ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ

ಪರಿಶಿಷ್ಟ ಜಾತಿಗಳ ಜನರ ಹಿತಾಸಕ್ತಿಗಳನ್ನು ಕಾಪಾಡಲು ರಚನೆಗೊಂಡ ಸಂಸ್ಥೆಯಂದರೆ ಅದು ರಾಷ್ಟ್ರೀಯ ಪರಿಶಿಷ್ಟಜಾತಿಗಳ ಆಯೋಗ. ಪರಿಶಿಷ್ಟ ಜಾತಿಗಳ ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆ ಶೈಕ್ಷಣಿಕ ಹಿಂದುಳಿಕೆ, ಆರ್ಥಿಕ ದುಸ್ಥಿತಿ ಮತ್ತು ಸಾಂಸ್ಕೃತಿಕ ಹಿನ್ನೆಡೆಗಳನ್ನು ಗಮನದಲ್ಲಿಟ್ಟುಕೊಂಡ ಭಾರತ ಸರ್ಕಾರವು ಸಂವಿಧಾನದ 338 ನೇ ವಿಧಿಯನ್ವಯ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚನೆ ಮಾಡಿದೆ. ಅದರ ಕಾರ್ಯವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ರಚನೆ: (Composition)

ಸಂವಿಧಾನದ 338ನೇ ವಿಧಿಯ ಪ್ರಕಾರ ಪ್ರಾರಂಭದಲ್ಲಿ ಪರಿಶಿಷ್ಟ ಜನರ ಹಿತಾಸಕ್ತಿಗಾಗಿ ವಿಶೇಷ ಅಧಿಕಾರಿಯ ನೇಮಕಕ್ಕೆ ಆಸ್ಪದ ನೀಡಲಾಗಿತ್ತು. ಅವರನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯುಕ್ತರೆಂದು ಕರೆಯಲಾಗುತ್ತಿತ್ತು. 1985ರ ವೇಳೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒತ್ತಡದ ಮೇರೆಗೆ ಸಂಸತ್ತು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗವನ್ನು ಏಕಸದಸ್ಯ ಆಯೋಗದಿಂದ ಬಹು ಸದಸ್ಯ ಆಯೋಗವನ್ನಾಗಿ ಮಾಡಲು ಮುಂದಾಯಿತು. ಪರಿಣಾಮವಾಗಿ 1990ರಲ್ಲಿ ಸಂವಿಧಾನದ 65 ತಿದ್ದುಪಡಿಯ ಮೂಲಕ ಬಹು ಸದಸ್ಯರನ್ನೊಳಗೊಂಡ ಆಯೋಗ ಅಸ್ತಿತ್ವಕ್ಕೆ ಬಂದಿತು. ಈ ಆಯೋಗವು ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷ ಹಾಗೂ ಮೂರು ಜನ ಸದಸ್ಯರನ್ನು ಹೊಂದಿತು. 2003 ರಲ್ಲಿ ಸಂವಿಧಾನದ 89ನೇ ತಿದ್ದುಪಡಿಯ ಪ್ರಕಾರ 2004ರಲ್ಲಿ ಜಾರಿಗೆ ಬರುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಎಂಬುದಾಗಿ ಅವುಗಳನ್ನು ಬೇರ್ಪಡಿಸಲಾಯಿತು. ಪ್ರಸ್ತುತ 2004ರಲ್ಲಿ ಬೇರ್ಪಟ್ಟ ಆಯೋಗ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕನಿಷ್ಠ ೪ ಮತ್ತು ಗರಿಷ್ಠ 11 ಜನ ಸದಸ್ಯರನ್ನು ಹೊಂದಿದೆ. ಇವರನ್ನು ಭಾರತ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಆಯೋಗದ ಸದಸ್ಯರಲ್ಲಿ ಕನಿಷ್ಠ ಒಬ್ಬರಾದರೂ ಮಹಿಳಾ ಸದಸ್ಯರಿರಬೇಕೆಂಬ ನಿಯಮವಿದೆ.

ಕಾರ್ಯಗಳು: (Functions) 

 ಪರಿಶಿಷ್ಟ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ

  1. ಸಂವಿಧಾನದಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾದ ಎಲ್ಲಾ ಸುರಕ್ಷತಾ ನಿಬಂಧನೆಗಳನ್ನು ತನಿಖೆ ಮಾಡಿ ಮೇಲ್ವಿಚಾರಣೆ ಮಾಡುವುದು.
  2. ಪರಿಶಿಷ್ಟ ಜಾತಿಗಳ ರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸುವಲ್ಲಿ ವಂಚನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವುದು ಮತ್ತು ವಿಚಾರಣೆ ಮಾಡುವುದು.
  3. ಪರಿಶಿಷ್ಟ ಜಾತಿಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ಶಿಫಾರಸ್ಸು ಮಾಡುತ್ತದೆ. ನಂತರ ಸಮುದಾಯದ ಕಲ್ಯಾಣ, ರಕ್ಷಣೆ ಹಾಗೂ ಪ್ರಗತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಸೂಚಿಸುತ್ತದೆ.
  4. ಈ ಸಮುದಾಯಗಳ ಮೇಲ್ವಿಚಾರಣಾ ಚಟುವಟಿಕೆಗಳನ್ನು ನಿರ್ವಹಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ. ಈ ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ ಸ್ಥಳದಲ್ಲೇ ಪರಿಹಾರ ನೀಡುತ್ತವೆ.
  5. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರಪತಿಗಳಿಗೆ ನಿಯತಕಾಲಿಕವಾಗಿ ವರದಿ ಸಲ್ಲಿಸುವುದು.
  6. ಈ ಸಮುದಾಯದ ವಿಚಾರಣಾ ನ್ಯಾಯಾಲಯಗಳ ವಿಲೇವಾರಿ ದರಗಳನ್ನು ಸಹ ಆಯೋಗವು ಮೇಲ್ವಿಚಾರಣೆ ಮಾಡುತ್ತದೆ.

ಸಮಸ್ಯೆಗಳು: (Problems)

 ಆಯೋಗದಲ್ಲಿ ಹಲವಾರು ನ್ಯೂನತೆಗಳು ಇವೆ ಅವುಗಳೆಂದರೆ.

  1. ಆಯೋಗವು ತನಿಖೆಯನ್ನು ನಡೆಸುವ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿದ್ದರೂ ಈ ಶಿಫಾರಸ್ಸುಗಳು ಬದ್ಧವಾಗಿಲ್ಲ.
  2. ಆಯೋಗವು ಈ ಸಮುದಾಯದ ಗಣ್ಯರಿಗೆ ಆದ್ಯತೆ ನೀಡಿ ಸಮುದಾಯದ ತಳ ವರ್ಗವನ್ನು ನಿರ್ಲಕ್ಷಿಸಿದೆ.
  3. ತೀರ್ಪು ನೀಡುವಲ್ಲಿ ಹಾಗೂ ವಿಚಾರಣೆ ಮಾಡುವಲ್ಲಿ ಆಯೋಗವು ತುಂಬಾ ವಿಳಂಬ ನೀತಿಯನ್ನು ಅನುಸರಿಸುತ್ತದೆ.
  4. ಕ್ರಿಮಿನಲ್ ತನಿಖೆಯ ವಿಷಯದಲ್ಲಿ ಆಯೋಗವು ಆಮೆಗತಿಯ ಕೆಲಸವನ್ನು ಮಾಡುತ್ತದೆ.
  5. ಸಂಸ್ಥೆಗಳ ಪ್ರಸರಣವು ಆಂತರಿಕ ಗೊಂದಲಗಳಿಂದ  ಕೂಡಿದೆ.

ಉಪಸಂಹಾರ

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ಕಾಪಾಡಲು ಮತ್ತು ಅವರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಮುಖ ಸಂಸ್ಥೆಯಾಗಿದೆ. ಆದರೆ ಇದರ ಶಿಫಾರಸ್ಸುಗಳಿಗೆ ಬದ್ಧತೆ ಇಲ್ಲದಿರುವುದು ಹಾಗೂ ವಿಳಂಬ ನೀತಿ ಮುಂತಾದ ಸಮಸ್ಯೆಗಳು ಅದರ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇವುಗಳನ್ನು ಸರಿಪಡಿಸಿದಲ್ಲಿ ಆಯೋಗವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾಮಾಜಿಕ ನ್ಯಾಯ ಸಾಧನೆಗೆ ಸಹಾಯಕವಾಗಬಹುದು.

ಮಹಿಳಾ ಆಯೋಗ

ಮಹಿಳಾ ಆಯೋಗ

ಪ್ರಾಚೀನ ಭಾರತದಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯವಾಗಲೀ ಹಾಗೂ ಆರ್ಥಿಕ ಸೌಲಭ್ಯಗಳಾಗಲೀ ಇರಲಿಲ್ಲ. ಅವಳನ್ನು ಪುರುಷನಿಗೆ ಸರಿಸಮಾನಗಳು ಎಂದು ಪರಿಗಣಿಸಿರಲಿಲ್ಲ. ಮತದಾನದ ಹಕ್ಕುಗಳಂತೂ ಇರಲೇ ಇಲ್ಲ ʻʻನ ಸ್ಸ್ತ್ರಿ ಸ್ವಾತಂತ್ಯ್ರಂ ಅರ್ಹತಿʼʼ ಎಂದರೆ ಸ್ತ್ರೀಯು ಸ್ವಾತಂತ್ರ್ಯಕ್ಕೆ ಯೋಗ್ಯಳಲ್ಲ ಎಂಬ ಭಾವನೆಯಿತ್ತು. ಅವಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾಗವಹಿಸುವಂತಿರಲಿಲ್ಲ. ಮನೆಯ ನಾಲ್ಕು ಗೋಡೆಯ ಮಧ್ಯೆ ಇರಬೇಕು. ಚಿಕ್ಕವಳಿರುವಾಗ ತಂದೆಯ, ಮದುವೆಯಾದಾಗ ಗಂಡನ ಹಾಗೂ ವಯಸ್ಸಾದ ನಂತರ ಮಕ್ಕಳ ಆಶ್ರಯದಲ್ಲಿ ಇದ್ದು ದೇವರು ಕರೆದಾಗ ಹೋಗಬೇಕು ಎಂಬ ನಿಯಮವನ್ನು ಹಾಕಿ ಅವಳ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿತ್ತು. ಸ್ವಾತಂತ್ರ್ಯ ನಂತರ ಭಾರತದ ಮಹಿಳೆಯರ ಚಳುವಳಿಯ ಪರಿಣಾಮವಾಗಿ ಎಚ್ಚೆತ್ತ ಸರ್ಕಾರ ಅವರಿಗಾಗಿ ಕಾನೂನು ಹಾಗೂ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಮಾನ ಮತ್ತು ನ್ಯಾಯಯುತ ಜೀವನ ನಡೆಸಲು ಅನುಕೂಲವಾಗುವಂತೆ ಮಾಡಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಲು ಮುಂದಾಯಿತು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಷ್ಟ್ರಗಳು, ಸಮಾಜಗಳು, ಸಂಸ್ಕೃತಿಗಳು ಮತ್ತು ವರ್ಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಂಡುಬಂದಾಗ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಈ ಆಯೋಗವನ್ನು ರಚಿಸಲಾಯಿತು. 1990ರಲ್ಲಿ ಮಹಿಳಾ ಆಯೋಗದ ಕಾಯಿದೆಯ ಕರಡನ್ನು ತಯಾರಿಸಿ 1991ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು.  ಅದು ಅಂತಿಮವಾಗಿ 1992 ಜನವರಿ 31 ರಂದು ಕಾನೂನಾತ್ಮಕವಾಗಿ ಜಾರಿಗೆ ಬಂದಿತು. ʻʻಈ ಆಯೋಗದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಂತಿ ಪಟ್ನಾಯಕ್ ಅಧಿಕಾರ ವಹಿಸಿಕೊಂಡರು.ʼʼ ಮೊದಲ ಪುರುಷ ಸದಸ್ಯರಾಗಿ ʻʻಅಲೋಕ್ ರಾವತ್ʼʼ ಆಯ್ಕೆಯಾದರು.

ರಚನೆ : (Composition)

ಮಹಿಳಾ ಆಯೋಗವು ಒಬ್ಬ ಅಧ್ಯಕ್ಷರು, ಐವರು ಸದಸ್ಯರು ಹಾಗೂ ಒಬ್ಬ ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.

ʻʻಮಹಿಳಾ ಆಯೋಗದ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನಾಮನಿರ್ದೇಶನ ಮಾಡುತ್ತದೆ. ಉಳಿದ ೫ ಜನ ಸದಸ್ಯರನ್ನು ಅವರ ಸಾಮರ್ಥ್ಯ, ಸಮಗ್ರತೆ ಮತ್ತು ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ನಾಮನಿರ್ದೇಶನ ಮಾಡಬೇಕು. ಅವರು ಕಾನೂನು, ಮಹಿಳಾ ಕೈಗಾರಿಕಾ ಸಾಮರ್ಥ್ಯದ ನಿರ್ವಹಣೆ, ಸ್ವಮಹಿಳಾ ಸಂಘಟನೆ, ಶಿಕ್ಷಣ, ಆಡಳಿತ, ಅಭಿವೃದ್ಧಿ ಹಾಗೂ ಸಾಮಾಜಿಕ ಯೋಗಕ್ಷೇಮದಂತಹ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು. ಸದಸ್ಯ ಕಾರ್ಯದರ್ಶಿಯನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡುತ್ತದೆ. ಅವರು ನಿರ್ವಹಣಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು.

ಕಾರ್ಯಗಳು: (Functions) ಮಹಿಳಾ ಆಯೋಗದ ಕಾರ್ಯಗಳು ಹೀಗಿವೆ.

  1. ಆಯೋಗವು ಮಹಿಳೆಯರ ಮೇಲೆ ಪರಿಣಾಮ ಬೀರುವ ಕಾನೂನುಗಳು ಹಾಗೂ ನೀತಿಗಳನ್ನು ಪರಿಶೀಲಿಸಿ ಅವರ ಕಲ್ಯಾಣಕ್ಕಾಗಿ ತಿದ್ದುಪಡಿಗಳು ಹಾಗೂ ಹೊಸ ಶಾಸನಗಳನ್ನು ರೂಪಿಸುತ್ತದೆ.
  2. ಮಹಿಳೆಯರ ಕೌಟುಂಬಿಕ  ಹಿಂಸಾಚಾರದಿಂದ ಮಹಿಳಾ ರಕ್ಷಣಾ ಕಾನೂನುಗಳನ್ನು ಸರಿಯಾಗಿ ಅನುಸಾರಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ.
  3. ಕೌಟುಂಬಿಕ ಹಿಂಸೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಸಮಸ್ಯೆಗಳು, ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಮಹಿಳಾ ಆಯೋಗಕ್ಕೆ ಇದೆ.
  4. ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ನೀತಿ ಕ್ರಮಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಜವಾಬ್ದಾರಿ ಮಹಿಳಾ ಆಯೋಗಕ್ಕೆ ಇದೆ.
  5. ಮಹಿಳೆಯರಿಗೆ ಅವರ ಹಕ್ಕುಗಳ ಕುರಿತು ಮಾಹಿತಿ ನೀಡಲು ಆಯೋಗವು ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ನಡೆಸುತ್ತದೆ.
  6. ಮಹಿಳಾ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತದೆ.
  7. ಮಹಿಳಾ ಕಲ್ಯಾಣ ಹಾಗೂ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುತ್ತದೆ.
  8. ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸುಧಾರಿಸಲು ಶಿಫಾರಸ್ಸು ಮಾಡುವುದು.
  9. ಮಹಿಳೆಯರನ್ನು ಬಂಧಿತರಾಗಿ ಇರಿಸಲಾಗಿರುವ ಸೆರೆಮನೆ, ರಿಮ್ಯಾಂಡ್ ಹೋಂ, ಮಹಿಳಾ ಸ್ಥಾಪನೆ ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸುವುದು.
  10. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳನ್ನು ಪ್ರಸ್ತಾಪಿಸಲು ಪ್ರಚಾರ ಹಾಗೂ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಳ್ಳುವುದು. ವೃತ್ತಿಪರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ಅವರ ದಕ್ಷತೆಯನ್ನು ಹೆಚ್ಚಿಸಲು ಬೆಂಬಲ ಸೇವೆಗಳನ್ನು ಗುರುತಿಸುವುದು.

ಉಪಸಂಹಾರ

ಮಹಿಳಾ ಆಯೋಗವು ಮಹಿಳೆಯರ ರಕ್ಷಣೆಗೆ ಮತ್ತು ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರ ಹಕ್ಕುಗಳ ಅರಿವು ಮೂಡಿಸಿ, ಕಾನೂನು ಸಹಾಯ ಮತ್ತು ಸಲಹೆಗಳನ್ನು ನೀಡುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಇದು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ಮಹಿಳಾ ಆಯೋಗವು ಸಮಾನತೆ ಮತ್ತು ನ್ಯಾಯದ ಸಮಾಜ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾದ ಸಂಸ್ಥೆಯಾಗಿದೆ.

ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಸವಾಲುಗಳು

ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಸವಾಲುಗಳು

ಭಾರತದ ಸಂವಿಧಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲು ಸಂವಿಧಾನ ರಚನಾಕಾರರು ಹಲವು ಅವಕಾಶಗಳನ್ನು ಕಲ್ಪಿಸಿದರು. ಆದರೆ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಭಾರತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಕಷ್ಟ ಸಾಧ್ಯವಾಗುತ್ತಿದೆ. ಇದಕ್ಕೆ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ಅವುಗಳು ಈ ಕೆಳಗಿನಂತಿವೆ.

1. ಅಧಿಕಾರ ಕೇಂದ್ರೀಕರಣ: (Centralization Power)

ಭಾರತದ ಸಂವಿಧಾನದ 7ನೇ ಅನುಸೂಚಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯನ್ನು ಮಾಡಿದಾಗಲೂ ಕೇಂದ್ರ ಸರ್ಕಾರವೇ ಪ್ರಬಲವಾಗಿದ್ದು ಅದರಲ್ಲಿಯೇ ಅಧಿಕಾರ ಕೇಂದ್ರೀಕರಣವಾಗಿದ್ದನ್ನು ನಾವಿಂದು ನೋಡುತ್ತಿದ್ದೇವೆ. ಕೇಂದ್ರ ಪಟ್ಟಿಯ ವಿಷಯಗಳ ಕುರಿತಂತೆ ಕೇಂದ್ರವೇ ಸಾರ್ವಭೌಮಾಧಿಕಾರವನ್ನು ಹೊಂದಿದೆ. ಇನ್ನು ರಾಜ್ಯಸಭೆಯ ನಿರ್ಣಯ ಮತ್ತು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಪಟ್ಟಿಯ ವಿಷಯದಲ್ಲಿಯೂ ತನ್ನ ಪ್ರಭಾವ ತೋರಿದೆ. ಹಾಗೆಯೇ ಸಮವರ್ತಿ ಪಟ್ಟಿಯ ವಿಷಯಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಶಾಸನ ರಚಿಸುವ ಅಧಿಕಾರವಿದ್ದರೂ ಸಹ ರಾಜ್ಯದ ಶಾಸನವು ಕೇಂದ್ರ ಶಾಸನಕ್ಕೆ ವಿರುದ್ಧವಾಗಿದ್ದರೆ ಆಗ ರಾಜ್ಯಗಳ ಕಾನೂನುಗಳು ರದ್ದುಗೊಂಡು ಕೇಂದ್ರದ ಕಾನೂನು ಅಂತಿಮವಾಗುತ್ತದೆ. ಇದು ಕೇಂದ್ರ ಸರ್ಕಾರವನ್ನು ಪ್ರಬಲಗೊಳಿಸಿ ರಾಜ್ಯ ಸರ್ಕಾರಗಳನ್ನು ನಿಷ್ಕ್ರಿಯಗೊಳಿಸುವಂತೆ ಮಾಡಿದೆ. ಅಧಿಕಾರದ ಅಸಮಾನತೆ ಭಾರತದ  ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ದೊಡ್ಡ ಸವಾಲಾಗಿದೆ.

2.  ರಾಜ್ಯ ತುರ್ತು ಪರಿಸ್ಥಿತಿಯ ದುರುಪಯೋಗ: (Misuse of State emergency)

ಭಾರತದ ಒಕ್ಕೂಟದ ಯಾವುದೇ ಒಂದು ರಾಜ್ಯದಲ್ಲಿ ಸಂವಿಧಾನಾತ್ಮಕ ಯಂತ್ರವು ಕುಸಿದು ಬಿದ್ದರೆ ಅಂದರೆ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಹುಮತ ಪಡೆಯದಿದ್ದಾಗ ಸರ್ಕಾರ ರಚನೆಯನ್ನು ಮಾಡಲು ಹಿಂಜರಿಯುವ ಸಂದರ್ಭ ಬಂದರೆ ಅಥವಾ ಅಧಿಕಾರರೂಢ ಆಡಳಿತ ಪಕ್ಷವು ವಿಶ್ವಾಸ ಮತ ಕಳೆದುಕೊಂಡು ಅಲ್ಪ ಮತಕ್ಕೆ ಕುಸಿದಾಗ ರಾಜ್ಯಪಾಲರ ವರದಿಯ ಪ್ರಕಾರ ಕೇಂದ್ರ ಸರ್ಕಾರವು ಆ ರಾಜ್ಯದಲ್ಲಿ ರಾಷ್ಟ್ರಪತಿಯವರ ಮೂಲಕ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ. ʻʻಸಂವಿಧಾನದ 356ನೇ ವಿಧಿಯಲ್ಲಿ ಈ ಬಗೆಯ ರಾಜ್ಯ ತುರ್ತು ಪರಿಸ್ಥಿತಿಗೆ ರಾಷ್ಟ್ರಪತಿ ಆಳ್ವಿಕೆ ಎಂದು ಕರೆಯಲಾಗುತ್ತದೆ.ʼʼ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷವು ರಾಜ್ಯದಲ್ಲಿ ವಿರೋಧ ಪಕ್ಷವಿದ್ದರೆ ಅದನ್ನು ಬೀಳಿಸಲು, ವಿರೋಧ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ರಾಜಕೀಯ ಅಸ್ಥಿರತೆ ಮತ್ತು ರಾಜಕೀಯ ಭ್ರಷ್ಟಾಚಾರ ಹಾಗೂ ಕಾನೂನು ವ್ಯವಸ್ಥೆಯ ಕುಸಿತ ಮುಂತಾದ ನೆಪಗಳನ್ನು ಒಡ್ಡಿ ಈ 356ನೇ ವಿಧಿಯನ್ನು ಬಳಸಿರುವುದು ಸಾಕಷ್ಟು ವೇಳೆಯಲ್ಲಿ ಕಂಡುಬಂದಿದೆ. ನೆಹರು ಸರ್ಕಾರ 7 ಬಾರಿ. ಶಾಸ್ತ್ರಿ ಸರ್ಕಾರ 2 ಬಾರಿ, ಇಂದಿರಾಗಾಂಧಿ ಸರ್ಕಾರ 48 ಬಾರಿ, ಮೊರಾರ್ಜಿ ಹಾಗೂ ಚರಣ್ ಸಿಂಗ್ ಸರ್ಕಾರಗಳು 17 ಬಾರಿ, ರಾಜೀವ್ ಗಾಂಧಿ ಸರ್ಕಾರ 6 ಬಾರಿ, ವಿ.ಪಿ ಸಿಂಗ್ ಸರ್ಕಾರ 2 ಬಾರಿ, ಚಂದ್ರಶೇಖರ್ ಸರ್ಕಾರ 4 ಬಾರಿ, ನರಸಿಂಹರಾವ್ ಸರ್ಕಾರ 11 ಬಾರಿ, ದೇವೇಗೌಡ ಸರ್ಕಾರ 2 ಬಾರಿ, ವಾಜಪೇಯಿ ಸರ್ಕಾರ 4 ಬಾರಿ, ಹಾಗೂ ಮನಮೋಹನ್ ಸಿಂಗ್ ಸರ್ಕಾರ 7 ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದಿವೆ.

3. ತೆರಿಗೆ ಕುರಿತಾದ ಗೊಂದಲಗಳು: (Confusion Of Tax)

ತೆರಿಗೆ ವಿಷಯದಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಕಷ್ಟು ಗೊಂದಲಗಳು ಮತ್ತು ಅಸಮಾಧಾನಗಳು ಕಂಡುಬರುತ್ತವೆ. ಸಂವಿಧಾನದಲ್ಲಿ ಸ್ಪಷ್ಟತೆಯ ಅಭಾವದಿಂದಾಗಿ ಕೇಂದ್ರವು ರಾಜ್ಯಗಳ ವಿರುದ್ಧ ವಿಜಯಶಾಲಿಯಾಗುತ್ತಿದೆ. 2016ರಲ್ಲಿ ಜಾರಿಗೆ ಬಂದ ಸರಕು ಹಾಗೂ ಸೇವಾ ತೆರಿಗೆಯು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸಿದೆ. ಸರಕು ಮತ್ತು ಸೇವಾ ತೆರಿಗೆ ಅಧಿಕಾರವನ್ನು ಅಂತರರಾಜ್ಯ ಮಂಡಳಿಯು ಹೊಂದದೇ ಇರುವುದು ಮತ್ತು ಅದನ್ನು ಹಣಕಾಸು ಆಯೋಗಕ್ಕೆ ನೀಡಿರುವುದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ. ಇದರಿಂದ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯು ತನ್ನ ಕಾರ್ಯವನ್ನು ನೆರವೇರಿಸಲು ಅಡಚಣೆ ಉಂಟಾಗುತ್ತದೆ.

4. ಅಂತರ ರಾಜ್ಯ  ಮಂಡಳಿಯ ವೈಫಲ್ಯ: (Failure of Interstate)

ಭಾರತದ ಒಕ್ಕೂಟ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಜ್ಯ ಮಂಡಳಿಯು ಉತ್ತಮ ವೇದಿಕೆಯಾಗಬೇಕಿತ್ತು, ಆದರೆ ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಬಾಂಧವ್ಯವನ್ನು ಉಂಟು ಮಾಡಿ ಸಾಮರಸ್ಯತೆಯನ್ನು ಕಾಪಾಡಿಕೊಂಡು ಬರುವಂತೆ ಮಾಡುವಲ್ಲಿ ಈ ಅಂತರಾಜ್ಯ ಮಂಡಳಿಯು ಸಂಪೂರ್ಣವಾಗಿ ವಿಫಲಗೊಂಡಿದೆ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಕೇವಲ ಎರಡೇ ಬಾರಿ ಸಭೆ ಸೇರಿ ಇತಿಹಾಸ ಸೃಷ್ಟಿಸಿದೆ. ಈ ಮಂಡಳಿಯು ಕಾಲಕಾಲಕ್ಕೆ ಸಭೆ ಸೇರಿದ್ದರೆ ರಾಜ್ಯಗಳು ಮತ್ತು ಕೇಂದ್ರಗಳ ನಡುವಿನ ಗೊಂದಲ ಬಹುಮಟ್ಟಿಗೆ ಕಡಿಮೆಯಾಗುತ್ತಿತ್ತು. ಮಂಡಳಿಯು ತನ್ನ ಉದ್ದೇಶವನ್ನೇ ಮರೆತದ್ದು ಒಂದು ಮಹಾ ದುರಂತವೆಂದು ಹೇಳಬಹುದು.

5. ವಿಶ್ವಾಸಾರ್ಹತೆಯ ಕೊರತೆ:

ಕೇಂದ್ರ ಹಾಗೂ ರಾಜ್ಯಗಳ ನಡುವೆ ವಿಶ್ವಾಸದ ಕೊರತೆ ಕಂಡುಬರುತ್ತಿದೆ.  ಕೇಂದ್ರ ಸರ್ಕಾರ ಯಾವುದೇ ಕಾರ್ಯಗಳನ್ನು ಮಾಡ ಹೊರಟರೆ ಅದು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು, ಉಳಿದ ರಾಜ್ಯಗಳಿಗೆ ನುಂಗಲಾರದ ತುತ್ತಾಗಿದೆ. ನೋಟುಗಳ ಅಮಾನೀಕರಣ, ಪೌರತ್ವ ತಿದ್ದುಪಡಿ ಕಾಯ್ದೆ, ಇಂಧನ ದರಗಳ ಏರಿಕೆ ಮುಂತಾದ ಸಮಯಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳಲು ಮುಂದಾದಾಗ ಸಹಜವಾಗಿ ರಾಜ್ಯಗಳು ಮತ್ತು ಕೇಂದ್ರದ ನಡುವೆ ಬಿರುಕು ಕಾಣಿಸಿಕೊಳ್ಳುತ್ತದೆ. ಇದು ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮುಂದುವರಿಕೆಗೆ ಸವಾಲಾಗಿ ಪರಿಣಮಿಸುತ್ತದೆ.

ಉಪಸಂಹಾರ

ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಯಶಸ್ಸು ಕೇಂದ್ರ ಮತ್ತು ರಾಜ್ಯಗಳ ಪರಸ್ಪರ ವಿಶ್ವಾಸ ಮತ್ತು ಗೌರವದ ಮೇಲೆ ಅವಲಂಬಿತವಾಗಿದೆ. ಅಧಿಕಾರ ಸಮತೋಲನ, ಪಾರದರ್ಶಕತೆ ಮತ್ತು ನಿಯಮಿತ ಸಂವಾದವು ಮಾತ್ರ ಈ ಸವಾಲುಗಳನ್ನು ನಿವಾರಿಸಬಹುದು. ಸಂವಿಧಾನದ ಆತ್ಮವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಭಾರತೀಯ ಫೆಡರಲಿಸಂ ಬಲವಾಗುತ್ತದೆ. ಇದೇ ದೇಶದ ಸಮಗ್ರ ಅಭಿವೃದ್ಧಿಗೆ ದಾರಿ ತೋರಿಸುತ್ತದೆ.

ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮೂಲಾಂಶಗಳು

ಭಾರತದಲ್ಲಿನ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯ ಮೂಲಾಂಶಗಳು

ಬ್ರಿಟಿಷ್ ಭಾರತದ ಅವಧಿಯಲ್ಲಿ ಸಹಕಾರಾತ್ಮಕ ಆಡಳಿತದ ಬೇರುಗಳು ಮೊಳಕೆಯೊಡೆಯಲು ಆರಂಭಿಸಿದವು. ಇದಕ್ಕೆ ಪುಷ್ಟಿ ಎಂಬಂತೆ 1919ರ ಭಾರತ ಸರ್ಕಾರದ ಕಾಯ್ದೆಯಲ್ಲಿ ದ್ವಿ ಸರ್ಕಾರದ ವ್ಯವಸ್ಥೆಯನ್ನು ಜಾರಿಗೆ ತಂದಿರುವುದನ್ನು ಕಾಣಬಹುದಾಗಿದೆ. ಮುಂದುವರೆದು ನೆಹರು ವರದಿಯಲ್ಲಿ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಬೇಕೆಂಬ ಹೋರಾಟ ಜೋರಾಗಿತ್ತು. ಅದರ ಪ್ರತಿಫಲವೆಂಬಂತೆ ದೇಶ ಸ್ವಾತಂತ್ರಗೊಂಡ ನಂತರ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಯನ್ನು ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಅಳವಡಿಸಿಕೊಂಡರು. ವಿಶಾಲವಾದ ಮತ್ತು ವೈವಿಧ್ಯತೆಯಿಂದ ಕೂಡಿದ ನಾಡಿಗೆ ಇದು ಅಗತ್ಯವಾಗಿತ್ತು.

1. ಅಧಿಕಾರ ಹಂಚಿಕೆ:        (Distribution of Power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಲು ಸಂವಿಧಾನದ ರಚನಾಕಾರರು ಅವುಗಳ ನಡುವೆ ಶಾಸನೀಯ ಅಧಿಕಾರಗಳನ್ನು ಹಂಚಿಕೆ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳು ಸ್ವತಂತ್ರವಾದ ತೀರ್ಮಾನಗಳನ್ನು ಕೈಗೊಂಡು ಪರಸ್ಪರ ಸಹಕಾರದಿಂದ ವರ್ತಿಸಲು ಆಸ್ಪದವಿರುವಂತಹ ಸಮವರ್ತಿ ಪಟ್ಟಿಯನ್ನು ರಚಿಸಿದರು.

2.  ಅಖಿಲ ಭಾರತೀಯ ಸೇವೆಗಳು: (All Indian Services)

ಸಂವಿಧಾನದ 312ನೇ ವಿಧಿಯ ಪ್ರಕಾರ ಸಂವಿಧಾನ ರಚನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಅಖಿಲ ಭಾರತೀಯ ಸೇವಾ ವರ್ಗದ ರಚನೆಯನ್ನು ಮಾಡಿದರು. ಈ ಅಧಿಕಾರಿಗಳು ಕೇಂದ್ರದಿಂದ ನೇಮಕಗೊಂಡು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಎರಡು ಬಗೆಯ ಸರ್ಕಾರಗಳು ಆಡಳಿತಾತ್ಮಕವಾಗಿ ಸಹಕಾರಕ್ಕೆ ಮುಂದಾಗಲು ಸುಲಭವಾಗುತ್ತದೆ.

3.  ಅಂತರಾಜ್ಯ ಮಂಡಳಿ: (Interstate Cooperation)

ಸಂವಿಧಾನದ 263 ನೇ ವಿಧಿಯ ಪ್ರಕಾರ ಅಂತರ ರಾಜ್ಯ ಮಂಡಳಿ ರಚನೆಗೆ ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳು ತಮ್ಮ ನಡುವಿನ ವಿವಾದಗಳನ್ನು ಪರಸ್ಪರ ಸಹಕಾರದಿಂದ ಪರಿಹರಿಸಿಕೊಳ್ಳಲು ಈ ಮಂಡಳಿಯು ಸೂಕ್ತ ವೇದಿಕೆಯನ್ನು ನಿರ್ಮಿಸಿದೆ. ಇದರಿಂದ ಪರಸ್ಪರ ಗೊಂದಲಗಳು ದೂರವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆ ಬಲಗೊಳ್ಳುತ್ತದೆ.

4. ವಲಯ ಸಮಿತಿಗಳು: (Reginal Committees)

1956ರಲ್ಲಿ ಉತ್ತರ ದಕ್ಷಿಣ ಪೂರ್ವ ಹಾಗೂ ಪಶ್ಚಿಮ ಮತ್ತು ಕೇಂದ್ರ ವಲಯ ಸಮಿತಿಗಳನ್ನು ರಚಿಸಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಯೋಜನೆ ತರಲು ಪ್ರಯತ್ನಿಸಲಾಯಿತು. ಈ ಸಂಯೋಜನೆಯ ಮೂಲ ಉದ್ದೇಶವೆಂದರೆ ವಲಯ ರಾಜ್ಯಗಳು ಮತ್ತು ಕೇಂದ್ರ ಹಾಗೂ ನಿರ್ದಿಷ್ಟ ವಲಯ ರಾಜ್ಯಗಳ ನಡುವೆ ಸಹಕಾರವನ್ನು ಏರ್ಪಡಿಸುವುದಾಗಿದೆ.

5. ಸರಕು ಸೇವಾ ತೆರಿಗೆ: (Transportation Service Tax)

 ಭಾರತದಲ್ಲಿ  2016ರಲ್ಲಿ ಸಂವಿಧಾನದ 101ನೇ ತಿದ್ದುಪಡಿ ಮಾಡಿ ಸರಕು ಹಾಗೂ ಸೇವಾ ತೆರಿಗೆಗಳನ್ನು ಜಾರಿಗೆ ತರಲಾಯಿತು. ಒಂದೇ ದೇಶ ಒಂದೇ ತೆರಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ಸೇವೆ ಅಧಿಕ ಉದ್ಯೋಗವಕಾಶಗಳನ್ನು ನೀಡಿ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿತ್ತು.

6.  ಭಾರತದ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ: ( Indian Diversion National Institution)

ಭಾರತದಲ್ಲಿ ಜಾರಿಯಲ್ಲಿದ್ದ ಪಂಚವಾರ್ಷಿಕ ಯೋಜನೆಗಳನ್ನು ರದ್ದುಗೊಳಿಸಿ ಅದರ ಬದಲಾಗಿ ಪರಿವರ್ತನಾ ರಾಷ್ಟ್ರೀಯ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ರಚಿಸಿದೆ. ಎಲ್ಲಾ ರಾಜ್ಯಗಳೊಂದಿಗೆ ಮತ್ತು ವಿದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಗುರಿಯನ್ನಿಟ್ಟುಕೊಂಡಿದೆ.ಅ

ಉಪಸಂಹಾರ

ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆ ಭಾರತದ ಆಡಳಿತದ ಮೂಲಸ್ತಂಭವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಮತ್ತು ಪರಸ್ಪರ ಗೌರವದಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಅಂತರಾಜ್ಯ ಮಂಡಳಿ, ಜಿಎಸ್ಟಿ ಹಾಗೂ ನೀತಿ ಆಯೋಗ ಮುಂತಾದ ವ್ಯವಸ್ಥೆಗಳು ಈ ತತ್ವವನ್ನು ಮತ್ತಷ್ಟು ಬಲಪಡಿಸಿವೆ. ಹೀಗಾಗಿ, ಭಾರತದ ಏಕತೆ ಮತ್ತು ಅಭಿವೃದ್ಧಿಗೆ ಸಹಕಾರಾತ್ಮಕ ಸಂಯುಕ್ತತತ್ವ ಅನಿವಾರ್ಯವಾಗಿದೆ.

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ

 ʻʻ ಭಾರತದಲ್ಲಿ ನಿಜವಾದ ಫೆಡರಲ್ ಮಾದರಿಯ ಸರ್ಕಾರವಿಲ್ಲ ರಾಜ್ಯಗಳ ಅಳಿವು ಉಳಿವು ಕೇಂದ್ರ ಸರ್ಕಾರದ ಕೃಪೆಗೆ ಒಳಗಾಗಿದೆ. ರಾಜ್ಯಗಳಿಗೆ ನೀಡಿದ ಅಲ್ಪ ಸ್ವಾಯತ್ತತೆಯೂ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಗಾಗಿದೆ.ʼʼ ಕಾರ್ಲ್‌ ಜೆ ಪ್ರೆಡರಿಚ್.

ಭಾರತವು ಪ್ರಬಲ ಕೇಂದ್ರ ಸರ್ಕಾರ ಮತ್ತು ದುರ್ಬಲ ವಿವಿಧ ರಾಜ್ಯಗಳಿಂದ ಕೂಡಿರುವ ಒಂದು ಒಕ್ಕೂಟ ವ್ಯವಸ್ಥೆಯಾಗಿದೆ. ಈ ಕಾರಣಗಳಿಂದ ನಮ್ಮ ಸಂವಿಧಾನ ರಚನಾಕಾರರು ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯ ಪಟ್ಟಿಗಳನ್ನು ಸಂವಿಧಾನದಲ್ಲಿ ಅಳವಡಿಸಿ ಭವಿಷ್ಯದಲ್ಲಿ ಈ ಎರಡೂ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ತಡೆಯಲು ಯತ್ನಿಸಿದರು ಸಂವಿಧಾನದ 11 ಮತ್ತು 12ನೇ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನೀಯ, ಆಡಳಿತಾತ್ಮಕ ಹಾಗೂ ಆರ್ಥಿಕ ಸಂಬಂಧಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು.

A)  ಶಾಸನೀಯ ಸಂಬಂಧಗಳು: (Legislative Relations)

ಸಂವಿಧಾನದ 11ನೇ ಭಾಗದ ಮೊದಲ ಅಧ್ಯಾಯದಲ್ಲಿ 245 ರಿಂದ 256 ರವರೆಗಿನ ವಿಧಿಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಶಾಸನೀಯ ಸಂಬಂಧಗಳನ್ನು ವಿವರಿಸಲಾಗಿದೆ. ನಮ್ಮ ಸಂವಿಧಾನ ರಚನಾಕಾರರು ಅಮೇರಿಕಾದ ಸಂವಿಧಾನದ ಬದಲು ಕೆನಡಾ ಸಂವಿಧಾನದಿಂದ ಪ್ರಭಾವಿತರಾಗಿ ಕೆನಡಾ ಸಂವಿಧಾನದ ಅಂಶಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿಕೊಂಡ ಕಾರಣ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗಿಂತ ಶಾಸನೀಯ ಸಂಬಂಧದಲ್ಲಿ ಕೇಂದ್ರ ಪ್ರಭಾವಶಾಲಿಯಾಯಿತು. ಅವುಗಳನ್ನು ಕೆಳಕಂಡಂತೆ ವಿಶ್ಲೇಷಿಸಬಹುದು.

1)  ಸಂವಿಧಾನದ 245 ನೇ ವಿಧಿಯಲ್ಲಿರುವ (೨)ನೇ ಉಪವಿಧಿಯ ಪ್ರಕಾರ ಸಂಸತ್ತು ಮಾಡಿದ ಕಾನೂನು ತನ್ನ ಎಲ್ಲೆ ಮೀರಿ ಜಾರಿಯಲ್ಲಿದೆ ಎಂಬ ಕಾರಣಕ್ಕಾಗಿ ಅದನ್ನು ಅನೂರ್ಜಿತ ಎಂದು ಭಾವಿಸಕೂಡದು.

2)  ಸಂವಿಧಾನದ 246ನೇ ವಿಧಿಯಲ್ಲಿ (೪)ನೇ ಉಪವಿಧಿ ಅನ್ವಯ ಕೇಂದ್ರ ಸಂಸತ್ತು ಅಧಿಕಾರ ಹಂಚಿಕೆಯ ಮೂರು ಪಟ್ಟಿಗಳಾದ ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿನ ವಿಷಯಗಳ ಮೇಲೆ ಶಾಸನವನ್ನು ರಚಿಸಲು ಅಧಿಕಾರ ಪಡೆದಿದೆ. ಆದರೆ ರಾಜ್ಯ ಶಾಸಕಾಂಗಗಳು ಉಳಿಕೆ ಪಟ್ಟಿಯ ವಿಷಯಗಳಲ್ಲಿ ಮಾತ್ರ ಶಾಸನ ರಚಿಸಲು ಅವಕಾಶವನ್ನು ಪಡೆದಿರುತ್ತವೆ.

3)  ಸಂವಿಧಾನದ 247ನೇ ವಿಧಿಯು ಹೇಳುವ ಪ್ರಕಾರ ಕೇಂದ್ರ ಕಾನೂನಿಗೆ ಸಂಬಂಧಿಸಿದಂತೆ ಸಂಸತ್ತು ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬಹುದು.

4) ಸಂವಿಧಾನದ 248ನೇ ವಿಧಿಯ ಅನ್ವಯ ಸಂವಿಧಾನದಲ್ಲಿ ನಮೂದಿಸದೇ ಇರುವ ಅಧಿಕಾರಗಳನ್ನು (Residuary Powers) ರಾಜ್ಯಗಳಿಗೆ ನೀಡಲಾಗಿದೆ. 

5) ಸಂವಿಧಾನದ 249ನೇ ವಿಧಿಯಂತೆ ರಾಷ್ಟ್ರದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯಸಭೆಯು ೨/೩  ಬಹುಮತದೊಂದಿಗೆ ರಾಜ್ಯ ಪಟ್ಟಿಯಲ್ಲಿರುವ ಯಾವುದಾದರೂ ಒಂದು ವಿಷಯದ ಬಗ್ಗೆ ಸಂಸತ್ತು ಕಾನೂನು ಮಾಡುವಂತೆ ಅಧಿಕಾರ ನೀಡಬಹುದು. ಆಗ ಕೇಂದ್ರ ಹಾಗೂ ಸಮವರ್ತಿ ಪಟ್ಟಿಯೊಡನೆ ಸಂಸತ್ತು ರಾಜ್ಯ ಪಟ್ಟಿಯ ವಿಷಯಗಳ ಮೇಲೆಯೂ ಶಾಸನ ರಚಿಸುವ ಅಧಿಕಾರ ಪಡೆಯುತ್ತದೆ. ರಾಜ್ಯಸಭೆಯು ಅಂಗೀಕರಿಸಿದ ಈ ನಿರ್ಣಯ ಒಂದು ವರ್ಷ ಜಾರಿಯಲ್ಲಿರುತ್ತದೆ. ಈ ವಿಧಿಯ ಮುಂದುವರಿಕೆಗೆ ಪ್ರತಿವರ್ಷ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ನೀಡಬೇಕು.

6)  ಸಂವಿಧಾನದ 250ನೇ ವಿಧಿಯ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಕೇಂದ್ರವು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನುಗಳನ್ನು ಮಾಡಬಹುದಾಗಿದೆ.

7)  249 ಮತ್ತು 250ನೇ ವಿಧಿಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳು ರಚಿಸುವ ಕಾನೂನುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಆಗ ಕೇಂದ್ರ ರಚಿಸಿದ ಕಾನೂನುಗಳೇ ಊರ್ಜಿತವಾಗುತ್ತವೆ. (251ನೇ ವಿಧಿ.)

8)  ಸಂವಿಧಾನದ 252ನೇ ವಿಧಿಯಂತೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಜ್ಯಗಳು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನವನ್ನು ಮಾಡುವಂತೆ ಕೇಂದ್ರವನ್ನು ಕೇಳಿಕೊಂಡಾಗ ಕೇಂದ್ರವು ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನನ್ನು ಮಾಡಬಹುದು. ಇತರ ರಾಜ್ಯಗಳ ಶಾಸನವನ್ನು ತಮ್ಮ ರಾಜ್ಯಗಳಿಗೂ ಅನ್ವಯವಾಗುವಂತೆ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಕೇಂದ್ರವು ಆ ರಾಜ್ಯಗಳಿಗೆ ತಾನು ರಚಿಸಿದ ಕಾನೂನನ್ನು ಅಳವಡಿಸಬಹುದು.

9)  ಸಂವಿಧಾನದ 253ನೇ ವಿಧಿಯ ಪ್ರಕಾರ ವಿಶ್ವ ಒಪ್ಪಂದ. ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಜಾಗತಿಕ ಮಟ್ಟದ ತೀರ್ಮಾನಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಅಥವಾ ದೇಶದ ಯಾವುದಾದರೂ ಒಂದು ಭಾಗದಲ್ಲಿ ಅನ್ವಯವಾಗುವಂತೆ ಕಾನೂನು ಮಾಡಲು ಕೇಂದ್ರ ಸಂಸತ್ತು ಅಧಿಕಾರವನ್ನು ಪಡೆದಿದೆ.

10) ಸಂವಿಧಾನದ 254ನೇ ವಿಧಿಯ ಅನ್ವಯ ಸಮವರ್ತಿ ಪಟ್ಟಿಯ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಏಕಕಾಲದಲ್ಲಿ ರಚಿಸಿದ ಕಾನೂನುಗಳು ಪರಸ್ಪರ ವಿರುದ್ಧವಾಗಿದ್ದರೆ ರಾಜ್ಯ ಶಾಸಕಾಂಗದ ಕಾನೂನುಗಳು ರದ್ದುಗೊಂಡು ಕೇಂದ್ರದ ಕಾನೂನು ಗಳೇ ಊರ್ಜಿತಗೊಳ್ಳುತ್ತವೆ.

11) ಸಂವಿಧಾನದ 255ನೇ ವಿಧಿಯ ಪ್ರಕಾರ ರಾಜ್ಯ ಶಾಸಕಾಂಗಗಳು ರಚಿಸಿದ ಕೆಲವು ಮಸೂದೆಗಳು ಅಗತ್ಯವಾಗಿವೆ ಎಂದು ಅನಿಸಿದರೆ ಅವುಗಳನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ರಾಜ್ಯಪಾಲರು 200ನೇ ವಿಧಿಯ ಅನ್ವಯ ಕಾಯ್ದಿರಿಸಬಹುದು. 2೦1ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಈ ಮಸೂದೆಗೆ ಒಪ್ಪಿಗೆಯನ್ನು ನೀಡಬಹುದು ಅಥವಾ ತಡೆಹಿಡಿಯಬಹುದು ಅಥವಾ ಸಂಬಂಧಿಸಿದ ಶಾಸಕಾಂಗದ ಪುನರ್ ಪರಿಶೀಲನೆಗೆ ವಾಪಸ್ಸು ಕಳಿಸಬಹುದು. ಆರು ತಿಂಗಳೊಳಗೆ ಈ ಮಸೂದೆಯನ್ನು ಮತ್ತೆ ರಾಜ್ಯ ಶಾಸಕಾಂಗವು ಪರಿಶೀಲಿಸಿ ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಿದಾಗ ಅವರು ತಮ್ಮ ಒಪ್ಪಿಗೆಯನ್ನು ಕೊಡಬಹುದು ಅಥವಾ ನಿರಾಕರಿಸಬಹುದು.

B) ಆಡಳಿತಾತ್ಮಕ ಸಂಬಂಧಗಳು: (Administrative Relations)

ಭಾರತದ ಸಂವಿಧಾನದ 11ನೇ ಭಾಗದಲ್ಲಿ ಎರಡನೇ ಅಧ್ಯಾಯದಲ್ಲಿನ 256 ರಿಂದ 263 ರವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳನ್ನು ಮತ್ತು ಆಡಳಿತಾಧಿಕಾರಿ ವಿಷಯಗಳ ಕುರಿತು ವಿವರಿಸಲಾಗಿದೆ. ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವ ಸಂಯುಕ್ತ ರಚನೆಯ ಆಶಯಗಳನ್ನು ಬಲಪಡಿಸುವುದು ಅದರ ಉದ್ದೇಶವಾಗಿದೆ.

1)  ಭಾರತದ ರಾಷ್ಟ್ರಪತಿಗಳು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲರು ಮತ್ತು ಉಪರಾಜ್ಯಪಾಲರು ಮತ್ತು ಆಡಳಿತ ಅಧಿಕಾರಗಳನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ. ಕೇಂದ್ರ ಮಂತ್ರಿಮಂಡಲದ ಆಶಯದಂತೆ ರಾಜ್ಯಪಾಲರು ನೇಮಕಗೊಂಡು ಕೇಂದ್ರದ ಪ್ರತಿನಿಧಿಯಂತೆ ರಾಜ್ಯಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

2) ಸಂವಿಧಾನದ 256ನೇ ವಿಧಿಯ ಪ್ರಕಾರ ಪ್ರತಿಯೊಂದು ರಾಜ್ಯವು ತನ್ನ ಕಾರ್ಯಾಂಗಾಧಿಕಾರವನ್ನು ಚಲಾಯಿಸುವಾಗ ಸಂಸತ್ತಿನ ಕಾನೂನುಗಳನ್ನು ಅನುಸರಿಸಬೇಕು. ಈ ವಿಷಯವಾಗಿ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ಕೊಡಬಹುದು.

3)  ಸಂವಿಧಾನದ 257ನೇ ವಿಧಿಯ ಪ್ರಕಾರ ಅಗತ್ಯವೆನಿಸಿದರೆ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಷ್ಟ್ರೀಯ ಏಕತೆ, ರಕ್ಷಣೆ, ಸಾರಿಗೆ, ಸಂಪರ್ಕ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮುಂತಾದವುಗಳ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸೂಕ್ತ ಮಾರ್ಗದರ್ಶನ ನೀಡುವ ಅಧಿಕಾರ ಹೊಂದಿದೆ.

4)  ಸಂವಿಧಾನದ 258ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರವು ಒಂದು ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಜ್ಯಗಳ ಅನುಮತಿ ಪಡೆದು ಅಥವಾ ಪಡೆಯದೆ ತನ್ನ ಅಧಿಕಾರವನ್ನು ರಾಜ್ಯಗಳಿಗೆ ನಿಯೋಜನೆ ಮಾಡುವ ಅಧಿಕಾರವನ್ನು ಹೊಂದಿದೆ.

5) ಸಂವಿಧಾನದ 262ನೇ ವಿಧಿಯ ಪ್ರಕಾರ ಅಂತರರಾಜ್ಯಗಳ ಜಲವಿವಾದಗಳನ್ನು ಬಗೆಹರಿಸಲು ಕಾನೂನು ರಚಿಸುವ ಅಧಿಕಾರವನ್ನು ಕೇಂದ್ರ ಸಂಸತ್ತು ಹೊಂದಿದೆ.

6)  ಸಂವಿಧಾನದ 263 ನೇ ವಿಧಿಯನ್ವಯ ರಾಷ್ಟ್ರಪತಿಗಳು ಭಾರತ ಒಕ್ಕೂಟದ ಕೇಂದ್ರ ಮತ್ತು ವಿವಿಧ ರಾಜ್ಯಗಳ ನಡುವಿನ ಸಾಮಾನ್ಯ ವಿಷಯಗಳನ್ನು ಚರ್ಚಿಸಲು ಅಗತ್ಯವೆನಿಸಿದರೆ ಅಂತರ ರಾಜ್ಯ ಮಂಡಳಿಯನ್ನು ರಚಿಸಬಹುದಾಗಿದೆ.

7)  ಸಂವಿಧಾನದ 3೦1 ರಿಂದ 3೦5 ರವರೆಗಿನ ವಿಧಿಗಳ ಪ್ರಕಾರ ಒಕ್ಕೂಟದ ರಾಜ್ಯಗಳ ನಡುವಿನ ಸೌಹಾರ್ಧಯುತ ಸಂಬಂಧಗಳನ್ನು ಕಾಯ್ದುಕೊಳ್ಳುವ ಅಂತರರಾಜ್ಯ ವಾಣಿಜ್ಯ ಆಯೋಗವನ್ನು ರಚಿಸುವ ಅಧಿಕಾರ ಕೇಂದ್ರ ಸಂಸತ್ತಿಗೆ ಇದೆ.

8)  ಅಖಿಲ ಭಾರತ ಸೇವೆಗಳಾದ ಐ.ಎ.ಎಸ್ ಐ.ಪಿ.ಎಸ್ ಮತ್ತು ಐ.ಎಫ್.ಎಸ್ ಗಳನ್ನು ಕೇಂದ್ರ ಲೋಕಸೇವಾ ಆಯೋಗದಿಂದ ಆಯ್ಕೆ ಮಾಡಿ ಕೇಂದ್ರ ಹಾಗೂ ರಾಜ್ಯಗಳಿಗೆ ನೇಮಕ ಮಾಡಲಾಗುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಸೇವೆಗಳಿಗೆ ಸೇರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ರಾಜ್ಯ ಸರ್ಕಾರಗಳು ಅವರ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುವುದಿಲ್ಲ.

9)  ರಾಷ್ಟ್ರೀಯ ಐಕ್ಯತಾ ಸಮಿತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು. ಕೋಮುವಾದ, ಜಾತಿವಾದ ಹಾಗೂ ಪ್ರಾದೇಶಿಕತೆ ಮತ್ತು ಭಾಷಾಭಿಮಾನ ಮುಂತಾದವುಗಳನ್ನಾಧರಿಸಿ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವುದು ಈ ಸಮಿತಿಯ ಕಾರ್ಯವಾಗಿದೆ.

10)  ಕೇಂದ್ರ ಲೋಕಸೇವಾ ಆಯೋಗವನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಜೊತೆಗೆ ಆಯೋಗದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಮತ್ತು ಅವರನ್ನು ಪದಚ್ಯುತಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿಗಳೇ ಹೊಂದಿದ್ದಾರೆ.

11) ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಛನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳನ್ನು ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರಿಗಿದ್ದು ಇಡೀ ದೇಶದಲ್ಲಿ ಸ್ವತಂತ್ರ ಏಕೀಕೃತ ನ್ಯಾಯಾಂಗ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.

C)  ಹಣಕಾಸಿನ ಸಂಬಂಧಗಳು: (Financial Relations)

ಸಂವಿಧಾನದ ೨೬೪ ರಿಂದ ೨೬೭ ವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಉತ್ತಮ ಆರ್ಥಿಕ ಸಂಬಂಧವನ್ನು ಹೊಂದುವ ಸಂವಿಧಾನಾತ್ಮಕ ಅವಕಾಶಗಳನ್ನು ನೀಡಲಾಗಿದೆ ಅವುಗಳೆಂದರೆ

1)  ಸಂವಿಧಾನದ 268ನೇ ವಿಧಿಯಂತೆ ಕೇಂದ್ರವು ತೆರಿಗೆಯನ್ನು ವಿಧಿಸಿದಾಗ ರಾಜ್ಯಗಳು ಆ ತೆರಿಗೆಯನ್ನು ವಸೂಲಿ ಮಾಡಿಕೊಂಡು ತಾವೇ ಉಪಯೋಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

2)  ಸಂವಿಧಾನದ 269 ನೇ ವಿಧಿಯ ಪ್ರಕಾರ ಕೆಲವು ತೆರಿಗೆಗಳನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಉದಾಹರಣೆ ರೈಲು ದರ, ಸರಕುಗಳ ಮೇಲೆ ವಿಧಿಸುವ ತೆರಿಗೆ, ವಿಮಾನ ಪ್ರಯಾಣ ತೆರಿಗೆ, ಆಸ್ತಿಯ ಸುಂಕ, ವೃತ್ತ ಪತ್ರಿಕೆಗಳ ಮಾರಾಟ ತೆರಿಗೆ ಮುಂತಾದವುಗಳು.

3)  ಸಂವಿಧಾನದ 270ನೇ ವಿಧಿಯ ಪ್ರಕಾರ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರವೇ ವಿಧಿಸಿ ಸಂಗ್ರಹಿಸಿ ಅದನ್ನು ತನಗೆ ಹಾಗೂ ಇತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಆದಾಯ ತೆರಿಗೆಯ ಶೇಕಡ 85% ರಷ್ಟು ಭಾಗ ರಾಜ್ಯ ಸರ್ಕಾರಗಳಿಗೆ ಹೋಗಬೇಕು.

4)  ಸಂವಿಧಾನದ 271ನೇ ವಿಧಿಯ ಪ್ರಕಾರ ರಾಜ್ಯಗಳ 18 ವಿಷಯಗಳ ಮೇಲೆ ತೆರಿಗೆಯನ್ನು ವಿಧಿಸಿ, ಸಂಗ್ರಹಿಸಿ ತಾವೇ ಬಳಕೆ ಮಾಡಿಕೊಳ್ಳಬಹುದಾಗಿದೆ.

5)  ಸಂವಿಧಾನದ 275 ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಾಜ್ಯಗಳು ಕೇಂದ್ರದಿಂದ ಅನುದಾನವನ್ನು ಕೇಳಿದರೆ ಕೇಂದ್ರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು.

6)  ಸಂವಿಧಾನದ 282ನೇ ವಿಧಿಯ ಪ್ರಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನವನ್ನು ನೀಡಬಹುದು ಉದಾಹರಣೆ ಬರಗಾಲ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕೇಂದ್ರ ಹಣಕಾಸಿನ ನೆರವನ್ನು ಅಂತಹ ರಾಜ್ಯಗಳಿಗೆ ನೀಡಬಹುದು.

7)  ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ರಚಿಸುವುದು.

8) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡುತ್ತದೆ.

9)  ರಾಜ್ಯಗಳು ದೇಶದ ಹೊರಗಿನಿಂದ ಸಾಲವನ್ನು ಪಡೆಯುವಂತಿಲ್ಲ. ಆದರೆ ಕೇಂದ್ರ ಸರ್ಕಾರವೇ ಸಾಲದ ರೂಪದಲ್ಲಿ ರಾಜ್ಯಗಳಿಗೆ ಹಣಕಾಸಿ ನೆರವನ್ನು ನೀಡುತ್ತದೆ.

ಉಪಸಂಹಾರ

ಭಾರತೀಯ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಾತ್ಮಕ ಸಂಬಂಧವನ್ನು ನಿರ್ಮಿಸಲು ವಿಶೇಷ ವಿಧಿಗಳನ್ನು ಹೊಂದಿದೆ. ತುರ್ತು ಪರಿಸ್ಥಿತಿ, ರಾಷ್ಟ್ರ ಹಿತ ಮತ್ತು ಆರ್ಥಿಕ ಸಮತೋಲನದ ದೃಷ್ಟಿಯಿಂದ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆದರೂ ರಾಜ್ಯಗಳ ಅಭಿವೃದ್ಧಿ ಮತ್ತು ಸ್ವಾಯತ್ತತೆಯನ್ನು ಸಂರಕ್ಷಿಸುವ ಪ್ರಯತ್ನವೂ ಕಂಡುಬರುತ್ತದೆ. ಈ ಸಂಬಂಧಗಳ ಸಮತೋಲನವೇ ಭಾರತದ ಏಕತೆ ಮತ್ತು ಪ್ರಗತಿಗೆ ಆಧಾರವಾಗಿದೆ.