ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದು ಅದರ ಯಶಸ್ಸಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳು ಅಗತ್ಯವಾಗಿವೆ. ಹೀಗಾಗಿ ನಮ್ಮ ಸಂವಿಧಾನದ 15ನೇ ಭಾಗದ 324 ರಿಂದ 329 ರವರೆಗಿನ ವಿಧಿಗಳಲ್ಲಿ ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣಾ ನಿಯಮಗಳ ಕುರಿತು ಸಂವಿಧಾನ ರಚನಾಕಾರರು ಮಾಹಿತಿಯನ್ನು ಒದಗಿಸಿದ್ದಾರೆ. ಅದರಲ್ಲೂ 324ನೇ ವಿಧಿಯು ವಿಶೇಷವಾಗಿ ಮುಕ್ತ ಹಾಗೂ ಪಾರದರ್ಶಕತೆಯಿಂದ ಕೂಡಿದ ಚುನಾವಣೆಗಳನ್ನು ನಡೆಸುವ, ನಿರ್ದೇಶಸುವ ಹಾಗೂ ನಿಯಂತ್ರಿಸುವ ಸಂವಿಧಾನಾತ್ಮಕ ಸ್ವತಂತ್ರ ಚುನಾವಣಾ ಆಯೋಗದ ರಚನೆಗೆ ಮೀಸಲಿಡಲಾಗಿದೆ. ಇದು ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ತು, ವಿಧಾನಸಭೆ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳನ್ನು ನ್ಯಾಯ ಸಮ್ಮತವಾಗಿ ನಡೆಸುತ್ತದೆ. ಭಾರತದ ಸಂವಿಧಾನ ಜಾರಿಗೆ ಬರುವ ಮುನ್ನಾ ದಿನ ಅಂದರೆ 25 ಜನವರಿ 1950 ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು. ಈ ದಿನದ ಸವಿನೆನಪಿಗಾಗಿ ನಾವು 2011 ರಿಂದ ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸುತ್ತಿದ್ದೇವೆ.
ಚುನಾವಣಾ ಆಯೋಗದ ರಚನೆ:
1950ರ ನಂತರ ಬಹಳ ಕಾಲದವರೆಗೆ ಚುನಾವಣಾ ಆಯೋಗವು ಏಕ ಸದಸ್ಯ ಆಯೋಗವಾಗಿತ್ತು. ಸುಕುಮಾರ್ ಸೇನ್ ಆಯೋಗದ ಮೊದಲ ಅಧ್ಯಕ್ಷರಾಗಿದ್ದರು. 1989 ಅಕ್ಟೋಬರ್ 16ರಂದು ಮತದಾರ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದ ನಂತರ ರಾಷ್ಟ್ರಪತಿಗಳ ಆದೇಶದ ಪ್ರಕಾರ ಚುನಾವಣಾ ಆಯೋಗದಲ್ಲಿ ಒಬ್ಬ ಮುಖ್ಯ ಹಾಗೂ ಇಬ್ಬರು ಉಪ ಆಯುಕ್ತರೊಳಗೊಂಡ ಬಹು ಸದಸ್ಯರನ್ನು ನೇಮಕ ಮಾಡಲಾಯಿತು. ತದನಂತರ ಸ್ವಲ್ಪ ಕಾಲದಲ್ಲಿಯೇ ಇಬ್ಬರು ಉಪ ಆಯುಕ್ತರ ರದ್ದತಿಯೊಂದಿಗೆ 1990 ಜನವರಿ 2ರಂದು ಮತ್ತೆ ಏಕ ಸದಸ್ಯ ಆಯೋಗವನ್ನು ರಚಿಸಲಾಯಿತು. ಆದರೆ ದಿನೇಶ್ ಗೋಸ್ವಾಮಿ ವರದಿಯ ಶಿಫಾರಸ್ಸಿನಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ೧೯೯೩ ಅಕ್ಟೋಬರ್ ಒಂದರಂದು ಪುನಃ ಕೇಂದ್ರ ಚುನಾವಣಾ ಆಯೋಗವು ಬಹು ಸದಸ್ಯ ಆಯೋಗವಾಯಿತು. ಪ್ರಸ್ತುತ ಚುನಾವಣಾ ಆಯೋಗವು ತ್ರೀ ಸದಸ್ಯರಿಂದ ಕೂಡಿದೆ.
ನೇಮಕ:
ಸಂವಿಧಾನದ 324 (೨) ನೇ ವಿಧಿಯ ಪ್ರಕಾರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಉಪ ಆಯುಕ್ತರನ್ನು ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಅಧಿಕಾರ ಅವಧಿ: (Tenure)
ಚುನಾವಣಾ ಆಯುಕ್ತರ ಅಧಿಕಾರಾವಧಿಯನ್ನು 1973 ರಲ್ಲಿ 5 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ನಂತರ 1986 ಜನವರಿ ೧ ರಂದು ಅನ್ವಯವಾಗುವಂತೆ ಸಂಸತ್ತು ಆರು ವರ್ಷಕ್ಕೆ ವಿಸ್ತರಿಸಿತು. ಆಯುಕ್ತರು ಹಾಗೂ ಉಪಆಯುಕ್ತರು 65 ವರ್ಷ ವಯಸ್ಸಾಗುವವರೆಗೆ ಅಧಿಕಾರದಲ್ಲಿ ಇರಬಹುದು ಈ ಎರಡರಲ್ಲಿ ಯಾವುದು ಮೊದಲು ಜರಗುತ್ತದೆಯೋ ಅದನ್ನು ಅವರು ಪಾಲಿಸಬೇಕು. ಇದರ ಅರ್ಥ ಆಯುಕ್ತರೊಬ್ಬ 65 ವರ್ಷ ವಯಸ್ಸಾಗುವ ಮೊದಲೇ ೬ ವರ್ಷಗಳಾದಾಗ ಚುನಾವಣಾ ಆಯೋಗದಿಂದ ನಿವೃತ್ತರಾಗಬೇಕು. ಒಂದು ವೇಳೆ ಆರು ವರ್ಷಗಳ ಮುಂಚೆಯೇ 65 ವರ್ಷ ವಯಸ್ಸಾದರೆ ನಿವೃತ್ತಿಕೊಳ್ಳಬೇಕು ʻʻಅವಧಿಗೆ ಮುನ್ನವೇ ಅವರು ರಾಜೀನಾಮೆಯನ್ನು ನೀಡುವುದಾದರೆ ಸ್ವಂತ ಕೈ ಬರಹದಿಂದ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿ ಅಧಿಕಾರ ತ್ಯಾಗ ಮಾಡಬಹುದು.ʼʼ
ವೇತನ ಮತ್ತು ಭತ್ಯೆಗಳು: (Salary and Allowances)
1991 ಜನವರಿ 8ರಂದು ಲೋಕಸಭೆಯಲ್ಲಿ ಮಸೂದೆಯೊಂದನ್ನು ಪಾಸುಮಾಡಲಾಯಿತು. ಅದರ ಪ್ರಕಾರ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನಗಳಿಗೆ ತಕ್ಕ ಹಾಗೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಚುನಾವಣಾ ಆಯೋಗದ ಆಯುಕ್ತರು ಮತ್ತು ಉಪಆಯುಕ್ತರಿಗೆ ನೀಡಬೇಕೆಂದು ನಿರ್ಧರಿಸಲಾಯಿತು. ಇವರ ಸೇವಾ ನಿಯಮಗಳನ್ನು ಕೇಂದ್ರ ಸಂಸತ್ತು ನಿರ್ಧರಿಸುತ್ತದೆ. ಸಂವಿಧಾನದ 324(6) ವಿಧಿಯ ಪ್ರಕಾರ ಚುನಾವಣಾ ಆಯೋಗಕ್ಕೆ ಬೇಕಾದ ಸಿಬ್ಬಂದಿ ವರ್ಗವನ್ನು ನೇಮಿಸಿಕೊಳ್ಳುತ್ತಾರೆ. ʻʻಚುನಾವಣಾ ಆಯುಕ್ತರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು.ʼʼ
ಚುನಾವಣಾ ಆಯುಕ್ತರ ಪದಚ್ಯುತಿ: (Removal of election Commission)
ಭಾರತದ ಸಂವಿಧಾನದ 324 (೫)ನೇ ಉಪವಿಧಿ ಅನ್ವಯ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅನ್ವಯಿಸುವ ವಿಧಾನವನ್ನೇ ಅನುಸರಿಸಲಾಗುವುದು. ಇವರು ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನದ ಪರಿಮಿತಿ ಮೀರಿ ವರ್ತಿಸಿದಾಗ ದೋಷಾರೋಪಣೆ ಪಟ್ಟಿ ಸಲ್ಲಿಸಿ ಕೇಂದ್ರ ಸಂಸತ್ತು ವಿಶೇಷ ಬಹುಮತದಿಂದ ಇವರನ್ನು ಪದಚ್ಯುತಿಗೊಳಿಸಬಹುದು. ಇದೇ ಉಪವಿಧಿಯ ಅನ್ವಯ ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ಇತರ ಆಯುಕ್ತರು ಮತ್ತು ಪ್ರಾದೇಶಿಕ ಆಯುಕ್ತರನ್ನು ರಾಷ್ಟ್ರಪತಿಗಳು ಪದಚ್ಯುತಗೊಳಿಸಬಹುದು.
ಚುನಾವಣಾ ಆಯುಕ್ತರ ಕೆಲವೊಂದು ಜವಾಬ್ದಾರಿಗಳು ಈ ಕೆಳಗಿನಂತಿವೆ.
- ಚುನಾವಣೆಯನ್ನು ಘೋಷಿಸುವುದು.
- ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸುವುದು.
- ಚುನಾವಣೆಗಳನ್ನು ನಡೆಸುವುದು ನಿರ್ದೇಶನ ಮಾಡುವುದು ಹಾಗೂ ಮೇಲ್ವಿಚಾರಣೆ.
- ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆ ನಡೆಸುವುದು.
- ಕೇಂದ್ರ ಹಾಗೂ ರಾಜ್ಯ ಶಾಸಕಾಂಗಕ್ಕೆ ಚುನಾವಣೆ ನಡೆಸುವುದು.
- ಸಂಸತ್ ಸದಸ್ಯರ ಅರ್ಹತೆಯನ್ನು ನಿರ್ಧರಿಸುವುದು.
- ಚುನಾವಣಾ ಕ್ಷೇತ್ರಗಳ ಜನಸಂಖ್ಯೆಯನ್ನು ನಿರ್ಧರಿಸುವುದು.
ಉಪಸಂಹಾರ
ಭಾರತದ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ನ್ಯಾಯಸಮ್ಮತ ಚುನಾವಣೆಗಳ ಮೂಲಕ ಜನರ ಇಚ್ಛೆಯನ್ನು ಪ್ರತಿಬಿಂಬಿಸುವ ವ್ಯವಸ್ಥೆಯನ್ನು ಇದು ಖಚಿತಪಡಿಸುತ್ತದೆ. ಸ್ವತಂತ್ರ ಮತ್ತು ಬಲವಾದ ಚುನಾವಣಾ ಆಯೋಗವು ದೇಶದ ರಾಜಕೀಯ ಸ್ಥಿರತೆ ಮತ್ತು ಜನತಾಂತ್ರಿಕ ಮೌಲ್ಯಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.