1. ಪ್ರಾಚೀನ ಹಳೆಯ ಶಿಲಾಯುಗ / ಆದಿ ಹಳೆಯ ಶಿಲಾಯುಗ (Lower Paleolithic) :

ನಿವೇಶನಗಳು:  ಆದಿ ಹಳೆ ಶಿಲಾಯುಗವು ಹಿಮಯುಗದ ಒಂದು ಭಾಗವನ್ನು ವ್ಯಾಪಿಸಿತ್ತು. ಈ ಶಿಲಾಯುಗದ ಅವಶೇಷಗಳು ಪಾಕಿಸ್ಥಾನದ ಸೋಹನ್ ನದಿ ಕಣಿವೆ. ಥಾರ್‌ ಮರುಭೂಮಿಯ ಪ್ರದೇಶ, ಕಾಶ್ಮೀರ ಹಾಗೂ ಬೇಲಂ ಕಣಿವೆ, ರಾಜಸ್ಥಾನದ ಮರಳುಗಾಡಿನ ಪ್ರದೇಶ, ನರ್ಮದಾ ನದಿ ಪ್ರದೇಶ, ಮಧ್ಯಪ್ರದೇಶದ ಭೂಪಾಲಿನ ಗುಹೆಗಳು, ತಮಿಳುನಾಡಿನ ವಾದ ಮಧುರೈ, ಆಂಧ್ರದ ಬೇತಂ ಚರ್ಲಾ, ಮಹಾರಾಷ್ಟ್ರದ ಸಾಲ್ಸೆಟ್‌ ದ್ವೀಪ, ನೇವಾಸ, ರಾಜಸ್ಥಾನದ ಜೈಪುರ, ಪಂಜಾಬಿನ ಬೌಂತ್ರ, ಉತ್ತರ ಪ್ರದೇಶದ ಬೇಲಾನ್ ಮೊದಲಾದವುಗಳಲ್ಲಿ ದೊರಕಿದೆ.

 ಕರ್ನಾಟಕದಲ್ಲಿ ಮಂಜಾರಾ, ಕಾರಂಜಾ ಭೀಮಾ, ಕೃಷ್ಣ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಾವೇರಿ ಹಾಗೂ ನೇತ್ರಾವತಿ ನದಿಯ ದಡದಲ್ಲಿ ಶಿಲಾಯುಗದ ಅವಶೇಷಗಳು ದೊರಕಿವೆ. ಘಟಪ್ರಭಾ ಕೊಳ್ಳದ ಅನಗವಾಡಿ, ಮಲಪ್ರಭಾ ಕೊಳ್ಳದ ಖ್ಯಾಡ, ನೇತ್ರಾವತಿಕೊಳ್ಳಲು ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ಹಳೆಯ ಶಿಲಾಯುಗದ ಸಂಸ್ಕೃತಿ ಕಂಡು ಬಂದಿದೆ. ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ದರೋಜಿ, ಹುಲುಕುಂಡಿ, ಗಡಿನೂರು, ನಿಟ್ಟೂರು ಹಾಗೂ ಸಂಗನಕಲ್ಲು. ವಿಜಾಪುರ ಜಿಲ್ಲೆಯ-ಖೇಡ, ಧನಕ್ಕ ಶಿರೂರು ಹಾಗೂ ಮನ್ನೇರಿ. ಬೆಳಗಾವಿ ಜಿಲ್ಲೆಯ-ಯಾದವಾಡ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಲಿಂಗದಹಳ್ಳಿ, ನಿಡಗಟ್ಟಿ. ಚಿತ್ರದುರ್ಗ ಜಿಲ್ಲೆಯ ತಾಳ್ಯ ಹಾಗೂ ಜಾನಕಲ್. ದಾವಣಗೆರೆ ಜಿಲ್ಲೆಯ-ನ್ಯಾಮತಿ. ಗುಲ್ಬರ್ಗ ಜಿಲ್ಲೆಯ-ಹುಣಸಗಿ, ಮರಳಬಾವಿ, ದೇವಪುರ ತುಮಕೂರು ಜಿಲ್ಲೆಯ-ಕರಡಿಗುಡ್ಡ, ಬಿಳಿಗೆರೆ, ಕಿಬ್ಬನಹಳ್ಳಿ ಮುಂತಾದ ಸ್ಥಳಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳನ್ನು ಕಾಣಬಹುದು.

 ಉಪಕರಣಗಳು: ಹಳೆಯಶಿಲಾಯುಗದ ಮಾನವ ಕ್ವಾರ್ಟಜೈಟ್‌ ಕಲ್ಲನ್ನು ಬಳಸಿ ಉಪಕರಣಗಳನ್ನು ತಯಾರಿಸುತ್ತಿದ್ದನು. ಈ ಉಪಕರಣಗಳು ಹೆಚ್ಚಾಗಿ ಆಶ್ಯೂಲ್ ಮಾದರಿಯಲ್ಲಿವೆ. (ಆಶ್ಯೂಲ್‌ ಮಾದರಿ ಎಂದರೆ ಆಫ್ರಿಕಾದ ಆದಿ ಶಿಲಾಯುಗದ ಉಪಕರಣ)  ಇವುಗಳಲ್ಲಿ ಕೈಕೊಡಲಿ, ಸೀಳುಗತ್ತಿ, ಮಚ್ಚುಗಳು, ಕೊರೆಗತ್ತಿಗಳು ಹಾಗೂ ದುಂಡು ಚಪ್ಪಟೆ ಉಪಕರಣ ಮುಂತಾದ ಆಕೃತಿಯ ಉಪಕರಣಗಳು ಕಂಡು ಬಂದಿವೆ. ಕಲ್ಲಿನ ಉಪಕರಣಗಳ ಜೊತೆಗೆ ಮರದ ಉಪಕರಣಗಳು ಸಹ ದೊರಕಿವೆ.

 ತಯಾರಿಕೆ: ಉರುಟು ಕಲ್ಲಿನ ತಿರುಳುಭಾಗ ಮತ್ತು ದೊಡ್ಡದಾದ ಹಾಗೂ ದಪ್ಪನೆಯ ಕಲ್ಲುಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿ ಉಪಕರಣಗಳನ್ನು ತಯಾರಿಸುತ್ತಿದ್ದರು. ಲಘು ಸುತ್ತಿಗೆಗಳನ್ನು ಬಳಸಿ ಆಯುಧಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿಕೊಳ್ಳುತ್ತಿದ್ದರು. ಒಂದು ಕಲ್ಲು ಅಡಿಗೆ ಇಟ್ಟು ಇನ್ನೊಂದು ಕಲ್ಲನ್ನು ಸುತ್ತಿಗೆಯ ರೀತಿಯಲ್ಲಿ ಬಳಸಿ  ಉಪಕರಣಗಳನ್ನು ತಯಾರಿಸುತ್ತಿದ್ದರು.

 ಉಪಕರಣ ಬಳಕೆ : ಶಿಲಾಯುಗದ ಜನರು ತಾವು ತಯಾರಿಸಿದ ಉಪಕರಣಗಳನ್ನು ಬೇಟೆಯಾಡಲು. ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಕತ್ತರಿಸಲು, ಮರಗಿಡಗಳನ್ನು ಕಡಿಯಲು, ಅವುಗಳ ತೊಗಟೆಯನ್ನು ಬಿಚ್ಚಲು, ಗಡ್ಡೆ ಗೆಣಸುಗಳನ್ನು ಮತ್ತು ಮುಳ್ಳು ಕಂಟಿಗಳನ್ನು ಅಗೆಯಲು, ಮೃತ ಪ್ರಾಣಿಗಳ ಚರ್ಮವನ್ನು ಸುಲಿಯಲು, ಪ್ರಾಣಿಗಳ ಚರ್ಮವನ್ನು ಹದಗೊಳಿಸಲು, ಸಸ್ಯಾಹಾರ ಸಿದ್ಧಪಡಿಸಲು, ಕಟ್ಟಿಗೆ ಉಪಕರಣ ಹಾಗೂ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದರು.

 ಜೀವನೋಪಾಯ:  ಆದಿ ಹಳೆಯ ಶಿಲಾಯುಗದ ಮಾನವರು ಕಾಡು ಸಸ್ಯಗಳನ್ನು ಕಡಿಯುವುದು ಮತ್ತು ಕಾಡು ಪ್ರಾಣಿಗಳ ಬೇಟೆಯಾಡುವುದು ಅವರ ಪ್ರಮುಖ ಉದ್ಯೋಗವಾಗಿತ್ತು. ಹುಣಸಗಿ, ಮಲಪ್ರಭಾ ಕೊಳ್ಳ, ತುಂಗಭದ್ರ ಕೊಳ್ಳದ ನಿಟ್ಟೂರು, ಬೆಳಗಾವಿ ಜಿಲ್ಲೆಯ ಹಳೆಯ ಶಿಲಾಯುಗದ ವ್ಯವಸಾಯ ಪರಿಕರಗಳು ಸಿಕ್ಕಿವೆ. ಜೊತೆಗೆ ಕಾಡು ಎಮ್ಮೆ, ಕಾಡುಕತ್ತೆ ಹಾಗೂ ಕಾಡು ದನಗಳ ಪಳಿಯುಳಿಕೆಗಳು ದೊರಕಿವೆ. ಈ ಯುಗದ ಮಾನವ ಗೆಡ್ಡ-ಗೆಣಸು, ಹಣ್ಣು-ಹಂಪಲು, ಪ್ರಾಣಿಗಳ ಮಾಂಸ ಹಾಗೂ ಮೀನುಗಳನ್ನು ಸೇವಿಸುತ್ತಿದ್ದನು. ಪ್ರಾಣಿಗಳ ಚರ್ಮವನ್ನು ಉಡುಪಾಗಿ ಉಪಯೋಗಿಸಿಕೊಳ್ಳುತ್ತಿದ್ದನು.

2. ಪ್ರಾಚೀನ ಮಧ್ಯ ಶಿಲಾಯುಗ/ಮಧ್ಯ ಹಳೆಯ ಶಿಲಾಯುಗ (Middle Paleolithic) :

ಶಿಲಾಯುಗವು ಆದಿ ಹಳೆಯ ಶಿಲಾಯುಗ ಮತ್ತು ಅಂತಿಮ ಹಳೆಯ ಶಿಲಾಯುಗದ ನಡುವಿನ ಕಾಲವಾಗಿದೆ. ಸಂಕಾಲಿಯಾ ಅವರು 1954 ರಲ್ಲಿ ಮಹಾರಾಷ್ಟ್ರದ ಅಹಮದಾಬಾದ್‌ ಜಿಲ್ಲೆಯ ಗೋದಾವರಿಯ ಉಪನದಿಯ ಪ್ರವರಾ ನದಿಯ ದಂಡೆಯ ಮೇಲಿನ ನೇವಾಸಾದಲ್ಲಿ ಈ ಸಂಸ್ಕೃತಿ ಉಪಕರಣಗಳನ್ನು ಸಂಶೋಧಿಸಿದರು. ಎಂ.ಎಚ್ ಕೃಷ್ಣನವರು ಕರ್ನಾಟಕದ ಬ್ರಹ್ಮಗಿರಿ, ಜಾಲಹಳ್ಳಿ, ಕಿಬ್ಬನಹಳ್ಳಿ ಹಾಗೂ ಸಂಗನಕಲ್ಲನ್ನು ಪತ್ತೆ ಹಚ್ಚಿದರು. ಹಾಗೆಯೇ ಮಹಾರಾಷ್ಟ್ರದ ಪಂಚಮರಿ, ಪಂಜಾಬಿನ ಉಚಾಲಿ, ರಾಜಸ್ಥಾನದ ಬಾಗೋರ್ ಮತ್ತು ತಿವಾರ್, ಉತ್ತರಪ್ರದೇಶದ ಲೇಖಾನಿಯಾ, ಪಶ್ಚಿಮ ಬಂಗಾಳದ ಬೀಕ್‌ಬಾನ್‌ಪುರ ಇನ್ನು ಮುಂತಾದ ಕಡೆಗಳಲ್ಲಿ ಮಧ್ಯಕಾಲೀನ ಹಳೆಯ ಶಿಲಾಯುಗದ ಅವಶೇಷಗಳು ಲಭ್ಯವಾಗಿವೆ.

 ಮುಂದುವರೆದು ಬಾಗಲಕೋಟೆ, ಹೆರಕಲ್, ಕದಮಪುರ, ಅನಗವಾಡಿ, ತಮ್ಮಿನಹಾಳ, ಸಾವಳಗಿ, ಸಾಲವಾಡಗಿ, ಕೂಚಬಾಳೆ ಹಾಗೂ ಮಟಕದೇವನ ಹಳ್ಳಿಯಲ್ಲಿಯೂ ನಿವೇಶನಗಳು ಸಿಕ್ಕಿವೆ.

 ದೊರಕಿದ ಉಪಕರಣಗಳು: ಈ ಯುಗದಲ್ಲಿ ಮಾನವ ಬಳಸಿದ ವಿವಿಧ ಉಪಕರಣಗಳು ನಮಗೆ ದೊರಕಿದ್ದು ಅವುಗಳು ವಿವಿಧ ಆಕಾರವನ್ನು ಹೊಂದಿವೆ. ಉದಾ: ಹೆರೆಯುವ ಉಪಕರಣಗಳು, ಮೊನಚು ಉಪಕರಣ, ರಂಧ್ರಾಕಾರ ಉಪಕರಣ, ಚೂರಿ ತರಹದ ಉಪಕರಣ, ದಂತಾಕಾರದ ಉಪಕರಣ, ಬೈರಿಗೆಗಳು, ಕೈ ಕೊಡಲಿಗಳು, ಕಡಿಗತ್ತಿಗಳು, ಕತ್ತಿಗಳು, ಮಚ್ಚುಗಳು, ಮೊದಲಾದವುಗಳು. ಇವೆಲ್ಲವುಗಳನ್ನು ಕಲ್ಲಿನಿಂದಲೇ ತಯಾರಿಸಿದ್ದರು ಎಂಬುದು ವಿಶೇಷ. ಇವರು ಬಳಸಿದ ಉಪಕರಣಗಳಲ್ಲಿ ಕಲ್ಲು ಚಕ್ಕೆ ಉಪಕರಣಗಳ ಸಂಖ್ಯೆಯೇ ಅಧಿಕವಾಗಿವೆ. ಅವರು ಗಟ್ಟಿಯಾದ ಕಲ್ಲುಗಳಿಂದ ಚಕ್ಕೆಯನ್ನು ಬೇರ್ಪಡಿಸಿದ್ದರೆಂದು ತೋರುತ್ತದೆ. ಕಲ್ಲು ಚಕ್ಕೆಯನ್ನು ತಯಾರಿಸಲು ಮತ್ತು ಅವುಗಳಿಗೆ ಹೊಳಪು ನೀಡಲು ಅವರು ಮಸ್ತೂರ್ ತಂತ್ರವನ್ನು ಉಪಯೋಗಿಸುತ್ತಿದ್ದರು.

 ಉಪಕರಣಗಳ ನೆಲೆಗಳು:  ಆದಿ ಹಳೆಯ ಶಿಲಾಯುಗದ ಮಾನವರು ಬಳಸಿದ ಉಪಕರಣಗಳನ್ನೇ ಮಧ್ಯ ಶಿಲಾಯುಗದ ಜನರು ಬಳಸಿದರು ಸಹ ಸಾಂಸ್ಕೃತಿಕ ವಿಭಿನ್ನತೆ ಎರಡೂ ಜನಾಂಗಗಳಲ್ಲಿ ಕಂಡುಬಂದಿದೆ. ಕೈ ಕೊಡಲಿ, ಕಡಿಗತ್ತಿ ಹಾಗೂ ಉರುಟು ಕಲ್ಲುಗಳು ಆದೇಶದಿಂದ ಮಧ್ಯ ಶಿಲಾಯುಗದವರೆಗೂ ಬಳಕೆಯಲ್ಲಿದ್ದವು. ಘಟಪ್ರಭಾ ಕೊಳ್ಳದ ಅನಗವಾಡಿ, ಕೋವಳ್ಳಿ, ಹುಣಸೆ ದೇವಪುರ ಹಾಗೂ ಕಲದೇವನ ಹಳ್ಳಿಯಲ್ಲಿ ಇಂತಹ ಉಪಕರಣಗಳು ಕಂಡುಬಂದಿವೆ.

 ಉಪಕರಣಗಳ ಕಾರ್ಯ:  ಈ ಉಪಕರಣಗಳು ಗಾತ್ರದಲ್ಲಿ ಚಿಕ್ಕವೂ ಮತ್ತು ತೂಕದಲ್ಲಿ ಹಗುರವಾದವು ಆಗಿದ್ದವು. ಬೇಟೆಯಾಡುವುದು, ನೆಲವನ್ನು ಅಗೆಯುವುದು, ಮರ ಕೀಳುವುದು ಇಂತಹ ಕೆಲಸ ಕಾರ್ಯಗಳಿಗೆ ಈ ಉಪಕರಣಗಳನ್ನು ಬಳಸುತ್ತಿರಲಿಲ್ಲ. ಇವು  5 ರಿಂದ 8 ಸೆಂ ಮೀ ಉದ್ದವಾಗಿದ್ದವು.  ಹೆರೆಯುವ ಉಪಕರಣದಿಂದ ಚರ್ಮ ಹಾಗೂ ಮರದ ತೊಗಟೆಯನ್ನು ಹದಗೊಳಿಸುತ್ತಿದ್ದರು ರಂಧ್ರಕಾರಕಗಳಿಂದ ತೊಗಟೆಯಲ್ಲಿ ತೂತು ಮಾಡಲು ಹಾಗೂ ಮೊನಚು ಉಪಕರಣದಿಂದ ಕಾಡು ಮೃಗಗಳನ್ನು ಬೇಟೆಯಾಡುತ್ತಿದ್ದರು.

 ನಿವೇಶನಗಳ ಸ್ವರೂಪ:  ಆದಿ ಹಳೆಯ ಶಿಲಾಯುಗದ ಜನರ ಹಾಗೆ ಮಧ್ಯಶಿಲಾಯುಗದ ಜನರು ಸಹ ನದಿ ದಂಡೆಯ ಮೇಲೆ, ಕಡಲ ತೀರಗಳಲ್ಲಿ ಬೆಟ್ಟಗಳ ಇಳಿಜಾರು ಪ್ರದೇಶಗಳ ಕೆಳಬದಿಗಳಲ್ಲಿ ವಾಸಿಸುತ್ತಿದ್ದರು. ಉತ್ತರ ಕರ್ನಾಟಕದ ಮಲಪ್ರಭಾ, ಘಟಪ್ರಭಾ ನದಿಗಳ ದಂಡೆ ಹಾಗೂ ಇಳಿಜಾರು ಪ್ರದೇಶಗಳಲ್ಲಿ ಇಂತಹ ನಿವೇಶನಗಳು ಇದ್ದುದ್ದು ಸಂಶೋಧನೆಯಿಂದ ರುಜುವಾತಾಗಿದೆ. ಇಲ್ಲಿ ಸಿದ್ಧವಾದ ಹಾಗೂ ಅಪೂರ್ಣವಾಗಿರುವ ಉಪಕರಣಗಳು, ಚೆಕ್ಕೆಗಳು, ತಿರುಳು ಕಲ್ಲುಗಳು ಹಾಗೂ ಸಾಕಷ್ಟು ಪುಡಿ ಚಕ್ಕೆಗಳು ದೊರಕಿವೆ.

 ಪರಿಸರ:  ಆದಿ ಹಳೆಯ ಹಾಗೂ ಮಧ್ಯ ಪ್ರಾಚೀನ ಶಿಲಾಯುಗದ ಹವಾಮಾನದ ಸ್ಥಿತಿಗತಿಗಳಲ್ಲಿ ಅಷ್ಟೇನೂ ಬದಲಾವಣೆ ಇರಲಿಲ್ಲ. ಇವುಗಳ ನಡುವಿನ ಪಳೆಯುಳಿಕೆಗಳ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಸುರಪುರ ನದಿ ಸಂಗಮ, ಘಟಪ್ರಭಾ, ಕೃಷ್ಣ ಹಾಗೂ ತುಂಗಭದ್ರ ನದಿ ಕೊಳ್ಳದಲ್ಲಿ ಸಿಕ್ಕ ಪ್ರಾಣಿಗಳ ಪಳೆಯುಳಿಕೆಗಳು ಎತ್ತು, ಎಮ್ಮೆ, ಕುದುರೆ, ಕತ್ತೆ, ಆನೆ, ಖಡ್ಗ ಮೃಗ, ಜಿಂಕೆ, ಆಮೆ ಮೊದಲಾದ ಪ್ರಾಣಿಗಳ ಸಂಬಂಧ ಆದಿ ಶಿಲಾಯುಗಗಳ ಸಂಬಂಧಕ್ಕೆ ಹೋಲಿಕೆಯಾಗುತ್ತದೆ.

ಕಾಲಗಣನೆ:  ಈ ಸಂಸ್ಕೃತಿಯು 10, ವರ್ಷಗಳಿಂದ 40 ಸಾವಿರ ವರ್ಷಗಳಷ್ಟು ಪೂರ್ವದಾಗಿರಬೇಕೆಂದು ತರ್ಕಿಸಲಾಗಿದೆ. ಯುರೇನಿಯಂ ಹಾಗೂ ಥೋರಿಯಂ ವಿಧಾನಗಳಿಂದ ಕಾಲಗಳನ್ನ ಕುರಿತು ಹಲವಾರು ಪರೀಕ್ಷೆಯನ್ನು ಮಾಡಲಾಗಿದೆ. ಈ ಪರೀಕ್ಷೆಯ ಫಲವಾಗಿ ಈ ಸಂಸ್ಕೃತಿಯ ಕಾಲಮಾನವು 1,00,000 ವರ್ಷಗಳಿಂದ 1,50,000 ವರ್ಷಗಳಷ್ಟು ಹಳೆಯದಾಗಿದೆಯಂದು ಹೇಳಲಾಗಿದೆ.

 ಜೀವನ ಶೈಲಿ: ಸಿದ ಅವಶೇಷಗಳ ನೀಡುವ ಮಾಹಿತಿಯ ಪ್ರಕಾರ ಆದಿಮಾನವ ಚಿಕ್ಕ ಮರಗಳು ಹಾಗೂ ಬಂಡೆಗಳ ನೆರಳಿನಲ್ಲಿ ವಾಸವಾಗಿದ್ದನೆಂದು ತಿಳಿದು ಬರುತ್ತದೆ. ಅವನು ಮೂಲತಃ ಬೇಟೆಗಾರನಾಗಿದ್ದ. ಬೇಟೆಗಾಗಿ ಕಲ್ಲು, ಮೂಳೆ, ಜಿಂಕೆಯ ಕೊಂಬು ಹಾಗೂ ದಂತವನ್ನು ಬಳಸಿ ಆಯುಧ ಮಾಡಿಕೊಳ್ಳುತ್ತಿದ್ದನು. ಕೈಯಿಂದಲೇ ಮಡಿಕೆ ಮಾಡುವ ಕಲೆಗಳನ್ನು ಕರಗತ ಮಾಡಿಕೊಂಡಿದ್ದನು. ಆಹಾರಕ್ಕಾಗಿ ಎಮ್ಮೆ, ಆಕಳು, ಕುರಿ, ಹೋತ, ಹಂದಿ, ಮೊಲ, ನರಿ, ಮೀನು, ಸಾರಂಗ, ಆಮೆ ಮೊದಲಾದ ಪ್ರಾಣಿಗಳ ಮಾಂಸವನ್ನು ಬಳಸುತ್ತಿದ್ದನು. ಶವ ಸಂಸ್ಕಾರದ ಮೇಲೆ ಕಲೆ ಇವನಿಗೆ ಗೊತ್ತಿತ್ತು. ಮಾನವನ ಮೂಳೆಯ ಹತ್ತಿರದಲ್ಲಿಯೇ ನಾಯಿಯ ಮೂಳೆಗಳು ಇರುವುದನ್ನು ಗಮನಿಸಿದರೆ ಮಾನವನಿಗೆ ಎಲ್ಲಾ ಚಟುವಟಿಕೆಗಳಲ್ಲಿ ನಾಯಿಯು ಭಾಗವಹಿಸುತ್ತಿತ್ತು ಎಂಬುದು  ಗಮನಾರ್ಹ ಬೇಸಾಯ ಅವರ ಮೂಲ ಉದ್ಯೋಗವಾಗಿತ್ತು.

3. ಪ್ರಾಚೀನ ಅಂತಿಮ ಶಿಲಾಯುಗ/ಅಂತಿಮ ಹಳೆಯ ಶಿಲಾಯುಗ (Upper Paleolithic):

ಹಳೆಯ ಶಿಲಾಯುಗದ ಸಂಸ್ಕೃತಿಯ ಅಂತಿಮ ಹಂತವೇ ಕೊನೆಯ ಶಿಲಾಯುಗ ಇದು ಮಧ್ಯಶಿಲಾಯುಗ ಮತ್ತು ಸ್ಥಿತಿಯಂತರದ ಸೂಕ್ಷ್ಮಶಿಲಾಯುಗದ ನಡುವಿನ ಹಂತವಾಗಿದೆ. ಇದು ಯುರೋಪ್ ಹಾಗೂ ಪಶ್ಚಿಮ ಏಷ್ಯಾಗಳ ಲಕ್ಷಣವನ್ನು ಹೊಂದಿದೆ.

ಈ ಶಿಲಾಯುಗದ ಅವಶೇಷಗಳು ಭಾರತದಲ್ಲಿ ಕೆಲವೇ ಪ್ರದೇಶಗಳಲ್ಲಿ ಕಂಡುಬಂದಿದೆ. ಇದಕ್ಕೆ ಕಾರಣ ಉತ್ಖನನದ ಕಾಲದಲ್ಲಿ ಈ ಶಿಲಾಯುಗದ ಸಂಸ್ಕೃತಿಯನ್ನು ಗುರುತಿಸುವಲ್ಲಿ ತುಂಬಾ ತಡವಾದುದು 1972ರವರೆಗೂ ಈ ಪ್ರದೇಶದ ವಿಷಯವಾಗಿ ಗೊಂದಲಗಳು ಉಂಟಾಗಿದ್ದವು. ಆದರೆ ಆ ಸುಂದರ ಅವರ ಉತ್ಖನನದ ನಂತರ ಅಲ್ಲಿ ಎರಡು ಔದ್ಯಮಿಕ ಸಂಪ್ರದಾಯಗಳು ಇದ್ದದ್ದು ಕಂಡುಬಂದಿತು. ಚಕ್ಕೆ ಹಾಗೂ ತೆಳು ನೀಲಿ ಚಕ್ಕೆ ಉದ್ಯಮ ಇದು ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಲಗು ಉಪಕರಣ ಉದ್ಯಮ ಇದು ಅಂತಿಮ ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಂತಿಮ ಹಳೆಯ ಶಿಲಾಯುಗದ ಅವಶೇಷಗಳನ್ನು ಮತ್ತು ನಿವೇಶನಗಳನ್ನು ಬೇರೆ ಬೇರೆ ಭಾಗಗಳಲ್ಲಿ ಕಂಡು ಹಿಡಿಯಲಾಗಿದೆ. ಮಂಜಾರಾಕೊಳ್ಳದ ಬಳ್ಳೂರಾ, ದೋಣಿ ಕೊಳ್ಳದ ಇಂಗಳೇಶ್ವರ, ಕೃಷ್ಣ ಕೊಳ್ಳದ ಸಾಲವಾಡಗಿ, ತುಂಗಭದ್ರ ಕೊಳ್ಳದ ತಕ್ಕಲಹಳ್ಳಿ, ಪೆನ್ನಾರ್‌ಕೊಳ್ಳದ, ದೊಡ್ಡಗುಣಿ ಹಾಗೂ ನಾಗಲಾಪುರಗಳಲ್ಲಿ ತೆರೆನಾದ ನಿವೇಶನಗಳು ದೊರಕಿದೆ.

ಉಪಕರಣಗಳ ವಿಧಗಳು:  ಅಂತಿಮ ಹಳೆಯ ಶಿಲಾಯುಗದ ಮಾನವನು  ನೀಳ ಅಲಗುಗಳು, ಕೊರೆಯುವ ಓರೆ ಮೊನೆಗಳು, ಹೆರೆಯುವ ಚಕ್ಕೆಗಳು, ದಬ್ಬಣ ದಂತಹ ಮೊನೆಗಳು, ಚೂರಿಗಳು ರಂಧ್ರಾಕಾರಗಳ ಮುಂತಾದ ವಿವಿಧ ಬಗೆಯ ಉಪಕರಣಗಳನ್ನು ದಿನನಿತ್ಯ ಜೀವನದಲ್ಲಿ ಬಳಕೆ ಮಾಡುತ್ತಿದ್ದನು.

 ಈ ಉಪಕರಣಗಳನ್ನು ಪ್ರಾಣಿಗಳ ಬೇಟೆಯಾಡಲು, ಕೃಷಿ ಕಾರ್ಯಮಾಡಲು, ಮೀನು ಹಿಡಿಯಲು, ಮಾಂಸವನ್ನು ತುಂಡರಿಸಲು ಬಳಸುತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮುಚ್ಚಟ್ಲ ಚಿಂತಾಮಣಿ ಗವಿ ಎಂಬಲ್ಲಿ ಈ ಸಂಸ್ಕೃತಿಯ ಸ್ಪಷ್ಟ ಕುರುಹುಗಳು ಪುಣೆಯ ಡೆಕ್ಕನ್ ಕಾಲೇಜಿನ ಡಾ|| ಎಂ.ಎಲ್.ಕೆ  ಮೂರ್ತಿಯವರಿಂದ ಶೋಧವಾಗಿದೆ.

ಕಲ್ಲಿನ ಉಪಕರಣಗಳೊಂದಿಗೆ ಎಲುಬಿನಿಂದ ತಯಾರಿಸಿದ ಉಪಕರಣಗಳು ಹಾಗೂ ಪ್ಲಿಸ್ಟೋಸಿನ್‌ ಕಾಲದ ಕೊನೆಯ ಹಂತದ ಪ್ರಾಣಿ ಪಳೆಯುಳಿಕೆಗಳು ಈ ನೆಲೆಯ ವೈಶಿಷ್ಟವಾಗಿದೆ. ಇಂಗಾಲ-14 (c14) ಹಾಗೂ  ಇ.ಎಸ್.ಆರ್ (ESR) ವಿಧಾನಗಳಿಂದ ಪರೀಕ್ಷಿಸಲಾದ ಸಂಸ್ಕೃತಿಯ ಕಾಲಮಾನಗಳ ವಿವರಗಳು ದೊರಕಿದ್ದು ಅವುಗಳು ಅಂತಿಮ ಹಳೆಯ ಶಿಲಾಯುಗದ ಸಂಸ್ಕೃತಿ ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದ ಪಾಟ್ನೆ ಹಾಗೂ ರಾಜಸ್ಥಾನದ ಬಾಗೋರ್ ನೆಲೆಗಳಲ್ಲಿ ಸಹ ಈ ಶಿಲಾಯುಗದ ಅವಶೇಷಗಳು ದೊರಕಿವೆ.

ಪರಿಸರ:  ಅಂತಿಮ ಹಳೆಯ ಶಿಲಾಯುಗದ ಸಮಕಾಲಿನವೆನಿಸಬಲ್ಲ ಯಾವುದೇ ಪ್ರಾಣಿಗಳ ಪಳೆಯುಳಿಕೆಗಳು ದೊರಕಿಲ್ಲ. ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಅಂತಿಮ ಹಳೆ ಶಿಲಾಯುಗ ಉಪಕರಣಗಳೊಂದಿಗೆ ಆಗಿನ ಪ್ರಾಣಿಗಳ ಪಳೆಯುಳಿಕೆಗಳು ಸಿಕ್ಕಿವೆ. ಈ ಪ್ರಾಣಿಗಳ ಪಳೆಯುಳಿಕೆಗಳನ್ನು ಗಮನಿಸಿದರೆ. ಸವನ್ನಾ ಮಾದರಿ ಪರಿಸರವಿದ್ದಂತೆ ಭಾಸವಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಹಲವಾರು ಪ್ರಾಣಿಗಳ ಪಳೆಯುಳಿಕೆಗಳು ದೊರಕಿವೆ. ಉದಾ: ಲಾಂಗೂರ್, ಬೆಕ್ಕಿನ ಜಾತಿಯ ಒಂದು ಪ್ರಾಣಿ, ಜಿಂಕೆ ಜಾತಿಯ ಪ್ರಾಣಿ, ಒಂದು ಪ್ರಕಾರದ ಜಿಂಕೆ ಜಾತಿ, ಆಡು, ಹಂದಿ ಹಾಗೂ ಜಿಂಕೆ ಮೊದಲಾದವುಗಳು ಪ್ರಮುಖವಾಗಿವೆ.

ಕಾಲಗಣನೆ: ಅಂತಿಮ ಹಳೆ ಶಿಲಾಯುಗದ ಸಂಸ್ಕೃತಿಯು ಮಧ್ಯ ಶಿಲಾಯುಗ ಸಂಸ್ಕೃತಿಯ ಹಂತದ ನಂತರ ಹಾಗೂ ಸೂಕ್ಷ್ಮ ಶಿಲಾಯುಗದ ಹಿಂದಿನದೆಂದು ಈಗಾಗಲೇ ಗಮನಿಸಲಾಗಿದೆ. ಹರಿಯುವ ನೀರಿನ ಚಿಪ್ಪುಗಳು, ಉಷ್ಟ್ರ ಪಕ್ಷಿಯ ಮೊಟ್ಟೆಯ ಚೂರುಗಳು ಹಾಗೂ ಎಲುಬಿನ ಚೂರುಗಳನ್ನು ಇಂಗಾಲದ c14 ಪರೀಕ್ಷೆಗೆ ಒಳಪಡಿಸಿ ಕಾಲ ನಿರ್ಣಯವನ್ನು ಮಾಡಲಾಗಿದೆ. ಈ ಶಿಲಾಯುಗದ 10,000 ವರ್ಷಗಳ ಹಿಂದೆ 25000 ವರ್ಷಗಳಷ್ಟು ಪೂರ್ವದಲ್ಲಿ ಈ ಸಂಸ್ಕೃತಿ ಇದ್ದಿತೆಂದು ಹೇಳಲಾಗುತ್ತದೆ.

4. ಮಧ್ಯಶಿಲಾ ಯುಗ (Mesolithic) :

ಈ ಶಿಲಾಯುಗದಲ್ಲಿ ಪ್ಲಿಸ್ಟೋಸಿನ್‌ ಯುಗದ ನಂತರ ಆದಿ ಹಾಲೋಸಿನ್ ಎಂಬ ಸೂಕ್ಷ್ಮ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಅಸ್ಸಾಂ ಹಾಗೂ ಗಂಗಾ ನದಿಯ ಬಯಲಿನಲ್ಲಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಕಡೆಗಳಲ್ಲಿ ಈ ಸಂಸ್ಕೃತಿ ಉಪಕರಣಗಳು ಸಿಕ್ಕಿವೆ.

 ಪ್ರಸಾರ:  ತಮಿಳುನಾಡಿನ ಟೇರಿ ನೆಲೆಗಳಲ್ಲಿ ದೊರಕಿದ ವಿಶಿಷ್ಟ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳುಳ್ಳ ಉದ್ಯಮವು ಝೂನ್ನಾರ್ ಎಂಬ ವಿದ್ವಾಂಸರಿಂದ ಉತ್ಖನನವಾಯಿತು. ಇಲ್ಲಿನ ಕುರುಹುಗಳನ್ನು ಆಧಾರವಾಗಿಟ್ಟುಕೊಂಡು ಇದು ಕ್ರಿ.ಪೂ 4000 ವರ್ಷಕ್ಕೆ ಅನ್ವಯವಾಗುವುದು ಎಂದು ಹೇಳಿದ್ದಾರೆ.

 ಅದು ಅಲ್ಲದೆ ಗುಜರಾತ್  (ಲಾಘ್‌ನಾಜ್), ಬಾಗೋರ್ (ರಾಜಸ್ಥಾನ್), ಸರಾಹಿನಹರರಾಯ್‌, ಮದಹನ (ಉತ್ತರ ಪ್ರದೇಶ) ಆದಮಗಡ, ಬೀಮ್‌ಬೇಟ್ಕಾ (ಮಧ್ಯಪ್ರದೇಶ) ಗಳಲ್ಲಿ ನಡೆದ ಉತ್ಖನನಗಳು ಈ ಮಾಹಿತಿಯನ್ನು ಹೊರಹಾಕುತ್ತವೆ. ಈ ಶಿಲಾಯುಗದ ಮಾಹಿತಿಗಳನ್ನು ಕರ್ನಾಟಕದ ಕಾರಂಜಾಕೊಳ್ಳದ ಬೇಗಂಪುರ, ಮಂಜಾರಾಕೊಳ್ಳದ, ಏಕಲಾರ, ಭೀಮಾಕೊಳ್ಳದ ದೋಣಿ, ತುಂಗಾಭದ್ರ ಕೊಳ್ಳದ ಸಂಗನಕಲ್ಲು, ಮಲಪ್ರಭಾದ ಅಮ್ಮಿನಹಳ್ಳಿ, ತುಂಗಾ ನದಿಯ ದಂಡೆಯ ಶೃಂಗೇರಿ, ಹೇಮಾವತಿ ಕೊಳ್ಳದ ಕಟ್ಟೆ ಬೆಳಗಲಿ, ಜೋಳನಹಳ್ಳಿ, ಶೆಟ್ಟಿಹಳ್ಳಿ, ಕರಾವಳಿಯ ಬೇಲೆಕೆರೆ ಮೊದಲಾದ ಕಡೆಗಳಲ್ಲಿ ಈ ಶಿಲಾಯುಗದ ಅವಶೇಷಗಳು ದೊರಕಿವೆ. ಇದು ಅಲ್ಲದೆ ಬೆಟ್ಟ ಗುಡ್ಡಗಳಲ್ಲಿ ಬಯಲು ಪ್ರದೇಶಗಳಲ್ಲಿ ಹಾಗೂ ಇಳಿಜಾರಿನ ಭಾಗಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ. ನದಿ ದಂಡೆ, ಕೆರೆಗಳು, ಸಮುದ್ರ ತೀರ, ಕಾಡುಗಳು, ದಟ್ಟ ಅರಣ್ಯಗಳಲ್ಲಿಯೂ ಸಹ ಇವೆ.

 ಉಪಕರಣಗಳ ವಿಧಗಳು:  ಈ ಶಿಲಾಯುಗದಲ್ಲಿ ದೊರಕಿದ ಬಗೆಬಗೆಯ ಕಲ್ಲುಗಳು ಹಾಗೂ ಕಲ್ಲಿನ ಉಪಕರಣಗಳು ನಿರ್ದಿಷ್ಟವಾದ ಆಕಾರದಲ್ಲಿ ಇಲ್ಲ. ಉದಾ: ಅಲಗುಗಳು, ಚಿಕ್ಕ ಅಲಗುಗಳು, ಬಾಗಿದ ಅಲಗುಗಳು, ಚಿಕ್ಕಚೂರಿಯ ಆಕಾರದ ಅಲಗುಗಳು, ಎರಡೂ ಬದಿಗಳಲ್ಲಿ ಮೊನಚಾದ ಚಿಕ್ಕ ಬೈರಿಗೆಗಳು, ಅಪರೂಪದ ಚಿಕ್ಕ ಮುಚ್ಚುಗಳು, ಮೊದಲಾದವುಗಳು ಕಂಡುಬಂದಿವೆ. ಕೆಲವು ಉಪಕರಣಗಳು ತ್ರಿಕೋನಾಕಾರ, ಕೆಲವು ಸಮಭುಜ ತ್ರಿಕೋನಾಕಾರ, ಅಸಮಭುಜ ತ್ರಿಕೋನಾಕಾರ ಹಾಗೂ ಸಮದ್ವಿಭುಜ ತ್ರಿಕೋನಾಕಾರದಲ್ಲಿ ಇವೆ.

 ಉಪಕರಣ ಬಳಕೆ:  ಈ ಉಪಕರಣಗಳನ್ನು ಗಾಳ, ಕುರುಪಿ, ಬಾಣ, ಚಾಕು ಮೊದಲಾದ ಸಲಕರಣೆಗಳನ್ನು ಮಾಡಲು ಬಳಸುತ್ತಿದ್ದರು. ಈ ಸಲಕರಣೆಗಳಿಂದ ಆಹಾರ ಸಂಗ್ರಹಣೆ ಮಾಡುತ್ತಿದ್ದರು.

 ಜೀವನ ಕ್ರಮ:  ಶಿಲಾಯುಗದ ಜನರ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಅಲಹಾಬಾದಿನ ಉತ್ತರಕ್ಕೆ ಬೇಲಾನ ನದಿಯ ಬಯಲಿನಲ್ಲಿ ಪಾನಿಮಾಂಡೋ, ಮಹದಹ, ಮಹಗರ ಸರಾಯಿ ಮುಂತಾದ ಕಡೆಗಳಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಪ್ರಾಣಿಗಳ ಎಲಬುಗಳು ದೊರಕಿವೆ. ಅವುಗಳಲ್ಲಿ ದನ, ಎಮ್ಮೆ, ಹಂದಿ, ಸಾಂಬಾರ್, ಚಿರತೆ, ನೀಲಗಾಯ್‌, ಜಿಂಕೆ, ನರಿ ಮುಂತಾದ ಪ್ರಾಣಿ ಅಸ್ತಿಗಳು ಇವೆ. ಖಡ್ಗ ಮೃಗ, ಆನೆ ಹಾಗೂ ಮೀನುಗಳ ಎಲುಬುಗಳು ಸಹ ದೊರಕಿವೆ.

 ಜನರು ಗೆಡ್ಡೆ ಗೆಣಸು, ಕಾಳು ಕಡಿ, ಸಸ್ಯ, ಗೋದಿ, ಅಕ್ಕಿ, ಬೀಜಗಳು ಮೊದಲಾದವುಗಳನ್ನು ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಇವುಗಳ ಅವಶೇಷಗಳು ಸುಮಾರು ಕ್ರಿ.ಪೂ 7,000-3000 ಅವಧಿಯಲ್ಲಿ ಸೂಕ್ಷ್ಮ ಶಿಲಾಯುಗದ ನೆಲೆಯಲ್ಲಿ ಸಿಕ್ಕಿವೆ. ಇದರ ಜೊತೆಗೆ ಚಾಪೆಯು ದೊರಕಿದೆ. ಅವುಗಳನ್ನು ಈಚಲು ಮರದ ಗಳದಿಂದ ಸೀಳಿದ ತೆಳ್ಳನೆಯ ದಬ್ಬೆಗಳಿಂದ ಮಾಡುತ್ತಿದ್ದರು. ಎಲುಬಿನಿಂದ ಕಿವಿಯೋಲೆ ಮಾಡುವ ಕಲೆಯನ್ನು ಕಲಿತಿದ್ದರು.

 ಶವಸಂಸ್ಕಾರ: ಜನರು ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಸರಿಯಾಗಿ ಉದ್ದನೆಯ ಕುಣಿಯನ್ನು ತೋಡಿ ಅದರಲ್ಲಿ ಶವಗಳನ್ನು ಇಟ್ಟು ಹೂಳಲಾಗುತ್ತಿತ್ತು. ಸ್ತ್ರೀಯರು ಆಗಿದ್ದರೆ ಅವರನ್ನು ಕಿವಿಯೋಲೆ ಸಮೇತ ಹೂಳಲಾಗುತ್ತಿತ್ತು. ಕೆಲವು ಸಲ ಎರಡೆರಡು ಶವಗಳನ್ನು ಒಂದೇ ಗುಂಡಿಯಲ್ಲಿ ಹಾಕಿ ಹೂಳುತ್ತಿದ್ದರು.

 ಕಲೆ: ಬಾದಾಮಿಯ ಸಮೀಪ ಅರೆಗುಡ್ಡ ಹಾಗೂ ಹಿರೆಗುಡ್ಡ ಎಂಬಲ್ಲಿ ಗುಹೆಗಳು ಮತ್ತು ಕಲ್ಲಿನ ಆಸರೆಗಳಲ್ಲಿ ಕೆಲವು ಅಪರೂಪದ ಕೆಂಪು ಮಣ್ಣಿನ ಚಿತ್ರಗಳು ಸಿಕ್ಕಿವೆ. ಬಹುಶಃ ಸೂಕ್ಷ್ಮಶಿಲಯೋಗದ ಅದ್ಭುತ ಕಲೆಗಳಾಗಿರಬೇಕು. ಈ ಚಿತ್ರದಲ್ಲಿ ಮಾನವ, ಪ್ರಾಣಿ ಹಾಗೂ ವಿಶಿಷ್ಟ ಆಕೃತಿಯ ಚಿತ್ರಗಳ ಆಕೃತಿಗಳಾಗಿವೆ.

 ಕಾಲಗಣನೆ : ಅಂತಿಮ ಶಿಲಾಯುಗ ಮತ್ತು ನವಶಿಲಾಯುಗದ ನಡುವಿನ ಯುಗವೇ ಸೂಕ್ಷ್ಮ ಶಿಲಾಯುಗವಾಗಿದೆ. ಈ ಶಿಲಾಯುಗ 2500 ರಿಂದ 10000 ವರ್ಷಗಳ ಪೂರ್ವದಲ್ಲಿ ಇತ್ತು ಎಂದು ಅಂದಾಜಿಸಲಾಗಿದೆ. ಆದರೆ ಇದು ಆದಿ ಹಾಗೂ ಮಧ್ಯ ಹೆಲೋಸಿನ್‌ ಯುಗಕ್ಕೆ ಸಮನಾಗಿದೆ. ಜನರು ನಿರಂತರವಾಗಿ ನೀರಿನ ಸೌಲಭ್ಯವಿದ್ದ ಕಡೆಗಳಲ್ಲಿ, ಮುಕ್ತವಾದ ವಿಶಾಲ ಬಯಲಿನಲ್ಲಿ, ನದಿ ದಂಡೆಗಳಲ್ಲಿ  ಹಾಗೂ ಶಿಲೆಗಳು ವಿಫುಲವಾಗಿ ದೊರಕುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಈ ಶಿಲಾಯುಗದ ಜನಸಾಂದ್ರತೆ ಅಧಿಕವಾಗಿತ್ತು. ಜನರು ಪ್ರಾಣಿಗಳನ್ನು ಬೇಟೆಯಾಡುತ್ತಾ ಪ್ರಾಣಿ ಸಾಗಾಣಿಕೆಯನ್ನು ಮಾಡುತ್ತಿದ್ದರು. ಬೀಜವನ್ನು ಬಿತ್ತಿ ಆಹಾರ ಪಡೆಯುತ್ತಿದ್ದರು. ವಸತಿ ನಿರ್ಮಾಣ ಹಾಗೂ ಚಾಪೆ ಹೆಣೆಯುವುದು, ಮಣ್ಣಿನ ಪಾತ್ರೆ, ಎಲುಬಿನ ಮಣಿಗಳ ತಯಾರಿಕೆ ಮುಂತಾದ ಉದ್ಯೋಗದಲ್ಲಿ ನಿರತರಾಗಿರುತ್ತಿದ್ದರು. ಬೇಟೆ ಹಾಗೂ ಆಹಾರ ಸಂಗ್ರಹನೆ ಪ್ರಮುಖ ಕಸುಬುಗಳು ಆಗಿದ್ದವು. ಹಣ್ಣು-ಹಂಪಲು ಹಾಗೂ ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಿದ್ದರು.

 

5. ತಾಮ್ರಯುಗದ ಸಂಸ್ಕೃತಿ  (Chalcolithic Age)

ನವಶಿಲಾಯುಗದ ಅಂತ್ಯದಲ್ಲಿ ಮಾನವನಿಗೆ ಲೋಹಗಳ ಪರಿಚಯವಾಯಿತು. ಈ ಅವಧಿಯಲ್ಲಿ ಮಾನವನು ತಾಮ್ರದ ಲೋಹಗಳನ್ನು ಬಳಸಲು ಆರಂಭ ಮಾಡಿದನು. ಈ ಯುಗವನ್ನು ಚಾಕೋಲಿಥಿಕ್ ಎಂದು ಕರೆಯಲಾಗಿದೆ.

ತಾಮ್ರಯುಗದ ನೆಲೆಗಳು:  ತಾಮ್ರ ಶಿಲಾಯುಗಕ್ಕೆ ಸಂಬಂಧಿಸಿದ ಸ್ಥಳಗಳು ಆಗ್ನೇಯ ರಾಜಸ್ಥಾನ್‌, ಮಧ್ಯಪ್ರದೇಶದ ಪಶ್ಚಿಮಭಾಗ, ಮಹಾರಾಷ್ಟ್ರ ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳು ಆಹಾರ ಗಿಲುಂಡ್‌, ಮಧ್ಯಪ್ರದೇಶದ ಮಾಳ್ವ, ಕೈಯಾತ್ ಮತ್ತು ಎರಾನ್, ಅಹಮ್ಮದ್ ನಗರದ ಜೋರ್ವೆ, ನೇವಾಸ, ಡೈಮಾಬಾದ್‌, ಪುಣೆ, ಚಿಂಚೋಳ್ಳಿ, ಸೋನಾಗಾಂವ್, ಗೋದಾವರಿ ನದಿ ತೀರ, ವಿಂದ್ಯ ಪರ್ವತ ಪ್ರದೇಶ, ಗಂಗಾ ತೀರ, ಚಿರಾಂಡ್‌, ಬರ್ದಮಾನ್ ರಾಜರ್ ದಿಬಿ, ಬೀರ್‌ಭೂಮ್‌, ಬಿಹಾರದ ಸೆನ್ವಾರ್, ಸೋಣ್‌ಪುರ, ತರಧಿ, ಖೈರಾಧಿ ಮೊದಲಾದವುಗಳು.

ಕರ್ನಾಟಕದಲ್ಲಿ ಸಂಗನಕಲ್ಲು, ತೆಕ್ಕಲುಕೋಟೆ, ತಾವರೆಕೆರೆ, ಬ್ರಹ್ಮಗಿರಿ, ಪಿಕ್ಲಿಹಾಳ, ಉತ್ತನೂರು, ಟಿ ನರಸೀಪುರ, ಹೆಮ್ಮಿಗೆ, ನಿಲಸಕಲ್ (ಹೊಸನಗರ) ಎಡೆಗುಡ್ಡೆ (ತೀರ್ಥಹಳ್ಳಿ) ಮೇಗರವಳ್ಳಿ ಮೊದಲಾದ ಕಡೆಗಳಲ್ಲಿ ನೂತನ ಶಿಲಾಯುಗದ ನಿವೇಶನಗಳು ದೊರಕಿವೆ.

ಸಲಕರಣೆಗಳು: ಜನರು ಮರಗಳನ್ನು ಕತ್ತರಿಸಲು, ಪ್ರಾಣಿಗಳ ಚರ್ಮವನ್ನು ಸುಲಿಯಲು ಹಾಗೂ ಕೊರೆಯಲು ಅನೇಕ ಬಗೆ ಉಪಕರಣಗಳನ್ನು ಬಳಸುತ್ತಿದ್ದರು. ಕಲ್ಲು ಹಾಗೂ ತಾಮ್ರದಿಂದ ತಯಾರಿಸಿದ ಉಪಕರಣಗಳು ಆಗಿದ್ದವು. ರಾಜಸ್ಥಾನದ ಬನಾಸ್ ನದಿ ತೀರದಲ್ಲಿ ಹಲ್ಲೆ ಕೊಡಲಿ, ಬಳೆಗಳು, ತಗಡುಗಳು, ಅಲಗು, ಮೊನೆಗಳು, ಕೊಡಲಿ, ಬಾಚಿ, ಚಿಣಿ, ಉಳಿ ಮೊದಲಾದವುಗಳು ದೊರಕಿವೆ. ಇವುಗಳು ಅರ್ಧಚಂದ್ರಾಕೃತಿ, ಚತುರ ಚತುರಸ್ರಾಕಾರದ, ತ್ರಿಕೋನಾಕಾರದಲ್ಲಿ ದೊರಕಿವೆ. ಕೆಲವನ್ನು ಬೇಟೆಯಲ್ಲಿ ಕವಣೆ ಕಲ್ಲುಗಳಾಗಿ ಉಪಯೋಗಿಸುತ್ತಿದ್ದರು. ಸೂಜಿ, ಚಾಕು ಹಾಗೂ ಉದ್ದನೆಯ ಕತ್ತಿಗಳು ಹಳ್ಳೂರು ಹಾಗೂ ಬನಹಳ್ಳಿಗಳಲ್ಲಿ ಸಿಕ್ಕಿವೆ. ಉದ್ದನೆಯ ಹಿಡಿಕೆಯುಳ್ಳ ಗಡಿಗೆಗಳು ಅಗಲವಾದ ಬಾಲವುಳ್ಳ ಬಟ್ಟಲುಗಳು, ತಟ್ಟೆಗಳು,  ಮುಚ್ಚಳ ಮೊದಲಾದ ಪಾತ್ರಗಳು ಸಿಕ್ಕಿವೆ.

ರಾಜಸ್ಥಾನ್, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ್, ಪಶ್ಚಿಮ ಬಂಗಾಳದಲ್ಲಿ ಮಣ್ಣಿನ ಮಡಿಕೆಗಳು ದೊರಕಿವೆ. ಉದಾ: ಗಿಂಡಿಗಳು, ಬೋಗುಣಿಗಳು ಮೊದಲಾದವುಗಳು.

ಅಲಂಕಾರ ಸಾಧನೆಗಳು:  ಮಣಿಗಳು ಹಾಗೂ ಬಳೆಗಳು ತಾಮ್ರಯುಗದ ಜನರ ಅಲಂಕಾರದ ವಸ್ತುಗಳಾಗಿದ್ದವು. ಉತ್ಖನನದಲ್ಲಿ ದಾರದಲ್ಲಿ ಪೋಣಿಸಿದ ಮಣಿಗಳ ಸರವಂದು ಸಿಕ್ಕಿದೆ. ತಾಮ್ರದ ದಪ್ಪ ತಂತಿಯಲ್ಲಿ ಸಿಕ್ಕಿಸಿದ ಬಳೆಗಳು ಸರ್ವೇ ಸಾಮಾನ್ಯವಾಗಿದ್ದವು. ಬ್ರಹ್ಮಗಿರಿ ಹಾಗೂ ತೇರದಾಳದಲ್ಲಿ ಬಳೆಗಳು ದೊರಕಿವೆ.

 ಕಲೆ: ತಾಮ್ರ ಶಿಲಾಯುಗದ ಜನರು ಸೌಂದರ್ಯಾಸಕ್ತರಾಗಿದ್ದರು. ಅವರು ಮಣ್ಣಿನ ಗೊಂಬೆಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಸಂಗನ ಕಲ್ಲು. ಪಿಕ್ಲಿಹಾಳ ಮುಂತಾದ ಕಡೆಗಳಲ್ಲಿ ದೊರಕಿದ ಮಣ್ಣಿನ ಗೊಂಬೆಗಳೇ ಸಾಕ್ಷಿಯಾಗಿವೆ. ದನ, ಎತ್ತು, ಪಕ್ಷಿ ಹಾಗೂ ಮನುಷ್ಯರೂಪದ ಗೊಂಬೆಗಳು ಸಿಕ್ಕಿವೆ. ಇದು ಅಲ್ಲದೆ ಗುಹೆಗಳು ಮತ್ತು ಕಲ್ಲು ಬಂಡೆಗಳ ಮೇಲೆ ನೃತ್ಯ, ಬೇಟೆಗಾರಿಕೆ, ಆಕಳು, ಜಿಂಕೆ, ಹುಲಿ ಹಾಗೂ ಹುಲಿಗಳ ರೇಖಾಚಿತ್ರಗಳಿವೆ. ಇಂತಹ ಚಿತ್ರಗಳು ಬಳ್ಳಾರಿ ಜಿಲ್ಲೆಯ ಬೆಳಗಲಿ, ಲಿಂಗಸೂರು ಜಿಲ್ಲೆಯ ಕುರುಗೋಡು, ಬಿಲ್ಲಮರಾಯನಗುಡ್ಡ, ಮಸ್ಕಿ, ಜಂಟಿಗರಾಮೇಶ್ವರ ಮೊದಲಾದ ಕಡೆಗಳಲ್ಲಿ ಕಂಡುಬಂದಿವೆ.

ಶವ ಸಂಸ್ಕಾರ ಪದ್ಧತಿ: ತಾಮ್ರ ಯುಗದಲ್ಲಿ ಶವ ಸಂಸ್ಕಾರ ಪದ್ಧತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಶವವನ್ನು ದೊಡ್ಡ ಮಡಿಕೆಯಲ್ಲಿಟ್ಟಿದ್ದು ಉತ್ತರ ಅಭಿಮುಖವಾಗಿ ಮನೆಯಲ್ಲಿಯೇ ಹೂಳುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಶವದ ಜೊತೆಗೆ ಅದರ ಉಪಯೋಗಿಸುತ್ತಿದ್ದ ಬಟ್ಟೆಗಳು ಆವರಣಗಳು ಹಾಗೂ ದಿನನಿತ್ಯದ ವಸ್ತುಗಳನ್ನು ಇಟ್ಟು ಹೂಳುತ್ತಿದ್ದರು. ಟಿ.ನರಸೀಪುರ, ತೆಕ್ಕಲುಕೋಟೆ, ಬೂದಿಹಾಳ ಮೊದಲಾದ ಕಡೆಗಳಲ್ಲಿ ಅಸ್ತಿಪಂಜರಗಳು ದೊರಕಿವೆ.

ಆಗಲೇ ಸಾಮಾಜಿಕ ಅಸಮಾನತೆ ಕಂಡುಬಂದಿದ್ದಿತೆಂದು ಶವವನ್ನು ಹೂಳುವ ವಿಧಾನದಿಂದ ತಿಳಿಯಬಹುದು. ಮಹಾರಾಷ್ಟ್ರದಲ್ಲಿ ಶ್ರೇಣಿ ವ್ಯವಸ್ಥೆ ಆರಂಭವಾಗಿತ್ತು. ಊರಿನ ನಾಯಕನು ಈತ ನಡುಭಾಗದ ಊರಿನಲ್ಲಿ ವಾಸಿಸುತ್ತಿದ್ದನು.

ಸಾಮಾಜಿಕ ಜೀವನ:  ಈ ಯುಗದಲ್ಲೂ ವ್ಯವಸಾಯ ಹಾಗೂ ಪಶುಪಾಲನೆ ಮುಂದುವರೆಯಿತು. ಭತ್ತ, ರಾಗಿ, ಗೋದಿ, ಹತ್ತಿ, ಕಬ್ಬು, ಜೋಳ, ಉದ್ದು, ನೆಲಗಡಲೆ, ಬಟಾಣಿ, ಎಣ್ಣೆ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ನಾಯಿ, ಮೇಕೆ, ಕುರಿ, ಎಮ್ಮೆ ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಮೀನು, ಮಾಂಸ ಹಾಗೂ ತರಕಾರಿಗಳನ್ನು ಆಹಾರ ಪದಾರ್ಥಗಳಾಗಿ ಬಳಸುತ್ತಿದ್ದರು. ಇಟ್ಟಿಗೆಗಳಿಂದ ಮನೆಯನ್ನು ತಯಾರಿಸುತ್ತಿದ್ದರು. ಬಣ್ಣ ಬಣ್ಣದ ಮಡಿಕೆಗಳನ್ನು ತಯಾರಿಸುತ್ತಿದ್ದರು ಶವಗಳನ್ನು ಹೋಳುತ್ತಿದ್ದರು.

ನೆಲೆಗಳ ಶೋಧ:  ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟಿಷರ ಕಾಲದಲ್ಲಿ ಸಿಂಧೂ ನಾಗರಿಕತೆ ಬೆಳಕಿಗೆ ಬಂದಿತು. ಸ್ವಾತಂತ್ರ್ಯದ ನಂತರ ಮತ್ತಷ್ಟು ಶೋಧವನ್ನು ಸಿಂಧು ಬಯಲಿನಲ್ಲಿ ನಡೆಸಲಾಯಿತು. ಅದರ ಫಲವಾಗಿ ಪಂಜಾಬಿನ ರೋಪರ್‌ನ್ನು ವಾಯ್‌.ಡಿ.ಶರ್ಮಾ, ಆಲಂಗಿಪುರ (ವಾಯ್‌.ಡಿ.ಶರ್ಮನ್ 1958-59) ಗುಜರಾತಿನ ರಂಗಪುರ (ಎಸ್.ಆರ್. ರಾವ್ 1955-62), ಲೋಥಾಲ್ ಗುಜರಾತ್ 1955-66 ರಾಜಸ್ಥಾನದ ಕಾಲಿಬಂಗನ್‌-ಬಿ.ಬಿ ಲಾಲ್ ಹಾಗೂ ಬಿ.ಕೆ ಥಾಪರ್ ಕಚನ್ ಸರಕೋತದ ಜೋಶಿ, ನಾಗೇಶ್ವರ ಕುಂತಾಸಿ ಇತ್ಯಾದಿಗಳು ಉತ್ಖನನಗೊಂಡವು. ಸಿಂಧೂ ನಾಗರಿಕತೆಯ ಅವನತಿಯ ನಂತರ ಪುರಾತತ್ವ ಶಾಸ್ತ್ರಜ್ಞರಿಗೆ ಸಿಕ್ಕ ಮತ್ತೊಂದು ಸ್ಥಳವೆಂದರೆ ಗಂಗಾ ನದಿಯ ದಂಡೆಯ ಮೇಲಿರುವ ಹಸ್ತಿನಾಪುರ. ಇಲ್ಲಿ  ಬಿ.ಬಿ ಲಾಲ್‌ರವರು 1950-52ರ ಅವಧಿಯಲ್ಲಿ ಉತ್ಖನನ ನಡೆಸಿದರು. ಇಲ್ಲಿ ಕ್ಯಾವಿಗೆಂಪು ಬಣ್ಣದ ಮಡಿಕೆಗಳು ಬಳಕೆಯಲ್ಲಿದ್ದ ಸಂಸ್ಕೃತಿ ಅವಶೇಷಗಳು ದೊರಕಿದವು. ಈ ಸಂಸ್ಕೃತಿ ಹಾಗೂ ತಾಮ್ರ ನಿಧಿ ನೆಲೆಗಳ ನಡುವೆ ಸಂಬಂಧ ಕಲ್ಪಿಸಲಾಗಿದೆ. ನೆರೆಹಾವಳಿಗಿಂದ ಗಂಗಾನದಿಯ ಬಹುಭಾಗ ನಾಶವಾಯಿತು. ನಂತರ ಕಪ್ಪು ಮಡಿಕೆ ಬಳಕೆಯಲ್ಲಿದ್ದ ಸಂಸ್ಕೃತಿಯ ಜನರು ಇಲ್ಲಿ ವಾಸಿಸಿದರು. ಮುಂದೆ ಕುರುಕ್ಷೇತ್ರ, ಮಥುರಾ, ಕಂಪಿಲ, ಶ್ರಾವಸ್ತಿ ಹಾಗೂ ಕೌಶಾಂಬಿ ಮೊದಲಾದವು ಮುಖ್ಯ ನೆಲೆಗಳಾಗಿ ಬೆಳೆದು ಬಂದವು.

1950-51 ರಲ್ಲಿ ಮಹಾರಾಷ್ಟ್ರದ ನಾಸಿಕ್ ನೆಲೆಗಳ ಉತ್ಖನನದಲ್ಲಿ ಜೋರ್ವೆ ಸಂಸ್ಕೃತಿಯೊಂದಿಗೆ ಡೆಕ್ಕನ್ನಿನ ತಾಮ್ರ ಶಿಲಾ ಸಂಸ್ಕೃತಿಗಳ ಅಧ್ಯಯನ ಆರಂಭವಾಯಿತು. ನಂತರ 1954-55 ರಲ್ಲಿ ಸಾಂಕಾಲಿಯ ಅವರು ಕೆಂಪು ಮಡಿಕೆಯನ್ನು ಬಳಸುತ್ತಿದ್ದ ತಾಮ್ರಯುಗದ ಬನಾಸ್ ಹಾಗೂ ಆಹಾರ ಸಂಸ್ಕೃತಿಯ ಬೆಳಕಿಗೆ ತಂದರು. 1964-68 ರಲ್ಲಿ (ಎಂ ಕೆ ದವಳಿಕರ್) ಕಾಯಥಾ ಸಂಸ್ಕೃತಿ ಎಂದು ಕರೆಯಲಾಗುವ ಇನ್ನೊಂದು ತಾಮ್ರ ಶಿಲಾಯುಗ ಗಮನಕ್ಕೆ ಬಂದಿತ್ತು.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 2300-1000 ಎಂದು ಗುರುತಿಸಲಾಗಿದೆ. ಟಿ.ನರಸೀಪುರ, ಹಳ್ಳೂರು, ತೆಕ್ಕಲಕೋಟೆ, ಕೊಡೆಕಲ್, ತೇರದಾಳ, ಮೊದಲಾದ ನೆಲೆಗಳ ಶಿಲಾಯುಗ ತಾಮ್ರಾಯುಗ ಹಂತಗಳಿಂದ ಸಂಗ್ರಹಿಸಿದ ಇದ್ದಿಲುಗಳಿಂದ ಕಾಲಮಾನವನ್ನು ಇಂಗಾಲ 14 ರ ವೈಜ್ಞಾನಿಕ ತಂತ್ರದಿಂದ ನಿಗದಿಗೊಳಿಸಲಾಯಿತು.

6. ಕಂಚಿನ ಯುಗ  :

ಕಂಚು ಯುಗವು ಮಾನವ ಇತಿಹಾಸದ ಒಂದು ಮಹತ್ವದ ಹಂತವಾಗಿದ್ದು, ಈ ಕಾಲದಲ್ಲಿ ಮಾನವರು ಕಂಚು (Bronze) ಎಂಬ ಲೋಹವನ್ನು ತಯಾರಿಸುವುದನ್ನು ಕಲಿಸಿದರು. ಕಂಚು ಎಂದರೆ ತಾಮ್ರ ಮತ್ತು ಟಿನ್ ಮಿಶ್ರಣದಿಂದ ತಯಾರಾಗುವ ಬಲವಾದ ಲೋಹ. ಇದು ಕಲ್ಲು ಉಪಕರಣಗಳಿಗಿಂತ ಹೆಚ್ಚು ದೃಢವಾಗಿದ್ದು, ಕೃಷಿ ಮತ್ತು ಯುದ್ಧ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿತು. ಉತ್ತಮ ಗುಣಮಟ್ಟದ ಹಗುರ ಮತ್ತು ಬಲವಾದ ಉಪಕರಣಗಳ ಕಾರಣದಿಂದ ಕೃಷಿ ಸುಲಭವಾಯಿತು; ಜೊತೆಗೆ, ಯುದ್ಧದಲ್ಲಿ ಬಳಸುವ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗಿದವು.

ಕೃಷಿಯಲ್ಲಿ ಉಂಟಾದ ಸುಧಾರಣೆಯಿಂದ ಆಹಾರದ ಉತ್ಪಾದನೆ ಹೆಚ್ಚಾಯಿತು. ಈ ಆಹಾರ ಮಿತಿಮೀರಿದ ಉತ್ಪಾದನೆ (surplus) ಜನಸಂಖ್ಯೆ ಹೆಚ್ಚಲು ಕಾರಣವಾಯಿತು. ಜನರು ದೊಡ್ಡ ಗುಂಪುಗಳಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ಈ ವಾಸಸ್ಥಳಗಳು ನಿಧಾನವಾಗಿ ನಗರಗಳು ಮತ್ತು ರಾಜ್ಯಗಳಾಗಿ ರೂಪುಗೊಂಡವು. ಈ ಸಮಾಜಗಳಲ್ಲಿ ರಾಜರು, ಪೂಜಾರಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರು ಎಂಬಂತೆ ಸ್ಪಷ್ಟವಾದ ಸಾಮಾಜಿಕ ವರ್ಗೀಕರಣ ಕಂಡುಬಂದಿತು.

ಕಂಚು ಯುಗದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಮಹತ್ವದ ನಾಗರಿಕತೆಗಳು ಬೆಳವಣಿಗೆ ಕಂಡವು. ಮೆಸಪೊಟೇಮಿಯ ಪ್ರದೇಶದಲ್ಲಿ ಸುಮೇರಿಯನ್ ಮತ್ತು ಬಾಬಿಲೋನಿಯನ್ ನಾಗರಿಕತೆಗಳು ನಗರಗಳನ್ನು ನಿರ್ಮಿಸಿ, ಕಾನೂನುಗಳನ್ನು ರೂಪಿಸಿ, ಜಿಗ್ಗುರಾಟ್‌ಗಳು ಎಂಬ ಭವ್ಯ ದೇವಾಲಯಗಳನ್ನು ಕಟ್ಟಿದರು. ಪ್ರಾಚೀನ ಈಜಿಪ್ಟ್‌ ನಲ್ಲಿ ಫೆರೋಗಳು ಕೇಂದ್ರಿತ ಆಡಳಿತವನ್ನು ಸ್ಥಾಪಿಸಿ, ಪಿರಮಿಡ್‌ಗಳಂತಹ ಮಹತ್ತರ ಸಮಾಧಿಗಳನ್ನು ನಿರ್ಮಿಸಿದರು. ಸಿಂದೂ ಬಯಲಿನ ನಾಗರೀಕತೆಯಲ್ಲಿ ತನ್ನ ಯೋಜಿತ ನಗರ ವಿನ್ಯಾಸ, ಸಮಮಟ್ಟದ ಇಟ್ಟಿಗೆ ಮನೆಗಳು ಮತ್ತು ಸುಧಾರಿತ ಒಳಚರಂಡಿ ವ್ಯವಸ್ಥೆಗಳಿಗಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ಚೀನದಲ್ಲಿ ಕಂಚಿನ ನಿಪುಣ ತಯಾರಿಕೆ, ರಥಯುದ್ಧ ಮತ್ತು ಪ್ರಮುಖ ನಗರಗಳ ನಿರ್ಮಾಣ ಕಂಡುಬಂತು. ಏಜಿಯನ್ ಪ್ರದೇಶದಲ್ಲಿ ಮಿನೋನ್ ಮತ್ತು ಮೈಸಿನಿಯನ್ ನಾಗರಿಕತೆಗಳು ವ್ಯಾಪಾರ ಮತ್ತು ಸಮುದ್ರಯಾನದ ಮೂಲಕ ಅಭಿವೃದ್ಧಿ ಹೊಂದಿದವು.

ಈ ಕಾಲದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಲೇಖನ ಪದ್ಧತಿಯ ಆವಿಷ್ಕಾರ. ವ್ಯಾಪಾರ, ತೆರಿಗೆ ಮತ್ತು ಕೃಷಿ ದಾಖಲೆಗಳನ್ನು ಉಳಿಸಿಕೊಳ್ಳಲು ಅಗತ್ಯವಿದ್ದ ಕಾರಣ ಬರವಣಿಗೆ ವ್ಯವಸ್ಥೆಗಳು ರೂಪುಗೊಂಡವು. ಮೆಸೊಪೊಟೇಮಿಯಾದಲ್ಲಿ ಕ್ಯೂನಿಫಾರ್ಮ್ ಮತ್ತು ಈಜಿಪ್ಟ್‌ನಲ್ಲಿ ಹೈರೋಗ್ಲಿಫ್ಸ್ ಎಂಬ ಲೇಖನ ಪದ್ಧತಿಗಳು ಅಭಿವೃದ್ಧಿ ಹೊಂದಿದವು. ಬರವಣಿಗೆ ವ್ಯವಸ್ಥೆಗಳು ದೊಡ್ಡ ರಾಜ್ಯಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದು, ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಉಳಿಸಿವೆ. ಈ ಕಾಲದಲ್ಲಿ ಗಣಿತ, ಖಗೋಳಶಾಸ್ತ್ರ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿಯೂ ಮಹತ್ವದ ಪ್ರಗತಿ ಕಂಡುಬಂದಿತು.

ಕಂಚು ಯುಗದಲ್ಲಿ ದೂರವ್ಯಾಪಿ ವ್ಯಾಪಾರ ಜಾಲಗಳು ಬೆಳೆಯಲು ಆರಂಭವಾಯಿತು. ಟಿನ್ ಮೊದಲಾದ ಮೂಲವಸ್ತುಗಳು ಎಲ್ಲೆಡೆ ಲಭ್ಯವಾಗದ ಕಾರಣ ವಿವಿಧ ಪ್ರದೇಶಗಳ ನಡುವೆ ವ್ಯಾಪಾರ ನಡೆಯಿತು. ಧಾತುಗಳು, ವಸ್ತ್ರಗಳು ಮತ್ತು ಐಶ್ವರ್ಯ ವಸ್ತುಗಳ ವಿನಿಮಯದ ಜೊತೆಗೆ ಸಂಸ್ಕೃತಿ ಮತ್ತು ಆಲೋಚನೆಗಳೂ ಹರಡಿದವು. ಇದರಿಂದ ಕಂಚು ಯುಗದ ಜಗತ್ತು ಪರಸ್ಪರ ಸಂಪರ್ಕ ಹೊಂದಿದ ಜಾಲವಾಗಿ ರೂಪುಗೊಂಡಿತು.

ಆದರೆ, ಈ ಪ್ರಗತಿಯ ನಡುವೆಯೇ ಕಂಚು ಯುಗವು ಸುಮಾರು ಕ್ರಿ.ಪೂ. 1200ರ ವೇಳೆಗೆ ಅಂತ್ಯ ಕಂಡಿತು. ಬರಡು, ಆಹಾರ ಕೊರತೆ ಮತ್ತು ಪ್ರಕೃತಿ ವಿಕೋಪಗಳು ಕೃಷಿಯನ್ನು ಹಾನಿಗೊಳಿಸಿದವು. ಜೊತೆಗೆ, ಸಮುದ್ರ ಜನರು (Sea Peoples) ಎಂದು ಕರೆಯಲ್ಪಡುವ ಗುಂಪುಗಳ ದಾಳಿಗಳು ವ್ಯಾಪಾರ ಮಾರ್ಗಗಳನ್ನು ಹಾಳುಮಾಡಿದವು. ಈ ನಾಗರಿಕತೆಗಳು ಪರಸ್ಪರ ಅವಲಂಬಿತವಾಗಿದ್ದರಿಂದ, ಒಂದರ ಪತನ ಮತ್ತೊಂದರ ಮೇಲೂ ಪರಿಣಾಮ ಬೀರಿತು. ಈ ಘಟನೆಗಳನ್ನು “ವ್ಯವಸ್ಥಾತ್ಮಕ ಕುಸಿತ” (systems collapse) ಎಂದು ಕರೆಯಲಾಗುತ್ತದೆ. ಇದರಿಂದ ಕಂಚು ಯುಗ ಮುಕ್ತಾಯಗೊಂಡು ಕಬ್ಬಿಣ ಯುಗ ಆರಂಭವಾಯಿತು.

ಒಟ್ಟಿನಲ್ಲಿ, ಕಂಚು ಯುಗವು ಮಾನವ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಕಾಲವಾಗಿದ್ದು, ನಗರಗಳ ಅಭಿವೃದ್ಧಿ, ಬರವಣಿಗೆ, ವ್ಯಾಪಾರ ಮತ್ತು ಶಕ್ತಿಶಾಲಿ ನಾಗರಿಕತೆಗಳ ಉದಯಕ್ಕೆ ಕಾರಣವಾಯಿತು. ಇದರ ಕೊಡುಗೆಗಳು ಮುಂದಿನ ಮಾನವ ಅಭಿವೃದ್ಧಿಗೆ ಗಟ್ಟಿ ಅಡಿಪಾಯವಾಯಿತು.

  1. ಕಬ್ಬಿಣ ಯುಗ (Iron age)

ತಾಮ್ರ ಶಿಲಾಯುಗದ ಸಂಸ್ಕೃತಿಯ ನಂತರ ಕಬ್ಬಿಣ ಯುಗ ಆರಂಭವಾಯಿತು. ಈ ಯುಗದ ಸಂಸ್ಕೃತಿಯ ನೆಲೆಗಳು ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳಗಳಲ್ಲಿ ದೊರಕಿವೆ. ಬ್ರಹ್ಮಗಿರಿಯಲ್ಲಿ ಸರ್ ಮಾರ್ಟಿಮರ್ ವೀಲರ್ ನಡೆಸಿದ ಉತ್ಖನನನದಿಂದ ಈ ಸಂಸ್ಕೃತಿಯು ಕಬ್ಬಿಣ ಯುಗದ್ದು ಎಂಬ ತೀರ್ಮಾನಕ್ಕೆ ಬರಲಾಯಿತು. ನಂತರ ಕರ್ನಾಟಕದ ಮಸ್ಕಿ, ಟಿ.ನರಸೀಪುರ, ಜಡಿಗೇನಹಳ್ಳಿ, ಹೆಮ್ಮಿಗೆ, ಹಳ್ಳೂರು, ತಡಕನಹಳ್ಳಿ, ತೇರದಾಳ ಮೊದಲಾದ ಕಡೆ, ಆಂಧ್ರದ ನಾಗಾರ್ಜುನಕೊಂಡ, ಕೇರಳದ ಪೋಕಾ, ತಮಿಳುನಾಡಿನ ಸಾಣೂರು, ಅಮೃತ ಮಂಗಲಂ, ಸಂಗಮೇಡು ಮೊದಲಾದ ಪ್ರದೇಶಗಳಲ್ಲಿ ನಡೆಸಿದ ಉತ್ಖನನನಗಳಿಂದ ಬೃಹತ್ ಶಿಲಾ ಗೋರಿಗಳು ಬೆಳಕಿಗೆ ಬಂದ ಹಾಗೆಯೇ ಮಹಾರಾಷ್ಟ್ರದ ತೇಕವಾಡಾ, ವಿದರ್ಭ ಪ್ರದೇಶದ ಟಾಕಲಘಾಟ, ಮಾಹುರ್ಜರಿ, ನಯಾಕುಂಡ, ಬೋರಗಾಂವ, ಭಾಗಿ ಮೊಹರಿ ಮೊದಲಾದ ಕಡೆ ಶಿಲಾಗೋರಿಗಳು ಸಿಕ್ಕಿವೆ. ಈ ಶಿಲಾಗೋರಿಗಳನ್ನು ಡಾ|| ವಿ.ಡಿ ಕೃಷ್ಣಸ್ವಾಮಿ, ಡಾ|| ಅ ಸುಂದರ, ಡಾ|| ಬಿ.ಕೆ ಗುರುರಾಜ್‌, ಡಾ|| ಬಿ. ನರಸಿಂಹಯ್ಯ, ಆರ್ ಮೋಹಂತಿ ಮೊದಲಾದವರು ಅಧ್ಯಯನ ಮಾಡಿ ವರದಿ ನೀಡಿದ್ದಾರೆ.

ಜೀವನ ಶೈಲಿ:  ಪಶುಸಂಗೋಪನೆ, ಬೇಟೆಗಾರಿಕೆ, ಬೇಸಾಯ ಮೊದಲಾದವುಗಳು ಕಬ್ಬಿಣ ಯುಗದ ಜನರ ಪ್ರಮುಖ ಉದ್ಯೋಗಗಳಾಗಿದ್ದವು. ಇವರು ತಯಾರಿಸಿದ ಕಬ್ಬಿಣ, ಉಕ್ಕಿನ ನೇಗಿಲ ಕುಳ, ಕುಡಗೋಲು ಮೊದಲಾದವು ಕೃಷಿ ಕಾರ್ಯದಲ್ಲಿ ಬಳಕೆಯಾಗುತ್ತಿದ್ದವು. ಇವರ ಕಾಲದ ದೊಡ್ಡ ಉದ್ದಿಮೆಯೆಂದರೆ ಕಬ್ಬಿಣದ ಅದಿರಿನಿಂದ ಲೋಹ ತಯಾರಿಸುವುದು ಹಾಗೂ ಕಮ್ಮಾರಿಕೆಗೆ ಬೇಕಾದ ಆಯುಧಗಳನ್ನು ತಯಾರಿಸುವುದು ಕಬ್ಬಿಣದ ಜೊತೆಗೆ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.

ಮನೆ ಬಳಕೆಯಲ್ಲಿ ಕಬ್ಬಿಣ ಹಾಗೂ ಉಕ್ಕಿನಿಂದ ತಯಾರಿಸಿದ ಉಪಕರಣಗಳಾದ ಅಡ್ಡಣಿಗೆ, ಕೈ ನೇಗಿಲ ಕುಳ, ಕುಡಗೋಲು, ಚಾಕು, ಕತ್ತಿ, ಭಲ್ಲೆ, ಈಟಿ, ಕೊಡಲಿ, ಬಿಲ್ಲುಬಾಣ ಮೊದಲಾದವುಗಳನ್ನು ಉಪಯೋಗಿಸುತ್ತಿದ್ದರು. ವಿವಿಧ ಆಕಾರದ ಬಟ್ಟಲುಗಳು, ತಪ್ಪಲಿಗಳು, ಕೊಡಗಳು ಉಂಗುರಾಕಾರದ ಅಡ್ಡಣೆಗೆಗಳು ಗೂಡಾಣಗಳು ಹಾಗೂ ಬಾನಿಗಳಂತ ಪಾತ್ರೆಗಳಿದ್ದವು.

ಇವರು ಶಂಕದಿಂದ, ಮಣ್ಣಿನಿಂದ, ಚಿನ್ನದಿಂದ ಮಾಡಿದ ಮಣಿಗಳನ್ನು ಮಾಲೆಗಳನ್ನು ಸಹ ಧರಿಸುತ್ತಿದ್ದರು.  ಶಂಕಗಳ ಮಾಲೆಯನ್ನು ಸಹ ಧರಿಸುತ್ತಿದ್ದರು. ಮಣ್ಣಿನ ಮಣಿಗಳು ಅಡಿಕೆ ಗಾತ್ರದಲ್ಲಿದ್ದವು. ಶಂಖಗಳಿಗೆ ತೂತುಗಳನ್ನು ಮಾಡಿದ್ದರು.  

ಶವಸಂಸ್ಕಾರ ಪದ್ಧತಿ:  ಶವ ಸಂಸ್ಕಾರದ ನೂರಾರು ಕಲ್ಗೋರಿಗಳು ದೊರಕಿವೆ. ಒಂದೊಂದು ಗೋರಿಗಳಲ್ಲಿ ಒಂದಕ್ಕಿಂತ ಹೆಚ್ಚು ಅಸ್ತಿಪಂಜರಗಳು ದೊರಕಿವೆ. ಕಬ್ಬಿಣ ಶಿಲಾಯುಗದ ಜನರು  ಅಂಡಾಕಾರದಲ್ಲಿ ಗುಂಡಿಯನ್ನು ತೋಡಿ ನೆಲದ ಮೇಲೆ ಬೂದಿಯನ್ನು ಹಾಕಿ ಅದರ ಮೇಲೆ ಶವವನ್ನು ಅಡ್ಡಲಾಗಿ ಮಲಗಿಸಿ ಶವದ ಜೊತೆ ಎರಡು ಪಾತ್ರಗಳನ್ನು ಇಡುತ್ತಿದ್ದರು. ಇನ್ನೊಂದು ಬಗೆಯ ಗೋರಿಯಲ್ಲಿ ಸಂಗ್ರಹಿಸಿದ ಅಸ್ತಿ ಅವಶೇಷಗಳನ್ನು ಮಣ್ಣಿನ ಪಾತ್ರೆಯೊಳಗೆ ಇಟ್ಟು ಅದನ್ನು ಗುಂಡಿಯೊಳಗೆ ಹಾಕಿ ಮಣ್ಣಿನಿಂದ ಮುಚ್ಚಿ ಗುಂಡಿಯ ಬಾಯಿ ಸುತ್ತಲೂ ಚಿಕ್ಕಚಿಕ್ಕ ಕಲ್ಲುಗಳನ್ನು ಇಟ್ಟು ವೃತ್ತದೊಳಗೆ ಕೆಲವು ಕಲ್ಲಿನ ಚೂರುಗಳನ್ನು ಹಾಕಲಾಗುತ್ತದೆ.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 1000 ದಿಂದ 900 ಎಂದು ತರ್ಕಿಸಲಾಗಿದೆ. ಕರ್ನಾಟಕದ ಬನಹಳ್ಳಿಯ ಇಂಗಾಲದ 14ರ ಕಾಲಮಾನದ ಕ್ರಿಸ್ತಪೂರ್ವ 600 ರಿಂದ ಕ್ರಿಸ್ತಶಕ 1ನೇ ಶತಮಾನ ಎಂದು ದೃಢಪಡಿಸಲಾಗಿದೆ.

ಭಾರತ ಮತ್ತು ಕರ್ನಾಟಕದಲ್ಲಿ ಶಿಲಾಯುಗದ ಸಂಶೋಧನೆ

ಭಾರತದಲ್ಲಿ ಶಿಲಾಯುಗದ ಸಂಶೋಧನೆಗೆ Robert Bruce Foote ಪ್ರಮುಖ ಕೊಡುಗೆ ನೀಡಿದ್ದಾರೆ.

ಕರ್ನಾಟಕದಲ್ಲಿ:

  • R. V. Joshi — ಮಲಪ್ರಭಾ ನದೀ ತೀರದಲ್ಲಿ ಸಂಶೋಧನೆ
  • Sampath Iyengar — ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿ
  • S. Seshadri — ಮಂಡ್ಯ ಜಿಲ್ಲೆಯ Kaveri River ತೀರದಲ್ಲಿ ಆವಿಷ್ಕಾರ
  • Paddayya — ಹುಣಸಗಿ ಮತ್ತು ಸಾಲವಡಗಿ ಪ್ರದೇಶಗಳಲ್ಲಿ ಅಧ್ಯಯನ

ಇದಲ್ಲದೆ, ಬಾದಾಮಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಪ್ರದೇಶಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ.

ಉಪಸಂಹಾರ

ಶಿಲಾ ಯುಗದ ಅಧ್ಯಯನವು ಮಾನವನ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಸಮಾಜದ ರೂಪುಗೊಳಿಸುವಿಕೆಯನ್ನು ತಿಳಿಯಲು ಬಹಳ ಮುಖ್ಯವಾಗಿದೆ. ಸರಳ ಕಲ್ಲು ಉಪಕರಣಗಳಿಂದ ಪ್ರಾರಂಭಿಸಿ, ಲೋಹ ಉಪಕರಣಗಳ ಬಳಕೆಯವರೆಗೆ ಮಾನವನು ತನ್ನ ಜೀವನವನ್ನು ಕ್ರಮೇಣ ಸುಧಾರಿಸಿಕೊಂಡಿದ್ದಾನೆ.

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನಡೆದ ಪುರಾತತ್ತ್ವ ಸಂಶೋಧನೆಗಳು ಜಗತ್ತಿನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿವೆ.