ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು

  1. ಕಾಂತೀಯ ಸಮೀಕ್ಷೆ
  2. ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ
  3. ವಿದ್ಯುತ್ ಕಾಂತೀಯ ಸರ್ವೇಕ್ಷಣೆ
  4. ಶಬ್ದದ ಆಧಾರದ ಸರ್ವೇಕ್ಷಣೆ
  5. ಮಣ್ಣಿನ ರಸಾಯನಿಕ ಪರೀಕ್ಷೆ
  6. ವೈಮಾನಿಕ ಸಮೀಕ್ಷೆ
  7. ಓರೆಯಾದ ಛಾಯಾಗ್ರಹಣ
  8. ಲಂಬ ಛಾಯಾಗ್ರಹಣ
  9. ವೈಮಾನಿಕ ಛಾಯಾಗ್ರಹಣ
  10. ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್‌
  11. NIR

ಕೇವಲ ಮೇಲ್ಮೈ ಸಮೀಕ್ಷೆ ಅಥವಾ ಉತ್ಖನನದಿಂದ ಮಾತ್ರವಲ್ಲದೆ ನೆಲದ ಅಡಿಯಲ್ಲಿ ಅಡಗಿರುವ ಗೋಡೆ, ಕುಲುಮೆ, ಗುಂಡಿ ಅಥವಾ ಹಳೆಯ ರಸ್ತೆಯ ಬಗ್ಗೆ ತಿಳಿಯಲು ಈ ವಿಧಾನ ಸಹಕಾರಿ. ಇವುಗಳ ಬಳಕೆಯ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.

1. ಕಾಂತೀಯ ಸಮೀಕ್ಷೆ: ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದರೆ. ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್‌ಗಳು ಭೂಮಿಯ ಕಾಂತೀಯ ಕ್ಷೇತ್ರಗಳಲ್ಲಿ ಸಣ್ಣ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಕುಲುಮೆಗಳು ಅಥವಾ ಮಣ್ಣಿನ ಪಾತ್ರೆಗಳನ್ನು ಸುಟ್ಟಾಗ ಅವುಗಳಲ್ಲಿ ಒಂದು ಶಾಶ್ವತ ಕಾಂತ ಗುಣ ಮೂಡುತ್ತದೆ. ಇದನ್ನು ಬಳಸಿಕೊಂಡು ನೆಲದಡಿಯಲ್ಲಿ ಅಡಗಿರುವ ಒಲೆಗಳು ಹಾಗೂ ಸುಟ್ಟ ಮಣ್ಣಿನ ರಚನೆಯನ್ನು ಪತ್ತೆಹಚ್ಚಬಹುದು. ಗೋಡೆಗಳು, ರಸ್ತೆಗಳಿಗಿಂತ ಮಣ್ಣಿನ ಗುಂಡಿಗಳು ಮತ್ತು ಸುಟ್ಟ ಜಾಗಗಳು ಹೆಚ್ಚಿನ ಕಾಂತಿಯತೆಯನ್ನು ಹೊಂದಿರುತ್ತವೆ. ಈ ವ್ಯತ್ಯಾಸದ ಆಧಾರದ ಮೇಲೆ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ. ಕಾಂತೀಯ ಸರ್ವೇಕ್ಷಣದಲ್ಲಿ ಪ್ರೋಟಾನ್ ಕಾಂತಮಾಪಕ ಎಂಬ ಕಾಂತ ಕ್ಷೇತ್ರದ ಸೂಕ್ಷ್ಮಗ್ರಾಹಿಯಾದ ಉಪಕರಣವನ್ನು ಬಳಸಲಾಗುವುದು. ಇದರ ಮೂಲಕ ಸರ್ವೇಕ್ಷಣ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಲಾಗುತ್ತದೆ. ಸುಮಾರು 3 ಜನರ ಒಂದು ತಂಡವು ಒಂದೇ ದಿನದಲ್ಲಿ ಅನೇಕ ಎಕರೆ ಪ್ರದೇಶಗಳನ್ನು ಸರ್ವೇಕ್ಷಣ ಮಾಡಬಹುದಾಗಿದೆ. ಈ ವಿಧಾನವನ್ನು 1985ರಲ್ಲಿಯೇ ಮೊದಲ ಬಾರಿಗೆ ಬಳಸಲಾಯಿತಾದರೂ ಭಾರತದಲ್ಲಿ ಇದು ಅಷ್ಟೊಂದು ಪ್ರಚಾರ ಪಡೆಯಲಿಲ್ಲ. ದಕ್ಷಿಣ ಭಾರತದ ಕಾವೇರಿ ಪಟ್ನಂ ಹಾಗೂ ಮಧುರೈಗಳಲ್ಲಿ ಈ ವಿಧಾನದ ಮೂಲಕ ಸರ್ವೇಕ್ಷಣ ನಡೆಸಿದರೂ ನಿರೀಕ್ಷಿತ ಪ್ರತಿಫಲ ಸಿಗಲಿಲ್ಲ.

 2. ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ: ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಇನ್ನೊಂದು ಪ್ರಮುಖವಾದ ಭೂ-ಭೌತಿಕ ವಿಧಾನವಾಗಿದೆ. ನೆಲದೊಳಗೆ ಲೋಹದ ಕಡ್ಡಿಗಳನ್ನು ಚುಚ್ಚಿ ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಹರಿಸಲಾಗುತ್ತದೆ. ಆಗ ತೇವಾಂಶವಿರುವ ಮಣ್ಣು ವಿದ್ಯುತ್‌ನ್ನು ಸುಲಭವಾಗಿ ಹರಿಯಲು ಬಿಡುತ್ತದೆ. ಆದರೆ ಒಣಗಿದ ವಸ್ತುಗಳು ಅಥವಾ ಕಲ್ಲಿನ ರಚನೆಗಳು ವಿದ್ಯುತ್ ಅನ್ನು ತಡೆಯುತ್ತವೆ. ಆಗ ವಿದ್ಯುತ್ ಎಷ್ಟು ಸುಲಭವಾಗಿ ಹರಿಯುತ್ತದೆ. ಎಂಬುದನ್ನು ಅಳೆಯುವ ಮೂಲಕ ನೆಲೆದಾಡಿಯಲ್ಲಿ ಏನಿದೆ ಎಂಬುದನ್ನು ಊಹಿಸಬಹುದು. ಕಾಂತಿಯ ಸರ್ವೇಕ್ಷಣೆಗೆ ಹೋಲಿಕೆ ಮಾಡಿದರೆ ವಿದ್ಯುತ್ ಪ್ರತಿರೋಧ ಸರ್ವೇಕ್ಷಣ ವಿಧಾನದಿಂದ ಹೆಚ್ಚಿನ ಲಾಭಗಳಿವೆ. ಈ ವಿಧಾನ ತೀರಾ ಸರಳ ಮತ್ತು ಕಡಿಮೆ ವೆಚ್ಚದಾಯಕವಾದುದು ಆಗಿದೆ. ಉಪಕರಣಗಳು ಸುಲಭವಾಗಿ ದೊರೆಯುವುದರಿಂದ ಸರ್ವೇಕ್ಷಣ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ. ಮಳೆ, ಭೂಗರ್ಭ, ಸಸ್ಯ, ಇವುಗಳ ಪ್ರಭಾವವು ವಿದ್ಯುತ್ ಪ್ರತಿರೋಧ ಸರ್ವೇಕ್ಷಣದಲ್ಲಿ ಕಂಡುಬರುತ್ತದೆ. ಒಂದು ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದರೆ ನೆಲದ ಮಣ್ಣು ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಆಗ ವಿದ್ಯುತ್ ವಾಹಕವು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿರಬಹುದು. ಇದರಿಂದ ಭೂಮಿಯ ಒಳಗಡೆ ಹುದುಗಿರುವ ಅವಶೇಷಗಳ ಪ್ರತಿರೋಧ ಪ್ರಮಾಣವ ಅರಿವಿಗೆ ಬಾರದೆ ಇರಬಹುದು. ಒಂದು ವೇಳೆ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆದಿದ್ದರೆ ಅಥವಾ ಹುಲ್ಲು ಬೆಳೆಯದಪ್ರದೇಶವಿದ್ದರೂ ಸಹ ವಿದ್ಯುತ್ ಪ್ರವಾಹದ ಪ್ರತಿರೋಧದ ಸರ್ವೇಕ್ಷಣೆಗೆ ತೊಂದರೆಯಾಗುತ್ತದೆ.

 ಪುರಾತತ್ವ ಸ್ಥಳಗಳ ಸರ್ವೇಕ್ಷಣ ಕಾರ್ಯದಲ್ಲಿ ವಿದ್ಯುತ್ ಪ್ರತಿರೋಧ ವಿಧಾನವನ್ನು 1947ರಲ್ಲಿ ಆರ್‌.ಜೆ.ಸಿ ಆಕ್ಟ್ ಕಿನ್ಸನ್‌ ಎಂಬಾತನು ಮೊದಲು ಬಳಸಿದನು. ಇದರ ಆಧಾರದಿಂದ ರೋಮನ್ ಕಾಲದ  ಬಳಪದ ಕಲ್ಲಿನಿಂದ ನಿರ್ಮಿಸಿದ ರಸ್ತೆ ಹಾಗೂ ಡಾರ್ಟೆಸ್ಟರ್ ಎಂಬಲ್ಲಿ ಹೊಸ ಶಿಲಾಯುಗದ ಕಂದಕವನ್ನು ಪತ್ತೆ ಮಾಡಲಾಯಿತು. ಭಾರತದಲ್ಲಿ ಈ ವಿಧಾನದ ಬಳಕೆ ಬಹಳ ಕಡಿಮೆ ಎಂದೇ ಹೇಳಬೇಕು. ಮಹಾರಾಷ್ಟ್ರದ ನಯಾಕುಂಡ ಎಂಬಲ್ಲಿ ಕಬ್ಬಿಣದ ಕುಲುಮೆಯನ್ನು ಕಂಡುಹಿಡಿಯಲಾಯಿತು. ಇದು ಕ್ರಿ.ಪೂ 700 ವರ್ಷಗಳ ಹಿಂದಿನದು ಎಂದು ವಿದ್ಯುತ್ ಪ್ರವಾಹ ಸರ್ವೇಕ್ಷಣದಿಂದ ಗುರುತಿಸಲಾಯಿತು.

 3. ವಿದ್ಯುತ್ ಕಾಂತೀಯ ಸರ್ವೇಕ್ಷಣೆ: ಇದು ಸಹ ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಮತ್ತೊಂದು ಅತ್ಯಾಧುನಿಕ ವೈಜ್ಞಾನಿಕ ವಿಧಾನವಾಗಿದೆ. ಇದು ಕಾಂತೀಯ ಸಮೀಕ್ಷೆ ಹಾಗೂ ವಿದ್ಯುತ್ ಪ್ರತಿರೋಧ ಸಮೀಕ್ಷೆ ಎರಡರ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದರ ಪ್ರಮುಖ ಅಂಶಗಳೆಂದರೆ ನೆಲದ ಮೇಲೆ ಒಂದು ಉಪಕರಣದ ಮೂಲಕ ವಿದ್ಯುತ್ ಕಾಂತೀಯ ಅಲೆಗಳನ್ನು ಭೂಮಿಯೊಳಗೆ ಕಳಿಸಲಾಗುತ್ತದೆ. ಈ ಅಲೆಗಳು ನೆಲದಡಿಯಲ್ಲಿರುವ ಲೋಹದ ವಸ್ತುಗಳು ಅಥವಾ ತೇವಾಂಶವಿರುವ ಮಣ್ಣನ್ನು ತಾಗಿದಾಗ ಅಲ್ಲಿ ಒಂದು ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿ ದ್ವಿತೀಯ ಕಾಂತಿಯ ಕ್ಷೇತ್ರ ಸೃಷ್ಠಿಯಾಗುತ್ತದೆ. ಈ ಉಪಕರಣವು ದ್ವಿತೀಯ ಕ್ಷೇತ್ರವನ್ನು ಅಳೆದು ನೆಲದ ಅಡಿಯಲ್ಲಿರುವ ವಾಹಕದ ಕಾಂತೀಯತೆಯನ್ನು ಗುರುತಿಸುತ್ತದೆ.

 ಈ ಉಪಕರಣದಿಂದ ನೆಲದಲ್ಲಿ ಹೂತು ಹೋಗಿದ್ದ ಪ್ರಾಚೀನ ನಾಣ್ಯಗಳು, ಆಯುಧಗಳು ಅಥವಾ ಲೋಹದ ಪಾತ್ರೆಗಳನ್ನು ಪತ್ತೆ ಮಾಡಬಹುದು. ಇದು ಅಲ್ಲದೆ ಮಣ್ಣಿನ ಪದರಿನಲ್ಲಿನ ವ್ಯತ್ಯಾಸಗಳು ಹೂತು ಹೋದ ಗೋಡೆಗಳು, ಕಾಲುವೆಗಳನ್ನು ಗುರುತಿಸಲು ಈ ಉಪಕರಣವೂ  ಸಹಾಯಕವಾಗುತ್ತದೆ. ಇದು ಸಂಪರ್ಕ ರಹಿತ ವಿಧಾನವಾಗಿದ್ದು ಇದರಿಂದ ನೆಲಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಲಾರದು. ಇದರಿಂದ ಭೂಮಿಯ ಸ್ವರೂಪ, ತೇವಾಂಶ, ಹೂತುಹೋದ ಮಾನವ ನಿರ್ಮಿತ ವಸ್ತುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

4. ಶಬ್ದದ ಆಧಾರದ ಸರ್ವೇಕ್ಷಣೆ: ನೆಲದ ಮೇಲ್ಮೈಯನ್ನು ಗುದ್ದಿ ಅದರಿಂದ ಬರುವ ಶಬ್ದದ ಆಧಾರದ ಮೇಲೆ ಸರ್ವೇಕ್ಷಣ ಮಾಡುವುದನ್ನು ಶಬ್ದದ ಆಧಾರದ ಸರ್ವೇಕ್ಷಣ ಎಂದು ಕರೆಯುತ್ತಾರೆ. ನೆಲದ ಮೇಲೆ ಗುದ್ದಿದಾಗ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ಶಬ್ದಗಳು ಬರುವುದನ್ನು ಗಮನಿಸಬಹುದು. ಗಟ್ಟಿಯಾದ ಮಣ್ಣು ಇರುವ ಸ್ಥಳದಲ್ಲಿ ಬರುವ ಶಬ್ದವು ಟೊಳ್ಳಾದ ಮಣ್ಣು ಇರುವ ಶಬ್ದದ ಪ್ರದೇಶವನ್ನು ಗುದ್ದಿದಾಗ ಬರುವ ಶಬ್ದಕ್ಕಿಂತ ಬೇರೆಯಾಗಿರುತ್ತದೆ. ಈ ವಿಧಾನವನ್ನು ಅನುಸರಿಸಿ ಸರ್ವೇಕ್ಷಣಾಕಾರನು ಭೂಮಿಯಲ್ಲಿ ಹುದುಗಿರುವ ಪುರಾತತ್ವ ವಸ್ತುಗಳ ಸ್ವರೂಪವನ್ನು ಅರಿತುಕೊಳ್ಳುವನು.

 5. ಮಣ್ಣಿನ ರಸಾಯನಿಕ ಪರೀಕ್ಷೆ: ಗತಕಾಲದ ವಸತಿ ನಿವೇಶನಗಳಲ್ಲಿನ ಮಣ್ಣಿನಲ್ಲಿ ಫಾಸ್ಪೇಟ್ ಹಾಗೂ ಸಾವಯವ ಪದಾರ್ಥಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಕಾರಣದಿಂದಾಗಿ ಕೆಲವು ಭಾಗಗಳಲ್ಲಿ ಪ್ರಾಚೀನ ನಿವೇಶನದ ಹಾಳು ಮಣ್ಣು ಕೂಡ ನೈಸರ್ಗಿಕ ಗೊಬ್ಬರವಾಗಿ ಉಪಯೋಗಕ್ಕೆ ಬರುತ್ತದೆ. ರಾಸಾಯನಿಕ ಪರೀಕ್ಷೆಯ ಮುಖಾಂತರ ನಿವೇಶನದ ಹಾಳು ಮಣ್ಣನ್ನು ಪರೀಕ್ಷಿಸಿ ಅದರಲ್ಲಿನ ಫಾಸ್ಪೈಟಿನ ಅಂಶವನ್ನು ಕಂಡುಕೊಳ್ಳಬಹುದು. ಈ ವಿಧಾನದ ಮೂಲಕ ಡೆನ್ಮಾಕ್‌, ಇಟಲಿ ಹಾಗೂ ಇಂಗ್ಲೆಂಡ್‌ಗಳಲ್ಲಿ ಪ್ರಾಚೀನ ನೆಲೆಗಳನ್ನು ಪತ್ತೆಹಚ್ಚಲಾಗಿದೆ. ಇದೇ ವಿಧಾನದ ಆಧಾರದ ಮೇಲೆ ಡೆನ್ಮಾರ್ಕಿನ ಕೋಪನ್ ಹೇಗನ್ ಹತ್ತಿರದ ಸ್ಟಾಕ್‌ಪ್ ಎಂಬ ಹಳೆಯ ಸ್ಥಳವನ್ನು ಶೋಧ ಮಾಡಲಾಗಿದೆ. ಅದರ ಸುತ್ತಮುತ್ತ ಸುಮಾರು 80 ಹೆಕ್ಟರ್ ಪ್ರದೇಶದಲ್ಲಿ 250 ಭಾಗಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಅವುಗಳ ರಸಾಯನಿಕ ವಿಶ್ಲೇಷಣೆ ಮಾಡಲಾಯಿತು. ಗುಜರಾತದ ಕಚ್‌ನ ನಾಗೇಶ್ವರದ ಶೋಧದಲ್ಲಿ ಇದೇ ಮಾದರಿಯನ್ನು ಬಳಸಲಾಯಿತು. ಈ ಪ್ರದೇಶದಲ್ಲಿ ಸಿಕ್ಕ ಅವಶೇಷಗಳ ಆಧಾರದ ಮೇಲೆ ಅಲ್ಲಿ ʻʻಚಿಪ್ಪಿನ ಉದ್ಯಮಗಳು ಇದ್ದ ಬಗ್ಗೆ ಮಾಹಿತಿ ದೊರಕಿತು.

 6. ವೈಮಾನಿಕ ಸಮೀಕ್ಷೆ: ವೈಮಾನಿಕ ಹಾಗೂ ದೂರ ಸಂವೇದಿ ಸಮೀಕ್ಷೆಗಳು ಪುರಾತತ್ವ ಸ್ಥಳಗಳ ಗುರುತಿಸುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ರೆನ್‌ಫ್ರೂ ಮತ್ತು ಬಾನ್‌ 200 ಎಂಬ ವೈಮಾನಿಕ ಸಮೀಕ್ಷೆಯಿಂದ ಗತಇತಿಹಾಸದ ಅವಶೇಷಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ದಾಖಲಿಸಬಹುದು. ಇಂಗ್ಲೆಂಡಿನಲ್ಲಿ OGS ಕ್ರಾಪರ್ಡ್, ಸಿರಿಯಾದಲ್ಲಿ ಫಾದರ್ ಅಂಟೋನಿಯನ್ ಪೊಯ್ಡೆಬಾರ್ಡ್‌, ಇರಾನಿನಲ್ಲಿ ಎರಿಚ್‌ ಸ್ಮಿತ್‌ರವರ ಕಾರ್ಯಗಳು ಈ ಹೊಸ ಕ್ಷೇತ್ರಕ್ಕೆ ಆರಂಭ ಒದಗಿಸಿದವು. ಇತ್ತೀಚಿಗೆ ಡ್ರೋನ್‌ ತಂತ್ರಜ್ಞಾನವು ಪುರಾತತ್ವಶಾಸ್ತ್ರದ ಸ್ಥಳಗಳನ್ನು ವಿವಿಧ ಕೋನಗಳಲ್ಲಿ ದಾಖಲಿಸುತ್ತದೆ. ಜೊತೆಗೆ ಉತ್ತಮ ತಿಳುವಳಿಕೆ ಮತ್ತು ಸಂಶೋಧನೆಗಾಗಿ ಸಂಬಂಧಪಟ್ಟ ಭೂ ಪ್ರದೇಶದ ವಿಡಿಯೋವನ್ನು ಸಹ ಚಿತ್ರೀಕರಿಸಬಹುದು.

 7. ಓರೆಯಾದ ಛಾಯಾಗ್ರಹಣ: ಮೇಲ್ಮೈಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಕೋನದಲ್ಲಿ ಅಳವಡಿಸಲಾದ ಕ್ಯಾಮರಾವನ್ನು ಬಳಸಿ ತೆಗೆಯುವ ವೈಮಾನಿಕ ಮಾಧ್ಯಮದಿಂದ ತೆಗೆಯುವ ಚಿತ್ರವಿದು. ಇದು ಕೋಟೆಗೋಡೆಗಳು ಬೀದಿಗಳು, ದ್ವಾರಗಳು, ಹಳ್ಳಗಳು, ಜಲಾಶಯಗಳು, ಸರೋವರಗಳು ಮುಂತಾದವುಗಳ ಛಾಯಾಚಿತ್ರಗಳನ್ನು ತೆಗೆದು ಭೂಮಿಯಲ್ಲಿರುವ ಘಟಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

 8. ಲಂಬ ಛಾಯಾಗ್ರಹಣ: ಮೇಲ್ಮೈಗೆ ಲಂಬವಾಗಿ ಅಳವಡಿಸಲಾದ ಕ್ಯಾಮೆರಾಗಳನ್ನು ಹೊಂದಿರುವ ವಿಮಾನಗಳಿಂದ ಲಂಬ ಛಾಯಾಗ್ರಹಣವನ್ನು ತೆಗೆದುಕೊಳ್ಳಲಾಗುವುದು. ಇದು ಸಮಾಧಿ ಅವಶೇಷಗಳ ಶೋಧ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತದೆ.

 9. ವೈಮಾನಿಕ ಛಾಯಾಗ್ರಹಣ: ತುಗಲಕ್‌ಬಾದಿನ ವಾಡಿಂಗ್ಟನ್ (1946ರಲ್ಲಿ), ಶಿಶು ಪಾಲ್‌ಗಡಲಾಲ್ (1949ರಲ್ಲಿ), ಸ್ಥಳಗಳಿಂದ ಪಡೆದ ವೈಮಾನಿಕ ಛಾಯಾಚಿತ್ರಗಳು ಪುರಾತತ್ವ ಸ್ಥಳಗಳನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಶಿಶುಪಾಲ್‌ಗಡ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಕ್ಕೂ ಇತ್ತೀಚಿನ ಗೂಗಲ್ ಅರ್ಥ ತೆಗೆದ ಚಿತ್ರಗಳ ನಡುವೆ ಹೋಲಿಕೆ ಮಾಡಿದಾಗ ಗಮನಾರ್ಹವಾದ ಬದಲಾವಣೆಗಳು ಕಂಡುಬಂದಿವೆ. 1948ರಲ್ಲಿ ತೆಗೆದ ವೈಮಾನಿಕ ಚಿತ್ರವು ಕೋಟೆಯ ಒಳಗೆ ಮತ್ತು ಸುತ್ತಲೂ ಸಾಕಷ್ಟು ಖಾಲಿ ಜಾಗಗಳನ್ನು ತೋರಿಸುತ್ತದೆ. ಆದರೆ ಗೂಗಲ್ ಅರ್ಥ ಚಿತ್ರವು ಸ್ಥಳಕ್ಕೆ ಬಹಳ ಹತ್ತಿರವಿರುವ ಪ್ರದೇಶಗಳ ಬಹಳ ವ್ಯಾಪಕ ಅಭಿವೃದ್ಧಿ ಹಾಗೂ ಅತಿಕ್ರಮಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಈ ಎರಡು ಚಿತ್ರಗಳಲ್ಲಿನ ಕುತೂಹಲಕಾರಿಯಾದ ಅಂಶವೆಂದರೆ ಕೋಟೆಯ ನಾಲ್ಕು ಮೂಲೆಗಳಲ್ಲಿ ಜಲಮೂಲಗಳು ಹಾಗೂ ಕೋಟೆಯ ವಾಯುವ್ಯಕ್ಕೆ ಮತ್ತೊಂದು ಜಲ ಮೂಲ ಪತ್ತೆಯಾದುದು. ಇತ್ತೀಚಿಗೆ ಗೂಗಲ್‌ ಅರ್ಥ ಪುರಾತತ್ವ ಸ್ಥಳಗಳ ಸಂಶೋಧನೆಗೆ ಬಹಳ ಉಪಯುಕ್ತ ಸಾಧನವಾಗಿದೆ. 2013ರಲ್ಲಿ ಕಠಾರಿಯಾ ಅವರ ಸಂಗಡಿಗರು ತಲ್ಪಡ ಸ್ಥಳದಲ್ಲಿ ಶೋಧ ಕಾರ್ಯ ಮಾಡಲು ಗೂಗಲ್ ಅರ್ಥ್ ಬಳಸಿದರು

10. ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್‌: ಇದು ಬೆಳಕಿನ ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನ. ಪುರಾತತ್ವ ಶಾಸ್ತ್ರದ ಪರಿಶೋಧನೆ ಮತ್ತು ತನಿಖೆಗಳ ಕ್ಷೇತ್ರದಲ್ಲಿ ಉಪಯೋಗ ಇತ್ತೀಚಿಗೆ ಜಗತ್ತಿನಾದ್ಯಂತ ಹೆಚ್ಚಾಗಿದೆ. ಅಂಕೋರ್‌ವಾಟ್‌, ಮಾಯಾನ್‌ ಸ್ಟೇಟ್‌ ಆಫ್‌ ಕ್ಯಾರಕೋಲ್‌, ಬೇಲಿಜ್‌ದ ಯಶಸ್ವಿ ಛಾಯಾಗ್ರಹಣದ ಆಧಾರದ ಮೇಲೆ ಲಿಡಾರ್ನ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿಯೂ ಪುರಾತತ್ವ ನೆಲೆಗಳನ್ನು ಪತ್ತೆಹಚ್ಚಲು ಇದು ಸಹಕಾರಿಯಾಯಿತು.

11.  NIR: ನಿಯರ್-ಇನ್ಫ್ರಾರೆಡ್ (NIR) ಛಾಯಾಗ್ರಹಣವು, ಐತಿಹಾಸಿಕವಾಗಿ ಸಾಂಪ್ರದಾಯಿಕ ಫಿಲ್ಮ್-ಆಧಾರಿತ ವೈಮಾನಿಕ ಸಮೀಕ್ಷೆಯ (aerial reconnaissance) ಮೂಲಕ ಬಳಸಲ್ಪಟ್ಟಿದೆ. ಇದು ಮಣ್ಣಿನ ಒಂದು ಕಣವನ್ನೂ ಕದಲಿಸದೆ ಭೂಮಿಯ ಮೇಲ್ಮೈಯ ಕೆಳಗೆ ಇಣುಕಿ ನೋಡಲು ಸಹಾಯ ಮಾಡುವ ಪ್ರಬಲ ಸಾಧನವಾಗಿದೆ. ಗೋಚರ ಬೆಳಕನ್ನು ಸೆರೆಹಿಡಿಯುವ ಸಾಮಾನ್ಯ ಛಾಯಾಗ್ರಹಣದಂತಲ್ಲದೆ, NIR ಫಿಲ್ಮ್ ಮಾನವನ ದೃಷ್ಟಿಗಿಂತ ಮೀರಿದ ತರಂಗಾಂತರಗಳನ್ನು (wave lengths) ದಾಖಲಿಸುತ್ತದೆ, ಇದು ಸಸ್ಯಗಳ ಆರೋಗ್ಯ ಮತ್ತು ಮಣ್ಣಿನ ತೇವಾಂಶದಲ್ಲಿನ ವ್ಯತ್ಯಾಸಗಳನ್ನು ಅಳೆಯಲು ಅಸಾಧಾರಣವಾಗಿ ಸೂಕ್ಷ್ಮವಾಗಿರುತ್ತದೆ. ಕಲ್ಲಿನ ಗೋಡೆಗಳು, ಅಡಿಪಾಯಗಳು ಅಥವಾ ಮುಚ್ಚಿಹೋದ ಕಂದಕಗಳಂತಹ ಪ್ರಾಚೀನ ರಚನೆಗಳು ಹೊಲದ ಅಡಿಯಲ್ಲಿ ಹೂತುಹೋದಾಗ, ಅವು ತಮ್ಮ ಮೇಲಿರುವ ಮಣ್ಣಿನ ಒಳಚರಂಡಿ ಮತ್ತು ಪೋಷಕಾಂಶಗಳ ಮಟ್ಟವನ್ನು ಬದಲಾಯಿಸುತ್ತವೆ. ಇದು ಮೇಲಿರುವ ಸಸ್ಯವರ್ಗವು ಸ್ವಲ್ಪ ವಿಭಿನ್ನವಾಗಿ ಬೆಳೆಯುವಂತೆ ಮಾಡುತ್ತದೆ, ಇದನ್ನು ಪುರಾತತ್ತ್ವಜ್ಞರು “ಬೆಳೆಯ ಗುರುತುಗಳು (crop marks)” ಎಂದು ಕರೆಯುತ್ತಾರೆ. ಈ ಸಣ್ಣ ವ್ಯತ್ಯಾಸಗಳು ಸಾಮಾನ್ಯವಾಗಿ ಬರಿಗಣ್ಣಿಗೆ ಅದೃಶ್ಯವಾಗಿದ್ದರೂ, NIR ಛಾಯಾಗ್ರಹಣವು ಕ್ಲೋರೊಫಿಲ್ ಮತ್ತು ತೇವಾಂಶದ ವಿವಿಧ ಹಂತಗಳನ್ನು ಸ್ಪಷ್ಟವಾದ ವ್ಯತಿರಿಕ್ತತೆಯಲ್ಲಿ (stark contrast) ಸೆರೆಹಿಡಿಯುತ್ತದೆ. ಇದರಿಂದ ಸಂಶೋಧಕರು ಆಕಾಶದಿಂದಲೇ ಗುಪ್ತ ವಸಾಹತುಗಳು ಮತ್ತು ಮರೆತುಹೋದ ಮಣ್ಣಿನ ರಚನೆಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗುತ್ತದೆ.

ಈ ನಿರ್ದಿಷ್ಟ ವೈಮಾನಿಕ ತಂತ್ರವು ಭಾರತೀಯ ಉಪಖಂಡದ ಕಳೆದುಹೋದ ಭೌಗೋಳಿಕತೆಯನ್ನು, ಅದರಲ್ಲೂ ಮುಖ್ಯವಾಗಿ ಸರಸ್ವತಿ ನದಿಯ ಪ್ರಾಚೀನ, ಒಣಗಿಹೋದ ಕಾಲುವೆಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭೌಗೋಳಿಕವಾಗಿ ಘಗ್ಗರ್-ಹಕ್ರಾ ಪೇಲಿಯೊಚಾನಲ್ ವ್ಯವಸ್ಥೆ (Ghaggar-Hakra paleochannel system) ಎಂದು ಕರೆಯಲ್ಪಡುವ ಈ ಬೃಹತ್ ಜಲಮಾರ್ಗವು, ಒಂದು ಕಾಲದಲ್ಲಿ ಇಂದಿನ ಹರಿಯಾಣ, ರಾಜಸ್ಥಾನ ಮತ್ತು ಪಾಕಿಸ್ತಾನದ ಚೋಲಿಸ್ತಾನ್ ಮರುಭೂಮಿಯಾದ್ಯಂತ ಹರಪ್ಪನ್ (ಸಿಂಧೂ ಕಣಿವೆ ನಾಗರಿಕತೆ) ವಸಾಹತುಗಳ ದಟ್ಟವಾದ ಜಾಲವನ್ನು ಪೋಷಿಸುತ್ತಿತ್ತು. ಸಾವಿರಾರು ವರ್ಷಗಳ ಅವಧಿಯಲ್ಲಿ, ಭೂಕಂಪನದ (tectonic) ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಗಳಿಂದಾಗಿ ನದಿ ಬತ್ತಿಹೋಯಿತು ಹಾಗೂ ಅದರ ಹರಿವಿನ ಹಾದಿಯು ಮರಳು ಮತ್ತು ಹೂಳಿನ ದಪ್ಪ ಪದರಗಳ ಅಡಿಯಲ್ಲಿ ಹೂತುಹೋಯಿತು. ಆದಾಗ್ಯೂ, ಈ ಪ್ರಾಚೀನ ನದಿಪಾತ್ರಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಹೋಲಿಸಿದರೆ ಇನ್ನೂ ಆಳವಾದ ಅಂತರ್ಜಲದ ತೇವಾಂಶವನ್ನು ಉಳಿಸಿಕೊಂಡಿವೆ. ಇದು ಮೇಲ್ಮೈ ಸಸ್ಯವರ್ಗದ ಆರೋಗ್ಯದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ. ವೈಮಾನಿಕ ಸಮೀಕ್ಷೆ ಮತ್ತು NIR ಇಮೇಜಿಂಗ್ ಅನ್ನು ಬಳಸುವ ಮೂಲಕ, ಸಂಶೋಧಕರು ತೇವಾಂಶದ ಈ ಉದ್ದನೆಯ, ಅಂಕುಡೊಂಕಾದ ಮಾರ್ಗಗಳನ್ನು ಪತ್ತೆಹಚ್ಚಬಹುದು. ಇದು ಸರಸ್ವತಿ ನದಿಯ ಅದೃಶ್ಯ ಹಾದಿಯನ್ನು ಪರಿಣಾಮಕಾರಿಯಾಗಿ ಮ್ಯಾಪ್ ಮಾಡುತ್ತದೆ ಮತ್ತು ನಶಿಸಿಹೋದ ಅದರ ದಡದಲ್ಲಿ ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಪ್ರಾಚೀನ ವ್ಯಾಪಾರ ಕೇಂದ್ರಗಳು ಮತ್ತು ನಗರಗಳತ್ತ ಪುರಾತತ್ತ್ವಜ್ಞರಿಗೆ ನೇರವಾಗಿ ಮಾರ್ಗದರ್ಶನ ನೀಡುತ್ತದೆ.

ಪುರಾತತ್ವ ಅವಶೇಷಗಳನ್ನು ಪತ್ತೆಹಚ್ಚಲು ವಿವಿಧ ವೈಜ್ಞಾನಿಕ ಪರಿಕರಗಳನ್ನು ಬಳಸಲಾಗುತ್ತಿದ್ದು ಅದರಿಂದ ಭೂಮಿಯ ಮೇಲಿನ ಮಣ್ಣಿನ ಗುರುತುಗಳು ಹಾಗೂ ನೆರಳಿನ ಗುರುತುಗಳು ಮತ್ತು ಬೆಳೆಯ ಗುರುತುಗಳನ್ನು ಕಂಡುಹಿಡಿಯಬಹುದಾಗಿದೆ. ನೆಲದಲ್ಲಿ ಹೂತು ಹೋಗಿರುವ ಕಂದಕ, ಗೋಡೆ, ಬೀದಿ ಮುಂತಾದವುಗಳನ್ನು ಮತ್ತು ಅವುಗಳಲ್ಲಿನ ಮಣ್ಣಿನ ರೂಪವನ್ನು ಪತ್ತೆ ಮಾಡಬಹುದಾಗಿದೆ. ಕಂದಕದ ಮಣ್ಣು ಸಡಿಲವಾದ ಕಾರಣ ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಂಡು ದಟ್ಟವರ್ಣದ್ದಾಗಿರುತ್ತದೆ. ಹಾಗೆಯೇ ಕಟ್ಟಡ, ಗೋಡೆ ಹಾಗೂ ಬೀದಿಗಳಲ್ಲಿ ಮಣ್ಣು ದೃಢವಾದ ಕಾರಣ ಅಲ್ಲಿ ತೇವಾಂಶ ಕಡಿಮೆ ಇದ್ದು ಅದು ತಿಳಿವರ್ಣದ್ದಾಗಿ ಕಾಣುತ್ತದೆ. ಇಂತಹ ವ್ಯತ್ಯಾಸಗಳನ್ನು ಮಣ್ಣಿನ ಗುರುತುಗಳು ಎಂದು ಕರೆಯುತ್ತಾರೆ. 

 ಉಪಸಂಹಾರ : ಹೀಗೆ ಆಧುನಿಕ ಉಪಕರಣಗಳನ್ನು ಬಳಸಿಕೊಂಡು  ಐತಿಹಾಸಿಕ  ಸ್ಥಳಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಭೂಮಿಯ ಒಳಗೆ ಹುದುಗಿರುವ ಪ್ರಾಚ್ಯ ಅವಶೇಷಗಳನ್ನು ಸಹ ಪತ್ತೆ ಹಚ್ಚಲು ಮತ್ತು ಡಿಜಿಟಲ್‌ ರೂಪದಲ್ಲಿ ದಾಖಲಿಸಲು ಆಧುನಿಕ ಉಪಕರಣಗಳಿದ್ದು ಗತ ಇತಿಹಾಸವನ್ನು ಅನಾವರಣಗೊಳಿಸುವ ಕುತೂಹಲ ಹೆಚ್ಚಾಗುತ್ತಲೇ ಇದೆ.

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು  (Methods of Exploration)

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು (Methods of Exploration)

ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು

(Methods of Exploration)

1. ನಕ್ಷೆಗಳ ಅಧ್ಯಯನ

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ       

               A. ಬೆಟ್ಟಗಳು

             B. ಕಣಿವೆ ಮಾರ್ಗಗಳು

             C. ನದಿಗಳು

             D. ಸರೋವರಗಳು ಮತ್ತು ಕೆರೆಗಳು

              E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು

3. ಜನಾಂಗ ವಿವರಣೆ

4. ಐತಿಹಾಸಿಕ ಸಾಹಿತ್ಯ

5. ಪ್ರಕಟಿತ ವರದಿಗಳು

6. ಸ್ಥಳ ಪುರಾಣಗಳು, ದಂತ ಕಥೆಗಳು

7. ಸ್ಥಳ ನಾಮಗಳು

ಕ್ಷೇತ್ರ ಕಾರ್ಯವನ್ನು ಮಾಡುವಾಗ ಅನುಸರಿಸುವ ತಂತ್ರ, ವಿಧಾನ ಮತ್ತು ಅದಕ್ಕೆ ಬೇಕಾಗುವ ಸಿಬ್ಬಂದಿಗಳನ್ನು ಸರ್ವೇಕ್ಷಣೆ ಅವಲಂಬಿಸಿದೆ. ಸಂಶೋಧಕರು ಪ್ರಮುಖವಾಗಿ ನದಿ ಮುಖಗಳು, ಮರಳು, ಶೇಖರಣೆಯ ಸ್ತರಗಳು, ಶಿಲೆಗಳು ಹಾಗೂ ಮಣ್ಣಿನ ಸ್ವರೂಪ, ಪಳೆಯುಳಿಕೆಗಳು, ಕಲ್ಲಿನ ಉಪಕರಣಗಳು ಮುಂತಾದವುಗಳ ಕುರಿತು ಅಧ್ಯಯನ ಮಾಡಬೇಕು. ಸರ್ವೇಕ್ಷಣ ಮಾಡುವಾಗ ತಾವು ಮಾಡುವ ಸರ್ವೆಯ ಭೂಮಿಯ ಸ್ವರೂಪ ಹಾಗೂ ಭೂವಿಜ್ಞಾನದ ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕು. ಇತಿಹಾಸ ಪೂರ್ವಕಾಲದ ಸರ್ವೆ ಕಾರ್ಯದಲ್ಲಿ ಸ್ಥಳ ಪುರಾಣಗಳಾಗಲಿ ಅಥವಾ ಸ್ಥಳೀಯ ಮಾರ್ಗದರ್ಶಕರಿಂದಾಗಲೀ ಯಾವುದೇ ಮಾಹಿತಿಗಳು ಸಿಗದೇ ಹೋಗಬಹುದು. ಆದರೆ ಕೆಲವು ಕಡೆಗಳಲ್ಲಿ ದನ ಮೇಯಿಸುವವರು, ಬೇಟೆಗಾರರು ಗುಹಾಂತರ ದೇವಾಲಯಗಳನ್ನು ಶೋಧಿಸಲು ಸಹಾಯ ನೀಡಬಹುದು.

 ಆದರೆ ಇತಿಹಾಸ ಕಾಲದ ಸ್ಥಳಗಳನ್ನು ಸರ್ವೆ ಮಾಡುವಾಗ ಸಾಹಿತ್ಯ, ಶಾಸನ ಹಾಗೂ ಸಾಂಪ್ರದಾಯಿಕ ಸಾಮಗ್ರಿಗಳನ್ನು ಉಪಯೋಗಿಸಬಹುದು. ಅನ್ವೇಷಕರು ಯಾವ ಪ್ರದೇಶದಲ್ಲಿ ಅನ್ವೇಷಣೆ ಮಾಡಲು ಬಯಸುವರು ಆ ಪ್ರದೇಶದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿರಬೇಕು. ಸರ್ವೆ ಕಾರ್ಯದಲ್ಲಿ ಯಾವ ವಸ್ತುಗಳು ನೆರವಾಗಬಹುದು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.

1. ನಕ್ಷೆಗಳ ಅಧ್ಯಯನ:

ಭಾರತದಲ್ಲಿ ಪುರಾತತ್ವ ಸ್ಥಳಗಳನ್ನು ಅನ್ವೇಷಣೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞನಿಗೆ ಹಲವಾರು ನಮೂನೆಗಳು ನೆರವಾಗಬಲ್ಲವು. ಅವುಗಳಲ್ಲಿ ಅತಿ ಮುಖ್ಯವಾಗಿ ನೆರವಾಗುವ ನಮೂನೆಗಳೆಂದರೆ ನಕ್ಷೆಗಳು. ಈ ನಕ್ಷೆಗಳನ್ನು ಬೇರೆ ಬೇರೆ ರಾಜ್ಯಗಳು, ಜಿಲ್ಲೆಗಳು ತಾಲೂಕುಗಳು ಹಾಗೂ ಗ್ರಾಮಗಳಿಗೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ತಯಾರಿಸಿ ಸಂಶೋಧಕರಿಗೆ ನೀಡುತ್ತದೆ. ಇವುಗಳು ಸರ್ವೇಕ್ಷಣ ಮಾಡುವ ಅಧಿಕಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುತ್ತವೆ. ಅವುಗಳಲ್ಲಿ ಫೋಟೋಶೀಟುಗಳು ಎನ್ನುವ ನಕ್ಷೆಗಳು ಪ್ರಮುಖವಾಗಿವೆ. ಇವುಗಳು 1 ಇಂಚಿಗೆ 4 ಮೈಲಿ ಸ್ಕೇಲನ್ನು ಹೊಂದಿದ್ದು ಇವುಗಳು ನಗರಗಳು, ಗ್ರಾಮಗಳು, ಕೋಟೆ-ಕೊತ್ತಲುಗಳು, ಹೆದ್ದಾರಿಗಳು, ಚಿಕ್ಕ-ಚಿಕ್ಕ ರಸ್ತೆಗಳು, ಬಂಡಿದಾರಿಗಳು, ರೈಲು ದಾರಿಗಳು ಹಾಗೂ ನಿಲ್ದಾಣಗಳ ಕುರಿತು ಮಾಹಿತಿ ನೀಡುತ್ತವೆ. ಹೀಗಾಗಿ ಅನ್ವೇಷಕನು ತಾನು ಸಾಗುವ ದಾರಿಯನ್ನು ಸುಲಭವಾಗಿ ತಿಳಿಸುವ ಕೆಲಸವನ್ನು ಈ ನಕ್ಷೆಗಳು ಮಾಡುತ್ತವೆ. ಇದು ಅಲ್ಲದೆ ವಿಶ್ರಾಂತಿ ಧಾಮಗಳು, ಪ್ರವಾಸಿ ಬಂಗಲೆಗಳು, ಧರ್ಮ ಶಾಲೆಗಳು, ಛತ್ರಗಳು ಸಹ ಫೋಟೋಶೀಟ್‌ಗಳ ಮೂಲಕ ಪತ್ತೆಹಚ್ಚಲು ನೆರವಾಗುತ್ತದೆ. ಹಾಗೆಯೇ ದೇವಾಲಯಗಳು, ಮಸೀದಿಗಳು, ಚರ್ಚುಗಳು ಸಹ ಫೋಟೋಶೀಟ್‌ಗಳಲ್ಲಿ ಸೂಚಿಸಲ್ಪಟ್ಟಿರುತ್ತವೆ.

ನಕ್ಷೆಗಳಲ್ಲಿ ಭೂ ಮೇಲ್ಮೈ ಲಕ್ಷಣಗಳು, ನದಿಗಳು, ಗಿರಿಧಾಮಗಳು, ಸರೋವರಗಳು, ಬುಗ್ಗೆಗಳು ಹಾಗೂ ಅರಣ್ಯಗಳನ್ನು ಸೂಚಿಸಲಾಗಿರುತ್ತದೆ. ನದಿ ಸರೋವರ, ನೀರಿನ ಬುಗ್ಗೆಗಳು ಇರುವ ಪ್ರದೇಶಗಳಲ್ಲಿ ಹಳೆಯ ಶಿಲಾಯುಗದ ಕುರುಹುಗಳು ಇದ್ದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಶತಮಾನಕ್ಕಿಂತ ಹಿಂದಿನ ನಕ್ಷೆಗಳು ಹಾಗೂ ಇಂದಿನ ನಕ್ಷೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಹಳೆಯ ಕಾಲದ ನಕ್ಷೆಗಳಲ್ಲಿ ಶಿಲಾಯುಗದ ಸಮಾಧಿ ಸ್ಥಳಗಳನ್ನು ಸೂಚಿಸಲಾಗಿರುತ್ತದೆ. ಆದರೆ ಹೊಸ ನಕ್ಷೆಗಳಲ್ಲಿ ವಿಪರೀತವಾದ ಕೃಷಿ ಕಾರ್ಯಗಳ ಪರಿಣಾಮವಾಗಿ ಅಂತಹ ನೆಲೆಗಳು ಅವನತಿ ಹೊಂದಿರುವುದು ಗೊತ್ತಾಗುತ್ತದೆ. ಮೊಗಲರು, ಪೋರ್ಚುಗೀಸರು, ಆದಿಲ್‌ಶಾಹಿ, ಮರಾಠರು ಹಾಗೂ ಆಂಗ್ಲರ ಕಾಲದ ಹಳೆಯ ನಕ್ಷೆಗಳು ನಮಗೆ ದೊರಕಿದ್ದು ಅವುಗಳಲ್ಲಿ ಆಯಾ ರಾಜರುಗಳ ಅವಧಿಯಲ್ಲಿನ ಕೋಟೆಗಳು, ದೇವಾಲಯಗಳು, ಮಸೀದಿಗಳು, ಸ್ಮಶಾನಗಳು, ಬೀದಿಗಳು ರಣರಂಗಗಳು ಹಾಗೂ ಸಮಾಧಿಗಳನ್ನು ಸೂಚಿಸಲಾಗಿರುತ್ತದೆ.

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ:

ರಾಜಕೀಯ ಅಥವಾ ಸಾಮಾನ್ಯ ನಕ್ಷೆಗಳನ್ನು ನೋಡಿದಾಗ ಆಯಾ ಪ್ರದೇಶಗಳಲ್ಲಿ ಸಿಗುವ ಖನಿಜಗಳು, ಮಣ್ಣುಗಳು, ಪ್ರಾಣಿಗಳು ಹಾಗೂ ಸಸ್ಯ ರಾಶಿಯ ವಿವರಗಳು ಅಲ್ಲಿರುವುದಿಲ್ಲ. ಬದಲಾಗಿ ಪ್ರಾಕೃತಿಕ ನಕ್ಷೆಗಳಲ್ಲಿ ಮಾತ್ರ ಇಂತಹ ವಿವರಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಜಿಲ್ಲಾ‌ ಗೆಜೆಟಿಯರ್ ಹಾಗೂ ಇಂಪೀರಿಯಲ್ ಗೆಜೆಟಿಯರ್ ಮೊದಲಾದವುಗಳು ಭೂ ಮೇಲ್ಮೈ ಲಕ್ಷಣಗಳ ಅಧ್ಯಯನಕ್ಕೆ ಆಧಾರ ಗ್ರಂಥಗಳಾಗಿವೆ. ಅದರಲ್ಲೂ ಬ್ರಿಟಿಷ್ ಕಾಲದ ಗೆಜೆಟೀಯರ್ ನಲ್ಲಿ ವಿಫುಲವಾದ ಮಾಹಿತಿಗಳು ಲಭ್ಯವಿರುವ ಕೆಲವು ಭೂಮಿಯ ಮೇಲ್ಮೈಲಕ್ಷಣಗಳು ಈ ಕೆಳಗಿನಂತಿವೆ.

A. ಬೆಟ್ಟಗಳು: ಎತ್ತರವಾದ ಪ್ರದೇಶದಿಂದ ಸುತ್ತುವರೆಯಲಾದ ಬೆಟ್ಟಗುಡ್ಡಗಳು ಹೊರಗಡೆ ಪ್ರಪಂಚದ ಆಗುಹೋಗುಗಳ ಪ್ರಭಾವದಿಂದ ಮುಕ್ತವಾಗಿರುತ್ತದೆ. ಈ ಪ್ರದೇಶಗಳಲ್ಲಿ ಕೇವಲ ಆದಿವಾಸಿ ಹಾಗೂ ಬುಡಕಟ್ಟು ಜನರು ವಾಸಿಸುವುದುಂಟು. ಇವರು ನಗರ ಪ್ರದೇಶದಿಂದ ದೂರವಿದ್ದು ಆಧುನಿಕ ಸಮಾಜದ ಗಂಧಗಾಳಿಯೂ ಇವರಿಗೆ ಬೀಸುವುದಿಲ್ಲ. ಇವರ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಆಹಾರ-ವಿಹಾರ, ಬಣ್ಣ, ಉಡುಗೆ-ತೊಡುಗೆ, ನಗರ ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಪುಲೈಯಾರ್ ಎಂಬ ಆದಿವಾಸಿ ಜನರು ಅಣ್ಣಾಮಲೈ ಬೆಟ್ಟಗಳಲ್ಲಿ ಹಾಗೂ ತೋಡರು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ. ಜನಾಂಗ ವಿವರಣ ಅಧ್ಯಯನ ಮಾಡುವಾಗ ಇವುಗಳು ಪ್ರಮುಖ ಮಾಹಿತಿಗಳನ್ನು ಒದಗಿಸುತ್ತವೆ. ಇವರು ಸಾಮಾನ್ಯವಾಗಿ ಬಂಡೆಗಳ ಅಡಿಗಳು ಮತ್ತು ಗುಹೆಗಳಲ್ಲಿ ತಮ್ಮ ಆಶ್ರಯ ಸ್ಥಾನಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಇವುಗಳೇ ಆದಿಮಾನವನವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿದ್ದವು. ತಮಿಳುನಾಡಿನ ಅತ್ತಿರಂಪಾಕಂ ಎಂಬ ಗ್ರಾಮದ ಹತ್ತಿರ ಗುಡಿಯಂ ಎಂಬ ನೆಲೆಯು, ಮಧ್ಯಪ್ರದೇಶದ ಹೋಶಂಗಾಬಾದ್ನ ಬಂಡೆಗಳ ಆಶ್ರಯ ತಾಣಗಳು, ಕರ್ನಾಟಕದ ಬಾದಾಮಿಯ ಸಿಡಿಲ ಪಡಿ ಎಂಬ ಗುಹೆ, ಆಂಧ್ರಪ್ರದೇಶದ ಕರ್ನೂಲಿನ ಗುಹೆಗಳು ಮಾನವ ವಸತಿಯ ಯೋಗ್ಯ ಸ್ಥಳಗಳಾಗಿದ್ದವು. ತೆಕ್ಕಲಕೋಟೆಯಲ್ಲಿ ನೂತನ ಶಿಲಾಯುಗದ ವಸತಿ ಸಮುಚ್ಚಯಗಳು ಕಂಡುಬಂದಿವೆ.

B. ಕಣಿವೆ ಮಾರ್ಗಗಳು: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಬರಲು ಮತ್ತು ಒಂದು ದೇಶದ ಸಂಸ್ಕೃತಿಯನ್ನು ಇನ್ನೊಂದು ದೇಶಕ್ಕೆ ಪ್ರಸಾರ ಮಾಡಲು ಪ್ರಾಚೀನಕಾಲದಲ್ಲಿ ಕಣಿವೆ ಮಾರ್ಗಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದವು. ಕಣಿವೆ ಮಾರ್ಗಗಳು ಎರಡು ದೇಶಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿಯೇ ಪರ್ಶಿಯನ್ನರು, ಶಕರು, ಹೂಣರು, ಪಾರ್ಥಿಯನ್ನರು, ಗ್ರೀಕರು, ಸಿಥಿಯನ್ನರು, ಕುಷಾನರು, ಹೂಣರು, ಟರ್ಕರು, ಮಂಗೋಲರು, ಅರಬ್ಬರು, ಮುಸ್ಲಿಂರು ಹಾಗೂ ಮೊಘಲರು ಒಬ್ಬರಾದ ನಂತರ ಮತ್ತೊಬ್ಬರಂತೆ ಭಾರತವನ್ನು ಪ್ರವೇಶಿಸಿದರು. ಹೀಗೆ ಅವರು ಭಾರತಕ್ಕೆ ಲಗ್ಗೆ ಇಡಲು ವಾಯುವ್ಯ ದಿಕ್ಕಿನಲ್ಲಿನ ಪ್ರಮುಖವಾದ ಎರಡು ಕಣಿವೆಗಳಾದ ಖೈಬರ್ ಹಾಗೂ ಬೋಲಾನ್‌ಗಳು ಸೂಕ್ತವಾದ ರಸ್ತೆ ಮಾರ್ಗವನ್ನು ಒದಗಿಸಿದವು.

ಪಾಲ್ಗಾಟ್ ಕಣಿವೆ ಕೇರಳ ಹಾಗೂ ತಮಿಳುನಾಡಿನ ನಡುವೆ ಸಂಪರ್ಕವನ್ನು ಏರ್ಪಡಿಸಿದರೆ, ಜೋ-ಜಿಲಾ ಕಣಿವೆಯು ಲಡಾಖ್‌ ಹಾಗೂ ಕಾಶ್ಮೀರಿ ಕಣಿವೆಗಳನ್ನು ಜೋಡಿಸುತ್ತದೆ. ರೋಹ್ಟಾಂಗ್‌ ಕುಲು ಕಣಿವೆಯನ್ನು ಲಾಹೌರ್‌ ಹಾಗೂ ಸ್ಪಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ. ನಾಥು-ಲಾ ಭಾರತದ (ಸಿಕ್ಕಿಂ) ಹಾಗೂ ಚೀನಾವನ್ನು (ಟಿಬೆಟ್) ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಬನಿಹಾಲ್ ಪಾಸ್ ಜಮ್ಮು ಕಾಶ್ಮೀರ್ ಕಣಿವೆಯನ್ನು ಸಂಪರ್ಕಿಸುತ್ತದೆ. ಬಾರಾ-ಲಾಚಾ-ಲಾ ಕಣಿವೆಯು ಲೇಹ್ ಮತ್ತು ಮನಾಲಿಗಳನ್ನು ಜೋಡಿಸುತ್ತದೆ. ಹೀಗೆ ಕಣಿವೆ ಮಾರ್ಗಗಳ ಜ್ಞಾನವು ಪ್ರಾಚೀನ ಸಂಚಾರ ಹಾಗೂ ಸಾಂಸ್ಕೃತಿಕ ಸಂಪರ್ಕ ಜಾಲಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

C. ನದಿಗಳು :  ಮಾನವನಿಗೆ ಅನ್ನ, ವಸತಿ, ಬಟ್ಟೆಗಳಷ್ಟೇ ಅಗತ್ಯವಾದದ್ದು ನೀರು. ನೀರು ಕೃಷಿಗಾಗಿ, ಕುಡಿಯಲು, ದನ ಕರುಗಳಿಗೆ ಕುಡಿಯಲು, ವಿದ್ಯುತ್ ಶಕ್ತಿ ಉತ್ಪಾದನೆಗಾಗಿ, ಮನರಂಜನೆಗಾಗಿ ಹಾಗೂ ಮೀನು ಸಾಕಾಣಿಕೆಗೆ ಬೇಕು. ಎಲ್ಲಿ ನದಿಗಳು ಇರುತ್ತವೆಯೋ ಅಲ್ಲಿ ಹೆಚ್ಚು ಜನವಸತಿ ಕಂಡುಬರುತ್ತದೆ. ನದಿಗಳು ಸದಾಕಾಲ ಜನರಿಗೆ ನೀರನ್ನು ಒದಗಿಸುವುದರಿಂದ ಅವುಗಳು ಜನವಸತಿ ಯೋಗ್ಯ ಪ್ರದೇಶಗಳಾಗಿವೆ. ಪ್ರಾಚೀನ ನೆಲೆಗಳು ಸಾಮಾನ್ಯವಾಗಿ ನದಿಗಳ ದಂಡೆಯ ಮೇಲೆ ಕಂಡುಬಂದಿವೆ. ನದಿ ಮಟ್ಟಗಳನ್ನು ಹಾಗೂ ಅಲ್ಲಿ ದೊರೆಯುವ ವಸ್ತುಗಳನ್ನು ಅನ್ವೇಷಣೆ ಮಾಡುವವರು ಸರಿಯಾಗಿ ಟಿಪ್ಪಣಿ ಮಾಡಿಕೊಳ್ಳಬೇಕು..

ಇತಿಹಾಸ ಕಾಲದಲ್ಲಿಯೂ ಸಹ ನದಿಗಳ ದಂಡೆಯ ಮೇಲೆ ಜನವಸತಿ ಕೇಂದ್ರಗಳು ಸ್ಥಾಪನೆಯಾದವು. ಸಿಂಧೂ ನಾಗರಿಕತೆಯು ಬೆಳೆದು ಬಂದದ್ದು ಸಿಂಧೂ ನದಿಯ ದಂಡೆಯ ಮೇಲೆ. ಹಳೆಯ ಶಿಲಾಯುಗ ಹಾಗೂ ತಾಮ್ರಯುಗಗಳ ವಸತಿ ಕೇಂದ್ರಗಳು ಸಹ ನದಿ ದಂಡೆಯ ಮೇಲೆ ಸ್ಥಾಪನೆಯಾದದ್ದು ಒಂದು ಇತಿಹಾಸ. ಅಲಹಾಬಾದ್, ಅಯೋಧ್ಯೆ, ಪಾಟಲಿಪುತ್ರ, ಬನಾರಸ್, ಪ್ರಯಾಗ್, ಆಗ್ರಾ, ಲಾಹೋರ್ ಹಾಗೂ ಮುಲ್ತಾನ್‌ಗಳು ಜನವಸತಿ ಕೇಂದ್ರಗಳಾಗಿ ಬೆಳೆದು ಬಂದದ್ದು ನದಿಯ ದಡದಲ್ಲಿಯೇ. ಮೌರ್ಯ, ಗುಪ್ತ, ಉಜ್ಜಯಿನಿ, ವರ್ಧನ, ದೆಹಲಿ ಸುಲ್ತಾನರು, ಮೊಘಲರು ಹಾಗೂ ಆಫ್ಘನರು ಆಳ್ವಿಕೆ ಮಾಡಿದುದು ಇದೇ ನದಿಯ ದಡದಲ್ಲಿ. ಕಳಿಂಗ, ಕಣ್ವ, ಕನೌಜ್, ಪಾಣಿಪತ್, ತರೈನ್‌, ಪ್ಲಾಸಿ ಹಾಗೂ ಘೋಗ್ರಾ ಕದನಗಳು ನದಿಯ ದಂಡೆಗಳ ಮೇಲೆ ನಡೆದವು.

ಮಲಪ್ರಭಾ ನದಿಯ ದಂಡೆಯ ಮೇಲೆ ಪಟ್ಟದಕಲ್ಲು ಹಾಗೂ ಐಹೊಳೆ,

ತುಂಗಾಭದ್ರಾ ನದಿಯ ದಂಡೆಯ ಮೇಲೆ ಹಂಪೆ (ವಿಜಯನಗರ ಸಾಮ್ರಾಜ್ಯ),

ಕಾವೇರಿ ನದಿಯ ದಂಡೆಯ ಮೇಲೆ ತಲಕಾಡು (ಗಂಗರ ರಾಜಧಾನಿ), ಊರೈಯೂರು (ಚೋಳರ ರಾಜಧಾನಿ),

ವೈಗೈ ನದಿಯ ತೀರದ ಮಧುರೈ (ಪಾಂಡ್ಯ ರಾಜಧಾನಿ) ಮೊದಲಾದವುಗಳು ನದಿಯ ತೀರದ ನೆಲೆಗಳಾಗಿದ್ದವು.

D. ಸರೋವರಗಳು ಮತ್ತು ಕೆರೆಗಳು: ಸರೋವರಗಳು ಸಹ ಜನವಸತಿಗೆ ಹೆಸರುವಾಸಿಯಾಗಿದ್ದವು. ಅನೇಕ ಕೆರೆಗಳ ದಂಡೆಯ ಮೇಲೆ ಶಿಲಾಯುಗದ ಅವಶೇಷಗಳು ದೊರಕಿರುವುದು ಒಂದು ವಿಶೇಷವಾಗಿದೆ. ಸ್ವಿಜ್ಜರ್‌ಲ್ಯಾಂಡಿನ ಸರೋವರಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳು ದೊರಕಿವೆ. ತಮಿಳುನಾಡಿನ ಸಮುದ್ರದ ದಡದಲ್ಲಿ ಪ್ರಾಚೀನ ಲಾಗೂನುಗಳು ಇದ್ದವು. ಅವುಗಳನ್ನೇ ಟೇರಿ ನಿವೇಶನಗಳೆಂದು ಕರೆಯಲಾಗಿದೆ. ಇವು ಸೂಕ್ಷ್ಮ ಶಿಲಾಯುಗದ ಅವಶೇಷಗಳಾಗಿದ್ದವು. ಇನ್ನು ಡೆಕ್ಕನ್ ಪ್ರದೇಶವು ಕೆರೆಗಳಿಗೆ ಹೆಸರುವಾಸಿಯಾಗಿತ್ತು. ಇಲ್ಲಿ ಕೆರೆ ನೀರಾವರಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ದಕ್ಷಿಣದ ಪ್ರತಿ ಗ್ರಾಮಗಳು ಒಂದೊಂದು ಕೆರೆಗಳನ್ನು ಹೊಂದಿದ್ದವು. ಹೀಗಾಗಿ ಅಂದಿನ ಗ್ರಾಮಗಳಿಗೆ ಕೆರೆಯ ಹೆಸರನ್ನು ಇಡಲಾಗುತ್ತಿತ್ತು.

ಉದಾ:  ಹೂವಿನಕೆರೆ, ಹೊಳಲ್‌ ಕೆರೆ, ಚಳ್ಳಕೆರೆ, ತರೀಕೆರೆ, ಅರಸೀಕೆರೆ, ತುರುವೇಕೆರೆ, ತಾವರೆಕೆರೆ, ಹಳ್ಳೀಕೆರೆ, ಮತ್ತೀಕೆರೆ, ಹೊಸಕೆರೆ, ನೊಣವಿನ ಕೆರೆ, ಅರಕೆರೆ, ಕಂಚೀಕೆರೆ, ಬೆಂಡಿಕೆರೆ, ಹಿರೇಕೆರೆ, ಗುರುವನಕೆರೆ, ಕೆಂಚನಕೆರೆ, ಸೂಳೆಕೆರೆ, ಆನೆಕೆರೆ, ಪಡುಕೆರೆ, ಪಾಂಡುಕೆರೆ, ಕಾಫಿ ಕೆರೆ, ತೋವಿನಕೆರೆ, ಕಡಲ ಕೆರೆ, ತೂಬಿನಕೆರೆ, ಚಿಕ್ಕ ತೊಟ್ಲುಕೆರೆ, ಜೋಗಣ್ಣನಕೆರೆ, ಮೊದಲಾದವುಗಳು. ಹಲವಾರು ಶಿಲಾಗೋರಿಗಳು ಕೆರೆಗಳ ದಂಡೆಯ ಮೇಲಿರುವುದು ಗಮನಾರ್ಹವಾಗಿದೆ.

E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು:

ಪುರಾತತ್ವ ವಸ್ತುಗಳ ಸರ್ವೇಕ್ಷಣ ಮಾಡುವವರು ಹಳೆಯ ಶಿಲಾಯುಗದ ಮಾನವ ಬೇಟೆಯಾಡಲು, ಮೀನು ಹಿಡಿಯಲು ಹಾಗೂ ಮನೆಬಳಕೆಯ ಉಪಕರಣಗಳನ್ನು ತಯಾರಿಸಲು ಯಾವ ಕಲ್ಲುಗಳನ್ನು ಬಳಕೆ ಮಾಡುತ್ತಿದ್ದನೆಂಬುದನ್ನು ತನ್ನ  ಅಧ್ಯಯನದ ಸಂದರ್ಭದಲ್ಲಿ ಸೂಕ್ತವಾಗಿ ಗಮನಿಸಬೇಕು. ಹಾಗಾಗಿ ಅವನಿಗೆ ತಾನು ಅಧ್ಯಯನ ಮಾಡುವ ಪ್ರದೇಶದ ಭೂ ಮೇಲ್ಮೈ ಲಕ್ಷಣಗಳ ಕುರಿತು ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಹಳೆಯ ಶಿಲಾಯುಗದ ಮಾನವನು ಪ್ರಾಣಿಗಳ ಹಾಗೆ ಜೀವನವನ್ನು ನಡೆಸುತ್ತಿದ್ದು ಒರಟಾದ ಕಚ್ಚಾ ಆಯುಧಗಳನ್ನು ಬಳಸುತ್ತಿದ್ದನು. ಅವನನ್ನು ʻʻಕ್ವಾರ್ಟಜೈಟ್ ಮಾನವʼʼ ಎಂದು ಕರೆಯುತ್ತಿದ್ದರು. ಮಧ್ಯಶಿಲಾಯುಗದಲ್ಲಿ ಕ್ಯಾಲ್ಸೆಡೆನಿ ಹಾಗೂ ಸಿಲಿಕೇಟ್ ಶಿಲೆಗಳನ್ನು ಬಳಸುತ್ತಿದ್ದನು. ನೂತನ ಶಿಲಾಯುಗದಲ್ಲಿ ಒರಟು ಕಲ್ಲಿನ ಬದಲಾಗಿ ನುಣುಪಾದ ಶಿಲೆಯನ್ನು ಬಳಸಿದನು. ಚಾಲ್ಕೋಲಿಥಿಕ್ ಯುಗದಲ್ಲಿ ಲೋಹದ ಉಪಕರಣಗಳು ಬಳಕೆಗೆ ಬಂದವು. ಅಂದರೆ ತಾಮ್ರ ಹಾಗೂ ಕಲ್ಲುಗಳನ್ನು ಮಿಶ್ರಣ ಮಾಡಿ ಉಪಕರಣ ತಯಾರಿಸಲು ಆರಂಭಿಸಿದರು. ಕಬ್ಬಿಣದ ಯುಗದಲ್ಲಿ ಕಂಚು ಹಾಗೂ ತಾಮ್ರದ ಲೋಹಗಳ ಬದಲಾಗಿ ಕಬ್ಬಿಣವನ್ನು ಉಪಯೋಗ ಮಾಡಲಾಯಿತು. ಆಕ್ರೂಂಜಿಕೇರ್‌ ಎಂಬ ಸ್ಥಳದಲ್ಲಿ ಕಬ್ಬಿಣ ಯುಗದ ಆಭರಣಗಳು ದೊರಕಿವೆ. ಹೀಗಾಗಿ ಅನ್ವೇಷಣೆ ಮಾಡುತ್ತಿರುವ ಸ್ಥಳಗಳಲ್ಲಿ ದೊರೆಯುವ ಶಿಲೆಗಳ ಕುರಿತು ಅನ್ವೇಷಣಾ ಕಾರನಿಗೆ ಅರಿವು ಬಹಳ ಮುಖ್ಯವಾಗಿರುತ್ತದೆ.

3.  ಜನಾಂಗ ವಿವರಣೆ:

ಕಾಡು ಹಾಗೂ ಬೆಟ್ಟಗುಡ್ಡಗಳಲ್ಲಿ ಬೇಟೆಗಾರಿಕೆ, ಆಹಾರ ಸಂಗ್ರಹಣೆ ಮತ್ತು ಕೃಷಿ ಕಾರ್ಯಗಳಲ್ಲಿ ನಿರತರಾಗಿರುವ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಿಗೆ ಹೋದ ಪುರಾತತ್ವ ಅನ್ವೇಷಕನು ಈ ಜನರ ಜೀವನದ ಕುರಿತು ಸಂಪೂರ್ಣ ವಿವರಗಳನ್ನು ಸಂಗ್ರಹಿಸಬೇಕು. ಇದು ಶಿಲಾಯುಗದ ಕಾಲದ ನೆಲೆಗಳನ್ನು ಅನ್ವೇಷಣೆ ಮಾಡಿದಾಗ ಸಿಗುವ ಸಾಂಸ್ಕೃತಿಕ ಅವಶೇಷಗಳ ಜೊತೆಗೆ ಹೋಲಿಕೆ ಮಾಡಿ ಒಂದು ತೀರ್ಮಾನಕ್ಕೆ ಬರುವುದು ಸುಲಭವಾಗುತ್ತದೆ.

4. ಐತಿಹಾಸಿಕ ಸಾಹಿತ್ಯ:

ಯಾವುದೇ ಒಂದು ಪ್ರದೇಶದ ಪುರಾತತ್ವ ನಿವೇಶನಗಳನ್ನು ಕಂಡುಹಿಡಿಯಲು ಹೊರಡುವ ಮೊದಲು ಆ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು. ಉತ್ಖನನಗಳು, ನಾಣ್ಯಗಳು, ಮಡಿಕೆ ಕುಡಿಕೆಗಳು, ದಿನ ಬಳಕೆಯ ವಸ್ತುಗಳು ಹಾಗೂ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಪ್ರಾಚೀನ ಕೃತಿಗಳಾದ ಮಹಾಕಾವ್ಯಗಳು, ಪ್ರವಾಸಿ ಕಥನಗಳು, ಶಾಸನಗಳು, ನಿಶಧಿಗಲ್ಲುಗಳು, ಸತಿಗಲ್ಲುಗಳು ಮುಂತಾದವುಗಳ ಸರ್ವೆ ಕಾರ್ಯಕ್ಕೆ ಅಗತ್ಯವಿರುವ ಹಿನ್ನೆಲೆಯನ್ನು ಒದಗಿಸುತ್ತವೆ. ಬೌದ್ಧ ಸಾಹಿತ್ಯವು ಬೌದ್ಧ ನೆಲೆಗಳನ್ನು, ಜೈನ ಸಾಹಿತ್ಯವು ಜೈನ ನೆಲೆಗಳನ್ನು ಹಾಗೂ ರಾಮಾಯಣ ಹಾಗೂ ಮಹಾಭಾರತಗಳು ಸಿಂಧೂ-ಗಂಗಾ ಬಯಲಿನ ಶಿಲಾಯುಗದ ಕಾಲದ ನೆಲೆಗಳನ್ನು ಸಂಶೋಧನೆಯನ್ನು ಮಾಡಲು ಸಹಾಯಕವಾಗುತ್ತದೆ. ಪ್ಲಿನಿ, ಸ್ಟ್ರಾಬೋ ಹಾಗೂ ಟಾಲಾಮಿ ಮುಂತಾದವರು ಪ್ರಾಚೀನ ಭೂಗೋಳಶಾಸ್ತ್ರದ ಕುರಿತು ಬರೆದ ಬರಹಗಳು ಕ್ರಿ.ಶ ಆರಂಭದ ಕಾಲದ ನೆಲೆಗಳನ್ನು, ಹಲವಾರು ಪಟ್ಟಣಗಳನ್ನು, ವ್ಯಾಪಾರಿ ಕೇಂದ್ರಗಳನ್ನು ಹಾಗೂ ಬಂದರುಗಳನ್ನು ಪತ್ತೆ ಮಾಡಲು ಸಹಾಯಕವಾಗಿದೆ. ಚೀನಿ ಪ್ರವಾಸಿಗರಾದ ಹ್ಯೂವೆನ್‌ ತ್ಸ್ಯಾಂಗ್‌, ಇತ್ಸಿಂಗ್‌ ಹಾಗೂ ಫಾಹಿಯಾನ್‌ ಅವರ ಬರವಣಿಗೆಗಳು ಉತ್ತರ ಭಾರತದ ಬೌದ್ಧ ನೆಲೆಗಳನ್ನು ಶೋಧಿಸಲು ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮರಿಗೆ ಸಾಧ್ಯವಾಯಿತು. ಚಿತ್ರದುರ್ಗದ ಬ್ರಹ್ಮಗಿರಿ, ಸಿದ್ದಾಪುರ, ಜಟ್ಟಿಂಗ ರಾಮೇಶ್ವರ ಮುಂತಾದವಲ್ಲದೆ ಅಶೋಕನ ಶಾಸನಗಳ ಆಧಾರದ ಮೇಲೆ ʻಇಸಿಲಾʼ ಎಂಬ ನಗರವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಕೊಪ್ಪಳ, ಮಸ್ಕಿಗಳಲ್ಲಿಯೂ ಅಶೋಕನ ಶಾಸನಗಳು ದೊರಕಿದ್ದು ಇಲ್ಲಿಯೂ ಸಹ ಇತಿಹಾಸ ಕಾಲದ ವಸತಿಗಳಿದ್ದವು ಎಂಬುದು ಪುರಾತತ್ವ ಅನ್ವೇಷಣೆಯಿಂದ ಕಂಡುಬಂದಿದೆ.

5. ಪ್ರಕಟಿತ ವರದಿಗಳು:

ಒಂದು ಪ್ರದೇಶದ ಪುರಾತತ್ವ ಸಂಶೋದನೆಯನ್ನು ಕೈಗೊಳ್ಳುವ ಮುನ್ನ ಈಗಾಗಲೇ ನಡೆದಿರುವ ಕ್ಷೇತ್ರ ಸರ್ವೆಕಾರ್ಯಗಳ ಪೂರ್ಣ ಮಾಹಿತಿಯನ್ನು ಓದಿಕೊಂಡು ಮಹತ್ವದ ದಾಖಲೆಗಳನ್ನು ಸಂಗ್ರಹ ಮಾಡಿಕೊಳ್ಳಬೇಕಾದದ್ದು ಅನ್ವೇಷಕರ ಕರ್ತವ್ಯವಾಗಿದೆ. ಈ ಹಿಂದೆ ಪುರಾತತ್ವಶಾಸ್ತ್ರಜ್ಞರು ತಮ್ಮ ಸರ್ವೇ ಸಮಯದಲ್ಲಿ ದಾಖಲು ಮಾಡಿಕೊಂಡಿದ್ದ ವರದಿಗಳು, ಲೇಖನಗಳು, ಟಿಪ್ಪಣಿಗಳು ಹಾಗೂ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಕಳೆದ ಶತಮಾನದಲ್ಲಿ ರಾಬರ್ಟ್ ಬ್ರೂಸ್‌ಫ್ರೂಟ್ ಪ್ರಕಟಿಸಿದ Pree and Protohistoric Antiquities of Madras Presidency  ರಾಬರ್ಟ್ ಸಿಗಲ್ಲರ ʻʻ Antiquarian Remains in South India ʼʼ ಬಿ.ಎಲ್ ರೈಸ್ ರವರ ಪುರಾತತ್ವ ಅಧ್ಯಯನ, ಬಿಬ್ಲಿಯಾಥಿಕಾ, ʻʻಕರ್ನಾಟಕ ಎಫಿಗ್ರಾಫಿಯ ಕರ್ನಾಟಿಕ ʻʻಮೈಸೂರು ಇನ್ಸ್ಕ್ರಿಪ್ಷನ್ʼʼ ಆರ್ ನರಸಿಂಹಾಚಾರ್ ರವರ Mysore Archaolegical Reportʼʼ, ಆರ್.ಶ್ಯಾಮಶಾಸ್ತ್ರಿಗಳ ʻʻದಿ ಕಾಂತರಾಜ ವಿಜಯʼʼ ಎಂ ಹೆಚ್ ಕೃಷ್ಣ ರವರ ʻʻಹೈದರ್‌ನಾಮ, ಶಕ್ತಿ ಸುದರ್ಶನ, ಮೈಸೂರು ಕೈಪಿಯತ್ತು, ಎಲ್.ನರಸಿಂಹರಾಜರವರ ಎಫಿಗ್ರಾಫಿಯಾ ಕರ್ನಾಟಕʼʼ ಡಾ|| ಎಂ ಶೇಷಾದ್ರಿ ʻʻನವಾಶಿಲಾಯುಗದ ಸಂಸ್ಕೃತಿʼʼ ಡಾ|| ಎಂ.ಎಸ್ ನಾಗರಾಜರವರ MRA ವರದಿ, ಆ ಸುಂದರ ಅವರ ʻʻಪ್ರಬಂಧಗಳುʼʼ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಕಟಿಸಿದ ವಾರ್ಷಿಕ ವರದಿಗಳು, ರಾಜ್ಯ ಸರ್ಕಾರದ ಪ್ರಕಟಣೆಗಳು, ವಾರ್ಷಿಕ ವರದಿಗಳು, ಮೈಸೂರು, ತಿರುವಂಕೂರು, ಕೊಚ್ಚಿನ್ ಹಾಗೂ ಬರೋಡಾ ರಾಜರ ಪುರಾತತ್ವ ವರದಿಗಳು, ಪುರಾತತ್ವ ಸರ್ವೇಕ್ಷಣೆಗೆ ಸಹಾಯಕವಾಗಿವೆ.

ಅದರಂತೆ ರಾಜ್ಯ ಪುರಾತತ್ವ ಇಲಾಖೆಗಳು ಪುರಾತತ್ವ ಸಂಸ್ಥೆಗಳು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳ ಪುರಾತತ್ವ ಇಲಾಖೆಗಳು, ಪುರಾತತ್ವ ಸಂಶೋಧಕರಿಗೆ ಆಕರ ಗ್ರಂಥಗಳನ್ನು ಒದಗಿಸುತ್ತವೆ.

6. ಸ್ಥಳ ಪುರಾಣಗಳು ದಂತ ಕಥೆಗಳು:

ದೇಶದ ಬೇರೆ ಬೇರೆ ಊರುಗಳು, ಸ್ಥಳಗಳು ಹಾಗೂ ನಗರ ಪಟ್ಟಣಗಳಲ್ಲಿ ಅವುಗಳದೇ ಆದ ಸ್ಥಳ ಪುರಾಣಗಳು, ದಂತಕಥೆಗಳು, ಜಾನಪದ ಗೀತೆಗಳು, ಜಾನಪದ ಕಥೆಗಳು, ಲಾವಣಿ ಹಾಡುಗಳು, ಪ್ರಚಲಿತದಲ್ಲಿರುತ್ತವೆ. ಗ್ರಾಮೀಣ ಪ್ರದೇಶದ ವಯೋವೃದ್ಧರು, ಹಿರಿಯರು, ಲಾವಣಿ ಹಾಡುಗಾರರು, ಗರತಿ ಹಾಡುಗಾರರು, ಇಂತಹ ಕಥೆಗಳನ್ನು ಕಟ್ಟಿ ಹಾಡುವುದರಲ್ಲಿ ನುರಿತವರಾಗಿರುತ್ತಾರೆ. ಅನೇಕರು ಕಥೆಯ ಸನ್ನಿವೇಶವು ಇದೇ ಪ್ರದೇಶದಲ್ಲಿ ನಡೆಯಿತು ಎಂದು ತೋರಿಸುವವರು ಇರುತ್ತಾರೆ. ಕೆಲವು ದಂತ ಕಥೆಗಳು ಎಂದುಕೊಂಡರು ಅವುಗಳು ಪರಂಪರೆಯನ್ನು ಸೂಚಿಸುವುದರಿಂದ ತಕ್ಕಮಟ್ಟಿನ ಸತ್ಯಾಂಶವನ್ನು ಹೊರಹಾಕುತ್ತದೆ. ಸರ್ವೇಕ್ಷಣೆಗೆ ಬಂದವರು ಅವರ ಹೇಳಿಕೆಗಳನ್ನು ಟಿಪ್ಪಣಿ ಮಾಡಿಕೊಂಡು ಗ್ರಾಮಸ್ಥರು ತೋರಿಸುವ ಸ್ಥಳಗಳನ್ನು ಸರ್ವೇಕ್ಷಣೆ ಮಾಡಿ ಅಲ್ಲಿ ಏನಾದರೂ ವಸತಿ ಕುರುಹುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಿಹಾರಿನ ಅಗಮ್‌ಕುವಾನ್ 105 ಮೀ ಆಳ ಹಾಗೂ 4.5 ಮೀ ವ್ಯಾಸ ಹೊಂದಿದ ಬಾವಿ ಇದ್ದು ಪಕ್ಕದಲ್ಲಿ ಶಿತಲಾದೇವಿ ದೇವಾಲಯವನ್ನು ಹೊಂದಿದೆ. ದಂತಕಥೆಯ ಪ್ರಕಾರ ಈ ಬಾವಿಯೊಳಗೆ ಸಂಪತ್ತು ತುಂಬಿದೆ. ಅದನ್ನು ತೆಗೆಯಲು ಹೋದವರು ಬಾವಿಗೆ ಬಿದ್ದು ಸತ್ತಿದ್ದಾರೆ ಎಂಬ ನಂಬಿಕೆ ಪ್ರಚಾರವಾಗಿದೆ.

7. ಸ್ಥಳ ನಾಮಗಳು :

ಕೆಲವೊಂದು ಸಲ ಕೆಲವು ಪ್ರದೇಶಗಳ ಹೆಸರುಗಳು ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಗೆ ಆ ಪ್ರದೇಶದ ಪ್ರಾಚ್ಯ ವಸ್ತುಗಳ ಕುರಿತು ಸುಳಿವು ನೀಡಬಹುದು. ಕೆಲವು ಗ್ರಾಮಗಳಲ್ಲಿ ಪಾಂಡವರ ಗುಹೆ ಮತ್ತು ಮೋರಿಯವರ ಮನೆ ಎಂದು ತೋರಿಸಲಾದ ಸ್ಥಳದಲ್ಲಿ ಸಾಮಾನ್ಯವಾಗಿ ಶಿಲಾಯುಗದ ಕಾಲದಲ್ಲಿದ್ದ ಬೃಹತ್ ಶಿಲಾಗೋರಿಗಳು ಇರಬಹುದಾದ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸರ್ವೇಕ್ಷಣ ಕಾರ್ಯಕ್ಕೆ ಹೋದವರು ಆ ಗ್ರಾಮದಲ್ಲಿ ಅಂತಹ ಸ್ಥಳಗಳು ಇರಬಹುದಾಗಿದ್ದು ಅದರ ಖಚಿತತೆಯನ್ನು ನಿರ್ಧರಿಸಬೇಕು. ಇನ್ನು ಕೆಲವು ಕಡೆಗಳಲ್ಲಿ ನಿಲಿಸುಗಲ್, ಬೂದಿಹಾಳು, ಬೂದಿ ತಿಟ್ಟು ಮುಂತಾದ ಸ್ಥಳಗಳಿರುತ್ತವೆ. ಉದಾ: ಶಿವಮೊಗ್ಗ ಜಿಲ್ಲೆಯಲ್ಲಿ ನಿಲಿಸುಗಲ್ಲುಗಳು ಇರುವ ಸ್ಥಳಗಳು ಕಂಡುಬಂದಿವೆ. ವಿಜಾಪುರದ ಜಿಲ್ಲೆಯಲ್ಲಿ ಬೂದಿಹಾಳು ಎಂಬ ಗ್ರಾಮವಿದೆ. ಅಲ್ಲಿ ಬೂದಿ ಇರುವ ಸ್ಥಳಗಳು ಪತ್ತೆಯಾಗಿವೆ. ಕೆಲವು ಕಡೆ ಬೂದಿತಿಟ್ಟು ಎಂಬ ಗ್ರಾಮವಿದ್ದು ಕಂಡುಬಂದಿದೆ. ಇಲ್ಲಿ ಬೂದಿ ದಿಬ್ಬಗಳು ಇದ್ದ ಕುರುಹುಗಳು ಇವೆ. ಇಂತಹ ಸ್ಥಳ ನಾಮಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧಕರು ಅಂತಹ ಪ್ರದೇಶಗಳಲ್ಲಿ ಇನ್ನಷ್ಟು ಪರಿಶೋಧನೆ ಮಾಡಬೇಕು.

ಪುರಾತತ್ವ ನೆಲೆಯ ಗುರುತಿಸುವಿಕೆ (Identification of a site)

ಪುರಾತತ್ವ ನೆಲೆಯ ಗುರುತಿಸುವಿಕೆ (Identification of a site)

ಪುರಾತತ್ತ್ವ ಶಾಸ್ತ್ರದ ನೆಲೆಯನ್ನು (archaeological site) ಗುರುತಿಸುವುದು ಯಾವುದೇ ಪುರಾತತ್ತ್ವ ಶೋಧನೆಯ ಮೊದಲ ಅಡಿಪಾಯದ ಹೆಜ್ಜೆಯಾಗಿದೆ. ಉತ್ಖನನದ (excavation) ಸೂಕ್ಷ್ಮ ಕಾರ್ಯ ಪ್ರಾರಂಭವಾಗುವ ಮೊದಲು, ಪ್ರಾಚೀನ ಮಾನವ ಚಟುವಟಿಕೆಗಳು ನಡೆದ ನಿಖರವಾದ ಭೌಗೋಳಿಕ ಪ್ರದೇಶಗಳನ್ನು ಸಂಶೋಧಕರು ಪತ್ತೆಹಚ್ಚಬೇಕು. ಕ್ಷೇತ್ರ ಸಂಶೋಧನೆ ಆರಂಭಿಸುತ್ತಿರುವ ಸ್ನಾತಕೋತ್ತರ (graduate) ವಿದ್ಯಾರ್ಥಿಗಳಿಗೆ, ಈ ತಾಣಗಳನ್ನು ಗುರುತಿಸುವ ಕಲೆ ಮತ್ತು ವಿಜ್ಞಾನವನ್ನು ಕರಗತ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಈ ಪ್ರಕ್ರಿಯೆಯು ಕೇವಲ ಅದೃಷ್ಟದಿಂದ ಒಲಿಯುವ ಹಠಾತ್ “ಯುರೇಕಾ” ಕ್ಷಣವಲ್ಲ; ಬದಲಿಗೆ ಇದು ಐತಿಹಾಸಿಕ ಸಂಶೋಧನೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಕ್ಷೇತ್ರಕಾರ್ಯವನ್ನು ಒಗ್ಗೂಡಿಸುವ ಅತ್ಯಂತ ವ್ಯವಸ್ಥಿತವಾದ, ಬಹು-ಹಂತದ ವಿಧಾನವಾಗಿದೆ.

ದಾಖಲೆಗಳು ಮತ್ತು ಪ್ರಾಥಮಿಕ ಅಧ್ಯಯನ: ಡೆಸ್ಕ್-ಆಧಾರಿತ ಮೌಲ್ಯಮಾಪನ

ಪುರಾತತ್ತ್ವ ತಾಣದ ಹುಡುಕಾಟವು, ಭೂಮಿಯನ್ನು ಅಗೆಯಲು ಪ್ರಾರಂಭಿಸುವ ಮುಂಚೆಯೇ, ಹೆಚ್ಚಾಗಿ ಒಳಾಂಗಣದಲ್ಲಿಯೇ (ಗ್ರಂಥಾಲಯ ಅಥವಾ ಲ್ಯಾಬ್‌ಗಳಲ್ಲಿ) ಪ್ರಾರಂಭವಾಗುತ್ತದೆ. ಡೆಸ್ಕ್-ಆಧಾರಿತ ಮೌಲ್ಯಮಾಪನ (Desk-based assessment) ಎಂದು ಕರೆಯಲ್ಪಡುವ ಈ ಹಂತವು ಐತಿಹಾಸಿಕ ದಾಖಲೆಗಳು, ಪ್ರಾಚೀನ ನಕ್ಷೆಗಳು, ಭೂಮಿ ನೋಂದಣಿಗಳು ಮತ್ತು ಈ ಹಿಂದೆ ಪ್ರಕಟವಾದ ಪುರಾತತ್ತ್ವ ದಾಖಲೆಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಈ ಹಂತದಲ್ಲಿ ಆಗಾಗ್ಗೆ ನಿರ್ಲಕ್ಷಿಸಲ್ಪಡುವ ಆದರೆ ಹೆಚ್ಚು ಪರಿಣಾಮಕಾರಿಯಾದ ಸಾಧನವೆಂದರೆ ಸ್ಥಳನಾಮಗಳ ಅಧ್ಯಯನ (Toponymy). “ಕುಂಬಾರ ಹಳ್ಳಿ,” “ಬಸವನ ಗುಡ್ಡ,” ಅಥವಾ “ಕಮ್ಮಾರರ ಬೀದಿ” ಯಂತಹ ಸ್ಥಳದ ಹೆಸರುಗಳು ಶತಮಾನಗಳ ಹಿಂದಿನ ಭೂಬಳಕೆಯ ಕುರುಹುಗಳನ್ನು ಉಳಿಸಿಕೊಂಡಿರುತ್ತವೆ ಮತ್ತು ಮಣ್ಣಿನಲ್ಲಿ ಹುದುಗಿರುವ ಇತಿಹಾಸಕ್ಕೆ ನೇರ ಮಾರ್ಗದರ್ಶಿಗಳಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚುವರಿಯಾಗಿ, ಮೌಖಿಕ ಇತಿಹಾಸಗಳನ್ನು ಕಲೆಹಾಕುವುದು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ, ಅದರಲ್ಲೂ ವಿಶೇಷವಾಗಿ ತಮ್ಮ ಭೂಮಿಯ ಲಕ್ಷಣಗಳನ್ನು ಚೆನ್ನಾಗಿ ಬಲ್ಲ ರೈತರೊಂದಿಗೆ ಮಾತನಾಡುವುದು, ಕಾಗದದಲ್ಲಿ ದಾಖಲಾಗದ ಅಮೂಲ್ಯ ಸುಳಿವುಗಳನ್ನು ನೀಡಬಲ್ಲದು.

ಆಕಾಶದಿಂದ ವೀಕ್ಷಣೆ: ವೈಮಾನಿಕ ಮತ್ತು ರಿಮೋಟ್ ಸೆನ್ಸಿಂಗ್

ಸಂಭಾವ್ಯ ಪ್ರದೇಶಗಳನ್ನು ಗುರುತಿಸಿದ ನಂತರ, ಪುರಾತತ್ತ್ವಜ್ಞರು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಬಳಸಿ ಆಕಾಶದಿಂದ ಭೂಮಿಯನ್ನು ವೀಕ್ಷಿಸುತ್ತಾರೆ. ಸಾಂಪ್ರದಾಯಿಕ ವೈಮಾನಿಕ ಛಾಯಾಗ್ರಹಣವು (Aerial photography) ಒಂದು ಪ್ರಮುಖ ಸಾಧನವಾಗಿದ್ದು, ಇದು ಸಂಶೋಧಕರಿಗೆ ಈ ಕೆಳಗಿನವುಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ:

  • ಬೆಳೆಯ ಗುರುತುಗಳು (Crop marks): (ಭೂಮಿಯೊಳಗಿನ ಗೋಡೆಗಳು ಬೆಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಅಥವಾ ಹೂತುಹೋದ ಕಾಲುವೆಗಳು ಅದನ್ನು ಹೆಚ್ಚಿಸುತ್ತವೆ).
  • ಮಣ್ಣಿನ ಗುರುತುಗಳು (Soil marks): (ಉಳುಮೆಯಿಂದ ಮೇಲ್ಮೈಗೆ ಬರುವ ಮಣ್ಣಿನ ಬಣ್ಣದ ವ್ಯತ್ಯಾಸಗಳು).
  • ನೆರಳಿನ ಗುರುತುಗಳು (Shadow marks): (ಬೆಳಗಿನ ಅಥವಾ ಸಂಜೆಯ ಸೂರ್ಯನ ಬೆಳಕಿನಲ್ಲಿ ಎದ್ದು ಕಾಣುವ ಮಣ್ಣಿನ ದಿಬ್ಬಗಳು).

ಇಂದು, LiDAR (Light Detection and Ranging) ತಂತ್ರಜ್ಞಾನವು ಈ ಹಂತವನ್ನು ಕ್ರಾಂತಿಗೊಳಿಸಿದೆ. ವಿಮಾನದಿಂದ ಲೇಸರ್ ಕಿರಣಗಳನ್ನು ಹಾರಿಸುವ ಮೂಲಕ, ದಟ್ಟವಾದ ಅರಣ್ಯದ ಮೇಲಾವರಣವನ್ನು ಡಿಜಿಟಲ್ ರೂಪದಲ್ಲಿ ತೆಗೆದುಹಾಕಿ ಭೂಮಿಯ ಗುಪ್ತ ಸೂಕ್ಷ್ಮ ಸ್ಥಳಾಕೃತಿಯನ್ನು ಇದು ಬಹಿರಂಗಪಡಿಸುತ್ತದೆ. ಇದು ಮರೆತುಹೋದ ರಸ್ತೆಗಳು, ವಸಾಹತುಗಳು ಮತ್ತು ಕೃಷಿ ಭೂಮಿಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತದೆ.

ಅಗೋಚರವಾದುದನ್ನು ನೋಡುವುದು: ಭೂಭೌತಶಾಸ್ತ್ರೀಯ ಸಮೀಕ್ಷೆ

ನೆಲವನ್ನು ಅಗೆಯುವ ಮೊದಲು, ಮೇಲ್ಮಣ್ಣಿನ ಕೆಳಗೆ ಇಣುಕಿ ನೋಡಲು ಆಧುನಿಕ ಪುರಾತತ್ತ್ವ ಶಾಸ್ತ್ರವು ಸಂಪೂರ್ಣವಾಗಿ ವಿನಾಶಕಾರಿಯಲ್ಲದ ಭೂಭೌತಶಾಸ್ತ್ರೀಯ ಸಮೀಕ್ಷೆಗಳನ್ನು (Geophysical surveys) ಅವಲಂಬಿಸಿದೆ. ಗ್ರೌಂಡ್-ಪೆನೆಟ್ರೇಟಿಂಗ್ ರೇಡಾರ್ (GPR) ನಂತಹ ಉಪಕರಣಗಳು ಭೂಮಿಯೊಳಗೆ ವಿದ್ಯುತ್ಕಾಂತೀಯ ಅಲೆಗಳನ್ನು ಕಳುಹಿಸಿ ಹೂತುಹೋದ ಗೋಡೆಗಳು ಮತ್ತು ಕುಳಿಗಳನ್ನು ಮ್ಯಾಪ್ ಮಾಡುತ್ತವೆ. ಮ್ಯಾಗ್ನೆಟೋಮೆಟ್ರಿ (Magnetometry) ಸುಟ್ಟ ವಸ್ತುಗಳಿಗೆ ವಿಶೇಷವಾಗಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಪ್ರಾಚೀನ ಒಲೆಗಳು, ಇಟ್ಟಿಗೆ ಗೂಡುಗಳು ಅಥವಾ ಸಾವಯವ ತ್ಯಾಜ್ಯಗಳಿಂದ ತುಂಬಿದ ಹೊಂಡಗಳನ್ನು ಪತ್ತೆಹಚ್ಚಲು ಇದು ಸೂಕ್ತವಾಗಿದೆ, ಏಕೆಂದರೆ ಇವು ಸ್ಥಳೀಯ ಕಾಂತಕ್ಷೇತ್ರವನ್ನು (magnetic field) ಬದಲಾಯಿಸುತ್ತವೆ. ಏತನ್ಮಧ್ಯೆ, ಅರ್ಥ್ ರೆಸಿಸ್ಟೆನ್ಸ್ (Earth resistance) ಸಮೀಕ್ಷೆಗಳು ಮಣ್ಣು ವಿದ್ಯುಚ್ಛಕ್ತಿಯನ್ನು ಎಷ್ಟು ಸುಲಭವಾಗಿ ಹರಿಯಲು ಬಿಡುತ್ತದೆ ಎಂಬುದನ್ನು ಅಳೆಯುತ್ತವೆ; ಘನವಾದ ಕಲ್ಲಿನ ಅಡಿಪಾಯಗಳು ವಿದ್ಯುತ್ ಪ್ರವಾಹವನ್ನು ತಡೆಯುತ್ತವೆ, ಆದರೆ ಒದ್ದೆಯಾದ, ಹೂತುಹೋದ ಕಾಲುವೆಗಳು ಅದನ್ನು ಸುಲಭವಾಗಿ ಹರಿಯಲು ಬಿಡುತ್ತವೆ. ಈ ಸಾಧನಗಳು ಸಂಶೋಧಕರಿಗೆ ತಾಣದ ಸಂಭಾವ್ಯ ವಿನ್ಯಾಸವನ್ನು ಮ್ಯಾಪ್ ಮಾಡಲು ಮತ್ತು ನಿಖರವಾಗಿ ಎಲ್ಲಿ ಅಗೆಯಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತವೆ.

ಕ್ಷೇತ್ರ ಕಾರ್ಯಾಚರಣೆ: ಮೇಲ್ಮೈ ಸಮೀಕ್ಷೆ ಮತ್ತು ಫೀಲ್ಡ್ ವಾಕಿಂಗ್

ತಂತ್ರಜ್ಞಾನವನ್ನು ಬದಿಗಿಟ್ಟರೆ, ಭೂದೃಶ್ಯದಲ್ಲಿ ನಡೆದಾಡುವುದಕ್ಕೆ (Fieldwalking) ಬೇರೆ ಪರ್ಯಾಯವಿಲ್ಲ. ಗ್ರೌಂಡ್ ರೆಕನೈಸೆನ್ಸ್, ಅಥವಾ ಪಾದಚಾರಿ ಸಮೀಕ್ಷೆ (Pedestrian survey) ಎಂದರೆ ಪುರಾತತ್ತ್ವಜ್ಞರ ತಂಡಗಳು ಉಳುಮೆ ಮಾಡಿದ ಹೊಲಗಳು, ಮರುಭೂಮಿಗಳು ಅಥವಾ ಬಯಲು ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ, ಅಂತರವಿರುವ ಗ್ರಿಡ್‌ಗಳಲ್ಲಿ (grids) ನಡೆದಾಡುವುದು. ಮಣ್ಣಿನ ಸವೆತ, ಪ್ರಾಣಿಗಳ ಬಿಲ ಕೊರೆಯುವಿಕೆ ಅಥವಾ ಆಧುನಿಕ ಕೃಷಿಯಿಂದ ಮೇಲ್ಮೈಗೆ ಬಂದಿರುವ ಮಡಕೆ ಚೂರುಗಳು (sherds), ಕಲ್ಲಿನ ಉಪಕರಣಗಳ ತುಣುಕುಗಳು (lithics), ಅಥವಾ ಕಟ್ಟಡ ಸಾಮಗ್ರಿಗಳ ತುಂಡುಗಳಂತಹ ಮೇಲ್ಮೈ ವಸ್ತುಗಳಿಗಾಗಿ ಅವರು ಕಣ್ಣಿಟ್ಟಿರುತ್ತಾರೆ. ಈ ಮೇಲ್ಮೈ ಕಲಾಕೃತಿಗಳ ಸಾಂದ್ರತೆ ಮತ್ತು ವಿತರಣೆಯನ್ನು ಎಚ್ಚರಿಕೆಯಿಂದ ಮ್ಯಾಪ್ ಮಾಡುವ ಮೂಲಕ, ಸಂಶೋಧಕರು ವಸಾಹತುವಿನ ಕೇಂದ್ರವನ್ನು ಗುರುತಿಸಬಹುದು ಮತ್ತು ಅದರ ಹೊರಗಿನ ಗಡಿಗಳನ್ನು ನಿರ್ಧರಿಸಬಹುದು.

ಭೂಮಿಯ ಆಳದ ಪರೀಕ್ಷೆ: ಸಬ್ ಸರ್ಫೇಸ್ ಟೆಸ್ಟಿಂಗ್ (Subsurface Testing)

ದಟ್ಟವಾದ ಹುಲ್ಲುಗಾವಲುಗಳು ಅಥವಾ ದಟ್ಟವಾದ ಕಾಡುಗಳಂತಹ ಮೇಲ್ಮೈ ಗೋಚರತೆ ಕಳಪೆಯಾಗಿರುವ ಭೂದೃಶ್ಯಗಳಲ್ಲಿ, ಒಂದು ತಾಣದ ಅಸ್ತಿತ್ವವನ್ನು ಖಚಿತಪಡಿಸಲು ಸಂಶೋಧಕರು ಮಣ್ಣಿನೊಳಗಿನ ಪರೀಕ್ಷೆಯನ್ನು (subsurface testing) ಬಳಸಿಕೊಳ್ಳಬೇಕು. ಇದು ಸಾಮಾನ್ಯವಾಗಿ ಶೋವೆಲ್ ಟೆಸ್ಟ್ ಪಿಟ್ಸ್ (STPs) ಅನ್ನು ಅಗೆಯುವುದನ್ನು ಒಳಗೊಂಡಿರುತ್ತದೆ—ಅಂದರೆ ಗ್ರಿಡ್‌ನಾದ್ಯಂತ ನಿಯಮಿತ ಮಧ್ಯಂತರದಲ್ಲಿ ಅಗೆದ ಸಣ್ಣ, ಪ್ರಮಾಣೀಕೃತ ಗುಂಡಿಗಳು. ಯಾವುದೇ ಕಲಾಕೃತಿಗಳನ್ನು ಮರುಪಡೆಯಲು ಅಗೆದ ಮಣ್ಣನ್ನು ಜರಡಿಗಳ ಮೂಲಕ ಶೋಧಿಸಲಾಗುತ್ತದೆ. ಪರ್ಯಾಯವಾಗಿ, ಪುರಾತತ್ತ್ವಜ್ಞರು ಭೂಮಿಯ ಆಳವಾದ ಕೋರ್ ಮಾದರಿಗಳನ್ನು ಹೊರತೆಗೆಯಲು ಕೈಯಿಂದ ಅಥವಾ ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ಆಗರ್ (augers) ಗಳನ್ನು ಬಳಸಬಹುದು. ಈ ಕೋರ್‌ಗಳು (ಮಣ್ಣಿನ ಮಾದರಿಗಳು) ಭೌಗೋಳಿಕ ಟೈಮ್ ಮೆಷಿನ್‌ನಂತೆ ಕಾರ್ಯನಿರ್ವಹಿಸುತ್ತವೆ. ಇವು ಮಣ್ಣಿನ ಪದರಗಳನ್ನು (stratigraphy) ಬಹಿರಂಗಪಡಿಸುತ್ತವೆ ಮತ್ತು ಹೂತುಹೋದ ಸಾಂಸ್ಕೃತಿಕ ಪದರಗಳು, ಬೂದಿಯ ಕುರುಹುಗಳು ಅಥವಾ ಪ್ರಾಚೀನ ನೆಲದ ಮೇಲ್ಮೈಗಳ ಬಗ್ಗೆ ಸಂಶೋಧಕರಿಗೆ ಸುಳಿವು ನೀಡುತ್ತವೆ.

ಅಂತಿಮವಾಗಿ, ಪುರಾತತ್ತ್ವ ಶಾಸ್ತ್ರದ ನೆಲೆಯ ಗುರುತಿಸುವಿಕೆಯು ಭೂದೃಶ್ಯವನ್ನು ಓದುವ ಅಥವಾ ಅರ್ಥಮಾಡಿಕೊಳ್ಳುವ ಒಂದು ಕೌಶಲ್ಯವಾಗಿದೆ. ಆರ್ಕೈವಲ್ ಸುಳಿವುಗಳು, ರಿಮೋಟ್ ಸೆನ್ಸಿಂಗ್ ಡೇಟಾ ಮತ್ತು ಭೌತಿಕ ಪುರಾವೆಗಳನ್ನು ಒಗ್ಗೂಡಿಸುವ ಮೂಲಕ, ನೀವು ಸಾಧಾರಣವಾಗಿ ಕಾಣುವ ಭೂಮಿಯನ್ನು ಕಟ್ಟುನಿಟ್ಟಾದ ಶೈಕ್ಷಣಿಕ ಉತ್ಖನನಕ್ಕೆ ಸಿದ್ಧವಾಗಿರುವ ನಿರ್ದಿಷ್ಟ ಪ್ರದೇಶವಾಗಿ ಪರಿವರ್ತಿಸಬಹುದು.

ಆಕಸ್ಮಿಕವಾಗಿ ಬೆಳಕಿಗೆ ಬಂದಿರುವುದು.

ವಿಶ್ವದಲ್ಲಿ ಹಾಗೂ ಭಾರತದಲ್ಲಿ ಅನೇಕ ಕಡೆಗಳಲ್ಲಿ ಪುರಾತತ್ವ ನೆಲೆಗಳು ಹಾಗೂ ಪ್ರಾಚ್ಯವಸ್ತುಗಳು ಅನೇಕ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಕಂಡುಹಿಡಿಲ್ಪಟ್ಟವುಗಳಾಗಿವೆ. ಪಶ್ಚಿಮ ಏಷ್ಯಾದ ನಾಡುಗಳಲ್ಲಿ ಅನೇಕ ಪುರಾತನ ಸ್ಥಳಗಳು ತೀರಾ ಆಕಸ್ಮಿಕವಾಗಿ ದೊರಕಿದವು. ಉದಾ: ಯುಪ್ರಟಿಸ್‌ ನದಿ ತೀರದಲ್ಲಿ ಓಡಾಡುವಾಗ ಅಲ್ಲಿನ ಹಳ್ಳಿಗಾಡಿನ ಜನರಿಗೆ ಸುಮೇರಿಯನ್ ಮೂರ್ತಿಯೊಂದು ಆಕಸ್ಮಿಕವಾಗಿ ಸಿಕ್ಕ ಕಾರಣ ಇರಾಕ್ ಎಂಬ ನೆಲೆಯು ಬೆಳಕಿಗೆ ಬರಲು ಕಾರಣವಾಯಿತು. ಕೆಲವು ಸಂದರ್ಭಗಳಲ್ಲಿ ಕಾಲುವೆಗಾಗಿ ಹಳ್ಳ ತೊಡುವಾಗ, ಕೃಷಿ ಭೂಮಿಯನ್ನು ಉಳುಮೆ ಮಾಡುವಾಗ, ರಸ್ತೆಗಳನ್ನು ನಿರ್ಮಿಸುವಾಗ, ಕಟ್ಟಡಗಳನ್ನು ನಿರ್ಮಿಸಲು ತಳಪಾಯ ಅಗೆಯುವಾಗ, ಅನೇಕ ಪ್ರಾಚ್ಯವಸ್ತುಗಳು ಹಾಗೂ ಪುರಾತತ್ವ ನೆಲೆಗಳು ಕಣ್ಣಿಗೆ ಗೋಚರಿಸುವುದು ಸಾಮಾನ್ಯ.  ಇದು ಅಲ್ಲದೆ ನೈಸರ್ಗಿಕ ವಿಕೋಪಗಳು, ಮಾನವನ ಅನಿರೀಕ್ಷಿತವಾದ ಚಟುವಟಿಕೆಗಳು, ಮುಂತಾದ ಕಾರಣಗಳಿಂದಲೂ ಪುರಾತತ್ವ ನೆಲೆಗಳು ಸಿಕ್ಕ ಉದಾಹರಣೆಗಳು ಇವೆ. ಗಾಳಿಯ ಪರಿಣಾಮವಾಗಿ ಮಣ್ಣು ಒಂದು ಕಡೆಯಿಂದ ಬೇರೊಂದು ಕಡೆಗೆ ಕೊಚ್ಚಿಹೋದಾಗ ಅದರ ಅಡಿಭಾಗದಲ್ಲಿದ್ದ ಪುರಾತತ್ವ ನೆಲೆಗಳು ಅಥವಾ ಪ್ರಾಚೀನ ವಸ್ತುಗಳು ಬೆಳಕಿಗೆ ಬರುತ್ತವೆ. ಸಾಗರ, ನದಿ, ಗಾಳಿ ಹಾಗೂ ವಿಪರೀತ ಮಳೆಯ ಕಾರಣ ಇವುಗಳಿಂದ ಮಣ್ಣಿನ ಕೊರೆತ ಉಂಟಾದರೆ ಪುರಾತತ್ವ ನೆಲೆಗಳು ಕಂಡುಬರುತ್ತವೆ. ಸಮುದ್ರದ ಕೊರೆತದ ಪರಿಣಾಮವಾಗಿ ಇಂಗ್ಲೆಂಡಿನ ಕ್ಲೋಮರ್ ಎಂಬ ನೆಲೆಯಲ್ಲಿ ಹಳೆಯ ಶಿಲಾಯುಗದ ಕಲ್ಲಿನ ಉಪಕರಣಗಳು ದೊರಕಿದವು. ಅದೇ ಪ್ರದೇಶದ ಕ್ಲಾಕ್ಟನ್-ಆನ್‌-ಸೀ ಎಂಬ ಪ್ರದೇಶದಲ್ಲಿ ಪೂರ್ವಶಿಲಾಯುಗದ ಕಾಕ್ಟನ್‌ ಮಾದರಿಯ ಚಕ್ಕೆ ಉದ್ಯಮ ಕಡಲ ಕೊರೆತದಿಂದ ಗೋಚರಿಸಿತು.

ಅದರಂತೆ ಡ್ಯಾನೂನ್‌ ನದಿಯ ಕೊರೆತದ ಕಾರಣ ನದಿ ತೀರದ ʻʻವಿಂಚಾʼʼ ಎಂಬ ನೆಲೆಯು ಬೆಳಕಿಗೆ ಬಂದಿತು. ಪ್ರತಿ ವರ್ಷ ವೈಗೈ ನದಿಯ ನೆರೆ ಕಡಿಮೆಯಾದಾಗ ಮಧುರೈ ಹತ್ತಿರ ನೆರೆ ಪ್ರದೇಶದಲ್ಲಿ ಸಾಕಷ್ಟು ಚಿನ್ನದ ನಾಣ್ಯಗಳು ದೊರಕಿದ ಉದಾಹರಣೆಗಳಿವೆ. ದಕ್ಷಿಣ ಅಪಘಾನಿಸ್ತಾದ ಸೀಸ್ತಾನ್‌ ಎಂಬಲ್ಲಿ ಗಾಳಿಯ ವೇಗದಿಂದ ಇತಿಹಾಸ ಪೂರ್ವ ಸಮಾಧಿಯ ನೆಲೆಗಳು ಗೋಚರಿಸಿದವು. ಮಳೆಯ ಪ್ರವಾಹದ ಕಾರಣದಿಂದಲೂ ಸಹ ಪುರಾತತ್ವ ನೆಲೆಗಳು ಹೊರಗೆ ಕಾಣಿಸಿಕೊಂಡ ದಾಖಲೆಗಳು ಇವೆ. ಇಂದಿಗೂ ಸಹ ಬನವಾಸಿ, ಹಂಪೆ ಮುಂತಾದ ಪ್ರದೇಶಗಳಲ್ಲಿ ಮಳೆಯು ಜೋರಾಗಿ ಬಂದು ನಿಂತುಕೊಂಡರೆ ನಾಣ್ಯಗಳು ಹೊರಕಾಣಿಸುತ್ತವೆ. ತೀವ್ರ ಬರಗಾಲವೂ ಸಹ ಪುರಾತತ್ವ ಶೋಧನೆಗೆ ಕಾರಣವಾಗಬಹುದು. ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ತೀವ್ರ ಬರಗಾಲದಿಂದ ಸರೋವರ ಬತ್ತಿ ಹೋದಾಗ ಅದರಲ್ಲಿ ಹುದುಗಿದ್ದ ವಸತಿಯ ಅವಶೇಷಗಳು ಪತ್ತೆಯಾದವು. ಹಾಗೆಯೇ ರೈನ್ ನದಿಯ ತೀರದಲ್ಲಿ ಮರದ ಕಟ್ಟಡಗಳು ಶೋಧಿಸಲ್ಪಟ್ಟವು.

ರೈತರು ಹೊಲವನ್ನು ಉಳುಮೆ ಮಾಡುವಾಗ ಚಿನ್ನದ ನಾಣ್ಯಗಳು ಪತ್ತೆಯಾದ ಕುರುಹುಗಳು ಕಂಡುಬಂದಿವೆ. ಹೊಲದಲ್ಲಿ ರಂಟೆ ಹೊಡೆಯುವಾಗ ಅನೇಕ ಕಡೆ ರೋಮನ್ ನಾಣ್ಯಗಳು ಪತ್ತೆಯಾಗಿವೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಸಮೀಪದ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿಯ ನಾಣ್ಯಗಳ ನಿಧಿಯು ದೊರಕಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. 

ಉತ್ತರಭಾರತದಲ್ಲಿ ಕಾಲುವೆಯನ್ನು ತೋಡುವಾಗ ಮತ್ತು ರೈಲು ಹಳಿಯನ್ನು ನಿರ್ಮಿಸಲು ನೆಲವನ್ನು ಅಗೆಯುವಾಗ ಸಿಂಧೂ ನಾಗರಿಕತೆಯ ಅವಶೇಷಗಳು ದೊರಕಿದ್ದನ್ನು ನಾವು ಇತಿಹಾಸದಿಂದ ತಿಳಿಯಬಹುದು. ಇತ್ತೀಚೆಗೆ ಧಾರವಾಡ ಜಿಲ್ಲೆಯ ಮುತ್ತಗಿ ಎಂಬ ಗ್ರಾಮದಲ್ಲಿ ಆಸ್ಪತ್ರೆಯನ್ನು ನಿರ್ಮಿಸುವಾಗ 12ನೇ ಶತಮಾನಕ್ಕೆ ಸೇರಿದ ಎರಡು ಜೈನ ಪ್ರತಿಮೆಗಳು ಸಿಕ್ಕಿವೆ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಸ್ಥಳೀಯ ಜನರು ಇಟ್ಟಿಗೆ ತಯಾರಿಸಲು ಮಣ್ಣಿನ ದಿಬ್ಬವನ್ನು ಅಗೆಯುವಾಗ 2ನೇ ಶತಮಾನಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ದೊರಕಿದವು.

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ – 2022

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ – 2022

ಪೀಠಿಕೆ

ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022ವು ಭಾರತ ಸರ್ಕಾರದ ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂಪಿಸಲಾದ ಪ್ರಮುಖ ನೀತಿಯಾಗಿದೆ. ಈ ನೀತಿಯ ಮುಖ್ಯ ಉದ್ದೇಶವು 2047ರೊಳಗೆ ಭಾರತವನ್ನು ವಿಶ್ವದ ಪ್ರಮುಖ ಪ್ರವಾಸೋದ್ಯಮದ ಪ್ರಮುಖ ಸ್ಥಾನವನ್ನಾಗಿಸುವುದಾಗಿದೆ. ಇದು ಸುಸ್ಥಿರತೆ (sustainability), ಡಿಜಿಟಲೀಕರಣ (digitalisation) ಮತ್ತು ಸರ್ವತೋಮುಖ ಬೆಳವಣಿಗೆ (inclusive growth) ಮೇಲೆ ಒತ್ತು ನೀಡುತ್ತದೆ. ಇದರ ಮೂಲಕ ಭಾರತ ತನ್ನ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸಂಪತ್ತನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲು ಯತ್ನಿಸುತ್ತದೆ.

ಮುಖ್ಯ ಗುರಿಗಳು

ಈ ನೀತಿಯಡಿಯಲ್ಲಿ ಭಾರತವು ಮಹತ್ವಾಕಾಂಕ್ಷಿ ಗುರಿಗಳನ್ನು ಹೊಂದಿದೆ. 2047ರೊಳಗೆ 100 ಮಿಲಿಯನ್ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವುದು, $1 ಟ್ರಿಲಿಯನ್ ಪ್ರವಾಸೋದ್ಯಮ GDP ಸಾಧಿಸುವುದು ಮತ್ತು 400 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು ಪ್ರಮುಖ ಗುರಿಗಳಾಗಿವೆ. ಈ ಗುರಿಗಳು ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತವೆ.

1. ಹಸಿರು ಪ್ರವಾಸೋದ್ಯಮ ಮಿಷನ್

ಹಸಿರು ಪ್ರವಾಸೋದ್ಯಮ ಮಿಷನ್ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು, ಜೀವ ವೈವಿಧ್ಯವನ್ನು ರಕ್ಷಿಸುವುದು ಮತ್ತು ಸುಸ್ಥಿರ ಬೆಳವಣಿಗೆಯ ಗುರಿಯನ್ನು 2030ರೊಳಗೆ ಸಾಧಿಸುವುದನ್ನು ಗುರಿಯನ್ನಾಗಿಸಿಕೊಂಡಿದೆ. ಈ ಮಿಷನ್ ಮೂಲಕ ಪ್ರವಾಸೋದ್ಯಮವು ಪರಿಸರಕ್ಕೆ ಹಾನಿ ಉಂಟುಮಾಡದೆ, ದೀರ್ಘಕಾಲಿಕವಾಗಿ ಬೆಳೆಯುವಂತೆ ಮಾಡುವ ಆಶಯವನ್ನು ಹೊಂದಿದೆ.

2. ಡಿಜಿಟಲ್ ಪ್ರವಾಸೋದ್ಯಮ ಮಿಷನ್

ಡಿಜಿಟಲ್ ಪ್ರವಾಸೋದ್ಯಮ ಮಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರವಾಸೋದ್ಯಮ ಕ್ಷೇತ್ರವನ್ನು ಆಧುನೀಕರಿಸಲು ಉದ್ದೇಶಿಸಿದೆ. ಇದರಡಿ ಏಕೀಕೃತ ಪ್ರವಾಸೋದ್ಯಮದ  ಅಭಿವೃದ್ಧಿ, ಆನ್‌ಲೈನ್ ಸೇವೆಗಳ ವಿಸ್ತರಣೆ ಮತ್ತು MSMEಗಳಿಗೆ ಡಿಜಿಟಲ್ ಬೆಂಬಲ ನೀಡಲಾಗುತ್ತದೆ. ಇದರಿಂದ ಪ್ರವಾಸೋದ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

3. ಕೌಶಲ್ಯಾಭಿವೃದ್ಧಿ ಮಿಷನ್

ಈ ಮಿಷನ್ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದನ್ನು ಗುರಿಯಾಗಿಟ್ಟುಕೊಂಡಿದೆ. ಇದರ ಮೂಲಕ ಉದ್ಯೋಗಾರ್ಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

4. DMO (Destination Management Organisation) ಮಿಷನ್

ಈ ಮಿಷನ್ ವಿಶಿಷ್ಟ ಸ್ಥಳ  ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇದರಿಂದ ನಿರ್ದಿಷ್ಟ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ಆಕರ್ಷಕವಾಗಿಸಲು ಸಹಾಯವಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಉತ್ತಮ ಅನುಭವ ದೊರೆಯುತ್ತದೆ.

5. MSME (Micro,Small and Medium Enterprises) ಮಿಷನ್

ಈ ಮಿಷನ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ನೀಡುತ್ತದೆ. ಇದರಲ್ಲಿ ಹಣಕಾಸು ಸಹಾಯ, ಮಾರುಕಟ್ಟೆ ಅಭಿವೃದ್ಧಿ ಮತ್ತು ಉದ್ಯಮ ಸುವ್ಯವಸ್ಥೀಕರಣ ಸೇರಿವೆ. ಇದರಿಂದ ಸಣ್ಣ ಉದ್ಯಮಗಳು ಬೆಳೆಯಲು ಮತ್ತು ಆರ್ಥಿಕತೆಯಲ್ಲಿ ತಮ್ಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ.

ಕಾರ್ಯತಂತ್ರದ ಸ್ತಂಭಗಳು

1. ಸಂಪರ್ಕ ವ್ಯವಸ್ಥೆ ಸುಧಾರಣೆ

ಸಂಪರ್ಕ ವ್ಯವಸ್ಥೆ ಸುಧಾರಣೆ ಎಂದರೆ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆ, ರೈಲು, ವಿಮಾನ ಮತ್ತು ಜಲ ಮಾರ್ಗಗಳ ಸುಧಾರಣೆ. ಉತ್ತಮ ಸಂಪರ್ಕ ವ್ಯವಸ್ಥೆಯಿದ್ದರೆ ಪ್ರವಾಸಿಗರು ಸುಲಭವಾಗಿ ಗಮ್ಯಸ್ಥಾನವನ್ನು ತಲುಪಬಹುದು. ಇದರ ಮೂಲಕ ದೂರದ ಪ್ರದೇಶಗಳಲ್ಲಿರುವ ಪ್ರವಾಸಿ ಸ್ಥಳಗಳಿಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಮತ್ತು ಸ್ಥಳೀಯ ಆರ್ಥಿಕತೆಯೂ ಬೆಳೆಯುತ್ತದೆ.

2. ಹೂಡಿಕೆ ಉತ್ತೇಜನ (PPP)

ಹೂಡಿಕೆ ಉತ್ತೇಜನದಲ್ಲಿ ಸರ್ಕಾರ ಮತ್ತು ಖಾಸಗಿ ವಲಯ ಒಟ್ಟಾಗಿ (Public-Private Partnership – PPP) ಕೆಲಸ ಮಾಡುವುದು ಮುಖ್ಯವಾಗಿದೆ. ಇದರ ಮೂಲಕ ಹೋಟೆಲ್‌ಗಳು, ರಿಸಾರ್ಟ್‌ಗಳು, ರಸ್ತೆ ಮತ್ತು ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚು ಹಣ ಹೂಡಿಕೆ ಮಾಡಬಹುದು. ಖಾಸಗಿ ವಲಯದ ಪಾಲ್ಗೊಳ್ಳುವಿಕೆಯಿಂದ ಉತ್ತಮ ಗುಣಮಟ್ಟದ ಸೇವೆಗಳು ಮತ್ತು ವೇಗವಾದ ಅಭಿವೃದ್ಧಿ ಸಾಧ್ಯವಾಗುತ್ತದೆ.

3. ಪ್ರವಾಸಿಗರ ಅನುಭವ ಸುಧಾರಣೆ

ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ “ಅತಿಥಿ ದೇವೋ ಭವ” ಅಭಿಯಾನವನ್ನು ಜಾರಿಗೆ ತರಲಾಗಿದೆ. ಸ್ವಚ್ಛತೆ, ಭದ್ರತೆ, ಸ್ನೇಹಪೂರ್ಣ ಸೇವೆ, ಉತ್ತಮ ಮಾರ್ಗದರ್ಶನ ಮತ್ತು ಮೂಲ ಸೌಲಭ್ಯಗಳು (restrooms, food, transport) ಒದಗಿಸುವುದರಿಂದ ಪ್ರವಾಸಿಗರು ಸಂತೋಷವಾಗಿರುತ್ತಾರೆ ಮತ್ತು ಮತ್ತೆ ಭಾರತಕ್ಕೆ ಭೇಟಿ ನೀಡಲು ಪ್ರೇರಿತರಾಗುತ್ತಾರೆ.

4. ಸರಳ ವೀಸಾ ವ್ಯವಸ್ಥೆ

ವಿದೇಶಿ ಪ್ರವಾಸಿಗರಿಗೆ ಭಾರತಕ್ಕೆ ಬರಲು ಸುಲಭವಾಗಲು ವೀಸಾ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. E-ವೀಸಾ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ವೀಸಾ ಪಡೆಯಬಹುದು. ಇದರಿಂದ ಸಮಯ ಮತ್ತು ಕಾಗದದ ಕೆಲಸ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಉತ್ತೇಜನ ಪಡೆಯುತ್ತಾರೆ.

5. ಮಾರ್ಕೆಟಿಂಗ್ ಅಭಿವೃದ್ಧಿ

ಮಾರ್ಕೆಟಿಂಗ್ ಅಭಿವೃದ್ಧಿ ಎಂದರೆ ಭಾರತವನ್ನು ವಿಶ್ವದ ಮುಂದೆ ಉತ್ತಮವಾಗಿ ಪರಿಚಯಿಸುವುದು. “Incredible India” ಅಭಿಯಾನದ ಮೂಲಕ ಭಾರತದಲ್ಲಿನ ಸಂಸ್ಕೃತಿ, ಇತಿಹಾಸ, ಪ್ರಕೃತಿ ಮತ್ತು ಪ್ರವಾಸಿ ಸ್ಥಳಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ಹೊಸ ಪ್ರವಾಸೋದ್ಯಮ ಕ್ಷೇತ್ರಗಳು (wellness, adventure, cultural tourism) ಅಭಿವೃದ್ಧಿಪಡಿಸುವುದರಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಆಡಳಿತ ವ್ಯವಸ್ಥೆ

ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಶೇಷ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. NTAB ಮಾರ್ಗದರ್ಶನ ನೀಡುತ್ತದೆ, IMCCT ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುತ್ತದೆ ಮತ್ತು NTA ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಈ ವ್ಯವಸ್ಥೆಯ ಮೂಲಕ ನೀತಿಯ ಯಶಸ್ವಿ ಅನುಷ್ಠಾನವನ್ನು ಖಚಿತಪಡಿಸಲಾಗುತ್ತದೆ.

🔹 ವೈಶಿಷ್ಟ್ಯಗಳು

ಈ ನೀತಿಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಅತಿಥಿ ದೇವೋಭವ ತತ್ವ, ಡಿಜಿಟಲೀಕರಣ ಮತ್ತು ಪರಿಸರ ಸಂರಕ್ಷಣೆ ಸೇರಿವೆ. ಇವು ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತವೆ ಮತ್ತು ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುತ್ತವೆ.

🔹 ಉಪಸಂಹಾರ

ಒಟ್ಟಾರೆ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022ವು ಭಾರತವನ್ನು ಜಾಗತಿಕ ಪ್ರವಾಸೋದ್ಯಮ ಶಕ್ತಿಯಾಗಿ ರೂಪಿಸುವ ಮಹತ್ವದ ಯೋಜನೆಯಾಗಿದೆ. ಇದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಹಕಾರಿಯಾಗಿದೆ. ಇದರ ಯಶಸ್ವಿ ಅನುಷ್ಠಾನದಿಂದ ಭಾರತವು 2047ರೊಳಗೆ ವಿಶ್ವದ ಪ್ರಮುಖ ಪ್ರವಾಸೋದ್ಯಮ ಸ್ಥಾನವನ್ನಾಗಿಸುವ  ಸಾಧ್ಯತೆ ಇದೆ.

ಕರ್ನಾಟಕ ಪ್ರವಾಸೋದ್ಯಮದ ರಾಜ್ಯನೀತಿ

ಕರ್ನಾಟಕ ಪ್ರವಾಸೋದ್ಯಮದ ರಾಜ್ಯನೀತಿ

ಪರಿಚಯ

2024-29ರ ಕರ್ನಾಟಕ ಪ್ರವಾಸೋದ್ಯಮ ನೀತಿ ರಾಜ್ಯವನ್ನು 2032 ರ ವೇಳೆಗೆ ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಮತ್ತು USD 1 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸಲು ಸಮಗ್ರ ಚೌಕಟ್ಟನ್ನು ನಿರ್ಮಿಸಿದೆ. ಸುಸ್ಥಿರ ಅಭಿವೃದ್ಧಿ, ವರ್ಧಿತ ಮೂಲಸೌಕರ್ಯ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣಗಳ ಪ್ರಚಾರದ ಮೇಲೆ ಕೇಂದ್ರೀಕರಿಸುವ ಬಹುಮುಖಿ ವಿಧಾನವನ್ನು ಈ ದಾಖಲೆಯು ವಿವರಿಸುತ್ತದೆ. ಖಾಸಗಿ-ಸಾರ್ವಜನಿಕ ಪಾಲುದಾರಿಕೆ ಮತ್ತು ಡಿಜಿಟಲ್ ನಾವೀನ್ಯತೆಗಳಿಗೆ ಆದ್ಯತೆ ನೀಡುವ ಮೂಲಕ, ದೇಶೀಯ ಮತ್ತು ಅಂತರರಾಷ್ಟ್ರೀಯ ಸಂದರ್ಶಕರಿಗೆ ಸುರಕ್ಷಿತ, ಉತ್ತಮ-ಗುಣಮಟ್ಟದ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರಮುಖ ಉಪಕ್ರಮಗಳಲ್ಲಿ ರಾಜ್ಯದ ಪ್ರಚಾರವನ್ನು ಹೆಚ್ಚಿಸಲು ಬಲವಾದ ಮಾರ್ಕೆಟಿಂಗ್ ತಂತ್ರಗಳ ಜೊತೆಗೆ ಆಧ್ಯಾತ್ಮಿಕ ಮತ್ತು ಪರಿಸರ-ಪ್ರವಾಸೋದ್ಯಮದಂತಹ ವಿಷಯಾಧಾರಿತ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸುವುದು ಸೇರಿದೆ. ಅಂತಿಮವಾಗಿ, ನೀತಿಯು ಪ್ರದೇಶದ ವಿಶಿಷ್ಟ ಐತಿಹಾಸಿಕ ಮತ್ತು ಪರಿಸರ ಗುರುತನ್ನು ಸಂರಕ್ಷಿಸುವಾಗ ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬೆಳೆಸಲು ಪ್ರಯತ್ನಿಸುತ್ತದೆ.

2024-29ರ ಪ್ರವಾಸೋದ್ಯಮ ನೀತಿಯ ಪ್ರಮುಖ ಗುರಿಗಳು

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಾಜ್ಯವನ್ನು ಜಾಗತಿಕವಾಗಿ ಪ್ರಮುಖ ತಾಣವಾಗಿ ಪರಿವರ್ತಿಸಲು ಸಮಗ್ರ ಚೌಕಟ್ಟನ್ನು ರೂಪಿಸುತ್ತದೆ ಮತ್ತು ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮುಖ್ಯ ಗುರಿಗಳನ್ನು ದೃಷ್ಟಿ, ಧ್ಯೇಯ ಮತ್ತು ನಿರ್ದಿಷ್ಟ ಕಾರ್ಯತಂತ್ರದ ಉದ್ದೇಶಗಳಾಗಿ ವರ್ಗೀಕರಿಸಲಾಗಿದೆ:

ಆರ್ಥಿಕ ಮತ್ತು ಶ್ರೇಯಾಂಕ ಗುರಿಗಳನ್ನು ಒಟ್ಟುಗೂಡಿಸುವುದು

  • ರಾಷ್ಟ್ರೀಯ ಮತ್ತು ಜಾಗತಿಕ ಶ್ರೇಯಾಂಕ: 2029 ರ ವೇಳೆಗೆ ದೇಶೀಯ ಪ್ರವಾಸಿ ಭೇಟಿಗಳಲ್ಲಿ ಕರ್ನಾಟಕವು ಭಾರತದ ಅಗ್ರ 3 ರಾಜ್ಯಗಳಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರವಾಸಿ ಭೇಟಿಗಳಲ್ಲಿ ಅಗ್ರ 5 ರಾಜ್ಯಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು ಈ ನೀತಿ ಹೊಂದಿದೆ.
  • ಆರ್ಥಿಕ ಕೊಡುಗೆ: 2032 ರ ವೇಳೆಗೆ ಕರ್ನಾಟಕದ USD 1 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಬೆಂಬಲಿಸಲು ಪ್ರವಾಸೋದ್ಯಮವನ್ನು ಆದ್ಯತೆಯ ವಲಯವಾಗಿ ಸ್ಥಾಪಿಸಲಾಗಿದೆ.
  • ಉದ್ಯೋಗ ಸೃಷ್ಟಿ: ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಪ್ರಾಥಮಿಕ ಗಮನವಾಗಿದೆ, ಈ ವಲಯವು ರಾಜ್ಯದ ಕಾರ್ಯಪಡೆಗೆ ಗಮನಾರ್ಹವಾಗಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ (ಇದು ಪ್ರಸ್ತುತ ಪ್ರತಿ 10 ಉದ್ಯೋಗಗಳಲ್ಲಿ 1 ಅನ್ನು ನೀಡುತ್ತದೆ).

ದೃಷ್ಟಿಕೋನ ಮತ್ತು ಧ್ಯೇಯ

ಈ ನೀತಿಯ ದೃಷ್ಟಿಕೋನವು, ಮಕ್ಕಳು, ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಮಾಜದ ಎಲ್ಲಾ ಸ್ತರದ ಜನರ ಪ್ರಯಾಣ, ಕಲಿಕೆ ಮತ್ತು ಆಧ್ಯಾತ್ಮಿಕ ಅಥವಾ ಬೌದ್ಧಿಕ ಪುನರ್ಭರ್ತಿಗಾಗಿ ತಮ್ಮ ಆಸೆಗಳನ್ನು ಪೂರೈಸಲು ಅನುವು ಮಾಡಿಕೊಡುವ “ಸಮಗ್ರ ಸಕ್ರಿಯಗೊಳಿಸುವ ಪ್ಯಾಕೇಜ್” ಅನ್ನು ಒದಗಿಸುವುದಾಗಿದೆ.

ಇದನ್ನು ಸಾಧಿಸಲು, ಧ್ಯೇಯವು ಈ ಕೆಳಗಿನವುಗಳ ಮೇಲೆ ಕೇಂದ್ರೀಕರಿಸುತ್ತದೆ:

  • ವಿಶ್ವ ದರ್ಜೆಯ ಅನುಭವಗಳು: ಕರ್ನಾಟಕವನ್ನು ಹೆಮ್ಮೆಯ ಮೂಲವನ್ನಾಗಿ ಮಾಡುವ ಉತ್ತಮ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವುದು.
  • ಸಮಗ್ರ ಅಭಿವೃದ್ಧಿ: ಸಾಮಾಜಿಕ ಸಮಾನತೆ, ಮಹಿಳೆಯರು ಮತ್ತು ಯುವ ಸಬಲೀಕರಣ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವುದು.
  • ಪ್ರವಾಸಿ ಕೇಂದ್ರಿತ ಪರಿಸರ ವ್ಯವಸ್ಥೆ: ದೃಢವಾದ ಮೂಲಸೌಕರ್ಯ ಮತ್ತು ವರ್ಧಿತ ಸೇವಾ ಗುಣಮಟ್ಟವನ್ನು ಉತ್ತೇಜಿಸುವುದು.
  • ಸುಸ್ಥಿರತೆ: ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ನೀಡುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಅಭ್ಯಾಸಗಳನ್ನು ಸುಗಮಗೊಳಿಸುವುದು.
  • ಪರಂಪರೆ ಸಂರಕ್ಷಣೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ ಪರಂಪರೆಯ ಸ್ವತ್ತುಗಳ ಗುರುತಿಸುವಿಕೆ ಮತ್ತು ಸಂರಕ್ಷಣೆಯನ್ನು ಚಾಲನೆ ಮಾಡುವುದು.

ಪ್ರಮುಖ ಉದ್ದೇಶಗಳು

ಈ ಗುರಿಗಳನ್ನು ಸಾಧಿಸಲು ನೀತಿಯು 32 ನಿರ್ದಿಷ್ಟ ಉದ್ದೇಶಗಳನ್ನು ಗುರುತಿಸುತ್ತದೆ, ಅವುಗಳೆಂದರೆ:

  • ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ: ಪ್ರವಾಸೋದ್ಯಮ ಪ್ರಯೋಜನಗಳು ರಾಜ್ಯದಾದ್ಯಂತ ಹರಡಿರುವುದನ್ನು ಖಚಿತಪಡಿಸಿಕೊಳ್ಳಲು ಕಡಿಮೆ-ತಿಳಿದಿರುವ ತಾಣಗಳ ಪ್ರಚಾರ ಮತ್ತು ಪ್ರವೇಶವನ್ನು ಹೆಚ್ಚಿಸುವುದು.
  • ಮೂಲಸೌಕರ್ಯ ಶ್ರೇಷ್ಠತೆ: ಪ್ರಮುಖ ತಾಣಗಳಲ್ಲಿ ಮತ್ತು ಅವುಗಳಿಗೆ ಹೋಗುವ ಮಾರ್ಗದಲ್ಲಿ ಗುಣಮಟ್ಟದ ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವುದು.
  • ಡಿಜಿಟಲ್ ಪರಿವರ್ತನೆ: ಸಂದರ್ಶಕರ ತೊಡಗಿಸಿಕೊಳ್ಳುವಿಕೆ, ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ತಂತ್ರಜ್ಞಾನ ಮತ್ತು ಡಿಜಿಟಲ್ ಪರಿಹಾರಗಳನ್ನು ಬಳಸಿಕೊಳ್ಳುವುದು.
  • ಹೂಡಿಕೆ ಸೌಲಭ್ಯ: ಖಾಸಗಿ ವಲಯದ ಭಾಗವಹಿಸುವಿಕೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು (ಪಿಪಿಪಿ) ಆಕರ್ಷಿಸಲು ಹೂಡಿಕೆದಾರರ ಸ್ನೇಹಿ ನೀತಿಗಳೊಂದಿಗೆ ಅನುಕೂಲಕರ ವ್ಯಾಪಾರ ವಾತಾವರಣವನ್ನು ಸೃಷ್ಟಿಸುವುದು.
  • ಕೌಶಲ್ಯ ಅಭಿವೃದ್ಧಿ: ಲಾಭದಾಯಕ ಉದ್ಯೋಗ ಮತ್ತು ಬಲವಾದ ಪ್ರತಿಭಾನ್ವಿತ ಗುಂಪನ್ನು ಖಚಿತಪಡಿಸಿಕೊಳ್ಳಲು ಪ್ರಯಾಣ ಮತ್ತು ಆತಿಥ್ಯ ವಲಯಕ್ಕೆ ನುರಿತ ಕಾರ್ಯಪಡೆಯನ್ನು ನಿರ್ಮಿಸುವುದು.
  • ವೈವಿಧ್ಯಮಯ ಪ್ರವಾಸೋದ್ಯಮ ವಿಷಯಗಳು: ಸಾಹಸ, ಕೃಷಿ, ಕರಾವಳಿ, ಪರಂಪರೆ, ಆಧ್ಯಾತ್ಮಿಕ, ಸ್ವಾಸ್ಥ್ಯ ಮತ್ತು MICE ಪ್ರವಾಸೋದ್ಯಮ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು.

ಒಂದು ಜಿಲ್ಲೆ –  ಒಂದು ತಾಣ ಕಾರ್ಯಕ್ರಮ

ಒಂದು ಜಿಲ್ಲೆ, ಒಂದು ತಾಣ (One District, One Destination (ODOD) ಕಾರ್ಯಕ್ರಮವು ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಒಂದು ಕಾರ್ಯತಂತ್ರದ ಉಪಕ್ರಮವಾಗಿದೆ.

ಕಾರ್ಯಕ್ರಮದ ಪ್ರಮುಖ ವಿವರಗಳು ಹೀಗಿವೆ:

  • ಪ್ರಮುಖ ಗಮನ: ಈ ಉಪಕ್ರಮವು ಕರ್ನಾಟಕದ ಪ್ರತಿಯೊಂದು ಜಿಲ್ಲೆಯೊಳಗೆ ಒಂದು ವಿಶಿಷ್ಟ ಪ್ರವಾಸೋದ್ಯಮ ತಾಣದ ಅಭಿವೃದ್ಧಿ ಮತ್ತು ಪ್ರಚಾರದ ಮೇಲೆ ಕೇಂದ್ರೀಕರಿಸುತ್ತದೆ.
  • ನಾಯಕತ್ವ: ಪ್ರತಿ ಜಿಲ್ಲೆಯ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತದೆ.
  • ಕಾರ್ಯತಂತ್ರದ ಉದ್ದೇಶಗಳು:
  • ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ: ಪ್ರತಿ ಜಿಲ್ಲೆಯಲ್ಲಿ ಒಂದು ನಿರ್ದಿಷ್ಟ ತಾಣವನ್ನು ಹೈಲೈಟ್ ಮಾಡುವ ಮೂಲಕ, ನೀತಿಯು ಕಡಿಮೆ-ತಿಳಿದಿರುವ ಪ್ರದೇಶಗಳ ಪ್ರಚಾರ ಮತ್ತು ಪ್ರವೇಶಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಪ್ರವಾಸೋದ್ಯಮದ ಆರ್ಥಿಕ ಪ್ರಯೋಜನಗಳು ರಾಜ್ಯದಾದ್ಯಂತ ಹೆಚ್ಚು ಸಮವಾಗಿ ಹರಡುವುದನ್ನು ಖಚಿತಪಡಿಸುತ್ತದೆ.
  • ಸ್ಥಳೀಯ ಸಬಲೀಕರಣ: ಇದು ಗ್ರಾಮೀಣ ಸಮುದಾಯಗಳಲ್ಲಿ ಪ್ರವಾಸೋದ್ಯಮ-ಚಾಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಬೆಳೆಸುವ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಪ್ರದರ್ಶಿಸುವ ಗುರಿಯೊಂದಿಗೆ ಹೊಂದಿಕೊಳ್ಳುತ್ತದೆ.
  • ಸಾಂಸ್ಕೃತಿಕ ಕೇಂದ್ರಗಳು: ಈ ವಿಶಾಲ ಜಿಲ್ಲಾ ಮಟ್ಟದ ಗಮನದ ಭಾಗವಾಗಿ, ಪ್ರತಿ ಜಿಲ್ಲೆಯು ಸ್ಥಳೀಯ ಕರಕುಶಲ ವಸ್ತುಗಳು, ಪಾಕಪದ್ಧತಿ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಕನಿಷ್ಠ ಒಂದು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಹೊಂದಲು ಉದ್ದೇಶಿಸಿದೆ, ಇದು ಸಂದರ್ಶಕರಿಗೆ ಕುಟುಂಬ ಸ್ನೇಹಿ ತಾಣವನ್ನು ಒದಗಿಸುತ್ತದೆ.

ಈ ಕಾರ್ಯಕ್ರಮವು ಜಿಲ್ಲಾ ಪ್ರವಾಸೋದ್ಯಮ ಸಮಿತಿಗಳು ಸ್ಥಳೀಯ ತಾಣಗಳನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಅಪ್‌ಗ್ರೇಡ್ ಮಾಡಲು ಸಿದ್ಧಪಡಿಸಿದ ಜಿಲ್ಲಾ ಪ್ರವಾಸೋದ್ಯಮ ಮಾಸ್ಟರ್ ಪ್ಲಾನ್‌ಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ.

ಒಟ್ಟಾರೆ ಕರ್ನಾಟಕದ ಹೊಸ ಪ್ರವಾಸೋದ್ಯಮ ನೀತಿಯು ಕರ್ನಾಟಕವನ್ನು ವಿಶ್ವಪ್ರವಾಸೋದ್ಯಮದ ಪ್ರಮುಖ ಸ್ಥಾನದಲ್ಲಿ ನಿಲ್ಲಿಸುವ ಸದುದ್ದೇಶವನ್ನು ಹೊಂದಿದೆ.

ಪ್ರವಾಸೋದ್ಯಮದ ಉದ್ದೇಶಗಳು

ಪ್ರವಾಸೋದ್ಯಮದ ಉದ್ದೇಶಗಳು

ಪ್ರವಾಸೋದ್ಯಮವು ಕೇವಲ ಮನರಂಜನೆಗಾಗಿ ನಡೆಯುವ ಚಟುವಟಿಕೆಯಾಗಿಲ್ಲ; ಇದು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧಿತ ಹಲವು ಉದ್ದೇಶಗಳನ್ನು ಹೊಂದಿರುವ ಬಹುಆಯಾಮದ ಪ್ರಕ್ರಿಯೆಯಾಗಿದೆ. ಪ್ರವಾಸಿಗರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಸಮಾಜದ ಅಭಿವೃದ್ಧಿ, ಜೀವನಮಟ್ಟದ ಸುಧಾರಣೆ ಮತ್ತು ಪರಂಪರೆಯ ಸಂರಕ್ಷಣೆಯನ್ನೂ ಇದು ಗುರಿಯಾಗಿರಿಸುತ್ತದೆ. ಉತ್ತಮ ಯೋಜನೆಯ ಪ್ರವಾಸೋದ್ಯಮ ವ್ಯವಸ್ಥೆ ಪ್ರವಾಸಿಗರು, ಸ್ಥಳೀಯ ಸಮುದಾಯ ಮತ್ತು ಪರಿಸರದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

1. ಆರ್ಥಿಕ ಅಭಿವೃದ್ಧಿ :

ಪ್ರವಾಸೋದ್ಯಮದ ಪ್ರಮುಖ ಉದ್ದೇಶಗಳಲ್ಲಿ ಒಂದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು. ಇದು ವಿದೇಶಿ ವಿನಿಮಯದ ಆದಾಯ, ಹೂಡಿಕೆಗಳು ಮತ್ತು ವ್ಯಾಪಾರ ಅವಕಾಶಗಳ ಮೂಲಕ ಆದಾಯವನ್ನು ಉಂಟುಮಾಡುತ್ತದೆ. ಹೋಟೆಲ್‌ಗಳು, ಸಾರಿಗೆ, ಕೈಗಾರಿಕೆಗಳು ಮತ್ತು ಸ್ಥಳೀಯ ಮಾರುಕಟ್ಟೆಗಳ ಬೆಳವಣಿಗೆಗೆ ಇದು ಸಹಕಾರಿಯಾಗುತ್ತದೆ.

ಇದಲ್ಲದೆ, ಪ್ರವಾಸೋದ್ಯಮವು ಕೃಷಿಯಂತಹ ಪರಂಪರಾಗತ ಕ್ಷೇತ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆರ್ಥಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಸಣ್ಣ ಉದ್ಯಮಗಳಿಗೆ ಅವಕಾಶಗಳನ್ನು ನೀಡುವುದರಿಂದ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.

2. ಉದ್ಯೋಗ ಸೃಷ್ಟಿ

ಪ್ರವಾಸೋದ್ಯಮವು ವಿವಿಧ ಮಟ್ಟದ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದನ್ನು ಗುರಿಯಾಗಿರಿಸುತ್ತದೆ. ಹೋಟೆಲ್‌ಗಳು, ಪ್ರವಾಸ ಏಜೆನ್ಸಿಗಳು, ವಿಮಾನಯಾನ ಮತ್ತು ಮಾರ್ಗದರ್ಶಕರಲ್ಲಿ ನೇರ ಉದ್ಯೋಗಗಳನ್ನು ನೀಡುತ್ತದೆ.

ಇದಲ್ಲದೆ, ಕೃಷಿ, ನಿರ್ಮಾಣ ಮತ್ತು ಕೈಗಾರಿಕೆಗಳಲ್ಲಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಮಹಿಳೆಯರು, ಯುವಕರು ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಮೂಲಕ ಬಡತನವನ್ನು ಕಡಿಮೆ ಮಾಡುತ್ತದೆ.

3. ಪ್ರವಾಸಿಗರ ತೃಪ್ತಿ

ಪ್ರವಾಸೋದ್ಯಮದ ಮುಖ್ಯ ಉದ್ದೇಶಗಳಲ್ಲಿ ಒಂದೆಂದರೆ ಪ್ರವಾಸಿಗರಿಗೆ ತೃಪ್ತಿಕರ ಮತ್ತು ಸ್ಮರಣೀಯ ಅನುಭವವನ್ನು ನೀಡುವುದು. ಉತ್ತಮ ಸೇವೆಗಳು, ಭದ್ರತೆ, ಸೌಲಭ್ಯಗಳು ಮತ್ತು ಸ್ವಚ್ಛತೆ ಪ್ರವಾಸಿಗರ ತೃಪ್ತಿಯನ್ನು ಹೆಚ್ಚಿಸುತ್ತವೆ.

ತೃಪ್ತಿಯಾದ ಪ್ರವಾಸಿಗರು ಮತ್ತೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಾರೆ.

4. ಸಾಂಸ್ಕೃತಿಕ ವಿನಿಮಯ ಮತ್ತು ಪ್ರಚಾರ

ಪ್ರವಾಸೋದ್ಯಮವು ವಿವಿಧ ಸಂಸ್ಕೃತಿಗಳ ನಡುವೆ ಪರಸ್ಪರ ಅರಿವು ಮತ್ತು ಗೌರವವನ್ನು ಉತ್ತೇಜಿಸುತ್ತದೆ. ಪ್ರವಾಸಿಗರು ಸ್ಥಳೀಯ ಸಂಪ್ರದಾಯಗಳು, ಹಬ್ಬಗಳು ಮತ್ತು ಜೀವನಶೈಲಿಗಳನ್ನು ಅನುಭವಿಸುವ ಅವಕಾಶ ಪಡೆಯುತ್ತಾರೆ.

ಇದಲ್ಲದೆ, ಇದು ಐತಿಹಾಸಿಕ ಸ್ಮಾರಕಗಳು, ಕಲೆಗಳು ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ. ಸ್ಥಳೀಯ ಜನರಲ್ಲಿ ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ.

5. ಪರಿಸರ ಸಂರಕ್ಷಣೆ

ಪ್ರವಾಸೋದ್ಯಮದ ಮತ್ತೊಂದು ಪ್ರಮುಖ ಉದ್ದೇಶ ಪರಿಸರವನ್ನು ರಕ್ಷಿಸುವುದು. ಇದು ಅರಣ್ಯಗಳು, ಪರ್ವತಗಳು, ನದಿಗಳು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ.

ಇದಲ್ಲದೆ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

6. ಜೀವನಮಟ್ಟದ ಸುಧಾರಣೆ

ಪ್ರವಾಸೋದ್ಯಮವು ಸ್ಥಳೀಯ ಜನರ ಜೀವನಮಟ್ಟವನ್ನು ಸುಧಾರಿಸುವುದನ್ನು ಗುರಿಯಾಗಿರಿಸುತ್ತದೆ. ರಸ್ತೆ, ಆರೋಗ್ಯ, ಶಿಕ್ಷಣ ಮತ್ತು ಸಂವಹನ ವ್ಯವಸ್ಥೆಗಳ ಅಭಿವೃದ್ಧಿಗೆ ಇದು ಕಾರಣವಾಗುತ್ತದೆ.

ಇದಲ್ಲದೆ, ಪ್ರವಾಸೋದ್ಯಮದಿಂದ ಬಂದ ಆದಾಯವು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿ ಜನರ ಜೀವನಮಟ್ಟವನ್ನು ಹೆಚ್ಚಿಸುತ್ತದೆ.

7. ಸಮುದಾಯ ಅಭಿವೃದ್ಧಿ

ಪ್ರವಾಸೋದ್ಯಮವು ಸ್ಥಳೀಯ ಸಮುದಾಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಜನರನ್ನು ಪ್ರವಾಸ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ.

ಇದಲ್ಲದೆ, ಪ್ರವಾಸೋದ್ಯಮದ ಲಾಭಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಮಾಜದಲ್ಲಿ ಏಕತೆಯನ್ನು ಹೆಚ್ಚಿಸುತ್ತದೆ.

8. ಶಾಂತಿ ಮತ್ತು ಅಂತರರಾಷ್ಟ್ರೀಯ ಅರಿವು

ಪ್ರವಾಸೋದ್ಯಮವು ದೇಶಗಳ ನಡುವಿನ ಸ್ನೇಹ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಪರಸ್ಪರ ಅರಿವು ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ.

ಪ್ರವಾಸದ ಮೂಲಕ ಜನರು ವಿವಿಧ ಸಂಸ್ಕೃತಿಗಳನ್ನು ತಿಳಿದುಕೊಳ್ಳುತ್ತಾರೆ. ಇದರಿಂದ ಸಾಂಸ್ಕೃತಿಕ ಅಡೆತಡೆಗಳು ಕಡಿಮೆಯಾಗುತ್ತವೆ.

9. ಮೂಲಸೌಕರ್ಯ ಅಭಿವೃದ್ಧಿ

ಪ್ರವಾಸೋದ್ಯಮವು ರಸ್ತೆ, ವಿಮಾನ ನಿಲ್ದಾಣ, ಹೋಟೆಲ್‌ಗಳು ಮತ್ತು ಸಂವಹನ ವ್ಯವಸ್ಥೆಗಳಂತಹ ಮೂಲಸೌಕರ್ಯ ಅಭಿವೃದ್ಧಿಗೆ ಕಾರಣವಾಗುತ್ತದೆ.

ಈ ಸೌಲಭ್ಯಗಳು ಪ್ರವಾಸಿಗರಷ್ಟೇ ಅಲ್ಲದೆ ಸ್ಥಳೀಯ ಜನರಿಗೂ ಉಪಯುಕ್ತವಾಗುತ್ತವೆ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ.

10. ಸುಸ್ಥಿರ ಅಭಿವೃದ್ಧಿ

ಆಧುನಿಕ ಪ್ರವಾಸೋದ್ಯಮದ ಪ್ರಮುಖ ಉದ್ದೇಶ ಸುಸ್ಥಿರತೆಯನ್ನು ಸಾಧಿಸುವುದು. ಇಂದಿನ ಅಗತ್ಯಗಳನ್ನು ಪೂರೈಸುವಾಗ ಭವಿಷ್ಯದ ಪೀಳಿಗೆಗಳ ಅಗತ್ಯಗಳನ್ನು ಹಾನಿಗೊಳಿಸದಂತೆ ನೋಡಿಕೊಳ್ಳುವುದು ಇದರ ಗುರಿಯಾಗಿದೆ.

ಸುಸ್ಥಿರ ಪ್ರವಾಸೋದ್ಯಮವು ಆರ್ಥಿಕ ಬೆಳವಣಿಗೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಉಪಸಂಹಾರ

ಒಟ್ಟಾರೆಯಾಗಿ, ಪ್ರವಾಸೋದ್ಯಮದ ಉದ್ದೇಶಗಳು ವ್ಯಾಪಕವಾಗಿದ್ದು, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪ್ರಗತಿ, ಸಾಂಸ್ಕೃತಿಕ ಸಂರಕ್ಷಣೆ, ಪರಿಸರ ರಕ್ಷಣೆ ಮತ್ತು ಜಾಗತಿಕ ಏಕತೆಯನ್ನು ಒಳಗೊಂಡಿವೆ. ಇದು ಕೇವಲ ಪ್ರವಾಸವಲ್ಲ, ಆದರೆ ಸಮಗ್ರ ಅಭಿವೃದ್ಧಿಗೆ ಶಕ್ತಿಯುತ ಸಾಧನವಾಗಿದೆ.

ಸರಿಯಾದ ಯೋಜನೆ ಮತ್ತು ಜವಾಬ್ದಾರಿಯುತ ನಿರ್ವಹಣೆಯ ಮೂಲಕ ಪ್ರವಾಸೋದ್ಯಮವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳಿಗೆ ಸಹ ಪ್ರಯೋಜನಕಾರಿಯಾಗಿರುತ್ತದೆ.