ಪರಿಸರ ಸಂರಕ್ಷಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಪ್ರಕೃತಿಯಲ್ಲಿನ ನೆಲೆ, ನೀರು, ವಾಯು, ಕಾಡು, ಸಸ್ಯ, ಪ್ರಾಣಿಗಳಿಗೆ ದೈಹಿಕ ಸ್ಥಾನವನ್ನು ನೀಡಲಾಗುತ್ತಿತ್ತು. ಜನರು ಪ್ರಕೃತಿಗೆ ಹೆದರಿ ಅದರ ನಾಶಕ್ಕೆ ಪ್ರಯತ್ನಿಸುತ್ತಿರಲಿಲ್ಲ. ನಮ್ಮ ಪೂರ್ವಜರು ಪ್ರಕೃತಿಯನ್ನು ಆಧರಣೀಯವಾಗಿ ಪೂಜಿಸುತ್ತಿದ್ದರು. ಈ ಕಾರಣದಿಂದಾಗಿ ಕಾಡು ಸಮೃದ್ಧವಾಗಿ ಬೆಳೆದು ನಿಂತಿತು. 

  1. ಭಾರತೀಯ ಎಲ್ಲಾ ಧರ್ಮಗಳು ಪ್ರಕೃತಿ, ಭೂಮಿ, ಜೀವಿಗಳು ಮುಂತಾದವುಗಳನ್ನು ದೇವರ ಸೃಷ್ಟಿ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿವೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ “ಬಹಾಯಿ” ಮಾನವ ಜೀವನ ಹಾಗೂ ಪ್ರಕೃತಿಗೆ ಅತ್ಯಂತ ನಿಕಟ ಸಂಬಂಧವನ್ನು ಏರ್ಪಡಿಸಿತ್ತು. ಜೇನು, ಹೂ, ಅದರ ಬಣ್ಣ ಸುವಾಸನೆಗೆ ಚ್ಯುತಿ ಬರದಂತೆ ಅದರ ಮಧುವನ್ನು ಹೀರುವಂತೆ ಮಾನವ ಸಹ ಪ್ರಕೃತಿಯಲ್ಲಿ ಇದ್ದು ಇಲ್ಲದಂತೆ ಬದುಕಬೇಕು ಎಂದು ಹೇಳಿದೆ. ಪ್ರತಿಯೊಬ್ಬನು ಬೌದ್ಧಿಕವಾಗಿ ಬೆಳೆದು ಅಹಿಂಸೆಯನ್ನು ಅಳವಡಿಸಿಕೊಂಡು ಹಿಂಸೆಯನ್ನು ತ್ಯಜಿಸಬೇಕೆಂದು ಹೇಳುವ ಮೂಲಕ ಅತಿಯಾದ ಆಸೆಯು ಮನುಷ್ಯನ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.
  2. ಕ್ರೈಸ್ತ ಧರ್ಮದಲ್ಲಿ ಪರಿಸರ ರಕ್ಷಣೆಯನ್ನು ಮಾಡುವ ಹಲವಾರು ಪದ್ಯಗಳು ನಮಗೆ ಗೋಚರಿಸುತ್ತವೆ. ನಾವಿರುವ ಪರಿಸರವನ್ನು ಹಾಳು ಮಾಡಬಾರದು, ನಮ್ಮ ರಕ್ತ ಮಣ್ಣಿನಲ್ಲಿ ಸೇರಿದರೆ ಮಣ್ಣು ಕಲುಷಿತಗೊಳ್ಳುವುದು, ಆಹಾರವನ್ನು ಹಾಳು ಮಾಡುವುದು ಮಹಾ ಪಾಪವಾಗಿದೆ, ಪ್ರತಿಯೊಬ್ಬ ಮಾನವ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಭೂಮಿಯು ನಮಗಾಗಿ ದೇವರಿಂದ ಸೃಷ್ಟಿಯಾಗಿದೆ ಎಂದು ಕ್ರೈಸ್ತ ಧರ್ಮದಲ್ಲಿ ವಿವರಿಸಲಾಗಿದೆ.
  3. ಕನ್‌ಪ್ಯೂಸಿಯಸ್‌ ಧರ್ಮವು ಪ್ರಕೃತಿಯನ್ನು ಪೂಜಿಸುತ್ತಾ ಬಾಳುವುದನ್ನು ಹೇಳಿಕೊಟ್ಟಿದೆ. ಪ್ರಕೃತಿ ಇಲ್ಲದೆ ಮನುಷ್ಯನಿಲ್ಲ ಎಂಬುದು ಕನ್‌ಪ್ಯೂಸಸಿಯಸ್ ಧರ್ಮದ ತಿರುಳಾಗಿದೆ. ತಾನು ಪ್ರಕೃತಿಗೆ ಒಳ್ಳೆಯದನ್ನು ಮಾಡಿದರೆ ಪ್ರಕೃತಿ ತನಗಾಗಿ ಒಳ್ಳೆಯದನ್ನು ಮಾಡುತ್ತದೆ. ಕೊಡು ಮತ್ತು ಪಡೆದುಕೊಳ್ಳು ಎಂಬುದು ಪ್ರಕೃತಿಯ ನೀತಿಯಾಗಿದೆ. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವುದು ಅಂದರೆ ತನ್ನನ್ನು ತಾನು ಹಿಂಸಿಸಿಕೊಂಡಂತೆ ಎಂದು ಕನ್‌ಪ್ಯೂಸಿಯಸ್ ಧರ್ಮ ಸಾರಿದೆ.
  4. ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಪೈಗಂಬರ್ ಹೀರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದುಕೊಂಡನು. ಹಾಗಾಗಿ ಇಸ್ಲಾಂ ಧರ್ಮ ಪರಿಸರ ಸುಸ್ಥಿರ ಬಳಕೆಯ ವಿವರಣೆಯನ್ನು ನೀಡುತ್ತದೆ. ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡಬಾರದು ಸಾಧ್ಯವಾದಷ್ಟು ಪರಿಸರ ರಕ್ಷಣೆ ಆಗಬೇಕು ಎಂಬುದು ಇಸ್ಲಾಂ ಧರ್ಮದ ಕುರಾನಿನ ವಾಕ್ಯವಾಗಿದೆ.
  5. ಭಾರತದಲ್ಲಿಯೇ ಜನಿಸಿದ ಜೈನ ಧರ್ಮವು ಅಹಿಂಸೆಯನ್ನೇ ಪ್ರಧಾನ ಗುರಿಯನ್ನಾಗಿಸಿಕೊಂಡಿದೆ. ಭೂಮಿಯ ಮೇಲಿನ ಜೀವ ಜಂತುಗಳಿಗೆ ಹಾನಿಯಾಗುವಂತಹ ಯಾವುದೇ ಪಾಪಕರ್ಮಗಳನ್ನು ಮಾಡದಂತೆ ಸಂದೇಶ ನೀಡಿದೆ. ಜೈನರು ಹುಳ ಹುಪ್ಪಡಿಗಳು ಬಾಯಿಯೊಳಗೆ ಪ್ರವೇಶಿಸದಂತೆ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಸಾಯಂಕಾಲದೊಳಗೆ ಅವರು ಊಟವನ್ನು ಮುಗಿಸುತ್ತಾರೆ. ಕೃಷಿ ಕಾರ್ಯ ಜೈನರಲ್ಲಿ ನಿಷಿದ್ಧ. ಏಕೆಂದರೆ ಭೂಮಿ ಒಳಗಿನ ಯಾವುದೇ ಜೀವಿಗಳಿಗೆ ಹಾನಿಯಾಗುವುದನ್ನು ಅವರು ಸಹಿಸುವುದಿಲ್ಲ. 
  6. ಇನ್ನೂ ಹಿಂದೂ ಧರ್ಮದ ನಂಬಿಕೆ ಅಪಾರವಾಗಿದ್ದು ಹಲವಾರು ದೇವರುಗಳ ವಾಹನಗಳು ಪಶು ಪಕ್ಷಿಗಳಾಗಿವೆ. ಉದಾ: ಬ್ರಹ್ಮನು ಸೃಷ್ಟಿಕರ್ತ ಆತನ ವಾಹನ ಗರುಡ, ಶಿವನ ವಾಹನ ನಂದಿ, ಸರಸ್ವತಿಯ ವಾಹನ ನವಿಲು, ಪಾರ್ವತಿಯ ವಾಹನ ಹುಲಿ, ಶನಿಯ ವಾಹನ ಕಾಗೆ, ಗಣೇಶನ ವಾಹನ ಇಲಿ, ಯಮನ ವಾಹನ ಕೋಣ. ಇವುಗಳ ಹಿಂದಿನ ಸತ್ಯವೆಂದರೆ ಪ್ರಕೃತಿ ರಕ್ಷಣೆಯೇ ಆಗಿದೆ. ಭಾರತೀಯರು ಕೆಲವು ಹಬ್ಬ ಹರಿದಿನಗಳಲ್ಲಿ ವೃಕ್ಷ ಪೂಜೆ, ಗರಿಕೆ, ತುಳಸಿ, ಬಿಲ್ವ, ಅರಳಿ, ಬೇವು ಮುಂತಾದವುಗಳನ್ನು ಪೂಜಿಸಿ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಿಂದಿನ ಕಾಲದಲ್ಲಿ ಮಾನವರು ಪೃಥ್ವಿ, ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದರು. ಇಂದಿಗೂ ಇವುಗಳ ಪೂಜೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಇದು ಅಲ್ಲದೆ ಪ್ರಾಣಿ-ಪಕ್ಷಿ, ಗಿರಿ, ಶಿಖರ, ಬೆಟ್ಟ, ಗುಡ್ಡಗಳನ್ನು ದೈವಿಕ ದೃಷ್ಟಿಯಿಂದ ಕಾಣಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗಿಡಮರಗಳಿಗೆ ಗೌರವ ನೀಡುವುದು, ಅವುಗಳನ್ನು ದೇವರ ಸಮಾನವೆಂದು ಭಾವಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇದಕ್ಕೆ ಕಾರಣ ಮರಗಳು ನಮಗೆ ತಂಪಾದ ನೆರಳು, ಹಿತವಾದ ಗಾಳಿ, ಸುಂದರವಾದ ಜೀವನವನ್ನು ನೀಡುತ್ತವೆ. ಅದಕ್ಕೆ ಜಾನಪದ ಗೀತೆಯಲ್ಲಿ ಬೇವಿನ ಮರವನ್ನು ಹಾಡಿ ಹೋಗಲಾಗಿದೆ. ಬ್ಯಾಸಿಗೆ ದಿವಸಕ್ಕ ಬೇವಿನ ಮರತಂಪು ಎಂದು ಬಣ್ಣಿಸಲಾಗಿದೆ. ಈ ಮರಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕೆಲವು ಅರಣ್ಯಗಳಂತೂ ದೇವರ ಕಾಡು ಎಂದು ಹೆಸರಾಗಿವೆ. ಅಲ್ಲಲ್ಲಿ ಅರಣ್ಯಗಳ ನಡುವೆ ಮರದ ದೇವರುಗಳನ್ನು ಇಟ್ಟಿರುವುದನ್ನು ಇಂದಿಗೂ ಕಾಣಬಹುದಾಗಿದೆ.
  7. ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು. ಹೀಗಾಗಿ ಬೌದ್ಧ ಧರ್ಮೀಯರಿಗೆ ಬೋಧಿವೃಕ್ಷ ಅತ್ಯಂತ ಪವಿತ್ರವಾದ ಮರವಾಗಿದೆ.
  8. ವೈಷ್ಣವ ಧರ್ಮದಲ್ಲಿ ವಿಷ್ಣು ದಶಾವತಾರದಲ್ಲಿ ಪ್ರಾಣಿಗಳ ರೂಪದಲ್ಲಿ ಅವತರಿಸಿದ್ದಾನೆ. ಮತ್ಸ್ಯಾವತಾರ, ಕೂರ್ಮಾವತಾರ(ಆಮೆ), ವರಾಹಾವತಾರ(ಹಂದಿ) ರೂಪ ತಾಳಿದ್ದಾನೆ.

ಉಪಸಂಹಾರ

ಭಾರತೀಯ ಹಾಗೂ ಇತರ ಧರ್ಮಗಳು ಪರಿಸರ ಸಂರಕ್ಷಣೆಯನ್ನು ಕೇವಲ ಕರ್ತವ್ಯವಲ್ಲದೆ ಧಾರ್ಮಿಕ ಮತ್ತು ನೈತಿಕ ಹೊಣೆಗಾರಿಕೆಯಾಗಿ ಕಂಡಿವೆ. ಪ್ರಕೃತಿಯನ್ನು ಪೂಜ್ಯವಾಗಿ ಕಾಣುವ ಈ ಸಂಸ್ಕೃತಿ ಮಾನವನಲ್ಲಿ ಸಂಯಮ, ಅಹಿಂಸೆ ಮತ್ತು ಜವಾಬ್ದಾರಿಯುತ ಬಳಕೆಯ ಮನೋಭಾವವನ್ನು ಬೆಳೆಸಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿಸರ ಸಮತೋಲನವನ್ನು ಕಾಪಾಡಬಹುದು. ಹೀಗಾಗಿ ಧರ್ಮ ಮತ್ತು ಸಂಸ್ಕೃತಿ ಪರಿಸರ ಸಂರಕ್ಷಣೆಯ ಶಕ್ತಿಯುತ ಆಧಾರಗಳಾಗಿವೆ.