ಭಾರತದಲ್ಲಿ ಪೋರ್ಚುಗೀಸರು

ಭಾರತದಲ್ಲಿ ಪೋರ್ಚುಗೀಸರು

ಭಾರತವು ಪ್ರಾಚೀನ ಕಾಲದಿಂದಲೂ ಯುರೋಪಿನ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಬಂಧವನ್ನು ಹೊಂದಿತ್ತು. ಭಾರತದಲ್ಲಿ ಸಿಗುತ್ತಿದ್ದ ಮುತ್ತು, ರತ್ನ, ಹವಳ, ಬೆಳ್ಳಿ, ರೇಷ್ಮೆ, ಶ್ರೀಗಂಧ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬಾರೀ ಬೇಡಿಕೆಯಿತ್ತು. ಈ ವ್ಯಾಪಾರ ಕಾನ್ ಸ್ಟಾಂಟಿನೋಪಲ್ ಮಾರ್ಗದ ಮೂಲಕ ನಡೆಯುತ್ತಿತ್ತು. ಇದು ಪೂರ್ವ ಹಾಗೂ ಪಶ್ಚಿಮನಾಡುಗಳ ನಡುವಿನ ಪ್ರಮುಖ ವ್ಯಾಪಾರಿ ಮಾರ್ಗವನ್ನು ಕಲ್ಪಿಸಿತ್ತು. ಕ್ರಿ.ಶ. 1453ರಲ್ಲಿ ಅಟೋಮನ್ ತುರ್ಕರು ಕಾನ್ ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡು ಪೂರ್ವ ಹಾಗೂ ಪಶ್ಚಿಮ ನಾಡುಗಳ ನಡುವಿನ ವ್ಯಾಪಾರಿ ಮಾರ್ಗವನ್ನು ಮುಚ್ಚಿದರು. ಇದರಿಂದ ಪೂರ್ವದ ಪ್ರಮುಖ ವಸ್ತುಗಳು ಯುರೋಪಿಯನ್ನರಿಗೆ ದೊರಕದಾದವು. ಭಾರತದ ವಸ್ತುಗಳಿಲ್ಲದೆ ಯುರೋಪಿಯನ್ನರ ಬದುಕು ದುಸ್ತರವಾಯಿತು. ಹೀಗಾಗಿ ಯುರೋಪಿಯನ್ನರು ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಹೀಗೆ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು.

1. ಬಾರ್ಥೋಲೋಮೀಯೋ ಡಯಾಸ್(Bartolomeu Dias):

ಪೋರ್ಚುಗೀಸ್ ರಾಜಕುಮಾರನಾದ ಹೆನ್ರಿಯ ಬೆಂಬಲದಿಂದ ಈತ ಕ್ರಿ.ಶ. 1487ರಲ್ಲಿ ಆಫ್ರಿಕಾದ ಕೇಪ್ ಆಫ್ ಗುಡ್‌ಹೋಪ್ ಭೂಶಿರವನ್ನು ಶೋಧಿಸಿದ.

2.ವಾಸ್ಕೋ-ಡ-ಗಾಮಾ(Vascoda Gama)(1498-1502):

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ ನಾವಿಕ ವಾಸ್ಕೋ-ಡ-ಗಾಮ. ಈತ ಪೋರ್ಚುಗಲ್‌ನ ರಾಜ ಇಮ್ಯಾನುಯಲ್‌ನ ಆರ್ಥಿಕ ಸಹಾಯದೊಂದಿಗೆ ಕ್ರಿ.ಶ. 1497ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಶೋಧಿಸಲು ಲಿಸ್ಟನ್ ನಗರದಿಂದ ಹೊರಟು ಕೇಪ್ ಆಫ್ ಗುಡ್‌ಹೋಪ್ ಭೂಶಿರದ ಮೂಲಕ ಮೋಸಾಂಬಿಕಕ್ಕೆ ಬಂದು ತಲುಪಿದನು. ಅನಂತರ ಅರಬ್ ನಾವಿಕನ ಸಹಾಯದಿಂದ ಅರಬ್ಬಿಸಮುದ್ರದ ಗುಂಟ ಸಾಗಿ 1498ನೇ ಮೇ 17ರಂದು ಭಾರತದ ಮಲಬಾರ್ ಕರಾವಳಿಯ ಕಲ್ಲಿಕೋಟೆಗೆ ಬಂದು ತಲುಪಿದ. ಕಲ್ಲಿಕೋಟೆಯ ದೊರೆ ಜಾಮೋರಿನ್ ವಾಸ್ಕೋ-ಡ-ಗಾಮನನ್ನು ಆದರದಿಂದ ಬರಮಾಡಿಕೊಂಡು ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು. 

3. ಕೆಬ್ರಾಲ್ Pedro Álvares Cabral (1500):

ಪೆಟ್ರೋ ಅಲ್ವಾರಿಸ್ ಕೆಬ್ರಾಲ್ ತನ್ನ 13 ನೌಕೆಗಳೊಂದಿಗೆ ಲಿಸ್ಟನ್ ಬಂದರಿನಿಂದ ಹೊರಟು ಅರಬ್ಬಿಸಮುದ್ರದ ಮೂಲಕ ಸಾಗಿ ಭಾರತಕ್ಕೆ ಬಂದು ತಲುಪಿದನು. 

4. ವಾಸ್ಕೋ-ಡ-ಗಾಮನ ಪುನರಾಗಮ:

ಕ್ರಿ.ಶ. 1502ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಎರಡನೆಯ ಬಾರಿಗೆ ಆಗಮಿಸಿದ. ಆಗ ಈತ ಕಣ್ಣಾನೂರು, ಕೊಚ್ಚಿನ್ ಹಾಗೂ ಕಲ್ಲಿಕೋಟೆಗಳಲ್ಲಿ ವ್ಯಾಪಾರಿ ಕೋಠಿಗಳನ್ನು ನಿರ್ಮಿಸಿದ.

5. ಪ್ರಾನ್ಸಿಸ್ಕೋ-ಡಿ-ಅಲ್ವೇಡಾ Francisco de Almeida (1505):

ಪ್ರಾನ್ಸಿಸ್ಕೋ-ಡಿ-ಅಡಾ ಭಾರತಕ್ಕೆ ಬಂದ ಪೋರ್ಚುಗೀಸರ ಪ್ರಥಮ ವೈಸರಾಯ್. ಈತ ಭಾರತದೊಂದಿಗೆ ಜಲಮಾರ್ಗದ ಮೂಲಕ ವ್ಯಾಪಾರ ಮಾಡುವ ಇರಾದೆಯನ್ನು ಹೊಂದಿದ್ದ. ಹೀಗಾಗಿ ಈತನ ನೀತಿಯನ್ನು ‘ನೀಲಿಜಲನೀತಿ’ ಎಂದು ಕರೆಯಲಾಗಿದೆ.

6. ಅಲ್ಪಾನೊ-ಡಿ-ಆಲ್ಬುಕರ್ಕ Afonso de Albuquerque (1509):

ಈತ ಭಾರತಕ್ಕೆ ಬಂದ ಪೋರ್ಚುಗೀಸರ ಎರಡನೆಯ ವೈಸ್‌ರಾಯ್. ಅಲ್ಬುಕರ್ಕ ಒಬ್ಬ ದಕ್ಷ ಆಡಳಿತಗಾರ. ಮುತ್ಸದ್ದಿ ಹಾಗೂ ಸಮಾಜ ಸುಧಾರಕನಾಗಿದ್ದ. ಈತ ಪೋರ್ಚುಗೀಸ್ ಸಾಮ್ರಾಜ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿದ. ಹೀಗಾಗಿ ಈತನನ್ನು “ಭಾರತದಲ್ಲಿನ ಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ” ಎಂದು ಕರೆಯಲಾಗಿದೆ. 

ಅಲ್ಬುಕರ್ಕನ ಸಾಧನೆಗಳು:

1. ಕ್ರಿ.ಶ. 1510ರಲ್ಲಿ ಗೋವಾ ಬಂದರನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.

2. ಅಲ್ಬುಕರ್ಕ್ ತನ್ನ 6 ವರ್ಷದ ಅಧಿಕಾರವಧಿಯಲ್ಲಿ ಗುಜರಾತಿನ ಡಿಯು-ದಮನ್, ಗೋವಾ, ಪರ್ಶಿಯನ್ ಕೊಲ್ಲಿಯ ಓರ್ಮುಜ್ ಹಾಗೂ ಮಲಕ್ಕಾವನ್ನು ಗೆದ್ದುಕೊಂಡ.

3. ಈತ ಡಿಯು, ದಮನ್, ಗೋವಾ, ಕಲ್ಲಿಕೋಟೆ, ಚೌಲ್, ಕೊಚ್ಚಿನ್, ಕಣ್ಣಾನೂರ ಹಾಗೂ ಸಾಲ್‌ಸೆಟ್‌ಗಳಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿದನು.

4. ಮಲಬಾರ್ ಕರಾವಳಿಯ ರಾಜರಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿ ಅಲ್ಲಿ ಪೋರ್ಚುಗೀಸರ ಪ್ರಭಾವವನ್ನು ಹೆಚ್ಚಿಸಿದನು.

5. ಪೋರ್ಚುಗೀಸ್ ಆಡಳಿತದಲ್ಲಿ ಹಿಂದುಗಳಿಗೆ ಅವಕಾಶ ನೀಡುವ ಮೂಲಕ ಭಾರತೀಯರ ಪ್ರೀತಿಗೆ ಪಾತ್ರನಾದನು.

6. ಭಾರತದಲ್ಲಿ ಪೋರ್ಚುಗೀಸರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅಲ್ಬುಕರ್ಕ್ ಪೋರ್ಚುಗೀಸ್ ಪುರುಷರು ಭಾರತೀಯ ಸ್ತ್ರೀಯರನ್ನು ಮದುವೆಯಾಗುವಂತೆ ಪ್ರೋತ್ಸಾಹ ನೀಡಿದನು.

7. ಪೋರ್ಚುಗೀಸರ ಕೋಠಿಗಳು : ಕೊಚ್ಚಿನ್, ಕಣ್ಣಾನೂರು, ಕ್ವಿಲಾನ್, ಮಂಗಳೂರು, ಗೋವಾ, ಡಿಯು, ದಮನ್, ಬಸೈನ್, ಸಾಲೈಟ್, ಸೂರತ್, ಚಿತ್ತಗಾಂಗ್ ಹಾಗೂ ಹೂಗ್ಲಿ.

ಪೋರ್ಚುಗೀಸ್ ಸಂಪರ್ಕದಿಂದ ಉಂಟಾದ ಪರಿಣಾಮಗಳು:

1. ಪೋರ್ಚುಗೀಸರ ಆಗಮನದಿಂದ ಭಾರತದ ಬಟ್ಟೆ, ಅಕ್ಕಿ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನಲ್ಲಿ ಬಾರಿ ಬೇಡಿಕೆಯುಂಟಾಯಿತು.

2. ಪೋರ್ಚುಗೀಸರು ಅಮೇರಿಕದ ಬೆಳೆಗಳಾದ ತಂಬಾಕು, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಆಲೂಗಡ್ಡೆ ಹಾಗೂ ಗೋಡಂಬಿಗಳನ್ನು ಭಾರತದಲ್ಲಿ ಪರಿಚಯಿಸಿದರು.

3. ಪೋರ್ಚುಗೀಸರು ಗೇರುಬೀಜ, ಟೊಮ್ಯಾಟೋ, ಅನಾನಸ್ ಹಾಗೂ ಪಪ್ಪಾಯಿಗಳನ್ನು ತಂದು ಭಾರತದಲ್ಲಿ ಬೆಳೆಯಲು ಆರಂಭಿಸಿದರು.

ಪೋರ್ಚುಗೀಸರ ಅವನತಿಗೆ ಕಾರಣಗಳು:

ಪೋರ್ಚುಗೀಸರು ಕ್ರಮೇಣ ತಮ್ಮ ವಸಾಹತುಗಳನ್ನು ಕಳೆದುಕೊಳ್ಳಲಾರಂಬಿಸಿದರು. ಹೀಗಾಗಿ ಅವರ ಅವನತಿ ಸನ್ನಿಹಿತವಾದಂತೆ ಕಂಡು ಬಂದಿತು. ಪೋರ್ಚುಗೀಸರ ಅವನತಿಗೆ ಈ ಕೆಳಗಿನ ಕಾರಣಗಳನ್ನು ಕೊಡಬಹುದು.

1. ಅಲ್ಬುಕರ್ಕನ ನಂತರ ಬಂದ ಅಧಿಕಾರಿಗಳು ಅಸಮರ್ಥರಾಗಿದ್ದರು.

2. ಪೋರ್ಚುಗೀಸ್ ಅಧಿಕಾರಿಗಳು ಭ್ರಷ್ಟರೂ ಹಾಗೂ ವಿಷಯ ಲಂಪಟರೂ ಆಗಿದ್ದರು.

3. ಪೋರ್ಚುಗೀಸರ ಧಾರ್ಮಿಕ ನೀತಿ ಅಸಹನೆಯಿಂದ ಕೂಡಿದುದಾಗಿತ್ತು.

4. ಇಂಗ್ಲೀಷರು ಹಾಗೂ ಡಚ್ಚರು ಸ್ಪ್ಯಾನಿಷ್ ಆರ್ಮುಡಾವನ್ನು ವಶಪಡಿಸಿಕೊಂಡುದುದು ಪೋರ್ಚುಗೀಸರ ಅವನತಿಗೆ ಕಾರಣವಾಯಿತು.

5. ಪೋರ್ಚುಗೀಸ್ ಅಧಿಕಾರಿಗಳು ವಿಜಯನಗರದ ಅರಸರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಕ್ರಿ.ಶ.1565 ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಸಂಪೂರ್ಣವಾಗಿ ಪರಾಭವಗೊಂಡರು. ಹೀಗಾಗಿ ಪೋರ್ಚುಗೀಸರು ವಿಜಯನಗರವನ್ನೇ ಅವಲಂಬಿಸಿದ್ದರಿಂದ ಅವರ ವ್ಯಾಪಾರಕ್ಕೆ ಕಟ್ಟುಬಿದ್ದಿತು.

6. ಮರಾಠರು ಸಾಲೈಟ್ ಹಾಗು ಬಸೈನ್‌ಗಳನ್ನು ವಶಪಡಿಸಿಕೊಂಡು ಮಹಾರಾಷ್ಟ್ರದ ಕರಾವಳಿಯಿಂದ ಪೋರ್ಚುಗೀಸರನ್ನು ಹೊರಹಾಕಿದರು.

7. ಪೋರ್ಚುಗೀಸರ ಭೂಸೈನ್ಯ ಹಾಗೂ ನೌಕಾಸೈನ್ಯ ಪ್ರಬಲವಾಗಿರಲಿಲ್ಲ. ಇದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು.

8. ಭಾರತಕ್ಕಿಂತ ಅತ್ಯಂತ ಹೆಚ್ಚು ಸಂಪದ್ಭರಿತವಾಗಿದ್ದ ಬ್ರೆಜಿಲ್ ಪೋರ್ಚುಗಿಸರನ್ನು ಆ ಕಡೆಗೆ ಆಕರ್ಷಿಸಿತು.

9. ಪೋರ್ಚುಗಲ್ ಚಿಕ್ಕ ರಾಷ್ಟ್ರವಾಗಿದ್ದು ಭಾರತದಂತಹ ದೊಡ್ಡ ರಾಷ್ಟ್ರವನ್ನು ಎದುರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ.

10. ಉತ್ತರದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗಿದ್ದರಿಂದ ಪೋರ್ಚುಗೀಸರು ತಮ್ಮ ಪ್ರಭಾವವನ್ನು ಅಲ್ಲಿ ಹೆಚ್ಚಿಸಿಕೊಳ್ಳಲು ಅಸಮರ್ಥರಾದರು.

11. ಪೋರ್ಚುಗೀಸರು ಡಿಯು, ದಾಮನ್ ಹಾಗೂ ಗೋವಾ ಹೊರತು ಪಡಿಸಿ ತಮ್ಮ ಎಲ್ಲಾ ವಸಹಾತುಗಳನ್ನು ಕಳೆದುಕೊಂಡರು.

12. ಫ್ರೆಂಚರು ಹಾಗೂ ಬ್ರಿಟಿಷರು ತಮ್ಮ ಪ್ರಬಲವಾದ ನೌಕಾಶಕ್ತಿಯಿಂದ ಪೋರ್ಚುಗೀಸರನ್ನು ಸೋಲಿಸಿ ಭಾರತದಿಂದ ಹೊರಹಾಕಿದರು.

ಶಿವಾಜಿಯ ಆಡಳಿತ ಪದ್ಧತಿ

ಶಿವಾಜಿಯ ಆಡಳಿತ ಪದ್ಧತಿ

1) ಆಡಳಿತ:

ಶಿವಾಜಿಯು ದಕ್ಷ ಆಡಳಿತಗಾರ, ರಾಜನೀತಿ ನಿಪುಣ ಹಾಗೂ ವೀರಯೋಧನಾಗಿದ್ದನು. ಅವನಲ್ಲಿ ಹೆಚ್ಚಿನ ಅಧಿಕಾರ ಕೇಂದ್ರೀಕೃತವಾಗಿದ್ದರೂ ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿಯನ್ನು ಕಾಣುತ್ತಿದ್ದನು. ಆಡಳಿತದ ಅನುಕೂಲಕ್ಕಾಗಿ ಕೇಂದ್ರದಲ್ಲಿ 18 ಇಲಾಖೆಗಳನ್ನು ರಚಿಸಿದ್ದನು. ಈ ಆಡಳಿತ ವಿಭಾಗಗಳನ್ನು ನೋಡಿಕೊಳ್ಳಲು ಎಂಟು ಜನ ಸಚಿವ (ಅಷ್ಟಪ್ರಧಾನ) ರನ್ನು ನೇಮಿಸಿದನು. ಮರಾಠಿ ಇವರ ಆಡಳಿತ ಭಾಷೆಯಾಗಿತ್ತು.

ಅಷ್ಟಪ್ರಧಾನರು:

ಶಿವಾಜಿಗೆ ಆಡಳಿತದಲ್ಲಿ ಸಹಾಯ ನೀಡಲು ಅಷ್ಟಪ್ರಧಾನರು ಎಂಬ ಮಂತ್ರಿಮಂಡಳವಿತ್ತು. ಇವರು ಶಿವಾಜಿಯಿಂದ ನೇಮಕಗೊಳ್ಳುತ್ತಿದ್ದರು.

1. ಪೇಳ್ವೆ (ಪ್ರಧಾನಮಂತ್ರಿ) – ಕೇಂದ್ರ ಸರ್ಕಾರದ ಆಡಳಿತ ಇಲಾಖೆಗಳ ಮೇಲ್ವಿಚಾರಕ.

2. ಅಮಾತ್ಯ (ಹಣಕಾಸು ಸಚಿವ) – ಸಾರ್ವಜನಿಕ ಲೆಕ್ಕಪತ್ರಗಳ ತಖ್ಯೆಯನ್ನು ಇಡುವವ.

3. ಮಂತ್ರಿ (ಕಾರ್ಯದರ್ಶಿ)- ರಾಜನ ದೈನಂದಿನ ವ್ಯವಹಾರಗಳನ್ನು ದಾಖಲು ಮಾಡುವವ.

4. ಸಚಿವ (ಗೃಹಮಂತ್ರಿ)- ಅರಸನ ಪತ್ರವ್ಯವಹಾರಗಳನ್ನು ನೋಡಿಕೊಳ್ಳುವವ.

5. ಸಮಂತ (ವಿದೇಶಾಂಗ ಮಂತ್ರಿ)- ಯುದ್ಧ, ಶಾಂತಿ, ಒಪ್ಪಂದ ಹಾಗೂ ವಿದೇಶಿವ್ಯವಹಾರ ನೋಡಿಕೊಳ್ಳುವುದು.

6. ಸೇನಾಪತಿ (ದಂಡನಾಯಕ)- ಸೈನ್ಯ ಸಂಘಟನೆ, ಯುದ್ಧತಂತ್ರ, ಸೈನಿಕರ ಸಂಬಳ ಬಟವಾಡೆ ಮಾಡುವವ

7. ಪಂಡಿತ್‌ ರಾವ್ (ಪುರೋಹಿತ)- ಧಾರ್ಮಿಕ ವಿಷಯಗಳ ಬಗ್ಗೆ ಅರಸನಿಗೆ ಮಾಹಿತಿ ನೀಡುವವ.

8. ನ್ಯಾಯಾದೀಶ (ನ್ಯಾಯಾಡಳಿತವರಿಷ್ಠ)- ರಾಜ್ಯದ ನ್ಯಾಯಾಡಳಿತದ ಬಗ್ಗೆ ಕ್ರಮ ಜರುಗಿಸುವವರು. 

2) ಪ್ರಾಂತ ಸರ್ಕಾರ:

ಆಡಳಿತ ಅನುಕೂಲಕ್ಕಾಗಿ ಶಿವಾಜಿ ತನ್ನ ಸಾಮ್ರಾಜ್ಯವನ್ನು ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿದನು. ಪ್ರತಿಯೊಂದು ಪ್ರಾಂತಗಳಿಗೆ “ಸರ್‌ದೇಶ ಮುಖಿ” ಎಂಬ ಅಧಿಕಾರಿಯನ್ನು ನೇಮಿಸಿದ್ದನು. ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ, ಜಿಲ್ಲೆಗಳನ್ನು ತರಫ್‌ಗಳನ್ನಾಗಿ, ತರಘಗಳನ್ನು ಗ್ರಾಮಗಳನ್ನಾಗಿ ವಿಂಗಡಿಸಿದನು. ಜಿಲ್ಲೆಗಳನ್ನು ದೇಶಾಧಿಕಾರಿ, ತರಪ್‌ಗಳನ್ನು ಅಮಲ್ದಾರರು, ಗ್ರಾಮಗಳನ್ನು ಪಟೇಲರು ನೋಡಿಕೊಳ್ಳುತ್ತಿದ್ದರು.

3) ಕಂದಾಯ ಪದ್ಧತಿ:

ಶಿವಾಜಿ ಭೂಮಿಯನ್ನು ಅಳತೆ ಮಾಡಿಸಿ ಫಲವತ್ತತೆಗೆ ಅನುಗುಣವಾಗಿ ಭೂಕಂದಾಯವನ್ನು ನಿಗದಿಗೊಳಿಸಿದನು. ರಾಜ್ಯದ ಒಟ್ಟು ಉತ್ಪನ್ನದ ಶೇ. 30 ಭಾಗದಷ್ಟು ಭೂಕಂದಾಯವನ್ನು ವಸೂಲಿ ಮಾಡುತ್ತಿದ್ದ. ರೈತರು ನೇರವಾಗಿ ಸರ್ಕಾರಕ್ಕೆ ಕಂದಾಯ ಸಲ್ಲಿಸಬೇಕಾಗುತ್ತಿದ್ದರಿಂದ ಮಧ್ಯವರ್ತಿಗಳ ಹಾವಳಿ ಇರಲಿಲ್ಲ. ಕಂದಾಯ ವಸೂಲಿಗಾಗಿ ಶಿವಾಜಿಯು ಸುಬೇದಾರ, ಕಾರಕೂನ ಹಾಗೂ ಕೋಶಾಧಿಕಾರಿಗಳನ್ನು ನೇಮಿಸಿದ್ದನು. ಕಂದಾಯದ ಗುತ್ತಿಗೆ ಕ್ರಮವನ್ನು ತಗೆದು ಹಾಕಲಾಯಿತು. ನಂತರ ಕಂದಾಯದ ಪ್ರಮಾಣವನ್ನು 33 ರಿಂದ 40ಕ್ಕೆ ಏರಿಸಲಾಯಿತು. ರೈತರು ಕಂದಾಯವನ್ನು ಹಣ ಅಥವಾ ದಾನ್ಯದ ರೂಪದಲ್ಲಿ ನೀಡಬಹುದಾಗಿತ್ತು. ಕಂದಾಯ ವಸೂಲಿಯಲ್ಲಿನ ಭ್ರಷ್ಟಾಚಾರವನ್ನು ತಡೆಯಲು ಶಿವಾಜಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಗಳನ್ನು ಕೈಗೊಂಡನು. ರೈತರಿಗೆ ಬೀಜ, ರಸಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಕೊಳ್ಳಲು ಶಿವಾಜಿ ಸಾಲನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದನು. ಅವರು ಸುಲಭ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತಿತ್ತು.

4) ಚೌತ್ ಮತ್ತು ಸರದೇಶಮುಖಿ:

ಶಿವಾಜಿಯ ರಾಜ್ಯ ಬೆಟ್ಟಗುಡ್ಡಗಳಿಂದ ಕೂಡಿದ್ದು ಹೆಚ್ಚು ಭೂಕಂದಾಯ ಸಂಗ್ರಹವಾಗುತ್ತಿರಲಿಲ್ಲ. ಈ ಕಾರಣದಿಂದ ರಾಜ್ಯದ ಬೊಕ್ಕಸವನ್ನು ಭರ್ತಿಮಾಡಲು. ಶಿವಾಜಿ ಅಕ್ಕ ಪಕ್ಕದ ರಾಜ್ಯಗಳ ಶತೃಗಳಿಂದ ಚೌತ್ ಮತ್ತು ಸರದೇಶಮುಖಿ ಎಂಬ ಎರಡು ತೆರಿಗೆಗಳನ್ನು ವಸೂಲಿ ಮಾಡುತ್ತಿದ್ದನು.

ಚೌತ್:

ಮರಾಠರ ದಾಳಿಯಿಂದ ತಪ್ಪಿಸಿಕೊಳ್ಳಲು ನೆರೆಹೊರೆಯ ರಾಜ್ಯಗಳು ಶಿವಾಜಿಗೆ ತಮ್ಮ ರಾಜ್ಯದ ಆದಾಯದ 1/4 ಭಾಗದಷ್ಟು ತೆರಿಗೆಯನ್ನು ಸಲ್ಲಿಸಬೇಕಿತ್ತು.

ಸರ್‌ದೇಶ ಮುಖಿ:

ನೆರೆಹೊರೆಯ ರಾಜ್ಯಗಳು ಮಿಲಿಟರಿ ತೆರಿಗೆಯಾಗಿ ಶಿವಾಜಿಗೆ 1/10 ಭಾಗದಷ್ಟು ತೆರಿಗೆಯನ್ನು ಸಲ್ಲಿಸುವುದು.

5) ಸೇನಾಡಳಿತ:

ಶಿವಾಜಿಯ ಒಬ್ಬ ಮಹಾ ಸೇನಾಧಿಕಾರಿಯಾಗಿದ್ದರಿಂದ ತನ್ನ ಸೇನೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೈನಿಕರನ್ನೇ ನೇಮಕಮಾಡಿಕೊಂಡಿದ್ದನು. ಸೈನಿಕರಿಗೆ ಜಹಗೀರು ಬದಲಾಗಿ ವೇತನವನ್ನು ನೀಡುವ ಪದ್ಧತಿಯನ್ನು ಜಾರಿಗೆ ತಂದನು. ಹೀಗಾಗಿ ಶಿವಾಜಿಯ ಸೈನ್ಯದಲ್ಲಿ ದಕ್ಷತೆ ಹೆಚ್ಚಿತ್ತೆಂದು ಹೇಳಬಹುದು. ಶಿವಾಜಿಯ ಸೈನ್ಯವು ಕಾಲ್ಗಳ, ಅಶ್ವಪಡೆ, ಗಜದಳ ಹಾಗೂ ಒಂಟೆಪಡೆಗಳನ್ನು ಒಳಗೊಂಡಿತ್ತು. ಇವನ ಸೈನ್ಯದಲ್ಲಿ 10000 ಕಾಲ್ದಳ, 30000 ಅಶ್ವಪಡೆ, 300 ಒಂಟೆಪಡೆ ಹಾಗೂ 1260 ಗಜಪಡೆ ಇತ್ತೆಂದು ಹೇಳಲಾಗಿದೆ.

6) ನ್ಯಾಯಾಡಳಿತ:

ಶಿವಾಜಿಯೇ ರಾಜ್ಯದ ಸರ್ವೋಚ್ಛ ನ್ಯಾಯಾದೀಶನಾಗಿದ್ದನು. ಈತನ ತೀರ್ಪೆ ಅಂತಿಮವಾಗಿತ್ತು. ಇವನು ಸಿವಿಲ್ ಮತ್ತು ಕ್ರಿಮಿನಲ್ ಕಟ್ಟೆಗಳನ್ನು ಬಗೆಹರಿಸುತ್ತಿದ್ದನು. ಪ್ರಾಂತಗಳಲ್ಲಿ ಗವರ್ನ‌್ರಗಳು ನ್ಯಾಯಾದೀಶರಾಗಿದ್ದರು. ಗ್ರಾಮಗಳ ವ್ಯಾಜ್ಯಗಳನ್ನು ಪಟೇಲರು ಬಗೆಹರಿಸುತ್ತಿದ್ದರು.

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ

ಧಾರ್ಮಿಕ ನೀತಿ:

ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್‌ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು. ಜೊತೆಗೆ ಹಿಂದುಗಳೇ ಅಧಿಕವಾಗಿದ್ದ ಮೊಗಲ್ ಸಾಮ್ರಾಜ್ಯದಲ್ಲಿ ಅವರನ್ನು ತನ್ನೆಡೆಗೆ ಒಲಿಸಿಕೊಳ್ಳಲು ಉತ್ಸುಕನಾಗಿದ್ದನು. ಅಕ್ಬರ್‌ ಮಹಾಶಯ ಶೇಕ್‌ ಸಲೀಂ ಚಿಸ್ತಿಯ ಪರಮ ಭಕ್ತನಾಗಿದ್ದರಿಂದ ಫತೇಪುರ ಸಿಕ್ರಿಯಲ್ಲಿ ‘ಇಬಾದತ್‌ಖಾನ’ ಎಂಬ ಭವ್ಯ ಕಟ್ಟಡವನ್ನು ನಿರ್ಮಿಸಿದನು. ಪ್ರತಿ ಗುರುವಾರ ಇಸ್ಲಾಂ, ಹಿಂದೂ, ಜೈನ, ಕ್ರೈಸ್ತ ಹಾಗೂ ಸಿಖ್ ಧರ್ಮಗುರುಗಳನ್ನು ಅಲ್ಲಿಗೆ ಆಹ್ವಾನಿಸಿ ಧಾರ್ಮಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು. ಕ್ರಿ.ಶ. 1579 ರಲ್ಲಿ ಅಕ್ಬರನು ಸುನಿಶ್ಚಯ ಶಾಸನವನ್ನು ಹೊರಡಿಸಿ ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಪಂಡಿತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅಂತಿಮ ನಿರ್ಣಯವನ್ನು ಕೊಡುವ ಅಧಿಕಾರವನ್ನು ಬಾದಶಹ ಹೊಂದಿದ್ದನು.

ದಿನ್-ಇ-ಇಲಾಹಿ :

ಅಕ್ಷರನು ಸಾ.ಶ. 1582 ರಲ್ಲಿ ದಿನ್-ಇ-ಇಲಾಹಿ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು. ಈ ಹೊಸ ಧರ್ಮವು ಈ ಕೆಳಗಿನ ಪ್ರಮುಖ ತತ್ವಗಳನ್ನು ಒಳಗೊಂಡಿತ್ತು.

1) ಇದು ಸುಲ್-ಎ-ಕುಲ್ (ಸರ್ವರಿಗೂ ಶಾಂತಿ) ಎಂಬ ತತ್ವವನ್ನು ಒಳಗೊಂಡಿತ್ತು.

2) ಸ್ವಾತಂತ್ರ್ಯ ಮತ್ತು ಪರೋಪಕಾರ.

3) ಲೌಕಿಕ ವಿಚಾರಗಳಿಂದ ದೂರವಾಗಿರುವುದು.

4) ಏಕೀಶ್ವರ ತತ್ವಗಳ ತಳಹದಿಯನ್ನು ಹೊಂದಿತ್ತು.

5) ಯಾರೊಬ್ಬರ ಮನಸ್ಸನ್ನು ನೋಯಿಸದೆ ಮೃದುವಾಗಿ, ಹಿತವಾಗಿ ಸಭ್ಯತೆಯಿಂದ ನುಡಿಯುವುದು.

6) ದೇವರಿಗೆ ಆತ್ಮವನ್ನು ಅರ್ಪಿಸುವುದು. ಅಬುಲ್‌ ಫಜಲ್ ದಿನ್-ಇಲಾಹಿಯ ಪುರೋಹಿತನಾಗಿದ್ದನು. ಯಾರೇ ಈ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದರೆ ಅಬುಲ್ ಫಜಲ್ ಆತನನ್ನು ಚಕ್ರವರ್ತಿಗೆ ಪರಿಚಯಿಸುತ್ತಿದ್ದನು. ಆಗ ಆ ವ್ಯಕ್ತಿ ತನ್ನ ರುಮಾಲನ್ನು ಕೈಯಲ್ಲಿರಿಸಿಕೊಂಡು ಚಕ್ರವರ್ತಿಯ ಪಾದಗಳಿಗೆ ನಮಸ್ಕರಿಸಬೇಕಿತ್ತು. ಚಕ್ರವರ್ತಿ ಆತನನ್ನು ಎಬ್ಬಿಸಿ ರುಮಾಲನ್ನು ಆತನ ತಲೆಯ ಮೇಲೆ ಇರಿಸುತ್ತಿದ್ದನು. ನಂತರ ‘ಶಸ್ತ್ರ’ ಎಂಬ ಸಂಕೇತವನ್ನು ಕೊಡುತ್ತಿದ್ದನು. ಆ ಸಂಕೇತದ ಮೇಲೆ ‘ಅಲ್ಲಾಹೂ ಅಕ್ಬರ್’ ಎಂದು ಬರೆಯಲಾಗಿತ್ತು. ಆದರೆ ದಿನ್-ಇಲಾಹಿಯನ್ನು ಬೆರಳೆಣಿಕೆಯಷ್ಟು ಜನ ಬಿಟ್ಟರೆ ಬೇರೆ ಯಾರೂ ಸ್ವೀಕರಿಸಲಿಲ್ಲ. ಅಕ್ಬರನ ಮರಣದ ನಂತರ ಅವನ ಹಿಂದೆಯೇ ಅದು ನಿರ್ನಾಮವಾಯಿತು.

ರಜಪೂತ ನೀತಿ:

ಅಕ್ಬರನ ರಜಪೂತ ಧೋರಣೆಯು ರಾಜಕೀಯ ಹಿತಾಸಕ್ತಿ, ನ್ಯಾಯ ಹಾಗೂ ಸಮಾನತೆಯ ತತ್ವಗಳನ್ನು ಆಧರಿಸಿತ್ತು. ಹೊರನಾಡಿನವರಾದ ಮುಸಲ್ಮಾನ ಅಧಿಕಾರಿಗಳು ಹಾಗೂ ಸರದಾರರನ್ನು ಸಂಪೂರ್ಣವಾಗಿ ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಅಕ್ಷರನಿಗೆ ತನ್ನ ಆಡಳಿತದ ಮೊದಲ ವರ್ಷದಲ್ಲಿಯೇ ಮನವರಿಕೆಯಾಯಿತು. ಮುಸಲ್ಮಾನರು ಸ್ವಹಿತಕ್ಕಾಗಿ ದುಡಿಯುವರೆಂಬ ಸತ್ಯ ಅವನಿಗೆ ಆಗಲೇ ಮನದಟ್ಟಾಯಿತು. ಈ ಕಾರಣದಿಂದಾಗಿ ಅಕ್ಬರನು ಮೊಗಲ್ ಸಾಮ್ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಅದರಲ್ಲೂ ರಜಪೂತರನ್ನು ಅತ್ಯಂತ ವಿಶ್ವಾಸಪೂರ್ವಕವಾಗಿ ನಡೆಸಿಕೊಂಡುದುದನ್ನು ಭಾರತೀಯ ಇತಿಹಾಸಕಾರರು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಹಿಂದೆ ಬಾಬರನಾಗಲಿ, ಹುಮಾಯೂನನಾಗಲೀ ರಜಪೂತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಗೆ ಅವರನ್ನು ನೇಮಕವನ್ನು ಮಾಡಿರಲಿಲ್ಲ. ಆದರೆ ಅಕ್ಬರ್‌ ಮಾತ್ರ ರಜಪೂತರಿಗೆ ರಾಜಕೀಯದಲ್ಲಿ ಅಗ್ರಸ್ಥಾನವನ್ನು ನೀಡಿದನು. ಇದರಿಂದಾಗಿ ಅಕ್ಬರ್‌ ಭಾರತೀಯ ಇತಿಹಾಸದಲ್ಲಿ ವಿಶಿಷ್ಠವಾದ ಸ್ಥಾನವನ್ನು ಪಡೆದಿದ್ದಾನೆ.

1) ಅಕ್ಬರನು ತನ್ನ ಸೈನಿಕ ಶಿಬಿರ ಹಾಗೂ ದರ್ಬಾರಿನಲ್ಲಿಯೇ ದಂಗೆಕೋರರನ್ನು ಎದುರಿಸಬೇಕಾಗಿದ್ದ ಕಾರಣದಿಂದ ಅವನು ರಜಪೂತರ ಬಗ್ಗೆ ಸೌಮ್ಯ ನೀತಿಯನ್ನು ಅನುಸರಿಸಿದನು.

2) ಅಕ್ಬರನ ಪ್ರಧಾನಮಂತ್ರಿಯಾಗಿದ್ದ ಶಹ ಮನ್ಸೂರ್ ಅಕ್ಬರನ ಮಲತಮ್ಮನಾದ ಮಹಮ್ಮದ್ ಹಕೀಂನಿಗೆ ಬೆಂಬಲ ನೀಡಿ ದ್ರೋಹ ಬಗೆದುದು ಅಕ್ಬರನು ರಜಪೂತರ ಬಗ್ಗೆ ಕಾಳಜಿ ವಹಿಸಲು ಕಾರಣವಾಯಿತು.

3 ) ಬೈರಾಂಖಾನನು ಅಕ್ಬರನ ವಿರುದ್ಧ ದಂಗೆ ಎದ್ದುದು ಹಾಗೂ ಮಹಮ್ ಅನಗಾ ಸ್ವಾರ್ಥಿಯಾದುದು ಅಕ್ಬರನು ರಜಪೂತರ ಬಗ್ಗೆ ನಿಷ್ಟೆ ತೋರಲು ಕಾರಣವಾಯಿತು.

ರಜಪೂತರ ಕೊಡುಗೆಗಳು

ರಜಪೂತರ ಕೊಡುಗೆಗಳು

1) ಸಾಮಾಜಿಕ ಜೀವನ:

ರಜಪೂತರ ಸಮಾಜದ ಮುಖ್ಯ ಲಕ್ಷಣವೆಂದರೆ ಜಾತಿ ಪದ್ಧತಿಯ ಪ್ರಾಧಾನ್ಯತೆ. ಚತುರ್ವಣ್ರಗಳಲ್ಲದೆ ಹಲವಾರು ಜಾತಿ ಉಪಜಾತಿಗಳೂ ಆಕಾಲದಲ್ಲಿ ಪ್ರಚಲಿತದಲ್ಲಿದ್ದವು. ರಜಪೂತ ಸಮಾಜದಲ್ಲಿ ಬ್ರಾಹ್ಮಣರು ಉನ್ನತಸ್ಥಾನವನ್ನು ಪಡೆದಿದ್ದರೆ ಶೂದ್ರರು ಕೆಳಸ್ಥರದಲ್ಲಿದ್ದರು. ಅಸ್ಪೃಶ್ಯರು ಗ್ರಾಮದ ಹೊರಗಡೆ ವಾಸಿಸುತ್ತಿದ್ದರು. ಜಾತಿಯ ಕಟ್ಟುಪಾಡುಗಳು ಬಿಗಿಯಾಗಿದ್ದವು. ಸಮಾಜದಲ್ಲಿ ಅಂತರ್ ಜಾತೀಯ ವಿವಾಹಗಳು ಚಾಲ್ತಿಯಲ್ಲಿದ್ದವು. ವೃತ್ತಿಗನುಗುಣವಾಗಿ ನೇಯ್ದೆ, ಅಕ್ಕಸಾಲಿಗ, ಗಾಣಿಗ, ಗೌಳಿಗ, ಬಡಗಿ ಇನ್ನೂ ಮುಂತಾದ ಉಪಜಾತಿಗಳು ಏರ್ಪಟ್ಟವು.

2) ಸ್ತ್ರೀಯರ ಸ್ಥಾನಮಾನ:

ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿದ್ದಿತು. ಪರ್ದಾಪದ್ಧತಿ ಇರಲಿಲ್ಲ. ಸ್ತ್ರೀಯರು ಸಾಮಾಜಿಕ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಬಹುದಿತ್ತು. ಕನೈಯು ತನ್ನ ಪತಿಯ ಆಯ್ಕೆಯಲ್ಲಿ ಸ್ವಾತಂತ್ರ್ಯವನ್ನು ಹೊಂದಿದ್ದಳು. ರಜಪೂತರಲ್ಲಿ ಸ್ವಯಂವರ ಪದ್ಧತಿ ರೂಢಿಯಲ್ಲಿತ್ತು. ಬಾಲ್ಯವಿವಾಹ ರೂಢಿಯಲ್ಲಿರಲಿಲ್ಲ. ಸ್ತ್ರೀಯರು ಸುಶಿಕ್ಷಿತರಾಗಿದ್ದು ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ಅನೇಕ ಸ್ತ್ರೀಯರು ಕವಿಗಳಾಗಿ, ವಿದ್ವಾಂಸರಾಗಿ ಹಾಗೂ ಬರಹಗಾರರಾಗಿ ಬೆಳಗಿದರು. ಆ ಕಾಲದ ಪ್ರಸಿದ್ದ ಸ್ತ್ರೀಯರೆಂದರೆ ಆವಂತಿ ಸುಂದರಿ, ಇಂದುಲೇಖ, ಮರುಳಾ, ಶೀಲಾ, ಸುಭದ್ರ, ಲಕ್ಷ್ಮಿ, ವಿಜ್ಜಿಕಾ, ಮೋರಿಕಾ, ಪದ್ಮಶ್ರೀ ಮತ್ತು ಮದಲಸಾ ಪ್ರಮುಖರಾದವರು. ರಜಪೂತರಲ್ಲಿ ‘ಜೋಹಾರ್ ಪದ್ಧತಿ ಇದ್ದಿತು. ಪರಕೀಯರ ದಾಳಿಯಿಂದ ಮಾನರಕ್ಷಿಸಿಕೊಳ್ಳಲು ರಜಪೂತ್ ಸ್ತ್ರೀಯರು ಸಾಮೂಹಿಕವಾಗಿ ಅಗ್ನಿಪ್ರವೇಶ ಮಾಡುವುದನ್ನು ಜೋಹಾರ್ ಪದ್ಧತಿ ಎಂದು ಕರೆಯಲಾಗಿದೆ. ಸತಿಸಹಗಮನ ಪದ್ಧತಿ ಸಹ ಆಚರಣೆಯಲ್ಲಿತ್ತು. ಗಂಡನ ಮರಣದ ನಂತರ ಅವನ ಹೆಂಡತಿ ಗಂಡನ ಚಿತೆಯಲ್ಲಿ ಹಾರಿ ಪ್ರಾಣಬಿಡುವುದನ್ನು ಸತಿಸಹಗಮನ ಎಂದು ಕರೆಯಲಾಗಿದೆ. ವಿಧವಾ ವಿವಾಹ ಜಾರಿಯಲ್ಲಿರಲಿಲ್ಲ. ಬಾಲ ವಿಧವೆಯರ ಜೀವನ ಅತ್ಯಂತ ದುಸ್ತರವಾಗಿದ್ದಿತು.

3) ಸಾಹಿತ್ಯದ ಬೆಳವಣಿಗೆ:

ರಜಪೂತರು ಶ್ರೇಷ್ಠ ವಿದ್ವಾಂಸರು ಹಾಗೂ ಬರಹಗಾರರು ಆಗಿದ್ದರು. ಜೊತೆಗೆ ಅನೇಕ ಸಾಹಿತಿಗಳಿಗೆ ಹಾಗೂ ಕವಿಗಳಿಗೆ ಪ್ರೋತ್ಸಾಹ ನೀಡಿದರು. ಹೀಗಾಗಿ ಇವರ ಅವಧಿಯಲ್ಲಿ ಅನೇಕ ಕೃತಿಗಳು ರಚಿಸಲ್ಪಟ್ಟವು. ಆ ಕಾಲದ ಪ್ರಮುಖ ಕೃತಿಗಳು ಹಾಗೂ ಕವಿಗಳ ಕುರಿತು ಈ ಕೆಳಗಿನಂತೆ ಬರೆಯಲಾಗಿದೆ.

 

ಕವಿಗಳು

ಕೃತಿಗಳು

1)  ಭಟ್ಟ

ರಾವಣವಧ

2) ಮಾಘ 

ಶಿಶುಪಾಲವಧೆ

3) ಶ್ರೀಹರ್ಷ 

 ನೈಷದ ಚರಿತೆ

4) ಪದ್ಮಗುಪ್ತ  

ನವಸಾಹಸಾಂಕ ಚರಿತ್ರ

5) ದಾಮೋದರ ಗುಪ್ತ 

ಕಲ್ತನಿಮಾತಾ

6) ಜಯದೇವ 

ಗೀತಗೋವಿಂದ

ಗದ್ಯ ಕೃತಿಗಳು

1) ದಂಡಿ 

ದಶಕುಮಾರ ಚರಿತ

2) ದಮ್ಮಪಾಲ 

ತಿಲಕಮಂಜರಿ

3) ಯಶಸ್ತಿಲಕ  

ವಾಸವದತ್ತ

4) ಸುಬಂಧು

ಕಾದಂಬರಿ

ನಾಟಕಗಳು

1) ಭವಭೂತಿ  ಮಾಲತಿಮಾಧವ, ಮಹಾವೀರ ಚರಿತ, ಉತ್ತರ ರಾಮ ಚರಿತ

2) ಆನಂದವರ್ಧನ  ಪ್ರಭೋದ ಚಂದ್ರ

3) ರಾಜಶೇಖರ ಕರ್ಪೂರ ಮಂಜರಿ

ಐತಿಹಾಸಿಕ ಕೃತಿಗಳು

1) ಕಲ್ಹಣ   ರಾಜತರಂಗಿಣಿ

2)  ಬಿಲ್ಹಣ ವಿಕ್ರಮಾಂಕ ದೇವ ಚರಿತ

3) ಸಂಧ್ಯಾಕಾರಿಂದಿತನ ರಾಮಚರಿತ

ವ್ಯಕ್ತಿ ಚರಿತ್ರೆ

1) ಚಾಂದ್ ಬರ್ದಾಯಿ-ಪೃಥ್ವಿರಾಜರಾಸೋ

2) ಹೇಮಚಂದ್ರ-  ಕುಮಾರಪಾಲ ಚರಿತ

ವೈದ್ಯಕೀಯ ಮತ್ತು ಖಗೋಳಶಾಸ್ತ್ರ

1) ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ

2) ವಾಗೃಟ – ಅಷ್ಟಾಂಗ ಸಂಗ್ರಹ

3) ಭಾಸ್ಕರಾಚಾರ್ಯ -ಸಿದ್ಧಾಂತ ಶಿರೋಮಣಿ

4) ಧಾರ್ಮಿಕ ನೀತಿ:

ರಜಪೂತರು ಬಹುದೇವತಾ ಆರಾಧಕರಾಗಿದ್ದರು. ಇವರು ಶಿವ, ಸೂರ್ಯ, ಕಾಳಿ, ದುರ್ಗಿ ಮೊದಲಾದ ದೇವರುಗಳನ್ನು ಪೂಜಿಸುತ್ತಿದ್ದರು. ದಸರಾ, ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನು ಆಚರಿಸುತ್ತಿದ್ದರು. ರಜಪೂತರು ಹಿಂದೂ ಮತಾವಲಂಬಿಗಳಾಗಿದ್ದರೂ ಜೈನ ಹಾಗೂ ಬೌದ್ಧ ಧರ್ಮವನ್ನು ಕಡೆಗಣಿಸಿರಲಿಲ್ಲ.

5) ಕಲೆ ಹಾಗೂ ವಾಸ್ತುಶಿಲ್ಪ:

ರಜಪೂತರು ಕಲೋಪಾಸಕರು, ವಾಸ್ತುಶಿಲ್ಪ ಪ್ರಿಯರು ಹಾಗೂ ಕಲಾಪರಂಪರೆಗೆ ಹೆಚ್ಚು ಆದ್ಯತೆ ನೀಡಿದವರೂ ಆಗಿದ್ದರು. ಇವರು ಅನೇಕ ಕೋಟೆಕೊತ್ತಲಗಳು, ಕಟ್ಟಡಗಳು, ದೇವಾಲಯಗಳು, ಅರಮನೆಗಳು, ಸ್ನಾನ ಘಟ್ಟಗಳು ಹಾಗೂ ನೀರಾವರಿ ಆಣೆಕಟ್ಟುಗಳನ್ನು ನಿರ್ಮಿಸಿದರು. ಇವರು ನಿರ್ಮಿಸಿದ ಪ್ರಮುಖ ಸ್ಮಾರಕಗಳು ಚಿತ್ತೋರಗಡ್, ರಣಥಂಬೂರ್, ಅಮೀರ್‌ಗಡ್, ಅಂಬೇರ ಹಾಗೂ ಚೋದಪುರಗಳಲ್ಲಿ ಕಂಡು ಬಂದಿವೆ. ಇವರು ನಿರ್ಮಿಸಿದ ಪ್ರಮುಖ ಸ್ಮಾರಕಗಳೆಂದರೆ

1) ಚಿತ್ತೂರಿನ ಒಳಗಡೆ ರಾಣ ಕಂಬನು ನಿರ್ಮಿಸಿದ ವಿಜಯಸ್ತಂಭ

2) ಉದಯಪುರದ ಜಲಾವೃತ ಅರಮನೆ

3) ಜಯಪುರದ ಹವಾಮಹಲ್

4) ಗ್ವಾಲಿಯರ್‌ನಲ್ಲಿರುವ ಮಾನಸಿಂಗ್ ಅರಮನೆ ಮುಂತಾದವುಗಳು ರಜಪೂತರ ಕಲಾ ಅಭಿರುಚಿಗೆ ಜೀವಂತ ಸಾಕ್ಷಿಯಾಗಿವೆ ಉದಯಪುರದ ಉದಯೇಶ್ವರ ದೇವಾಲಯ, ಮೇವಾಡದ ಕಿರಾಡದಲ್ಲಿರುವ ಸೋಮೇಶ್ವರ ದೇವಾಲಯ, ಮಾರವಾಡದ ಒಸಿಯಾದ ಸೂರ್ಯದೇವಾಲಯ, ಕಾಥೇವಾಡದ ಸೆಜೆಕಪುರದ ನವಲಖ ದೇವಾಲಯ, ಅಭಿಪರ್ವತದ ಮೇಲಿನ ದಿಲ್ವಾರ, ವಿಮಲಶಾಹಿ ದೇಗುಲಗಳು, ಮುಂಬೈನ ಹತ್ತಿರವಿರುವ ಅಂಬರನಾಥದ ಮಹದೇವ ದೇವಾಲಯ, ಬೃಂದಾವನದ ಗೋವಿಂದದೇವ ದೇಗುಲ, ನಾಸಿಕ್ ಜಿಲ್ಲೆಯ ಸಿನ್ನಾರನ ಗಂಡೇಶ್ವರ ದೇವಾಲಯ ಮುಂತಾದವು ಭಾರತದ ಅತ್ಯಂತ ಚಲುವಿನ ದೇಗುಲಗಳು.

1) ಚಿತ್ತೂರಿನ ಒಳಗಡೆ ರಾಣ ಕಂಬನು ನಿರ್ಮಿಸಿದ ವಿಜಯಸ್ತಂಭ
2) ಉದಯಪುರದ ಜಲಾವೃತ ಅರಮನೆ
3) ಜಯಪುರದ ಹವಾಮಹಲ್
4) ಗ್ವಾಲಿಯರ್‌ನಲ್ಲಿರುವ ಮಾನಸಿಂಗ್ ಅರಮನೆ
1) ಖುಜರಾಹೋ

ಇದು ಮಧ್ಯಪ್ರದೇಶದ ಬಂದೇಲಖಂಡದ ಚಿತ್ತಾಪುರ ಜಿಲ್ಲೆಯ ಖುಜರಾಹೋದಲ್ಲಿ ಇದೆ. ಇದು ರಾಜಪೂತರ ಪ್ರಮುಖ ವಾಸ್ತುಶಿಲ್ಪದಲ್ಲಿ ಅತ್ಯಂತ ಪ್ರಮುಖವಾದುದು. ಇಲ್ಲಿ 8 ಚದರ ಕಿ.ಮೀ ವ್ಯಾಪ್ತಿಯಲ್ಲಿ 85ಕ್ಕೂ ಹೆಚ್ಚು ದೇವಾಲಯಗಳ ಸಂಕೀರ್ಣವಿದೆ. ಇವುಗಳಲ್ಲಿ ಈಗ ಕೇವಲ 30 ದೇವಾಲಯಗಳು ಮಾತ್ರ ಉಳಿದಿವೆ. ಖಜರಾಹೋದಲ್ಲಿನ ಬಹುತೇಕ ದೇವಾಲಯಗಳನ್ನು ಬಂದೇಲ್ ಖಂಡದ ಚಾಂದೇಲರು ನಿರ್ಮಿಸಿದ್ದಾರೆ. ಈ ದೇವಾಲಯಗಳು ನಾಗರಶೈಲಿಯಲ್ಲಿ ಇವೆ. ಈ ದೇವಾಲಯಗಳು ಶೃಂಗಾರ ಶೈಲಿಗೆ ಹೆಸರಾಗಿವೆ. ಕಲಾತ್ಮಕ ದೃಷ್ಟಿಯಿಂದ ನೋಡಿದಾಗ ಚಾಂದೇಲರ ಕಾಲವು ಅತ್ಯಂತ ವೈಭವದ ಶಿಖರವನ್ನು ಮುಟ್ಟಿದ್ದಿತು ಎಂದು ಹೇಳಬಹುದಾಗಿದೆ. ಇಲ್ಲಿನ ದೇವಾಲಯಗಳು ದೊಡ್ಡ ಶಿಖರದ ಸುತ್ತ ಚಿಕ್ಕ ಶಿಖರಗಳನ್ನು ಹೊಂದಿವೆ. ಗಾತ್ರ ಹಾಗೂ ಸಾಮ್ಯತೆಯ ದೃಷ್ಟಿಯಿಂದ ಖುಜರಾಹೋ ದೇವಾಲಯಗಳನ್ನು 3 ಭಾಗಗಳನ್ನಾಗಿ ವಿಂಗಡಿಸಲಾಗಿದೆ.

1) ಪಶ್ಚಿಮ ದೇವಾಲಯದ ಸಮುಚ್ಚಯ:

ಪಶ್ಚಿಮ ದೇವಾಲಯದ ಸಮುಚ್ಛಯವು ಲಕ್ಷ್ಮಣ, ವರಾಹ, ಮಾತಂಗೇಶ್ವರ, ವಿಶ್ವನಾಥ, ನಂದಿ, ಮಹಾದೇವ, ಜಗದಂಬ, ಚಿತ್ರಗುಪ್ತ, ಚತುರ್ಬುಜ ಮಹಾದೇವ ಮುಂತಾದ ದೇವಾಲಯಗಳನ್ನು ಹೊಂದಿದೆ.

2) ಪೂರ್ವದೇವಾಲಯದ ಸಮುಚ್ಚಯ:

ಈ ಸಮುಚ್ಚಯವು ಬ್ರಹ್ಮ ಜವರಿ, ಗಂಟೆ ಹಾಗೂ ವರುಣ ದೇವಾಲಯಗಳನ್ನು ಹೊಂದಿದೆ.

3) ದಕ್ಷಿಣ ದೇವಾಲಯ ಸಮುಚ್ಚಯ

ಇಲ್ಲಿ ದುಲ್‌ಹಾದೇವ್ ಮತ್ತು ಚತುರ್ಬುಜ ದೇವಾಲಯಗಳಿವೆ.

ರಜಪೂತರ ಕಲಾನೈಪೂಣ್ಯ ಕಂಡುಬರುವುದು ಕಂದರಿಯಾ ಮಹಾದೇವ ದೇವಾಲಯದಲ್ಲಿ ಎಂದು ಹೇಳಬಹುದು. ಇದು 101 ಅಡಿ ಉದ್ದ 66 ಅಡಿ ಅಗಲ ಹಾಗೂ 116 ಅಡಿ ಎತ್ತರವಾಗಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕಂಬಗಳನ್ನು ಹೊಂದಿದೆ. ಇಲ್ಲಿ ಪೌರಾಣಿಕ ಕಥೆಗಳು, ರತಿಕ್ರೀಡೆಗಳು, ನಾಗ-ನಾಗಿನಿಯರ ಚಿತ್ರಗಳು ಹಾಗೂ ಪಕ್ಷಿಗಳನ್ನು ಕೆತ್ತಿದ್ದಾರೆ.

2) ಕೋನಾರ್ಕ Konark

ಇದು ಓರಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿದೆ. ಇಲ್ಲಿನ ವಿಶ್ವವಿಖ್ಯಾತ ಸೂರ್ಯ ದೇವಾಲಯವು ನೋಡುಗರ ಮನಸೂರೆಗೊಳ್ಳುತ್ತದೆ. ಈ ದೇವಾಲಯವನ್ನು ಪೂರ್ವದ ಗಂಗರಸ 1ನೆಯ ನರಸಿಂಹದೇವನು ಕ್ರಿ.ಶ1238-64 ಅವಧಿಯಲ್ಲಿ ನಿರ್ಮಿಸಿದನು. ಈ ದೇವಾಲಯವನ್ನು ಸೂರ್ಯದೇವನಿಗೆ ಅರ್ಪಿಸಲಾಗಿದೆ. ಈ ದೇವಾಲಯದ ವೈಶಿಷ್ಟ್ಯವೆಂದರೆ, ಇದನ್ನು ರಥದ ಮಾದರಿಯಲ್ಲಿ ನಿರ್ಮಿಸಿದುದು. ದೇವಾಲಯದ ತಳಭಾಗದಲ್ಲಿ 24 ಬೃಹತ್ ಚಕ್ರಗಳನ್ನು ಕೆತ್ತಲಾಗಿದೆ. ಇದರ ಮುಂಬಾಗದಲ್ಲಿ 7 ಕುದುರೆಗಳನ್ನು ಕೆತ್ತಲಾಗಿದೆ. ದೇವಾಲಯದ ಗೋಪುರವು 227ಅಡಿ ಎತ್ತರವಾಗಿದೆ. ದೇವಾಲಯದ ಗೋಡೆಗಳು ಅನೇಕ ಶಿಲ್ಪಗಳಿಂದ ಶೃಂಗಾರಗೊಂಡಿದೆ. ಈ ದೇವಾಲಯದ ಗೋಡೆಯ ಮೇಲಿರುವ ರತಿ ಕ್ರೀಡೆಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ದೇವಾಲಯದೊಳಗೆ ಪ್ರವೇಶಿಸಲು ನಾಲ್ಕು ಕಡೆಗಳಿಂದ ನಾಲ್ಕು ಮಹಾದ್ವಾರಗಳಿವೆ. ಅದರ ಗರ್ಭಗುಡಿಯ ಮೇಲೆ 3 ಸೂರ್ಯದೇವನ ವಿಗ್ರಹಗಳನ್ನು ಕೆತ್ತಲಾಗಿದೆ. ಅವುಗಳನ್ನು ಹೇಗೆ ನಿರ್ಮಿಸಲಾಗಿದೆಂಯೆಂದರೆ, ಸೂರ್ಯೋದಯ, ಮದ್ಯಾಹ್ನ ಹಾಗೂ ಸೂರ್ಯಸ್ತನ ಕಾಲದಲ್ಲಿ ಸೂರ್ಯನ ಕಿರಣಗಳು ಅವುಗಳ ಮೇಲೆ ಬೀಳುತ್ತವೆ. ಇಲ್ಲಿರುವ ಬೃಹತ್ ಸೂರ್ಯನ ಚಕ್ರ ಎಲ್ಲರ ಗಮನವನ್ನು ಸೆಳೆಯುತ್ತದೆ. ಇಲ್ಲಿ ಒಟ್ಟು 28ದೇವಾಲಯಗಳಿದ್ದರೂ ಅವುಗಳಲ್ಲಿ ಸೂರ್ಯ ದೇವಾಲಯವೇ ಅತ್ಯಂತ ದೊಡ್ಡದಾಗಿದೆ. ಇದನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಈ ಸೂರ್ಯ ದೇವಾಲಯವನ್ನು “ಬ್ಲಾಕ್ ಪಗೋಡ” ಎಂದು ಕರೆಯಲಾಗುತ್ತಿದೆ.