ಉತ್ಖನನವು ಪರಿಪೂರ್ಣವಾಗಿದೆ ಎಂದು ಗೊತ್ತಾಗಲು ಉತ್ಖನನಕಾರನು ನೀಡುವ ವರದಿಯೇ ಕಾರಣವಾಗುತ್ತದೆ. ಉತ್ಖನನದ ಸಂದರ್ಭದಲ್ಲಿ ಸಂಗ್ರಹ ಮಾಡಲಾದ ವಸ್ತುಗಳ ಹಾಗೂ ಪುರಾವೆಗಳನ್ನು ವಿಂಗಡಿಸಿ ಅವುಗಳನ್ನು ಪರಾಮರ್ಶಿಸಿ ಮತ್ತು ವಿಶ್ಲೇಷಣೆಗೆ ಒಳಪಡಿಸಿ ಸಮಗ್ರವಾದ ವರದಿಯನ್ನು ತಯಾರಿಸುವ ಹೊಣೆಗಾರಿಕೆ ಉತ್ಖನನಕಾರನ ಮೇಲಿದೆ. ಯಾವಾಗ ವರದಿಯು ಪ್ರಕಟವಾಗುತ್ತದೆಯೋ ಆಗ ಮಾತ್ರ ಉತ್ಖನನ ಕಾರ್ಯ ಪೂರ್ಣಗೊಂಡಿದೆ ಎಂದರ್ಥ. ಉತ್ಖನನದಲ್ಲಿ ಸಿಕ್ಕ ವಸ್ತುಗಳ ವರದಿಗಳು ಮುಂದಿನ ಪೀಳಿಗೆಗೆ ಸಂಶೋಧನಾ ಆಕರಗಳಾಗಬಹುದು. ಹಾಗಾಗಿ ಈ ವರದಿಯನ್ನು ಜನಸಾಮಾನ್ಯರಿಂದ ಹಿಡಿದು ವಿದ್ವಾಂಸರವರೆಗೆ ತಲುಪಿಸುವುದು ಪುರಾತತ್ವ ಶಾಸ್ತ್ರಜ್ಞರ ಕೆಲಸವಾಗಿದೆ. ಉತ್ಖನನದ ವರದಿಯನ್ನು ಪ್ರಮುಖವಾಗಿ 2 ಭಾಗಗಳನ್ನಾಗಿ ಗುರುತಿಸಲಾಗಿದೆ. ಅವುಗಳೆಂದರೆ.

1. ಉತ್ಖನನದ ಸಮಯದಲ್ಲಿ ಸಿಕ್ಕ ಐತಿಹಾಸಿಕ ಪುರಾವೆಗಳನ್ನು ಹೆಚ್ಚಿನ ವಿಮರ್ಶೆಗೆ ಒಳಪಡಿಸದೇ ಇದ್ದಂತೆ ವಿವರಿಸುವುದು. ಈ ವಿವರಗಳಿಗೆ ಪೂರಕವಾದ ಚಿತ್ರಗಳು, ಛಾಯಾಚಿತ್ರಗಳು ಹಾಗೂ ಸಾಮಗ್ರಿಗಳನ್ನು ಓದುಗರ ಮುಂದೆ ತರುವುದು.

2. ಉತ್ಖನನದಲ್ಲಿ ಸಿಕ್ಕ ಪುರಾವೆಗಳ ವಿಷಯಗಳನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿಮರ್ಶೆಗೆ ಒಳಪಡಿಸುವುದು. ಇದರಲ್ಲಿ ಉತ್ಖನನದ ವೇಳೆ ಅವುಗಳ ಅಧ್ಯಯನ, ವಿಮರ್ಶೆ ಹಾಗೂ ವಿಂಗಡಣೆಗೆ ಸಹಕರಿಸಿದ ಪುರಾತತ್ವ ಶಾಸ್ತ್ರಜ್ಞರ ವರದಿಗಳನ್ನು ಸೇರಿಸಬೇಕು.

3. ಉತ್ಖನನದಲ್ಲಿ ದೊರಕಿದ ಆಧಾರಗಳನ್ನು ಹೇಗಿದೆಯೋ ಹಾಗೆಯೇ ವಿಮರ್ಶೆ ಮಾಡಿ ವರದಿ ನೀಡುವುದು ಉತ್ಖನನಕಾರರ ನೈಜ ಕೆಲಸವಾಗಿದೆ.

 ಉತ್ಖನನದ ಮಧ್ಯಂತರ ವರದಿ:  ಸಾಮಾನ್ಯವಾಗಿ ಐತಿಹಾಸಿಕ ಪ್ರದೇಶಗಳ ಉತ್ಖನನ ಅತಿ ಹೆಚ್ಚು ಅಂದರೆ ಒಂದು ವರ್ಷದವರೆಗೆ ನಡೆಯಬಹುದು. ಆದರೆ ಕೆಲವು ಪ್ರದೇಶಗಳಲ್ಲಿ 10 ರಿಂದ 20 ವರ್ಷಗಳವರೆಗೂ ನಡೆದ ಉದಾಹರಣೆಗಳು ಇವೆ. ಅಂತಹ ಸಂದರ್ಭದಲ್ಲಿ ಪ್ರತಿ ವರ್ಷದ ಉತ್ಖನನ ಕಾರ್ಯ ಮುಕ್ತಾಯಗೊಂಡ ನಂತರ ಅದರ ಮಧ್ಯಂತರ ವರದಿಯನ್ನು ಪ್ರಕಟಿಸಲಾಗುವುದು. ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಹೊರ ತರುವ Indian Archaeology – A Review  ಎಂಬ ವಾರ್ಷಿಕ ಪತ್ರಿಕೆಯಲ್ಲಿ ಈ ರೀತಿಯ ವರದಿಯನ್ನು ಪ್ರಕಟಿಸುತ್ತದೆ. ಹಾಗೆಯೇ ಕೆಲವು ವಿಶ್ವವಿದ್ಯಾಲಯಗಳು ಸಹ ಸಂಶೋಧನಾ ನಿಯತಕಾಲಿಕೆಗಳನ್ನು ಪ್ರಕಟಿಸಿದಾಗ ಅದರಲ್ಲಿ ಉತ್ಖನನದ ಮಧ್ಯಂತರ ವರದಿಯನ್ನು ಕಾಣಬಹುದಾಗಿದೆ. ಹಿಂದೆ ಮುದ್ರಣ ವೆಚ್ಚದ ಕಾರಣದಿಂದ ವರದಿ ಪ್ರಕಟಣೆಯಾಗುವುದು ತಡವಾಗುತ್ತಿತ್ತು. ಆದರೆ ಇದು ಗಣಕಯಂತ್ರದ ಯುಗ. ವರದಿಯನ್ನು ಬೇಗ ಬೇಗನೆ ಪ್ರಕಟಿಸಿ ಜನತೆಯ ಮುಂದೆ ಇಡುವ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡುತ್ತದೆ. ಹಿಂದೆ 15-20 ವರ್ಷಗಳಾದರೂ ವರದಿಗಳು ಪ್ರಕಟಗೊಳ್ಳುತ್ತಿರಲಿಲ್ಲ. ಇದರಿಂದ ಪುರಾತತ್ವ ವಿಷಯದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ನಿರಾಶೆಯಾಗುತ್ತಿದ್ದುದು ಸತ್ಯ. ಇದು ಅಲ್ಲದೆ ಪುರಾತತ್ವ ಶಾಸ್ತ್ರದ ಬೆಳವಣಿಗೆ ಸಹ ಆಮೆಗತಿಯಲ್ಲಿ ಸಾಗುತ್ತಿತ್ತು. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಮಧ್ಯಂತರ ವರದಿಗಳನ್ನು ನೀಡಲಾಗುತ್ತಿತ್ತು. 

 ಉತ್ಖನನ ವರದಿಯು ಎಷ್ಟು ಒಳ್ಳೆಯ ಗುಣಗಳನ್ನು ಹೊಂದಿದೆಯೋ ಅಷ್ಟೇ ಕುಂದು ಕೊರತೆಗಳನ್ನು ಸಹ ಹೊಂದಿದೆ. ಉದಾ: ಉತ್ಖನನದ ಸಂದರ್ಭದಲ್ಲಿ ದೊರಕಿದ ವಸ್ತುಗಳ ಕುರಿತು ಸಾರಾಂಶ ರೂಪದಲ್ಲಿ ಹೇಳುವುದರಿಂದ ಕೆಲವು ಪುರಾವೆಗಳು ಕೈತಪ್ಪಿ ಹೋಗಬಹುದು. ಆಗ ಕೆಲವು ಕಡೆ ಬರೆದ ಒಂದೇ ಸಂಗತಿಯು ನಿಜವೆಂದು ನಂಬಿಕೆಗೆ ಅರ್ಹವಾಗುತ್ತದೆ. ಹಾಗಾಗಿ ಸಂಶೋಧಕರು, ವಿದ್ಯಾರ್ಥಿಗಳು, ಶಿಕ್ಷಕರು, ಇತಿಹಾಸಕಾರರು ಹಾಗೂ ಪುರಾತತ್ವ ಶಾಸ್ತ್ರಜ್ಞರು ಇವುಗಳ ವಸ್ತುಗಳೇ ನಿಜವಾದ ಆಧಾರವಾಗಿವೆ ಎಂದು ನಂಬಿ ಅವುಗಳನ್ನು ಅಧ್ಯಯನ ಮಾಡುವುದು ಸೂಕ್ತವಲ್ಲ.

ಉತ್ಖನನ ನೀಡಿದ ಮಧ್ಯಂತರ ವರದಿಯಲ್ಲಿ ವಿವರವಾದ ನಕ್ಷೆಗಳನ್ನು ನೀಡದಿದ್ದರೆ ವರದಿಯಲ್ಲಿನ ವಿವರಗಳು ನಿಖರವಾಗಿರುವುದಿಲ್ಲ. ಈ ಕಾರಣದಿಂದ ಮಧ್ಯಂತರ ವರದಿಯು ಅತ್ಯಂತ ನಿಖರ, ನಿಷ್ಪಕ್ಷಪಾತ ಹಾಗೂ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿರಬೇಕು. ವಿವರಗಳೊಂದಿಗೆ ಚಿತ್ರಗಳು, ಛಾಯಾಗ್ರಹಣ, ಲಂಬಛೇದ ಚಿತ್ರಗಳು, ನಕ್ಷೆಗಳು ಮೊದಲಾದವುಗಳನ್ನು ವರದಿಯಲ್ಲಿ ಸೇರಿಸುವುದು ಸೂಕ್ತವಾದುದು. 

ಉತ್ಖನನದ ವಿವರವಾದ ವರದಿ: 

ಉತ್ಖನನದ ನಂತರ ಪ್ರಕಟವಾಗುವ ವರದಿಗಳು ಸಾಮಾನ್ಯವಾಗಿ ಸ್ವತಂತ್ರವಾಗಿ ಹೊತ್ತಿಗೆ ರೂಪದಲ್ಲಿ ಪ್ರಕಟವಾಗುತ್ತವೆ. ಉದಾ:  ಮಾರ್ಶಲ್‌ರವರು ʻʻMohenjodaro and the Indus civilizationʼʼ ಎಂಬ ಸ್ವತಂತ್ರವಾಗಿ ಮೂರು ಪ್ರಕಟಣೆಗಳನ್ನು ಹೊರ ತಂದಿದ್ದಾರೆ.

ಟಿ ನರಸೀಪುರ, ಹೆಮ್ಮಿಗೆ ಹಾಗೂ ಚಂದ್ರವಳ್ಳಿ ಮುಂತಾದ ಸ್ಥಳಗಳ ಉತ್ಖನನದ ವರದಿಯು ಸ್ವತಂತ್ರ ಹೊತ್ತಿಗೆಯ ರೂಪದಲ್ಲಿ ಹೊರಬಂದಿವೆ. ಹಾಗೆಯೇ ಮಾರ್ಟಿಮಾರ್‌ ವೀಲರನ ಬ್ರಹ್ಮಗಿರಿ ಉತ್ಖನನದ ವರದಿ, ಬಿ.ಕೆ. ಥಾಪರ್ ಬರೆದ ಮಸ್ಕಿ ನೆಲೆಯ ಕುರಿತು ವರದಿ ಮೊದಲಾದವುಗಳು ಪ್ರಕಟಗೊಂಡಿವೆ. ಉತ್ಖನನದ ಪ್ರಮುಖವಾದ ವರದಿಯು ಈ ಕೆಳಗಿನಂತಿವೆ.

1. ತಲೆಬರಹ: ಉತ್ಖನನದ ವರದಿಯು ಸಾಮಾನ್ಯವಾಗಿ ತಲೆಬರಹ (ಶಿರೋನಾಮೆ)ವನ್ನು ಹೊಂದಿದ್ದು ಅದು ಆ ಸ್ಥಳದ ಹೆಸರು ಹಾಗೂ ಉತ್ಖನನ ನಡೆದ ವರ್ಷವನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ ಆ ಸ್ಥಳದ ಸಾಂಸ್ಕೃತಿಕ ಸ್ವರೂಪ ಅಥವಾ ಕಾಲಘಟ್ಟವನ್ನು ತಲೆಬರಹದಲ್ಲಿ ಸೇರಿಸಲಾಗುತ್ತದೆ. ಉದಾಹರಣೆಗೆ Arikamedu – an Indo Roman Site (1945) ಇಲ್ಲಿ ಅರಿಕಮೇಡು ಎಂಬ ಸ್ಥಳದ ಹೆಸರಿನ ಜೊತೆಗೆ ಅದು ಇಂಡೋ-ರೋಮನ್ ಕಾಲಕ್ಕೆ ಸೇರಿದು ಎಂಬ ಮಾಹಿತಿ ಇದೆ. ಮಸ್ಕಿ ಉತ್ಖನನದ ವರದಿಗೆ “Maski 1954 – A Chalcolithic Site of the Southern Deccan” ಎಂಬ ತಲೆಬರಹವನ್ನು ನೀಡಲಾಗಿದೆ. ಇದು ಆ ಪ್ರದೇಶದ ಚಾಲ್ಕೊಲಿಥಿಕ್ ಹಿನ್ನೆಲೆಯನ್ನು ತೋರಿಸುತ್ತದೆ. ಒಟ್ಟಿನಲ್ಲಿ ಇಂದು ವೈಜ್ಞಾನಿಕ ವರದಿಗೆ ತಲೆಬರಹವು ಅತ್ಯಂತ ಅವಶ್ಯವಾದುದು ಮತ್ತು ಅದು ಓದುಗರಿಗೆ ಮತ್ತು ಸಂಶೋಧಕರಿಗೆ ಆ ಸಂಶೋಧನಾ ವ್ಯಾಪ್ತಿ ಹಾಗೂ ಕಾಲದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುತ್ತದೆ.

2. ಸಾರಾಂಶ: ಇದು ಉತ್ಖನನ ವರದಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಉತ್ಖನನದ ಪ್ರಕ್ರಿಯೆ ಮುಕ್ತಾಯವಾದ ನಂತರ ಆ ಸ್ಥಳದ ಉತ್ಖನನದಿಂದ ಲಭ್ಯವಾದ ಪ್ರಮುಖ ವಿಷಯಗಳನ್ನು ಒಳಗೊಂಡ ಸಾರಾಂಶವನ್ನು ನೀಡಲಾಗುತ್ತದೆ. ಈ ಸಾರಾಂಶ ಕೇವಲ ಒಂದು ಅಥವಾ ಎರಡು ಪ್ಯಾರಾಗಳಷ್ಟು ಇರುತ್ತದೆ. ಓದುಗರು ಕೇವಲ ಸಾರಾಂಶವನ್ನು ತಿಳಿದುಕೊಳ್ಳುವುದಲ್ಲ. ಬದಲಿಗೆ ಉತ್ಖನನ ಕಾರ್ಯದ ಪೂರ್ಣ ವಿವರಗಳನ್ನು ಅಧ್ಯಯನ ಮಾಡುವುದು ಮುಖ್ಯವಾದುದು.

ಸಾರಾಂಶದಲ್ಲಿ ಒಂದು ಭಾಗದಲ್ಲಿ ಉತ್ಖನನವನ್ನು ಕೈಗೊಂಡ ಉದ್ದೇಶವನ್ನು ವಿವರಿಸುವುದರ ಜೊತೆಗೆ ಈ ಹಿಂದೆ ಏನಾದರೂ ಆ ಸ್ಥಳದ ಬಗ್ಗೆ ಬೇರೆ ಯಾರಾದರೂ ಸಂಶೋಧನೆಯನ್ನು ಮಾಡಿದ್ದರೆ ಅದರ ಕುರಿತು ಸಾರಾಂಶ ರೂಪದಲ್ಲಿ ವಿವರಿಸಲಾಗುತ್ತದೆ. ಈ ಸಾರಾಂಶದಲ್ಲಿ ಉತ್ಖನನಕ್ಕೆ ಕಾರಣಗಳೇನು? ಅದಕ್ಕೆ ಪ್ರೇರಣೆಯಾದ ಅಂಶಗಳು ಯಾವುವು? ಎಂಬುದು ಒತ್ತಿ ಹೇಳಲಾಗುತ್ತದೆ.

3. ಪರಿಚಯ: ಇದು ಪುರಾತತ್ವ ಅಥವಾ ಇತಿಹಾಸಕ್ಕೆ ಸಂಬಂಧಿಸಿದ ವರದಿಯ ಒಂದು ಭಾಗದಂತೆ ಕಾಣುತ್ತದೆ. ಪರಿಚಯದಲ್ಲಿ ಉತ್ಖನನ ಅಥವಾ ಅಧ್ಯಯನವನ್ನು ಕೈಗೊಂಡ ಮೂಲ ಉದ್ದೇಶವನ್ನು ವಿವರಿಸಲಾಗುತ್ತದೆ. ಜೊತೆಗೆ ಉತ್ಖನನ ಕುರಿತು ಸವಿವರಗಳನ್ನು ಒದಗಿಸಲಾಗುತ್ತದೆ. ನೆಲೆಯು ಇರುವ ಸರಿಯಾದ ಸ್ಥಳ. ಅದನ್ನು ತಲುಪುವ ದಾರಿ, ನೆಲೆಯ ಸುತ್ತಲಿನ ಭೌಗೋಳಿಕ ಲಕ್ಷಣ ಮುಂತಾದವುಗಳನ್ನು ವಿವರಿಸುವುದರ ಜೊತೆಗೆ ಅದಕ್ಕೆ ಪೂರಕವಾಗುವ ನಕ್ಷೆಗಳು, ತಲನಕ್ಷೆಗಳು. ಮಟ್ಟಗಳನ್ನು ಸೂಚಿಸುವ ನಕ್ಷೆಗಳು, ಛಾಯಾಚಿತ್ರಗಳನ್ನು ಸೇರಿಸಲಾಗುತ್ತದೆ. ಹವಾಮಾನ, ಮಳೆಯ ಪ್ರಮಾಣ, ಸಸ್ಯ ಹಾಗೂ ಪ್ರಾಣಿ ಸಂಪತ್ತು, ಮಣ್ಣಿನ ಸ್ವರೂಪ, ಸ್ಥಳದ ಇಂದಿನ ಪರಿಸ್ಥಿತಿ ಮೊದಲಾದ ವಿವರಗಳನ್ನು ನೀಡಲಾಗುತ್ತದೆ. ಜೊತೆಗೆ ಉತ್ಖನನ ಕಾರ್ಯದಲ್ಲಿ ಸಹಕರಿಸಿದ ಸಿಬ್ಬಂದಿ, ಉತ್ಖನನಕ್ಕೆ ಪರವಾನಗಿ ನೀಡಿದವರು, ಧನ ಸಹಾಯ ಮಾಡಿದ ಸಂಸ್ಥೆ ಮೊದಲಾದವುಗಳನ್ನು ಸ್ಮರಿಸಿದ ಬಗ್ಗೆ ಉಲ್ಲೇಖಿಸಲಾಗುತ್ತದೆ. ಉತ್ಖನನದಲ್ಲಿ ಸಿಕ್ಕ ವಸ್ತುಗಳನ್ನು ಯಾವ ವಸ್ತು ಸಂಗ್ರಹಾಲಯದಲ್ಲಿ ಶೇಖರಿಸಿಡಲಾಗಿದೆ, ಉತ್ಖನನದ ದಾಖಲೆಗಳು ಎಲ್ಲಿವೆ? ಎಂಬುದನ್ನು ಸೂಚಿಸಲಾಗುತ್ತದೆ.

4. ಉತ್ಖನನದಲ್ಲಿ ಬಳಸಲಾದ ವಿನ್ಯಾಸ ವ್ಯವಸ್ಥೆ: ಉತ್ಖನನ ಮಾಡುವ ಮೊದಲು ಆ ಪ್ರದೇಶವನ್ನು ವಿಂಗಡಿಸಿದ ಬಗೆಯನ್ನು ಇದು ವಿವರಿಸುತ್ತದೆ. ಅಂದರೆ ಯಾವ ಭಾಗದಲ್ಲಿ ಉತ್ಖನನ ಮಾಡಬೇಕು, ಯಾವ ಗುಂಡಿಗಳನ್ನು ಎಲ್ಲಿ ತೋಡಬೇಕು, ಅವುಗಳ ನಿಖರವಾದ ಅಳತೆ ಎಷ್ಟು ಮತ್ತು ಸ್ಥಳವನ್ನು ಗುರುತಿಸುವುದು ಹೇಗೆ ಎಂಬುದರ ಕುರಿತು ವಿವರಗಳು ಇರುತ್ತವೆ. ಇದು ಅಲ್ಲದೆ ಉತ್ಖನನವು ಎಷ್ಟು ವಿಸ್ತಾರವಾಗಿರಬೇಕು ಹಾಗೂ ಮಣ್ಣಿನ ಯಾವ ಸ್ತರವನ್ನು ತೋಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಉತ್ಖನನ ಎಂದರೆ ಕೇವಲ ನೆಲವನ್ನು ಅಗೆಯುವುದಲ್ಲ, ಬದಲಾಗಿ ವ್ಯವಸ್ಥಿತವಾಗಿ ಹಂತ ಹಂತಗಳಲ್ಲಿ ಭೂಮಿಯ ಪದರುಗಳನ್ನು ಪರೀಕ್ಷಿಸುವುದಾಗಿದೆ.

5.ಸ್ತರ ವಿಂಗಡನೆಯ ವಿವರ ಮತ್ತು ಸಂಸ್ಕೃತಿಯ ಕಾಲಾನುಪೂರ್ವ: ಈ ವಿಭಾಗವು ಭೂಮಿಯ ಪದರುಗಳಲ್ಲಿ ಕಂಡುಬರುವ ಐತಿಹಾಸಿಕ ಕುರುಹುಗಳನ್ನು ಆಧರಿಸಿ ಪ್ರಾಚೀನ ಸಂಸ್ಕೃತಿಯನ್ನು ಹೇಗೆ ಗುರುತಿಸಲಾಗುವುದು ಎಂಬುದನ್ನು ಇದು ವಿವರಿಸುತ್ತದೆ. ನೈಸರ್ಗಿಕ ಮಣ್ಣಿನ ಮಟ್ಟದಿಂದ ಮೇಲ್ಮೈವರೆಗೆ ಕಂಡುಬರುವ ವಿವಿಧ ಪದರುಗಳ ಬಣ್ಣ, ಘಟಕ ಮತ್ತು ಅವುಗಳ ನಡುವಿನ ಸಂಬಂಧವನ್ನು ಅನುಕ್ರಮವಾಗಿ ಈ ಭಾಗದಲ್ಲಿ ವಿವರಿಸಲಾಗುವುದು. ಇದರೊಂದಿಗೆ ನೈಸರ್ಗಿಕ ಕ್ರಿಯೆಯಲ್ಲಿ ಉಂಟಾಗುವ ಏರಿಳಿತಗಳು ಅಥವಾ ಬದಲಾವಣೆಗಳಿಂದಾಗಿ ಈ ಸ್ತರದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಸ್ತರ ವಿಂಗಡಣೆಯ ವರದಿಯಲ್ಲಿಯೇ ಗುರುತಿಸಲಾಗುವುದು. ಉತ್ಖನನದ ಸಂದರ್ಭದಲ್ಲಿ ಸಿಕ್ಕ ಸಾಂಸ್ಕೃತಿಕ ಅವಶೇಷಗಳನ್ನು ಆಧರಿಸಿ ಆಯಾ ಕಾಲದ ಸಾಂಸ್ಕೃತಿಕ ಹಂತಗಳನ್ನು ನಿರ್ಧರಿಸಲಾಗುವುದು. ಮಡಿಕೆ ಚೂರುಗಳು, ನಾಣ್ಯಗಳು ಹಾಗೂ ಇತರೇ ಪ್ರಾಚೀನ ಅವಶೇಷಗಳನ್ನು ವಿಶ್ಲೇಷಿಸುವ ಮೂಲಕ ಪ್ರಧಾನ ಸಂಸ್ಕೃತಿ ಹಾಗೂ ಉಪಸಂಸ್ಕೃತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ದಾಖಲಾತಿಗಾಗಿ ಸ್ತರವಿಂಗಡನೆಯ ವಿವರಗಳಿಗೆ ಅನುಸಾರವಾಗಿ ಛಾಯಾಚಿತ್ರಗಳು ಹಾಗೂ ರೇಖಾಚಿತ್ರಗಳನ್ನು ಬಳಸಲಾಗುತ್ತದೆ. ಇದು ಸಂಸ್ಕೃತಿಗಳ ಕಾಲಾನುಕ್ರಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸಂಸ್ಕೃತಿಯಲ್ಲಿ ಬಳಕೆ ಮಾಡಲಾಗುತ್ತಿದ್ದ ಉಪಕರಣಗಳ ಮಾದರಿಗಳು, ಮಡಿಕೆಗಳ ಲಕ್ಷಣಗಳು, ಆರ್ಥಿಕ ಸ್ಥಿತಿ, ಆಭರಣಗಳು ಹಾಗೂ ಅಂತ್ಯಕ್ರಿಯೆ ಪದ್ಧತಿಗಳಂತಹ ವಿವಿಧ ಮುಖಗಳನ್ನು ಪರಿಚಯಿಸಲಾಗುತ್ತದೆ.

 6. ಕಾಲಮಾನ: ಉತ್ಖನನದ ಸ್ಥಳದಲ್ಲಿ ಕಂಡುಬರುವ ವಿವಿಧ ಸಂಸ್ಕೃತಿಗಳ ಕಾಲಾನುಕ್ರಮವನ್ನು ನಿರ್ಧರಿಸುವುದು ಸಂಶೋಧನೆಯ ಪ್ರಮುಖ ಗುರಿಯಾಗಿದೆ. ಸ್ತರ ವಿಂಗಡನೆಯ ವಿವರಗಳಿಂದ ಆಯಾ ಕಾಲದ ಸಂಸ್ಕೃತಿಗಳ ಪರಿಸ್ಥಿತಿಯನ್ನು ಅರಿಯಬಹುದು. ಅಂದರೆ ಯಾವ ಸಂಸ್ಕೃತಿಯು ಮೊದಲು ಆರಂಭವಾಯಿತು ಹಾಗೂ ಯಾವುದು ನಂತರದಲ್ಲಿ ಬೆಳಕಿಗೆ ಬಂದಿತು ಎಂಬುದನ್ನು ನಿಖರವಾಗಿ ಗುರುತಿಸಲು ಈ ಕಾಲಮಾನವು ಸಹಾಯಕವಾಗುತ್ತದೆ. ಯಾವುದೇ ಸಂಸ್ಕೃತಿಯ ಕಾಲವನ್ನು ನಿರ್ಧರಿಸಲು ಅಲ್ಲಿ ದೊರಕಿದ ಪ್ರಾಚೀನ ವಸ್ತುಗಳು ನಿಖರವಾಗಿ ಮಾಹಿತಿಯನ್ನು ನೀಡುತ್ತವೆ. ಇತಿಹಾಸ ಪೂರ್ವಕಾಲದ್ದೋ ಅಥವಾ ಇತಿಹಾಸ ಕಾಲದ್ದೋ ಎಂಬ ಅಂಶಗಳು ಅಲ್ಲಿ ದೊರಕಿದ ನಾಣ್ಯಗಳ ಆಧಾರದ ಮೇಲೆ ತೀರ್ಮಾನ ಮಾಡಬಹುದಾಗಿದೆ.

 7. ಕಟ್ಟಡದ ರಚನೆಗಳು ಹಾಗೂ ಮತ್ತಿತರ ಆಕೃತಿಗಳು: ಭೂಮಿಯ ಉತ್ಖನನದ ಸಂದರ್ಭಗಳಲ್ಲಿ ದೊರಕಿದ ಕಟ್ಟಡಗಳು ಮತ್ತು ಅವುಗಳ ತಳನಕ್ಷೆಗಳು, ಛೇದಚಿತ್ರಗಳು ಹಾಗೂ ಆ ಕಟ್ಟಡವು ಹೇಗಿದ್ದಿರಬಹುದೆಂಬ ಕಾಲ್ಪನಿಕ ಚಿತ್ರಗಳ ಮೂಲಕ ವಿವರಿಸಲಾಗುತ್ತದೆ. ಈ ರಚನೆಗಳು ಯಾವ ಲಕ್ಷಣಗಳನ್ನು ಹೊಂದಿವೆ. ಅವುಗಳ ಗುರಿಗಳೇನು? ಅವು ಯಾವ ಸ್ಥಳಕ್ಕೆ ಸೇರಿವೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಉತ್ಖನನದ ಅಧ್ಯಯನದ ಸಮಯದಲ್ಲಿ ಮುಖ್ಯವಾಗಿ ಕಟ್ಟಡದ ಗಾತ್ರ ಹಾಗೂ ಅಳತೆ, ನಿರ್ಮಾಣಕ್ಕೆ ಬಳಸಲಾದ ಪದಾರ್ಥಗಳು ಇಟ್ಟಿಗೆ, ಕಲ್ಲು ಇತ್ಯಾದಿ ನಿರ್ಮಾಣ ಹಾಗೂ ಶೈಲಿ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ. ಅಗೆಯುವ ಸ್ಥಳದಲ್ಲಿ ದೊರಕಿದ ಇತರ ವಾಸ್ತು ಲಕ್ಷಣಗಳೊಂದಿಗೆ ಇವುಗಳನ್ನು ಹೋಲಿಸಿ ಆ ಕಾಲದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.

 8. ಮಡಿಕೆಗಳು: ಪುರಾತತ್ವ ಶಾಸ್ತ್ರದಲ್ಲಿ ಮಡಿಕೆಗಳ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಉತ್ಖನನದ ಸಂದರ್ಭದಲ್ಲಿ ದೊರಕುವ ಮಡಿಕೆಗಳ ಆಧಾರದ ಮೇಲೆ ಆ ಕಾಲದ ಸಂಸ್ಕೃತಿಯನ್ನು ಗುರುತಿಸಬಹುದು. ಸಿಕ್ಕ ಮಡಿಕೆಗಳ ಆಕಾರ, ಬಣ್ಣ, ತಯಾರಿಸಿದ ವಿಧಾನ ಮತ್ತು ಅವುಗಳ ಮೇಲಿರುವ ವಿನ್ಯಾಸದ ಆಧಾರದ ಮೇಲೆ ವರ್ಗೀಕರಣ ಮಾಡಿ ಅಧ್ಯಯನ ಮಾಡಲಾಗುತ್ತದೆ. ಹಾಗೆಯೇ ಒಂದು ಗೊತ್ತಾದ ಪ್ರದೇಶದಲ್ಲಿ ದೊರೆಯುವ ಮಡಿಕೆಗಳ ಮಾದರಿಯು ಮತ್ತೊಂದು ಕಡೆಯಲ್ಲಿ ಕಂಡು ಬಂದರೆ ಆ ಎರಡು ಪ್ರದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಅಥವಾ ಜನರ ವಲಸೆಯನ್ನು ಹೋಲಿಕೆ ಮಾಡಿ ನೋಡಬಹುದು. ಉತ್ಖನನದಲ್ಲಿ ಸಿಕ್ಕ ಮಡಿಕೆಗಳ ಗಾತ್ರ, ಅವುಗಳ ಮೇಲೆ ಇರಬಹುದಾದ ಚಿತ್ರಗಳು ಮತ್ತು ಗುರುತಿನ ಆಧಾರದ ಮೇಲೆ ವಿವರಗಳನ್ನು ಬರೆದಿಡಬೇಕು.

 9. ಇತರ ಪ್ರಾಚ್ಯವಸ್ತುಗಳು: ಪ್ರಾಚ್ಯವಸ್ತುಗಳನ್ನು ಅವುಗಳಿಗೆ ಬಳಕೆ ಮಾಡುವ ಸಾಮಗ್ರಿಗಳು, ಆಕೃತಿ ಹಾಗೂ ಸ್ವರೂಪವನ್ನು ಆಧರಿಸಿ ವರ್ಗೀಕರಣ ಮಾಡಲಾಗಿದೆ. ಉದಾ: ಬಳೆಗಳು, ನಾಣ್ಯಗಳು, ಮಣಿಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು ಮುಂತಾದವುಗಳು.

        * ಮಣಿಗಳು: ಮಣಿಗಳನ್ನು ಗಾಜಿನ ಮಣಿಗಳು, ಚಿನ್ನದ ಮಣಿಗಳು, ಮಣ್ಣಿನ ಮಣಿಗಳು ಹಾಗೂ ಶಿಲೆಯ ಮಣಿಗಳಾಗಿ ವರ್ಗೀಕರಣ ಮಾಡಲಾಗಿದೆ.

        * ಉದ್ದನೆಯ ಮಣಿಗಳು, ಶಂಖಾಕಾರದ ಮಣಿಗಳು, ದ್ವಿಶಂಖಾಕಾರದ ಮಣಿಗಳು, ಚಪ್ಪಟೆಯಕಾರದ ಮಣಿಗಳು ಹಾಗೂ ವೃತ್ತಾಕಾರದ ಮಣಿಗಳು.

        * ಲೋಹದ ವಸ್ತುಗಳು:  ಚಿನ್ನದ ವಸ್ತುಗಳು, ಬೆಳ್ಳಿಯ ವಸ್ತುಗಳು, ತಾಮ್ರದ ವಸ್ತುಗಳು, ಕಂಚಿನ ವಸ್ತುಗಳು, ಸೀಸದ ವಸ್ತುಗಳು, ಕಬ್ಬಿಣದ ವಸ್ತುಗಳು ಇತ್ಯಾದಿ.

         *  ಮಣ್ಣಿನ ವಸ್ತುಗಳು:  ಮುದ್ರೆಗಳು, ಗೊಂಬೆಗಳು, ಮಾನವನಾಕೃತಿಗಳು, ಪ್ರಾಣಿಗಳು ಮೊದಲಾದ ವಸ್ತುಗಳ ಶಾಸ್ತ್ರೀಯ ಅಧ್ಯಯನ ಮಾಡುವುದರಿಂದ ಅವುಗಳ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಗುಣಮಟ್ಟವನ್ನು ಅರಿಯಬಹುದು.

ಕೊಡಲಿ, ಚಾಕು, ಹಾರೆ ಮತ್ತು ಕುಡುಗೋಲು ಅವರ ದೈನಂದಿನ ಜೀವನ ಶೈಲಿಯನ್ನು ಪರಿಚಯಿಸುತ್ತವೆ. ಖಡ್ಗ, ಬಾಣ, ಬಿಲ್ಲು ಈ ಮೊದಲಾದವುಗಳು ಯುದ್ಧದ ಸೂಚನೆಯನ್ನು ನೀಡುತ್ತವೆ.

10. ವಿಶೇಷ ತಾಂತ್ರಿಕ ವರದಿಗಳು: ಉತ್ಖನನದ ನಂತರ ಸ್ಥಳದಲ್ಲಿ ದೊರಕಿದ ವಿವಿಧ ವಸ್ತು, ವಿಷಯಗಳ ವಿಶೇಷ ಅಧ್ಯಯನ ಮಾಡಲೆಂದು ನಿರ್ದಿಷ್ಟ ಪಡಿಸಿದ ವಿವಿಧ ತಜ್ಞರು ನೀಡಿದ ವಿಶೇಷ ತಾಂತ್ರಿಕ ವರದಿಯನ್ನು ಉತ್ಖನನದ ವರದಿಯಲ್ಲಿ ಪ್ರಕಟಿಸಲಾಗುತ್ತದೆ. ಉದಾ: ಮಾನವನ ಅವಶೇಷಗಳಾದ ತಲೆ ಬುರುಡೆ, ಅಸ್ತಿಪಂಜರ ಹಾಗೂ ಎಲುಬುಗಳ ಕುರಿತು ಶಾರೀರಿಕ ಮಾನವಶಾಸ್ತ್ರಜ್ಞರು ವರದಿ ನೀಡಿದರೆ, ಪ್ರಾಣಿಗಳ ಅವಶೇಷಗಳ ಕುರಿತು ಪ್ರಾಣಿಶಾಸ್ತ್ರಜ್ಞರು ವರದಿಯನ್ನು ನೀಡುತ್ತಾರೆ. ಹಾಗೆಯೇ ಸಸ್ಯಗಳ ಅವಶೇಷಗಳ ಬಗ್ಗೆ ಸಸ್ಯಶಾಸ್ತ್ರಜ್ಞರು ವರದಿಯನ್ನು ಸಿದ್ಧಪಡಿಸುತ್ತಾರೆ. ಲೋಹಶಾಸ್ತ್ರಜ್ಞರು ಲೋಹಗಳ ಅವಶೇಷಗಳ ಕುರಿತು ಮತ್ತು ನಾಣ್ಯಶಾಸ್ತ್ರಜ್ಞರು ನಾಣ್ಯಗಳ ಬಗ್ಗೆ ವರದಿ ನೀಡುತ್ತಾರೆ. ಇಂಗಾಲ 14 ಮತ್ತು ಥರ್ಮೋಲುಮಿನೆಸೆನ್ಸ್‌ ನಂತಹ ವೈಜ್ಞಾನಿಕ ವಿಧಾನಗಳನ್ನು ಬಳಸಿ ವಸ್ತುಗಳ ಕಾಲವನ್ನು ನಿರ್ಧರಿಸುವ ವರದಿ ಇದರಲ್ಲಿರುತ್ತದೆ. ಈ ವರದಿಯಲ್ಲಿ ವಿಷಯಗಳನ್ನು ನಿಖರವಾಗಿ ಹೇಳಲು ನಕ್ಷೆಗಳು, ಕೋಷ್ಟಕಗಳು, ರೇಖಾಚಿತ್ರಗಳು ಹಾಗೂ ಛಾಯಾಚಿತ್ರಗಳನ್ನು ಬಳಸಲಾಗುತ್ತದೆ. ಹೀಗಾಗಿ ಆಯಾ ಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿದ ತಜ್ಞರಿಗೆ, ಸಂಶೋಧಕರಿಗೆ ವರದಿಗಳಲ್ಲಿ ನೀಡಿರುವ ವಿಷಯಗಳನ್ನು ಸರಿಯಾಗಿ ಪರಾಮರ್ಶೆ ಮಾಡಲು ಸಾಧ್ಯವಾಗುತ್ತದೆ.

 11.  ಪರಾಮರ್ಶೆ ಹಾಗೂ ಉಪಸಂಹಾರ: ಈ ಮೇಲಿನ ಉಲ್ಲೇಖಿತ ವರದಿಯ ವಿವಿಧ ಭಾಗಗಳಲ್ಲಿ ದೊರೆತ ಪುರಾವೆಗಳ ಹಾಗೂ ವಿವರಗಳ ಹೆಚ್ಚಿನ ಪರಾಮರ್ಶೆ ಮಾಡದೆ ಅದನ್ನು ಹಾಗೆಯೇ ಮಂಡಿಸಲಾಗುತ್ತದೆ. ವರದಿಯನ್ನು ಮಾಡುವಾಗ ಪರಾಮರ್ಶೆ ಹಾಗೂ ಉಪಸಂಹಾರಕ್ಕಾಗಿ ಬೇರೆಯದೇ ಭಾಗವನ್ನು ಕಲ್ಪಿಸಿಕೊಡಲಾಗುತ್ತದೆ. ಈ ಭಾಗದಲ್ಲಿ ಉತ್ಖನನಕಾರನು ತಾನು ಉತ್ಖನನದಲ್ಲಿ ಕಂಡುಕೊಂಡಿದ್ದ ಎಲ್ಲಾ ಪುರಾವೆಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿ ಪರೀಕ್ಷಿಸಿ ತನ್ನ ಅನಿಸಿಕೆಯನ್ನು ಬರೆಯುತ್ತಾನೆ. ಈ ಹಂತದಲ್ಲಿ ಉತ್ಖನನ ಸ್ಥಳದಲ್ಲಿ ದೊರಕಿದ ಪುರಾವೆಗಳನ್ನು ಬೇರೆ ಸಮಕಾಲೀನ ಅಥವಾ ಹತ್ತಿರದ ಸ್ಥಳದಲ್ಲಿ ನಡೆದ ಉತ್ಖನನದ ಮಾಹಿತಿಯೊಂದಿಗೆ ಹೋಲಿಸಿ ನೋಡುತ್ತಾನೆ. ನಂತರ ನಿರ್ದಿಷ್ಟ ಸ್ಥಳದಲ್ಲಿದ್ದ ಸಾಂಸ್ಕೃತಿಕ ವಿಸ್ತಾರ, ಜನರ ಜೀವನ ಶೈಲಿ ಹಾಗೂ ಇತರ ಸಂಸ್ಕೃತಿಗಳೊಂದಿಗೆ ಅವುಗಳ ಸಂಪರ್ಕ ಸಂಬಂಧವನ್ನು ಸೂಚಿಸುತ್ತಾನೆ. ಇದು ಅಲ್ಲದೆ ಉತ್ಖನನದಿಂದ ಗೊತ್ತಾದ ಹೊಸ ವಿಷಯಗಳನ್ನು ಒತ್ತಿ ಹೇಳಿ ಅದರಿಂದ ಉದ್ಭವಿಸಿದ ಹೊಸ ಸಮಸ್ಯೆಗಳನ್ನು ಉತ್ಖನನಕಾರನು ಸೂಚಿಸುತ್ತಾನೆ. ಸಮಸ್ಯೆಗೆ ಪರಿಹಾರಗಳೇನಾದರೂ ಕಂಡುಬಂದರೆ ಸಲಹೆ ಸೂಚನೆಗಳನ್ನು ನೀಡುತ್ತಾನೆ.

 12. ಅನುಬಂಧಗಳು, ಆಕರ ಗ್ರಂಥಗಳ ಪಟ್ಟಿ ಮತ್ತು ಛಾಯಾಚಿತ್ರಗಳು: ಯೋಜನಾ ವರದಿಯ ಕೊನೆಯ ಹಂತಗಳಾದ ಅನುಬಂಧಗಳು, ಆಕರ ಗ್ರಂಥಗಳ ಪಟ್ಟಿ ಹಾಗೂ ಛಾಯಾಚಿತ್ರಗಳ ಕುರಿತು ಇಲ್ಲಿ ಬರೆಯಲಾಗಿದೆ.

* ವರದಿಯಲ್ಲಿ ವಿವರಿಸಲಾದ ವಿಷಯಗಳಿಗೆ ಪುಷ್ಠಿ ನೀಡುವ ಹೆಚ್ಚುವರಿ ದಾಖಲೆಗಳು ಅಥವಾ ವಿವರಗಳನ್ನು ಇಲ್ಲಿ ಸೇರಿಸಲಾಗುತ್ತದೆ. ಇದರಿಂದ ಈ ಸಂಶೋಧನೆ ಮಾಡಲು ಸಹಕಾರಿಯಾಗುತ್ತವೆ.

* ವರದಿ ಸಿದ್ದಪಡಿಸಲು ಬಳಸಿದ ಅಥವಾ ಉಲ್ಲೇಖಿಸಿದ ಪುಸ್ತಕಗಳು, ಲೇಖನಗಳು, ಇತರೆ ಪ್ರಕಟಣೆಗಳು ಹಾಗೂ ಇದರಲ್ಲಿ ಲೇಖಕರ ಹೆಸರಿನ ಆಕಾರಾದಿ ಕ್ರಮದಲ್ಲಿ ವ್ಯವಸ್ಥಿತ ಪಟ್ಟಿಮಾಡಿ ಆಯಾ ಲೇಖಕರ ಹೆಸರಿನ ಮುಂದೆ ಕೃತಿಯ ಹೆಸರು, ಪ್ರಕಟವಾದ ಸ್ಥಳ ಮತ್ತು ಪ್ರಕಟವಾದ ವರ್ಷ ಮುಂತಾದ ವಿವರಗಳಿರಬೇಕು.

* ವರದಿಯಲ್ಲಿ ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಳಸಲಾದ ಫೋಟೋಗಳನ್ನು ವರದಿಯ ಕೊನೆಯಲ್ಲಿ ಅನುಕ್ರಮವಾಗಿ  ಮುದ್ರಿಸಬೇಕು. ಫೋಟೋಗಳ ಸಂಖ್ಯೆ, ಅದರ ವಿವರ ಹಾಗೂ ವರದಿಯಲ್ಲಿ ಅದು ಉಲ್ಲೇಖವಾಗಿರುವ ಪುಟದ ಸಂಖ್ಯೆಯನ್ನು ಆಯಾ ಚಿತ್ರಗಳ ಕೆಳಭಾಗದಲ್ಲಿ ಸೂಚಿಸಬೇಕು.

* ಈ ಮೇಲಿನ ವರದಿಗಳು ಮುಂದಿನ ಉತ್ಖನನಕಾರರು ಹಾಗೂ ಸಂಶೋಧಕರಿಗೆ ಮೂಲ ಸಾಮಗ್ರಿಗಳನ್ನು ಒದಗಿಸುವುದರಿಂದ ಉತ್ಖನನಕಾರರ ಗುಣಮಟ್ಟವನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.