ್ಯಯನ ಮಾಡಲಾಗುತ್ತದೆ. ಸ್ತರವಿಂಗಡನಾತ್ಮಕ ಉತ್ಖನನದ ವಿಧಾನವನ್ನು ವಿಭಾಗಿಸಿ ಮತ್ತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ 1. ವಸತಿ ನಿವೇಶನ 2. ಸ್ಮಶಾನ ನಿವೇಶನ. 
  1. ವಸತಿ ನಿವೇಶನ ಉತ್ಖನನದವಿಧಾನಗಳು: ವಸತಿ ನಿವೇಶನ ಉತ್ಖನನದ ಸ್ವರೂಪಕ್ಕೆ ಅನುಗುಣವಾಗಿ ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

                             ಎ. ಲಂಬ ಉತ್ಖನನ (Vertical Excavation)

                            ಬಿ. ಆಯತಾಕಾರದ ಉತ್ಖನನ (Horizontal Excavation)

                            ಸಿ. ಟ್ರೆಂಚಿಂಗ್ ಉತ್ಖನನ

                           ಡಿ. ಜಾಲಂದರ ಉತ್ಖನನ (Grid Excavation)

ಎ. ಲಂಬ ಉತ್ಖನನ (Vertical Excavation)

 ಇದನ್ನು ಇಂಗ್ಲೀಷಿನಲ್ಲಿ Vertical Excavation ಎಂದು ಕರೆಯುತ್ತಾರೆ.

* ಉತ್ಖನನ ಮಾಡಲು ಸ್ಥಳವನ್ನು ಆಯ್ಕೆ ಮಾಡಿಕೊಂಡು ಒಂದು ಅಥವಾ ಸೀಮಿತ ಚೌಕ ಅಥವಾ     ಆಯತಾಕಾರದ ಗುಂಡಿಗಳನ್ನು ಬಾವಿಯನ್ನು ತೋಡಿದಂತೆ ಮೇಲಿನಿಂದ ಕೆಳಗೆ ಲಂಬವಾಗಿ ಅಗಿಯಬೇಕು.

* ಉತ್ಖನನದ ವೇಳೆಯಲ್ಲಿ ನಿವೇಶನದಲ್ಲಿಯ ಅವಶೇಷ ಹಾಗೂ ಅದು ಯಾವ ಸಂಸ್ಕೃತಿಗೆ ಸಂಬಂಧಿಸಿದ್ದು ಎಂಬುದನ್ನು ಅರಿತುಕೊಳ್ಳಬೇಕು. ಅಂದರೆ ನಿವೇಶನದಲ್ಲಿದ್ದ ಸಂಸ್ಕೃತಿಗಳ ಕಾಲಾನುಕ್ರಮವನ್ನು ಅರ್ಥೈಸಿಕೊಳ್ಳಲು ಈ ಉತ್ಖನನ ನಡೆಸಲಾಗುವುದು.

* ಈ ವಿಧಾನದ ಪ್ರಕಾರ ಉತ್ಖನನವನ್ನು ನಿವೇಶನದ ಮೇಲಿನಿಂದ ಅಡಿಯವರೆಗೂ ಮಾಡುವುದರಿಂದ ನಿವೇಶನದಲ್ಲಿ ಹುದುಗಿರುವ ಸಾಂಸ್ಕೃತಿಕ ಅವಶೇಷಗಳ ಸ್ಪಷ್ಟ ಕಾಲಾನುಕ್ರಮ ದೊರೆಯುತ್ತದೆ.

ಉತ್ಖನನದ ಸ್ಪಷ್ಟ ಫಲಿತಾಂಶಕ್ಕಾಗಿ ಈ ರೀತಿಯ ವಿಧಾನವನ್ನು ಅನುಸರಿಸಲಾಗುತ್ತದೆ. ನಿವೇಶನದಲ್ಲಿ ಯಾವ ಸಂಸ್ಕೃತಿಯ ಜನರ ಅವಶೇಷಗಳು ಹೂತುಹೋಗಿವೆ ಎಂಬ ಮಾಹಿತಿ ದೊರಕುತ್ತದೆ. ಇತಿಹಾಸ ಪೂರ್ವಕಾಲದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಲಂಬ ಉತ್ಖನನ ಸಹಕಾರಿಯಾಗಿದೆ. ಇತಿಹಾಸ ಪೂರ್ವ ಕಾಲದಲ್ಲಿ ಜನರು ಮನೆಗಳನ್ನು ಕಲ್ಲಿನ ಚಪ್ಪಡಿ, ಬಿದಿರು ಹಾಗೂ ಮಣ್ಣಿನಿಂದ ನಿರ್ಮಿಸುತ್ತಿದ್ದರು. ಹೀಗಾಗಿ ಅವುಗಳು ಬೇಗನೆ ಕ್ಷಯಿಸಿ ಹೋಗುತ್ತಿದ್ದವು. ಇದರಲ್ಲಿ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಅವಶೇಷಗಳು ಕಂಡುಬರುವುದಿಲ್ಲ. ಇಲ್ಲಿ ಸಾಮಾನ್ಯವಾಗಿ ಮಡಿಕೆ, ಆಭರಣ, ಕಲ್ಲಿನ ಆಯುಧ ಹಾಗೂ ಉಪಕರಣಗಳು ಕಂಡುಬರುತ್ತವೆ. ಲಂಬ ಉತ್ಖನನದಿಂದ ಹುದುಗಿ ಹೋಗಿರುವ ಬೃಹತ್ ಕಟ್ಟಡಗಳ, ಕೋಟೆಗಳ ರೂಪರೇಷೆಗಳನ್ನು ಪುನರ್‌ರಚಿಸಲು ಸಾಧ್ಯವಾಗುತ್ತದೆ. ಆದರೆ ಅವಶೇಷಗಳನ್ನು ಪೂರ್ಣ ಅನಾವರಣಗೊಳಿಸಲು ಬೇಕಾಗುವ ಸಮಯ ಹಾಗೂ ಅದಕ್ಕೆ ಬೇಕಾಗುವ ವೆಚ್ಚ ಬಹಳ ದುಬಾರಿಯಾಗುತ್ತದೆ. ಗುಜರಾತಿನ ಸರ್ಕೋತದ, ರಾಜಸ್ಥಾನದ ಕಾಲಿಬಂಗನ್ ಮುಂತಾದ ಸಿಂಧೂ ಸಂಸ್ಕೃತಿಯ ಕೆಲವು ನಿವೇಶನಗಳ ಸಂಶೋಧನೆಯಲ್ಲಿ  ಲಂಬ ಉತ್ಖನನವನ್ನು ಅಳವಡಿಸಿಕೊಳ್ಳಲಾಗಿದೆ.

 ಲಂಬ ಉತ್ಖನನದ ಉಪಯುಕ್ತತೆ: ಲಂಬ ಉತ್ಖನನದ ಉಪಯುಕ್ತತೆಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

  1. ಲಂಬ ಉತ್ಖನನದಿಂದ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ.
  2. ಲಂಬ ಉತ್ಖನನಕ್ಕೆ ಹೆಚ್ಚಿನ ಪ್ರಮಾಣದ ಕೂಲಿ ಕಾರ್ಮಿಕರು ಹಾಗೂ ವೀಕ್ಷಕರ ಅಗತ್ಯವಿರುವುದಿಲ್ಲ.
  3. ಲಂಬ ಉತ್ಖನನದಿಂದ ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
  4. ಯಾವುದೇ ನಿವೇಶನದ ಸಾಂಸ್ಕೃತಿಕ ಕಾಲಾನುಕ್ರಮವನ್ನು ನಿರ್ಧರಿಸಲು ಲಂಬ ಉತ್ಖನನವು ಸಹಕಾರಿಯಾಗಿದೆ.
  5. ವಿಸ್ತೃತ ಉತ್ಖನನವನ್ನು ಕೈಗೊಳ್ಳುವ ಮೊದಲು ಲಂಬ ಉತ್ಖನನವನ್ನು ನಡೆಸಿ ಸಾಂಸ್ಕೃತಿಕ ಕಾಲಾನುಕ್ರಮವನ್ನು ಕಂಡುಹಿಡಿಬಹುದು.
  6. ಲಂಬ ಉತ್ಖನನವು ವಿಸ್ತೃತ ಉತ್ಖನನಕ್ಕೆ ಪೂರ್ವಭಾವಿಯಾಗಿದೆ.

  ಲಂಬ ಉತ್ಖನನದ ಕೊರತೆಗಳು(ಅನಾನುಕೂಲಗಳು)

  1. ಲಂಬ ಉತ್ಖನನದ ಪರಿಮಿತಿ ಉದ್ದಗಲ ಇಲ್ಲದೆ ಹೋದರೆ ಗುಂಡಿಯನ್ನು ಆಳವಾಗಿ ತೋಡಿದರೂ ಯಾವುದೇ ಪ್ರಯೋಜನವಾಗದು. ತೋಡಿದ ಮಣ್ಣನ್ನು ಹೊರಗೆ ಹಾಕುವುದು ಬಹಳ ಮಟ್ಟಿಗೆ ಕಷ್ಟವಾಗುತ್ತದೆ.
  2. ಗುಂಡಿಯ ಆಳ ಹೆಚ್ಚಾದಂತೆ ಗುಂಡಿಯ ಒಳಗೆ ಸರಿಯಾದ ಬೆಳಕು ಬೀಳದೇ ಇರುವುದರಿಂದ ಸಂಸ್ತರಣದ ಸ್ವರೂಪ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹೀಗಾಗಿ ಲಂಬ ಉತ್ಖನನದಲ್ಲಿ ಸ್ತರವಿಂಗಡಣೆಯ ಸಮಸ್ಯೆ ಕಾಡಬಹುದು. ಆಗ ಪ್ರಾಚ್ಯವಸ್ತುಗಳು ಯಾವ ಸ್ಥಳದಲ್ಲಿ ದೊರಕಿತು ಎಂಬುದನ್ನು ನಿರ್ಧರಿಸುವುದು ತುಸು ಕಷ್ಟವಾಗಬಹುದು. ಒಂದು ವೇಳೆ ಲಂಬ ಉತ್ಖನನದಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ ಕಟ್ಟಡಗಳು ದೊರಕಿದರೆ ಅವುಗಳ ತಳ ವಿನ್ಯಾಸ ರೂಪರೇಷೆ, ಸಂದರ್ಭ ಮೊದಲಾದ ಅಂಶಗಳನ್ನು ದಾಖಲು ಮಾಡಿಕೊಳ್ಳದ ಹೊರತು ಉತ್ಖನನ ಮುಂದುವರೆಯುವುದಿಲ್ಲ. ಇದರಿಂದ ಉತ್ಖನನದ ಕಾಲಾವಧಿಯನ್ನು ಮುಂದೂಡಬೇಕಾಗುತ್ತದೆ. ಉತ್ಖನನದ ಅವಧಿಯನ್ನು ವಿಸ್ತರಿಸಿದಂತೆ ದಾಖಲೆಗಳು ನಾಶವಾಗುವ ಸಂಭವ ಹೆಚ್ಚಿರುತ್ತದೆ. ಒಂದು ನಿವೇಶನದಲ್ಲಿ ಲಂಬ ಉತ್ಖನನವನ್ನು ಮಾಡಿದಾಗ ಎಲ್ಲಾ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೇ ಇರಬಹುದು. ಉದಾ: 1947ರಲ್ಲಿ ಬ್ರಹ್ಮಗಿರಿಯಲ್ಲಿ ನಡೆಸಿದ ಉತ್ಖನನದಿಂದ 21ನೇ ಗುಂಡಿಯಲ್ಲಿ ನೂತನ ಶಿಲಾಯುಗದ ಸಂಸ್ಕೃತಿ ಬೃಹತ್‌ಶಿಲಾಯುಗದ ಸಂಸ್ಕೃತಿ ಹಾಗೂ ಇತಿಹಾಸ ಆರಂಭ ಕಾಲದ ಸಂಸ್ಕೃತಿ ಅವಶೇಷಗಳು ದೊರಕಿದವು. ಆದರೆ ಹತ್ತಿರದಲ್ಲಿಯೇ 20ನೇ ಗುಂಡಿಯಲ್ಲಿ ಕೇವಲ ನವಶಿಲಾಯುಗದ ಸಂಸ್ಕೃತಿ ಹಾಗೂ ಇತಿಹಾಸಕಾಲದ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಮತ್ತು 18ನೇ ಗುಂಡಿಯಲ್ಲಿ ಕೇವಲ ಇತಿಹಾಸ ಆಧಾರದ ಸಂಸ್ಕೃತಿ ಅವಶೇಷಗಳು ಸಿಕ್ಕವು. ಇದರಿಂದ ನಮಗೆ ಅರ್ಥವಾಗುವುದೇನೆಂದರೆ ಲಂಬ ಉತ್ಖನನದಲ್ಲಿ ಅದೃಷ್ಟದ ಪಾತ್ರ ಹೆಚ್ಚಿನದಾಗಿರುತ್ತದೆ.

ಬಿ. ಆಯತಾಕಾರದ ವಿನ್ಯಾಸ ಉತ್ಖನನ

ಲಂಬ ಉತ್ಖನನದಿಂದ ಕೆಲವು ಮಾಹಿತಿ ಲಭ್ಯವಾದರೆ ಆಗ ಅದನ್ನು ಆಯತಾಕಾರದ ಉತ್ಖನನಕ್ಕೆ ವಿಸ್ತರಿಸಬಹುದು. ಈ ರೀತಿಯ ಉತ್ಖನನದಲ್ಲಿ ಉತ್ಖನನ ಮಾಡಬೇಕಾದ ಸ್ಥಳದ ಮೇಲೆ ಆಯತಾಕಾರದ ನಕ್ಷೆಯ ಗುರುತನ್ನು ಹಾಕಿಕೊಳ್ಳಲಾಗುತ್ತದೆ. ಈ ಬಗೆಯ ಉತ್ಖನನ ಗುಂಡಿಗಳನ್ನು ಪರೀಕ್ಷಾ ಉದ್ದೇಶಗಳಿಗಾಗಿ ತೋಡದೆ ದಾಖಲೆಗಳನ್ನು ಇಡುವುದಕ್ಕೆ ಮಾತ್ರ ತೋಡಲಾಗುತ್ತದೆ. ಹೀಗಾಗಿ ಸರ್ ಮಾರ್ಟಿಮರ್ ವೀಲರ್ ಅವರು ಈ ವಿಧಾನಕ್ಕೆ ʻʻSubstantive Diggingʼʼ ಎಂದು ಹೆಸರಿಸಿದ್ದಾರೆ. ಕೋಟೆಯ ಗೋಡೆಗಳಿಗೆ ಅಡ್ಡಗುಂಡಿ ತೋಡುವುದು ಇದಕ್ಕೆ ಒಂದು ಉದಾಹರಣೆಯಾಗಿದೆ. ಒಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಉದ್ದವಾದ ಗುಂಡಿಯನ್ನು ತೋಡಲಾಗುತ್ತದೆ. ಅಗತ್ಯ ಬಿದ್ದರೆ ಗುಂಡಿಯನ್ನು ಮತ್ತೆ ವಿಸ್ತರಿಸಿ ಉದ್ದುದ್ದವಾಗಿ ತೋಡುತ್ತಾ ಹೋಗಲಾಗುತ್ತದೆ. ಉತ್ಖನನದ ಗುಂಡಿಯ ಎರಡೂ ಅಂಚುಗಳು ಸರಿಯಾಗಿ 0.5 ಮೀಟರ್  ಅಂತರವಾಗಿರಬೇಕು.

 ಆಯತ ವಿನ್ಯಾಸ ವಿಧಾನದ ಉತ್ಖನನದ ಸಮಯದಲ್ಲಿ ಸಿಗಬಹುದಾದ ಪ್ರಾಚ್ಯ ವಸ್ತು ಅವಶೇಷಗಳನ್ನು ಅಳತೆಯ ವಿಧಾನದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ. ಉತ್ಖನನದ ಸಂದರ್ಭದಲ್ಲಿ ಪ್ರಾಚ್ಯವಸ್ತು ದೊರಕಿದರೆ ಅದು ಸಿಕ್ಕ ಸಮಯ, ಸಂದರ್ಭ, ಸ್ಥಿತಿ ಹಾಗೂ ಸ್ಥಳ ಮೊದಲಾದವುಗಳನ್ನು ನಿರ್ಧರಿಸಬೇಕಾದರೆ ಅದರ ಉದ್ದ, ಅಗಲ, ಎತ್ತರ ಅಥವಾ ಆಳಗಳನ್ನೊಳಗೊಂಡ ಮೂರು ಬಗೆಯ ಅಳತೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಆದುದರಿಂದ ಇಂತಹ ವಿಧಾನವು ಅಳತೆಯ ದಾಖಲೆಯ ವಿಧಾನ ಎಂದು ಹೆಸರಾಗಿದೆ. ಈ ರೀತಿಯ ಉದ್ದಳತೆಯನ್ನು ಮಾಡಲು 900 ಕೋನವುಳ್ಳ ದ್ವಿಭುಜ ಅಳತೆಯ ಮಾಪಕವನ್ನು ಬಳಸಲಾಗುತ್ತದೆ. ಈ ಅಳತೆಯ ಮಾಪಕದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಲಂಬವು ನಿಲ್ಲುವಂತೆ ಹಿಡಿಯಲಾಗುತ್ತದೆ. ಅಳತೆಯ ಮಾಪಕದ ಒಳಭುಜವು ಪ್ರಾಚ್ಯವಸ್ತು ಇರುವ ಬಿಂದುವಿಗೆ ಲಂಬವಾಗಿದೆ ಎಂಬುದನ್ನು ಸ್ಪಿರಿಟ್ ಲೆವೆಲ್‌ನ್ನು ಬಳಸಿ ಕಂಡುಹಿಡಿಯಬಹುದು. ಆಗ ಲಂಬ ಅಳತೆಯು ಆಳದ ಅಳತೆಯನ್ನು ಸೂಚಿಸುತ್ತದೆ. ಆಗ ಉತ್ಖನನಕಾರನು ಇವುಗಳನ್ನು ಸರಿಯಾಗಿ ದಾಖಲು ಮಾಡಿಕೊಳ್ಳಬೇಕು..

 ಆಯತ ವಿನ್ಯಾಸ ವ್ಯವಸ್ಥೆಯ ಸಮಸ್ಯೆಗಳು:

  1. ಆಯತ ವಿನ್ಯಾಸ ವ್ಯವಸ್ಥೆಯು ವಿಸ್ತೃತ ಉತ್ಖನನಕ್ಕಿಂತ ಲಂಬ ಉತ್ಖನನಕ್ಕೆ ಹೆಚ್ಚು ಸೂಕ್ತವಾಗಿದೆ. ಇದರ ಪ್ರಕಾರ ಗುಂಡಿಯನ್ನು ಅಡ್ಡಲಾಗಿ ತೋಡುವ ಬದಲಾಗಿ ಉದ್ದುದ್ದವಾಗಿ ಮಾತ್ರ ವಿಸ್ತಾರ ಮಾಡಬಹುದು.
  2. ಈ ಉತ್ಖನನದಿಂದ ನಿವೇಶನದಲ್ಲಿ ದೊರಕಿದ ಪ್ರಾಚ್ಯವಸ್ತುಗಳ ಸಂಸ್ಕೃತಿಯ ನಿಖರ ಮಾಹಿತಿ ದೊರಕದಿರುವುದು.

ಆಯತ ವಿನ್ಯಾಸ ಬಳಸಿ ಉತ್ಖನನ:

ಆಯತ ವಿನ್ಯಾಸವನ್ನು ಬಳಸಿ ಈ ಕೆಳಗಿನ ಪ್ರದೇಶಗಳಲ್ಲಿ ಉತ್ಖನನವನ್ನು ಮಾಡಲಾಯಿತು.

  1. ತಕ್ಷಶಿಲೆಯ ಸಿರ್ಕಪ್‌ ದಿಬ್ಬದಲ್ಲಿ ಸರ್ ಮಾರ್ಟಿಮರ್ ವೀಲರ್ ಅವರು 1944-45ರ ಅವಧಿಯಲ್ಲಿ ಆಯತ ವಿನ್ಯಾಸ ವ್ಯವಸ್ಥೆಯ ಉತ್ಖನನ ಮಾಡಿ ಅರಮನೆಗೆ ಸಂಬಂಧಿಸಿದ ಅವಶೇಷಗಳು ಹಾಗೂ ಕೋಟೆಯ ಗೋಡೆಯ ನಡುವಿನ ಕಾಲ ಸಂಬಂಧವನ್ನು ಕಂಡುಹಿಡಿದು ಆ ನಿವೇಶನದ ಕಾಲಮಾನದ ಬಗ್ಗೆ ಬೆಳಕು ಚೆಲ್ಲಿದರು. 
  1. ಹರಪ್ಪ ನಿವೇಶನದಲ್ಲಿದ್ದ ಸ್ಮಶಾನ R-37 ಹಾಗೂ ಸ್ಮಶಾನ –H ಇವುಗಳ ನಡುವಿನ ಕಾಲಾನುಕ್ರಮವನ್ನು ಅಧ್ಯಯನ ಮಾಡಲು 1946ರಲ್ಲಿ ಈ ವಿಧಾನವನ್ನು ಬಳಸಿದನು. ಇದಕ್ಕಾಗಿ ಅವನು ಅವೆರಡೂ ಸ್ಮಶಾನಗಳನ್ನು ಸೇರಿಸುವ ಹಾಗೆ 450 ಅಡಿ ಉದ್ದದ ಗುಂಡಿಯನ್ನು ಬಹು ದಕ್ಷತೆಯಿಂದ ತೋಡಿಸಿದನು. ಇದರಿಂದ ಸ್ಮಶಾನ R-37 ಸ್ಮಶಾನ –H ಕಾಲಾನುಕ್ರಮದಲ್ಲಿ ನಂತರದ್ದು ಎಂಬುದು ಮಾರ್ಟಿಮರವರ ಉತ್ಖನನದಿಂದ ಗೊತ್ತಾಯ್ತು. ಕರ್ನಾಟಕದ ಮಸ್ಕಿಯಲ್ಲಿ ಬಿ.ಕೆ ಥಾಪರ್ ನಡೆಸಿದ ಉತ್ಕನನದಲ್ಲೂ ಸಹ ಇದೇ ಮಾದರಿಯನ್ನು ಬಳಸಲಾಗಿತ್ತು.

ಸಿ. ಟ್ರೆಂಚಿಂಗ್ ಉತ್ಖನನ (Trenching Excavation)

ಪುರಾತತ್ತ್ವ ಶಾಸ್ತ್ರದಲ್ಲಿ, ಟ್ರೆಂಚಿಂಗ್ ಉತ್ಖನನ (ಇದನ್ನು ಹೆಚ್ಚಾಗಿ ಪ್ರಾಯೋಗಿಕ ಅಥವಾ ಟ್ರಯಲ್ ಟ್ರೆಂಚಿಂಗ್ ಎಂದು ಕರೆಯಲಾಗುತ್ತದೆ) ಎಂದರೆ ಭೂಮಿಯೊಳಗೆ ಉದ್ದವಾದ, ಕಿರಿದಾದ, ಆಯತಾಕಾರದ ಗುಂಡಿಗಳನ್ನು (ಕಂದಕಗಳನ್ನು) ಅಗೆಯುವ ವಿಧಾನವಾಗಿದೆ. ಒಮ್ಮೆಲೇ ದೊಡ್ಡ ಸಮತಲ ಪ್ರದೇಶವನ್ನು ಅನಾವರಣಗೊಳಿಸುವ ಬದಲು, ಪುರಾತತ್ತ್ವಜ್ಞರು ಒಂದು ನಿವೇಶನದ ಇತಿಹಾಸದ ಆಳವಾದ, ಲಂಬವಾದ “ಸೀಳಿಕೆ” (slice) ಅಥವಾ ಅಡ್ಡ-ವಿಭಾಗವನ್ನು ಪಡೆಯಲು ಟ್ರೆಂಚ್‌ಗಳನ್ನು ಬಳಸುತ್ತಾರೆ.

ಟ್ರೆಂಚಿಂಗ್‌ನ ಪ್ರಾಥಮಿಕ ಉದ್ದೇಶಗಳು

ಸ್ತರವಿಜ್ಞಾನವನ್ನು (Stratigraphy) ಅರ್ಥಮಾಡಿಕೊಳ್ಳುವುದು: ಟ್ರೆಂಚ್‌ನ ಅತ್ಯಂತ ಬೆಲೆಬಾಳುವ ಆಸ್ತಿಯೆಂದರೆ ಅದರ ಗೋಡೆಗಳು (ಇವುಗಳನ್ನು “ಪ್ರೊಫೈಲ್‌ಗಳು” ಅಥವಾ “ಸೆಕ್ಷನ್‌ಗಳು” ಎಂದು ಕರೆಯಲಾಗುತ್ತದೆ). ಈ ಲಂಬವಾದ ಮುಖಗಳು ಕಾಲಾನಂತರದಲ್ಲಿ ಮಣ್ಣು, ಅವಶೇಷಗಳು ಮತ್ತು ಮಾನವ ಚಟುವಟಿಕೆಯ ವಿಭಿನ್ನ ಪದರಗಳನ್ನು ಬಹಿರಂಗಪಡಿಸುತ್ತವೆ. ಇದು ಪುರಾತತ್ತ್ವಜ್ಞರಿಗೆ ನಿವೇಶನದ ಸಾಪೇಕ್ಷ ಕಾಲಾನುಕ್ರಮವನ್ನು (chronological timeline) ನಿರ್ಮಿಸಲು ಅನುವು ಮಾಡಿಕೊಡುತ್ತದೆ.

ನಿವೇಶನ ಪರೀಕ್ಷೆ ಮತ್ತು ಮಾದರಿ ಸಂಗ್ರಹ (Site Testing and Sampling): ಸಂಪೂರ್ಣ ಮುಕ್ತ-ಪ್ರದೇಶದ ಉತ್ಖನನಕ್ಕೆ ಅಗತ್ಯವಿರುವ ಅಪಾರ ಸಮಯ ಮತ್ತು ಹಣವನ್ನು ವಿನಿಯೋಗಿಸುವ ಮೊದಲು, ಟ್ರೆಂಚ್‌ಗಳು ಪರಿಶೋಧನಾ ಶೋಧಕಗಳಾಗಿ (exploratory probes) ಕಾರ್ಯನಿರ್ವಹಿಸುತ್ತವೆ. ನಿವೇಶನದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ರಚನೆಗಳು ಅಥವಾ ಕಲಾಕೃತಿಗಳು (artifacts) ಎಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ ಎಂಬುದನ್ನು ಲೆಕ್ಕಾಚಾರ ಮಾಡಲು ಅವು ಪುರಾತತ್ತ್ವಜ್ಞರಿಗೆ ಸಹಾಯ ಮಾಡುತ್ತವೆ.

ಗಡಿಗಳು ಮತ್ತು ರೇಖಾತ್ಮಕ ಲಕ್ಷಣಗಳನ್ನು ಪತ್ತೆಹಚ್ಚುವುದು: ಪುರಾತತ್ತ್ವ ಶಾಸ್ತ್ರದ ನಿವೇಶನದ ಭೌತಿಕ ಅಂಚುಗಳನ್ನು ನಿರ್ಧರಿಸಲು ಟ್ರೆಂಚಿಂಗ್ ಹೆಚ್ಚು ಪರಿಣಾಮಕಾರಿಯಾಗಿದೆ. ಪುರಾತನ ಗೋಡೆಗಳು, ರಸ್ತೆಗಳು, ಜಲಮಾರ್ಗಗಳು (aqueducts) ಅಥವಾ ರಕ್ಷಣಾತ್ಮಕ ಕಂದಕಗಳಂತಹ ರೇಖಾತ್ಮಕ ಲಕ್ಷಣಗಳನ್ನು ಛೇದಿಸಲು ಮತ್ತು ಪತ್ತೆಹಚ್ಚಲು ಇದು ಆದ್ಯತೆಯ ವಿಧಾನವಾಗಿದೆ.

ಅನುಕೂಲಗಳು ಮತ್ತು ಅನಾನುಕೂಲಗಳು

ಟ್ರೆಂಚಿಂಗ್ ಕಾಲಾನಂತರದ ಆಳವಾದ ಲಂಬ ನೋಟವನ್ನು ಒದಗಿಸುತ್ತದೆಯಾದರೂ, ಇದನ್ನು ಸಾಮಾನ್ಯವಾಗಿ ಇತರ ಉತ್ಖನನ ವಿಧಾನಗಳ ಜೊತೆಯಲ್ಲಿ ಅಥವಾ ಅವುಗಳಿಗಿಂತ ಪೂರ್ವಭಾವಿಯಾಗಿ ಬಳಸಲಾಗುತ್ತದೆ.

ಅನುಕೂಲಗಳು : ಇಡೀ ನಿವೇಶನವನ್ನು ತೆರವುಗೊಳಿಸುವುದಕ್ಕಿಂತ ಹೆಚ್ಚು ವೆಚ್ಚ-ದಕ್ಷ ಮತ್ತು ವೇಗವಾಗಿದೆ; ಮಣ್ಣಿನ ಪ್ರೊಫೈಲ್‌ಗಳ ಮೂಲಕ ಅತ್ಯುತ್ತಮ ಕಾಲಾನುಕ್ರಮದ ಡೇಟಾವನ್ನು ಒದಗಿಸುತ್ತದೆ; ಒಟ್ಟಾರೆ ನಿವೇಶನದ ಮೇಲಿನ ವಿನಾಶಕಾರಿ ಪರಿಣಾಮವನ್ನು ಕಡಿಮೆ ಮಾಡುತ್ತದೆ.

 ಅನಾನುಕೂಲಗಳು: ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಜನರು ಹೇಗೆ ಬದುಕುತ್ತಿದ್ದರು ಎಂಬುದರ ಸೀಮಿತ ಸಮತಲ (horizontal) ನೋಟವನ್ನು ಮಾತ್ರ ನೀಡುತ್ತದೆ; ಟ್ರೆಂಚ್‌ಗಳ ನಡುವಿನ ಅಗೆಯದ ಸ್ಥಳಗಳಲ್ಲಿ (gaps) ಅಡಗಿರಬಹುದಾದ ಪ್ರಮುಖ ರಚನೆಗಳು, ಕೊಠಡಿಗಳು ಅಥವಾ ಕಲಾಕೃತಿಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವನ್ನು ಹೊಂದಿರುತ್ತದೆ.

ಡಿ. ಜಾಲಂದರ ಉತ್ಖನನ (Grid Excavation)

ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿವರವಾಗಿ ತಿಳಿದುಕೊಳ್ಳುವ ದೃಷ್ಟಿಯಿಂದ ನಿವೇಶನದಲ್ಲಿ ವಿಸ್ತಾರವಾದ ಪ್ರದೇಶವನ್ನು ಉತ್ಖನನ ಮಾಡುವುದನ್ನು ವಿಸ್ತೃತ ಅಥವಾ ಸಮತಲ ಉತ್ಖನನ ಎಂದು ಕರೆಯಲಾಗಿದೆ. ಲಂಬ ಉತ್ಖನನ ವಿಧಾನದಿಂದ ಒಂದು ನಿವೇಶನದಲ್ಲಿನ ಸಾಂಸ್ಕೃತಿಕ ಕಾಲಾನುಕ್ರಮವನ್ನು ಮಾತ್ರ ತಿಳಿಯಬಹುದು. ಆದರೆ ಆ ಸಂಸ್ಕೃತಿಗಳ ಬಗ್ಗೆ ಸಮಗ್ರವಾಗಿ ಮತ್ತು ವಿವರವಾಗಿ ಅಧ್ಯಯನ ಮಾಡಲು ಸಮತಲ ಉತ್ಖನನ ಬಹಳ ಅಗತ್ಯವಾಗಿದೆ.

ಈ ಉತ್ಖನನದ ಮೂಲ ಗುರಿಯೆಂದರೆ ಒಂದು ನಿರ್ದಿಷ್ಟ ಕಾಲದ ಜನರ ಜೀವನ ಶೈಲಿ, ಧಾರ್ಮಿಕ ನಂಬಿಕೆಗಳು, ಆರ್ಥಿಕ ಸ್ಥಿತಿಗತಿ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ವಿವರವಾಗಿ ತಿಳಿದುಕೊಳ್ಳುವುದಾಗಿದೆ. ಇಲ್ಲಿ ನಿವೇಶನದ ಒಂದು ವಿಶಾಲವಾದ ಪ್ರದೇಶವನ್ನು ಅಗೆಯಲಾಗುತ್ತದೆ. ಇದರಿಂದ ಅಂದಿನ ಕಾಲದ ಕಟ್ಟಡಗಳ ವಿನ್ಯಾಸ, ರಸ್ತೆಗಳು ಹಾಗೂ ಇಡೀ ನಗರ ಯೋಜನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

 ಈ ಚಿತ್ರದಲ್ಲಿ ಕಾಣುವಂತೆ ಉತ್ಖನನ ಪ್ರದೇಶವನ್ನು ಚೌಕಗಳ ಜಾಲ (Grid) ರೂಪದಲ್ಲಿ ವಿಭಜಿಸಲಾಗಿದೆ.

1. ಚೌಕಗಳ ವಿನ್ಯಾಸ

  • ಎಲ್ಲಾ ಪ್ರದೇಶವನ್ನು ಸಮಾನ ಗಾತ್ರದ ಚೌಕಗಳಾಗಿ ಹಂಚಲಾಗಿದೆ
  • ಉದಾಹರಣೆ: A1, B1, C1, A2, B2, C2 ಇತ್ಯಾದಿ

ಪ್ರತಿ ಚೌಕವು ಒಂದು ಉತ್ಖನನ ಗುಂಡಿ (Pit)

2. ಅಡ್ಡಗೋಡೆಗಳು (Baulks)

  • ಚೌಕಗಳ ನಡುವೆ ಬಿಡಲಾಗಿರುವ ಜಾಗಗಳನ್ನು ಅಡ್ಡಗೋಡೆಗಳು ಎಂದು ಕರೆಯುತ್ತಾರೆ
  • ಇವು ಮಣ್ಣಿನ ಗೋಡೆಗಳಾಗಿ ಉಳಿಯುತ್ತವೆ

ಉಪಯೋಗ:

  • ಪದರಗಳನ್ನು (layers) ಗಮನಿಸಲು ಸಹಾಯ
  • ಭೂಮಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉಪಯುಕ್ತ

3. ಗೂಟಗಳು ಮತ್ತು ಬಿಂದುಗಳು

  • ಚಿತ್ರದಲ್ಲಿ ಕಾಣುವ ಕಪ್ಪು ಬಿಂದುಗಳು ಗೂಟಗಳನ್ನು (pegs) ಸೂಚಿಸುತ್ತವೆ
  • ಇವು ಜಾಲವನ್ನು ಸರಿಯಾಗಿ ಗುರುತಿಸಲು ಬಳಸಲಾಗುತ್ತದೆ

4. ಹೆಸರೀಕರಣ (Labeling System)

  • ಅಡ್ಡ ದಿಕ್ಕಿನಲ್ಲಿ → A, B, C, D
  • ಲಂಬ ದಿಕ್ಕಿನಲ್ಲಿ → 1, 2, 3

ಆದ್ದರಿಂದ:

  • A1, B1, C1 → ಮೊದಲ ಸಾಲು
  • A2, B2, C2 → ಎರಡನೇ ಸಾಲು

5. ಗುಂಡಿಗಳು (Pits)

  • ಕೆಲವು ಚೌಕಗಳಲ್ಲಿ ಹಚ್ಚಿದ (shaded) ಭಾಗಗಳು ಉತ್ಖನನಗೊಂಡ ಗುಂಡಿಗಳನ್ನು ಸೂಚಿಸುತ್ತವೆ
  • “Pit” ಎಂದು ಗುರುತಿಸಲಾಗಿದೆ

ಈ ರೀತಿಯ ಜಾಲ ವಿನ್ಯಾಸದಿಂದ:

  • ಪ್ರತಿ ಗುಂಡಿಯನ್ನು ಸರಿಯಾಗಿ ಗುರುತಿಸಲು ಸಾಧ್ಯ
  • ಸಿಕ್ಕ ಅವಶೇಷಗಳನ್ನು ನಿಖರವಾಗಿ ದಾಖಲಿಸಬಹುದು
  • ಉತ್ಖನನ ವೈಜ್ಞಾನಿಕ ಮತ್ತು ಕ್ರಮಬದ್ಧವಾಗುತ್ತದೆ 

ಈ ವಿಧಾನದಲ್ಲಿ ಉತ್ಖನನ ಮಾಡುವಾಗ ಸಿಗುವ ಅವಶೇಷಗಳನ್ನು ಸರಿಯಾಗಿ ದಾಖಲಿಸಲು ಮತ್ತು ಅವುಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಉತ್ಖನನ ಮಾಡಬೇಕಾದ ಪ್ರದೇಶವನ್ನು ಸಮಾನ ಅಳತೆಯ ಚಿಕ್ಕ ಚಿಕ್ಕ ಚೌಕಗಳನ್ನಾಗಿ ವಿಭಜಿಸಲಾಗುತ್ತದೆ. ಪ್ರತಿ ಎರಡು ಚೌಕಗಳ ನಡುವೆ ನಿಗದಿತ ಅಂತರದಲ್ಲಿ ಮಣ್ಣಿನ ಗೋಡೆಗಳನ್ನು ಬಿಡಲಾಗುತ್ತದೆ ಇವುಗಳನ್ನು ಅಡ್ಡ ಗೋಡೆಗಳು ಎಂದು ಕರೆಯಲಾಗುತ್ತದೆ. ಹೀಗೆ ವಿಂಗಡಿಸಿದ ಚೌಕಗಳ ವಿನ್ಯಾಸ ಜಾಲಂದರ ವಿನ್ಯಾಸದಂತೆ ಕಾಣುವುದರಿಂದ ಇದಕ್ಕೆ ಜಾಲಂದರ ವಿನ್ಯಾಸ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಆರಂಭದಲ್ಲಿ ಉತ್ಖನನ ಮಾಡುವಾಗ ಎಷ್ಟು ಆಳದವರೆಗೆ ಹೋಗಬಹುದು ಎಂಬುದನ್ನು ಮೊದಲೇ ನಿರ್ಧರಿಸಲಾಗುತ್ತದೆ. ಹೀಗೆ ನಿರ್ಧರಿಸಲಾದ ಪ್ರಮಾಣಕ್ಕಿಂತ ಒಂದು ಅಡಿ ಅಥವಾ ಮೀಟರ್ ಉದ್ದದ ಚೌಕವನ್ನು ಕೊರೆಯಬೇಕಾಗುತ್ತದೆ. ಉದಾ: ಉತ್ಖನನವು 5 ಮೀಟರ್‌ಗಳಷ್ಟು ಆಳದವರೆಗೆ ಹೋಗಬಹುದು ಎಂದು ನಿರ್ಧಾರ ಮಾಡಿದರೆ ಉತ್ಖನನಗೊಳ್ಳುವ ಚೌಕದ ಗುಂಡಿಯ ಉದ್ದಗಲ 5X5 ಮೀಟರ್ ಹಾಗೂ ಇದಕ್ಕಾಗಿ ನಿರ್ಮಿಸಲಾದ ಜಾಲಂದರದ ವಿನ್ಯಾಸ ಚೌಕದ ಉದ್ದಗಲಗಳು 6X6  ಮೀ ಇರಬೇಕು. ಆಗ ಸುಮಾರು 1 ಮೀ ಅಳತೆಯ ಅಡ್ಡಗೋಡೆಗಳಾಗಿ ಬಿಡಬೇಕಾಗುತ್ತದೆ. ಆದರೆ ಉತ್ಖನನಕ್ಕಾಗಿ ಕಾಯ್ದಿರಿಸಲಾದ ಚೌಕದ ಕನಿಷ್ಠ ಉದ್ದಗಲಗಳು 3X3 ಮೀಟರ್ ಇರಲೇಬೇಕು.

ಉತ್ಖನನಕ್ಕೆ ಹೋಗುವ ಮೊದಲು ನಿವೇಶನದ ಮೇಲ್ಮೈಯನ್ನು ಸ್ವಚ್ಛಗೊಳಿಸಬೇಕು. ಅದಕ್ಕೆ ಪೂರಕವಾದ ನಕ್ಷೆಯನ್ನು ತಯಾರಿಸಬೇಕು. ಆಗ ಮಾತ್ರ ಉತ್ಖನನದ ಕ್ರಿಯೆ ಸುಲಭವಾಗುತ್ತದೆ. ಉತ್ಖನನದ ವೇಳೆಯಲ್ಲಿ ದಿಕ್ಕುಗಳನ್ನು ಗಮನದಲ್ಲಿ ಇರಿಸಿಕೊಂಡು ನೆಲೆಯಲ್ಲಿ ಒಂದು ಸೂತ್ರ ರೇಖೆಯನ್ನು ಸ್ಥಾಪಿಸಬೇಕು. ಮೂಲಸೂತ್ರ ರೇಖೆಯ ಆರಂಭಿಕ ಬಿಂದುವಿನಲ್ಲಿ ಸುಮಾರು 4X4 ಸೆಂ.ಮೀ ಬದಿಗಳುಳ್ಳ 40 ಸೆಂ.ಮಿ ಉದ್ದದ ಚೂಪಾದ ಒಳ್ಳೆಯ ಮರದ ಗೂಟವನ್ನು ನೆಡಬೇಕು. ಇದರ ನಡುವಿನ ಬಿಂದುವಿಗೆ ದಾರವನ್ನು ಕಟ್ಟಲು ಒಂದು ಮೊಳೆಯನ್ನು ಹೊಡೆಯಬೇಕು. ಇದು ಜಾಲಂದರ ವಿನ್ಯಾಸ ವ್ಯವಸ್ಥೆಯ ಮೂಲ ಬಿಂದು ಎಂದು ನಿರ್ಧರಿಸಬೇಕು. ಈ ಮೂಲ ಬಿಂದುವಿನಿಂದ ಪೂರ್ವ ಹಾಗೂ ದಕ್ಷಿಣಕ್ಕೆ ಅಷ್ಟಷ್ಟೇ ನಿರ್ಧರಿಸಿದ ಪ್ರಮಾಣಕ ಅನುಗುಣವಾಗಿ ಗೂಟಗಳನ್ನು ನೆಡಬೇಕು.

ಒಂದು ಬದಿಯ ಗೂಟಗಳಿಗೆ ರೋಮನ್ ಅಕ್ಷರಗಳಿಂದ ಇನ್ನೊಂದು ಬದಿಯ ಗೂಟಗಳಿಗೆ ಅರಾಬಿಕ್ ಸಂಖ್ಯೆಗಳನ್ನು ಇಟ್ಟು ಹೆಸರಿಸಬೇಕು. ನಂತರ ಇನ್ನುಳಿದ ಗೂಟಗಳನ್ನು ಮೇಲಿನ ಗೂಟಗಳಿಗೆ ಸಮಾನಾಂತರವಾಗಿ ನೆಡಬೇಕು. ಇದರಿಂದ ಜಾಲಂದರ ವಿನ್ಯಾಸ ನಿರ್ಮಾಣವಾಗುತ್ತದೆ. ಹೀಗೆ ನಿರ್ಮಾಣವಾದ ಪ್ರತಿಯೊಂದು ಚೌಕವು ಉತ್ಖನನ ಮಾಡುವ ಗುಂಡಿಗಳಾಗುತ್ತವೆ. ಪ್ರತಿ ಗೂಟಕ್ಕೂ ಹೆಸರನ್ನು ನೀಡಿದ್ದರಿಂದ ಆಯಾ ಗೂಟಗಳ ಹೆಸರೇ ಗುಂಡಿಯ ಹೆಸರುಗಳಾಗಿರುತ್ತವೆ. ಇದರಿಂದ ಉತ್ಖನನ ಮಾಡಿದ ಅವಶೇಷಗಳನ್ನು ಸುಲಭವಾಗಿ ದಾಖಲು ಮಾಡಿಕೊಳ್ಳಬಹುದು..

ಜಾಲಂದರ ವಿನ್ಯಾಸದ ಉಪಯುಕ್ತತೆಗಳು:   ಜಾಲಂದರ ವಿನ್ಯಾಸ ವ್ಯವಸ್ಥೆಯ ಪ್ರಯೋಜನಗಳು ಈ ಕೆಳಗಿನಂತಿವೆ.

  1. ಉತ್ಖನನ ಪ್ರದೇಶದ ನಕ್ಷೆ ಹಾಗೂ ಛಾಯಾಚಿತ್ರಗಳನ್ನು ತೆಗೆಯಲು ಈ ಚೌಕುಗಳು ಚೌಕಟ್ಟಿನಂತೆ ಸಹಾಯ ಮಾಡುತ್ತವೆ.
  2. ಒಂದೇ ಬಾರಿಗೆ ವಿಶಾಲವಾದ ಪ್ರದೇಶದಲ್ಲಿ ಕ್ರಮಬದ್ಧವಾದ ಕೆಲಸ ಮಾಡಲು ಇದು ಅನುಕೂಲವಾಗಿದೆ.
  3. ಅವಶೇಷಗಳು ದೊರೆತ ನಿಖರವಾದ ಸ್ಥಳಗಳನ್ನು ಗುರುತಿಸಲು ಈ ಗ್ರಿಡ್ ಸಹಾಯ ಮಾಡುತ್ತದೆ.
  4. ಇದು ಸಾಮಾನ್ಯವಾಗಿ ವಿಶಾಲವಾದ ಅಥವಾ ಸಮತಲ ಉತ್ಖನನ ವಿಧಾನಗಳಲ್ಲಿ ಬಳಸುವ ಒಂದು ತಾಂತ್ರಿಕ ಕ್ರಮವಾಗಿದೆ.
  5. ಇತಿಹಾಸದ ವಿವಿಧ ಕಾಲಘಟ್ಟಗಳ ಸಂಸ್ಕೃತಿಯನ್ನು ವಿಸ್ತಾರವಾಗಿ ಅರಿತುಕೊಳ್ಳಲು ಇದೊಂದು ಉತ್ತಮ ಮಾರ್ಗವಾಗಿದೆ.
  6. ಮೂಲ ಸೂತ್ರರೇಖೆಗೆ ತೊಂದರೆಯಾಗದಂತೆ ಅಗತ್ಯಕ್ಕೆ ತಕ್ಕಂತೆ ಒಂದು ಚೌಕ ಗುಂಡಿಯನ್ನು ತೋಡಬಹುದು.
  7. ಜಾಲಂದರ ವಿನ್ಯಾಸ ವ್ಯವಸ್ಥೆಯ ಉತ್ಖನನವು ಯಾವುದಾದರೂ ಒಂದು ನಿವೇಶನವು ಬಹಿರಂಗಗೊಳಿಸುವ ಪ್ರಾದೇಶಿಕ ಉತ್ಖನನವಾಗಿದೆ.
  8. ಬೇರೆ ಬೇರೆ ಗುಂಡಿಗಳ ಅಡ್ಡಗೋಡೆಗಳಲ್ಲಿ ಕಾಣುವ ಸ್ತರ ವಿಂಗಡೆಯನ್ನು ಒಂದಕ್ಕೊಂದು ಹೋಲಿಕೆ ಮಾಡಿ ನೋಡಬಹುದು.
  9. ಉತ್ಖನನ ಸಮಯದಲ್ಲಿ ಗುಂಡಿಗಳನ್ನು ತೋಡಿದಾಗ ಸಿಗುವ ಮಣ್ಣನ್ನು ದೂರದವರೆಗೆ ಸಾಗಿಸಲು ಅಡ್ಡಗೋಡೆಗಳು ದಾರಿಯಂತಾಗುತ್ತವೆ.
  10. ಗುಂಡಿಗಳು ಸಾಕಷ್ಟು ಅಗಲವಾಗಿರುವುದರಿಂದ ಗುಂಡಿಯ ಅಡ್ಡಗೋಡೆಗಳ ಮೇಲೆ ಸಾಕಷ್ಟು ಬೆಳಕು ಬೀಳುತ್ತದೆ.
  11. ಪ್ರತಿ ಚೌಕಗುಂಡಿಯ ಒಂದು ಮೂಲೆಯಲ್ಲಿ ಚಿಕ್ಕ ನಿಯಂತ್ರಣ ಗುಂಡಿಯನ್ನು ತೋಡಿ ಮುಂಬರಲಿರುವ ಸ್ತರದ ಸ್ವರೂಪ, ಗಾತ್ರ ಹಾಗೂ ಅದರಲ್ಲಿರುವ ಪ್ರಾಚ್ಯ ಅವಶೇಷಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬಹುದು.

ಸ್ಮಶಾನ ನಿವೇಶನ ಉತ್ಖನನ:

ಸ್ಮಶಾನಗಳ ಉತ್ಖನನಗಳಿಗೆ ಜಾಲಂದರ ವಿನ್ಯಾಸ ವ್ಯವಸ್ಥೆ ಬಳಸಬಹುದಾದರೂ ಕೆಲವು ವಿಶೇಷ ಬಗೆಯ ದಫನ ದಿನ್ನೆಗಳು ಹಾಗೂ ಬೃಹತ್ ಶಿಲಾಗೋರಿಗಳ ಉತ್ಖನನಕ್ಕೆ ಚತುರ್ಭಾಗ ಪದ್ದತಿಯನ್ನು ಬಳಸಲಾಗುತ್ತದೆ. “ದಫನ ದಿನ್ನೆಗಳೆಂದರೆ ಶವವನ್ನು ಹೂಳಿದ ಸ್ಥಳವನ್ನು ಉದ್ದೇಶಪೂರ್ವಕವಾಗಿ ಕಲ್ಲು ಮಣ್ಣುಗಳಿಂದ ಮುಚ್ಚಿ ನಿರ್ಮಿಸಲಾದ ವೃತ್ತಾಕಾರದ ಅಥವಾ ಉದ್ದನೆಯ ದಿನ್ನೆಗಳು ಎಂದರ್ಥ. ಬೃಹತ್‌ ಶಿಲಾಗೋರಿಗಳಲ್ಲಿ ಎರಡು ವಿಧಗಳಿದ್ದು ಅವುಗಳಲ್ಲಿ ಕೋಣೆಯ ರೀತಿಯ ಗೋರಿಗಳು ಮತ್ತು ಕುಣಿಯಲ್ಲಿರುವ ದಫನಗಳು. ಇವುಗಳನ್ನು ಕಲ್ಲು ಹಾಗೂ ಮಣ್ಣಿನಿಂದ ಮುಚ್ಚಲಾಗಿರುತ್ತದೆ. ವೃತ್ತಾಕಾರದ ದಫನ ದಿನ್ನೆ ಹಾಗೂ ಕುಣಿಯಲ್ಲಿಯ ದಫನ ದಿನ್ನೆಗಳ ಸ್ಥಳಗಳನ್ನು ಚತುರ್ಭಾಗ ಉತ್ಖನನ ಪದ್ಧತಿಯಂತೆ ಅಗೆದು ತೆಗೆಯಲಾಗುತ್ತದೆ. ಕುಣಿಯಲ್ಲಿರುವ ದಫನ ಸ್ಥಳಗಳು ಸಾಮಾನ್ಯವಾಗಿ ಮೇಲ್ಮೈಯಲ್ಲಿ ಕಲ್ಲಿನ ಕಟ್ಟೆಯಿಂದ ದುಂಡಾಗಿ ಸುತ್ತುವರೆಯಲ್ಪಟ್ಟಿರುತ್ತವೆ.

ಈ ಹಂತದಲ್ಲಿ ಸಮಾಧಿ ಗುಡ್ಡವನ್ನು ಉತ್ತರ–ದಕ್ಷಿಣ ಮತ್ತು ಪೂರ್ವ–ಪಶ್ಚಿಮ ರೇಖೆಗಳ ಮೂಲಕ ನಾಲ್ಕು ಭಾಗಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಭಾಗವನ್ನು ಕ್ರಮಬದ್ಧವಾಗಿ ಉತ್ಖನನ ಮಾಡಲಾಗುತ್ತದೆ. ಮಧ್ಯದಲ್ಲಿ ಕ್ರಾಸ್ ಆಕಾರದ Baulk ಅನ್ನು ಬಿಡಲಾಗುತ್ತದೆ, ಇದು ಮಣ್ಣಿನ ಪದರಗಳನ್ನು (Stratigraphy) ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಈ ವಿಧಾನದಿಂದ ಪ್ರತಿ ಭಾಗದ ಫಲಿತಾಂಶಗಳನ್ನು ಹೋಲಿಕೆ ಮಾಡಿ ಸಮಾಧಿಯ ರಚನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಚತುರ್ಭಾಗ ಪದ್ಧತಿ:  ಈ ವಿಧಾನವನ್ನು ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಗೋರಿಗಳು ಅಥವಾ ದಿಬ್ಬಗಳಂತ ವೃತ್ತಾಕಾರದ ರಚನೆಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಉತ್ಖನನಕ್ಕೆ ಒಳಪಡುವ ದಿಬ್ಬ ಅಥವಾ ವೃತ್ತಾಕಾರದ ಸ್ಥಳವನ್ನು ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ರೇಖೆಗಳ ಮೂಲಕ ಪರಸ್ಪರ 90° ಕೋನದಲ್ಲಿ ಛೇದಿಸುವಂತೆ ನಾಲ್ಕು ಸಮಾನ ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಈ ನಾಲ್ಕು ಭಾಗಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗಗಳನ್ನು (ಉದಾ: 1 ಮತ್ತು 3 ನೇ ಭಾಗ) ಮೊದಲು ಉತ್ಖನನ ಮಾಡಬೇಕು. ಹೀಗೆ ಮಾಡುವುದರಿಂದ ಉತ್ಖನನ ಮಾಡಿದ ಭಾಗಗಳಲ್ಲಿ ಮಣ್ಣಿನ ಪದರುಗಳ ವಿನ್ಯಾಸ ಮತ್ತು ಒಳಗಿನ ರಚನೆಗಳನ್ನು ಸ್ಪಷ್ಟವಾಗಿ ಗಮನಿಸಲು ಸಾಧ್ಯವಾಗುತ್ತದೆ ಉಳಿದ ಎರಡು ಭಾಗಗಳನ್ನು ನಂತರದ ಹಂತದಲ್ಲಿ ಪರೀಕ್ಷಿಸಬೇಕು.

ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ 1947ರಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಬಹಳ ಜತನದಿಂದ ಶಿಲಾಗೋರಿಗಳನ್ನು ಉತ್ಖನನ ಮಾಡಿದ್ದಾರೆ. ಇದರಿಂದ ಕುಣಿಯಲ್ಲಿನ ದಫನಗಳಲ್ಲಿ ಕುಣಿಯ ಪೂರ್ವ ಭಾಗದ ಬದಿಯಲ್ಲಿ ಕುಣಿಯೊಳಗೆ ಇಳಿಯಲು ಅನುಕೂಲವಾಗುವಂತೆ ಮೇಲಿನಿಂದ ಇಳಿಜಾರು ಮಾಡಿರುವುದು ಕಂಡುಬಂದಿದೆ. ಇದು ಅಲ್ಲದೆ ಶವಸಂಸ್ಕಾರ ಮಾಡಿ ಜನರು ಯಾವ ದಿಕ್ಕಿನಿಂದ ಹೇಗೆ ಕುಣಿಯೊಳಗೆ ಇಳಿದು ವಸ್ತುಗಳನ್ನು ಇಟ್ಟರು ಎಂಬುದು ಸಹ ಸ್ಪಷ್ಟವಾಯಿತು. ಶವದ ಕುಣಿಗಳ ದಲ್ಲಿ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುವ ಬದಲಾಗಿ ಸಾಕಷ್ಟು ಅನುಭವಿ ಕೂಲಿ ಕಾರ್ಮಿಕರಿಂದ ಉತ್ಖನನ ಮಾಡಬೇಕು. ಅಂದಾಗ ಮಾತ್ರ ಸ್ತರವಿಂಗಡಣೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಬೃಹತ್ ಶಿಲೆಗಳನ್ನು ಉಪಯೋಗಿಸಿ ನಿರ್ಮಿಸಿರುವ ಕೊಠಡಿಯಂತಹ ಗೋರಿಗಳನ್ನು ಉತ್ಖನನ ಮಾಡುವ ಮುಂಚೆ ಕೊಠಡಿಯ ಹೊರಭಾಗಗಳು ಸ್ಪಷ್ಟವಾಗಿ ಕಾಣುವಂತೆ ಮಾಡಬೇಕು. ತದನಂತರ ಕೊಠಡಿಯ ಒಳಭಾಗವನ್ನು ಉತ್ಖನನ ಮಾಡುವಾಗ ಮೊದಲು ಅರ್ಧ ಭಾಗ ಕೊನೆಗೆ ಇನ್ನರ್ಧ ಭಾಗವನ್ನು ದಕ್ಷತೆಯಿಂದ ಸಾವಕಾಶವಾಗಿ ಅಗೆಯಬೇಕು. ಹೀಗೆ ಅಗೆದಾಗ ದೊರಕಿದ ಎಲ್ಲಾ ವಸ್ತುಗಳನ್ನು ಸಚಿತ್ರ ವಿವರದೊಂದಿಗೆ ದಾಖಲು ಮಾಡಿಕೊಳ್ಳಬೇಕು. ಕೊಠಡಿಯಂತಹ ಗೋರಿಯ ರಚನೆಯು ಹಾಳಾಗದಂತೆ ನೋಡಿಕೊಳ್ಳಬೇಕು. ಉತ್ಖನನ ಮುಗಿದ ನಂತರ ಕಲ್ಲು ಚಪ್ಪಡಿಯನ್ನು ಹಾಗೆ ಜೋಡಿಸಬೇಕು. ಎಲ್ಲಾ ವಿಧಾನಗಳಲ್ಲಿಯೂ ಒಂದಿಲ್ಲ ಒಂದು ಕಡೆ ಕೊರತೆ ಎದ್ದು ಕಾಣುತ್ತದೆ. ತಾಳ್ಮೆ ಹಾಗೂ ಅನುಭವದಿಂದ ಉತ್ಖನನದ ವಿಧಾನವನ್ನು ಹೆಚ್ಚು ಹೆಚ್ಚು ಸಮಗ್ರವಾಗಿಸುವ ಪ್ರಯತ್ನ ಸಾಗುತ್ತಲೇ ಇದೆ.  

ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

  1. ಕಾಂತೀಯ ಸಮೀಕ್ಷೆ
  2. ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ
  3. ವಿದ್ಯುತ್ ಕಾಂತೀಯ ಸರ್ವೇಕ್ಷಣೆ
  4. ಶಬ್ದದ ಆಧಾರದ ಸರ್ವೇಕ್ಷಣೆ
  5. ಮಣ್ಣಿನ ರಸಾಯನಿಕ ಪರೀಕ್ಷೆ
  6. ವೈಮಾನಿಕ ಸಮೀಕ್ಷೆ
  7. ಓರೆಯಾದ ಛಾಯಾಗ್ರಹಣ
  8. ಲಂಬ ಛಾಯಾಗ್ರಹಣ
  9. ವೈಮಾನಿಕ ಛಾಯಾಗ್ರಹಣ
  10. ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್‌
  11. NIR

ಕೇವಲ ಮೇಲ್ಮೈ ಸಮೀಕ್ಷೆ ಅಥವಾ ಉತ್ಖನನದಿಂದ ಮಾತ್ರವಲ್ಲದೆ ನೆಲದ ಅಡಿಯಲ್ಲಿ ಅಡಗಿರುವ ಗೋಡೆ, ಕುಲುಮೆ, ಗುಂಡಿ ಅಥವಾ ಹಳೆಯ ರಸ್ತೆಯ ಬಗ್ಗೆ ತಿಳಿಯಲು ಈ ವಿಧಾನ ಸಹಕಾರಿ. ಇವುಗಳ ಬಳಕೆಯ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.

1. ಕಾಂತೀಯ ಸಮೀಕ್ಷೆ: ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದರೆ. ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್‌ಗಳು ಭೂಮಿಯ ಕಾಂತೀಯ ಕ್ಷೇತ್ರಗಳಲ್ಲಿ ಸಣ್ಣ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಕುಲುಮೆಗಳು ಅಥವಾ ಮಣ್ಣಿನ ಪಾತ್ರೆಗಳನ್ನು ಸುಟ್ಟಾಗ ಅವುಗಳಲ್ಲಿ ಒಂದು ಶಾಶ್ವತ ಕಾಂತ ಗುಣ ಮೂಡುತ್ತದೆ. ಇದನ್ನು ಬಳಸಿಕೊಂಡು ನೆಲದಡಿಯಲ್ಲಿ ಅಡಗಿರುವ ಒಲೆಗಳು ಹಾಗೂ ಸುಟ್ಟ ಮಣ್ಣಿನ ರಚನೆಯನ್ನು ಪತ್ತೆಹಚ್ಚಬಹುದು. ಗೋಡೆಗಳು, ರಸ್ತೆಗಳಿಗಿಂತ ಮಣ್ಣಿನ ಗುಂಡಿಗಳು ಮತ್ತು ಸುಟ್ಟ ಜಾಗಗಳು ಹೆಚ್ಚಿನ ಕಾಂತಿಯತೆಯನ್ನು ಹೊಂದಿರುತ್ತವೆ. ಈ ವ್ಯತ್ಯಾಸದ ಆಧಾರದ ಮೇಲೆ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ. ಕಾಂತೀಯ ಸರ್ವೇಕ್ಷಣದಲ್ಲಿ ಪ್ರೋಟಾನ್ ಕಾಂತಮಾಪಕ ಎಂಬ ಕಾಂತ ಕ್ಷೇತ್ರದ ಸೂಕ್ಷ್ಮಗ್ರಾಹಿಯಾದ ಉಪಕರಣವನ್ನು ಬಳಸಲಾಗುವುದು. ಇದರ ಮೂಲಕ ಸರ್ವೇಕ್ಷಣ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಲಾಗುತ್ತದೆ. ಸುಮಾರು 3 ಜನರ ಒಂದು ತಂಡವು ಒಂದೇ ದಿನದಲ್ಲಿ ಅನೇಕ ಎಕರೆ ಪ್ರದೇಶಗಳನ್ನು ಸರ್ವೇಕ್ಷಣ ಮಾಡಬಹುದಾಗಿದೆ. ಈ ವಿಧಾನವನ್ನು 1985ರಲ್ಲಿಯೇ ಮೊದಲ ಬಾರಿಗೆ ಬಳಸಲಾಯಿತಾದರೂ ಭಾರತದಲ್ಲಿ ಇದು ಅಷ್ಟೊಂದು ಪ್ರಚಾರ ಪಡೆಯಲಿಲ್ಲ. ದಕ್ಷಿಣ ಭಾರತದ ಕಾವೇರಿ ಪಟ್ನಂ ಹಾಗೂ ಮಧುರೈಗಳಲ್ಲಿ ಈ ವಿಧಾನದ ಮೂಲಕ ಸರ್ವೇಕ್ಷಣ ನಡೆಸಿದರೂ ನಿರೀಕ್ಷಿತ ಪ್ರತಿಫಲ ಸಿಗಲಿಲ್ಲ.

 2. ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ: ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಇನ್ನೊಂದು ಪ್ರಮುಖವಾದ ಭೂ-ಭೌತಿಕ ವಿಧಾನವಾಗಿದೆ. ನೆಲದೊಳಗೆ ಲೋಹದ ಕಡ್ಡಿಗಳನ್ನು ಚುಚ್ಚಿ ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಹರಿಸಲಾಗುತ್ತದೆ. ಆಗ ತೇವಾಂಶವಿರುವ ಮಣ್ಣು ವಿದ್ಯುತ್‌ನ್ನು ಸುಲಭವಾಗಿ ಹರಿಯಲು ಬಿಡುತ್ತದೆ. ಆದರೆ ಒಣಗಿದ ವಸ್ತುಗಳು ಅಥವಾ ಕಲ್ಲಿನ ರಚನೆಗಳು ವಿದ್ಯುತ್ ಅನ್ನು ತಡೆಯುತ್ತವೆ. ಆಗ ವಿದ್ಯುತ್ ಎಷ್ಟು ಸುಲಭವಾಗಿ ಹರಿಯುತ್ತದೆ. ಎಂಬುದನ್ನು ಅಳೆಯುವ ಮೂಲಕ ನೆಲೆದಾಡಿಯಲ್ಲಿ ಏನಿದೆ ಎಂಬುದನ್ನು ಊಹಿಸಬಹುದು. ಕಾಂತಿಯ ಸರ್ವೇಕ್ಷಣೆಗೆ ಹೋಲಿಕೆ ಮಾಡಿದರೆ ವಿದ್ಯುತ್ ಪ್ರತಿರೋಧ ಸರ್ವೇಕ್ಷಣ ವಿಧಾನದಿಂದ ಹೆಚ್ಚಿನ ಲಾಭಗಳಿವೆ. ಈ ವಿಧಾನ ತೀರಾ ಸರಳ ಮತ್ತು ಕಡಿಮೆ ವೆಚ್ಚದಾಯಕವಾದುದು ಆಗಿದೆ. ಉಪಕರಣಗಳು ಸುಲಭವಾಗಿ ದೊರೆಯುವುದರಿಂದ ಸರ್ವೇಕ್ಷಣ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ. ಮಳೆ, ಭೂಗರ್ಭ, ಸಸ್ಯ, ಇವುಗಳ ಪ್ರಭಾವವು ವಿದ್ಯುತ್ ಪ್ರತಿರೋಧ ಸರ್ವೇಕ್ಷಣದಲ್ಲಿ ಕಂಡುಬರುತ್ತದೆ. ಒಂದು ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದರೆ ನೆಲದ ಮಣ್ಣು ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಆಗ ವಿದ್ಯುತ್ ವಾಹಕವು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿರಬಹುದು. ಇದರಿಂದ ಭೂಮಿಯ ಒಳಗಡೆ ಹುದುಗಿರುವ ಅವಶೇಷಗಳ ಪ್ರತಿರೋಧ ಪ್ರಮಾಣವ ಅರಿವಿಗೆ ಬಾರದೆ ಇರಬಹುದು. ಒಂದು ವೇಳೆ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆದಿದ್ದರೆ ಅಥವಾ ಹುಲ್ಲು ಬೆಳೆಯದಪ್ರದೇಶವಿದ್ದರೂ ಸಹ ವಿದ್ಯುತ್ ಪ್ರವಾಹದ ಪ್ರತಿರೋಧದ ಸರ್ವೇಕ್ಷಣೆಗೆ ತೊಂದರೆಯಾಗುತ್ತದೆ.

 ಪುರಾತತ್ವ ಸ್ಥಳಗಳ ಸರ್ವೇಕ್ಷಣ ಕಾರ್ಯದಲ್ಲಿ ವಿದ್ಯುತ್ ಪ್ರತಿರೋಧ ವಿಧಾನವನ್ನು 1947ರಲ್ಲಿ ಆರ್‌.ಜೆ.ಸಿ ಆಕ್ಟ್ ಕಿನ್ಸನ್‌ ಎಂಬಾತನು ಮೊದಲು ಬಳಸಿದನು. ಇದರ ಆಧಾರದಿಂದ ರೋಮನ್ ಕಾಲದ  ಬಳಪದ ಕಲ್ಲಿನಿಂದ ನಿರ್ಮಿಸಿದ ರಸ್ತೆ ಹಾಗೂ ಡಾರ್ಟೆಸ್ಟರ್ ಎಂಬಲ್ಲಿ ಹೊಸ ಶಿಲಾಯುಗದ ಕಂದಕವನ್ನು ಪತ್ತೆ ಮಾಡಲಾಯಿತು. ಭಾರತದಲ್ಲಿ ಈ ವಿಧಾನದ ಬಳಕೆ ಬಹಳ ಕಡಿಮೆ ಎಂದೇ ಹೇಳಬೇಕು. ಮಹಾರಾಷ್ಟ್ರದ ನಯಾಕುಂಡ ಎಂಬಲ್ಲಿ ಕಬ್ಬಿಣದ ಕುಲುಮೆಯನ್ನು ಕಂಡುಹಿಡಿಯಲಾಯಿತು. ಇದು ಕ್ರಿ.ಪೂ 700 ವರ್ಷಗಳ ಹಿಂದಿನದು ಎಂದು ವಿದ್ಯುತ್ ಪ್ರವಾಹ ಸರ್ವೇಕ್ಷಣದಿಂದ ಗುರುತಿಸಲಾಯಿತು.

 3. ವಿದ್ಯುತ್ ಕಾಂತೀಯ ಸರ್ವೇಕ್ಷಣೆ: ಇದು ಸಹ ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಮತ್ತೊಂದು ಅತ್ಯಾಧುನಿಕ ವೈಜ್ಞಾನಿಕ ವಿಧಾನವಾಗಿದೆ. ಇದು ಕಾಂತೀಯ ಸಮೀಕ್ಷೆ ಹಾಗೂ ವಿದ್ಯುತ್ ಪ್ರತಿರೋಧ ಸಮೀಕ್ಷೆ ಎರಡರ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದರ ಪ್ರಮುಖ ಅಂಶಗಳೆಂದರೆ ನೆಲದ ಮೇಲೆ ಒಂದು ಉಪಕರಣದ ಮೂಲಕ ವಿದ್ಯುತ್ ಕಾಂತೀಯ ಅಲೆಗಳನ್ನು ಭೂಮಿಯೊಳಗೆ ಕಳಿಸಲಾಗುತ್ತದೆ. ಈ ಅಲೆಗಳು ನೆಲದಡಿಯಲ್ಲಿರುವ ಲೋಹದ ವಸ್ತುಗಳು ಅಥವಾ ತೇವಾಂಶವಿರುವ ಮಣ್ಣನ್ನು ತಾಗಿದಾಗ ಅಲ್ಲಿ ಒಂದು ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿ ದ್ವಿತೀಯ ಕಾಂತಿಯ ಕ್ಷೇತ್ರ ಸೃಷ್ಠಿಯಾಗುತ್ತದೆ. ಈ ಉಪಕರಣವು ದ್ವಿತೀಯ ಕ್ಷೇತ್ರವನ್ನು ಅಳೆದು ನೆಲದ ಅಡಿಯಲ್ಲಿರುವ ವಾಹಕದ ಕಾಂತೀಯತೆಯನ್ನು ಗುರುತಿಸುತ್ತದೆ.

 ಈ ಉಪಕರಣದಿಂದ ನೆಲದಲ್ಲಿ ಹೂತು ಹೋಗಿದ್ದ ಪ್ರಾಚೀನ ನಾಣ್ಯಗಳು, ಆಯುಧಗಳು ಅಥವಾ ಲೋಹದ ಪಾತ್ರೆಗಳನ್ನು ಪತ್ತೆ ಮಾಡಬಹುದು. ಇದು ಅಲ್ಲದೆ ಮಣ್ಣಿನ ಪದರಿನಲ್ಲಿನ ವ್ಯತ್ಯಾಸಗಳು ಹೂತು ಹೋದ ಗೋಡೆಗಳು, ಕಾಲುವೆಗಳನ್ನು ಗುರುತಿಸಲು ಈ ಉಪಕರಣವೂ  ಸಹಾಯಕವಾಗುತ್ತದೆ. ಇದು ಸಂಪರ್ಕ ರಹಿತ ವಿಧಾನವಾಗಿದ್ದು ಇದರಿಂದ ನೆಲಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಲಾರದು. ಇದರಿಂದ ಭೂಮಿಯ ಸ್ವರೂಪ, ತೇವಾಂಶ, ಹೂತುಹೋದ ಮಾನವ ನಿರ್ಮಿತ ವಸ್ತುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

4. ಶಬ್ದದ ಆಧಾರದ ಸರ್ವೇಕ್ಷಣೆ: ನೆಲದ ಮೇಲ್ಮೈಯನ್ನು ಗುದ್ದಿ ಅದರಿಂದ ಬರುವ ಶಬ್ದದ ಆಧಾರದ ಮೇಲೆ ಸರ್ವೇಕ್ಷಣ ಮಾಡುವುದನ್ನು ಶಬ್ದದ ಆಧಾರದ ಸರ್ವೇಕ್ಷಣ ಎಂದು ಕರೆಯುತ್ತಾರೆ. ನೆಲದ ಮೇಲೆ ಗುದ್ದಿದಾಗ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ಶಬ್ದಗಳು ಬರುವುದನ್ನು ಗಮನಿಸಬಹುದು. ಗಟ್ಟಿಯಾದ ಮಣ್ಣು ಇರುವ ಸ್ಥಳದಲ್ಲಿ ಬರುವ ಶಬ್ದವು ಟೊಳ್ಳಾದ ಮಣ್ಣು ಇರುವ ಶಬ್ದದ ಪ್ರದೇಶವನ್ನು ಗುದ್ದಿದಾಗ ಬರುವ ಶಬ್ದಕ್ಕಿಂತ ಬೇರೆಯಾಗಿರುತ್ತದೆ. ಈ ವಿಧಾನವನ್ನು ಅನುಸರಿಸಿ ಸರ್ವೇಕ್ಷಣಾಕಾರನು ಭೂಮಿಯಲ್ಲಿ ಹುದುಗಿರುವ ಪುರಾತತ್ವ ವಸ್ತುಗಳ ಸ್ವರೂಪವನ್ನು ಅರಿತುಕೊಳ್ಳುವನು.

 5. ಮಣ್ಣಿನ ರಸಾಯನಿಕ ಪರೀಕ್ಷೆ: ಗತಕಾಲದ ವಸತಿ ನಿವೇಶನಗಳಲ್ಲಿನ ಮಣ್ಣಿನಲ್ಲಿ ಫಾಸ್ಪೇಟ್ ಹಾಗೂ ಸಾವಯವ ಪದಾರ್ಥಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಕಾರಣದಿಂದಾಗಿ ಕೆಲವು ಭಾಗಗಳಲ್ಲಿ ಪ್ರಾಚೀನ ನಿವೇಶನದ ಹಾಳು ಮಣ್ಣು ಕೂಡ ನೈಸರ್ಗಿಕ ಗೊಬ್ಬರವಾಗಿ ಉಪಯೋಗಕ್ಕೆ ಬರುತ್ತದೆ. ರಾಸಾಯನಿಕ ಪರೀಕ್ಷೆಯ ಮುಖಾಂತರ ನಿವೇಶನದ ಹಾಳು ಮಣ್ಣನ್ನು ಪರೀಕ್ಷಿಸಿ ಅದರಲ್ಲಿನ ಫಾಸ್ಪೈಟಿನ ಅಂಶವನ್ನು ಕಂಡುಕೊಳ್ಳಬಹುದು. ಈ ವಿಧಾನದ ಮೂಲಕ ಡೆನ್ಮಾಕ್‌, ಇಟಲಿ ಹಾಗೂ ಇಂಗ್ಲೆಂಡ್‌ಗಳಲ್ಲಿ ಪ್ರಾಚೀನ ನೆಲೆಗಳನ್ನು ಪತ್ತೆಹಚ್ಚಲಾಗಿದೆ. ಇದೇ ವಿಧಾನದ ಆಧಾರದ ಮೇಲೆ ಡೆನ್ಮಾರ್ಕಿನ ಕೋಪನ್ ಹೇಗನ್ ಹತ್ತಿರದ ಸ್ಟಾಕ್‌ಪ್ ಎಂಬ ಹಳೆಯ ಸ್ಥಳವನ್ನು ಶೋಧ ಮಾಡಲಾಗಿದೆ. ಅದರ ಸುತ್ತಮುತ್ತ ಸುಮಾರು 80 ಹೆಕ್ಟರ್ ಪ್ರದೇಶದಲ್ಲಿ 250 ಭಾಗಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಅವುಗಳ ರಸಾಯನಿಕ ವಿಶ್ಲೇಷಣೆ ಮಾಡಲಾಯಿತು. ಗುಜರಾತದ ಕಚ್‌ನ ನಾಗೇಶ್ವರದ ಶೋಧದಲ್ಲಿ ಇದೇ ಮಾದರಿಯನ್ನು ಬಳಸಲಾಯಿತು. ಈ ಪ್ರದೇಶದಲ್ಲಿ ಸಿಕ್ಕ ಅವಶೇಷಗಳ ಆಧಾರದ ಮೇಲೆ ಅಲ್ಲಿ ʻʻಚಿಪ್ಪಿನ ಉದ್ಯಮಗಳು ಇದ್ದ ಬಗ್ಗೆ ಮಾಹಿತಿ ದೊರಕಿತು.

 6. ವೈಮಾನಿಕ ಸಮೀಕ್ಷೆ: ವೈಮಾನಿಕ ಹಾಗೂ ದೂರ ಸಂವೇದಿ ಸಮೀಕ್ಷೆಗಳು ಪುರಾತತ್ವ ಸ್ಥಳಗಳ ಗುರುತಿಸುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ರೆನ್‌ಫ್ರೂ ಮತ್ತು ಬಾನ್‌ 200 ಎಂಬ ವೈಮಾನಿಕ ಸಮೀಕ್ಷೆಯಿಂದ ಗತಇತಿಹಾಸದ ಅವಶೇಷಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ದಾಖಲಿಸಬಹುದು. ಇಂಗ್ಲೆಂಡಿನಲ್ಲಿ OGS ಕ್ರಾಪರ್ಡ್, ಸಿರಿಯಾದಲ್ಲಿ ಫಾದರ್ ಅಂಟೋನಿಯನ್ ಪೊಯ್ಡೆಬಾರ್ಡ್‌, ಇರಾನಿನಲ್ಲಿ ಎರಿಚ್‌ ಸ್ಮಿತ್‌ರವರ ಕಾರ್ಯಗಳು ಈ ಹೊಸ ಕ್ಷೇತ್ರಕ್ಕೆ ಆರಂಭ ಒದಗಿಸಿದವು. ಇತ್ತೀಚಿಗೆ ಡ್ರೋನ್‌ ತಂತ್ರಜ್ಞಾನವು ಪುರಾತತ್ವಶಾಸ್ತ್ರದ ಸ್ಥಳಗಳನ್ನು ವಿವಿಧ ಕೋನಗಳಲ್ಲಿ ದಾಖಲಿಸುತ್ತದೆ. ಜೊತೆಗೆ ಉತ್ತಮ ತಿಳುವಳಿಕೆ ಮತ್ತು ಸಂಶೋಧನೆಗಾಗಿ ಸಂಬಂಧಪಟ್ಟ ಭೂ ಪ್ರದೇಶದ ವಿಡಿಯೋವನ್ನು ಸಹ ಚಿತ್ರೀಕರಿಸಬಹುದು.

 7. ಓರೆಯಾದ ಛಾಯಾಗ್ರಹಣ: ಮೇಲ್ಮೈಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಕೋನದಲ್ಲಿ ಅಳವಡಿಸಲಾದ ಕ್ಯಾಮರಾವನ್ನು ಬಳಸಿ ತೆಗೆಯುವ ವೈಮಾನಿಕ ಮಾಧ್ಯಮದಿಂದ ತೆಗೆಯುವ ಚಿತ್ರವಿದು. ಇದು ಕೋಟೆಗೋಡೆಗಳು ಬೀದಿಗಳು, ದ್ವಾರಗಳು, ಹಳ್ಳಗಳು, ಜಲಾಶಯಗಳು, ಸರೋವರಗಳು ಮುಂತಾದವುಗಳ ಛಾಯಾಚಿತ್ರಗಳನ್ನು ತೆಗೆದು ಭೂಮಿಯಲ್ಲಿರುವ ಘಟಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

 8. ಲಂಬ ಛಾಯಾಗ್ರಹಣ: ಮೇಲ್ಮೈಗೆ ಲಂಬವಾಗಿ ಅಳವಡಿಸಲಾದ ಕ್ಯಾಮೆರಾಗಳನ್ನು ಹೊಂದಿರುವ ವಿಮಾನಗಳಿಂದ ಲಂಬ ಛಾಯಾಗ್ರಹಣವನ್ನು ತೆಗೆದುಕೊಳ್ಳಲಾಗುವುದು. ಇದು ಸಮಾಧಿ ಅವಶೇಷಗಳ ಶೋಧ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತದೆ.

 9. ವೈಮಾನಿಕ ಛಾಯಾಗ್ರಹಣ: ತುಗಲಕ್‌ಬಾದಿನ ವಾಡಿಂಗ್ಟನ್ (1946ರಲ್ಲಿ), ಶಿಶು ಪಾಲ್‌ಗಡಲಾಲ್ (1949ರಲ್ಲಿ), ಸ್ಥಳಗಳಿಂದ ಪಡೆದ ವೈಮಾನಿಕ ಛಾಯಾಚಿತ್ರಗಳು ಪುರಾತತ್ವ ಸ್ಥಳಗಳನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಶಿಶುಪಾಲ್‌ಗಡ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಕ್ಕೂ ಇತ್ತೀಚಿನ ಗೂಗಲ್ ಅರ್ಥ ತೆಗೆದ ಚಿತ್ರಗಳ ನಡುವೆ ಹೋಲಿಕೆ ಮಾಡಿದಾಗ ಗಮನಾರ್ಹವಾದ ಬದಲಾವಣೆಗಳು ಕಂಡುಬಂದಿವೆ. 1948ರಲ್ಲಿ ತೆಗೆದ ವೈಮಾನಿಕ ಚಿತ್ರವು ಕೋಟೆಯ ಒಳಗೆ ಮತ್ತು ಸುತ್ತಲೂ ಸಾಕಷ್ಟು ಖಾಲಿ ಜಾಗಗಳನ್ನು ತೋರಿಸುತ್ತದೆ. ಆದರೆ ಗೂಗಲ್ ಅರ್ಥ ಚಿತ್ರವು ಸ್ಥಳಕ್ಕೆ ಬಹಳ ಹತ್ತಿರವಿರುವ ಪ್ರದೇಶಗಳ ಬಹಳ ವ್ಯಾಪಕ ಅಭಿವೃದ್ಧಿ ಹಾಗೂ ಅತಿಕ್ರಮಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಈ ಎರಡು ಚಿತ್ರಗಳಲ್ಲಿನ ಕುತೂಹಲಕಾರಿಯಾದ ಅಂಶವೆಂದರೆ ಕೋಟೆಯ ನಾಲ್ಕು ಮೂಲೆಗಳಲ್ಲಿ ಜಲಮೂಲಗಳು ಹಾಗೂ ಕೋಟೆಯ ವಾಯುವ್ಯಕ್ಕೆ ಮತ್ತೊಂದು ಜಲ ಮೂಲ ಪತ್ತೆಯಾದುದು. ಇತ್ತೀಚಿಗೆ ಗೂಗಲ್‌ ಅರ್ಥ ಪುರಾತತ್ವ ಸ್ಥಳಗಳ ಸಂಶೋಧನೆಗೆ ಬಹಳ ಉಪಯುಕ್ತ ಸಾಧನವಾಗಿದೆ. 2013ರಲ್ಲಿ ಕಠಾರಿಯಾ ಅವರ ಸಂಗಡಿಗರು ತಲ್ಪಡ ಸ್ಥಳದಲ್ಲಿ ಶೋಧ ಕಾರ್ಯ ಮಾಡಲು ಗೂಗಲ್ ಅರ್ಥ್ ಬಳಸಿದರು

10. ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್‌: ಇದು ಬೆಳಕಿನ ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನ. ಪುರಾತತ್ವ ಶಾಸ್ತ್ರದ ಪರಿಶೋಧನೆ ಮತ್ತು ತನಿಖೆಗಳ ಕ್ಷೇತ್ರದಲ್ಲಿ ಉಪಯೋಗ ಇತ್ತೀಚಿಗೆ ಜಗತ್ತಿನಾದ್ಯಂತ ಹೆಚ್ಚಾಗಿದೆ. ಅಂಕೋರ್‌ವಾಟ್‌, ಮಾಯಾನ್‌ ಸ್ಟೇಟ್‌ ಆಫ್‌ ಕ್ಯಾರಕೋಲ್‌, ಬೇಲಿಜ್‌ದ ಯಶಸ್ವಿ ಛಾಯಾಗ್ರಹಣದ ಆಧಾರದ ಮೇಲೆ ಲಿಡಾರ್ನ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿಯೂ ಪುರಾತತ್ವ ನೆಲೆಗಳನ್ನು ಪತ್ತೆಹಚ್ಚಲು ಇದು ಸಹಕಾರಿಯಾಯಿತು.

11.  NIR: ನಿಯರ್-ಇನ್ಫ್ರಾರೆಡ್ (NIR) ಛಾಯಾಗ್ರಹಣವು, ಐತಿಹಾಸಿಕವಾಗಿ ಸಾಂಪ್ರದಾಯಿಕ ಫಿಲ್ಮ್-ಆಧಾರಿತ ವೈಮಾನಿಕ ಸಮೀಕ್ಷೆಯ (aerial reconnaissance) ಮೂಲಕ ಬಳಸಲ್ಪಟ್ಟಿದೆ. ಇದು ಮಣ್ಣಿನ ಒಂದು ಕಣವನ್ನೂ ಕದಲಿಸದೆ ಭೂಮಿಯ ಮೇಲ್ಮೈಯ ಕೆಳಗೆ ಇಣುಕಿ ನೋಡಲು ಸಹಾಯ ಮಾಡುವ ಪ್ರಬಲ ಸಾಧನವಾಗಿದೆ. ಗೋಚರ ಬೆಳಕನ್ನು ಸೆರೆಹಿಡಿಯುವ ಸಾಮಾನ್ಯ ಛಾಯಾಗ್ರಹಣದಂತಲ್ಲದೆ, NIR ಫಿಲ್ಮ್ ಮಾನವನ ದೃಷ್ಟಿಗಿಂತ ಮೀರಿದ ತರಂಗಾಂತರಗಳನ್ನು (wave lengths) ದಾಖಲಿಸುತ್ತದೆ, ಇದು ಸಸ್ಯಗಳ ಆರೋಗ್ಯ ಮತ್ತು ಮಣ್ಣಿನ ತೇವಾಂಶದಲ್ಲಿನ ವ್ಯತ್ಯಾಸಗಳನ್ನು ಅಳೆಯಲು ಅಸಾಧಾರಣವಾಗಿ ಸೂಕ್ಷ್ಮವಾಗಿರುತ್ತದೆ. ಕಲ್ಲಿನ ಗೋಡೆಗಳು, ಅಡಿಪಾಯಗಳು ಅಥವಾ ಮುಚ್ಚಿಹೋದ ಕಂದಕಗಳಂತಹ ಪ್ರಾಚೀನ ರಚನೆಗಳು ಹೊಲದ ಅಡಿಯಲ್ಲಿ ಹೂತುಹೋದಾಗ, ಅವು ತಮ್ಮ ಮೇಲಿರುವ ಮಣ್ಣಿನ ಒಳಚರಂಡಿ ಮತ್ತು ಪೋಷಕಾಂಶಗಳ ಮಟ್ಟವನ್ನು ಬದಲಾಯಿಸುತ್ತವೆ. ಇದು ಮೇಲಿರುವ ಸಸ್ಯವರ್ಗವು ಸ್ವಲ್ಪ ವಿಭಿನ್ನವಾಗಿ ಬೆಳೆಯುವಂತೆ ಮಾಡುತ್ತದೆ, ಇದನ್ನು ಪುರಾತತ್ತ್ವಜ್ಞರು “ಬೆಳೆಯ ಗುರುತುಗಳು (crop marks)” ಎಂದು ಕರೆಯುತ್ತಾರೆ. ಈ ಸಣ್ಣ ವ್ಯತ್ಯಾಸಗಳು ಸಾಮಾನ್ಯವಾಗಿ ಬರಿಗಣ್ಣಿಗೆ ಅದೃಶ್ಯವಾಗಿದ್ದರೂ, NIR ಛಾಯಾಗ್ರಹಣವು ಕ್ಲೋರೊಫಿಲ್ ಮತ್ತು ತೇವಾಂಶದ ವಿವಿಧ ಹಂತಗಳನ್ನು ಸ್ಪಷ್ಟವಾದ ವ್ಯತಿರಿಕ್ತತೆಯಲ್ಲಿ (stark contrast) ಸೆರೆಹಿಡಿಯುತ್ತದೆ. ಇದರಿಂದ ಸಂಶೋಧಕರು ಆಕಾಶದಿಂದಲೇ ಗುಪ್ತ ವಸಾಹತುಗಳು ಮತ್ತು ಮರೆತುಹೋದ ಮಣ್ಣಿನ ರಚನೆಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗುತ್ತದೆ.

ಈ ನಿರ್ದಿಷ್ಟ ವೈಮಾನಿಕ ತಂತ್ರವು ಭಾರತೀಯ ಉಪಖಂಡದ ಕಳೆದುಹೋದ ಭೌಗೋಳಿಕತೆಯನ್ನು, ಅದರಲ್ಲೂ ಮುಖ್ಯವಾಗಿ ಸರಸ್ವತಿ ನದಿಯ ಪ್ರಾಚೀನ, ಒಣಗಿಹೋದ ಕಾಲುವೆಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭೌಗೋಳಿಕವಾಗಿ ಘಗ್ಗರ್-ಹಕ್ರಾ ಪೇಲಿಯೊಚಾನಲ್ ವ್ಯವಸ್ಥೆ (Ghaggar-Hakra paleochannel system) ಎಂದು ಕರೆಯಲ್ಪಡುವ ಈ ಬೃಹತ್ ಜಲಮಾರ್ಗವು, ಒಂದು ಕಾಲದಲ್ಲಿ ಇಂದಿನ ಹರಿಯಾಣ, ರಾಜಸ್ಥಾನ ಮತ್ತು ಪಾಕಿಸ್ತಾನದ ಚೋಲಿಸ್ತಾನ್ ಮರುಭೂಮಿಯಾದ್ಯಂತ ಹರಪ್ಪನ್ (ಸಿಂಧೂ ಕಣಿವೆ ನಾಗರಿಕತೆ) ವಸಾಹತುಗಳ ದಟ್ಟವಾದ ಜಾಲವನ್ನು ಪೋಷಿಸುತ್ತಿತ್ತು. ಸಾವಿರಾರು ವರ್ಷಗಳ ಅವಧಿಯಲ್ಲಿ, ಭೂಕಂಪನದ (tectonic) ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಗಳಿಂದಾಗಿ ನದಿ ಬತ್ತಿಹೋಯಿತು ಹಾಗೂ ಅದರ ಹರಿವಿನ ಹಾದಿಯು ಮರಳು ಮತ್ತು ಹೂಳಿನ ದಪ್ಪ ಪದರಗಳ ಅಡಿಯಲ್ಲಿ ಹೂತುಹೋಯಿತು. ಆದಾಗ್ಯೂ, ಈ ಪ್ರಾಚೀನ ನದಿಪಾತ್ರಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಹೋಲಿಸಿದರೆ ಇನ್ನೂ ಆಳವಾದ ಅಂತರ್ಜಲದ ತೇವಾಂಶವನ್ನು ಉಳಿಸಿಕೊಂಡಿವೆ. ಇದು ಮೇಲ್ಮೈ ಸಸ್ಯವರ್ಗದ ಆರೋಗ್ಯದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ. ವೈಮಾನಿಕ ಸಮೀಕ್ಷೆ ಮತ್ತು NIR ಇಮೇಜಿಂಗ್ ಅನ್ನು ಬಳಸುವ ಮೂಲಕ, ಸಂಶೋಧಕರು ತೇವಾಂಶದ ಈ ಉದ್ದನೆಯ, ಅಂಕುಡೊಂಕಾದ ಮಾರ್ಗಗಳನ್ನು ಪತ್ತೆಹಚ್ಚಬಹುದು. ಇದು ಸರಸ್ವತಿ ನದಿಯ ಅದೃಶ್ಯ ಹಾದಿಯನ್ನು ಪರಿಣಾಮಕಾರಿಯಾಗಿ ಮ್ಯಾಪ್ ಮಾಡುತ್ತದೆ ಮತ್ತು ನಶಿಸಿಹೋದ ಅದರ ದಡದಲ್ಲಿ ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಪ್ರಾಚೀನ ವ್ಯಾಪಾರ ಕೇಂದ್ರಗಳು ಮತ್ತು ನಗರಗಳತ್ತ ಪುರಾತತ್ತ್ವಜ್ಞರಿಗೆ ನೇರವಾಗಿ ಮಾರ್ಗದರ್ಶನ ನೀಡುತ್ತದೆ.

ಪುರಾತತ್ವ ಅವಶೇಷಗಳನ್ನು ಪತ್ತೆಹಚ್ಚಲು ವಿವಿಧ ವೈಜ್ಞಾನಿಕ ಪರಿಕರಗಳನ್ನು ಬಳಸಲಾಗುತ್ತಿದ್ದು ಅದರಿಂದ ಭೂಮಿಯ ಮೇಲಿನ ಮಣ್ಣಿನ ಗುರುತುಗಳು ಹಾಗೂ ನೆರಳಿನ ಗುರುತುಗಳು ಮತ್ತು ಬೆಳೆಯ ಗುರುತುಗಳನ್ನು ಕಂಡುಹಿಡಿಯಬಹುದಾಗಿದೆ. ನೆಲದಲ್ಲಿ ಹೂತು ಹೋಗಿರುವ ಕಂದಕ, ಗೋಡೆ, ಬೀದಿ ಮುಂತಾದವುಗಳನ್ನು ಮತ್ತು ಅವುಗಳಲ್ಲಿನ ಮಣ್ಣಿನ ರೂಪವನ್ನು ಪತ್ತೆ ಮಾಡಬಹುದಾಗಿದೆ. ಕಂದಕದ ಮಣ್ಣು ಸಡಿಲವಾದ ಕಾರಣ ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಂಡು ದಟ್ಟವರ್ಣದ್ದಾಗಿರುತ್ತದೆ. ಹಾಗೆಯೇ ಕಟ್ಟಡ, ಗೋಡೆ ಹಾಗೂ ಬೀದಿಗಳಲ್ಲಿ ಮಣ್ಣು ದೃಢವಾದ ಕಾರಣ ಅಲ್ಲಿ ತೇವಾಂಶ ಕಡಿಮೆ ಇದ್ದು ಅದು ತಿಳಿವರ್ಣದ್ದಾಗಿ ಕಾಣುತ್ತದೆ. ಇಂತಹ ವ್ಯತ್ಯಾಸಗಳನ್ನು ಮಣ್ಣಿನ ಗುರುತುಗಳು ಎಂದು ಕರೆಯುತ್ತಾರೆ. 

 ಉಪಸಂಹಾರ : ಹೀಗೆ ಆಧುನಿಕ ಉಪಕರಣಗಳನ್ನು ಬಳಸಿಕೊಂಡು  ಐತಿಹಾಸಿಕ  ಸ್ಥಳಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಭೂಮಿಯ ಒಳಗೆ ಹುದುಗಿರುವ ಪ್ರಾಚ್ಯ ಅವಶೇಷಗಳನ್ನು ಸಹ ಪತ್ತೆ ಹಚ್ಚಲು ಮತ್ತು ಡಿಜಿಟಲ್‌ ರೂಪದಲ್ಲಿ ದಾಖಲಿಸಲು ಆಧುನಿಕ ಉಪಕರಣಗಳಿದ್ದು ಗತ ಇತಿಹಾಸವನ್ನು ಅನಾವರಣಗೊಳಿಸುವ ಕುತೂಹಲ ಹೆಚ್ಚಾಗುತ್ತಲೇ ಇದೆ.

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು  (Methods of Exploration)

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು (Methods of Exploration)

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು

(Methods of Exploration)

1. ನಕ್ಷೆಗಳ ಅಧ್ಯಯನ

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ       

               A. ಬೆಟ್ಟಗಳು

             B. ಕಣಿವೆ ಮಾರ್ಗಗಳು

             C. ನದಿಗಳು

             D. ಸರೋವರಗಳು ಮತ್ತು ಕೆರೆಗಳು

              E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು

3. ಜನಾಂಗ ವಿವರಣೆ

4. ಐತಿಹಾಸಿಕ ಸಾಹಿತ್ಯ

5. ಪ್ರಕಟಿತ ವರದಿಗಳು

6. ಸ್ಥಳ ಪುರಾಣಗಳು, ದಂತ ಕಥೆಗಳು

7. ಸ್ಥಳ ನಾಮಗಳು

ಕ್ಷೇತ್ರ ಕಾರ್ಯವನ್ನು ಮಾಡುವಾಗ ಅನುಸರಿಸುವ ತಂತ್ರ, ವಿಧಾನ ಮತ್ತು ಅದಕ್ಕೆ ಬೇಕಾಗುವ ಸಿಬ್ಬಂದಿಗಳನ್ನು ಸರ್ವೇಕ್ಷಣೆ ಅವಲಂಬಿಸಿದೆ. ಸಂಶೋಧಕರು ಪ್ರಮುಖವಾಗಿ ನದಿ ಮುಖಗಳು, ಮರಳು, ಶೇಖರಣೆಯ ಸ್ತರಗಳು, ಶಿಲೆಗಳು ಹಾಗೂ ಮಣ್ಣಿನ ಸ್ವರೂಪ, ಪಳೆಯುಳಿಕೆಗಳು, ಕಲ್ಲಿನ ಉಪಕರಣಗಳು ಮುಂತಾದವುಗಳ ಕುರಿತು ಅಧ್ಯಯನ ಮಾಡಬೇಕು. ಸರ್ವೇಕ್ಷಣ ಮಾಡುವಾಗ ತಾವು ಮಾಡುವ ಸರ್ವೆಯ ಭೂಮಿಯ ಸ್ವರೂಪ ಹಾಗೂ ಭೂವಿಜ್ಞಾನದ ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕು. ಇತಿಹಾಸ ಪೂರ್ವಕಾಲದ ಸರ್ವೆ ಕಾರ್ಯದಲ್ಲಿ ಸ್ಥಳ ಪುರಾಣಗಳಾಗಲಿ ಅಥವಾ ಸ್ಥಳೀಯ ಮಾರ್ಗದರ್ಶಕರಿಂದಾಗಲೀ ಯಾವುದೇ ಮಾಹಿತಿಗಳು ಸಿಗದೇ ಹೋಗಬಹುದು. ಆದರೆ ಕೆಲವು ಕಡೆಗಳಲ್ಲಿ ದನ ಮೇಯಿಸುವವರು, ಬೇಟೆಗಾರರು ಗುಹಾಂತರ ದೇವಾಲಯಗಳನ್ನು ಶೋಧಿಸಲು ಸಹಾಯ ನೀಡಬಹುದು.

 ಆದರೆ ಇತಿಹಾಸ ಕಾಲದ ಸ್ಥಳಗಳನ್ನು ಸರ್ವೆ ಮಾಡುವಾಗ ಸಾಹಿತ್ಯ, ಶಾಸನ ಹಾಗೂ ಸಾಂಪ್ರದಾಯಿಕ ಸಾಮಗ್ರಿಗಳನ್ನು ಉಪಯೋಗಿಸಬಹುದು. ಅನ್ವೇಷಕರು ಯಾವ ಪ್ರದೇಶದಲ್ಲಿ ಅನ್ವೇಷಣೆ ಮಾಡಲು ಬಯಸುವರು ಆ ಪ್ರದೇಶದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿರಬೇಕು. ಸರ್ವೆ ಕಾರ್ಯದಲ್ಲಿ ಯಾವ ವಸ್ತುಗಳು ನೆರವಾಗಬಹುದು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.

1. ನಕ್ಷೆಗಳ ಅಧ್ಯಯನ:

ಭಾರತದಲ್ಲಿ ಪುರಾತತ್ವ ಸ್ಥಳಗಳನ್ನು ಅನ್ವೇಷಣೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞನಿಗೆ ಹಲವಾರು ನಮೂನೆಗಳು ನೆರವಾಗಬಲ್ಲವು. ಅವುಗಳಲ್ಲಿ ಅತಿ ಮುಖ್ಯವಾಗಿ ನೆರವಾಗುವ ನಮೂನೆಗಳೆಂದರೆ ನಕ್ಷೆಗಳು. ಈ ನಕ್ಷೆಗಳನ್ನು ಬೇರೆ ಬೇರೆ ರಾಜ್ಯಗಳು, ಜಿಲ್ಲೆಗಳು ತಾಲೂಕುಗಳು ಹಾಗೂ ಗ್ರಾಮಗಳಿಗೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ತಯಾರಿಸಿ ಸಂಶೋಧಕರಿಗೆ ನೀಡುತ್ತದೆ. ಇವುಗಳು ಸರ್ವೇಕ್ಷಣ ಮಾಡುವ ಅಧಿಕಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುತ್ತವೆ. ಅವುಗಳಲ್ಲಿ ಫೋಟೋಶೀಟುಗಳು ಎನ್ನುವ ನಕ್ಷೆಗಳು ಪ್ರಮುಖವಾಗಿವೆ. ಇವುಗಳು 1 ಇಂಚಿಗೆ 4 ಮೈಲಿ ಸ್ಕೇಲನ್ನು ಹೊಂದಿದ್ದು ಇವುಗಳು ನಗರಗಳು, ಗ್ರಾಮಗಳು, ಕೋಟೆ-ಕೊತ್ತಲುಗಳು, ಹೆದ್ದಾರಿಗಳು, ಚಿಕ್ಕ-ಚಿಕ್ಕ ರಸ್ತೆಗಳು, ಬಂಡಿದಾರಿಗಳು, ರೈಲು ದಾರಿಗಳು ಹಾಗೂ ನಿಲ್ದಾಣಗಳ ಕುರಿತು ಮಾಹಿತಿ ನೀಡುತ್ತವೆ. ಹೀಗಾಗಿ ಅನ್ವೇಷಕನು ತಾನು ಸಾಗುವ ದಾರಿಯನ್ನು ಸುಲಭವಾಗಿ ತಿಳಿಸುವ ಕೆಲಸವನ್ನು ಈ ನಕ್ಷೆಗಳು ಮಾಡುತ್ತವೆ. ಇದು ಅಲ್ಲದೆ ವಿಶ್ರಾಂತಿ ಧಾಮಗಳು, ಪ್ರವಾಸಿ ಬಂಗಲೆಗಳು, ಧರ್ಮ ಶಾಲೆಗಳು, ಛತ್ರಗಳು ಸಹ ಫೋಟೋಶೀಟ್‌ಗಳ ಮೂಲಕ ಪತ್ತೆಹಚ್ಚಲು ನೆರವಾಗುತ್ತದೆ. ಹಾಗೆಯೇ ದೇವಾಲಯಗಳು, ಮಸೀದಿಗಳು, ಚರ್ಚುಗಳು ಸಹ ಫೋಟೋಶೀಟ್‌ಗಳಲ್ಲಿ ಸೂಚಿಸಲ್ಪಟ್ಟಿರುತ್ತವೆ.

ನಕ್ಷೆಗಳಲ್ಲಿ ಭೂ ಮೇಲ್ಮೈ ಲಕ್ಷಣಗಳು, ನದಿಗಳು, ಗಿರಿಧಾಮಗಳು, ಸರೋವರಗಳು, ಬುಗ್ಗೆಗಳು ಹಾಗೂ ಅರಣ್ಯಗಳನ್ನು ಸೂಚಿಸಲಾಗಿರುತ್ತದೆ. ನದಿ ಸರೋವರ, ನೀರಿನ ಬುಗ್ಗೆಗಳು ಇರುವ ಪ್ರದೇಶಗಳಲ್ಲಿ ಹಳೆಯ ಶಿಲಾಯುಗದ ಕುರುಹುಗಳು ಇದ್ದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಶತಮಾನಕ್ಕಿಂತ ಹಿಂದಿನ ನಕ್ಷೆಗಳು ಹಾಗೂ ಇಂದಿನ ನಕ್ಷೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಹಳೆಯ ಕಾಲದ ನಕ್ಷೆಗಳಲ್ಲಿ ಶಿಲಾಯುಗದ ಸಮಾಧಿ ಸ್ಥಳಗಳನ್ನು ಸೂಚಿಸಲಾಗಿರುತ್ತದೆ. ಆದರೆ ಹೊಸ ನಕ್ಷೆಗಳಲ್ಲಿ ವಿಪರೀತವಾದ ಕೃಷಿ ಕಾರ್ಯಗಳ ಪರಿಣಾಮವಾಗಿ ಅಂತಹ ನೆಲೆಗಳು ಅವನತಿ ಹೊಂದಿರುವುದು ಗೊತ್ತಾಗುತ್ತದೆ. ಮೊಗಲರು, ಪೋರ್ಚುಗೀಸರು, ಆದಿಲ್‌ಶಾಹಿ, ಮರಾಠರು ಹಾಗೂ ಆಂಗ್ಲರ ಕಾಲದ ಹಳೆಯ ನಕ್ಷೆಗಳು ನಮಗೆ ದೊರಕಿದ್ದು ಅವುಗಳಲ್ಲಿ ಆಯಾ ರಾಜರುಗಳ ಅವಧಿಯಲ್ಲಿನ ಕೋಟೆಗಳು, ದೇವಾಲಯಗಳು, ಮಸೀದಿಗಳು, ಸ್ಮಶಾನಗಳು, ಬೀದಿಗಳು ರಣರಂಗಗಳು ಹಾಗೂ ಸಮಾಧಿಗಳನ್ನು ಸೂಚಿಸಲಾಗಿರುತ್ತದೆ.

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ:

ರಾಜಕೀಯ ಅಥವಾ ಸಾಮಾನ್ಯ ನಕ್ಷೆಗಳನ್ನು ನೋಡಿದಾಗ ಆಯಾ ಪ್ರದೇಶಗಳಲ್ಲಿ ಸಿಗುವ ಖನಿಜಗಳು, ಮಣ್ಣುಗಳು, ಪ್ರಾಣಿಗಳು ಹಾಗೂ ಸಸ್ಯ ರಾಶಿಯ ವಿವರಗಳು ಅಲ್ಲಿರುವುದಿಲ್ಲ. ಬದಲಾಗಿ ಪ್ರಾಕೃತಿಕ ನಕ್ಷೆಗಳಲ್ಲಿ ಮಾತ್ರ ಇಂತಹ ವಿವರಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಜಿಲ್ಲಾ‌ ಗೆಜೆಟಿಯರ್ ಹಾಗೂ ಇಂಪೀರಿಯಲ್ ಗೆಜೆಟಿಯರ್ ಮೊದಲಾದವುಗಳು ಭೂ ಮೇಲ್ಮೈ ಲಕ್ಷಣಗಳ ಅಧ್ಯಯನಕ್ಕೆ ಆಧಾರ ಗ್ರಂಥಗಳಾಗಿವೆ. ಅದರಲ್ಲೂ ಬ್ರಿಟಿಷ್ ಕಾಲದ ಗೆಜೆಟೀಯರ್ ನಲ್ಲಿ ವಿಫುಲವಾದ ಮಾಹಿತಿಗಳು ಲಭ್ಯವಿರುವ ಕೆಲವು ಭೂಮಿಯ ಮೇಲ್ಮೈಲಕ್ಷಣಗಳು ಈ ಕೆಳಗಿನಂತಿವೆ.

A. ಬೆಟ್ಟಗಳು: ಎತ್ತರವಾದ ಪ್ರದೇಶದಿಂದ ಸುತ್ತುವರೆಯಲಾದ ಬೆಟ್ಟಗುಡ್ಡಗಳು ಹೊರಗಡೆ ಪ್ರಪಂಚದ ಆಗುಹೋಗುಗಳ ಪ್ರಭಾವದಿಂದ ಮುಕ್ತವಾಗಿರುತ್ತದೆ. ಈ ಪ್ರದೇಶಗಳಲ್ಲಿ ಕೇವಲ ಆದಿವಾಸಿ ಹಾಗೂ ಬುಡಕಟ್ಟು ಜನರು ವಾಸಿಸುವುದುಂಟು. ಇವರು ನಗರ ಪ್ರದೇಶದಿಂದ ದೂರವಿದ್ದು ಆಧುನಿಕ ಸಮಾಜದ ಗಂಧಗಾಳಿಯೂ ಇವರಿಗೆ ಬೀಸುವುದಿಲ್ಲ. ಇವರ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಆಹಾರ-ವಿಹಾರ, ಬಣ್ಣ, ಉಡುಗೆ-ತೊಡುಗೆ, ನಗರ ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಪುಲೈಯಾರ್ ಎಂಬ ಆದಿವಾಸಿ ಜನರು ಅಣ್ಣಾಮಲೈ ಬೆಟ್ಟಗಳಲ್ಲಿ ಹಾಗೂ ತೋಡರು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ. ಜನಾಂಗ ವಿವರಣ ಅಧ್ಯಯನ ಮಾಡುವಾಗ ಇವುಗಳು ಪ್ರಮುಖ ಮಾಹಿತಿಗಳನ್ನು ಒದಗಿಸುತ್ತವೆ. ಇವರು ಸಾಮಾನ್ಯವಾಗಿ ಬಂಡೆಗಳ ಅಡಿಗಳು ಮತ್ತು ಗುಹೆಗಳಲ್ಲಿ ತಮ್ಮ ಆಶ್ರಯ ಸ್ಥಾನಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಇವುಗಳೇ ಆದಿಮಾನವನವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿದ್ದವು. ತಮಿಳುನಾಡಿನ ಅತ್ತಿರಂಪಾಕಂ ಎಂಬ ಗ್ರಾಮದ ಹತ್ತಿರ ಗುಡಿಯಂ ಎಂಬ ನೆಲೆಯು, ಮಧ್ಯಪ್ರದೇಶದ ಹೋಶಂಗಾಬಾದ್ನ ಬಂಡೆಗಳ ಆಶ್ರಯ ತಾಣಗಳು, ಕರ್ನಾಟಕದ ಬಾದಾಮಿಯ ಸಿಡಿಲ ಪಡಿ ಎಂಬ ಗುಹೆ, ಆಂಧ್ರಪ್ರದೇಶದ ಕರ್ನೂಲಿನ ಗುಹೆಗಳು ಮಾನವ ವಸತಿಯ ಯೋಗ್ಯ ಸ್ಥಳಗಳಾಗಿದ್ದವು. ತೆಕ್ಕಲಕೋಟೆಯಲ್ಲಿ ನೂತನ ಶಿಲಾಯುಗದ ವಸತಿ ಸಮುಚ್ಚಯಗಳು ಕಂಡುಬಂದಿವೆ.

B. ಕಣಿವೆ ಮಾರ್ಗಗಳು: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಬರಲು ಮತ್ತು ಒಂದು ದೇಶದ ಸಂಸ್ಕೃತಿಯನ್ನು ಇನ್ನೊಂದು ದೇಶಕ್ಕೆ ಪ್ರಸಾರ ಮಾಡಲು ಪ್ರಾಚೀನಕಾಲದಲ್ಲಿ ಕಣಿವೆ ಮಾರ್ಗಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದವು. ಕಣಿವೆ ಮಾರ್ಗಗಳು ಎರಡು ದೇಶಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿಯೇ ಪರ್ಶಿಯನ್ನರು, ಶಕರು, ಹೂಣರು, ಪಾರ್ಥಿಯನ್ನರು, ಗ್ರೀಕರು, ಸಿಥಿಯನ್ನರು, ಕುಷಾನರು, ಹೂಣರು, ಟರ್ಕರು, ಮಂಗೋಲರು, ಅರಬ್ಬರು, ಮುಸ್ಲಿಂರು ಹಾಗೂ ಮೊಘಲರು ಒಬ್ಬರಾದ ನಂತರ ಮತ್ತೊಬ್ಬರಂತೆ ಭಾರತವನ್ನು ಪ್ರವೇಶಿಸಿದರು. ಹೀಗೆ ಅವರು ಭಾರತಕ್ಕೆ ಲಗ್ಗೆ ಇಡಲು ವಾಯುವ್ಯ ದಿಕ್ಕಿನಲ್ಲಿನ ಪ್ರಮುಖವಾದ ಎರಡು ಕಣಿವೆಗಳಾದ ಖೈಬರ್ ಹಾಗೂ ಬೋಲಾನ್‌ಗಳು ಸೂಕ್ತವಾದ ರಸ್ತೆ ಮಾರ್ಗವನ್ನು ಒದಗಿಸಿದವು.

ಪಾಲ್ಗಾಟ್ ಕಣಿವೆ ಕೇರಳ ಹಾಗೂ ತಮಿಳುನಾಡಿನ ನಡುವೆ ಸಂಪರ್ಕವನ್ನು ಏರ್ಪಡಿಸಿದರೆ, ಜೋ-ಜಿಲಾ ಕಣಿವೆಯು ಲಡಾಖ್‌ ಹಾಗೂ ಕಾಶ್ಮೀರಿ ಕಣಿವೆಗಳನ್ನು ಜೋಡಿಸುತ್ತದೆ. ರೋಹ್ಟಾಂಗ್‌ ಕುಲು ಕಣಿವೆಯನ್ನು ಲಾಹೌರ್‌ ಹಾಗೂ ಸ್ಪಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ. ನಾಥು-ಲಾ ಭಾರತದ (ಸಿಕ್ಕಿಂ) ಹಾಗೂ ಚೀನಾವನ್ನು (ಟಿಬೆಟ್) ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಬನಿಹಾಲ್ ಪಾಸ್ ಜಮ್ಮು ಕಾಶ್ಮೀರ್ ಕಣಿವೆಯನ್ನು ಸಂಪರ್ಕಿಸುತ್ತದೆ. ಬಾರಾ-ಲಾಚಾ-ಲಾ ಕಣಿವೆಯು ಲೇಹ್ ಮತ್ತು ಮನಾಲಿಗಳನ್ನು ಜೋಡಿಸುತ್ತದೆ. ಹೀಗೆ ಕಣಿವೆ ಮಾರ್ಗಗಳ ಜ್ಞಾನವು ಪ್ರಾಚೀನ ಸಂಚಾರ ಹಾಗೂ ಸಾಂಸ್ಕೃತಿಕ ಸಂಪರ್ಕ ಜಾಲಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

C. ನದಿಗಳು :  ಮಾನವನಿಗೆ ಅನ್ನ, ವಸತಿ, ಬಟ್ಟೆಗಳಷ್ಟೇ ಅಗತ್ಯವಾದದ್ದು ನೀರು. ನೀರು ಕೃಷಿಗಾಗಿ, ಕುಡಿಯಲು, ದನ ಕರುಗಳಿಗೆ ಕುಡಿಯಲು, ವಿದ್ಯುತ್ ಶಕ್ತಿ ಉತ್ಪಾದನೆಗಾಗಿ, ಮನರಂಜನೆಗಾಗಿ ಹಾಗೂ ಮೀನು ಸಾಕಾಣಿಕೆಗೆ ಬೇಕು. ಎಲ್ಲಿ ನದಿಗಳು ಇರುತ್ತವೆಯೋ ಅಲ್ಲಿ ಹೆಚ್ಚು ಜನವಸತಿ ಕಂಡುಬರುತ್ತದೆ. ನದಿಗಳು ಸದಾಕಾಲ ಜನರಿಗೆ ನೀರನ್ನು ಒದಗಿಸುವುದರಿಂದ ಅವುಗಳು ಜನವಸತಿ ಯೋಗ್ಯ ಪ್ರದೇಶಗಳಾಗಿವೆ. ಪ್ರಾಚೀನ ನೆಲೆಗಳು ಸಾಮಾನ್ಯವಾಗಿ ನದಿಗಳ ದಂಡೆಯ ಮೇಲೆ ಕಂಡುಬಂದಿವೆ. ನದಿ ಮಟ್ಟಗಳನ್ನು ಹಾಗೂ ಅಲ್ಲಿ ದೊರೆಯುವ ವಸ್ತುಗಳನ್ನು ಅನ್ವೇಷಣೆ ಮಾಡುವವರು ಸರಿಯಾಗಿ ಟಿಪ್ಪಣಿ ಮಾಡಿಕೊಳ್ಳಬೇಕು..

ಇತಿಹಾಸ ಕಾಲದಲ್ಲಿಯೂ ಸಹ ನದಿಗಳ ದಂಡೆಯ ಮೇಲೆ ಜನವಸತಿ ಕೇಂದ್ರಗಳು ಸ್ಥಾಪನೆಯಾದವು. ಸಿಂಧೂ ನಾಗರಿಕತೆಯು ಬೆಳೆದು ಬಂದದ್ದು ಸಿಂಧೂ ನದಿಯ ದಂಡೆಯ ಮೇಲೆ. ಹಳೆಯ ಶಿಲಾಯುಗ ಹಾಗೂ ತಾಮ್ರಯುಗಗಳ ವಸತಿ ಕೇಂದ್ರಗಳು ಸಹ ನದಿ ದಂಡೆಯ ಮೇಲೆ ಸ್ಥಾಪನೆಯಾದದ್ದು ಒಂದು ಇತಿಹಾಸ. ಅಲಹಾಬಾದ್, ಅಯೋಧ್ಯೆ, ಪಾಟಲಿಪುತ್ರ, ಬನಾರಸ್, ಪ್ರಯಾಗ್, ಆಗ್ರಾ, ಲಾಹೋರ್ ಹಾಗೂ ಮುಲ್ತಾನ್‌ಗಳು ಜನವಸತಿ ಕೇಂದ್ರಗಳಾಗಿ ಬೆಳೆದು ಬಂದದ್ದು ನದಿಯ ದಡದಲ್ಲಿಯೇ. ಮೌರ್ಯ, ಗುಪ್ತ, ಉಜ್ಜಯಿನಿ, ವರ್ಧನ, ದೆಹಲಿ ಸುಲ್ತಾನರು, ಮೊಘಲರು ಹಾಗೂ ಆಫ್ಘನರು ಆಳ್ವಿಕೆ ಮಾಡಿದುದು ಇದೇ ನದಿಯ ದಡದಲ್ಲಿ. ಕಳಿಂಗ, ಕಣ್ವ, ಕನೌಜ್, ಪಾಣಿಪತ್, ತರೈನ್‌, ಪ್ಲಾಸಿ ಹಾಗೂ ಘೋಗ್ರಾ ಕದನಗಳು ನದಿಯ ದಂಡೆಗಳ ಮೇಲೆ ನಡೆದವು.

ಮಲಪ್ರಭಾ ನದಿಯ ದಂಡೆಯ ಮೇಲೆ ಪಟ್ಟದಕಲ್ಲು ಹಾಗೂ ಐಹೊಳೆ,

ತುಂಗಾಭದ್ರಾ ನದಿಯ ದಂಡೆಯ ಮೇಲೆ ಹಂಪೆ (ವಿಜಯನಗರ ಸಾಮ್ರಾಜ್ಯ),

ಕಾವೇರಿ ನದಿಯ ದಂಡೆಯ ಮೇಲೆ ತಲಕಾಡು (ಗಂಗರ ರಾಜಧಾನಿ), ಊರೈಯೂರು (ಚೋಳರ ರಾಜಧಾನಿ),

ವೈಗೈ ನದಿಯ ತೀರದ ಮಧುರೈ (ಪಾಂಡ್ಯ ರಾಜಧಾನಿ) ಮೊದಲಾದವುಗಳು ನದಿಯ ತೀರದ ನೆಲೆಗಳಾಗಿದ್ದವು.

D. ಸರೋವರಗಳು ಮತ್ತು ಕೆರೆಗಳು: ಸರೋವರಗಳು ಸಹ ಜನವಸತಿಗೆ ಹೆಸರುವಾಸಿಯಾಗಿದ್ದವು. ಅನೇಕ ಕೆರೆಗಳ ದಂಡೆಯ ಮೇಲೆ ಶಿಲಾಯುಗದ ಅವಶೇಷಗಳು ದೊರಕಿರುವುದು ಒಂದು ವಿಶೇಷವಾಗಿದೆ. ಸ್ವಿಜ್ಜರ್‌ಲ್ಯಾಂಡಿನ ಸರೋವರಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳು ದೊರಕಿವೆ. ತಮಿಳುನಾಡಿನ ಸಮುದ್ರದ ದಡದಲ್ಲಿ ಪ್ರಾಚೀನ ಲಾಗೂನುಗಳು ಇದ್ದವು. ಅವುಗಳನ್ನೇ ಟೇರಿ ನಿವೇಶನಗಳೆಂದು ಕರೆಯಲಾಗಿದೆ. ಇವು ಸೂಕ್ಷ್ಮ ಶಿಲಾಯುಗದ ಅವಶೇಷಗಳಾಗಿದ್ದವು. ಇನ್ನು ಡೆಕ್ಕನ್ ಪ್ರದೇಶವು ಕೆರೆಗಳಿಗೆ ಹೆಸರುವಾಸಿಯಾಗಿತ್ತು. ಇಲ್ಲಿ ಕೆರೆ ನೀರಾವರಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ದಕ್ಷಿಣದ ಪ್ರತಿ ಗ್ರಾಮಗಳು ಒಂದೊಂದು ಕೆರೆಗಳನ್ನು ಹೊಂದಿದ್ದವು. ಹೀಗಾಗಿ ಅಂದಿನ ಗ್ರಾಮಗಳಿಗೆ ಕೆರೆಯ ಹೆಸರನ್ನು ಇಡಲಾಗುತ್ತಿತ್ತು.

ಉದಾ:  ಹೂವಿನಕೆರೆ, ಹೊಳಲ್‌ ಕೆರೆ, ಚಳ್ಳಕೆರೆ, ತರೀಕೆರೆ, ಅರಸೀಕೆರೆ, ತುರುವೇಕೆರೆ, ತಾವರೆಕೆರೆ, ಹಳ್ಳೀಕೆರೆ, ಮತ್ತೀಕೆರೆ, ಹೊಸಕೆರೆ, ನೊಣವಿನ ಕೆರೆ, ಅರಕೆರೆ, ಕಂಚೀಕೆರೆ, ಬೆಂಡಿಕೆರೆ, ಹಿರೇಕೆರೆ, ಗುರುವನಕೆರೆ, ಕೆಂಚನಕೆರೆ, ಸೂಳೆಕೆರೆ, ಆನೆಕೆರೆ, ಪಡುಕೆರೆ, ಪಾಂಡುಕೆರೆ, ಕಾಫಿ ಕೆರೆ, ತೋವಿನಕೆರೆ, ಕಡಲ ಕೆರೆ, ತೂಬಿನಕೆರೆ, ಚಿಕ್ಕ ತೊಟ್ಲುಕೆರೆ, ಜೋಗಣ್ಣನಕೆರೆ, ಮೊದಲಾದವುಗಳು. ಹಲವಾರು ಶಿಲಾಗೋರಿಗಳು ಕೆರೆಗಳ ದಂಡೆಯ ಮೇಲಿರುವುದು ಗಮನಾರ್ಹವಾಗಿದೆ.

E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು:

ಪುರಾತತ್ವ ವಸ್ತುಗಳ ಸರ್ವೇಕ್ಷಣ ಮಾಡುವವರು ಹಳೆಯ ಶಿಲಾಯುಗದ ಮಾನವ ಬೇಟೆಯಾಡಲು, ಮೀನು ಹಿಡಿಯಲು ಹಾಗೂ ಮನೆಬಳಕೆಯ ಉಪಕರಣಗಳನ್ನು ತಯಾರಿಸಲು ಯಾವ ಕಲ್ಲುಗಳನ್ನು ಬಳಕೆ ಮಾಡುತ್ತಿದ್ದನೆಂಬುದನ್ನು ತನ್ನ  ಅಧ್ಯಯನದ ಸಂದರ್ಭದಲ್ಲಿ ಸೂಕ್ತವಾಗಿ ಗಮನಿಸಬೇಕು. ಹಾಗಾಗಿ ಅವನಿಗೆ ತಾನು ಅಧ್ಯಯನ ಮಾಡುವ ಪ್ರದೇಶದ ಭೂ ಮೇಲ್ಮೈ ಲಕ್ಷಣಗಳ ಕುರಿತು ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಹಳೆಯ ಶಿಲಾಯುಗದ ಮಾನವನು ಪ್ರಾಣಿಗಳ ಹಾಗೆ ಜೀವನವನ್ನು ನಡೆಸುತ್ತಿದ್ದು ಒರಟಾದ ಕಚ್ಚಾ ಆಯುಧಗಳನ್ನು ಬಳಸುತ್ತಿದ್ದನು. ಅವನನ್ನು ʻʻಕ್ವಾರ್ಟಜೈಟ್ ಮಾನವʼʼ ಎಂದು ಕರೆಯುತ್ತಿದ್ದರು. ಮಧ್ಯಶಿಲಾಯುಗದಲ್ಲಿ ಕ್ಯಾಲ್ಸೆಡೆನಿ ಹಾಗೂ ಸಿಲಿಕೇಟ್ ಶಿಲೆಗಳನ್ನು ಬಳಸುತ್ತಿದ್ದನು. ನೂತನ ಶಿಲಾಯುಗದಲ್ಲಿ ಒರಟು ಕಲ್ಲಿನ ಬದಲಾಗಿ ನುಣುಪಾದ ಶಿಲೆಯನ್ನು ಬಳಸಿದನು. ಚಾಲ್ಕೋಲಿಥಿಕ್ ಯುಗದಲ್ಲಿ ಲೋಹದ ಉಪಕರಣಗಳು ಬಳಕೆಗೆ ಬಂದವು. ಅಂದರೆ ತಾಮ್ರ ಹಾಗೂ ಕಲ್ಲುಗಳನ್ನು ಮಿಶ್ರಣ ಮಾಡಿ ಉಪಕರಣ ತಯಾರಿಸಲು ಆರಂಭಿಸಿದರು. ಕಬ್ಬಿಣದ ಯುಗದಲ್ಲಿ ಕಂಚು ಹಾಗೂ ತಾಮ್ರದ ಲೋಹಗಳ ಬದಲಾಗಿ ಕಬ್ಬಿಣವನ್ನು ಉಪಯೋಗ ಮಾಡಲಾಯಿತು. ಆಕ್ರೂಂಜಿಕೇರ್‌ ಎಂಬ ಸ್ಥಳದಲ್ಲಿ ಕಬ್ಬಿಣ ಯುಗದ ಆಭರಣಗಳು ದೊರಕಿವೆ. ಹೀಗಾಗಿ ಅನ್ವೇಷಣೆ ಮಾಡುತ್ತಿರುವ ಸ್ಥಳಗಳಲ್ಲಿ ದೊರೆಯುವ ಶಿಲೆಗಳ ಕುರಿತು ಅನ್ವೇಷಣಾ ಕಾರನಿಗೆ ಅರಿವು ಬಹಳ ಮುಖ್ಯವಾಗಿರುತ್ತದೆ.

3.  ಜನಾಂಗ ವಿವರಣೆ:

ಕಾಡು ಹಾಗೂ ಬೆಟ್ಟಗುಡ್ಡಗಳಲ್ಲಿ ಬೇಟೆಗಾರಿಕೆ, ಆಹಾರ ಸಂಗ್ರಹಣೆ ಮತ್ತು ಕೃಷಿ ಕಾರ್ಯಗಳಲ್ಲಿ ನಿರತರಾಗಿರುವ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಿಗೆ ಹೋದ ಪುರಾತತ್ವ ಅನ್ವೇಷಕನು ಈ ಜನರ ಜೀವನದ ಕುರಿತು ಸಂಪೂರ್ಣ ವಿವರಗಳನ್ನು ಸಂಗ್ರಹಿಸಬೇಕು. ಇದು ಶಿಲಾಯುಗದ ಕಾಲದ ನೆಲೆಗಳನ್ನು ಅನ್ವೇಷಣೆ ಮಾಡಿದಾಗ ಸಿಗುವ ಸಾಂಸ್ಕೃತಿಕ ಅವಶೇಷಗಳ ಜೊತೆಗೆ ಹೋಲಿಕೆ ಮಾಡಿ ಒಂದು ತೀರ್ಮಾನಕ್ಕೆ ಬರುವುದು ಸುಲಭವಾಗುತ್ತದೆ.

4. ಐತಿಹಾಸಿಕ ಸಾಹಿತ್ಯ:

ಯಾವುದೇ ಒಂದು ಪ್ರದೇಶದ ಪುರಾತತ್ವ ನಿವೇಶನಗಳನ್ನು ಕಂಡುಹಿಡಿಯಲು ಹೊರಡುವ ಮೊದಲು ಆ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು. ಉತ್ಖನನಗಳು, ನಾಣ್ಯಗಳು, ಮಡಿಕೆ ಕುಡಿಕೆಗಳು, ದಿನ ಬಳಕೆಯ ವಸ್ತುಗಳು ಹಾಗೂ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಪ್ರಾಚೀನ ಕೃತಿಗಳಾದ ಮಹಾಕಾವ್ಯಗಳು, ಪ್ರವಾಸಿ ಕಥನಗಳು, ಶಾಸನಗಳು, ನಿಶಧಿಗಲ್ಲುಗಳು, ಸತಿಗಲ್ಲುಗಳು ಮುಂತಾದವುಗಳ ಸರ್ವೆ ಕಾರ್ಯಕ್ಕೆ ಅಗತ್ಯವಿರುವ ಹಿನ್ನೆಲೆಯನ್ನು ಒದಗಿಸುತ್ತವೆ. ಬೌದ್ಧ ಸಾಹಿತ್ಯವು ಬೌದ್ಧ ನೆಲೆಗಳನ್ನು, ಜೈನ ಸಾಹಿತ್ಯವು ಜೈನ ನೆಲೆಗಳನ್ನು ಹಾಗೂ ರಾಮಾಯಣ ಹಾಗೂ ಮಹಾಭಾರತಗಳು ಸಿಂಧೂ-ಗಂಗಾ ಬಯಲಿನ ಶಿಲಾಯುಗದ ಕಾಲದ ನೆಲೆಗಳನ್ನು ಸಂಶೋಧನೆಯನ್ನು ಮಾಡಲು ಸಹಾಯಕವಾಗುತ್ತದೆ. ಪ್ಲಿನಿ, ಸ್ಟ್ರಾಬೋ ಹಾಗೂ ಟಾಲಾಮಿ ಮುಂತಾದವರು ಪ್ರಾಚೀನ ಭೂಗೋಳಶಾಸ್ತ್ರದ ಕುರಿತು ಬರೆದ ಬರಹಗಳು ಕ್ರಿ.ಶ ಆರಂಭದ ಕಾಲದ ನೆಲೆಗಳನ್ನು, ಹಲವಾರು ಪಟ್ಟಣಗಳನ್ನು, ವ್ಯಾಪಾರಿ ಕೇಂದ್ರಗಳನ್ನು ಹಾಗೂ ಬಂದರುಗಳನ್ನು ಪತ್ತೆ ಮಾಡಲು ಸಹಾಯಕವಾಗಿದೆ. ಚೀನಿ ಪ್ರವಾಸಿಗರಾದ ಹ್ಯೂವೆನ್‌ ತ್ಸ್ಯಾಂಗ್‌, ಇತ್ಸಿಂಗ್‌ ಹಾಗೂ ಫಾಹಿಯಾನ್‌ ಅವರ ಬರವಣಿಗೆಗಳು ಉತ್ತರ ಭಾರತದ ಬೌದ್ಧ ನೆಲೆಗಳನ್ನು ಶೋಧಿಸಲು ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮರಿಗೆ ಸಾಧ್ಯವಾಯಿತು. ಚಿತ್ರದುರ್ಗದ ಬ್ರಹ್ಮಗಿರಿ, ಸಿದ್ದಾಪುರ, ಜಟ್ಟಿಂಗ ರಾಮೇಶ್ವರ ಮುಂತಾದವಲ್ಲದೆ ಅಶೋಕನ ಶಾಸನಗಳ ಆಧಾರದ ಮೇಲೆ ʻಇಸಿಲಾʼ ಎಂಬ ನಗರವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಕೊಪ್ಪಳ, ಮಸ್ಕಿಗಳಲ್ಲಿಯೂ ಅಶೋಕನ ಶಾಸನಗಳು ದೊರಕಿದ್ದು ಇಲ್ಲಿಯೂ ಸಹ ಇತಿಹಾಸ ಕಾಲದ ವಸತಿಗಳಿದ್ದವು ಎಂಬುದು ಪುರಾತತ್ವ ಅನ್ವೇಷಣೆಯಿಂದ ಕಂಡುಬಂದಿದೆ.

5. ಪ್ರಕಟಿತ ವರದಿಗಳು:

ಒಂದು ಪ್ರದೇಶದ ಪುರಾತತ್ವ ಸಂಶೋದನೆಯನ್ನು ಕೈಗೊಳ್ಳುವ ಮುನ್ನ ಈಗಾಗಲೇ ನಡೆದಿರುವ ಕ್ಷೇತ್ರ ಸರ್ವೆಕಾರ್ಯಗಳ ಪೂರ್ಣ ಮಾಹಿತಿಯನ್ನು ಓದಿಕೊಂಡು ಮಹತ್ವದ ದಾಖಲೆಗಳನ್ನು ಸಂಗ್ರಹ ಮಾಡಿಕೊಳ್ಳಬೇಕಾದದ್ದು ಅನ್ವೇಷಕರ ಕರ್ತವ್ಯವಾಗಿದೆ. ಈ ಹಿಂದೆ ಪುರಾತತ್ವಶಾಸ್ತ್ರಜ್ಞರು ತಮ್ಮ ಸರ್ವೇ ಸಮಯದಲ್ಲಿ ದಾಖಲು ಮಾಡಿಕೊಂಡಿದ್ದ ವರದಿಗಳು, ಲೇಖನಗಳು, ಟಿಪ್ಪಣಿಗಳು ಹಾಗೂ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಕಳೆದ ಶತಮಾನದಲ್ಲಿ ರಾಬರ್ಟ್ ಬ್ರೂಸ್‌ಫ್ರೂಟ್ ಪ್ರಕಟಿಸಿದ Pree and Protohistoric Antiquities of Madras Presidency  ರಾಬರ್ಟ್ ಸಿಗಲ್ಲರ ʻʻ Antiquarian Remains in South India ʼʼ ಬಿ.ಎಲ್ ರೈಸ್ ರವರ ಪುರಾತತ್ವ ಅಧ್ಯಯನ, ಬಿಬ್ಲಿಯಾಥಿಕಾ, ʻʻಕರ್ನಾಟಕ ಎಫಿಗ್ರಾಫಿಯ ಕರ್ನಾಟಿಕ ʻʻಮೈಸೂರು ಇನ್ಸ್ಕ್ರಿಪ್ಷನ್ʼʼ ಆರ್ ನರಸಿಂಹಾಚಾರ್ ರವರ Mysore Archaolegical Reportʼʼ, ಆರ್.ಶ್ಯಾಮಶಾಸ್ತ್ರಿಗಳ ʻʻದಿ ಕಾಂತರಾಜ ವಿಜಯʼʼ ಎಂ ಹೆಚ್ ಕೃಷ್ಣ ರವರ ʻʻಹೈದರ್‌ನಾಮ, ಶಕ್ತಿ ಸುದರ್ಶನ, ಮೈಸೂರು ಕೈಪಿಯತ್ತು, ಎಲ್.ನರಸಿಂಹರಾಜರವರ ಎಫಿಗ್ರಾಫಿಯಾ ಕರ್ನಾಟಕʼʼ ಡಾ|| ಎಂ ಶೇಷಾದ್ರಿ ʻʻನವಾಶಿಲಾಯುಗದ ಸಂಸ್ಕೃತಿʼʼ ಡಾ|| ಎಂ.ಎಸ್ ನಾಗರಾಜರವರ MRA ವರದಿ, ಆ ಸುಂದರ ಅವರ ʻʻಪ್ರಬಂಧಗಳುʼʼ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಕಟಿಸಿದ ವಾರ್ಷಿಕ ವರದಿಗಳು, ರಾಜ್ಯ ಸರ್ಕಾರದ ಪ್ರಕಟಣೆಗಳು, ವಾರ್ಷಿಕ ವರದಿಗಳು, ಮೈಸೂರು, ತಿರುವಂಕೂರು, ಕೊಚ್ಚಿನ್ ಹಾಗೂ ಬರೋಡಾ ರಾಜರ ಪುರಾತತ್ವ ವರದಿಗಳು, ಪುರಾತತ್ವ ಸರ್ವೇಕ್ಷಣೆಗೆ ಸಹಾಯಕವಾಗಿವೆ.

ಅದರಂತೆ ರಾಜ್ಯ ಪುರಾತತ್ವ ಇಲಾಖೆಗಳು ಪುರಾತತ್ವ ಸಂಸ್ಥೆಗಳು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳ ಪುರಾತತ್ವ ಇಲಾಖೆಗಳು, ಪುರಾತತ್ವ ಸಂಶೋಧಕರಿಗೆ ಆಕರ ಗ್ರಂಥಗಳನ್ನು ಒದಗಿಸುತ್ತವೆ.

6. ಸ್ಥಳ ಪುರಾಣಗಳು ದಂತ ಕಥೆಗಳು:

ದೇಶದ ಬೇರೆ ಬೇರೆ ಊರುಗಳು, ಸ್ಥಳಗಳು ಹಾಗೂ ನಗರ ಪಟ್ಟಣಗಳಲ್ಲಿ ಅವುಗಳದೇ ಆದ ಸ್ಥಳ ಪುರಾಣಗಳು, ದಂತಕಥೆಗಳು, ಜಾನಪದ ಗೀತೆಗಳು, ಜಾನಪದ ಕಥೆಗಳು, ಲಾವಣಿ ಹಾಡುಗಳು, ಪ್ರಚಲಿತದಲ್ಲಿರುತ್ತವೆ. ಗ್ರಾಮೀಣ ಪ್ರದೇಶದ ವಯೋವೃದ್ಧರು, ಹಿರಿಯರು, ಲಾವಣಿ ಹಾಡುಗಾರರು, ಗರತಿ ಹಾಡುಗಾರರು, ಇಂತಹ ಕಥೆಗಳನ್ನು ಕಟ್ಟಿ ಹಾಡುವುದರಲ್ಲಿ ನುರಿತವರಾಗಿರುತ್ತಾರೆ. ಅನೇಕರು ಕಥೆಯ ಸನ್ನಿವೇಶವು ಇದೇ ಪ್ರದೇಶದಲ್ಲಿ ನಡೆಯಿತು ಎಂದು ತೋರಿಸುವವರು ಇರುತ್ತಾರೆ. ಕೆಲವು ದಂತ ಕಥೆಗಳು ಎಂದುಕೊಂಡರು ಅವುಗಳು ಪರಂಪರೆಯನ್ನು ಸೂಚಿಸುವುದರಿಂದ ತಕ್ಕಮಟ್ಟಿನ ಸತ್ಯಾಂಶವನ್ನು ಹೊರಹಾಕುತ್ತದೆ. ಸರ್ವೇಕ್ಷಣೆಗೆ ಬಂದವರು ಅವರ ಹೇಳಿಕೆಗಳನ್ನು ಟಿಪ್ಪಣಿ ಮಾಡಿಕೊಂಡು ಗ್ರಾಮಸ್ಥರು ತೋರಿಸುವ ಸ್ಥಳಗಳನ್ನು ಸರ್ವೇಕ್ಷಣೆ ಮಾಡಿ ಅಲ್ಲಿ ಏನಾದರೂ ವಸತಿ ಕುರುಹುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಿಹಾರಿನ ಅಗಮ್‌ಕುವಾನ್ 105 ಮೀ ಆಳ ಹಾಗೂ 4.5 ಮೀ ವ್ಯಾಸ ಹೊಂದಿದ ಬಾವಿ ಇದ್ದು ಪಕ್ಕದಲ್ಲಿ ಶಿತಲಾದೇವಿ ದೇವಾಲಯವನ್ನು ಹೊಂದಿದೆ. ದಂತಕಥೆಯ ಪ್ರಕಾರ ಈ ಬಾವಿಯೊಳಗೆ ಸಂಪತ್ತು ತುಂಬಿದೆ. ಅದನ್ನು ತೆಗೆಯಲು ಹೋದವರು ಬಾವಿಗೆ ಬಿದ್ದು ಸತ್ತಿದ್ದಾರೆ ಎಂಬ ನಂಬಿಕೆ ಪ್ರಚಾರವಾಗಿದೆ.

7. ಸ್ಥಳ ನಾಮಗಳು :

ಕೆಲವೊಂದು ಸಲ ಕೆಲವು ಪ್ರದೇಶಗಳ ಹೆಸರುಗಳು ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಗೆ ಆ ಪ್ರದೇಶದ ಪ್ರಾಚ್ಯ ವಸ್ತುಗಳ ಕುರಿತು ಸುಳಿವು ನೀಡಬಹುದು. ಕೆಲವು ಗ್ರಾಮಗಳಲ್ಲಿ ಪಾಂಡವರ ಗುಹೆ ಮತ್ತು ಮೋರಿಯವರ ಮನೆ ಎಂದು ತೋರಿಸಲಾದ ಸ್ಥಳದಲ್ಲಿ ಸಾಮಾನ್ಯವಾಗಿ ಶಿಲಾಯುಗದ ಕಾಲದಲ್ಲಿದ್ದ ಬೃಹತ್ ಶಿಲಾಗೋರಿಗಳು ಇರಬಹುದಾದ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸರ್ವೇಕ್ಷಣ ಕಾರ್ಯಕ್ಕೆ ಹೋದವರು ಆ ಗ್ರಾಮದಲ್ಲಿ ಅಂತಹ ಸ್ಥಳಗಳು ಇರಬಹುದಾಗಿದ್ದು ಅದರ ಖಚಿತತೆಯನ್ನು ನಿರ್ಧರಿಸಬೇಕು. ಇನ್ನು ಕೆಲವು ಕಡೆಗಳಲ್ಲಿ ನಿಲಿಸುಗಲ್, ಬೂದಿಹಾಳು, ಬೂದಿ ತಿಟ್ಟು ಮುಂತಾದ ಸ್ಥಳಗಳಿರುತ್ತವೆ. ಉದಾ: ಶಿವಮೊಗ್ಗ ಜಿಲ್ಲೆಯಲ್ಲಿ ನಿಲಿಸುಗಲ್ಲುಗಳು ಇರುವ ಸ್ಥಳಗಳು ಕಂಡುಬಂದಿವೆ. ವಿಜಾಪುರದ ಜಿಲ್ಲೆಯಲ್ಲಿ ಬೂದಿಹಾಳು ಎಂಬ ಗ್ರಾಮವಿದೆ. ಅಲ್ಲಿ ಬೂದಿ ಇರುವ ಸ್ಥಳಗಳು ಪತ್ತೆಯಾಗಿವೆ. ಕೆಲವು ಕಡೆ ಬೂದಿತಿಟ್ಟು ಎಂಬ ಗ್ರಾಮವಿದ್ದು ಕಂಡುಬಂದಿದೆ. ಇಲ್ಲಿ ಬೂದಿ ದಿಬ್ಬಗಳು ಇದ್ದ ಕುರುಹುಗಳು ಇವೆ. ಇಂತಹ ಸ್ಥಳ ನಾಮಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧಕರು ಅಂತಹ ಪ್ರದೇಶಗಳಲ್ಲಿ ಇನ್ನಷ್ಟು ಪರಿಶೋಧನೆ ಮಾಡಬೇಕು.

ಪುರಾತತ್ವ ನೆಲೆಯ ಗುರುತಿಸುವಿಕೆ (Identification of a site)

ಪುರಾತತ್ವ ನೆಲೆಯ ಗುರುತಿಸುವಿಕೆ (Identification of a site)

ಪುರಾತತ್ತ್ವ ಶಾಸ್ತ್ರದ ನೆಲೆಯನ್ನು (archaeological site) ಗುರುತಿಸುವುದು ಯಾವುದೇ ಪುರಾತತ್ತ್ವ ಶೋಧನೆಯ ಮೊದಲ ಅಡಿಪಾಯದ ಹೆಜ್ಜೆಯಾಗಿದೆ. ಉತ್ಖನನದ (excavation) ಸೂಕ್ಷ್ಮ ಕಾರ್ಯ ಪ್ರಾರಂಭವಾಗುವ ಮೊದಲು, ಪ್ರಾಚೀನ ಮಾನವ ಚಟುವಟಿಕೆಗಳು ನಡೆದ ನಿಖರವಾದ ಭೌಗೋಳಿಕ ಪ್ರದೇಶಗಳನ್ನು ಸಂಶೋಧಕರು ಪತ್ತೆಹಚ್ಚಬೇಕು. ಕ್ಷೇತ್ರ ಸಂಶೋಧನೆ ಆರಂಭಿಸುತ್ತಿರುವ ಸ್ನಾತಕೋತ್ತರ (graduate) ವಿದ್ಯಾರ್ಥಿಗಳಿಗೆ, ಈ ತಾಣಗಳನ್ನು ಗುರುತಿಸುವ ಕಲೆ ಮತ್ತು ವಿಜ್ಞಾನವನ್ನು ಕರಗತ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಈ ಪ್ರಕ್ರಿಯೆಯು ಕೇವಲ ಅದೃಷ್ಟದಿಂದ ಒಲಿಯುವ ಹಠಾತ್ “ಯುರೇಕಾ” ಕ್ಷಣವಲ್ಲ; ಬದಲಿಗೆ ಇದು ಐತಿಹಾಸಿಕ ಸಂಶೋಧನೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಕ್ಷೇತ್ರಕಾರ್ಯವನ್ನು ಒಗ್ಗೂಡಿಸುವ ಅತ್ಯಂತ ವ್ಯವಸ್ಥಿತವಾದ, ಬಹು-ಹಂತದ ವಿಧಾನವಾಗಿದೆ.

ದಾಖಲೆಗಳು ಮತ್ತು ಪ್ರಾಥಮಿಕ ಅಧ್ಯಯನ: ಡೆಸ್ಕ್-ಆಧಾರಿತ ಮೌಲ್ಯಮಾಪನ

ಪುರಾತತ್ತ್ವ ತಾಣದ ಹುಡುಕಾಟವು, ಭೂಮಿಯನ್ನು ಅಗೆಯಲು ಪ್ರಾರಂಭಿಸುವ ಮುಂಚೆಯೇ, ಹೆಚ್ಚಾಗಿ ಒಳಾಂಗಣದಲ್ಲಿಯೇ (ಗ್ರಂಥಾಲಯ ಅಥವಾ ಲ್ಯಾಬ್‌ಗಳಲ್ಲಿ) ಪ್ರಾರಂಭವಾಗುತ್ತದೆ. ಡೆಸ್ಕ್-ಆಧಾರಿತ ಮೌಲ್ಯಮಾಪನ (Desk-based assessment) ಎಂದು ಕರೆಯಲ್ಪಡುವ ಈ ಹಂತವು ಐತಿಹಾಸಿಕ ದಾಖಲೆಗಳು, ಪ್ರಾಚೀನ ನಕ್ಷೆಗಳು, ಭೂಮಿ ನೋಂದಣಿಗಳು ಮತ್ತು ಈ ಹಿಂದೆ ಪ್ರಕಟವಾದ ಪುರಾತತ್ತ್ವ ದಾಖಲೆಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಈ ಹಂತದಲ್ಲಿ ಆಗಾಗ್ಗೆ ನಿರ್ಲಕ್ಷಿಸಲ್ಪಡುವ ಆದರೆ ಹೆಚ್ಚು ಪರಿಣಾಮಕಾರಿಯಾದ ಸಾಧನವೆಂದರೆ ಸ್ಥಳನಾಮಗಳ ಅಧ್ಯಯನ (Toponymy). “ಕುಂಬಾರ ಹಳ್ಳಿ,” “ಬಸವನ ಗುಡ್ಡ,” ಅಥವಾ “ಕಮ್ಮಾರರ ಬೀದಿ” ಯಂತಹ ಸ್ಥಳದ ಹೆಸರುಗಳು ಶತಮಾನಗಳ ಹಿಂದಿನ ಭೂಬಳಕೆಯ ಕುರುಹುಗಳನ್ನು ಉಳಿಸಿಕೊಂಡಿರುತ್ತವೆ ಮತ್ತು ಮಣ್ಣಿನಲ್ಲಿ ಹುದುಗಿರುವ ಇತಿಹಾಸಕ್ಕೆ ನೇರ ಮಾರ್ಗದರ್ಶಿಗಳಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚುವರಿಯಾಗಿ, ಮೌಖಿಕ ಇತಿಹಾಸಗಳನ್ನು ಕಲೆಹಾಕುವುದು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ, ಅದರಲ್ಲೂ ವಿಶೇಷವಾಗಿ ತಮ್ಮ ಭೂಮಿಯ ಲಕ್ಷಣಗಳನ್ನು ಚೆನ್ನಾಗಿ ಬಲ್ಲ ರೈತರೊಂದಿಗೆ ಮಾತನಾಡುವುದು, ಕಾಗದದಲ್ಲಿ ದಾಖಲಾಗದ ಅಮೂಲ್ಯ ಸುಳಿವುಗಳನ್ನು ನೀಡಬಲ್ಲದು.

ಆಕಾಶದಿಂದ ವೀಕ್ಷಣೆ: ವೈಮಾನಿಕ ಮತ್ತು ರಿಮೋಟ್ ಸೆನ್ಸಿಂಗ್

ಸಂಭಾವ್ಯ ಪ್ರದೇಶಗಳನ್ನು ಗುರುತಿಸಿದ ನಂತರ, ಪುರಾತತ್ತ್ವಜ್ಞರು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಬಳಸಿ ಆಕಾಶದಿಂದ ಭೂಮಿಯನ್ನು ವೀಕ್ಷಿಸುತ್ತಾರೆ. ಸಾಂಪ್ರದಾಯಿಕ ವೈಮಾನಿಕ ಛಾಯಾಗ್ರಹಣವು (Aerial photography) ಒಂದು ಪ್ರಮುಖ ಸಾಧನವಾಗಿದ್ದು, ಇದು ಸಂಶೋಧಕರಿಗೆ ಈ ಕೆಳಗಿನವುಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ:

  • ಬೆಳೆಯ ಗುರುತುಗಳು (Crop marks): (ಭೂಮಿಯೊಳಗಿನ ಗೋಡೆಗಳು ಬೆಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಅಥವಾ ಹೂತುಹೋದ ಕಾಲುವೆಗಳು ಅದನ್ನು ಹೆಚ್ಚಿಸುತ್ತವೆ).
  • ಮಣ್ಣಿನ ಗುರುತುಗಳು (Soil marks): (ಉಳುಮೆಯಿಂದ ಮೇಲ್ಮೈಗೆ ಬರುವ ಮಣ್ಣಿನ ಬಣ್ಣದ ವ್ಯತ್ಯಾಸಗಳು).
  • ನೆರಳಿನ ಗುರುತುಗಳು (Shadow marks): (ಬೆಳಗಿನ ಅಥವಾ ಸಂಜೆಯ ಸೂರ್ಯನ ಬೆಳಕಿನಲ್ಲಿ ಎದ್ದು ಕಾಣುವ ಮಣ್ಣಿನ ದಿಬ್ಬಗಳು).

ಇಂದು, LiDAR (Light Detection and Ranging) ತಂತ್ರಜ್ಞಾನವು ಈ ಹಂತವನ್ನು ಕ್ರಾಂತಿಗೊಳಿಸಿದೆ. ವಿಮಾನದಿಂದ ಲೇಸರ್ ಕಿರಣಗಳನ್ನು ಹಾರಿಸುವ ಮೂಲಕ, ದಟ್ಟವಾದ ಅರಣ್ಯದ ಮೇಲಾವರಣವನ್ನು ಡಿಜಿಟಲ್ ರೂಪದಲ್ಲಿ ತೆಗೆದುಹಾಕಿ ಭೂಮಿಯ ಗುಪ್ತ ಸೂಕ್ಷ್ಮ ಸ್ಥಳಾಕೃತಿಯನ್ನು ಇದು ಬಹಿರಂಗಪಡಿಸುತ್ತದೆ. ಇದು ಮರೆತುಹೋದ ರಸ್ತೆಗಳು, ವಸಾಹತುಗಳು ಮತ್ತು ಕೃಷಿ ಭೂಮಿಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತದೆ.

ಅಗೋಚರವಾದುದನ್ನು ನೋಡುವುದು: ಭೂಭೌತಶಾಸ್ತ್ರೀಯ ಸಮೀಕ್ಷೆ

ನೆಲವನ್ನು ಅಗೆಯುವ ಮೊದಲು, ಮೇಲ್ಮಣ್ಣಿನ ಕೆಳಗೆ ಇಣುಕಿ ನೋಡಲು ಆಧುನಿಕ ಪುರಾತತ್ತ್ವ ಶಾಸ್ತ್ರವು ಸಂಪೂರ್ಣವಾಗಿ ವಿನಾಶಕಾರಿಯಲ್ಲದ ಭೂಭೌತಶಾಸ್ತ್ರೀಯ ಸಮೀಕ್ಷೆಗಳನ್ನು (Geophysical surveys) ಅವಲಂಬಿಸಿದೆ. ಗ್ರೌಂಡ್-ಪೆನೆಟ್ರೇಟಿಂಗ್ ರೇಡಾರ್ (GPR) ನಂತಹ ಉಪಕರಣಗಳು ಭೂಮಿಯೊಳಗೆ ವಿದ್ಯುತ್ಕಾಂತೀಯ ಅಲೆಗಳನ್ನು ಕಳುಹಿಸಿ ಹೂತುಹೋದ ಗೋಡೆಗಳು ಮತ್ತು ಕುಳಿಗಳನ್ನು ಮ್ಯಾಪ್ ಮಾಡುತ್ತವೆ. ಮ್ಯಾಗ್ನೆಟೋಮೆಟ್ರಿ (Magnetometry) ಸುಟ್ಟ ವಸ್ತುಗಳಿಗೆ ವಿಶೇಷವಾಗಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಪ್ರಾಚೀನ ಒಲೆಗಳು, ಇಟ್ಟಿಗೆ ಗೂಡುಗಳು ಅಥವಾ ಸಾವಯವ ತ್ಯಾಜ್ಯಗಳಿಂದ ತುಂಬಿದ ಹೊಂಡಗಳನ್ನು ಪತ್ತೆಹಚ್ಚಲು ಇದು ಸೂಕ್ತವಾಗಿದೆ, ಏಕೆಂದರೆ ಇವು ಸ್ಥಳೀಯ ಕಾಂತಕ್ಷೇತ್ರವನ್ನು (magnetic field) ಬದಲಾಯಿಸುತ್ತವೆ. ಏತನ್ಮಧ್ಯೆ, ಅರ್ಥ್ ರೆಸಿಸ್ಟೆನ್ಸ್ (Earth resistance) ಸಮೀಕ್ಷೆಗಳು ಮಣ್ಣು ವಿದ್ಯುಚ್ಛಕ್ತಿಯನ್ನು ಎಷ್ಟು ಸುಲಭವಾಗಿ ಹರಿಯಲು ಬಿಡುತ್ತದೆ ಎಂಬುದನ್ನು ಅಳೆಯುತ್ತವೆ; ಘನವಾದ ಕಲ್ಲಿನ ಅಡಿಪಾಯಗಳು ವಿದ್ಯುತ್ ಪ್ರವಾಹವನ್ನು ತಡೆಯುತ್ತವೆ, ಆದರೆ ಒದ್ದೆಯಾದ, ಹೂತುಹೋದ ಕಾಲುವೆಗಳು ಅದನ್ನು ಸುಲಭವಾಗಿ ಹರಿಯಲು ಬಿಡುತ್ತವೆ. ಈ ಸಾಧನಗಳು ಸಂಶೋಧಕರಿಗೆ ತಾಣದ ಸಂಭಾವ್ಯ ವಿನ್ಯಾಸವನ್ನು ಮ್ಯಾಪ್ ಮಾಡಲು ಮತ್ತು ನಿಖರವಾಗಿ ಎಲ್ಲಿ ಅಗೆಯಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತವೆ.

ಕ್ಷೇತ್ರ ಕಾರ್ಯಾಚರಣೆ: ಮೇಲ್ಮೈ ಸಮೀಕ್ಷೆ ಮತ್ತು ಫೀಲ್ಡ್ ವಾಕಿಂಗ್

ತಂತ್ರಜ್ಞಾನವನ್ನು ಬದಿಗಿಟ್ಟರೆ, ಭೂದೃಶ್ಯದಲ್ಲಿ ನಡೆದಾಡುವುದಕ್ಕೆ (Fieldwalking) ಬೇರೆ ಪರ್ಯಾಯವಿಲ್ಲ. ಗ್ರೌಂಡ್ ರೆಕನೈಸೆನ್ಸ್, ಅಥವಾ ಪಾದಚಾರಿ ಸಮೀಕ್ಷೆ (Pedestrian survey) ಎಂದರೆ ಪುರಾತತ್ತ್ವಜ್ಞರ ತಂಡಗಳು ಉಳುಮೆ ಮಾಡಿದ ಹೊಲಗಳು, ಮರುಭೂಮಿಗಳು ಅಥವಾ ಬಯಲು ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ, ಅಂತರವಿರುವ ಗ್ರಿಡ್‌ಗಳಲ್ಲಿ (grids) ನಡೆದಾಡುವುದು. ಮಣ್ಣಿನ ಸವೆತ, ಪ್ರಾಣಿಗಳ ಬಿಲ ಕೊರೆಯುವಿಕೆ ಅಥವಾ ಆಧುನಿಕ ಕೃಷಿಯಿಂದ ಮೇಲ್ಮೈಗೆ ಬಂದಿರುವ ಮಡಕೆ ಚೂರುಗಳು (sherds), ಕಲ್ಲಿನ ಉಪಕರಣಗಳ ತುಣುಕುಗಳು (lithics), ಅಥವಾ ಕಟ್ಟಡ ಸಾಮಗ್ರಿಗಳ ತುಂಡುಗಳಂತಹ ಮೇಲ್ಮೈ ವಸ್ತುಗಳಿಗಾಗಿ ಅವರು ಕಣ್ಣಿಟ್ಟಿರುತ್ತಾರೆ. ಈ ಮೇಲ್ಮೈ ಕಲಾಕೃತಿಗಳ ಸಾಂದ್ರತೆ ಮತ್ತು ವಿತರಣೆಯನ್ನು ಎಚ್ಚರಿಕೆಯಿಂದ ಮ್ಯಾಪ್ ಮಾಡುವ ಮೂಲಕ, ಸಂಶೋಧಕರು ವಸಾಹತುವಿನ ಕೇಂದ್ರವನ್ನು ಗುರುತಿಸಬಹುದು ಮತ್ತು ಅದರ ಹೊರಗಿನ ಗಡಿಗಳನ್ನು ನಿರ್ಧರಿಸಬಹುದು.

ಭೂಮಿಯ ಆಳದ ಪರೀಕ್ಷೆ: ಸಬ್ ಸರ್ಫೇಸ್ ಟೆಸ್ಟಿಂಗ್ (Subsurface Testing)

ದಟ್ಟವಾದ ಹುಲ್ಲುಗಾವಲುಗಳು ಅಥವಾ ದಟ್ಟವಾದ ಕಾಡುಗಳಂತಹ ಮೇಲ್ಮೈ ಗೋಚರತೆ ಕಳಪೆಯಾಗಿರುವ ಭೂದೃಶ್ಯಗಳಲ್ಲಿ, ಒಂದು ತಾಣದ ಅಸ್ತಿತ್ವವನ್ನು ಖಚಿತಪಡಿಸಲು ಸಂಶೋಧಕರು ಮಣ್ಣಿನೊಳಗಿನ ಪರೀಕ್ಷೆಯನ್ನು (subsurface testing) ಬಳಸಿಕೊಳ್ಳಬೇಕು. ಇದು ಸಾಮಾನ್ಯವಾಗಿ ಶೋವೆಲ್ ಟೆಸ್ಟ್ ಪಿಟ್ಸ್ (STPs) ಅನ್ನು ಅಗೆಯುವುದನ್ನು ಒಳಗೊಂಡಿರುತ್ತದೆ—ಅಂದರೆ ಗ್ರಿಡ್‌ನಾದ್ಯಂತ ನಿಯಮಿತ ಮಧ್ಯಂತರದಲ್ಲಿ ಅಗೆದ ಸಣ್ಣ, ಪ್ರಮಾಣೀಕೃತ ಗುಂಡಿಗಳು. ಯಾವುದೇ ಕಲಾಕೃತಿಗಳನ್ನು ಮರುಪಡೆಯಲು ಅಗೆದ ಮಣ್ಣನ್ನು ಜರಡಿಗಳ ಮೂಲಕ ಶೋಧಿಸಲಾಗುತ್ತದೆ. ಪರ್ಯಾಯವಾಗಿ, ಪುರಾತತ್ತ್ವಜ್ಞರು ಭೂಮಿಯ ಆಳವಾದ ಕೋರ್ ಮಾದರಿಗಳನ್ನು ಹೊರತೆಗೆಯಲು ಕೈಯಿಂದ ಅಥವಾ ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ಆಗರ್ (augers) ಗಳನ್ನು ಬಳಸಬಹುದು. ಈ ಕೋರ್‌ಗಳು (ಮಣ್ಣಿನ ಮಾದರಿಗಳು) ಭೌಗೋಳಿಕ ಟೈಮ್ ಮೆಷಿನ್‌ನಂತೆ ಕಾರ್ಯನಿರ್ವಹಿಸುತ್ತವೆ. ಇವು ಮಣ್ಣಿನ ಪದರಗಳನ್ನು (stratigraphy) ಬಹಿರಂಗಪಡಿಸುತ್ತವೆ ಮತ್ತು ಹೂತುಹೋದ ಸಾಂಸ್ಕೃತಿಕ ಪದರಗಳು, ಬೂದಿಯ ಕುರುಹುಗಳು ಅಥವಾ ಪ್ರಾಚೀನ ನೆಲದ ಮೇಲ್ಮೈಗಳ ಬಗ್ಗೆ ಸಂಶೋಧಕರಿಗೆ ಸುಳಿವು ನೀಡುತ್ತವೆ.

ಅಂತಿಮವಾಗಿ, ಪುರಾತತ್ತ್ವ ಶಾಸ್ತ್ರದ ನೆಲೆಯ ಗುರುತಿಸುವಿಕೆಯು ಭೂದೃಶ್ಯವನ್ನು ಓದುವ ಅಥವಾ ಅರ್ಥಮಾಡಿಕೊಳ್ಳುವ ಒಂದು ಕೌಶಲ್ಯವಾಗಿದೆ. ಆರ್ಕೈವಲ್ ಸುಳಿವುಗಳು, ರಿಮೋಟ್ ಸೆನ್ಸಿಂಗ್ ಡೇಟಾ ಮತ್ತು ಭೌತಿಕ ಪುರಾವೆಗಳನ್ನು ಒಗ್ಗೂಡಿಸುವ ಮೂಲಕ, ನೀವು ಸಾಧಾರಣವಾಗಿ ಕಾಣುವ ಭೂಮಿಯನ್ನು ಕಟ್ಟುನಿಟ್ಟಾದ ಶೈಕ್ಷಣಿಕ ಉತ್ಖನನಕ್ಕೆ ಸಿದ್ಧವಾಗಿರುವ ನಿರ್ದಿಷ್ಟ ಪ್ರದೇಶವಾಗಿ ಪರಿವರ್ತಿಸಬಹುದು.

ಆಕಸ್ಮಿಕವಾಗಿ ಬೆಳಕಿಗೆ ಬಂದಿರುವುದು.

ವಿಶ್ವದಲ್ಲಿ ಹಾಗೂ ಭಾರತದಲ್ಲಿ ಅನೇಕ ಕಡೆಗಳಲ್ಲಿ ಪುರಾತತ್ವ ನೆಲೆಗಳು ಹಾಗೂ ಪ್ರಾಚ್ಯವಸ್ತುಗಳು ಅನೇಕ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಕಂಡುಹಿಡಿಲ್ಪಟ್ಟವುಗಳಾಗಿವೆ. ಪಶ್ಚಿಮ ಏಷ್ಯಾದ ನಾಡುಗಳಲ್ಲಿ ಅನೇಕ ಪುರಾತನ ಸ್ಥಳಗಳು ತೀರಾ ಆಕಸ್ಮಿಕವಾಗಿ ದೊರಕಿದವು. ಉದಾ: ಯುಪ್ರಟಿಸ್‌ ನದಿ ತೀರದಲ್ಲಿ ಓಡಾಡುವಾಗ ಅಲ್ಲಿನ ಹಳ್ಳಿಗಾಡಿನ ಜನರಿಗೆ ಸುಮೇರಿಯನ್ ಮೂರ್ತಿಯೊಂದು ಆಕಸ್ಮಿಕವಾಗಿ ಸಿಕ್ಕ ಕಾರಣ ಇರಾಕ್ ಎಂಬ ನೆಲೆಯು ಬೆಳಕಿಗೆ ಬರಲು ಕಾರಣವಾಯಿತು. ಕೆಲವು ಸಂದರ್ಭಗಳಲ್ಲಿ ಕಾಲುವೆಗಾಗಿ ಹಳ್ಳ ತೊಡುವಾಗ, ಕೃಷಿ ಭೂಮಿಯನ್ನು ಉಳುಮೆ ಮಾಡುವಾಗ, ರಸ್ತೆಗಳನ್ನು ನಿರ್ಮಿಸುವಾಗ, ಕಟ್ಟಡಗಳನ್ನು ನಿರ್ಮಿಸಲು ತಳಪಾಯ ಅಗೆಯುವಾಗ, ಅನೇಕ ಪ್ರಾಚ್ಯವಸ್ತುಗಳು ಹಾಗೂ ಪುರಾತತ್ವ ನೆಲೆಗಳು ಕಣ್ಣಿಗೆ ಗೋಚರಿಸುವುದು ಸಾಮಾನ್ಯ.  ಇದು ಅಲ್ಲದೆ ನೈಸರ್ಗಿಕ ವಿಕೋಪಗಳು, ಮಾನವನ ಅನಿರೀಕ್ಷಿತವಾದ ಚಟುವಟಿಕೆಗಳು, ಮುಂತಾದ ಕಾರಣಗಳಿಂದಲೂ ಪುರಾತತ್ವ ನೆಲೆಗಳು ಸಿಕ್ಕ ಉದಾಹರಣೆಗಳು ಇವೆ. ಗಾಳಿಯ ಪರಿಣಾಮವಾಗಿ ಮಣ್ಣು ಒಂದು ಕಡೆಯಿಂದ ಬೇರೊಂದು ಕಡೆಗೆ ಕೊಚ್ಚಿಹೋದಾಗ ಅದರ ಅಡಿಭಾಗದಲ್ಲಿದ್ದ ಪುರಾತತ್ವ ನೆಲೆಗಳು ಅಥವಾ ಪ್ರಾಚೀನ ವಸ್ತುಗಳು ಬೆಳಕಿಗೆ ಬರುತ್ತವೆ. ಸಾಗರ, ನದಿ, ಗಾಳಿ ಹಾಗೂ ವಿಪರೀತ ಮಳೆಯ ಕಾರಣ ಇವುಗಳಿಂದ ಮಣ್ಣಿನ ಕೊರೆತ ಉಂಟಾದರೆ ಪುರಾತತ್ವ ನೆಲೆಗಳು ಕಂಡುಬರುತ್ತವೆ. ಸಮುದ್ರದ ಕೊರೆತದ ಪರಿಣಾಮವಾಗಿ ಇಂಗ್ಲೆಂಡಿನ ಕ್ಲೋಮರ್ ಎಂಬ ನೆಲೆಯಲ್ಲಿ ಹಳೆಯ ಶಿಲಾಯುಗದ ಕಲ್ಲಿನ ಉಪಕರಣಗಳು ದೊರಕಿದವು. ಅದೇ ಪ್ರದೇಶದ ಕ್ಲಾಕ್ಟನ್-ಆನ್‌-ಸೀ ಎಂಬ ಪ್ರದೇಶದಲ್ಲಿ ಪೂರ್ವಶಿಲಾಯುಗದ ಕಾಕ್ಟನ್‌ ಮಾದರಿಯ ಚಕ್ಕೆ ಉದ್ಯಮ ಕಡಲ ಕೊರೆತದಿಂದ ಗೋಚರಿಸಿತು.

ಅದರಂತೆ ಡ್ಯಾನೂನ್‌ ನದಿಯ ಕೊರೆತದ ಕಾರಣ ನದಿ ತೀರದ ʻʻವಿಂಚಾʼʼ ಎಂಬ ನೆಲೆಯು ಬೆಳಕಿಗೆ ಬಂದಿತು. ಪ್ರತಿ ವರ್ಷ ವೈಗೈ ನದಿಯ ನೆರೆ ಕಡಿಮೆಯಾದಾಗ ಮಧುರೈ ಹತ್ತಿರ ನೆರೆ ಪ್ರದೇಶದಲ್ಲಿ ಸಾಕಷ್ಟು ಚಿನ್ನದ ನಾಣ್ಯಗಳು ದೊರಕಿದ ಉದಾಹರಣೆಗಳಿವೆ. ದಕ್ಷಿಣ ಅಪಘಾನಿಸ್ತಾದ ಸೀಸ್ತಾನ್‌ ಎಂಬಲ್ಲಿ ಗಾಳಿಯ ವೇಗದಿಂದ ಇತಿಹಾಸ ಪೂರ್ವ ಸಮಾಧಿಯ ನೆಲೆಗಳು ಗೋಚರಿಸಿದವು. ಮಳೆಯ ಪ್ರವಾಹದ ಕಾರಣದಿಂದಲೂ ಸಹ ಪುರಾತತ್ವ ನೆಲೆಗಳು ಹೊರಗೆ ಕಾಣಿಸಿಕೊಂಡ ದಾಖಲೆಗಳು ಇವೆ. ಇಂದಿಗೂ ಸಹ ಬನವಾಸಿ, ಹಂಪೆ ಮುಂತಾದ ಪ್ರದೇಶಗಳಲ್ಲಿ ಮಳೆಯು ಜೋರಾಗಿ ಬಂದು ನಿಂತುಕೊಂಡರೆ ನಾಣ್ಯಗಳು ಹೊರಕಾಣಿಸುತ್ತವೆ. ತೀವ್ರ ಬರಗಾಲವೂ ಸಹ ಪುರಾತತ್ವ ಶೋಧನೆಗೆ ಕಾರಣವಾಗಬಹುದು. ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ತೀವ್ರ ಬರಗಾಲದಿಂದ ಸರೋವರ ಬತ್ತಿ ಹೋದಾಗ ಅದರಲ್ಲಿ ಹುದುಗಿದ್ದ ವಸತಿಯ ಅವಶೇಷಗಳು ಪತ್ತೆಯಾದವು. ಹಾಗೆಯೇ ರೈನ್ ನದಿಯ ತೀರದಲ್ಲಿ ಮರದ ಕಟ್ಟಡಗಳು ಶೋಧಿಸಲ್ಪಟ್ಟವು.

ರೈತರು ಹೊಲವನ್ನು ಉಳುಮೆ ಮಾಡುವಾಗ ಚಿನ್ನದ ನಾಣ್ಯಗಳು ಪತ್ತೆಯಾದ ಕುರುಹುಗಳು ಕಂಡುಬಂದಿವೆ. ಹೊಲದಲ್ಲಿ ರಂಟೆ ಹೊಡೆಯುವಾಗ ಅನೇಕ ಕಡೆ ರೋಮನ್ ನಾಣ್ಯಗಳು ಪತ್ತೆಯಾಗಿವೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಸಮೀಪದ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿಯ ನಾಣ್ಯಗಳ ನಿಧಿಯು ದೊರಕಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. 

ಉತ್ತರಭಾರತದಲ್ಲಿ ಕಾಲುವೆಯನ್ನು ತೋಡುವಾಗ ಮತ್ತು ರೈಲು ಹಳಿಯನ್ನು ನಿರ್ಮಿಸಲು ನೆಲವನ್ನು ಅಗೆಯುವಾಗ ಸಿಂಧೂ ನಾಗರಿಕತೆಯ ಅವಶೇಷಗಳು ದೊರಕಿದ್ದನ್ನು ನಾವು ಇತಿಹಾಸದಿಂದ ತಿಳಿಯಬಹುದು. ಇತ್ತೀಚೆಗೆ ಧಾರವಾಡ ಜಿಲ್ಲೆಯ ಮುತ್ತಗಿ ಎಂಬ ಗ್ರಾಮದಲ್ಲಿ ಆಸ್ಪತ್ರೆಯನ್ನು ನಿರ್ಮಿಸುವಾಗ 12ನೇ ಶತಮಾನಕ್ಕೆ ಸೇರಿದ ಎರಡು ಜೈನ ಪ್ರತಿಮೆಗಳು ಸಿಕ್ಕಿವೆ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಸ್ಥಳೀಯ ಜನರು ಇಟ್ಟಿಗೆ ತಯಾರಿಸಲು ಮಣ್ಣಿನ ದಿಬ್ಬವನ್ನು ಅಗೆಯುವಾಗ 2ನೇ ಶತಮಾನಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ದೊರಕಿದವು.

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ – 2022

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ – 2022

ಪೀಠಿಕೆ

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022ವು ಭಾರತ ಸರ್ಕಾರದ ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂಪಿಸಲಾದ ಪ್ರಮುಖ ನೀತಿಯಾಗಿದೆ. ಈ ನೀತಿಯ ಮುಖ್ಯ ಉದ್ದೇಶವು 2047ರೊಳಗೆ ಭಾರತವನ್ನು ವಿಶ್ವದ ಪ್ರಮುಖ ಪ್ರವಾಸೋದ್ಯಮದ ಪ್ರಮುಖ ಸ್ಥಾನವನ್ನಾಗಿಸುವುದಾಗಿದೆ. ಇದು ಸುಸ್ಥಿರತೆ (sustainability), ಡಿಜಿಟಲೀಕರಣ (digitalisation) ಮತ್ತು ಸರ್ವತೋಮುಖ ಬೆಳವಣಿಗೆ (inclusive growth) ಮೇಲೆ ಒತ್ತು ನೀಡುತ್ತದೆ. ಇದರ ಮೂಲಕ ಭಾರತ ತನ್ನ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲು ಯತ್ನಿಸುತ್ತದೆ.

ಮುಖ್ಯ ಗುರಿಗಳು

ಈ ನೀತಿಯಡಿಯಲ್ಲಿ ಭಾರತವು ಮಹತ್ವಾಕಾಂಕ್ಷಿ ಗುರಿಗಳನ್ನು ಹೊಂದಿದೆ. 2047ರೊಳಗೆ 100 ಮಿಲಿಯನ್ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವುದು, $1 ಟ್ರಿಲಿಯನ್ ಪ್ರವಾಸೋದ್ಯಮ GDP ಸಾಧಿಸುವುದು ಮತ್ತು 400 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಮುಖ ಗುರಿಗಳಾಗಿವೆ. ಈ ಗುರಿಗಳು ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತವೆ.

1. ಹಸಿರು ಪ್ರವಾಸೋದ್ಯಮ ಮಿಷನ್

ಹಸಿರು ಪ್ರವಾಸೋದ್ಯಮ ಮಿಷನ್ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು, ಜೀವ ವೈವಿಧ್ಯವನ್ನು ರಕ್ಷಿಸುವುದು ಮತ್ತು ಸುಸ್ಥಿರ ಬೆಳವಣಿಗೆಯ ಗುರಿಯನ್ನು 2030ರೊಳಗೆ ಸಾಧಿಸುವುದನ್ನು ಗುರಿಯನ್ನಾಗಿಸಿಕೊಂಡಿದೆ. ಈ ಮಿಷನ್ ಮೂಲಕ ಪ್ರವಾಸೋದ್ಯಮವು ಪರಿಸರಕ್ಕೆ ಹಾನಿ ಉಂಟುಮಾಡದೆ, ದೀರ್ಘಕಾಲಿಕವಾಗಿ ಬೆಳೆಯುವಂತೆ ಮಾಡುವ ಆಶಯವನ್ನು ಹೊಂದಿದೆ.

2. ಡಿಜಿಟಲ್ ಪ್ರವಾಸೋದ್ಯಮ ಮಿಷನ್

ಡಿಜಿಟಲ್ ಪ್ರವಾಸೋದ್ಯಮ ಮಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರವಾಸೋದ್ಯಮ ಕ್ಷೇತ್ರವನ್ನು ಆಧುನೀಕರಿಸಲು ಉದ್ದೇಶಿಸಿದೆ. ಇದರಡಿ ಏಕೀಕೃತ ಪ್ರವಾಸೋದ್ಯಮದ  ಅಭಿವೃದ್ಧಿ, ಆನ್‌ಲೈನ್ ಸೇವೆಗಳ ವಿಸ್ತರಣೆ ಮತ್ತು MSMEಗಳಿಗೆ ಡಿಜಿಟಲ್ ಬೆಂಬಲ ನೀಡಲಾಗುತ್ತದೆ. ಇದರಿಂದ ಪ್ರವಾಸೋದ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

3. ಕೌಶಲ್ಯಾಭಿವೃದ್ಧಿ ಮಿಷನ್

ಈ ಮಿಷನ್ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದನ್ನು ಗುರಿಯಾಗಿಟ್ಟುಕೊಂಡಿದೆ. ಇದರ ಮೂಲಕ ಉದ್ಯೋಗಾರ್ಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

4. DMO (Destination Management Organisation) ಮಿಷನ್

ಈ ಮಿಷನ್ ವಿಶಿಷ್ಟ ಸ್ಥಳ  ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದರಿಂದ ನಿರ್ದಿಷ್ಟ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ಆಕರ್ಷಕವಾಗಿಸಲು ಸಹಾಯವಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಉತ್ತಮ ಅನುಭವ ದೊರೆಯುತ್ತದೆ.

5. MSME (Micro,Small and Medium Enterprises) ಮಿಷನ್

ಈ ಮಿಷನ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ನೀಡುತ್ತದೆ. ಇದರಲ್ಲಿ ಹಣಕಾಸು ಸಹಾಯ, ಮಾರುಕಟ್ಟೆ ಅಭಿವೃದ್ಧಿ ಮತ್ತು ಉದ್ಯಮ ಸುವ್ಯವಸ್ಥೀಕರಣ ಸೇರಿವೆ. ಇದರಿಂದ ಸಣ್ಣ ಉದ್ಯಮಗಳು ಬೆಳೆಯಲು ಮತ್ತು ಆರ್ಥಿಕತೆಯಲ್ಲಿ ತಮ್ಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

ಕಾರ್ಯತಂತ್ರದ ಸ್ತಂಭಗಳು

1. ಸಂಪರ್ಕ ವ್ಯವಸ್ಥೆ ಸುಧಾರಣೆ

ಸಂಪರ್ಕ ವ್ಯವಸ್ಥೆ ಸುಧಾರಣೆ ಎಂದರೆ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆ, ರೈಲು, ವಿಮಾನ ಮತ್ತು ಜಲ ಮಾರ್ಗಗಳ ಸುಧಾರಣೆ. ಉತ್ತಮ ಸಂಪರ್ಕ ವ್ಯವಸ್ಥೆಯಿದ್ದರೆ ಪ್ರವಾಸಿಗರು ಸುಲಭವಾಗಿ ಗಮ್ಯಸ್ಥಾನವನ್ನು ತಲುಪಬಹುದು. ಇದರ ಮೂಲಕ ದೂರದ ಪ್ರದೇಶಗಳಲ್ಲಿರುವ ಪ್ರವಾಸಿ ಸ್ಥಳಗಳಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಮತ್ತು ಸ್ಥಳೀಯ ಆರ್ಥಿಕತೆಯೂ ಬೆಳೆಯುತ್ತದೆ.

2. ಹೂಡಿಕೆ ಉತ್ತೇಜನ (PPP)

ಹೂಡಿಕೆ ಉತ್ತೇಜನದಲ್ಲಿ ಸರ್ಕಾರ ಮತ್ತು ಖಾಸಗಿ ವಲಯ ಒಟ್ಟಾಗಿ (Public-Private Partnership – PPP) ಕೆಲಸ ಮಾಡುವುದು ಮುಖ್ಯವಾಗಿದೆ. ಇದರ ಮೂಲಕ ಹೋಟೆಲ್‌ಗಳು, ರಿಸಾರ್ಟ್‌ಗಳು, ರಸ್ತೆ ಮತ್ತು ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚು ಹಣ ಹೂಡಿಕೆ ಮಾಡಬಹುದು. ಖಾಸಗಿ ವಲಯದ ಪಾಲ್ಗೊಳ್ಳುವಿಕೆಯಿಂದ ಉತ್ತಮ ಗುಣಮಟ್ಟದ ಸೇವೆಗಳು ಮತ್ತು ವೇಗವಾದ ಅಭಿವೃದ್ಧಿ ಸಾಧ್ಯವಾಗುತ್ತದೆ.

3. ಪ್ರವಾಸಿಗರ ಅನುಭವ ಸುಧಾರಣೆ

ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ “ಅತಿಥಿ ದೇವೋ ಭವ” ಅಭಿಯಾನವನ್ನು ಜಾರಿಗೆ ತರಲಾಗಿದೆ. ಸ್ವಚ್ಛತೆ, ಭದ್ರತೆ, ಸ್ನೇಹಪೂರ್ಣ ಸೇವೆ, ಉತ್ತಮ ಮಾರ್ಗದರ್ಶನ ಮತ್ತು ಮೂಲ ಸೌಲಭ್ಯಗಳು (restrooms, food, transport) ಒದಗಿಸುವುದರಿಂದ ಪ್ರವಾಸಿಗರು ಸಂತೋಷವಾಗಿರುತ್ತಾರೆ ಮತ್ತು ಮತ್ತೆ ಭಾರತಕ್ಕೆ ಭೇಟಿ ನೀಡಲು ಪ್ರೇರಿತರಾಗುತ್ತಾರೆ.

4. ಸರಳ ವೀಸಾ ವ್ಯವಸ್ಥೆ

ವಿದೇಶಿ ಪ್ರವಾಸಿಗರಿಗೆ ಭಾರತಕ್ಕೆ ಬರಲು ಸುಲಭವಾಗಲು ವೀಸಾ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. E-ವೀಸಾ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ವೀಸಾ ಪಡೆಯಬಹುದು. ಇದರಿಂದ ಸಮಯ ಮತ್ತು ಕಾಗದದ ಕೆಲಸ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಉತ್ತೇಜನ ಪಡೆಯುತ್ತಾರೆ.

5. ಮಾರ್ಕೆಟಿಂಗ್ ಅಭಿವೃದ್ಧಿ

ಮಾರ್ಕೆಟಿಂಗ್ ಅಭಿವೃದ್ಧಿ ಎಂದರೆ ಭಾರತವನ್ನು ವಿಶ್ವದ ಮುಂದೆ ಉತ್ತಮವಾಗಿ ಪರಿಚಯಿಸುವುದು. “Incredible India” ಅಭಿಯಾನದ ಮೂಲಕ ಭಾರತದಲ್ಲಿನ ಸಂಸ್ಕೃತಿ, ಇತಿಹಾಸ, ಪ್ರಕೃತಿ ಮತ್ತು ಪ್ರವಾಸಿ ಸ್ಥಳಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ಹೊಸ ಪ್ರವಾಸೋದ್ಯಮ ಕ್ಷೇತ್ರಗಳು (wellness, adventure, cultural tourism) ಅಭಿವೃದ್ಧಿಪಡಿಸುವುದರಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಆಡಳಿತ ವ್ಯವಸ್ಥೆ

ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಶೇಷ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. NTAB ಮಾರ್ಗದರ್ಶನ ನೀಡುತ್ತದೆ, IMCCT ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುತ್ತದೆ ಮತ್ತು NTA ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಈ ವ್ಯವಸ್ಥೆಯ ಮೂಲಕ ನೀತಿಯ ಯಶಸ್ವಿ ಅನುಷ್ಠಾನವನ್ನು ಖಚಿತಪಡಿಸಲಾಗುತ್ತದೆ.

🔹 ವೈಶಿಷ್ಟ್ಯಗಳು

ಈ ನೀತಿಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಅತಿಥಿ ದೇವೋಭವ ತತ್ವ, ಡಿಜಿಟಲೀಕರಣ ಮತ್ತು ಪರಿಸರ ಸಂರಕ್ಷಣೆ ಸೇರಿವೆ. ಇವು ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತವೆ ಮತ್ತು ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುತ್ತವೆ.

🔹 ಉಪಸಂಹಾರ

ಒಟ್ಟಾರೆ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022ವು ಭಾರತವನ್ನು ಜಾಗತಿಕ ಪ್ರವಾಸೋದ್ಯಮ ಶಕ್ತಿಯಾಗಿ ರೂಪಿಸುವ ಮಹತ್ವದ ಯೋಜನೆಯಾಗಿದೆ. ಇದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಹಕಾರಿಯಾಗಿದೆ. ಇದರ ಯಶಸ್ವಿ ಅನುಷ್ಠಾನದಿಂದ ಭಾರತವು 2047ರೊಳಗೆ ವಿಶ್ವದ ಪ್ರಮುಖ ಪ್ರವಾಸೋದ್ಯಮ ಸ್ಥಾನವನ್ನಾಗಿಸುವ  ಸಾಧ್ಯತೆ ಇದೆ.