ಪೀಠಿಕೆ:
ಇಡೀ ಪ್ರಪಂಚದಲ್ಲಿಯೇ ಭಾರತವು ವಿಶಿಷ್ಟವಾದ ಭೌಗೋಳಿಕ ಸ್ಥಾನವನ್ನು ಹೊಂದಿದೆ. ಇಲ್ಲಿ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಅಗಾಧವಾಗಿದೆ. ಭಾರತವು ಪ್ರಾಚೀನ ಕಾಲದಿಂದಲೂ ಯಾತ್ರಿಕರ ಸ್ವರ್ಗ ಎಂದು ಹೆಸರಾಗಿದೆ. ಭಾರತವು ಎಲ್ಲಾ ಋತುಮಾನಗಳಿಗೂ ಪ್ರವಾಸಕ್ಕೆ ಸರಿಹೊಂದುವ ದೇಶವಾಗಿದೆ. ಹೀಗಾಗಿ ಅಲೆಕ್ಸಾಂಡರ್ ಭಾರತವು ಹಾಲು-ಜೇನಿನ ನಾಡು ಎಂದು ಹೇಳಿದ್ದಾರೆ. ಮ್ಯಾಕ್ಸ್ ಮುಲ್ಲರ್, ಭಾರತವು ಭೂಮಿಯ ಮೇಲಿನ ಸ್ವರ್ಗ ಎಂದು ಹೇಳಿದ್ದಾರೆ. ಭಾರತದ ಯಾವುದೇ ಮೂಲೆಗೆ ಹೋದರು ಐತಿಹಾಸಿಕ ಸ್ಮಾರಕಗಳು, ಗಿರಿಧಾಮಗಳು, ಜಲಪಾತಗಳು, ವನ್ಯ ಪ್ರಾಣಿಧಾಮಗಳು, ಹುಲ್ಲುಗಾವಲುಗಳು, ನದಿಗಳು, ಸಾಗರ, ಸಮುದ್ರಗಳು, ಮಸೀದಿಗಳು, ಚರ್ಚುಗಳು, ಕೋಟೆ ಕತ್ತಲುಗಳು ಕಂಡುಬರುತ್ತವೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರಾಚೀನ ಕಾಲದಲ್ಲಿ ಪ್ರವಾಸಿಗರು ಭಾರತಕ್ಕೆ ವಿವಿಧ ಕಾರಣಗಳಿಗಾಗಿ ಬರುತ್ತಿದ್ದರು ಅವುಗಳನ್ನು ಈ ಕೆಳಗಿನಂತೆ ನೋಡೋಣ.
1. ಸಿಂಧೂ ನದಿ ನಾಗರಿಕತೆಯ ಕಾಲ: ಸಿಂಧೂ ನಾಗರಿಕತೆಯ ಜನರು ಪ್ರಪಂಚದ ವಿವಿಧ ನಾಗರಿಕತೆಗಳ ಜೊತೆಗೆ ಆಗಲೇ ಸಂಪರ್ಕದಲ್ಲಿದ್ದ ಸಾಕಷ್ಟು ದಾಖಲೆಗಳು ನಮಗೆ ಸಿಕ್ಕಿವೆ. ಅವರು ಮೆಸಪೊಟಮಿಯ, ಈಜಿಪ್ಟ್, ಬ್ಯಾಬಿಲೋನಿಯ, ಪರ್ಶೀಯ ,ಚೀನಿ, ಗ್ರೀಕ್ ಹಾಗೂ ರೋಮನ್ ನಾಗರಿಕತೆಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೊಂದಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿ ಹಾಗೂ ಹಡಗುಗಳನ್ನು ಪ್ರಯಾಣಕ್ಕಾಗಿ ಬಳಕೆ ಮಾಡುತ್ತಿದ್ದರು. ಪಶ್ಚಿಮ ಏಷ್ಯಾ ನಗರಗಳಲ್ಲಿ ಸಿಂಧೂ ನಾಗರಿಕತೆಯ ಕಾಲದ ಮುದ್ರೆಗಳು ಭತ್ತದ ಕಾಳುಗಳು ದೊರಕಿವೆ. ಭಾರತದ ಪೂರ್ವ ಕರಾವಳಿಯ ತನಕ ರೋಮನ್ ಹಡಗುಗಳು ಬರುತ್ತಿದ್ದವು ಎಂಬುದಕ್ಕೆ ಅರಕ ಮೆಡುವಿನಲ್ಲಿ ರೋಮನ್ ನಾಣ್ಯಗಳು ದೊರಕಿವೆ.
2. ವೈದಿಕ ಕಾಲ : ವೈದಿಕ ಕಾಲ ದಲ್ಲಿಯೂ ಕಾಶಿ, ಪ್ರಯಾಗ, ಅಮರನಾಥ ಮುಂತಾದ ನಗರಗಳ ನಡುವೆ ಪ್ರಯಾಣಕ್ಕಾಗಿ ಉತ್ತಮ ಮಾರ್ಗಗಳನ್ನು ನಿರ್ಮಿಸಲಾಗಿತ್ತು.
3. ಬೌದ್ಧ ಮತ್ತು ಜೈನ ಯುಗ : ಗೌತಮ ಬುದ್ಧನು ಜ್ಞಾನೋದಯ ಪಡೆದ ನಂತರ ತನ್ನ ಧರ್ಮ ಪ್ರಚಾರಕ್ಕಾಗಿ ಊರೂರು ಪ್ರವಾಸ ಕೈಗೊಳ್ಳುತ್ತಿದ್ದನು. ಹಾಗಾಗಿ ತಾಮ್ರ ಲಿಪ್ತಿ, ಪಾಟಲೀಪುತ್ರ, ಕೌಶಂಬಿ, ವಿಧಿಸ, ಕಾಶಿ, ಉಜ್ಜಯಿನಿ ಮೊದಲಾದ ಕಡೆಗಳಲ್ಲಿ ರಸ್ತೆ ಮಾರ್ಗಗಳು ಹಾಕಲ್ಪಟ್ಟವು. ಮಹಾವೀರ ಕುಂದ ಗ್ರಾಮ, ಜೃಂಬಿಕವನ, ಕಾಶಿ, ಪ್ರಯಾಗಳಿಗೆ ಸಂಚಾರ ಕೈಗೊಳ್ಳುತ್ತಿದ್ದನು.
4. ಧಾರ್ಮಿಕ ಯುಗ: ಭಾರತೀಯ ಸಾಧು ಸಂತರು, ಧರ್ಮ ಗುರುಗಳು ಭಾರತದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಭೇಟಿ ನೀಡುತ್ತಿದ್ದರು. ಹಾಗೆಯೇ ಅಜಂತಾ, ಎಲ್ಲೋರಾ, ಕಾರ್ಲೆ ಹಾಗೂ ನಾಗಾರ್ಜುನಕೊಂಡಗಳಿಗೂ ಭೇಟಿ ನೀಡುತ್ತಿದ್ದರಿಂದ ಪ್ರವಾಸದ ಪರಿಕಲ್ಪನೆಗಳು ಆಗಲೇ ಬೆಳೆದು ಬಂದವು. ಚಂದ್ರಗುಪ್ತನು ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡು ಶ್ರವಣಬೆಳಗೊಳದಲ್ಲಿ ನೆಲೆಸಿ ಅಲ್ಲಿಗೆ ಸಲ್ಲೇಖನ ವ್ರತವನ್ನು ಕೈಗೊಂಡನು. ಅಂದಿನಿಂದ ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಭೇಟಿ ನೀಡಲು ಆರಂಭಿಸಿದರು.
5. ಅಶೋಕನ ಕಾಲ: ಅಶೋಕನು ಬೌದ್ಧ ಧರ್ಮಪ್ರಚಾರಕ್ಕಾಗಿ ತನ್ನ ಮಗ ಮಹೇಂದ್ರ ಹಾಗೂ ಮಗಳಾದ ಸಂಗಮಿತ್ರೆಯರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದ್ದನು. ಮೌರ್ಯರ ಕಾಲದಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಪ್ರವಾಸಿಗರ ಯೋಗ ಕ್ಷೇಮಕ್ಕಾಗಿ ಮೌರ್ಯರು ಒಂದು ನಿಗಮವನ್ನು ಸ್ಥಾಪಿಸಿದರು.
6. ಗುಪ್ತರ ಯುಗ: ವಿದೇಶದಿಂದ ಭಾರತಕ್ಕೆ ಬಂದ ಪ್ರವಾಸಿಗರನ್ನು ನೋಡಿಕೊಳ್ಳುವುದಕ್ಕಾಗಿ ಗುಪ್ತರು ʻʻಅಂತಪಾಲʼʼ ಎಂಬ ಅಧಿಕಾರಿಯನ್ನು ನೇಮಕ ಮಾಡಿದ್ದರು. ದರೋಡೆಕೋರರಿಂದ ಪ್ರವಾಸಿಗರನ್ನು ರಕ್ಷಿಸಲು ಗುಪ್ತರ ಆಡಳಿತ ಸದಾ ಎಚ್ಚರವಹಿಸುತ್ತಿತ್ತು. ಪ್ರವಾಸಿಗರು ಹಗಲು ಸಂಚರಿಸಿ ರಾತ್ರಿ ಧರ್ಮ ಶಾಲೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಹಸ್ತಿನಾಪುರ, ಅಯೋಧ್ಯ, ಪಂಪಾ ಕ್ಷೇತ್ರ ಮುಂತಾದ ಕಡೆಗಳಲ್ಲಿ ಉತ್ತಮ ಮಾರ್ಗಗಳನ್ನು ನಿರ್ಮಿಸಲಾಗಿತ್ತು.
7. ಹರ್ಷನ ಯುಗ: ಹರ್ಷವರ್ಧನ ಕಾಲದಲ್ಲಿ ಪ್ರಸಿದ್ಧ ವಿದ್ವಾಂಸನಾದ ಬಾಣಬಟ್ಟ ಅತ್ಯಂತ ಕಿರಿಯ ವಯಸ್ಸಿನಲ್ಲಿ ತನ್ನ ಸಂಗಡಿಗರೊಂದಿಗೆ ದೀರ್ಘಕಾಲ ಪ್ರವಾಸ ಕೈಗೊಂಡಿದ್ದನೆಂದು ಇತಿಹಾಸ ಹೇಳುತ್ತದೆ. ಆತ ಅಜಂತಾ, ಎಲ್ಲೋರಾ, ಕಾರ್ಲೆ, ಬಾಜ, ಬೇಡ್ಕ ಹಾಗೂ ನಾಸಿಕ್‌ಗಳಿಗೆ ಭೇಟಿ ನೀಡಿದ್ದನಂತೆ. ಅವುಗಳೆ ಮುಂದೆ ಹೆದ್ದಾರಿಗಳಾದವು. ವಿದೇಶಿ ಪ್ರವಾಸಕರು ಭಾರತಕ್ಕೆ ಬಂದಿಲ್ಲದೆ ಇಲ್ಲಿನ ತಕ್ಷಶಿಲಾ, ವಿಕ್ರಮಶೀಲ, ದಗ್ದ, ಕಂಚಿ ಹಾಗೂ ನಲಂದಗಳಿಗೂ ಭೇಟಿ ನೀಡುತ್ತಿದ್ದರು. ಕೆಲವರಂತೂ ಇಂತಹ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ತಮ್ಮ ಜೀವನದ ಕನಸಾಗಿ ಹೊಂದಿದ್ದರು.
8. ಮಧ್ಯಯುಗ : ಮಧ್ಯಯುಗದಲ್ಲಿ ಹಾಗೆಯೇ ಮುಸ್ಲಿಂರ ಕಾಲದ ಮಸೀದಿಗಳು, ಅರಮನೆಗಳು, ಗೋರಿಗಳು, ಮಿನಾರ್‌ಗಳು, ಗುಮ್ಮಟಗಳು, ತಾಜ್‌ಮಹಲ್ ಕೆಂಪುಕೋಟೆ, ಮೋತಿ ಮಸೀದಿ, ಗೋಲಗುಮ್ಮಟ, ಚಾರ್ಮಿನಾರ್, ಭಾರ ಕಮಾನ್, ಕುತುಬ್ ಮಿನಾರ್ ಮೊದಲಾದವುಗಳು ಇಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
9. ವಿದೇಶಿ ಪ್ರವಾಸಿಗಳ ಯುಗ: ಮಧ್ಯಯುಗದಲ್ಲಿ ವಿದೇಶ ಪ್ರವಾಸಿಗರಾದ ನಿಕೋಲೋ ಕೋಂತಿ, ಬಾರ್ಬೊಸಾ, ಅಬ್ದುಲ್ ರಜಾಕ್, ಅಲ್‌ಬುರನಿ, ಮಾರ್ಕೊಪೋಲೊ ಮುಂತಾದವರು ಭಾರತಕ್ಕೆ ಬೇಟಿನೀಡಿದ್ದರು. ನಂತರದ ಕಾಲಘಟ್ಟದಲ್ಲಿ ಪೋರ್ಚುಗೀಸರು, ಡಚ್ಚರು ಹಾಗೂ ಆಂಗ್ಲರು ಹೀಗೆ ಪ್ರವಾಸಿಗರ ದಂಡೇ ಭಾರತಕ್ಕೆ ಹರಿದು ಬಂದಿತು. ಅವರು ತಮ್ಮ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಕೃತಿಗಳಲ್ಲಿ ವಿವರಿಸಿದ್ದಾರೆ.
1೦. ಆಧುನಿಕ ಯುಗ: ಆಧುನಿಕ ಯುಗದಲ್ಲಿ ಭಾರತದ ಅನೇಕ ನಾಯಕರು ವಿದೇಶಗಳಿಗೆ ಶಿಕ್ಷಣ, ಆಡಳಿತ ಹಾಗೂ ಆರ್ಥಿಕ ಬೆಳವಣಿಗೆಯ ಅನುಭವ ಪಡೆಯಲು ಪ್ರವಾಸ ಮಾಡುತ್ತಿದ್ದರು. ಅಂತವರಲ್ಲಿ ರಾಜರಾಮ ಮೋಹನ್‌ರಾಯ್, ಸ್ವಾಮಿ ವಿವೇಕಾನಂದ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ಜವಹರಲಾಲ್ ನೆಹರು ಹಾಗೂ ಡಾ|| ಬಿ.ಆರ್ ಅಂಬೇಡ್ಕರ್ ಮೊದಲಾದವರು ಪ್ರಮುಖರಾಗಿದ್ದಾರೆ.
ಪ್ರವಾಸಿ ಪ್ರಮುಖ ಸ್ಥಳಗಳು: ಸಿಂಧೂ ನಾಗರಿಕತೆಯ ಅವಶೇಷಗಳು, ಜೈನ, ಬೌದ್ಧ ಹಾಗೂ ವೈದಿಕ ಧರ್ಮಕ್ಕೆ ಸೇರಿದ ದೇವಾಲಯಗಳು, ಶಿಲ್ಪಗಳು ಅಜಂತಾ, ಎಲ್ಲೋರಾ, ನಾಗಾರ್ಜುನಕೊಂಡ, ಸಾಂಚಿ, ಸಾರನಾಥ, ಎಲಿಫೆಂಟಾ, ಪಾಟಲೀಪುತ್ರ, ಖಜರಾಹೋ, ಐಹೊಳೆ, ಪಟ್ಟದಕಲ್ಲು, ಮಹಾಬಲಿಪುರಂ, ತಾಂಜಾವೂರು ಹಾಗೂ ಹಂಪಿ ಮೊದಲಾದವುಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿ ಪ್ರಖ್ಯಾತಿ ಹೊಂದುತ್ತಿರುವುದು ಈಗ ಇತಿಹಾಸ.
ಸ್ವಾತಂತ್ರ್ಯವನ್ನು ಗಳಿಸಿದ ನಂತರ ಭಾರತದಲ್ಲಿ ಪ್ರವಾಸೋದ್ಯಮವು ಪ್ರಗತಿಪಥದತ್ತ ಮುನ್ನಡೆಯುತ್ತಿದೆ. ಹೆಚ್ಚುತ್ತಿರುವ ಪ್ರವಾಸಿಗರ ಬೇಡಿಕೆಯನ್ನು ಈಡೇರಿಸಲು ಸಮರ್ಥವಾಗುತ್ತಿದೆ. ಊಟ, ವಸತಿ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರವಾಸೋದ್ಯಮವು ಸಾಕಷ್ಟು ಬಲಶಾಲಿಯಾಗಿದೆ. ಭಾರತದ ಹೋಟೆಲ್‌ಗಳು ಉತ್ತಮ ಸೌಕರ್ಯಗಳನ್ನು ಒದಗಿಸುತ್ತಿವೆ. ಆದುದರಿಂದ ಭಾರತದಲ್ಲಿ ಹೋಟೆಲ್‌ಗಳ ಸಂಖ್ಯೆಯು ಹೆಚ್ಚಾಗಿದೆ. ಬಸ್ಸು, ರೈಲು, ವಿಮಾನ ಪ್ರಯಾಣವು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಸಾವಿರಾರು ವಿಮಾನಗಳು, ಲಕ್ಷಾಂತರ ಬಸ್ಸುಗಳು, ಸಾವಿರಾರು ರೈಲುಗಳು, ಪ್ರಯಾಣಿಕರನ್ನು ಹೊತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಗಳಿಗೆ ಸಂಚರಿಸುತ್ತಿವೆ.