ಶಿಲಾಯುಗದ ಮಾನವನ ಸಂಸ್ಕೃತಿಯ ಪುನರಚನೆಗೆ ಆಕರಗಳಾಗಿರುವ ಮೂಲ ಸಾಮಗ್ರಿಗಳನ್ನು ಸಮಗ್ರವಾಗಿ ಹಿಡಿದಿಟ್ಟುಕೊಳ್ಳುವುದು ಪುರಾತತ್ವ ಉತ್ಖನನದ ಬಹುಮುಖ್ಯವಾದ ಗುರಿಯಾಗಿದೆ. ಒಂದು ಪ್ರದೇಶದಲ್ಲಿ ಉತ್ಖನನ ಮಾಡಿದಾಗ ಆ ಪ್ರದೇಶದಲ್ಲಿ ಹೂತು ಹೋಗಿರುವ ಸಾಂದರ್ಭಿಕ ಪುರಾವೆಗಳು ನಾಶವಾಗುತ್ತವೆ. ಹಾಗಾಗಿ ಉತ್ಖನನದ ಕೊನೆಯಲ್ಲಿ ಟಿಪ್ಪಣಿಗಳು, ಚಿತ್ರಗಳು, ಛಾಯಾಚಿತ್ರಗಳು ಹಾಗೂ ಪ್ರಾಚ್ಯವಸ್ತುಗಳು ಮೊದಲಾದ ದಾಖಲೆಗಳು ಮಾತ್ರ ಉಳಿದುಕೊಳ್ಳುತ್ತವೆ. ಈ ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ಕಳೆದು ಹೋದರೆ ಅದು ಎಂದೆಂದಿಗೂ ಮರಳಿ ದೊರಕುವುದಿಲ್ಲ. ಉತ್ಖನನವು ಎಷ್ಟೇ ಪ್ರಾಮಾಣಿಕವಾಗಿ ನಡೆದರೂ ಅದರಿಂದ ದೊರಕಿದ ದಾಖಲೆಗಳು ಸಂಪೂರ್ಣವಾಗಿ ಸಂರಕ್ಷಣೆ ಆಗದೆ ಹೋದರೆ ಅಥವಾ ಬರವಣಿಗೆಯ ರೂಪದಲ್ಲಿ ಪ್ರಕಟವಾಗದೆ ಉಳಿದರೆ ಅದರಿಂದ ಕೇವಲ ಹಣ ಮತ್ತು ಕಾಲದ ಅಪವ್ಯಯವಾದಂತೆ ಸರಿ. ಈ ಕಾರಣದಿಂದ ಉತ್ಖನನದಿಂದ ರಕ್ಷಿಸಲ್ಪಡುವ ದಾಖಲೆಗಳೇ ಉತ್ಖನನಕಾರನಿಗೆ ನಿಜವಾದ ಅಳತೆಗೋಲಾಗಿದೆ.
ಉತ್ಖನನ ಪ್ರದೇಶದ ಸರಿಯಾದ ಜಾಗವನ್ನು ಗುರುತಿಸುವ ನಕ್ಷೆ, ಸ್ಥಳದ ಮೇಲ್ಮೈಯ ಏರುತಗ್ಗುಗಳಿರುವ ಪ್ರದೇಶದ ನಕ್ಷೆ, ಉತ್ಖನನದ ಗುಂಡಿಯನ್ನು ಸರಿಯಾಗಿ ಸೂಚಿಸುವ ನಕ್ಷೆ, ಸ್ಥಳದ ಕಾಲಾನುಕ್ರಮವನ್ನು ಸೂಚಿಸುವ ಲಂಬ ಛೇದದ ಚಿತ್ರಗಳು, ಪ್ರಾಚ್ಯವಸ್ತುಗಳ ಛಾಯಾಚಿತ್ರಗಳು, ಮೊದಲಾದ ದಾಖಲೆಗಳನ್ನು ಇಡುವುದರ ಜೊತೆಗೆ ದಿನನಿತ್ಯದ ಉತ್ಖನನದ ಪ್ರಗತಿಯನ್ನು ಸೂಚಿಸುವ ಟಿಪ್ಪಣಿ ಪುಸ್ತಕಗಳು, ಪ್ರಾಚ್ಯ ವಸ್ತುಗಳ ನೋಂದಣಿ ಬುಕ್ಕುಗಳು ಮೊದಲಾದ ಲಿಖಿತ ದಾಖಲೆಗಳನ್ನು ಸಹ ಇಡಬೇಕು. ಇದು ಉತ್ಖನನಕಾರನ ಪ್ರಮುಖ ಕರ್ತವ್ಯವಾಗಿದೆ. ಉತ್ಖನನದ ದಾಖಲೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆ ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು. ಯಾವ ದಾಖಲೆಗಳು ಬಹು ಮುಖ್ಯವಾಗಿವೆ ಎಂಬುದನ್ನು ಉತ್ಖನನದ ಮೊದಲು ವ್ಯವಸ್ಥಿತವಾಗಿ ಸಂಗ್ರಹ ಮಾಡಿಕೊಳ್ಳಬೇಕು. ದಾಖಲೆಗಳನ್ನು ಸಂಗ್ರಹಿಸುವಾಗ ಬೇರೆ ಬೇರೆ ಹಂತಗಳಲ್ಲಿ ಈ ಕೆಳಕಂಡ ದಾಖಲೆಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
- ಸರ್ವೇಕ್ಷಣೆ ದಾಖಲೆಯ ವಿಧಾನ
- ಸ್ತರವಿಂಗಡಣೆಯ ದಾಖಲೆಯ ವಿಧಾನ
- ಉತ್ಖನನದ ಪ್ರಗತಿಯನ್ನು ತೋರಿಸುವ ಟಿಪ್ಪಣಿ ಪುಸ್ತಕದ ದಾಖಲೆ
- ಆಯಾಮತ್ರಯ ಹಾಗೂ ತ್ರಿಕೋಣೀಕರಣ ವಿಧಾನ
- ಪ್ರಾಚ್ಯವಸ್ತುವನ್ನಿಡುವ ಪೆಟ್ಟಿಗೆಗಳ ದಾಖಲೆಯ ವಿಧಾನ
- ಪ್ರಾಚ್ಯ ವಸ್ತುಗಳ ನೊಂದಣಿ ದಾಖಲಾತಿ ವಿಧಾನ
- ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ
- ಛಾಯಾಚಿತ್ರ ದಾಖಲಾತಿ ವಿಧಾನ
1. ಸರ್ವೇಕ್ಷಣೆ ದಾಖಲೆಯ ವಿಧಾನ: ಸರ್ವೇಕ್ಷಣೆ ಮಾಡುವವರು ಯಾವುದಾದರೂ ಒಂದು ಪ್ರಾಚ್ಯವಸ್ತು ಸ್ಥಳವನ್ನು ಉತ್ಖನನಕ್ಕೆ ಆಯ್ಕೆ ಮಾಡಿಕೊಂಡರೆ ಆ ಸ್ಥಳವು ಎಲ್ಲಿದೆ ಎಂಬುದನ್ನು ಸೂಚಿಸುವ ನಕ್ಷೆಯನ್ನು ತಯಾರಿಸಿಕೊಳ್ಳಬೇಕು. ಹೀಗೆ ನಕ್ಷೆಯನ್ನು ತಯಾರಿಸಿದ ನಂತರ ಅದರ ಹತ್ತಿರ ಅಥವಾ ಸುತ್ತಮುತ್ತ ಯಾವುದಾದರೂ ಗ್ರಾಮ, ಪಟ್ಟಣ, ಗುಡ್ಡ, ಗಿರಿ, ಗುಹೆ, ಹಳ್ಳ, ಕೊಳ್ಳ ಹಾಗೂ ಕೆರೆ ಮುಂತಾದ ಭೂ ಲಕ್ಷಣಗಳು ಇದ್ದರೆ ಅವುಗಳನ್ನು ನಕ್ಷೆಯಲ್ಲಿ ಸ್ಪಷ್ಟವಾಗಿ ತೋರಿಸಬೇಕು. ಈ ರೀತಿಯ ನಕ್ಷೆಯನ್ನು ತಯಾರಿಸುವಲ್ಲಿ 1 ಇಂಚು = 4 ಮೈಲಿ ಸುತ್ತಳತೆಯ ಸ್ಕೇಲ್ನ ಫೋಟೋ ಶೀಟುಗಳು ಬಹಳ ಉಪಯೋಗವಾಗುತ್ತವೆ. ಉತ್ಖನನದ ಸ್ಥಳವನ್ನು ನಿಖರವಾಗಿ ಗುರುತಿಸುವುದಕ್ಕೆ ನಕ್ಷೆಯಲ್ಲಿ ರೇಖಾಂಶ ಹಾಗೂ ಅಕ್ಷಾಂಶಗಳನ್ನು ಗುರುತಿಸಬೇಕು. ಉತ್ಖನನದ ಸ್ಥಳವು ಕೋಟೆಯ ಒಳಗಡೆ ಇದ್ದರೆ ಕೋಟೆಯ ಗೋಡೆಗಳು ಹಾಗೂ ಕಂದಕಗಳು ಮುಂತಾದ ಎಲ್ಲಾ ಲಕ್ಷಣಗಳನ್ನು ಜೊತೆಗೆ ಉತ್ಖನನದ ಗುಂಡಿಗಳನ್ನು ಸಹ ನಕ್ಷೆಯಲ್ಲಿ ತೋರಿಸಬೇಕು. ಹೀಗೆ ಮಾಡುವುದರಿಂದ ಮುಂದಿನ ಉತ್ಖನನಕಾರರಿಗೆ ಹೆಚ್ಚಿನ ಅನುಕೂಲತೆಗಳಾಗುತ್ತವೆ. ನಕ್ಷೆ ತಯಾರಿಸಲು ʻʻಸಮತಲ ಮೇಜನ್ನುʼʼ ಬಳಸಬೇಕು. ಇದರೊಂದಿಗೆ ಅಳತೆಮಾಡಲು ಚೈನನ್ನು ಬಳಸುವುದು ಮತ್ತು ಲೆವೆಲಿಂಗ್ ಎಂಬ ಉಪಕರಣಗಳನ್ನು ಬಳಸಬೇಕು.
ಪುರಾತತ್ವ ನೆಲೆಗಳನ್ನು ಗುರುತಿಸಲು ಸರಳ ಸರ್ವೇಕ್ಷಣ ಸಾಕಾಗುತ್ತದೆ. ಇದಕ್ಕಿಂತ ಮೊದಲು ಒಂದು ಮೂಲ ಸೂತ್ರ ರೇಖೆಯ ಸಹಾಯದಿಂದ ಸ್ಥಳದ ಬಿಂದುವನ್ನು ಕಂಡುಹಿಡಿಯಲು ಸರ್ವೇ ಕಂಬಗಳನ್ನು ಒಂದೇ ಸಾಲಿನಲ್ಲಿ ಬರುವಂತೆ ನೆಡಬೇಕು. ನಂತರ ಸರ್ವೆ ಕಂಬಗಳನ್ನು ನೆಟ್ಟ ಸ್ಥಳದಲ್ಲಿ ಸುಮಾರು 5 x 5 ಸೆಂಟಿ ಮೀಟರ್ ಅಳತೆಯ ನೆತ್ತಿಯಲ್ಲಿ ಮೊಳೆಯನ್ನು ಹೊಡೆದ ಗೂಟವನ್ನು ನೆಡಬೇಕು. ಈಗ ಗೂಟದ ಮೇಲೆ ಸರಿಯಾದ ಮೂಲ ನೆಲೆಯ ನಿರ್ದಿಷ್ಟ ಬಿಂದುವಿನಿಂದ ಇರುವ ದೂರವನ್ನು ದಾಖಲಿಸಬೇಕು. ಅಗತ್ಯ ಬಿದ್ದರೆ ಮಧ್ಯದಲ್ಲಿ ತಾತ್ಕಾಲಿಕ ಗೂಟಗಳನ್ನು ನೆಡಬೇಕು.
ಉತ್ಖನನದ ನಂತರ ಕಂಡುಹಿಡಿದ ಕಟ್ಟಡ ಮುಂತಾದವುಗಳ ತಳವಿನ್ಯಾಸದ ಚಿತ್ರವನ್ನು ರಚಿಸಲು ಸಮತಟ್ಟಾದ ಮೇಜು ಹಾಗೂ ಅಲಿಡೇಡ್ ಎಂಬ ಉಪಕರಣಗಳು ಬೇಕು. ಸಮತಟ್ಟಾದ ಮೇಜಿನ ಮೇಲೆ ಕೂಡಿಸಿದ ಡ್ರಾಯಿಂಗ್ ಫಲಕವನ್ನು ನೆಲೆಯಲ್ಲಿ ಮೂಲ ಸೂತ್ರ ರೇಖೆಯಲ್ಲಿಯ ನಿರ್ದಿಷ್ಟ ಮೂಲ ಬಿಂದುವನ್ನು ಸೂಚಿಸುವ ಗೂಟದ ಮೇಲೆ ಬರುವಂತೆ ಇಡಬೇಕು. ನಂತರ ಡ್ರಾಯಿಂಗ್ ಫಲಕಕ್ಕೆ ಡ್ರಾಯಿಂಗ್ ಹಾಳೆಯನ್ನು ಹಚ್ಚಿ ಮೂಲಗೂಟ ಇರುವ ಸ್ಥಳವನ್ನು ನಿಖರವಾಗಿ ಗುರುತಿಸಲಾಗುತ್ತದೆ. ನಂತರ ಅಲಿಡೇಡನ್ನು ಉಪಯೋಗಿಸಿ ಆ ಬಿಂದುವಿನಿಂದ ಸೂತ್ರ ರೇಖೆಗೆ ಸರಿಹೊಂದುವ ಹಾಗೆ ಸರಳ ರೇಖೆಯನ್ನು ಎಳೆಯಬೇಕು. ಈಗ ಸಮತಲ ಮೇಜನ್ನು ಕದಲಿಸದೆ ನೆಲೆಯಲ್ಲಿಯೇ ಯಾವ ಬಿಂದುವನ್ನು ಹಾಳೆಯ ಮೇಲೆ ಗುರುತಿಸಲಾಗಿದೆಯೋ ಆ ಬಿಂದು ಅಲಿಡೇಡದ ಅಂಚು ಹಾಗೂ ಮೂಲಬಿಂದು ಇವು ಸರಳ ರೇಖೆಯಲ್ಲಿ ಬರುವಂತೆ ಮಾಡಲಾಗುತ್ತದೆ.
ಪ್ಲೇನ್ ಟೇಬಲ್ ಸರ್ವೇ ವಿಧಾನದಲ್ಲಿ ಕ್ಷೇತ್ರದ ಅವಲೋಕನ ಮತ್ತು ನಕ್ಷೆ ಬರವಣಿಗೆ ಒಂದೇ ಸಮಯದಲ್ಲಿ ನಡೆಯುತ್ತದೆ. ಪ್ಲೇನ್ ಟೇಬಲ್ ಅನ್ನು ಟ್ರೈಪಾಡ್ ಮೇಲೆ ಅಳವಡಿಸಿ, ಸಮತಟ್ಟಾಗಿ ಮಾಡಿ, ಕೇಂದ್ರಿಕರಣ ಮತ್ತು ದಿಕ್ಕು ಹೊಂದಿಕೆ ಮಾಡಲಾಗುತ್ತದೆ. ಅಲಿಡೇಡ್ ಉಪಯೋಗಿಸಿ ವಸ್ತುಗಳನ್ನು ದೃಷ್ಟಿಸಿ, ಅವುಗಳ ದಿಕ್ಕಿನಲ್ಲಿ ರೇಖೆಗಳನ್ನು ಎಳೆಯಲಾಗುತ್ತದೆ. ಅಂತರಗಳನ್ನು ಅಳೆಯುವ ಮೂಲಕ ನಕ್ಷೆಯಲ್ಲಿ ಗುರುತಿಸಲಾಗುತ್ತದೆ. ಈ ವಿಧಾನವನ್ನು ಪುರಾತತ್ವ ಉತ್ಖನನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಮಟ್ಟ ಸರ್ವೇಕ್ಷಣೆ: ಭೂಮಿಯ ಮೇಲ್ಮೈಯಲ್ಲಿರುವ ವಿವಿಧ ಬಿಂದುಗಳ ನಡುವಿನ ಎತ್ತರ ಹಾಗೂ ಆಳದ ವ್ಯತ್ಯಾಸವನ್ನು ಅಳೆಯುವ ಪ್ರಕ್ರಿಯೆಗೆ ʻʻಮಟ್ಟ ಸರ್ವೇಕ್ಷಣೆʼʼ ಎಂದು ಹೆಸರು.
ಒಂದು ನಿರ್ದಿಷ್ಟ ಬಿಂದುವಿಗೆ ಹೋಲಿಸಿದರೆ ಉಳಿದ ಸ್ಥಳಗಳು ಎಷ್ಟು ಎತ್ತರದಲ್ಲಿವೆ ಅಥವಾ ಎಷ್ಟು ಆಳದಲ್ಲಿವೆ ಎಂದು ತಿಳಿಯುವುದು ಈ ಸರ್ವೇಕ್ಷಣೆಯ ಮೂಲ ಗುರಿಯಾಗಿದೆ. ಮಟ್ಟ ಸರ್ವೇಕ್ಷಣೆಯಲ್ಲಿ ʻಡಂಪಿ ಲೆವೆಲ್ʼ ಎಂಬ ಉಪಕರಣವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ದೂರದರ್ಶಕದಂತಹ ರಚನೆಯನ್ನು ಹೊಂದಿದ್ದು ಸಮತಟ್ಟಾದ ರೇಖೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಸರ್ವೇಕ್ಷಣಾ ಉಪಕರಣವನ್ನು ಒಂದು ಸಮತಟ್ಟಾದ ಜಾಗದಲ್ಲಿ ನಿಲ್ಲಿಸಲಾಗುತ್ತದೆ. ಅದನ್ನು ದೂರದರ್ಶಕದ ಮೂಲಕ ನೋಡಿ ವಿವಿಧ ಬಿಂದುಗಳಲ್ಲಿ ಹಿಡಿದಿರುವ ಸ್ಕೇಲ್ ಅಥವಾ ಲೆವೆಲ್ಲಿಂಗ್ ಸ್ಟ್ಯಾಂಪ್ನ ರೀಡಿಂಗ್ಗಳನ್ನು ಪಡೆದುಕೊಳ್ಳಲಾಗುತ್ತದೆ. ಈ ರೀಡಿಂಗ್ಗಳ ಆಧಾರದ ಮೇಲೆ ಆ ಪ್ರದೇಶದ ಏರಿಳಿತವನ್ನು ಲೆಕ್ಕ ಹಾಕಲಾಗುತ್ತದೆ.
ರಸ್ತೆ, ರೈಲು, ಹಳಿ ಮತ್ತು ಕಾಲುವೆಗಳನ್ನು ನಿರ್ಮಿಸುವಾಗ ಸರಿಯಾದ ಇಳಿಜಾರನ್ನು ನೀಡಲು ಇದನ್ನು ಬಳಸಲಾಗುತ್ತದೆ. ಕಟ್ಟಡದ ಪಾಯವನ್ನು ಒಂದೇ ಮಟ್ಟದಲ್ಲಿ ಹಾಕಲು ಹಾಗೂ ನೀರು ಹರಿವ ದಾರಿಗಳನ್ನು ವಿನ್ಯಾಸಗೊಳಿಸಲು ಈ ಸರ್ವೇಕ್ಷಣೆಯು ಉಪಯುಕ್ತವಾಗಿದೆ.
ಡಂಪಿ ಲೆವೆಲ್ (Dumpy Level)
ಡಂಪಿ ಲೆವೆಲ್ (Dumpy Level) ಎಂದರೆ ಸಮತಲ ದೃಷ್ಟಿ ರೇಖೆಯನ್ನು ಸ್ಥಾಪಿಸಿ, ಎರಡು ಬಿಂದುಗಳ ನಡುವಿನ ಎತ್ತರದ ವ್ಯತ್ಯಾಸವನ್ನು ಅಳೆಯುವ ಸರ್ವೇಯಿಂಗ್ ಸಾಧನವಾಗಿದೆ.
2. ಸ್ತರವಿಂಗಡಣೆಯ ದಾಖಲೆಯ ವಿಧಾನ: ಸ್ಥಳವೊಂದರಲ್ಲಿ ಉತ್ಖನನ ನಡೆಸುವಾಗ ದೊರಕುವ ಪುರಾತತ್ವ ಪುರಾವೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಲು ಮತ್ತು ಅವುಗಳ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಈ ಸ್ತರ ವಿಂಗಡಣೆ ಅಗತ್ಯವಾಗಿದೆ.
ಉತ್ಖನನದ ವೇಳೆಯಲ್ಲಿ ದೊರಕುವ ಕಟ್ಟಡದ ಅವಶೇಷಗಳು ಹಾಗೂ ಇತರ ಸಾಂಸ್ಕೃತಿಕ ಕುರುಹುಗಳ ಕಾಲಾನುಕ್ರಮವನ್ನು ಸ್ಪಷ್ಟವಾಗಿ ಗುರುತಿಸಲು ಈ ಸ್ತರವಿಂಗಡಣೆಯು ಸಹಾಯ ಮಾಡುತ್ತದೆ. ಉತ್ಖನನಗೊಂಡ ಪ್ರದೇಶದ ಲಂಬಛೇದ ಮತ್ತು ತಲ ವಿನ್ಯಾಸಗಳ ಮೂಲಕ ಸ್ತರ ವಿಂಗಡನೆಯನ್ನು ದಾಖಲಿಸಲಾಗುತ್ತದೆ. ಉತ್ಖನನವು ಸಾಗಿದಂತೆ ನೆಲೆಯ ಹೊಸ ಹೊಸ ಸ್ತರಗಳು ಕಂಡುಬರುತ್ತವೆ. ಒಂದು ಸ್ತರ ಕಂಡು ಬಂದೊಡನೆ ಅದರ ರೂಪರೇಷೆಗಳನ್ನು ಸರಿಯಾಗಿ ಅವಲೋಕಿಸಬೇಕು. ತದನಂತರ ಉತ್ಖನನದ ಗುಂಡಿಯ ಅಡ್ಡಗೋಡೆಯಲ್ಲಿ ಎದ್ದು ಕಾಣುವಂತೆ ಒಂದು ಹರಿತವಾದ ಸಾಧನದಿಂದ ಗುರುತಿಸಬೇಕು. ಹೀಗೆ ಗುರುತಿಸಿದ ಸ್ತರದ ಸಂಖ್ಯೆಯನ್ನು ಸ್ಪಷ್ಟವಾಗಿ ಸೂಚಿಸುವ ಪಟ್ಟಿಯನ್ನು ಅಂಟಿಸಬೇಕು. ನಂತರ ಅಲ್ಲಿ ಸಿಕ್ಕ ಅವಶೇಷಗಳ ವಿವರಗಳನ್ನು ಬರೆಯಲು ಎಡಬದಿಗೆ ಗ್ರಾಫ್ ಹಾಳೆಯನ್ನು ಮತ್ತು ಬಲಬದಿಗೆ ಗೆರೆ ಹಾಳೆಯನ್ನು ಬಳಸಿ ಟಿಪ್ಪಣಿ ಬರೆದುಕೊಳ್ಳಬೇಕು. ಉತ್ಖನನವು ಮುಂದೆ ಸಾಗಿದಂತೆ ಆಗಾಗ ಲಂಬ ಛೇದದಲ್ಲಿ ಗುರುತು ಮಾಡಲಾದ ಸ್ತರವಿಂಗಡನೆಯನ್ನು ಚಿತ್ರಿಸಬೇಕು. ಯಾವಾಗ ಉತ್ಖನನವು ಕೊನೆಯಾಗುವುದೋ ಆಗ ಗುಂಡಿಯ ಗೋಡೆಗಳಲ್ಲಿ ಕಂಡುಬರುವ ಸ್ತರ ವಿಂಗಡನೆಯನ್ನು ಸರಿಯಾಗಿ ಚಿತ್ರಿಸಲು ಅನುಕೂಲವಾಗುತ್ತದೆ.
ಉತ್ಖನನ ಗುಂಡಿಯ ಸ್ತರ ವಿಂಗಡಣೆಯನ್ನು, ಚಿತ್ರ ಸೂಚಿಸುವ ಲಂಬ ಛೇದದ ಚಿತ್ರವನ್ನು ರಚಿಸಲು ಈ ಕೆಳಗಿನ ಕ್ರಮವನ್ನು ಅನುಸರಿಸಬೇಕು. ಮೊದಲು ಉತ್ಖನನ ಗುಂಡಿಯ ಗೋಡೆಯ ಮೇಲೆ ಒಂದು ದಾರವನ್ನು ಸಮನಾಗಿರುವಂತೆ ಕಟ್ಟಬೇಕು. ದಾರವು ಸಮ ರೀತಿಯಲ್ಲಿ ಇದೆ ಎಂಬುದನ್ನು ಸ್ಪಿರಿಟ್ ಲೆವೆಲ್ ಎಂಬ ಉಪಕರಣದ ಸಹಾಯದಿಂದ ಕಂಡುಹಿಡಿಯಬೇಕು. ಈಗ ಆ ದಾರವು ಸೂಚಿಸುವ ರೇಖೆಯು ಗ್ರಹಿತರೇಖೆ ಎನಿಸುತ್ತದೆ. ಈ ದಾರದ ಜೊತೆಗೆ ಅಳತೆಯ ಟೇಪನ್ನು ಸೇರಿಸಬೇಕು. ನಂತರ ಸ್ಪ್ರಿಂಗ್ ಟೇಪ್ ಹಾಗೂ ತೂಗುಗುಂಡು ಇವುಗಳನ್ನು ಉಪಯೋಗಿಸಿ ಗೋಡೆಗುಂಟ ನಿರ್ದಿಷ್ಟ ಅಂತರದಲ್ಲಿ ಸ್ತರ ಗಾತ್ರವನ್ನು ಸೂಚಿಸುವ ಲಂಬ ಅಳತೆಯನ್ನು ಸರಿಯಾಗಿ ಬರೆದುಕೊಳ್ಳಬೇಕು. ನೆಲೆಯ ಎಲ್ಲಾ ಸ್ಥಳಗಳಲ್ಲಿ ಲಂಬ ಛೇದದ ಚಿತ್ರವನ್ನು ಬರೆಯಲು ಒಂದೇ ಸ್ಕೇಲನ್ನು ಬಳಸಬೇಕು.
ಸ್ಪಿರಿಟ್ ಲೆವೆಲ್ (Spirit Level)
ಸ್ಪಿರಿಟ್ ಲೆವೆಲ್ ಎಂಬ ಉಪಕರಣವು ಸಮತಲ (Horizontal) ಮಟ್ಟವನ್ನು ತಿಳಿಯಲು ಬಳಸುವ ಸಾಧನವಾಗಿದೆ. ಇದು ಗಾಜಿನ ಟ್ಯೂಬ್ + ದ್ರವ + ಗಾಳಿಯ ಬಬಲ್ ರಚನೆಯನ್ನು ಹೊಂದಿದೆ. ಬಬಲ್ ಮಧ್ಯದಲ್ಲಿ ಬಂದರೆ ಸಮತಲ ಸರಿಯಾಗಿದೆ ಎಂದು ಅರ್ಥ
Plumb Bob
ಪ್ಲಂಬ್ ಬಾಬ್ ಎಂದರೆ ಹಗ್ಗಕ್ಕೆ ಕಟ್ಟಿದ ತೂಕವಾಗಿದ್ದು, ಇದು ಲಂಬ ದಿಕ್ಕನ್ನು ಕಂಡುಹಿಡಿಯಲು ಮತ್ತು ಸರ್ವೇಯಿಂಗ್ನಲ್ಲಿ ಕೇಂದ್ರ ಸ್ಥಾಪನೆಗಾಗಿ ಬಳಸಲಾಗುತ್ತದೆ.
3. ಉತ್ಖನನದ ಪ್ರಗತಿಯನ್ನು ತೋರಿಸುವ ಟಿಪ್ಪಣಿ ಪುಸ್ತಕದ ದಾಖಲೆ: ಉತ್ಖನನ ಮಾಡುವಾಗ ಮೇಲ್ವಿಚಾರಕನಾದವನು ಉತ್ಖನನದ ಎಲ್ಲಾ ಪ್ರಗತಿಯನ್ನು ಸೂಚಿಸುವ ಕ್ಷೇತ್ರ ಟಿಪ್ಪಣಿ ಪುಸ್ತಕವನ್ನು ಇಡಬೇಕಾದುದು ಬಹಳ ಅಗತ್ಯವಾದುದು. ಈ ಟಿಪ್ಪಣಿ ಪುಸ್ತಕವು ಒಂದು ಬದಿಗೆ ಗ್ರಾಫ್ ಹಾಗೂ ಇನ್ನೊಂದು ಬದಿಗೆ ಗೆರೆಗಳುಳ್ಳ ನೋಟು ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಉತ್ಖನನದ ಸಮಯದಲ್ಲಿ ಸಿಕ್ಕ ಪ್ರಾಚ್ಯವಸ್ತುಗಳ ಚಿತ್ರ ಬರೆಯುವುದು ಹಾಗೂ ಉತ್ಖನನದ ಸ್ತರ ವಿಂಗಡನೆಯ ವಿವರಗಳ ಚಿತ್ರಗಳನ್ನು ಗ್ರಾಫ್ ಹಾಳೆಯಲ್ಲಿ ಹಾಗೂ ಪ್ರತಿದಿನದ ಉತ್ಖನನದ ಪ್ರಗತಿಯ ಕುರಿತು ವಿವರಗಳನ್ನು ಗೆರೆಗಳುಳ್ಳ ಹಾಳೆಯ ಮೇಲೆ ಬರೆಯಬೇಕು.
ಕ್ಷೇತ್ರ ಟಿಪ್ಪಣಿ ಪುಸ್ತಕದಲ್ಲಿ ಉತ್ಖನನದ ಸವಿವರಗಳನ್ನು ಚಾಚು ತಪ್ಪದೇ ದಾಖಲಿಸಬೇಕು. ಇದರ ಜೊತೆಗೆ ಟಿಪ್ಪಣಿ ಪುಸ್ತಕವು ಉತ್ಖನನವನ್ನು ಮಾಡುವ ಸ್ಥಳದ ಹೆಸರು, ಉತ್ಖನನ ಗುಂಡಿ ಅಳತೆಯ ಸಂಖ್ಯೆ, ಉತ್ಖನನ ಮಾಡುವವರ ಹೆಸರು, ಉತ್ಖನನ ನಡೆಯುವ ವರ್ಷ ಮೊದಲಾದವುಗಳನ್ನು ಹೊಂದಿರಬೇಕಾಗುತ್ತದೆ. ಉತ್ಖನನ ಕಾಲದಲ್ಲಿ ಉತ್ಖನನಕಾರನಿಗೆ ಎದುರಾದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳು ಇತ್ಯಾದಿ, ವಿಷಯಗಳನ್ನು ಸಹ ಟಿಪ್ಪಣಿ ಪುಸ್ತಕದಲ್ಲಿ ದಾಖಲು ಮಾಡಿರಬೇಕು. ಸ್ತರ ವಿಂಗಡನೆಯನ್ನು ಗುರುತಿಸುವುದು, ಅಲ್ಲಿ ಸಿಕ್ಕ ಕಟ್ಟಡಗಳ ರಚನೆಯ ಹಂತಗಳನ್ನು ಗುರುತಿಸುವುದು ಮತ್ತು ಉದ್ಭವಿಸಿದ ಸಮಸ್ಯೆಗಳು ಮತ್ತು ಆ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದು ಮಾಡಿರಬೇಕು. ಬೇಡವಾದ ಮತ್ತು ಸಂರಕ್ಷಣೆ ಮಾಡಲಾರದ ವಸ್ತುಗಳೆಂದು ಕಡೆಗಣಿಸದೆ ಅವುಗಳ ಕುರಿತು ಹೆಚ್ಚು ಅಧ್ಯಯನ ಮಾಡಿ ದಾಖಲೆ ಬರೆಯಬೇಕು. ಉತ್ಖನನದಲ್ಲಿ ದೊರಕಿದ ವಸ್ತುಗಳು ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಸಂರಕ್ಷಣೆ ಮಾಡದಿರಲಿ ಅಥವಾ ನಿರ್ಲಕ್ಷಕ್ಕೆ ಒಳಗಾಗಿರಲಿ ಅವುಗಳನ್ನು ದೊರೆತ ಕ್ರಮಕ್ಕೆ ಅನುಗುಣವಾಗಿ ಅವುಗಳು ದೊರಕಿದ ಸ್ಥಳ, ಅನುಕ್ರಮ ಸಂಖ್ಯೆ ಮುಂತಾದವುಗಳನ್ನು ಪುಸ್ತಕದಲ್ಲಿ ಬರೆದಿರಬೇಕು.
ದಿನನಿತ್ಯದ ಉತ್ಖನನದ ಪ್ರಗತಿ ಹಾಗೂ ಸಂಶೋಧನೆಗಳನ್ನು ಸರಿಯಾಗಿ ತಪ್ಪಿಲ್ಲದಂತೆ ಹಾಗೂ ಸಂಶಯಕ್ಕೆ ಎಡೆ ಮಾಡಿಕೊಡದ ಹಾಗೆ ಟಿಪ್ಪಣಿ ಪುಸ್ತಕದಲ್ಲಿ ದಾಖಲು ಮಾಡಬೇಕು. ಆದ್ದರಿಂದ ಗುಂಡಿಯ ಮೇಲ್ವಿಚಾರಕನು ಒಂದು ವೇಳೆ ಬದಲಾದರೂ ನಂತರ ಬಂದ ಹೊಸ ಮೇಲ್ವಿಚಾರಕನಿಗೆ ಉತ್ಖನನವನ್ನು ಮುಂದುವರಿಸಲು ಯಾವುದೇ ಗಂಭೀರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಮೇಲ್ವಿಚಾರಕರ ಟಿಪ್ಪಣಿ ಪುಸ್ತಕಗಳನ್ನು ಆಗಾಗ ಪರಿಶೀಲನೆಗೆ ಒಳಪಡಿಸಿ ಉತ್ಖನನಕ್ಕೂ ಹಾಗೂ ಟಿಪ್ಪಣಿ ಪುಸ್ತಕದಲ್ಲಿ ದಾಖಲೆಗೂ ಇರುವ ಸಾಮ್ಯತೆಯನ್ನು ನೋಡುವ ಜವಾಬ್ದಾರಿ ನಿರ್ದೇಶಕ ಮಾಡಬೇಕಾಗುತ್ತದೆ. ಒಂದು ವೇಳೆ ಸಮಸ್ಯೆಗಳೇನಾದರೂ ಕಂಡು ಬಂದರೆ ಮೇಲ್ವಿಚಾರಕರಿಗೆ ನಿರ್ದೇಶಕರು ನಿರ್ದೇಶನವನ್ನು ನೀಡುತ್ತಾನೆ. ಉತ್ಖನನದ ಫಲಿತಾಂಶಕ್ಕೆ ಕ್ಷೇತ್ರ ಟಿಪ್ಪಣಿಯ ಪುಸ್ತಕವೇ ಮೂಲಾಧಾರವಾಗುತ್ತದೆ. ಇವು ಸ್ಪಷ್ಟವಾಗಿ ಮತ್ತು ನಿಖರವಾಗಿ ಇದ್ದರೆ ಉತ್ಖನನದ ಫಲಿತಾಂಶವೂ ಅಷ್ಟೇ ನಿಖರವಾಗಿರುತ್ತದೆ.
4. ಆಯಾಮತ್ರಯ ಹಾಗೂ ತ್ರಿಕೋಣೀಕರಣ ವಿಧಾನ: ಉತ್ಖನನದಲ್ಲಿ ದೊರೆಯುವ ಯಾವುದೇ ಪುರಾತತ್ವ ಅವಶೇಷಗಳನ್ನು ಅವುಗಳ ನಿಖರವಾದ ಸ್ಥಾನವನ್ನು ಗುರುತಿಸಲು ಈ ವಿಧಾನವನ್ನು ಬಳಸಲಾಗುತ್ತದೆ. ಒಂದು ಉತ್ಖನನದ ಸ್ಥಾನವನ್ನು ನಿರ್ಧರಿಸಲು ಉತ್ಖನನದಲ್ಲಿ ಸಿಗುವ ವಿಶಿಷ್ಟ ಪುರಾತತ್ವ ವಸ್ತುಗಳನ್ನು ಆಯಾಮತ್ರಯ ಹಾಗೂ ತ್ರಿಕೋಣೀಕರಣದ ವಿಧಾನದ ಮೂಲಕ ದಾಖಲಿಸಲಾಗುತ್ತದೆ.
ಈ ವಿಧಾನದಲ್ಲಿ ವಸ್ತುವಿನ ಸಮತಲ ಮತ್ತು ಲಂಬ ಅಳತೆಗಳನ್ನು ನಿಖರವಾಗಿ ಅಳೆಯಲಾಗುತ್ತದೆ. ಅಂದರೆ ಗುಂಡಿಯ ನಿಗದಿತ ಮೂಲೆಯ ಗೂಟಗಳಿಂದ ವಸ್ತುವಿನ ದೂರವನ್ನು ಅಳೆದು ಅದರ ನಿಖರವಾದ ಸ್ಥಾನವನ್ನು ನಕ್ಷೆಯಲ್ಲಿ ಗುರುತಿಸಲು ಇದು ಸಹಾಯಮಾಡುತ್ತದೆ. ಒಂದು ವಸ್ತು ಗುಂಡಿಯ ಯಾವುದೇ ಪದರಿನಲ್ಲಿ ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ಆಳದಲ್ಲಿ ದೊರಕಿದೆ ಎಂಬುದನ್ನು ವೈಜ್ಞಾನಿಕವಾಗಿ ದಾಖಲು ಮಾಡುವುದು ಇದರ ಮೂಲ ಗುರಿಯಾಗಿದೆ. ಇದು ಮುಂದಿನ ಉತ್ಖನನಕ್ಕೆ ಮತ್ತು ವಿಶ್ಲೇಷಣೆಗೆ ಆಧಾರವಾಗುತ್ತದೆ.
5. ಪ್ರಾಚ್ಯವಸ್ತುವನ್ನಿಡುವ ಪೆಟ್ಟಿಗೆಗಳ ದಾಖಲೆಯ ವಿಧಾನ: ಪ್ರಾಚ್ಯವಸ್ತುಗಳನ್ನು ಇಡುವ ಪೆಟ್ಟಿಗೆಗಳು ಪುರಾತತ್ವ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಪುರಾತತ್ವ ಇಲಾಖೆಯವರು ಉತ್ಖನನವನ್ನು ನಡೆಸುವಾಗ ದೊರಕುವ ಗತಕಾಲದ ವಸ್ತುಗಳನ್ನು ಸುರಕ್ಷಿತವಾಗಿಡಲು ಈ ವಿಶೇಷ ಪೆಟ್ಟಿಗೆಗಳನ್ನು ಬಳಸುತ್ತಾರೆ. ಉತ್ಖನನ ಮಾಡಿದಾಗ ಸಿಗುವ ಗತಕಾಲ ಅಥವಾ ಇತಿಹಾಸ ಕಾಲದ ನಾಣ್ಯಗಳು, ಮಣ್ಣಿನ ಪಾತ್ರೆಗಳ ಚೂರುಗಳು, ಶಾಸನಗಳು ಅಥವಾ ಆಭರಣಗಳ ಕಾಲಮಾನ ಹಾಗೂ ಅವುಗಳ ಸಿಕ್ಕ ಸ್ಥಳಗಳ ಆಧಾರದ ಮೇಲೆ ಅವುಗಳನ್ನು ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಶೇಖರಣೆ ಮಾಡಿ ಸಂಗ್ರಹಿಸಿಡಲಾಗುತ್ತದೆ. ಪೆಟ್ಟಿಗೆಗಳು ಸಾವಿರಾರು ವರ್ಷಗಳ ಹಳೆಯ ಪಳೆಯುಳಿಕೆಗಳು, ವಸ್ತುಗಳು ಗಾಳಿ, ಬೆಳಕು ಅಥವಾ ತೇವಾಂಶಕ್ಕೆ ತುತ್ತಾಗಿ ಹಾಳಾಗದಂತೆ ರಕ್ಷಣೆಯನ್ನು ಒದಗಿಸುತ್ತವೆ. ಉತ್ಖನನದ ನಂತರ ಸಿಕ್ಕ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಇರಿಸಿದಾಗ ಪ್ರತಿ ಪೆಟ್ಟಿಗೆಯ ಮೇಲೆ ಆ ವಸ್ತು ಎಲ್ಲಿ ಸಿಕ್ಕಿತು, ಯಾವ ಪ್ರದೇಶದಲ್ಲಿ ದೊರಕಿತು ಹಾಗೂ ಅದರ ಸಂಭಾವ್ಯ ಇತಿಹಾಸವೇನು ಎಂಬ ವಿವರಗಳನ್ನು ದಾಖಲು ಮಾಡಲಾಗುತ್ತದೆ.
ಕರ್ನಾಟಕದ ಹಂಪಿ, ಬನವಾಸಿ ಹಾಗೂ ತಲಕಾಡಿನಂತಹ ಐತಿಹಾಸಿಕ ಸ್ಥಳಗಳಲ್ಲಿ ಸಂಶೋಧನೆ ಮಾಡುವಾಗ ಇಂತಹ ಪೆಟ್ಟಿಗೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಮೊದಲು ಅವುಗಳನ್ನು ಇಂತಹ ಪೆಟ್ಟಿಗೆಯಲ್ಲಿ ಸಂರಕ್ಷಿಸಿ ಇಡಲಾಗುತ್ತದೆ.
6. ಪ್ರಾಚ್ಯ ವಸ್ತುಗಳ ನೊಂದಣಿ ದಾಖಲಾತಿ ವಿಧಾನ: ಉತ್ಖನನದಲ್ಲಿ ದೊರಕಿದ ವಸ್ತುಗಳ ನಿಖರ ಮಾಹಿತಿಗಾಗಿ ಒಂದು ನೋಂದಣಿ ಪುಸ್ತಕವನ್ನು ಇಡಲಾಗಿರುತ್ತದೆ. ಉತ್ಖನನದ ವೇಳೆ ಸಿಕ್ಕ ಹೊಸ ಹೊಸ ಪ್ರಾಚ್ಯವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿ ಸಂಗ್ರಹ ಮಾಡಿ ಇಡಲಾಗಿರುತ್ತದೆ. ಪ್ರತಿದಿನ ಉತ್ಖನನದ ನಂತರ ಕೊನೆಗೆ ದಾಖಲು ಮಾಡಲಾದ ಪ್ರಾಚ್ಯ ವಸ್ತುಗಳನ್ನು ಕಾಲಾನುಕ್ರಮವಾಗಿ ಅವುಗಳ ಸಂಪೂರ್ಣ ವಿವರಗಳೊಂದಿಗೆ ನೋಂದಣಿ ಪುಸ್ತಕದಲ್ಲಿ ಬರೆದಿಡಬೇಕು. ಪ್ರಾಚ್ಯ ವಸ್ತುಗಳನ್ನು ಉತ್ಖನನದಿಂದ ಹೊರ ತೆಗೆದ ನಂತರ ಅದರ ಸಂಪೂರ್ಣ ಚಿತ್ರಣವು ಈ ದಾಖಲಾತಿ ಪುಸ್ತಕದಲ್ಲಿ ಸಿಗುತ್ತದೆ. ಆಗ ಅಧ್ಯಯನದ ವೇಳೆ ಅಗತ್ಯವಾದ ಪ್ರಾಚ್ಯ ವಸ್ತುಗಳನ್ನು ಹುಡುಕುವುದಕ್ಕೆ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.