ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಮಹಾತ್ಮ ಕಬೀರ್ ಮತ್ತು ಗುರುನಾನಕರು

ಪೀಠಿಕೆ

ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಮತ್ತು ಭಕ್ತಿ ಚಳವಳಿಯ ಪ್ರಮುಖ ಮುಖಂಡರಾಗಿದ್ದರು.ಕಬೀರ್ ಅವರ ಭಜನೆಗಳು ಸರಳ ಭಾಷೆಯಲ್ಲಿ ದೇವರ ಸತ್ಯವನ್ನು ವಿವರಿಸಿ, ಜನಸಾಮಾನ್ಯರಲ್ಲಿ ಭಕ್ತಿ ಮತ್ತು ನೈತಿಕತೆ ಬೆಳೆಸಿದವು. ಅವರು ಜಾತಿ-ಮತ ಬೇಧಗಳನ್ನು ವಿರೋಧಿಸಿ, ಮಾನವೀಯತೆ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು.ಅವರ ದೋಹಗಳು (ಸಣ್ಣ ಕವಿತೆಗಳು) ಜನರಲ್ಲಿ ನೈತಿಕ ಜಾಗೃತಿ ಮೂಡಿಸಿದವು.

ಗುರು ನಾನಕ್ ಸಿಖ್ ಧರ್ಮದ ಸ್ಥಾಪಕರಾಗಿ, “ಏಕ ದೇವ, ಸರ್ವರೂ ಸಮಾನ” ಎಂಬ ತತ್ವವನ್ನು ಪ್ರಸಾರ ಮಾಡಿದರು.ಅವರು ಅಹಂಕಾರ, ದ್ವೇಷ ಮತ್ತು ಮೂಢನಂಬಿಕೆಗಳನ್ನು ತೊರೆದು ಸೇವೆ, ಪ್ರೀತಿ ಮತ್ತು ಶ್ರಮದ ಮೂಲಕ ಬದುಕುವುದನ್ನು ಬೋಧಿಸಿದರು.ಗುರುನಾನಕ್ “ಸಂಗತ” ಮತ್ತು “ಲಂಗರ್” ಪದ್ಧತಿಗಳನ್ನು ಆರಂಭಿಸಿ, ಸಮಾಜದಲ್ಲಿ ಸಮಾನತೆ ಮತ್ತು ಸಹಭೋಜನದ ಪರಂಪರೆಯನ್ನು ರೂಪಿಸಿದರು. ಇವರಿಬ್ಬರೂ ಧಾರ್ಮಿಕ ಸಹಿಷ್ಣುತೆ, ಶಾಂತಿ ಮತ್ತು ಸಾಮಾಜಿಕ ಸಮಾನತೆಗೆ ನಿಲ್ಲುವ ಮಹತ್ವದ ಸಂತರಾಗಿದ್ದಾರೆ ಹಾಗೂ ಸಮಾಜ ಮಹಾನ್‌ ಸುಧಾರಕರಾಗಿದ್ದಾರೆ.

ಮಹಾತ್ಮ ಕಬೀರ್

ಮಹಾತ್ಮ ಕಬೀರರು ಭಕ್ತಿ ಚಳುವಳಿಯ ಅಗ್ರಗಣ್ಯ ನಾಯಕರು. ಇವರು ಸಾ. ಶ. 1398ರಲ್ಲಿ ಒಬ್ಬ ಬ್ರಾಹ್ಮಣವಿಧವೆಗೆ ಜನಿಸಿದಾಗ ಅವಳು ಸಮಾಜಕ್ಕೆ ಹೆದರಿ ಆ ಮಗುವನ್ನು ಲಹರ್‌ತಾಲಾ ಎಂಬ ಕೊಳದ ಬಳಿ ಬಿಟ್ಟುಹೋದಳು. ಆಗ ಬನಾರಸ್ಸಿನ ನೀರು ಮತ್ತು ನೀಮಾ ಎಂಬ ಮುಸ್ಲಿಂ ದಂಪತಿಗಳಿಗೆ ಆ ಮಗು ದೊರಕಿತು. ಅವರು ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳಸಿದರು. ಕಬೀರರು ಸೂಫಿ ಸಂತ ಪೀರ್ ರಾಕಿಯ ಪ್ರಭಾವಕ್ಕೆ ಒಳಗಾದರು. ನಂತರ ರಮಾನಂದರ ಶಿಷ್ಯರಾಗಿ ಸನ್ಯಾಸಿ ದೀಕ್ಷೆ ಪಡೆದರು.

ಬೋಧನೆಗಳು:

ಕಬೀರರು ಮುಕ್ತಿಗೆ ಜ್ಞಾನಮಾರ್ಗ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಇವರು ಏಕೀಶ್ವರ ವಾದವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ಸರ್ವಶಕ್ತ ಹಾಗೂ ಸರ್ವಜೀವಿಗಳ ರಕ್ಷಕನಾಗಿದ್ದಾನೆ ಎಂದು ಬೋಧಿಸಿದರು. ಇವರು ಜಾತಿಪದ್ಧತಿ, ಸಾಮಾಜಿಕ ಅಸಮಾನತೆ, ಮೂರ್ತಿಪೂಜೆ, ಬಾಲ್ಯವಿವಾಹ, ಸತಿಸಹಗಮನ, ಮೂಢನಂಬಿಕೆ ಹಾಗೂ ಪರ್ದಾಪದ್ಧತಿಯನ್ನು ಖಂಡಿಸಿದರು. ದೇಹದಂಡನೆ, ಉಪವಾಸ, ಅರ್ಥವಿಲ್ಲದ ಆಚರಣೆ, ತೀರ್ಥಯಾತ್ರೆ ಹಾಗೂ ಯಜ್ಞಯಾಗಾದಿಗಳಿಂದ ದೇವರು ಒಲಿಯಲಾರನು ಎಂದು ಎಚ್ಚರಿಸಿದರು. ಪರಿಶುದ್ಧ ಭಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು. ಮೂರ್ತಿ ಪೂಜೆಯನ್ನು ಖಂಡಿಸುತ್ತಾ “ಕಲ್ಲನ್ನು ಪೂಜಿಸಿ ಭಗವಂತನನ್ನು ಪಡೆಯುವದಾದರೆ ನಾನು ಬೆಟ್ಟವನ್ನೇ ಪೂಜಿಸುವೆ. ಪವಿತ್ರ ನದಿಗಳ ನೀರಿನ ಸ್ನಾನದಿಂದ ಮೋಕ್ಷ ಪಡೆಯುವುದಾದರೆ ಆ ನದಿಗಳಲ್ಲಿ ವಾಸವಾಗಿರುವ ಮೀನು ಕಪ್ಪೆಗಳೇಕೆ ಮುಕ್ತಿ ಹೊಂದಿಲ್ಲ?” ಎಂದು ಮೂದಲಿಸಿದರು.ಇಡೀ ವಿಶ್ವಕ್ಕೆ ದೇವರು ಒಬ್ಬನೆ. ಹಿಂದುಗಳು ದೇವರನ್ನು ಈಶ್ವರ ಎಂದು ಕರೆದರೆ ಮುಸಲ್ಮಾನರು ಅಲ್ಲಾ ಎಂದು ಕರೆಯುವರು. ಹಿಂದುಗಳಲ್ಲಿ ರಾಮನಾದರೆ ಮುಸಲ್ಮಾನರಲ್ಲಿ ರಹೀಮ. ಹಿಂದುಗಳು ಕೃಷ್ಣ ಎಂದು ಪೂಜಿಸಿದರೆ ಮುಸಲ್ಮಾನರು ಕರೀಮನೆಂದು ಪೂಜಿಸುವರು. ಹೀಗಾಗಿ ನಾನು ರಾಮರಹಿಮರ ಮಗನೆಂದು ಸಾರಿದರು. ಕಬೀರರು ತಮ್ಮ ಬೋಧನೆಗಳನ್ನು ಸರಳ ಭಾಷೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸಿದರು. ಇವರ ತತ್ವಗಳನ್ನು ದೋಹಾಗಳಲ್ಲಿ ಕಾಣಬಹುದಾಗಿದೆ.ಕಬೀರರ ಅನುಯಾಯಿಗಳಿಗೆ ಕಬೀರಪಂಥಿಗಳೆಂದು ಹೆಸರು.

ಗುರುನಾನಕರು

ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ಬಾಲ್ಯದಲ್ಲಿ ಐಹಿಕ ಜೀವನದಲ್ಲಿ ಆಸಕ್ತಿ ಬೆಳಸಿಕೊಳ್ಳದೆ ಏಕಾಂಗಿಯಾಗಿ ದೇವರ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಇದರಿಂದ ಚಿಂತಿತರಾದ ಇವರ ತಂದೆ ನಾನಕರನ್ನು ಲೌಕಿಕದ ಕಡೆಗೆ ತರಲು ಸಾ.ಶ. 1488 ರಲ್ಲಿ ಬಟಾಲಾದ ನಿವಾಸಿ ಮೂಲಚಂದನ ಮಗಳಾದ ಸುಲಖನಿ ಎಂಬುವಳೊಂದಿಗೆ ವಿವಾಹ ಮಾಡಿದರು. ಕೆಲ ವರ್ಷಗಳಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೂ ನಾನಕರು ದೇವರ ಧ್ಯಾನವನ್ನು ಮಾತ್ರ ಬಿಡಲೇ ಇಲ್ಲ.

ಜ್ಞಾನೋದಯ:

ಒಂದು ದಿನ ಗುರುನಾನಕರು ಸುಲ್ತಾನಪುರದ ಸಣ್ಣ ನೀರಿನ ಕೊಳದಲ್ಲಿ ಸ್ನಾನಮಾಡುತ್ತಿರುವಾಗ ದೇವರ ದರ್ಶನವಾಯಿತು. ಈ ದಿವ್ಯ ದರ್ಶನದಿಂದ ನಾನಕರಿಗೆ ಜ್ಞಾನೋದಯವಾಯಿತು ಎಂದು ತಿಳಿದು ಬರುತ್ತದೆ. ಜ್ಞಾನೋದಯದ ನಂತರ ನಾನಕರು ಸಂಸಾರ ಬಂಧನದಿಂದ ಬಿಡುಗಡೆ ಹೊಂದಿ ತಾನು ಕಂಡುಕೊಂಡ ಸತ್ಯದ ಸಾರವನ್ನು ಜಗತ್ತಿಗೆ ತಿಳಿಸಲು ಊರೂರು ಸುತ್ತಿದರು. ಅನೇಕ ಪಂಡಿತ ಪಾಮರರೊಂದಿಗೆ ಚರ್ಚೆಗಿಳಿದರು. ಮೆಕ್ಕಾ ಮದಿನಾಗಳಿಗೂ ಭೇಟಿನೀಡಿದರು.ನಂತರ ಚೀನಾ, ಟಿಬೇಟ್, ಶ್ರೀಲಂಕಾ, ಹರಿದ್ವಾರ, ಕಾಶಿ, ಅಸ್ಸಾಂ, ದೆಹಲಿ, ಕುರುಕ್ಷೇತ್ರ ಹಾಗೂ ಒರಿಸ್ಸಾಗಳನ್ನು ಸಂದರ್ಶಿಸಿದರು. ನಂತರ ರಾವಿನದಿಯ ದಂಡೆಯ ಮೇಲಿದ್ದ ಕರ್ತಾರಪುರ ಎಂಬ ನಗರದಲ್ಲಿ ಖಾಯಂ ಆಗಿ ನೆಲಸಿ ಸಾಕಷ್ಟು ಅನುಯಾಯಿಗಳನ್ನು ಪಡೆದರು. ತಮ್ಮ ಜೀವಿತದ ಕೊನೆಯ ಕಾಲದಲ್ಲಿ ನಾನಕರು ಬಾಯಿಲಹಾನಾ ಎಂಬ ಶಿಷ್ಯನಿಗೆ ಉತ್ತರಾಧಿಕಾರಿ ಪಟ್ಟವನ್ನು ಕಟ್ಟಿ ಸಾ.ಶ.1530 ರಲ್ಲಿ ಕರ್ತಾರಪುರದಲ್ಲಿ ನಿಧನರಾದರು.

ಬೋಧನೆಗಳು:

ಗುರುನಾನಕರು ಏಕೀಶ್ವರ ತತ್ವವನ್ನು ಪ್ರತಿಪಾದಿಸಿದರು. ದೇವರು ಒಬ್ಬನೆ ಅವನು ನಿರ್ಗುಣ, ನಿರಾಕಾರ, ಸರ್ವವ್ಯಾಪಿ, ನಿರ್ವಿಕಾರ, ನಿರ್ಮಲಚಿತ್ತ ಹಾಗೂ ಲೋಕೋದ್ಧಾರಕನಾಗಿದ್ದಾನೆಂದರು. ದೇವರ ಸ್ಮರಣೆಯಿಂದ ಮುಕ್ತಿ ಸಾಧ್ಯ ಎಂದು ಸಾರಿದರು. ನಾನಕರು ಜಾತಿಪದ್ಧತಿ, ಮೂರ್ತಿಪೂಜೆ, ಪರ್ದಾಪದ್ಧತಿ ಹಾಗೂ ಬಾಲ್ಯವಿವಾಹವನ್ನು ಖಂಡಿಸಿದರು. ಇವರು ಪುನರ್‌ಜನ್ಮದಲ್ಲಿ ನಂಬಿಕೆ ಇಟ್ಟಿದ್ದರು. ಹಿಂದೂ ಮುಸಲ್ಮಾನರ ನಡುವೆ ಐಕ್ಯತೆಯನ್ನು ಸಾಧಿಸಿದರು. ಪ್ರತಿಯೊಬ್ಬರೂ ಸ್ವಾರ್ಥ, ಮೋಸ, ವಂಚನೆ, ಕಪಟ ಹಾಗೂ ಅಸತ್ಯವನ್ನು ತ್ಯಜಿಸುವಂತೆ ಕರೆನೀಡಿದರು. ಗುರುನಾನಕರ ಬೋಧನೆಗಳನ್ನು ಸಿಖ್‌ರ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ದಲ್ಲಿ ನೋಡಬಹುದು. ಇದು ಗುರುಮುಖ ಲಿಪಿಯಲ್ಲಿದೆ. ‘ಗುರುದ್ವಾರ’ ಸಿಖ್ರ ಪವಿತ್ರವಾದ ಸ್ಥಳವಾಗಿದೆ.

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಕೃಷ್ಣದೇವರಾಯ (1509-1529): ಈತ ವಿಜಯನಗರ ಅರಸರಲ್ಲಿಯೇ ಅಲ್ಲದೆ ಇಡೀ ಭಾರತದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸಾ.ಶ.1509 ಅಗಸ್ಟ್ 8ನೆಯ ತಾರೀಖು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣದೇವರಾಯನು ಪಟ್ಟಾಭಿಷಿಕ್ತನಾದನು. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು. ಸಾ.ಶ. 1509 ರಿಂದ 1529 ರವರೆಗೆ ಸುಮಾರು 20 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈತ ವಿಜಯನಗರವನ್ನು ವೈಭವ ಹಾಗೂ ಕೀರ್ತಿಯ ಉನ್ನತ ಶಿಖರಕ್ಕೆ ಏರಿಸಿದನು. ಕೃಷ್ಣದೇವರಾಯ ಒಬ್ಬ ದಕ್ಷ ಆಡಳಿತಗಾರ, ವೀರಯೋಧ, ಅಪ್ರತಿಮ ಸಾಹಸಿ, ಚತುರ ರಾಜಕಾರಣಿ ಹಾಗೂ ಕಲೆ ವಾಸ್ತುಶಿಲ್ಪಗಳ ಆರಾಧಕನಾಗಿದ್ದನು.

ಕೃಷ್ಣದೇವರಾಯನ ದಿಗ್ವಿಜಯಗಳು
1) ವಿಜಾಪೂರ ಸುಲ್ತಾನನೊಂದಿಗೆ ಯುದ್ಧ (ಕ್ರಿ.ಶ. 1509):

ಕೃಷ್ಣದೇವರಾಯ ಸಿಂಹಾಸನಾಧೀಶ್ವರನಾದ ಕೆಲವೇ ದಿನಗಳಲ್ಲಿ ವಿಜಾಪುರದ ಸುಲ್ತಾನ ಯೂಸುಫ್ ಆದಿಲ್‌ಷಾ ಬಹಮನಿಯ ಸುಲ್ತಾನನಾಗಿದ್ದ ಮಹಮದ್‌ಷಾನ ಜೊತೆ ಸೇರಿ ರಾಯನ ಮೇಲೆ ಯುದ್ಧ ಸಾರಿದನು. ಆಗ ಕೃಷ್ಣದೇವರಾಯ ಸಿಡಿಲಿನಂತೆ ಅವರ ಮೇಲೆರಗಿ ‘ಡೋಣಿ’ ಎಂಬಲ್ಲಿ ಅವರನ್ನು ಸೋಲಿಸಿದನು. ಸೋತ ಮಹಮದ್ ಷಾ ಯುದ್ಧ ರಂಗದಿಂದ ಪಲಾಯನ ಮಾಡಿದನು. ಯೂಸಫ್ ಆದಿಲ್‌ ಷಾನನ್ನು ಕೋವಿಲಕೊಂಡದ ಬಳಿ ಸೋಲಿಸಿದನು. ಯೂಸಫ್ ಆದಿಲ್‌ಷಾ ರಣರಂಗದಲ್ಲಿ ವೀರಮರಣವನ್ನು ಹೊಂದಿದನು.

2) ಬೀದರ್ ಮುತ್ತಿಗೆ (ಕ್ರಿ.ಶ. 1514):

ವಿಜಾಪುರದ ಸುಲ್ತಾನನನ್ನು ಸೋಲಿಸಿದ ಕೃಷ್ಣದೇವರಾಯ ಬೀದರಿಗೆ ಮುತ್ತಿಗೆ ಹಾಕಿ ಅಲ್ಲಿ ತನ್ನ ಪ್ರಧಾನಮಂತ್ರಿಯಿಂದ ಬಂಧಿತನಾಗಿದ್ದ ಎರಡನೆಯ ಮಹಮ್ಮದ್ಾನನ್ನು ಬಂಧನದಿಂದ ಬಿಡುಗಡೆಗೊಳಿಸಿ ಪುನಃ ಸಿಂಹಾಸನದ ಮೇಲೆ ಕೂಡಿಸಿದನು. ಇದರಿಂದಾಗಿ ರಾಯನು ‘ಯವನರಾಜ ಪ್ರತಿಷ್ಠಾಪನಚಾರ್ಯ’ ಎಂಬ ಬಿರುದನ್ನು ಪಡೆದನು.

3) ಉಮ್ಮತ್ತೂರಿನ ಮುತ್ತಿಗೆ:

ಉಮ್ಮತ್ತೂರಿನ ಪಾಳೆಯಗಾರ ಗಂಗರಾಜನು ಬಂಡೆದ್ದು ಪೆನುಕೊಂಡೆಯನ್ನು ಆಕ್ರಮಿಸಿದನು. ಇವನ ಸೊಕ್ಕನ್ನು ಅಡಗಿಸಲು ಕೃಷ್ಣದೇವರಾಯನು ಸೈನ್ಯ ಸಮೇತ ಅಲ್ಲಿಗೆ ಧಾವಿಸಿ ಬಂದು ಪಾಳೆಯಗಾರನ ಮುಖ್ಯ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಹಾಗೂ ಶಿವನಸಮುದ್ರಗಳನ್ನು ಮುತ್ತಿ ಅವುಗಳನ್ನು ವಶಪಡಿಸಿಕೊಂಡನು. ನಂತರ ಅವುಗಳ ಆಡಳಿತವನ್ನು ಬೆಂಗಳೂರು ಕೆಂಪೇಗೌಡನಿಗೆ ವಹಿಸಿಕೊಟ್ಟನು.

4) ಕಳಿಂಗ, ಆಂಧ್ರಗಳ ಮುತ್ತಿಗೆ (ಕ್ರಿ.ಶ. 1513):

ಸಾ.ಶ. 1513ರಲ್ಲಿ ಕೃಷ್ಣದೇವರಾಯನು ಓರಿಸ್ಸಾದ ಪ್ರತಾಪರುದ್ರನ ವಿರುದ್ಧ ಯುದ್ಧವನ್ನು ಘೋಷಿಸಿ ಅವನನ್ನು ಸೋಲಿಸಿ ಉದಯಗಿರಿಯನ್ನು ಗೆದ್ದುಕೊಂಡನು. ನಂತರ ಕಳಿಂಗ ಕದನದಲ್ಲಿ ಆದಂಕಿ ಕಂದಕೂರು, ಪೆನುಕೊಂಡ, ನಾಗಾರ್ಜುನಕೊಂಡ, ಬಿಲ್ಲಮಕೊಂಡ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡನು.ನಂತರ ತನ್ನ ದಿಗ್ವಿಜಯ ಯಾತ್ರೆಯನ್ನು ಓರಿಸ್ಸಾದವರೆಗೆ ಮುಂದುವರೆಸಿ ಅದರ ರಾಜಧಾನಿಯಾಗಿದ್ದ ‘ಕಟಕ್’ನ್ನು ಗೆದ್ದುಕೊಂಡನು. ಗಜಪತಿ ಪ್ರತಾಪರುದ್ರ ವಿಧಿಯಿಲ್ಲದೆ ಕೃಷ್ಣದೇವರಾಯನಿಗೆ ಶರಣಾದನು. ನಂತರ ಕೃಷ್ಣದೇವರಾಯನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್‌ಮೋಹಿನಿಯನ್ನು ರಾಯನಿಗೆ ಕೊಟ್ಟು ಮದುವೆ ಮಾಡಿದನು.

5) ಗೋಲ್ಕಂಡ ಯುದ್ಧ (ಕ್ರಿ.ಶ.1512):

ಗೋಲ್ಕಂಡದ ಕುಲಿ ಕುತುಬ್‌ ಷಾ ವಿಜಯನಗರದ ಮೇಲೆ ದಾಳಿ ಮಾಡಿದನು. ಇವನನ್ನು ಎದುರಿಸಲು ರಾಯನು ಸಾಳುವ ತಿಮ್ಮರಸನ ನೇತೃತ್ವದಲ್ಲಿ ಸೈನ್ಯವನ್ನು ರವಾನಿಸಿದನು. ತಿಮ್ಮರಸ ಗೋಲ್ಕಂಡದ ಸುಲ್ತಾನನನ್ನು ಸೋಲಿಸಿ ಅಲ್ಲಿಂದ ಓಡಿಸಿದನು.

6) ರಾಯಚೂರು ಯುದ್ಧ (ಕ್ರಿ.ಶ.1520):

ವಿಜಾಪುರದ ಸುಲ್ತಾನ ಇಸ್ಮಾಯಿಲ್ ಆದಿಲ್‌ಷಾ ರಾಯಚೂರಿನ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡನು. ಇದರಿಂದ ಕುಪಿತಗೊಂಡ ಕೃಷ್ಣದೇವರಾಯನು ಇಸ್ಮಾಯಿಲ್‌ನನ್ನು ರಾಯಚೂರು ಕದನದಲ್ಲಿ ಸೋಲಿಸಿದನು. ನಂತರ ಸೋತ ಇಸ್ಮಾಯಿಲ್ ಅಲ್ಲಿಂದ ಪಲಾಯನ ಮಾಡಿದನು.

7) ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ:

ಸಾ.ಶ. 1510ರಲ್ಲಿ ಪೋರ್ಚುಗೀಸರು ಗೋವೆಯನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ರಾಯನು ಪರೋಕ್ಷವಾಗಿ ಬೆಂಬಲ ನೀಡಿದ್ದನು. ಇದರಿಂದ ಸಂತೃಪ್ತರಾಗಿದ್ದ ಪೋರ್ಚುಗೀಸರು ಕೃಷ್ಣದೇವರಾಯನೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿದ್ದರಲ್ಲದೆ. ಅವನಿಗೆ ಕುದುರೆಗಳನ್ನು ಸರಬರಾಜು ಮಾಡಿದರು.

8) ದಖನ್ ದಂಡಯಾತ್ರೆ:

ಕೃಷ್ಣದೇವರಾಯನ ಸೇನಾನಾಯಕನಾದ ವಿಜಯಪ್ಪ ಎಂಬುವವನು ದಕ್ಷಿಣ ಭಾರತದ ಮೇಲೆ ದಾಳಿಮಾಡಿ ಚೋಳ ಹಾಗೂ ಪಾಂಡ್ಯರನ್ನು ಸೋಲಿಸಿ ಕೊಡಗು ಹಾಗೂ ಮಲಬಾರನ್ನು ವಶಪಡಿಸಿಕೊಂಡನು.

9) ಶ್ರೀಲಂಕಾದ ವಿರುದ್ಧ ಯುದ್ಧ:

ಸಿಂಹಳದ ಪ್ರಜೆಗಳು ಅಲ್ಲಿನ ದೊರೆ ರಾಜವಿಜಯಬಾಹುವನ್ನು ದೇಶ ಬಿಟ್ಟು ಹೊರಹಾಕಿದರು. ಹೀಗೆ ದೇಶ ಭ್ರಷ್ಟನಾಗಿ ಬಂದ ರಾಜವಿಜಯ ಬಾಹು ಶ್ರೀಕೃಷ್ಣದೇವರಾಯನ ಸಹಾಯ ಯಾಚಿಸಿದನು. ಆಗ ರಾಯನು ರಾಜವಿಜಯಬಾಹುವಿನ ಪರವಾಗಿ ಹೋರಾಟ ಮಾಡಿ ಸಿಂಹಳಿಯರನ್ನು ಸೋಲಿಸಿ ವಿಜಯ ಬಾಹುವಿನ ಮಗನಾದ “ಭುವನೈಕ್ಯಬಾಹುವನ್ನು” ಸಿಂಹಳದ ಸಿಂಹಾಸನಕ್ಕೆ ತಂದನು. ಆಗ ಕೃಷ್ಣದೇವರಾಯನು ದಕ್ಷಿಣಾಧಿಪತಿ ಎಂಬ ಬಿರುದನ್ನು ಪಡೆದನು.

10) ಸಾಂಸ್ಕೃತಿಕ ಸಾಧನೆಗಳು:

ಕೃಷ್ಣದೇವರಾಯನು ವೈಷ್ಣವನಾಗಿದ್ದರೂ, ಅನ್ಯಧರ್ಮಗಳನ್ನು ಎಂದೂ ಕಡೆಗಣಿಸಲಿಲ್ಲ. ರಾಯನು ಕ್ರೈಸ್ತ, ಇಸ್ಲಾಂ, ಶೈವ, ಬೌದ್ಧ ಹಾಗೂ ಜೈನ ಧರ್ಮಗಳಿಗೆ ದಾನ ದತ್ತಿಗಳನ್ನು ನೀಡಿದನು. ಉದಯಗಿರಿಯಿಂದ ಬಾಲಗೋಪಾಲ ವಿಗ್ರಹವನ್ನು ತಂದು ರಾಜಧಾನಿಯಲ್ಲಿ ಪ್ರತಿಷ್ಠಾಪಿಸಿದನು. ಹಂಪೆಯ ವಿರುಪಾಕ್ಷ ದೇವಾಲಯದ ಪೂಜೆ ಮಾಡಲು ಸಕಲ ಕ್ರಮ ಕೈಗೊಂಡನು. ರಾಯನ ಆಸ್ಥಾನಕ್ಕೆ ಯಾರೇ ಬಂದರೂ ಅವರನ್ನು ಕ್ರೈಸ್ತರೇ? ಯಹೂದಿಗಳೇ?ಜೈನರೇ? ಮುಸಲ್ಮಾನರೇ? ಎಂದು ಪ್ರಶ್ನಿಸದೇ ಅವರನ್ನು ಉದಾರವಾಗಿ ಕಾಣುತ್ತಿದ್ದನು.

11)ಕಲೆ ಮತ್ತು ವಾಸ್ತುಶಿಲ್ಪ:

ಕೃಷ್ಣದೇವರಾಯನು ಮಹಾ ನಿರ್ಮಾಣಕಾರನಾಗಿದ್ದನು. ಇವನು ಹಂಪಿಯಲ್ಲಿ ಉಗ್ರನರಸಿಂಹ, ಏಕಶಿಲಾರಥ, ಭವ್ಯ ಕಟ್ಟಡಗಳು ಹಾಗೂ ಮೂರ್ತಿಗಳನ್ನು ನಿರ್ಮಿಸಿದ್ದಾನೆ. ಹಂಪಿಯ ಹಜಾರರಾಮಸ್ವಾಮಿ ದೇವಾಲಯ, ಕೃಷ್ಣಸ್ವಾಮಿ, ವಿಜಯವಿಠಲಸ್ವಾಮಿ ಹಾಗೂ ಮಹಾನವಮಿ ದಿಬ್ಬಗಳನ್ನು ನಿರ್ಮಾಣಮಾಡಿದನು. ಅದಲ್ಲದೆ ರಾಯಗೋಪುರ, ಕಲ್ಯಾಣಮಂಟಪ, ಗೋಪುರ ಮುಂತಾದವುಗಳು ಇವನ ಕಾಲದಲ್ಲಿ ಆರಂಭಗೊಂಡವು. ರಾಯನು ತನ್ನ ತಾಯಿ ನಾಗಲಾಂಬ ಹೆಸರಿನಲ್ಲಿ ನಾಗಲಾಪುರವನ್ನು ಮತ್ತು ತನ್ನ ರಾಣಿ ತಿರುಮಲಾದೇವಿಯ ಹೆಸರಿನಲ್ಲಿ ಹೊಸಪೇಟೆಯನ್ನು ನಿರ್ಮಿಸಿದನು. ತನ್ನ ಪ್ರೀತಿಯ ಮಡದಿ ಚಿನ್ನಾಂಬೆಯ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿದನು. ಅಲ್ಲದೆ ಅನೇಕ ಕೋಟೆಗಳು, ಕೆರೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಿಸಿದನು. ಇವನಿಗೆ ಕನ್ನಡರಾಜ್ಯರಮಾರಮಣ,ಕವಿಪುಂಗವ, ಕರ್ನಾಟಕಾಂದ್ರಭೋಜ ಮತ್ತು ಯವನರಾಜ್ಯಪ್ರತಿಸ್ಥಾಪನಾಚಾರ್ಯಎಂಬ ಬಿರುದುಗಳಿದ್ದವು.

12) ಸಾಹಿತ್ಯ:

ಕೃಷ್ಣದೇವರಾಯನ ಕಾಲದಲ್ಲಿ ಸಾಹಿತ್ಯ ಸಾಕಷ್ಟು ಹುಲುಸಾಗಿ ಬೆಳೆಯಿತು. ಇವನು ಸ್ವತಃ ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದನು. ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಅಮುಕ್ತಮಲ್ಯದ ಹಾಗೂ ಸಂಸ್ಕೃತದಲ್ಲಿ ಜಾಂಬುವತಿ ಕಲ್ಯಾಣ, ಉಷಾಪರಿಣಯ, ಮದಲಸ ಚರಿತ ಮುಂತಾದವುಗಳನ್ನು ರಚಿಸಿದನು. ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜರು ಎಂಬ ಎಂಟು ಕವಿಗಳಿದ್ದರು. ಅವರುಗಳೆಂದರೆ.

1. ಅಲ್ಲಸಾನಿ ಪೆದ್ದಣ್ಣ

2. ನಂದಿ ತಿಮ್ಮಣ್ಣ

3. ಮಾದಯ್ಯಗಾರಿ ಮಲ್ಲಣ್ಣ  

4. ರಾಮರಾಜ ಭೂಷಣ

5. ಪಿಂಗಳಿ ಸೂರಣ್ಣ

6. ರಾಮಭದ್ರಿಯ

7.ತೆನಾಲಿ ರಾಮಕೃಷ್ಣ

8. ದೂರ್ಜಟಿ.

ಕೃಷ್ಣದೇವರಾಯ ಒಬ್ಬ ಶ್ರೇಷ್ಠ ಆಡಳಿತಗಾರ, ರಾಜನೀತಿನಿಪುಣ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಮಹಾಪೋಷಕನಾಗಿದ್ದನು. ಕೃಷ್ಣದೇವರಾಯ ಉತ್ತಮ ಕವಿ, ನ್ಯಾಯಪರ ಹಾಗೂ ನಿಷ್ಪಕ್ಷಪಾತಿ ದೊರೆಯಾಗಿದ್ದನು. ಪೋರ್ಚುಗೀಸ್ ಪ್ರವಾಸಿ ಪೇಯಿಸ್ ಹೇಳಿರುವಂತೆ “ರಾಯನು ಮಧ್ಯಮ ಎತ್ತರದವನಾಗಿದ್ದು ಆಕರ್ಷಕ ಮೈಬಣ್ಣ ಹಾಗೂ ಮೈಕಟ್ಟನ್ನು ಹೊಂದಿದ್ದಾನೆ. ಇವನ ಮುಖದ ಮೇಲೆ ಸಿಡುಬಿನ ಕಲೆಗಳಿವೆ. ಇವನು ಸದಾ ಹಸನ್ಮುಖಿಯಾಗಿದ್ದು ವಿನೋಧಪರನಾಗಿದ್ದಾನೆ” ಎಂದಿದ್ದಾನೆ.

ಮಹಮ್ಮದ್-ಬಿನ್ – ತುಘಲಕನ  ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು

ಮಹಮ್ಮದ್-ಬಿನ್-ತುಘಲಕನು(1325-1351) ಘಿಯಾಸುದ್ದೀನ್ ತುಘಲಕನ ಮಗ ಹಾಗೂ ತುಘಲಕ್ ಸಂತತಿಯ ಶ್ರೇಷ್ಠ ದೊರೆ. ಬಾಲ್ಯದಲ್ಲಿ ಮಹಮ್ಮದ್ ಬಿನ್ ತುಗಲಕ್ ಪ್ರತಿಭಾವಂತನಾಗಿದ್ದು ಪರ್ಶಿಯನ್, ಅರೇಬಿಕ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಇತಿಹಾಸ, ಗಣಿತ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ಖಗೋಳಶಾಸ್ತ್ರ ಹಾಗೂ ತತ್ವಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನು. ಮಹಮ್ಮದ್-ಬಿನ್-ತುಘಲಕ್ ತನ್ನ ತಂದೆಗೆ ಸಿಂಹಾಸನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಇವನು ತನ್ನ ತಂದೆಯ ಅಧಿಕಾರಾವಧಿಯಲ್ಲಿ ವಾರಂಗಲ್ಲಿನ ಮೇಲೆ ಸತತವಾಗಿ ಎರಡು ಬಾರಿ ದಂಡಯಾತ್ರೆ ಕೈಗೊಂಡು ಯಶಸ್ವಿಯಾದನು. ಇದರಿಂದ ಸುಪ್ರೀತನಾದ ಘಿಯಾಸುದ್ದೀನ್ ಮಗನಿಗೆ ‘ಜುನಾಖಾನ್’ ಎಂಬ ಬಿರುದನ್ನು ಕೊಟ್ಟು ಗೌರವಿಸಿದನು.

ಸಿಂಹಾಸನಾರೋಹಣ:

ಘಿಯಾಸುದ್ದೀನನ ಮರಣದ ನಂತರ ಅವನ ಹಿರಿಯ ಮಗನಾದ ಜುನಾಖಾನನು ಮಹಮ್ಮದ್-ಬಿನ್- ತುಘಲಕ್ ಎಂಬ ಹೆಸರಿನಿಂದ ಸಾ.ಶ.1325ರಲ್ಲಿ ಸಿಂಹಾಸನಕ್ಕೆ ಬಂದನು. ಇವನು ಸುಮಾರು 25 ವರ್ಷಗಳ ಕಾಲ ದೆಹಲಿಯ ಸುಲ್ತಾನನಾಗಿದ್ದನು.

ಮಹಮ್ಮದ್-ಬಿನ್-ತುಘಲಕ್‌ ದಂಡಯಾತ್ರೆಗಳು:
1) ವಾರಂಗಲ್ ಆಕ್ರಮಣ (1323):

ಮಹಮ್ಮದ್-ಬಿನ್-ತುಘಲಕ್ ಸಾ.ಶ. 1323 ರಲ್ಲಿ ವಾರಂಗಲ್ ಮೇಲೆ ದಾಳಿ ಮಾಡಿ ಅಲ್ಲಿನ ದೊರೆ ಪ್ರತಾಪರುದ್ರನನ್ನು ಸೋಲಿಸಿದನು. ಸೋತ ಪ್ರತಾಪರುದ್ರನು ತುಗಲಕ್‌ನಿಗೆ ಕಪ್ಪಕಾಣಿಕೆಗಳನ್ನು ನೀಡಿ ಆತನ ಸಾರ್ವಭೌಮತ್ವವನ್ನು ಒಪ್ಪಿಕೆ ಅಂಡನು.

2) ನಾಗರಕೋಟೆ ಆಕ್ರಮಣ (1337):

ಪಂಜಾಬಿನ ಕಾಂಗ್ರಾ ಜಿಲ್ಲೆಯಲ್ಲಿರುವ ನಾಗರಕೋಟೆಯನ್ನು ಸಾ. ಶ. 1337 ರಲ್ಲಿ ಮುತ್ತಿದ ಮಹಮ್ಮದ್-ಬಿನ್-ತುಘಲಕ್ ಅಲ್ಲಿನ ಹಿಂದೂ ರಾಜನನ್ನು ಸೋಲಿಸಿ ನಾಗರಕೋಟೆಯನ್ನು ವಶಪಡಿಸಿಕೊಂಡನು.

3) ಮಧ್ಯ ಏಷ್ಯಾದ ಆಕ್ರಮಣ:

ಮಧ್ಯ ಏಷ್ಯಾದ ಖೋರಾಸನ್, ಇರಾಕ್ ಹಾಗೂ ಟ್ರಾನ್ಸ್ ಆಕ್ಸಿಯಾನಾ ಪ್ರದೇಶಗಳನ್ನು ಗೆಲ್ಲುವ ಆಸೆಯಿಂದ ಮಹಮ್ಮದ್-ಬಿನ್-ತುಘಲಕ್ 3,70,000ದಷ್ಟು ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿ ಮುಂಗಡವಾಗಿ ಒಂದು ವರ್ಷದ ವೇತನವನ್ನು ನೀಡಿದ. ಯುದ್ಧೋಪಕರಣಗಳ ಖರೀದಿಗಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ. ಯುದ್ಧದ ಮೊದಲೇ ಅವನ ಬೊಕ್ಕಸವಲ್ಲಾ ಬರಿದಾಯಿತು. ಆದರೆ ಈ ಪ್ರದೇಶಗಳ ದಾಳಿಯ ಸಂದರ್ಭದಲ್ಲಿ ಆಗುವ ತೊಂದರೆಯನ್ನು ನೆನೆದು ಈ ದಂಡಯಾತ್ರೆಯನ್ನು ಕೈಬಿಟ್ಟನು.

4) ಕಾರಾಜಲ್ ಗಂಡಯಾತ್ರೆ (1337-38):

ಭಾರತ ಹಾಗೂ ಚೀನಾದ ಗಡಿ ಪ್ರದೇಶವಾಗಿದ್ದ ಕಾರಾಜಲ್ ಯೋಜನೆಯೊಂದನ್ನು ರೂಪಿಸಿದ ಮಹಮ್ಮದ್-ಬಿನ್-ತುಘಲಕ್‌ನು ಖುಸ್ರು ಮಲಿಕನ ನೇತೃತ್ವದಲ್ಲಿ ಕಾರಾಜಲ್ ವಿರುದ್ಧ ಒಂದು ಸೈನ್ಯವನ್ನು ಕಳುಹಿಸಿದನು. ಆದರೆ ಅಲ್ಲಿನ ಚಳಿ, ಗಾಳಿ, ಹಿಮ ಹಾಗೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾವಿರಾರು ಸೈನಿಕರು ಸಾವಿಗೀಡಾದರು. ಈ ದಂಡಯಾತ್ರೆಯಲ್ಲಿ ಭಾಗವಹಿಸಿದ್ದ ಒಟ್ಟು 10,000 ಸೈನಿಕರಲ್ಲಿ ಕೇವಲ 10 ಮಂದಿ ಸೈನಿಕರು ಮಾತ್ರ ಬದುಕುಳಿದು ಬಂದರೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಹಮ್ಮದ್-ಬಿನ್-ತುಘಲಕ್‌ ಸುಧಾರಣೆಗಳು: ಆಡಳಿತಾತ್ಮಕ ಪ್ರಯೋಗಗಳು
1) ದೋ ಅಬ್-ಪ್ರದೇಶಗಳಲ್ಲಿ ತೆರಿಗೆ ಹೆಚ್ಚಳ:

ಗಂಗಾ-ಯಮುನಾ ನಡುವಿನ ಬಯಲು ಪ್ರದೇಶವೇ ದೋ-ಅಬ್. ಇದು ಸಂಪದ್ಭರಿತ ಪ್ರದೇಶವಾಗಿದ್ದರಿಂದ ತುಘಲಕ್ ವಿವೇಚನೆ ಇಲ್ಲದೆ ಆ ಪ್ರದೇಶದಲ್ಲಿ ತೆರಿಗೆ ದರವನ್ನು ಹೆಚ್ಚಿಸಿದ. ಇದಕ್ಕೆ ಕಾರಣವೆಂದರೆ

ಎ) ದೋ-ಅಬ್ ಪ್ರದೇಶದ ಜನರು ಶ್ರೀಮಂತರೂ ಹಾಗೂ ಕ್ರಾಂತಿಕಾರಿಗಳಾಗಿದ್ದುದು,

ಬಿ) ಸುಲ್ತಾನನು ತನ್ನ ಸೈನ್ಯವನ್ನು ಹೆಚ್ಚಿಸುವುದು ಮತ್ತು ಆಡಳಿತ ವರ್ಗವನ್ನು ದಕ್ಷತೆಯಿಂದ ವ್ಯವಸ್ಥೆಗೊಳಿಸುವುದು.

ಈ ಕಾರಣಗಳನ್ನು ಮುಂದಿಟ್ಟುಕೊಂಡು ಸುಲ್ತಾನ ತೆರಿಗೆಯಲ್ಲಿ 10-20 ಪಟ್ಟು ಹೆಚ್ಚಳವನ್ನು ಮಾಡಿದನು. ಇದರ ಜೊತೆಗೆ ಮನೆಗಂದಾಯ (ಗರಿ) ಮತ್ತು ಗೋಮಾಳ (ಚರಾಯಿ) ತೆರಿಗೆಗಳಲ್ಲೂ ಹೆಚ್ಚಳ ಕಂಡುಬಂದಿತು. ದೋ-ಅಬ್ ಜನತೆ ಹೆಚ್ಚಿನ ಕಂದಾಯ ನೀಡಲಾಗದೆ ಬಡತನಕ್ಕೆ ತಳ್ಳಲ್ಪಟ್ಟರು. ಅದೇ ವರ್ಷ ದೋ-ಅಬ್ ಪ್ರದೇಶ ಬರಗಾಲಕ್ಕೆ ತುತ್ತಾಯಿತು. ಹೀಗಾಗಿ ರೈತರು ಸರ್ಕಾರಕ್ಕೆ ತೆರಿಗೆಯನ್ನು ನೀಡಲು ಮುಂದೆ ಬರಲಿಲ್ಲ. ಆದರೆ ಕಂದಾಯ ಅಧಿಕಾರಿಗಳು ಮಾತ್ರ ತೆರಿಗೆ ವಸೂಲಿ ಕಾರ್ಯವನ್ನು ನಿಲ್ಲಿಸಲಿಲ್ಲ. ಎಷ್ಟೋ ಜನ ಕಂದಾಯ ನೀಡಲು ವಿಫಲರಾಗಿ ಕಾಡಿಗೆ ಓಡಿಹೋದರು. ಇದರಿಂದ ಕುಪಿತಗೊಂಡ ಸುಲ್ತಾನ ಕಾಡಿನಲ್ಲಿ ಅಡಗಿಕೊಂಡಿದ್ದ ರೈತರನ್ನು ಕಾಡು ಮೃಗಗಳಂತೆ ಬೇಟೆಯಾಡಿದ. ತುಘಲಕ್‌ನ ಕಂದಾಯ ನೀತಿಯನ್ನು ಭರಣಿ ಈ ರೀತಿ ವಿವರಿಸಿದ್ದಾನೆ. “ರೈತರ ಬೆನ್ನು ಮುರಿಯಲಾಯಿತು. ಶ್ರೀಮಂತರು ದಂಗೆಕೋರರಾದರು.ಭೂಮಿ ಪಾಳು ಬಿದ್ದಿತು. ಸಾಗುವಳಿ ನಿಂತು ಹೋಯಿತು. ಸಾವಿರಾರು ಜನರು ಹಸಿವಿನಿಂದ ಸತ್ತರು”.ಮಹಮ್ಮದ್ ಬಿನ್-ತುಗಲಕ’ನಿಗೆ ತಡವಾಗಿ ಜ್ಞಾನೋದಯವಾಯಿತು. ತನ್ನ ಮನಸ್ಥಿತಿಯನ್ನು ತಿದ್ದಿಕೊಂಡು ಊರು ಬಿಟ್ಟು ಕಾಡಿಗೆ ಓಡಿ ಹೋಗಿದ್ದ ಜನರನ್ನು ಮತ್ತೆ ನಗರಕ್ಕೆ ಬರುವಂತೆ ವಿನಂತಿಸಿಕೊಂಡನು. ಕ್ಷಾಮ ಪರಿಹಾರಕ್ಕಾಗಿ ಕೆರೆ, ಬಾವಿ ಹಾಗೂ ಕಾಲುವೆಗಳನ್ನು ನಿರ್ಮಿಸಿದನು. ಕೃಷಿಕರಿಗೆ ಸಾಲ ನೀಡಿದನು. ಅವನು ನೀಡಿದ ಪರಿಹಾರಗಳು ಜನರಿಗೆ ತಲುಪಲಿಲ್ಲ. ಪರಿಣಾಮವಾಗಿ ಈ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿತು.

2) ರಾಜಧಾನಿ ಬದಲಾವಣೆ(1327):

ಸುಲ್ತಾನನು ಕೈಗೊಂಡ ಆಡಳಿತಾತ್ಮಕ ಪ್ರಯೋಗಗಳಲ್ಲಿ ರಾಜಧಾನಿ ಬದಲಾವಣೆಯು ಒಂದು. ಇವನು ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿ ಅದಕ್ಕೆ ದೌಲತಾಬಾದ್ ಎಂದು ಹೆಸರಿಸಿದನು. ಈ ರೀತಿಯ ವರ್ಗಾವಣೆಗೆ ಮಹಮ್ಮದ್ ಬಿನ್ ತುಘಲಕ್ಕು ಕೊಡುವ ಕಾರಣಗಳೆಂದರೆ,

1) ದೌಲತಾಬಾದ್ ಉತ್ತರದ ದೆಹಲಿಯಿಂದ ಸಾಮ್ರಾಜ್ಯದ ಕೇಂದ್ರ ಭಾಗದಲ್ಲಿದ್ದು ವಿವಿಧ ಭಾಗಗಳಿಗೆ ಸಂಪರ್ಕವಿಟ್ಟುಕೊಳ್ಳಲು ಸುಲಭವಾಗಿತ್ತು.

2) ಉತ್ತರ ಭಾರತಕ್ಕಿಂತ ಇದು ಹೆಚ್ಚು ಫಲವತ್ತಾಗಿತ್ತು.

3) ಉತ್ತರ ಭಾರತಕ್ಕೆ ಮೀಸಲಾಗಿದ್ದ ಇಸ್ಲಾಂ ಧರ್ಮವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವುದು.

4) ಪದೇ ಪದೆ ಸಂಭವಿಸುತ್ತಿದ್ದ ಮಂಗೋಲರ ದಾಳಿಗಳಿಂದ ರಾಜ್ಯವನ್ನು ರಕ್ಷಿಸುವುದು.

ರಾಜಧಾನಿಯನ್ನು ಬದಲಾಯಿಸಲು ನಿರ್ಧರಿಸಿದ ಮಹಮ್ಮದ್-ಬಿನ್-ತುಘಲಕ್ ದೆಹಲಿಯ ಸಮಸ್ತ ಜನರನ್ನು ದೌಲತಾಬಾದಿಗೆ ಹೋಗಬೇಕೆಂದು ಆಜ್ಞಾಪಿಸಿದನು. ಈ ಎರಡು ನಗರಗಳ ನಡುವಿನ ದೂರ ಸುಮಾರು 1120 ಕಿ.ಮೀಟರ್‌ಗಳಾಗಿದ್ದು ಜನರ ಪ್ರಯಾಣಕ್ಕಾಗಿ ಬೊಕ್ಕಸದಿಂದ ಸಾಕಷ್ಟು ಹಣವನ್ನು ವಿನಿಯೋಗಿಸಿದನು. ದೆಹಲಿ ಮತ್ತು ದೌಲತಾಬಾದ್‌ಗಳ ನಡುವೆ ರಸ್ತೆಗಳ ನಿರ್ಮಾಣ, ಇಕ್ಕೆಲಗಳಲ್ಲಿ ಛತ್ರಗಳ ನಿರ್ಮಾಣ, ಇತ್ಯಾದಿಗೆ ನೀರಿನಂತೆ ಹಣ ಖರ್ಚಾಯಿತು. ರಾಜನ ಆಜ್ಞೆಯಂತೆ ದೆಹಲಿಯ ಜನ ತಮ್ಮ ಗಂಟುಮೂಟೆಗಳೊಂದಿಗೆ ದೌಲತಾಬಾದಿಗೆ ಪ್ರಯಾಣಿಸಿದರು. ಆದರೆ ಒಬ್ಬ ಕುರುಡ ಹಾಗೂ ಕುಂಟ ಮಾತ್ರ ತಮ್ಮ ಪೂರ್ವಜರು ನೆಲಸಿದ ನಾಡನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಆಗ ಕುಂಟನನ್ನು ಕೊಲ್ಲಲಾಯಿತು. ಕುರುಡನನ್ನು ಆನೆಯ ಕಾಲಿಗೆ ಕಟ್ಟಿ ಎಳೆದೊಯ್ಯಲಾಯಿತು. ಎಳೆದುಕೊಂಡು ಹೋಗುವ ರಭಸಕ್ಕೆ ಅವನ ಒಂದು ಕಾಲು ಮಾತ್ರ ದೇವಗಿರಿಯನ್ನು ತಲುಪಿತು ಎಂದು ಇಬ್ಬಬತೂತ ವಿವರಿಸಿದ್ದಾನೆ. ಪ್ರಯಾಣದ ಸಂದರ್ಭದಲ್ಲಿ ಸಾವಿರಾರು ಜನರು ಅಸುನೀಗಿದರು. ದೆಹಲಿಯಲ್ಲಿ ಈಗ ಒಂದು ನರಪಿಳ್ಳೆಯೂ ಇರಲಿಲ್ಲ. ಅಲ್ಲಿ ಸ್ಮಶಾನ ಮೌನ ಆವರಿಸಿತು. ಈ ರೀತಿ ಜನರ ಮಾನಸಿಕ ತೊಳಲಾಟವನ್ನು, ದೈಹಿಕ ಹಿಂಸೆಯನ್ನು ಕಂಡ ಮಹಮ್ಮದ್ ಬಿನ್-ತುಘಲಕ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಮತ್ತೊಂದು ಮೂರ್ಖತನದ ನಿರ್ಣಯವನ್ನು ಕೈಗೊಂಡನು. ಎಲ್ಲಾ ಜನರು ದೌಲತಾಬಾದಿನಿಂದ ದೆಹಲಿಗೆ ತೆರಳಬೇಕೆಂದು ಆಜ್ಞೆ ಹೊರಡಿಸಿದನು. ಇದನ್ನು ಕೇಳಿ ಜನರ ಜಂಗಾಬಲವೇ ಉಡುಗಿಹೋಯಿತು. ಮತ್ತೆ ಅವರು ದೆಹಲಿಯ ಕಡೆಗೆ ಪ್ರಯಾಣಿಸಿದರು. ಈ ಅವಧಿಯಲ್ಲಿ ಮತ್ತಷ್ಟು ಜನರು ಸತ್ತರು. ದೆಹಲಿಗೆ ಹೋದ ಮೇಲೆ ಜನರಿಗಾದ ನಷ್ಟವನ್ನು ತುಂಬಿಕೊಡಲು ಸುಲ್ತಾನ ಸಾಕಷ್ಟು ಪ್ರಯತ್ನಿಸಿದನು. ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು ಹಾಗೂ ವ್ಯಾಪಾರಿಗಳನ್ನು ಆಮಂತ್ರಿಸಿದನು. ಇದಕ್ಕೆ ಯಾರು ಸೊಪ್ಪು ಹಾಕಲಿಲ್ಲ. ಹೀಗಾಗಿ ದೆಹಲಿ ತನ್ನ ಮೊದಲಿನ ವೈಭವವನ್ನು ಪುನ: ಪಡೆಯಲು ಹಲವಾರು ವರ್ಷಗಳನ್ನೇ ತೆಗೆದುಕೊಂಡಿತೆಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

3) ತಾಮ್ರದ ನಾಣ್ಯ ಚಲಾವಣೆ:

ಮಹಮ್ಮದ್-ಬಿನ್-ತುಘಲಕ್ ಇಲ್ಲಿವರೆಗೆ ಕೈಗೊಂಡ ಕಂದಾಯ ಏರಿಕೆ, ರಾಜಧಾನಿ ಬದಲಾವಣೆ ಹಾಗೂ ಕೃಷಿಕಾರ್ಯದಲ್ಲಿ ಆದ ಬದಲಾವಣೆಗಳಿಂದ ರಾಜ್ಯದ ಬೊಕ್ಕಸ ಬರಿದಾಯಿತು.ಆಗ ಅವನಿಗೆ ಏನುಮಾಡಲು ತೋಚದಿದ್ದಾಗ ಚಿನ್ನದ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಒಂದು ಆಜ್ಞೆಯನ್ನು ಹೊರಡಿಸಿ ಇನ್ನು ಮುಂದೆ ತಾಮ್ರದ ನಾಣ್ಯಗಳನ್ನು ಚಿನ್ನದ ನಾಣ್ಯಗಳ ಬದಲಾಗಿ ಎಲ್ಲಾ ವ್ಯವಹಾರಗಳಲ್ಲಿ ಉಪಯೋಗಿಸಬಹುದೆಂದು, ಈ ನಾಣ್ಯಗಳು ಚಿನ್ನದ ನಾಣ್ಯಗಳಿಗೆ ಸಮವಾಗಿವೆ ಎಂದು ಘೋಷಿಸಿದನು. ತಾಮ್ರದ ನಾಣ್ಯಗಳನ್ನು ಟಂಕಿಸುವ ಅಧಿಕಾರವನ್ನು ಖಾಸಗಿ ವ್ಯಕ್ತಿಗಳಿಗೂ ನೀಡಿದನು. ಇವರಿಗೆ ನಾಣ್ಯಗಳನ್ನು ಟಂಕಿಸುವಾಗ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲವಾದ್ದರಿಂದ ಇವರು ಖೋಟಾ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು. ಪರಿಣಾಮವಾಗಿ ಪ್ರತಿಯೊಂದು ಮನೆಯೂ ಖೋಟಾ ನಾಣ್ಯಗಳ ಟಂಕಶಾಲೆಯಾಗಿ ಪರಿವರ್ತಿತವಾಯಿತು. ಜನಸಾಮನ್ಯರು ತಮ್ಮಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಭದ್ರಪಡಿಸಿಕೊಂಡು ಖೋಟಾ ನಾಣ್ಯಗಳನ್ನೇ ತೆರಿಗೆಯಾಗಿ ಸಲ್ಲಿಸಲು ಆರಂಭಿಸಿದರು. ಇವರ ಜೊತೆ ಸೇರಿ ಸರ್ಕಾರಿ ಅಧಿಕಾರಿಗಳೂ ಸುಲ್ತಾನನಿಗೆ ಮೋಸಮಾಡಿದರು. ಹೀಗಾಗಿ ಸರ್ಕಾರದ ಖಜಾನೆಯಲ್ಲಿ ತಾಮ್ರದ ನಾಣ್ಯಗಳ ರಾಶಿಯೇ ಕಂಡುಬಂದಿತು. ವ್ಯಾಪಾರ ಕುಸಿಯಿತು, ಹಣದ ಮೌಲ್ಯ ‘ಒಡೆದ ಮಡಿಕೆಯ ಚೂರಾಯಿತು!’ ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳ ಅಭಾವ ಕಂಡು ಬಂದಿತು. ಇದರಿಂದ ಗೊಂದಲಕ್ಕೆ ಸಿಲುಕಿದಂತಾದ ಸುಲ್ತಾನನು ತಾಮ್ರದ ನಾಣ್ಯಗಳ ಚಲಾವಣೆಯನ್ನು ರದ್ದು ಪಡಿಸಿದನು. ಮತ್ತೊಂದು ಆಜ್ಞೆಯನ್ನು ಹೊರಡಿಸಿ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅದರ ಮುಖಬೆಲೆಯ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆಯುವಂತೆ ಜನರಿಗೆ ತಿಳಿಸಿದನು.ಆಗ ಜನ ತಮ್ಮ ಬಳಿಯಿದ್ದ ಮೂಟೆಗಟ್ಟಲೆ ತಾಮ್ರದ ನಾಣ್ಯಗಳನ್ನು ಹಿಂತಿರುಗಿಸಿ ಅಪ್ಪಟ್ಟ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಪಡೆದುಕೊಂಡರು. ಹೀಗೆ ಸುಲ್ತಾನ ತನ್ನ ಪ್ರಜೆಗಳಿಂದಲೇ ಮೋಸಹೋದನು. ಸಂಗ್ರಹವಾದ ರಾಶಿರಾಶಿ ತಾಮ್ರದ ನಾಣ್ಯಗಳು ಸುಲ್ತಾನನ ಮೂರ್ಖತನದ ವೈಪಲ್ಯವನ್ನು ಸಾರುತ್ತಾ ಬಿದ್ದಿದ್ದವು. ಸುಲ್ತಾನನ ಈ ಮೇಲಿನ ಆಡಳಿತಾತ್ಮಕ ಪ್ರಯೋಗಗಳು ಸಂಪೂರ್ಣ ವಿಫಲಗೊಂಡವು. ಈ ಕಾರಣದಿಂದಾಗಿ ಮಹಮ್ಮದ್ ಬಿನ್ ತುಘಲಕನನ್ನು ದ್ವಂದ್ವಗಳ ಮಿಶ್ರಣ(ವೈರುದ್ಯಗಳ) ಎಂದು ಕರೆಯಲಾಗುತ್ತದೆ.

ಸ್ತ್ರೀವಾದದ ಅರ್ಥ ಮತ್ತು ಮೂಲ

ಸ್ತ್ರೀವಾದದ ಅರ್ಥ ಮತ್ತು ಮೂಲ

ಪರಿಚಯ

ಸ್ತ್ರೀವಾದವು ಲಿಂಗಗಳ ಸಮಾನತೆಯನ್ನು ಪ್ರತಿಪಾದಿಸುವ ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಚಳುವಳಿಯಾಗಿದೆ. ಇದು ರಾಜಕೀಯ, ಶಿಕ್ಷಣ, ಕೆಲಸದ ಸ್ಥಳ ಮತ್ತು ವೈಯಕ್ತಿಕ ಸಂಬಂಧಗಳು ಸೇರಿದಂತೆ ಜೀವನದ ವಿವಿಧ ಅಂಶಗಳಲ್ಲಿ ಮಹಿಳೆಯರು ಮತ್ತು ಅಂಚಿನಲ್ಲಿರುವ ಲಿಂಗಗಳು ಎದುರಿಸುತ್ತಿರುವ ವ್ಯವಸ್ಥಿತ ಅಸಮಾನತೆಗಳು, ಪಕ್ಷಪಾತಗಳು ಮತ್ತು ತಾರತಮ್ಯವನ್ನು ಸವಾಲು ಮಾಡಲು ಮತ್ತು ಕೆಡವಲು ಪ್ರಯತ್ನಿಸುತ್ತದೆ. ಸ್ತ್ರೀವಾದವು ಮಹಿಳೆಯರ ಹಕ್ಕುಗಳಿಗೆ ಮಾತ್ರ ಸೀಮಿತವಾಗಿಲ್ಲ ಆದರೆ ವಿಶಾಲವಾಗಿ ಎಲ್ಲಾ ಲಿಂಗಗಳಿಗೆ ಸಮಾನತೆ ಮತ್ತು ನ್ಯಾಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಸ್ತ್ರೀವಾದ ಎಂಬ ಪದವು ಲ್ಯಾಟಿನ್ ಪದ ಫೆಮಿನಾ, ಅಂದರೆ “ಮಹಿಳೆ” ಮತ್ತು ಫ್ರೆಂಚ್ ಪ್ರತ್ಯಯ -isme ನಿಂದ ಬಂದಿದೆ, ಇದು ತತ್ವ ಅಥವಾ ಚಳುವಳಿಯನ್ನು ಸೂಚಿಸುತ್ತದೆ. ಮಹಿಳೆಯರು ತಮ್ಮ ಹಕ್ಕುಗಳು ಮತ್ತು ಪಿತೃಪ್ರಧಾನ ರಚನೆಗಳಿಂದ ಸ್ವಾತಂತ್ರ್ಯಕ್ಕಾಗಿ ಸಂಘಟಿಸಲು ಪ್ರಾರಂಭಿಸಿದಾಗ ಇದು 19 ನೇ ಶತಮಾನದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು.

ಸ್ತ್ರೀವಾದದ ಮೂಲ - ಐತಿಹಾಸಿಕ ಹಿನ್ನೆಲೆ
1. ಆಧುನಿಕಪೂರ್ವ ಅವಧಿ:

ಸಂಘಟಿತ ಚಳುವಳಿಯಾಗಿ ಸ್ತ್ರೀವಾದವು ಬಹಳ ನಂತರ ಪ್ರಾರಂಭವಾದರೂ, ಅದರ ಬೇರುಗಳನ್ನು ಪ್ರಾಚೀನ ಮತ್ತು ಮಧ್ಯಕಾಲೀನ ಸಮಾಜಗಳಲ್ಲಿ ಗುರುತಿಸಬಹುದು, ಅಲ್ಲಿ ಮಹಿಳೆಯರು ಸಾಂದರ್ಭಿಕವಾಗಿ ಪುರುಷ ಪ್ರಾಬಲ್ಯದ ವಿರುದ್ಧ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದರು. ಅಲೆಕ್ಸಾಂಡ್ರಿಯಾದ ಹೈಪೇಷಿಯಾ (4 ನೇ ಶತಮಾನದ ತತ್ವಜ್ಞಾನಿ) ಮತ್ತು ಕ್ರಿಸ್ಟೀನ್ ಡಿ ಪಿಜಾನ್ (14 ನೇ ಶತಮಾನದ ಬರಹಗಾರ್ತಿ) ನಂತಹ ವ್ಯಕ್ತಿಗಳನ್ನು ಮಹಿಳಾ ಶಿಕ್ಷಣ ಮತ್ತು ಸ್ವತಂತ್ರತೆಯನ್ನು ಪ್ರತಿಪಾದಿಸುವ ಆರಂಭಿಕ ಧ್ವನಿಗಳೆಂದು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ.

2. 18 ನೇ ಶತಮಾನ - ಜ್ಞಾನೋದಯ:

ಜ್ಞಾನೋದಯ ಯುಗವು ಸ್ವಾತಂತ್ರ್ಯ, ಸಮಾನತೆ ಮತ್ತು ತಾರ್ಕಿಕತೆಯ ವಿಚಾರಗಳನ್ನು ತಂದಿತು, ಇದು ಸ್ತ್ರೀವಾದಿ ಚಿಂತನೆಗೆ ಸ್ಫೂರ್ತಿ ನೀಡಿತು. ಮೇರಿ ವೋಲ್ಸ್ಟೋನ್ಕ್ರಾಫ್ಟ್ ಅವರಂತಹ ಪ್ರಮುಖ ವ್ಯಕ್ತಿಗಳು ತಮ್ಮ ಕ್ರಾಂತಿಕಾರಿ ಕೃತಿ ಎ ವಿಂಡಿಕೇಶನ್ ಆಫ್ ದಿ ರೈಟ್ಸ್ ಆಫ್ ವುಮನ್ (1792) ನಲ್ಲಿ ಮಹಿಳಾ ಕೀಳರಿಮೆಯ ಕಲ್ಪನೆಯನ್ನು ಪ್ರಶ್ನಿಸಿ ಮಹಿಳಾ ಶಿಕ್ಷಣ ಮತ್ತು ಸಮಾನತೆಯ ಪರವಾಗಿ ವಾದಿಸಿದರು.

3. 19 ನೇ ಶತಮಾನ - ಸಂಘಟಿತ ಸ್ತ್ರೀವಾದ:

ಮಹಿಳೆಯರ ಮತದಾನದ ಹಕ್ಕು, ಆಸ್ತಿ ಹಕ್ಕುಗಳು ಮತ್ತು ಶಿಕ್ಷಣದ ಪ್ರವೇಶ ಸೇರಿದಂತೆ ಮೂಲಭೂತ ಕಾನೂನು ಹಕ್ಕುಗಳ ಮೇಲೆ ಕೇಂದ್ರೀಕರಿಸಿದ ಸ್ತ್ರೀವಾದದ ಮೊದಲ ಅಲೆಯು 19 ನೇ ಶತಮಾನದಲ್ಲಿ ಹೊರಹೊಮ್ಮಿತು. ಯುನೈಟೆಡ್ ಸ್ಟೇಟ್ಸ್ನಲ್ಲಿ ಎಲಿಜಬೆತ್ ಕ್ಯಾಡಿ ಸ್ಟಾಂಟನ್ ಮತ್ತು ಸುಸಾನ್ ಬಿ. ಆಂಥೋನಿ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ಎಮ್ಮೆಲಿನ್ ಪ್ಯಾನ್ಖರ್ಸ್ಟ್ ಅವರಂತಹ ಕಾರ್ಯಕರ್ತರು ಮತದಾನದ ಹಕ್ಕುಗಳಿಗಾಗಿ ಚಳುವಳಿಗಳನ್ನು ಮುನ್ನಡೆಸಿದರು.

4. 20 ನೇ ಶತಮಾನ - ಸ್ತ್ರೀವಾದಿ ಗುರಿಗಳ ವಿಸ್ತರಣೆ:

20 ನೇ ಶತಮಾನದ ಮಧ್ಯಭಾಗದಲ್ಲಿ ಸ್ತ್ರೀವಾದದ ಎರಡನೇ ಅಲೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆಗಳತ್ತ ತನ್ನ ಗಮನವನ್ನು ವಿಸ್ತರಿಸಿತು, ಕೆಲಸದ ಸ್ಥಳದ ತಾರತಮ್ಯ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ದೇಶೀಯ ಹಿಂಸಾಚಾರದಂತಹ ಸಮಸ್ಯೆಗಳನ್ನು ಪರಿಹರಿಸಿತು. ಈ ಅವಧಿಯಲ್ಲಿ ಸ್ತ್ರೀವಾದಿ ಸಿದ್ಧಾಂತವು ಶೈಕ್ಷಣಿಕ ವಿಭಾಗವಾಗಿ ಹೊರಹೊಮ್ಮಿತು.

5. ಸಮಕಾಲೀನ ಸ್ತ್ರೀವಾದ:

ಮೂರನೇ ಅಲೆ (1990 ರ ದಶಕದ ನಂತರ) ಮತ್ತು ನಂತರದ ಸ್ತ್ರೀವಾದಿ ಚಳುವಳಿಗಳು ಛೇದಕತೆಯನ್ನು ಸ್ವೀಕರಿಸಿವೆ, ಜನಾಂಗ, ವರ್ಗ, ಲೈಂಗಿಕತೆ ಮತ್ತು ಇತರ ಗುರುತುಗಳು ಲಿಂಗದೊಂದಿಗೆ ಛೇದಿಸಿ ದಬ್ಬಾಳಿಕೆಯ ವಿಶಿಷ್ಟ ಅನುಭವಗಳನ್ನು ಸೃಷ್ಟಿಸುತ್ತವೆ ಎಂದು ಗುರುತಿಸಿವೆ. ಆಧುನಿಕ ಸ್ತ್ರೀವಾದವು LGBTQ+ ಹಕ್ಕುಗಳು, ಹವಾಮಾನ ನ್ಯಾಯ ಮತ್ತು ತಂತ್ರಜ್ಞಾನ-ಸಂಬಂಧಿತ ಲಿಂಗ ಅಸಮಾನತೆಗಳಂತಹ ಜಾಗತಿಕ ಸಮಸ್ಯೆಗಳೊಂದಿಗೆ ಸಹ ತೊಡಗಿಸಿಕೊಂಡಿದೆ.

ಸ್ತ್ರೀವಾದದ ಅರ್ಥ

ಸ್ತ್ರೀವಾದವು ಸಮಾನತೆ, ನ್ಯಾಯ ಮತ್ತು ಸಬಲೀಕರಣದ ತತ್ವಗಳನ್ನು ಸಾಕಾರಗೊಳಿಸುತ್ತದೆ. ಇದು ಪುರುಷ ಪ್ರಾಬಲ್ಯವನ್ನು ಎತ್ತಿಹಿಡಿಯುವ ಪಿತೃಪ್ರಧಾನ ವ್ಯವಸ್ಥೆಗಳನ್ನು ಸವಾಲು ಮಾಡುತ್ತದೆ ಮತ್ತು ಎಲ್ಲಾ ಲಿಂಗಗಳ ವ್ಯಕ್ತಿಗಳು ಸಮಾನ ಅವಕಾಶಗಳು ಮತ್ತು ಹಕ್ಕುಗಳನ್ನು ಹೊಂದಿರುವ ಸಮಾಜವನ್ನು ರಚಿಸಲು ಪ್ರಯತ್ನಿಸುತ್ತದೆ. ಈ ಆಂದೋಲನವು ವಿವಿಧ ದೃಷ್ಟಿಕೋನಗಳು ಮತ್ತು ಸಿದ್ಧಾಂತಗಳನ್ನು ಒಳಗೊಂಡಿದೆ, ಅವುಗಳಲ್ಲಿ ಇವು ಸೇರಿವೆ ಆದರೆ ಇವುಗಳಿಗೆ ಸೀಮಿತವಾಗಿಲ್ಲ:

1. ಉದಾರವಾದಿ ಸ್ತ್ರೀವಾದ:

ಮತದಾನದ ಹಕ್ಕು ಮತ್ತು ತಾರತಮ್ಯ ವಿರೋಧಿ ಕಾನೂನುಗಳಂತಹ ರಾಜಕೀಯ ಮತ್ತು ಕಾನೂನು ಸುಧಾರಣೆಗಳ ಮೂಲಕ ಸಮಾನತೆಯನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

2. ಆಮೂಲಾಗ್ರ ಸ್ತ್ರೀವಾದ:

ಲಿಂಗ ಅಸಮಾನತೆಯ ಮೂಲವು ಸಮಾಜದ ಪಿತೃಪ್ರಭುತ್ವದ ರಚನೆಯಲ್ಲಿದೆ ಎಂದು ವಾದಿಸುತ್ತದೆ ಮತ್ತು ಅದನ್ನು ಕಿತ್ತುಹಾಕಲು ಕರೆ ನೀಡುತ್ತದೆ.

3. ಮಾರ್ಕ್ಸ್ವಾದಿ ಮತ್ತು ಸಮಾಜವಾದಿ ಸ್ತ್ರೀವಾದ:

ಲಿಂಗ ಅಸಮಾನತೆಯನ್ನು ಬಂಡವಾಳಶಾಹಿಗೆ ಸಂಪರ್ಕಿಸುತ್ತದೆ, ಆರ್ಥಿಕ ವ್ಯವಸ್ಥೆಯು ಮಹಿಳೆಯರ ಶ್ರಮವನ್ನು ಬಳಸಿಕೊಳ್ಳುತ್ತದೆ ಮತ್ತು ಅವಲಂಬನೆಯನ್ನು ಶಾಶ್ವತಗೊಳಿಸುತ್ತದೆ ಎಂದು ಪ್ರತಿಪಾದಿಸುತ್ತದೆ.

4. ಸಾಂಸ್ಕೃತಿಕ ಸ್ತ್ರೀವಾದ:

ಪೋಷಣೆ ಮತ್ತು ಆರೈಕೆಯಂತಹ ಸಾಂಪ್ರದಾಯಿಕವಾಗಿ “ಸ್ತ್ರೀಲಿಂಗ” ಗುಣಲಕ್ಷಣಗಳ ಮೌಲ್ಯವನ್ನು ಒತ್ತಿಹೇಳುತ್ತದೆ ಮತ್ತು ಸಂಸ್ಕೃತಿ ಮತ್ತು ಸಮಾಜಕ್ಕೆ ಮಹಿಳೆಯರ ಕೊಡುಗೆಗಳನ್ನು ಆಚರಿಸಲು ಪ್ರಯತ್ನಿಸುತ್ತದೆ.

5. ಛೇದಕ ಸ್ತ್ರೀವಾದ:

ಕಿಂಬರ್ಲೆ ಕ್ರೆನ್‌ಶಾ ಜನಪ್ರಿಯಗೊಳಿಸಿದ ಪದವು, ಲಿಂಗವು ಜನಾಂಗ, ವರ್ಗ, ಲೈಂಗಿಕತೆ ಮತ್ತು ಇತರ ಅಂಶಗಳೊಂದಿಗೆ ಹೇಗೆ ಛೇದಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ ಮತ್ತು ವಿಶಿಷ್ಟ ರೂಪಗಳ ತಾರತಮ್ಯ ಮತ್ತು ಸವಲತ್ತುಗಳನ್ನು ಸೃಷ್ಟಿಸುತ್ತದೆ.

ಸ್ತ್ರೀವಾದದ ಪ್ರಮುಖ ಉದ್ದೇಶಗಳು
1. ಲಿಂಗ ಸಮಾನತೆಯನ್ನು ಸಾಧಿಸುವುದು:

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಎಲ್ಲಾ ಲಿಂಗಗಳಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಖಚಿತಪಡಿಸುವುದು ಸ್ತ್ರೀವಾದದ ಪ್ರಾಥಮಿಕ ಗುರಿಯಾಗಿದೆ.

2. ಮಹಿಳೆಯರು ಮತ್ತು ಅಂಚಿನಲ್ಲಿರುವ ಲಿಂಗಗಳನ್ನು ಸಬಲೀಕರಣಗೊಳಿಸುವುದು:

ಲಿಂಗದ ಕಾರಣದಿಂದಾಗಿ ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಅಥವಾ ತುಳಿತಕ್ಕೊಳಗಾದ ವ್ಯಕ್ತಿಗಳನ್ನು ಸಬಲೀಕರಣಗೊಳಿಸಲು ಸ್ತ್ರೀವಾದ ಪ್ರಯತ್ನಿಸುತ್ತದೆ.

3. ಲಿಂಗ ಆಧಾರಿತ ಹಿಂಸೆಯನ್ನು ಕೊನೆಗೊಳಿಸುವುದು:

ಲಿಂಗ ಅಸಮಾನತೆಯಲ್ಲಿ ಬೇರೂರಿರುವ ಎಲ್ಲಾ ರೀತಿಯ ಹಿಂಸೆ, ಕಿರುಕುಳ ಮತ್ತು ನಿಂದನೆಯನ್ನು ಪರಿಹರಿಸುವುದು ಮತ್ತು ತೊಡೆದುಹಾಕುವುದು ಈ ಆಂದೋಲನದ ಗುರಿಯಾಗಿದೆ.

4. ಸಂತಾನೋತ್ಪತ್ತಿ ಹಕ್ಕುಗಳನ್ನು ಉತ್ತೇಜಿಸುವುದು:

ಗರ್ಭನಿರೋಧಕ, ಗರ್ಭಪಾತ ಮತ್ತು ತಾಯಿಯ ಆರೋಗ್ಯ ರಕ್ಷಣೆ ಸೇರಿದಂತೆ ಅವರ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ವ್ಯಕ್ತಿಗಳ ನಿಯಂತ್ರಣವನ್ನು ಸ್ತ್ರೀವಾದ ಪ್ರತಿಪಾದಿಸುತ್ತದೆ.

5. ಸವಾಲಿನ ಸ್ಟೀರಿಯೊಟೈಪ್‌ಗಳು ಮತ್ತು ಸಾಮಾಜಿಕ ರೂಢಿಗಳು:

ವ್ಯಕ್ತಿಗತ ಸಾಮರ್ಥ್ಯವನ್ನು ಸೀಮಿತಗೊಳಿಸುವ ಮತ್ತು ಅಸಮಾನತೆಯನ್ನು ಬಲಪಡಿಸುವ ಹಾನಿಕಾರಕ ಲಿಂಗ ಪಾತ್ರಗಳು ಮತ್ತು ಸ್ಟೀರಿಯೊಟೈಪ್‌ಗಳನ್ನು ಕೆಡವಲು ಸ್ತ್ರೀವಾದ ಕೆಲಸ ಮಾಡುತ್ತದೆ.

6. ಛೇದಕ ಅಸಮಾನತೆಗಳನ್ನು ಪರಿಹರಿಸುವುದು:

ಆಧುನಿಕ ಸ್ತ್ರೀವಾದವು ಜನಾಂಗ, ವರ್ಗ, ಲೈಂಗಿಕತೆ ಮತ್ತು ಇತರ ಗುರುತುಗಳೊಂದಿಗೆ ಲಿಂಗದ ಛೇದಕದಿಂದ ಉಂಟಾಗುವ ಅತಿಕ್ರಮಿಸುವ ದಬ್ಬಾಳಿಕೆಗಳನ್ನು ಗುರುತಿಸುತ್ತದೆ ಮತ್ತು ಎದುರಿಸಲು ಪ್ರಯತ್ನಿಸುತ್ತದೆ.

ಸ್ತ್ರೀವಾದದ ಮಹತ್ವ
1. ಸಾಮಾಜಿಕ ನ್ಯಾಯ:

ಸ್ತ್ರೀವಾದವು ನ್ಯಾಯ ಮತ್ತು ನ್ಯಾಯವನ್ನು ಉತ್ತೇಜಿಸುತ್ತದೆ, ಯಾವುದೇ ಲಿಂಗವನ್ನು ತುಳಿತಕ್ಕೊಳಗಾಗದಂತೆ ಅಥವಾ ಅವಕಾಶಗಳನ್ನು ನಿರಾಕರಿಸದಂತೆ ನೋಡಿಕೊಳ್ಳುತ್ತದೆ.

2. ಸುಧಾರಿತ ಆರ್ಥಿಕ ಭಾಗವಹಿಸುವಿಕೆ:

ಕೆಲಸದ ಸ್ಥಳದಲ್ಲಿ ಸಮಾನತೆ, ಸಮಾನ ವೇತನ ಮತ್ತು ಮಹಿಳೆಯರಿಗೆ ಅವಕಾಶಗಳನ್ನು ಪ್ರತಿಪಾದಿಸುವ ಮೂಲಕ, ಸ್ತ್ರೀವಾದವು ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತದೆ.

3. ಆರೋಗ್ಯ ಮತ್ತು ಯೋಗಕ್ಷೇಮ:

ಸ್ತ್ರೀವಾದವು ಆರೋಗ್ಯ ರಕ್ಷಣೆ, ಮಾನಸಿಕ ಆರೋಗ್ಯ ಬೆಂಬಲ ಮತ್ತು ಸಂತಾನೋತ್ಪತ್ತಿ ಹಕ್ಕುಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ, ವ್ಯಕ್ತಿಗಳಿಗೆ ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

4. ಶಿಕ್ಷಣವನ್ನು ಉತ್ತೇಜಿಸುವುದು:

ಸ್ತ್ರೀವಾದ ಚಳುವಳಿಗಳು ಐತಿಹಾಸಿಕವಾಗಿ ಮಹಿಳೆಯರಿಗೆ ಶಿಕ್ಷಣದ ಪ್ರವೇಶಕ್ಕಾಗಿ ಹೋರಾಡಿವೆ, ವ್ಯಕ್ತಿಗಳು ತಮ್ಮ ಜೀವನದ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಅಧಿಕಾರ ನೀಡುತ್ತವೆ.

5. ಜಾಗತಿಕ ಪರಿಣಾಮ:

ಸ್ತ್ರೀವಾದವು ಬಾಲ್ಯವಿವಾಹ, ಮಾನವ ಕಳ್ಳಸಾಗಣೆ ಮತ್ತು ಲಿಂಗ ಆಧಾರಿತ ಹಿಂಸೆಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಸುರಕ್ಷಿತ ಮತ್ತು ಹೆಚ್ಚು ಸಮಾನ ಜಗತ್ತನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಉಪಸಂಹಾರ

ಸ್ತ್ರೀವಾದವು ಒಂದು ಕ್ರಿಯಾತ್ಮಕ ಮತ್ತು ವಿಕಸನಗೊಳ್ಳುತ್ತಿರುವ ಚಳುವಳಿಯಾಗಿದ್ದು, ಇದು ವ್ಯವಸ್ಥಿತ ಅಸಮಾನತೆಗಳನ್ನು ಕೆಡವಲು ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳು ಘನತೆ, ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳೊಂದಿಗೆ ಬದುಕಬಹುದಾದ ಜಗತ್ತನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ. ಇತಿಹಾಸದಲ್ಲಿ ಇದರ ಬೇರುಗಳು ದಬ್ಬಾಳಿಕೆಯ ವಿರುದ್ಧದ ನಿರಂತರ ಹೋರಾಟವನ್ನು ಪ್ರದರ್ಶಿಸುತ್ತವೆ, ಆದರೆ ಅದರ ಸಮಕಾಲೀನ ಪ್ರಸ್ತುತತೆಯು ಕ್ರಿಯಾಶೀಲತೆ ಮತ್ತು ವಕಾಲತ್ತುಗಳ ನಿರಂತರ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಸ್ತ್ರೀವಾದವು ಕೇವಲ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟವಲ್ಲ, ಬದಲಿಗೆ ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯ ವಿಶಾಲ ಅನ್ವೇಷಣೆಯಾಗಿದ್ದು, ಹೆಚ್ಚು ಒಳಗೊಳ್ಳುವ ಮತ್ತು ಪ್ರಗತಿಪರ ಸಮಾಜವನ್ನು ಖಾತ್ರಿಪಡಿಸುತ್ತದೆ.