ಪೀಠಿಕೆ : ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ. ಇವರ ಕಲೆಯು ಕೇವಲ ಒಂದು ಸ್ಥಳದಲ್ಲಿ ಕೇಂದ್ರೀಕೃತವಾಗದೆ ಮಥುರಾ, ಕಾಶಿ, ಪಟ್ನಾ ಮತ್ತಿತರ ಕಡೆಗಳಲ್ಲಿ ಹರಡಿದೆ.
ಗುಪ್ತರ ಕಾಲದ ಕಲೆಯಲ್ಲಿ ಪರಿಶುದ್ಧತೆ, ಸರಳತೆ, ಆದ್ಯಾತ್ಮಿಕತೆ, ಲಾವಣ್ಯ ಮತ್ತು ಸೌಂದರ್ಯವಿದೆ. ಈ ಕಾಲಾವಧಿಯಲ್ಲಿನ ಕಲೆ ಗಾಢವಾದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಅಂಶಗಳನ್ನು ಒಳಗೊಂಡು ಅತ್ಯುನ್ನತ ಮಟ್ಟವನ್ನು ತಲುಪಿತು. ಆದ್ದರಿಂದಲೇ ವಿ.ಎ.ಸ್ಮಿತ್ ರವರು ‘ಗುಪ್ತರ ಕಲೆಯು ಹಿಂದೂ ಕಲೆಯ ಅತ್ಯುನ್ನತಿಯನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ.
ಭಾರತದ ಇತಿಹಾಸದಲ್ಲೇ ಮೊಟ್ಟಮೊದಲು ಕಲ್ಲಿನಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪರಂಪರೆ ಗುಪ್ತರ ಕಾಲದಿಂದ ಪ್ರಾರಂಭವಾಯಿತು. ಅಲ್ಲದೆ ಗುಪ್ತರ ಯುಗವು ‘ಸುವರ್ಣಯುಗ’ವೆಂದು ಪರಿಗಣಿತವಾಗಲು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸಾಧಿಸಿದ ಸಿದ್ಧಿಯೂ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಯಾವ ಯುಗದಲ್ಲೂ ಕಂಡುಬರದ ಕಲಾಚಟುವಟಿಕೆಗಳು ಈ ಕಾಲದಲ್ಲಿ ಕಂಡುಬಂದಿದೆ. ಎ.ಕೆ.ಕುಮಾರಸ್ವಾಮಿಯವರು ‘ಆ ವೇಳೆಗಾಗಲೇ ಆಚರಣೆಯಲ್ಲಿದ್ದ ನಮ್ಮ ಕಲಾ ಪರಂಪರೆಯ ಪುಷ್ಪ ಗುಪ್ತರ ಕಲೆ’ ಎಂದಿದ್ದಾರೆ.
ಗುಪ್ತರ ದೇವಾಲಯದ ಲಕ್ಷಣಗಳು ಕೆಳಕಂಡಂತಿವೆ.
- ಅದಿಷ್ಠಾನದ (ಜಗುಲಿಯ) ಮೇಲೆ ನಿಂತ ದೇವಾಲಯ.
- ದೇಗುಲಕ್ಕೆ ಹೋಗಲು ಮೆಟ್ಟಿಲುಗಳ ಸಾಲು.
- ಚೌಕಾಕಾರದ ಕೆಲವೊಮ್ಮೆ ಆಯತಾಕಾರದ ದೇವಾಲಯದ ನಕ್ಷೆ.
- ಒಳಗರ್ಭಗೃಹದ ಸುತ್ತ ಮುಚ್ಚಿದ ಪ್ರದಕ್ಷಿಣಾ ಪಥವಿರುವುದು.
- ಗರ್ಭಗೃಹದ ಅಲಂಕೃತ ಬಾಗಿಲು.
- ಮುಖ ಮಂಟಪದ ಅಲಂಕೃತ ಕಂಬಗಳು.
- ಸಮತಟ್ಟಾದ ಚಾವಣಿ
- ನಂತರ ಕಾಲದಲ್ಲಿ ಮೇಲ್ಟಾವಣಿ ಮೇಲೆ ನಿಂತ ರೇಖಾನಾಗರ ಶಿಖರ.
- ಸರಳ ನಿರಾಡಂಬರ ಹೊರಗೋಡೆ.
- ಸಭಾಮಂಟಪ ಇಲ್ಲದೆ ಇರುವುದು.
ನಂತರದ ಲಕ್ಷಣಗಳು :
- ಚಿಕ್ಕ ದೇವಾಲಯಗಳನ್ನು ದೊಡ್ಡದನ್ನಾಗಿ ಮಾಡಿರುವುದು- ಹಲವು ಭಾಗಗಳ ಸೇರ್ಪಡೆ.
- ಆಯತಾಕಾರದ ನಕ್ಷೆ.
- ಸಭಾಮಂಟಪ ಇರುವುದು.
- ಸಭಾಮಂಟಪ ಮತ್ತು ಮುಖಮಂಟಪವನ್ನು ಸೇರಿಸುವ ಕೈಸಾಲೆ.
- ಜಗುಲಿಯಲ್ಲಿ ಶಿಲ್ಪಸಾಲು
- ದೇವಾಲಯದ ಹೊರಗೋಡೆಗಳನ್ನು ಶಿಲ್ಪಕೋಷ್ಟಗಳಿಂದ ಹಾಗೂ ಅರೆಗಂಭಗಳಿಂದ ಅಲಂಕರಿಸಿರುವುದು.
- ದೇವಾಲಯದ ಗೋಡೆಗಳ ಮೇಲೆ ಶಿಲ್ಪ.
- ಮೇಲ್ಛಾವಣಿಯ ಮೇಲೆ ಪಿರಮಿಡ್ ಆಕಾರದ ಶಿಖರ.
ನಾಗರ ಮತ್ತು ದ್ರಾವಿಡ ಶೈಲಿಗಳ ಉಗಮ : ಗುಪ್ತರ ಕಾಲದ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಆಗಮನವನ್ನು ಸೂಚಿಸುವ ಲಕ್ಷಣಗಳನ್ನು ಗುರುತಿಸಬಹುದು. ನಾಗರ ಶೈಲಿಯ ಪ್ರಮುಖ ಲಕ್ಷಣವಾದ ರೇಖಾನಾಗರ ಶಿಖರವನ್ನು ಬಿಟರ್‌ಗಾವ್ ನ ಇಟ್ಟಿಗೆಯ ದೇವಾಲಯದಲ್ಲಿ ಗಮನಿಸಬಹುದು.
ದ್ರಾವಿಡ ಶೈಲಿಯ ಪ್ರಮುಖ ಲಕ್ಷಣವಾದ ಪಿರಮಿಡ್ ಆಕಾರದ ಶಿಖರವನ್ನು ಭೋಧಗಯಾದ ಮಹಾಭೋಧಿ ದೇವಾಲಯದಲ್ಲಿ ಗಮನಿಸಬಹುದು. ಇದರಿಂದ ಗುಪ್ತರಕಾಲವು ಈ ಎರಡೂ ಶೈಲಿಗಳ ಉಗಮಸ್ಥಾನವಾಗಿದ್ದು, ನಂತರ ಕಾಲದಲ್ಲಿ ಪರಿಪಕ್ವವಾಯಿತೆಂದು ತಿಳಿಯುತ್ತದೆ.
ದೇವಫರ್‌ನ ದಶಾವತಾರ ದೇವಾಲಯ : ಇದು ಗುಪ್ತರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಇದು 40 ಅಡಿ ಎತ್ತರದ ಶಿಖರವನ್ನು ಒಳಗೊಂಡಿದೆ. ದೇವಾಲಯದ ಬಾಗಿಲು ಹೆಚ್ಚು ಅಲಂಕಾರಭರಿತವಾಗಿದೆ. ಗಂಗಾ-ಯಮುನ ನದಿಗಳ ಸಂಗಮದ ಚಿತ್ರ ಮನೋಜ್ಞವಾಗಿದೆ. ಬಾಗಿಲಿನಲ್ಲಿ ಪೂರ್ಣಘಟ, ಮಿಥುನ ಚಿತ್ರಗಳು, ಪತ್ರಾವಳಿ ಮನೋಹರವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನದ ಸುಂದರ ದೃಶ್ಯಾವಳಿಯನ್ನು ಈ ದೇವಾಲಯ ಒಳಗೊಂಡಿದೆ.
ಇತರ ಪ್ರಮುಖ ದೇವಾಲಯಗಳು :
- ಜಬ್ಬಲ್‌ಪುರ ಜಿಲ್ಲೆಯ ತಿಗಾವದಲ್ಲಿರುವ ವಿಷ್ಣುದೇವಾಲಯ
- ಭುಮರದಲ್ಲಿರುವ ಶಿವ ದೇವಾಲಯ
- ಅಜಯ್‌ಗರ್‌ನ ಪಾರ್ವತಿ ದೇವಾಲಯ
- ಖೋಹದಲ್ಲಿರುವ ಏಕಮುಖ ಶಿವಲಿಂಗ ದೇವಾಲಯ
- ಗುಪ್ತರ ವಾಸ್ತುಶಿಲ್ಪದ ಮಾದರಿಯಲ್ಲಿರುವ ಐಹೊಳೆಯ ದುರ್ಗಾದೇವಾಲಯ
ಶಿಲ್ಪಕಲೆ : ಗುಪ್ತರ ಕಾಲದ ಶಿಲ್ಪಕಲೆಯು ಅಪೂರ್ವವಾದ ಸೌಂದಯ್ಯಕ್ಕೆ ಹೆಸರುವಾಸಿಯಾಗಿದೆ. ಅರುಣ್ ಭಟ್ಟಾಚಾರ್ಜಿಯವರ ಅಭಿಪ್ರಾಯದಲ್ಲಿ ‘ಶಿಲ್ಪಕಲೆಯಲ್ಲಿ ಗುಪ್ತಶಿಲ್ಪಗಳ ಉಳಿ ನಿರ್ಜೀವ ಶಿಲೆಗೆ ಚೇತನ ಹಾಗೂ ಲಾವಣ್ಯವನ್ನಿತ್ತಿದೆ’.
ಗುಪ್ತರ ಶಿಲ್ಪಕಲೆಯ ಲಕ್ಷಣಗಳು :
- ಎಲ್ಲಾ ಪ್ರಾಣಿ ಮತ್ತು ಸಸ್ಯ ವಿನ್ಯಾಸಗಳು ಮುಖ್ಯ ಶಿಲ್ಪದ ಕಥಾನಕದಿಂದ ಪೂರ್ತಿ ಹೊರಗೆ ಅಂಚಿಗೆ (ಬಾರ್ಡರ್ ಗೆ) ದೂಡಲ್ಪಟ್ಟಿರುವುದು.
- ಗುಪ್ತರ ಶಿಲ್ಪವು ಬಾಹ್ಯ ಲಕ್ಷಣ ಮತ್ತು ಅಂತಃಶಕ್ತಿಯ ಸಮ್ಮಿಲನ.
- ಗುಪ್ತರ ಕಾಲದ ಶಿಲ್ಪವು ಕುಳಿತಿರಲಿ, ನಿಂತಿರಲಿ ಅಥವಾ ಬಾಗಿರಲಿ ಸಮತೋಲನ ಸ್ಥಿತಿಯನ್ನು ತಲುಪಿರುವುದು.
- ಗುಪ್ತರ ಶಿಲ್ಪವು ಗ್ರೀಕರ ಅಥವಾ ಇನ್ಯಾವುದೇ ಶೈಲಿಯ ಪ್ರಭಾವಕ್ಕೆ ಒಳಗಾಗದೆ ಭಾರತೀಯತೆಯನ್ನು ಒಳಗೊಂಡಿರುವುದು.
- ಗುಪ್ತ ಶಿಲ್ಪದಲ್ಲಿ ಕಾಣುವ ತೇಜಸ್ಸು, ಪಾರದರ್ಶಕ ವಸ್ತ್ರ, ಅಲಂಕಾರಿಕ ಪ್ರಭಾವಳಿ.
ಕೆಲವು ಶಿಲ್ಪಾಕೃತಿಗಳು :
- ಸಾರನಾಥ ಆಸನ ರೂಢ ಬುದ್ಧನ ವಿಗ್ರಹ
- ಉದಯ ಗಿರಿಯ ಶಿಲ್ಪಗಳು
- ಬೆಸ್ನಗರದ ಗಂಗಾದೇವಿ ವಿಗ್ರಹ
- ಮಥುರಾದ ಬುದ್ಧನ ಪೂರ್ಣ ವಿಗ್ರಹ
- ಗ್ವಾಲಿಯರ್‌ನ ಅಪ್ಸರೆಯರ ಮೂರ್ತಿಗಳು