ಕ್ರಿ.ಶ. 1206 ರಲ್ಲಿ ಸ್ಥಾಪನೆಯಾದ ಗುಲಾಮಿ ಸಂತತಿಯು ಭಾರತದಲ್ಲಿ ಮುಸ್ಲಿಂ ಅಳ್ವಿಕೆಗೆ ಅಡಿಪಾಯವನ್ನು ಹಾಕಿತು. ಇವರು ಆರಂಭಿಸಿದ ಈ ಸಂತತಿಯನ್ನು ಗುಲಾಮಿಸಂತತಿ ಎಂದು ಕರೆಯಲಾಗಿದೆ. ಕುತುಬ್-ಉದ್-ದೀನ್-ಐಬಕ್ ಈ ಸಂತತಿಯ ಸ್ಥಾಪಕ
ಬಾಲ್ಯ : ಕುತುಬ-ಉದ್-ದೀನ್-ಐಬಕ್ ಒಬ್ಬ ಟರ್ಕಿ ಸುಲ್ತಾನನಾಗಿದ್ದನು. ಈತ ತುರ್ಕಿಸ್ಥಾನದಲ್ಲಿ ನಿಶಾಪುರದ ಖಾಜಿಯ ಗುಲಾಮನಾಗಿದ್ದನು. ಮುಂದೆ ಈತನನ್ನು ಮಹಮ್ಮದ್ ಘೋರಿ ನಿಶಾಪುರದ ಖಾಜಿಯಿಂದ ಕೊಂಡುಕೊಂಡು ತನ್ನ ಗುಲಾಮನನ್ನಾಗಿ ಮಾಡಿಕೊಂಡನು. ಪ್ರಾಮಾಣಿಕತೆ, ನಿಷ್ಠೆ, ದಕ್ಷತೆ ಹಾಗೂ ನೈತಿಕತೆಯಿಂದ ಘೋರಿಯ ಪ್ರೀತಿಗೆ ಪಾತ್ರನಾದ ಕುತುಬ್-ಉದ್-ದೀನ್-ಐಬಕ್ ಸೈನ್ಯದ ಮುಖ್ಯಸ್ಥನಾಗಿ ನೇಮಕಗೊಂಡನು. ಆನಂತರ ʻಅಮೀರ್-ಇ-ಆಖರ್’ ಎಂಬ ಹುದ್ದೆಗೆ ಭಡ್ತಿ ಪಡೆದನು.
ಕುತುಬ್-ಉದ್-ದೀನನ ಏಳಿಗೆ : ದಿನದಿಂದ ದಿನಕ್ಕೆ ಮೇಲೆ ಬರುತ್ತಿದ್ದ ಈ ಪ್ರಾಮಾಣಿಕ ಯೋಧನಿಗೆ ಒಂದು ಜವಾಬ್ದಾರಿಯುತವಾದ ಕೆಲಸವನ್ನು ನೀಡಲು ಘೋರಿ ಇಚ್ಚಿಸಿದನು. ಅದೇ ಎರಡನೆಯ ತರೈನ್ ಯುದ್ಧದ ನಾಯಕತ್ವ ಈ ಘೋರ ಕದನದಲ್ಲಿ ಭಾಗವಹಿಸಿ ಯಶಸ್ವಿಯಾದ ಕುತುಬ್-ಉದ್-ದೀನ್-ಐಬಕನಿಗೆ ಭಾರತೀಯ ಪ್ರಾಂತಗಳ ಮೇಲ್ವಿಚಾರಕನನ್ನಾಗಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಐಬಕ್ ಹನ್ನಿ, ಮೀರತ್, ರಣಥಂಬೂರ್ ಹಾಗೂ ಕೋಹಿಲ್‌ಗಳನ್ನು ಗೆದ್ದುಕೊಂಡು ತನ್ನ ಒಡೆಯ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದನು. ಕ್ರಿ.ಶ. 1194ರಲ್ಲಿ ಯಮುನಾನದಿ ತೀರದಲ್ಲಿರುವ ಚಾಂದವಾರ್ ಬಳಿ ಕನೂಜಿನ ಅರಸನಾದ ರಾಜಾಜಯಚಂದ್ರನನ್ನು ಸೋಲಿಸಿ ಕೊಂದುಹಾಕಿದನು. ಅನಂತರ ಅಲಿಘರ್ ಹಾಗೂ ಅಣ್ಣೀರನ್ನು ವಶಪಡಿಸಿಕೊಂಡನು. ಕ್ರಿ.ಶ. 1197ರಲ್ಲಿ ಗುಜರಾತಿನ ಭೀಮದೇವನನ್ನು ಸೋಲಿಸಿ ಅನಿಲ್‌ವಾಡವನ್ನು ಲೂಟಿಮಾಡಿದನು. ಇಲ್ಲಿನ ಅಪಾರ ಸಂಪತ್ತನ್ನು ದೆಹಲಿಗೆ ಕೊಂಡೊಯ್ದನು. ಅಂದಿನಿಂದ ದೆಹಲಿ ಐಬಕನ ಕಾರ್ಯಕೇಂದ್ರವಾಯಿತು. ಐಬಕ್ ಮತ್ತೊಮ್ಮೆ ದೆಹಲಿಯಿಂದ ಹೋಗಿ ಕ್ರಿ.ಶ. 1202 ರಲ್ಲಿ ಬಂದೇಲಖಂಡದ ಚಾಂದೇಲ ದೊರೆಯನ್ನು ಸೋಲಿಸಿ ಅಲ್ಲಿನ ಅಪಾರ ಸಂಪತ್ತನ್ನು ಲೂಟಿಮಾಡುವ ಮೂಲಕ ಸುಮಾರು 50000 ಸ್ತ್ರೀಪುರುಷರನ್ನು ಸೆರೆಹಿಡಿದನು. ಕ್ರಿ.ಶ. 1202 ರಲ್ಲಿ ಮಹಮ್ಮದ್ ಘೋರಿ ಖೋಕಾರರ ವಿರುದ್ಧ ದಂಡಯಾತ್ರೆಯಲ್ಲಿ ಭಾಗವಹಿಸಿದಾಗ ಮರಣ ಹೊಂದಿದನು. ಇವನಿಗೆ ಗಂಡು ಮಕ್ಕಳಿರಲಿಲ್ಲ. ಆಗ ಕುತುಬ್-ಉದ್-ದೀನ್-ಐಬಕ್ ಸ್ವತಂತ್ರನಾಗಿ ದೆಹಲಿಯ ಸಿಂಹಾಸನಕ್ಕೆ ಬಂದನು. ಇವನ ಆರಂಭದ ಆಳ್ವಿಕೆಯು ಅತ್ಯಂತ ಕಷ್ಟಮಯವಾಗಿದ್ದಿತು. ಏಕೆಂದರೆ ಈತ ಅಧಿಕಾರದಲ್ಲಿ ಉಳಿಯಲು ಪ್ರಭಲ ಶಕ್ತಿಗಳೊಡನೆ ಅನಿವಾರ್ಯವಾಗಿ ಹೋರಾಟ ಮಾಡಲೇಬೇಕಾಯಿತು. ಘೋರಿಯ ಅಧಿಕಾರಿಗಳಾದ ನಾಸಿರುದ್ದೀನ ಕುಬಾಚ ಹಾಗೂ ಅಲ್ತಮಷ್ ಐಬಕನ ಏಳಿಗೆಗೆ ಅಡ್ಡಿಯಾದರು. ಅತ್ಯಂತ ಚಾಣಾಕ್ಷನಾದ ಕುತುಬ್-ಉದ್-ದೀನ್ ನಾಸೀರ್-ಉದ್-ದೀನನಿಗೆ ತನ್ನ ಮೊದಲನೆಯ ಮಗಳು ಹಾಗೂ ಅಲ್ತಮಷ್‌ನಿಗೆ ತನ್ನ ಎರಡನೆಯ ಮಗಳನ್ನು ಕೊಟ್ಟು ಮದುವೆ ಮಾಡಿದನು. ಹೀಗೆ ವಿರೋಧಿಗಳನ್ನು ಸುಮ್ಮನಿರಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡನು.
ಸುಲ್ತಾನನಾಗಿ ಕುತುಬ್-ಉದ್-ದೀನ್-ಐಬಕ್ : ಸಾಮಾನ್ಯ ಗುಲಾಮನಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ ಕುತುಬ್-ಉದ್-ದೀನ್-ಐಬಕ್ ದೆಹಲಿಯ ಸುಲ್ತಾನನಾದುದು ನಿಜಕ್ಕೂ ಅವನ ಮಹಾನ್ ಸಾಧನೆಯೆಂದೇ ಹೇಳಬಹುದು. ಕ್ರಿ.ಶ. 1206 ರಿಂದ ಅವನು ದೆಹಲಿಯ ನಿಜವಾದ ಸುಲ್ತಾನನಾದನು. ಆತ ಸಾಯುವ ಮೊದಲು ಮಹಮ್ಮದ್ ಘೋರಿ ಐಬಕನಿಗೆ ರಾಜ ಚಿನ್ಹೆ, ಧ್ವಜ ಹಾಗೂ ʻದೆಹಲಿಯ ಸುಲ್ತಾನ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದನು. ಕ್ರಿ.ಶ. 1208 ರಲ್ಲಿ ಘಿಯಾಸುದ್ದೀನ್ ಐಬಕನಿಗೆ ʻದಾಸ್ಯವಿಮೋಚನಾ ಪತ್ರವನ್ನು’ ಕಳುಹಿಸಿದನು. ಆದರೆ ಈ ಸಾಧನೆಯ ಫಲಗಳನ್ನು ಅನುಭವಿಸುವ ಭಾಗ್ಯ ಐಬಕನಿಗೆ ಇಲ್ಲದಾಯಿತು. ಕ್ರಿ.ಶ. 1210ರಲ್ಲಿ ಐಬಕ್ ಮೋಲೋ ಆಡುತ್ತಿದ್ದಾಗ ತನ್ನ ಕುದುರೆಯಿಂದ ಕೆಳಗೆ ಬಿದ್ದು ಗಾಯಗೊಂಡು ಮೃತನಾದನು. ಈತನ ಶವವನ್ನು ಲಾಹೋರಿನಲ್ಲಿ ಸಮಾಧಿ ಮಾಡಲಾಯಿತು.
ಐಬಕನ ವ್ಯಕ್ತಿತ್ವ: ಐಬಕ ಒಬ್ಬ ಶ್ರೇಷ್ಠ ರಾಜಕಾರಿಣಿ, ಆಡಳಿತಗಾರ, ಧೀರಯೋಧ, ನಿಷ್ಠಾವಂತ ಸೇವಕ ಹಾಗೂ ವಿಶ್ವಾಸಿಕ ರಾಜಪ್ರತಿನಿಧಿಯಾಗಿದ್ದನು. ಈತ ತನ್ನ ಒಡೆಯನಾದ ಮಹಮ್ಮದ್ ಘೋರಿಯ ನಿಷ್ಠಾವಂತ ಗುಲಾಮನಾಗಿದ್ದನು. ಅಂದಿನ ಇತಿಹಾಸಕಾರರು ಇವನ ನಿಷ್ಠೆ, ಉದಾರತೆ, ಪ್ರಾಮಾಣಿಕತೆ ಹಾಗೂ ನ್ಯಾಯಪರತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಇವನು ಉತ್ತರಭಾರತದಲ್ಲಿ ಅನೇಕ ಯುದ್ಧಗಳನ್ನು ಕೈಗೊಂಡು ಅವುಗಳನ್ನು ತನ್ನ ಹಿಡಿತಕ್ಕೆ ತಂದುಕೊಂಡು ಅವುಗಳನ್ನು ಇಸ್ಲಾಂ ಸತ್ತೆಗೆ ಒಳಪಡಿಸಿದನು. ಇವನು ನೀಡುತ್ತಿದ್ದ ಬಹುಮಾನಗಳು ಲಕ್ಷಾಂತರ ರೂಪಾಯಿಗಳ ರೂಪಗಳಲ್ಲಿರುತ್ತಿದ್ದವು. ಆದ್ದರಿಂದ ಈತನನ್ನು ಸಮಕಾಲೀನ ಲೇಖಕರು ʻಲಾಕ್‌ಭಕ್ಷ್’ ಎಂದು ಕರೆದಿದ್ದಾರೆ. ಲೇನ್‌ಲರ ಅಭಿಪ್ರಾಯದಂತೆ ʻಆಸ್ಥಾನದಲ್ಲಿ ತೋಳ ಹಾಗೂ ಕುರಿಗಳು ಒಂದೇ ಕೊಳದಲ್ಲಿ ನೀರುಕುಡಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ದಾರಿಗಳು ದರೋಡೆಕೋರರ ಹಾವಳಿಯಿಂದ ಮುಕ್ತವಾಗಿದ್ದವು. ಬಡವ ಶ್ರೀಮಂತ ಇಲ್ಲಿ ಸಮಾನ ರಾಜಕೀಯ ಸ್ಥಾನವನ್ನು ಪಡೆದಿದ್ದರು. ಕುತುಬ್-ಉದ್-ದೀನ್-ಐಬಕ್ ಕಲೆ ಹಾಗೂ ಸಾಹಿತ್ಯಾಭಿಮಾನಿಯಾಗಿದ್ದು, ಅನೇಕ ಕವಿಗಳಿಗೆ ಮತ್ತು ಸಾಹಿತಿಗಳಿಗೆ ಆಶ್ರಯ ನೀಡಿದ್ದನು. ಇವನ ಆಸ್ಥಾನದಲ್ಲಿ ಶ್ರೇಷ್ಠ ಕವಿಗಳಾದ ಹಸನ್‌ನಿಜಾಮಿ ಹಾಗೂ ಪಕ್ರ ಮುದಿರ್ ಇದ್ದರು. ಹಸನ್ ನಿಜಾಮಿಯು “ತಾಜ್-ಉದ್-ಮಾಸಿರ್” ಎಂಬ ಕೃತಿಯನ್ನು ಫಕ್ರ ಮುದಿರ್ “ತಾರೀಖ್-ಇ-ಮುಬಾರಕ್” ಎಂಬ ಕೃತಿಗಳನ್ನು ರಚಿಸಿದರು. ಕುತುಬುದ್ದೀನ್-ವಬಕ್ ಹಿಂದುಗಳ ವಿರೋಧಿಯಾಗಿದ್ದು, ಮತಸಹಿಷ್ಣುತೆಯ ನೀತಿಯನ್ನು ಅನುಸರಿಸಲಿಲ್ಲ. ಈತ ದೆಹಲಿ, ಅಜ್ಮೀರ, ಬನಾರಸ್ ಹಾಗೂ ದೇಶದ ಇತರ ಕಡೆಗಳಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅವುಗಳ ಸ್ಥಾನದಲ್ಲಿ ಮಸೀದೆಗಳನ್ನು ನಿರ್ಮಿಸಿದನು. ಈತ ಆ ಕಾಲದ ಮದ್ಯ ಏಶಿಯಾದ ನಿರ್ಧಯರೂ ಹಾಗೂ ಮತಾಂಧರೂ ಆದ ಯೋಧರ ಸಾಲಿಗೆ ಸೇರಿದವನೆಂದು ಡಾ| ವಿ.ಎ. ಸ್ಮಿತ್ ಹೇಳಿದ್ದಾರೆ.
ಆರಾಮ್ ಷಾ (1210-1211) : ಕುತುಬ್-ಉದ್-ದೀನ್-ಐಬಕ್ ಲಾಹೋರಿನಲ್ಲಿ ಮರಣ ಹೊಂದಿದ ಸುದ್ದಿಯನ್ನು ಕೇಳಿದ ಆಸ್ಥಾನದ ಅಮೀರರು ಆರಾಮಭಕ್ಷನನ್ನು ಆರಾಮ್ ಷಾ ಎಂಬ ಬಿರುದಿನೊಂದಿಗೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದರು. ಆರಾಮಷಾ ಸಮರ್ಥ ಸುಲ್ತಾನನಾಗಿಲ್ಲವಾದ್ದರಿಂದ ಕುಬಾಚ್ ಮತ್ತು ಆಲಿಮರ್ದಾನ್‌ರು ಇವನ ಅಧಿಕಾರವನ್ನು ವಿರೋಧಿಸಿದರು. ಅಲ್ಲದೆ ಬದೌನಿನಲ್ಲಿ ಗವರನಾಗಿದ್ದ ಅಲ್ತಮಷ್‌ನನ್ನು ದೆಹಲಿಯ ದೊರೆಯನ್ನಾಗಿ ಮಾಡುವಂತೆ ಹಠ ಹಿಡಿದರು. ಇವರ ಒತ್ತಾಯದ ಮೇರೆಗೆ ಅಲ್ತಮಷ್ ದೆಹಲಿಯ ಸುಲ್ತಾನನಾದನು. ಆದರೆ ಆರಾಮಷಾ ಇದಕ್ಕೆ ವಿರೋಧ ವ್ಯಕ್ತಪಡಿಸಿದನು. ಪರಿಣಾಮವಾಗಿ ಇವರಿಬ್ಬರ ನಡುವೆ ಹೋರಾಟ ನಡೆಯಿತೆನ್ನಲಾಗಿದೆ. ಈ ಹೋರಾಟದಲ್ಲಿ ಆರಾಮ್ ಷಾ ಸೋತು ಮರಣದಂಡನೆಯ ಶಿಕ್ಷೆಯನ್ನು ಅನುಭವಿಸಿದನೆಂದು ಹೇಳಲಾಗಿದೆ.
ಉಪಸಂಹಾರ:
ಕುತುಬ್-ಉದ್-ದೀನ್-ಐಬಕ್ ಸಾಮಾನ್ಯ ಗುಲಾಮನಾಗಿ ಆರಂಭಿಸಿ ದೆಹಲಿಯ ಸುಲ್ತಾನನಾಗಿರುವುದು ಅವನ ಸಾಮರ್ಥ್ಯ, ಧೈರ್ಯ ಮತ್ತು ನಿಷ್ಠೆಯ ಪ್ರತೀಕವಾಗಿದೆ. ಅವನು ಉತ್ತರ ಭಾರತದಲ್ಲಿ ಮುಸ್ಲಿಂ ಆಡಳಿತಕ್ಕೆ ಬಲವಾದ ಅಡಿಪಾಯ ಹಾಕಿ, ದೆಹಲಿ ಸುಲ್ತಾನತೆ ಸ್ಥಾಪನೆಗೆ ಕಾರಣನಾದನು. ಆಡಳಿತ, ಯುದ್ಧಕೌಶಲ್ಯ ಮತ್ತು ಉದಾರತೆಯಿಂದ ಅವನು ಪ್ರಸಿದ್ಧನಾದನು. ಅವನ ನಂತರ ಬಂದ ಆಡಳಿತಗಾರರು ಈ ಸಾಮ್ರಾಜ್ಯವನ್ನು ಮತ್ತಷ್ಟು ಬಲಪಡಿಸಿದರು.