ಮೂಲಭೂತ ಹಕ್ಕುಗಳ ವರ್ಗೀಕರಣ

ಮೂಲಭೂತ ಹಕ್ಕುಗಳ ವರ್ಗೀಕರಣ

ಭಾರತೀಯ ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯಲ್ಲ, ಮಾನವೀಯ ಮೌಲ್ಯಗಳ ಪ್ರತಿಬಿಂಬವೂ ಹೌದು. ಪ್ರತಿಯೊಬ್ಬ ನಾಗರಿಕನ ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುವ ಉದ್ದೇಶದಿಂದ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಈ ಹಕ್ಕುಗಳು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಭದ್ರತೆಯನ್ನು ಒದಗಿಸುತ್ತವೆ.

ಸಂವಿಧಾನದಲ್ಲಿ ಅಡಕವಾಗಿರುವ 6 ಮೂಲಭೂತ ಹಕ್ಕುಗಳು ಈ ಕೆಳಗಿನಂತಿವೆ.

1. ಸಮಾನತೆಯ ಹಕ್ಕು (Right to equality) (ವಿಧಿಗಳು 14, 15, 16, 17 ಮತ್ತು 18)

ಸಂವಿಧಾನದ 14,15,16,17 ಮತ್ತು 18ನೇ ವಿಧಿಗಳು ಸಮಾನತೆಯ ಹಕ್ಕಿನ ಕುರಿತು ವಿವರಣೆಗಳನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಮಾನತೆ ಬೇಕು. ಭಾರತದ ಸಂವಿಧಾನದ ಪಿತೃಗಳು ಸಹ ಭಾರತೀಯರು ಎಲ್ಲರೂ ಸಮಾನರು ಎಂಬ ತತ್ವಕ್ಕೆ ಮಹತ್ವ ನೀಡಿದ್ದಾರೆ. ಸಮಾನತೆ ಹಕ್ಕು ಈ ಕೆಳಕಂಡ ವಿಧಿಗಳನ್ನು ಒಳಗೊಂಡಿದೆ.

a. ಕಾನೂನಿನ ಮುಂದೆ ಸಮಾನತೆ:

ಸಂವಿಧಾನದ 14ನೇ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಕಾನೂನಿನ ದೃಷ್ಟಿಯಲ್ಲಿ ರಾಜ್ಯವು ತಾರತಮ್ಯ ಮಾಡುವಂತಿಲ್ಲ. ಎಲ್ಲಾ ಪ್ರಜೆಗಳಿಗೂ ಸಮಾನತೆಯನ್ನು ಒದಗಿಸಬೇಕು. ಯಾವುದೇ ಜಾತಿ, ಲಿಂಗ, ವರ್ಣ, ಜನಾಂಗ, ಜನ್ಮಸ್ಥಳ, ಪಂಗಡ, ಬುಡಕಟ್ಟು ವರ್ಗ ಇತ್ಯಾದಿಗಳ ಆಧಾರದ ಮೇಲೆ ಭೇಧ-ಭಾವ ಮಾಡುವಂತಿಲ್ಲ. ಕಾನೂನಿನ ರಕ್ಷಣೆ ಎಲ್ಲರಿಗೂ ಇದೆ. ಕಾನೂನು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿದೆ. ಈ ಹಕ್ಕುಗಳನ್ನು ಸರ್ಕಾರವೇನಾದರೂ ಕಿತ್ತುಕೊಳ್ಳಲು ಯತ್ನಿಸಿದರೆ ಕಾನೂನಿನ ಮೊರೆ ಹೋಗಲು ಅವಕಾಶ ಇದೆ. ಸಂವಿಧಾನದ 361ನೇ ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಹಾಗೂ ವಿದೇಶಗಳ ಕಾರ್ಯಾಂಗೀಯ ಮುಖ್ಯಸ್ಥರು ಅಥವಾ ರಾಯಭಾರಿಗಳಿಗೆ ಈ ವಿಧಿಯು ವಿನಾಯಿತಿಯನ್ನು ನೀಡಿದೆ.

b. ವಿಧಿ 15 ತಾರತಮ್ಯ ನಿಷೇಧ:

ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಕುಲ, ಜಾತಿ, ಲಿಂಗ, ಹಾಗೂ ಜನ್ಮಸ್ಥಳದ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ. ಇವುಗಳ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳು, ಅಂಗಡಿಗಳು, ಹೋಟೆಲುಗಳು, ಸಾರ್ವಜನಿಕ ಮನರಂಜನಾ ಪ್ರದೇಶಗಳು, ಸಾರ್ವಜನಿಕ ರೆಸ್ಟೋರೆಂಟುಗಳು, ಕುಡಿಯುವ ನೀರಿನ ಬಾವಿಗಳು, ರಸ್ತೆಗಳು, ದೇವಾಲಯಗಳು ಇವೇ ಮೊದಲಾದವುಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಈ ಎಲ್ಲವುಗಳನ್ನು ಎಲ್ಲರೂ ಸಮಾನವಾಗಿ ಅನುಭವಿಸಲು ಅವಕಾಶವಿದೆ. ಮತ್ತು ವಿಶೇಷ ಕ್ರಮಗಳ ಮೂಲಕ ಮಹಿಳೆಯರ, ಮಕ್ಕಳ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳ ಜನಾಂಗದವರಿಗೆ ಈ ಮೇಲ್ಕಂಡ ಸ್ಥಳಗಳಿಗೆ ಮುಕ್ತವಾಗಿ ಪ್ರವೇಶವನ್ನು ನೀಡಬೇಕು. ಯಾವುದೇ ನಿರ್ಬಂಧವನ್ನು ಮಾಡಕೂಡದು. ಪರಿಶಿಷ್ಠ ಜಾತಿ ಮತ್ತು ವರ್ಗದವರ ನೇಮಕಾತಿಯಲ್ಲಿಯೂ ಯಾವುದೇ ಅಡೆತಡೆಗಳನ್ನು ಒಡ್ಡಕೂಡದು.

c. ವಿಧಿ 16 ಅವಕಾಶಗಳ ಸಮಾನತೆ:

ಸಂವಿಧಾನದ 16ನೇ ವಿಧಿಯ ಪ್ರಕಾರ ಭಾರತದ ಪ್ರತಿಯೊಬ್ಬ ಪೌರನೂ ಸಹ ಸರ್ಕಾರಿ ಸೇವೆಗೆ ಸೇರಲು ಅರ್ಹನಾಗುತ್ತಾನೆ. ಧರ್ಮ, ಕುಲ, ಜಾತಿ, ವರ್ಣ, ಹುಟ್ಟು, ಸ್ಥಾನಮಾನಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಎಸಗದೇ ನೇಮಕಾತಿಗಳನ್ನು ಮಾಡುವುದು. ಅರ್ಹತೆಯ ಆಧಾರದ ಮೇಲೆ ಅವರಿಗೆ ನೌಕರಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನೇಮಕಾತಿ ಸಂದರ್ಭದಲ್ಲಿ ಜೇಷ್ಠತೆಯನ್ನು ಗಣನೆಗೆ ತೆಗೆದುಕೊಳ್ಳುವ ಭರವಸೆಯನ್ನು ಸಂವಿಧಾನದಲ್ಲಿ ನೀಡಲಾಗಿದೆ. ಆದರೆ ಧಾರ್ಮಿಕ ಸಂಸ್ಥೆಗಳ ನೇಮಕಾತಿಗೆ ಸಂವಿಧಾನದ 16ನೇ ವಿಧಿ ಅನ್ವಯವಾಗುವುದಿಲ್ಲವೆಂಬುದನ್ನು ಗಮನಿಸಬೇಕಾದ ವಿಷಯವಾಗಿದೆ. ಆಯಾ ಜಾತಿಗೆ ನೀಡಿದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳಾಗದಂತೆ ಕ್ರಮ ಕೈಗೊಳ್ಳಬೇಕು. ಆದರೆ ಅಲ್ಪ ಸಂಖ್ಯಾತರು ನಡೆಸುವ ವಿದ್ಯಾಸಂಸ್ಥೆಗಳಿಗೆ ಇದರಿಂದ ವಿನಾಯಿತಿ ಇದೆ.

d. ವಿಧಿ 17 ಅಸ್ಪೃಶ್ಯತೆ ನಿರ್ಮೂಲನೆ:

ಸಂವಿಧಾನದ 17ನೇ ವಿಧಿಯ ಪ್ರಕಾರ ಭಾರತದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ದಲಿತರನ್ನು ಮೇಲೆತ್ತುವುದೇ ಸಂವಿಧಾನದ ಪ್ರಥಮ ಗುರಿಯಾಗಿದೆ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿಯೇ ಮಹಾತ್ಮಾ ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣೆಗೆ ಅವಿರತ ಹೋರಾಟ ಮಾಡಿದರು. ಅವರ ಪ್ರಯತ್ನದ ಫಲವಾಗಿ ಸಂವಿಧಾನದ 17ನೇ ವಿಧಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಯಿತು. ಸಂವಿಧಾನದ ಪ್ರಕಾರ

  1. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
  2. ದೇವಾಲಯಗಳ ಪ್ರವೇಶ ಹಾಗೂ ಪೂಜೆಯನ್ನು ನಿರಾಕರಣೆ ಮಾಡುವ ಹಾಗಿಲ್ಲ.
  3. ಅಂಗಡಿ, ಹೋಟೆಲ್‌, ಸಾರ್ವಜನಿಕ ಮನರಂಜನಾ ಸ್ಥಳ, ಬಾವಿಗಳು, ರಸ್ತೆಗಳು ಹಾಗೂ ಸ್ಮಶಾನ ಮುಂತಾದವುಗಳಿಗೆ ಅಸ್ಪೃಶ್ಯರಿಗೆ ಪ್ರವೇಶ ನೀಡುವುದು.
  4. ನಿಮ್ನ ಜಾತಿಯ ಜನರೆಂದು ಹೀಗಳೆಯುವಂತಿಲ್ಲ ಮತ್ತು ಅಸ್ಪ್ರಶ್ಯತೆಯನ್ನು ಪುರಸ್ಕರಿಸಬಾರದು.
  5. ಅಸ್ಪೃಶ್ಯತೆ ಆಚರಣೆ ಸರಿಯಾಗಿದೆ ಮತ್ತು ಕ್ರಮಬದ್ಧವಾಗಿದೆ ಎಂದು ಹೇಳುವಂತಿಲ್ಲ.

ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ 1955ರ ಕಾಯ್ದೆ ಅನ್ವಯ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಅಸ್ಪೃಶ್ಯತಾ ಆಚರಣೆಗೆ ಬೆಂಬಲ ನೀಡಿದ ಅಪರಾಧಿಯನ್ನು ಸಂಸತ್ತು ಅಥವಾ ರಾಜ್ಯ ಶಾಸಕಾಂಗದ ಚುನಾವಣೆಯಲ್ಲಿ ಆಯ್ಕೆಯಾಗದಂತೆ ತಡೆಹಿಡಿಯಬಹುದು. 1989 ರಲ್ಲಿ ಸಂಸತ್ತಿನಿಂದ ಅಂಗೀಕಾರ ಪಡೆದ ಪರಿಶಿಷ್ಠ ಜಾತಿ ಜನಾಂಗದ ಮೇಲಿನ ದೌರ್ಜನ್ಯಗಳ ನಿಷೇಧ ಕಾಯ್ದೆ ಜನವರಿ 30 1990 ರಿಂದ ಜಾರಿಗೆ ಬಂದಿದೆ.

e. ವಿಧಿ 18 ಬಿರುದುಗಳ ರದ್ಧತಿ:

ಸಂವಿಧಾನದ 18ನೇ ವಿಧಿಯಂತೆ ರಾಜ್ಯವು ಯಾರಿಗೂ ಬಿರುದು ಬಾವಲಿಗಳನ್ನು ನೀಡುವುದಾಗಲೀ, ಭಾರತೀಯ ಪೌರನು ವಿದೇಶಿಗಳಿಂದ ಯಾವುದೇ ಬಿರುದು ಬಾವಲಿಗಳನ್ನು ಪಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಭಾರತ ಸರ್ಕಾರದ ಸೇವೆಯಲ್ಲಿರುವ ವಿದೇಶಿಯನು ಸಹ ಭಾರತ ಸರ್ಕಾರದ ಅನುಮತಿಯನ್ನು ಪಡೆಯದೇ ಬಿರುದುಗಳನ್ನು ಸ್ವೀಕರಿಸುವಂತಿಲ್ಲ. ಆದರೆ ಮಿಲಿಟರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅರ್ಹವಾದವರಿಗೆ ಬಿರುದುಗಳನ್ನು ನೀಡಬಹುದಾಗಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದವರಿಗೆ ರಾಷ್ಟ್ರಪತಿಗಳು ಭಾರತರತ್ನ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳನ್ನು ನೀಡಿ ಗೌರವಿಸುತ್ತಾರೆ. ಸೈನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪರಮವೀರ ಚಕ್ರ, ಮಹಾವೀರ ಚಕ್ರ, ಹಾಗೂ ವೀರಚಕ್ರಗಳನ್ನು ನೀಡಲಾಗುತ್ತದೆ. ಇವೆಲ್ಲವುಗಳು ಬಿರುದುಗಳಲ್ಲ ಗೌರವ ಸೂಚಕವಾಗಿವೆ. 1977 ರಲ್ಲಿ ಮುರಾರ್ಜಿ ದೇಸಾಯಿಯವರು ಈ ಬಿರುದು ನೀಡುವ ಪದ್ಧತಿಯನ್ನು ರದ್ದುಗೊಳಿಸಿದ್ದರು. ಶ್ರೀಮತಿ ಇಂದಿರಾ ಗಾಂಧಿಯವರು 1980 ರಲ್ಲಿ ಮತ್ತೆ ಪ್ರಧಾನಿಯಾದ ನಂತರ ಬಿರುದು ನೀಡುವ ಪದ್ಧತಿಯನ್ನು ಪುನರಾರಂಭಿಸಿದರು.

2. ಸ್ವಾತಂತ್ರ್ಯದ ಹಕ್ಕು (Right to freedom) (ವಿಧಿಗಳು 19, 20, 21 ಮತ್ತು 22)

ವ್ಯಕ್ತಿಯ ವಿಕಾಸಕ್ಕೆ ಸ್ವಾತಂತ್ರ್ಯ ಅಗತ್ಯ. ಸ್ವಾತಂತ್ರ್ಯವಿಲ್ಲದ ವ್ಯಕ್ತಿಯ ಜೀವನ ಅರ್ಥರಹಿತವಾದುದು. ಸಂವಿಧಾನದ 19, 20, 21 ಹಾಗೂ 22ನೇ ವಿಧಿಗಳು ಸ್ವಾತಂತ್ರ್ಯ ಹಕ್ಕಿನ ಬಗ್ಗೆ ವಿವರಗಳನ್ನು ನೀಡುತ್ತವೆ. ಈ ನಾಲ್ಕು ವಿಧಿಗಳು ವೈಯಕ್ತಿಕ ಸ್ವಾತಂತ್ರ್ಯದ ಚಾರ್ಟರನಂತೆ ಇದ್ದು ಮೂಲಭೂತ ಹಕ್ಕುಗಳ ಭಾಗದ ಬೆನ್ನೆಲುಬಿನಂತಿವೆ. ಇವುಗಳಲ್ಲಿ 19ನೇ ವಿಧಿಯು ಅತ್ಯಂತ ಮಹತ್ವವಾಗಿದ್ದು ಇದರಲ್ಲಿ ಸ್ವಾತಂತ್ರ್ಯದ ವಿವಿಧತೆಗಳನ್ನು ವಿವರಿಸಲಾಗಿದೆ. ಇದರಲ್ಲಿ ಒಟ್ಟೂ 6 ಮೂಲಭೂತ ಸ್ವಾತಂತ್ರ್ಯಗಳಿದ್ದು ಇವುಗಳನ್ನು ಈ ಕೆಳಗಿನಂತೆ ನೋಡೋಣ,

a. ವಾಕ್ ಸ್ವಾತಂತ್ರ್ಯ ಅಥವಾ ಅಭಿಪ್ರಾಯ ಸ್ವಾತಂತ್ರ್ಯ: (Freedom of speech and expression)

ಭಾರತದ ಸಂವಿಧಾನದ ಪ್ರಸ್ತಾವನೆಯು ಪ್ರಜೆಗಳಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ನೀಡಿದೆ. ಇದರ ಪ್ರಕಾರ ವ್ಯಕ್ತಿ ತನ್ನ ವಿಚಾರ, ಅಭಿಪ್ರಾಯ ಹಾಗೂ ನಂಬಿಕೆಗಳನ್ನು ವ್ಯಕ್ತಪಡಿಸಬಹುದು. ಮಾತು, ಬರಹ, ಚಿತ್ರಕಲೆ ಮುಂತಾದ ರೂಪದಲ್ಲಿ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ತಿಳಿಯಪಡಿಸುತ್ತಾನೆ. ಇದರ ಜೊತೆಗೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ವಾಣಿಜ್ಯ ಜಾಹಿರಾತು ಸ್ವಾತಂತ್ರ್ಯ ಸಹ ಈ ವಿಧಿಯ ಮೂಲಕ ಪ್ರಜೆಗಳಿಗೆ ಸಿಗುತ್ತವೆ.

b. ಶಾಂತವಾಗಿ ಮತ್ತು ಶಸ್ತ್ರರಹಿತ ಸಭೆ ಸೇರುವ ಸ್ವಾತಂತ್ರ್ಯ: ( Freedom to assemble peacefully and without arms)

ಭಾರತದ ಪ್ರಜೆಗಳಿಗೆ ಶಾಂತಿಯುತವಾಗಿ ಮತ್ತು ಶಸ್ತ್ರರಹಿತವಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಈ ವಿಧಿಯು ಅವಕಾಶ ನೀಡುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಸಾರ್ವಜನಿಕ ಹಿತಾಸಕ್ತಿಯ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ. ಮೆರವಣಿಗೆ ಹಮ್ಮಿಕೊಳ್ಳಲು ಮತ್ತು ಸಾರ್ವಜನಿಕ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಭಟನೆಗೋಸ್ಕರ ಸಭೆ ಸೇರುವುದನ್ನು ನಿರ್ಬಂಧಿಸಲಾಗಿದೆ.

c. ಸಂಘಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ: (Freedom to form associations)

ಭಾರತದ ಪ್ರಜೆಗಳು ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೋಸುಗ ವಿವಿಧ ಸಂಘಗಳು ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ತನ್ಮೂಲಕ ಅಭಿವೃದ್ಧಿಯನ್ನು ಹೊಂದಲು ಈ ಸ್ವಾತಂತ್ರ್ಯ ಅವಕಾಶ ನೀಡುತ್ತದೆ. ಉದಾ: ರಾಜಕೀಯ ಕ್ಲಬ್‌, ಕಂಪನಿಗಳು, ಶೇರುದಾರರ ಸಂಸ್ಥೆ, ಕಾರ್ಮಿಕ ಸಂಘಗಳನ್ನು ಸ್ಥಾಪಿಸಿಕೊಂಡು ಅವುಗಳನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶವಿದೆ. ಕಾನೂನಾತ್ಮಕವಾದ ಗುರಿ ಮತ್ತು ಉದ್ದೇಶಗಳಿಗಾಗಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದ್ದು, ದೇಶದ ಸಾರ್ವಭೌಮತೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಸಂಘಗಳನ್ನು ರದ್ದುಗೊಳಿಸುವ ಅಧಿಕಾರ ಸರ್ಕಾರಕ್ಕಿದೆ.

d. ಸಂಚರಿಸುವ ಸ್ವಾತಂತ್ರ್ಯ (Freedom to move)

ಭಾರತೀಯ ಪ್ರಜೆಗಳು ದೇಶದ ಯಾವುದೇ ಮೂಲೆಗಳಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಈ ಸ್ವಾತಂತ್ರ್ಯವು ನೀಡಿದೆ. ಪ್ರಜೆಯೊಬ್ಬನು ಭಾರತ ಒಕ್ಕೂಟದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದಾನೆ. ಆದರೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಜನಾಂಗಗಳ ವಿಶಿಷ್ಠ ಸಂಸ್ಕೃತಿಯ ರಕ್ಷಣೆಗಾಗಿ ಸಂಚರಿಸುವ ಸ್ವಾತಂತ್ರ್ಯದ ಮೇಲೆ ಸರ್ಕಾರ ನಿರ್ಬಂಧ ಹೇರಿದೆ.

e. ವಾಸದ ಸ್ವಾತಂತ್ರ್ಯ: (Freedom to reside)

ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಗಗಳಲ್ಲಾದರೂ ವಾಸಿಸುವ ಹಕ್ಕನ್ನು ಪಡೆದಿದ್ದಾರೆ. ಕೆಲವರು ಖಾಯಂ ಆಗಿ ವಾಸಿಸುತ್ತಿದ್ದರೆ ಇನ್ನೂ ಕೆಲವೊಬ್ಬರು ತಾತ್ಕಾಲಿಕ ವಾಸಸ್ಥಳದಲ್ಲಿ ನೆಲೆಸಿದ್ದಾರೆ. ಹೀಗಾಗಿ ದೇಶದ ಏಕತೆ ಮತ್ತು ಭಾಷಾ ಪ್ರೇಮವನ್ನು ಬೆಳೆಸಲು ಈ ಸ್ವಾತಂತ್ರ್ಯ ನೆರವಾಗುತ್ತದೆ. ಆದರೆ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಹಿತಾಸಕ್ತಿ ದೃಷ್ಟಿಯಿಂದ ವಾಸಮಾಡುವ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿದೆ.

f. ವೃತ್ತಿ ಮತ್ತು ಉದ್ಯೋಗದ ಸ್ವಾತಂತ್ರ್ಯ: (Freedeom of employment)

ದೇಶದ ಪ್ರಜೆಗಳು ತಮಗೆ ಸರಿಕಂಡ ಉದ್ಯೋಗವನ್ನು ಪಡೆಯುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ವೃತ್ತಿ ಸ್ವಾತಂತ್ರ್ಯವು ಬಹು ವಿಶಾಲವಾಗಿದ್ದು ಪ್ರಜೆಗಳು ತಮಗಿಷ್ಟವಾದ ಯಾವುದೇ ಕಸುಬು, ವ್ಯಾಪಾರ ಅಥವಾ ಚಟುವಟಿಕೆಗಳನ್ನು ಹೊಂದಿ ತನ್ಮೂಲಕ ಉತ್ತಮ ಜೀವನ ನಿರ್ವಹಿಸಲು ಅನುವು ಮಾಡಿ ಕೊಡುತ್ತದೆ. ಮಕ್ಕಳ ಮಾರಾಟ, ಮಾದಕ ವಸ್ತುಗಳ ಮಾರಾಟ, ಸ್ಫೋಟಕ ವಸ್ತುಗಳ ಮಾರಾಟ ಮುಂತಾದ ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದ ವೃತ್ತಿಗಳನ್ನು ಸರ್ಕಾರವು ನಿರ್ಬಂಧಿಸುತ್ತದೆ.

3. ಶೋಷಣೆಯ ವಿರುದ್ಧ ಹಕ್ಕು (Right against exploitation)

ಸಾವಿರಾರು ವರ್ಷಗಳಿಂದಲೂ ಸಾಮ್ರಾಜ್ಯಶಾಹಿ ಹಾಗೂ ಊಳಿಗಮಾನ್ಯ ಪದ್ಧತಿಗಳನ್ನು ಅನುಭವಿಸಿಕೊಂಡು ಬಂದಿರುವ ಭಾರತದಲ್ಲಿ ಶೋಷಣೆಯೆನ್ನುವುದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ನಿರ್ಮೂಲನೆಗೊಳಿಸಲು ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕನ್ನು ಅಳವಡಿಸಿರುವುದು ಅತ್ಯಂತ ಸಂತೋಷಕರವಾದ ಸಂಗತಿಯಾಗಿದೆ. ತಾರತಮ್ಯವನ್ನು ಹೋಗಲಾಡಿಸಿ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಈ ಕಾಯಿದೆ ತುಂಬಾ ಸಹಾಯಕವಾಗಿದೆ. ಸಂವಿಧಾನದ 23 ಹಾಗೂ 24 ನೇ ವಿಧಿಗಳು ಈ ಹಕ್ಕಿನ ಬಗ್ಗೆ ವಿವರಣೆಗಳನ್ನು ಒಳಗೊಂಡಿವೆ.

1. ಅನೈತಿಕ ವ್ಯವಹಾರ ತಡೆ ಕಾಯಿದೆ: (Immortal traffic prevention act 1956 )

1956 ರಲ್ಲಿ ಸಂಸತ್ತು ಅನೈತಿಕ ತಡೆ ಕಾಯಿದೆಯನ್ನು ಅಂಗೀಕರಿಸಿ ವೇಶ್ಯಾವೃತ್ತಿಯನ್ನು ನಿಷೇಧಿಸಿದೆ. ಇದನ್ನು ಮತ್ತೆ 1978 ಹಾಗೂ 1986 ರಲ್ಲಿ ತಿದ್ದುಪಡಿ ಮಾಡಿ ಹೊಸದಾಗಿ ಮೇಲಿನ ಹೆಸರನ್ನು ನೀಡಲಾಯಿತು. ವೇಶ್ಯಾವೃತ್ತಿಗಾಗಿ ಮಕ್ಕಳನ್ನು ಬಳಸುವ ವ್ಯಕ್ತಿಗೆ ಜೀವಾವಧಿ ಶಿಕ್ಷೆಯನ್ನು ಅಥವಾ ಏಳು ವರ್ಷಗಳ ಕನಿಷ್ಠ ಜೈಲುವಾಸ ವಿಧಿಸಲಾಗುವುದು. ಇಂಡಿಯನ್‌ ಪೀನಲ್‌ ಕೋಡ್‌ ನ ಪ್ರಕಾರ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಮಾರಾಟ ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ.

2. ವರದಕ್ಷಿಣೆ ನಿಷೇಧ ಕಾಯಿದೆ: (Anti dowry act 1961)

1961 ರ ವರದಕ್ಷಿಣೆ ನಿಷೇಧ ಕಾಯಿದೆಯನ್ನು ಭಾರತ ಸಂಸತ್ತು 1984, 1985 ಹಾಗೂ 1986 ರಲ್ಲಿ ತಿದ್ದುಪಡಿಗೊಳಿಸಿ ವರದಕ್ಷಿಣೆಗಾಗಿ ಸಾವು ಉಂಟಾದರೆ ಇಂಡಿಯನ್‌ ಪೀನಲ್‌ ಕೋಡ್‌ ನ ಸೆಕ್ಷನ್‌ 304 ಬಿ ಪ್ರಕಾರ ಅಕ್ಷಮ್ಯ ಅಪರಾಧವಾಗುತ್ತದೆ. ಈ ಸೆಕ್ಷನ್‌ ಪ್ರಕಾರ ವರದಕ್ಷಿಣೆ ಸಾವಿಗೆ ಕಾರಣರಾದವರು ಕನಿಷ್ಟ 7 ವರ್ಷಗಳ ಕಾಲ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕು.

3. ಮಹಿಳೆಯರ ಅಶ್ಲೀಲ ಚಿತ್ರ ನಿಷೇಧ ಕಾಯಿದೆ: (The indecent representation of women prohibition act)

ಈ ಕಾಯಿದೆಯ ಪ್ರಕಾರ ಬಲವಂತವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದು ಅಪರಾಧವಾಗುತ್ತದೆ.

4. ಸತಿ ನಿಷೇಧ ಕಾಯಿದೆ (Sati prevention act 1987)

1987 ಸೆಪ್ಟೆಂಬರ್‌ 4 ರಂದು 18 ವರ್ಷ ವಯಸ್ಸಿನ ರೂಪ ಕನ್ವರ್‌ ಎಂಬುವವರನ್ನು ಬಲವಂತವಾಗಿ ರಾಜಸ್ಥಾನದ ಸಿಕಾರ ಜಿಲ್ಲೆಯ ದಿಯೊರಾಲಾ ಗ್ರಾಮದಲ್ಲಿ ಸತಿ ಸಹಗಮನಕ್ಕೆ ದೂಡಲಾಯಿತು. ಇದು ದೇಶದಾದ್ಯಂತ ಸಾಮಾಜಿಕ ಕ್ರಾಂತಿಯನ್ನೇ ಎಬ್ಬಿಸಿತು. ಈ ಘಟನೆಯಿಂದ ದಿಗ್ಭ್ರಮೆಗೊಂಡ ರಾಜಸ್ಥಾನ ಸರ್ಕಾರ ಸತಿ ತಡೆ ಸುಗ್ರೀವಾಜ್ಞೆಯನ್ನು ಹೊರಡಿಸಿತು. ನಂತರ ಕೇಂದ್ರ ಸಂಸತ್ತು 1987 ರ ಡಿಸೆಂಬರ್‌ ನಲ್ಲಿ ಮಸೂದೆಯನ್ನು ಅಂಗೀಕರಿಸಿ ಸತಿ ಪದ್ದತಿಯ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡಿತು. ಈ ಕಾಯಿದೆಯ ಪ್ರಕಾರ ಸತಿ ಪದ್ದತಿಯನ್ನು ಪ್ರೇರೇಪಿಸುವವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.

5. ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ (Domestic violence prevention act 2005 ) : 2005 ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬಂದಿತು. ಈ ಕಾಯಿದೆಯ ಪ್ರಕಾರ ದೈಹಿಕ ಅಥವಾ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಅಥವಾ ಆಸ್ತಿಗಾಗಿ ಕಿರುಕುಳ ಕೊಡುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆ. 

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು: (Right to freedom religion)

ಸಂವಿಧಾನದ 25 ರಿಂದ 28 ನೇ ವಿಧಿಗಳು ಪೌರರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಸಂವಿಧಾನದಲ್ಲಿ ಘೋಷಿಸಲಾದ ಜಾತ್ಯಾತೀತತೆಯ ಉದ್ದೇಶಗಳನ್ನು ಈ ವಿಧಿಗಳು ಈಡೇರಿಸಿವೆ ಎಂದು ಹೇಳಬಹುದು. ಭಾರತವೊಂದು ಜಾತ್ಯಾತೀತ ದೇಶ. ರಾಜ್ಯಕ್ಕೆ ತನ್ನದೇ ಆದ ಯಾವ ಧರ್ಮವೂ ಇಲ್ಲ. ಸರ್ಕಾರ ಯಾವ ಧರ್ಮವನ್ನೂ ಪ್ರೋತ್ಸಾಹಿಸುವುದಿಲ್ಲ. ಜನರು ತಮಗೆ ಸರಿಕಂಡ ಧರ್ಮವನ್ನು ಪಾಲಿಸುವ ಹಾಗೂ ತಮಗಿಷ್ಟವಾದ ದೇವರನ್ನು ಪೂಜಿಸುವ ಹಕ್ಕನ್ನು ಹೊಂದಿದ್ದಾರೆ. ಸಾರ್ವಜನಿಕ ಶಿಸ್ತು, ನೀತಿ, ಆರೋಗ್ಯ ಹಾಗೂ ಸಂವಿಧಾನದ ಮೂರನೇ ಭಾಗದಲ್ಲಿರುವ ನಿಯಮಗಳಿಗೆ ಧಕ್ಕೆಯಾಗದಂತೆ ತಮಗೆ ಸರಿ ತೋರಿದ ಧರ್ಮವನ್ನು ಪಾಲಿಸಿ ಪ್ರಚಾರ ಮಾಡಲು ಸ್ವಾತಂತ್ರ್ಯವಿದೆ.

a. ವಿಧಿ 25 ಧಾರ್ಮಿಕ ಶ್ರದ್ಧೆಪಾಲನೆ ಮತ್ತು ಪ್ರಚಾರದ ಸ್ವಾತಂತ್ರ್ಯ:

ಈ ವಿಧಿಯ ಅನ್ವಯ ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಮನಸ್ಸಿಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಆದರೆ ಸಾರ್ವಜನಿಕ ಶಿಸ್ತು, ಶಾಂತಿ, ಹಾಗೂ ನೈರ್ಮಲ್ಯಕ್ಕೆ ಧಕ್ಕೆ ತರುವುದಾಗಲೀ ಅಥವಾ ಮತಾಂತರಕ್ಕೆ ಒತ್ತಾಯಿಸುವುದಾಗಲೀ ಹಾಗೂ ಮತಾಂತರಕ್ಕೆ ಹಣಕಾಸಿನ ಅಥವಾ ಇನ್ನಿತರ ಯಾವುದೇ ಆಮಿಷ ಒಡ್ಡುವುದಾಗಲೀ ಮಾಡುವಂತಿಲ್ಲ.

b. ವಿಧಿ 26 ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ:

ಸಂವಿಧಾನದ 26ನೇ ವಿಧಿಯ ಪ್ರಕಾರ ಸಾರ್ವಜನಿಕ ಶಿಸ್ತು, ನೀತಿ ಹಾಗೂ ನೈರ್ಮಲ್ಯಕ್ಕೆ ಒಳಪಟ್ಟು ಪ್ರತಿಯೊಂದು ಧಾರ್ಮಿಕ ಸಂಸ್ಥೆ ಧಾರ್ಮಿಕ ಮತ್ತು ಚಾರಿಟೇಬಲ್‌ ಉದ್ದೇಶಗಳಿಗೆ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸಬಹುದು. ಅದು ತನ್ನ ಧರ್ಮದ ವಿಷಯದ ಕುರಿತು ಮೇಲ್ವಿಚಾರಣೆ ಮಾಡಬಹುದು. ಸ್ಥಿರ ಹಾಗೂ ಚರಾಸ್ಥಿಗಳನ್ನೂ ರಕ್ಷಿಸಬಹುದು ಮತ್ತು ಸಂಪಾದಿಸಬಹುದು. ಇವೆಲ್ಲವುಗಳನ್ನೂ ಕಾನೂನಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದರೆ ಸಾರ್ವಜನಿಕ ಶಿಸ್ತಿಗೆ ಭಂಗ ತರುವಂತೆ ಇರಬಾರದು.

c. ವಿಧಿ 27 ಧಾರ್ಮಿಕ ತೆರಿಗೆ ನೀಡುವ ಸ್ವಾತಂತ್ರ್ಯ:

ಈ ವಿಧಿಯ ಪ್ರಕಾರ ಧರ್ಮಪ್ರಚಾರಕ್ಕೆ, ಧರ್ಮರಕ್ಷಣೆಗೆ, ಧಾರ್ಮಿಕ ಸಂಸ್ಥೆಯನ್ನು ಪೋಷಿಸಲು ತೆರಿಗೆ ಅಥವಾ ವಂತಿಕೆ ನೀಡಬೇಕೆಂದು ಯಾವುದೇ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಪೀಡಿಸುವಂತಿಲ್ಲ.

d. ವಿಧಿ 28 ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯ ಸ್ವಾತಂತ್ರ್ಯ:

ಸಂವಿಧಾನದ 28ನೇ ವಿಧಿಯ ಅನ್ವಯ ಧಾರ್ಮಿಕ ಬೋಧನೆಯನ್ನು ರಾಜ್ಯ ನಿಯಂತ್ರಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವಾನುಮತಿಯನ್ನು ಪಡೆಯದೆ ಧಾರ್ಮಿಕ ಬೋಧನೆಯನ್ನೂ ಕಡ್ಡಾಯವಾಗಿ ನಿಷೇಧಿಸಿದೆ.

5. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು: (ವಿಧಿ 29 ಮತ್ತು 30)

a. ವಿಧಿ 29 ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ:

ಸಂವಿಧಾನದ ಈ ವಿಧಿಯು ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಯಾವುದೇ ವರ್ಗದ ಪ್ರಜೆಗಳು ತಮ್ಮದೇ ಆದ ಭಾಷೆ, ಲಿಪಿ, ಸಂಸ್ಕೃತಿಯನ್ನು ಹೊಂದಿದ್ದರೆ ಅವುಗಳನ್ನು ರಕ್ಷಿಸಿಕೊಳ್ಳುವ ಹಾಗೂ ಅಭಿವೃದ್ಧಿಪಡಿಸುವ ಹಕ್ಕನ್ನು ಹೊಂದಿದ್ದಾರೆ. ಇದರಿಂದ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತ ಪ್ರಜೆಗಳ ಸಮುದಾಯದ ರಕ್ಷಣೆಗೆ ಭರವಸೆ ದೊರಕಿದೆ. ಮುಂದುವರೆದು ರಾಜ್ಯ ನಿಯಂತ್ರಿತ ಅಥವಾ ರಾಜ್ಯದಿಂದ ಅನುದಾನ ಪಡೆಯುತ್ತಿರುವ ಶಾಲಾ-ಕಾಲೇಜುಗಳಲ್ಲಿ ಭಾಷೆ, ಜನಾಂಗ, ಜಾತಿ, ಧರ್ಮಗಳ ಆಧಾರದ ಮೇಲೆ ಪ್ರವೇಶ ನಿರಾಕರಿಸಕೂಡದು ಎಂದು ತಿಳಿಸಿದೆ.

b. ವಿಧಿ 30 ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಾಗೂ ನಿರ್ವಹಿಸುವ ಹಕ್ಕು:

ಈ ವಿಧಿಯು ಹೇಳುವಂತೆ ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ತಾವು ಬಯಸುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಣೆಗೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಅನುದಾನ ಹಂಚಿಕೆಯ ಸಮಯದಲ್ಲಿ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಮತ್ತು ಆ ಸಂಸ್ಥೆಗಳ ಸ್ವರೂಪಕ್ಕೆ ಘಾಸಿ ಮಾಡುವಂತಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಬೋಧನಾ ಮಾಧ್ಯಮದ ಆಯ್ಕೆಗೆ ಸ್ವಾತಂತ್ರ್ಯವನ್ನು ನೀಡಬೇಕು. 2007 ರಲ್ಲಿ ನಡೆದ ಮೊಕದ್ದಮೆಯೊಂದರ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು, ಆಡಳಿತ ಮಂಡಳಿಯನ್ನು ಹೊಂದಲು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಾಗೂ ಸಂಸ್ಥೆಯ ಹಿತದೃಷ್ಠಿಯಯಿಂದ ಆಸ್ತಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ.

6. ಸಂವಿಧಾನಾತ್ಮಕ ಪರಿಹಾರ ಹಕ್ಕು (Right to constitutional remedies) ( ವಿಧಿ 32)

ಒಬ್ಬ ವ್ಯಕ್ತಿ ಮೂಲಭೂತ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಭವಿಸಬೇಕಾದರೆ ಅವನಿಗೆ ನ್ಯಾಯಾಲಯದ ರಕ್ಷಣೆ ಬೇಕು. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿರುವುದು ಮಾತ್ರವಲ್ಲದೆ ಅವುಗಳಿಗೆ ಧಕ್ಕೆ ಆಗದ ರೀತಿಯಲ್ಲಿ 32 ನೇ ವಿಧಿಯಲ್ಲಿ ಪರಿಹಾರಗಳನ್ನು ಸೂಚಿಸಿದೆ. ಈ ಹಕ್ಕಿನ ಪ್ರಕಾರ ಜನರು ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದರೆ ನ್ಯಾಯಾಲಯಗಳಿಗೆ ಮೊರೆ ಹೋಗಬಹುದು. ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗಲು ಇರುವ ಅವಕಾಶವನ್ನೇ ಸಂವಿಧಾನಾತ್ಮಕ ಪರಿಹಾರದ ಹಕ್ಕು ಎಂದು ಕರೆಯಲಾಗಿದೆ. 32ನೇ ವಿಧಿಯನ್ನು ಬಿ. ಆರ್.‌ ಅಂಬೇಡ್ಕರ್‌ ಬಹುವಾಗಿ ಮೆಚ್ಚಿ ಈ ರೀತಿ ಹೇಳಿದರು “ ಸಂವಿಧಾನದ ಅತ್ಯಂತ ಪ್ರಮುಖವಾದ ವಿಧಿ ಯಾವುದೆಂದು ನನ್ನನ್ನು ಕೇಳಿದರೆ ನಾನು 32 ನೇ ವಿಧಿಯೆಂದು ಹೇಳುತ್ತೇನೆ. ಅದು ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ.” ಈ ವಿಧಿಯನ್ನು 3 ನೇ ಭಾಗದಲ್ಲಿ ಸೇರಿಸಿರುವುದರಿಂದ ಪರಿಹಾರದ ಹಕ್ಕು ಮೂಲಭೂತ ಹಕ್ಕಾಗಿದೆಯೆಂದು ಸುಪ್ರೀಂಕೋರ್ಟ್‌ 1950, 1959, 1963 ರಲ್ಲಿ ತಿಳಿಸಿತು. ಈ ವಿಧಿಯ ಅನ್ವಯ ಸುಪ್ರೀಂಕೋರ್ಟ್‌ ಮೂಲಭೂತ ಹಕ್ಕುಗಳ ರಕ್ಷಣೆಗೆ ಈ ಕೆಳಗಿನ ರಿಟ್‌ ಅರ್ಜಿಗಳನ್ನು ಸ್ವೀಕರಿಸಬೇಕು ಅವುಗಳೆಂದರೆ,

a. ಹೇಬಿಯಸ್‌ ಕಾರ್ಪಸ್‌ (ಬಂಧಿ ಪ್ರತ್ಯಕ್ಷೀಕರಣ) (Habeas corpus)

ಬಂಧಿತನಾಗಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಬಂಧಿಸಿದ ವ್ಯಕ್ತಿಗೆ ನ್ಯಾಯಾಲಯವು ಕೊಡುವ ಆಜ್ಞೆಯನ್ನು ಹೇಬಿಯಸ್‌ ಕಾರ್ಪಸ್‌ ಅಥವಾ ಬಂಧಿ ಪ್ರತ್ಯಕ್ಷೀಕರಣ ಎಂದು ಕರೆಯಲಾಗುತ್ತದೆ. ಬಂಧಿತನಾದ ವ್ಯಕ್ತಿ ಯಾವುದೇ ತಪ್ಪು ಮಾಡದಿದ್ದಲ್ಲಿ ಅವನನ್ನು ಬಿಡುಗಡೆಗೊಳಿಸುವಂತೆ ಆದೇಶಿಸುತ್ತದೆ. ಆದರೆ ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿತನಾದ ವ್ಯಕ್ತಿಯನ್ನು ಬಿಡುಗಡೆಗೆ ಈ ಮೇಲಿನ ರಿಟ್‌ ಆದೇಶವನ್ನು ಹೊರಡಿಸುವಂತಿಲ್ಲ.

b. ಮ್ಯಾಂಡಮಸ್‌ (ಪರಮಾದೇಶ) (Mandamus)

ಒಬ್ಬ ಸರ್ಕಾರಿ ಅಧಿಕಾರಿಯು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಿದ್ದರೆ ತೊಂದರೆಗೆ ಒಳಗಾದ ವ್ಯಕ್ತಿಗಳು ಆತನ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆಗ ನ್ಯಾಯಾಲಯವು ಕರ್ತವ್ಯ ಚ್ಯುತಿಯನ್ನುಂಟು ಮಾಡಿದ ಅಧಿಕಾರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ನೀಡುತ್ತದೆ. “ ಇದನ್ನೇ ಮ್ಯಾಂಡಮಸ್‌ ಅಥವಾ ಪರಮಾದೇಶ ಎಂದು ಕರೆಯಲಾಗಿದೆ.”  

c. ಪ್ರೊಹಿಬಿಷನ್‌ (ಪ್ರತಿಬಂಧಕಾಜ್ಞೆ) ( prohibition)

ಕೆಳ ನ್ಯಾಯಾಲಯವು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸದಂತೆ ತಡೆಯಲು ಮೇಲಿನ ನ್ಯಾಯಾಲಯವು ಹೊರಡಿಸುವ ತಡೆಯಾಜ್ಞೆಯನ್ನು ಪ್ರೊಹಿಬಿಷನ್‌ ಎಂದು ಕರೆಯಲಾಗುತ್ತದೆ.

d. ಸರ್ಪಿಯೊರರಿ (ಉತ್ಪ್ರೇಕ್ಷಣಾ) (Cerfiorari)

ಕೆಳಗಿನ ನ್ಯಾಯಾಲಯವು ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದ್ದಾದರೆ ಅಂತಹ ತೀರ್ಪನ್ನು ರದ್ದುಪಡಿಸಿ ಸಂಬಂಧಿಸಿದ ಮೊಕದ್ದಮೆಯನ್ನು ಕಳುಹಿಸಬೇಕೆಂದು ಅಥವಾ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್‌ ಕೆಳ ನ್ಯಾಯಾಲಯಕ್ಕೆ ಕೊಡುವ ಆದೇಶವಾಗಿದೆ.

e. ಕೋ ವಾರಂಟೋ (ಅಧಿಕಾರ ಪುಬ್ಲಾ) (Quo warranto)

ಕಾನೂನು ಬಾಹಿರವಾಗಿ ಅಥವಾ ಅಕ್ರಮವಾಗಿ ಯಾವುದೇ ಒಬ್ಬ ವ್ಯಕ್ತಿ ಸಾರ್ವಜನಿಕ ಅಧಿಕಾರ ಸ್ಥಾನವನ್ನು ವಶಪಡಿಸಿಕೊಂಡರೆ ಆ ವ್ಯಕ್ತಿಯ ವಿರುದ್ಧ ಈ ಅರ್ಜಿಯನ್ನು ಸಲ್ಲಿಸಬಹುದು. ಅದರಂತೆ ಆ ವ್ಯಕ್ತಿ ಯಾವ ಆಧಾರದ ಮೇಲೆ ಅಧಿಕಾರವನ್ನು ಅಪಹರಿಸಿಕೊಂಡಿದ್ದನೆಂದು ಕರೆ ನೀಡುವ ಆಜ್ಞೆಯೇ ಇದಾಗಿದೆ.

  • ಸಂವಿಧಾನದ 33 ನೇ ವಿಧಿಯನ್ವಯ ಸಂಸತ್ತು ಕಾಯಿದೆ ರಚಿಸುವ ಮೂಲಕ ಸೈನಿಕ ದಳಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಅಥವಾ ನಿರ್ಬಂಧಿಸುವ ಅಧಿಕಾರವನ್ನು ಪಡೆದಿದೆ. ಅದರಂತೆ 1950 ರಲ್ಲಿ ವಾಯುದಳ ಹಾಗೂ ಭೂದಳ ಕಾನೂನು, 1957 ರ ನೌಕಾದಳ ಕಾನೂನುಗಳು ಸಂವಿಧಾನದ 3 ನೇ ಭಾಗದ ಮೂಲಭೂತ ಹಕ್ಕುಗಳು ರಾಷ್ಟ್ರದ ಮಿಲಿಟರಿ ಹಾಗೂ ಪೋಲಿಸ್‌ ಸೇವೆಯಲ್ಲಿರುವವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರುಗಳು ಸಂಘ ಸಂಸ್ಥೆಗಳನ್ನು ಕಟ್ಟುವ ಅಥವಾ ಅವುಗಳಲ್ಲಿ ಸದಸ್ಯರಾಗುವ, ಸಭೆಯಲ್ಲಿ ಭಾಷಣ ಮಾಡುವ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯಗಳಲ್ಲಿ ನಿರತರಾಗುವಂತಿಲ್ಲ.
  • ಸಂವಿಧಾನದ 34 ನೇ ವಿಧಿಯ ಅನ್ವಯ ಮಾರ್ಷಲ್‌ ಕಾಯಿದೆ ಜಾರಿಯಲ್ಲಿರುವ ಭಾರತದ ಯಾವುದೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಅವಕಾಶವಿದೆ.
  • ಸಂವಿಧಾನದ 35 ನೇ ವಿಧಿಯ ಪ್ರಕಾರ ಸಂಸತ್ತು ಮೂಲಭೂತ ಹಕ್ಕುಗಳ ಅನುಭವಿಸುವಿಕೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮಿಲಿಟರಿಯವರು ಹೊಂದಬೇಕೆ? ಅಥವಾ ಬೇಡವೇ ಎಂಬುದರ ಬಗ್ಗೆ ಶಾಸನ ಮಾಡುವ ಅಧಿಕಾರ ಪಡೆದಿದೆ.

ಉಪಸಂಹಾರ

ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಇವು ನಾಗರಿಕರಿಗೆ ಕೇವಲ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಕಾನೂನಾತ್ಮಕ ರಕ್ಷಣೆಯನ್ನೂ ಒದಗಿಸುತ್ತವೆ. ಹಕ್ಕುಗಳ ಅರಿವು ಪ್ರಜ್ಞಾವಂತ ನಾಗರಿಕನ ಲಕ್ಷಣವಾಗಿದ್ದು, ಅವುಗಳ ಸರಿಯಾದ ಬಳಕೆ ಸಮಾಜದ ಸಮತೋಲನಕ್ಕೆ ಅಗತ್ಯವಾಗಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಅರಿತು ನಡೆದುಕೊಳ್ಳಬೇಕು.

ಮೂಲಭೂತ ಹಕ್ಕುಗಳ ಪರಿಕಲ್ಪನೆ ಮತ್ತು ಲಕ್ಷಣಗಳು

“ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಿಗೂ ಮತ್ತು ಅವುಗಳನ್ನು ಪ್ರಜೆಗಳು ವಾಸ್ತವವಾಗಿ ಅನುಭವಿಸುತ್ತಿರುವುದಕ್ಕೂ ಬಹಳಷ್ಟು ಅಂತರವಿದೆ.”  – ನಾರಿಮನ್. ಡಿ. ಪಾಮರ್

ಮೂಲಭೂತ ಹಕ್ಕುಗಳ ಪರಿಕಲ್ಪನೆ:

“ಯಾವ ಹಕ್ಕುಗಳಿಲ್ಲದೆ ಒಬ್ಬ ಪ್ರಜೆಯು ತನ್ನ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲವೋ ಅಂತಹ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗುತ್ತದೆ.ʼ ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಪ್ರಜೆಗಳಿಗೆ ಸಂವಿಧಾನದ ಮೂಲಕವೇ ಮೂಲಭೂತ ಹಕ್ಕುಗಳನ್ನು ನೀಡಿವೆ. ಈ ಮೂಭೂತ ಹಕ್ಕುಗಳು ಎಲ್ಲಾ ಕಾನೂನು, ನ್ಯಾಯಾಂಗದ ತೀರ್ಮಾನ, ಕಾರ್ಯಾಂಗದ ಆದೇಶಗಳಿಗಿಂತ ಶ್ರೇಷ್ಠ ಹಾಗೂ ಉನ್ನತವಾದವುಗಳಾಗಿವೆ. ಈ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳುವುದಾಗಲೀ ಅಥವಾ ಮೊಟುಕುಗೊಳಿಸುವುದಾಗಲೀ ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳು ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆಯೆಂದರೆ ಶಾಸಕಾಂಗವು ಮಾಡುವ ಯಾವುದೇ ಕಾನೂನು ಮೂಲಭೂತ ತತ್ವಗಳಿಗೆ ವಿರುದ್ಧವಾದರೆ ಅಂತಹ ಕಾನೂನನ್ನು ಸಂವಿಧಾನಬಾಹಿರ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೊದಲ ಮಹಾಯುದ್ಧದ ನಂತರ ವಿಶ್ವದ ವಿವಿಧ ದೇಶಗಳು ತಮ್ಮ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ವಿಶ್ವಸಂಸ್ಥೆ ಸಹ ಮಾನವ ಹಕ್ಕುಗಳ ಘೋಷಣೆಯನ್ನು ಡಿಸೆಂಬರ್‌ 10, 1948 ರಂದು ಅಂಗೀಕರಿಸಿತು. ಹಾಗೆಯೇ ಭಾರತದ ಸಂವಿಧಾನವು ಆರಂಭದಲ್ಲಿ 7 ಮೂಲಭೂತ ಹಕ್ಕುಗಳನ್ನು ನೀಡಿತ್ತು. ಆದರೆ 1978ರ 44ನೇ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಯಿತು. ಈಗ ಒಟ್ಟು 6 ಮೂಲಭೂತ ಹಕ್ಕುಗಳು ಚಾಲ್ತಿಯಲ್ಲಿವೆ.

ಮೂಲಭೂತ ಹಕ್ಕುಗಳ ಲಕ್ಷಣಗಳು (Characterstics of fundamental rights)

ಭಾರತೀಯ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ತನ್ನದೇ ಅದ ಗುಣಲಕ್ಷಣಗಳನ್ನು ಹೊಂದಿವೆ. ಈ ಲಕ್ಷಣಗಳ ಆಧಾರದ ಮೇಲೆ ಮೂಲಭೂತ ಸ್ವರೂಪವನ್ನು ಅರಿಯಬಹುದು.

1. ಸಾರ್ವತ್ರಿಕತೆ: (Universal)

ಭಾರತದಲ್ಲಿ ಜನಿಸಿರುವ ಎಲ್ಲಾ ಪ್ರಜೆಗಳಿಗೆ ಅನ್ವಯವಾಗುವ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ಪ್ರದೇಶ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ಮಾಡದೆ ದೇಶದ ಎಲ್ಲಾ ಪೌರರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ.

2. ಪೌರರಿಂದ ವಿದೇಶಿಯರ ಪ್ರತ್ಯೇಕತೆ:

ಭಾರತದ ಗಡಿಯೊಳಗೆ ನೆಲೆಸಿರುವ ವಿದೇಶಿಯರಿಗೆ ಭಾರತೀಯ ಪೌರರ ಹಕ್ಕುಗಳನ್ನು ನೀಡಲಾಗಿಲ್ಲ. ಸಂವಿಧಾನದ 15, 16, 20 ಹಾಗೂ 29ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿರುವ ಹಕ್ಕುಗಳನ್ನು ಭಾರತೀಯ ಪೌರರಿಗೆ ಮಾತ್ರ ನೀಡಲಾಗಿದೆ. ಉಳಿದ ಹಕ್ಕುಗಳನ್ನು ಮಾತ್ರ ವಿದೇಶಿಯರು ಅನುಭವಿಸಲು ಅವಕಾಶ ನೀಡಲಾಗಿದೆ.

3. ಸವಿಸ್ತಾರ:

ಮೂಲಭೂತ ಹಕ್ಕುಗಳ ಕುರಿತು ಭಾರತದ ಸಂವಿಧಾನದಲ್ಲಿ ಸುಧೀರ್ಘವಾಗಿ ವಿವರಣೆ ನೀಡಲಾಗಿದೆ. ಮೂರನೇ ಭಾಗದ 14 ರಿಂದ 35ನೇ ವಿಧಿಯವರೆಗೆ ಅಂದರೆ 24 ವಿಧಿಗಳನ್ನು ಮೂಲಭೂತ ಹಕ್ಕುಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ ಮೂಲಭೂತ ಹಕ್ಕಿನ ವ್ಯಾಪ್ತಿ ಹಾಗೂ ಮಿತಿಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

4. ಅಲ್ಪ ಸಂಖ್ಯಾತ ಹಿತರಕ್ಷಣೆಗೆ ಅನುವು:

ಭಾರತದ ಮೂಲಭೂತ ಹಕ್ಕುಗಳಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅವರಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಹಕ್ಕನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ.

5. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಕೊರತೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನಾಗರಿಕ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಮಾತ್ರ ನೀಡಿ ಆಹಾರ, ಆರೋಗ್ಯ, ಉದ್ಯೋಗ, ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಹಕ್ಕುಗಳಿಗೆ ಅಗತ್ಯ ಆದ್ಯತೆಗಳನ್ನು ನೀಡಲಾಗಿಲ್ಲ.

6. ಮಿತಿಗಳ ಹೇರಿಕೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ನಿರಂಕುಶವಾದವುಗಳಲ್ಲ. ಪ್ರತಿಯೊಂದು ಹಕ್ಕು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಾರ್ವಜನಿಕ ಶಾಂತಿ, ಕಾನೂನು ವ್ಯವಸ್ಥೆ ಹಾಗೂ ದೇಶದ ಅಖಂಡತೆಯ ಕಾರಣಕ್ಕೆ ಸೂಕ್ತವಾದ ನಿರ್ಬಂಧಗಳನ್ನು ಮೂಲಭೂತ ಹಕ್ಕುಗಳ ವಿಷಯದಲ್ಲಿ ಹೇರಲಾಗಿದೆ.

7. ನ್ಯಾಯಾಂಗ ರಕ್ಷಣೆ:

ಭಾರತದ ಪ್ರಜೆಗಳು ಪಡೆದ ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ಬೆಂಬಲವಿದೆ. ಪ್ರಜೆಗಳ ಹಕ್ಕುಗಳಿಗೆ ತೊಂದರೆಗಳು ಉಂಟಾಗುತ್ತವೆ ಎಂದೆನಿಸಿದಾಗ ಪ್ರಜೆಯಾದವನು ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಬಹುದು. ನ್ಯಾಯಾಲಯಗಳ ಮೂಲಕ ವ್ಯಕ್ತಿಯಾದವನು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ನ್ಯಾಯಾಂಗವು ಪ್ರಜೆಗಳ ಹಕ್ಕುಗಳ ರಕ್ಷಣೆಯ ಭರವಸೆಯನ್ನೂ ನೀಡುತ್ತವೆ.

8. ತಿದ್ದುಪಡಿಗೆ ಆಸ್ಪದ:

ಭಾರತದ ಸಂವಿಧಾನದಿಂದ ನೀಡಲ್ಪಟ್ಟ ಮೂಲಭೂತ ಹಕ್ಕುಗಳು ಶಾಶ್ವತವಾದ ರೂಪವನ್ನು ಪಡೆದಿಲ್ಲ. ಅವುಗಳನ್ನು ಸಂದರ್ಭಗಳಿಗನುಗುಣವಾಗಿ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡಲಾಗಿದೆ. ವಿಶೇಷ ಬಹುಮತದೊಂದಿಗೆ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡಬಹುದು. ಉದಾ: ಆಸ್ತಿಯ ಹಕ್ಕನ್ನು ಸಂಸತ್ತು ತಿದ್ದುಪಡಿ ಮಾಡಿ ರದ್ದುಗೊಳಿಸಿತು.

9. ಅಮಾನತಿಗೆ ಅವಕಾಶ:

ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನತ್ತಿನಲ್ಲಿಡಲಾಯಿತು. ಇದರೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹಕ್ಕುಗಳನ್ನು ಸಹ ಸಂಸತ್ತು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ.

10. ಸಂವಿಧಾನಾತ್ಮಕ ಸ್ಥಾನಮಾನ:                 

ಮೂಲಭೂತ ಹಕ್ಕುಗಳು ಭಾರತದ ಸಂವಿಧಾನದ ಅವಿಭಾಜ್ಯ ಅಂಗಗಳಾಗಿವೆ. ಸಾಮಾನ್ಯ ಶಾಸನಗಳು ಇವುಗಳಿಗೆ ವಿರುದ್ಧವಾದ ಅಂಶಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂವಿಧಾನಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಲಾಗುತ್ತದೆ.

ಉಪಸಂಹಾರ

ಒಟ್ಟಿನಲ್ಲಿ, ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿವೆ. ಇವು ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕತ್ವವನ್ನೂ ಕಲಿಸುತ್ತವೆ. ಹಕ್ಕುಗಳೊಂದಿಗೆ ಕರ್ತವ್ಯಗಳ ಅರಿವು ಬೆಳೆಸಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಅದರಿಂದ ಮೂಲಭೂತ ಹಕ್ಕುಗಳ ಜ್ಞಾನವು ಪ್ರತಿಯೊಬ್ಬ ಭಾರತೀಯನಿಗೂ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

“ಪ್ರಸ್ತಾವನೆ ಸಂವಿಧಾನದ ಸತ್ವ. ಇದು ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆಗೋಲು”

  • ಪಂಡಿತ್‌ ಠಾಕೂರ್‌ ದಾಸ್‌ ಭಾರ್ಗವ

ಪೀಠಿಕೆ: ಸಾಮಾನ್ಯವಾಗಿ ದೇಶಾದ್ಯಂತ ಹಲವಾರು ಲೇಖಕರು ಬರೆದ ಗ್ರಂಥಗಳನ್ನು ಅವಲೋಕಿಸಿದಾಗ ಅವುಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿರುತ್ತವೆ. ಈ ಪೀಠಿಕೆಗಳು ಇಡೀ ಗ್ರಂಥದ ಒಳನೋಟವನ್ನು ಒದಗಿಸುತ್ತದೆ. ಹಾಗೇ ಜಗತ್ತಿನ ಪ್ರತಿಯೊಂದು ಸಂವಿಧಾನಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿವೆ. ಹಾಗೆಯೇ ಭಾರತದ ಸಂವಿಧಾನ ರಚನಾಕಾರರು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕದ ಸಂವಿಧಾನದ ಪ್ರಸ್ತಾವನೆಯಿಂದ ಪ್ರಭಾವಿತಗೊಂಡ ಭಾರತವೂ ಸಹ ತನ್ನ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿತು. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಯ ಮೌಲ್ಯಗಳನ್ನು ಕಾಣಬಹುದಾಗಿದೆ. ಪ್ರಸ್ತಾವನೆಯಲ್ಲಿ ಸಂವಿಧಾನದ ವಿವಿಧ ಅಂಶಗಳು, ಲಕ್ಷಣಗಳು, ಆದರ್ಶಗಳು ಹಾಗೂ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯನ್ನು “ಸಂವಿಧಾನದ ಮುಖಪುಟ” ಎಂದು ಕರೆಯಲಾಗಿದೆ.

1. ಪ್ರಸ್ತಾವನೆಯ ಅರ್ಥ: (Meaning of the preamble)

ಆಕ್ಸ್ ಫರ್ಡ್‌ ಅಡ್ವಾನ್ಸ್‌ ಲರ್ನರ್‌ ಡಿಕ್ಷನರಿ ಪ್ರಕಾರ ಪ್ರಸ್ತಾವನೆ ಎಂದರೆ ಯಾವುದೇ ಗ್ರಂಥ ಅಥವಾ ಬರಹ ರೂಪದ ದಾಖಲೆಯ ಪರಿಚಯಾತ್ಮಕ ಭಾಗವಾಗಿದೆ. ಸಂವಿಧಾನ ಒಳಗೊಂಡಿರುವ ಮೌಲ್ಯ, ತತ್ವಗಳು, ಸಿದ್ಧಾಂತಗಳು, ಗುರಿಗಳು ಹಾಗೂ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಸಂವಿಧಾನದ ಸರಳವಾದ ಭಾಗವೇ ಪ್ರಸ್ತಾವನೆ ಎಂದು ಹೇಳಬಹುದು. ಸಾಮಾನ್ಯವಾಗಿ ಪ್ರಸ್ತಾವನೆಯು ಸಂವಿಧಾನ ರಚನಾಕಾರರು ಮಹತ್ವ ನೀಡಿದ ಮೌಲ್ಯಗಳು, ಪಾಲಿಸಿದ ಬಹುಮುಖ್ಯ ತತ್ವಗಳು, ಪ್ರಜೆಗಳು ಹೊಂದಿರಬೇಕಾದ ಹಕ್ಕುಗಳು ಹಾಗೂ ರಾಜ್ಯದ ಸ್ವರೂಪವನ್ನು ಪ್ರತಿಫಲಿಸುತ್ತದೆ.

ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲದಿದ್ದರೂ ಪೀಠಿಕೆಯಂತಿದ್ದು ಭಾರತದ ರಾಜಕೀಯ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಪ್ರಸ್ತಾವನೆಯನ್ನು ಕೆಲವರು ʻʻಸಂವಿಧಾನದ ಒಡವೆʻʻ ಎಂದರೆ, ಕೆ.ಎಂ. ಮುನ್ಸಿಯವರು ಇದನ್ನು ʻʻರಾಜಕೀಯ ಜಾತಕʻʻ ಎಂದು ಬಣ್ಣಿಸಿದರು.

ಇದರ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲದಿದ್ದರೂ ಇದರ ಪ್ರಾಮುಖ್ಯತೆ ಮತ್ತು ಉಪಯುಕ್ತತೆಯನ್ನು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳಲ್ಲಿ ತಿಳಿಸಿದೆ. ಬೆರುಬಾರಿ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಲಿಲ್ಲ. ಆದರೆ 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು. ಇದರಲ್ಲಿ ಉಲ್ಲೇಖಿಸಿರುವ ಪದಗಳು ಅರ್ಥಗರ್ಭಿತವಾಗಿದ್ದು ರಚನಾತ್ಮಕ ತತ್ವಗಳನ್ನು ಮತ್ತು ಭಾವನೆಗಳನ್ನು ಒಳಗೊಂಡಿದೆ.

2. ಪ್ರಸ್ತಾವನೆಯ ಹಿನ್ನೆಲೆ: (Background of the preamble)

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನದಲ್ಲಿ 1946 ಡಿಸೆಂಬರ್ 13 ರಂದು ಜವಾಹರ್ಲಾಲ್ ನೆಹರು ಅವರು ಧ್ಯೇಯಗಳ ನಿರ್ಣಯಗಳನ್ನು ಮಂಡಿಸಿದರು. ಈ ಧ್ಯೇಯಗಳ ನಿರ್ಣಯವು ಸಂವಿಧಾನ ರಚನಾ ಸಭೆಯು ಯಾವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು ಹಾಗೂ ಗುರಿಗಳನ್ನು ಆಧರಿಸಿ ಸಂವಿಧಾನ ರಚಿಸಬೇಕೆಂಬ ಅಂಶಗಳನ್ನು ಒಳಗೊಂಡಿತ್ತು. ಸಾರ್ವಭೌಮತೆ, ಪ್ರಜಾಪ್ರಭುತ್ವ, ಗಣತಂತ್ರ, ಜನತಾ ಪ್ರಾಧಿಕಾರ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ರಕ್ಷಣೆ ಮುಂತಾದ ನಿರ್ಣಯಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಮುಂದೆ 1947 ಜನವರಿ 22ರಂದು ಈ ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿ ಅದರಂತೆ ಕಾರ್ಯರಂಭ ಮಾಡಿತು. 1947 ಅಕ್ಟೋಬರ್ 17ರಂದು ಧ್ಯೇಯಗಳ ನಿರ್ಣಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಸಂವಿಧಾನ ರಚನಾ ಸಭೆಯು ಅದನ್ನೇ ಸಂವಿಧಾನ ಪ್ರಸ್ತಾವನೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿತು.

3. ಪ್ರಸ್ತಾವನೆಯ ಪಠ್ಯ: (Text of the preamble) 

ಭಾರತದ ಸಂವಿಧಾನದ ಪ್ರಸ್ತಾವನೆಯು ಸಂವಿಧಾನಕ್ಕೆ 1976ರಲ್ಲಿ ಅಳವಡಿಸಲಾದ 42ನೇ ತಿದ್ದುಪಡಿಯ ನಂತರ ಹೀಗೆ ಆರಂಭವಾಗುತ್ತದೆ.

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ

ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು 

ಮತ್ತು ಅದರ ಎಲ್ಲಾ ಪೌರರಿಗೆ

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ,

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ

ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ

ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು

ರಕ್ಷಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವುದಕ್ಕಾಗಿ

ದೃಢಸಂಕಲ್ಪ ಮಾಡಿ

ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ಮೂಲ ಸಂವಿಧಾನ ಪೀಠಿಕೆಯಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ಪದಗಳಿದ್ದವು. ಅವನ್ನು 1976ರ 42ನೇ ಸಂವಿಧಾನಿಕ ತಿದ್ದುಪಡಿ ಮೂಲಕ ಸಮಾಜವಾದಿ ಹಾಗೂ ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಯಿತು. ಅದೇ ರೀತಿ ದೇಶದ ಏಕತೆ ಎಂಬ ಪದವನ್ನು ಬದಲಿಸಿ ದೇಶದ ಏಕತೆ ಮತ್ತು ಸಮಗ್ರತೆ ಎಂಬ ಪದವನ್ನು ಸೇರಿಸಲಾಗಿದೆ.

ಉಪಸಂಹಾರ

ಒಟ್ಟಾರೆ, ಭಾರತೀಯ ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ವಿಕ ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಇದು ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಭರವಸೆ ನೀಡುವ ಮಹತ್ವದ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಸ್ತಾವನೆ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ, ಸಂವಿಧಾನದ ಆತ್ಮವನ್ನು ಅರ್ಥಮಾಡಿಕೊಳ್ಳಲು ಪ್ರಸ್ತಾವನೆಯ ಅಧ್ಯಯನ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಭಾರತದ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗಿನಂತೆ ನೋಡೋಣ,

 

1.  ಭಾರತದ ಪ್ರಜೆಗಳಾದ ನಾವು: (We the people of india) 

 ಭಾರತದ ಸಂವಿಧಾನ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಎಂದು ಆರಂಭಗೊಂಡು ನಮ್ಮ ಸಂವಿಧಾನವನ್ನು ನವೆಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ಅಂತ್ಯಗೊಂಡಿದೆ. ಅಂದರೆ ಇದರ ಅರ್ಥ ಭಾರತದ ಸಂವಿಧಾನವು ಭಾರತೀಯರಿಂದಲೇ ರಚಿತಗೊಂಡಿದೆ ಎಂದರ್ಥ. ಸಂವಿಧಾನ ರಚನಾ ಸಭೆಯ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗಿದ್ದರೂ ಪ್ರಜೆಗಳ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಚರ್ಚಿಸಿ ದೇಶಕ್ಕೆ ಸೂಕ್ತವಾದ ಸಂವಿಧಾನವನ್ನು ರಚಿಸಿದರು. ಹೆಚ್ಚು ಕಡಿಮೆ ದೇಶದ ಎಲ್ಲಾ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡಿದ್ದು ಸಂವಿಧಾನ ರಚನಾ ಸಭೆ ಎಲ್ಲರ ಹಿತರಕ್ಷಣೆ ಮತ್ತು ಅಶೋತ್ತರಗಳನ್ನು ಕಾಪಾಡುವಲ್ಲಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಸಂವಿಧಾನ ರಚನಾ ಸಭೆಯ ಸದಸ್ಯರು ಭಾರತದ ಪ್ರಜೆಗಳಾದ ನಾವು ಎಂಬ ಘೋಷಣೆಯ ಮೂಲಕ ಸಂವಿಧಾನವನ್ನು ಅಂಗೀಕರಿಸಿದ್ದನ್ನು ಕೆಲವರು ಟೀಸಿದ್ದಾರೆ. ಏಕೆಂದರೆ ವಾಸ್ತವವಾಗಿ ಭಾರತೀಯರೆಲ್ಲರೂ ಸಂವಿಧಾನದ ರಚನೆಯಲ್ಲಿ ಭಾಗವಹಿಸಲಿಲ್ಲ.

2.  ಸಾರ್ವಭೌಮ ರಾಷ್ಟ್ರ: (Sovereign state)

ಪ್ರಸ್ತಾವನೆ ತಿಳಿಸಿರುವ ಹಾಗೆ ಭಾರತವು ಒಂದು ಸರ್ವತಂತ್ರ ಸ್ವತಂತ್ರವುಳ್ಳ ಸಾರ್ವಭೌಮ ರಾಷ್ಟ್ರ. ಭಾರತವು ವಿಶ್ವದ ಯಾವುದೇ ದೇಶಗಳ ಅದೀನಕ್ಕೊಳಪಟ್ಟ ರಾಷ್ಟ್ರವಲ್ಲ. ಸ್ವಾತಂತ್ರ ನಂತರ ಭಾರತವು ಯಾವುದೇ ವಿದೇಶಿ ಶಕ್ತಿಗೆ ಒಳಗಾಗದೆ ತನ್ನ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳನ್ನು ತಾನೇ ನಿರ್ವಹಿಸುತ್ತಿದೆ. ಸ್ವತಂತ್ರ ರಾಷ್ಟ್ರ ಕಾಮನ್‌ವೆಲ್ತ್ನಲ್ಲಿ ಸದಸ್ಯ ರಾಷ್ಟ್ರವಾಗಿದ್ದರೂ ತನ್ನ ಸ್ವಾತಂತ್ರವನ್ನಾಗಲಿ ಅಥವಾ ಅಲಿಪ್ತ ನೀತಿಯನ್ನಾಗಲಿ ಕಳೆದುಕೊಂಡಿಲ್ಲ. ಬ್ರಿಟಿಷ್ ರಾಣಿ ಮುಖ್ಯಸ್ಥರಾಗಿರುವ ಕಾಮನ್ವೆಲ್ತ್‌ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಹಕಾರವನ್ನುಂಟು ಮಾಡಲು ಸಹಾಯಕವಾಗಿದೆ. ತನಗೆ ಬೇಡವಾದರೆ ಕಾಮನ್ವೆಲ್ತ್ ನಿಂದ ಹೊರಗೆ ಬರುವ ಅಧಿಕಾರ ಭಾರತಕ್ಕೆ ಇದೆ. ಭಾರತವು ಸ್ವ-ಇಚ್ಛೆಯಿಂದ ಕಾಮನ್ವೆಲ್ತನ ಸದಸ್ಯ ರಾಷ್ಟ್ರವಾಗಿರುವುದರಿಂದ ಅದು ಸ್ವ ಇಚ್ಛೆಯಿಂದ ಹೊರಬರುವ ಅಧಿಕಾರವನ್ನು ಹೊಂದಿದೆ. 

3. ಸಮಾಜವಾದಿ ರಾಷ್ಟ್ರ: (Socialist) 

ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಸಮಾನವಾದ ಸಮಾಜಕ್ಕೆ ಅಡಿಗಲ್ಲನ್ನು ಹಾಕುವ ದೃಷ್ಟಿಯಿಂದ ಭಾರತವು ಸಮಾಜವಾದವನ್ನು ಅನುಸರಿಸಿತು. ಪ್ರಸ್ತಾವನೆಯಲ್ಲಿಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಮಾಜವಾದಿ ತತ್ವಗಳನ್ನು ಕಾರ್ಯಗತಗೊಳಿಸುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯವನ್ನು ಪ್ರಜೆಗಳಿಗೆ ಒದಗಿಸಿಕೊಡುವಂತೆ ಕರೆ ನೀಡಿದೆ. ಸಮಾಜವಾದಿ ಎಂಬ ಪದವು ಸಂವಿಧಾನದಲ್ಲಿರಲಿಲ್ಲ. ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಸಮಾಜವಾದಿ ಎಂಬ ಪದವನ್ನು 1976 ಡಿಸೆಂಬರ್ 18ರಂದು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು. ಇನ್ನು ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳು ಎಂಬ ಪ್ರತ್ಯೇಕ ಭಾಗವಿದ್ದು ಇದು ರಾಜ್ಯ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಮಾರ್ಗಸೂಚಿಯಾಗಿದೆ. ಇದರಲ್ಲಿ ಸಮಾಜವಾದ, ಉದಾರವಾದ ಹಾಗೂ ಗಾಂಧಿ ತತ್ವಗಳನ್ನು ಅಳವಡಿಸಲಾಗಿದೆ. ಉದಾಹರಣೆ: ಭೂ ಸುಧಾರಣೆ, ಸಂಪನ್ಮೂಲಗಳ ಸಮರ್ಪಕ ಬಳಕೆ, ಸಂಪತ್ತಿನ ಸಮಾನ ಹಂಚಿಕೆ, ಸಮಾನ ಕೆಲಸಕ್ಕೆ ಸಮಾನವಾದ ವೇತನ, ಕಾರ್ಮಿಕರ ಹಾಗೂ ವೃದ್ಧರ ಯೋಗ ಕ್ಷೇಮ ಇವೆ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಬಯಸುತ್ತಿದೆ. ಇವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ನೈತಿಕ ಕರ್ತವ್ಯಗಳೇ ವಿನಹಃ ಅದು ಕಡ್ಡಾಯವಾದದ್ದು ಅಲ್ಲ.

4. ಜಾತ್ಯತೀತ ರಾಷ್ಟ್ರ: (Secular)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಪ್ರಾಧಾನ್ಯತೆಯನ್ನು ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯತೀತತೆ ಎಂದು ಕರೆಯುವರು. ಭಾರತವು ಸರ್ವಧರ್ಮಗಳ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಯಹೂದಿಗಳು, ಜೈನರು ಹಾಗೂ ಬೌದ್ಧರಿದ್ದಾರೆ. ದೇಶದಲ್ಲಿ ಕೋಮು ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಭಾರತ ಲೌಕಿಕ ಹಾಗೂ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಈ ಅಂಶವನ್ನು ಒತ್ತಿ ಹೇಳಲು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಎಂಬ ಪದವನ್ನು ಪ್ರಸ್ತಾವನೆಗೆ 1976ರಲ್ಲಿ ಕೇಂದ್ರ ಸರ್ಕಾರ ಅಳವಡಿಸಿತು. ಸೆಕ್ಯುಲರ್ ಎಂಬ ಪದಕ್ಕೆ ವಿವಿಧ ಅರ್ಥಗಳಿವೆ. ಜಾತ್ಯತೀತತೆ, ಧರ್ಮಾತೀತತೆ, ಧರ್ಮ ನಿರಪೇಕ್ಷತೆ ಹಾಗೂ ಸರ್ವಧರ್ಮ ಸದ್ಭಾವನೆ ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ತಟಸ್ಥವಾಗಿರುವುದು ಜಾತ್ಯತೀತ ತತ್ವ ಎಂದು ಕೆಲವರು ಹೇಳಿದ್ದಾರೆ.  ಜವಹರಲಾಲ್ ನೆಹರು ಅವರು ಜಾತ್ಯತೀತ ಎಂದರೆ ಲೌಕಿಕವಾದ ಅಲ್ಲ ಅದರಲ್ಲಿ ಆಧ್ಯಾತ್ಮಿಕ ಅಂಶಗಳು ಇರುತ್ತವೆ ಎಂದಿದ್ದಾರೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದ್ದು ವ್ಯಕ್ತಿಗಳು ತಮ್ಮ ಆತ್ಮ ಸಾಕ್ಷಿಗೆ ಅನುಸಾರವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪ್ರಚಾರ ಮಾಡುವ ಹಾಗೂ ನಾಸ್ತಿಕವಾಗಿ ಜೀವನ ಸಾಗಿಸುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

 5. ಪ್ರಜಾಸತ್ತಾತ್ಮಕತೆ: (Democratic) 

ದೇಶದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗಿದೆ. ಈ ಪ್ರಜಾಪ್ರಭುತ್ವ ಎಂಬ ಪದವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸರ್ ಹೆನ್ರಿ ಮೈನ್ ರವರು ಪ್ರಜಾಪ್ರಭುತ್ವ ಒಂದು ಸರ್ಕಾರ ಪದ್ಧತಿ ಎಂದು ಹೇಳಿದ್ದಾರೆ. ಅಬ್ರಹಂ ಲಿಂಕನ್ ರವರು ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವು ಮುಕ್ತತೆ ಹಾಗೂ ಪಾರದರ್ಶಕತೆಯನ್ನು ಅವಲಂಬಿಸಿದ್ದು ಪ್ರಜೆಗಳು ತಮ್ಮ ಸರ್ಕಾರವನ್ನು ತಾವೇ ಪ್ರತಿನಿಧಿಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರದ ಸರಿ ತಪ್ಪುಗಳನ್ನು ತಿಳಿಹೇಳಿ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಸರ್ಕಾರ ಸರಿದಾರಿಗೆ ಬಾರದಿದ್ದಾಗ ಬೇಸರಗೊಂಡು ಪ್ರಜೆಗಳು ಸರ್ಕಾರವನ್ನು ಐದು ವರ್ಷಕ್ಕೊಮ್ಮೆ ಬದಲಿಸುವ ಅಧಿಕಾರವನ್ನು ಹೊಂದಿದ್ದಾರೆ.

6. ಗಣರಾಜ್ಯ: (Republic)

ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತರಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ರಿಪಬ್ಲಿಕ್ ಪದವು ಸಹ ವಿವಿಧ ಅರ್ಥಗಳನ್ನು ಹೊಂದಿದೆ. ರಿಪಬ್ಲಿಕ್ ಸರ್ಕಾರ ರಾಜಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಲೀಕಾಕ್ ಹೇಳಿದರೆ, ಅನೇಕ ವ್ಯಕ್ತಿಗಳಿಂದ  ನಡೆಸುವ ಸರ್ಕಾರ ಪದ್ಧತಿಯಾದರೆ ಅದು ರಿಪಬ್ಲಿಕ್ ಎಂದು ಜೆಲಿನೆಕ್ ಹೇಳಿದ್ದಾರೆ. ಹೊಸ ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ಪರಮಾಧಿಕಾರ ಪ್ರಜೆಗಳಿಂದ ಮತ್ತು ಅವರಿಂದ ಆಯ್ಕೆಯಾದ ಪ್ರತಿನಿಧಿಗಳ ಅಥವಾ‌ ಅಧಿಕಾರಿಗಳ ಕೈಯಲ್ಲಿ ಇರುವುದೇ ಗಣರಾಜ್ಯ. ಒಟ್ಟಿನಲ್ಲಿ ಭಾರತ ಸರ್ಕಾರವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದೇ ಆಗಿದೆ. ರಾಷ್ಟ್ರದ ಮುಖ್ಯಸ್ಥರು ಚುನಾವಣೆಯ ಮೂಲಕ ಆಯ್ಕೆಯಾಗುವ ಪದ್ಧತಿಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಹಾಗೂ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳೆಂದು ಸಹ ನಿಗದಿಪಡಿಸಲಾಗಿದೆ. ಹೀಗೆ ಅಮೆರಿಕಾದ ಹಾಗೆ ಭಾರತವು ಗಣರಾಜ್ಯವಾಗಿದೆ. ಆದರೆ ಇಂಗ್ಲೆಂಡ್ ರಾಜ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ವಿನಹ ಗಣರಾಜ್ಯವಾಗಿಲ್ಲ. ಇಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿರುವ ರಾಣಿ ಅಥವಾ ರಾಜ ಪ್ರಜೆಗಳಿಂದ ಆಯ್ಕೆ ಆಗುವುದಿಲ್ಲ.

7. ನ್ಯಾಯ: (Judiciary) 

 ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಎದ್ದು ಕಾಣುತ್ತಿದ್ದ ಸಾಮಾಜಿಕ ಅಸಮಾನತೆಗಳಾದ ಕರಿಯ-ಬಿಳಿಯ, ಮೇಲು-ಕೀಳು, ಸೃಶ್ಯ- ಅಸ್ಪೃಶ್ಯ, ಮೇಲುಜಾತಿ, ಕೀಳು ಜಾತಿ ಎಂದು ವಿಂಗಡಿಸಿ ಒಂದು ಜಾತಿಯನ್ನಂತೂ ಸಮಾಜದಿಂದ ಹೊರಗಿಡಲಾಗಿತ್ತು. ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಪಡಿಸಲಾಗಿತ್ತು. ಅವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣಲಾಗುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶವನ್ನು ಸಂವಿಧಾನ ಹೊಂದಿದೆ. ಸಾಮಾಜಿಕ ನ್ಯಾಯವೆಂದರೆ ವಿವಿಧ ವರ್ಗಗಳಲ್ಲಿ ಹಾಗೂ ಜಾತಿಗಳಲ್ಲಿ ಏಕತೆ ಮತ್ತು ಸಮಾನತೆಯ  ಭಾವನೆಯನ್ನು ಉಂಟುಮಾಡುವುದು, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಶ್ರಮಜೀವಿಗಳ ಜೀವನ ಮಟ್ಟವನ್ನು ಸುಧಾರಿಸುವುದು, ಹಾಗೆಯೇ ಬಡತನವನ್ನು ತೊಲಗಿಸಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರಲ್ಲೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಸಂವಿಧಾನದ ಗುರಿಯಾಗಿದೆ. ಮುಂದುವರೆದು ಹಿಂದುಳಿದ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗವನ್ನು ರಾಜಕೀಯ ಉನ್ನತಿ ಸಾಧಿಸಲು ಅನುವು ಮಾಡಿಕೊಡುವುದು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂದು ಪ್ರಸ್ತಾವನೆಯಲ್ಲಿ ಹೇಳಿರುವುದು ಮಾನವೀಯತೆಯ ಹಾಗೂ ಏಕತೆಯ ಸಂಕೇತವಾಗಿದೆ. ಆದರೂ ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಂಪೂರ್ಣವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಜನರ ಬದುಕು ಇಂದಿಗೂ ಹಸನವಾಗಿಲ್ಲ. ಬಡವರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನು ಅಸ್ಪೃಶ್ಯರ ಬಾಳಂತೂ ನರಕದ ಬಾಗಿಲು ತಟ್ಟಿ ಬಂದಂತೆ ಅನಿಸುತ್ತಿದೆ.  ಜಾತಿಯತೆ ಇನ್ನಷ್ಟು ವಿರಾಟ ರೂಪವನ್ನು ತಾಳಿ ಕೇಕೆ ಹಾಕುತ್ತಿದೆ. ಹಿಂದೆಂದಿಗಿಂತಲೂ ಅವರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಅನೇಕರು ಇಂದಿಗೂ ಅನ್ನ, ಬಟ್ಟೆ ಹಾಗೂ ವಸತಿ ಇಲ್ಲದೆ ನರಳುತ್ತಿರುವುದು ನಾಚಿಕೇಡಿನ ವಿಷಯವಾಗಿದೆ. ನಿರ್ಗತಿಕರು ರಸ್ತೆ ಬದಿಯಲ್ಲಿ ಸಿಕ್ಕಿದ್ದನ್ನು ತಿಂದು ಅಲ್ಲೇ ಮಲಗಿ ನರಕದ ಜೀವನವನ್ನು ಅನುಭವಿಸುತ್ತಿರುವುದನ್ನು ನೋಡಿದರೆ ಕರುಳು ಕಿವುಚಿದಂತಾಗುತ್ತದೆ. ಸರ್ಕಾರದ ಯಾವ ಯೋಜನೆಗಳು ಈ ಜನರ ಬವಣೆಯನ್ನು ಈವರೆಗೆ ಕಡಿಮೆ ಮಾಡಿಲ್ಲ.

8. ಸ್ವಾತಂತ್ರ: (Independence)

 ಭಾರತದ ಸಂವಿಧಾನದಲ್ಲಿ ಸ್ವಾತಂತ್ರದ ಪರಿಕಲ್ಪನೆ ಇದೆ. ಪ್ರಸ್ತಾವನೆಯಲ್ಲಿ ವಾಕ್ ಸ್ವಾತಂತ್ರ, ಧರ್ಮ ಸ್ವಾತಂತ್ರ್ಯ, ನಂಬಿಕೆ ಹಾಗೂ ಉಪಾಸನ ಸ್ವಾತಂತ್ರ್ಯಗಳಿಗೆ ಅವಕಾಶ ಕಲ್ಪಿಸಿರುವುದು ಪ್ರಜಾಪ್ರಭುತ್ವದ ಸಂಕೇತವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗಳಿಗೆ ತಮ್ಮ ಸ್ವಾತಂತ್ರವನ್ನು ಅನುಭವಿಸಲು ಅವಕಾಶ ಕೊಡಬೇಕು. ಹಾಗೊಂದು ವೇಳೆ ಕೊಡದಿದ್ದರೆ ಪ್ರಜಾಪ್ರಭುತ್ವ ಬಹುಕಾಲ ಬಾಳಲಾರದು. ಸ್ವಾತಂತ್ರ್ಯವಿಲ್ಲದ ವ್ಯಕ್ತಿ ಸಮಾಜದಲ್ಲಿ ಯಾವ ಪ್ರಯೋಜನಕ್ಕೂ ಬಾರದವನಾಗಿ ಸರ್ಕಾರದ ಗುಲಾಮನಾಗಿ ಬದುಕಬೇಕಾಗುತ್ತದೆ. ಸ್ವಾತಂತ್ರ್ಯ ಉಲ್ಲಂಘನೆಯಾಗದಂತೆ ನ್ಯಾಯಾಲಯಗಳು ಆತನ ನೆರವಿಗೆ ಬರಬೇಕು.

 9. ಸಮಾನತೆ: (Equality)

ಮಾನವನಿಗೆ ಸ್ವಾತಂತ್ರ್ಯ ಹೇಗೆ ಅಗತ್ಯವಾಗಿದೆಯೋ ಹಾಗೆ ಸಮಾನತೆಯು ಮುಖ್ಯವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನತೆಯನ್ನು ಹೊರತುಪಡಿಸಿ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಧರ್ಮ, ಜಾತಿ, ಲಿಂಗ, ಬಣ್ಣ ಹಾಗೂ ವಾಸ ಸ್ಥಳದ ಆಧಾರದ ಮೇಲೆ ಅಸಮಾನತೆಯನ್ನು ಮಾಡಬಾರದು. ಅಸಮಾನತೆಯನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಸಮಾನ ಸ್ಥಾನ ಹಾಗೂ ಸಮಾನ ಹಕ್ಕುಗಳು ಎಲ್ಲರಿಗೂ ಸಿಗಬೇಕು.

10. ಭ್ರಾತೃತ್ವ: (Liberty)

ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರು ಎಲ್ಲ ಭಾರತೀಯರು ಒಂದೇ ಎಂದು ಸಾರುವ ಸಹೋದರ ಭಾವನೆಯನ್ನು ಭ್ರಾತೃತ್ವ ಎಂದು ಕರೆದಿದ್ದಾರೆ. ಭಾರತ ವೈವಿಧ್ಯತೆಯುಳ್ಳ ದೇಶ. ವಿವಿಧ ಧರ್ಮ, ಜಾತಿ ಜನರು ತಮ್ಮದೇ ಆದ ಸಂಪ್ರದಾಯ, ಆಚರಣೆ, ಭಾಷೆಗಳನ್ನು ಹೊಂದಿದ್ದಾರೆ. ಕೋಮು ಜಾತಿಯ ಭಾವನೆಯನ್ನು ಅಳಿಸಿ ಪರಸ್ಪರ ಹೊಂದಾಣಿಕೆಯ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಪರಸ್ಪರರು ಸಹೋದರ ಭಾವನೆಯಿಂದ ಬಾಳಬೇಕು.

ಉಪಸಂಹಾರ:

ಒಟ್ಟಿನಲ್ಲಿ, ಸಂವಿಧಾನದ ಪ್ರಸ್ತಾವನೆ ಭಾರತದ ಆತ್ಮ ಮತ್ತು ದಿಕ್ಕುಸೂಚಿಯಾಗಿದೆ. ಇದು ಕೇವಲ ಕಾನೂನು ಪರಿಚಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಘೋಷಣೆಯಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾರ್ಯರೂಪಕ್ಕೆ ತರುವುದೇ ಸಂವಿಧಾನದ ನಿಜವಾದ ಆಶಯ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ.

ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನ ಒಂದು ಸಾಮಾಜಿಕ ದಾಖಲೆ – ಗ್ರಾನ್ ವಿಲ್ಲೆ ಅಸಿಸ್ಟೆಂಟ್

ವಿಶಾಲ ಜನಸಂಖ್ಯೆ, ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಹೊಂದಿರುವ ಭಾರತದ ಆಡಳಿತಕ್ಕೆ ಸಂವಿಧಾನವೇ ಆಧಾರವಾಗಿದೆ. ಇದು ಕೇಂದ್ರ–ರಾಜ್ಯ ಸಂಬಂಧಗಳನ್ನು ಸಮನ್ವಯಗೊಳಿಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಇದು ಬಲವಾದ ಅಡಿಪಾಯವಾಗಿದೆ.

1. ಲಿಖಿತ ಹಾಗೂ ಬೃಹತ್ ಸಂವಿಧಾನ: 

ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ವಿಸ್ತಾರವಾದ ಹಾಗೂ ಬೃಹತ್ ಗಾತ್ರದಿಂದ ಕೂಡಿದೆ. ಇದು ಅತಿ ಸೂಕ್ಷ್ಮ ವಿಷಯದಿಂದ ಹಿಡಿದು ಎಲ್ಲಾ ವಿಷಯಗಳನ್ನು ಯಾವುದೇ ಅನುಮಾನ, ಗೊಂದಲ ಹಾಗೂ ಘರ್ಷಣೆಗೆ ಎಡೆ ಮಾಡಿಕೊಡದೆ ಸವಿಸ್ತಾರವಾದ ಬಹುರೂಪದಲ್ಲಿದೆ. ಭಾರತದ ಸಂವಿಧಾನದ ಬೃಹತ್ ಗಾತ್ರವನ್ನು ಆನೆಯ ಗಾತ್ರಕ್ಕೆ ಹೋಲಿಸಿ ಆನೆಯ ಗಾತ್ರದ ಸಂವಿಧಾನ ಎನ್ನುವರು. ಆದರೆ ಭಾರತದ ಶ್ರೀಮಂತ ಚರಿತ್ರೆ ಸಂಸ್ಕೃತಿ ಹಾಗೂ ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ ಸಂವಿಧಾನದ ಗಾತ್ರ ದೊಡ್ಡದೇನದಲ್ಲ ಎಂದು ಹೇಳಬಹುದು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ಧತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ಪದ್ಧತಿ, ಚುನಾವಣೆಗಳು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆ ಮತ್ತು ಅವುಗಳ ನಡುವಿನ ಸಂಬಂಧಗಳ ವಿಷಯಗಳನ್ನು ಸಂವಿಧಾನ ಹೊಂದಿದೆ. 1949 ನವೆಂಬರ್ 26ರಂದು ಅಂಗೀಕರಿಸಿದ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಕಾಲಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿಗಳ ಆದ ಕಾರಣ ಸಂವಿಧಾನದ ವಿಧಿಗಳಲ್ಲಿ ಏರುಪೇರಾಗಿದೆ. ಕೆಲವು ವಿಧಿಗಳು ರದ್ದಾದರೆ ಇನ್ನು ಕೆಲವು ವಿಧಿಗಳು ಹೊಸದಾಗಿ ಸೇರಿಸಲ್ಪಟ್ಟವುಗಳಾಗಿವೆ. ಹೀಗಾಗಿ ಪ್ರಸ್ತುತ 460ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಹಾಗೂ 12 ಅಧಿಸೂಚಿಗಳು ಇವೆ. ಆದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾವಣೆಯಾಗಿಲ್ಲ. 1950 ರಿಂದ ಈವರೆಗೆ ಒಟ್ಟು 104 ಬಾರಿ ಸಂವಿಧಾನದ ವಿಧಿಗಳು ತಿದ್ದುಪಡಿಗೆ ಒಳಗಾಗಿವೆ.

2.  ಪ್ರಸ್ತಾವನೆ: 

ಸಂವಿಧಾನದ ತತ್ವಗಳು, ಮೌಲ್ಯಗಳು, ಗುರಿ ಹಾಗೂ ಉದ್ದೇಶಗಳನ್ನು ತಿಳಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎಂದು ಕರೆಯಲಾಗಿದೆ. ಅಮೇರಿಕ ಸಂವಿಧಾನದ ಪ್ರಭಾವಕ್ಕೆ ಒಳಗಾಗಿ ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತದ ಸಂವಿಧಾನದ ಪ್ರಸ್ತಾವನೆಯೂ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಕೆ. ಎಂ. ಮುನ್ಸಿಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದರೆ, ಮತ್ತೊಬ್ಬ ಚಿಂತಕರು ಇದನ್ನು ”ಸಂವಿಧಾನದ ಒಡವೆ” ಎಂದು ಕರೆದಿದ್ದಾರೆ.

3. ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ: 

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿದೆ. ಹೀಗಾಗಿ ಭಾರತದ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳಲ್ಲಿ ಹೊರಗಿನವರು ತಲೆಹಾಕಲು ಸಾಧ್ಯವಿಲ್ಲ. ಎಲ್ಲಾ ವಿಷಯಗಳಲ್ಲಿ ಭಾರತ ಸಂಪೂರ್ಣ ಸ್ವತಂತ್ರವನ್ನು ಪಡೆದುಕೊಂಡು ಒಂದು ಸಾರ್ವಭೌಮ ದೇಶವಾಗಿದೆ. ಇಲ್ಲಿ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ದುಡಿಯಬೇಕು. ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗುತ್ತಾರೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಸ್ತ್ರೀ ಪುರುಷರು ಮತದಾನ ಮಾಡುವ ಹಕ್ಕುವನ್ನು ಹೊಂದಿದ್ದಾರೆ. ದೇಶದ ಮುಖ್ಯಸ್ಥರು ಜನರಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ. ಅದನ್ನು ಗಣರಾಜ್ಯ ಎಂದು ಕರೆಯುತ್ತಾರೆ. ಭಾರತದ ರಾಷ್ಟ್ರಪತಿಯು ರಾಜ್ಯಸಭೆ, ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಕಾರಣ ಭಾರತವು ಗಣರಾಜ್ಯವಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ.

4. ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ: 

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಎಂದು, ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು  ಅನಮ್ಯ ಸಂವಿಧಾನ ಎಂದು ಕರೆಯುವರು. ಭಾರತದಲ್ಲಿ ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ರಾಜ್ಯಗಳು ಅನುಮೋದಿಸಬೇಕಾಗುತ್ತದೆ. ಉದಾಹರಣೆ: ರಾಜ್ಯದ ಹೆಸರಿನ ಬದಲಾವಣೆ, ರಾಜ್ಯಗಳ ಗಡಿ ಭಾಗಗಳ ಬದಲಾವಣೆ ಹಾಗೂ ರಾಜ್ಯ ಶಾಸಕಾಂಗದಲ್ಲಿ ಮೇಲ್ಮನೆಯ ರಚನೆ ಅಥವಾ ರದ್ದುಗೊಳಿಸುವುದು ಇತ್ಯಾದಿಗಳನ್ನು ಸರಳ ಬಹುಮತದ ಮೂಲಕ ಬದಲಾಯಿಸಬಹುದು. ಹೀಗಾಗಿ ಭಾರತದ ಸಂವಿಧಾನವು ಇಂಗ್ಲೆಂಡ್ ಸಂವಿಧಾನದಂತೆ ಸುಲಭವೂ ಆಗಿರದೆ ಅಮೆರಿಕಾದ ಸಂವಿಧಾನದಂತೆ ಕಠಿಣವೂ ಆಗಿರದೆ ಇವೆರಡರ ಸಮ್ಮಿಶ್ರದ ಲಕ್ಷಣಗಳಿಂದ ಕೂಡಿದೆ ಎಂದು ಹೇಳಬಹುದು.

5. ಸಂಸದೀಯ ಮಾದರಿ ಸರ್ಕಾರ: 

ನಮ್ಮ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿದೆ. ಯಾವ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿರುವುದೋ ಆ ದೇಶದ ಮುಖ್ಯಸ್ಥರು ಹೆಸರಿಗೆ ಮಾತ್ರ ಅಧಿಕಾರವನ್ನು ಹೊಂದಿರುತ್ತಾನೆ. ದೇಶದ ಎಲ್ಲಾ ಅಧಿಕಾರವೂ ಸಂಸತ್ತಿ(ಮಂತ್ರಿಮಂಡಲ)ಕ್ಕೆ ಒಳಪಟ್ಟಿರುತ್ತದೆ. ಉದಾಹರಣೆ: ಇಂಗ್ಲೆಂಡ್ ಹಾಗೂ ಭಾರತದಲ್ಲಿ ಅಧ್ಯಕ್ಷ ಹಾಗೂ ರಾಜರುಗಳು ನಾಮ ಮಾತ್ರ ಕಾರ್ಯಾಂಗ ಅಧಿಕಾರಿಗಳಾಗಿದ್ದು ನೈಜ ಅಧಿಕಾರಕ್ಕೆ ಮಂತ್ರಿಮಂಡಲ ಹೊಣೆಯಾಗಿರುತ್ತದೆ. ಸಂವಿಧಾನವು ಅಧ್ಯಕ್ಷರಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿದೆಯಾದರೂ ಕೇವಲ ಅನಿವಾರ್ಯ ಸಂಬಂಧಗಳಲ್ಲಿ ಮಾತ್ರ ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಅವಕಾಶವಿರುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಂತ್ರಿಮಂಡಲದ ಆದೇಶದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

6. ಸಂಯುಕ್ತ ಮತ್ತು ಏಕೀಕೃತ ಸಂವಿಧಾನ: 

“ ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ರೀತಿಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಸಂಯುಕ್ತ ವ್ಯವಸ್ಥೆ” ಎಂದು, ಕೇಂದ್ರ ಸರ್ಕಾರ ಪ್ರಭಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆಯನ್ನು ಏಕಾತ್ಮಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಭಾರತದ ಸಂವಿಧಾನದ ಮೊದಲನೆಯ ವಿಧಿಯು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ವಿವರಿಸಿದೆ. ಆದರೆ ಸಂಯುಕ್ತ ವ್ಯವಸ್ಥೆಯಾಗಿದೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೂ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ಸಂವಿಧಾನದ ಶ್ರೇಷ್ಠತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ, ಸುಪ್ರೀಂಕೋರ್ಟ್ ಇರುವಿಕೆ, ಅನಮ್ಯ ತಿದ್ದುಪಡಿ ಮುಂತಾದವುಗಳನ್ನು ಅಳವಡಿಸಿಕೊಂಡಿದೆ. ಜೊತೆಗೆ ಏಕಾತ್ಮಕ ಅಂಶಗಳಾಗದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು ಹಾಗೂ ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದುದರಿಂದ ಭಾರತವನ್ನು ಅರೆ ಸಂಯುಕ್ತ ಸರ್ಕಾರ ಎಂದು ಕರೆಯಲಾಗಿದೆ. ಕೆ. ಸಿ. ವ್ಹೀರ್ ಅವರು ಭಾರತದ ಸಂವಿಧಾನವು ಭಾವನಾತ್ಮಕ ಸಂಯುಕ್ತ ವ್ಯವಸ್ಥೆಯಾಗಿದ್ದು ಸಂಯುಕ್ತ ಲಕ್ಷಣಗಳನ್ನು ಹೊಂದಿದ ಏಕಾತ್ಮಕ ವ್ಯವಸ್ಥೆ ಎಂದಿದ್ದಾರೆ.

7. ಮೂಲಭೂತ ಹಕ್ಕುಗಳು: 

ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಸಂವಿಧಾನ ರಚನಾಕಾರರು ಸಂವಿಧಾನದ ಮೂರನೇ ಭಾಗದ 12 ರಿಂದ 15 ನೇ ವಿಧಿಯವರೆಗೆ ಏಳು ಮೂಲಭೂತ ಹಕ್ಕುಗಳನ್ನು ನೀಡಿದ್ದರು. ಆದರೆ 1978 ರಲ್ಲಿ 44ನೇ ವಿಧಿಗೆ ತಿದ್ದುಪಡಿ ತಂದು ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಈಗ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಇವೆ. ಭಾರತೀಯ ಪೌರರು ಮೂಲಭೂತ ಹಕ್ಕುಗಳನ್ನು ಹೊಂದಿದ್ದರೂ ತುರ್ತುಪರಿಸ್ಥಿತಿಯಲ್ಲಿ ಅವುಗಳನ್ನು ಕಸಿದುಕೊಳ್ಳಬಹುದಾಗಿದೆ. ಹಾಗೂ ಸಾಮಾನ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಮಿತಿಗೊಳಿಸಬಹುದಾಗಿದೆ.

8. ರಾಜ್ಯ ನಿರ್ದೇಶಕ ತತ್ವಗಳು :(Directive principles of state policy)

ದೇಶದ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಜ್ಯ ನಿರ್ದೇಶಕ ತತ್ವಗಳು ಎಂದು ಕರೆಯುತ್ತಾರೆ. ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದ್ದು ಇವು ಸರ್ಕಾರವು ಅನುಸರಿಸಬೇಕಾದ ನೀತಿ ನಿಯಮಗಳ ಬಗೆಗೆ ನಿರ್ದೇಶನಗಳನ್ನು ನೀಡುತ್ತವೆ. ಒಂದು ವೇಳೆ ಸರ್ಕಾರ ಅವುಗಳನ್ನು ಪಾಲಿಸದೆ ಹೋದರೆ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ನ್ಯಾಯಾಲಯಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಸರ್ಕಾರದ ಮೇಲೆ ಬಲವಂತವಾಗಿಯೂ ಹೇರುವಂತಿಲ್ಲ. ದೇಶದ ಸಂವಿಧಾನದ ಹೊರತಾಗಿ ಬೇರೆ ಯಾವುದೇ ದೇಶಗಳ ಸಂವಿಧಾನದಲ್ಲಿ ಇಂತಹ ನಿರ್ದೇಶಕ ತತ್ವಗಳು ಕಂಡುಬರುವುದಿಲ್ಲ. ಆದರೂ ನಿರ್ದೇಶಕ ತತ್ವಗಳನ್ನು ರಾಜ್ಯ ಆಡಳಿತದಲ್ಲಿ ಮೂಲಭೂತವೆಂದು ಪರಿಗಣಿಸಲಾಗಿದ್ದು ಸರ್ಕಾರಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಬೇಕೆಂದು ಹೇಳಲಾಗಿದೆ. ಇಲ್ಲವಾದರೆ ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರದ ದಾರಿ ದೀಪಗಳಾಗಿವೆ. ರಾಜ್ಯ ನಿರ್ದೇಶಕ ತತ್ವಗಳು ಗಾಂಧೀವಾದ, ಸಮಾಜವಾದ ಹಾಗೂ ಉದಾರವಾದ ತತ್ವಗಳಿಂದ ಸ್ಪೂರ್ತಿ ಪಡೆದಿವೆ.

9. ಮೂಲಭೂತ ಕರ್ತವ್ಯಗಳು:  (Fundamental Duties)

ಮೂಲಭೂತ ಕರ್ತವ್ಯಗಳು ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಬೇಕಾದ ಸರಳ ಕಾರ್ಯಗಳಾಗಿವೆ. ಆರಂಭದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬಹುದಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976ರ 42ನೇ ಸಂವಿಧಾನದ ತಿದ್ದುಪಡಿಯ ಮೂಲಕ ಭಾಗ ನಾಲ್ಕು A 51ನೇ ವಿಧಿ ಅಡಿಯಲ್ಲಿ ಸೇರಿಸಲಾಯಿತು. ಪ್ರತಿ ಹಕ್ಕಿಗೂ ಅನುರೂಪವಾದ ಕರ್ತವ್ಯವಿರುವುದರಿಂದ ರಾಜ್ಯದಿಂದ ಹಕ್ಕುಗಳನ್ನು ಪಡೆದು ಅನುಭವಿಸುವ  ಪ್ರಜೆಗಳು ಕೃತಜ್ಞತಾಪೂರ್ವಕವಾಗಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ದೇಶ ಸೇವೆಗೆ ಕರೆ ಬಂದರೆ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ.

10. ಸ್ವತಂತ್ರ ನ್ಯಾಯಾಂಗ: (Independent judiciary)

ಭಾರತದಲ್ಲಿ ಪ್ರಜೆಗಳಿಗೆ ಸಮಾನವಾಗಿ ನ್ಯಾಯ ವಿತರಣೆ ಮಾಡುವ ಉದ್ದೇಶದಿಂದ ಭಾರತದ ಸಂವಿಧಾನವು ನ್ಯಾಯಾಂಗವನ್ನು ಶಾಸಕಾಂಗ ಹಾಗೂ ಕಾರ್ಯಾಂಗದಿಂದ ಬೇರ್ಪಡಿಸಿದೆ. ಏಕೆಂದರೆ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಅಂಕಿತದಲ್ಲಿದ್ದರೆ ಅವುಗಳು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಗುಮಾನಿಯಿಂದ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆ ಉಳಿಯುವಂತೆ ಮಾಡಲು ಮತ್ತು ನ್ಯಾಯಾಂಗದ ಪಾವಿತ್ರ್ಯತೆಯನ್ನು ಕಾಪಾಡಲು ಸಂವಿಧಾನ ರಚನಾ ಸಮಿತಿಯ ಸದಸ್ಯರು ನ್ಯಾಯಾಂಗವನ್ನು ಉಳಿದ ಎರಡು ಅಂಗಗಳಿಂದ ದೂರವಿರಿಸಿದರು. ಹೀಗಾಗಿ ಇಂದಿಗೂ ನ್ಯಾಯಾಂಗವು ಪ್ರತ್ಯೇಕವಾಗಿದ್ದು ನ್ಯಾಯಾಧೀಶರ ಸಂಬಳವನ್ನು ಸರ್ಕಾರ ನೀಡದೇ ಬದಲಾಗಿ “ಭಾರತದ ಸಂಗ್ರಹ ನಿಧಿಯಿಂದ ಭರಿಸಲಾಗುತ್ತದೆ.” ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಸಹ ಸರ್ಕಾರದ ಪಾತ್ರವೇನೂ ಇರುವುದಿಲ್ಲ.

11. ನ್ಯಾಯಾಂಗ ವಿಮರ್ಶೆ:

ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಸಂವಿಧಾನದ ನಿಯಮಾವಳಿಗನುಗುಣವಾಗಿ ಕಾನೂನುಗಳನ್ನು ರೂಪಿಸಬೇಕು. ಶಾಸಕಾಂಗಗಳು ರೂಪಿಸುವ ಕಾನೂನುಗಳು ಸಂವಿಧಾನ ವಿರುದ್ಧವಾಗಿದ್ದರೆ ಅವುಗಳನ್ನು ಅಸಿಂಧು ಅಥವಾ ಕಾನೂನುಬಾಹಿರ ಎಂದು ಘೋಷಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಇದನ್ನೇ ನ್ಯಾಯಿಕ ವಿಮರ್ಶೆ ಎಂದು ಕರೆಯುತ್ತಾರೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುವಂತಿಲ್ಲ. ನ್ಯಾಯಾಂಗ ಒಮ್ಮೆ ಕೊಟ್ಟ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂವಿಧಾನದ ಅರ್ಥವನ್ನು ಯಾವುದೇ ಪಕ್ಷಪಾತವಿಲ್ಲದೆ ವ್ಯಕ್ತಪಡಿಸಲು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ಕೊಡಲಾಗಿಯೇ ವಿನಹಃ ಶಾಸಕಾಂಗಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಉದ್ದೇಶದಿಂದಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ನ್ಯಾಯಾಂಗ ವಿಮರ್ಶೆಯ ಮೂಲಕ ನ್ಯಾಯಾಲಯವು ಸಂವಿಧಾನದ ಸಮತೋಲನ ಚಕ್ರದಂತೆ ಕಾರ್ಯನಿರ್ವಹಿಸುತ್ತದೆ.

12. ಜಾತ್ಯಾತೀತ ರಾಷ್ಟ್ರ: (Secular state)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯತೀತ ಎಂದು ಕರೆಯಲಾಗುವುದು. ಈ ಜಾತ್ಯತೀತ ಎಂಬ ಪದವು 1950ರ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇದನ್ನು 1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಜಾತ್ಯತೀತ ಎಂಬ ಪದವು ಇಂಗ್ಲಿಷ್ ಪದವಾದ ಸೆಕ್ಯುಲರಿಸಂ ಎಂಬ ಪದದಿಂದ ಬಂದಿದೆ. ಇದು ಕನ್ನಡದಲ್ಲಿ ನಾಸ್ತಿಕ ಅಥವಾ ದೈವ ವಿರೋಧಿ ಎಂದರ್ಥವಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಪದವನ್ನು ಧರ್ಮ ನಿರಪೇಕ್ಷತೆಯನ್ನು ಸೂಚಿಸಲು ಬಳಸಲಾಯಿತು. ಭಾರತದ ಸಂವಿಧಾನದ ಪ್ರಕಾರ ಭಾರತವು ಜಾತ್ಯತೀತ ದೇಶವಾಗಿದ್ದು ಹಿಂದೂ, ಇಸ್ಲಾಂ, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಶಿಗಳನ್ನು ಸಮಾನವಾಗಿ ಗೌರವಿಸುತ್ತದೆ. ರಾಜ್ಯವು ಯಾವುದೇ ಧರ್ಮದ ಪರ ಅಥವಾ ವಿರೋಧಿಯಾಗಿರಬಾರದು. ಭಾರತೀಯನು ತನಗೆ ಇಷ್ಟ ಬಂದ ಮತವನ್ನು ಇತರರಿಗೆ ತೊಂದರೆ ಆಗದಂತೆ ಅವಲಂಬಿಸಿ ಪ್ರಚಾರ ಮಾಡಬಹುದಾಗಿದೆ. ಅಸ್ಪೃಶ್ಯತೆಯ ನಿವಾರಣೆಯು ಭಾರತದ ಸಂವಿಧಾನದ ಮಹತ್ತರವಾದ ಆಶಯವಾಗಿದೆ.

13. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ: (Universal Audalt Franchies)

ಜಾತಿ, ಲಿಂಗ, ಧರ್ಮ, ಭಾಷೆ, ಬಡತನ, ಸಿರಿತನ, ಬಣ್ಣ, ಅಂತಸ್ತು, ಆಸ್ತಿ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೆ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡುವ ವ್ಯವಸ್ಥೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದು ಕರೆಯುವರು. ದೇಶದಿಂದ ದೇಶಕ್ಕೆ ವಯಸ್ಕ ಮತದಾನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಭಾರತದ ಸಂವಿಧಾನ ಪಿತಾಮಹರು ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆಗೆ ಅದನ್ನು ಅಳವಡಿಸಿದರು. ಸಂವಿಧಾನದ 15ನೇ ಭಾಗದಲ್ಲಿರುವ 326 ನೇ ವಿಧಿಯಲ್ಲಿ ವಯಸ್ಕ ಮತದಾನ ಪದ್ಧತಿಯನ್ನು ಪರಿಚಯ ಮಾಡಲಾಯಿತು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಅವಕಾಶವಿದೆ. 1988ರಲ್ಲಿ ಸಂಸತ್ತು 326 ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿತು. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು 1989ರಲ್ಲಿ ಅಂಕಿತವನ್ನು ಹಾಕಿದರು. ಈ ಪದ್ಧತಿಯು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ. ಸಮಾಜದ ವಿವಿಧ ಜನಾಂಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ಬಂದಿದೆ. ಯಾರನ್ನು, ಯಾವಾಗ ಮತ್ತು ಹೇಗೆ ಆಯ್ಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನ ಇಂದು ಪ್ರಜ್ಞಾವಂತ ನಾಗರಿಕರಿಗೆ ಬಂದಿದೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿದ್ದಾರೆ. ತಪ್ಪು ಮಾಡಿದ ಪಕ್ಷವನ್ನು ಪದಚ್ಯುತಿಗೊಳಿಸುವುದರಲ್ಲಿ ಭಾರತೀಯ ಪ್ರಜೆಗಳು  ಧೈರ್ಯ ತೋರುತ್ತಿದ್ದಾರೆ.

ತುರ್ತು ಪರಿಸ್ಥಿತಿಗಳು: (Emergency)

ದೇಶ ಎದುರಿಸಬಹುದಾದ ಅಸಹಜ ಸೈನಿಕ ಸಂವಿಧಾನಾತ್ಮಕ ಅಥವಾ ಆರ್ಥಿಕ ಸನ್ನಿವೇಶಗಳನ್ನು ತುರ್ತು ಪರಿಸ್ಥಿತಿ ಎಂದು ಕರೆಯುತ್ತಾರೆ. ಜರ್ಮನಿಯ ವೈಮರ್ ಸಂವಿಧಾನದಿಂದ ಪ್ರಭಾವಿತರಾದ ಸಂವಿಧಾನ ರಚನಾಕಾರರು 18ನೇ ಭಾಗದ 352 ರಿಂದ 360 ನೇ ವಿಧಿಯವರೆಗೆ ಭವಿಷ್ಯದಲ್ಲಿ ಎದುರಾಗಬಲ್ಲ ಮೂರು ಬಗೆಯ ತುರ್ತು ಪರಿಸ್ಥಿತಿಗಳಿಗೆ ಪರಿಹಾರೋಪಾಯಗಳನ್ನು ನಮೂದಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ತಿಳಿಸಲಾದ ಮೂರು ಬಗೆಯ ತುರ್ತು ಪರಿಸ್ಥಿತಿಗಳೆಂದರೆ,

೧)  352ನೇ ವಿಧಿಯಂತೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ಸಶಸ್ತ್ರ ಬಂಡಾಯಗಳ ಕಾರಣಕ್ಕೆ ಘೋಷಿಸುವ ತುರ್ತು ಪರಿಸ್ಥಿತಿ.

೨) 356ನೇ ವಿಧಿಯಂತೆ ರಾಜ್ಯವೊಂದರ ಸಂವಿಧಾನಾತ್ಮಕ ಯಂತ್ರ ಕುಸಿದಾಗ ರಾಜ್ಯಪಾಲರಿಂದ ವರದಿ ಪಡೆದು ಆ ರಾಜ್ಯದಲ್ಲಿ ಘೋಷಿಸಲಾಗುವ ರಾಜ್ಯ ತುರ್ತು ಪರಿಸ್ಥಿತಿ.

೩)  360ನೇ ವಿಧಿಯಂತೆ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೂರಿದಾಗ ಘೋಷಿಸಲಾದ ಆರ್ಥಿಕ ತುರ್ತು ಪರಿಸ್ಥಿತಿ. ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಜಾರಿಯಾದಾಗ ಕೇಂದ್ರ ಸರ್ಕಾರ ಪ್ರಬಲವಾಗಿ ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ.

15. ಎರವಲು ಸಂವಿಧಾನ: 

ಭಾರತದ ಸಂವಿಧಾನ ರಚನೆಯಲ್ಲಿ ಸಂವಿಧಾನ ರಚನೆಗಾರರು ಜಗತ್ತಿನ ಬೇರೆಬೇರೆ ದೇಶಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರು. ಆದರೆ ಯಥಾವತ್ತಾಗಿ ಬೇರೆ ಸಂವಿಧಾನಗಳ ನಿಯಮಾವಳಿಗಳನ್ನು ಸೇರಿಸದೆ ಭಾರತದ ಪರಿಸ್ಥಿತಿಗೆ ತಕ್ಕ ಹಾಗೆ ಅವುಗಳಲ್ಲಿ ಅಗತ್ಯ ಮಾರ್ಪಾಡಿನೊಂದಿಗೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಮೂಲಭೂತ ಹಕ್ಕುಗಳು, ಸರ್ವೋಚ್ಚ ನ್ಯಾಯಾಲಯ, ಪ್ರಸ್ತಾವನೆ ಮುಂತಾದವುಗಳ ಮೇಲೆ ಅಮೇರಿಕ ಸಂವಿಧಾನದ ಪ್ರಭಾವವಾಗಿದ್ದರೆ. ಸಂಸತ್ತು, ಮಂತ್ರಿ ಮಂಡಲ, ಶಾಸನ ರಚನೆ ಮುಂತಾದವುಗಳ ಮೇಲೆ ಇಂಗ್ಲೆಂಡ್ ಸಂವಿಧಾನದ ಪ್ರಭಾವ ಹೆಚ್ಚಾಗಿದೆ. ರಾಜ್ಯ ನಿರ್ದೇಶಕ ತತ್ವಗಳು ಐರ್ಲೆಂಡ್ ಸಂವಿಧಾನದಿಂದ ಪ್ರಭಾವಿತವಾಗಿದ್ದರೆ, ತುರ್ತುಪರಿಸ್ಥಿತಿಯು ಜರ್ಮನಿಯ ಸಂವಿಧಾನದಿಂದ ಪ್ರಭಾವಿತವಾಗಿದೆ. ಜೊತೆಗೆ ಕೆನಡಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸಂವಿಧಾನಗಳು ಹಲವು ವಿಧಗಳಲ್ಲಿ ನೆರವಾಗಿವೆ.

16.  ಏಕ ಪೌರತ್ವ: (One citizenship)

ಭಾರತದಲ್ಲಿ ಏಕ ಪೌರತ್ವ ವ್ಯವಸ್ಥೆ ಇದೆ. ಕಾಶ್ಮೀರಿನಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಪ್ರಾಂತ್ಯಗಳ ಜನರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಹಾಗೆಯೇ ದೇಶದಾದ್ಯಂತ ಒಂದೇ ಕಾನೂನು ಒಂದೇ ಸಂವಿಧಾನವಿದ್ದು ಎಲ್ಲ ಜನರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಪ್ರಜೆಗಳು ಯಾವುದೇ ರಾಜ್ಯದಲ್ಲಿ ಜನಿಸಿದರೂ ಎಲ್ಲರೂ ಭಾರತೀಯ ಪ್ರಜೆಗಳೇ ಆಗಿರುತ್ತಾರೆ. ಸಂವಿಧಾನದ 11ನೇ ವಿಧಿ ನೀಡಿರುವ ಅಧಿಕಾರದ ಅನ್ವಯ ಸಂಸತ್ತು ಪೌರತ್ವಕ್ಕೆ ಸಂಬಂಧಿಸಿದಂತೆ 1955ರ ಪೌರತ್ವ ಕಾನೂನನ್ನು ಅಂಗೀಕರಿಸಿತು. ಆ ಪ್ರಕಾರ ಏಕ ಸಂವಿಧಾನ, ಏಕ ಪೌರತ್ವ ಹಾಗೂ ಏಕ ರಾಷ್ಟ್ರ ಭಾಷೆ ಎಂಬುದನ್ನು ತಿಳಿಸಿ ಹೇಳಿದೆ. ಇದರ ಮೂಲ ಉದ್ದೇಶ ದೇಶದ ಐಕ್ಯತೆಯನ್ನು ಸಾಧಿಸುವುದಾಗಿದೆ.

17. ಅಧಿಕಾರ ವಿಕೇಂದ್ರೀಕರಣ: (Decentralization of power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ವಿಭಜನೆಯಾಗುವುದನ್ನು ಅಧಿಕಾರ ವಿಕೇಂದ್ರೀಕರಣ ಎಂದು ಕರೆಯಲಾಗುವುದು. ಇಲ್ಲಿ ಮೂರು ವಿಧವಾದ ಅಧಿಕಾರ ಹಂಚಿಕೆಯಾಗುವುದನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರಕ್ಕೆ 97 ವಿಷಯಗಳನ್ನು, ಕೇಂದ್ರ ಸೂಚಿಯಲ್ಲಿ ರಾಜ್ಯಗಳಿಗೆ 66 ವಿಷಯಗಳನ್ನು ರಾಜ್ಯ ಸೂಚಿಯಲ್ಲಿ ವಿಭಜಿಸುವುದಲ್ಲದೆ, ಸಮವರ್ತಿ ಸೂಚಿಯಲ್ಲಿರುವ ಕೆಲವಾರು ವಿಷಯಗಳ ಮೇಲೆ ಕೇಂದ್ರ ಹಾಗೂ ರಾಜ್ಯಗಳೆರಡೂ ಅಧಿಕಾರವನ್ನು ಹೊಂದಿವೆ. ಈ ಅಧಿಕಾರದ ವಿಭಜನೆಯನ್ನು ನೋಡಿದಾಗ ಕೇಂದ್ರಕ್ಕೆ ರಾಜ್ಯಗಳಿಂದ ಹೆಚ್ಚಿನ ಅಧಿಕಾರಗಳಿರುವುದು ಕಂಡುಬರುತ್ತದೆ.

 18. ಅಖಿಲ ಭಾರತ ಸೇವೆಗಳು: (All indian services)

ಭಾರತದ ಫೆಡರಲ್ ಪದ್ಧತಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ಪ್ರತ್ಯೇಕ ಆಡಳಿತ ಸೇವೆಗಳಿದ್ದರೂ ಸಂವಿಧಾನದ 312ನೇ ವಿಧಿ ಅನ್ವಯ ಅಖಿಲ ಭಾರತ ಸೇವೆಗಳಿಗೆ ಅವಕಾಶ ಮಾಡಲಾಗಿದೆ. ಈ ವಿಧಿಯ ಅನ್ವಯ ರಾಜ್ಯಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಸಂಸತ್ತು ಅಖಿಲ ಭಾರತ ಸೇವೆಗಳನ್ನು ರಚಿಸಲು ಅಧಿಕಾರ ಪಡೆದಿದೆ. ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗವಿದ್ದು ಅದು ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ನಂತಹ  ಪರೀಕ್ಷೆಗಳನ್ನು ನಡೆಸಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಇನ್ನು ಪ್ರತಿ ರಾಜ್ಯಗಳಲ್ಲಿ ಒಂದೊಂದು ರಾಜ್ಯ ಲೋಕಸೇವಾ ಆಯೋಗಗಳಿದ್ದು ಕೆಎಎಸ್ ನಂತಹ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳ ನೇಮಕ ಮಾಡಿ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಲಾಗುತ್ತದೆ.

19. ಉಚಿತ ಪ್ರಾಥಮಿಕ ಶಿಕ್ಷಣ: (Free primary education)

ಒಂದು ದೇಶದ ಪ್ರಗತಿಗೆ ಅಲ್ಲಿನ ಜನರೇ ಕಾರಣರಾಗುತ್ತಾರೆ. ಅವರನ್ನು ಪೌರರು ಎಂದು ಕರೆಯಲಾಗುವುದು. ಅವರು ರಾಷ್ಟ್ರದ ಉನ್ನತಿಗಾಗಿ ಹೋರಾಡಬೇಕಾದರೆ ಅಕ್ಷರಸ್ಥರಾಗುವುದು ಬಹಳ ಮುಖ್ಯವಾದುದು. ಅನಕ್ಷರಸ್ಥರಿಂದ ಯಾವ ದೇಶವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದು. ಆದುದರಿಂದ ಭಾರತದ ಸಂವಿಧಾನದಲ್ಲಿ 14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ನಿರ್ದೇಶನ ನೀಡಿದೆ. ಇದರಿಂದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ.

20. ಸ್ತ್ರೀಯರ ಸ್ಥಾನಮಾನಗಳು: (Position of women)

ಭಾರತದ ಸಂವಿಧಾನದಲ್ಲಿ ಸ್ತ್ರೀಯರಿಗೆ ಪುರುಷನಷ್ಟೇ ಸರಿಸಮಾನವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ, ಮತ ಹಾಕುವ ಮತ್ತು ಸರ್ಕಾರಿ ಹುದ್ದೆಗಳನ್ನು ಪಡೆಯುವಾಗ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಪರಿಣಾಮವಾಗಿ ದೇಶದಲ್ಲಿ ಸತತವಾಗಿ 16 ವರ್ಷಗಳವರೆಗೆ ಮಹಿಳೆಯೊಬ್ಬಳು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿದಳು. 6 ವರ್ಷಗಳ ಕಾಲ ಮಹಿಳೆಯೊಬ್ಬಳು ಕರ್ನಾಟಕ ವಿಧಾನಸಭೆಯ ಅಧ್ಯಕ್ಷಳಾಗಿದ್ದಳು. ಕಿರಣ್‌ ಬೇಡಿ ದೇಶದ ಮೊದಲ ಮಹಿಳಾ ಐ.ಪಿ.ಎಸ್‌ ಅಧಿಕಾರಿಯಾಗಿದ್ದರು. ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ನೋಡಿದರೆ ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿದ ಸಮಾನಾವಕಾಶವೇ ಕಾರಣವಾಗಿದೆ.

ಉಪಸಂಹಾರ

ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಯ ಹೃದಯವಾಗಿದ್ದು ಪ್ರಜೆಗಳ ಹಕ್ಕುಗಳನ್ನು ಕಾಪಾಡುವ ರಕ್ಷಾಕವಚವಾಗಿದೆ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ. ಕಾಲಾನುಕ್ರಮದಲ್ಲಿ ತಿದ್ದುಪಡಿಗಳ ಮೂಲಕ ಸಮಾಜದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವುದು ಇದರ ವಿಶೇಷತೆ. ಆದ್ದರಿಂದ ಭಾರತದ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಭಾರತದ ಆತ್ಮ ಮತ್ತು ದರ್ಶನವಾಗಿದೆ.