ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು
- ಕಾಂತೀಯ ಸಮೀಕ್ಷೆ
- ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ
- ವಿದ್ಯುತ್ ಕಾಂತೀಯ ಸರ್ವೇಕ್ಷಣೆ
- ಶಬ್ದದ ಆಧಾರದ ಸರ್ವೇಕ್ಷಣೆ
- ಮಣ್ಣಿನ ರಸಾಯನಿಕ ಪರೀಕ್ಷೆ
- ವೈಮಾನಿಕ ಸಮೀಕ್ಷೆ
- ಓರೆಯಾದ ಛಾಯಾಗ್ರಹಣ
- ಲಂಬ ಛಾಯಾಗ್ರಹಣ
- ವೈಮಾನಿಕ ಛಾಯಾಗ್ರಹಣ
- ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್
- NIR
ಕೇವಲ ಮೇಲ್ಮೈ ಸಮೀಕ್ಷೆ ಅಥವಾ ಉತ್ಖನನದಿಂದ ಮಾತ್ರವಲ್ಲದೆ ನೆಲದ ಅಡಿಯಲ್ಲಿ ಅಡಗಿರುವ ಗೋಡೆ, ಕುಲುಮೆ, ಗುಂಡಿ ಅಥವಾ ಹಳೆಯ ರಸ್ತೆಯ ಬಗ್ಗೆ ತಿಳಿಯಲು ಈ ವಿಧಾನ ಸಹಕಾರಿ. ಇವುಗಳ ಬಳಕೆಯ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.
1. ಕಾಂತೀಯ ಸಮೀಕ್ಷೆ: ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದರೆ. ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್ಗಳು ಭೂಮಿಯ ಕಾಂತೀಯ ಕ್ಷೇತ್ರಗಳಲ್ಲಿ ಸಣ್ಣ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಕುಲುಮೆಗಳು ಅಥವಾ ಮಣ್ಣಿನ ಪಾತ್ರೆಗಳನ್ನು ಸುಟ್ಟಾಗ ಅವುಗಳಲ್ಲಿ ಒಂದು ಶಾಶ್ವತ ಕಾಂತ ಗುಣ ಮೂಡುತ್ತದೆ. ಇದನ್ನು ಬಳಸಿಕೊಂಡು ನೆಲದಡಿಯಲ್ಲಿ ಅಡಗಿರುವ ಒಲೆಗಳು ಹಾಗೂ ಸುಟ್ಟ ಮಣ್ಣಿನ ರಚನೆಯನ್ನು ಪತ್ತೆಹಚ್ಚಬಹುದು. ಗೋಡೆಗಳು, ರಸ್ತೆಗಳಿಗಿಂತ ಮಣ್ಣಿನ ಗುಂಡಿಗಳು ಮತ್ತು ಸುಟ್ಟ ಜಾಗಗಳು ಹೆಚ್ಚಿನ ಕಾಂತಿಯತೆಯನ್ನು ಹೊಂದಿರುತ್ತವೆ. ಈ ವ್ಯತ್ಯಾಸದ ಆಧಾರದ ಮೇಲೆ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ. ಕಾಂತೀಯ ಸರ್ವೇಕ್ಷಣದಲ್ಲಿ ಪ್ರೋಟಾನ್ ಕಾಂತಮಾಪಕ ಎಂಬ ಕಾಂತ ಕ್ಷೇತ್ರದ ಸೂಕ್ಷ್ಮಗ್ರಾಹಿಯಾದ ಉಪಕರಣವನ್ನು ಬಳಸಲಾಗುವುದು. ಇದರ ಮೂಲಕ ಸರ್ವೇಕ್ಷಣ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಲಾಗುತ್ತದೆ. ಸುಮಾರು 3 ಜನರ ಒಂದು ತಂಡವು ಒಂದೇ ದಿನದಲ್ಲಿ ಅನೇಕ ಎಕರೆ ಪ್ರದೇಶಗಳನ್ನು ಸರ್ವೇಕ್ಷಣ ಮಾಡಬಹುದಾಗಿದೆ. ಈ ವಿಧಾನವನ್ನು 1985ರಲ್ಲಿಯೇ ಮೊದಲ ಬಾರಿಗೆ ಬಳಸಲಾಯಿತಾದರೂ ಭಾರತದಲ್ಲಿ ಇದು ಅಷ್ಟೊಂದು ಪ್ರಚಾರ ಪಡೆಯಲಿಲ್ಲ. ದಕ್ಷಿಣ ಭಾರತದ ಕಾವೇರಿ ಪಟ್ನಂ ಹಾಗೂ ಮಧುರೈಗಳಲ್ಲಿ ಈ ವಿಧಾನದ ಮೂಲಕ ಸರ್ವೇಕ್ಷಣ ನಡೆಸಿದರೂ ನಿರೀಕ್ಷಿತ ಪ್ರತಿಫಲ ಸಿಗಲಿಲ್ಲ.
2. ವಿದ್ಯುತ್ ಪ್ರತಿರೋಧ ಸರ್ವೇಕ್ಷಣೆ: ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಇನ್ನೊಂದು ಪ್ರಮುಖವಾದ ಭೂ-ಭೌತಿಕ ವಿಧಾನವಾಗಿದೆ. ನೆಲದೊಳಗೆ ಲೋಹದ ಕಡ್ಡಿಗಳನ್ನು ಚುಚ್ಚಿ ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಹರಿಸಲಾಗುತ್ತದೆ. ಆಗ ತೇವಾಂಶವಿರುವ ಮಣ್ಣು ವಿದ್ಯುತ್ನ್ನು ಸುಲಭವಾಗಿ ಹರಿಯಲು ಬಿಡುತ್ತದೆ. ಆದರೆ ಒಣಗಿದ ವಸ್ತುಗಳು ಅಥವಾ ಕಲ್ಲಿನ ರಚನೆಗಳು ವಿದ್ಯುತ್ ಅನ್ನು ತಡೆಯುತ್ತವೆ. ಆಗ ವಿದ್ಯುತ್ ಎಷ್ಟು ಸುಲಭವಾಗಿ ಹರಿಯುತ್ತದೆ. ಎಂಬುದನ್ನು ಅಳೆಯುವ ಮೂಲಕ ನೆಲೆದಾಡಿಯಲ್ಲಿ ಏನಿದೆ ಎಂಬುದನ್ನು ಊಹಿಸಬಹುದು. ಕಾಂತಿಯ ಸರ್ವೇಕ್ಷಣೆಗೆ ಹೋಲಿಕೆ ಮಾಡಿದರೆ ವಿದ್ಯುತ್ ಪ್ರತಿರೋಧ ಸರ್ವೇಕ್ಷಣ ವಿಧಾನದಿಂದ ಹೆಚ್ಚಿನ ಲಾಭಗಳಿವೆ. ಈ ವಿಧಾನ ತೀರಾ ಸರಳ ಮತ್ತು ಕಡಿಮೆ ವೆಚ್ಚದಾಯಕವಾದುದು ಆಗಿದೆ. ಉಪಕರಣಗಳು ಸುಲಭವಾಗಿ ದೊರೆಯುವುದರಿಂದ ಸರ್ವೇಕ್ಷಣ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ. ಮಳೆ, ಭೂಗರ್ಭ, ಸಸ್ಯ, ಇವುಗಳ ಪ್ರಭಾವವು ವಿದ್ಯುತ್ ಪ್ರತಿರೋಧ ಸರ್ವೇಕ್ಷಣದಲ್ಲಿ ಕಂಡುಬರುತ್ತದೆ. ಒಂದು ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದರೆ ನೆಲದ ಮಣ್ಣು ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಆಗ ವಿದ್ಯುತ್ ವಾಹಕವು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿರಬಹುದು. ಇದರಿಂದ ಭೂಮಿಯ ಒಳಗಡೆ ಹುದುಗಿರುವ ಅವಶೇಷಗಳ ಪ್ರತಿರೋಧ ಪ್ರಮಾಣವ ಅರಿವಿಗೆ ಬಾರದೆ ಇರಬಹುದು. ಒಂದು ವೇಳೆ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಬೆಳೆದಿದ್ದರೆ ಅಥವಾ ಹುಲ್ಲು ಬೆಳೆಯದಪ್ರದೇಶವಿದ್ದರೂ ಸಹ ವಿದ್ಯುತ್ ಪ್ರವಾಹದ ಪ್ರತಿರೋಧದ ಸರ್ವೇಕ್ಷಣೆಗೆ ತೊಂದರೆಯಾಗುತ್ತದೆ.
ಪುರಾತತ್ವ ಸ್ಥಳಗಳ ಸರ್ವೇಕ್ಷಣ ಕಾರ್ಯದಲ್ಲಿ ವಿದ್ಯುತ್ ಪ್ರತಿರೋಧ ವಿಧಾನವನ್ನು 1947ರಲ್ಲಿ ಆರ್.ಜೆ.ಸಿ ಆಕ್ಟ್ ಕಿನ್ಸನ್ ಎಂಬಾತನು ಮೊದಲು ಬಳಸಿದನು. ಇದರ ಆಧಾರದಿಂದ ರೋಮನ್ ಕಾಲದ ಬಳಪದ ಕಲ್ಲಿನಿಂದ ನಿರ್ಮಿಸಿದ ರಸ್ತೆ ಹಾಗೂ ಡಾರ್ಟೆಸ್ಟರ್ ಎಂಬಲ್ಲಿ ಹೊಸ ಶಿಲಾಯುಗದ ಕಂದಕವನ್ನು ಪತ್ತೆ ಮಾಡಲಾಯಿತು. ಭಾರತದಲ್ಲಿ ಈ ವಿಧಾನದ ಬಳಕೆ ಬಹಳ ಕಡಿಮೆ ಎಂದೇ ಹೇಳಬೇಕು. ಮಹಾರಾಷ್ಟ್ರದ ನಯಾಕುಂಡ ಎಂಬಲ್ಲಿ ಕಬ್ಬಿಣದ ಕುಲುಮೆಯನ್ನು ಕಂಡುಹಿಡಿಯಲಾಯಿತು. ಇದು ಕ್ರಿ.ಪೂ 700 ವರ್ಷಗಳ ಹಿಂದಿನದು ಎಂದು ವಿದ್ಯುತ್ ಪ್ರವಾಹ ಸರ್ವೇಕ್ಷಣದಿಂದ ಗುರುತಿಸಲಾಯಿತು.
3. ವಿದ್ಯುತ್ ಕಾಂತೀಯ ಸರ್ವೇಕ್ಷಣೆ: ಇದು ಸಹ ಪುರಾತತ್ವ ಅನ್ವೇಷಣೆಯಲ್ಲಿ ಬಳಸಲಾಗುವ ಮತ್ತೊಂದು ಅತ್ಯಾಧುನಿಕ ವೈಜ್ಞಾನಿಕ ವಿಧಾನವಾಗಿದೆ. ಇದು ಕಾಂತೀಯ ಸಮೀಕ್ಷೆ ಹಾಗೂ ವಿದ್ಯುತ್ ಪ್ರತಿರೋಧ ಸಮೀಕ್ಷೆ ಎರಡರ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದರ ಪ್ರಮುಖ ಅಂಶಗಳೆಂದರೆ ನೆಲದ ಮೇಲೆ ಒಂದು ಉಪಕರಣದ ಮೂಲಕ ವಿದ್ಯುತ್ ಕಾಂತೀಯ ಅಲೆಗಳನ್ನು ಭೂಮಿಯೊಳಗೆ ಕಳಿಸಲಾಗುತ್ತದೆ. ಈ ಅಲೆಗಳು ನೆಲದಡಿಯಲ್ಲಿರುವ ಲೋಹದ ವಸ್ತುಗಳು ಅಥವಾ ತೇವಾಂಶವಿರುವ ಮಣ್ಣನ್ನು ತಾಗಿದಾಗ ಅಲ್ಲಿ ಒಂದು ಚಿಕ್ಕ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿ ದ್ವಿತೀಯ ಕಾಂತಿಯ ಕ್ಷೇತ್ರ ಸೃಷ್ಠಿಯಾಗುತ್ತದೆ. ಈ ಉಪಕರಣವು ದ್ವಿತೀಯ ಕ್ಷೇತ್ರವನ್ನು ಅಳೆದು ನೆಲದ ಅಡಿಯಲ್ಲಿರುವ ವಾಹಕದ ಕಾಂತೀಯತೆಯನ್ನು ಗುರುತಿಸುತ್ತದೆ.
ಈ ಉಪಕರಣದಿಂದ ನೆಲದಲ್ಲಿ ಹೂತು ಹೋಗಿದ್ದ ಪ್ರಾಚೀನ ನಾಣ್ಯಗಳು, ಆಯುಧಗಳು ಅಥವಾ ಲೋಹದ ಪಾತ್ರೆಗಳನ್ನು ಪತ್ತೆ ಮಾಡಬಹುದು. ಇದು ಅಲ್ಲದೆ ಮಣ್ಣಿನ ಪದರಿನಲ್ಲಿನ ವ್ಯತ್ಯಾಸಗಳು ಹೂತು ಹೋದ ಗೋಡೆಗಳು, ಕಾಲುವೆಗಳನ್ನು ಗುರುತಿಸಲು ಈ ಉಪಕರಣವೂ ಸಹಾಯಕವಾಗುತ್ತದೆ. ಇದು ಸಂಪರ್ಕ ರಹಿತ ವಿಧಾನವಾಗಿದ್ದು ಇದರಿಂದ ನೆಲಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಲಾರದು. ಇದರಿಂದ ಭೂಮಿಯ ಸ್ವರೂಪ, ತೇವಾಂಶ, ಹೂತುಹೋದ ಮಾನವ ನಿರ್ಮಿತ ವಸ್ತುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
4. ಶಬ್ದದ ಆಧಾರದ ಸರ್ವೇಕ್ಷಣೆ: ನೆಲದ ಮೇಲ್ಮೈಯನ್ನು ಗುದ್ದಿ ಅದರಿಂದ ಬರುವ ಶಬ್ದದ ಆಧಾರದ ಮೇಲೆ ಸರ್ವೇಕ್ಷಣ ಮಾಡುವುದನ್ನು ಶಬ್ದದ ಆಧಾರದ ಸರ್ವೇಕ್ಷಣ ಎಂದು ಕರೆಯುತ್ತಾರೆ. ನೆಲದ ಮೇಲೆ ಗುದ್ದಿದಾಗ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೀತಿಯ ಶಬ್ದಗಳು ಬರುವುದನ್ನು ಗಮನಿಸಬಹುದು. ಗಟ್ಟಿಯಾದ ಮಣ್ಣು ಇರುವ ಸ್ಥಳದಲ್ಲಿ ಬರುವ ಶಬ್ದವು ಟೊಳ್ಳಾದ ಮಣ್ಣು ಇರುವ ಶಬ್ದದ ಪ್ರದೇಶವನ್ನು ಗುದ್ದಿದಾಗ ಬರುವ ಶಬ್ದಕ್ಕಿಂತ ಬೇರೆಯಾಗಿರುತ್ತದೆ. ಈ ವಿಧಾನವನ್ನು ಅನುಸರಿಸಿ ಸರ್ವೇಕ್ಷಣಾಕಾರನು ಭೂಮಿಯಲ್ಲಿ ಹುದುಗಿರುವ ಪುರಾತತ್ವ ವಸ್ತುಗಳ ಸ್ವರೂಪವನ್ನು ಅರಿತುಕೊಳ್ಳುವನು.
5. ಮಣ್ಣಿನ ರಸಾಯನಿಕ ಪರೀಕ್ಷೆ: ಗತಕಾಲದ ವಸತಿ ನಿವೇಶನಗಳಲ್ಲಿನ ಮಣ್ಣಿನಲ್ಲಿ ಫಾಸ್ಪೇಟ್ ಹಾಗೂ ಸಾವಯವ ಪದಾರ್ಥಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಕಾರಣದಿಂದಾಗಿ ಕೆಲವು ಭಾಗಗಳಲ್ಲಿ ಪ್ರಾಚೀನ ನಿವೇಶನದ ಹಾಳು ಮಣ್ಣು ಕೂಡ ನೈಸರ್ಗಿಕ ಗೊಬ್ಬರವಾಗಿ ಉಪಯೋಗಕ್ಕೆ ಬರುತ್ತದೆ. ರಾಸಾಯನಿಕ ಪರೀಕ್ಷೆಯ ಮುಖಾಂತರ ನಿವೇಶನದ ಹಾಳು ಮಣ್ಣನ್ನು ಪರೀಕ್ಷಿಸಿ ಅದರಲ್ಲಿನ ಫಾಸ್ಪೈಟಿನ ಅಂಶವನ್ನು ಕಂಡುಕೊಳ್ಳಬಹುದು. ಈ ವಿಧಾನದ ಮೂಲಕ ಡೆನ್ಮಾಕ್, ಇಟಲಿ ಹಾಗೂ ಇಂಗ್ಲೆಂಡ್ಗಳಲ್ಲಿ ಪ್ರಾಚೀನ ನೆಲೆಗಳನ್ನು ಪತ್ತೆಹಚ್ಚಲಾಗಿದೆ. ಇದೇ ವಿಧಾನದ ಆಧಾರದ ಮೇಲೆ ಡೆನ್ಮಾರ್ಕಿನ ಕೋಪನ್ ಹೇಗನ್ ಹತ್ತಿರದ ಸ್ಟಾಕ್ಪ್ ಎಂಬ ಹಳೆಯ ಸ್ಥಳವನ್ನು ಶೋಧ ಮಾಡಲಾಗಿದೆ. ಅದರ ಸುತ್ತಮುತ್ತ ಸುಮಾರು 80 ಹೆಕ್ಟರ್ ಪ್ರದೇಶದಲ್ಲಿ 250 ಭಾಗಗಳಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಅವುಗಳ ರಸಾಯನಿಕ ವಿಶ್ಲೇಷಣೆ ಮಾಡಲಾಯಿತು. ಗುಜರಾತದ ಕಚ್ನ ನಾಗೇಶ್ವರದ ಶೋಧದಲ್ಲಿ ಇದೇ ಮಾದರಿಯನ್ನು ಬಳಸಲಾಯಿತು. ಈ ಪ್ರದೇಶದಲ್ಲಿ ಸಿಕ್ಕ ಅವಶೇಷಗಳ ಆಧಾರದ ಮೇಲೆ ಅಲ್ಲಿ ʻʻಚಿಪ್ಪಿನ ಉದ್ಯಮಗಳು ಇದ್ದ ಬಗ್ಗೆ ಮಾಹಿತಿ ದೊರಕಿತು.
6. ವೈಮಾನಿಕ ಸಮೀಕ್ಷೆ: ವೈಮಾನಿಕ ಹಾಗೂ ದೂರ ಸಂವೇದಿ ಸಮೀಕ್ಷೆಗಳು ಪುರಾತತ್ವ ಸ್ಥಳಗಳ ಗುರುತಿಸುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ರೆನ್ಫ್ರೂ ಮತ್ತು ಬಾನ್ 200 ಎಂಬ ವೈಮಾನಿಕ ಸಮೀಕ್ಷೆಯಿಂದ ಗತಇತಿಹಾಸದ ಅವಶೇಷಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ದಾಖಲಿಸಬಹುದು. ಇಂಗ್ಲೆಂಡಿನಲ್ಲಿ OGS ಕ್ರಾಪರ್ಡ್, ಸಿರಿಯಾದಲ್ಲಿ ಫಾದರ್ ಅಂಟೋನಿಯನ್ ಪೊಯ್ಡೆಬಾರ್ಡ್, ಇರಾನಿನಲ್ಲಿ ಎರಿಚ್ ಸ್ಮಿತ್ರವರ ಕಾರ್ಯಗಳು ಈ ಹೊಸ ಕ್ಷೇತ್ರಕ್ಕೆ ಆರಂಭ ಒದಗಿಸಿದವು. ಇತ್ತೀಚಿಗೆ ಡ್ರೋನ್ ತಂತ್ರಜ್ಞಾನವು ಪುರಾತತ್ವಶಾಸ್ತ್ರದ ಸ್ಥಳಗಳನ್ನು ವಿವಿಧ ಕೋನಗಳಲ್ಲಿ ದಾಖಲಿಸುತ್ತದೆ. ಜೊತೆಗೆ ಉತ್ತಮ ತಿಳುವಳಿಕೆ ಮತ್ತು ಸಂಶೋಧನೆಗಾಗಿ ಸಂಬಂಧಪಟ್ಟ ಭೂ ಪ್ರದೇಶದ ವಿಡಿಯೋವನ್ನು ಸಹ ಚಿತ್ರೀಕರಿಸಬಹುದು.
7. ಓರೆಯಾದ ಛಾಯಾಗ್ರಹಣ: ಮೇಲ್ಮೈಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಕೋನದಲ್ಲಿ ಅಳವಡಿಸಲಾದ ಕ್ಯಾಮರಾವನ್ನು ಬಳಸಿ ತೆಗೆಯುವ ವೈಮಾನಿಕ ಮಾಧ್ಯಮದಿಂದ ತೆಗೆಯುವ ಚಿತ್ರವಿದು. ಇದು ಕೋಟೆಗೋಡೆಗಳು ಬೀದಿಗಳು, ದ್ವಾರಗಳು, ಹಳ್ಳಗಳು, ಜಲಾಶಯಗಳು, ಸರೋವರಗಳು ಮುಂತಾದವುಗಳ ಛಾಯಾಚಿತ್ರಗಳನ್ನು ತೆಗೆದು ಭೂಮಿಯಲ್ಲಿರುವ ಘಟಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.
8. ಲಂಬ ಛಾಯಾಗ್ರಹಣ: ಮೇಲ್ಮೈಗೆ ಲಂಬವಾಗಿ ಅಳವಡಿಸಲಾದ ಕ್ಯಾಮೆರಾಗಳನ್ನು ಹೊಂದಿರುವ ವಿಮಾನಗಳಿಂದ ಲಂಬ ಛಾಯಾಗ್ರಹಣವನ್ನು ತೆಗೆದುಕೊಳ್ಳಲಾಗುವುದು. ಇದು ಸಮಾಧಿ ಅವಶೇಷಗಳ ಶೋಧ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತದೆ.
9. ವೈಮಾನಿಕ ಛಾಯಾಗ್ರಹಣ: ತುಗಲಕ್ಬಾದಿನ ವಾಡಿಂಗ್ಟನ್ (1946ರಲ್ಲಿ), ಶಿಶು ಪಾಲ್ಗಡಲಾಲ್ (1949ರಲ್ಲಿ), ಸ್ಥಳಗಳಿಂದ ಪಡೆದ ವೈಮಾನಿಕ ಛಾಯಾಚಿತ್ರಗಳು ಪುರಾತತ್ವ ಸ್ಥಳಗಳನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಶಿಶುಪಾಲ್ಗಡ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಕ್ಕೂ ಇತ್ತೀಚಿನ ಗೂಗಲ್ ಅರ್ಥ ತೆಗೆದ ಚಿತ್ರಗಳ ನಡುವೆ ಹೋಲಿಕೆ ಮಾಡಿದಾಗ ಗಮನಾರ್ಹವಾದ ಬದಲಾವಣೆಗಳು ಕಂಡುಬಂದಿವೆ. 1948ರಲ್ಲಿ ತೆಗೆದ ವೈಮಾನಿಕ ಚಿತ್ರವು ಕೋಟೆಯ ಒಳಗೆ ಮತ್ತು ಸುತ್ತಲೂ ಸಾಕಷ್ಟು ಖಾಲಿ ಜಾಗಗಳನ್ನು ತೋರಿಸುತ್ತದೆ. ಆದರೆ ಗೂಗಲ್ ಅರ್ಥ ಚಿತ್ರವು ಸ್ಥಳಕ್ಕೆ ಬಹಳ ಹತ್ತಿರವಿರುವ ಪ್ರದೇಶಗಳ ಬಹಳ ವ್ಯಾಪಕ ಅಭಿವೃದ್ಧಿ ಹಾಗೂ ಅತಿಕ್ರಮಣವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಈ ಎರಡು ಚಿತ್ರಗಳಲ್ಲಿನ ಕುತೂಹಲಕಾರಿಯಾದ ಅಂಶವೆಂದರೆ ಕೋಟೆಯ ನಾಲ್ಕು ಮೂಲೆಗಳಲ್ಲಿ ಜಲಮೂಲಗಳು ಹಾಗೂ ಕೋಟೆಯ ವಾಯುವ್ಯಕ್ಕೆ ಮತ್ತೊಂದು ಜಲ ಮೂಲ ಪತ್ತೆಯಾದುದು. ಇತ್ತೀಚಿಗೆ ಗೂಗಲ್ ಅರ್ಥ ಪುರಾತತ್ವ ಸ್ಥಳಗಳ ಸಂಶೋಧನೆಗೆ ಬಹಳ ಉಪಯುಕ್ತ ಸಾಧನವಾಗಿದೆ. 2013ರಲ್ಲಿ ಕಠಾರಿಯಾ ಅವರ ಸಂಗಡಿಗರು ತಲ್ಪಡ ಸ್ಥಳದಲ್ಲಿ ಶೋಧ ಕಾರ್ಯ ಮಾಡಲು ಗೂಗಲ್ ಅರ್ಥ್ ಬಳಸಿದರು
10. ಪುರಾತತ್ವ ಸರ್ವೇಕ್ಷಣೆಯಲ್ಲಿ ರಡಾರ್: ಇದು ಬೆಳಕಿನ ಪತ್ತೆ ಮಾಡುವ ಆಧುನಿಕ ತಂತ್ರಜ್ಞಾನ. ಪುರಾತತ್ವ ಶಾಸ್ತ್ರದ ಪರಿಶೋಧನೆ ಮತ್ತು ತನಿಖೆಗಳ ಕ್ಷೇತ್ರದಲ್ಲಿ ಉಪಯೋಗ ಇತ್ತೀಚಿಗೆ ಜಗತ್ತಿನಾದ್ಯಂತ ಹೆಚ್ಚಾಗಿದೆ. ಅಂಕೋರ್ವಾಟ್, ಮಾಯಾನ್ ಸ್ಟೇಟ್ ಆಫ್ ಕ್ಯಾರಕೋಲ್, ಬೇಲಿಜ್ದ ಯಶಸ್ವಿ ಛಾಯಾಗ್ರಹಣದ ಆಧಾರದ ಮೇಲೆ ಲಿಡಾರ್ನ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿಯೂ ಪುರಾತತ್ವ ನೆಲೆಗಳನ್ನು ಪತ್ತೆಹಚ್ಚಲು ಇದು ಸಹಕಾರಿಯಾಯಿತು.
11. NIR: ನಿಯರ್-ಇನ್ಫ್ರಾರೆಡ್ (NIR) ಛಾಯಾಗ್ರಹಣವು, ಐತಿಹಾಸಿಕವಾಗಿ ಸಾಂಪ್ರದಾಯಿಕ ಫಿಲ್ಮ್-ಆಧಾರಿತ ವೈಮಾನಿಕ ಸಮೀಕ್ಷೆಯ (aerial reconnaissance) ಮೂಲಕ ಬಳಸಲ್ಪಟ್ಟಿದೆ. ಇದು ಮಣ್ಣಿನ ಒಂದು ಕಣವನ್ನೂ ಕದಲಿಸದೆ ಭೂಮಿಯ ಮೇಲ್ಮೈಯ ಕೆಳಗೆ ಇಣುಕಿ ನೋಡಲು ಸಹಾಯ ಮಾಡುವ ಪ್ರಬಲ ಸಾಧನವಾಗಿದೆ. ಗೋಚರ ಬೆಳಕನ್ನು ಸೆರೆಹಿಡಿಯುವ ಸಾಮಾನ್ಯ ಛಾಯಾಗ್ರಹಣದಂತಲ್ಲದೆ, NIR ಫಿಲ್ಮ್ ಮಾನವನ ದೃಷ್ಟಿಗಿಂತ ಮೀರಿದ ತರಂಗಾಂತರಗಳನ್ನು (wave lengths) ದಾಖಲಿಸುತ್ತದೆ, ಇದು ಸಸ್ಯಗಳ ಆರೋಗ್ಯ ಮತ್ತು ಮಣ್ಣಿನ ತೇವಾಂಶದಲ್ಲಿನ ವ್ಯತ್ಯಾಸಗಳನ್ನು ಅಳೆಯಲು ಅಸಾಧಾರಣವಾಗಿ ಸೂಕ್ಷ್ಮವಾಗಿರುತ್ತದೆ. ಕಲ್ಲಿನ ಗೋಡೆಗಳು, ಅಡಿಪಾಯಗಳು ಅಥವಾ ಮುಚ್ಚಿಹೋದ ಕಂದಕಗಳಂತಹ ಪ್ರಾಚೀನ ರಚನೆಗಳು ಹೊಲದ ಅಡಿಯಲ್ಲಿ ಹೂತುಹೋದಾಗ, ಅವು ತಮ್ಮ ಮೇಲಿರುವ ಮಣ್ಣಿನ ಒಳಚರಂಡಿ ಮತ್ತು ಪೋಷಕಾಂಶಗಳ ಮಟ್ಟವನ್ನು ಬದಲಾಯಿಸುತ್ತವೆ. ಇದು ಮೇಲಿರುವ ಸಸ್ಯವರ್ಗವು ಸ್ವಲ್ಪ ವಿಭಿನ್ನವಾಗಿ ಬೆಳೆಯುವಂತೆ ಮಾಡುತ್ತದೆ, ಇದನ್ನು ಪುರಾತತ್ತ್ವಜ್ಞರು “ಬೆಳೆಯ ಗುರುತುಗಳು (crop marks)” ಎಂದು ಕರೆಯುತ್ತಾರೆ. ಈ ಸಣ್ಣ ವ್ಯತ್ಯಾಸಗಳು ಸಾಮಾನ್ಯವಾಗಿ ಬರಿಗಣ್ಣಿಗೆ ಅದೃಶ್ಯವಾಗಿದ್ದರೂ, NIR ಛಾಯಾಗ್ರಹಣವು ಕ್ಲೋರೊಫಿಲ್ ಮತ್ತು ತೇವಾಂಶದ ವಿವಿಧ ಹಂತಗಳನ್ನು ಸ್ಪಷ್ಟವಾದ ವ್ಯತಿರಿಕ್ತತೆಯಲ್ಲಿ (stark contrast) ಸೆರೆಹಿಡಿಯುತ್ತದೆ. ಇದರಿಂದ ಸಂಶೋಧಕರು ಆಕಾಶದಿಂದಲೇ ಗುಪ್ತ ವಸಾಹತುಗಳು ಮತ್ತು ಮರೆತುಹೋದ ಮಣ್ಣಿನ ರಚನೆಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗುತ್ತದೆ.
ಈ ನಿರ್ದಿಷ್ಟ ವೈಮಾನಿಕ ತಂತ್ರವು ಭಾರತೀಯ ಉಪಖಂಡದ ಕಳೆದುಹೋದ ಭೌಗೋಳಿಕತೆಯನ್ನು, ಅದರಲ್ಲೂ ಮುಖ್ಯವಾಗಿ ಸರಸ್ವತಿ ನದಿಯ ಪ್ರಾಚೀನ, ಒಣಗಿಹೋದ ಕಾಲುವೆಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭೌಗೋಳಿಕವಾಗಿ ಘಗ್ಗರ್-ಹಕ್ರಾ ಪೇಲಿಯೊಚಾನಲ್ ವ್ಯವಸ್ಥೆ (Ghaggar-Hakra paleochannel system) ಎಂದು ಕರೆಯಲ್ಪಡುವ ಈ ಬೃಹತ್ ಜಲಮಾರ್ಗವು, ಒಂದು ಕಾಲದಲ್ಲಿ ಇಂದಿನ ಹರಿಯಾಣ, ರಾಜಸ್ಥಾನ ಮತ್ತು ಪಾಕಿಸ್ತಾನದ ಚೋಲಿಸ್ತಾನ್ ಮರುಭೂಮಿಯಾದ್ಯಂತ ಹರಪ್ಪನ್ (ಸಿಂಧೂ ಕಣಿವೆ ನಾಗರಿಕತೆ) ವಸಾಹತುಗಳ ದಟ್ಟವಾದ ಜಾಲವನ್ನು ಪೋಷಿಸುತ್ತಿತ್ತು. ಸಾವಿರಾರು ವರ್ಷಗಳ ಅವಧಿಯಲ್ಲಿ, ಭೂಕಂಪನದ (tectonic) ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಗಳಿಂದಾಗಿ ನದಿ ಬತ್ತಿಹೋಯಿತು ಹಾಗೂ ಅದರ ಹರಿವಿನ ಹಾದಿಯು ಮರಳು ಮತ್ತು ಹೂಳಿನ ದಪ್ಪ ಪದರಗಳ ಅಡಿಯಲ್ಲಿ ಹೂತುಹೋಯಿತು. ಆದಾಗ್ಯೂ, ಈ ಪ್ರಾಚೀನ ನದಿಪಾತ್ರಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಹೋಲಿಸಿದರೆ ಇನ್ನೂ ಆಳವಾದ ಅಂತರ್ಜಲದ ತೇವಾಂಶವನ್ನು ಉಳಿಸಿಕೊಂಡಿವೆ. ಇದು ಮೇಲ್ಮೈ ಸಸ್ಯವರ್ಗದ ಆರೋಗ್ಯದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ. ವೈಮಾನಿಕ ಸಮೀಕ್ಷೆ ಮತ್ತು NIR ಇಮೇಜಿಂಗ್ ಅನ್ನು ಬಳಸುವ ಮೂಲಕ, ಸಂಶೋಧಕರು ತೇವಾಂಶದ ಈ ಉದ್ದನೆಯ, ಅಂಕುಡೊಂಕಾದ ಮಾರ್ಗಗಳನ್ನು ಪತ್ತೆಹಚ್ಚಬಹುದು. ಇದು ಸರಸ್ವತಿ ನದಿಯ ಅದೃಶ್ಯ ಹಾದಿಯನ್ನು ಪರಿಣಾಮಕಾರಿಯಾಗಿ ಮ್ಯಾಪ್ ಮಾಡುತ್ತದೆ ಮತ್ತು ನಶಿಸಿಹೋದ ಅದರ ದಡದಲ್ಲಿ ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಪ್ರಾಚೀನ ವ್ಯಾಪಾರ ಕೇಂದ್ರಗಳು ಮತ್ತು ನಗರಗಳತ್ತ ಪುರಾತತ್ತ್ವಜ್ಞರಿಗೆ ನೇರವಾಗಿ ಮಾರ್ಗದರ್ಶನ ನೀಡುತ್ತದೆ.
ಪುರಾತತ್ವ ಅವಶೇಷಗಳನ್ನು ಪತ್ತೆಹಚ್ಚಲು ವಿವಿಧ ವೈಜ್ಞಾನಿಕ ಪರಿಕರಗಳನ್ನು ಬಳಸಲಾಗುತ್ತಿದ್ದು ಅದರಿಂದ ಭೂಮಿಯ ಮೇಲಿನ ಮಣ್ಣಿನ ಗುರುತುಗಳು ಹಾಗೂ ನೆರಳಿನ ಗುರುತುಗಳು ಮತ್ತು ಬೆಳೆಯ ಗುರುತುಗಳನ್ನು ಕಂಡುಹಿಡಿಯಬಹುದಾಗಿದೆ. ನೆಲದಲ್ಲಿ ಹೂತು ಹೋಗಿರುವ ಕಂದಕ, ಗೋಡೆ, ಬೀದಿ ಮುಂತಾದವುಗಳನ್ನು ಮತ್ತು ಅವುಗಳಲ್ಲಿನ ಮಣ್ಣಿನ ರೂಪವನ್ನು ಪತ್ತೆ ಮಾಡಬಹುದಾಗಿದೆ. ಕಂದಕದ ಮಣ್ಣು ಸಡಿಲವಾದ ಕಾರಣ ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಂಡು ದಟ್ಟವರ್ಣದ್ದಾಗಿರುತ್ತದೆ. ಹಾಗೆಯೇ ಕಟ್ಟಡ, ಗೋಡೆ ಹಾಗೂ ಬೀದಿಗಳಲ್ಲಿ ಮಣ್ಣು ದೃಢವಾದ ಕಾರಣ ಅಲ್ಲಿ ತೇವಾಂಶ ಕಡಿಮೆ ಇದ್ದು ಅದು ತಿಳಿವರ್ಣದ್ದಾಗಿ ಕಾಣುತ್ತದೆ. ಇಂತಹ ವ್ಯತ್ಯಾಸಗಳನ್ನು ಮಣ್ಣಿನ ಗುರುತುಗಳು ಎಂದು ಕರೆಯುತ್ತಾರೆ.
ಉಪಸಂಹಾರ : ಹೀಗೆ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಐತಿಹಾಸಿಕ ಸ್ಥಳಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಭೂಮಿಯ ಒಳಗೆ ಹುದುಗಿರುವ ಪ್ರಾಚ್ಯ ಅವಶೇಷಗಳನ್ನು ಸಹ ಪತ್ತೆ ಹಚ್ಚಲು ಮತ್ತು ಡಿಜಿಟಲ್ ರೂಪದಲ್ಲಿ ದಾಖಲಿಸಲು ಆಧುನಿಕ ಉಪಕರಣಗಳಿದ್ದು ಗತ ಇತಿಹಾಸವನ್ನು ಅನಾವರಣಗೊಳಿಸುವ ಕುತೂಹಲ ಹೆಚ್ಚಾಗುತ್ತಲೇ ಇದೆ.