ವನ್ಯಜೀವಿ ಸಂರಕ್ಷಣಾ ಯೋಜನೆಗಳು
ಜೀವ ಪ್ರಭೇದಗಳ ರಕ್ಷಣೆಗಾಗಿ ಭಾರತ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ.
1. ಹುಲಿ ಯೋಜನೆ: (Tiger Project)
ರಾಷ್ಟ್ರೀಯ ಪ್ರಾಣಿ ಎಂದು ಹೆಸರಾದ ಹುಲಿಯು ಇಂದು ಅಳಿವಿನ ಅಂಚಿನಲ್ಲಿದೆ. ಭಾರತವು 1900ರಲ್ಲಿ ಸುಮಾರು 40000 ಹುಲಿಗಳನ್ನು ಹೊಂದಿತ್ತು. ಆದರೆ ಇವುಗಳ ಸಂಖ್ಯೆ 1970ರಲ್ಲಿ 1800 ಕ್ಕೆ ಇಳಿಯಿತು. ಇದರಿಂದ ಆತಂಕಗೊಂಡ ಭಾರತ ಸರ್ಕಾರ ಭಾರತೀಯ ವನ್ಯಜೀವಿ ಮಂಡಳಿಯ ನೇತೃತ್ವದಲ್ಲಿ ಹುಲಿಗಳ ಸಂರಕ್ಷಣೆಗೆಂದು 1970ರಲ್ಲಿ ಒಂದು ವಿಶೇಷ ಕಾರ್ಯವನ್ನು ಸಂಘಟಿಸಿತು. ಇದರ ಪರಿಣಾಮವಾಗಿ 1973 ಏಪ್ರಿಲ್ 1 ರಂದು ʻʻಭಾರತ ಸರ್ಕಾರದ ಹುಲಿ ಯೋಜನೆಯನ್ನು ಜಾರಿಗೆ ತಂದಿತು.ʼʼ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ:
ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2006ರ ಪ್ರಕಾರ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ಈ ಕೆಳಗಿನ ಕಾರ್ಯಗಳನ್ನು ಹಮ್ಮಿಕೊಂಡಿದೆ.
- a) ರಾಜ್ಯ ಸರ್ಕಾರ ತಯಾರಿಸಿದ ಹುಲಿ ಸಂರಕ್ಷಣಾ ಯೋಜನೆಗಳಿಗೆ ಅನುಮೋದನೆಯನ್ನು ನೀಡುವುದು.
- b) ಹುಲಿ ಮೀಸಲು ಪ್ರದೇಶಗಳಲ್ಲಿ ಗಣಿಗಾರಿಕೆ, ಕೈಗಾರಿಕೆ ಹಾಗೂ ವಿವಿಧ ಯೋಜನೆಗಳನ್ನು ಮಾಡಿದಂತೆ ತಡೆ ನೀಡುವುದು.
- c) ಹುಲಿಗಳ ರಕ್ಷಣೆಗಾಗಿ ಕಾಲಕಾಲಕ್ಕೆ ಯೋಜನೆಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದು.
- d) ಸಂರಕ್ಷಣೆಯ ಕ್ರಮಗಳ ಕುರಿತು ಪ್ರಾಧಿಕಾರವು ಸರ್ಕಾರಕ್ಕೆ ಆಗಾಗ ಮಾಹಿತಿ ನೀಡುವುದು.
2) ಆನೆ ಯೋಜನೆ: (Elephant Project)
1992 ರಲ್ಲಿ ಆನೆಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.
- ಆನೆಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು.
- ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು.
- ಸೆರೆಸಿಕ್ಕ ಆನೆಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಬೆಳೆಸುವುದು.
- ಈ ಯೋಜನೆಯು ಭಾರತದ 16 ರಾಜ್ಯಗಳಲ್ಲಿ ಜಾರಿಯಲ್ಲಿದೆ.
- ಅಧಿಕ ಪ್ರಮಾಣದ ಆನೆ ಸಂತತಿಗಳನ್ನು ಹೊಂದಿದ ರಾಜ್ಯಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡುವುದು.
ಭಾರತದಲ್ಲಿ ಇಂದು ಆನೆ ಸುರಕ್ಷಿತಾ ವಲಯಗಳನ್ನು ಸ್ಥಾಪಿಸಲಾಗಿದ್ದು ಈಗ ಒಟ್ಟು 33 ಆನೆ ಸುರಕ್ಷಿತ ವಲಯಗಳಿವೆ. ಪ್ರಸ್ತುತ ಆನೆಗಳ ಸಂಖ್ಯೆ 23,000 ದಿಂದ 41,000 ಕ್ಕೆ ಏರಿಕೆಯಾಗಿದೆ. ಕರ್ನಾಟಕ ಒಂದರಲ್ಲಿ ಒಟ್ಟು 30000ಕ್ಕೂ ಹೆಚ್ಚು ಆನೆಗಳಿವೆ.
3. ರಣಹದ್ದು ಯೋಜನೆ : (Vultura Project)
2006 ರ ಮೇ ತಿಂಗಳಲ್ಲಿ ಭಾರತ ಸರ್ಕಾರವು ರಣಹದ್ದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಮಹಾರಾಷ್ಟ್ರ ಹಾಗೂ ಹರಿಯಾಣಾ ಅರಣ್ಯ ಇಲಾಖೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇವುಗಳು ರಣಹದ್ದು ಉಪಹಾರಗೃಹಗಳನ್ನು ಆರಂಭಿಸಿವೆ.
- ತೀವ್ರವಾಗಿ ಇಳಿಕೆ ಕಾಣುತ್ತಿರುವ ರಣಹದ್ದುಗಳ ಸಂಖ್ಯೆಗಳನ್ನು ಹೆಚ್ಚಿಸುವುದು.
- ರಣಹದ್ದು ಉಪಹಾರ ಗೃಹಗಳ ಮೂಲಕ ಡೈಕ್ಲೋಪಿನಾಕ್ ಮುಕ್ತ ಸತ್ತ ಜಾನುವಾರುಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡಲಾಗುವುದು.
- ಈ ಉಪಹಾರ ಗೃಹಗಳೊಂದಿಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿ ಸ್ವಸ್ಥಾನಗಳಲ್ಲಿ ರಣಹದ್ದುಗಳನ್ನು ರಕ್ಷಿಸುವುದು.
- ಗ್ರಾಮಗಳಲ್ಲಿ ಯಾವುದೇ ಪ್ರಾಣಿ ಸತ್ತು ಹೋದರೆ ಗ್ರಾಮೀಣ ಜನರು ಇಲಾಖೆಗೆ ಮಾಹಿತಿ ನೀಡುತ್ತಾರೆ. ಅರಣ್ಯ ಇಲಾಖೆ ಇದನ್ನು ಪರೀಕ್ಷಿಸಿ, ಡೈಕ್ಲೋಪಿನಾಕ್ ಮುಕ್ತವಾಗಿದ್ದರೆ ಅದನ್ನು ರಣಹದ್ದು ಗೃಹಗಳಿಗೆ ಸಾಗಿಸುತ್ತಾರೆ ನಂತರ ಸತ್ತ ದನಗಳ ಮಾಲೀಕರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.
- ರಣಹದ್ದು ಗೂಡುಗಳು ಕಂಡು ಬಂದಾಗ ಅಲ್ಲಿ ಆಹಾರದ ವ್ಯವಸ್ಥೆ ಮಾಡುವುದು.
4. ಸಮುದ್ರ ಆಮೆಗಳ ಯೋಜನೆ: (Sea Turtle Project)
ಪ್ರತಿ ವರ್ಷ ಚಳಿಗಾಲ ಬಂದಿತೆಂದರೆ ಭಾರತದ ಪೂರ್ವ ಕರಾವಳಿಯಲ್ಲಿ ಆಮೆಗಳು ಗೂಡು ಕಟ್ಟಲು ಸಮುದ್ರದಿಂದ ದಡಕ್ಕೆ ಬರುತ್ತವೆ. ಇವುಗಳಲ್ಲಿ ಪ್ರಮುಖವಾದ ಆಮೆಗಳೆಂದರೆ ʻʻಆಲಿವ್ ರಿಡ್ಲೆ ಆಮೆʼʼ 1999 ನವೆಂಬರ್ ತಿಂಗಳಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಅಳಿವಿನ ಅಂಚಿನಲ್ಲಿರುವ ಆಮೆಗಳನ್ನು ರಕ್ಷಿಸಲು ಸಮುದ್ರ ಆಮೆಗಳ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದಿತು.
ಕಾರ್ಯಗಳು:
ಒರಿಸ್ಸಾ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಮಾಜಗಳು ಸ್ಥಳೀಯ ಎನ್ ಜಿ ಒ ಸಹಯೋಗದೊಂದಿಗೆ ಈ ಕೆಳಗಿನ ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಂಡಿದೆ.
- ಸಮುದ್ರದಲ್ಲಿ ಗಸ್ತು ತಿರುಗುವವರೆಗೆ ಸೂಕ್ತವಾದ ದೋಣಿಗಳ ಸಹಾಯವನ್ನು ಒದಗಿಸುವುದು.
- ಆಮೆಗಳ ಚಲನವಲನಗಳನ್ನು ಗುರುತಿಸಲು ಕ್ಷೇತ್ರ ಶಿಬಿರಗಳನ್ನು ಹಮ್ಮಿಕೊಳ್ಳುವುದು.
- ಸಾಗರದ ಆಮೆಗಳ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕುವುದು.
- ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟುವುದು.
5. ಹಂಗೂಲ್ ಯೋಜನೆ: (Hangul Project)
ಇದನ್ನು ಕಾಶ್ಮೀರ ಕಡವೆ ಎಂದು ಕರೆಯಲಾಗಿದೆ. ಯುರೋಪಿನಲ್ಲಿ ಕಂಡುಬರುವ ಹಿಮಸಾರಂಗ ಜಾತಿಗೆ ಸೇರಿದ ಒಂದು ಜಿಂಕೆ ಪ್ರಭೇದವಾಗಿದೆ. ಇವು ದಟ್ಟವಾದ ನದಿ ಕಾಡುಗಳು, ಎತ್ತರ ಕಣಿವೆಗಳು, ಕಾಶ್ಮೀರ ಕಣಿವೆಯ ಪರ್ವತಗಳು, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದ ದಚಿಗಾಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿವೆ. 20ನೇ ಶತಮಾನದ ಹೊತ್ತಿನಲ್ಲಿ 5000 ಇದ್ದ ಈ ಜಿಂಕೆಗಳ ಸಂತತಿ ಆವಾಸಸ್ಥಾನಗಳ ನಾಶ, ಸಾಕುಪ್ರಾಣಿಗಳ ಮೇಯಿಸುವಿಕೆ, ಬೇಟೆಯಾಡುವುದು ಮುಂತಾದ ಕ್ರಿಯೆಗಳಿಂದ ಇಳಿಮುಖವಾಗಿದೆ. ಇಂದು ಇದು ಅಳಿವಿನಂಚಿನ ಪ್ರಭೇದದ ಗುಂಪಿಗೆ ಸೇರಿದೆ. 1970ರ ವೇಳೆಗೆ ಇವುಗಳ ಸಂಖ್ಯೆ 150ಕ್ಕೆ ಇಳಿಯಿತು ಹೀಗಾಗಿ ಜಮ್ಮು ಕಾಶ್ಮೀರ ರಾಜ್ಯದ ಜೊತೆ ಸೇರಿ IUCN and WWFಗಳು ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದವು. ಇದರಿಂದ 1980ರ ವೇಳೆಗೆ ಜಿಂಕೆಗಳ ಸಂತತಿ 340ಕ್ಕೆ ಏರಿತು. 2009ರ ವೇಳೆಗೆ ʻʻʻಕಾಶ್ಮೀರಿನ ಕೆಂಪುಜಿಂಕೆಯ ಹಂಗೂಲ್‌ನ್ನುʼʼ ರಕ್ಷಿಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಅಂದಿನಿಂದ ಜಿಂಕೆಗಳನ್ನು ರಕ್ಷಿಸಲು ಅವುಗಳನ್ನು ಬಂಧಿಸಿ ಅಭಿವೃದ್ಧಿಪಡಿಸಲಾಯಿತು. ಸಂತಾನೋತ್ಪತ್ತಿ ಕೇಂದ್ರಗಳನ್ನು ʻʻಸಿಕರ್‌ಘರ್ ಟ್ರಾಲ್, ಪುಲುವಾನಾ ಮತ್ತು ಕಂಗನ್ ಜಿಲ್ಲೆಗಳಲ್ಲಿ ತೆರೆಯಲಾಯಿತು. ಆದರೂ ಅವುಗಳ ಪ್ರಗತಿ ಕಂಡುಬಂದಿಲ್ಲ.