ಪರಿಸರ ಸಂವಹನವು ವ್ಯಕ್ತಿಗಳು, ಸಂಘ, ಸಂಸ್ಥೆಗಳು, ಸಮಾಜಗಳು, ಸಂಸ್ಕೃತಿಗಳು, ಶಾಲಾ-ಕಾಲೇಜುಗಳು, ಸಮೂಹ ಮಾಧ್ಯಮಗಳು, ವೃತ್ತ ಪತ್ರಿಕೆಗಳು, ಸಿನಿಮಾಗಳು, ವಯಸ್ಕ ಶಿಕ್ಷಣ ಹಾಗೂ ಪರಿಸರ ಕ್ಲಬ್ ಗಳನ್ನು ಒಳಗೊಂಡಿದೆ. ಸಂವಹನ ಮತ್ತು ಪರಿಸರ ಪರಸ್ಪರ ಅಂತರ ಸಂಬಂಧವನ್ನು ಹೊಂದಿವೆ. ಸಂವಹನವು ಸಮುದಾಯಗಳು ಪರಸ್ಪರ ಭಾಗವಹಿಸುವಿಕೆಯನ್ನು ಅವಲಂಬಿಸಿರುತ್ತದೆ.
ಶಿಕ್ಷಣ ಕ್ಷೇತ್ರವು ಸಂವಹನದ ಮಾಧ್ಯಮವಾಗಿ ಇಂದು ಬಹಳ ಪ್ರಚಲಿತವಾಗಿದೆ. ಇದೊಂದು ಅಗತ್ಯ ವಿಷಯವಾಗಿದ್ದು ಪರಿಸರ ಅಧ್ಯಯನಗಳು, ಪರಿಸರ ವಿಜ್ಞಾನ, ಅಪಾಯ ಹಾಗೂ ವಿಪತ್ತಿನ ವಿಶ್ಲೇಷಣೆ ಹಾಗೂ ನಿರ್ವಹಣೆಯನ್ನು ಮಾಡುತ್ತದೆ. ಸಂವಹನದ ಮೂಲಕ ಶಿಕ್ಷಣ ಕ್ಷೇತ್ರವು ಪರಿಸರದ ಮೇಲೆ ಎಲ್ಲಾ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಪರಿಸರ ಸಂರಕ್ಷಣೆ ಬೆಳವಣಿಗೆಗೆ ಕಾರಣವಾಗುತ್ತದೆ. ಸಾಮಾಜಿಕ ಪರಿಸರ ಶಾಸ್ತ್ರ, ಪರಿಸರ ವಿಜ್ಞಾನ, ಆರ್ಥಿಕ ಪರಿಸರ ಅಧ್ಯಯನ ಮುಂತಾದ ಶಿಕ್ಷಣ ಕ್ಷೇತ್ರಗಳ ಕಾರ್ಯಗಳಿಂದ ಪರಿಸರ ಸಂವಹನ ಹೊರಹೊಮ್ಮಿದೆ. ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ಸಾರ್ವಜನಿಕರಿಗೆ ಶೈಕ್ಷಣಿಕ ಕ್ಷೇತ್ರದ ಮೂಲಕ ತಲುಪಿಸುವ ಗುರಿಯನ್ನು ಸಂವಹನ ಹೊಂದಿದೆ.
ಸಾರ್ವಜನಿಕ ಜಾಗೃತಿ:
ಪರಿಸರ ಅಮೂಲ್ಯವಾದ ವಸ್ತು. ಅದನ್ನು ಹಾಳು ಮಾಡಬಾರದು. ಹಾಳು ಮಾಡಿದರೆ ಮಾನವನಿಗೆ ಕುತ್ತು ಬರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಆದರೂ ಪ್ರಸ್ತುತ ಸಮಾಜಿಕ ಜೀವಿ ಎನಿಸಿಕೊಂಡ ಮಾನವ ದಿನೇ ದಿನೇ ತನ್ನ ಅವಿವೇಕತನದಿಂದ ಪರಿಸರವನ್ನು ಮಲಿನಗೊಳಿಸುತ್ತಿದ್ದಾನೆ. ಆ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಆದುದರಿಂದ ಇಂದು ಪರಿಸರ ರಕ್ಷಣೆಗಾಗಿ ಜನಜಾಗೃತಿಯನ್ನು ಉಂಟುಮಾಡಬೇಕಾದದ್ದು ಅಗತ್ಯವಾಗಿದೆ.
- ಪರಿಸರದ ಕಾಳಜಿಗಾಗಿ ಮನೆಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು ಹಾಗೂ ಕಾರ್ಖಾನೆಗಳ ಸುತ್ತ ಗಿಡ ಮರಗಳನ್ನು ನೆಡುವಂತೆ ಜಾಗೃತಿ ಮೂಡಿಸುವುದು.
- ಶಾಲಾ-ಕಾಲೇಜು, ಗ್ರಾಮ, ನಗರ, ಮಹಾನಗರ ಪಾಲಿಕೆಗಳಂತಹ ಪ್ರದೇಶಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಲು ಅನುವು ಮಾಡಿಕೊಡುವಂತಹ ಪರಿಸರ ಶಿಬಿರ ಕಾರ್ಯಕ್ರಮ ಮೊದಲಾದವುಗಳನ್ನು ಏರ್ಪಡಿಸಬೇಕು.
- ಪರಿಸರ ತಜ್ಞರಿಂದ ಪರಿಸರ ಮಾಲಿನ್ಯಕ್ಕೆ ಕಾರಣ ಮತ್ತು ಅದರ ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಗಿಡಮರಗಳನ್ನು ನೆಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ಪರಿಸರ ಸಂರಕ್ಷಣೆಯ ಕುರಿತು ಹಾಡುಗಳನ್ನು ರಚಿಸಿ ಹಾಡುವ ಮೂಲಕ ಜನಜಾಗೃತಿಯನ್ನು ಉಂಟುಮಾಡುವುದು.
- ಕಾಡಿದ್ದರೆ ನಾವು ನಾವಿದ್ದರೆ ನಾಡು ಎಂಬ ತತ್ವವನ್ನು ಎಲ್ಲೆಡೆ ಪ್ರಚಾರ ಮಾಡಬೇಕು.
- ವಿಷಯುಕ್ತ ರಸಾಯನಿಕಗಳನ್ನು ಹೆಚ್ಚು ಬಳಸದಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮತ್ತು ಮಾಲೀಕರಿಗೆ ಮನವರಿಕೆ ಮಾಡಬೇಕು.
- ಮನೆಯ ಸುತ್ತಮುತ್ತ ಗಿಡಗಳನ್ನು ನೆಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮನವೊಲಿಸಬೇಕು.
- ವ್ಯರ್ಥ ಪದಾರ್ಥಗಳನ್ನು ಬೀದಿಗೆ ಎಸೆಯದಂತೆ ನೋಡಿಕೊಳ್ಳಬೇಕು.
- ಕೆರೆಗಳಲ್ಲಿ ಹೂಳು ತುಂಬದಂತೆ ಹಾಗೂ ಮಣ್ಣು ಸವಕಳಿಯನ್ನು ತಡೆಗಟ್ಟುವಂತೆ ಜನರಿಗೆ ಹೇಳಿಕೊಡಬೇಕು.
- ಗ್ರಾಮೀಣ ಬಯಲು ಶೌಚಾಲಯಗಳನ್ನು ನಿರ್ಬಂಧಿಸಬೇಕು ಹಾಗೂ ನೂತನ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು.
- ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಬೇಕು.
- ಮಕ್ಕಳಿಗೆ ಶರೀರ ನೈರ್ಮಲ್ಯದ ಜೊತೆಗೆ ಪರಿಸರ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಲಿಸಿಕೊಡಬೇಕು.
- ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳನ್ನು ಪ್ರೀತಿಸುವುದನ್ನು ಕಲಿಸಿಕೊಡುವುದು ಬಹಳ ಅಗತ್ಯವಾಗಿದೆ.
- ಮಕ್ಕಳನ್ನು ವನ್ಯಜೀವಿಧಾಮಗಳು ಹಾಗೂ ಪಕ್ಷಿಧಾಮಗಳಿಗೆ ಕರೆದುಕೊಂಡು ಹೋಗಿ ಜೀವ ವೈವಿಧ್ಯತೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಬೇಕು.
ಸಮೂಹ ಮಾಧ್ಯಮದ ಮೂಲಕ ಜಾಗೃತಿ:
ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಮೂಹ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾ: ಮಾತುಕತೆ, ಸಂದರ್ಶನ, ನಾಟಕಗಳು ಹಾಗೂ ಸಾಕ್ಷ ಚಿತ್ರಗಳನ್ನು ತೋರಿಸುವ ಮೂಲಕ ಜನಜಾಗೃತಿಯನ್ನು ಉಂಟುಮಾಡುತ್ತವೆ. ಮಾಲಿನ್ಯವನ್ನು ನಿಯಂತ್ರಿಸುವ ಹಾಗೂ ಪರಿಸರದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಗಮನವನ್ನು ಸೆಳೆಯುವ ಕೆಲಸವನ್ನು ಮಾಡಲು ಮಾಧ್ಯಮಗಳು ಸಜ್ಜುಗೊಂಡಿವೆ. ಪರಿಸರ ಹಾನಿಯನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ಮಾನವನ ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಜೀವನದ ಮೇಲೆ ಯಾವ ಯಾವ ಪರಿಣಾಮಗಳು ಕಂಡುಬರುತ್ತದೆ, ಎಂಬುದರ ಕುರಿತು ಸಮೂಹ ಮಾಧ್ಯಮಗಳು ಸಾಕ್ಷಿ ಸಮೇತ ಮಾಹಿತಿಯನ್ನು ಬಿತ್ತರಿಸುವ ಕಾರಣದಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಮೂಹ ಮಾಧ್ಯಮದ ಪಾತ್ರ ದೊಡ್ಡದಾಗಿದೆ ಎಂದು ತೋರಿಸಿ ಕೊಡುತ್ತವೆ.
ವಯಸ್ಕ ಶಿಕ್ಷಣದ ಮೂಲಕ ಜಾಗೃತಿ:
ಗ್ರಾಮೀಣ ಜನರು ಅನಕ್ಷರಸ್ಥರು ಮತ್ತು ಹಗಲಿರುಳು ದುಡಿಮೆಯಲ್ಲಿ ತೊಡಗಿದವರು ಆಗಿರುತ್ತಾರೆ. ಅವರಿಗೆ ಕಲಿಕೆಗೆ ಸಮಯವಿರುವುದಿಲ್ಲ. ಮತ್ತು ಓದು ಬರಹ ಅಂದರೆ ಏನೆಂದು ಗೊತ್ತಿರುವುದಿಲ್ಲ. ಅಂತವರಿಗೆ ರಾತ್ರಿ ಶಾಲೆಗಳನ್ನು ತೆರೆದು ಆ ಮೂಲಕ ಅವರಿಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದನ್ನೇ ಔಪಚಾರಿಕ ಅಥವಾ ವಯಸ್ಕ ಶಿಕ್ಷಣ ಪದ್ಧತಿ ಎಂದು ಕರೆಯುತ್ತಾರೆ. ಗ್ರಾಮೀಣ ಜನರಿಗೆ ವೈಯಸ್ಕ ಶಿಕ್ಷಣವನ್ನು ನೀಡುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು. ಪರಿಸರ ಕಾಳಜಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪರಿಸರ ಎಂದರೆ ದೈವಿಕ ಸ್ವರೂಪ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ವಯಸ್ಕ ಶಿಕ್ಷಣ ಪದ್ಧತಿಯಲ್ಲಿ ಮಹಿಳೆಯರು ಸಹ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು.
ಪರಿಸರ ಕ್ಲಬ್ ಸ್ಥಾಪನೆ ಮೂಲಕ ಜಾಗೃತಿ:
ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಪಂಚಾಯಿತಿಗಳ ಮಟ್ಟದಲ್ಲಿ, ಜಿಲ್ಲೆಗಳಲ್ಲಿ ಪರಿಸರ ಕ್ಲಬ್ ಗಳನ್ನು ಸ್ಥಾಪಿಸಿ ಆ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜನಸಾಮಾನ್ಯರಲ್ಲಿ ಮೂಡಿಸಬೇಕು. ಶೈಕ್ಷಣಿಕ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಕಲಿಸಿಕೊಡಬೇಕು. ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಕಾಳಜಿಯ ಪೋಷಣೆಗಳನ್ನು ಕೂಗುತ್ತಾ ಜನಸಾಮಾನ್ಯರಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು. ಸಮೂಹ ಮಾಧ್ಯಮ, ಪತ್ರಿಕೆಗಳು, ಶಾಲಾ-ಕಾಲೇಜುಗಳು ಹಾಗೂ ವಯಸ್ಕ ಶಿಕ್ಷಣ ಸಂಸ್ಥೆಗಳು ಈ ಪರಿಸರ ಕ್ಲಬ್ ಜೊತೆಗೆ ಕೈ ಜೋಡಿಸಬೇಕು. ಇದರೊಂದಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಘಗಳು ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸಬೇಕು. ಇದಕ್ಕೆ ಪೂರಕವೆಂಬಂತೆ ಚಿಪ್ಕೋ, ಅಪ್ಪಿಕೋ, ಬಿಷ್ಣೋಯಿ, ನರ್ಮದಾ ಬಚಾವ್, ತೆಹ್ರ ಅಣೆಕಟ್ಟು ಚಳುವಳಿಯ ಕೆಲಸ ಮಾಡುತ್ತಿವೆ.
ದೆಹಲಿಯಲ್ಲಿ CNG ವಾಹನಗಳು:
ಇಂದು ಸರ್ಕಾರಗಳು ಸಾರ್ವಜನಿಕರೊಂದಿಗೆ ಸೇರಿ ಪರಿಸರ ಸಂರಕ್ಷಣೆಗೆ ಹಲವಾರು ಅಗತ್ಯ ಕಾನೂನುಗಳನ್ನು ಜಾರಿಗೆ ತಂದಿವೆ. ಪರಿಸರವು ಸ್ವಚ್ಛವಾಗಿದ್ದರೆ ಮಾನವನ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರ ಸುಂದರವಾಗಿದ್ದರೆ ಮಾನವನೂ ಸುಂದರವಾಗಿ ಕಾಣುತ್ತಾನೆ. ಮಾನವ ಪರಿಸರವನ್ನು ಹಾಳು ಮಾಡಿದರೆ ತನ್ನನ್ನು ತಾನೇ ಹಾಳು ಮಾಡಿಕೊಂಡಂತೆ. ಭಾರತವು ಪ್ರಪಂಚದ 5ನೇ ಪರಿಸರ ಮಾಲಿನ್ಯದ ದೊಡ್ಡ ದೇಶವಾಗಿದೆ. ಇಲ್ಲಿ ಅಗಾಧ ಸಂಖ್ಯೆಯಲ್ಲಿ ಜನಸಂಖ್ಯೆ ಇದೆ. ಅಭಿವೃದ್ಧಿಶೀಲ ಆರ್ಥಿಕತೆಯ ಕಾರಣದಿಂದ ಪ್ರಪಂಚದ 100 ವಾಯುಮಾಲಿನ್ಯ ನಗರಗಳಲ್ಲಿ 63 ನಗರಗಳು ಭಾರತದಲ್ಲಿಯೇ ಇವೆ. ದೆಹಲಿ ಪ್ರಪಂಚದ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿದೆ. ವಾಯು ಮಾಲಿನ್ಯದಿಂದ ದೆಹಲಿಯ ಜನರ ಸರಾಸರಿ ಜೀವಿತಾವಧಿ ಐದು ವರ್ಷಗಳಷ್ಟು ಕಡಿಮೆ ಇದೆ.
ದೆಹಲಿ ಸರ್ಕಾರವು ವಾಯುಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ
- ದೆಹಲಿ ನಗರ ಸಾರಿಗೆ ವಾಹನಗಳಿಗೆ CNG ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇತರ ವಾಹನಗಳಿಗೂ CNG ಯನ್ನು ಶಿಫಾರಸು ಮಾಡಿದೆ.
- ಬಾರಿ ವಾಹನಗಳು ಅಥವಾ ಲಾರಿಗಳು ನಗರದ ಒಳಗೆ ಬರುವುದನ್ನು ನಿಷೇಧಿಸಲಾಗಿದೆ.
- ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ.
- CNG ವಾಸನೆ ರಹಿತವಾದ ಇಂಧನವಾಗಿದ್ದು ಅಪಾಯಕಾರಿಯಲ್ಲದ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಉಂಟುಮಾಡದ ಗಾಳಿಗಿಂತಲೂ ಹಗುರವಾಗಿರುವ ಕಾರಣದಿಂದ ಇದನ್ನು ಹಸಿರು ಇಂಧನ ಎಂದು ಕರೆಯುವರು.
- ಈ ಇಂಧನದ ಬಳಕೆಯಿಂದ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುವುದಿಲ್ಲ.
- ನಗರದಲ್ಲಿ ಬೆಸ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
- ರೈತರು ಕಟಾವಿನ ನಂತರ ಹುಲ್ಲಿಗೆ ಬೆಂಕಿ ಹಾಕುವುದನ್ನು ನಿಷೇಧಿಸಿದೆ.
ಉಪಸಂಹಾರ
ಪರಿಸರವನ್ನು ನಾಶಮಾಡುವುದು ಅಂದರೆ ನಮ್ಮ ಜೀವನವನ್ನೇ ಅಪಾಯಕ್ಕೆ ತಳ್ಳಿದಂತಾಗುತ್ತದೆ. ಸಾರ್ವಜನಿಕ ಜಾಗೃತಿ ಮತ್ತು ಪರಿಸರ ಸಂವಹನದ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಅನಿವಾರ್ಯವಾಗಿದೆ. “ಕಾಡಿದ್ದರೆ ನಾವು, ನಾವಿದ್ದರೆ ನಾಡು” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ.