ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )

ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )

ಸಿಂಧ್‌ನ ಅರಬ್ ಆಕ್ರಮಣವು ಭಾರತದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಮುಹಮ್ಮದ್ ಬಿನ್ ಕಾಸಿಮ್ ನೇತೃತ್ವದಲ್ಲಿ, ಈ ಘಟನೆಯು ಭಾರತೀಯ ಉಪಖಂಡದಲ್ಲಿ ಮೊದಲ ಇಸ್ಲಾಮಿಕ್ ನೆಲೆಯನ್ನು ಸ್ಥಾಪಿಸಿತು. ಇದು ಈ ಪ್ರದೇಶದ ಇತಿಹಾಸವನ್ನು ರೂಪಿಸುವ ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯವನ್ನು ಪ್ರಾರಂಭಿಸಿತು. ಆಕ್ರಮಣ ಮತ್ತು ಅದರ ಪರಿಣಾಮಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ:

ಹಿನ್ನೆಲೆ

* ಸಿಂಧ್‌ನ ಆಕ್ರಮಣವು ಕಲಿಫ್ ಅಲ್-ವಾಲಿದ್ I ರ ಅಡಿಯಲ್ಲಿ ಉಮಯ್ಯದ್ ಕ್ಯಾಲಿಫೇಟ್‌ನ ವಿಸ್ತರಣಾ ನೀತಿಗಳ ಭಾಗವಾಗಿತ್ತು.

* ರಾಜಾ ದಾಹಿರ್ ಅಡಿಯಲ್ಲಿ ಬ್ರಾಹ್ಮಣ ರಾಜವಂಶದಿಂದ ಆಳಲ್ಪಟ್ಟ ಸಿಂಧ್ ಪ್ರದೇಶವು ಆರ್ಥಿಕವಾಗಿ ಸಮೃದ್ಧವಾಗಿತ್ತು ಮತ್ತು ಅರೇಬಿಯನ್ ಪೆನಿನ್ಸುಲಾ, ಪರ್ಷಿಯಾ ಮತ್ತು ಭಾರತವನ್ನು ಸಂಪರ್ಕಿಸುವ ವ್ಯಾಪಾರ ಮಾರ್ಗಗಳ ಬಳಿ ಆಯಕಟ್ಟಿನ ಸ್ಥಳವಾಗಿದೆ.

* ಆಕ್ರಮಣಕ್ಕೆ ತಕ್ಷಣದ ಪ್ರಚೋದನೆಯು ಸ್ಥಳೀಯ ಕಡಲ್ಗಳ್ಳರಿಂದ ದೆಬಾಲ್ ಬಂದರಿನ ಬಳಿ ಅರಬ್ ವ್ಯಾಪಾರಿ ಹಡಗುಗಳ ಲೂಟಿಯಾಗಿದೆ. ರಾಜಾ ದಾಹಿರ್‌ಗೆ ನ್ಯಾಯಕ್ಕಾಗಿ ಮಾಡಿದ ಮನವಿಗಳು ವಿಫಲವಾದವುಇದು ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಲು  ಪ್ರೇರೇಪಿಸಿತು.

ಆಕ್ರಮಣ

* ಯುವ ಮತ್ತು ನುರಿತ ಜನರಲ್ ಮುಹಮ್ಮದ್ ಬಿನ್ ಕಾಸಿಮ್ ಅವರನ್ನು ಅಭಿಯಾನದ ನೇತೃತ್ವ ವಹಿಸಲು ನೇಮಿಸಲಾಯಿತು.

* 711 CE ನಲ್ಲಿ, ಖಾಸಿಮ್ ತನ್ನ ಆಕ್ರಮಣವನ್ನು ಸುಸಜ್ಜಿತ ಸೈನ್ಯ ಮತ್ತು ಮುಂದುವರಿದ ಮುತ್ತಿಗೆ ಶಸ್ತ್ರಾಸ್ತ್ರಗಳೊಂದಿಗೆ ಪ್ರಾರಂಭಿಸಿದನು.

ಆಕ್ರಮಣದ ಪ್ರಮುಖ ಘಟನೆಗಳು:

* ದೇಬಲ್‌ನ ವಶ: ಉಗ್ರ ಪ್ರತಿರೋಧದ ನಂತರ ಖಾಸಿಮ್‌ನ ಪಡೆಗಳು ಬಂದರು ನಗರವಾದ ದೆಬಾಲ್ ಅನ್ನು ವಶಪಡಿಸಿಕೊಂಡವು.

* ರಾಜಾ ದಾಹಿರ್ ಮೇಲೆ ವಿಜಯ: ನಿರ್ಣಾಯಕ ಯುದ್ಧವು ಸಿಂಧೂ ನದಿಯ ಬಳಿ ನಡೆಯಿತು, ಅಲ್ಲಿ ರಾಜ ದಾಹಿರ್ ಸೋಲಿಸಲ್ಪಟ್ಟನು ಮತ್ತು ಕೊಲ್ಲಲ್ಪಟ್ಟನು.

* ಸಿಂಧ್ ಮತ್ತು ಮುಲ್ತಾನ್ ವಿಜಯ: ಅರಬ್ ಪಡೆಗಳು ಬ್ರಾಹ್ಮಣಾಬಾದ್ ಮತ್ತು ಮುಲ್ತಾನ್ ನಂತಹ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಮುಂದಾದವು, ಸಿಂಧ್ ಮೇಲೆ ತಮ್ಮ ನಿಯಂತ್ರಣವನ್ನು ಬಲಪಡಿಸಿತು.

ಆಕ್ರಮಣದ ಪರಿಣಾಮಗಳು
1. ಇಸ್ಲಾಮಿಕ್ ಆಡಳಿತದ ಸ್ಥಾಪನೆ:

* ಸಿಂಧ್ ಉಮಯ್ಯದ್ ಕ್ಯಾಲಿಫೇಟ್‌ನ ಭಾಗವಾಯಿತು, ಭಾರತದಲ್ಲಿ ಮೊದಲ ಇಸ್ಲಾಮಿಕ್ ಪ್ರಾಂತ್ಯವನ್ನು ಸ್ಥಾಪಿಸಿತು.

* ಇದು ಭಾರತೀಯ ಉಪಖಂಡದಲ್ಲಿ ಇಸ್ಲಾಂ ಅಸ್ತಿತ್ವದ ಆರಂಭವನ್ನು ಗುರುತಿಸಿತು.

2. ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಭಾವ:

* ಅರಬ್ ಆಡಳಿತಗಾರರು ಧಾರ್ಮಿಕ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡರು, ಸ್ಥಳೀಯ ಹಿಂದೂಗಳು ಮತ್ತು ಬೌದ್ಧರು ಜಿಜ್ಯಾ (ತೆರಿಗೆ) ಪಾವತಿಸಲು ಬದಲಾಗಿ ತಮ್ಮ ನಂಬಿಕೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

* ಆಕ್ರಮಣವು ಸಿಂಧ್‌ಗೆ ಇಸ್ಲಾಮಿಕ್ ಸಂಸ್ಕೃತಿ, ಆಡಳಿತ ಮತ್ತು ಕಾನೂನನ್ನು ಪರಿಚಯಿಸಿತು.

3. ವ್ಯಾಪಾರ ಮತ್ತು ಆರ್ಥಿಕ ಪರಿಣಾಮ:

* ಸಿಂಡ್‌ನ ಕ್ಯಾಲಿಫೇಟ್‌ನ ಸಂಯೋಜನೆಯು ಭಾರತ, ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ನಡುವಿನ ವ್ಯಾಪಾರವನ್ನು ವಿಸ್ತರಿಸಿತು.

* ಡೆಬಾಲ್ ನಂತಹ ಬಂದರುಗಳು ಸರಕುಗಳು, ಕಲ್ಪನೆಗಳು ಮತ್ತು ತಂತ್ರಜ್ಞಾನಗಳ ವಿನಿಮಯವನ್ನು ಸುಗಮಗೊಳಿಸಿದವು.

4. ದೀರ್ಘಾವಧಿಯ ಪ್ರಭಾವ:

ಅರಬ್ ಆಕ್ರಮಣವು ನಂತರದ ಮುಸ್ಲಿಂ ಆಕ್ರಮಣಗಳಿಗೆ ದಾರಿ ಮಾಡಿಕೊಟ್ಟಿತು ಮತ್ತು ಅಂತಿಮವಾಗಿ ಭಾರತದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು, ಉದಾಹರಣೆಗೆ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯ.

* ಇದು ಅರಬ್ ಮತ್ತು ಭಾರತೀಯ ಸಂಪ್ರದಾಯಗಳನ್ನು ಮಿಶ್ರಣ ಮಾಡುವ ಮೂಲಕ ಪ್ರದೇಶದ ಸಾಂಸ್ಕೃತಿಕ ಮತ್ತು ಭಾಷಿಕ ಬೆಳವಣಿಗೆಯ ಮೇಲೂ ಪ್ರಭಾವ ಬೀರಿತು.

ಮಹತ್ವ

ಸಿಂಧ್‌ನ ಅರಬ್ ಆಕ್ರಮಣವು ಕೇವಲ ಮಿಲಿಟರಿ ವಿಜಯವಾಗಿರಲಿಲ್ಲ; ಇದು ಉಪಖಂಡದಲ್ಲಿ ಇಸ್ಲಾಮಿಕ್ ಪ್ರಭಾವದ ಆರಂಭವನ್ನು ಗುರುತಿಸಿದ ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಪ್ರಾದೇಶಿಕ ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ, ಈ ಆಕ್ರಮಣದಿಂದ ಪ್ರಾರಂಭವಾದ ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನಗಳು ಭಾರತೀಯ ಉಪಖಂಡದ ಇತಿಹಾಸ ಮತ್ತು ಗುರುತಿನ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿತು.

ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ

ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ

ಅರ್ಥ:

ಸಂಘಂ ಎಂದರೆ ಒಂದು ಕೂಟ ಎಂದರ್ಥ, ಸಂಘಂ ಎಂಬ ಪದವು ತಮಿಳಿನ ಕೂಡಲ್ ಎಂಬ ಪದದಿಂದ ಬಂದಿದೆ. ತಮಿಳಿನ ಕೂಡಲ್ ಎಂಬ ಪದವನ್ನು ಬೌದ್ಧರು ಹಾಗೂ ಜೈನರು ಸಂಘ ಎಂಬ ಸಂಸ್ಕೃತ ಪದಕ್ಕೆ ಸಮಾನವಾಗಿ ಬಳಸಿದರು. ಆದ್ದರಿಂದ ಕೂಡಲ್ ಹಾಗೂ ಸಂಘಂ ಎಂಬ ಎರಡು ಪದಗಳು ಸಮಾನಾರ್ಥ ಪದಗಳಾಗಿವೆ. ಸಂಘಂ ಎಂಬುದು ತಮಿಳು ಸಾಹಿತ್ಯರಾಶಿಯನ್ನು ಸೃಷ್ಠಿಸಿದ ಒಂದು ಸಂಸ್ಥೆ ಅಥವಾ ವಿದ್ವತ್ ಗೋಷ್ಠಿ ಸಾಹಿತ್ಯ ಎಂದರೆ ಕೂಟದ ವಿದ್ವತ್ ಜನರು ರಚಿಸಿದ ವಿಚಾರ ಪೂರಿತ ಸಾಹಿತ್ಯ. ಈ ಸಾಹಿತ್ಯ ಗೋಷ್ಠಿಯಲ್ಲಿ ಅಸಂಖ್ಯಾತ ದಾರ್ಶನಿಕರು, ಕವಿಗಳು ಹಾಗೂ ವಿದ್ವಾಂಸರು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಸಂಘಂ ಸಾಹಿತ್ಯಗೋಷ್ಠಿಗಳು ಪಾಂಡ್ಯ ಅರಸರ ಆಶ್ರಯದಲ್ಲಿ ನಡೆಯುತ್ತಿದ್ದುದರಿಂದ ಅವರೂ ಸಹ ವಿದ್ವತ್ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ಗೋಷ್ಠಿಯಲ್ಲಿ ರಾಜಮನೆತನದವರೇ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದರಿಂದ ಅದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದಿತು. ಅದರಲ್ಲೂ ತಮಿಳು ಭಾಷೆಯೇ ಈ ಗೋಷ್ಠಿಯ ಪ್ರಧಾನ ಭಾಷೆಯಾದ ಕಾರಣದಿಂದ ಪಾಂಡ್ಯರು, ಚೇರರು ಹಾಗೂ ಚೋಳರು ವಿಶೇಷವಾಗಿ ಅದರ ಪ್ರಚಾರಕ್ಕೆ ಶ್ರಮಿಸಿದರು. ತಮಿಳು ಆರಂಭದ ಭಾಷೆಯಾದ ಕಾರಣ ಈ ಕಾಲವನ್ನು ‘ಸಂಘಂ ಯುಗ’ ಎಂದು ಕರೆಯಲಾಗಿದೆ.

ಪ್ರಾಚೀನ ಕಾಲದಲ್ಲಿ ಒಟ್ಟು ಮೂರು ಸಂಘಂಗಳು ಅಸ್ತಿತ್ವದಲ್ಲಿ ಇದ್ದವು. ಈ ಮೂರು ಸಂಘಂಗಳು ಒಟ್ಟು 9990 ವರ್ಷಗಳ ಅವಧಿಯಲ್ಲಿ ಕಂಡುಬಂದಿದ್ದು, ಇದರಲ್ಲಿ 8598 ಕವಿಗಳು ಭಾಗವಹಿಸಿದ್ದರು. ಸುಮಾರು 197 ಪಾಂಡ್ಯ ಅರಸರು ಸಂಘಂ ಗೋಷ್ಠಿಗೆ ಮಹಾ ಶೋಷಕರಾಗಿದ್ದರು. ಕೆಲವು ಶಾಸನಗಳಲ್ಲಿ ಕಡುಂಗನ್ ಹಾಗೂ ಉಗ್ರಪ್ಪೆರುವಾಲುಡಿ ಎಂಬ ರಾಜರ ಹೆಸರುಗಳು ಕಂಡು ಬಂದಿವೆ.

ಸಂಘಂ ಕಾಲ:

ತಮಿಳು ಭಾಷೆಯ ಸಾಹಿತ್ಯದ ಆರಂಭದ ಯುಗವನ್ನು ಸಾಮಾನ್ಯವಾಗಿ ಸಂಘಂ ಯುಗ ಎಂದು ನಂಬಲಾಗಿದೆಯಾದರೂ ಭಾರತದ ಆನೇಕ ಇತಿಹಾಸತಜ್ಞರು ಸಂಘಂ ಯುಗದ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಸಂಘಂ ಯುಗದಲ್ಲಿ ರಚಿತವಾದ ಕವಿತೆಗಳು ಹಾಗೂ ಮಹಾಕಾವ್ಯಗಳಾದ ಶಿಲಪ್ಪಧಿಕಾರಂ ಹಾಗೂ ಮಣಿಮೇಖಲೈಗಳಲ್ಲಿ ಉಲ್ಲೇಖವಾಗಿರುವ ಸಾಮಾಜಿಕ ಜೀವನ ಮತ್ತು ಕ್ರಿಶ ಮೊದಲನೆಯ ಶತಮಾನದಲ್ಲಿ ರಚಿತವಾದ ಗ್ರೀಕ್ ಹಾಗೂ ರೋಮನ್ ಬರಹಗಳ ನಡುವೆ ಸಾಕಷ್ಟು ಸಾಮ್ಯತೆ ಇರುವುದರಿಂದ ಸಂಘಂ ಯುಗ ಕ್ರಿಶ. ಮೊದಲನೆಯ ಶತಮಾನದಲ್ಲಿ ಆರಂಭವಾಯಿತೆಂದು ಡಾ.ಎನ್.ಸುಬ್ರಮಣ್ಯಂರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪ್ರೊ. ಕೆ.ಎ.ನೀಲಕಂಠಶಾಸ್ತ್ರೀಯವರು ಕ್ರಿಶ. ಮೊದಲ ಮೂರು ಶತಮಾನಗಳು ಸಹ ಸಂಘಂ ಕಾಲಗಳೆಂದೇ ಹೇಳಿದ್ದಾರೆ. ಇವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಪ್ರೊ.ಕೆ.ಸತ್ಯನಾಥ ಅಯ್ಯರ್ ಅವರು ಮುಷ್ಠಿಕರಿಸಿದ್ದಾರೆ. ಪಾಂಡ್ಯ ಅರಸರಿಂದ ಪೋಷಣೆಗೊಳಗಾಗಿದ್ದ ಸಂಘಂಗಳು ಈ ಕೆಳಗಿನಂತಿದೆ.

1) ಮೊದಲನೆಯ ಸಂಘಂ

ಮೊದಲನೆಯ ಸಂಘಂ ಕಾಲವು ದಕ್ಷಿಣ ಮಧುರೈ ನಗರದಲ್ಲಿ ಕಂಡು ಬಂದಿತು. ಇದು ಆದಿ ತಮಿಳು ಸಾಹಿತ್ಯದ ಕೇಂದ್ರಸ್ಥಾನವಾಗಿತ್ತು. ಮಧುರೈ ನಗರವು ಇಂದಿನ ಕನ್ಯಾಕುಮಾರಿಯವರೆಗೂ ವ್ಯಾಪಿಸಿತ್ತು. ನಂತರ ಕಡಲು ಕೊರೆತದ ಪರಿಣಾಮವಾಗಿ ಮಧುರೈ ನಗರ ಸಮುದ್ರದಲ್ಲಿ ಮುಳುಗಿ ಹೋಯಿತು. ಮೊದಲ ಸಂಘಂ ಸಂಸ್ಕೃತಿಯ ಅಧ್ಯಕ್ಷತೆಯನ್ನು ಆಗತ್ತಿಯರ್ ಎಂಬ ವ್ಯಕ್ತಿ ನಿರ್ವಹಿಸಿದ್ದನು. ಇದರಲ್ಲಿ ಒಟ್ಟು 549 ಜನ ಸದಸ್ಯರಿದ್ದರು. ಇದು ಸುಮಾರು 4400 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇದ್ದಿತು. ಈ ಅವಧಿಯಲ್ಲಿ ರಚಿತವಾದ ಯಾವುದೇ ಗ್ರಂಥಗಳಾಗಲಿ, ಕೃತಿಗಳಾಗಲಿ ಮತ್ತು ಅವಶೇಷಗಳಾಗಲಿ ನಮಗೆ ಇಂದು ದೊರಕಿಲ್ಲ.

2) ಎರಡನೆಯ ಸಂಘಂ

ಎರಡನೆಯ ಸಂಘಂ ಸಂಸ್ಕೃತಿಯು ಕಪಾಟಪುರಂನಲ್ಲಿ ಕಂಡು ಬಂದಿತು. ಕಪಾಟಿ ಎಂದರೆ ಬಾಗಿಲು ಅಥವಾ ದ್ವಾರ ಎಂದರ್ಥ. ಈ ನಗರವನ್ನು ಪಾಂಡ್ಯ ಅರಸರು ಸ್ಥಾಪಿಸಿದ್ದರು. ಇದು ಸಹ ಕಡಲ ಕೊರೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಹೋಗಿತ್ತು ಸಂಘಂನ ಮೊದಲ ನಗರದ ನಾಶದಿಂದ ಪಾಂಡ್ಯರು ಪಾಠ ಕಲಿಯಲಿಲ್ಲವಾದ್ದರಿಂದ ಅವರು ಎರಡನೆಯ ನಗರವನ್ನು ಸಹ ಕಳೆದುಕೊಳ್ಳಬೇಕಾಯಿತು. ಈ ನಗರದ ಕುರಿತು ರಾಮಾಯಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಎರಡನೆಯ ಸಂಘಂನ ಅಧ್ಯಕ್ಷರಾಗಿ ಆಗತ್ತಿಯರ್ ಕಾರ್ಯ ನಿರ್ವಹಿಸಿದನು. ಇದರ ಸದಸ್ಯರ ಒಟ್ಟು ಸಂಖ್ಯೆ 49ರಷ್ಟು ಇದ್ದೀತು. ಇದು 3700 ವರ್ಷಗಳ ಬಾಳಿತು. ಸುಮಾರು 59 ಪಾಂಡ್ಯ ಅರಸರು ಇದನ್ನು ಪೋಷಿಸಿ ಬೆಳೆಸಿದರು. ಈ ಅವಧಿಯಲ್ಲಿ ಅನೇಕ ಕೃತಿಗಳು ರಚನೆಯಾದರೂ ಅವುಗಳೆಲ್ಲಾ ನಾಶವಾಗಿ ಕೇವಲ ಒಂದೇ ಒಂದು ಕೃತಿ ಇಂದಿಗೂ ಉಳಿದು ಬಂದಿದೆ, ಅನುವೇ ತೊಲ್ ಗ್ರಾಪಿಯಂ ಈಗಿರುವ ಸಂಘಂ ಸಾಹಿತ್ಯ ಕೃತಿಗಳಲ್ಲಿ ಇದು ಅತ್ಯಂತ ಪ್ರಾಚೀನವಾದ ಕೃತಿಯಾಗಿದೆ. ಇದು ತಮಿಳು ಭಾಷೆ ಹಾಗೂ ವ್ಯಾಕರಣದ ಕುರಿತು ಮಹತ್ವ ಪೂರ್ಣವಾದ ಮಾಹಿತಿಯನ್ನು ಒದಗಿಸುತ್ತದೆ. ತೊಲ್ಕಾಪಿಯಂ ಕೃತಿಯನ್ನು ತೊಲ್ಕಾಪಿಯರ್ ಎಂಬುವವನು ರಚಿಸಿದನು. ಇವನು ಆಗಸ್ತ್ರ ಮುನಿಯ ಶಿಷ್ಯನೆಂದು ನಂಬಲಾಗಿದೆ.

3. ಮೂರನೆಯ ಸಂಘಂ ಸಂಸ್ಕೃತಿ

ಮೂರನೆಯ ಸಂಘಂ ಸಂಸ್ಕೃತಿಯು ಇಂದಿನ ಮಧುರೈ ನಗರದಲ್ಲಿ ಆರಂಭವಾಯಿತು. ಕಪಾಟಿಪುರಂ ನಗರವು ಸಮುದ್ರದ ಕೊರೆತಕ್ಕೆ ಸಿಕ್ಕು ನಾಶವಾದ ನಂತರ ಪಾಂಡ್ಯ ದೊರೆಯಾದ ಉಗ್ರಪ್ಪೆರುವಲುಡಿ ಎಂಬಾತನು ವೈಗೈ ನದಿಯ ದಂಡೆಯ ಮೇಲೆ ಮಧುರೈ ನಗರವನ್ನು ಸ್ಥಾಪಿಸಿ ಅದನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮೂರನೆಯ ಸಂಘಂನ ಅಧ್ಯಕ್ಷತೆಯನ್ನು ನಕ್ಕಿನಾರ್ ಎಂಬಾತ ಪಹಿಸಿದ್ದನು. ಇದರ ಒಟ್ಟು ಸದಸ್ಯರ ಸಂಖ್ಯೆ 49ರಷ್ಟು ಇತ್ತು. ಇದು ಸುಮಾರು 1850 ವರ್ಷಗಳ ಕಾಲ ಬಾಳಿದ್ದಿತು. ಇದನ್ನು ಒಟ್ಟು 59 ಪಾಂಡ್ಯ ಅರಸರು ಪೋಷಿಸಿಕೊಂಡು ಬಂದಿದ್ದರು. ಇತಿಹಾಸಕಾರರ ಪ್ರಕಾರ ಮೊದಲೆರಡು ಸಂಘಂಗಳ ವರ್ಣನೆಯು ಅತ್ಯಂತ ಉತ್ತೇಕ್ಷೆಯಿಂದ ಕೂಡಿದ್ದು ಮೂರನೆಯ ಸಂಘಂ ಮಾತ್ರ ಐತಿಹಾಸಿಕವಾಗಿ ಅಸ್ತಿತ್ವದಲ್ಲಿ ಇದ್ದಿತೆಂದು ಹೇಳಲಾಗಿದೆ.

ಸಂಘಂ ಸಾಹಿತ್ಯ:

ತೊಲ್ಕಾಪಿಯಂ ಎಂಬ ವ್ಯಾಕರಣ ಕೃತಿಯು ತೊಳ್ಕಾಪಿಯರ್‌ನಿಂದ ರಚನೆಯಾಗಿದ್ದು, ಎರಡನೆಯ ಸಂಘಂ ಸಾಹಿತ್ಯದಲ್ಲಿ ಉಳಿದಿರುವ ಏಕೈಕ ಪ್ರಾಚೀನ ಕೃತಿಯಾಗಿದೆ. ಇದು ಅಕ್ಷರ ಸಂಯೋಜನೆ, ಪದ ಸಂಯೋಜನೆ, ಛಂದಸ್ಸು ಶಾಸ್ತ್ರ, ಪದಗಳ ವಿಂಗಡನೆ, ಅಂದಿನ ಸಾಮಾಜಿಕ ಆಚರಣೆಗಳು, ಸಾಹಿತ್ಯ ನಿಯಮಗಳು ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಈ ಕೃತಿಯು ಮೂರು ಪ್ರಮುಖ ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗವೂ 9 ಉಪ ಅಧ್ಯಾಯವನ್ನು ಒಳಗೊಂಡಿದೆ. ಜೊತೆಗೆ 1612 ಸೂತ್ರಗಳು ಇದರಲ್ಲಿವೆ ಆಗತ್ತಿಯಂ, ಪನ್ನಿರುಪದಲಂ, ಪಟ್ಟಪಾಡು, ಪವಿನೇಲ್, ಕೀಲ್‌ ಕಣಕ್ಕು, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದವು ಆ ಕಾಲಕ್ಕೆ ಸೇರಿದ ಪ್ರಮುಖ ಕೃತಿಗಳಾಗಿವೆ. ಎಟ್ಟುಟೊಗೈ (ಎಂಟು ಕವಿತಾ ಸಂಗ್ರಹಗಳು)

1) ಐಂಗೂರು ನೂರು ಎಂಬುದು 500 ಶೃಂಗಾರ ಕಾವ್ಯವಾಗಿದ್ದು ಇದನ್ನು ಗುಡಲೂರ್ ಕಿಲಾರಿಯವರು ಸಂಗ್ರಹ ಮಾಡಿದ್ದಾರೆ.

2) ನರಿನೈ ಕವನ ಸಂಗ್ರಹವು 400 ಕವನಗಳನ್ನು ಒಳಗೊಂಡಿದೆ. ಇದು ಸಂಗೀತ ಹಾಗೂ ಸಂಗೀತಗಾರರ ಬಗ್ಗೆ ಮಾಹಿತಿ ನೀಡುತ್ತದೆ. ಅಂದಿನ ಕಾಲದ ಪ್ರಮುಖ ರೇವು ಪಟ್ಟಣಗಳು ಮತ್ತು ಬೃಹತ್ ನಗರಗಳ ಕುರಿತು ಸಾಕಷ್ಟು ವಿವರಣೆ ಈ ಕೃತಿಯಲ್ಲಿದೆ.

 3) ಆಕನಾನೂರು ಎಂಬ ಕಾವ್ಯ ಸುಮಾರು 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಇದನ್ನು ರುದ್ರಶರ್ಮನೆಂಬುವವನು ಸಂಗ್ರಹಿಸಿದನು. ಇದು ಯುದ್ಧ ಹಾಗೂ ಸೈನಿಕರ ಬಗ್ಗೆ ಅಪಾರವಾದ ಮಾಹಿತಿಯನ್ನು ನೀಡುವ ಅತ್ಯಂತ ಜನಪ್ರಿಯವಾದ ಗ್ರಂಥವಾಗಿದೆ.

4) ಕುರಂತುಗೊಯ್ ಎಂಬುದು ಸಹ 400 ಪ್ರೇಮ ಕವನಗಳನ್ನು ಒಳಗೊಂಡಿದೆ. ಈ ಕವನ ಸಂಕಲನವು ಸಂಘಂ ಯುಗದ ಸುಂದರ ಸಾಮಾಜಿಕ ವ್ಯವಸ್ಥೆಯ ಕುರಿತು ವಿಪುಲವಾದ ಮಾಹಿತಿಯನ್ನು ನೀಡುತ್ತದೆ.

5) ಪುರನಾನೂರು 400 ಕವನಗಳನ್ನು ಹೊಂದಿದ ಒಂದು ಬೃಹತ್ ಕೃತಿಯಾಗಿದೆ. ಈ ಕವನ ಸಂಕಲನದಲ್ಲಿ ಅಂದಿನ ರಾಜರನ್ನು ಹೊಗಳಿ ಬರೆಯಲಾಗಿದೆ.

6) ಕಲಿತ್ತೊಗೈ ಎಂಬುದು 150 ಪ್ರೇಮ ಪ್ರಸಂಗಗಳನ್ನು ಒಳಗೊಂಡ ಕವನ ಸಂಕಲನವಾಗಿದೆ.

7) ಪರಿಪಾದಲ್ 24 ಪದ್ಯಗಳನ್ನು ಒಳಗೊಂಡ ಕೃತಿಯಾಗಿದ್ದು, ಇದರಲ್ಲಿ ದೇವರನ್ನು ಕುರಿತು ಹೊಗಳಿ ಬರೆಯಲಾಗಿದೆ.

8) ಪದಿರುಪತ್ತು ಚೇರ ರಾಜರನ್ನು ಹೊಗಳಿ ಬರೆದ 8 ಪದ್ಯಗಳ ಕೃತಿಯಾಗಿದೆ. ಈ ಮೇಲಿನ ಎಂಟು ಕವಿತಾ ಸಂಗ್ರಹಗಳು ಒಟ್ಟು 2282 ಪದ್ಯಗಳನ್ನು ಹೊಂದಿದ್ದು, ಇವುಗಳನ್ನು ಒಟ್ಟು 200 ಕವಿಗಳು ಬರೆದಿರಬಹುದೆಂದು ನಂಬಲಾಗಿದೆ.

ಪತ್ತುಪಾಟ್ಟು: (ಹತ್ತು ಕಾವ್ಯ ಸಂಕಲನಗಳು)

ಪತ್ತುಪಾಟ್ಟು ಎಂಬ ಹತ್ತು ಕಾವ್ಯ ಸಂಕಲನಗಳು ಈ ಕಾಲದಲ್ಲಿ ರಚನೆಯಾದವು. ಅವುಗಳೆಂದರೆ,

1) ತಿರುಮುರುಗಾರುಪ್ಪಡೈ

2) ಪೊಠುನಾರಾರುಪ್ಪಡೈ

3) ಶಿರುಪಾನಾರುಪ್ಪಡ್ಡೆ

4) ಪೆರುಂಪಾಣಾರುಪ್ಪಡೈ

5) ಮಲೈಪ್ರಾಟ್ಟು

6) ಮಧುರೈಕಾಂಚಿ

7) ನೆಡುನಾಂಲವಾಡೈ

8) ಕುರಿಯಂಜಿಪ್ಪಾಟು

9) ಪಟ್ಟಿನಪಾಲೈ

10) ಮಲೈಪಡುಕಾಡಾಂ. ಈ ಮೇಲಿನ ಎಲ್ಲಾ ಕೃತಿಗಳಲ್ಲಿ ಪ್ರೇದು ಹಾಗೂ ಪ್ರೇಮವನ್ನು ಹೊರತುಪಡಿಸಿ ಎಲ್ಲ ವಿಷಯಗಳೂ ಇದರಲ್ಲಿ ಇವೆ. ಈ ಎಲ್ಲಾ ಕವಿತೆಗಳು ಮುಖ್ಯವಾಗಿ ಪ್ರದೇಶಕ್ಕನುಗುಣವಾಗಿ ತಮಿಳು ಭೂಮಿ, ಬೆಟ್ಟ ಪ್ರದೇಶ, ಒಣಭೂಮಿ, ಅರಣ್ಯ ಸಾಗುವಳಿ ಬಯಲು ಮತ್ತು ಕರಾವಳಿ ಎಂದು ವಿಭಾಗಗೊಂಡಿವೆ.

ಪಡಿನೆಂಕಿಲ್ಲನಕ್ಕು (ಹದಿನೆಂಟು ಸಣ್ಣ ಗ್ರಂಥಗಳು)

ಇವು ಚಿಕ್ಕಚಿಕ್ಕ ಪದಿನೆಂಟು ಕವನ ಸಂಗ್ರಹಗಳಾಗಿವೆ. ಇವು ಯುದ್ಧ, ಜನಜೀವನ ಹಾಗೂ ಸೈನಿಕರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿವೆ. ಇವುಗಳು ಹೆಚ್ಚಾಗಿ ನೀತಿಬೋಧೆ ಹಾಗೂ ನೈತಿಕ ನಿಯಮಗಳನ್ನು ಬೋಧಿಸುವಂತಾಗಿದೆ. ಇವುಗಳಲ್ಲಿ ಬಹುಮುಖ್ಯವಾದವುಗಳೆಂದರೆ

1) ನಾಲಡಿಯರ್

2) ನಮ್ಮಡಿಕ್ಕಡಿಗೈ

3) ಇನ್ಸಾನಾರ್ ಪಾಡು

4) ಇನಿಯನಾರ್ ಪಾಡು

5) ಕಾರ್‌ನಾರ್‌ ಪಾಡು

6) ಕಳಿವಡಿನಾರ್ ನಾಡು

7) ಪಿಂಟಿನೈ ಐಂಪಾಡು

8)ಪಿಂಟಿನೈ ಎಳಪಾಡು

9) ತಿಣೈಮೊಳಿ ಐಂಪಾಟು

10) ತಿಣ್ಣೆಮೊಲೆನೂರೈಂಪಾಡು

11) ಇನ್ನಿಲೈ

12) ಕುರಳ್

13) ತಿರಿಕಡಗಂ

14) ಆಚಾರಕ್ಕೊವೈ

15) ತಳಿಮೊಳಿ

16) ಶಿರುಪಂಚಮೂಲಂ

17) ಮುದುಮೊಳೆಕ್ಕಾಂಚಿ

18) ಎಳಾದಿ ಇವುಗಳಲ್ಲಿ ಅತ್ಯಂತ ಪ್ರಮುಖವಾದ ಕೃತಿ ಎಂದರೆ ತಿರುವಳ್ಳುವರ್ ರಚಿಸಿದ  ತಿರುವಕ್ಕುರಳ್  ಇದನ್ನು  ತಮಿಳು ಭೂಮಿಯ ಬೈಬಲ್ ಎಂದು ಹೆಸರಾಗಿದೆ. ಈ ಮೇಲಿನ ಎಲ್ಲಾ ಕೃತಿಗಳು ಆರ್ಯಧರ್ಮ ಮತ್ತು ಅದರ ವಿಚಾರಗಳು, ಆಚರಣೆಗಳು ಮುಂತಾದ ವಿಷಯಗಳ ಕುರಿತು ತಿಳಿಸುತ್ತವೆ.

ಎರಡು ಮಹಾಕಾವ್ಯಗಳು:

ಕ್ರಿಶ.ಎರಡನೆಯ ಶತಮಾನವನ್ನು ತಮಿಳು ಸಾಹಿತ್ಯದ ಸುವರ್ಣಯುಗ ಎಂದು ಕರೆಯಲಾಗಿದೆ. ಕಾರಣ ಈ ಅವಧಿಯಲ್ಲಿ ಆನೇಕ ಮಹಾಕಾವ್ಯಗಳು ರಚನೆಯಾದವು. ಅವುಗಳೆಂದರೆ ಶಿಲಪ್ಪದಿಕಾರಂ, ಮಣಿಮೇಖಲೈ, ಜೀವನ ಸಿಂತಾಮಣಿ, ವಳಯಾಪಟಿ ಮತ್ತು ಕುಂಡಲಕೇಶಿ. ಇವುಗಳಲ್ಲಿ ಎರಡನ್ನು ಕ್ರಿಶ ಎರಡನೆಯ ಶತಮಾನದಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಅವುಗಳೆಂದರೆ ಇಲಂಗೋ-ಅಡಿಗಳ್ ಅವರಿಂದ ಬರೆಯಲಾದ ಶಿಲಪ್ಪದಿಕಾರಂ ಹಾಗೂ ಸತ್ತಲೈ ಸಾತ್ತನಾ‌ರ್ ಬರೆದ ಮಣಿಮೇಖಲೈ, ಈ ಎರಡೂ ಕೃತಿಗಳನ್ನು ಹೋಮರ್ ಕವಿಯ ಇಲಿಯಡ್ ಹಾಗು ಓಡಿಸ್ಸಿ ಎಂಬ ಮಹಾಕಾವ್ಯಗಳಿಗೆ ಹೋಲಿಸಲಾಗಿದೆ.

1) ಶಿಲಪ್ಪದಿಕಾರಂ:

ಶಿಲಪ್ಪದಿಕಾರಂ ಕಾವ್ಯವು ಇಳಂಗೊ ಅಡಿಗಳ್ ಎಂಬುವವನಿಂದ ರಚಿತವಾಯಿತು. ಇವನು ಚೋಳ ಅರಸನಾದ ಕರಿಕಾಲ ಚೋಳನ ಮೊಮ್ಮಗ. ಇಳಂಗೋ ಅಡಿಗಳ್ ಈ ಕಾವ್ಯವನ್ನು ಕ್ರಿ.ಶ. ಎರಡನೆಯ ಶತಮಾನದಲ್ಲಿ ರಚಿಸಿದನು. ಈ ಕೃತಿಯು ವರ್ತಕ ಕೋವಲನ್ ಹಾಗೂ ಕನ್ನಗಿಯರ ಕಥೆಯನ್ನು ಒಳಗೊಂಡಿದೆ. ಪ್ರಹರ್ ಪಟ್ಟಣದ ವರ್ತಕನಾದ ಕೋವಲನ್ ಎಂಬುದವನು ಮಾಧವಿ ಎಂಬ ವೇಶೈಯ ಮೋಹಕ್ಕೆ ಒಳಗಾಗಿ ಸಾದ್ವಿ ಹಾಗೂ ಸುಂದರವಾದ ತನ್ನ ಹೆಂಡತಿ ಕನ್ನಗಿಯನ್ನು ಕಡೆಗಣಿಸುತ್ತಾನೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಧವಿಯ ಮನೆಯಲ್ಲಿಯೇ ಕಾಲ ಕಳೆಯುತ್ತಾನೆ. ಈ ಅವಧಿಯಲ್ಲಿ ಕೋವಲನ್ ತಾನು ಸಂಪಾದಿಸಿದ ಆಸ್ತಿಯೆಲ್ಲವನ್ನು ಕಳೆದುಕೊಂಡು ಮತ್ತೆ ತನ್ನ ಹೆಂಡತಿಯಾದ ಕನ್ನಗಿಯ ಬಳಿಗೆ ಹಿಂತಿರುಗುತ್ತಾನೆ. ಗಂಡ ಮಾಡಿದ ತಪ್ಪನ್ನು ಕ್ಷಮಿಸಿದ ಕನ್ನಗಿಯು ಕೋವಲನ್‌ನನ್ನು ಪ್ರಹಾರ್ ಪಟ್ಟಣದಿಂದ ಕರೆದುಕೊಂಡು ಮಧುರಾ ನಗರಕ್ಕೆ ಹೋಗಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಮಧುರಾ ನಗರದಲ್ಲಿ ಇದ್ದಾಗ ಜೀವನ ಸಾಗಿಸುವುದು ಅವರಿಗೆ ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಗಿಯು ತನ್ನ ಬಳಿ ಇದ್ದ ಕಾಲಂದಿಗೆಯಲ್ಲಿ ಒಂದನ್ನು ಮಾಡಲು ಕೋವಲನ್‌‌ನಿಗೆ ನೀಡುತ್ತಾಳೆ. ಕಾಲಂದಿಗೆಯನ್ನು ಮಾರಿ ಬಂದ ಹಣದಿಂದ ಹೊಸ ಜೀವನವನ್ನು ಆರಂಭಿಸುತ್ತಾರೆ. ಆದರೆ, ಅಲ್ಲಿನ ರಾಜನು ತನ್ನ ಹೆಂಡತಿಯ ಕಾಲಂದಿಗೆಯನ್ನೇ ಮಾರಿದ್ದಾನೆ ಎಂದು ಅವನ ಮೇಲೆ ಕಳ್ಳತನದ ಆಪಾದನೆಯನ್ನು ಹೊರಿಸುತ್ತಾನೆ. ಪರಿಣಾಮವಾಗಿ ಆತ ಮರಣದಂಡನೆ ಶಿಕ್ಷೆಗೆ ಒಳಗಾಗುತ್ತಾನೆ. ಆಗ ಕನ್ನಗಿಯು ತನ್ನ ಬಳಿ ಇದ್ದ ಇನ್ನೊಂದು ಕಾಲಂದಿಗೆಯನ್ನು ಅರಸನಿಗೆ ತೋರಿಸುವುದರ ಮೂಲಕ ಕೋವಲನ್ ನಿರಪರಾಧಿ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತಾಳೆ. ತನ್ನ ತಪ್ಪಿಗೆ ಪ್ರಾಯಶ್ಚಿತ ಎಂಬಂತೆ ಅರಸ ಹೃದಯಾಘಾತಕ್ಕೆ ಒಳಗಾಗಿ ನಿಧನನಾಗುತ್ತಾನೆ. ಇದೊಂದು ಜೈನ ಕಾವ್ಯ. ಇದು ಮುಖ್ಯವಾಗಿ ಕನ್ನಗಿಯ ಪಾತಿವ್ರತ್ಯ, ಜೀವನ ಪ್ರೇಮ, ವಾತ್ಸಲ್ಯ ಹಾಗೂ ವಿಧಿಯ ಅಟ್ಟಹಾಸದ ಕುರಿತು ವಿವರಣೆ ನೀಡುತ್ತದೆ. ಕನ್ನಗಿಯನ್ನು ಪಾತಿವ್ರತ್ಯದ ದೇವತೆಯಾಗಿ ಆಕೆಗೆ ಚೇರ ಅರಸ ಶೆಂಗುಟ್ಟುವನ್ ದೇವಾಲಯವನ್ನು ಕಟ್ಟಿಸಿರುವುದನ್ನು ಈ ಮಹಾಕಾವ್ಯ ತಿಳಿಸುತ್ತದೆ. ಕನ್ನಗಿಯು ಸ್ವರ್ಗದಲ್ಲಿ ತನ್ನ ಗಂಡನನ್ನು ಸೇರಿಕೊಳ್ಳುತ್ತಾಳೆ. ಪರಿಣಾಮವಾಗಿ ಈ ನಾಡಿನಲ್ಲಿ ಕನ್ನಗಿ ಎಂಬ ಪಂಥವೊಂದು ಹುಟ್ಟಿಕೊಳ್ಳುತ್ತದೆ.

ಮಣಿಮೇಖಲೈ:

ಈ ಕಾವ್ಯವನ್ನು ಚಾತನಾರ್ ಎಂಬುವವನು ರಚಿಸಿದನು. ಇದೊಂದು ಬೌದ್ಧ ಕಾವ್ಯ ಇದು ಕೋವಲನ್ ಹಾಗೂ ಮಾಧವಿಯವರ ಮಗಳಾಗಿದ್ದ ಮಣೀಮೇಖಲೈಳ ಸಾಧನೆಯ ಕುರಿತು ಮಾಹಿತಿ ಒದಗಿಸುತ್ತದೆ. ಮಣಿಮೇಖಲೈ ಹೇಗೆ ತನ್ನ ಪಾತಿವ್ರತ್ಯವನ್ನು ರಾಜಕುಮಾರ ಉದಯ ಕುಮಾರನಿಂದ ರಕ್ಷಿಸಿಕೊಂಡಳು ಮತ್ತು ಬೌದ್ಧ ಧರ್ಮವನ್ನು ಪ್ರಚಾರ ಮಾಡುತ್ತಾ ಆಕೆ ಜನರ ಹಸಿವು ರೋಗರುಜಿನ ಮತ್ತು ಬಡತನವನ್ನು ನಿವಾರಿಸಲು ಹೋರಾಟ ನಡೆಸಿದಳು ಎಂಬುದರ ಕುರಿತು ಈ ಕೃತಿ ಹೇಳುತ್ತದೆ.

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ

ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ನವೀನ ಶೈಲಿಯೊಂದು ಹುಟ್ಟಿಕೊಂಡಿತು. ಇಂತಹ ಶೈಲಿಯನ್ನು ‘ದ್ರಾವಿಡ ಶೈಲಿ’ ಎಂದು ಹೆಸರಿಸಲಾಗಿದೆ. ದ್ರಾವಿಡ ಶೈಲಿಯನ್ನಾದರಿಸಿ ಉತ್ತಮ ಕಲಾಸ್ಮಾರಕಗಳು ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡವು ಪಲ್ಲವರ ವಾಸ್ತುಶಿಲ್ಪವನ್ನು ಅದರ ಬೆಳವಣಿಗೆಗೆ ಅನುಗುಣವಾಗಿ 2 ಭಾಗಗಳಲ್ಲಿ ವಿಂಗಡಿಸಬಹುದು.

1. ಗುಹಾ ದೇವಾಲಯಗಳು,

2. ದೇವಾಲಯಗಳು, 

1. ಗುಹಾ ದೇವಾಲಯಗಳು:

ಗುಹಾ ದೇವಾಲಯಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ನೋಡಬಹುದು.

ಎ) ಸ್ತಂಭಮಂಟಪಗಳು,

ಬಿ) ಏಕಶಿಲೆಯ ದೇವಾಲಯಗಳು.

ಎ) ಸ್ತಂಭಮಂಟಪಗಳು:

1ನೇ ಮಹೇಂದ್ರವರ್ಮನ ಕಾಲದಲ್ಲಿ ಈ ಶೈಲಿಯು ಬೆಳವಣಿಗೆ ಹೊಂದಿದ್ದರಿಂದ ಮಹೇಂದ್ರವರ್ಮನ ಶೈಲಿಯೆಂದು ಸಹ ಕರೆಯಲಾಗಿದೆ. ಸ್ತಂಭ ಮಂಟಪಗಳ ಗುಹಾದೇವಾಲಯಗಳು ಮಹಾಬಲಿಪುರಂನಲ್ಲಿರುವ 100 ಆಡಿ ಎತ್ತರದಲ್ಲಿ ಹಬ್ಬಿರುವ ಶಿಲಾಬೆಟ್ಟದಲ್ಲಿ ಕಂಡುಬರುತ್ತವೆ. ಸ್ತಂಭ ಮಂಟಪಗಳ ನಿರ್ಮಾಣಕ್ಕೆ ಇಟ್ಟಿಗೆ, ಮರ, ಲೋಹ ಅಥವಾ ಗಾರೆಯನ್ನು ಬಳಸಿರುವುದಿಲ್ಲ. ಸರಳವಾದ ಸ್ತಂಭಮಂಟಪಗಳಾಗಿದ್ದು ಒಂದು ಅಥವಾ ಎರಡು ಗರ್ಭಗೃಹಗಳನ್ನು ಒಳಗೊಂಡಿವೆ. ಈ ಶೈಲಿಯ ಪ್ರಮುಖ ಲಕ್ಷಣವೆಂದರೆ ಸ್ತಂಭಮಂಟಪಗಳ ಮುಂಭಾಗ ಏಳು ಅಡಿಗಳ ಸ್ತಂಭಗಳ ಸಾಲನ್ನು ಒಳಗೊಂಡಿರುವುದು.

ಬಿ) ಏಕಶಿಲಾ ದೇವಾಲಯಗಳು:

ಈ ಶೈಲಿಯು ನರಸಿಂಹವರ್ಮನ್ ಕಾಲದಲ್ಲಿ ಬೆಳವಣಿಗೆಯಾದ ಕಾರಣ ನರಸಿಂಹವರ್ಮನ್ ಶೈಲಿಯೆಂದೇ ಹೆಸರಾಗಿದೆ. ಈ ಶೈಲಿಯಲ್ಲಿ ಕೆತ್ತಲ್ಪಟ್ಟ ಮಂಟಪಗಳು ಮಹಾಬಲಿಪುರಂ ನಲ್ಲಿ ಕಂಡುಬರುತ್ತವೆ. ಅಂತಹ ಪ್ರಮುಖ 8 ರಥಗಳೆಂದರೆ, ಭೀಮ, ಅರ್ಜುನ, ಧರ್ಮರಾಯ, ನಕುಲ, ಸಹದೇವ ಇವು ಪಂಚಪಾಂಡವರ ಹೆಸರಿನಲ್ಲಿದ್ದರೆ, ಉಳಿದೆರೆಡು ರಥಗಳೆಂದರೆ ಗಣೇಶ ರಥ ಮತ್ತು ಒಳ್ಳೆಯಾನ್ ಕುಟ್ಟಿರಥ ಅತೀ ಉದ್ದವಾದ ಮತ್ತು ಪೂರ್ಣಗೊಂಡ ರಥವೆಂದರೆ ಧರ್ಮರಾಜರಥ. ಇದರಲ್ಲಿ ಪಲ್ಲವ ಶೈಲಿಯ ಲಕ್ಷಣಗಳು ಕಂಡುಬರುತ್ತವೆ. ಭೀಮ, ಗಣೇಶ ಮತ್ತು ಸಹದೇವ ರಥಗಳನ್ನು ಚಚೌಕ ಆಕಾರದಲ್ಲಿ ಕೆತ್ತಲಾಗಿದೆ. ಎರಡು ಮತ್ತು ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಬ್ರೌಪದಿ ರಥವು ಅತ್ಯಂತ ಚಿಕ್ಕ ರಥವಾಗಿದ್ದರೆ, ಭೀಮರಥ ಅತ್ಯಂತ ದೊಡ್ಡ ರಥವಾಗಿದೆ. ಪ್ರತಿಯೊಂದು ರಥವನ್ನು ಒಂದೇ ಆಖಂಡ ಶಿಲೆಯಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದು ರಥವು ಒಂದು ದೇವಾಲಯದ ವಿನ್ಯಾಸವನ್ನು ಹೊಂದಿದೆ.

2. ದೇವಾಲಯಗಳು:

ಪಲ್ಲವರ ಕಾಲದ ದೇವಾಲಯಗಳನ್ನು

ಎ)ರಾಜಸಿಂಹ ಶೈಲಿ,

ಬಿ)ಅಪರಾಜಿತ ಶೈಲಿಯ ದೇವಾಲಯಗಳೆಂದು ವಿಂಗಡಿಸಿ ನೋಡಬಹುದು.

ಎ) ರಾಜಸಿಂಹಶೈಲಿ:

ರಾಜಸಿಂಹನು ಈ ಶೈಲಿಯ ಕರ್ತೃವಾಗಿದ್ದನು. ಈ ಶೈಲಿಯ ಕಲಾಕೃತಿಗಳೆಂದರೆ ಮಹಾಬಲಿಪುರಂನಲ್ಲಿನ ತೀರದ ದೇವಾಲಯ, ಈಶ್ವರ ದೇವಾಲಯ ಮತ್ತು ಮುಕುಂದ ದೇವಾಲಯಗಳು, ಕಂಚಿಯಲ್ಲಿ ನಿರ್ಮಾಣ ಗೊಂಡಿರುವ ಕೈಲಾಸನಾಥ ದೇವಾಲಯ ಮತ್ತು ವೈಕುಂಟ ಪೆರುಮಾಳ್‌ ದೇವಾಲಯಗಳು ಈ ಶೈಲಿಯಲ್ಲಿನ ಎತ್ತರದ ಗೋಪುರಗಳನ್ನು ಒಳಗೊಂಡ ದೇವಾಲಯಗಳಾಗಿದೆ. ಇಂತಹ ದೇವಾಲಯಗಳ ಶಿಲ್ಪಗಳಲ್ಲಿ ರಾಜ-ರಾಣಿಯರ ಪೂರ್ಣ ವಿಗ್ರಹಗಳಿವೆ.

ತೀರದೇವಾಲಯ:

ಮಹಾಬಲಿಪುರಂ ನಲ್ಲಿರುವ ‘ತೀರ ದೇವಾಲಯ’ ಪಲ್ಲವರ ಕಾಲದ ಪ್ರಮುಖ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಪಲ್ಲವರ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಸಮುದ್ರ ದಂಚಿನಲ್ಲಿರುವ ದೇವಾಲಯ ವಾದುದರಿಂದ ಅಲೆಗಳ ಹೊಡೆತಕ್ಕೆ ಸಿಕ್ಕು ಶಿಥಿಲಗೊಂಡಿದೆ. ಕೈಲಾಸನಾಥ ದೇವಾಲಯದಲ್ಲಿ ಪಿರಮಿಡ್ಡಿನಾಕಾರದ ಶಿಖರ, ಸಮತಟ್ಟಾದ ಭಾವಣಿಯ ಮಂಟಪ ಹಾಗೂ ಮಂಟಪದ ಸ್ತಂಭಗಳಿಗೆ ಸಿಂಹಪೋಷಕವಾಗಿರುವಂತೆ ಕೆತ್ತಲಾಗಿದೆ. ಈ ದೇವಾಲಯ ಪಲ್ಲವರ ಶೈಲಿಯಲ್ಲಿನ ಮುಖಮಂಟಪ, ಸಭಾಮಂಟಪ ಹಾಗೂ ಗರ್ಭಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದಲ್ಲಿ ಪಲ್ಲವರ ಶೈಲಿಯ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ. ಈ ದೇವಾಲಯದ ತಳಭಾಗದ ಕಟ್ಟಡಕ್ಕೆ ಗ್ರಾನೈಟ್ ಶಿಲೆಯನ್ನು ಬಳಸಿದ್ದಾರೆ. ಮೇಲ್ಕಟ್ಟಡಕ್ಕೆ ಮರಳು ಶಿಲೆಯನ್ನು ಬಳಸಲಾಗಿದೆ.

ವೈಕುಂಠ ಪೆರುಮಾಳ್ ದೇವಾಲಯ ಕೈಲಾಸನಾಥ ದೇವಾಲಯಕ್ಕಿಂತಲೂ ವಿಸ್ತ್ರತವಾಗಿದೆ. ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಮೇಲ್ಬಾಗದಲ್ಲಿ ಗೋಪುರವು ಕಂಡುಬರುತ್ತದೆ.

ಬಿ) ಅಪರಾಜಿತ ಶೈಲಿ:

ಕ್ರಿಶ 9ನೇ ಶತಮಾನಕ್ಕೆ ಸೇರಿದ ಕಟ್ಟಡಗಳನ್ನು ‘ಅಪರಾಜಿತ ಶೈಲಿ’ ಎಂದು ಗುರುತಿಸಿ ಅದೇ ಹೆಸರಿನಲ್ಲಿ ಕರೆಯಲಾಗಿದೆ. ಚೋಳಕಲೆಗೆ ಅಪರಾಜಿತ ಶೈಲಿಯು ಸ್ಪಷ್ಟ ನಿದರ್ಶನವಾಗಿವೆ. ಈ ಶೈಲಿಯಲ್ಲಿ ಲಿಂಗಗಳನ್ನು ವರ್ತುಲಾಕಾರದಲ್ಲಿ ನಿರ್ಮಿಸಲಾಗಿದೆ.

ಮೂರ್ತಿಶಿಲ್ಪ:

ಪಲ್ಲವರ ಕಾಲದಲ್ಲಿ ಮೂರ್ತಿಶಿಲ್ಪ ಕೂಡ ಅಭಿವೃದ್ಧಿಗೊಂಡಿತ್ತು, ಮಹಾಬಲಿಪುರಂ ನಲ್ಲಿರುವ ‘ದೇವಗಂಗೆಯ ಭೂಸ್ಪರ್ಶ’ ಅಥವಾ ‘ಗಂಗಾವತರಣ’ ಶಿಲ್ಪವು ಅತ್ಯುತ್ತಮ ಉದಾಹರಣೆ ಎನಿಸಿದೆ. ಈ ಶಿಲ್ಪಕಲೆಯ ದೃಶ್ಯವನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಈ ಶಿಲೆಯು 99 ಅಡಿ ಉದ್ದ, 45 ಅಡಿ ಅಗಲ ಮತ್ತು 30ಅಡಿ ಎತ್ತರವಿದೆ.

ಮೊದಲನೇ ಮಹೇಂದ್ರವರ್ಮನು ಚಿತ್ರಕಲೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರಿಂದ ‘ಚಿತ್ತಕಾರಪುಲಿ’ (ಚಿತ್ರಕಾರರಲ್ಲಿ ಹುಲಿ) ಎಂಬ ಬಿರುದಿಗೆ ಪಾತ್ರನಾಗಿದ್ದನು. ಮಹಾಬಲಿಪುರಂನ ಮಂಟಪದಲ್ಲಿನ ಅನಂತಶಯನ, ಮಹಿಷಾಸುರಮರ್ದಿನಿ ಹಾಗೂ ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿಹಿಡಿದಿರುವ ದೃಶ್ಯ ನೋಡಲು ನಯನ ಮನೋಹರವಾಗಿದೆ.

ಪಲ್ಲವರ ಕಾಲದ ಗುಹಾ ದೇವಾಲಯಗಳಲ್ಲಿ ಭಿತ್ತಿಚಿತ್ರಗಳ ಬೆಳವಣಿಗೆಯನ್ನು ಕಾಣಬಹುದು. ಸಿತ್ತನ್ನವಾಸಲ್ ನಲ್ಲಿ ನೃತ್ಯಭಂಗಿಯಲ್ಲಿರುವ ಅಪ್ಸರೆಯರ ಚಿತ್ರಗಳಿವೆ.

ಕಂಚಿಯ ಪಲ್ಲವರ ಕಲಾಭಿವೃದ್ಧಿಯನ್ನು ಅವಲೋಕಿಸಿ ಪ್ರಖ್ಯಾತ ಕಲಾತಜ್ಞ ‘ಪರ್ಸಿಬ್ರೌನ್’ ದಕ್ಷಿಣಭಾರತದ ಕಲಾಶೈಲಿಯ ಅಭ್ಯುದಯಕ್ಕೆ ಪಲ್ಲವರು ಅಡಿಪಾಯಹಾಕಿದರು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿ.ಎ.ಸ್ಮಿತ್ ರವರು ‘ದಕ್ಷಿಣ ಭಾರತದ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಚರಿತ್ರೆ 6ನೇ ಶತಮಾನದ ಅಂತ್ಯದಲ್ಲಿ ಆರಂಭಗೊಂಡಿತು’ ಎಂದಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಪಲ್ಲವರ ಕಾಲವು ಸಾಂಸ್ಕೃತಿಕ ವೈಭವದ ಮೇಲ್ಪಂಕ್ತಿಯ ಕಾಲವೆನಿಸಿದೆ.

ಚೋಳರ ಕಾಲದ ಗ್ರಾಮಾಡಳಿತ

ಚೋಳರ ಕಾಲದ ಗ್ರಾಮಾಡಳಿತ

ಚೋಳರ ಕಾಲದ ಗ್ರಾಮಾಡಳಿತವು ಅತ್ಯಂತ ವೈಶಿಷ್ಟ್ಯಪೂರ್ಣವೆನಿಸಿತ್ತು. ಚೋಳರ ಗ್ರಾಮಾಡಳಿತದ ಸ್ಪಷ್ಟ ಚಿತ್ರಣವನ್ನು ಚೋಳಪರಾಂತಕನ ಉತ್ತರ ಮೇರೂರು ಶಾಸನ ವಿವರಣೆ ನೀಡುತ್ತದೆ. ಗ್ರಾಮಾಡಳಿತವನ್ನು ಗ್ರಾಮಸಭೆಯು ನೋಡಿಕೊಳ್ಳುತಿತ್ತು, ಗ್ರಾಮಾಡಳಿತದಲ್ಲಿ ಚೋಳ ಅಧಿಕಾರಿಗಳು ಸಲಹೆಗಾರರಾಗಿ ಮತ್ತು ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಉತ್ತರ ಮೇರೂರು ಶಾಸನದ ಪ್ರಕಾರ ಗ್ರಾಮಾಡಳಿತದಲ್ಲಿ ಎರಡು ಸಭೆಗಳಿದ್ದವು. ಅವುಗಳೆಂದರೆ ‘ಉರ್ ಮತ್ತು ಸಭಾ’. ಉರ್ಗಳು ಬಹುತೇಕ ಗ್ರಾಮಗಳಲ್ಲಿ ಅಸ್ತಿತ್ವದಲ್ಲಿದ್ದವು. ‘ಸಭಾ’ಗಳು ಬ್ರಾಹ್ಮಣರಿಗೆ ದತ್ತಿ ಕೊಡಲಾದ ಗ್ರಾಮಗಳಲ್ಲಿ ಕಂಡುಬರುತ್ತಿದ್ದವು. ಕೆಲವು ಗ್ರಾಮಗಳಲ್ಲಿ ‘ ಉರ್ ‘ಮತ್ತು ‘ಸಭಾ’ಗಳೆರಡು ಕಂಡುಬರುತ್ತಿದ್ದವು.

ಉತ್ತರ ಮೇರೂರ್ (ಚಂಗಲ್ ಪೇಟೆ ಜಿಲ್ಲೆ) ಶಿಲಾಶಾಸನವು ವೈಕುಂಠ ದೇವಸ್ಥಾನದ ಗೋಡೆಯ ಮೇಲೆ ಕೊರೆಯಲ್ಪಟ್ಟಿದೆ. ಇದು 2 ಶಾಸನಗಳನ್ನು ಒಳಗೊಂಡಿದ್ದು ಮೊದಲನೇ ಪರಾಂತಕನ 12 ಮತ್ತು 14ನೇ ಆಳ್ವಿಕೆಯ ವರ್ಷಗಳಲ್ಲಿ ಹೊರಡಿಸಲ್ಪಟ್ಟಿವೆ. ಮೊದಲನೇ ಶಾಸನವು ಗ್ರಾಮಸಭೆಗಳ ಸಂವಿಧಾನಿಕ ನೀತಿ ನಿಯಮಗಳನ್ನೊಳಗೊಂಡಿದೆ, ಎರಡನೆ ಶಾಸನವು ನೀತಿ ನಿಯಮಗಳ ದೀರ್ಘ ವಿವರಣೆಯನ್ನು ಮತ್ತು ಸುಧಾರಿತ ನೀತಿ ನಿಯಮಗಳನ್ನು ಒಳಗೊಂಡಿದೆ ಕ್ರಿಶ 921ರಲ್ಲಿ ಮೊದಲನೇ ಪರಾಂತಕನ 14ನೇ ಆಳ್ವಿಕೆಯ ವರ್ಷದಲ್ಲಿ ಹೊರಡಿಸಲ್ಪಟ್ಟ ಶಾಸನದ ನಿಯಮದ ಪ್ರಕಾರ ಹಳ್ಳಿಯಲ್ಲಿರುವ 30 ವಿಭಾಗಗಳ ಪೈಕಿ ಪ್ರತಿಯೊಂದು ವಿಭಾಗವು ಒಬ್ಬೊಬ್ಬ ಅಭ್ಯರ್ಥಿಯನ್ನು ಅಂತಿಮ ಆಯ್ಕೆಗೋಸ್ಕರ ನಾಮಕರಣ ಮಾಡಲಾಗುತಿತ್ತು ಈ ನಾಮಕರಣಗೊಳ್ಳುವ ಸದಸ್ಯರಿಗೆ ಕೆಲವು ಅರ್ಹತೆ ಮತ್ತು ಆನರ್ಹತೆಗಳನ್ನು ನಿಗಧಿಗೊಳಿಸಲಾಗಿತ್ತು.

ಸದಸ್ಯರಿಗಿರಬೇಕಾದ ಅರ್ಹತೆಗಳು:

ಚುನಾವಣೆಗೆ ಅಭ್ಯರ್ಥಿಯಾಗುವವನಿಗೆ ಕೆಳಗಿನ ಕನಿಷ್ಠ ಅರ್ಹತೆಗಳಿರಬೇಕಾಗಿತ್ತು.

1. ಅಭ್ಯರ್ಥಿಯು ಕನಿಷ್ಠ 1/4ವೇಲಿ (ಒಂದೂವರೆ ಎಕರೆಯಷ್ಟು) ತೆರಿಗೆ ಕೊಡುವ ಜಮೀನಿನ ಒಡೆಯನಾಗಿರಬೇಕು..

2. ತನ್ನದೇ ಆದ ಗೃಹನಿವೇಶನದಲ್ಲಿ ಕಟ್ಟಿದ ಒಂದು ಮನೆಯಲ್ಲಿ ವಾಸವಾಗಿರಬೇಕು.

3. 35 ವರ್ಷಕ್ಕಿಂತ ಹೆಚ್ಚು ಮತ್ತು 70ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

4. ವೈದಿಕ ಮಂತ್ರಗಳು ಮತ್ತು ಬ್ರಾಹ್ಮಣಗಳ ಜ್ಞಾನವಿರಬೇಕು, ಇಲ್ಲವಾದರೆ / ಬೇಲಿಯಷ್ಟು ಅವನಿಗೆ ಭೂಮಿಯಿದ್ದು ಅವನು ಒಂದು ವೇದ ಮತ್ತು ಒಂದು ಭಾಷ್ಯದಲ್ಲಿ ಪಾರಂಗತನಾಗಿರಬೇಕು.

5. ಮೇಲ್ಕಂಡ ಆರ್ಹತೆಗಳನ್ನು ಹೊಂದಿದವರಲ್ಲಿ ವ್ಯಾಪಾರವನ್ನು ಚೆನ್ನಾಗಿ ಅರಿತವರು ಹಾಗೂ ಗುಣವಂತರು, ಪ್ರಾಮಾಣಿಕರಿಗೆ ಮತ್ತು ಶುದ್ಧ ಮನಸ್ಸನ್ನು ಹೊಂದಿದವರನ್ನು ಆರಿಸಲಾಗುತ್ತಿತ್ತು.

ಅನರ್ಹತೆಗಳು:

ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿದ್ದರೂ, ಕೆಳಕಂಡ ಆಗರ್ಹತೆಗಳಿದ್ದಲ್ಲಿ ಅವರುಗಳಿಗೆ ಅವಕಾಶವಿರಲಿಲ್ಲ.

1. ಒಬ್ಬ ವ್ಯಕ್ತಿಯು ಕಳೆದ ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿದ್ದರೆ ಪುನರಾಯ್ಕೆಗೆ ಅನರ್ಹನಾಗುತ್ತಿದ್ದನು.

2. ಸಮಿತಿಯಲ್ಲಿದ್ದು ಸಮರ್ಪಕವಾದ ಲೆಕ್ಕಪತ್ರಗಳು ಹಾಗೂ ಇತರೆ ವಿಷಯಗಳ ಮಾಹಿತಿಯನ್ನು ಸಲ್ಲಿಸದೇ ಇರುವ ಅಭ್ಯರ್ಥಿ ಹಾಗೂ ಅವನ ಹತ್ತಿರದ ಸಂಬಂಧಿಕರು ಚುನಾವಣೆಗೆ ಸ್ಪರ್ಧಿಸಲು ಆನರ್ಹರಾಗುತ್ತಿದ್ದರು.

3. ಯಾರ ವಿರುದ್ಧ ಪಂಚ ಮಹಾಪಾಪಗಳಲ್ಲಿ ಮೊದಲ ನಾಲ್ಕು ಪಾಪಗಳಾದ ಬ್ರಾಹ್ಮಣ ಹತ್ಯೆ, ಮದ್ಯಸೇವನೆ, ಕಳ್ಳತನ ಮತ್ತು ವ್ಯಭಿಚಾರದ ಆರೋಪವಿರುತ್ತದೋ ಅವನ ಮತ್ತು ಅವನ ಸಂಬಂಧಿಕರು ಆಯ್ಕೆಯಾಗಲು ಅನರ್ಹರಾಗುತ್ತಿದ್ದರು.

4. ಅವಿವೇಕಿಗಳು, ಮತ್ತೊಬ್ಬರ ಆಸ್ತಿಲಂಪಟರು, ನಿಷಿದ್ದ ಆಹಾರವನ್ನು ಸೇವಿಸಿದವರು. ಕೀಳುಜಾತಿಯವರೊಂದಿಗೆ ಸಂಬಂಧ ಹೊಂದಿದ್ದಕ್ಕೆ ವರ್ಣಭ್ರಷ್ಟನಾಗಿದ್ದು ಪ್ರಾಯಶ್ಚಿತ್ತ ವಿಧಿಗಳನ್ನು ಆಚರಿಸದವರು ಆನರ್ಹರಾಗುತ್ತಿದ್ದರು.

ಈ ಮೇಲ್ಕಂಡ ಅರ್ಹತೆ ಆನರ್ಹತೆಗಳ ಹಿನ್ನೆಲೆಯಲ್ಲಿ ಗ್ರಾಮಸಭೆಯ ಸದಸ್ಯರನ್ನು ಆರಿಸಲಾಗುತ್ತಿತ್ತು.

ಆಯ್ಕೆಯ ವಿಧಾನ:

ಪ್ರತಿಯೊಂದು ಗ್ರಾಮವು ವಾರ್ಡ್ ಅಥವಾ ವಿಭಾಗಗಳನ್ನು ಹೊಂದಿತ್ತು ಗ್ರಾಮಸಭೆಗೆ ಪ್ರತಿ ವಾರ್ಡಿ ನಿಂದ ಒಬ್ಬೊಬ್ಬ ಅಭ್ಯರ್ಥಿಯನ್ನು ಚುನಾವಣೆಯ ಮೂಲಕ ಆರಿಸಲಾಗುತ್ತಿತ್ತು. ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿಗಳ ಹೆಸರುಗಳನ್ನು ತಾಳೆಗರಿಯ ಮೇಲೆ ಬರೆದು ಅಗಲವಾದ ಬಾಯುಳ್ಳ ಪಾತ್ರೆಯಲ್ಲಿ ಹಾಕುತ್ತಿದ್ದರು. ನಂತರ ಸರ್ವಸದಸ್ಯರ ಮಹಾಸಭೆಯಲ್ಲಿ ಮಗುವಿನಿಂದ ಚೀಟಿಯನ್ನು ಪಾತ್ರೆಯಿಂದ ಎತ್ತುವುದರ ಮೂಲಕ (ಲಾಟರಿ ವ್ಯವಸ್ಥೆ – ಕುಡುವೊಲೈ) ಆಯ್ಕೆಯಾದ ಪ್ರತಿನಿಧಿಯ ಹೆಸರನ್ನು ಪ್ರಕಟಿಸಲಾಗುತಿತ್ತು ಆಯ್ಕೆಯಾದ ಸದಸ್ಯನ ಕಾಲಾವಧಿಯು ಒಂದು ವರ್ಷವಾಗಿತ್ತು.

ಗ್ರಾಮ ಸಮಿತಿಗಳು ಅಥವಾ ವಾರಿಯಮ್ಗಳು:

ಆಯ್ಕೆಯಾದ 30 ಸದಸ್ಯರಲ್ಲಿ ಪ್ರಮುಖ ಸಮಿತಿಗಳನ್ನು ರಚಿಸಲಾಗುತ್ತಿತ್ತು.

1. ವಾರ್ಷಿಕಸಮಿತಿ (ಸಂವತ್ಸರ ವಾರಿಯಮ್) ಈ ಸಮಿತಿಯಲ್ಲಿ 12ಮಂದಿ ಸದಸ್ಯರಿದ್ದರು.

2. ತೊಟ್ಟಿವಾರಿಯಂ (ತೋಟ ಸಮಿತಿ) ಸಮಿತಿಯಲ್ಲಿ 12ಸದಸ್ಯರಿದ್ದರು.

3. ವಿಧಿವಾರಿಯಮ್ (ಕೆರೆಸಮಿತಿ) ಈ ಸಮಿತಿಯಲ್ಲಿ 6ಸದಸ್ಯರಿದ್ದರು.

ಈ ಮೇಲಿನ ಪ್ರಮುಖ ಸಮಿತಿಗಳಲ್ಲದೆ

1. ಪಂಚವಾರ ಸಮಿತಿ : 6 ಸದಸ್ಯರು,

2. ಪೊನ್ಸಾರಿಯಮ್ (ಚಿನ್ನದ ಸಮಿತಿ): 6 ಸದಸ್ಯರು.

ಇವರ ಅಧಿಕಾರವಧಿಯು 360 ದಿನಗಳಾಗಿದ್ದವು. ಸಮಿತಿಗಳ ಸಂಖ್ಯೆ ಮತ್ತು ಸದಸ್ಯರ ಸಂಖ್ಯೆಯು ಗ್ರಾಮದಿಂದ ಗ್ರಾಮಕ್ಕೆ ವ್ಯತ್ಯಾಸವಾಗುತ್ತಿತ್ತು, ಸಮಿತಿಗಳ ಸದಸ್ಯರನ್ನು ‘ವರಿಯಪೆರುಮಕ್ಕಳ್’ ಎಂದು ಕರೆಯಲಾಗುತಿತ್ತು. ಗ್ರಾಮಸಭೆಯನ್ನು ಗ್ರಾಮದ ದೇವಾಲಯಗಳಲ್ಲಿ ನಡೆಸಲಾಗುತಿತ್ತು ಕೆಲವು ಗ್ರಾಮಗಳಲ್ಲಿ ಮಹಾಸಭಾ ಮತ್ತು ಪೆರುಂಗಿರಿ ಎಂಬ ಸಮಿತಿಗಳಿದ್ದು ಅವುಗಳ ಸದಸ್ಯರನ್ನು ಪೆರುಮಕ್ಕಳ್ ಎಂದು ಕರೆಯಲಾಗುತ್ತಿತ್ತು.

ಗ್ರಾಮ ಸಭೆಯ (ಸಮಿತಿಗಳ) ಅಧಿಕಾರ ಹಾಗೂ ಕಾರ್ಯಗಳು:

ಗ್ರಾಮಸಭೆಯು ಆ ಗ್ರಾಮದ ಸಕಲ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರ ಹೊಂದಿತ್ತು.

1) ಗ್ರಾಮಸಭೆ ಖಾಸಗೀ ಭೂಮಿಯ ಮೇಲೆ ಅಧಿಪತ್ಯ ಹೊಂದಿದ್ದು, ಖಾಸಗಿ ಆಸ್ತಿಯ ವರ್ಗಾವಣೆಯ ಕಾರ್ಯವನ್ನು ಸಾಮಾನ್ಯಸಭೆಯು ನಿರ್ವಹಿಸುತ್ತಿತ್ತು. ಆಸ್ತಿಯ ವರ್ಗಾವಣೆಯಾಗಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು.

2) ಅರಣ್ಯಭೂಮಿ ಮತ್ತು ನಾಳುಭೂಮಿಯನ್ನು ಕೃಷಿಗೆ ಯೋಗ್ಯಭೂಮಿಯಾಗಿ ಪರಿವರ್ತಿಸುವುದು, ಸಾಗುವಳಿ ಭೂಮಿಯ ಉತ್ಪಾದನೆಯ ಆಧಾರದ ಮೇಲೆ ಭೂಕಂದಾಯ ನಿಗಧಿ ಮತ್ತು ವಸೂಲಿ ಮಾಡಲಾಗುತ್ತಿತ್ತು. ಭೂಮಾಲಿಕರು ಭೂಕಂದಾಯವನ್ನು ಪ್ರತಿವರ್ಷ ಕೊಡುವುದರ ಬದಲು ಒಮ್ಮೆಗೇ ದೊಡ್ಡಮೊತ್ತದ ಹಣವನ್ನು ಸಲ್ಲಿಸಬಹುದಿತ್ತು.

3) ಭೂಕಂದಾಯವನ್ನು ಸಮರ್ಪಕವಾಗಿ ಸಂದಾಯ ಮಾಡದಿದ್ದಾಗ ಭೂಮಿಯನ್ನು ಹರಾಜು ಮಾಡಿ ಹಣ ವಸೂಲಿ ಮಾಡಲಾಗುತಿತ್ತು.

4) ಭೂಮಿಯ ಅಳತೆಯ ಜವಾಬ್ದಾರಿಯನ್ನು ಕೇಂದ್ರಸರ್ಕಾರ ಹೊಂದಿತ್ತು. ಆದರೂ ಮಹಾಸಭೆಯ ಅನುಮತಿ ಪಡೆಯಬೇಕಾಗಿತ್ತು.

5) ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷ ಕರವನ್ನು ವಸೂಲಿ ಮಾಡುವ ಅಧಿಕಾರ ಗ್ರಾಮಸಭೆಗಿದ್ದು, ವಿಶೇಷ ಕರ ಹೊರತು ಪಡಿಸಿ ಭೂಕಂದಾಯದಿಂದ ಬರುತ್ತಿದ್ದ ಮೊತ್ತವನ್ನು ಕೇಂದ್ರ ಸರ್ಕಾರದ ಖಜಾನೆಗೆ ತುಂಬಬೇಕಾಗಿತ್ತು.

6) ದೊಡ್ಡ ಗ್ರಾಮದ ಆಡಳಿತ ನೋಡಿಕೊಳ್ಳಲು ಅನೇಕ ಸಮಿತಿಗಳು ನೇಮಕವಾಗಿದ್ದು ಅವುಗಳಿಗೆ ಸಹಾಯ ಮಾಡಲು ಅನೇಕ ಅಧಿಕಾರಿಗಳಿದ್ದರು. ನಾಯತ್ತರ್‌ (ನ್ಯಾಯ ಸಮಿತಿ) ಎಂಬ ಸಮಿತಿಯು ಮಹಾಸಭೆಯ ಒಂದು ಅಂಗವಾಗಿದ್ದು, ಅಪರಾಧಗಳನ್ನು ಪತ್ತೆಹಚ್ಚುವುದು, ಸಂಘರ್ಷಗಳು, ವಿವಾದಗಳನ್ನು ಬಗೆಹರಿಸುವುದು ಈ ಸಮಿತಿಯ ಕಾರ್ಯವಾಗಿತ್ತು.

7) ಗ್ರಾಮಸಭೆಯು ಗ್ರಾಮದ ನಿರ್ದಿಷ್ಟ ಪ್ರದೇಶದಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಮಾರಾಟಮಾಡಬೇಕೆಂದು ನಿಗದಿಗೊಳಿಸಿತ್ತು. ವ್ಯಾಪಾರಿ ವಸ್ತುಗಳ ಮೇಲೆ ತೆರಿಗೆ ವಿಧಿಸಿ ವಸೂಲಿ ಮಾಡಲಾಗುತಿತ್ತು. ತೋಟ ನಿರ್ವಹಣಾ ಸಮಿತಿಯು ರಸ್ತೆಗಳ ದುರಸ್ತಿ, ನಿರ್ಮಾಣ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಹೊಂದಿತ್ತು. ಕೆರೆ ಉಸ್ತುವಾರಿ ಸಮಿತಿಯು ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಕೆರೆಕಟ್ಟೆ, ಕಾಲುವೆಗಳ ನಿರ್ಮಾಣ, ದುರಸ್ಥಿಕಾರ್ಯವನ್ನು ನಿರ್ವಹಿಸುತಿತ್ತು. ‘ಧರ್ಮವಾರಿಯಮ್’ ಸಮಿತಿಯು ದಾನದತ್ತಿಗಳ ಮೇಲ್ವಿಚಾರಣೆ, ವೈದ್ಯಕೀಯ, ಶೈಕ್ಷಣಿಕ ಹಾಗೂ ಧರ್ಮಾರ್ಥ ಕಾರ್ಯಗಳನ್ನು ನಿರ್ವಹಿಸುತಿತ್ತು. ಗ್ರಾಮಸಮಿತಿಯು ನೈಸರ್ಗಿಕ ವಿಕೋಪಗಳಾದ ಪ್ರವಾಹ, ಬರಗಾಲ, ಆಹಾರದ ಅಭಾವದಂತಹ ಸಂದರ್ಭದಲ್ಲಿ ಜನರಿಗೆ ಸಹಕರಿಸುತಿತ್ತು.

ದೋಷಗಳು:

ಚೋಳರ ಕಾಲದ ಗ್ರಾಮಾಡಳಿತವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದರೂ ಕೆಲವಾರು ಲೋಪದೋಷಗಳನ್ನು ಹೊಂದಿತ್ತು.

1. ಗ್ರಾಮಸಭೆಯ ಸದಸ್ಯನಾಗಲು ನಿಗದಿಪಡಿಸಿದ ಆಸ್ತಿಯನ್ನು ಹೊಂದಿರಬೇಕಾಗಿತ್ತು. ಆಸ್ತಿ ರಹಿತರಿಗೆ ಸದಸ್ಯನಾಗಲು ಅವಕಾಶವಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಾಡಳಿತವನ್ನು ‘ಸೀಮಿತ ಪ್ರಜಾಪ್ರಭುತ್ವ’ ಎಂದು ಕರೆಯಬಹುದಾಗಿದೆ.

2. ಗ್ರಾಮಾಡಳಿತವು ಎಲ್ಲಾ ಹಳ್ಳಿಗಳಲ್ಲಿಯೂ ಅಸ್ತಿತ್ವದಲ್ಲಿರಲಿಲ್ಲ. ಬ್ರಾಹ್ಮಣರ ಹಳ್ಳಿಗಳಲ್ಲಿ ಮಾತ್ರವಿದ್ದು ಅಬ್ರಾಹ್ಮಣರ ಹಳ್ಳಿಗಳಲ್ಲಿ ಕಂಡುಬರುತ್ತಿರಲಿಲ್ಲ.

3. ಕೆಲವೊಂದು ಅನರ್ಹತೆಗಳಲ್ಲಿ ‘ವರ್ಣ ಭ್ರಷ್ಟರಾದವರು'(ಬೇರೆ ಜಾತಿಯೊಂದಿಗೆ ಸಂಬಂಧ ಹೊಂದಿದವರು) ಸಹ ಬಂದಿದೆ. ಇದು ಇಂದಿನ ಸಂದರ್ಭದಲ್ಲಿ ಸಮಂಜಸ ಎನಿಸುವುದಿಲ್ಲ. ಬದಲಿಗೆ ಚಲನಶೀಲವಲ್ಲದ ಮೂಢ ಸಂಪ್ರದಾಯದಂತೆ ಕಂಡುಬರುತ್ತದೆ.

ಅಮೋಘವರ್ಷ : ದಕ್ಷಿಣದ ಅಶೋಕ

ಅಮೋಘವರ್ಷ : ದಕ್ಷಿಣದ ಅಶೋಕ

ಅಮೋಘವರ್ಷ I, ಅಮೋಘವರ್ಷ ನೃಪತುಂಗ I ಎಂದೂ ಕರೆಯುತ್ತಾರೆ, 814 ರಿಂದ 878 CE ವರೆಗೆ ಆಳಿದ ರಾಷ್ಟ್ರಕೂಟ ರಾಜವಂಶದ ಶ್ರೇಷ್ಠ ಚಕ್ರವರ್ತಿ. ಪ್ರಭಾವಶಾಲಿ 64 ವರ್ಷಗಳ ಕಾಲ ಅವರ ಆಳ್ವಿಕೆಯು ಇತಿಹಾಸದಲ್ಲಿ ಸುದೀರ್ಘವಾದ ನಿಖರವಾಗಿ ದಿನಾಂಕದ ರಾಜಪ್ರಭುತ್ವದ ಆಳ್ವಿಕೆಗಳಲ್ಲಿ ಒಂದಾಗಿದೆ. ಅವರ ಆಳ್ವಿಕೆಯು ಸಾಹಿತ್ಯ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದಲ್ಲಿ ಅಭೂತಪೂರ್ವ ಬೆಳವಣಿಗೆ ಮತ್ತು ಪ್ರವರ್ಧಮಾನದ ಅವಧಿಯನ್ನು ಗುರುತಿಸಿತು, ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ಚಕ್ರವರ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿತು.

ಅಮೋಘವರ್ಷನ ಏಳಿಗೆ:

800 CE ನಲ್ಲಿ ಜನಿಸಿದ ಅಮೋಘವರ್ಷ 815 ರಲ್ಲಿ 14 ನೇ ವಯಸ್ಸಿನಲ್ಲಿ ತನ್ನ ತಂದೆ ಚಕ್ರವರ್ತಿ ಗೋವಿಂದ III ರ ಮರಣದ ನಂತರ ಸಿಂಹಾಸನವನ್ನು ಏರಿದನು. ಹಲವಾರು ಬಂಡಾಯ ಬಣಗಳು ಮತ್ತು ನೆರೆಯ ರಾಜ್ಯಗಳು ಅವನ ಅಧಿಕಾರವನ್ನು ಪ್ರಶ್ನಿಸಿದ ಕಾರಣ, ಅವನ ಆರಂಭಿಕ ಆಳ್ವಿಕೆಯು ಆಂತರಿಕ ಕಲಹದಿಂದ ನಾಶವಾಯಿತು. ಈ ಆರಂಭಿಕ ಸವಾಲುಗಳ ಹೊರತಾಗಿಯೂ, ಅಮೋಘವರ್ಷ, ತನ್ನ ನಿಷ್ಠಾವಂತ ಚಿಕ್ಕಪ್ಪ ಕಕ್ಕ ಮತ್ತು ವಿಶ್ವಾಸಾರ್ಹ ಅಡ್ಮಿರಲ್ ಬಂಕೆಯ ಬೆಂಬಲದೊಂದಿಗೆ, ಪಶ್ಚಿಮ ಗಂಗಾ ರಾಜವಂಶದ ನೇತೃತ್ವವನ್ನು ಒಳಗೊಂಡಂತೆ ಅನೇಕ ದಂಗೆಗಳನ್ನು ಮೀರಿ 821 ರ ಹೊತ್ತಿಗೆ ತನ್ನ ನಿಯಂತ್ರಣವನ್ನು ತ್ವರಿತವಾಗಿ ಮರುಸ್ಥಾಪಿಸಿದ. ಪ್ರತಿಕೂಲ ಪರಿಸ್ಥಿತಿಯಲ್ಲಿ, ಅವರು ರಾಜತಾಂತ್ರಿಕ ನೀತಿಯನ್ನು ಜಾರಿಗೆ ತಂದರು, ಗಂಗರು, ಚಾಲುಕ್ಯರು ಮತ್ತು ಪಲ್ಲವರೊಂದಿಗೆ ಶಾಂತಿಯನ್ನು ತಂದ ವೈವಾಹಿಕ ಮೈತ್ರಿಗಳನ್ನು ಭದ್ರಪಡಿಸಿದರು.

ದೂರದೃಷ್ಟಿಯ ಆಡಳಿತಗಾರ

ಅಮೋಘವರ್ಷನ ಸಾಧನೆಗಳು ಸೇನಾ ವಿಜಯಗಳಿಗೆ ಸೀಮಿತವಾಗಿರಲಿಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮಕ್ಕೆ ಅವರು ನೀಡಿದ ಕೊಡುಗೆಗಳಲ್ಲಿ ಅವರ ಅತ್ಯಂತ ಶಾಶ್ವತ ಪರಂಪರೆ ಅಡಗಿದೆ. ಅವರು ಕಲೆ, ಸಾಹಿತ್ಯ ಮತ್ತು ಪಾಂಡಿತ್ಯದ ಪೋಷಕರಾಗಿದ್ದರು, ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದ ಸುವರ್ಣ ಯುಗವನ್ನು ಬೆಳೆಸಿದರು. ಅಮೋಘವರ್ಷ ಅವರು ಸ್ವತಃ ವಿದ್ವಾಂಸರು ಮತ್ತು ಕವಿಯಾಗಿದ್ದರು, ಕವಿರಾಜಮಾರ್ಗದ ಸಹ-ಲೇಖಕರಾಗಿದ್ದರು, ಇದು ಕನ್ನಡದ ಆರಂಭಿಕ ಸಾಹಿತ್ಯ ಕೃತಿಯಾಗಿದೆ. ಮಹಾವೀರಾಚಾರ್ಯ, ಜಿನಸೇನ, ವೀರಸೇನ ಮತ್ತು ಶ್ರೀ ವಿಜಯರಂತಹ ವಿದ್ವಾಂಸರಿಗೆ ಆಶ್ರಯವನ್ನು ನೀಡಿದನು.

ಅಮೋಘವರ್ಷ ಅವರು ಆಧ್ಯಾತ್ಮಿಕತೆಯ ಆಳವಾದ ತಿಳುವಳಿಕೆಯನ್ನು ಪ್ರದರ್ಶಿಸುವ “ಪ್ರಶ್ನೋತ್ತರ ರತ್ನಮಾಲಿಕಾ” ಎಂಬ ಧಾರ್ಮಿಕ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಜೈನ ಧರ್ಮದ ಅನುಯಾಯಿಯಾಗಿದ್ದರೂ ಸಹ, ಅವರು ಎಲ್ಲಾ ಧರ್ಮಗಳ ಸಹಿಷ್ಣುತೆಯನ್ನು ಹೊಂದಿದ್ದರು, ಜೈನ, ಬೌದ್ಧ ಮತ್ತು ಹಿಂದೂ ಧರ್ಮಗಳಿಗೆ ಸಮಾನವಾಗಿ ತಮ್ಮ ಪ್ರೋತ್ಸಾಹವನ್ನು ವಿಸ್ತರಿಸಿದರು. ಮಹಾಲಕ್ಷ್ಮಿ ದೇವಿಯ ಮೇಲಿನ ಅವನ ಭಕ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅವನು ತನ್ನ ಪ್ರಜೆಗಳನ್ನು ಪ್ಲೇಗ್‌ನಿಂದ ರಕ್ಷಿಸಲು ತನ್ನ ಬೆರಳನ್ನು ದೇವಿಗೆ ಅರ್ಪಿಸಿದನು ಮತ್ತು ಜನರ ಮೆಚ್ಚುಗೆಯನ್ನು ಗಳಿಸಿದನು.

ಮಾನ್ಯಖೇಟಾದ ಭವ್ಯವಾದ ರಾಜಧಾನಿ

ಅಮೋಘವರ್ಷನ ಆಳ್ವಿಕೆಯ ಅತ್ಯಂತ ಗಮನಾರ್ಹವಾದ ಸಾಹಸವೆಂದರೆ ರಾಷ್ಟ್ರಕೂಟರ ರಾಜಧಾನಿಯನ್ನು ಮಯೂರಖಂಡಿ (ಇಂದಿನ ಬೀದರ್) ದಿಂದ ಮಾನ್ಯಖೇಟಕ್ಕೆ (ಇಂದಿನ ಮಲ್ಖೇಡ್, ಕರ್ನಾಟಕ) ಸ್ಥಳಾಂತರಿಸಿದನು. ಹೊಸ ರಾಜಧಾನಿಯನ್ನು ಭಗವಾನ್ ಇಂದ್ರನ ಸ್ವರ್ಗೀಯ ನಿವಾಸದ ವೈಭವಕ್ಕೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಳಿಸಿದನು. ರಾಜಧಾನಿಯು ಅದರ ವಿಸ್ತಾರವಾದ ವಾಸ್ತುಶಿಲ್ಪದಿಂದ ಗುರುತಿಸಲ್ಪಟ್ಟಿದೆ, ಆ ಕಾಲದ ಅತ್ಯುತ್ತಮ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಈ ನಗರವು ಅವನ ಆಳ್ವಿಕೆಯಲ್ಲಿ ಸಾಂಸ್ಕೃತಿಕ ಮತ್ತು ಬೌದ್ಧಿಕ ಚಟುವಟಿಕೆಯ ಕೇಂದ್ರಬಿಂದುವಾಯಿತು.

ಅಸಾಧಾರಣ ರಾಜತಾಂತ್ರಿಕ

ಅಮೋಘವರ್ಷ ಒಬ್ಬ ಅಸಾಧಾರಣ ಯೋಧ ಮಾತ್ರವಲ್ಲದೆ ರಾಜತಾಂತ್ರಿಕತೆಯ ಮಾಸ್ಟರ್. ಅವರ ಆಳ್ವಿಕೆಯು ಹಲವಾರು ಪ್ರಮುಖ ರಾಜತಾಂತ್ರಿಕ ಸಾಧನೆಗಳಿಂದ ನಿರೂಪಿಸಲ್ಪಟ್ಟಿದೆ. ವಿಂಗವಲ್ಲಿಯಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಅವರು ವೆಂಗಿಯ ಪೂರ್ವ ಚಾಲುಕ್ಯರನ್ನು ಯಶಸ್ವಿಯಾಗಿ ಸೋಲಿಸಿದನು, ನಂತರ ಅವರು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಚಾಲುಕ್ಯರೊಂದಿಗೆ ವಿವಾಹದ ಮೈತ್ರಿಯನ್ನು ಪಡೆದರು. ಅಂತೆಯೇ, ಅವನು ತನ್ನ ಮಗಳನ್ನು ಎರಡನೇ ನಂದಿವರ್ಮನ್‌ಗೆ ಮದುವೆ ಮಾಡುವ ಮೂಲಕ ಪಲ್ಲವರೊಂದಿಗೆ ಬಲವಾದ ಮೈತ್ರಿಗಳನ್ನು ಮಾಡಿಕೊಂಡನು, ಹೀಗೆ ದಕ್ಷಿಣ ಭಾರತದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದನು.

ರಾಜತಾಂತ್ರಿಕತೆಯಲ್ಲಿ ಅವರ ಪ್ರಯತ್ನಗಳು ಉಪಖಂಡದ ಆಚೆಗೂ ವಿಸ್ತರಿಸಿದವು. 851 CE ನಲ್ಲಿ ಅವನ ಆಸ್ಥಾನಕ್ಕೆ ಭೇಟಿ ನೀಡಿದ ಅರಬ್ ಪ್ರವಾಸಿ ಸುಲೈಮಾನ್, ರೋಮನ್ ಚಕ್ರವರ್ತಿ, ಚೀನೀ ಚಕ್ರವರ್ತಿ ಮತ್ತು ಬಾಗ್ದಾದ್‌ನ ಖಲೀಫಾ ಜೊತೆಗೆ ಅಮೋಘವರ್ಷ ವಿಶ್ವದ ನಾಲ್ಕು ಮಹಾನ್ ರಾಜರಲ್ಲಿ ಒಬ್ಬನೆಂದು ವಿವರಿಸಿದ್ದಾನೆ. ಈ ಮೆಚ್ಚುಗೆಯು ಅಮೋಘವರ್ಷ ಅವರ ಕಾಲದಲ್ಲಿ ಜಾಗತಿಕ ವೇದಿಕೆಯಲ್ಲಿ ಅವರ ಸ್ಥಾನವನ್ನು ಎತ್ತಿ ತೋರಿಸುತ್ತದೆ.

ಪರಂಪರೆ ಮತ್ತು ಸಾಂಸ್ಕೃತಿಕ ಕೊಡುಗೆಗಳು

ಸಂಸ್ಕೃತಿಗೆ ಅಮೋಘವರ್ಷದ ಕೊಡುಗೆಗಳು ಸ್ಮಾರಕವಾಗಿವೆ. ಅವರ ಆಶ್ರಯದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿ ಹೊಂದಿತು. ಈಗ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಪಟ್ಟದಕಲ್ಲಿನಲ್ಲಿರುವ ಜೈನ ನಾರಾಯಣ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳ ನಿರ್ಮಾತೃವಾಗಿದ್ದಾನೆ. ಅಲ್ಲದೇ ಅವರ ಆಳ್ವಿಕೆಯಲ್ಲಿ ಮಾನ್ಯಖೇಟದಲ್ಲಿ ನೇಮಿನಾಥ ಬಸದಿ ಮತ್ತು ಕೊಣ್ಣೂರಿನಲ್ಲಿ ಬಸದಿಯನ್ನು ನಿರ್ಮಿಸಲಾಯಿತು, ಇವೆಲ್ಲವೂ ಅವರ ವಾಸ್ತುಶಿಲ್ಪದ ದೃಷ್ಟಿಗೆ ಸಾಕ್ಷಿಯಾಗಿ ನಿಂತಿವೆ.

ಅಮೋಘವರ್ಷದ ಆಳ್ವಿಕೆಯು ಅದರ ಮಿಲಿಟರಿ ಮತ್ತು ರಾಜಕೀಯ ಯಶಸ್ಸಿಗೆ ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಚೈತನ್ಯ ಮತ್ತು ಧಾರ್ಮಿಕ ಸಹಿಷ್ಣುತೆಗಾಗಿ ನೆನಪಿಸಿಕೊಳ್ಳಲಾಗುತ್ತದೆ. ಅವನ ಆಳ್ವಿಕೆಯು ರಾಷ್ಟ್ರಕೂಟ ರಾಜವಂಶಕ್ಕೆ ಸ್ಥಿರತೆ ಮತ್ತು ಸಮೃದ್ಧಿಯನ್ನು ತಂದಿತು, ಭಾರತೀಯ ಇತಿಹಾಸದಲ್ಲಿ ಅವನನ್ನು ಉನ್ನತ ವ್ಯಕ್ತಿಯಾಗಿಸಿತು.

ಮಹಾ ಆಳ್ವಿಕೆಯ ಶಾಂತಿಯುತ ಅಂತ್ಯ

ಅಮೋಘವರ್ಷ 877 CE ನಲ್ಲಿ ಸ್ವಯಂಪ್ರೇರಣೆಯಿಂದ ಸಿಂಹಾಸನದಿಂದ ನಿವೃತ್ತರಾದರು, ಸಮೃದ್ಧ ಸಾಮ್ರಾಜ್ಯ ಮತ್ತು ಶತಮಾನಗಳ ಕಾಲ ಉಳಿಯುವ ಪರಂಪರೆಯನ್ನು ಬಿಟ್ಟುಹೋದರು. ಅವರ ಶಾಂತಿಯುತ ಮತ್ತು ಪಾಂಡಿತ್ಯಪೂರ್ಣ ಆಡಳಿತವು ಅವರಿಗೆ “ದಕ್ಷಿಣದ ಅಶೋಕ” ಎಂಬ ಬಿರುದನ್ನು ತಂದುಕೊಟ್ಟಿತು. ಇಂದು  ಅಮೋಘವರ್ಷನ  ಆಳ್ವಿಕೆಯು ಭಾರತೀಯ ಇತಿಹಾಸದಲ್ಲಿ ಪ್ರಬುದ್ಧ ನಾಯಕತ್ವ, ಸಾಂಸ್ಕೃತಿಕ ಏಳಿಗೆ ಮತ್ತು ಧಾರ್ಮಿಕ ಸಹಿಷ್ಣುತೆಯ ದಾರಿದೀಪವಾಗಿ ನಿಂತಿದೆ.

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು

ಬಾದಾಮಿ ಚಾಲುಕ್ಯ ವಾಸ್ತುಶೈಲಿಯು ಹಿಂದೂ ದೇವಾಲಯದ ವಾಸ್ತುಶಿಲ್ಪದ ಒಂದು ಗಮನಾರ್ಹ ಶೈಲಿಯಾಗಿದ್ದು, ಇದು ಕ್ರಿ.ಶ 5 ಮತ್ತು 8 ನೇ ಶತಮಾನಗಳ ನಡುವೆ ವಿಕಸನಗೊಂಡಿತು. ಭಾರತದ ಕರ್ನಾಟಕದ ಇಂದಿನ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಹೊರಹೊಮ್ಮಿದ ಈ ವಾಸ್ತುಶಿಲ್ಪ ಶೈಲಿಯು ದಕ್ಷಿಣ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಗುರುತು ಹಾಕಿತು. ದ್ರಾವಿಡ ಮತ್ತು ನಾಗರ ಶೈಲಿಗಳ ವಿಶಿಷ್ಟ ಸಂಯೋಜನೆಗೆ ಹೆಸರುವಾಸಿಯಾದ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪವನ್ನು ಕೆಲವೊಮ್ಮೆ ವೇಸರ ಅಥವಾ ಚಾಲುಕ್ಯ ಶೈಲಿ ಎಂದು ಕರೆಯಲಾಗುತ್ತದೆ. ಕಾಲಾನಂತರದಲ್ಲಿ, ಇದು 11 ನೇ ಮತ್ತು 12 ನೇ ಶತಮಾನದ ಕಲ್ಯಾಣಿ ಚಾಲುಕ್ಯ ವಾಸ್ತುಶಿಲ್ಪದ  ಮೇಲೆ ಮೇಲೆ ಪ್ರಭಾವ ಬೀರಿತು.

ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಮೂಲ ಮತ್ತು ವಿಕಾಸ

ಚಾಲುಕ್ಯ ರಾಜರ   ದೇವಾಲಯ ನಿರ್ಮಾಣ ಪರಂಪರೆಯನ್ನು  ಮುಖ್ಯವಾಗಿ ಎರಡು ಪ್ರಮುಖ ಕೇಂದ್ರಗಳಾದ ಬಾದಾಮಿ ಮತ್ತು ಪಟ್ಟದಕಲ್ಲುಗಳಲ್ಲಿ ನೋಡಬಹುದು.

ಈ ಕಾಲದ ವಾಸ್ತುಶಿಲ್ಪಿಗಳು ಮತ್ತು ಕಲಾವಿದರು ವಿವಿಧ ಶೈಲಿಗಳನ್ನು ಪ್ರಯೋಗಿಸಿದರು, ನಾಗರ ಮತ್ತು ದ್ರಾವಿಡ ಶೈಲಿಗಳನ್ನು ನವೀನ ರೀತಿಯಲ್ಲಿ ಮಿಶ್ರಣ ಮಾಡಿದರು. ಬಾದಾಮಿ ಚಾಲುಕ್ಯರ ವಾಸ್ತುಶೈಲಿಯು ಎರಡು ರೀತಿಯ ನಿರ್ಮಾಣ ಶೈಲಿಯನ್ನು ಒಳಗೊಂಡಿದೆ: ಬಂಡೆಯಿಂದ ಕತ್ತರಿಸಿದ ದೇವಾಲಯಗಳು (ಗುಹಾ ದೇವಾಲಯಗಳು) ಮತ್ತು ನೆಲದ ಮೇಲೆ ನಿರ್ಮಿಸಲಾದ ರಚನಾತ್ಮಕ ದೇವಾಲಯಗಳು.

ಬಾದಾಮಿ ಗುಹೆ ದೇವಾಲಯಗಳು: ಆರಂಭಿಕ ಮೇರುಕೃತಿ

ಬಾದಾಮಿ ಗುಹೆಯ ದೇವಾಲಯಗಳು ದಕ್ಷಿಣ ಭಾರತದಲ್ಲಿನ ಅತ್ಯಂತ ಅಪ್ರತಿಮವಾದ ರಾಕ್-ಕಟ್ ರಚನೆಗಳಾಗಿವೆ. ಈ ದೇವಾಲಯಗಳು ಮೂರು ಮೂಲಭೂತ ಅಂಶಗಳನ್ನು ಒಳಗೊಂಡಿವೆ. ಕಂಬದ ಜಗುಲಿ, ಸ್ತಂಭಾಕಾರದ ಹಾಲ್ ಮತ್ತು ಬಂಡೆಯಲ್ಲಿ ಆಳವಾಗಿ ಕೆತ್ತಿದ ಗರ್ಭಗುಡಿ. ಬಂಡೆಯಲ್ಲಿ ಕೆತ್ತುವ ರಾಕ್-ಕಟ್ ವಾಸ್ತುಶಿಲ್ಪದ ಆರಂಭಿಕ ಪ್ರಯೋಗಗಳನ್ನು ಮೊದಲು ಐಹೊಳೆಯಲ್ಲಿ ನೋಡಬಹುದು. ಅಲ್ಲಿ ಮೂರು ಗುಹಾ ದೇವಾಲಯಗಳನ್ನು ವೈದಿಕ, ಬೌದ್ಧ ಮತ್ತು ಜೈನ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಆದಾಗ್ಯೂ, ನಾಲ್ಕು ಭವ್ಯವಾದ ಗುಹೆ ದೇವಾಲಯಗಳನ್ನು ನಿರ್ಮಿಸಿದ ಬಾದಾಮಿಯಲ್ಲಿ ಶೈಲಿಯನ್ನು ಸಂಸ್ಕರಿಸಿ ಪರಿಪೂರ್ಣಗೊಳಿಸಲಾಯಿತು.

ಬಾದಾಮಿ ಗುಹಾದೇವಾಲಯಗಳ ಹೊರಭಾಗದ ಜಗುಲಿಗಳು ತುಲನಾತ್ಮಕವಾಗಿ ಸರಳವಾಗಿ ಉಳಿದಿವೆ, ಒಳಾಂಗಣವು ಶಿಲ್ಪಕಲೆಗಳ ಸಂಕೇತಗಳಿಂದ ಸಮೃದ್ಧವಾಗಿದೆ.ಇದು ಚಾಲುಕ್ಯ ಕಲಾವಿದರ ಪಾಂಡಿತ್ಯವನ್ನು ತೋರಿಸುತ್ತದೆ.

ಕಲಾ ವಿಮರ್ಶಕ ಡಾ.ಎಂ.ಶೇಷಾದ್ರಿ ಅವರು ಚಾಲುಕ್ಯರ ಕಲೆಯನ್ನು ಶ್ಲಾಘಿಸಿದರು, “ಅವರು ರಾಕ್ಷಸರಂತೆ ಬಂಡೆಯನ್ನು ಕತ್ತರಿಸಿದರು ಆದರೆ ಆಭರಣಗಳಂತೆ ಮುಗಿಸಿದರು” ಎಂದು ಅವರ ಅಸಾಧಾರಣ ಕಲೆಗಾರಿಕೆಯನ್ನು ವರ್ಣಿಸಿದ್ದಾರೆ. ವಿಮರ್ಶಕ ಝಿಮ್ಮರ್ ವಿವರಿಸಿದಂತೆ ಚಾಲುಕ್ಯ ಗುಹಾ ದೇವಾಲಯಗಳು ಬಹುಮುಖತೆ ಮತ್ತು ಸಂಯಮದ ನಡುವೆ ಉತ್ತಮ ಸಮತೋಲನವನ್ನು ನಿರ್ವಹಿಸುತ್ತವೆ.

ಪಟ್ಟದಕಲ್ಲಿನ ರಚನಾತ್ಮಕ ದೇವಾಲಯಗಳು

ಉತ್ತರ ಕರ್ನಾಟಕದಲ್ಲಿರುವ ಪಟ್ಟದಕಲ್, ಚಾಲುಕ್ಯ ರಾಜವಂಶದ ಕೆಲವು ಅತ್ಯಾಧುನಿಕ ರಚನಾತ್ಮಕ ದೇವಾಲಯಗಳಿಗೆ ನೆಲೆಯಾಗಿದೆ. ಪಟ್ಟದಕಲ್ಲಿನ ಹತ್ತು ದೇವಾಲಯಗಳಲ್ಲಿ ಆರು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದರೆ, ನಾಲ್ಕು ರೇಖಾನಗರ ಶೈಲಿಯನ್ನು ಅನುಸರಿಸುತ್ತವೆ. ವಿರೂಪಾಕ್ಷ ದೇವಾಲಯವು ಬಹುಶಃ ಅತ್ಯಂತ ಪ್ರಸಿದ್ಧವಾದ ರಚನೆಯಾಗಿದೆ, ಇದು ಕೆಲವು ವರ್ಷಗಳ ಹಿಂದೆ ಕಾಂಚೀಪುರಂನಲ್ಲಿರುವ ಕೈಲಾಸನಾಥ ದೇವಾಲಯವನ್ನು ಹೋಲುತ್ತದೆ.

ವಿರೂಪಾಕ್ಷ ದೇವಾಲಯವು ಒಂದು ಸಮಗ್ರ ದೇವಾಲಯದ ಸಂಕೀರ್ಣವಾಗಿದ್ದು, ಮುಂಭಾಗದಲ್ಲಿ ನಂದಿ ಮಂಟಪ ಮತ್ತು ಗರ್ಭಗುಡಿ, ಅಥವಾ ಮುಖ್ಯ ದೇಗುಲವು ಪ್ರದಕ್ಷಿಣಪಥ (ಪ್ರದಕ್ಷಿಣೆ ಮಾರ್ಗ) ಮತ್ತು ಮಂಟಪ (ಕಂಬದ ಹಾಲ್) ವನ್ನು ಹೊಂದಿದೆ. ಮಂಟಪವು ರಂದ್ರ ಕಿಟಕಿಗಳಿಂದ ಅಲಂಕರಿಸಲ್ಪಟ್ಟಿದೆ, ಇದು ದೇವಾಲಯದ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಬಾದಾಮಿ ಚಾಲುಕ್ಯ ವಾಸ್ತುಶೈಲಿಯ ಪ್ರಭಾವವು ಶತಮಾನಗಳ ನಂತರ ವಿಜಯನಗರ ಸಾಮ್ರಾಜ್ಯದ ಸ್ತಂಭಗಳ ವಾಸ್ತುಶಿಲ್ಪದಲ್ಲಿ ಮರುಕಳಿಸಿತು.

ಬಾದಾಮಿ ಚಾಲುಕ್ಯರ ಪ್ರಮುಖ ದೇವಾಲಯಗಳು

ಬಾದಾಮಿ ಚಾಲುಕ್ಯರು ಸಮೃದ್ಧ ನಿರ್ಮಾತೃಗಳಾಗಿದ್ದು, ಕರ್ನಾಟಕದಾದ್ಯಂತ ಭವ್ಯವಾದ ದೇವಾಲಯಗಳ ಪರಂಪರೆಯನ್ನು ಬಿಟ್ಟಿದ್ದಾರೆ. ಬಾದಾಮಿ ಚಾಲುಕ್ಯರಿಗೆ ಸಂಬಂಧಿಸಿದ ಕೆಲವು ಪ್ರಮುಖ ದೇವಾಲಯಗಳು:

ಪಟ್ಟದಕಲ್ಲಿನ ದೇವಾಲಯಗಳು

1. ವಿರೂಪಾಕ್ಷ ದೇವಾಲಯ

2. ಸಂಗಮೇಶ್ವರರ್ ದೇವಸ್ಥಾನ

3. ಕಾಶಿವಿಶ್ವನಾಥ ದೇವಾಲಯ (ರಾಷ್ಟ್ರಕೂಟ)

4. ಮಲ್ಲಿಕಾರ್ಜುನ ದೇವಸ್ಥಾನ

5. ಗಲ್ಗನಾಥ ದೇವಾಲಯ

5. ಕಾಡಸಿದ್ದೇಶ್ವರ ದೇವಸ್ಥಾನ

6. ಜಂಬುಲಿಂಗ ದೇವಾಲಯ

7. ಜೈನ ನಾರಾಯಣ ದೇವಸ್ಥಾನ (ರಾಷ್ಟ್ರಕೂಟ)

8. ಪಾಪನಾಥ ದೇವಾಲಯ

9. ನಾಗನಾಥ ದೇವಸ್ಥಾನ

10. ಚಂದ್ರಶೇಖರ ದೇವಸ್ಥಾನ

ಐಹೊಳೆಯ ದೇವಾಲಯಗಳು

1. ಲಾಡ್ ಖಾನ್ ದೇವಾಲಯ

2. ಹುಚ್ಚಪ್ಪಯ್ಯಗುಡಿ ದೇವಸ್ಥಾನ

3. ದುರ್ಗಾ ದೇವಾಲಯ

4. ಮೇಗುತಿಜೈನ ದೇವಾಲಯ

5. ರಾವಣಫಡಿ ದೇವಸ್ಥಾನ

ಬಾದಾಮಿಯಲ್ಲಿರುವ ಗುಹಾ ದೇವಾಲಯಗಳು

1. ಗುಹೆ 1 (ಶಿವ)

2. ಗುಹೆ 2 (ವಿಷ್ಣು ತ್ರಿವಿಕ್ರಮ ಅಥವಾ ವಾಮನ, ವರಾಹ, ಕೃಷ್ಣ)

3. ಗುಹೆ 3 (ವಿಷ್ಣು ನರಸಿಂಹ, ವರಾಹ, ಹರಿಹರ, ತ್ರಿವಿಕ್ರಮ)

4. ಗುಹೆ 4 (ಜೈನ ತೀರ್ಥಂಕರ ಪಾರ್ಶ್ವನಾಥ)

ಭೂತನಾಥ ದೇವಾಲಯಗಳು

ಬಾದಾಮಿಯ ಚಾಲುಕ್ಯರು “ಚಾಲುಕ್ಯ ವಾಸ್ತುಶಿಲ್ಪ” ಅಥವಾ “ಕರ್ನಾಟ ದ್ರಾವಿಡ ವಾಸ್ತುಶಿಲ್ಪ” ಎಂದು ಕರೆಯಲ್ಪಡುವ ದಕ್ಷಿಣ ಭಾರತದ ವಾಸ್ತುಶಿಲ್ಪದ ವಿಕಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರ ಪರಂಪರೆಯು ಪ್ರಾಥಮಿಕವಾಗಿ ಕರ್ನಾಟಕದ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣವನ್ನು ಒಳಗೊಂಡಿದೆ. ಈ ವಾಸ್ತುಶಿಲ್ಪದ ಸಂಪ್ರದಾಯವು ನಂತರ 11 ಮತ್ತು 12 ನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಕಲೆಯ ಮೇಲೆ ಪ್ರಭಾವ ಬೀರಿತು.

ಐಹೊಳೆ ಮತ್ತು ಬಾದಾಮಿಯಲ್ಲಿರುವಂತಹ ಬಂಡೆಯ ಗುಹೆ ದೇವಾಲಯಗಳು ಶಿಲ್ಪ ವಿನ್ಯಾಸದಲ್ಲಿ ಚಾಲುಕ್ಯರ ಪಾಂಡಿತ್ಯವನ್ನು ಪ್ರದರ್ಶಿಸುತ್ತವೆ. ಈ ದೇವಾಲಯಗಳು ವಿಶಿಷ್ಟವಾಗಿ ಸರಳವಾದ ಹೊರಭಾಗವನ್ನು ಒಳಗೊಂಡಿರುತ್ತವೆ ಆದರೆ ಸ್ತಂಭದ ವರಾಂಡಾಗಳು, ಸ್ತಂಭಾಕಾರದ ಸಭಾಂಗಣಗಳು ಮತ್ತು ಬಂಡೆಯಲ್ಲಿ ಆಳವಾಗಿ ಕೆತ್ತಿದ ದೇವಾಲಯಗಳನ್ನು ಒಳಗೊಂಡಂತೆ ಸಂಕೀರ್ಣವಾದ ವಿನ್ಯಾಸದ ಒಳಾಂಗಣಗಳನ್ನು ಬಹಿರಂಗಪಡಿಸುತ್ತವೆ.

ಬಾದಾಮಿ ಚಾಲುಕ್ಯರ ಪ್ರಮುಖ ದೇವಾಲಯಗಳು
ಐಹೊಳೆ ದೇವಾಲಯಗಳು:

ಲಾಡ್ ಖಾನ್ ದೇವಾಲಯ, ದುರ್ಗಾ ದೇವಾಲಯ, ಮತ್ತು ಹುಚ್ಚಮಲ್ಲಿಗುಡಿ ದೇವಾಲಯವು ಲಾಡ್ ಖಾನ್‌ನಲ್ಲಿರುವ ರಂದ್ರ ಕಲ್ಲಿನ ಕಿಟಕಿಗಳು ಮತ್ತು ದುರ್ಗಾ ದೇವಾಲಯದ ಉತ್ತರ ಭಾರತೀಯ ಶೈಲಿಯ ಗೋಪುರದಂತಹ ವಿಶಿಷ್ಟ ವಿನ್ಯಾಸಗಳಿಗೆ ಗಮನಾರ್ಹವಾಗಿದೆ.

ಪಟ್ಟದಕಲ್ ದೇವಾಲಯಗಳು:

ವಿರೂಪಾಕ್ಷ ಮತ್ತು ಪಾಪನಾಥ ದೇವಾಲಯಗಳು ದ್ರಾವಿಡ ಮತ್ತು ನಾಗರ ಶೈಲಿಗಳ ಅಸಾಧಾರಣ ಸಮ್ಮಿಳನಕ್ಕಾಗಿ ಎದ್ದು ಕಾಣುತ್ತವೆ.

ಇಟಗಿಯಲ್ಲಿರುವ ಮಹಾದೇವ ದೇವಾಲಯ:

 ಸಂಕೀರ್ಣವಾದ ಕೆತ್ತನೆಗಳು ಮತ್ತು ಅಲಂಕಾರಿಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.

ಚಾಲುಕ್ಯರ ಪರಂಪರೆ

ಭಾರತೀಯ ವಾಸ್ತುಶಿಲ್ಪಕ್ಕೆ ಚಾಲುಕ್ಯ ರಾಜವಂಶದ ಕೊಡುಗೆಗಳು ಸಾಟಿಯಿಲ್ಲದವು. ಅವರು ಬಿಟ್ಟುಹೋದ ದೇವಾಲಯಗಳು ಮತ್ತು ಗುಹೆ ಸಂಕೀರ್ಣಗಳು ಕಲಾತ್ಮಕ ಸೃಜನಶೀಲತೆ ಮತ್ತು ಧಾರ್ಮಿಕ ಸಂಕೇತಗಳೆರಡನ್ನೂ ಸಂಯೋಜಿಸುವ ಅವರ ಸುಧಾರಿತ ವಾಸ್ತುಶಿಲ್ಪದ ಕೌಶಲ್ಯಗಳಿಗೆ ಸಾಕ್ಷಿಯಾಗಿದೆ. ಅವರು ಪ್ರವರ್ತಿಸಿದ ವೇಸರ ಶೈಲಿಯು ದಕ್ಷಿಣ ಭಾರತದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣವಾಗಿ ಉಳಿದಿದೆ. ಇದು ಕಲ್ಯಾಣಿ ಚಾಲುಕ್ಯರು,ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯ ಮತ್ತು ಅದರಾಚೆಗಿನ ನಂತರದ ವಾಸ್ತುಶಿಲ್ಪದ ಬೆಳವಣಿಗೆಗಳ ಮೇಲೆ ಪ್ರಭಾವ ಬೀರಿತು.

ಉಪಸಂಹಾರ:

ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಬಾದಾಮಿ ಚಾಲುಕ್ಯ ರಾಜವಂಶದ ಪರಂಪರೆಯು ಇತಿಹಾಸಕಾರರು, ವಾಸ್ತುಶಿಲ್ಪಿಗಳು ಮತ್ತು ಪ್ರವಾಸಿಗರನ್ನು ಸಮಾನವಾಗಿ ಆಕರ್ಷಿಸುತ್ತಿದೆ. ದ್ರಾವಿಡ ಮತ್ತು ನಾಗರ ಶೈಲಿಗಳ ಅವರ ನವೀನ ಮಿಶ್ರಣದೊಂದಿಗೆ, ಚಾಲುಕ್ಯರು ದಕ್ಷಿಣ ಭಾರತದಲ್ಲಿ ಕೆಲವು ಅಪ್ರತಿಮ ದೇವಾಲಯಗಳನ್ನು ನಿರ್ಮಿಸಿದರು. ಬಾದಾಮಿಯ ರಾಕ್-ಕಟ್ ಗುಹಾ ದೇವಾಲಯಗಳಿಂದ ಪಟ್ಟದಕಲ್ಲಿನ ಭವ್ಯವಾದ ರಚನಾತ್ಮಕ ದೇವಾಲಯಗಳವರೆಗೆ, ಬಾದಾಮಿ ಚಾಲುಕ್ಯ ವಾಸ್ತುಶಿಲ್ಪವು ಈ ಪ್ರಾಚೀನ ರಾಜವಂಶದ ಸೃಜನಶೀಲತೆ, ಕರಕುಶಲತೆ ಮತ್ತು ಭಕ್ತಿಗೆ ಹೆಮ್ಮೆಯ ಸಾಕ್ಷಿಯಾಗಿದೆ.

ಇಂದು, ಈ ವಾಸ್ತುಶಿಲ್ಪದ ಅದ್ಭುತಗಳು ಆ ಗತಕಾಲದ ಒಂದು ನೋಟವನ್ನು ನೀಡುತ್ತವೆ. ಇದು ಭಾರತದ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಮೇಲೆ ಚಾಲುಕ್ಯರ ಪ್ರಭಾವದ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.