ಭಾರತದ ಜೈವಿಕ ಭೌಗೋಳಿಕ ವಲಯಗಳು

ಭಾರತದ ಜೈವಿಕ ಭೌಗೋಳಿಕ ವಲಯಗಳು

ಭಾರತದ ಜೀವ ವೈವಿಧ್ಯತೆಯು ಅಪಾರ ಸಂಖ್ಯೆಯಲ್ಲಿದೆ. ಇದು ಪಶ್ಚಿಮದಲ್ಲಿ ಉಷ್ಣವಲಯದ ಆಫ್ರಿಕಾ ಹಾಗೂ ಪೂರ್ವದಲ್ಲಿ ಮಲೇಶಿಯಾಗಳ ನಡುವೆ ಇದೆ. ಇದು ಭಿನ್ನವಾದ  ಹವಾಗುಣ ಹಾಗೂ ಭೂ ಸ್ವರೂಪವನ್ನು ಹೊಂದಿದೆ. ಹಾಗಾಗಿ ಭಾರತವು ಹೊಂದಿರುವ ಜೀವ ಪ್ರಭೇದಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. 2001ರಲ್ಲಿನ ಭಾರತ ಪರಿಸರ ಪರಿಸ್ಥಿತಿ ವರದಿಯನ್ನು ಆಧರಿಸಿ 1990 ರಲ್ಲಿನ ವಿಂಗಡನೆಗೆ ಅನುಸಾರವಾಗಿ 10 ಭೌಗೋಳಿಕ ವಲಯಗಳನ್ನು ಗುರುತಿಸಲಾಗಿದೆ ಅವುಗಳೆಂದರೆ.

1. ಹೊರಗಿನ ಹಿಮಾಲಯ: (Outer Himalayas)

ಹೊರಗಿನ ಹಿಮಾಲಯ ಪ್ರದೇಶವು ಟಿಬೇಟ್ ಪ್ರಸ್ಥಭೂಮಿ, ಲಡಾಖ, ರಾಹುಲ್, ಸ್ಪಿತಿ ಕಣಿವೆಯ ಕೆಲವು ಭಾಗಗಳನ್ನು ಒಳಗೊಂಡಿದ್ದು ಇದು ಶೀತ ಭೂಮಿಯಾಗಿದೆ. ಇದು ಭಾರತ ದೇಶದ 5.7% ಭೂಭಾಗವನ್ನು ಆವರಿಸಿರುವ ಜೀವರಾಶಿ ಪ್ರದೇಶವಾಗಿದೆ. ಇದು ಸಸ್ಯ ವರ್ಗಗಳಿಂದ ಕೂಡಿದೆ. ಕಪ್ಪು ಕತ್ತಿನ ಕೊಕ್ಕರೆಯಂತಹ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ.

2. ಹಿಮಾಲಯ ಪರ್ವತಗಳು: (The Himalayas)

ಇದೊಂದು ಜೀವ ವೈವಿಧ್ಯತೆಯಿಂದ ಕೂಡಿದ ವಿಶಿಷ್ಟ ಪ್ರದೇಶವಾಗಿದೆ. ಈ ಪ್ರದೇಶಗಳು ದೇಶದ ಉತ್ತರ ಭಾಗದಲ್ಲಿ ವಾಯುವ್ಯದಿಂದ ಈಶಾನ್ಯದವರೆಗೂ ವಿಸ್ತರಿಸಿವೆ. ಇವುಗಳು ಸುಮಾರು 300 ರಿಂದ 6000 ಮೀಟರ್ ಎತ್ತರವಾಗಿವೆ. ಇದು ಭಾರತದ ಭೂಪ್ರದೇಶದ 7.2% ರಷ್ಟು ವಿಸ್ತಾರ ಹೊಂದಿದ್ದು ಕಾಡುಗಳ ಹುಲ್ಲುಗಾವಲು ಮತ್ತು ಅರ್ದ್ರತೆಯಿಂದ ಕೂಡಿದ ಎಲೆ ಉದುರುವ ಅರಣ್ಯ ಭಾಗಗಳನ್ನು ಹೊಂದಿದೆ. ಇಲ್ಲಿ ಕಂಡುಬರುವ ಅಪರೂಪದ ಪ್ರಭೇದಗಳೆಂದರೆ ಹಂಗೂರ್ ಮತ್ತು ಕಸ್ತೂರಿ ಜಿಂಕೆ.

3. ಮರುಭೂಮಿ ಪ್ರದೇಶ: (The desert)

 ಇದು ಭಾರತದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ. ಈ ಪ್ರದೇಶವು ರಾಜಸ್ಥಾನದ ಮರಳು ಭೂಮಿ ಮತ್ತು ಗುಜರಾತಿನ ಲವಣ ಮರುಭೂಮಿಯಿಂದ ಕೂಡಿದೆ. ಇದು ಭಾರತದ ಭೂ ಪ್ರದೇಶ ಶೇಕಡಾ 67% ರಷ್ಟು ಇದೆ. ತೋಳ, ಮರುಭೂಮಿ ಬೆಕ್ಕು, ಹೌಬಾರಾ ಬಸ್ಟರ್ಡ್ ಹಾಗೂ ಗ್ರೇಟ್ ಇಂಡಿಯನ್ ಬಸ್ಟರ್ಡ್ ಮುಂತಾದ ಅಪಾಯದಂಚಿನಲ್ಲಿರುವ ಪ್ರಭೇದಗಳು ಇಲ್ಲಿ ವಾಸಿಸುತ್ತಿವೆ.

4. ಅರೆ ಶುಷ್ಕ ವಲಯ: ( Semi arid region)

 ಅರಾವಳಿ ಬೆಟ್ಟಗಳನ್ನು ಒಳಗೊಂಡ ಮರುಭೂಮಿ ಹಾಗೂ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿಯ ನಡುವೆ ಇರುವ ಭೂಭಾಗವೇ ಅರೆ ಶುಷ್ಕ ವಲಯ ಎಂದು ಹೆಸರಾಗಿದೆ. ಇದು ಭಾರತದ ಭೂಪ್ರದೇಶದ 15.6 ರಷ್ಟು ಇದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃತಕ ಹಾಗೂ ನೈಸರ್ಗಿಕ ಸರೋವರಗಳು ಉಂಟು. ಹಾಗೆಯೇ ಜೌಗು ಪ್ರದೇಶಗಳು ಸಹ ಇಲ್ಲಿವೆ. ಇಲ್ಲಿ ತೋಳ, ಸಿಂಹ, ಚಿರತೆ, ಕ್ಯಾರೆಕಲ್ ಹಾಗೂ ಗುಳ್ಳೆನರಿ ಮುಂತಾದ ಪ್ರಾಣಿಗಳು ವಾಸಿಸುತ್ತಿವೆ.

 5. ಪಶ್ಚಿಮ ಘಟ್ಟಗಳು: (The western ghats)

ಇವು ಗುಜರಾತಿನ ತಪತಿ ನದಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಾಗೆಯೇ ಪಶ್ಚಿಮ ಕರಾವಳಿಯ ತೀರ ಪ್ರದೇಶದವರೆಗೂ ಹಬ್ಬಿವೆ. ಇದು ಭಾರತದ ಭೂ ವಿಸ್ತೀರ್ಣದ 58% ರಷ್ಟು ಇದೆ. ಇಲ್ಲಿ ಸಾಕಷ್ಟು ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ.

6. ದಕ್ಷಿಣದ ಪ್ರಸ್ಥಭೂಮಿ:(Deccan plaleau)

ಇದು ಪರ್ಯಾಯ ಪ್ರಸ್ಥಭೂಮಿಯ ಕೇಂದ್ರ ಹಾಗೂ ದಕ್ಷಿಣ ಭಾಗಗಳನ್ನು ಪೂರ್ಣವಾಗಿ ಒಳಗೊಂಡಿದ್ದು ಅತ್ಯಂತ ವಿಸ್ತಾರವಾಗಿದೆ. ಇಲ್ಲಿ ಬಹುತೇಕ ಅರಣ್ಯಗಳು ಎಲೆ ಉದುರುವ ಅರಣ್ಯಗಳಾಗಿವೆ. ಭಾರತದ ಭೂ ಭಾಗದ 42ರಷ್ಟು ಪ್ರದೇಶವನ್ನು ಹೊಂದಿದೆ. ಚಿರತೆ, ಸಾಂಬಾರ್, ನೀಲ್‌ಗಾಯ್‌, ಚೌಸಿಂಗ್ ಇತ್ಯಾದಿ ಪ್ರಾಣಿಗಳು ಹೇರಳವಾಗಿ ಇಲ್ಲಿ ಕಂಡುಬರುತ್ತವೆ. ಬೊಗಳುವ ಜಿಂಕೆ, ಗೌರ್‌, ಕೆಸರು ಜಿಂಕೆ ಮುಂತಾದವುಗಳು ಸಹ ವಾಸಿಸುತ್ತವೆ.  ಇಲ್ಲಿ ವಿಶಿಷ್ಟ ಶೋಲಾ ಅರಣ್ಯ ಸಹ ಕಂಡುಬರುತ್ತದೆ.

 7. ಗಂಗಾ ಮೈದಾನ: (The gangetic plain)

ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ, ಉತ್ತರದಲ್ಲಿ ಹಿಮಾಲಯದವರೆಗೂ ಕಂಡುಬರುವ ಪ್ರದೇಶವೇ ಗಂಗಾ ಮೈದಾನ. ಭಾರತದ ಒಟ್ಟು ಭೂಪ್ರದೇಶದ 11ರಷ್ಟು ವಿಸ್ತರಿಸಿದೆ. ಘೇಂಡಾಮೃಗ, ಆನೆ, ಎಮ್ಮೆ, ಕೆಸರು ಜಿಂಕೆ, ಚಿಕ್ಕ ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.

 8. ಈಶಾನ್ಯ ವಲಯ: (The north east zone)

ಈ ವಲಯವು ಪರ್ವತ, ಗುಡ್ಡ, ಬೆಟ್ಟ, ಕಣಿವೆ ಹಾಗೂ ಮೈದಾನಗಳಿಂದ ಕೂಡಿದೆ. ಇಲ್ಲಿ ವಾರ್ಷಿಕ ಹೆಚ್ಚು ಮಳೆ ಬೀಳುತ್ತದೆ. ಹೀಗಾಗಿ ಇದೊಂದು ಸಮೃದ್ಧಿಯಿಂದ ಕೂಡಿದ ಪ್ರದೇಶವಾಗಿದೆ. ಭಾರತದಲ್ಲಿ ನೈಜ ಸಸ್ಯವರ್ಗವಿರುವುದು ಇಲ್ಲಿಯೇ. ಇಂಡೋ ಮಲಯಾನ್‌ ಹಾಗೂ ಇಂಡೋ-ಚೀನಾ ಜೀವ ಭೌಗೋಳಿಕ ಪ್ರದೇಶಗಳ ನಡುವಿನ ಸ್ಥಿತ್ಯಂತರ ವಲಯ ಇದಾಗಿದೆ. ಹೀಗಾಗಿ ಇದನ್ನು ಜೀವ ಭೌಗೋಳಿಕ ಪ್ರದೇಶಗಳ ಹೆಬ್ಬಾಗಿಲು ಎನ್ನುವರು. ಆನೆ, ಘೇಂಡಾಮೃಗ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.

 9. ಕರಾವಳಿ ತೀರ ಪ್ರದೇಶ: (Coastal region)

ಇದು ಭಾರತದ ಪಶ್ಚಿಮ ಹಾಗೂ ಪೂರ್ವ ಕರಾವಳಿಯನ್ನು ಒಳಗೊಂಡಿದ್ದು ಭಾರತದ ಭೂ ಭಾಗದ ಶೇಕಡ 25ರಷ್ಟು ವಿಸ್ತಾರ ಹೊಂದಿದೆ. ಕರಾವಳಿ ಉದ್ದಕ್ಕೂ ಮ್ಯಾಂಗ್ರೋ ಕಾಡುಗಳು ಕಂಡುಬಂದಿವೆ. ಮರಳು ಬೀಚು ಸಾಮಾನ್ಯವಾಗಿ ಕಂಡುಬರುತ್ತದೆ. ಕರಾವಳಿಯ ಒಟ್ಟು ಉದ್ದ 6100 ಕಿಲೋಮೀಟರ್ಗಳು. ಸರ್ವೆಮರ, ಪಂಡಾಸನ್, ಸಮುದ್ರದ ಹುಲ್ಲು ಇಲ್ಲಿನ ಪ್ರಮುಖ ಸಸ್ಯ ವರ್ಗವಾಗಿದೆ.

10. ದ್ವೀಪ ಪ್ರದೇಶ: (The islands)

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ದೇಶದ ವಿಸ್ತೀರ್ಣದ ಶೇಕಡ 0.03% ರಷ್ಟು ಒಳಗೊಂಡಿದೆ. ಈ ದ್ವೀಪಗಳು ಹವಳದ ದಿಬ್ಬಗಳಿಂದ ಕೂಡಿದೆ. ಇಲ್ಲಿ ಸುಮಾರು 2200 ಪ್ರಭೇದದ ಸಸ್ಯ ಸಂಕುಲವಿದೆ. ಇವುಗಳಲ್ಲಿ 200 ದೇಶೀಯ ಪ್ರಭೇದಗಳಾಗಿವೆ. 255 ಪಕ್ಷಿ ಪ್ರಭೇದಗಳಿವೆ. ಇವುಗಳಲ್ಲಿ 112 ದೇಶಿಯ ಪ್ರಭೇದಗಳೆಂದು ಗುರುತಿಸಲಾಗಿದೆ.

ಜೀವ ಭೌಗೋಳಿಕ ವಲಯಗಳು

ವಲಯಗಳು ಶೇ%   ವಲಯಗಳು ಶೇ%
1. ಹೊರ ಹಿಮಾಲಯ 5.7 6. ದಕ್ಕನ್ ಪ್ರಸ್ಥಭೂಮಿ 42
2. ಹಿಮಾಲಯ ಗಳು 7.2 7. ಗಂಗಾ ಮೈದಾನ 11
3. ಮರುಭೂಮಿ ಪ್ರದೇಶ 6.7 8. ಈಶಾನ್ಯ ವಲಯ 5.2
4. ಅರೆ ಶುಷ್ಕವಲಯ 15.6 9. ಕರಾವಳಿ ತೀರ ಪ್ರದೇಶ 2.5
5. ಪಶ್ಚಿಮ ಘಟ್ಟಗಳು 5.8 10. ದ್ವೀಪ ಪ್ರದೇಶ 0.3

ಉಪಸಂಹಾರ

ಭಾರತದ ಜೈವಿಕ ಭೌಗೋಳಿಕ ವಲಯಗಳು ದೇಶದ ಪರಿಸರ ಸಮೃದ್ಧಿಯ ಪ್ರತೀಕಗಳಾಗಿವೆ. ಪ್ರತಿಯೊಂದು ವಲಯವೂ ವಿಶಿಷ್ಟವಾದ ಸಸ್ಯ ಹಾಗೂ ಪ್ರಾಣಿ ಜಗತ್ತನ್ನು ಹೊಂದಿದ್ದು, ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಮಹತ್ವದ ಪಾತ್ರ ವಹಿಸುತ್ತಿದೆ. ಈ ವಲಯಗಳ ಸಂರಕ್ಷಣೆ ಮುಂದಿನ ತಲೆಮಾರಿನ ಬದುಕಿಗೆ ಅತ್ಯಂತ ಅಗತ್ಯವಾಗಿದೆ. ಪರಿಸರ ಸಮತೋಲನವನ್ನು ಕಾಪಾಡಲು ಜೈವಿಕ ವಲಯಗಳ ಮಹತ್ವವನ್ನು ಅರಿತುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಜೀವ ವೈವಿಧ್ಯ ಮತ್ತು ರಕ್ಷಣೆ

ಜೀವ ವೈವಿಧ್ಯ ಮತ್ತು ರಕ್ಷಣೆ

ನಮ್ಮ ಸೌರ ಮಂಡಲದಲ್ಲಿ ಅತ್ಯಂತ ಸುಂದರವಾದ ಗ್ರಹವೆಂದರೆ ಅದು ಭೂಮಿ. ಬೇರೆ ಯಾವ ಗ್ರಹಗಳಲ್ಲಿಯೂ ಜೀವಿಗಳು ಕಂಡುಬರುವುದಿಲ್ಲ. ಈ ಭೂಮಿಯೊಂದು ವೈವಿಧ್ಯಗಳ ಅಗರ. ವಿಭಿನ್ನ ಚರಾಚರಗಳಿಂದ ಕೂಡಿದ ತೆರತೆರನಾದ ಆವಾಸ ಸ್ಥಾನಗಳನ್ನು ಹೊಂದಿದ ಒಂದು ಜೀವ ನಿಧಿ. ಇದೊಂದು ಚಿನ್ನದ ಕಣಜ, ನೀರಿನ ಚಿಲುಮೆ, ಇಂದ್ರನ ನಂದನವನ ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯೊಂದು ಸೌಂದರ್ಯದ ಗುಡಿಸಲು. ಭೂಮಿಯಲ್ಲಿ ಏನುಂಟು ಏನಿಲ್ಲ ಎಲ್ಲವೂ ಇದೆ. ಪರಿಸ್ಥಿತಿ ಕೈ ಮೀರಿದರೆ ಏನು ಇಲ್ಲದಂತಾಗುತ್ತದೆ. ಇಲ್ಲಿ ಹಿಮದಿಂದ ಕೂಡಿದ ಪ್ರದೇಶಗಳು, ಮರಳು ತುಂಬಿದ ಮರುಭೂಮಿಗಳು, ವಿಶಾಲವಾದ ಸಮುದ್ರ, ಸಾಗರಗಳು, ಕೊಲ್ಲಿಗಳು, ಖಾರಿಗಳು, ಅಂಕುಡೊಂಕಾದ ನದಿಗಳು, ಕಣಿವೆಗಳು, ಬೆಟ್ಟಗುಡ್ಡಗಳು, ಲಕ್ಷಾಂತರ ಪ್ರಭೇದದ ಸಸ್ಯಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳು ಇವೆ. ಒಂದು ಕಡೆ ವಿಶಾಲವಾದ ಬಯಲು ಪ್ರದೇಶ, ಇನ್ನೊಂದೆಡೆ ತಗ್ಗು ಪ್ರದೇಶಗಳು, ಮತ್ತೊಂದು ಕಡೆ ಎತ್ತರವಾದ ಪರ್ವತಗಳು ಮತ್ತೊಂದು ಕಡೆ ಸಿಹಿ ನೀರು ಹಾಗೆಯೇ ಉಪ್ಪು ನೀರು ಸರೋವರಗಳು, ಹೀಗೆಯೇ ಕೋಟಿ ಕೋಟಿ ಬಗೆಯ ಜೀವವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲವುಗಳಿಗೆ ಮೆರಗು ತಂದಿರುವುದು ಇಲ್ಲಿನ ಜನಸಂಖ್ಯೆ. ಕೋಟ್ಯಾಂತರ ಜೀವಿಗಳಿಂದ ತುಂಬಿ ತುಳುಕುತ್ತಿರುವ ಒಂದೇ ಒಂದು ಗ್ರಹವೆಂದರೆ ಅದು ಭೂಮಿ ಮಾತ್ರ. ಈ ಜೀವಿಗಳಿಂದಲೇ ಭೂಮಿಗೆ ಒಂದು ಅರ್ಥ ಬಂದಿದೆ. ಭೂಮಿಗೆ ಚೆಂದ ಹಾಗೂ ಅಂದದ ಸ್ಥಾನ ಮಾನ ಸಿಕ್ಕಿದೆ. ಈ ಭೂಮಿಯ ಮೇಲೆ ವಾಸಿಸುವ ಜೀವಿಗಳು ಒಂದು ಮತ್ತೊಂದರಂತೆ ಇಲ್ಲ. ಹಲವಾರು ಬಗೆಯ ವಿವಿಧತೆಗಳು ಕಂಡುಬರುತ್ತವೆ. ಹೀಗೆ ವಿವಿಧತೆಯಿಂದ ಕೂಡಿದ ಜೀವಿಗಳನ್ನು ಜೀವ ವೈವಿಧ್ಯ ಎಂದು ಕರೆಯುತ್ತೇವೆ. ಈ ಭೂಮಿ ಹುಟ್ಟಿ ಬಂದ ನಂತರ ವಿವಿಧ ಜಾತಿ ವರ್ಗಗಳ ಜೀವಿಗಳು ಭೂಮಿಯ ಮೇಲೆ ವಾಸಿಸಲು ಆರಂಭಿಸಿದವು. ಈ ಜೀವಿಗಳ ತೂಕ, ಆಕಾರ, ದಪ್ಪ, ಎತ್ತರ ಮೊದಲಾದವುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಬರಿ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿಂದ ಹಿಡಿದು ಬೃಹತ್ ಗಾತ್ರದ ಆನೆಗಳವರೆಗೆ, ಸಾಗರದಲ್ಲಿ ಈಜುವ ಚಿಕ್ಕ ಚಿಕ್ಕ ಮೀನುಗಳಿಂದ ಹಿಡಿದು ಸುಮಾರು 90 ಅಡಿ ಉದ್ದವಿರುವ ದೊಡ್ಡ ದೊಡ್ಡ ತಿಮಿಂಗಿಲಗಳವರೆಗೆ ಜೀವ ವೈವಿಧ್ಯ ಹರಡಿದೆ ಎಂದರೆ ಆಶ್ಚರ್ಯವಾಗದೆ ಇರದು. ಸಮುದ್ರದಲ್ಲಿ ಕಂಡು ಬರುವ ಚಿಕ್ಕ ಪಾಚಿಗಳಿಂದ ಹಿಡಿದು ಸುಮಾರು 300 ಅಡಿ ಎತ್ತರದವರೆಗೆ ಬೆಳೆಯುವ ದೊಡ್ಡ ದೊಡ್ಡ ಮರಗಳನ್ನು ಈ ಭೂಮಿ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅನೇಕ ಜಾತಿಯ ಸಸ್ಯಗಳು, ಸಸ್ಯಹಾರಿ, ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳು ವಾಸಿಸುತ್ತಿವೆ. ಇವುಗಳು ಪರಿಸರವನ್ನು ತಕ್ಕಮಟ್ಟಿಗೆ ಸಮತೂಕದಲ್ಲಿ ಇಡುತ್ತವೆ.

1992ರಲ್ಲಿ  ರಿಯೋಡಿ ಜನೈರೋದಲ್ಲಿ ನಡೆದ ಸಮ್ಮೇಳನದಲ್ಲಿ ಜೀವ ವೈವಿಧ್ಯತೆ ಕುರಿತು ಅರ್ಥ ಸಮೀಟ್‌ನಲ್ಲಿ ಈ ರೀತಿ ವಿವರಿಸಲಾಗಿದೆ. ಒಂದು ಭೂಭಾಗ ಸಾಗರ ಅಥವಾ ಇತರ ಭಾಗದಲ್ಲಿರುವ ಎಲ್ಲ ಜೀವಿ ಪರಿಸರ ವ್ಯವಸ್ಥೆಗಳ ಎಲ್ಲಾ ಜೀವಿಗಳನ್ನು ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಜೀವ ವೈವಿಧ್ಯತೆ ಎಂದು ಕರೆಯಲಾಗಿದೆ. ಥಾಮಸ್ ಜಾಯ್ ಪ್ರಥಮ ಬಾರಿಗೆ ಬಯಾಲಜಿಕ್ ಡೈವರ್ಸಿಟಿ ಎಂಬ ಪದವನ್ನು 1980ರಲ್ಲಿ ಬಳಸಿದನು. ಮುಂದುವರೆದು ಹಾರ್ವರ್ಡ್ ವಿಶ್ವವಿದ್ಯಾಲಯದ ಡಬ್ಲ್ಯೂ ಡಿ ರೋಜನ್ 1985ರಲ್ಲಿ ಈ ಪದವನ್ನು ಬಳಸಿದನು. ಎಡ್ವರ್ಡ್ ವಿಲ್ಸನ್ ಈ ಪದವನ್ನು ಜನಪ್ರಿಯಗೊಳಿಸಿದನು.

  1. ವಿಶ್ವಸಂಪನ್ಮೂಲಗಳ ಸಂಸ್ಥೆಯ ಪ್ರಕಾರ ಪ್ರಪಂಚದ ಜೀವಿ ತಳಿಗಳ ವಿವಿಧತೆ ಹಾಗೂ ಅವುಗಳು ರೂಪಿಸಿಕೊಂಡಿರುವ ವಿವಿಧ ಸಮುಚ್ಚಯಗಳಿಗೆ ಜೀವವೈವಿಧ್ಯತೆ ಎಂದು ಕರೆಯಲಾಗಿದೆ.
  2. ರಾಬರ್ಟ್‌ ಮಾಲ್ತೂಸ್‌ ಪ್ರಕಾರ ಜೀವಿಗಳ ಜನನ ಸ್ವಾಭಾವಿಕವಾದರೂ ಬೆಳವಣಿಗೆಗೆ ನಡೆದ ಸ್ಪರ್ಧೆಯನ್ನು ವಿಶಾಲವಾಗಿ ಗ್ರಹಿಸಬೇಕು ಎಂದಿದ್ದಾರೆ.
  3. ಚಾರ್ಲ್ಸ್ ಡಾರ್ವಿನ್ ಜೀವ ಜಾತಿಗಳ ಉಗಮ ಬಹಳ ನಿಗೂಢವಾದದ್ದು ಪ್ರಕೃತಿ ಸಹಜವಾದ ಪ್ರಾಣಿಗಳಲ್ಲಿ ಸಸ್ಯಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಬೇರೆ ಬೇರೆ ಬುಡಕಟ್ಟುಗಳಾಗಿ ಹೇಗೆ ವಿಂಗಡನೆಯಾಗುವವೋ ಅದೇ ರೀತಿ ಅತಿ ದೀರ್ಘಾವಧಿಯವರೆಗೆ ಹೊಸ ಹೊಸ ಜಾತಿಗಳು, ವರ್ಗಗಳು ಬೇರ್ಪಡುತ್ತಾ ಬಂದಿದೆ ಎಂದಿದ್ದಾರೆ.
  4. ಆಲ್ಫ್ರೆಡ್ ರಸೆಲ್ ವಾಲೆಸ್ ಜೀವ ವಿಕಾಸ ವೈವಿಧ್ಯಮಯವಾದದ್ದು. ವಿಸ್ಮಯವಾದುದು ವಿಕಾಸ ಹಂತಗಳು ಈ ಭೂಮಿಯ ಮೇಲೆ ಬಹು ರೋಚಕ ರೋಮಾಂಚಕ ಎಂದಿದ್ದಾರೆ.

ಭೂಮಿಯ ಮೇಲೆ ಕಂಡು ಬರಬಹುದಾದ ಜೀವ ವೈವಿಧ್ಯತೆಯಲ್ಲಿ ಬಿಲಿಯನ್‌ಗಟ್ಟಲೆ ವಿವಿಧ ಬಗೆಯ ಜೀವ ಪ್ರಭೇದಗಳಿವೆ. ಈ ಜೀವ ಪ್ರಭೇದಗಳು ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ವಿಕಾಸ ಹೊಂದುತ್ತಾ ಬಂದಿವೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜೀವಿಗಳ ಸಂಖ್ಯೆಯು ಸುಮಾರು ಏಳು ಬಿಲಿಯನ್ ಅಷ್ಟು ಇರಬಹುದಾಗಿದೆ. ಭೂಮಿಯ ಮೇಲಿನ ಒಟ್ಟು ಜೀವಿಗಳಲ್ಲಿ ಶೇಕಡ 70ರಷ್ಟು ಪ್ರಾಣಿಗಳಿವೆ. ಸಸ್ಯಗಳು 22% ರಷ್ಟು ಇವೆ. ಪ್ರಾಣಿ ಪ್ರಪಂಚದಲ್ಲಿ ಕೀಟಗಳೇ ಅತಿ ಹೆಚ್ಚಾಗಿವೆ. ಭಾರತ ಪ್ರಪಂಚದ 2.4 ರಷ್ಟು ಭೂಭಾಗವನ್ನು ಮಾತ್ರ ಹೊಂದಿದ್ದರೂ 7% ಪ್ರಭೇದಗಳನ್ನು, 17.5% ಜನಸಂಖ್ಯೆಯನ್ನು ಹಾಗೂ 92,000( 7.5%) ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಒಂದು ಅಂದಾಜಿನಂತೆ ಜೀವ ಪ್ರಭೇದಗಳ ಲೆಕ್ಕಾಚಾರ ಈ ಕೆಳಗಿನಂತಿವೆ.

ಕಸೇರುಕ ಪ್ರಾಣಿಗಳು ಆಕಸೇರುಕ ಪ್ರಾಣಿಗಳು ಸಸ್ಯಗಳು
1. ಸಸ್ತನಿಗಳು- 4170 ಕೀಟಗಳು-1000000  ಹೂ ಬಿಡುವ ಸಸ್ಯಗಳು- 250000
2.  ಪಕ್ಷಿಗಳು-  9020  ಸಂಧಿಪದಿಗಳು- 200000  ಹೂ ಬಿಡದ ಸಸ್ಯಗಳು- 130000
3. ಸರಿಸೃಪಗಳು- 5085  ಇತರೆ ಅಕಸೇರುಕಗಳು-200000  
4.  ಉಭಯವಾಸಿಗಳು- 3300 ಆಕಸೇರುಕ ಪ್ರಾಣಿಗಳು:  
5.  ಮೀನುಗಳು- 4100    

ಭೂಮಿಯ ಮೇಲೆ ಇಷ್ಟೆಲ್ಲಾ ಸಸ್ಯ, ಪ್ರಾಣಿ, ಪಕ್ಷಿ ಪ್ರಭೇದಗಳಿದ್ದರೂ ಅವೆಷ್ಟೋ ಇನ್ನೂ ಕಣ್ಣಿಗೆ ಕಾಣದಷ್ಟು ಪ್ರಭೇದಗಳು ಉಳಿದುಕೊಂಡಿವೆ. ಈ ಜೀವಿಗಳ ವಾಸಸ್ಥಾನಗಳು ಕಲ್ಪನೆಗೆ ಮೀರಿದ್ದಾಗಿವೆ. ಈ ಜೀವಿಗಳ ವಾಸ ಇಂದು ನಿನ್ನೆಯದಲ್ಲ. ಅದು ಕೋಟಿ ಕೋಟಿ ವರ್ಷಗಳ ನಿರಂತರವಾದ ಕ್ರಿಯೆಯಿಂದ ಆಗಿದ್ದಾಗಿದೆ. ಇಂತಹ ಜಟಿಲವಾದ ಪರಿಸರದಲ್ಲಿ ಕೆಲವು ಪ್ರಾಣಿ, ಪಕ್ಷಿಗಳು ತಮ್ಮ ಕೊಂಡಿಯನ್ನು ಕಳಚಿಕೊಂಡರೆ ಪರಿಸರದಲ್ಲಿ ತಕ್ಷಣವೇ ಅಸಮತೋಲನ ಕಂಡುಬರುತ್ತದೆ. ಮುಖ್ಯವಾಗಿ ಮಾನವನ ದುರಾಸೆಯಿಂದ ಪರಿಸರ ದಿನೇ ದಿನೇ ಅವನತಿಗೊಳ್ಳುತ್ತಿದ್ದು ಅದರೊಂದಿಗೆ ಜೀವಿಗಳು ಕಣ್ಮರೆಯಾಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಹಾಗೂ ಬ್ರೆಜಿಲ್ ಗಳಲ್ಲಿ ಮರಗಳನ್ನು ಕಡಿದು ಕದ್ದು ಮಾರುತ್ತಿರುವ ಜಾಲವೊಂದು ಪತ್ತೆಯಾಗಿದೆ.

ಇನ್ನು ಭಾರತದಲ್ಲಿ ಜಿಂಕೆ, ಹುಲಿ, ಚಿರತೆ, ಸಿಂಹ, ಆನೆ, ಕಾಡುಕೋಣ, ಕಾಡೆಮ್ಮೆ ಮುಂತಾದವುಗಳನ್ನು ಕೊಂದು ಅವುಗಳ ಚರ್ಮ, ದಂತ, ಮಾಂಸ, ಕೊಂಬುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇವುಗಳಿಗೆ ತಡೆಯೊಡದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಾಣಿಗಳನ್ನು ಚಿತ್ರಪಟಗಳಲ್ಲಿ ಕಾಣುವ ಸನ್ನಿವೇಶ ದೂರ ಉಳಿದಿಲ್ಲ ಎಂದು ಹೇಳಬಹುದು. ಇಂತಹ ಪರಿಸ್ಥಿತಿಯ ನಡುವೆ ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡಿ ತಮ್ಮ ಸಂತತಿಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಜೀವಿಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವಿಫಲಗೊಂಡು ಸಾಯುತ್ತಿವೆ. ಹೊಂದಾಣಿಕೆಯ ಅಥವಾ ಬಲಿಷ್ಠ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಯಶಸ್ವಿ ಆದರೆ ಹೊಂದಿಕೊಳ್ಳದ ಅಥವಾ ದುರ್ಬಲಗೊಂಡ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಅಸಮರ್ಥಗೊಳ್ಳುತ್ತವೆ. ಹೀಗಾಗಿ ಪರಿಸರದಲ್ಲಿ ಏರುಪೇರು ಕಂಡುಬರುತ್ತದೆ.

ಉಪಸಂಹಾರ

ಜೀವ ವೈವಿಧ್ಯವು ಭೂಮಿಯ ಜೀವಂತಿಕೆಯ ಮೂಲವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾನವನ ಅಜಾಗರೂಕತೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದ ಅನೇಕ ಜೀವ ಪ್ರಭೇದಗಳು ನಾಶದ ಅಂಚಿಗೆ ತಲುಪಿವೆ. ಪರಿಸರದ ಸಮತೋಲನ ಕಾಪಾಡಲು ಸಸ್ಯ, ಪ್ರಾಣಿ ಮತ್ತು ಅವುಗಳ ವಾಸಸ್ಥಾನಗಳನ್ನು ರಕ್ಷಿಸುವುದು ಅತ್ಯಂತ ಅಗತ್ಯ. ಜೀವ ವೈವಿಧ್ಯ ಉಳಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರವಾದ ಭೂಮಿಯನ್ನು ನೀಡಲು ಸಾಧ್ಯ. ಆದ್ದರಿಂದ ಸಂರಕ್ಷಣೆಯತ್ತ ಜಾಗೃತಿಯಿಂದ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ

ಶಕ್ತಿ ಸಂಪನ್ಮೂಲಗಳ ವರ್ಗೀಕರಣ

ಶಕ್ತಿ ಸಂಪನ್ಮೂಲಗಳ ವರ್ಗೀಕರಣ

ಒಂದು ಕಾರ್ಯವನ್ನು ನಿರ್ವಹಿಸಲು ಬಳಸುವ ಸಾಮರ್ಥ್ಯವನ್ನು ಶಕ್ತಿ ಎಂದು ಕರೆಯಬಹುದು. ಅಥವಾ ಶಕ್ತಿಯನ್ನು ಉತ್ಪಾದಿಸಲು ಬಳಸುವ ನೈಸರ್ಗಿಕ ಮೂಲವನ್ನು ಶಕ್ತಿ ಸಂಪನ್ಮೂಲಗಳು ಎಂದು ಹೆಸರು. ಮಾನವನು ನಿರ್ವಹಿಸುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶಕ್ತಿಯು ಪ್ರಧಾನವಾದ ಪಾತ್ರ ವಹಿಸುತ್ತದೆ. ಈ ಶಕ್ತಿಯು ಹಲವು ಮೂಲಗಳಿಂದ ದೊರೆಯುತ್ತದೆ. ಅವುಗಳನ್ನೇ ಶಕ್ತಿ ಸಂಪನ್ಮೂಲಗಳು ಎಂದು ಕರೆಯಬಹುದು. ಕಲ್ಲಿದ್ದಲು, ನೀರು, ಗಾಳಿ, ಖನಿಜ, ತೈಲ, ಜೈವಿಕ ಅನಿಲ, ವಿದ್ಯುತ್ ಶಕ್ತಿ, ಸೌರ ಶಕ್ತಿ ಹಾಗೂ ಪವನ ಶಕ್ತಿ ಮುಂತಾದವುಗಳು ಪ್ರಮುಖ ಶಕ್ತಿ ಸಂಪನ್ಮೂಲಗಳಾಗಿವೆ. ಒಂದು ದೇಶದ ಪ್ರಗತಿ ನಿಂತಿರುವುದು ಆ ದೇಶದ ಶಕ್ತಿ ಸಂಪನ್ಮೂಲಗಳನ್ನು ಅವಲಂಬಿಸಿದೆ. ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಶಕ್ತಿಯ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.

ಶಕ್ತಿ ಸಂಪನ್ಮೂಲಗಳ ವರ್ಗೀಕರಣ: (Classification of energy resources)

ಶಕ್ತಿ ಸಂಪನ್ಮೂಲಗಳನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.

  1. ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು
  2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು

1. ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು:(Renewable energy resources)

ʻʻಕೆಲವು ಸಂಪನ್ಮೂಲಗಳನ್ನು ಬಳಕೆ ಮಾಡಿದಂತೆಲ್ಲ ನವೀಕರಣ ಹೊಂದುತ್ತವೆ. ಹೀಗಾಗಿ ಇವುಗಳನ್ನು ಮುಗಿದು ಹೋಗದ ಸಂಪನ್ಮೂಲಗಳು ಎಂದು ಕರೆಯುತ್ತಾರೆ.ʼʼ ಈ ಸಂಪನ್ಮೂಲಗಳು ನಿಸರ್ಗದಲ್ಲಿ ಅವ್ಯಾಹತವಾಗಿ ದೊರಕುವುದರಿಂದ ಅವುಗಳನ್ನು ನಿರಂತರವಾಗಿ ಬಳಸಿಕೊಳ್ಳಬಹುದಾಗಿದೆ.

ಉದಾ: ಸೌರಶಕ್ತಿ, ಗಾಳಿ ಶಕ್ತಿ, ಜಲ ವಿದ್ಯುತ್, ಜೈವಿಕ ಅನಿಲ, ಅಣು ಶಕ್ತಿ, ಸಮುದ್ರದ ಅಲೆಗಳು ಮುಂತಾದವುಗಳು ಮುಗಿದು ಹೋಗದಿರುವ ಸಂಪನ್ಮೂಲಗಳಾಗಿವೆ.

2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು: (Non renewable resources)

ಯಾವ ಶಕ್ತಿ ಸಂಪನ್ಮೂಲಗಳನ್ನು ಪುನರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲವೋ ಅವುಗಳನ್ನು ನವೀಕರಿಸಲಾಗದ ಅಥವಾ ಮುಗಿದುಹೋಗುವ ಶಕ್ತಿ ಸಂಪನ್ಮೂಲಗಳು ಎಂದು ಕರೆಯುತ್ತಾರೆ. ಉದಾ: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮೊದಲಾದವುಗಳು.

ನೀರಿನ ಮೇಲಿನ ಸಂಘರ್ಷಗಳು (ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ)

ನೀರಿನ ಮೇಲಿನ ಸಂಘರ್ಷಗಳು (ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ)

ನೀರು ಅತ್ಯಂತ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದನ್ನು ಮಾನವ ಸೃಷ್ಟಿಸಲಾರ. ನೀರು ಯಾವಾಗಲೂ ಎತ್ತರವಾದ ಪ್ರದೇಶದಿಂದ ತಗ್ಗು ಪ್ರದೇಶದ ಕಡೆಗೆ ಹರಿಯುತ್ತದೆ. ನೀರು ನದಿಯನ್ನು ಸೇರಿ ಆನಂತರ ಸಾಗರದಲ್ಲಿ ಲೀನವಾಗುತ್ತದೆ. ನದಿಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಿಯುತ್ತವೆ. ಪ್ರಪಂಚದಲ್ಲಿ ಹರಿಯುವ ನದಿಗಳನ್ನು ಅಂತರಾಷ್ಟ್ರೀಯ ನದಿಗಳೆಂದು, ರಾಜ್ಯದಲ್ಲಿ ಹರಿವ ನದಿಗಳನ್ನು ಅಂತರ ರಾಜ್ಯ ನದಿಗಳೆಂದು ಕರೆಯುತ್ತಾರೆ. ಜನಸಂಖ್ಯೆಯು ತೀವ್ರವಾಗಿ ಏರಿಕೆ ಕಾಣುತ್ತಿರುವ ಇತ್ತೀಚಿನ ವರ್ಷಗಳಲ್ಲಿ ನೀರಿನ ಬಳಕೆಯು ಹೆಚ್ಚುತ್ತಿದೆ. ಹೀಗಾಗಿ ನೀರಿಗಾಗಿ ರಾಜ್ಯಗಳ ನಡುವೆ ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಸಂಘರ್ಷ ಉಂಟಾಗುತ್ತದೆ. ಸಾಮಾನ್ಯವಾಗಿ ನದಿ ಹರಿವಿನ ಮೇಲ್ಭಾಗದಲ್ಲಿರುವ ದೇಶ ಅಥವಾ ರಾಜ್ಯಗಳು ಮಿತಿ ಮೀರಿ ನೀರನ್ನು ಬಳಸಿದರೆ ಕೆಳಭಾಗದಲ್ಲಿ ವಾಸಿಸುವ ರಾಷ್ಟ್ರ ಅಥವಾ ರಾಜ್ಯಗಳು ನೀರಿನ ಅಭಾವದಿಂದ ತತ್ತರಿಸಿದಾಗ ಜಲ ವಿವಾದ ಆರಂಭವಾಗುತ್ತದೆ.

1. ಅಂತರಾಷ್ಟ್ರೀಯ ಜಲವಿವಾದಗಳು: (International water disput)

 ಜಗತ್ತಿನ ಸುಮಾರು 100 ದೇಶಗಳು 13 ನದಿ ಮತ್ತು ಸರೋವರಗಳ ನೀರನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ಕಾರಣದಿಂದ ಅಂತರಾಷ್ಟ್ರೀಯ ಜಲವಿವಾದ ಹುಟ್ಟಿಕೊಂಡಿದೆ.

  1. ಇಥಿಯೋಪಿಯಾ ಮತ್ತು ಈಜಿಪ್ಟ್ ನಡುವೆ ನೈಲ್ ನದಿಯ ನೀರಿಗಾಗಿ ವಿವಾದ ಉಂಟಾಗಿದೆ.
  2. ಗಂಗಾ ನದಿಯ ನೀರಿನ ಹಂಚಿಕೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಜಲ ವಿವಾದ ಉಂಟಾಗಿದೆ.
  3. ಸಿಂಧೂ ನದಿಯ ನೀರಿನ ಹಂಚಿಕೆಯ ವಿಷಯದಲ್ಲಿ ಭಾರತ ಪಾಕಿಸ್ತಾನಗಳ ನಡುವಿನ ಜಲ ವಿವಾದ.
  4. ಟೈಗ್ರಿಸ್ ನದಿಗಳ ನೀರಿನ ಹಂಚಿಕೆಯ ವಿಷಯದಲ್ಲಿ ಇಸ್ರೇಲ್, ಸಿರಿಯ ಹಾಗೂ ಜೋರ್ಡಾನ್‌ಗಳ ನಡುವೆ ಜಲ ವಿವಾದ ನಡೆದಿದೆ.
  5. ಇದೇ ನದಿಗಳ ನೀರಿನ ಸಲುವಾಗಿ ಇರಾಕ್‌, ಸಿರಿಯಾ ಮತ್ತು ಟರ್ಕಿಗಳ ನಡುವೆ ವಿವಾದ ಇದೆ.
  6. ಸುಯೇಜ್‌ ಕಾಲುವೆಯ ವಿವಾದ ಪ್ರಮುಖ ಅಂತರಾಷ್ಟ್ರೀಯ ವಿವಾದವಾಗಿದೆ.

2. ಅಂತರ ರಾಜ್ಯ ನದಿ ನೀರಿನ ವಿವಾದ: (Inter state water dispute)

  1. ಗೋದಾವರಿ ನದಿ ನೀರಿನ ವಿಷಯವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳ ನಡುವೆ ವಿವಾದಗಳು ಇವೆ.
  2. ಕುಡಿಯುವ ನೀರು, ಜಲ ವಿದ್ಯುತ್ ತಯಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಕೃಷ್ಣಾ ನದಿ ಜಲವಿವಾದ ಉಂಟಾಯಿತು.  ಇದು ಇಂದಿಗೂ ಬಗೆ ಹರಿದಿಲ್ಲ.
  3. ನರ್ಮದಾ ನದಿ ನೀರಿನ ಹಂಚಿಕೆಯ ವಿಷಯವಾಗಿ ರಾಜಸ್ಥಾನ್, ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಜಲ ವಿವಾದ ಹುಟ್ಟಿಕೊಂಡಿತು.
  4. ರಾವಿ ಮತ್ತು ಬಿಯಾಸ್ ನದಿ ವಿವಾದ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳ ನಡುವೆ ನಡೆಯಿತು.
  5. ಕಾವೇರಿ ನದಿ ನೀರಿನ ಹಂಚಿಕೆಯ ವಿವಾದವು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಗಳ ನಡುವೆ ನಡೆದಿದೆ.
  6. ಆಂಧ್ರಪ್ರದೇಶ ಹಾಗೂ ಒರಿಸ್ಸಾಗಳ ನಡುವಿನ ವನ್ಸಾಧರ ನೀರಿನ ವಿವಾದ. ಇಂದಿಗೂ ಬಗೆಹರಿದಿಲ್ಲ.
  7. ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹಾದಾಯಿ ನದಿ ನೀರಿನ ಹಂಚಿಕೆಯ ವಿವಾದ ಉಂಟಾಗಿದೆ.

ಉಪಸಂಹಾರ

ನೀರಿನ ಮೇಲಿನ ಸಂಘರ್ಷಗಳು ಮಾನವ ನಿರ್ಮಿತ ಸಮಸ್ಯೆಗಳಾಗಿದ್ದು, ಪರಸ್ಪರ ಸಹಕಾರ ಮತ್ತು ಸಮನ್ವಯದಿಂದ ಅವುಗಳನ್ನು ಪರಿಹರಿಸಬಹುದು. ನದಿನೀರಿನ ನ್ಯಾಯಸಮ್ಮತ ಹಂಚಿಕೆ, ವೈಜ್ಞಾನಿಕ ನಿರ್ವಹಣೆ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳು ಜಲವಿವಾದಗಳನ್ನು ತಗ್ಗಿಸಲು ಅಗತ್ಯವಾಗಿವೆ. ನೀರನ್ನು ರಾಜಕೀಯ ಲಾಭಕ್ಕಾಗಿ ಬಳಸದೇ, ಮಾನವೀಯ ದೃಷ್ಟಿಕೋನದಿಂದ ನೋಡಬೇಕಾಗಿದೆ. ಭವಿಷ್ಯದ ಪೀಳಿಗೆಗಾಗಿ ನೀರಿನ ಸಂರಕ್ಷಣೆ ಮತ್ತು ಸಮನ್ಯಾಯ ಬಳಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಅರಣ್ಯ ನಾಶದ ಪರಿಣಾಮಗಳು

ಅರಣ್ಯ ನಾಶದ ಪರಿಣಾಮಗಳು

ʻʻಕಾಡುಗಳನ್ನು ಬರಿದು ಮಾಡುವ ಪ್ರಕ್ರಿಯೆಯನ್ನು ಅರಣ್ಯ ನಾಶ ಎಂದು ಕರೆಯಲಾಗಿದೆ.ʼʼ ಇಂದು ನಿಸರ್ಗದ ಮೇಲಿನ ಮಾನವನ ದಾಳಿಯಿಂದ ಅರಣ್ಯಗಳು ಬರಿದಾಗುತ್ತ ಹೊರಟಿವೆ. ಕಳೆದ 30 ವರ್ಷಗಳ ಅವಧಿಯಲ್ಲಿ 500 ದಶಲಕ್ಷ ಎಕರೆಗೂ ಅಧಿಕ ಪ್ರಮಾಣದ ಕಾಡು ನಾಶವಾಗಿದೆ ಎಂದರೆ ಊಹೆ ಮಾಡಿಕೊಳ್ಳಿ ಮನುಷ್ಯ ಎಷ್ಟು ದುರಾಸೆಗೆ ಬಿದ್ದಿದ್ದಾನೆ ಎಂದು. ವಸತಿಗಾಗಿ, ಇಂಧನವಾಗಿ, ನೀರಾವರಿ ಹಾಗೂ ಅಣೆಕಟ್ಟುಗಳ ನಿರ್ಮಾಣಕ್ಕಾಗಿ ನಿತ್ಯವೂ ಕಾಡುಗಳು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಾ ಬರುತ್ತಿವೆ. ಕಾಡುಗಳು ಬರಿದಾದ ನಂತರ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಲಕ್ಷಾಂತರ ಕಾಡು ಪ್ರಾಣಿಗಳು ಕಣ್ಮರೆಯಾಗಿವೆ.

ಅರಣ್ಯ ನಾಶದ ಪರಿಣಾಮಗಳು ಈ ಕೆಳಗಿನಂತಿವೆ

1. ಮಳೆಯ ಪ್ರಮಾಣದಲ್ಲಿ ಇಳಿಕೆ:

ದಿನೇ ದಿನೇ ಕಾಡುಗಳು ನಾಶವಾಗುತ್ತಿರುವ ಪರಿಣಾಮದಿಂದಾಗಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಏರುಪೇರುಗಳು ಆಗುತ್ತಿವೆ. ಒಮ್ಮೆ ಮಳೆ ಅತಿಯಾಗಿ ಬಂದರೆ, ಇನ್ನೊಮ್ಮೆ ಕಡಿಮೆಯಾಗಿ ಬರುತ್ತದೆ. ಈಗಂತೂ ಮಳೆಗಾಲವು ಯಾವಾಗ ಬರುತ್ತದೆ ಎಂಬುದೇ ಗೊತ್ತಾಗದ ರೀತಿಯಲ್ಲಿ ಕಾಲಮಾನಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಅತಿಯಾದ ಮಳೆ ಬಂದರೆ ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ. ಮಳೆ ಬರದೆ ಬರಗಾಲ ಬಿದ್ದರೆ ಭೂಮಿಯು ಬರಡಾಗಿ ಬೆಳೆಗಳೆಲ್ಲ ಒಣಗಿ ಹೋಗುತ್ತವೆ.

2. ಜೀವಿಗಳ ಆವಾಸಸ್ಥಾನ ಕೊನೆಯಾಗುವುದು:

ಅರಣ್ಯವು ವಿವಿಧ ಪಕ್ಷಿಸಂಕುಲ ಹಾಗೂ ಪ್ರಾಣಿ ಸಂಕುಲಗಳಿಗೆ ಆವಾಸಸ್ಥಾನವಾಗಿದೆ. ಕಾಡು ದಿನೇ ದಿನೇ ಕಡಿಮೆಯಾಗುವ ಕಾರಣಕ್ಕಾಗಿ ಎಣಿಕೆಗೆ ಸಿಗದಷ್ಟು ಜೀವಸಂಕುಲಗಳು ಕಣ್ಮರೆಯಾಗುತ್ತವೆ. ಈಗಾಗಲೇ ಲಕ್ಷಾಂತರ ಪ್ರಾಣಿ, ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.

3. ಜೈವಿಕ ವೈವಿಧ್ಯತೆಗಳ ನಾಶ:

ಅರಣ್ಯಗಳ ನಾಶದೊಂದಿಗೆ ಪಶು ಪಕ್ಷಿಗಳು ಸಹ ವಿನಾಶದತ್ತ ಸಾಗಿವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

4. ಸೂರ್ಯನ ಪ್ರಕರತೆ:

ಸೂರ್ಯನ ವಿಪರೀತ ಶಾಖದಿಂದ ಭೂಮಿಯ ಮೇಲಿನ ಮಣ್ಣಿನ ತೇವಾಂಶ ಆವಿಯಾಗುತ್ತದೆ. ಇದರಿಂದ ಮಣ್ಣು ಬಿರುಕು ಬಿಡುತ್ತದೆ. ಹಾಗಾಗಿ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತವೆ. ಮರ ಗಿಡಗಳು ಉದುರಿ ಬೀಳುತ್ತವೆ.

5. ಮಣ್ಣಿನ ಸವೆತ:

ಅರಣ್ಯನಾಶದಿಂದ ನಿರಂತರವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಕಾಲ ಕಳೆದಂತೆ ಭೂಮಿಯ ಅವನತಿಯು ಉಂಟಾಗಿ ಮರುಭೂಮೀಕರಣಕ್ಕೆ ಕಾರಣವಾಗುತ್ತದೆ.

6. ಔಷಧಿ ಸಸ್ಯಗಳ ನಾಶ:

ಅರಣ್ಯವು ತನ್ನ ಒಡಲಿನಲ್ಲಿ ಲಕ್ಷಾಂತರ ವಿವಿಧ ಗಿಡಮೂಲಿಕೆ ಔಷಧಿ ಸಸ್ಯಗಳನ್ನು ಹುದುಗಿಸಿಕೊಂಡಿದೆ. ಕಾಡಿನ ನಾಶದಿಂದಾಗಿ ಅಮೂಲ್ಯವಾದ ಗಿಡ ಮೂಲಿಕೆಗಳು ನಮಗೆ ಮುಂದೆ ಸಿಗದೇ ಹೋಗಬಹುದು.

7. ಬುಡಕಟ್ಟು ಜನಾಂಗದ ಜೀವನ ನಾಶ:

ಪ್ರಸ್ತುತ ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿರುವ ಬುಡಕಟ್ಟು ಜನಾಂಗ ಅರಣ್ಯ ನಾಶದಿಂದಾಗಿ ಬೀದಿಗೆ ಬರುವ ಸ್ಥಿತಿ ಬಂದಿದೆ. ಅವರ ಬದುಕು ಇಂದು ಅತಂತ್ರವಾಗಿದೆ.

8. ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ:

ಅರಣ್ಯ ನಾಶದಿಂದಾಗಿ ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗಿ ಅವುಗಳನ್ನು ನಿಯಂತ್ರಣಕ್ಕೆ ತರಲು ಆಗದ ಸ್ಥಿತಿಗೆ ಬಂದು ತಲುಪಿದೆ. ಇಂದು ವಾತಾವರಣದಲ್ಲಿ ಧೂಳಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

9. ಹವಾಮಾನದ ಮೇಲೆ ಪರಿಣಾಮ:

ಅರಣ್ಯ ನಾಶದಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕದ ಆವರ್ತಕ್ರಿಯೆ ಸಾರಾಗವಾಗಿ ಮುಂದುವರೆಯದೆ ವಾತಾವರಣದಲ್ಲಿ ಅಸಮತೋಲನ ಉಂಟಾಗಿದೆ. ಭೂಮಂಡಲದ ತಾಪಮಾನ ಹೆಚ್ಚಾಗಿದೆ. ಹವಾಗುಣ ಮತ್ತು ವಾಯುಗುಣದಲ್ಲಿ  ಬದಲಾವಣೆ ಕಂಡುಬಂದಿದೆ. ಅತಿಯಾದ ಶಾಖದಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಆಮ್ಲಜನಕದ ಕೊರತೆಯಿಂದ ಈಗಾಗಲೇ ದೆಹಲಿಯ ಜನರು ಹಣ ಪಾವತಿಸಿ ಆಮ್ಲಜನಕವನ್ನು ಮೂಗಿಗೆ ಕಟ್ಟಿಕೊಂಡು ಓಡಾಡುತ್ತಾರೆ

10. ಅರಣ್ಯಗಳ ಸಂರಕ್ಷಣೆ:

ಅರಣ್ಯಗಳನ್ನು ಬೆಳೆಸುವುದು, ಉಳಿಸುವುದು ಹಾಗೂ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದನ್ನು ಅರಣ್ಯಗಳ ಸಂರಕ್ಷಣೆ ಎಂದು ಕರೆಯಲಾಗುತ್ತದೆ. ಅರಣ್ಯಗಳನ್ನು ರಕ್ಷಿಸಲು ಈ ಕೆಳಗಿನ ಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಅವುಗಳೆಂದರೆ

  1. ಪದೇಪದೇ ಬೆಂಕಿಗೆ ಆಹುತಿಯಾಗುತ್ತಿರುವ ಅರಣ್ಯವನ್ನು ರಕ್ಷಿಸುವುದು ಬಹಳ ಅಗತ್ಯವಾದ ಕೆಲಸವಾಗಿದೆ.
  2. ವೈಜ್ಞಾನಿಕ ರೀತಿಯಲ್ಲಿ ಕ್ರಿಮಿ ಕೀಟಗಳ ಅಂಟು ರೋಗಗಳನ್ನು ತಡೆಗಟ್ಟುವ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
  3. ಬೆಲೆ ಬಾಳುವ ಮರಗಳನ್ನು ರಕ್ಷಿಸುವುದು ಮತ್ತು ಅವುಗಳ ಬುಡದಲ್ಲಿ ಬೆಳೆದ ಇತರೆ ಸಸ್ಯಗಳು ಮತ್ತು ಗಿಡಗಳನ್ನು ಕಾಪಾಡುವುದು.
  4. ವಯಸ್ಸಾದ ಮರವನ್ನು ಕಡಿಯುವುದು ಮತ್ತು ಅದರ ಸ್ಥಳದಲ್ಲಿ ಮತ್ತೊಂದು ಸಸಿಯನ್ನು ನೆಡುವುದು.
  5. ಮರಗಳನ್ನು ಕಡಿಯುವಾಗ ಮತ್ತು ಅವುಗಳನ್ನು ಸಾಗಿಸುವಾಗ ಇತರೆ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದು.
  6. ಅರಣ್ಯಗಳ ಮರಗಳ ಕಳ್ಳ ಸಾಗಾಣಿಕೆ ಹಾಗೂ ಅತಿಕ್ರಮವನ್ನು ತಡೆಗಟ್ಟಲು ಕಾನೂನುಗಳನ್ನು ಜಾರಿಗೆ ತರುವುದು.
  7. ದನ ಕರುಗಳು ಹುಲ್ಲುಗಾವಲುಗಳಲ್ಲಿ ನಿರಂತರವಾಗಿ ಮೇಯುವುದನ್ನು ನಿಯಂತ್ರಿಸುವುದು.
  8. ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಪಕ್ಷಿಧಾಮ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
  9. ಅರಣ್ಯಗಳನ್ನು ಸಂರಕ್ಷಿಸುವುದು ಹಾಗೂ ನಿರ್ವಹಣೆಯ ಕುರಿತು ಕಾಲ ಕಾಲಕ್ಕೆ ತರಬೇತಿಯನ್ನು ನೀಡುವುದು. ಅದಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವುದು.
  10. ಸಾಮಾಜಿಕ ಅರಣ್ಯವನ್ನು ಬೆಳೆಸುವುದನ್ನು ಪ್ರೋತ್ಸಾಹಿಸುವುದು.
  11. ರಸ್ತೆಯ ಅಕ್ಕ ಪಕ್ಕದಲ್ಲಿ, ರೈಲು ಮಾರ್ಗಗಳ ಬದಿಯಲ್ಲಿ, ಕಾಲುವೆಗಳ ದಂಡೆ, ಗೋಮಾಳ, ಕೆರೆಗಳ ದಂಡೆ, ಶಾಲಾ ಕಾಲೇಜುಗಳ ಆವರಣ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದನ್ನು ಪ್ರೋತ್ಸಾಹಿಸಬೇಕು.
  12. ಅರಣ್ಯಗಳನ್ನು ಬೆಳೆಸುವ ಉಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸುವುದು.
  13. ಅರಣ್ಯ ಸಂರಕ್ಷಣೆಗಾಗಿ ಇತ್ತೀಚಿಗೆ ಚಿಪ್ಕೋ ಚಳುವಳಿ, ಅಪ್ಪಿಕೋ ಚಳುವಳಿಗಳನ್ನು ಹಮ್ಮಿಕೊಂಡಿದ್ದು ಇದೊಂದು ಉತ್ತಮ ಕಾರ್ಯಯೋಜನೆಯಾಗಿದೆ.

ಉಪಸಂಹಾರ

ಅರಣ್ಯನಾಶವು ಮಾನವನ ಜೀವನದ ಮೇಲೆ ಮಾತ್ರವಲ್ಲದೆ ಸಂಪೂರ್ಣ ಜೀವಜಗತ್ತಿನ ಅಸ್ತಿತ್ವದ ಮೇಲೆ ಭಾರಿ ಅಪಾಯವನ್ನುಂಟು ಮಾಡುತ್ತಿದೆ. ಮಳೆಗಾಲದ ಅಸ್ಥಿರತೆ, ಹವಾಮಾನ ಬದಲಾವಣೆ, ಜೀವಜಾಲದ ನಾಶ ಇವೆಲ್ಲವೂ ಅರಣ್ಯ ನಾಶದ ನೇರ ಪರಿಣಾಮಗಳಾಗಿವೆ. ಆದ್ದರಿಂದ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಅರಣ್ಯಗಳನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಹಸಿರು ಭೂಮಿಯೇ ನಮ್ಮ ಭವಿಷ್ಯ ಎಂಬ ಅರಿವಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಸರ ಸಮತೋಲನ ಸಾಧ್ಯವಾಗುತ್ತದೆ.