ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ʻʻದೇಶದ ಸುವ್ಯವಸ್ಥಿತ ಹಾಗೂ ಶಾಂತಿಯುತ ಆಡಳಿತಕ್ಕೆ ಭಂಗ ಉಂಟಾಗುವ ಸನ್ನಿವೇಶವನ್ನು ತುರ್ತು ಪರಿಸ್ಥಿತಿ ಎಂದು ಕರೆಯಲಾಗಿದೆ.ʼʼ ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ಸುಸ್ಥಿರವಾಗಿಡಲು ರಾಷ್ಟ್ರಪತಿಗಳು ಮೂರು ಬಗೆಯ ತುರ್ತುಪರಿಸ್ಥಿತಿಗಳನ್ನು ಘೋಷಿಸುತ್ತಾರೆ. ಅವುಗಳು ಈ ಕೆಳಗಿನಂತಿವೆ:

ರಾಷ್ಟ್ರೀಯ ತುರ್ತು ಪರಿಸ್ಥಿತಿ: (National Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು. ರಾಷ್ಟ್ರಪತಿಗಳು ದೇಶದ ಭದ್ರತೆಗೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ದಂಗೆಗಳ ಕಾರಣಗಳಿಂದ ಭಯವಿದೆ ಎಂದುಕಂಡುಬಂದರೆ. ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಪರಿಸ್ಥಿತಿ ಘೋಷಣೆಯಾದ 30 ದಿನದೊಳಗೆ ಸಂಸತ್ತಿನ ಉಭಯ ಸದನಗಳ ೨/೩  ರಷ್ಟು ಸದಸ್ಯರು ಹಾಜರಿದ್ದು ಅದಕ್ಕೆ ಅಂಕಿತವನ್ನು ಹಾಕಬೇಕು. ಇಲ್ಲವಾದರೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಸ್ಥಗಿತಗೊಳ್ಳುತ್ತದೆ. ಸಂಸತ್ತಿನ ಅನುಮೋದನೆಗೊಂಡ ತುರ್ತುಪರಿಸ್ಥಿತಿಯು ಜಾರಿಗೆ ಬಂದ ದಿನದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ನಂತರವೂ ತುರ್ತುಪರಿಸ್ಥಿತಿ ಮುಂದುವರಿಯಬೇಕಾದರೆ  ತುರ್ತು ಪರಿಸ್ಥಿತಿ ಘೋಷಣೆಯನ್ನು ಮರಳಿ ಅನುಮೋದಿಸಬೇಕಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರದ್ದುಗೊಳಿಸಲು ಲೋಕಸಭೆಯ ಒಟ್ಟು ೧/೧೦  ರಷ್ಟು ಸದಸ್ಯರು ಲಿಖಿತ ರೂಪದಲ್ಲಿ ನೋಟಿಸ್ ಅನ್ನು ಅಧಿವೇಶನದ ಸಮಯದಲ್ಲಿ ಸ್ಪೀಕರ್ ಅವರಿಗೆ ಅಥವಾ ಅಧಿವೇಶನ ಮುಂದೂಡಿದಾಗ ರಾಷ್ಟ್ರಪತಿಗೆ ಕೊಡಬಹುದು. ಈ ನೋಟಿಸ್ ತಲುಪಿಸಿದ 14 ದಿನಗಳೊಳಗೆ ಲೋಕಸಭೆಯ ವಿಶೇಷ ಅಧಿವೇಶನ ಕರೆಯಬಹುದು. ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸಬಹುದೆಂದು ಅಲ್ಪ ಬಹುಮತದಿಂದ ಲೋಕಸಭೆ ಒಪ್ಪಿದರೆ ಅದು ರದ್ದಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕಾಗುತ್ತದೆ.

B.ರಾಜ್ಯ ತುರ್ತು ಪರಿಸ್ಥಿತಿ: (State Emergency)

ಭಾರತದ ಒಕ್ಕೂಟದ ಯಾವುದಾದರೂ ರಾಜ್ಯದಲ್ಲಿನ ಆಡಳಿತ ಯಂತ್ರ ಕುಸಿದು ಬಿದ್ದಾಗ ರಾಜ್ಯಪಾಲರ ವರದಿಯನ್ನು ಆಧರಿಸಿ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ಘೋಷಿಸುವ ತುರ್ತು ಪರಿಸ್ಥಿತಿಗೆ ರಾಜ್ಯ ತುರ್ತುಪರಿಸ್ಥಿತಿ ಎಂದು ಕರೆಯುತ್ತೇವೆ.ʼʼ ಈ ಬಗ್ಗೆ ತುರ್ತು ಪರಿಸ್ಥಿತಿಯನ್ನು ರಾಷ್ಟ್ರಪತಿ ಆಳ್ವಿಕೆ ಎಂದು ಹೇಳಲಾಗುತ್ತದೆ.ʼʼ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿಗಳು ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು

 C .ಆರ್ಥಿಕ ತುರ್ತು ಪರಿಸ್ಥಿತಿ: (Econamic Emergency)

ದೇಶದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ಒಳಗಾದಾಗ ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿಯನ್ನು ಆರ್ಥಿಕ ತುರ್ತು ಪರಿಸ್ಥಿತಿ ಎಂದು ಕರೆಯುವರು.

ಉಪಸಂಹಾರ

ತುರ್ತು ಪರಿಸ್ಥಿತಿ ಘೋಷಣೆ ದೇಶದ ಆಡಳಿತವನ್ನು ಸುಸ್ಥಿರಗೊಳಿಸುವ ಮಹತ್ವದ ಉಪಕರಣವಾಗಿದೆ. ಆದರೆ ಇದರ ದುರುಪಯೋಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡಬಹುದು. ಆದ್ದರಿಂದ ಸಂವಿಧಾನದಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಸಂಸತ್ತಿನ ಮೇಲ್ವಿಚಾರಣೆ ಅಗತ್ಯವಾಗಿದೆ. ತುರ್ತು ಪರಿಸ್ಥಿತಿಯ ಸರಿಯಾದ ಅರಿವು ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ಬಲಪಡಿಸುತ್ತದೆ.

42 ನೇ ಸಂವಿಧಾನ ತಿದ್ದುಪಡಿ

42 ನೇ ಸಂವಿಧಾನ ತಿದ್ದುಪಡಿ

ಭಾರತದ ಸಂವಿಧಾನವು ಜಾರಿಗೆಗೊಂಡ 25 ವರ್ಷಗಳ ಸಂವಿಧಾನಾತ್ಮಕ ಸುಧಾರಣೆಗಾಗಿ ಇಂದಿರಾಗಾಂಧಿ ನೇತೃತ್ವದ ಸರ್ಕಾರವು ಸ್ವರ್ಣಸಿಂಗ್‌ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ಶಿಫಾರಸ್ಸಿನಂತೆ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ 1976 ಡಿಸೆಂಬರ್‌ 16 ರಂದು ಆದೇಶ ಹೊರಡಿಸಿತು. ಸಂವಿಧಾನ ಜಾರಿಯ ನಂತರ ತಿದ್ದುಪಡಿಗೊಂಡ 42 ನೇ ವಿಧಿಯು ಉಳಿದೆಲ್ಲಾ ತಿದ್ದುಪಡಿಗಳಿಗಿಂತ ಅತ್ಯಂತ ವಿಶಾಲವಾದ ಮತ್ತು ವಿವಾದಾತ್ಮಕವಾದ ತಿದ್ದುಪಡಿ ಎನಿಸಿಕೊಂಡಿತು. 1950ರ ಮೂಲ ಸಂವಿಧಾನದ ಪ್ರಸ್ತಾವನೆಯ 7ನೇ ಅನುಸೂಚಿ, 53 ವಿಧಿಗಳು ಮತ್ತು ಪ್ರಮುಖ ತತ್ವಗಳಲ್ಲಿ ಬದಲಾವಣೆಗೆ ಕಾರಣವಾದ ತಿದ್ದುಪಡಿಯು ಕಿರು ಸಂವಿಧಾನ ಎನಿಸಿಕೊಂಡಿದೆ. ಈ ತಿದ್ದುಪಡಿಯ ಬದಲಾವಣೆಗಳು ಈ ಕೆಳಗಿನಂತಿವೆ.

a. ಪ್ರಸ್ತಾವನೆ:

ಈ ತಿದ್ದುಪಡಿಯು ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಹಾಗೂ ಅಖಂಡತೆ ಎಂಬ ಪದಗಳನ್ನು ಸೇರಿಸಿತು.

b. ರಾಜ್ಯನೀತಿ ನಿರ್ದೇಶಕ ತತ್ವಗಳು:

 ಈಗಾಗಲೇ ಸಂವಿಧಾನದ 4ನೇ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯ ನಿರ್ದೇಶಕ ತತ್ವಗಳಿಗೆ ಮೂರು ಹೊಸ ನಿರ್ದೇಶನಗಳನ್ನು ಸೇರಿಸಲಾಯಿತು. ಈಗಾಗಲೇ ಜಾರಿಯಲ್ಲಿದ್ದ 39 ನೇ ವಿಧಿಯಲ್ಲಿದ್ದ ಅಂಶಗಳ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳನ್ನು ಹೊಸದಾಗಿ ಸೇರಿಸಲಾಯಿತು. ಹಾಗೆಯೇ ಬಡವರಿಗೆ ಉಚಿತ ನ್ಯಾಯ ಮತ್ತು ಸಮಾನ ನ್ಯಾಯವನ್ನು ಬಲಗೊಳಿಸುವ ಕಾನೂನನ್ನು 39(A) ವಿಧಿಯಲ್ಲಿ, ಉದ್ಯಮದಲ್ಲಿ ಕಾರ್ಮಿಕರಿಗೆ ಅವಕಾಶ ಒದಗಿಸುವ 43(A) ವಿಧಿಯನ್ನು ಹಾಗೂ ಪರಿಸರ ರಕ್ಷಣೆ ಹಾಗೂ ವನ್ಯ ಜೀವಿ ರಕ್ಷಣೆ 48(A) ವಿಧಿಯನ್ನು ಸಂವಿಧಾಕ್ಕೆ ಹೊಸದಾಗಿ ತಿದ್ದುಪಡಿ ಮಾಡಿ ಸೇರಿಸಲಾಯಿತು.

c. ಮೂಲಭೂತ ಕರ್ತವ್ಯಗಳು:

ಸಂವಿಧಾನಕ್ಕೆ 4(A) ಭಾಗವನ್ನು ಸೇರಿಸುವ ಮೂಲಕ ಸಂವಿಧಾನದ ತಿದ್ದುಪಡಿ ಮಾಡಲಾಯಿತು. ಈ ಭಾಗದಲ್ಲಿ ಭಾರತೀಯರು ಪಾಲಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 51(A) ವಿಧಿಯಲ್ಲಿ ಸೇರಿಸಲ್ಪಟ್ಟವು.

d. ಸಂಸತ್ತು:

ಈ ತಿದ್ದುಪಡಿಯ ಮೂಲಕ ಸಂಸತ್ತಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಬದಲಾಯಿಸಲು ಸಾಧ್ಯವಾಯಿತು. ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತಿಗೆ ಕಲಾಪಗಳು ಜರುಗಲು ಕನಿಷ್ಠ 10% ರಷ್ಟು ಸದಸ್ಯರ ಕೋರಂ ಸಂಖ್ಯೆಯನ್ನು ರದ್ದುಗೊಳಿಸಿತು. ಸಂಸತ್ತು ಅಂಗೀಕರಿಸುವ ಶಾಸನಗಳನ್ನು ನ್ಯಾಯಾಂಗದ ವಿಮರ್ಶಾಧಿಕಾರದಿಂದ ಹೊರಗಿಡಲಾಯಿತು. ರಾಷ್ಟ್ರಪತಿಯು ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸದಂತೆ ಬದಲಾವಣೆ ತರಲಾಯಿತು.

e. ನ್ಯಾಯಾಂಗ:

ಉಚ್ಛನ್ಯಾಯಾಲಯಗಳು ರಿಟ್‌ ಹೊರಡಿಸುವ ಅಧಿಕಾರವನ್ನು ಈ ತಿದ್ದುಪಡಿಯಿಂದ ಮೊಟಕುಗೊಳಿಸಲಾಯಿತು. ಮುಂದುವರೆದು ಸಂವಿಧಾನಕ್ಕೆ 14(A) ಭಾಗವನ್ನು ಸೇರಿಸಿ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ರಚಿಸಲು ಸಂಸತ್ತಿಗೆ ಅವಕಾಶ ಕಲ್ಪಿಸಲಾಯಿತು.

f. ತುರ್ತು ಪರಿಸ್ಥಿತಿ:

ಭಾರತದ ಭದ್ರತೆಗೆ ಆತಂಕ ಎದುರಾದಾಗ ಭಾರತದ ಯಾವುದೇ ಮೂಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಇನ್ನುಳಿದ ರಾಜ್ಯಗಳು ನಡೆದುಕೊಳ್ಳಬೇಕೆಂದು ಈ ತಿದ್ದುಪಡಿಯ ಮೂಲಕ ತಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯಾದರೆ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲು

ಅವಕಾಶ ಕಲ್ಪಿಸಲಾಯಿತು. ಸಂವಿಧಾನದ 356ನೇ ವಿಧಿಯಂತೆ ತುರ್ತು ಪರಿಸ್ಥಿತಿ ಘೋಷಣೆಯಾದರೆ 6 ತಿಂಗಳು ಇದ್ದ ಅವಧಿಯು 1 ವರ್ಷಕ್ಕೆ ವಿಸ್ತಾರಗೊಂಡಿತು.

g. ಏಳನೇ ಅನುಸೂಚಿ:

ಸಂವಿಧಾನ ಜಾರಿಗೊಂಡಾಗಿನಿಂದ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಷಣ, ಅರಣ್ಯ, ವನ್ಯಜೀವಿ, ಪಕ್ಷಿರಕ್ಷಣೆ, ತೂಕ ಮತ್ತು ಅಳತೆ, ನ್ಯಾಯಿಕ ಆಡಳಿತ, ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಲಯಗಳ ಸಂಘಟನೆಯ ವಿಷಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಉಪಸಂಹಾರ 

ಒಟ್ಟಿನಲ್ಲಿ 42ನೇ ಸಂವಿಧಾನ ತಿದ್ದುಪಡಿ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇದು ಆಡಳಿತದ ಬಲವರ್ಧನೆ ಜೊತೆಗೆ ನ್ಯಾಯಾಂಗ ಮತ್ತು ಪ್ರಜೆಗಳ ಹಕ್ಕುಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿತು. ಅನೇಕ ಅಂಶಗಳು ನಂತರದ ತಿದ್ದುಪಡಿಗಳ ಮೂಲಕ ಪರಿಷ್ಕೃತಗೊಂಡರೂ, ಇದರ ಪ್ರಭಾವ ಅಳಿಸಲಾಗದಂತಿದೆ. ಅದರೊಂದಿಗೆ, 42ನೇ ತಿದ್ದುಪಡಿ ಸಂವಿಧಾನದ ಶಕ್ತಿ ಮತ್ತು ಸವಾಲುಗಳನ್ನು ಅರಿಯಲು ಸಹಾಯಕವಾಗಿದೆ.