ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್‌ನು ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮೊಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ತೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ ಷೇಖ್ ಮಿರ್ಜಾ. ತಾಯಿ ಕುತ್ತುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾನ್ಸ್-ಆಕ್ಸಿಯಾನದಲ್ಲಿನ ಫ‌ರ್ ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮರ್ ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರನನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬ‌ನನು ಫರ್‌ ಘಾನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿ ಹೋಗಿತ್ತು.

ಫರ್‌ಫಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರ್‌ನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಅಲಂಖಾನರು ಬಾಬರನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (1526 ಏಪ್ರಿಲ್‌ 21)  : ಕ್ರಿ.ಶ. 1526 ಏಪ್ರಿಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್‌ ಖಾನನ ಶರಣಾಗತಿಯನ್ನು ಪಡೆದನು. ಆನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂ ಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್.ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಲೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂಧಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ದೆಹಲಿ ದೊರೆ ಇಬ್ರಾಹಿಂಲೋದಿ ರಣರಂಗದಲ್ಲಿ ಸಾವನ್ನಪ್ಪಿದನು.
  3. ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.
  4. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  5. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  6. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.            ಬಾಬರನ ವಿಜಯಕ್ಕೆ ಕಾರಣಗಳು
    1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
    2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈನ್ಯ.
    3. ಬಲಾಡ್ಯವಾದ ಫಿರಂಗಿ ಪಡೆ
    4. ಭಾರತೀಯರಲ್ಲಿದ್ದ ಅನೈಕ್ಯತೆ
    5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್ ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಆಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ‘ಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚೆಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು, ರಾಣಾ ಮತ್ತು ರಜಪೂತರ ಮೇಲೆ ಜಿಹಾದ್ ಅಥವಾ ಧರ್ಮಯುದ್ಧ ಮಾಡುವುದಾಗಿ ತಿಳಿಸಿದೆ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ.16 ರಂದು ಕಣ್ಣ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ಯುದ್ಧ ತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾಂದೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ಧ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಚೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಆಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ : ಇಬ್ರಾಹಿಂ ಲೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಆಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನ್ನರ ನಡುವೆ ಕಾಳಗ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬನನು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರ್‌ನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಫಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ: ಬಾಬರ್‌ನು ಮಧ್ಯಕಾಲೀನ ವಿಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”, ಗುಲ್‌ಬದನ್ ಬೇಗಂ ತನ್ನ ‘ಹುಮಾಯೂನ್‌ ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ|| ವಿ.ಎ. ಸ್ಮಿತ್ ಬಾಬರ್‌ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಬಾಬರನಿಗೆ ಸಂಗೀತದಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಯುದ್ಧ ಹಾಗೂ ರಾಜತಾಂತ್ರಿಕ ತಂತ್ರಗಳು ಪೂರ್ವನಿರ್ಧಾರಿತವಾಗಿದ್ದವು ಹಾಗೂ ಲೆಕ್ಕಾಚಾರದಿಂದ ಕೂಡಿದ್ದವು. ಅವನ ಆಕಾಲಿಕ ಸಾವಿನಿಂದಾಗಿ ಅವನ ಆಡಳಿತಾತ್ಮಕ ಅಂಶಗಳನ್ನು ತಿಳಿಯಲು ಸಾಧ್ಯವೇ ಇಲ್ಲ. ಪದ್ಯ ಮತ್ತು ಗದ್ಯ ರಚನೆಯಲ್ಲಿ ಅವನ ಅಸಾಧಾರಣ ಪ್ರತಿಭೆಯನ್ನು ಕಾಣಬಹುದು. ಅವನು ತನ್ನ ಅನುಭವಗಳನ್ನು ಮುಚ್ಚುಮರೆಯಿಲ್ಲದೆ ನಿರೂಪಿಸಿದ್ದಾನೆ. ತನ್ನ ದೌರ್ಬಲ್ಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾನೆ. ಬಾಬರ್‌ನು ಪರ್ಶಿಯನ್, ಅರೇಬಿಕ್ ಮತ್ತು ತುರ್ಕಿಭಾಷೆಗಳಲ್ಲಿ ಅತ್ಯುತ್ತಮ ಬರಹಗಾರನಾಗಿದ್ದನು. ಇವನ ಆತ್ಮಚರಿತ್ರೆ ತುಜುಕ್-ಇ-ಬಾಬರೀ (ಬಾಬರ್ ನಾಮಾ) ಪ್ರಪಂಚದ ಆತ್ಮಚರಿತ್ರೆಯ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೃತಿಯಾಗಿದೆ.

ಬಾಬರನಿಗೆ ಹುಮಾಯೂನ್, ಕಮ್ರಾನ್, ಹಿಂದಾಲ್ ಮತ್ತು ಆಸ್ಕರಿ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಬಾಬರನ ನಿಧನದ ಮೂರು ದಿನಗಳ ನಂತರ ಆತನ ಹಿರಿಯ ಪುತ್ರ ಹುಮಾಯೂನ್ ಮೊಗಲ್ ಪಟ್ಟವೇರಿದನು. ಆದರೆ ಇವನ ಚಾರಿತ್ರ್ಯದಲ್ಲಿನ ದೋಷಗಳೇ ಷೇರ್‌ಷಹನ ಏಳಿಗೆಗೆ ಕಾರಣವಾಯಿತು.

ಪರಿಸರ ಸಂವಹನ ಹಾಗೂ ಸಾರ್ವಜನಿಕ ಜಾಗೃತಿ

ಪರಿಸರ ಸಂವಹನ ಹಾಗೂ ಸಾರ್ವಜನಿಕ ಜಾಗೃತಿ

ಪರಿಸರ ಸಂವಹನವು ವ್ಯಕ್ತಿಗಳು, ಸಂಘ, ಸಂಸ್ಥೆಗಳು, ಸಮಾಜಗಳು, ಸಂಸ್ಕೃತಿಗಳು, ಶಾಲಾ-ಕಾಲೇಜುಗಳು, ಸಮೂಹ ಮಾಧ್ಯಮಗಳು, ವೃತ್ತ ಪತ್ರಿಕೆಗಳು, ಸಿನಿಮಾಗಳು, ವಯಸ್ಕ ಶಿಕ್ಷಣ ಹಾಗೂ ಪರಿಸರ ಕ್ಲಬ್ ಗಳನ್ನು ಒಳಗೊಂಡಿದೆ. ಸಂವಹನ ಮತ್ತು ಪರಿಸರ ಪರಸ್ಪರ ಅಂತರ ಸಂಬಂಧವನ್ನು ಹೊಂದಿವೆ. ಸಂವಹನವು ಸಮುದಾಯಗಳು ಪರಸ್ಪರ ಭಾಗವಹಿಸುವಿಕೆಯನ್ನು ಅವಲಂಬಿಸಿರುತ್ತದೆ.

 ಶಿಕ್ಷಣ ಕ್ಷೇತ್ರವು ಸಂವಹನದ ಮಾಧ್ಯಮವಾಗಿ ಇಂದು ಬಹಳ ಪ್ರಚಲಿತವಾಗಿದೆ. ಇದೊಂದು ಅಗತ್ಯ ವಿಷಯವಾಗಿದ್ದು ಪರಿಸರ ಅಧ್ಯಯನಗಳು, ಪರಿಸರ ವಿಜ್ಞಾನ, ಅಪಾಯ ಹಾಗೂ ವಿಪತ್ತಿನ ವಿಶ್ಲೇಷಣೆ ಹಾಗೂ ನಿರ್ವಹಣೆಯನ್ನು ಮಾಡುತ್ತದೆ. ಸಂವಹನದ ಮೂಲಕ ಶಿಕ್ಷಣ ಕ್ಷೇತ್ರವು ಪರಿಸರದ ಮೇಲೆ ಎಲ್ಲಾ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಪರಿಸರ ಸಂರಕ್ಷಣೆ ಬೆಳವಣಿಗೆಗೆ ಕಾರಣವಾಗುತ್ತದೆ. ಸಾಮಾಜಿಕ ಪರಿಸರ ಶಾಸ್ತ್ರ, ಪರಿಸರ ವಿಜ್ಞಾನ, ಆರ್ಥಿಕ ಪರಿಸರ ಅಧ್ಯಯನ ಮುಂತಾದ ಶಿಕ್ಷಣ ಕ್ಷೇತ್ರಗಳ ಕಾರ್ಯಗಳಿಂದ ಪರಿಸರ ಸಂವಹನ ಹೊರಹೊಮ್ಮಿದೆ. ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ಸಾರ್ವಜನಿಕರಿಗೆ ಶೈಕ್ಷಣಿಕ ಕ್ಷೇತ್ರದ ಮೂಲಕ ತಲುಪಿಸುವ ಗುರಿಯನ್ನು ಸಂವಹನ ಹೊಂದಿದೆ.

ಸಾರ್ವಜನಿಕ ಜಾಗೃತಿ:

ಪರಿಸರ ಅಮೂಲ್ಯವಾದ ವಸ್ತು. ಅದನ್ನು ಹಾಳು ಮಾಡಬಾರದು. ಹಾಳು ಮಾಡಿದರೆ ಮಾನವನಿಗೆ ಕುತ್ತು ಬರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಆದರೂ ಪ್ರಸ್ತುತ ಸಮಾಜಿಕ ಜೀವಿ ಎನಿಸಿಕೊಂಡ ಮಾನವ ದಿನೇ ದಿನೇ ತನ್ನ ಅವಿವೇಕತನದಿಂದ ಪರಿಸರವನ್ನು ಮಲಿನಗೊಳಿಸುತ್ತಿದ್ದಾನೆ. ಆ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಆದುದರಿಂದ ಇಂದು ಪರಿಸರ ರಕ್ಷಣೆಗಾಗಿ ಜನಜಾಗೃತಿಯನ್ನು ಉಂಟುಮಾಡಬೇಕಾದದ್ದು ಅಗತ್ಯವಾಗಿದೆ.

  1. ಪರಿಸರದ ಕಾಳಜಿಗಾಗಿ ಮನೆಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು ಹಾಗೂ ಕಾರ್ಖಾನೆಗಳ ಸುತ್ತ ಗಿಡ ಮರಗಳನ್ನು ನೆಡುವಂತೆ ಜಾಗೃತಿ ಮೂಡಿಸುವುದು.
  2. ಶಾಲಾ-ಕಾಲೇಜು, ಗ್ರಾಮ, ನಗರ, ಮಹಾನಗರ ಪಾಲಿಕೆಗಳಂತಹ ಪ್ರದೇಶಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಲು ಅನುವು ಮಾಡಿಕೊಡುವಂತಹ ಪರಿಸರ ಶಿಬಿರ ಕಾರ್ಯಕ್ರಮ ಮೊದಲಾದವುಗಳನ್ನು ಏರ್ಪಡಿಸಬೇಕು.
  3. ಪರಿಸರ ತಜ್ಞರಿಂದ ಪರಿಸರ ಮಾಲಿನ್ಯಕ್ಕೆ ಕಾರಣ ಮತ್ತು ಅದರ ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಗಿಡಮರಗಳನ್ನು ನೆಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು.
  5. ಪರಿಸರ ಸಂರಕ್ಷಣೆಯ ಕುರಿತು ಹಾಡುಗಳನ್ನು ರಚಿಸಿ ಹಾಡುವ ಮೂಲಕ ಜನಜಾಗೃತಿಯನ್ನು ಉಂಟುಮಾಡುವುದು.
  6. ಕಾಡಿದ್ದರೆ ನಾವು ನಾವಿದ್ದರೆ ನಾಡು ಎಂಬ ತತ್ವವನ್ನು ಎಲ್ಲೆಡೆ ಪ್ರಚಾರ ಮಾಡಬೇಕು.
  7. ವಿಷಯುಕ್ತ ರಸಾಯನಿಕಗಳನ್ನು ಹೆಚ್ಚು ಬಳಸದಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮತ್ತು ಮಾಲೀಕರಿಗೆ ಮನವರಿಕೆ ಮಾಡಬೇಕು.
  8. ಮನೆಯ ಸುತ್ತಮುತ್ತ ಗಿಡಗಳನ್ನು ನೆಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮನವೊಲಿಸಬೇಕು.
  9. ವ್ಯರ್ಥ ಪದಾರ್ಥಗಳನ್ನು ಬೀದಿಗೆ ಎಸೆಯದಂತೆ ನೋಡಿಕೊಳ್ಳಬೇಕು.
  10. ಕೆರೆಗಳಲ್ಲಿ ಹೂಳು ತುಂಬದಂತೆ ಹಾಗೂ ಮಣ್ಣು ಸವಕಳಿಯನ್ನು  ತಡೆಗಟ್ಟುವಂತೆ ಜನರಿಗೆ ಹೇಳಿಕೊಡಬೇಕು. 
  11. ಗ್ರಾಮೀಣ ಬಯಲು ಶೌಚಾಲಯಗಳನ್ನು ನಿರ್ಬಂಧಿಸಬೇಕು ಹಾಗೂ ನೂತನ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು.
  12. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಬೇಕು.
  13. ಮಕ್ಕಳಿಗೆ ಶರೀರ ನೈರ್ಮಲ್ಯದ ಜೊತೆಗೆ ಪರಿಸರ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಲಿಸಿಕೊಡಬೇಕು.
  14. ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳನ್ನು ಪ್ರೀತಿಸುವುದನ್ನು ಕಲಿಸಿಕೊಡುವುದು ಬಹಳ ಅಗತ್ಯವಾಗಿದೆ.
  15. ಮಕ್ಕಳನ್ನು ವನ್ಯಜೀವಿಧಾಮಗಳು ಹಾಗೂ ಪಕ್ಷಿಧಾಮಗಳಿಗೆ ಕರೆದುಕೊಂಡು ಹೋಗಿ ಜೀವ ವೈವಿಧ್ಯತೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಬೇಕು.

ಸಮೂಹ ಮಾಧ್ಯಮದ ಮೂಲಕ ಜಾಗೃತಿ:

ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಮೂಹ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾ:  ಮಾತುಕತೆ, ಸಂದರ್ಶನ, ನಾಟಕಗಳು ಹಾಗೂ ಸಾಕ್ಷ ಚಿತ್ರಗಳನ್ನು ತೋರಿಸುವ ಮೂಲಕ ಜನಜಾಗೃತಿಯನ್ನು ಉಂಟುಮಾಡುತ್ತವೆ. ಮಾಲಿನ್ಯವನ್ನು ನಿಯಂತ್ರಿಸುವ ಹಾಗೂ ಪರಿಸರದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಗಮನವನ್ನು ಸೆಳೆಯುವ ಕೆಲಸವನ್ನು ಮಾಡಲು ಮಾಧ್ಯಮಗಳು ಸಜ್ಜುಗೊಂಡಿವೆ. ಪರಿಸರ ಹಾನಿಯನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ಮಾನವನ ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಜೀವನದ ಮೇಲೆ ಯಾವ ಯಾವ ಪರಿಣಾಮಗಳು ಕಂಡುಬರುತ್ತದೆ, ಎಂಬುದರ ಕುರಿತು ಸಮೂಹ ಮಾಧ್ಯಮಗಳು ಸಾಕ್ಷಿ ಸಮೇತ ಮಾಹಿತಿಯನ್ನು ಬಿತ್ತರಿಸುವ ಕಾರಣದಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಮೂಹ ಮಾಧ್ಯಮದ ಪಾತ್ರ ದೊಡ್ಡದಾಗಿದೆ ಎಂದು ತೋರಿಸಿ ಕೊಡುತ್ತವೆ. 

ವಯಸ್ಕ ಶಿಕ್ಷಣದ ಮೂಲಕ ಜಾಗೃತಿ:

ಗ್ರಾಮೀಣ ಜನರು ಅನಕ್ಷರಸ್ಥರು ಮತ್ತು ಹಗಲಿರುಳು ದುಡಿಮೆಯಲ್ಲಿ ತೊಡಗಿದವರು ಆಗಿರುತ್ತಾರೆ. ಅವರಿಗೆ ಕಲಿಕೆಗೆ ಸಮಯವಿರುವುದಿಲ್ಲ. ಮತ್ತು ಓದು ಬರಹ ಅಂದರೆ ಏನೆಂದು ಗೊತ್ತಿರುವುದಿಲ್ಲ. ಅಂತವರಿಗೆ ರಾತ್ರಿ ಶಾಲೆಗಳನ್ನು ತೆರೆದು ಆ ಮೂಲಕ ಅವರಿಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದನ್ನೇ ಔಪಚಾರಿಕ ಅಥವಾ ವಯಸ್ಕ ಶಿಕ್ಷಣ ಪದ್ಧತಿ ಎಂದು ಕರೆಯುತ್ತಾರೆ. ಗ್ರಾಮೀಣ ಜನರಿಗೆ ವೈಯಸ್ಕ ಶಿಕ್ಷಣವನ್ನು ನೀಡುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು. ಪರಿಸರ ಕಾಳಜಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪರಿಸರ ಎಂದರೆ ದೈವಿಕ ಸ್ವರೂಪ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ವಯಸ್ಕ ಶಿಕ್ಷಣ ಪದ್ಧತಿಯಲ್ಲಿ ಮಹಿಳೆಯರು ಸಹ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು.

ಪರಿಸರ ಕ್ಲಬ್ ಸ್ಥಾಪನೆ ಮೂಲಕ ಜಾಗೃತಿ:

ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಪಂಚಾಯಿತಿಗಳ ಮಟ್ಟದಲ್ಲಿ, ಜಿಲ್ಲೆಗಳಲ್ಲಿ ಪರಿಸರ ಕ್ಲಬ್ ಗಳನ್ನು ಸ್ಥಾಪಿಸಿ ಆ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜನಸಾಮಾನ್ಯರಲ್ಲಿ ಮೂಡಿಸಬೇಕು. ಶೈಕ್ಷಣಿಕ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಕಲಿಸಿಕೊಡಬೇಕು. ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಕಾಳಜಿಯ ಪೋಷಣೆಗಳನ್ನು  ಕೂಗುತ್ತಾ ಜನಸಾಮಾನ್ಯರಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು. ಸಮೂಹ ಮಾಧ್ಯಮ, ಪತ್ರಿಕೆಗಳು, ಶಾಲಾ-ಕಾಲೇಜುಗಳು ಹಾಗೂ ವಯಸ್ಕ ಶಿಕ್ಷಣ ಸಂಸ್ಥೆಗಳು ಈ ಪರಿಸರ ಕ್ಲಬ್ ಜೊತೆಗೆ ಕೈ ಜೋಡಿಸಬೇಕು. ಇದರೊಂದಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಘಗಳು ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸಬೇಕು. ಇದಕ್ಕೆ ಪೂರಕವೆಂಬಂತೆ ಚಿಪ್ಕೋ, ಅಪ್ಪಿಕೋ, ಬಿಷ್ಣೋಯಿ, ನರ್ಮದಾ ಬಚಾವ್, ತೆಹ್ರ ಅಣೆಕಟ್ಟು ಚಳುವಳಿಯ ಕೆಲಸ ಮಾಡುತ್ತಿವೆ.

ದೆಹಲಿಯಲ್ಲಿ CNG ವಾಹನಗಳು:

ಇಂದು ಸರ್ಕಾರಗಳು ಸಾರ್ವಜನಿಕರೊಂದಿಗೆ ಸೇರಿ ಪರಿಸರ ಸಂರಕ್ಷಣೆಗೆ ಹಲವಾರು ಅಗತ್ಯ ಕಾನೂನುಗಳನ್ನು ಜಾರಿಗೆ ತಂದಿವೆ. ಪರಿಸರವು ಸ್ವಚ್ಛವಾಗಿದ್ದರೆ ಮಾನವನ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರ ಸುಂದರವಾಗಿದ್ದರೆ ಮಾನವನೂ ಸುಂದರವಾಗಿ ಕಾಣುತ್ತಾನೆ. ಮಾನವ ಪರಿಸರವನ್ನು ಹಾಳು ಮಾಡಿದರೆ ತನ್ನನ್ನು ತಾನೇ ಹಾಳು ಮಾಡಿಕೊಂಡಂತೆ. ಭಾರತವು ಪ್ರಪಂಚದ 5ನೇ ಪರಿಸರ ಮಾಲಿನ್ಯದ ದೊಡ್ಡ ದೇಶವಾಗಿದೆ. ಇಲ್ಲಿ ಅಗಾಧ ಸಂಖ್ಯೆಯಲ್ಲಿ ಜನಸಂಖ್ಯೆ ಇದೆ. ಅಭಿವೃದ್ಧಿಶೀಲ ಆರ್ಥಿಕತೆಯ ಕಾರಣದಿಂದ ಪ್ರಪಂಚದ 100 ವಾಯುಮಾಲಿನ್ಯ ನಗರಗಳಲ್ಲಿ 63 ನಗರಗಳು ಭಾರತದಲ್ಲಿಯೇ ಇವೆ. ದೆಹಲಿ ಪ್ರಪಂಚದ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿದೆ. ವಾಯು ಮಾಲಿನ್ಯದಿಂದ ದೆಹಲಿಯ ಜನರ ಸರಾಸರಿ ಜೀವಿತಾವಧಿ ಐದು ವರ್ಷಗಳಷ್ಟು ಕಡಿಮೆ ಇದೆ.

ದೆಹಲಿ ಸರ್ಕಾರವು ವಾಯುಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ

  1.  ದೆಹಲಿ ನಗರ ಸಾರಿಗೆ ವಾಹನಗಳಿಗೆ CNG ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.  ಇತರ ವಾಹನಗಳಿಗೂ CNG ಯನ್ನು ಶಿಫಾರಸು ಮಾಡಿದೆ.
  2.  ಬಾರಿ ವಾಹನಗಳು ಅಥವಾ ಲಾರಿಗಳು ನಗರದ ಒಳಗೆ ಬರುವುದನ್ನು ನಿಷೇಧಿಸಲಾಗಿದೆ.
  3.  ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ.
  4. CNG ವಾಸನೆ ರಹಿತವಾದ ಇಂಧನವಾಗಿದ್ದು ಅಪಾಯಕಾರಿಯಲ್ಲದ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಉಂಟುಮಾಡದ ಗಾಳಿಗಿಂತಲೂ ಹಗುರವಾಗಿರುವ ಕಾರಣದಿಂದ ಇದನ್ನು ಹಸಿರು ಇಂಧನ ಎಂದು ಕರೆಯುವರು.
  5.  ಈ  ಇಂಧನದ ಬಳಕೆಯಿಂದ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುವುದಿಲ್ಲ.
  6.  ನಗರದಲ್ಲಿ ಬೆಸ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
  7.  ರೈತರು ಕಟಾವಿನ ನಂತರ ಹುಲ್ಲಿಗೆ ಬೆಂಕಿ ಹಾಕುವುದನ್ನು ನಿಷೇಧಿಸಿದೆ.

ಉಪಸಂಹಾರ

ಪರಿಸರವನ್ನು ನಾಶಮಾಡುವುದು ಅಂದರೆ ನಮ್ಮ ಜೀವನವನ್ನೇ ಅಪಾಯಕ್ಕೆ ತಳ್ಳಿದಂತಾಗುತ್ತದೆ. ಸಾರ್ವಜನಿಕ ಜಾಗೃತಿ ಮತ್ತು ಪರಿಸರ ಸಂವಹನದ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಅನಿವಾರ್ಯವಾಗಿದೆ. “ಕಾಡಿದ್ದರೆ ನಾವು, ನಾವಿದ್ದರೆ ನಾಡು” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ.

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಪ್ರಕೃತಿಯಲ್ಲಿನ ನೆಲೆ, ನೀರು, ವಾಯು, ಕಾಡು, ಸಸ್ಯ, ಪ್ರಾಣಿಗಳಿಗೆ ದೈಹಿಕ ಸ್ಥಾನವನ್ನು ನೀಡಲಾಗುತ್ತಿತ್ತು. ಜನರು ಪ್ರಕೃತಿಗೆ ಹೆದರಿ ಅದರ ನಾಶಕ್ಕೆ ಪ್ರಯತ್ನಿಸುತ್ತಿರಲಿಲ್ಲ. ನಮ್ಮ ಪೂರ್ವಜರು ಪ್ರಕೃತಿಯನ್ನು ಆಧರಣೀಯವಾಗಿ ಪೂಜಿಸುತ್ತಿದ್ದರು. ಈ ಕಾರಣದಿಂದಾಗಿ ಕಾಡು ಸಮೃದ್ಧವಾಗಿ ಬೆಳೆದು ನಿಂತಿತು. 

  1. ಭಾರತೀಯ ಎಲ್ಲಾ ಧರ್ಮಗಳು ಪ್ರಕೃತಿ, ಭೂಮಿ, ಜೀವಿಗಳು ಮುಂತಾದವುಗಳನ್ನು ದೇವರ ಸೃಷ್ಟಿ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿವೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ “ಬಹಾಯಿ” ಮಾನವ ಜೀವನ ಹಾಗೂ ಪ್ರಕೃತಿಗೆ ಅತ್ಯಂತ ನಿಕಟ ಸಂಬಂಧವನ್ನು ಏರ್ಪಡಿಸಿತ್ತು. ಜೇನು, ಹೂ, ಅದರ ಬಣ್ಣ ಸುವಾಸನೆಗೆ ಚ್ಯುತಿ ಬರದಂತೆ ಅದರ ಮಧುವನ್ನು ಹೀರುವಂತೆ ಮಾನವ ಸಹ ಪ್ರಕೃತಿಯಲ್ಲಿ ಇದ್ದು ಇಲ್ಲದಂತೆ ಬದುಕಬೇಕು ಎಂದು ಹೇಳಿದೆ. ಪ್ರತಿಯೊಬ್ಬನು ಬೌದ್ಧಿಕವಾಗಿ ಬೆಳೆದು ಅಹಿಂಸೆಯನ್ನು ಅಳವಡಿಸಿಕೊಂಡು ಹಿಂಸೆಯನ್ನು ತ್ಯಜಿಸಬೇಕೆಂದು ಹೇಳುವ ಮೂಲಕ ಅತಿಯಾದ ಆಸೆಯು ಮನುಷ್ಯನ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.
  2. ಕ್ರೈಸ್ತ ಧರ್ಮದಲ್ಲಿ ಪರಿಸರ ರಕ್ಷಣೆಯನ್ನು ಮಾಡುವ ಹಲವಾರು ಪದ್ಯಗಳು ನಮಗೆ ಗೋಚರಿಸುತ್ತವೆ. ನಾವಿರುವ ಪರಿಸರವನ್ನು ಹಾಳು ಮಾಡಬಾರದು, ನಮ್ಮ ರಕ್ತ ಮಣ್ಣಿನಲ್ಲಿ ಸೇರಿದರೆ ಮಣ್ಣು ಕಲುಷಿತಗೊಳ್ಳುವುದು, ಆಹಾರವನ್ನು ಹಾಳು ಮಾಡುವುದು ಮಹಾ ಪಾಪವಾಗಿದೆ, ಪ್ರತಿಯೊಬ್ಬ ಮಾನವ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಭೂಮಿಯು ನಮಗಾಗಿ ದೇವರಿಂದ ಸೃಷ್ಟಿಯಾಗಿದೆ ಎಂದು ಕ್ರೈಸ್ತ ಧರ್ಮದಲ್ಲಿ ವಿವರಿಸಲಾಗಿದೆ.
  3. ಕನ್‌ಪ್ಯೂಸಿಯಸ್‌ ಧರ್ಮವು ಪ್ರಕೃತಿಯನ್ನು ಪೂಜಿಸುತ್ತಾ ಬಾಳುವುದನ್ನು ಹೇಳಿಕೊಟ್ಟಿದೆ. ಪ್ರಕೃತಿ ಇಲ್ಲದೆ ಮನುಷ್ಯನಿಲ್ಲ ಎಂಬುದು ಕನ್‌ಪ್ಯೂಸಸಿಯಸ್ ಧರ್ಮದ ತಿರುಳಾಗಿದೆ. ತಾನು ಪ್ರಕೃತಿಗೆ ಒಳ್ಳೆಯದನ್ನು ಮಾಡಿದರೆ ಪ್ರಕೃತಿ ತನಗಾಗಿ ಒಳ್ಳೆಯದನ್ನು ಮಾಡುತ್ತದೆ. ಕೊಡು ಮತ್ತು ಪಡೆದುಕೊಳ್ಳು ಎಂಬುದು ಪ್ರಕೃತಿಯ ನೀತಿಯಾಗಿದೆ. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವುದು ಅಂದರೆ ತನ್ನನ್ನು ತಾನು ಹಿಂಸಿಸಿಕೊಂಡಂತೆ ಎಂದು ಕನ್‌ಪ್ಯೂಸಿಯಸ್ ಧರ್ಮ ಸಾರಿದೆ.
  4. ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಪೈಗಂಬರ್ ಹೀರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದುಕೊಂಡನು. ಹಾಗಾಗಿ ಇಸ್ಲಾಂ ಧರ್ಮ ಪರಿಸರ ಸುಸ್ಥಿರ ಬಳಕೆಯ ವಿವರಣೆಯನ್ನು ನೀಡುತ್ತದೆ. ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡಬಾರದು ಸಾಧ್ಯವಾದಷ್ಟು ಪರಿಸರ ರಕ್ಷಣೆ ಆಗಬೇಕು ಎಂಬುದು ಇಸ್ಲಾಂ ಧರ್ಮದ ಕುರಾನಿನ ವಾಕ್ಯವಾಗಿದೆ.
  5. ಭಾರತದಲ್ಲಿಯೇ ಜನಿಸಿದ ಜೈನ ಧರ್ಮವು ಅಹಿಂಸೆಯನ್ನೇ ಪ್ರಧಾನ ಗುರಿಯನ್ನಾಗಿಸಿಕೊಂಡಿದೆ. ಭೂಮಿಯ ಮೇಲಿನ ಜೀವ ಜಂತುಗಳಿಗೆ ಹಾನಿಯಾಗುವಂತಹ ಯಾವುದೇ ಪಾಪಕರ್ಮಗಳನ್ನು ಮಾಡದಂತೆ ಸಂದೇಶ ನೀಡಿದೆ. ಜೈನರು ಹುಳ ಹುಪ್ಪಡಿಗಳು ಬಾಯಿಯೊಳಗೆ ಪ್ರವೇಶಿಸದಂತೆ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಸಾಯಂಕಾಲದೊಳಗೆ ಅವರು ಊಟವನ್ನು ಮುಗಿಸುತ್ತಾರೆ. ಕೃಷಿ ಕಾರ್ಯ ಜೈನರಲ್ಲಿ ನಿಷಿದ್ಧ. ಏಕೆಂದರೆ ಭೂಮಿ ಒಳಗಿನ ಯಾವುದೇ ಜೀವಿಗಳಿಗೆ ಹಾನಿಯಾಗುವುದನ್ನು ಅವರು ಸಹಿಸುವುದಿಲ್ಲ. 
  6. ಇನ್ನೂ ಹಿಂದೂ ಧರ್ಮದ ನಂಬಿಕೆ ಅಪಾರವಾಗಿದ್ದು ಹಲವಾರು ದೇವರುಗಳ ವಾಹನಗಳು ಪಶು ಪಕ್ಷಿಗಳಾಗಿವೆ. ಉದಾ: ಬ್ರಹ್ಮನು ಸೃಷ್ಟಿಕರ್ತ ಆತನ ವಾಹನ ಗರುಡ, ಶಿವನ ವಾಹನ ನಂದಿ, ಸರಸ್ವತಿಯ ವಾಹನ ನವಿಲು, ಪಾರ್ವತಿಯ ವಾಹನ ಹುಲಿ, ಶನಿಯ ವಾಹನ ಕಾಗೆ, ಗಣೇಶನ ವಾಹನ ಇಲಿ, ಯಮನ ವಾಹನ ಕೋಣ. ಇವುಗಳ ಹಿಂದಿನ ಸತ್ಯವೆಂದರೆ ಪ್ರಕೃತಿ ರಕ್ಷಣೆಯೇ ಆಗಿದೆ. ಭಾರತೀಯರು ಕೆಲವು ಹಬ್ಬ ಹರಿದಿನಗಳಲ್ಲಿ ವೃಕ್ಷ ಪೂಜೆ, ಗರಿಕೆ, ತುಳಸಿ, ಬಿಲ್ವ, ಅರಳಿ, ಬೇವು ಮುಂತಾದವುಗಳನ್ನು ಪೂಜಿಸಿ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಿಂದಿನ ಕಾಲದಲ್ಲಿ ಮಾನವರು ಪೃಥ್ವಿ, ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದರು. ಇಂದಿಗೂ ಇವುಗಳ ಪೂಜೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಇದು ಅಲ್ಲದೆ ಪ್ರಾಣಿ-ಪಕ್ಷಿ, ಗಿರಿ, ಶಿಖರ, ಬೆಟ್ಟ, ಗುಡ್ಡಗಳನ್ನು ದೈವಿಕ ದೃಷ್ಟಿಯಿಂದ ಕಾಣಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗಿಡಮರಗಳಿಗೆ ಗೌರವ ನೀಡುವುದು, ಅವುಗಳನ್ನು ದೇವರ ಸಮಾನವೆಂದು ಭಾವಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇದಕ್ಕೆ ಕಾರಣ ಮರಗಳು ನಮಗೆ ತಂಪಾದ ನೆರಳು, ಹಿತವಾದ ಗಾಳಿ, ಸುಂದರವಾದ ಜೀವನವನ್ನು ನೀಡುತ್ತವೆ. ಅದಕ್ಕೆ ಜಾನಪದ ಗೀತೆಯಲ್ಲಿ ಬೇವಿನ ಮರವನ್ನು ಹಾಡಿ ಹೋಗಲಾಗಿದೆ. ಬ್ಯಾಸಿಗೆ ದಿವಸಕ್ಕ ಬೇವಿನ ಮರತಂಪು ಎಂದು ಬಣ್ಣಿಸಲಾಗಿದೆ. ಈ ಮರಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕೆಲವು ಅರಣ್ಯಗಳಂತೂ ದೇವರ ಕಾಡು ಎಂದು ಹೆಸರಾಗಿವೆ. ಅಲ್ಲಲ್ಲಿ ಅರಣ್ಯಗಳ ನಡುವೆ ಮರದ ದೇವರುಗಳನ್ನು ಇಟ್ಟಿರುವುದನ್ನು ಇಂದಿಗೂ ಕಾಣಬಹುದಾಗಿದೆ.
  7. ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು. ಹೀಗಾಗಿ ಬೌದ್ಧ ಧರ್ಮೀಯರಿಗೆ ಬೋಧಿವೃಕ್ಷ ಅತ್ಯಂತ ಪವಿತ್ರವಾದ ಮರವಾಗಿದೆ.
  8. ವೈಷ್ಣವ ಧರ್ಮದಲ್ಲಿ ವಿಷ್ಣು ದಶಾವತಾರದಲ್ಲಿ ಪ್ರಾಣಿಗಳ ರೂಪದಲ್ಲಿ ಅವತರಿಸಿದ್ದಾನೆ. ಮತ್ಸ್ಯಾವತಾರ, ಕೂರ್ಮಾವತಾರ(ಆಮೆ), ವರಾಹಾವತಾರ(ಹಂದಿ) ರೂಪ ತಾಳಿದ್ದಾನೆ.

ಉಪಸಂಹಾರ

ಭಾರತೀಯ ಹಾಗೂ ಇತರ ಧರ್ಮಗಳು ಪರಿಸರ ಸಂರಕ್ಷಣೆಯನ್ನು ಕೇವಲ ಕರ್ತವ್ಯವಲ್ಲದೆ ಧಾರ್ಮಿಕ ಮತ್ತು ನೈತಿಕ ಹೊಣೆಗಾರಿಕೆಯಾಗಿ ಕಂಡಿವೆ. ಪ್ರಕೃತಿಯನ್ನು ಪೂಜ್ಯವಾಗಿ ಕಾಣುವ ಈ ಸಂಸ್ಕೃತಿ ಮಾನವನಲ್ಲಿ ಸಂಯಮ, ಅಹಿಂಸೆ ಮತ್ತು ಜವಾಬ್ದಾರಿಯುತ ಬಳಕೆಯ ಮನೋಭಾವವನ್ನು ಬೆಳೆಸಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿಸರ ಸಮತೋಲನವನ್ನು ಕಾಪಾಡಬಹುದು. ಹೀಗಾಗಿ ಧರ್ಮ ಮತ್ತು ಸಂಸ್ಕೃತಿ ಪರಿಸರ ಸಂರಕ್ಷಣೆಯ ಶಕ್ತಿಯುತ ಆಧಾರಗಳಾಗಿವೆ.

ಪರಿಸರ ನೀತಿ ಶಾಸ್ತ್ರ

ಪರಿಸರ ನೀತಿ ಶಾಸ್ತ್ರ

ಭೂಮಂಡಲದಲ್ಲಿರುವ ಸಮಸ್ತ ಜೀವ ಜಂತುಗಳು ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿವೆ. ಆದರೆ ಮಾನವ ಮಾತ್ರ ಇದಕ್ಕೆ ವಿರುದ್ಧವಾಗಿದ್ದಾನೆ. ಜೀವ ವೈವಿಧ್ಯತೆಗಳು ಪರಿಸರಕ್ಕೆ ಯಾವುದೇ ಹಾನಿಯನ್ನು ಮಾಡದೆ ಕಾಲಮಾನಕ್ಕೆ ಅನುಗುಣವಾಗಿ ಬದುಕು ಸಾಗಿಸಿಕೊಂಡು ಹೋಗುತ್ತವೆ. ಆದರೆ ಮನುಷ್ಯ ಮಾತ್ರ ಪರಿಸರಕ್ಕೆ ಯಾವಾಗಲೂ ಧಕ್ಕೆಯನ್ನು ತರುತ್ತಲೇ ಇರುತ್ತಾನೆ. ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ಎಸೆಗುತ್ತಲೇ ಬಂದಿದ್ದಾನೆ. ಅಭಿವೃದ್ಧಿಯ ನೆಪದಲ್ಲಿ ಮಾಡಬಾರದ ಪಾಪಗಳನ್ನು ಮಾಡುತ್ತಿದ್ದಾನೆ. ಜೀವ ಜಂತುಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದಾನೆ. ಪರಿಸರದ ಸಮತೋಲನವನ್ನು ತಪ್ಪಿಸುತ್ತಿದ್ದಾನೆ. ಇತರೆ ಜೀವಿಗಳ ಪ್ರಾಣಕ್ಕೆ ಸಂಚಕಾರ ತರುತ್ತಾ ತನ್ನ ಪ್ರಾಣವನ್ನು ಕೊನೆಗೊಳಿಸಲೆತ್ನಿಸುತ್ತಾನೆ. ಭವಿಷ್ಯದಲ್ಲಿ ಭರವಸೆ ಮೂಡಿಸುವ ಬದಲು ನಿರಾಶೆ ಮೂಡಿಸುತ್ತಿದ್ದಾನೆ. ಭೂಮಿಗೆ ತಾನೇ ಒಡೆಯನೆಂದು ಬಿಂಬಿಸುತ್ತ ಮೆರೆಯುತ್ತಿದ್ದಾನೆ. ಮಾನವೀಯತೆಯನ್ನು ಮರೆಯುತ್ತಿದ್ದಾನೆ. ತಾನು ಬದುಕಿದರೆ ಸಾಕು ಉಳಿದವರೆಂದೇನು ಆಗಬೇಕಾಗಿದೆ ಎಂಬ ನಿರ್ಲಿಪ್ತ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ನೀತಿ, ನಿಯಮ, ಸಂಸ್ಕಾರ, ಸಂಪ್ರದಾಯಗಳನ್ನು ಕಾಲ ಕಸವನ್ನಾಗಿ ಮಾಡಿಕೊಂಡಿದ್ದಾನೆ. ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸುತ್ತಿದ್ದಾನೆ. ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದಾನೆ. ನೀರನ್ನು ಚರಂಡಿ ಆಗಿಸಿದ್ದಾನೆ. ಭೂಮಿಯ ಮಣ್ಣನ್ನು ಮಲಿನಗೊಳಿಸಿದ್ದಾನೆ. ವಾಯುವನ್ನು ಇನ್ನಿಲ್ಲದಂತೆ ಕುಲಗೆಡಿಸುತ್ತಿದ್ದಾನೆ. ಶಬ್ದ ಮಾಲಿನ್ಯವಂತು ಹೇಳುತಿರದು. ಲಕ್ಷಾಂತರ ಜನರು ಶಬ್ದ ಮಾಲಿನ್ಯದಿಂದ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ತ್ಯಾಜ್ಯಗಳ ಸಂಗ್ರಹಕ್ಕೆ ಪಾರವೇ ಇಲ್ಲ. ಎಲ್ಲೇ ಹೋದರು ಗಬ್ಬು ವಾಸನೆ ಮೂಗಿಗೆ ಅಪ್ಪಳಿಸುತ್ತಿದೆ.  ಹೀಗಾಗಿ ಮಾನವನು ಪರಿಸರದ ಮಾಲಿನ್ಯವನ್ನು ಅರಿತು ಬದುಕಲು ಹಲವು ನೀತಿಯನ್ನು ಅನುಸರಿಸಬೇಕು. ಹಲವು ಸಮಸ್ಯೆಗಳಿಗೆ ತಾನೇ ಪರಿಹಾರ ಕಂಡುಕೊಳ್ಳಬೇಕು. ಬದುಕು ಮತ್ತು ಬದುಕಲು ಬಿಡು ಎಂಬ ನೀತಿಯನ್ನು ಪಾಲಿಸಬೇಕು. ಕೆಲವು ನೀತಿಯುತ ನಿರ್ಧಾರಗಳನ್ನು ಮಾನವ ಮಾಡಬೇಕು. ಅವುಗಳು  ಈ ಕೆಳಗಿನಂತಿವೆ.

1. ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಕಾದಿರಿಸುವುದು:

ನೈಸರ್ಗಿಕ ಸಂಪನ್ಮೂಲಗಳನ್ನು ಕೇವಲ ನಾವು ಮಾತ್ರ ಉಪಯೋಗಿಸಿದರೆ ಸಾಲದು. ಅದು ಮುಂದಿನ ಪೀಳಿಗೆಗೂ ಬೇಕು. ಹೀಗಿರುವಾಗ ಈ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಯಾವ ಪ್ರಯತ್ನವನ್ನು ಮಾಡದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿರುವುದು ನೈತಿಕವಾಗಿ ಒಳ್ಳೆಯದಲ್ಲ. ಪೆಟ್ರೋಲ್, ಕಲ್ಲಿದ್ದಲು, ಅರಣ್ಯ, ವನ್ಯಜೀವಿಗಳು ಮುಂತಾದವುಗಳನ್ನು ನಾವೇ ಹಾಳು ಮಾಡಿದರೆ ಬರಲಿರುವ ಮುಂದಿನ ತಲೆಮಾರುಗಳ ಗತಿ ಏನು. ನೆಲ, ಜಲ, ವಾಯು, ಶಬ್ದ ಮಾಲಿನ್ಯಗಳನ್ನು ನಾವೇ ಮಾಡಿ ಹೋದರೆ ನಾವೇ ಹಲವು ರೋಗಗಳನ್ನು ನಮ್ಮ ಮುಂದಿನವರಿಗೆ ಬಿಟ್ಟು ಹೋದಂತೆಲ್ಲವೆ. ಹೀಗೆ ಮಾಡುವುದು ನೈತಿಕವಾಗಿ ಎಷ್ಟು ಸರಿ. ಅದಕ್ಕಾಗಿ ನಾವು ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಕಾಪಾಡಿ ಅದನ್ನು ಮುಂದಿನವರಿಗೆ ಹಸ್ತಾಂತರಸಬೇಕಲ್ಲವೇ. ಅದು ಮನುಷ್ಯ ಧರ್ಮವಾಗಿದೆ.

2. ಇತರೆ ಜೀವ ವೈವಿಧ್ಯತೆಗಳಿಗೆ ಬದುಕುವ ಹಕ್ಕಿದೆ:

ಮಾನವನ ಹಾಗೆ ಭೂಮಿಯ ಮೇಲೆ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳು ಸಹ ಬದುಕುವ ಹಕ್ಕನ್ನು ಪಡೆದಿವೆ ಎಂಬುದು ಪರಿಸರದ ನೈತಿಕ ನಿಯಮವಾಗಿದೆ. ಈ ಜೀವಿಗಳ ಬದುಕನ್ನು ಕಿತ್ತುಕೊಳ್ಳುವುದು ಹಾಗೂ ಅವುಗಳ ಜೀವಕ್ಕೆ ಹಾನಿಯನ್ನುಂಟು ಮಾಡಿ ವಿನಾಶಕ್ಕೆ ಕಾರಣವಾಗುವ ಮನುಷ್ಯರಿಗೆ ಯಾವುದೇ ಹಕ್ಕಿಲ್ಲ. ನಾವು ಭೂಮಿಯ ಒಡೆಯರು ಇತರರೆಲ್ಲ ನಾಶವಾಗಬಲ್ಲ ವಸ್ತುಗಳು ಎಂಬ ಅಹಂಕಾರವನ್ನು ಮಾನವ ತೊಡೆದು ಹಾಕಬೇಕು. ನಾವು ಬದುಕೋಣ ಇತರರನ್ನು ಬದುಕಲು ಬಿಡೋಣ ಎಂಬ ತತ್ವವನ್ನು ಮಾನವ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

 3. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಾಗೂ ಲಭ್ಯತೆ:

ಇಂದು ನೈಸರ್ಗಿಕ ಲಭ್ಯತೆ ಹಾಗೂ ಬಳಕೆಯಲ್ಲಿ ಸಾಮಾನ್ಯವಾಗಿ ತಾರತಮ್ಯ ಕಂಡುಬರುತ್ತದೆ. ಉದಾ: ಅಭಿವೃದ್ಧಿ ಹೊಂದಿದ ದೇಶಗಳು ಬಹುಪಾಲು ಸಂಪನ್ಮೂಲಗಳನ್ನು ಖಾಲಿ ಮಾಡಿ ಅಭಿವೃದ್ಧಿ ಹೊಂದುತ್ತಿರುವ ಬಡದೇಶಗಳ ಸಂಪನ್ಮೂಲಗಳ ಮೇಲೆ ಕಣ್ಣು ಹಾಕಿವೆ. ಇದು ಬಡ ರಾಷ್ಟ್ರಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಉಪಾಯವಾಗಿದೆ. ಒಂದು ದೇಶದ ಆರ್ಥಿಕವಾಗಿ ಮುಂದುವರೆದ ನಗರಗಳು ಮತ್ತು ಅಲ್ಲಿನ ನಿವಾಸಿಗಳು ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚು ಸಂಪನ್ಮೂಲಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಗರವಾಸಿಗಳ ಅಮಾನವೀಯ ಚಟುವಟಿಕೆಗಳ ದುಷ್ಪರಿಣಾಮಗಳನ್ನು ಗ್ರಾಮೀಣ ಜನರು ಅನುಭವಿಸಬೇಕಾಗುತ್ತದೆ.

ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ನೋವು ಅನುಭವಿಸುತ್ತಾರೆ. ಉದಾ: ಕಾಡು ನಾಶವಾದರೆ ಹೆಣ್ಣು ಮಕ್ಕಳಿಗೆ ಉರುವಲು ಸೌದೆ ಇರಲಾರವು. ಅವರು ದನ, ಕರುಗಳಿಗೆ ಮೇವು ಸಂಗ್ರಹಿಸುವುದು ದುಸ್ತರವಾಗುತ್ತದೆ. ನೀರು ಖಾಲಿಯಾದರೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ನೀರು ತರಬೇಕು.

4. ಭಾರತದ ಸುರಕ್ಷತಾ ಸಂಪ್ರದಾಯದ ಮುಂದುವರಿಕೆ:

ಭಾರತವು ಶ್ರೀಮಂತ ಸಂಪನ್ಮೂಲಗಳಿಂದ ಕೂಡಿದ ಪ್ರಬಲ ರಾಷ್ಟ್ರವಾಗಿದೆ. ಇದು ಬಹು ಸಂಸ್ಕೃತಿಯ ದೇಶವಾಗಿದೆ. ಈ ಸಂಸ್ಕೃತಿಯು ಭಾರತದ ನದಿಗಳು, ಕೆರೆ, ತೊರೆ, ಸರೋವರ, ಸಾಗರ, ಗುಡ್ಡ, ಬೆಟ್ಟ, ಪರ್ವತಗಳು, ಅರಣ್ಯ ಹಾಗೂ ಪ್ರಾಣಿಗಳನ್ನು ದೇವರೆಂದು ಭಾವಿಸಿ ಅವುಗಳನ್ನು ಕಾಪಾಡುವ ಮೂಲಕ ನೈಸರ್ಗಿಕ ಸೃಷ್ಟಿಗೆ ಧಾರ್ಮಿಕ ಸ್ಥಾನಮಾನ ನೀಡುತ್ತಾ ಬಂದಿದೆ. ಪ್ರಾಚೀನ ಕಾಲದ ಎಲ್ಲಾ ದೇವಾಲಯಗಳ ಮುಂದೆ ನೀರಿನ ಪುಷ್ಕರಣಿಗಳು ನಿರ್ಮಾಣವಾಗಿರುವುದನ್ನು ನೋಡಿದರೆ ನಿಸರ್ಗವನ್ನು ದೇವರ ಸ್ಥಾನದಲ್ಲಿಟ್ಟ ಪ್ರಪಂಚದ ಒಂದೇ ಒಂದು ದೇಶವೆಂದರೆ ಅದು ಭಾರತ ಎಂದು ಹೇಳಬಹುದು. ನದಿ ಪರ್ವತಗಳನ್ನು ದೇವರ ಹೆಸರಿನಿಂದ ಕರೆಯಲಾಗಿದೆ. ಆಲದ ಮರ, ಅಶ್ವತ ಮರ ಹಾಗೂ ತುಳಸಿ ಸಸ್ಯಗಳನ್ನು ದೈವಿ ಮಟ್ಟಕ್ಕೆ ಏರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.

 5. ಪರಿಸರಸ್ನೇಹಿ ಜೀವನ ಶೈಲಿ:

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಪರಿಸರದ ಬಗ್ಗೆ ಗೌರವವಾಗಲಿ, ಕಾಳಜಿಯಾಗಲಿ ಇಲ್ಲವೆಂದು ಹೇಳಬಹುದು. ಹಾಗಾಗಿ ಅವರನ್ನು ಪರಿಸರದ ಕಡೆಗೆ ಸೆಳೆಯುವಂತೆ ಮಾಡಿ ಅವರಲ್ಲಿ ನಿಸರ್ಗ ಪ್ರೇಮವನ್ನು ಬೆಳೆಸಬೇಕಾದದ್ದು ದೊಡ್ಡವರ ಕರ್ತವ್ಯವಾಗಿದೆ. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಭವಿಸುವಂತೆ ಮಾಡಬೇಕೆಂದು ವಿದ್ಯಾರ್ಥಿಗಳು ಅಥವಾ ಯುವಕರಿಗೆ ತಿಳಿ ಹೇಳಬೇಕು.

6. ಭೂಮಿಯ ಬಗ್ಗೆ ಪ್ರತಿಯೊಬ್ಬ ಮಾನವನ ಪವಿತ್ರವಾದ ಭಾವನೆಯನ್ನು ಬೆಳೆಸಿಕೊಳ್ಳಬೇಕು.

7. ಪರಿಸರದ ಯಾವುದೋ ಒಂದು ಭಾಗವನ್ನು ಅನುಭವಿಸಿ ಹಾಗೆಯೇ ಬಿಟ್ಟು ಹೋಗದೆ ಅದನ್ನು ಮೊದಲಿನ ಸ್ಥಿತಿಗೆ ತಂದು ನಿಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

8. ಸಮಪಾಲು, ಸಮಾನ ಹಂಚಿಕೆ ಹಾಗೂ ಸಮಬಾಳು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

9. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವುದು ಸಹ ನೈತಿಕ ಜವಾಬ್ದಾರಿಯಾಗಿದೆ.

ಉಪಸಂಹಾರ

ಪರಿಸರವನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಮಾನವನ ನೈತಿಕ ಹೊಣೆಗಾರಿಕೆಯಾಗಿದೆ. ನಿಸರ್ಗದೊಂದಿಗೆ ಸಹಜವಾಗಿ ಬದುಕುವ ಸಂಸ್ಕೃತಿಯನ್ನು ನಾವು ಪುನರುಜ್ಜೀವನಗೊಳಿಸಬೇಕು. ಇತರೆ ಜೀವಿಗಳಿಗೆ ಬದುಕುವ ಹಕ್ಕನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳೇ ನಾಳೆಯ ಭವಿಷ್ಯವನ್ನು ರೂಪಿಸುತ್ತವೆ. ಹೀಗಾಗಿ ಪರಿಸರ ಸ್ನೇಹಿ ಬದುಕೇ ಶಾಶ್ವತ ಬದುಕು ಎಂಬುದನ್ನು ಅರಿಯಬೇಕು.

ಪರಿಸರ ಚಳುವಳಿಗಳು

ಪರಿಸರ ಚಳುವಳಿಗಳು

ಸ್ವಾಭಾವಿಕವಾಗಿ ಮಾನವ ಹಾಗೂ ಪರಿಸರದ ನಡುವೆ ಅತ್ಯಂತ ನಿಕಟವಾದ ಸಂಬಂಧವಿದೆ. ಮಾನವನು ಪರಿಸರದ ಒಂದು ಭಾಗವಾಗಿರುವುದರಿಂದ ಅದನ್ನು ಶುಚಿಯಾಗಿ ಹಾಗೂ ಅಚ್ಚು ಕಟ್ಟುತನದಿಂದ ಕಾಪಾಡಬೇಕು. ಶುದ್ಧ ಪರಿಸರವಿಲ್ಲದೆ ಆರೋಗ್ಯವಂತ ಜೀವನ ನಡೆಸುವುದು ಅಸಾಧ್ಯ. ಆದರೆ ಮಾನವ ತನ್ನ ದುರಾಸೆಯಿಂದಾಗಿ ಪರಿಸರವನ್ನು ಶೋಷಿಸುತ್ತಿದ್ದಾನೆ. ಹೀಗಾಗಿ ಪರಿಸರ ನಾಶ, ಪರಿಸರ ಮಾಲಿನ್ಯ ಹಾಗೂ ಪ್ರಕೃತಿ ವಿಕೋಪಗಳಿಂದ ಸಾಕಷ್ಟು ತೊಂದರೆಗಳು ಕಂಡುಬರುತ್ತವೆ. ನಗರೀಕರಣದಿಂದ ಉಂಟಾದ ತ್ಯಾಜ್ಯ ವಸ್ತುಗಳು ಇವುಗಳಿಂದ ಮಾನವನ ದಿನನಿತ್ಯದ ಸಹಜ ಜೀವನಕ್ಕೆ ನಷ್ಟ ಉಂಟಾಗುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇದರ ನಿರ್ವಹಣೆಯಲ್ಲಿ ಉಂಟಾಗುವ ವಿಳಂಬದಿಂದ ನೊಂದ ಜನರು ಹಾಗೂ ಪರಿಸರವಾದಿಗಳು ಚಳುವಳಿಯಲ್ಲಿ ತೊಡಗಿದರು. ಅಂತಹ ಹಲವಾರು ಚಳುವಳಿಗಳಲ್ಲಿ ಕೆಲವೊಂದು ಈ ಕೆಳಗಿನಂತೆ ವಿವರಿಸಲಾಗಿದೆ.

1. ಬಿಷ್ಣೊಯಿ ಚಳುವಳಿ: (Bishnoi movement)

ಸುಮಾರು 18ನೇ ಶತಮಾನದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಭಾರತದ ಪ್ರಥಮ ಹೋರಾಟ ಇದಾಗಿದೆ. ಈ ಕಾರಣದಿಂದ ಬಿಷ್ಣೊಯಿ ಸಮುದಾಯವನ್ನು ಭಾರತದ ಮೊದಲ ಪರಿಸರವಾದಿಗಳೆಂದು ಕರೆಯಲಾಗಿದೆ. ಈ ಹೋರಾಟದ ನಾಯಕತ್ವವನ್ನು ಅಮೃತದೇವಿ ವಹಿಸಿಕೊಂಡಿದ್ದರು. ಇದರಲ್ಲಿ ರಾಜಸ್ಥಾನದ ಖೇಜರ್ಲಿ ಮತ್ತು ಮಾರವಾರ ಪ್ರದೇಶದ ಸುಮಾರು 84 ಗ್ರಾಮಗಳ ಜನರು ಭಾಗವಹಿಸಿದ್ದರು. ಜೋದಪುರದ ರಾಜ ಅಭಯ್ ಸಿಂಗ್ 1730ರ ದಶಕದಲ್ಲಿ ತನಗೊಂದು ನೂತನ ಅರಮನೆಯನ್ನು ನಿರ್ಮಿಸಬೇಕೆಂದು ಯೋಚಿಸಿ ಖೇಜರ್ಲಿ ಎಂಬ ಗ್ರಾಮದಲ್ಲಿನ ಮರಗಳನ್ನು ಕಡಿದು ಅರಮನೆಗಾಗಿ ಪ್ರದೇಶವನ್ನು ಸ್ವಚ್ಛಗೊಳಿಸಲು ತನ್ನ ಸೈನಿಕರಿಗೆ ಆಜ್ಞೆ ಹೊರಡಿಸಿದನು. ತಮ್ಮ ಪೂರ್ವಜರು ಅನಾದಿಕಾಲದಿಂದಲೂ ರಕ್ಷಿಸಿ ಕೊಂಡು ಬಂದಿದ್ದ ದೈವಿ ಬನವನ್ನು ನಾಶ ಮಾಡುವುದನ್ನು ಸಹಿಸಲಾಗದೆ ಅಮೃತ ದೇವಿ ಎಂಬ ಹೆಣ್ಣು ಮಗಳು ಈ ರಾಜಾಜ್ಞೆಯನ್ನು ವಿರೋಧಿಸಿ ಚಳುವಳಿಯನ್ನು ಆರಂಭಿಸಿದಳು. ಆದರೆ ರಾಜನ ಸೈನಿಕರು ಅಮೃತ ದೇವಿಯವರ ವಿರೋಧವನ್ನು ಲೆಕ್ಕಿಸದೆ ಆಕೆಯನ್ನು ಹಾಗೂ ಆಕೆಯ ಸಹಚರರಾದ 363 ಜನರನ್ನು ಕೊಂದು ಹಾಕಿದರು. ಈ ಘಟನೆಯ ಮಾಹಿತಿಯನ್ನು ಪಡೆದ ರಾಜನು ಸ್ಥಳಕ್ಕೆ ಧಾವಿಸಿ ಬಂದು ಬಿಷ್ಣೊಯಿ ಜನಾಂಗಕ್ಕೆ ಕ್ಷಮೆಯಾಚಿಸಿ ಮರ ಕಡಿಯುವುದನ್ನು ನಿಲ್ಲಿಸುವಂತೆ ತನ್ನ ಸೈನಿಕರಿಗೆ ಅಜ್ಞಾಪಿಸಿದನು. ಬಿಷ್ಣೊಯಿ ಚಳುವಳಿಯಲ್ಲಿ ಸಾಕಷ್ಟು ಜನರ ಮಾರಣಹೋಮವಾಯಿತು. ಆದರೆ ಚಳುವಳಿ ಮಾತ್ರ ವಿಫಲವಾಗಲಿಲ್ಲ. ಸಾವಿರಾರು ಮರಗಳ ರಕ್ಷಣೆ ಆಯ್ತು, ನಂತರ ರಾಜನು ಬಿಷ್ಣೊಯಿ ರಾಜ್ಯವನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಿದನು. ಈಗಲೂ ಈ ಕಾನೂನು ಆ ಪ್ರದೇಶದಲ್ಲಿ ಜಾರಿಯಲ್ಲಿದೆ. ಈ ಚಳುವಳಿಯ ಮುಂದುವರಿಕೆಯೇ ಚಿಪ್ಕೋ ಚಳುವಳಿಯಾಗಿದೆ. ಭಾರತದ ಸರ್ಕಾರವು ಅಮೃತದೇವಿ ಬಿಷ್ಣೊಯಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿ ಹಾಗೂ ರಾಜಸ್ಥಾನ ಸರ್ಕಾರವು ಅಮೃತದೇವಿ ಸ್ಮೃತಿ ಪರ್ಯಾಯ ಪ್ರಶಸ್ತಿ ರೂಪದಲ್ಲಿ ಈ ಚಳುವಳಿಯ ಯಶಸ್ಸನ್ನು ಇಂದಿಗೂ ಗೌರವಿಸುತ್ತಿದೆ.

2. ಸೈಲೆಂಟ್ ವ್ಯಾಲಿ ಚಳುವಳಿ ಮೌನ ಕಣಿವೆ ಚಳುವಳಿ (Silent valley movement)

ಕೇರಳದ ಸೈಲೆಂಟ್ ವ್ಯಾಲಿ 89 ಚದರ ಕಿಲೋಮೀಟರ್ ಪ್ರದೇಶ ಅತ್ಯಂತ ಸುಂದರ ತಾಜಾ ಹಾಗೂ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿದ ಅರಣ್ಯ ಪ್ರದೇಶವಾಗಿದೆ. ಇದು ವೈವಿಧ್ಯಮಯವಾದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಸುಂದರ ಜಲಚರಗಳಿಂದ ಕೂಡಿದ ಕಣಜವಾಗಿದೆ. ಈ ಕಣಿವೆಯ ಮೂಲಕ ಕುಂತಿ ಪೂಜಾ ನದಿಯು ಹರಿಯುತ್ತಿದ್ದು ಈ ನದಿಗೆ 200 ಮೆಗಾ ವ್ಯಾಟ್ ವಿದ್ಯುತ್ ಯೋಜನೆಯನ್ನು ನಿರ್ಮಿಸಲು 1980 ರಲ್ಲಿ ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಈ ಪರಿಶುದ್ಧವಾದ ಅರಣ್ಯವನ್ನು ರಕ್ಷಿಸುವ ಸಲುವಾಗಿ ನಡೆದ ಮಹತ್ವಪೂರ್ಣವಾದ ಹೋರಾಟವನ್ನು ಸೈಲೆಂಟ್ ವ್ಯಾಲಿ ಚಳುವಳಿ ಎಂದು ಕರೆಯಲಾಗಿದೆ. ಈ ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಜನರನ್ನು ಪ್ರೇರೇಪಿಸುವಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಯಶಸ್ವಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಧ್ಯಾಪಕರು, ಸ್ಥಳೀಯ ನಾಗರಿಕರು ಹಾಗೂ ಪರಿಸರವಾದಿಗಳು ಈ ಚಳುವಳಿಯಲ್ಲಿ ಭಾಗವಹಿಸಿದರು. ಅಲ್ಲಿ ಜಲಾಶಯ ನಿರ್ಮಿಸುವುದರಿಂದ ಆಗುವ ನಷ್ಟಗಳು ಹಾಗೂ ಒಂದು ವೇಳೆ ಜಲಾಶಯ ನಿರ್ಮಾಣವಾದರೆ ಅದರಿಂದ ತಯಾರಿಸುವ ವಿದ್ಯುತ್ತು ಜನಸಾಮಾನ್ಯರಿಗೆ ದೊರಕದೆ ಕೇವಲ ಕೈಗಾರಿಕಾ ವಲಯಗಳಿಗೆ ಮಾತ್ರ ಸರಬರಾಜು ಆಗುತ್ತದೆ ಎಂಬುದನ್ನು ಜನರಿಗೆ ತಿಳಿ ಹೇಳಲಾಯಿತು. ಹಾಗೂ ಈ ಯೋಜನೆಯಿಂದ ಜೈವಿಕ ವೈವಿಧ್ಯತೆಯ ಮರಣಹೋಮದ ಬಗ್ಗೆಯೂ ತಿಳಿಸಲಾಯಿತು. ಇವೆಲ್ಲ ಕಾರಣಗಳನ್ನು ಮುಂದೆ ಇಟ್ಟುಕೊಂಡು ಚಳುವಳಿಯನ್ನು ಶಾಂತಿಯುತವಾಗಿ ನಡೆಸಲಾಯಿತು. ಅರಣ್ಯ ನಾಶವನ್ನು ತಡೆಯುವಂತೆ ಹೋರಾಡಲಾಯಿತು. ಪರಿಣಾಮವಾಗಿ ಕೇಂದ್ರ ಸರ್ಕಾರ ಎಂ ಜಿ ಕೆ ಮೆನನ್ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. 1983 ರಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸ್ಸು ಮಾಡಿತು. ಸಮಿತಿಯ ಶಿಫಾರಸಿನ ಮೇರೆಗೆ 1985ರಲ್ಲಿ ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೈ ಬಿಡಲಾಯಿತು.

3. ಚಿಪ್ಕೋ ಚಳುವಳಿ:(Chipko movement)

ಭಾರತದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಹಲವಾರು ಚಳುವಳಿಗಳಲ್ಲಿ 1970ರಲ್ಲಿ ನಡೆದ ಚಿಪ್ಕೋ ಚಳುವಳಿಯು ಅತ್ಯಂತ ಪ್ರಮುಖವಾದದ್ದು ಆಗಿದೆ. ಪರಿಸರ ಸಂರಕ್ಷಣೆಯಲ್ಲಿ ನಡೆದ ಚಳುವಳಿಗಳಲ್ಲಿ ಇದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಇದು ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೇ ಹಿಮಾಲಯದ ಪರಿಸರದ ಬಗ್ಗೆ ಕಾಳಜಿ ವಹಿಸುವುದರ ಕುರಿತು ಜನಜಾಗೃತಿಯನ್ನು ಮೂಡಿಸಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಿಮಾಲಯವನ್ನು ರಕ್ಷಿಸುವ ಹಲವಾರು ಚಿಕ್ಕಪುಟ್ಟ ಹೋರಾಟಗಳು ನಡೆದಿದ್ದವು. ಹಿಮಾಲಯದಲ್ಲಿ ದೊರಕುವ ಅಮೂಲ್ಯವಾದ ಗಿಡ ಮೂಲಿಕೆಗಳ ಕುರಿತು ಮಾಹಿತಿ ಹಿಮಾಲಯವು ಶತ್ರುಗಳಿಂದ ಭಾರತವನ್ನು ರಕ್ಷಿಸಿ, ಭಾರತಕ್ಕೆ ಬಿಸಿ ಗಾಳಿಯ ಬದಲಾಗಿ ತಂಪುಗಾಳಿಯನ್ನು ನೀಡುತ್ತದೆ. ಹಿಮಾಲಯವು ಸಿಂಧು ಗಂಗಾ ಬ್ರಹ್ಮಪುತ್ರ ನದಿಗಳ ಹುಟ್ಟಿಗೆ ಕಾರಣವಾಗಿದೆ. ಇಲ್ಲಿರುವ ಅರಣ್ಯ ಅತ್ಯಂತ ಪವಿತ್ರವಾಗಿದೆ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಯಿತು. ಇದರ ಜೊತೆಗೆ ಹಿಮಾಲಯದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಪಾರ ಮರಗಳನ್ನು ಕಡೆಯಲಾಯಿತು. ಇದರಿಂದ ಮೇಲ್ಮಣ್ಣು ಸಡಿಲಗೊಂಡು ಪ್ರವಾಹಗಳು ಸಂಭವಿಸಿ ಸ್ಥಳೀಯರಿಗೆ ಕಿರಿಕಿರಿ ಆಯ್ತು. 1970ರ ದಶಕದಲ್ಲಿ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಉಂಟಾಯಿತು. ಅಲ್ಲಿಯೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಾಸೋಲಿ ಗ್ರಾಮ ಸ್ವರಾಜ್ಯ ಮಂಡಲದ ಕಾರ್ಯಕರ್ತರು ಅಲ್ಲಿನ ಅರಣ್ಯ ಭೂಮಿ ಜನರು ಪರಸ್ಪರ ಅವಲಂಬನೆಯ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು. ಕಾಡಿದ್ದರೆ ಮಾತ್ರ ನಾವು ಎಂಬುದನ್ನು ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರವು ಹಳ್ಳಿಯ ಜನರಿಗೆ ಕೃಷಿ ಉಪಕರಣಗಳನ್ನು ತಯಾರಿಸಲು ಅಗತ್ಯವಿರುವ ಕಡಿಮೆ ಸಂಖ್ಯೆಯ ಮರಗಳನ್ನು ಕಡಿಯಲು ನಿರಾಕರಿಸಿತು. ಬೃಹತ್ ಕ್ರೀಡಾ ಉತ್ಪಾದನಾ ಕಂಪನಿಗೆ ಅರಣ್ಯವನ್ನು ಕಡಿಯಲು ಅನುಮತಿ ನೀಡಿತು. ಇದು ಗ್ರಾಮಸ್ಥರ ಆ ಆಕ್ರೋಶಕ್ಕೆ ಕಾರಣವಾಯಿತು. 1973 ರಲ್ಲಿ ಮೊದಲ ಬಾರಿಗೆ ಚಿಪ್ಕೋ ಚಳುವಳಿ, ಆರಂಭವಾಯಿತು. ಜನರು ಮರಗಳ ಕಾಂಡಗಳಿಗೆ ಪವಿತ್ರವಾದ ದಾರಗಳನ್ನು ಕಟ್ಟಿ ಅವುಗಳನ್ನು ಅಪ್ಪಿಕೊಳ್ಳುವ ಮೂಲಕ ಈ ಚಳುವಳಿಗೆ ಚಾಲನೆ ನೀಡಿದರು. ಅರಣ್ಯ ಉತ್ಪನ್ನಗಳನ್ನು ಉಪಯೋಗಿಸುವ ಹಕ್ಕು ಮಾತ್ರ ಇಲ್ಲಿನ ಗ್ರಾಮೀಣರಿಗೆ ಇದೆ ಎಂಬುದು ಈ ಚಳುವಳಿಯ ಗುರಿಯಾಗಿತ್ತು. ಮಹಿಳೆಯರು ಈ ಚಳುವಳಿ ಭಾಗವಹಿಸಿದ್ದರು. 1978 ರಲ್ಲಿ ಮಹಿಳೆಯರ ಮೇಲೆ ಗುಂಡು ಹಾರಿಸುವ ಮೂಲಕ ಚಳುವಳಿ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತು. ನಂತರ ಚಂಡಿ ಪ್ರಸಾದ್ ಭಟ್ಟ ನೇತೃತ್ವದಲ್ಲಿ ಚಳುವಳಿ ಉಗ್ರವಾಯಿತು.

ಆಗ ಉತ್ತರಖಾಂಡ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣರವರು ಘಟನಾ ಪರಿಶೀಲನೆಗೆ ಸಮಿತಿಯನ್ನು ನೇಮಿಸಿದರು. ಈ ಸಮಿತಿ ಸ್ಥಳೀಯರ ಪರವಾಗಿ ವರದಿ ಸಲ್ಲಿಸಿತು. ಸ್ತ್ರೀಯರು ಉತ್ತರ ಕಾಶಿಯಿಂದ ಕಸೌಲಿಯವರೆಗೆ ಗುಡ್ಡಗಾಡು ಪ್ರದೇಶದಲ್ಲಿ 75 ಕಿ.ಮೀ ವರೆಗೆ ಪಾದಯಾತ್ರೆ ನಡೆಸಿದ್ದಕ್ಕೂ ಸಾರ್ಥಕವಾಯಿತು. ಈ ಚಳುವಳಿಯನ್ನು ಸುಂದರ್ಲಾಲ್ ಬಹುಗುಣ, ಘನ ಶ್ಯಾಮ್‌ ಶಾತೂರಿ, ಹಿಂದೂ ಟೀಕೇಕಾರ್ ಹಾಗೂ ಧೂಮಸಿಂಗ್ ನೇಗಿ ಮತ್ತಿತರು ಬೆಂಬಲಿಸಿದ್ದರು.

4. ಅಪ್ಪಿಕೋ ಚಳುವಳಿ: (Appiko movement)

ಉತ್ತರ ಭಾರತದಲ್ಲಿ ನಡೆದ ಚಿಪ್ಕೋ ಚಳುವಳಿಯಿಂದ ಪ್ರೇರಿತರಾದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಪಾಂಡುರಂಗ ಹೆಗಡೆ ನೇತೃತ್ವದಲ್ಲಿ ಚಳುವಳಿಯನ್ನು ಆರಂಭಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಕಾಂಟ್ರಾಕ್ಟರ್‌ಗಳಿಗೆ ಮರಕಡಿಯಲು ಅನುಮತಿ ನೀಡಿದ ಸರ್ಕಾರದ ವಿರುದ್ಧ ಚಳುವಳಿಗಾರರು ಹೋರಾಟ ಆರಂಭ ಮಾಡಿದರು. ಮರ ಕಡಿಯುವುದನ್ನು ತಡೆಯಲು ಮರಗಳನ್ನೇ ಅಪ್ಪಿಕೊಂಡರು. ಮರಗಳನ್ನು ಕಡಿಯುವುದರಿಂದ ಮುಂದೆ ಆಗಬಹುದಾದ ಸಮಸ್ಯೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಲಾಯಿತು. ಜನಪದ ನೃತ್ಯ, ಬೀದಿ ನಾಟಕ ಇತ್ಯಾದಿ ಅಭಿನಯಗಳ ಮುಖಾಂತರ ಅರಿವು ಮೂಡಿಸಲಾಯಿತು. ಜೀವವನ್ನಾದರೂ ತೊರೆದೆವು ಆದರೆ ಮರಗಳನ್ನು ಕಡೆಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ಎಲ್ಲಾ ಕಡೆಗೂ ಸಾರಲಾಯಿತು. ಹಿಂದಿಯಲ್ಲಿ ಚಿಪ್ಕೋ ಎಂದರೆ ಕನ್ನಡದಲ್ಲಿ ಅಪ್ಪಿಕೋ ಅಥವಾ ತಬ್ಬಿಕೋ ಎಂದರ್ಥ. ಈ ಚಳುವಳಿಯಲ್ಲಿ ಚಂಡಿ ಪ್ರಸಾದ್ ಭಟ್ಟ ಹಾಗೂ ಸುಂದರಲಾಲ್ ಬಹುಗುಣರು ಭಾಗವಹಿಸಿದ್ದರು.

5. ಜಂಗಲ್ ಬಚಾವೋ ಆಂದೋಲನ: (Jungle bachao andolana)

ಭಾರತ ಸರ್ಕಾರವು ಬಿಹಾರಿನ ಸಿಂಗ್ಬೂಂ ಜಿಲ್ಲೆಯ ನೈಸರ್ಗಿಕ ಸಾಲ್ ಅರಣ್ಯದ ಪ್ರದೇಶದಲ್ಲಿ ವಾಣಿಜ್ಯ ತೇಗದ ಮರಗಳನ್ನು ನೆಡಲು ಪ್ರಸ್ತಾಪವನ್ನು ಮಾಡಿತು. ಈ ಯೋಜನೆಯನ್ನು ಸ್ಥಳೀಯ ಸಮುದಾಯಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿ 1982 ರಲ್ಲಿ ಜಂಗಲ್ ಬಚಾವೋ ಚಳುವಳಿಯನ್ನು ಆರಂಭಿಸಿದರು. ಅದರ ಪರಿಣಾಮವಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟಿತು.

6. ನರ್ಮದಾ ಬಚಾವೋ ಆಂದೋಲನ:

ಗುಜರಾತಿನ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧ ಮಣಿ ವೇಲಿ ಗ್ರಾಮದ ನೌಕರರು, ಗ್ರಾಮಸ್ಥರು, ಬುಡಕಟ್ಟು ಜನಾಂಗದವರು, ಪರಿಸರವಾದಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಚಳುವಳಿ ಆರಂಭಿಸಿದರು. ಈ ಚಳುವಳಿಯ ನಾಯಕತ್ವವನ್ನು ಮೇಧಾ ಪಾಟ್ಕರ್ ಹಾಗೂ ಬಾಬಾ ಅಮ್ಟೆ ವಹಿಸಿದ್ದರು. ಈ ಜಲಾಶಯದಿಂದ ಸಾವಿರಾರು ಜನರು ತಮ್ಮ ಆಸ್ತಿ ಹಾಗೂ ಮನೆಗಳನ್ನು ಕಳೆದುಕೊಂಡರು. ಆದರೆ ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಲಿಲ್ಲ. ನಂತರ ಜಲಾಶಯದ ಎತ್ತರವನ್ನು 130 ರಿಂದ 90 ಮೀಟರ್‌ಗೆ ಇಳಿಸಬೇಕೆಂದು ಬೇಡಿಕೆ ಇಡಲಾಯಿತು. 2018 ನಿರ್ದೇಶನದಂತೆ ಇದರ ಎತ್ತರವನ್ನು 90 ಮೀಟರ್ ಇಳಿಸಲಾಯಿತು.

7. ಪಶ್ಚಿಮ ಘಟ್ಟ ಉಳಿಸಿ ಚಳುವಳಿ:

1970ರಲ್ಲಿ ಕುದುರೆಮುಖ ಯೋಜನೆಯ ಕುರಿತಾದ ಚಳುವಳಿ ಆರಂಭವಾಯಿತು. ಕುದುರೆಮುಖದಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಗಣಿಗಾರಿಕೆಗೆ ಸ್ವಾದೀನ ಪಡಿಸಿಕೊಂಡು ತೊಂದರೆಗೆ ಒಳಗಾದ 4000 ಕುಟುಂಬಗಳಿಗೆ ಯಾವುದೇ ಪುನರ್ವಸತಿ ಕಲ್ಪಿಸಲಿಲ್ಲ. ಇದರಿಂದ ಜಾಗೃತರಾದ ಪರಿಸರವಾದಿಗಳು ಶಿವಮೊಗ್ಗ, ಕಳಸ, ಶೃಂಗೇರಿಗಳಲ್ಲಿ ಸೈಕಲ್ ಜಾತಾವನ್ನು ಪ್ರಾರಂಭಿಸಿ ತುಂಗಾ ಮೂಲವನ್ನು ಉಳಿಸಿ ಗಣಿಗಾರಿಕೆಯನ್ನು ಅಳಿಸಿ ಎಂಬ ಘೋಷಣೆಯೊಂದಿಗೆ ಚಳುವಳಿಯನ್ನು ತೀವ್ರಗೊಳಿಸಿದರು. ಇದೇ ಸಮಯದಲ್ಲಿ ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ಇರುವ ಪಶ್ಚಿಮ ಘಟ್ಟ ಪ್ರದೇಶವನ್ನು ಉಳಿಸಿ ಎಂಬ ಆಂದೋಲನವನ್ನು ಕೈಲಾಸ ಮಲ್ಹೊತ್ರಾ ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಸುಮಾರು 100 ದಿನಗಳ ಕಾಲ ನಡಿಗೆಯಿಂದ ಗೋವಾ ತಲುಪಿ ಅಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಿದರು.

 8. ತೆಹ್ರಿ ಅಣೆಕಟ್ಟು ವಿವಾದ: (Tehri dam conflict)

1960ರಲ್ಲಿ ಉತ್ತರಖಾಂಡದ ತೆಹ್ರಿ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಿಸಲಾಯಿತು. ಇದು ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಹ ನಿಯಂತ್ರಣದ ಉದ್ದೇಶವನ್ನು ಹೊಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ಸ್ಥಳಾಂತರವಾದವು ಮತ್ತು ಹಲವಾರು ಗ್ರಾಮಗಳು ಮುಳುಗಡೆಯಾದವು. ಸ್ಥಳೀಯರು ಇದನ್ನು ವಿರೋಧಿಸಿದರು ಜೊತೆಗೆ ಪುನರ್ವಸತಿಗೆ ಬೇಡಿಕೆ, ಜೀವ ವೈವಿಧ್ಯದ ರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಸಂದರ್ಭ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾಯಿತು.

ಉಪಸಂಹಾರ

ಪರಿಸರ ಚಳುವಳಿಗಳು ಮಾನವ ಮತ್ತು ಪ್ರಕೃತಿಯ ಸಹಜ ಸಹವಾಸವನ್ನು ಉಳಿಸುವ ಮಹತ್ವದ ಪ್ರಯತ್ನಗಳಾಗಿವೆ. ಬಿಷ್ಣೊಯಿ, ಚಿಪ್ಕೋ, ಅಪ್ಪಿಕೋ, ನರ್ಮದಾ ಬಚಾವೋ ಮುಂತಾದ ಚಳುವಳಿಗಳು ಜನಶಕ್ತಿಯ ಮಹತ್ವವನ್ನು ತೋರಿಸಿವೆ. ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರಿ ಪರಿಸರ ಸ್ನೇಹಿ ನಿರ್ಧಾರಗಳಿಗೆ ದಾರಿ ಮಾಡಿಕೊಟ್ಟಿವೆ. ಇಂತಹ ಚಳುವಳಿಗಳಿಂದ ನಮಗೆ ಪ್ರಕೃತಿಯ ಮೌಲ್ಯ ಅರಿಯುವ ಪಾಠ ಸಿಕ್ಕಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೆಂಬ ಸಂದೇಶವನ್ನು ಇವುಗಳು ಬಲವಾಗಿ ಸಾರುತ್ತವೆ.