ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಉನ್ನತ ಮೊಗಲ್ ಚಕ್ರವರ್ತಿಗಳಲ್ಲಿ ಕಟ್ಟಕಡೆಯವನಾದ ಔರಂಗಜೇಬ್, ಕ್ರಿ.ಶ.1658 ರಲ್ಲಿ ತನ್ನ ತಂದೆ ಷಹಜಹಾನನನ್ನು ಬಂಧನದಲ್ಲಿರಿಸಿ ಅಧಿಕಾರಕ್ಕೆ ಬಂದನು. ಕಾರ್ಯದಕ್ಷತೆಗೆ, ಸೈನಿಕ ಕೌಶಲ್ಯಕ್ಕೆ, ಅಸಮಾನ್ಯ ಬುದ್ಧಿಶಕ್ತಿಗೆ, ಧರ್ಮನಿಷ್ಠೆಗೆ ಹೆಸರಾಗಿದ್ದ ಔರಂಗಜೇಬ್ ತಾನು ಪಾಲಿಸಿದ ಕೆಲವೊಂದು ನೀತಿಗಳಿಂದಾಗಿ ಮತ್ತು ತೆಗೆದುಕೊಂಡ ತೀರ್ಮಾನಗಳಿಂದಾಗಿ ಮೊಗಲ್ ಸಾಮ್ರಾಜ್ಯದ ಅವನತಿಗೆ ಮತ್ತು ಪತನಕ್ಕೆ ಕಾರಣನಾದನು. ಅವನ ನೀತಿಗಳಲ್ಲಿ ಪ್ರಮುಖವೆಂದರೆ ಆತನ ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ.

ಧಾರ್ಮಿಕ ನೀತಿ : ಔರಂಗಜೇಬನು ಪಾಲಿಸಿದ ನೀತಿಗಳಲ್ಲಿ ಅತ್ಯಂತ ದುಷ್ಪರಿಣಾಮಕಾರಿ ನೀತಿಯೆಂದರೆ ಅವನ ಧಾರ್ಮಿಕ ನೀತಿ ಅವನ ಧರ್ಮದ್ವೇಷದ ಧರ್ಮಾಂಧ ನೀತಿ, ಆತನ ಧಾರ್ಮಿಕ ನೀತಿ ಹಲವು ಇತಿಹಾಸಕಾರರ ತೀವ್ರವಾದ ಟೀಕೆಗೆ ಗುರಿಯಾಗಿದೆ. ಈತ ತನ್ನ ಧಾರ್ಮಿಕ ನೀತಿಯಿಂದ ತನ್ನ ಮತ್ತು ತನ್ನ ಸಾಮ್ರಾಜ್ಯದ ಪತನಕ್ಕೆ ಕಾರಣನಾದ. ಅಕ್ಬರನು ತನ್ನ ಉದಾರ ಧಾರ್ಮಿಕ ನೀತಿಯಿಂದ ಮೊಗಲ್ ಸಾಮ್ರಾಜ್ಯದ ನಿರ್ಮಾಣಕ್ಕೆ ಕಾರಣನಾಗಿದ್ದಲ್ಲಿ ಔರಂಗಜೇಬನು ತನ್ನ ಧರ್ಮಾಂಧ ನೀತಿಯಿಂದಾಗಿ ಅದರ ನಿರ್ನಾಮಕ್ಕೆ ಕಾರಣನಾದ.

ಔರಂಗಜೇಬನೊಬ್ಬ ನಿಷ್ಠಾವಂತ, ಸಂಪ್ರದಾಯಸ್ಥ ಸುನ್ನೀ ಮುಸಲ್ಮಾನ ಅಕ್ಬರನ ರಾಷ್ಟ್ರೀಯ ನೀತಿ ಈತನಿಗೆ ಒಗ್ಗದ ಕಷಾಯ. ಸಾಮ್ರಾಜ್ಯವನ್ನು ಇಸ್ಲಾಂ ಕಾನೂನು ಸಂಹಿತೆಯ ಆಧಾರದ ಮೇಲೆ ನಿಲ್ಲಿಸುವುದು ಈತನ ಮುಖ್ಯ ಗುರಿಯಾಗಿತ್ತು. ಭಾರತೀಯರನ್ನು ಇಸ್ಲಾಮಿಗೆ ಮತಾಂತರಗೊಳಿಸುವುದು ಮತ್ತು ಅವರ ಮೂರ್ತಿಪುಂಜೆಯನ್ನು ನಿರ್ಮೂಲನ ಮಾಡುವುದು ಈತನ ಯೋಜನೆಯಾಗಿತ್ತು, ಈ ದೃಷ್ಟಿಯಿಂದ ಇವನು ಅಕ್ಬರನ ಧಾರ್ಮಿಕ ಸಹಿಷ್ಣುತಾ ನೀತಿಯನ್ನು ಬದಿಗೊತ್ತಿ ಧರ್ಮಾಂಧವಾಗಿ ವರ್ತಿಸತೊಡಗಿದ್ದು ಕಂಡು ಬರುತ್ತದೆ. ಈತನ ವಕ್ರದೃಷ್ಟಿಗೆ ಬಿದ್ದ ಯಾವ ಹಿಂದೂ ದೇವಾಲಯವೂ ಉಳಿಯಲಿಲ್ಲ. ಮತಾಂತರವನ್ನು ಹೆಚ್ಚಿಸಲು ಹಿಂದೂ ದೇವಾಲಯ ಮತ್ತು ಪಾಠಶಾಲೆಗಳನ್ನು ನಿರ್ನಾಮ ಮಾಡತೊಡಗಿದನು. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಬಹುಮಾನಗಳನ್ನು ಕೊಡುವ ಪರಿಪಾಠವನ್ನು ಕೈಕೊಂಡ. ಹಿಂದೂಗಳ ಹಬ್ಬ ಹರಿದಿನಗಳ ಆಚರಣೆ ಮತ್ತು ಪುಣ್ಯಕ್ಷೇತ್ರಗಳ ಯಾತ್ರೆಗಳನ್ನು ರದ್ದು ಗೊಳಿಸಿದನು.

ತನ್ನ ವಂಶದ ಹಿಂದಿನ ಅದಸರುಗಳು ಕುರಾನಿನ ಕಾನೂನುಗಳನ್ನು ತಿರಸ್ಕರಿಸುವ ಮುಖಾಂತರ ಅವರು ದೊಡ್ಡ ಪ್ರಮಾದವನ್ನೆಸಗಿದರೆಂದು ಔರಂಗಜೇಬ್ ಭಾವಿಸಿದ್ದನು. ಮುತ್ಸದ್ದಿಯಾಗಿದ್ದ ಅಕ್ಬರನು ಇಸ್ಲಾಂ ಧರ್ಮದ ರಾಜ ಪ್ರಭುತ್ವದ ತತ್ವವನ್ನು ಕೈಬಿಟ್ಟು ಹಿಂದೂ ಸಾರ್ವಭೌಮತ್ವದ ಆದರ್ಶವನ್ನು ಪಾಲಿಸಿದ್ದ. ಇಸ್ಲಾಂ ಧರ್ಮವು ಪಡೆದಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿ, ತನ್ನ ಸಾಮ್ರಾಜ್ಯಕ್ಕೆ ಧರ್ಮ, ನಿರಪೇಕ್ಷತೆಯ ವಿಕಾಲ ಬುನಾದಿಯನ್ನು ನೀಡಿದ್ದನು. ಆದರೆ ಔರಂಗಜೇಬನು ಆಕ್ಟರನು ನಿರ್ಮಿಸಿದ್ದ ವಿಶಾಲ ತಳಹದಿಯ ಅಡಿಪಾಯವನ್ನೇ ಕಿತ್ತೊಗೆದು, ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.

ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಸುನ್ನಿ ಪಂಥದ ಅಭಿವೃದ್ಧಿಗಾಗಿ ಹಲವು ಕ್ರಮಕೈಗೊಂಡ ಔರಂಗಜೇಬನು ಇನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದನು. ಮುಸ್ಲಿಂಯೇತರರನ್ನು ಇಸ್ಲಾಂ ಧರ್ಮಕ್ಕೆ ಸೇರಿಸುವ ಮತ್ತು ಸಾಮ್ರಾಜ್ಯದ ಆಡಳಿತವನ್ನು ಕುರಾನಿನ ಕಾನೂನು ಪ್ರಕಾರ ಜರುಗಿಸುವ ವಿಧಾನಗಳನ್ನು ಅನುಸರಿಸಿದನು. ಇಡೀ ದೇಶವನ್ನು ಜಯಿಸುವವರೆಗೆ ಮತ್ತು ದೇಶದಲ್ಲಿನ ಎಲ್ಲ ಜನತೆ ಇಸ್ಲಾಂ ಧರ್ಮ ಸ್ವೀಕರಿಸುವವರೆಗೆ ಮುಸ್ಲಿಂಯೇತರರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹೇರಿ ಪ್ರತಿನಿತ್ಯವೂ ಅವರಿಗೆ ತಮ್ಮ ಕೀಳುಮಟ್ಟದ ನೆನಪುಂಟಾಗುವಂತೆ ಮಾಡುವುದು ಇವನ ಉದ್ದೇಶವಾಗಿತ್ತು. ಇಸ್ಲಾಂಗೆ ಮತಾಂತರ ಹೊಂದಿದವರಿಗೆ ಸಾಮಾಜಿಕ ಗೌರವ. ರಾಜಕೀಯ ಪ್ರಾಧಾನ್ಯತೆ ಮತ್ತು ಆರ್ಥಿಕ ಸಹಾಯಗಳು ದೊರೆಯುವಂತೆ ಮಾಡಿದನು.

ಇಸ್ಲಾಂ ಧರ್ಮವನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದ ನಂತರ ಔರಂಗಜೇಬನು ಮುಸ್ಲಿಂಯೇತರರ ಪದ್ಧತಿಗಳನ್ನು ತೆಗೆದು ಹಾಕಿ ಅವುಗಳ ಸ್ಥಾನದಲ್ಲಿ ಇಸ್ಲಾಮಿನ ಪದ್ಧತಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದನು. ಜನ್ಮದಿನದಂದು ಮತ್ತು ಸಿಂಹಾಸನಾರೋಹಣ ದಿನದಂದು ನಡೆಸುತ್ತಿದ್ದ ತುಲಾಭಾರವನ್ನು ರದ್ದುಮಾಡಿದ. ಪ್ರತಿದಿನ ಚಕ್ರವರ್ತಿಗಳು ಜನತೆಗೆ ನೀಡುತ್ತಿದ್ದ ಜರೋಖ ದರ್ಶನ ನಿಲ್ಲಿಸಿದ. ಸಂಗೀತದ ಮೇಲೆ ನಿಷೇಧ ಹಾಕಿ ಸಂಗೀತಗಾರರನ್ನು ಆಸ್ಥಾನದಿಂದ ಹೊರಗಟ್ಟಿದ. ಜ್ಯೋತಿಷಿಗಳ ಮೇಲೆ ನಿಷೇಧ ಹಾಕಿದ. ನೃತ್ಯ ಗಾರ್ತಿಯರು ಮತ್ತು ವೇಶ್ಯೆಯರ ಮೇಲೆ ನಿರ್ಬಂಧ ಹಾಕಿ ಅವರು ಮದುವೆಯಾಗುವಂತೆ ಇಲ್ಲದೆ ಸಾಮ್ರಾಜ್ಯ ಬಿಟ್ಟು ಹೋಗುವಂತೆ ಆಜ್ಞೆಮಾಡಿದ. ಪಾನ ನಿಷೇಧ ಜಾರಿಗೆ ತಂದ. ಅಫೀಮಿನ ಬಳಕೆ ನಿಷೇಧಿಸಿದ. ಜೂಜಿನ ಮೇಲೆ ನಿರ್ಬಂಧ ಹೇರಿದ. ಆದರೆ ಇವೆಲ್ಲ ಬಹಿರಂಗವಾಗಿ ನಿಷೇಧವಾದರೂ ಗುಪ್ತವಾಗಿ ಮುಂದುವರೆದಿದ್ದವು. ಕಾರಣ ಇವೆಲ್ಲ ಆಗಿನ ಕಾಲದ ಜನ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಹಿಂದೂಗಳ ಪವಿತ್ರ ಹಬ್ಬಗಳಾದ ಹೋಳಿ, ದೀಪಾವಳಿ, ದಸರಾ ಹಬ್ಬಗಳ ಆಚರಣೆ ನಿಲ್ಲಿಸಿದ. ಹಿಂದೂ ರೀತಿಯ ನಮಸ್ಕಾರಗಳನ್ನು ರದ್ದುಪಡಿಸಿ, ಮುಸ್ಲಿಂ ರೀತಿಯ ʻಸಲಾಂ ಅಲೆಕುಮ್ ‘ಜಾರಿಗೆ ತಂದನು. ಹೋಳಿ ಹಬ್ಬದ ಅಶ್ಲೀಲ ಹಾಡುಗಳನ್ನು ಮೊಹರಂ ಮೆರವಣಿಗೆಗಳನ್ನು ಮತ್ತು ಸಹಗಮನ ಪದ್ಧತಿಗಳನ್ನು ನಿಷೇಧಿಸಿದನು.

ಇಸ್ಲಾಂ ಧರ್ಮಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದೂ ದೇವಾಲಯ ಮತ್ತು ಪೂಜಾಸ್ಥಾನಗಳನ್ನು ನಾಶಪಡಿಸಿದರು. ಬನಾರಸ್‌ ವಿಶ್ವನಾಥದೇವಾಲಯ, ಮಧುರೆಯ ಕೇಶವದೇವಾಲಯ, ಸೋಮನಾಥದೇವಾಲಯ ಇತ್ಯಾದಿ ಸುಪ್ರಸಿದ್ಧ ಹಿಂದೂ ಮಂದಿರಗಳನ್ನು ನೆಲಸಮ ಮಾಡಲಾಯಿತು..

ಹಿಂದೂಗಳ ಎಲ್ಲಾ ಮಾರಾಟದ ವಸ್ತುಗಳ ಬೆಲೆಯ ಮೇಲೆ 5% ರಂತೆ ತೆರಿಗೆ ವಿಧಿಸಿದನು. ಆದರೆ ಮುಸ್ಲಿಂರು ಶೇಕಡದಂತೆ ಎರಡುವರೆಯಂತೆ ತೆರಿಗೆ ನೀಡುತ್ತಿದ್ದರು. ಕ್ರಿ.ಶ. 1667ರ ನಂತರ ಮುಸ್ಲಿಂರು ಇದನ್ನು ಕೊಡುವಂತಿರಲಿಲ್ಲ. ಸರಕಾರಿ ಹುದ್ದೆಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಅವರ ಸ್ಥಾನದಲ್ಲಿ ಮುಸ್ಲಿಂರನ್ನು ಸೇರಿಸಿದನು.

ಔರಂಗಜೇಬನು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಅವರ ಮೇಲೆ ಅಧಿಕ ಒತ್ತಡ ಹೇರಿದನು. ಅಕ್ಬರ ಕಾಲದಲ್ಲಿ ರದ್ದಾಗಿದ್ದ ʻಜೆಸಿಯಾ’ ತಲೆಗಂದಾಯವನ್ನು ಹಿಂದೂಗಳ ಮೇಲೆ ಹೇರಿದ. ಇದರ ವಿರುದ್ಧ ಹಿಂದೂಗಳು ಪ್ರತಿಭಟಿಸಿದಾಗ ಅವರನ್ನು ಅತ್ಯಂತ ಹೀನಾಯವಾದ ರೀತಿಯಲ್ಲಿ ನಡೆಸಿಕೊಂಡು ಅವರ ಪ್ರತಿಭಟನೆಯನ್ನು ಅಡಗಿಸಲಾಯಿತು. ಮನುಸ್ಸಿ ಎಂಬ ಸಮಕಾಲೀನ ಬರಹಗಾರ ಹೇಳುವಂತೆ “ಈ ತೆರಿಗೆಯನ್ನು ಕೊಡಲಾಗದ ಹಿಂದೂಗಳು ತೆರಿಗೆ ವಸೂಲಿ ಅಧಿಕಾರಿಗಳ ಕ್ರೋಧವನ್ನು ಸಹಿಸಲಾಗದೆ ಮುಸ್ಲಿಮರಾಗಿ ಮತಾಂತರಗೊಂಡರು. ಇದರಿಂದ ಔರಂಗಜೇಬನು ಸಂತೋಷಗೊಂಡನು” ಜಿಸಿಯಾ ತಲೆಗಂದಾಯವೇ ಅಲ್ಲದೆ ಹಿಂದೂಗಳ ಮೇಲೆ ಇನ್ನೂ ಹಲವಾರು ನಿರ್ಬಂಧ ಹೇರಲಾಗಿತ್ತು. ಹಬ್ಬಗಳಲ್ಲಿ ಬಾಣ, ಬಿರುಸು, ಪಟಾಕಿಗಳನ್ನು ನಿಷೇಧಿಸಿ, ಹಿಂದೂಗಳು ಮುಸ್ಲಿಂರ ಉಡುಗೆತೊಡುಗೆಗಳನ್ನು ತೊಡದಂತೆ ಮಾಡಿದ. ರಜಪೂತರು ಮತ್ತು ಮರಾಠರನ್ನು ಬಿಟ್ಟು ಬೇರೆ ಹಿಂದೂಗಳು ಪಲ್ಲಕ್ಕಿ ಮತ್ತು ಕುದುರೆಗಳಲ್ಲಿ ಹೋಗುವುದನ್ನು ನಿಷೇಧಿಸಿದೆ.

ಈ ಮೇಲ್ಕಂಡ ಅನ್ಯಾಯಕರವಾದ ಧಾರ್ಮಿಕ ಧೋರಣೆಯಿಂದ ಕಷ್ಟನಷ್ಟಗಳಿಗೆ ಬಲಿಯಾದ ಹಿಂದೂಗಳು ಔರಂಗಜೇಬನ ವಿರುದ್ಧ ದಂಗೆಯೆದ್ದರು. ಹಿಂದೂಗಳ ತೀವ್ರ ಪ್ರತಿಭಟನೆಯು ಮೊಗಲ್ ಸಾಮ್ರಾಜ್ಯದ ಅಡಿಪಾಯವನ್ನು ಅಲ್ಲಾಡಿಸಿತು. ಸುನ್ನೀ ಧರ್ಮಾಂಧನಾಗಿದ್ದ ಈತ ಶಿಯಾ ಮುಸಲ್ಮಾನರನ್ನು “ಶವಭಕ್ಷಕ ರಾಕ್ಷಸರು” ಎಂದು ಬಣ್ಣಿಸುತ್ತಿದ್ದನು. ಒಟ್ಟಿನಲ್ಲಿ ಔರಂಗಜೇಬನ ಧರ್ಮಾಂಧತೆಯ ಧೋರಣೆಯು ಮೊಗಲ್ ಸಾಮ್ರಾಜ್ಯದ ಭದ್ರತೆಯನ್ನು ನಾಶಪಡಿಸಿತು.

ಔರಂಗಜೇಬನ ಹಿಂದೂ ವಿರೋಧಿ ನೀತಿಯಿಂದಾಗಿ ಸಾಮ್ರಾಜ್ಯದ ಬಹುಸಂಖ್ಯಾತ ಹಿಂದೂಗಳು ಆತೃಪ್ತಿಗೆ ಒಳಗಾಗಿ ಸಾಮ್ರಾಜ್ಯದಾದ್ಯಂತ ಬಂಡಾಯವೆದ್ದರು. ರಾಜಸ್ಥಾನ, ಮಾಳವ, ಬುಂದೇಲಖಂಡ ಮತ್ತು ಖಾನ್ ದೇಶಗಳಲ್ಲಿಯ ಹಿಂದೂಗಳು ಔರಂಗಜೇಬನ ಮತಾಂತರ ನೀತಿಯನ್ನು ಪ್ರಬಲವಾಗಿ ಪ್ರತಿಭಟಿಸಿದರು. ಅಂತಹ ದಂಗೆಗಳಲ್ಲಿ ಪ್ರಥಮ ಮತ್ತು ಪರಿಣಾಮಕಾರಿಯಾದುದೆಂದರೆ ಮಥುರಾದ ಜಾಟರ ಬಂಡಾಯ, ಗೋಕುಲನ ನೇತೃತದಲ್ಲಿ ಸಂಭವಿಸಿದ ಜಾಟರ ದಂಗೆ ತತ್‌ಕ್ಷಣ ಹತ್ತಿಕ್ಕುವಷ್ಟು ಸುಲಭವಾದುದಾಗಿರಲಿಲ್ಲ. ಈ ಬಂಡಾಯ ಮೊಗಲ್ ಸಾಮ್ರಾಜ್ಯದ ಅವನತಿಗೆ ಒಂದು ಮಹತ್ವದ ಕಾರಣವಾಯಿತು. ಏಕೆಂದರೆ ಆನಂತರ ಗೋಕುಲನ ಸ್ಥಾನದಲ್ಲಿ ಬಂದ ರಾಜರಾಮ್ ಮುಂತಾದವರು ಔರಂಗಜೇಬನ ಕೊನೆಯದಿನಗಳವರೆಗೂ ಬಂಡಾಯ ಮುಂದುವರಿಸಿದರು. ಇದು ಮೊಗಲ್ ಆರಸನ ಧರ್ಮಾಂಧತೆಯ ನೀತಿಗೆ ಹಾಕಿದ ಮೊದಲ ಕೊಡಲಿ ಪೆಟ್ಟಾಗಿ ಪರಿಣಮಿಸಿತು. ಇದೇ ರೀತಿಯಲ್ಲಿ ಬುಂದೇಲದ ರಜಪೂತರು, ಮೇವಾಡದ ಮತ್ತು ನರ್ನೋತ ಜಿಲ್ಲೆಗಳ ಹಿಂದೂ ಪಂಗಡದ ಸತ್ನಾಮಿಗಳು, ಸಿಬ್ಬರು ಮೊದಲಾದವರು ಸ್ವತಂತ್ರರಾಗುವ ಹವಣಿಕೆ ನಡೆಸಿ ಔರಂಗಜೇಬನಿಗೆ ಕಂಟಕಪ್ರಾಯರಾದರು. ಔರಂಗಜೇಬನ ಅಧಿಕಾರಿ ಮತ್ತು ಒಬ್ಬ ಸತ್ನಾಮಿ ನಡುವಿನ ಜಗಳವೇ ಸತ್ನಾಮಿ ಬಂಡಾಯಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಂಡಾಯದಲ್ಲಿ ಸತ್ನಾಮಿಗಳು ಪರಾಭವ ಹೊಂದಿ, 200 ಸತ್ನಾಮಿಗಳು ಮರಣಹೊಂದಿದರು, ಉಳಿದವರು ಶರಣಾಗತರಾದರು.

ಔರಂಗಜೇಬನ ಧಾರ್ಮಿಕ ಅಸಹಿಷ್ಣುತೆಯಿಂದಾಗಿ ಕ್ರೋದಗೊಂಡವರಲ್ಲಿ ಸಿಬ್ಬರು ಪ್ರಮುಖರು. ಸಿಖ್ಖರ ಗುರು ತೇಜ್ ಬಹದ್ದೂರನನ್ನು ಕೊಲೆ ಮಾಡಿದ ಔರಂಗಜೇಬ್ ಸಿಖ್ಖರ  ಕೋಪಕ್ಕೆ ಕಾರಣನಾದ. ತೇಜ್‌ ಬಹದ್ದೂರ್ ಇಸ್ಲಾಂಗೆ ಮತಾಂತರವಾಗದೆ ಇದ್ದುದೆ ಅವನ ಕೋಪಕ್ಕೆ ಕಾರಣವಾಗಿತ್ತು. ಮತಾಂತರ ಇಲ್ಲವೆ ಸಾವು ಇವೆರಡರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದೆಂಬ ಔರಂಗಜೇಬನ ಸಲಹೆ ಮೇರೆಗೆ ತೇಜ್ ಬಹದ್ದೂರ್ ಎರಡನೆಯದನ್ನು ಆರಿಸಿ ಕೊಂಡರೆಂಬುದಾಗಿ ಹೇಳಲಾಗಿದೆ. ಇದರಿಂದ ಕ್ರೋದಗೊಂಡ ಸಿಬ್ಬರು ಔರಂಗಜೇಬನ ವಿರುದ್ಧ ತಿರುಗಿ ಬಿದ್ದರು. ಈ ರೀತಿ ಪ್ರೇರೇಪಿತರಾದ ಸಿಬ್ಬರು ಒಂದು ಒಕ್ಕೂಟವನ್ನೇ ರಚಿಸಿಕೊಂಡು ಮೊಗಲರ ಅಸ್ತಿತ್ವವನ್ನೆ ನಾಶ ಮಾಡುವ ಪಣ ತೊಟ್ಟು ಹೋರಾಡಿದರು.

ತನ್ನ ಮತಾಂಧತೆಯಿಂದ ರಜಪೂತರ ಶತೃತ್ವಕ್ಕೆ ಕಾರಣವಾದ ಔರಂಗಜೇಬನ ಅವಿವೇಕದ ನೀತಿ ಅನೇಕ ಅನಾಹುತಗಳಿಗೆ ಎಡೆಮಾಡಿತು. ರಜಪೂತರ ದ್ವೇಷ ಕಟ್ಟಿಕೊಂಡು ಕೊನೆಗೆ ಅದನ್ನು ವಿರೋಧಿಸಿದ ಔರಂಗಜೇಬನ ಪುತ್ರ ಯುವರಾಜ ಅಕ್ಬರ  ತಂದೆಯ ವಿರುದ್ಧ ರಜಪೂತರ ಕಡೆ ಸೇರಿಕೊಳ್ಳಬೇಕಾಯಿತು.

ಒಟ್ಟಿನಲ್ಲಿ ಔರಂಗಜೇಬ್ ತನ್ನ ಧಾರ್ಮಿಕ ನೀತಿಯ ಮೂಲಕ ಮೊಗಲ್ ಸಾಮ್ರಾಜ್ಯದ ಸಮಾಧಿಯನ್ನು ನಿರ್ಮಾಣಮಾಡಿದ. ಮೊಗಲ್ ಸಾಮ್ರಾಜ್ಯದ ಪತನದಲ್ಲಿ ಈತನ ಧಾರ್ಮಿಕ ನೀತಿ ಪ್ರಮುಖ ಪಾತ್ರವಹಿಸಿತು.

ಔರಂಗಜೇಬನ ದಖ್ಖನ್ ನೀತಿ

ಔರಂಗಜೇಬನ ದಖ್ಖನ್ ನೀತಿಯೂ ಸಹ ಆತನ ಧಾರ್ಮಿಕ ನೀತಿಯಷ್ಟೇ ವಿನಾಶಕಾರಿ ನೀತಿ ಆಗಿದ್ದಿತು. ಇತಿಹಾಸಕಾರರು ಆತನ ದಖ್ಖನ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವನ ದಖ್ಖನ್ ನೀತಿ ಮತ್ತೊಮ್ಮೆ ಅವನ ಮತ್ತು ಅವನ ಸಾಮ್ರಾಜ್ಯದ ಪತನಕ್ಕೆ ಮುಖ್ಯ ಕಾರಣವಾಯಿತು. ಔರಂಗಜೇಬ್ ತನ್ನ ಆಳ್ವಿಕೆಯ ಮೊದಲ ಅರ್ಧಭಾಗದಲ್ಲಿ ಉತ್ತರಭಾಗವನ್ನು ತನ್ನ ಎಲ್ಲಾ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತತ್ಪರಿಣಾಮವಾಗಿ ಆತನಿಗೆ ದಕ್ಷಣ ಭಾರತದ ಅಂದರೆ ದಖ್ಖನ್ನಿನ ಬಗ್ಗೆ ಗಮನಕೊಡಲಾಗಲಿಲ್ಲ. ಈ ಸದವಕಾಶವನ್ನು ಉಪಯೋಗಿಸಿಕೊಂಡು ಶಿವಾಜಿಯು ದಕ್ಷಿಣ ಭಾರತದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ. ಆದರೆ ದಖ್ಖನ್ನಿನ ಬಿಜಾಪುರ ಮತ್ತು ಗೋಲ್ಕಂಡ ರಾಜ್ಯಗಳು ಈ ಪರಿಸ್ಥಿತಿಯ ಲಾಭ ಪಡೆಯಲಾಗಲಿಲ್ಲ. ಇದಕ್ಕೆ ಕಾರಣ ಅವುಗಳ ಆಂತರಿಕ ಪರಿಸ್ಥಿತಿ.

ಔರಂಗಜೇಬನು ತನ್ನ ಜೀವಿತದ ಕೊನೆಯ ವರ್ಷಗಳನ್ನು ದಖ್ಖನ್ನಿನಲ್ಲಿ ಕಳೆದನು. ಈ ದೀರ್ಘಾವಧಿಯಲ್ಲಿ ಈತನಿಗೆ ವಿರಾಮ ಮತ್ತು ಮಾನಸಿಕ ಸ್ವಾಸ್ಥ್ಯ ಸಿಗಲಿಲ್ಲ. ಔರಂಗಜೇಬ್ ದಖನ್ನಿಗೆ ಬರುವುದಕ್ಕೆ ಮೂರು ಮುಖ್ಯ ಉದ್ದೇಶಗಳಿದ್ದವು. ಅವುಗಳೆಂದರೆ:-

1.ತನ್ನ ಪುತ್ರ ಅಕ್ಬರನನ್ನು ಬಂಧಿಸಿ ಶಿಸುವುದು.

2.ತನ್ನ ಪುತ್ರ ಅಕ್ಬರನಿಗೆ ಆಶ್ರಯ ಕೊಟ್ಟಿದ್ದ ಮರಾಠರನ್ನು ಹತ್ತಿಕ್ಕುವುದು.

  1. ದಖ್ಖನ್ನಿನ ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳ ಅಸ್ಥಿತ್ವ ಅಂತ್ಯಗೊಳಿಸುವುದು.

ಈ ಗುರಿಸಾಧನೆಯಲ್ಲಿ ಔರಂಗಜೇಬನಿಗೆ ದೊರೆತಿದ್ದು ಮಿಶ್ರ ಯಶಸ್ಸು, ಆತ ಅಕ್ಬರನ್ನು ಹಿಡಿದು ಶಿಕ್ಷಿಸಲಾಗಲಿಲ್ಲ. ಅಕ್ಬರ  ತಪ್ಪಿಸಿಕೊಂಡು ಪರ್ಶಿಯಾಕ್ಕೆ ಓಡಿಹೋದ. ತತ್ಪರಿಣಾಮವಾಗಿ ಔರಂಗಜೇಬನ ಸಿಟ್ಟು ಆತನಿಗೆ ಆಶ್ರಯ ನೀಡಿದ್ದ ಸಂಬಾಜಿಯ ವಿರುದ್ಧ ತಿರುಗಿತು. ಸಂಬಾಜಿಯನ್ನು ಹಿಡಿದು ಕೊಲೆ ಮಾಡುವುದರಲ್ಲಿ ಯಶಸ್ವಿಯಾದ, ಆದರೆ ಮರಾಠರನ್ನು ಸಂಪೂರ್ಣವಾಗಿ ಸದೆಬಡಿಯಲಾಗಲಿಲ್ಲ. ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳನ್ನು ಜಯಿಸುವಲ್ಲಿ ಆತ ಯಶಸ್ಸು ಕಂಡಿದ್ದ. ಆದರೆ ಈ ಎಲ್ಲಾ ಕಾರ್ಯಕ್ಕೆ ಆತನಿಗೆ 25 ವರ್ಷ ಬೇಕಾಯಿತು. ಆದರೆ ಈ ಸಾಧನೆ ಅಂತಿಮವಾಗಿ ಶೂನ್ಯವಾಗಿ ಮಾರ್ಪಟ್ಟಿತು. ಈತನ ಸಾಮ್ರಾಜ್ಯ ಅವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿತು. ವೃದ್ಧ ಸಾಮ್ರಾಟನು ತನಗರಿವಿಲ್ಲದೆ ತನ್ನ ದಖ್ಖನ್ ನೀತಿಯ ಮುಖಾಂತರ ತನ್ನ ಮತ್ತು ತನ್ನ ಸಾಮ್ರಾಜ್ಯದ ಸಮಾಧಿ ತೋಡಿದ.

ಮನ್ಸಬ್ದಾರಿ ಪದ್ಧತಿ

ಮೊಗಲ್ ಸೈನ್ಯದ ಸಂಘಟನೆಯಲ್ಲಿನ ದೋಷಗಳನ್ನು ನಿವಾರಿಸಲು ಅಕ್ಷರನು ಹಲವು ಕ್ರಮಗಳನ್ನು ಕೈಗೊಂಡನು. ಅದೇ ಮನ್ಸಬ್ದಾರಿ ಪದ್ಧತಿ. ಮನ್ಸಬ್ ಎಂಬ ಶಬ್ದ ಆರೇಬಿಕ್ ಮೂಲವನ್ನು ಹೊಂದಿದ್ದು, ಇದರ ಅರ್ಥ ದರ್ಜೆ, ವರ್ಗ ಅಥವಾ ಪದವಿ ಎಂದಾಗುತ್ತದೆ. ಮನ್ಸಬ್ದಾರ್‌ ಎಂದರೆ ಸಾಮ್ರಾಜ್ಯದ ಸೇವೆಯಲ್ಲಿರುವ ಅಧಿಕಾರಿ. ಅಕ್ಬರನ ಕಾಲದಲ್ಲಿ ರೂಪುಗೊಂಡ ಈ ವ್ಯವಸ್ಥೆಯಲ್ಲಿ ಸೈನಿಕ ಮತ್ತು ನಾಗರೀಕ ಅಧಿಕಾರಿಗಳಲ್ಲಿ ಯಾವುದೇ ವ್ಯತ್ಯಾಸ ಮತ್ತು ಪ್ರತ್ಯೇಕತೆ ಇರಲಿಲ್ಲ. ಅಧಿಕಾರಿಗೂ ಆತನದೇ ಆದ ದರ್ಜೆಯಿದ್ದು ಆತನನ್ನು ಆ ದರ್ಜೆಯ ಮನ್ಸಬ್ದಾರನೆಂದು ಕರೆಯಲಾಗುತ್ತಿತ್ತು.

ವಿ.ಎ. ಸ್ಮಿತ್‌ರವರ ಪ್ರಕಾರ ಅಕ್ಬರ  ಇದರ ನಿರ್ಮಾಪಕನಲ್ಲ. ಇದು ಬಾಬರ್ ಮತ್ತು ಹುಮಾಯೂನರ ಕಾಲದಲ್ಲಿಯೇ ಜಾರಿಯಲ್ಲಿತ್ತು. ಇದು ಪರ್ಶಿಯಾದಿಂದ ಬಂದ ವ್ಯವಸ್ತೆಯಾಗಿತ್ತು. ಆದರೆ ಡಾ|| ಈಶ್ವರೀಪ್ರಸಾದ್‌ ಮತ್ತು ಆ‌ರ್.ಎಸ್. ಕರ್ಮ ಪ್ರಕಾರ ಈ ವ್ಯವಸ್ಥೆಯ ನಿಜವಾದ ನಿರ್ಮಾಪಕ ಅಕ್ಬರ , ಇದುನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಅಕ್ಷನನಿಗೆ ಸಲ್ಲಬೇಕೆಂಬುದು ಇದರ ವಾದ.

ಮನ್ಸಬ್‌ದಾರರಲ್ಲಿ ಅನೇಕ ಶ್ರೇಣಿಗಳಿದ್ದವು. ಅಬುಲ್ ಫಜಲ್ ಪ್ರಕಾರ. 33 ದರ್ಜೆ ಅಥವಾ ವರ್ಗಗಳಿದ್ದವು. ಈ ದರ್ಜೆ 10 ರಿಂದ ಪ್ರಾರಂಭವಾಗಿ 10,000 ದವರೆಗೆ ಇದ್ದಿತು. ಈತನ ಆಳ್ವಿಕೆಯ ಕೊನೆಯಲ್ಲಿ ಈ ಸಂಖ್ಯೆಯನ್ನು 12,000 ಕ್ಕೆ ಏರಿಸಲಾಯಿತು.

ಅಕ್ಬರ್‌ ಇದನ್ನು ಜಾರಿಗೆ ತಂದ ಪ್ರಾರಂಭದಲ್ಲಿ 10 ರಿಂದ 10,000 ದವರೆಗೆ ಒಟ್ಟು 3 ದರ್ಜೆಗಳ ಮನ್ನಬ್ಬಾರರಿದ್ದರು. ಇಲ್ಲಿ ಸಂಖ್ಯೆಯು ಪ್ರತಿಯೊಬ್ಬ ಮನ್ನಬ್ಬಾರನು ಸಾಮ್ರಾಜ್ಯದ ಸೇನೆಗೆ ಸಲ್ಲಿಸಬೇಕಾಗಿದ್ದ ಶಸ್ತ್ರಾಸ್ತ್ರ, ಕುದುರೆ ಸವಾರರ ಸಂಖ್ಯೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರತಿಯೊಬ್ಬ ಅಧಿಕಾರಿಯ ದರ್ಜೆ ಹಾಗೂ ವೇತನ ಇವುಗಳನ್ನು ನಿರ್ದೇಶಿಸುತ್ತಿತ್ತು. ಸಾಮಾನ್ಯವಾಗಿ ಮನ್ಸಾಬ್ದಾರರು ತಮ್ಮ ದರ್ಜೆಯ ಸಂಖ್ಯೆಯಷ್ಟೇ ಕುದುರೆ ಸವಾರರನ್ನು ಇಟ್ಟುಕೊಳ್ಳಬೇಕೆಂಬ ನಿಯಮವಿರಲಿಲ್ಲ.

ಪ್ರತಿಯೊಬ್ಬ ಮನ್ಸಾಬ್ದಾರನಿಗೆ ಇಂತಹುದೇ ಕೆಲಸ ಅಥವಾ ಹಯದ್ದೆ ಕೊಡಬೇಕೆಂಬ ನಿಯಮವಿರಲಿಲ್ಲ. ಚಕ್ರವರ್ತಿಯು ಕಾಲಕಾಲಕ್ಕೆ ಸೂಚಿಸಿದ ಕೆಲಸಗಳನ್ನು ಅವರು ಮಾಡುತ್ತಿದ್ದರು. ಮನ್ಸಬ್ದಾರರನ್ನು ನೇಮಕಮಾಡಲು, ಬಡ್ತಿ ನೀಡಲು ಮತ್ತು ತೆಗೆದುಹಾಕಲು ಯಾವ ನಿಯಮಾವಳಿಗಳೂ ಇರಲಿಲ್ಲ. ಇವರ ನೇಮಕಾತಿ ಮತ್ತು ಬಡ್ತಿ ಅರಸರ ತೀರ್ಮಾನವನ್ನು ಅವಲಂಬಿಸಿತ್ತು. ಮನ್ನಬ್ಬಾರರಿಗೆ ನಿರ್ಧಿಷ್ಟ ವೇತನ ಶ್ರೇಣಿಗಳಿದ್ದವು. ಇದನ್ನು ನಗದು ಹಣ ಇಲ್ಲವೆ ಜಹಾಗೀರಿನ ಮುಖಾಂತರ ನೀಡಲಾಗುತ್ತಿತ್ತು. ಅಕ್ಬರನ ಕಾಲದಲ್ಲಿ ನಗದು ವೇತನ ಕೊಡಲಾಗುತ್ತಿತ್ತು. ಸ್ಮಿತ್, ಇರ್ವಿನ್ ಇತ್ಯಾದಿ ಆಂಗ್ಲ ಚರಿತ್ರೆಕಾರರು ಮನ್ಸಬ್ಬಾರರಿಗೆ ವರ್ಷವಿಡೀ ಸಂಬಳ ನೀಡುತ್ತಿರಲಿಲ್ಲವೆಂದು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.

ಮನ್ಸಬ್ದಾರರಿಗೆ ಅಧಿಕ ಸಂಬಳ ದೊರೆಯುತ್ತಿತ್ತು. ಅವರ ವೆಚ್ಚವೆಲ್ಲ ಕಳೆದ ನಂತರವೂ ಅವರಲ್ಲಿ ಹೆಚ್ಚು ಹಣ ಉಳಿಯುತ್ತಿತ್ತು. ಅವರು ಅತ್ಯಂತ ಶ್ರೀಮಂತ ಜೀವನ ನಡೆಸುತ್ತಿದ್ದರು. ಆದರೆ ಮನ್ಸಬ್ದಾರಿ ದರ್ಜೆ ವಂಶಪಾರಂಪರ್ಯ ವಾಗಿರಲಿಲ್ಲ. ಅವರ ಮರಣದ ನಂತರವೇ ಅವರ ಸಂಪತ್ತು, ಭೂಮಿ ಇತ್ಯಾದಿಗಳು ಸಾಮ್ರಾಜ್ಯಕ್ಕೆ ಸೇರುತ್ತಿದ್ದವು.

ಮನ್ಸಬ್ದಾರಿ ದರ್ಜೆಗಳಲ್ಲಿ ಎರಡು ವರ್ಗಗಳಿದ್ದವು. ಅವುಗಳೆಂದರೆ ʻಜಾಟ್’ ಮತ್ತು ‘ಸವಾರ್’. ಇವುಗಳ ನಿಜವಾದ ಸ್ವರೂಪದ ಬಗ್ಗೆ ಚರಿತ್ರಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ|| ಎ.ಎಲ್. ಶ್ರೀವಾತ್ಸವರ ಅಭಿಪ್ರಾಯದಂತೆ ಅಕ್ಬರ  ಈ ಪದ್ಧತಿ ಜಾರಿಗೆ ತಂದಾಗ ಮನ್ನಬ್ದಾರನ ದರ್ಜೆ ಮತ್ತು ಅವನು ಇಡಬೇಕಾದ ಸೈನಿಕರು, ಕುದುರೆ, ಆನೆ ಇತ್ಯಾದಿ ಸಂಖ್ಯೆಗಳಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ಮನ್ನಬ್ಬಾರರು ಈ ಸಂಖ್ಯೆಯನ್ನು ಪಾಲಿಸದೆ ಹೋದಾಗ ಅದರಲ್ಲಿ ರಿಯಾಯಿತಿ ನೀಡಿದನು. ಅವರಿಗಾಗಿಯೇ ಜಾಟ್ ಮತ್ತು ಸವಾರ್ ಎಂಬ ಪ್ರತ್ಯೇಕ ವರ್ಗ ನಿರ್ಮಿಸಿದನು. ಇದರಂತೆ ಜಾಟ್ ದರ್ಜೆಯ ಮನ್ನಬ್ದಾರರು ಅವರ ಸಂಖ್ಯೆಯ ಕುದುರೆ, ಆನೆ ಮತ್ತು ಸಾಗಣೆಯ ಪ್ರಾಣಿಗಳನ್ನು ಹೊಂದಬೇಕಾಗಿದ್ದಿತೇ ಏನು ಕುದುರೆ ಸವಾರರನ್ನಲ್ಲ. ಅಂತೆಯೇ ಸವಾರ್ ದರ್ಜೆಯ ಮನ್ನಬ್ದಾರರು ತಮ್ಮ ನಿಗದಿತ ಸಂಖ್ಯೆ ಕುದುರೆ ಸವಾರರನ್ನು ಮಾತ್ರ ಇಟ್ಟುಕೊಳ್ಳಬೇಕಾಯಿತು. ಅಕ್ಷರನ ಉತ್ತರಾಧಿಕಾರಿಗಳ ಕಾಲದಲ್ಲಿ ಈ ಕಾನೂನು ಸಡಿಲಗೊಂಡಿತು. ಔರಂಗಜೇಬನ ತರುವಾಯ ಮನ್ಸಬ್ದಾರಿ ಹುದ್ದೆಗಳು ಕೇವಲ ಗೌರವದ ಸಂಕೇತವಾದವು.

ದೋಷಗಳು :

  1. ಮನ್ಸಬ್ದಾರಿ ಪದ್ಧತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಸೈನಿಕರನ್ನು ಒಟ್ಟಾಗಿ ತೋರಿಸುವ ಮತ್ತು ಮುದ್ರೆ ಹಾಕುವ ವ್ಯವಸ್ಥೆ ಇದ್ದರೂ ಬಹಳಷ್ಟು ಮನ್ಸಬ್ದಾರರು ತಮ್ಮ ನಿಗದಿತ ಸಂಖ್ಯೆಯ ಸವಾರರನ್ನು ಇಟ್ಟುಕೊಂಡಿರಲಿಲ್ಲ.
  2. ಸೈನಿಕರನ್ನು ನೇಮಿಸಿಕೊಳ್ಳುವವರು ಹಾಗೂ ಸಂಬಳವನ್ನು ಕೊಡುವವರು ಮನ್ಸಬ್ದಾರರೇ. ಆದ್ದರಿಂದ ಸೈನಿಕರ ನಿಷ್ಠೆ ಅವರಿಗಿತ್ತೇ ಹೊರತು ಚಕ್ರವರ್ತಿಗಿರಲಿಲ್ಲ. ಸೈನಿಕರು ಮತ್ತು ಚಕ್ರವರ್ತಿಯ ನಡುವಿನ ಈ ಕಂದರವು ಮುಂದೆ ಮೊಗಲರ ಸರ್ಕಾರಕ್ಕೆ ಅಪಾಯವನ್ನುಂಟುಮಾಡಿತು.
  3. ಮನ್ಸಬ್ದಾರರು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಾಸಕ್ತಿಗಳಲ್ಲಿ ಮಗ್ನರಾಗಿ ಸಾಮ್ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರು.
  4. ಮನ್ಸಬ್ದಾರರನ್ನು ಸೈನಿಕ ಸೇವೆಗೆ ಮಾತ್ರವೇ ಅಲ್ಲದೇ ನಾಗರಿಕ ಸೇವೆಗೂ ನೇಮಕ ಮಾಡುತ್ತಿದ್ದುದು ಇದರ ಇನ್ನೊಂದು ದೋಷವಾಗಿತ್ತು.
  5. ಮನ್ಸಬ್ದಾರರು ತಮ್ಮ ವೇತನ ಮತ್ತು ಸೌಲತ್ತುಗಳಿಂದ ಸಂತೃಪ್ತರಾಗಿದ್ದು, ಸೈನಿಕರ ಶಿಕ್ಷಣಕ್ಕಾಗಲಿ ಇಲ್ಲವೆ ಯುದ್ಧಕಲೆಯಲ್ಲಿ ಹೊಸ ಆವಿಷ್ಕಾರಕ್ಕಾಗಲೀ ಗಮನ ಹರಿಸಲಿಲ್ಲ.

ಉಪಸಂಹಾರ

ಔರಂಗಜೇಬನ ಧಾರ್ಮಿಕ ಮತ್ತು ದಖ್ಖನ್ ನೀತಿಗಳು ಮೊಗಲ್ ಸಾಮ್ರಾಜ್ಯದ ಸ್ಥಿರತೆಯನ್ನು ಕುಂದಿಸಿದವು. ಧಾರ್ಮಿಕ ಅಸಹಿಷ್ಣುತೆ ಮತ್ತು ನಿರಂತರ ಯುದ್ಧಗಳು ಸಾಮ್ರಾಜ್ಯದ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಿದವು. ಇದರ ಪರಿಣಾಮವಾಗಿ ಹಲವು ಪ್ರಾಂತ್ಯಗಳಲ್ಲಿ ಬಂಡಾಯಗಳು ಉಂಟಾಗಿ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟವು. ಆದ್ದರಿಂದ ಔರಂಗಜೇಬನ ಆಡಳಿತವು ಮೊಗಲ್ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಷಹಜಹಾನನ ಆಳ್ವಿಕೆಯ ಕಾಲವನ್ನು ಮೊಗಲರ ಕಾಲದ ಸುವರ್ಣಯುಗವೆಂದು ಬಣ್ಣಿಸಲಾಗಿದೆ. ಈತನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ಔನ್ನತ್ಯದ ಶಿಖರವನ್ನು ತಲುಪಿದ್ದಿತು. ವಿಶಾಲವಾದ ಮೊಗಲ್ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯಮೃತ ಜನಜೀವನ ಮತ್ತು ಪ್ರಗತಿಗಳು ಉಂಟಾಗಿದ್ದವು. ಈತನ ಕಾಲದಲ್ಲಿ ಕ್ಷಾಮ ತಲೆದೋರಿದರೂ ಅದರ ಹತೋಟಿಗೆ ಷಹಜಹಾನನು ಕೈಗೊಂಡ ಮಾನವೀಯ ವ್ಯವಸ್ಥೆ ಶ್ಲಾಘನೀಯವಾಗಿತ್ತು. ಒಟ್ಟಿನಲ್ಲಿ ಷಹಜಹಾನನ ಆಳ್ವಿಕೆಯ ಕಾಲದಲ್ಲಿ ಸುಖ, ಶಾಂತಿ, ಸುವ್ಯವಸ್ಥೆ ನೆಲೆಸಿದ್ದರಿಂದ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಲ್ಪಟ್ಟಿತು, ಎಂಬುದಾಗಿ ಕೆಲವು ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ.

ಷಹಜಹಾನನ ಕಾಲ ಮೊಗಲರ ಸುವರ್ಣ ಯುಗವೇ? ಅಲ್ಲವೆ? ಎಂಬ ಬಗ್ಗೆ ಇತಿಹಾಸಕಾರರಲ್ಲಿ ಜಿಜ್ಞಾಸೆ ಮತ್ತು ವಾದ ವಿವಾದಗಳಿವೆ. ಸಾಮಾನ್ಯವಾಗಿ ಷಹಜಹಾನನ ಕಾಲವನ್ನು ಮೊಗಲರ ಸುವರ್ಣಯುಗವೆಂತಲೂ, ವೈಭವದ ಕಾಲವೆಂದೂ ಬಣ್ಣಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರು ಇದರ ಬಗ್ಗೆ ತಮ್ಮ ವಿಮರ್ಶಾತ್ಮಕ ದೃಷ್ಟಿ ಬೀರಿ ಸಹಜಹಾನನ ಕಾಲ ಮೊಗಲ್ ಸಾಮ್ರಾಜ್ಯದ ಅವನತಿ ಮತ್ತು ಅವಸಾನದ ಆರಂಭ ಕಾಲವೆಂದು ಪರಿಗಣಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಾಕಷ್ಟು ವಾದ ವಿವಾದಗಳಿವೆ.

ಐರೋಪ್ಯ ಬರಹಗಾರರು ಷಹಜಹಾನನ ಅಳ್ವಿಕೆಯನ್ನು ಟೀಕಿಸಿದ್ದಾರೆ. ಈತನ ಆಳ್ವಿಕೆ ಮೇಲು ನೋಟಕ್ಕೆ ವೈಭವಯುತವಾಗಿ ಕಂಡರೂ ಅದು ನಿಜವಾಗಿ ಹಾಗಿರಲಿಲ್ಲ ಎಂಬುದು ಇವರ ಅಭಿಪ್ರಾಯ. ಇದನ್ನು 14ನೇ ಲೂಯಿಯ ಕಾಲದ ಫ್ರಾನ್ಸಿಗೆ ಹೋಲಿಸಬಹುದು. 14ನೇ ಲೂಯಿಯಂತೆ ಷಹಜಹಾನ್ ವೈಭವವನ್ನು ಹೊರನೋಟಕ್ಕೆ ಪ್ರದರ್ಶಿಸಿದ್ದರೂ ಆಂತರಿಕವಾಗಿ ಹಲವಾರು ಆತೃಪ್ತಿ, ಅಸಮಾಧಾನ, ಕೊರತೆ, ಹಸಿವು, ಬಡತನ ಜನರನ್ನು ಕಾಡುತ್ತಿದ್ದವು.

ಈತನ ಆಳ್ವಿಕೆ ಕಣ್ಣು ಕೋರೈಸುವಂತಹ ವೈಭವ ಮತ್ತು ಆಡಂಬರಗಳಿಂದ ಕೂಡಿದ್ದಿತು. ಅವನ ವಾಸ್ತುಶಿಲ್ಪ ಕೃತಿಗಳು ಮತ್ತು ಮಯೂರ ಸಿಂಹಾಸನ ಅವನ ಕಾಲದ ವೈಭವಕ್ಕೆ ಸಾಕ್ಷಿಯಾಗಿದ್ದವು. ಆದರೆ ಷಹಜಹಾನ್ ಇದಕ್ಕೆ ವೆಚ್ಚ ಮಾಡಿದುದು ಅಪಾರ ಹಣ. ಆದರೆ ಇದು ಯಾರ ಹಣ? ಎಲ್ಲಿಂದ ಬಂದಿತ್ತು? ಎಷ್ಟು ಜನರ ಕಣ್ಣೀರಿನ ಮತ್ತು ಬೆವರಿನ ಹಣ ಎಂಬುದು ಮುಖ್ಯ ಪ್ರಶ್ನೆ, ಹೌದು, ಆತನ ಕಾಲದ ವೈಭವದಿಂದ ವಿದೇಶಿಗರು ಮೂಕವಿಸ್ಮಿತರಾಗಿದ್ದರು. ಇವೆಲ್ಲ ನೋಡಿ ಅವರು ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದ್ದಿತೆಂದೇ ಭಾವಿಸಿದ್ದರು. ಆದರೆ ಇದು ಕೇವಲ ಭ್ರಮೆಯಾಗಿತ್ತು. ನೈಜ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು.

ಎಡ್ವರ್ಡ್ ಮತ್ತು ಗಾರೆಕ್ಟರ ಪ್ರಕಾರ “ಷಹಜಹಾನನ ಆಳ್ವಿಕೆ ಮೊಗಲ್ ಸಾಮ್ರಾಜ್ಯದ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಅವಸಾನದ ನಾಂದಿಯಾಗಿದ್ದಿತು”, ವಿ.ಎ. ಸ್ಮಿತ್ ಪ್ರಕಾರ “ಷಹಜಹಾನನ ಕಾಲದ ಆಡಂಬರ, ವೈಭವ ಮತ್ತು ವಿಲಾಸಗಳಿಂದ ಇತಿಹಾಸಕಾರರು ದಾರಿತಪ್ಪಿದ್ದಾರೆ, ಪಹಜಹಾನ್ ಸಮರ್ಥ ದಂಡನಾಯಕ ಮತ್ತು ಸೇನಾ ವ್ಯವಸ್ಥಾಪಕನಲ್ಲ. ರಾಜ್ಯದ ಆಡಳಿತದಲ್ಲಿ ಅವನು ಕ್ರೂರಿ ಮತ್ತು ಯಾವುದಕ್ಕೂ ಹೇಸದವ”.

ಡಾ।। ಜಾದೂನಾಥ ಸರ್ಕಾರ್ ಪ್ರಕಾರ “ಷಹಜಹಾನನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ಅವನತಿಯ ಬೀಜ ಬಿತ್ತಲ್ಪಟ್ಟವು”.

ಈ ಮೇಲ್ಕಂಡ ಅಭಿಪ್ರಾಯಗಳಿಂದ ಕೆಲವು ಇತಿಹಾಸಕಾರರು ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಒಪ್ಪಿಕೊಂಡಿಲ್ಲ ಎಂಬುದು ನಿಖರವಾಗಿ ತಿಳಿಯುತ್ತದೆ. ಆದರೆ ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಬಣ್ಣಿಸುವವರೂ ಇದ್ದಾರೆ. ಆ ಅಭಿಪ್ರಾಯವನ್ನು ಮಂಡಿಸುವಲ್ಲಿ ಪ್ರೊ. ಎಸ್.ಆರ್. ಕರ್ಮ ಪ್ರಮುಖರು, ಚರ್ಮರವರು ತಮ್ಮ ʻʻಭಾರತದಲ್ಲಿ ಮೊಗಲ್ ಸಾಮ್ರಾಜ್ಯ” ಎಂಬ ಗ್ರಂಥದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ವಂಗಗಳು, ಯುದ್ಧಗಳು ಇದ್ದರೂ ಷಹಜಹಾನನ ಕಾಲವು ಸಾಕಷ್ಟು ಸಂಪದ್ಭರಿತತೆ ಮತ್ತು ವೈಭವದಿಂದ ಕೂಡಿತ್ತು ಎಂಬುದು ಅವರ ವಾದ. ಔರಂಗಜೇಬನ ಕಾಲದ ದುರಂತಕ್ಕೆ ಮತ್ತು ಮೊಗಲ್ ಸಾಮ್ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಈತನನ್ನು ಹೊಣೆ ಮಾಡಿ ಫಲವಿಲ್ಲ ಎಂಬುದು ಇವರ ನಂಬಿಕೆ. ಇವರು ವಿ.ಎ. ಸ್ಮಿತ್‌ರ ವಾದವನ್ನು ವಿರೋಧಿಸಿ, ಅದು ಕೇವಲ ಕಾಲ್ಪನಿಕ ಎಂದು ತೆಗಳಿದ್ದಾರೆ.

ರಾಯ್ ಭಾರ್ಮಲ್ ಮತ್ತು ಕಾಫೀಖಾನ್‌ರೆಂಬ ಸಮಕಾಲೀನ ಇತಿಹಾಸಕಾರರು ಷಹಜಹಾನನ ಕಾಲವನ್ನು ಶಾಂತಿ ಮತ್ತು ಸಮೃದ್ಧಿಯ ಕಾಲವೆಂದು ವರ್ಣಿಸಿದ್ದಾರೆ.

ಎಲ್ಲಿನ್ ಸ್ಟೋನ್‌ರ ಪ್ರಕಾರ, ʻʻಷಹಜಹಾನನ ಕಾಲವು ಭಾರತದ ಇತಿಹಾಸದಲ್ಲಿ ಸಂಪದ್ಭರಿತ ಕಾಲವಾಗಿದ್ದಿತು”. ಈ ಮೇಲ್ಕಂಡಂತೆ ವಾದ ವಿವಾದಗಳಿದ್ದಾಗ್ಯೂ ಷಹಜಹಾನ್ ಯಶಸ್ವಿ ರಾಜನಾಗಿದ್ದ, ಆಡಳಿತ ದಕ್ಷತೆಯನ್ನು ಹೊಂದಿದ್ದ. ಮೊಗಲ್ ಸಾಮ್ರಾಜ್ಯ ಇವನ ಕಾಲದಲ್ಲಿ ಅತ್ಯುನ್ನತಿ ಮುಟ್ಟಿದ್ದಿತು ಎಂಬುದನ್ನು ತಳ್ಳಿಹಾಕುವಂತಿಲ್ಲ. ಅದೇ ರೀತಿ ಆತನ ತಪ್ಪುಗಳನ್ನು ನ್ಯೂನತೆಗಳನ್ನು ಒಪ್ಪಿಕೊಳ್ಳುವಂತಿಲ್ಲ.

ಕಲೆ ಮತ್ತು ವಾಸ್ತು ಶಿಲ್ಪ

ಷಹಜಹಾನನ ಕಾಲ ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದ ವೈಭವದ ಕಾಲ, ಕಟ್ಟಡಗಳ ನಿರ್ಮಾಣದಲ್ಲಿ ಉಳಿದ ಮೊಗಲ್ ದೊರೆಗಳನ್ನು ಮೀರಿಸಿದ ಪಹಜಹಾನ್ ನನ್ನು “ಸೌಧಗಳ ನಿರ್ಮಾಪಕರ ರಾಜ” ಎಂದು ಕರೆದದ್ದು ಸತ್ಯವಾಗಿದೆ. ಪರ್ಶಿಯನ್ ಕವಿ ಶೇಖ್ ಸೌದಿಯಂತೆ, “ದೇವಾಲಯಗಳು, ಸೇತುವೆಗಳು, ಕೆರೆಕಟ್ಟೆಗಳು ಮತ್ತು ಕಾಲುವೆಗಳಂತಹ ಸ್ಮಾರಕಗಳನ್ನು ಬಿಟ್ಟು ಹೋಗುವ ವ್ಯಕ್ತಿ ಎಂದಿಗೂ ಸಾಯುವುದಿಲ್ಲ”. ಈ ಹೇಳಿಕೆ ಷಹಜಹಾನನಿಗೆ ಸಂಪೂರ್ಣವಾಗಿ ಒಪ್ಪುತ್ತದೆ. ಈತನ ಸಾಮ್ರಾಜ್ಯ, ಸೈನಿಕರು, ಆಡಳಿತ ಸಾಧನೆಗಳನ್ನು ಯಾರೂ ಇಂದು ಸ್ಮರಿಸುವುದಿಲ್ಲ. ಆದರೆ ಆತ ಬಿಟ್ಟು ಹೋಗಿರುವ ಕಲೆ ಮತ್ತು ವಾಸ್ತುಶಿಲ್ಪ ಕೃತಿಗಳಲ್ಲಿ ಅವನ ಹೆಸರು ಶಾಶ್ವತವಾಗಿದೆ. ಈತನ ಕಾಲ ನಿಜವಾಗಿ ಮೊಗಲ್ ವಾಸ್ತುಶಿಲ್ಪದ ಸುವರ್ಣಯುಗ. ಇವನೊಬ್ಬ ಮಹಾ ನಿರ್ಮಾಣಕಾರ. ಅವನನ್ನು “ನಿರ್ಮಾಣಕಾರರ ರಾಜ” ನೆಂದೇ ಕರೆಯಲಾಗಿದೆ. ಈತ ಆಗ್ರಾ, ದೆಹಲಿ, ಲಾಹೋರ್, ಕಾಶ್ಮೀರ, ಕಾಬೂಲ್, ಕಾಂದಹಾರ್, ಅಜೀರ್, ಅಹಮದಾಬಾದ್ ಮುಂತಾದೆಡೆಗಳಲ್ಲಿ ಹಲವು ಸುಂದರವಾದ ಆರಮನೆ, ಕೋಟೆ, ಮಸೀದಿ, ಗೋರಿ ಇತ್ಯಾದಿ ಕಟ್ಟಡಗಳನ್ನು ಬಿಟ್ಟು ಹೋಗಿದ್ದಾನೆ. ಈತನ ಕಾಲದಲ್ಲಿ ಮೊಗಲ್ ವಾಸ್ತುಶಿಲ್ಪ ತನ್ನ ಅತ್ಯುನ್ನತಿ ಮುಟ್ಟಿತ್ತು. ಅಮೃತಶಿಲೆಯಲ್ಲಿ ಉತ್ಕೃಷ್ಟ ಸೌಧಗಳನ್ನು ನಿರ್ಮಿಸಿದ “ಷಹಜಹಾನನು ಮೊಗಲರ ಅಗಸ್ಟಸ್” ಎಂದು ಕಲಾವಿಮರ್ಶಕರು ಬಣ್ಣಿಸಿದ್ದಾರೆ.

1. ಕೆಂಪುಕೋಟೆ : ಷಹಜಹಾನನು ಹಲವು ಮೊಗಲ್ ಪಟ್ಟಣಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದರೂ, ದೆಹಲಿ ಮತ್ತು ಆಗ್ರಾಗಳು ಈತನ ಕಾಲದ ಕಲಾವೈಭವವನ್ನು ಪ್ರದರ್ಶಿಸುವಲ್ಲಿ ಪ್ರಾಮುಖ್ಯತೆ ಪಡೆದಿವೆ. ಹಹಜಹಾನ್ ದೆಹಲಿಗೆ ತನ್ನ ರಾಜಧಾನಿ ವರ್ಗಾಯಿಸಿದ ಮೇಲೆ ಅಲ್ಲಿ ʻಷಹಜಹಾನಾ ಬಾದ್’ ಎಂಬ ಹೊಸನಗರವನ್ನೇ ನಿರ್ಮಾಣ ಮಾಡಿದ. ಇದರಲ್ಲಿ ಆನೇಕ ಸುಂದರವಾದ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಮುಖ್ಯವಾದುದೆಂದರೆ ಕೆಂಪುಕೋಟೆ. ಇದರ ಒಳಗೆ ಅನೇಕ ಸುಂದರವಾದ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನು ಪರಿಶುದ್ದ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಮೋತಿಮಹಲ್, ಹಿರಾಮಹಲ್, ರಂಗ ಮಹಲ್, ದಿವಾನಿ ಆಮ್, ದಿವಾನಿ ಖಾಸ್ ಮುಖ್ಯವಾದವು. ದಿವಾನಿ ಖಾಸ್ ಒಂದು ಅಪೂರ್ವ ಸುಂದರ ಕಲಾಕೃತಿ, ಇದರ ಗೋಡೆಯ ಮೇಲೆ ಕಂಡುಬಂದಿರುವ “ಭೂಮಿಯಲ್ಲಿ ಸಂತೋಷದ ಸ್ವರ್ಗದ ಉದ್ಯಾನವಿದ್ದಲ್ಲಿ ಅದುವೆ ಇದು, ಇದಲ್ಲದೆ ಬೇರೆ ಇಲ್ಲ” ಎಂಬ ಬರಹ ಅಕ್ಷರಶಃ ನಿಜ.

2. ತಾಜ್ ಮಹಲ್ : ಷಹಜಹಾನನ ಕಟ್ಟಡಗಳಲ್ಲೆಲ್ಲ ಅತ್ಯಂತ ಸುಪ್ರಸಿದ್ಧವಾದುದು ತಾಜ್ ಮಹಲ್, ಇದನ್ನು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇದನ್ನು ಪಹಜಹಾನನು ತನ್ನ ಪ್ರೀತಿಯ ರಾಣಿ ಮಮ್ತಾಜ್ ಮಹಲ್‌ಳ ನೆನಪಿನಲ್ಲಿ ಆಗ್ರಾದಲ್ಲಿ, ಯಮುನಾ ನದಿ ದಡದಲ್ಲಿ ನಿರ್ಮಿಸಿದೆ. ಇದು ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. 1632 ರಲ್ಲಿ ಇದರ ರಚನೆ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು. ಇದನ್ನು ಕಟ್ಟಿಸಲು ಷಹಜಹಾನನು 50ಲಕ್ಷರೂಗಳನ್ನು ವೆಚ್ಚಮಾಡಿದನು. ತಾಜ್ ಮಹಲ್‌ನ್ನು “ಅಮೃತ ಶಿಲೆಯ ಕನಸು” ಎಂದು ವರ್ಣಿಸಲಾಗಿದೆ. ಟವರ್ನಿಯರ್ ಪ್ರಕಾರ ತಾಜ್‌ಮಹಲ್‌ನ್ನು 22 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು ಮತ್ತು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ವೆಚ್ಚವಾಯಿತು. ವೆನಿಷಿಯಾದ ವೆರೊನಿಯೋ ಎಂಬುವನು ತಾಜ್ ಮಹಲ್‌ನ ವಿನ್ಯಾಸವನ್ನು ರೂಪಿಸಿದವನೆಂದು ಫಾದರ್ ಮಾಡ್ರಿಕ್ ಹೇಳಿದ್ದಾರೆ. ಆದರೆ ಈ ಕಟ್ಟಡದಲ್ಲಿ ಪಾಶ್ಚಾತ್ಯ ಪ್ರಭಾವ ಕಾಣುವುದಿಲ್ಲವೆಂದು ಭಾರತೀಯ ವಿದ್ವಾಂಸರ ಅಭಿಪ್ರಾಯ. ಉಸ್ತಾದ್ ಈಸಾ ಎಂಬುವನ ನಿರ್ದೇಶನದಲ್ಲಿ ಪರ್ಶಿಯದ ಮತ್ತು ಮಧ್ಯ ಏಶಿಯಾದ ಕಲಾವಿದರು ಭಾರತೀಯ ಕಲಾಕಾರರ ಸಹಾಯದಿಂದ ತಾಜ್ ಮಹಲ್‌ನ್ನು ನಿರ್ಮಿಸಿದರೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಕಟ್ಟಡದ ವಿನ್ಯಾಸವನ್ನು ಮುಸಲ್ಮಾನ ಕಲಾವಿದರು ಮತ್ತು ಅಲಂಕಾರದ ಕೆಲಸವನ್ನು ಹಿಂದೂ ಕಲಾಕಾರರು ಪೂರೈಸಿದರೆಂದು ನಂಬಲಾಗಿದೆ. ತಾಜ್ ಮಹಲ್ ನಲ್ಲಿ ಸಹಜಹಾನನ ಕಾಲದ ಉತ್ಕೃಷ್ಟ ಕಲೆ ಮತ್ತು ಪರಿಣಿತ ವಾಸ್ತುಶಿಲ್ಪ ಇವುಗಳ ಸುಂದರ ಸಮ್ಮಿಲನ ಗೋಚರಿಸುತ್ತದೆ. ಯಮುನಾ ನದಿಯ ದಡದ ಮೇಲಿನ ಈ ತಾಜ್‌ಮಹಲ್ ಪ್ರಕೃತಿ ದೇವಿಯ ಮತ್ತು ಮಾನವ ಹಸ್ತಗಳ ಸಂಯೋಜನೆಯ ಫಲವಾಗಿ ರೂಪುಗೊಂಡ ಸೌಂದರ್ಯರಾಶಿಯಂತೆ ಕಂಗೊಳಿಸುತ್ತದೆ. ಹಗಲು ಹೊತ್ತಿನಲ್ಲಿ ಮತ್ತು ಬೆಳದಿಂಗಳಲ್ಲಿ ತಾಜ್‌ ಮಹಲಿನ ಬಣ್ಣ ಬದಲಾಗುವುದು ಈ ಕಟ್ಟಡದ ಒಂದು ವೈಶಿಷ್ಟ್ಯ.

3. ಮಯೂರ ಸಿಂಹಾಸನ : ಷಹಜಹಾನನ ಕಾಲದ ಇನ್ನೊಂದು ಸೃಷ್ಟಿಯೇ ಮಯೂರ ಸಿಂಹಾಸನ ಇದನ್ನು ನಿರ್ಮಿಸಲು ಏಳು ವರ್ಷ ಹಿಡಿಯಿತು. ಇದಕ್ಕೆ ತಗುಲಿದ ವೆಚ್ಚ ಒಂದು ಕೋಟಿ ರೂಪಾಯಿ, ಇದನ್ನು ಮುತ್ತುರತ್ನಗಳಿಂದ, ವಜ್ರ ವೈಡೂರ್ಯಗಳಿಂದ ಅಲಂಕರಿಸಲಾಗಿತ್ತು. ನಾದಿರ್ಷಹ ತನ್ನ ಧಾಳಿಯ ಕಾಲದಲ್ಲಿ ಇದನ್ನು ಪರ್ಶಿಯಾಕ್ಕೆ ಸಾಗಿಸಿದೆ.

4. ಮೋತಿ ಮಸೀದಿ : ಆಗ್ರಾದಲ್ಲಿನ ನಯನ ಮನೋಹರವಾದ ಮೋತಿ ಮಸೀದಿಯನ್ನು ಕ್ರಿ.ಶ. 1653ರಲ್ಲಿ ಪೂರ್ಣಗೊಳಿಸಲಾಯಿತು. ಇದರ ನಿರ್ಮಾಣಕ್ಕೆ ಏಳು ವರ್ಷ ಹಿಡಿಯಿತು. ಪರಿಶುದ್ಧತೆ ಮತ್ತು ಆಕರ್ಷಕತೆ ಇದರ ಮುಖ್ಯ ಲಕ್ಷಣಗಳು.

5. ಮುಸ್ಲಾಮಾನ್ ಬುರ್ಚ್ : ಇದು ಆಗ್ರಾ ಕೋಟೆಯೊಳಗಿನ ಇನ್ನೊಂದು ಸುಂದರ ನಿರ್ಮಾಣ, ಇಲ್ಲಿಂದ ತಾಜ್ ಮಹಲಿನ ದರ್ಶನ ಸಾಧ್ಯ. ಇದರಲ್ಲಿಯೇ ಔರಂಗಜೇಬ್ ಷಹಜಹಾನನ್ನು ಸೆರೆಹಿಡಿದದ್ದು. ಕಟ್ಟಡಗಳೇ ಅಲ್ಲದೆ ಉದ್ಯಾನವನಗಳನ್ನು ನಿರ್ಮಿಸುವಲ್ಲಿ ಷಹಜಹಾನ್ ಆಸಕ್ತಿ ವಹಿಸಿದ್ದ. ಕಾಶ್ಮೀರದ ಕಾಲಿಮಾರ್ ಮತ್ತು ನಿಷಾತ್ ಉದ್ಯಾನವನಗಳು, ಲಾಹೋರಿನ ಶಾಲಿಮಾರ್ ಉದ್ಯಾನವನ ಈತನ ಕಾಲದವು.

ಮುಕ್ತಾಯ : ಷಹಜಹಾನನ ಕಾಲದಲ್ಲಿ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯೊಂದು ನಿರ್ಮಾಣವಾಯಿತು. ಇದನ್ನು ಕೆಲವರು “ಷಹಜಹಾನನ ಶೈಲಿ” ಯೆಂದು ಕರೆದಿದ್ದಾರೆ. ಈತನಿಗಿಂತ ಮೊದಲಿನ ಶೈಲಿಯನ್ನು “ಇಂಡೋಪರ್ಶಿಯನ್ ಶೈಲಿ” -ಯೆಂದು ಗುರುತಿಸಲಾಗಿದೆ. ಕಾರಣ ಅದರಲ್ಲಿ ಭಾರತೀಯ ಮತ್ತು ಪರ್ಶಿಯನ್ ಶೈಲಿಗಳ ಸಮ್ಮಿಲನವಿದ್ದಿತ್ತು. ಸಹಜಹಾನನ ಕಾಲದಲ್ಲಿ ಸಂಪೂರ್ಣವಾಗಿ ಭಾರತೀಯ ಅಂಶಗಳಿಂದ ಕೂಡಿದ ಶೈಲಿ ಆರಂಭವಾಯಿತು. ವಿದೇಶಿ ಅಂಶಗಳು ದೂರವಾದವು. ಈ ಶೈಲಿಯಲ್ಲಿ ಸೂಕ್ಷ್ಮವಾದ ಕೆತ್ತನೆಗೆ, ಅಲಂಕಾರಕ್ಕೆ, ಮೆರುಗಿಗೆ, ಬಣ್ಣಕ್ಕೆ, ರಮ್ಯತೆಗೆ ಅಧಿಕ ಗಮನ ಕೊಡಲಾಗಿತ್ತು. ಷಹಜಹಾನನ ಕಾಲದ ವಾಸ್ತುಶಿಲ್ಪ ಕೃತಿಗಳ ವೈಶಿಷ್ಟ್ಯವೆಂದರೆ ಹೆಚ್ಚಾಗಿ ಬಿಳಿಯ ಅಮೃತಶಿಲೆಯ ಬಳಕೆ ಮತ್ತು ಅಲಂಕಾರಕ್ಕೆ ಮತ್ತು ರತ್ನ, ವಜ್ರ ವೈಡೂರ್ಯ, ಬಂಗಾರ ಮತ್ತು ಬೆಳ್ಳಿಯನ್ನು ಬಳಸಿರುವುದು. ತತ್ಪರಿಣಾಮವಾಗಿ ಈತನ ಕಾಲದ ಕೃತಿಗಳು ಅತ್ಯಂತ ಆಕರ್ಷಕ ಮತ್ತು ಸುಂದರವಾದವು.

ಶೇರ್ ಶಹ ಮತ್ತು ಈತನ ಆಡಳಿತ (ಸೂರ್ ಸಂತತಿ – ಮೊಗಲ್ ಆಳ್ವಿಕೆಗೆ ಸ್ವಲ್ಪ ವಿಶ್ರಾಂತಿ)

ಶೇರ್ ಶಹ ಮತ್ತು ಈತನ ಆಡಳಿತ (ಸೂರ್ ಸಂತತಿ – ಮೊಗಲ್ ಆಳ್ವಿಕೆಗೆ ಸ್ವಲ್ಪ ವಿಶ್ರಾಂತಿ)

ಹುಮಾಯೂನನ ಅತ್ಯಂತ ಬದ್ಧ ವೈರಿಯಾದ ಶೇರ್ ಶಹನು ಈ ಮೊಗಲ್ ಚಕ್ರವರ್ತಿಯನ್ನು ಪರಾಭವ ಮತ್ತು ಪದಚ್ಯುತಗೊಳಿಸಿ, ಕ್ರಿ.ಶ. 1540ರಲ್ಲಿ ದೆಹಲಿ ಸಿಂಹಾಸನವನ್ನೇರಿದನು. ಅಫಘನ ಸೂರ್ ಮನೆತನಕ್ಕೆ ಸೇರಿದ ಶೇರ್‌ಶಹನು ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಓರ್ವ ಪ್ರಮುಖ ವ್ಯಕ್ತಿಯಾಗಿದ್ದಾನೆ.

ಶೇರ್‌ಸಹನ ಮೂಲ ಹೆಸರು ಫರೀದ್, ಈತ ಜನಿಸಿದ್ದು ಕ್ರಿ.ಶ. 1472ರಲ್ಲಿ. ಫರೀದನು ಆರೇಬಿಕ್ ಮತ್ತು ಪರ್ಶಿಯನ್ ಭಾಷೆ ಮತ್ತು ಸಾಹಿತ್ಯಗಳ ಅಧ್ಯಯನಕ್ಕೆ ಹೆಚ್ಚು ಗಮನಕೊಟ್ಟಿದ್ದನು. ಫರೀದನ ತಂದೆಯ ಪೋಷಕನಾಗಿದ್ದ ಜಮಾಲ್‌ಖಾನ್ ನಿಂದಾಗಿ ಫರೀವನಿಗೆ ಸಹಾರಾಜನ ಜಹಗೀರಿನ ಆಡಳಿತದ ಮೇಲ್ವಿಚಾರಣೆ ಸಿಕ್ಕಿತು.

ಸಸ್ಸಾರಾಂನಲ್ಲಿ ಆಡಳಿತವನ್ನು ದಕ್ಷ ರೀತಿಯಿಂದ ನಿರ್ವಹಿಸಿದ ಫರೀದನನ್ನು ಕಂಡ ಅವನ ದಾಯಾದಿಗಳಿಗೆ ಮತ್ಸರ ಅತಿಯಾಯಿತು. ದಾಯಾದಿ ಸಹೋದರರ ದ್ವೇಷಾಸೂಯೆಗಳಿಗೆ ತುತ್ತಾದ ಫರೀದ್, ತತ್ಪರಿಣಾಮವಾಗಿ ಮತ್ತೊಮ್ಮೆ ಮನೆ ತ್ಯಜಿಸಿ, ದಕ್ಷಿಣ ಬಿಹಾರದ ಆರಸ ಬಹರ್ ಖಾನ್ ಆಸ್ನಾನ ಸೇರಿದನು. ಒಬ್ಬನೇ ಹುಲಿಯೊಂದನ್ನು ಸಂಹರಿಸಿದನು. ಫರೀದ್ ಬಹರ್‌ಖಾನನ ಮೆಚ್ಚುಗೆಗೆ ಪಾತ್ರನಾಗಿ ʻಶೇರ್ ಖಾನ್’ ಎಂಬ ಬಿರುದನ್ನು ಪಡೆದನು. ಮತ್ತೆ ಈ ಸಂದರ್ಭದಲ್ಲಿ ಶೇರ್ ಖಾನ್‌‌ ಬಗ್ಗೆ ದ್ವೇಷ, ಅಸೂಹೆ ಹೊಂದಿದ್ದ ಪಠಾಣ ಸರದಾರರು, ಬಹರ್ ಖಾನ್‌ನ ಎದುರು ಅವನ ಬಗ್ಗೆ ಚಾಡಿ ಹೇಳಿದಾಗ, ಬಹರ್ ಖಾನನು ಶೇರಖಾನ ಸಸಾರಂನ ಜಾಗೀರನ್ನು ಬಲಪ್ರಯೋಗದಿಂದ ಪಡೆದನು. ಉದ್ಯೋಗಕ್ಕೆ ಅಲೆದಾಡುತ್ತಿದ್ದ ಶೇರ್ ಖಾನನಿಗೆ ಮೊಗಲ್ ಸೇವೆಯಲ್ಲೂ ಒಂದು ಹುದ್ದೆ ಸಿಕ್ಕಿತು. ಆದರೆ ಅಲ್ಲಿಯೂ ಈತನನ್ನು ಸರಿಯಾಗಿ ಕಾಣದ್ದರಿಂದ ಶೇರ್ ಖಾನ್‌ನು ಕ್ರಿ.ಶ. 1528ರಲ್ಲಿ ಮೊಗಲ್ ಸೇವೆಯನ್ನು ಬಿಟ್ಟು ಬಿಹಾರಕ್ಕೆ ಮರಳಿದನು. ದಕ್ಷಿಣ ಬಿಹಾರದ ಸುಲ್ತಾನ ಮಹಮದನು ಈತನನ್ನು ತನ್ನ ಪುತ್ರ ಜಲಾಲ್ಖಾನನಿಗೆ ಶಿಕ್ಷಕನನ್ನಾಗಿ ನೇಮಿಸಿದನು. ಆದರೆ ಕೆಲವೇ ದಿನಗಳಲ್ಲಿ ಸುಲ್ತಾನನು ಮರಣಹೊಂದಿದನು. ಅವನ ಮಡದಿ ದುದುಬೀಬಿಯು ಜಲಾಲ್ ಖಾನ್ ಚಿಕ್ಕವಯಸ್ಸಿನವನಾಗಿದ್ದರಿಂದ ಹೊಸ ಸುಲ್ತಾನನ ಪರವಾಗಿ ತಾನೇ ರಾಜ್ಯಭಾರ ಮಾಡಲಾರಂಭಿಸಿದಳು. ಈಕೆ ಶೇರ್ ಖಾನ್‌ನನ್ನು ಉಪ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಗೋಗ್ರಾ ಕಾಳಗದ ನಂತರ ಬಾಬರ್ ನು ಅಲಾಲ್ ಖಾನ್‌ನನ್ನು ವಕ್ಷಿಣ ಬಿಹಾರದ ಆರಸನನ್ನಾಗಿ ಮಾಡಿದನು. ಆಗ ಶೇರ್ ಖಾನನಿಗೆ ಸಸಾರಾಂದ ಜಾಗೀರು ಸಿಕ್ಕಿತು. ಜಲಾಲಖಾನನ ತಾಯಿ ದುದುಬೀಬಿ ಪುನಃ ಶೇ‌ರ್ ಖಾನ್‌ ನನ್ನು ಬಿಹಾರದ ಸಹಾಯಕ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸಿದಳು. ಅಲ್ಪಾವಧಿಯಲ್ಲಿಯೇ ದುದುಬೀಬಿ ಮರಣಹೊಂದಿದಳು. ನಂತರ ನಿಜವಾದ ಪ್ರಭುವೆನಿಸಿದನು, ಜಲಾಲ್ ಖಾನನು ಹೆಸರಿಗೆ ಮಾತ್ರ ಬಿಹಾರದ ಸುಲ್ತಾನನಾಗಿದ್ದನು.

ಶೇರ್ ಖಾನನು ಕ್ರಿ.ಶ. 1530ರಲ್ಲಿ ಚುನಾರ್ ಕೋಟೆಯ ಹಿಂದಿನ ಗೌವರ್ನರ್ ಆಗಿದ್ದ ತಾಜ್ ಖಾನನ ವಿಧವೆಯಾದ ಲಾಡ್ ಲ್ಲಿ ಕಳನ್ನು ವಿವಾಹವಾದನು. ತತ್ಪರಿಣಾಮವಾಗಿ ಶೇರ್ ಖಾನನಿಗೆ ಚುನಾರ್ ಒಡೆತನ ದೊರೆಯಿತು. ಚುನಾರ್‌ ಕೋಟೆಯಲ್ಲಿ ಅಪಾರ ಸಂಪತ್ತು ಸಿಕ್ಕಿದ್ದರಿಂದ ಸ್ವತಂತ್ರರಾಜ್ಯದ ನಿರ್ಮಾಣದ ಕನಸು ಕಾಣತೊಡಗಿದೆ. ಕ್ರಿ.ಶ. 1539ರಲ್ಲಿ ಹುಮಾಯೂನನನ್ನು ‘ಚೌಸಾಂ’ ಕಾಳಗದಲ್ಲಿ ಸೋಲಿಸಿದನು. ಈ ವಿಜಯದ ನಂತರ ಶೇರ್ ಖಾನನು ‘ಶೇರ್ಶಯ’ ಎಂಬ ಬಿರುದು ಪಡೆದನು. ಶೇರ್‌ಶಹ ಮತ್ತು ಹುಮಾಯೂನರ ನಡುವಣ ಅಂತಿಮ ಹೋರಾಟ ಕ್ರಿ.ಶ. 1540ರಲ್ಲಿ ನಡೆಯಿತು. ಇವರಿಬ್ಬರ ಸೈನ್ಯಗಳು ಕನೌಜ್‌ನ ಹತ್ತಿರ ಸಂಧಿಸಿದವು. ಕನೋಜ್ ಯುದ್ಧದಲ್ಲಿ ರ್ಶೇಶಹನು ಮತ್ತೊಮ್ಮೆ ಹುಮಾಯೂನನನ್ನು ಸಂಪೂರ್ಣವಾಗಿ ಸೋಲಿಸಿದನು. ಶೇರ್ಶಹನು ದೆಹಲಿಯ ಸಾರ್ವಭೌಮನಾದನು. ಅವನ ಬಹುದಿನದ ಕನಸು ನನಸಾಯಿತು.

ದೆಹಲಿಯ ಸಾರ್ವಭೌಮವಾದ ಶೇರ್‌ಶಹ ಕ್ರಿ.ಶ. 1540 ರಿಂದ ಕ್ರಿ.ಶ. 1545ರವರೆಗೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿದ. ತನ್ನ ಆಳ್ವಿಕೆಯ ಮೊದಲ ವರ್ಷದಲ್ಲಿ ಗ್ವಾಲಿಯರ್ ಮತ್ತು ಸಂಬಾಲ್‌ಗಳನ್ನು ಆಕ್ರಮಿಸಿದ. ತದನಂತರ ಪಂಜಾಬ್, ಸಿಂದ್ ಮತ್ತು ಬಲೂಚಿಸ್ತಾನಗಳೂ ಈತನ ವಶವಾದವು. ಕ್ರಿ.ಶ. 1543ರಲ್ಲಿ ಚಾಂದೇರಿ ಮತ್ತು ರೈಸಿನ್ ಕೋಟೆಗಳನ್ನು ಜಯಿಸಿದನು. ತದನಂತರ ರಾಜಾಸ್ಥಾನದ ಮಾರ್ವಾರದ ಮಾಲೈವ್‌ನಿಂದ ಮಾರ್ವಾರವನ್ನು ಜಯಿಸಿದ. ಕಾಲಿಂಜರ್ ಶೇರ್ ಶಹನ ಅಂತಿಮ ದಂಡಯಾತ್ರೆ, ಇದನ್ನು ಜಯಿಸಿದರೂ ಸಹ ಅಲ್ಲಿ ಆಕಸ್ಮಿಕವಾಗಿ ಉಂಟಾದ ಸಿಡಿಮದ್ದಿನ ಆಸ್ಪೋಟದಿಂದ ಶೇರ್‌ಶಹ ಮರಣ ಹೊಂದಿದೆ. ಈ ರೀತಿ ಶೇರ್ ಶಹನ ಜೀವನ ದುರಂತದಲ್ಲಿ ಕೊನೆಗೊಂಡಿತು.

1. ಶೇರ್‌ ಶಹನ ಆಡಳಿತ ಸುಧಾರಣೆಗಳು

ಆಫ್‌ಫಾನ್ ಸುಲ್ತಾನರಲ್ಲೆಲ್ಲಾ ಅತ್ಯಂತ ಪ್ರಸಿದ್ಧನಾದ ಶೇ‌ರ್ ಶಹನು ಮಹಾನ್ ದಿಗ್ವಿಜಯಿಯಾಗಿದ್ದಂತೆ, ಚತುರ ಆಡಳಿತಗಾರನೂ ಆಗಿದ್ದನು. ಕೇವಲ ತನ್ನ ಐದು ವರ್ಷದ ಅವಧಿಯಲ್ಲಿ ಅದೆಷ್ಟೋ ಮಂದಿ ಸುಲ್ತಾನರು ಹಲವು ವಶಕಗಳಿಂದಲೂ ಸಾಧಿಸಲಾಗದ ಮಹತ್ಸಾಧನೆಯನ್ನು ಸಾಧಿಸಿದನು. ಆಡಳಿತ ಕ್ಷೇತ್ರದಲ್ಲಿ ಈತ ತಂದ ಸುಧಾರಣೆಗಳು ಅಕ್ಬರನಿಂದ ಹಿಡಿದು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲೂ ಪ್ರಾಮುಖ್ಯಗಳಿಸಿದವು. ʻಜನಸಮೂಹದ ಆಯ್ಕೆಗೆ ಅನುಗುಣವಾಗಿ ಸ್ಪಂದಿಸಿ ಆಡಳಿತವನ್ನು ನಿರ್ವಹಿಸಿದನೆಂದು’ ಡಬ್ಲ್ಯೂ ಕ್ರೂಕ್ ಅಭಿಪ್ರಾಯ ಪಟ್ಟಿದ್ದಾರೆ. “ಶೇರ್‌ಶಾನ ಆಡಳಿತ ನಿರಂಕುಶ ಪ್ರಭುತ್ವವಾದರೂ ರಚನಾತ್ಮಕವೂ ಹಾಗೂ ವಿವೇಕ ಪೂರ್ಣವೂ ಆಗಿತ್ತು” ಎಂದು ಡಾ. ಈಶ್ವರೀಪ್ರಸಾದರು ಹೇಳುತ್ತಾರೆ. ಅಕ್ಟರನ ಉದಾರ ನೀತಿಗೆ ಶೇರಶಹನ ಸುಧಾರಣೆಗಳು ಬಹುಮಟ್ಟಿಗೆ ಕಾರಣವಾಗಿವೆ. ಆದುದರಿಂದಲೇ ವಿದ್ವಾಂಸರು ಶೇರ್‌ಶಹನನ್ನು ʻಅಕ್ಬರನ ಮಾರ್ಗದರ್ಶಿ’ ಎಂದು ಕರೆದಿದ್ದಾರೆ.

ಶೇರ್‌ಶಹನ ಸಾಮ್ರಾಜ್ಯವು ಆಸ್ಲಾಂ, ಗುಜರಾತ್ ಮತ್ತು ಕಾಶ್ಮೀರಗಳನ್ನು ಬಿಟ್ಟು ಪೂರ್ಣ ಉತ್ತರ ಭಾರತವನ್ನೆಲ್ಲಾ ಒಳಗೊಂಡಿತ್ತು. ಅರ್ಥಾತ್ ಪೂರ್ವದಲ್ಲಿ ಸೋನಾರಗಾಂವ್‌ದಿಂದ (ಈಗಿನ ಪೂರ್ವ ಬಂಗಾಲ), ವಾಯುವ್ಯದಲ್ಲಿ ಗೋಬ್ಬರ್ ನಾಡಿನವರೆಗೆ, ಉತ್ತರದಲ್ಲಿ ಹಿಮಾಲಯದಿಂದ, ದಕ್ಷಿಣಕ್ಕೆ ವಿಂದ್ಯಾ ಪರ್ವತಾವಳಿಯವರೆಗೆ ಹರಡಿತ್ತು.

2. ಕೇಂದ್ರೀಯ ಆಡಳಿತ ವ್ಯವಸ್ಥೆ

ಆಡಳಿತದ ಕೇಂದ್ರ ಬಿಂದುವಾಗಿದ್ದ ಶೇ‌ರ್ ಶಹನು ಆ ಆಡಳಿತದ ಅತ್ಯಂತ ಚಿಕ್ಕ ಪುಟ್ಟ ವ್ಯವಹಾರಗಳನ್ನು ಸಹ ಪರಿಶೀಲಿಸುತ್ತಿದ್ದನು. ನಾಗರಿಕ ಮತ್ತು ಸೈನಿಕ ಆಡಳಿತದ ಎಲ್ಲಾ ಅಧಿಕಾರಗಳನ್ನು ಹೊಂದಿದ್ದ ಶೇರ್ ಶಹನು, ಇಸ್ಲಾಂ ಧರ್ಮಾಭಿಮಾನಿಗಳಾದ ಉಲೆಮಾಗಳ ಪ್ರಭಾದದಿಂದ ದೂರವಿದ್ದನು. ರಾಜ್ಯದ ಉದ್ದಗಲಕ್ಕೂ ನಿರಂತರವಾಗಿ ಸಂಚರಿಸಿ, ಜನರ ಕುಂದುಕೊರತೆಗಳನ್ನು ವಿಚಾರಿಸುತ್ತಿದ್ದನು. ಶೇರ್‌ ಶಹನ ಮಂತ್ರಿಗಳು ಪ್ರತಿನಿತ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ನುರಿತ ಆಡಳಿತಗಾರನಾದ ಶೇರ್‌ಶಹನು ತನ್ನ ಮಂತ್ರಿಗಳಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡುವ ಹೊಣೆಯನ್ನು ಹೊತ್ತುಕೊಂಡಿದ್ದನು.

ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಅನೇಕ ಇಲಾಖೆಗಳನ್ನು ಶೇರ್ ಶಹನು ಪ್ರಾರಂಭಿಸಿದನು. ಅವುಗಳೆಂದರೆ,

1. ದಿವಾನ್‌-ಇ-ವಜರತ್‌ 2. ದಿವಾನ್‌-ಇ-ಅರಿಜ್‌ 3. ದಿವಾನ್‌-ಇ-ರಸಲತ್‌ 4. ದಿವಾನ್‌-ಇ-ಇನ್ಷಾ

ಇದಲ್ಲದೆ ದಿವಾನ್-ಇ-ಖಾಜಾ ಮತ್ತು ದಿವಾನ್-ಇ-ಬರೀದ್ ಎಂಬ ಎರಡು ಮಹತ್ವದ ಇಲಾಖೆಗಳಿದ್ದವು.

ದಿವಾನ್-ಇ-ವಜರತ್ : ವಜೀರನು ಇದರ ಮುಖ್ಯಸ್ಥನಾಗಿದ್ದು. ಈತ ಸಾಮ್ರಾಜ್ಯದ ಕಂದಾಯ, ಹಣಕಾಸಿನ ಆಡಳಿತ ಮತ್ತು ಉಳಿದ ಮಂತ್ರಿಗಳ ಕಾರ್ಯಚಟುವಟಿಕೆಯ ಮೇಲ್ವಿಚಾರಣೆಗಳನ್ನು ನೋಡಿಕೊಳ್ಳುತ್ತಿದ್ದನು.

ದಿವಾನ್-ಇ-ಆರಿಜ್ : ಇದರ ಮುಖ್ಯಸ್ಥನಾಗಿದ್ದವನು ಆರಿಜ್-ಇ-ಮಮಲಿಕ್, ಇವನು ಸೇನೆಯ ಮುಖ್ಯಸ್ಥನಾಗಿದ್ದು, ಸೈನ್ಯಭರ್ತಿ, ಸಂಘಟನೆ, ಸೈನಿಕ ಶಿಸ್ತನ್ನು ನೋಡಿಕೊಳ್ಳುತ್ತಿದ್ದನು. ಆದರೆ ಈತ ಪ್ರಧಾನ ದಂಡನಾಯಕನಾಗಿರಲಿಲ್ಲ.

ದಿವಾನ್-ರಸಲತ್ : ಈ ಇಲಾಖೆಯು ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿತ್ತು. ಈ ಇಲಾಖೆಯ ಮಂತ್ರಿಯು ಹೊರನಾಡುಗಳಿಂದ ಬಂದ ಮತ್ತು ಹೊರನಾಡುಗಳಿಗೆ ಕಳಿಸಲಾದ ರಾಯಭಾರಿಗಳೊಂದಿಗೆ ಸಂಪರ್ಕವಿರಿಸಿಕೊಳ್ಳುತ್ತಿದ್ದನು.

ದಿವಾನ್-ಇ-ಇನ್ಷಾ : ಈ ಇಲಾಖೆಯ ಮಂತ್ರಿಯು ರಾಜಾಜ್ಞೆಗಳನ್ನು ಮತ್ತು ಸರಕಾರಿ ಪ್ರಪತ್ರಗಳನ್ನು ಬರೆಯಿಸುವ, ಅವುಗಳನ್ನು ರಾಜ್ಯಪಾಲರಿಗೆ ಮತ್ತು ಸ್ಥಾನಿಕ ಅಧಿಕಾರಿಗಳಿಗೆ ಕಳಿಸುವ ಮತ್ತು ಅವರೊಂದಿಗೆ ಪತ್ರ ವ್ಯವಹಾರ ನಡೆಸುವ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು. ಸರಕಾರಿ ದಾಖಲೆ ಪತ್ರಗಳು ಇವನ ಅಧೀನದಲ್ಲಿದ್ದವು.

ದಿವಾನ್-ಇ-ಖಾಜಾ : ಪ್ರಧಾನ ಖಾಜಿಯು ಇದರ ಮುಖ್ಯಸ್ಥನಾಗಿದ್ದು, ನ್ಯಾಯಾಡಳಿತದ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಪ್ರಾಂತೀಯ ಖಾಜಿಗಳ ನ್ಯಾಯಾಲಯಗಳಿಂದ ಬಂದ ಅಪೀಲುಗಳನ್ನು ತೀರ್ಮಾನಿಸುತ್ತಿದ್ದನು.

ದಿವಾನ್-ಇ-ಬರೀದ್ : ಈತ ವಾರ್ತಾ ಇಲಾಖೆಯ ಮುಖ್ಯಸ್ಥನಾಗಿದ್ದು, ಸಾಮ್ರಾಜ್ಯದಲ್ಲಿ ಜರುಗಿದ ಮಹತ್ವದ ಘಟನೆಗಳನ್ನು ಕುರಿತು ವರದಿಯನ್ನು ಸುಲ್ತಾನನಿಗೆ ಒಪ್ಪಿಸುತ್ತಿದ್ದನು. ಈತನ ಕೈಕೆಳಗೆ ಅನೇಕ ಮಂದಿ ವರದಿಗಾರರು ಮತ್ತು ಗೂಢಾಚಾರರು ಇರುತ್ತಿದ್ದರು.

3. ಆಡಳಿತದ ವಿಭಾಗಗಳು

ಹಿಂದಿನ ಸುಲ್ತಾನರ ಕಾಲದಲ್ಲಿದ್ದ ಆಡಳಿತ ವಿಭಜನಾ ವ್ಯವಸ್ಥೆಯನ್ನು ಶೇರ್‌ಶಹ ಮುಂದುವರೆಸಿದ. ಈತ ಆಡಳಿತದ ಸಹಾಯಕ್ಕಾಗಿ ರಾಜ್ಯವನ್ನು 47 ಸರ್ಕಾರ (ಆಡಳಿತ ಘಟಕ) ಗಳನ್ನಾಗಿ ವಿಭಜಿಸಿದ್ದ. ಪ್ರತಿಯೊಂದು ಆಡಳಿತ ಘಟಕವನ್ನು ಹಲವಾರು ಪರಗಣಗಳನ್ನಾಗಿ ಪುನರ್ ವಿಭಜಿಸಿದ್ದ. ಪ್ರತಿಯೊಂದು ಪರಗಣವು ಹಲವು ಹಳ್ಳಿಗಳ ಸಮೂಹವಾಗಿತ್ತು. ಹಳ್ಳಿಗಳ ಆಡಳಿತ ನೋಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿದ್ದವು. ಪಟ್ಟಾರಿ ಮತ್ತು ಚೌಕಿದಾರರು ಗ್ರಾಮಾಧಿಕಾರಿಗಳಾಗಿದ್ದರು. ಪರಗಣಗಳ ಆಡಳಿತವನ್ನು ನೋಡಿಕೊಳ್ಳಲು ಶೇಕ್‌ದಾರ ಮತ್ತು ಮುನ್ಸಿಫ್ (ಅಮೀಲ್) ರೆಂಬ ಅಧಿಕಾರಿಗಳಿದ್ದರು. ಶೇಕ್‌ ದಾರನು ಕಾನೂನು, ಸುವ್ಯವಸ್ಥೆ ಮತ್ತು ಆಡಳಿತಕ್ಕೆ ಹೊಣೆಗಾರನಾಗಿದ್ದನು. ಮುನ್ಸಿಫ್‌ನಲ್ಲಿ ಭೂಕಂದಾಯ ಸಂಗ್ರಹಣೆಯ ಅಧಿಕಾರವಿತ್ತು. ಪರ್ಶಿಯನ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲೆಕ್ಕಪತ್ರಗಳನ್ನು ಬರೆದಿಡಲಾಗುತ್ತಿತ್ತು. ಸರ್ಕಾರಗಳಲ್ಲಿ ಹಿರಿಯ ಅಧಿಕಾರಿಗಳಾದ ಶೇಕ್‌ದಾರ್-ಇ-ಶೇಕ್‌ದಾರನ್ ಮತ್ತು ಮುನ್ಸಿಫ್-ಮುನ್ಸಿಫ್‌ನ ಇದ್ದರು. ಶೇರ್‌ಶಾನ ಕಾಲದಲ್ಲಿ ಹೊಸದಾಗಿ ಈ ಅಧಿಕಾರಿಗಳನ್ನು ನೇಮಿಸಲಾಯಿತು.

4. ಶೇರ್‌ಶಹನ ಸೇನಾ ವ್ಯವಸ್ಥೆ

ಸೈನ್ಯ ಬಲದಿಂದಲೇ ಸಾಮ್ರಾಜ್ಯವನ್ನು ವಿಸ್ತರಿಸಿದ ಶೇರ್‌ಶಹನಿಗೆ ಸೈನ್ಯ ಸಂಘಟನೆಯ ಮಹತ್ವದ ಅರಿವಿತ್ತು. ಸೈನಿಕರ ನೇಮಕಾತಿಯನ್ನು ಸೇನಾನಾಯಕರ ವಶಕ್ಕೆ ಬಿಡದೆ, ಆರ್ಹತೆಯ ಆಧಾರದ ಮೇಲೆ ಸೈನಿಕರನ್ನು ನೇಮಕ ಮಾಡುತ್ತಿದ್ದ. ಪ್ರತಿಯೊಬ್ಬ ಸೈನಿಕನನ್ನು ಹಾಜರುಪಟ್ಟಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಅವನ ಕುದುರೆಗೆ ರಾಜಮುದ್ರೆ ಹಾಕಿಸಿ, ಕಳಪೆ ಕುದುರೆಗಳು ಸೈನ್ಯಕ್ಕೆ ಸೇರದಂತೆ ನೋಡಿಕೊಳ್ಳಲಾಗುತ್ತಿತ್ತು. ಸುಲ್ತಾನನು ತನ್ನ ಸೈನ್ಯವನ್ನು ಅನೇಕ ತುಕಡಿಗಳಾಗಿ ವಿಂಗಡಿಸಿ, ಪ್ರತಿ ತುಕಡಿಗೆ ಯುದ್ಧ ಪರಿಣಿತನಾದ ದಳಪತಿಯನ್ನು ನೇಮಿಸಿದ್ದನು. ಶೇರ್‌ಶಹನ ಸೈನ್ಯದಲ್ಲಿ 25,000 ಕಾಲಾಳುಗಳು, 1,50,000 ಕುದುರೆಗಳು, 5,000 ಆನೆಗಳು ಇದ್ದವು. ಕಾಲಾಳುಗಳು ಬಂದೂಕುದಾರಿಗಳಾಗಿದ್ದರು. ಅಲ್ಲದೆ ಇವನು ರಾಜ್ಯದ ವಿವಿಧ ಸ್ಥಳಗಳಲ್ಲಿ ಸೈನ್ಯ ಠಾಣೆಗಳನ್ನು ಸ್ಥಾಪಿಸಿ, ಅಲ್ಲೆಲ್ಲ ಪ್ರಬಲವಾದ ಸೇನೆಯನ್ನಿಟ್ಟಿದ್ದನು.

5. ನ್ಯಾಯಾಡಳಿತ

ಅಗಾಧವಾದ ನ್ಯಾಯಪ್ರಜ್ಞೆಯನ್ನು ರೂಢಿಸಿಕೊಂಡಿದ್ದ ಶೇರ್ಶಹ ನಿಷ್ಪಕ್ಷಪಾತವಾದ ನ್ಯಾಯಾಡಳಿತವನ್ನು ಜಾರಿಗೆ ತಂದನು. ತಪ್ಪಿತಸ್ಥರಾದವರು ಸಿರಿವಂತರಾಗಲಿ, ತನ್ನ ಧರ್ಮ ಅಥವಾ ಸಂಬಂಧಿಕರಾಗಲೀ ಎಲ್ಲರನ್ನೂ ಶಿಕ್ಷೆಗೆ ಗುರಿಪಡಿಸುತ್ತಿದ್ದ. ನಗರ ಮತ್ತು ಪಟ್ಟಣಗಳಲ್ಲಿ ಖಾಜಿಗಳನ್ನು ನ್ಯಾಯವಿತರಣೆಗಾಗಿ ನೇಮಿಸಿದ್ದ. ಸಾಮ್ರಾಜ್ಯದಲ್ಲಿ ತಾನೇ ಎಲ್ಲ ಪ್ರಮುಖ ಮೊಕದ್ದಮೆಗಳನ್ನು ತೀರ್ಮಾನಿಸುತ್ತಿದ್ದ. ಕಂದಾಯ ಅಧಿಕಾರಿಗಳಿಗೂ ಸಿವಿಲ್ ವ್ಯಾಜ್ಯಗಳ ಬಗ್ಗೆ ನ್ಯಾಯ ನೀಡುವ ಅಧಿಕಾರವಿದ್ದಿತು. ತಪಿತಸ್ಥರಿಗೆ ನೀಡುತ್ತಿದ್ದ ಶಿಕ್ಷೆಗಳು ಕಠಿಣವಾಗಿದ್ದವು. ಹಳ್ಳಿಗಳಲ್ಲಿ ಪಂಚಾಯಿತರು ಅಥವಾ ಜಮೀನುದಾರರಿಗೆ ನ್ಯಾಯದಾನದ ಅಧಿಕಾರ ಕೊಡಲಾಗಿತ್ತು.

6. ಪೊಲೀಸ್ ವ್ಯವಸ್ಥೆ

ಈತನ ಕಾಲದಲ್ಲಿ ಪ್ರತ್ಯೇಕವಾದ ಪೋಲೀಸ್ ಇಲಾಖೆಯಿರಲಿಲ್ಲ. ಸೈನ್ಯವೇ ಸಾಮ್ರಾಜ್ಯವನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಹೊಣೆ ಹೊತ್ತಿತ್ತು, ಆಡಳಿತದ ಅಧಿಕಾರಿಗಳೇ ಶಾಂತಿ ಮತ್ತು ಸುವ್ಯವಸ್ಥೆ ಏರ್ಪಡಿಸುವ ಜವಾಬ್ದಾರಿ ಹೊತ್ತಿದ್ದರು. ಸರ್ಕಾರಗಳಲ್ಲಿ ಶೇಕ್‌ದಾರರು ಈ ಜವಾಬ್ದಾರಿ ಹೊತ್ತಿದ್ದರು. ಪರಗಣಗಳಲ್ಲಿಯೂ ಇಂತಹುದೇ ವ್ಯವಸ್ಥೆ ಇತ್ತು. ಅಲ್ಲಿ ಅವರು ಕಳ್ಳಕಾಕರ, ದರೋಡೆಕೋರರ ಮತ್ತು ಸಮಾಜ ಘಾತಕ ವ್ಯಕ್ತಿಗಳ ಮೇಲೆ ಸದಾ ಗಮನ ಇಡಬೇಕಾಗಿದ್ದಿತು. ಗ್ರಾಮದಲ್ಲಿ ನಡೆಯುವ ಎಲ್ಲಾ ಅಪರಾಧಗಳಿಗೆ ಗ್ರಾಮದ ಮುಖಂಡರನ್ನು ಹೊಣೆ ಮಾಡುತ್ತಿದ್ದನು. ಗ್ರಾಮದ ಮುಖಂಡರಿಗೆ ಅಪರಾಧಿಯನ್ನು ಕಂಡುಹಿಡಿಯಲು ಅಥವಾ ದರೋಡೆಯಿಂದ ಆದ ನಷ್ಟವನ್ನು ತುಂಬಿಕೊಡಲು ಅವಕಾಶ ನೀಡಲಾಗಿತ್ತು. ಇಲ್ಲವಾದಲ್ಲಿ ಮರಣದಂಡನೆ ವಿಧಿಸಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ಒಳ್ಳೆ ವ್ಯವಸ್ಥೆ ಆಗಿತ್ತು. ತತ್ಪರಿಣಾಮವಾಗಿ ಕಳ್ಳತನ, ದರೋಡೆಗಳು ಸಂಭವಿಸುತ್ತಿರಲಿಲ್ಲ. ಇವನ ಕಾಲದಲ್ಲಿ ಪ್ರವಾಸಿಗರು ಮತ್ತು ವರ್ತಕರು ನಿರ್ಭಿತಿಯಿಂದ ಪ್ರಯಾಣಮಾಡುತ್ತಿದ್ದರಂತೆ.

7. ಭೂ ಕಂದಾಯ ವ್ಯವಸ್ಥೆ

ಶೇರ್‌ಶಹನ ಭೂ ಕಂದಾಯ ಸುಧಾರಣೆಗಳು ಭಾರತದ ಕೃಷಿರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಭೂ ಕಂದಾಯವೇ ರಾಜ್ಯದ ಆದಾಯದ ಬಹುಮುಖ್ಯ ಮೂಲವಾಗಿದ್ದರಿಂದ, ಅದರ ಕಡೆ ಹೆಚ್ಚಿಗೆ ಗಮನಹರಿಸಿದನು. ಇವನು ಜಾರಿಗೆ ತಂದ ಕಂದಾಯ ಸುಧಾರಣೆಯ ಪ್ರಮುಖ ಲಕ್ಷಣಗಳು:

  1. ತನ್ನ ಸಾಮ್ರಾಜ್ಯದ ಎಲ್ಲಾ ಭೂಮಿಯನ್ನು ಅಳತೆಮಾಡಿಸಿ ಅದರ ಉಳುಮೆ ಮತ್ತು ಉತ್ಪನ್ನದ ಆಧಾರದ ಮೇಲೆ ಕಂದಾಯವನ್ನು ನಿಗದಿಪಡಿಸಿದನು.
  2. ಭೂಮಿಯನ್ನು ಉತ್ತಮ, ಮಧ್ಯಮ ಮತ್ತು ಕನಿಷ್ಠ ಎಂದು ಮೂರು ಭಾಗಗಳಾಗಿ ಮಾಡಿ, ಹುಟ್ಟುವಳಿಯನ್ನು ನಿರ್ಧರಿಸುತ್ತಿದ್ದರು.
  3. ಬೇಸಾಯಗಾರರು ಭೂ ಉತ್ಪಾದನೆಯ ಸರಾಸರಿಯನ್ನು ಲೆಕ್ಕಹಾಕಿ ಅದರ 1/3 ಭಾಗವನ್ನು ಸರ್ಕಾರಕ್ಕೆ ಕಂದಾಯದ ರೂಪದಲ್ಲಿ ಸಲ್ಲಿಸಬೇಕಾಗಿತ್ತು.
  4. ಭೂ ಕಂದಾಯವನ್ನು ಹಣದ ರೂಪದಲ್ಲಿ ಇಲ್ಲವೆ ದವಸ ಧಾನ್ಯಗಳ ರೂಪದಲ್ಲಿ ಸಲ್ಲಿಸಬಹುದಾಗಿತ್ತು.
  5. ಸರಕಾರವು ಪ್ರತಿಯೊಬ್ಬ ಬೇಸಾಯಗಾರನಿಗೂ ಪಟ್ಟ ವನ್ನು ಕೊಡುತ್ತಿತ್ತು. ಅದರಲ್ಲಿ ಆತನು ಸರ್ಕಾರಕ್ಕೆ ನೀಡಬೇಕಾದ ಭೂ ಕಂದಾಯದ ಪ್ರಮಾಣವನ್ನು ನಮೂದಿಸಲಾಗುತ್ತಿತ್ತು.
  6. ಕಂದಾಯ ಅಧಿಕಾರಿಗಳಿಗೆ ಕಂದಾಯ ನಿಗಧಿ ಮಾಡುವಾಗ ಉದಾರವಾಗಿರಲು ಮತ್ತು ವಸೂಲಿಮಾಡುವಾಗ ಕಠಿಣವಾಗಿರಲು ನಿರ್ದೇಶನ ನೀಡಲಾಗಿತ್ತು.
  7. ಕ್ರಾಮ ಇಲ್ಲವೆ ಪ್ರಕೃತಿ ವಿಕೋಪದ ವೇಳೆಯಲ್ಲಿ ಸರ್ಕಾರಿ ಉಗ್ರಾಣಗಳಲ್ಲಿನ ಆಹಾರಧಾನ್ಯಗಳನ್ನು ಕಡಿಮೆ ದರದಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿತ್ತು.
  8. ಯುದ್ಧ ಕಾಲದಲ್ಲಿ ಬೆಳೆಯನ್ನು ಹಾಳುಮಾಡದಂತೆ ಸೈನಿಕರಿಗೆ ಕಟ್ಟಪ್ಪಣೆ ಮಾಡಲಾಗಿತ್ತು. ಬೆಳೆ ಹಾಳಾದರೆ ರೈತರಿಗೆ ಪರಿಹಾರ ಹಣ ನೀಡಲಾಗುತ್ತಿತ್ತು.
  9. ಕಂದಾಯವನ್ನು ವಸೂಲಿ ಮಾಡಲು ಅಮೀರ್, ಮುಖದ್ದಂ, ಶೇಕ್‌ದಾರ್, ಕುನಂಗೊ ಮತ್ತು ಪಟ್ಟಾರಿಗಳ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು.

ಶೇರ್‌ಶಹನಿಗೆ ರೈತ ಸಮುದಾಯದ ಕಲ್ಯಾಣದ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ʻʻಕೃಷಿಕರು ನಿರ್ದೋಷಿಗಳು, ಅವರನ್ನು ಪಮನಮಾಡಿದರೆ, ಅವರು ಊರುಗಳನ್ನು ಬಿಟ್ಟು ಗುಳೆ ಹೋಗುತ್ತಾರೆ. ಇದರಿಂದ ರಾಷ್ಟ್ರನಾಶವಾಗುತ್ತದೆ. ಪುನಃ ಅಂತಹ ಹಳ್ಳಿಗಳನ್ನು ಯಥಾಸ್ಥಿತಿಗೆ ತರಲು ಕಷ್ಟವಾಗುತ್ತದೆ ಹಾಗೂ ಬಹುಕಾಲ ತೆಗೆದುಕೊಳ್ಳುತ್ತದೆ” ಎಂದು ಹೇಳುತ್ತಿದ್ದನು. ಅಲ್ಲದೆ ರೈತರ ಶೋಷಣೆಯಿಂದ ಸುಲ್ತಾನರು ಪತನವಾಗುತ್ತಿದ್ದುದನ್ನು ಶೇ‌ರ್ ಷಾ ಆರಿತಿದ್ದನು.

8. ಇತರೆ ಆದಾಯಗಳು

ರೈತರಿಂದ ಬರುವ ಭೂ-ಕಂದಾಯವಲ್ಲದೆ, ವಾಣಿಜ್ಯ, ಟಂಕಸಾಲೆ, ಕಾಣಿಕೆಗಳು, ಜಿಜಿಯಾ ಸುಂಕ, ಉಪ್ಪಿನ ತೆರಿಗೆ, ವಾರಸುದಾರರಿಲ್ಲದ ಅಸ್ತಿ ಮುಂತಾದವುಗಳು ಕೇಂದ್ರ ವರಮಾನದ ಇತರೆ ಮೂಲಗಳಾಗಿದ್ದವು. ಸರ್ಕಾರವು ಕಚ್ಚಾವಸ್ತುಗಳ ಹಾಗೂ ಸಿದ್ಧ ವಸ್ತುಗಳ ಮೇಲೆ ಸಾಗಾಣಿಕ ತೆರಿಗೆ ವಿಧಿಸಿತ್ತು. ಸಾಮಂತರು, ಸರದಾರರು, ಅಧಿಕಾರಿಗಳು ಮತ್ತು ಸಂದರ್ಶಕರು ಅರಸಾಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.

9. ನಾಣ್ಯ ಸುಧಾರಣೆ :

ಶೇರ್‌ಶಹ ನಾಣ್ಯ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ಜಾರಿಗೆ ತಂದನು, ನಾಣ್ಯಗಳಿಗೆ ಬಳಸುವ ಲೋಹಗಳಲ್ಲಿ, ಅವುಗಳ ಪ್ರಮಾಣದಲ್ಲಿ ಮತ್ತು ವಿನಿಮಯದಲ್ಲಿ ಕಂಡುಬಂದಿದ್ದ ಗೊಂದಲ ನಿವಾರಿಸಲು ಪ್ರಯತ್ನಿಸಿದನು. ಹಳೆಯ ನಾಣ್ಯಗಳ ಚಲಾವಣೆಯನ್ನು ನಿಲ್ಲಿಸಿ ಹೊಸ ನಾಣ್ಯ ಪದ್ಧತಿಯನ್ನು ಜಾರಿಗೆ ತಂದನು. ನಿರ್ದಿಷ್ಟ ತೂಕವನ್ನು ಹೊಂದಿದ್ದ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು. ಶೇರ್‌ಶಹನ ಬೆಳ್ಳಿಯ ರೂಪಾಯಿ 180 ಡ್ರೈನ್ ತೂಕವಿದ್ದಿತ್ತು. ಈ ರೂಪಾಯಿ (ಅದರಲ್ಲಿದ್ದ ಬರಹ ಹೊರತಾಗಿ) ಪೂರ್ಣ ಮೊಗಲ್ ಕಾಲದಲ್ಲಿ ಜಾರಿಯಲ್ಲಿತ್ತು. ಅಲ್ಲದೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಕ್ರಿ.ಶ. 1835ರವರೆಗೆ ಈ ನಾಣ್ಯವನ್ನು ಮುಂದುವರಿಸಿತು.

ಆಗ್ರಾ, ಗ್ವಾಲಿಯರ್, ಲಖ್‌ನೌ, ಸಸರಾಮ, ಉಜ್ಜಯಿನಿ ಮುಂತಾದ ಕಡೆ ಟಂಕಶಾಲೆಗಳಿದ್ದವು. ಈ ಟಂಕಶಾಲೆಗಳು ಶೇರ್‌ಶಹನ ಸಾಮ್ರಾಜ್ಯದ ಗಡಿಗಳನ್ನು ಸೂಚಿಸುತ್ತವೆ.

10. ಲೋಕೋಪಯೋಗಿ ಕಾರ್ಯಗಳು

ಶೇರ್‌ಸಹನು ರಾಜ್ಯದ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲು ತೀವ್ರವಾದ ಆಸಕ್ತಿಯನ್ನು ಹೊಂದಿದ್ದನು. ಸಾಮ್ರಾಜ್ಯದ ಬೇರೆ ಬೇರೆ ಭಾಗಗಳು ರಾಜಧಾನಿಯೊಡನೆ ಸಂಪರ್ಕ ಹೊಂದುವಂತೆ ಹಲವು ಹೊಸ ಮಾರ್ಗಗಳನ್ನು ನಿರ್ಮಿಸಿದನು ಮತ್ತು ಹಳೆಯ ಮಾರ್ಗಗಳನ್ನು ದುರಸ್ತಿಗೊಳಿಸಿದನು. ತನ್ನ ರಾಜಧಾನಿಯನ್ನು ಸಂಪರ್ಕಿಸುವಂತೆ ನಾಲ್ಕು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಿದನು. ಅವುಗಳೆಂದರೆ,

|ಬಾಂಗ್ಲಾದೇಶದ ಸೋನಾ‌ರ್‌ಗಾಂವ್‌ನಿಂದ ಆಗ್ರಾ, ದೆಹಲಿಯ ಮುಖಾಂತರ ಲಾಹೋರನ್ನು ಸಂಪರ್ಕಿಸಿದ್ದಿತು. ಇದನ್ನು “ಸಡಕ್-ಇ-ಅಜಂ” ಎನ್ನಲಾಗಿತ್ತು.

  1. ಆಗ್ರಾದಿಂದ ಬರ್ಹಾನಪುರಕ್ಕೆ ಹೋಗುವ ಮಾರ್ಗ
  2. ಆಗ್ರಾದಿಂದ ಚಿತೋಡಕ್ಕೆ ಹೋಗುವ ಮಾರ್ಗ
  3. ಲಾಹೋರ್‌ನಿಂದ ಮುಲ್ತಾನಕ್ಕೆ ಹೋಗುವ ಮಾರ್ಗ.

ಈ ಮೇಲಿನ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ನೆಡಿಸಿದನು. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಎಂಟು ಕಿಲೋಮೀಟರಿಗೆ ಸರಾಯ್ ಅಥವಾ ಅತಿಥಿಗೃಹಗಳನ್ನು ಕಟ್ಟಿಸಿದನು. ಸರಾಯ್‌ಗಳಲ್ಲಿ ಅನ್ನ ವಸತಿ ದೊರೆಯುತ್ತಿತ್ತು.

ಹಿಂದೂ ಮತ್ತು ಮುಸ್ಲಿಂ ಧರ್ಮಿಯರಿಗೆ ಪ್ರತ್ಯೇಕವಾಗಿ ವಸತಿ ಸೌಕರ್ಯವನ್ನು ಒದಗಿಸಲಾಗುತ್ತಿತ್ತು. ಶೇರ್ಶಹ ತನ್ನ ರಾಜ್ಯಾದ್ಯಂತ ಒಟ್ಟು 1700 ಸರಾಯ್ಗಳನ್ನು ಕಚ್ಚಿಸಿದ್ದ. ದಾಗಿ ಖನುಂಗೋ ರವರ ಪ್ರಕಾರ ಸಾನಾಯ್ಗಳು “ಸಾಮ್ರಾಜ್ಯದ ವಿಜವಾದ ರಕ್ತಪಾಡಿಗಳಾಗಿದ್ದವು”, ಸೈನ್ಯಗಳ ಚಲನವಲನಕ್ಕೆ ಮಾತ್ರವೇ ಅಲ್ಲದೆ ಅವುಗಳು ರಕ್ಷಣೆ ಮತ್ತು ಸುದ್ದಿ ವಿನಿಮಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದ್ದವು. ವ್ಯಾಪಾರ, ವಾಣಿಜ್ಯ ಮತ್ತು ಅಂಚೆ ವ್ಯವಸ್ಥೆಗೆ ಸಹಕಾರಿಯಾಗಿದ್ದವು.

ಶೇರ್‌ಶಹನ ವ್ಯಕ್ತಿತ್ವ :

ಮಧ್ಯಯುಗದ ಭಾರತೀಯ ಇತಿಹಾಸದಲ್ಲಿ ಶೇ‌ರ್ಷಹ ಆಕರ್ಷಕ ವ್ಯಕ್ತಿ. ಬದುಕಿನ ಎಲ್ಲಾ ಕ್ಷೇತ್ರಗಳ ಪೂರ್ಣ ಅರಿವಿದ್ದ ಇವನು ದೇಶಕ್ಕೆ ಅತ್ಯುತ್ತಮ ಅಡಳಿತ ನೀಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ದೈತ್ಯ ಶಕ್ತಿಯಾದ ಮೊಘಲರನ್ನು ಭಾರತದಿಂದ ಹೊರಹಾಕಿ, ಪ್ರಬಲ ಸಾಮ್ರಾಜ್ಯವನ್ನು ಸಂಘಟಿಸಿದ್ದು ಆತನ ಅದ್ಭುತವಾದ ಸಾಧನೆ, ಇವನ ಸುಧಾರಣೆಗಳು ಮೊಗಲ್ ದೊರೆ ಆಕ್ಟರನ ಸಾಧನೆಗಳಿಗೆ ದಾರಿದೀಪವಾಯಿತು. ಭ್ರಷ್ಟಾಚಾರ ಮುಕ್ತವಾದ, ಕಳ್ಳತನ ದರೋಡೆ ಮತ್ತು ಕೊಲೆಗಳಿಲ್ಲದ ಆದರ್ಶ ಸಮಾಜದ ನಿರ್ಮಾಪಕನೆಂಬುದನ್ನು ಮರೆಯುವಂತಿಲ್ಲ, ಸಸಾರಾಂನಲ್ಲಿ ಅವನೇ ಅವನಿಗಾಗಿ ಕಟ್ಟಿಸಿರುವ ಗೋರಿಯು ಅದ್ಭುತ ಕೌಶಲ್ಯದ ಪ್ರತೀಕವಾಗಿದೆ. ದೆಹಲಿ ಸುಲ್ತಾನರ ವಾಸ್ತುಶಿಲ್ಪದ ವೈಭವವನ್ನು ಈ ಗೋರಿಯಲ್ಲಿ ನೋಡಬಹುದು. ದೆಹಲಿಯಲ್ಲಿ ಯಮುನಾ ನದಿಯ ದಡದ ಮೇಲೆ ನವೀಸವಾದ ನಗರವನ್ನು ನಿರ್ಮಾಣ ಮಾಡಿದ. ಇದನ್ನು ʻಪುರಾನ ಕಿಲಾ’ ಎನ್ನುತ್ತಾರೆ. ಇವರಲ್ಲಿ ಸುಂದರವಾದ ಮಸೀದಿಯೊಂದಿದೆ.

ಶೇರ್ ಶಹ ಧಾರ್ಮಿಕವಾಗಿ ಉದಾರನೀತಿಯನ್ನು ಹೊಂದಿಲ್ಲದಿದ್ದರೂ ಆಸಹಿಷ್ಣುವಾಗಿರಲಿಲ್ಲ. ಶೇರ್ ಶಹನ ಮರಣಾನಂತರ ಅಧಿಕಾರಕ್ಕೆ ಬಂದ ಉತ್ತಾರಾಧಿಕಾರಿಗಳು ಅಸಮರ್ಥರಾಗಿದ್ದರು. ಅವರ ಅಧಿಕಾರ ಲಾಲಸೆ ಮೊಗಲ್ ದೊರೆ ಹುಮಾಯೂನ್ ಮರಳಿ ಅಧಿಕಾರಕ್ಕೆ ಬರಲು ಅವಕಾಶವಾಯಿತು. ಅಲ್ಲಿಗೆ ಸೂರ್ ವಂಶದ ಆಳ್ವಿಕೆ ಅಂತ್ಯಗೊಂಡಿತು.

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್ (ಕ್ರಿ.ಶ. 1526-1530)

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್ (ಕ್ರಿ.ಶ. 1526-1530)

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬ‌ರ್ ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮಾಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ಕೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ಶೇಖ್ ಮಿರ್ಜಾ, ತಾಯಿ ಕುತ್ಲುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾಸ್ಸ್‌-ಅಕ್ಸಿಯಾನದಲ್ಲಿನ ಫ‌ರ್‌ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮ‌ರ್‌ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರವನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬರ್‌ನು ಫರ್‌ಘಾನವನ್ನು ಪುನ: ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿಹೋಗಿತ್ತು.

ಫರಘಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಆಲಂಖಾನರು ಬಾಬರ್‌ನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (ಕ್ರಿ.ಶ. 1526 ಎಪ್ರೀಲ್‌ 21): ಕ್ರಿ.ಶ. 1526 ಎಪ್ರೀಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಬೋದಿಯ ಚಿಕ್ಕಪ್ಪನಾದ ಆಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್. ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಬೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂದಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ಬೆಹಲಿ ದೊರೆ ಇಬ್ರಾಹಿಂದೋಡಿ ರಣರಂಗದಲ್ಲಿ ಸಾವನ್ನಪ್ಪಿದನು.

3.ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.

  1. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  2. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  3. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.

ಬಾಬರನ ವಿಜಯಕ್ಕೆ ಕಾರಣಗಳು

  1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
  2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈತ್ಯ.
  3. ಬಲಾಡ್ಯವಾದ ಫಿರಂಗಿ ಪಡೆ
  4. ಭಾರತೀಯರಲ್ಲಿದ್ದ ಅನೈಕ್ಯತೆ
  5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್‌ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆ ಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಅಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ʻಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು. ರಾಣಾ ಮತ್ತು ರಜಪೂತರ ಮೇಲೆ ಜಿಹಾನ್ ಅಥವಾ ಧರ್ಮಯುದ್ಧ ಹಾಡುವುದಾಗಿ ತಿಳಿಸಿದ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ. 16 ರಂದು ಕಣ್ವ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ʻಯುದ್ಧತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾವೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ದ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಜೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಅಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ ಇಬ್ರಾಹಿಂ ಬೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಅಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನರ ನಡುವೆ ಕಾಳಿಗೆ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಭಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ : ಬಾಬರ್‌ನು ಮಧ್ಯಕಾಲೀನ ಏಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”. ಗುಲ್‌ಬದನ್ ಬೇಗಂ ತನ್ನ “ಹುಮಾಯೂನ್‌ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ।। ವಿ.ಎ. ಸ್ಮಿತ್ ಬಾಬರ್‌ ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಶಾಸನಶಾಸ್ತ್ರದ ಅರ್ಥ,ಉದ್ದೇಶ,ಸ್ವರೂಪ,ವ್ಯಾಪ್ತಿ ಮತ್ತು ಮಹತ್ವ

ಶಾಸನಶಾಸ್ತ್ರದ ಅರ್ಥ,ಉದ್ದೇಶ,ಸ್ವರೂಪ,ವ್ಯಾಪ್ತಿ ಮತ್ತು ಮಹತ್ವ

ಶಾಸನಶಾಸ್ತ್ರದ ಅರ್ಥ

ಪುರಾತತ್ವ ಶಾಸ್ತ್ರದ ಬಹುಮುಖ್ಯ ಶಾಖೆಯೆಂದರೆ ಶಾಸನಶಾಸ್ತ್ರ. ಇದನ್ನು ಇಂಗ್ಲೀಷಿನಲ್ಲಿ ಎಪಿಗ್ರಫಿ ಎಂದು ಕರೆಯಲಾಗುತ್ತದೆ.“Epigraphy” ಎಂಬ ಪದವು ಗ್ರೀಕ್ ಭಾಷೆಯಿಂದ ಬಂದದ್ದು.

  • “Epi” (ἐπί) = ಮೇಲೆ
  • “Graphein” (γράφειν) = ಬರೆಯುವುದು

ಅದರ ಅರ್ಥ: ಮೇಲೆ ಬರೆಯುವುದು ಅಥವಾ “ಮೇಲ್ಮೈಯ ಮೇಲೆ ಬರಹ”.

ಈ ಪದವು ನಂತರ ಲ್ಯಾಟಿನ್ ಭಾಷೆಯ ಮೂಲಕ ಇಂಗ್ಲಿಷ್‌ಗೆ ಸೇರಿ, 18ನೇ ಮತ್ತು 19ನೇ ಶತಮಾನಗಳಲ್ಲಿ ವಿದ್ಯಾಶಾಖೆಯಾಗಿ ಬಳಕೆಗೆ ಬಂದಿದೆ.

ಶಾಸನಶಾಸ್ತ್ರ (Epigraphy) ಎಂದರೆ ಕಲ್ಲು, ಲೋಹ, ಮಣ್ಣು, ಗೋಡೆ, ತಂಬೆ, ನಾಣ್ಯಗಳು ಮುಂತಾದ ಗಟ್ಟಿಯಾದ ವಸ್ತುಗಳ ಮೇಲೆ ಕೆತ್ತಿದ ಅಥವಾ ಕೆತ್ತನೆ ಮಾಡಿದ ಲಿಪಿ-ಲೇಖನಗಳ ಅಧ್ಯಯನ.

ಇದರಲ್ಲಿ ಮುಖ್ಯವಾಗಿ:

  • ಪ್ರಾಚೀನ ಲಿಪಿಗಳನ್ನು ಓದುವುದು
  • ಅವುಗಳನ್ನು ವಿವರಣೆ ಮಾಡಿ ಭಾಷಾಂತರಿಸುವುದು
  • ಇತಿಹಾಸ, ರಾಜಕೀಯ, ಸಮಾಜ, ಧರ್ಮ ಹಾಗೂ ಆರ್ಥಿಕ ಸ್ಥಿತಿಗಳ ಬಗ್ಗೆ ಮಾಹಿತಿಯನ್ನು ವಿಶ್ಲೇಷಿಸುವುದು

ಸರಳವಾಗಿ ಹೇಳುವುದಾದರೆ, ಗಟ್ಟಿಯಾದ ಮೇಲ್ಮೈಗಳ ಮೇಲೆ ಕೆತ್ತಿದ ಬರಹಗಳ ಅಧ್ಯಯನವೇ ಶಾಸನಶಾಸ್ತ್ರ.ಬರಹಗಳ ಅಧ್ಯಯನಶಾಸ್ತ್ರ ಎಂಬ ಅರ್ಥದಲ್ಲಿಯೂ ಇದನ್ನು ಬಳಸಲಾಗುತ್ತದೆ.

ಶಾಸನಶಾಸ್ತ್ರವು ಅಕ್ಷರಗಳ (graphemes) ಗುರುತಿಸುವಿಕೆ, ಅವುಗಳ ಅರ್ಥ ಸ್ಪಷ್ಟೀಕರಣ, ಅವುಗಳ ದಿನಾಂಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಣ, ಹಾಗೂ ಆ ಬರಹವನ್ನು ರಚಿಸಿದ ವ್ಯಕ್ತಿಗಳ ಮತ್ತು ಸಮಾಜದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಳಗೊಂಡಿದೆ. ಶಾಸನಗಳನ್ನು ಅಧ್ಯಯನ ಮಾಡುವ ವ್ಯಕ್ತಿಯನ್ನು ಶಾಸನಶಾಸ್ತ್ರಜ್ಞ (Epigraphist) ಎಂದು ಕರೆಯುತ್ತಾರೆ.

ಇದು ಮುಖ್ಯವಾಗಿ ಬರಹದ ರೂಪ, ಲಿಪಿ, ಭಾಷೆ ಮತ್ತು ಶೈಲಿಯ ಅಧ್ಯಯನ ಮಾಡುತ್ತದೆ. ಶಾಸನದಲ್ಲಿರುವ ಇತಿಹಾಸದ ಘಟನೆಗಳ ವಿವರಣೆ ಮಾಡುವುದು ಇತಿಹಾಸಕಾರರ ಕೆಲಸವಾಗಿದ್ದರೆ, ಶಾಸನವನ್ನು ಓದಿ, ಪುನರ್‌ರಚಿಸಿ, ದಿನಾಂಕ ನಿಗದಿಪಡಿಸುವುದು ಶಾಸನಶಾಸ್ತ್ರಜ್ಞರ ಕಾರ್ಯವಾಗಿದೆ.

ಶಾಸನಶಾಸ್ತ್ರದ ಅಭಿವೃದ್ಧಿ

ಯೂರೋಪಿನಲ್ಲಿ 16ನೇ ಶತಮಾನದಿಂದ ಶಾಸನಶಾಸ್ತ್ರವು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಆರಂಭವಾಯಿತು. ವಿಶೇಷವಾಗಿ ಲ್ಯಾಟಿನ್ ಮತ್ತು ಗ್ರೀಕ್ ಶಾಸನಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಕಾರ್ಯ ನಡೆಯಿತು.

ಈ ಕ್ಷೇತ್ರದ ಮಹತ್ವದ ಸಾಧನೆಯಿಂದಾಗಿ ಈಜಿಪ್ಟ್‌ನ ಹೈರೋಗ್ಲಿಫ್ ಲಿಪಿಯನ್ನು ರೋಸೆಟ್ಟಾ ಶಿಲಾಶಾಸನದ ಸಹಾಯದಿಂದ ಓದುವುದು ಗಮನಾರ್ಹವಾಗಿದೆ. ಈ ಶಿಲಾಶಾಸನದಲ್ಲಿ ಗ್ರೀಕ್, ಡೆಮೋಟಿಕ್ ಮತ್ತು ಹೈರೋಗ್ಲಿಫ್ ಲಿಪಿಗಳಲ್ಲಿ ಬರಹವಿದ್ದು, ಅದನ್ನು ಜೀನ್-ಫ್ರಾಂಸ್ವಾ ಶಾಂಪೊಲಿಯನ್ ಮತ್ತು ಥಾಮಸ್ ಯಂಗ್ ಅವರು ವಿವೇಚಿಸಿದರು.

ಭಾರತದಲ್ಲಿ ಶಾಸನಶಾಸ್ತ್ರ

ಭಾರತವು ಶಾಸನ ಸಂಪತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶವಾಗಿದೆ. ಇಂದಿನವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಶಾಸನಗಳು ಪತ್ತೆಯಾಗಿವೆ. ಮೌರ್ಯ ಸಾಮ್ರಾಟ ಅಶೋಕ (ಕ್ರಿ.ಪೂ. 3ನೇ ಶತಮಾನ) ಕಾಲದಿಂದ ಹಿಡಿದು ಮಧ್ಯಯುಗದ ಅಂತ್ಯದವರೆಗೆ ಭಾರತೀಯ ಇತಿಹಾಸ ತಿಳಿಯಲು ಶಾಸನಗಳು ಮಹತ್ವದ ಮೂಲಗಳಾಗಿವೆ.

1886ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ (Archaeological Survey of India) ಶಾಸನ ಶಾಖೆ ಸ್ಥಾಪಿಸಲಾಯಿತು. ನಂತರ ಅದು ಊಟಿ ಮತ್ತು ಬಳಿಕ ಮೈಸೂರು ನಗರಕ್ಕೆ ಸ್ಥಳಾಂತರಗೊಂಡಿತು. ಇ. ಹುಲ್ಟ್ಷ್, ವಿ. ವೆಂಕಯ್ಯ, ಹಚ್. ಕೃಷ್ಣ ಶಾಸ್ತ್ರಿ, ಡಿ. ಸಿ. ಸರ್ಕಾರ್ ಮುಂತಾದ ಪಂಡಿತರು ಭಾರತೀಯ ಶಾಸನ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಭಾರತದಲ್ಲಿ ಬರವಣಿಗೆಯ ಪ್ರಾಚೀನತೆ

ನಮ್ಮ ದೇಶದ ಅತ್ಯಂತ ಪ್ರಾಚೀನ ಬರವಣಿಗೆಯು ಕ್ರಿ.ಪೂ. ೨೫೦೦- ಕ್ರಿ.ಪೂ. ೧೫೦೦ರ ಕಾಲದ ಸಿಂಧೂ ಸಂಸ್ಕೃತಿಯ ಮಣ್ಣಿನ ಮುದ್ರೆಗಳ ಮೇಲೆ ದೊರೆತಿದೆ. ಆದರೆ ಈ ಲಿಪಿಯನ್ನಿನ್ನೂ ಸುಸಂಬದ್ಧವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಅಶೋಕನ ಶಾಸನಗಳನ್ನು ಜನಸಾಮಾನ್ಯರು ಓದಿ ತಿಳಿದುಕೊಳ್ಳಬೇಕೆಂಬ ಉದ್ದೇಶಕ್ಕಾಗಿ ಬರೆಸಲಾಗಿತ್ತೆಂಬುದನ್ನು ಪರಿಗಣಿಸಿದರೆ ಆ ಕಾಲಕ್ಕಿಂತ ಮೊದಲೇ ಕೆಲವು ಜನರಿಗಾದರೂ ಓದು ಬರಹ ತಿಳಿದಿತ್ತೆಂಬುದನ್ನು ಅಲ್ಲಗಳೆಯುವಂತಿಲ್ಲ.

ಶಾಸನಾಧ್ಯಯನದ ಆದ್ಯ ಪ್ರವರ್ತಕರು

ವಿಲಿಯಂ ಜೋನ್ಸ್, ಲ್ಯಾನ್ಸನ್ ಮೊದಲಾದ ಪಾಶ್ಚಾತ್ಯ ಪಂಡಿತರು ಬ್ರಾಹ್ಮಿ ಲಿಪಿ ಯನ್ನು ಓದಿ ತಿಳಿದುಕೊಳ್ಳಲು ಬಹಳ ಶ್ರಮಿಸಿದರು. ಕೊನೆಗೆ ೧೮೩೭ರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬ ವಿದ್ವಾಂಸನು ಬ್ರಾಹ್ಮಿಲಿಪಿಯ ಒಗಟನ್ನೊಡೆಯಲು ಸಮರ್ಥನಾದನು. ಆದಾಗ್ಯೂ ಬ್ರಾಹ್ಮಿಲಿಪಿಯ ವೈಜ್ಞಾನಿಕವಾದ ಅಕ್ಷರಮಾಲಿಕೆಯನ್ನು ವ್ಯವಸ್ಥೆಗೊಳಿಸಿದ ಕೀರ್ತಿ ಬ್ಯುಹ್ವಲರ್ ನೆಂಬ ಜರ್ಮನ್ ಪಂಡಿತನಿಗೆ ಸಲ್ಲುತ್ತದೆ. ಅಂತೆಯೆ, ಮ್ಯಾಸ್ಸನ್, ಲ್ಯಾನ್ಸನ್, ಕನ್ನಿಂಗ್‌ಹ್ಯಾಮ್ ಮೊದಲಾದ ವಿದ್ವಾಂಸರ ಕೊಡುಗೆ ಗಣನೀಯವಾದುದು.

ಶಾಸನದ ಉದ್ದೇಶ

1. ಶಾಸನವನ್ನು ಹಾಕಿಸಿದಂತಹ ಅಥವಾ ಅದಕ್ಕೆ ಕಾರಣನಾದ ವ್ಯಕ್ತಿಯು ಉದ್ದೇಶವನ್ನು ಇಟ್ಟುಕೊಂಡೇ ಬರೆಸಿರುತ್ತಾನೆ.

2. ಅವನು ನಾಯಕ/ಅರಸನಾಗಿದ್ದರೆ ತನ್ನ ಯಶೋಗಾಥೆಯನ್ನು, ದಿಗ್ವಿಜಯವನ್ನು ಸಾರುವ ಉದ್ದೇಶ ಹೊಂದಿರುತ್ತಾನೆ.

3. ತನ್ನ ಕಾನೂನು ಶಾಸನವಾಗಿರುವಾಗ ಅಂತಹ ಶಾಸನವನ್ನು ಜನಸಾಮಾನ್ಯರಿಗೂ ಜಾಹೀರುಮಾಡುವ ಇರಾದೆ ಅವನದಾಗಿರುತ್ತದೆ.

4. ತಾನು ಕಟ್ಟಿಸಿದ ದೇವಾಲಯದ ಮಾಹಿತಿಯು ಅಚಂದ್ರಾಕರವಾಗಿ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಶಾಸನವನ್ನು ಅದರ ಮಾಹಿತಿಯನ್ನು ಕೆತ್ತಿಸಿರುತ್ತಾನೆ.

5. ತಾನು ನೀಡಿದ ದಾನವನ್ನು ಮುಂದೆ ಬರಲಿರುವ ಜನರು ಯಾರೂ ಉಲ್ಲಂಘನೆ ಮಾಡದಿರಲಿ ಎಂಬ ಶಾಪಭೀತಿಯನ್ನು ತುಂಬಿ ಶಾಸನವನ್ನು ಹೊರಡಿಸಿರುತ್ತಾರೆ.

6. ತಮ್ಮ ಕಾಲದ ಗ್ರಾಮಾಡಳಿತ ಯಾವ ರೀತಿ ಇದೆ, ಅದನ್ನು ಮುಂದೆಯೂ ಅನುಚಾನವಾಗಿ ನಡೆದುಕೊಂಡು ಹೋಗಲಿ ಎಂಬ ಉದ್ದೇಶದಿಂದ ಶಾಸನವನ್ನು ಮಾಹಿತಿ ಹಂಚುವ ಸಲುವಾಗಿ ಶಾಸನ ಹಾಕಿಸಿರುವುದು ಕಂಡುಬರುತ್ತದೆ.

7. ಭೂಮಿಯ ಹಕ್ಕುದಾರಿಕೆಯ ವ್ಯಾಪ್ತಿಯನ್ನು ತಿಳಿಸಲು ಅದರ ಮೂಲೆ-ಮೂಲೆಗೂ ಗಡಿಗಲ್ಲು ಶಾಸನವಾಗಿರಬಹುದು.

8. ತನ್ನ ದೇಶ,ಅರಸ,ಸ್ತ್ರೀಯರ ಅಥವಾ ದನ,ಕರುಗಳ ಸಲುವಾಗಿ ಹೋರಾಡಿ ಬಲಿದಾನಗೈದ ವೀರರ ನೆನಪಿನಲ್ಲಿ ಶಾಸನವನ್ನು ನೆಟ್ಟಿರುವುದು ಕಂಡುಬರುತ್ತದೆ.

ಹೀಗೆ ಶಾಸನವು ಅನೇಕ ಉದ್ದೇಶಗಳನ್ನು ಹೊಂದಿರುವುದನ್ನು ಕಾಣಬಹುದು.

ಶಾಸನದ ಸ್ವರೂಪ

ಶಾಸನವನ್ನು ಕೆಳಕಂಡಂತೆ ವರ್ಗೀಕರಿಸಬಹುದಾಗಿದ್ದು ಅದೇ ಅದರ ಸ್ವರೂಪವಾಗಿದೆ.

೧. ರಾಜಶಾಸನ : ರಾಜನ ಆಜ್ಞೆಯನ್ನು ಸಾರುವ ಲೇಖನ.

೨. ತಾಮ್ರಶಾಸನ : ಅರಸನೇ ಮೊದಲಾದವರು ಕೊಟ್ಟ ಭೂದಾನ ಮುಂತಾದವುಗಳನ್ನು ದಾಖಲಿಸುವ ತಾಮ್ರ ಪಟ್ಟಿಕೆಗಳ ಮೇಲಿನ ಬರಹ.

೩. ದಾನಶಾಸನ : ವಿವಿಧ ರೀತಿಯ ದಾನಗಳನ್ನು ದಾಖಲಿಸುವ, ತಾಮ್ರಶಾಸನದಿಂದ ಭಿನ್ನವಾದ, ಬರಹ.

೪. ಜಯಪತ್ರ : ವಿವಾದವೊಂದರಲ್ಲಿ ಯಾವುದೊಂದು ಪಕ್ಷದ ಗೆಲುವನ್ನು ಸಾರುವ ಬರಹ.

೫. ಯೂಪಶಾಸನ : ಯಜ್ಞಯಾಗಾದಿಗಳಲ್ಲಿ ಬಳಸುವ ಯೂಪ-ಸ್ತಂಭದ ಮೇಲಣ ಬರಹ. ಯಾಗದ ಸಂದರ್ಭದಲ್ಲಿ ಬಲಿ ಕೊಡಲಿರುವ ಪಶುಗಳನ್ನು ಕಟ್ಟಿಹಾಕಲೆಂದು ನೆಟ್ಟಿರುವ ಕಂಬಗಳೇ ಯೂಪಸ್ತಂಭ ಅಥವಾ ಶಾಸನಗಳು.

೬. ಸ್ತಂಭ ಶಾಸನ : ದೇವಾಲಯ ಮುಂತಾದ ವಾಸ್ತುವಿನ ಭಾಗವಾದ ಸ್ತಂಭ ಅಥವಾ ಸ್ಮಾರಕಸ್ತಂಭದ ಮೇಲಿನ ಬರಹ.

೭. ಪ್ರತಿಮಾಶಾಸನ : ಕಲ್ಲಿನ ದೇವತಾ ವಿಗ್ರಹಗಳ ಪೀಠದ ಮೇಲೆ ಅಥವಾ ಧಾತುನಿರ್ಮಿತ ಮೂರ್ತಿಗಳ ಹಿಂಭಾಗದಲ್ಲಿ ಕೆತ್ತಿದ ಬರಹ.

೮. ವಿಜಯಶಾಸನ : ಯುದ್ಧದಲ್ಲಿ ರಾಜನ ಗೆಲುವಿನ ಘೋಷಣೆಯನ್ನು ಹೊಂದಿದ ಬರಹ.

೯. ವೀರಗಲ್ಲು: ನಾಡಿಗಾಗಿ ಮಡಿದ ವೀರನನ್ನು ಸ್ಮರಿಸುವ ಬರಹ. ಈ ಬರಹವು ಕೆಲವೊಮ್ಮೆ ಮೃತನ ಪರಿವಾರಕ್ಕೆ ಕೊಡಮಾಡಿದ ದೇಣಿಗೆಯ ವಿವರಗಳನ್ನು ಹೊಂದಿರುತ್ತದೆ.

೧೦. ಮಾಸ್ತಿಕಲ್ಲು : ಯುದ್ಧದಲ್ಲಿ ಮಡಿದ ವೀರನ ಹೆಂಡತಿ ಅವನ ಚಿತೆಯನ್ನು ಪ್ರವೇಶಿಸಿ ಪ್ರಾಣಾರ್ಪಣೆ ಮಾಡುವ ‘ಸಹಗಮನ’ ವನ್ನು ದಾಖಲಿಸುವ ಬರಹ.

೧೧. ತುಜುಗೋಳ್ : ಪ್ರಾಚೀನ ಭಾರತೀಯರಿಗೆ ಗೋವು ಪೂಜ್ಯನೀಯವಾಗಿತ್ತು. ವಿನಿಮಯದ ವಸ್ತುಗಳಲ್ಲೊಂದಾಗಿದ್ದು ಸುವರ್ಣಕ್ಕೆ ಸಮಾನವಾಗಿತ್ತು. ಅವುಗಳನ್ನು ಸೆರೆಹಿಡಿದು ಯುದ್ಧ ಸಾರಿದ ಸಂಕೇತವಾಗಿ ಬಳಸಲಾಗುತ್ತಿತ್ತು. ಈ ರೀತಿ ಸೆರೆ ಸಿಕ್ಕ ಗೋವುಗಳನ್ನು ಸಂರಕ್ಷಿಸಲು ಹೋಗಿ ಹೋರಾಡಿ ಮಡಿದ ವೀರರಿಗೆ ಸಂಬಂಧಿಸಿದ ವೀರಗಲ್ಲುಗಳೇ ತುರುಗೋಳ್‌ಗಳು.

೧೨. ಪೆಣ್ಣುಯ್ಯಲ್ : ಪೆಣ್ಣುಯ್ಯಲ್ ಎಂದರೆ ಹೆಣ್ಣಿನ ಆರ್ತಧ್ವನಿ. ನೆರೆರಾಜ್ಯದ ವೈರಿಗಳು ಕದನಕ್ಕೆ ಬಂದು ಹೆಣ್ಣುಮಕ್ಕಳ ಮಾನಭಂಗಕ್ಕೆ ಪ್ರಯತ್ನಿಸುತ್ತಿದ್ದರು. ಇಂತಹ ಪ್ರಸಂಗಗಳಲ್ಲಿ ವೀರನಾದವನು ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡುತ್ತಿದ್ದನು. ಏರಿಬಂದ ವೈರಿಗಳು ಹೆಂಡಿರ ಮಾನಹರಣಕ್ಕೆ ಪ್ರಯತ್ನಿಸುತ್ತಿದ್ದುದನ್ನು ವೀರಗಲ್ಲು “ಪೆಂಡಿರ ಉಡೆಯರ್ಚುವಲ್ಲಿ” ಎಂಬ ಶಬ್ದದಿಂದ ಸೂಚಿಸುತ್ತದೆ. ಈ ರೀತಿಯ ಶಾಸನಗಳು ಅನೇಕ ಕಡೆ ಕಾಣಸಿಗುತ್ತವೆ.

೧೩. ಎಳಿವೆಸ : ಎಳವೆಸ ಎಂದರೆ ಒಡೆಯನ ಅಪ್ಪಣೆ ಎಂದರ್ಥ. ಆತನ ಉಪ್ಪಿನ ಋಣಕ್ಕಾಗಿ ಹೋರಾಡುವುದು ಇಲ್ಲಿಯ ಮುಖ್ಯ ಧೈಯವಾಗಿದೆ. ಎಳವೆಸ ಯುದ್ಧವಾಗಿದ್ದು ತರಬೇತು ಪಡೆದ ಸೈನ್ಯ ನಿರ್ವಹಿಸುವ ಈ ಸಂಘರ್ಷಣೆ ರಾಜ್ಯದ ಹಣೆಬರಹವನ್ನು ನಿರ್ಧರಿಸುತ್ತಿತ್ತು. ಇಂತಹ ಯುದ್ಧಗಳಲ್ಲಿ ಹೋರಾಡಿ ಮಡಿದವರ ನೆನಪಿಗೆ ನೆಟ್ಟ ವೀರಗಲ್ಲುಗಳೇ ‘ಎಜವೆಸ’ಗಳು. ಉದಾಹರಣೆಗೆ ಮಾವಳಿಯ ಶಾಸನ.

೧೪. ನಿಸಿದಿಗಲ್ಲು: ಸಮಾಧಿ ಮರಣ ಮತ್ತು ನಿಸಿದಿ ಹೊಂದುವ ಪದ್ಧತಿ ಪ್ರಾಚೀನ ಕಾಲದಿಂದಲೂ ಬೆಳದು ಬಂದ ಸಂಪ್ರದಾಯವಾಗಿದೆ. ಜೈನ ಸನ್ಯಾಸಿಗಳು ಮತ್ತು ಗೃಹಸ್ಥರು ಸನ್ಯಾಸನ ವಿಧಿಯಿಂದ ಅಥವಾ ಸಲ್ಲೇಖನ ವ್ರತದಿಂದ ಮರಣವನ್ನಪ್ಪಿದ್ದನ್ನು ಈ ನಿಸಿದಿಗಲ್ಲುಗಳು ತಿಳಿಸುತ್ತವೆ. ನಿಸಿದಿ ಅಥವಾ ನಿಷತ್ ಎಂದರೆ ಕುಳಿತಿರುವುದು ಎಂದರ್ಥ.

೧೫. ಕೂಟಶಾಸನ : ಸ್ವಹಿತಾಸಕ್ತಿಗೆ ಹಾಕಿಸಿದ ಶಾಸನಗಳನ್ನು ಕೂಟಶಾಸನ ಎಂದು ಹೇಳಬಹುದು. ಕೂಟಶಾಸನದಲ್ಲಿ ಸುಳ್ಳು ದಾಖಲೆಗಳಿರುತ್ತವೆ. ಆದುದರಿಂದಲೇ ಇವುಗಳನ್ನು ಕೃತಕ ಶಾಸನಗಳೆಂದು ಕರೆಯುತ್ತಾರೆ. ಈ ಕೃತಕತೆಯನ್ನು ತಾಮ್ರಶಾಸನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಯಾರದೋ ಆಸ್ತಿಯನ್ನು ಕಬಳಿಸುವ ಸಲುವಾಗಿ ಅಥವಾ ಅಧಿಕಾರ, ಅಂತಸ್ತನ್ನು ಗಳಿಸುವ ಸಲುವಾಗಿ ವಂಚನೆಯ ಉದ್ದೇಶವನ್ನು ಇವು ಹೊಂದಿರುತ್ತವೆ.

ಶಾಸನಶಾಸ್ತ್ರದ ವ್ಯಾಪ್ತಿ

ಪೀಠಿಕೆ : ಶಾಸನಶಾಸ್ತ್ರವು ಇತಿಹಾಸ ಮತ್ತು ಪುರಾತತ್ವಶಾಸ್ತ್ರದ ಪ್ರಮುಖ ಅಂಗವಾಗಿದ್ದು, ಕಲ್ಲು, ತಾಮ್ರಪತ್ರ, ಲೋಹ, ದೇವಾಲಯದ ಗೋಡೆಗಳು, ನಾಣ್ಯಗಳು ಮುಂತಾದ ದೀರ್ಘಕಾಲ ಉಳಿಯುವ ವಸ್ತುಗಳ ಮೇಲೆ ಕೆತ್ತಿದ ಅಥವಾ ಬರೆಯಲಾದ ಶಾಸನಗಳ ಅಧ್ಯಯನವನ್ನು ಒಳಗೊಂಡಿದೆ. ಶಾಸನಗಳು ಪ್ರಾಚೀನ ಕಾಲದ ನೇರ ಸಾಕ್ಷಿಗಳಾಗಿರುವುದರಿಂದ ಇತಿಹಾಸವನ್ನು ನಿಖರವಾಗಿ ಪುನರ್‌ನಿರ್ಮಿಸಲು ಅವು ಅತ್ಯಂತ ಮಹತ್ವದ್ದಾಗಿವೆ. ಶಾಸನಶಾಸ್ತ್ರದ ವ್ಯಾಪ್ತಿ ಕೇವಲ ಲಿಪಿ ಓದುವುದರಲ್ಲಿಯೇ ಸೀಮಿತವಾಗಿಲ್ಲ; ಅದು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಎಲ್ಲಾ ಆಯಾಮಗಳನ್ನು ಒಳಗೊಂಡಿದೆ.

1. ಲಿಪಿ ಮತ್ತು ಪಾಠ ಸಂಶೋಧನೆ(Script and Textual Criticism)

೧.ಲಿಪಿ ಶಾಸ್ತ್ರೀಯ ವಿಶ್ಲೇಷಣೆ:     ಶಾಸನಶಾಸ್ತ್ರದ ಪ್ರಾಥಮಿಕ ವ್ಯಾಪ್ತಿ ಲಿಪಿಗಳ ವೈಜ್ಞಾನಿಕ ಅಧ್ಯಯನವಾಗಿದೆ.ಬ್ರಾಹ್ಮಿ,ಖರೋಷ್ಟಿ ಮೊದಲಾದ ಲಿಪಿಗಳ ರೂಪವಿಕಾಸ, ಅಕ್ಷರಗಳ ಶೈಲಿ, ವೈಶಿಷ್ಟ್ಯ ಮತ್ತು ಪ್ರಾದೇಶಿಕ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ ಕಾಲನಿರ್ಣಯ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಗುರುತಿಸಲಾಗುತ್ತದೆ. ಲಿಪಿಯ ರೂಪಾಂತರಗಳು ಕೇವಲ ಬರವಣಿಗೆಯ ಬದಲಾವಣೆಗಳಲ್ಲ; ಅವು ರಾಜಕೀಯ ಪ್ರಭಾವ, ವ್ಯಾಪಾರ ಸಂಪರ್ಕ ಮತ್ತು ಧಾರ್ಮಿಕ ಚಳವಳಿಗಳ ಸೂಚಕಗಳಾಗಿವೆ.

೨. ಪಾಠ ಸಂಶೋಧನೆ ಮತ್ತು ವಿಮರ್ಶೆ :   ಶಾಸನಗಳು ಬಹುಪಾಲು ಹಾನಿಗೊಳಗಾದ ಸ್ಥಿತಿಯಲ್ಲಿ ದೊರೆಯುತ್ತವೆ. ಅಕ್ಷರಗಳ ಕೊರತೆ, ಮಸಕಾದ ಭಾಗಗಳು ಅಥವಾ ಮುರಿದ ಭಾಗಗಳನ್ನು ವೈಜ್ಞಾನಿಕ ವಿಧಾನಗಳಿಂದ ಪುನರ್‌ನಿರ್ಮಿಸಿ ಮರು ಸ್ಥಾಪಿಸುವುದು ಶಾಸನಶಾಸ್ತ್ರದ ಪ್ರಮುಖ ಕಾರ್ಯವಾಗಿದೆ. ಇದರಲ್ಲಿ ಪಾಠಸಂಶೋಧನೆ (Textual Criticism), ಪಠ್ಯತೂಲನೆ ಮತ್ತು ಭಾಷಾಶಾಸ್ತ್ರೀಯ ವಿಶ್ಲೇಷಣೆ ಒಳಗೊಂಡಿವೆ.

2. ರಾಜಕೀಯ ರಚನೆ ಮತ್ತು ರಾಜ್ಯತತ್ವ

೧. ಅಧಿಕಾರ ಮತ್ತು ಧರ್ಮದ ಸಂಬಂಧ     

ಶಾಸನಗಳು ರಾಜಕೀಯ ಪ್ರಚಾರದ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ಅಶೋಕನ ಧಮ್ಮಶಾಸನಗಳು ರಾಜಕೀಯ ಆಡಳಿತ ಮತ್ತು ನೈತಿಕ ತತ್ವಗಳನ್ನು ಒಟ್ಟುಗೂಡಿಸುತ್ತವೆ. ಇದರಿಂದ ರಾಜ್ಯ ಮತ್ತು ಧರ್ಮದ ಸಂಬಂಧದ ಬಗ್ಗೆ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

೨. ಸಾಮ್ರಾಜ್ಯ ಮತ್ತು ಪ್ರಾದೇಶಿಕತೆ:  ಸಮುದ್ರಗುಪ್ತನ ಪ್ರಶಸ್ತಿ ಶಾಸನವು ಸಾಮ್ರಾಜ್ಯ ವಿಸ್ತರಣೆ ಮತ್ತು ರಾಜಕೀಯ ಮಾನ್ಯತೆಯ ಸ್ಥಾಪನೆಯ ಉದಾಹರಣೆಯಾಗಿದೆ. ಇಂತಹ ಶಾಸನಗಳು ಕೇಂದ್ರ ಮತ್ತು ಪ್ರಾಂತೀಯ ಆಡಳಿತದ ಸಂಬಂಧವನ್ನು ವಿಶ್ಲೇಷಿಸಲು ಸಹಕಾರಿ. ಅವು ರಾಜಕೀಯ ಪ್ರಭುತ್ವದ ಭಾಷೆಯನ್ನು ಅನಾವರಣಗೊಳಿಸುತ್ತವೆ.

3. ಸಾಮಾಜಿಕ ಇತಿಹಾಸ ಮತ್ತು ರಚನೆ

೧. ಸಾಮಾಜಿಕ ವರ್ಗೀಕರಣ : ಶಾಸನಗಳು ವರ್ಣ, ಜಾತಿ, ವೃತ್ತಿ ಮತ್ತು ಸಮುದಾಯಗಳ ವಿವರಗಳನ್ನು ನೀಡುತ್ತವೆ. ಇವುಗಳಿಂದ ಸಮಾಜದ ರಚನೆ, ಅಧಿಕಾರದ ಹಂಚಿಕೆ ಮತ್ತು ಸಾಮಾಜಿಕ ಚಲನೆಗಳ ವಿಶ್ಲೇಷಣೆ ಸಾಧ್ಯವಾಗುತ್ತದೆ. ಶಾಸನಗಳು ಸಮಾಜದ ವಾಸ್ತವಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಮೂಲಗಳಾಗಿವೆ.

೨. ಮಹಿಳಾ ಸ್ಥಾನಮಾನದ ಅಧ್ಯಯನ : ಮಹಿಳೆಯರು ದಾನಿಗಳಾಗಿ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆಗಳು ಶಾಸನಗಳಲ್ಲಿ ಕಂಡುಬರುತ್ತವೆ. ಇದರಿಂದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾಯತ್ತತೆ ಕುರಿತು ವಿಶ್ಲೇಷಣಾತ್ಮಕ ಅಧ್ಯಯನ ನಡೆಸಬಹುದು.

4. ಆರ್ಥಿಕ ವ್ಯವಸ್ಥೆ ಮತ್ತು ಉತ್ಪಾದನಾ ಸಂಬಂಧಗಳು

 ೧. ಭೂಸ್ವಾಮ್ಯ ಮತ್ತು ದಾನಪದ್ಧತಿ : ತಾಮ್ರಪತ್ರ ಶಾಸನಗಳು ಭೂದಾನ ಮತ್ತು ತೆರಿಗೆ ವಿನಾಯಿತಿಗಳ ಕುರಿತು ವಿವರಗಳನ್ನು ಒದಗಿಸುತ್ತವೆ. ಇದರಿಂದ ಭೂಸ್ವಾಮ್ಯ, ಕೃಷಿ ಉತ್ಪಾದನೆ ಮತ್ತು ರಾಜಸ್ವ ವ್ಯವಸ್ಥೆಯ ಸ್ವರೂಪವನ್ನು ಅಧ್ಯಯನ ಮಾಡಬಹುದು. ಭೂದಾನವು ರಾಜಕೀಯ ಅಧಿಕಾರದ ಮಾನ್ಯತೆಯ ಸಾಧನವಾಗಿಯೂ ಕಾರ್ಯನಿರ್ವಹಿಸಿದೆ.

೨.ವ್ಯಾಪಾರ ಮತ್ತು ನಾಣ್ಯಚಲಾವಣೆ :  ಶಾಸನಗಳಲ್ಲಿ ವ್ಯಾಪಾರ ಸಂಘಗಳು, ಮಾರ್ಗಗಳು ಮತ್ತು ನಾಣ್ಯಗಳ ಉಲ್ಲೇಖಗಳು ದೊರೆಯುತ್ತವೆ. ಇವುಗಳಿಂದ ಆಂತರಿಕ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಜಾಲವನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಆರ್ಥಿಕ ಇತಿಹಾಸದ ಪುನರ್‌ನಿರ್ಮಾಣದಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ.

5. ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿವರ್ತನೆ

೧. ಧಾರ್ಮಿಕ ಬಹುಮುಖತೆ : ಬೌದ್ಧ, ಜೈನ ಮತ್ತು ವೈದಿಕ ಪರಂಪರೆಗಳ ವಿಸ್ತಾರವನ್ನು ಶಾಸನಗಳು ದಾಖಲಿಸುತ್ತವೆ. ಧಾರ್ಮಿಕ ದಾನಗಳು ಮತ್ತು ಮಠಗಳ ಸ್ಥಾಪನೆಗಳು ಧಾರ್ಮಿಕ ಸಹಿಷ್ಣುತೆ ಮತ್ತು ಸಂಸ್ಕೃತಿಯ ವಿನಿಮಯದ ಸೂಚಕಗಳಾಗಿವೆ.

೨. ಕಲಾ ಮತ್ತು ವಾಸ್ತುಶಿಲ್ಪ:     ದೇವಾಲಯ ನಿರ್ಮಾಣ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತು ಶಾಸನಗಳು ಮಾಹಿತಿಯನ್ನು ನೀಡುತ್ತವೆ. ಇವುಗಳಿಂದ ಸಾಂಸ್ಕೃತಿಕ ಇತಿಹಾಸದ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

6. ಭೂಗೋಳ ಮತ್ತು ಕಾಲಸಂರಚನೆ

೧. ಐತಿಹಾಸಿಕ ಭೂಗೋಳ : ಶಾಸನಗಳಲ್ಲಿ ಉಲ್ಲೇಖಿತವಾದ ಸ್ಥಳನಾಮಗಳು, ನದಿಗಳು ಮತ್ತು ಪ್ರದೇಶಗಳ ಆಧಾರದ ಮೇಲೆ ಪ್ರಾಚೀನ ಭೂಗೋಳವನ್ನು ಪುನರ್‌ನಿರ್ಮಿಸಲು ಸಾಧ್ಯವಾಗುತ್ತದೆ. ಇದು ಇತಿಹಾಸ ಮತ್ತು ಭೂಗೋಳಶಾಸ್ತ್ರದ ಸಂಯೋಜಿತ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ.

೨. ಕಾಲನಿ‌ರ್ಣಯ ಮತ್ತು ಇತಿಹಾಸ ನಿರ್ಮಾಣ :  ಶಾಸನಗಳಲ್ಲಿ ನೀಡಿರುವ ಸಂವತ್ಸರ, ತಿಥಿ ಮತ್ತು ರಾಜರ ಆಡಳಿತ ವರ್ಷಗಳ ಆಧಾರದ ಮೇಲೆ ಘಟನೆಗಳ ಕಾಲವನ್ನು ನಿಖರವಾಗಿ ನಿರ್ಧರಿಸಲಾಗುತ್ತದೆ. ಕಾಲಸಂರಚನೆ ಇತಿಹಾಸದ ವೈಜ್ಞಾನಿಕ ಅಧ್ಯಯನಕ್ಕೆ ಅತ್ಯಾವಶ್ಯಕವಾಗಿದೆ.

ಉಪಸಂಹಾರ :       ಶಾಸನಶಾಸ್ತ್ರವು ಕೇವಲ ಸಹಾಯಕ ಶಾಸ್ತ್ರವಲ್ಲ; ಅದು ಇತಿಹಾಸದ ಮೂಲಾಧಾರವಾಗಿದೆ. ಶಾಸನಗಳು ಸಮಕಾಲೀನ ದಾಖಲೆಗಳಾಗಿರುವುದರಿಂದ ಅವು ಇತಿಹಾಸದ ವೈಜ್ಞಾನಿಕ ಪುನರ್‌ನಿರ್ಮಾಣಕ್ಕೆ ನಂಬಲರ್ಹ ಮೂಲಗಳಾಗಿವೆ. ಲಿಪಿ, ಭಾಷೆ, ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿಯ ಎಲ್ಲಾ ಆಯಾಮಗಳನ್ನು ಒಳಗೊಂಡಿರುವ ಶಾಸನಶಾಸ್ತ್ರವು ಇತಿಹಾಸಶಾಸ್ತ್ರದ ಬಹುಮುಖ ಮತ್ತು ವಿಶ್ಲೇಷಣಾತ್ಮಕ ಕ್ಷೇತ್ರವಾಗಿದೆ.

ಭಾರತದ ಪ್ರಮುಖ ಶಾಸನಗಳು

1. ಅಶೋಕನ ಮಸ್ಕಿ,ಸನ್ನತಿ,ಗಿರ್‌ನಾರ್ ಶಾಸನಗಳು

2. ಸೋಹಗೌರ ಶಾಸನ,ಉತ್ತರ ಪ್ರದೇಶ

3. ಪರಾಂತಕನ ಉತ್ತರ ಮೆರೂರು ಶಾಸನ

4.ಕ್ಷತ್ರಪ ನಹಪಾನನ ನಾಸಿಕ್‌ ಶಾಸನ

5.ಮಥುರಾದ ಹುವಿಷ್ಕನ ಶಾಸನ

6. ಬನವಾಸಿಯ ಚುಟು ಅರಸರ ಶಾಸನ

7. ಸಮುದ್ರಗುಪ್ತನ ಅಲಹಾಬಾದ್‌ ಶಾಸನ

8.ಶ್ರವಣಬೆಳಗೊಳದ ಶಾಸನಗಳು

9. ಕಾಕುತ್ಸವರ್ಮನ ಹಲ್ಮಿಡಿಯ ಶಾಸನ

10.ಗುಡ್ನಾಪುರದ ಕದಂಬ ರವಿವರ್ಮನ ಸ್ತಂಭ ಶಾಸನ

11.ಬೋರ್ನಿಯೋದ ಪೂರ್ಣವರ್ಮನ ಶಾಸನ

12.ಹೊಯ್ಸಳರ ದ್ವಾರಸಮುದ್ರದ ಶಾಸನಗಳು

13. ವಿಜಯನಗರದ ಹಂಪಿಯ ಶಾಸನಗಳು

ಈಜಿಪ್ಟ್‌ ಪ್ರದೇಶದಲ್ಲಿ ಭಾರತೀಯ ಶಾಸನಗಳು

ಇತ್ತೀಚೆಗೆ ಈಜಿಪ್ಟ್‌ನ ರಾಜರ ಕಣಿವೆ (Valley of the Kings) ಪ್ರದೇಶದಲ್ಲಿ ಆರು ಸಮಾಧಿಗಳಲ್ಲಿ ಸುಮಾರು 30 ಪ್ರಾಚೀನ ಭಾರತೀಯ ಭಾಷೆಗಳ ಶಾಸನಗಳು ಪತ್ತೆಯಾಗಿವೆ. ಇವು ಕ್ರಿ.ಶ. ಮೊದಲನೆ ಶತಮಾನದಿಂದ ಮೂರನೇ ಶತಮಾನಗಳ ನಡುವೆ ಭಾರತೀಯರು ಈಜಿಪ್ಟ್‌ನಲ್ಲಿ ಇದ್ದದ್ದಕ್ಕೆ ಹೊಸ ಸಾಕ್ಷ್ಯಗಳನ್ನು ಒದಗಿಸುತ್ತವೆ. ಈ ಶಾಸನಗಳಲ್ಲಿ ಹೆಚ್ಚಿನವು ತಮಿಳು-ಬ್ರಾಹ್ಮಿ ಲಿಪಿಯಲ್ಲಿ ಕಂಡುಬಂದಿದ್ದು, ಅವು ಆಧುನಿಕ ತಮಿಳು ಭಾಷೆಯೊಂದಿಗೆ ಸಂಬಂಧ ಹೊಂದಿವೆ. ಈ ಸಂಶೋಧನೆಯನ್ನು ಚೆನ್ನೈನಲ್ಲಿ ನಡೆದ ಅಂತರರಾಷ್ಟ್ರೀಯ ತಮಿಳು ಶಾಸನ ಸಮ್ಮೇಳನದಲ್ಲಿ ಚಾರ್ಲೆಟ್ ಶ್ಮಿಡ್ ಮತ್ತು ಇಂಗೋ ಸ್ಟ್ರೌಚ್ ಪ್ರಸ್ತುತಪಡಿಸಿದರು. ಗ್ರೀಕ್, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿರುವ ಬರಹಗಳು ಒಂದೇ ಸಮಾಧಿಯಲ್ಲಿ ಕಂಡುಬಂದಿದ್ದು, ಭಾರತೀಯರು ತಮ್ಮ ಸಾಂಸ್ಕೃತಿಕ ಗುರುತಿನ ಬಗ್ಗೆ ಜಾಗೃತರಾಗಿದ್ದರು ಹಾಗೂ ಗ್ರೀಕ್ ಭಾಷೆಯನ್ನೂ ಓದಲು ಸಾಧ್ಯವಾಗುತ್ತಿತ್ತು ಎಂಬುದನ್ನು ತೋರಿಸುತ್ತದೆ. ಈ ಪತ್ತೆ ಇಂಡೋ-ಈಜಿಪ್ಟ್ ಸಂಪರ್ಕಗಳು ರೋಮನ್ ಕಾಲದಲ್ಲಿ ಗಾಢವಾಗಿದ್ದವು ಎಂಬುದನ್ನು ದೃಢಪಡಿಸುತ್ತದೆ.

ಮುಖ್ಯವಾಗಿ “ಸಿಕೈ ಕೋಪಾನ್ ” ಎಂಬ ತಮಿಳು-ಬ್ರಾಹ್ಮಿ ಹೆಸರು ಐದು ಸಮಾಧಿಗಳಲ್ಲಿ ಎಂಟು ಬಾರಿ ಕಂಡುಬಂದಿದೆ. “ಸಿಕೈ” ಪದವು ಸಂಸ್ಕೃತದ “ಶಿಖಾ” (ಕುಡುಮೆ/ಕಿರೀಟ) ಪದದೊಂದಿಗೆ ಸಂಬಂಧ ಹೊಂದಿರಬಹುದು; “ಕೋಪಾನ್” ಪದವು ವಿಜಯ ಅಥವಾ ಹತ್ಯೆ ಅರ್ಥ ನೀಡುವ ತಮಿಳು ಮೂಲದಿಂದ ಬಂದಿದ್ದು, “ಕೋಪಾನ್ ವರತ ಕಂಡನ್” (ಕೋಪಾನ್ ಬಂದು ನೋಡಿದನು) ಎಂಬ ಶಾಸನವೂ ಪತ್ತೆಯಾಗಿದೆ. ಇದೇ “ಕೋಪಾನ್” ಪದವು ಕೆಂಪು ಸಮುದ್ರ ತೀರದ ಬರೇನಿಕೆ ನಗರದಲ್ಲಿಯೂ ಕಂಡುಬಂದಿದ್ದು, ಸಂಗಂ ಸಾಹಿತ್ಯದಲ್ಲಿಯೂ ಹಾಗೂ ಪ್ರಾಚೀನ ಚೇರರ ರಾಜಧಾನಿಯಾದ ಪುಗಲೂರು ಶಾಸನಗಳಲ್ಲಿ (ಕ್ರಿ.ಶ. 2–3ನೇ ಶತಮಾನ) ಉಲ್ಲೇಖಿತವಾಗಿದೆ. ಈ ಹೊಸ ಪತ್ತೆಗಳು ರೋಮನ್ ಈಜಿಪ್ಟ್ ಸಮಾಜದಲ್ಲಿ ಭಾರತೀಯ ಮೂಲದ ಜನರು ಒಗ್ಗೂಡಿಸಿಕೊಂಡಿದ್ದರೆಂಬುದನ್ನು ಸೂಚಿಸುತ್ತವೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಭಾರತೀಯ ಶಾಸನಗಳು ಅಥವಾ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದು ಪ್ರಾಚೀನ ದಕ್ಷಿಣ ಭಾರತ ಮತ್ತು ಈಜಿಪ್ಟ್ ನಡುವೆ ದೂರ ವ್ಯಾಪಾರದ ಮೂಲಕ ಸಂಪರ್ಕವಿದ್ದಿರಬಹುದು ಎಂಬ ಸೂಚನೆಯನ್ನು ನೀಡುತ್ತದೆ. ಕೆಲವು ಸಂಶೋಧಕರು ತಮಿಳು-ಬ್ರಾಹ್ಮಿ ಲಿಪಿಗೆ ಹೋಲುವ ಗುರುತುಗಳನ್ನು ಗಮನಿಸಿ, ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. ಮೊದಲಿನ ಶತಮಾನಗಳವರೆಗೆ ತಮಿಳು ವ್ಯಾಪಾರಿಗಳು ಅಥವಾ ಪ್ರಯಾಣಿಕರು ಈಜಿಪ್ಟ್ ತಲುಪಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಚೇರ, ಚೋಳ ಮತ್ತು ಪಾಂಡ್ಯರಂತಹ ದಕ್ಷಿಣ ಭಾರತೀಯ ರಾಜ್ಯಗಳು ಕೆಂಪು ಸಮುದ್ರ ಮತ್ತು ಮೆಡಿಟೆರೇನಿಯನ್ ಪ್ರದೇಶಗಳೊಂದಿಗೆ ಸಕ್ರಿಯ ಸಮುದ್ರ ವ್ಯಾಪಾರ ನಡೆಸಿದ್ದವು.

ಶಾಸನಾಧ್ಯಯನದ ಮಹತ್ವ 

1. ರಾಜಕೀಯ ಇತಿಹಾಸದ ಪ್ರಾಮಾಣಿಕ ಮೂಲಗಳು

  • ಶಾಸನಗಳು ಭಾರತದ ರಾಜರು, ಯುದ್ಧಗಳು, ಜಯಗಳಿಸಿದ ರಾಜ್ಯಗಳು ಮತ್ತು ಆಡಳಿತ ಕ್ರಮಗಳ ಬಗ್ಗೆ ನೇರವಾದ ಮಾಹಿತಿಯನ್ನು ನೀಡುತ್ತವೆ.
  • ಸಮುದ್ರಗುಪ್ತನ ಅಲಹಾಬಾದ್ ಪ್ರಶಸ್ತಿ ಶಾಸನವಿಲ್ಲದಿದ್ದರೆ ಆ ಕಾಲದ ರಾಜಕೀಯ ಸ್ಥಿತಿಯನ್ನು ತಿಳಿಯಲು ಸಾಧ್ಯವಿರಲಿಲ್ಲ.
  • ರುದ್ರದಾಮನನ ಜುನಾಗಢ ಶಾಸನವು ಆ ಕಾಲದ ರಾಜಕೀಯ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ವಿವರಿಸುತ್ತದೆ.
  • ಶಾಸನಗಳು ರಾಜವಂಶಗಳ ವಂಶಾವಳಿ ಹಾಗೂ ಆಡಳಿತ ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ.

2. ಸಾಮಾಜಿಕ ಜೀವನದ ಪ್ರತಿಬಿಂಬ

  • ವಿವಾಹ ಪದ್ಧತಿ, ಕನ್ಯಾಶುಲ್ಕ–ವರದಕ್ಷಿಣೆ ನಿಷೇಧ, ಧಾರ್ಮಿಕ ವಿವಾದಗಳ ಪರಿಹಾರ ಮುಂತಾದ ವಿಷಯಗಳು ಶಾಸನಗಳಲ್ಲಿ ದೊರೆಯುತ್ತವೆ.
  • ರಾಜರು ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಂಡಿದ್ದಾರೆಂಬುದು ತಿಳಿದುಬರುತ್ತದೆ.
  • ಸಹಗಮನ (ಸತಿ), ಮೆರವಣಿಗೆ ಸವಾರಿ ಮುಂತಾದ ಆಚಾರ–ವಿಚಾರಗಳ ಮಾಹಿತಿಯೂ ಲಭ್ಯವಾಗುತ್ತದೆ.
  • ವಿವಿಧ ಪ್ರಾಂತಗಳ ಜನರು ಪರಸ್ಪರ ವಿವಾಹ ಸಂಬಂಧ ಬೆಳೆಸಿಕೊಂಡಿದ್ದ ಉದಾಹರಣೆಗಳು ರಾಷ್ಟ್ರೀಯ ಏಕತೆಯನ್ನು ತೋರಿಸುತ್ತವೆ.

3. ಆರ್ಥಿಕ ಸ್ಥಿತಿಗತಿಗಳ ಮಾಹಿತಿ

  • ಕೃಷಿಯೇ ಮುಖ್ಯ ಜೀವನೋಪಾಯವಾಗಿದ್ದುದನ್ನು ಶಾಸನಗಳು ದೃಢಪಡಿಸುತ್ತವೆ.
  • ನೀರಾವರಿ ವ್ಯವಸ್ಥೆಗೆ ಮಹತ್ವ ನೀಡಲಾಗಿದೆ (ಉದಾ: ಸುದರ್ಶನ ಕೆರೆ).
  • ತೆರಿಗೆ ಪದ್ಧತಿ – ಇರೈ, ಕಡಮೆ, ವೆಟ್ಟಿ ಮುಂತಾದ ತೆರಿಗೆಗಳ ಉಲ್ಲೇಖ.
  • ವ್ಯಾಪಾರ ಸಂಘಗಳು – ಅಯ್ಯಾವೋಳೆ ಐನೂರ್ವರು ಮುಂತಾದ ವಣಿಕಸಂಘಗಳ ಚಟುವಟಿಕೆ.
  • ತೂಕ ಮತ್ತು ಅಳತೆ ವ್ಯವಸ್ಥೆಗಳ ವಿವರ.

4. ಧಾರ್ಮಿಕ ಬೆಳವಣಿಗೆಗಳ ಸಾಕ್ಷ್ಯ

  • ಹೆಲಿಯೋಡೋರಸ್‌ನ ಬೆಸ್‌ನಗರ ಗರುಡಸ್ತಂಭ ಶಾಸನವು ಭಾಗವತ ಧರ್ಮದ ಪ್ರಸಾರವನ್ನು ತೋರಿಸುತ್ತದೆ.
  • ಸೂರ್ಯೋಪಾಸನೆ, ವೈದಿಕ ಆಚರಣೆಗಳು ಮತ್ತು ದೇವಾಲಯ ಜೀರ್ಣೋದ್ಧಾರಗಳ ಉಲ್ಲೇಖ.
  • ವಿವಿಧ ಧರ್ಮಗಳು ಸಹಬಾಳ್ವೆಯಿಂದ ಇದ್ದುದಕ್ಕೆ ಸಾಕ್ಷ್ಯ.

5. ಆಡಳಿತ ವ್ಯವಸ್ಥೆಯ ವಿವರಗಳು

  • ಒಂದನೇ ಪರಾಂತಕನ ಕಾಲದ ಉತ್ತರಮೇರೂರಿನ ಶಾಸನದಲ್ಲಿ ಗ್ರಾಮಸಭೆಯ ಚುನಾವಣಾ ವಿಧಾನಗಳ ವಿವರಗಳಿವೆ.
  • ಪ್ರಕೃತಿ ವಿಕೋಪಗಳ ಸಮಯದಲ್ಲಿ ಜನರಿಗೆ ನೆರವು ನೀಡಿದ ವಿವರಗಳು (ಮಹಾಸ್ಥಾನ ಶಾಸನ).
  • ಶಾಸನಗಳು ಸ್ಥಳೀಯ ಆಡಳಿತ ವ್ಯವಸ್ಥೆಯ ಪ್ರಾಚೀನತೆಯನ್ನು ತೋರಿಸುತ್ತವೆ.

6. ಶಿಕ್ಷಣದ ಬೆಳವಣಿಗೆ

  • ತಿರುಮುಕೂಡಲ್, ಎಣ್ಣಾಯರಂ ಮುಂತಾದ ಸ್ಥಳಗಳ ಶಾಸನಗಳಲ್ಲಿ ವಿದ್ಯಾಲಯಗಳ ಉಲ್ಲೇಖ.
  • ಶಿಕ್ಷಕರ ವೇತನ, ಪಠ್ಯ ವಿಷಯಗಳು ಮತ್ತು ವಿದ್ಯಾರ್ಥಿಗಳ ಮಾಹಿತಿ ದೊರೆಯುತ್ತದೆ.
  • ಶಿಕ್ಷಣವು ಸಂಘಟಿತ ಹಾಗೂ ಪ್ರೋತ್ಸಾಹಿತ ವ್ಯವಸ್ಥೆಯಾಗಿತ್ತು ಎಂಬುದು ತಿಳಿಯುತ್ತದೆ.

7. ಕಲೆ ಮತ್ತು ಸಾಹಿತ್ಯದ ಸಾಕ್ಷ್ಯ

  • ಜೋಗಿಮಾರಾ ಗುಹಾ ಶಾಸನದಲ್ಲಿ ನರ್ತಕಿಯ ಉಲ್ಲೇಖ – ನೃತ್ಯಕಲೆಯ ಪ್ರಾಚೀನತೆ.
  • ಕುಡಿಮಿಯಾಮಲೈ ಶಾಸನದಲ್ಲಿ ಸಂಗೀತದ ಉಲ್ಲೇಖ.
  • ಸಂಸ್ಕೃತ ಕಾವ್ಯಶೈಲಿಯ ಬೆಳವಣಿಗೆ (ಉದಾ: ಜುನಾಗಢ ಶಾಸನ).
  • ಶಾಸನಗಳಲ್ಲಿ ಛಂದಸ್ಸು, ಅಲಂಕಾರ ಶೈಲಿ ಕಂಡುಬರುತ್ತದೆ.

8. ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿ

  • ಕರ್ನಾಟಕದ ಹೆರಗು ಶಾಸನದಲ್ಲಿ ಕಾಶ್ಮೀರ ಮೂಲದ ಕುಟುಂಬದ ವಲಸೆ ಉಲ್ಲೇಖ.
  • ಜಾವಾ, ಸುಮಾತ್ರಾ, ಬೋರ್ನಿಯೋ ಪ್ರದೇಶಗಳಲ್ಲಿ ದೊರೆತ ಭಾರತೀಯ ಪ್ರಭಾವದ ಶಾಸನಗಳು ಭಾರತೀಯ ಸಂಸ್ಕೃತಿಯ ವಿಸ್ತಾರವನ್ನು ತೋರಿಸುತ್ತವೆ.
  • ವಿದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕದ ಸಾಕ್ಷ್ಯ.

ಉಪಸಂಹಾರ

ಶಾಸನಗಳು ಭಾರತೀಯ ಇತಿಹಾಸದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಾಥಮಿಕ ಮೂಲಗಳಾಗಿವೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶಿಕ್ಷಣ, ಕಲೆ ಮತ್ತು ಆಡಳಿತ ಕ್ಷೇತ್ರಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಮೂಲಕ ಅವು ನಮ್ಮ ಭೂತಕಾಲದ ನಿಖರ ಚಿತ್ರಣವನ್ನು ಕೊಡುತ್ತವೆ..