ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಮುಂದೆ ಅದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಸರ್ಕಾರ ಸಂಘ ಸಂಸ್ಥೆಗಳು ನೀತಿ ನಿರೂಪಕರು ಒಟ್ಟಾಗಿ ಸೇರಿ ಜನಸಂಖ್ಯೆಯನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯತ್ನವನ್ನು ಮಾಡಬೇಕು. ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅವುಗಳು ಪರಿಣಾಮಕಾರಿಯಾಗಿಲ್ಲವೆಂದೇ ಹೇಳಬೇಕು. ಕೆಲವು ನಿಯಂತ್ರಣ ಕ್ರಮಗಳು ಹೀಗಿವೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಗರ್ಭನಿರೋಧಕ ಬಳಕೆ, ಲೈಂಗಿಕ ಶಿಕ್ಷಣ, ಜನಿಸುವ ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು, ಸ್ತ್ರೀ ಸಬಲೀಕರಣ, ಆರೋಗ್ಯ ಕೇಂದ್ರಗಳ ಸ್ಥಾಪನೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿಗಳು.
ಕಲ್ಯಾಣ ಸೇವೆಗಳು
- ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಹಾಗೂ ಮೂಲಭೂತ ವೈದ್ಯಕೀಯ ಸೇವೆಯನ್ನು ಕಲ್ಪಿಸುವುದು.
- ನಗರ ಸಭೆಗಳ ಸಹಯೋಗದೊಂದಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ತಾಜ್ಯ ವಿಲೇವಾರಿ ಕ್ರಮ, ಹಿಂದುಳಿದ ಬೆಟ್ಟ ಗುಡ್ಡಗಾಡು ಪ್ರದೇಶದ ಜನರಲ್ಲಿ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ವೈದ್ಯಕೀಯ ವಾಹನಗಳ ನಿಯೋಜನೆ ಮಾಡುವುದು.
- ವಿವಾಹ ಪೂರ್ವ ಗರ್ಭಿಣಿಯರಾಗುವುದನ್ನು ತಡೆಗಟ್ಟುವುದು, ನಿಧಾನವಾಗಿ ಮದುವೆಯಾಗಲು ಉತ್ತೇಜನ ನೀಡುವುದು ಹಾಗೂ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಕುಡಿಯುವ ನೀರು, ಚಿಕ್ಕ ಕುಟುಂಬ, ಶೌಚ, ಗ್ರಾಮೀಣ ರಸ್ತೆ ಸಾರಿಗೆ, ಅರಣ್ಯಾಭಿವೃದ್ಧಿ ಮತ್ತು ಪರಿಸರ ಅಭಿವೃದ್ಧಿ ಮುಂತಾದವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗುತ್ತದೆ.
- ಜನನ ಪ್ರಮಾಣವನ್ನು ತಡೆಗಟ್ಟಲು ತಡವಾಗಿ ಮದುವೆಯಾಗುವುದಕ್ಕೆ ಪ್ರೋತ್ಸಾಹಿಸಬೇಕು.
- ಮದುವೆಯ ವಯಸ್ಸನ್ನು ಗಂಡಿಗೆ 30 ಹೆಣ್ಣಿಗೆ 25 ಎಂದು ನಿರ್ಧರಿಸಬೇಕು.
ಕುಟುಂಬ ಯೋಜನಾ ಕಾರ್ಯಕ್ರಮಗಳು:
ಕುಟುಂಬ ಕಲ್ಯಾಣ ಯೋಜನೆಯು ಈ ಕೆಳಕಂಡ ಗುರಿಗಳನ್ನು ಇಟ್ಟುಕೊಂಡು ಕಾರ್ಯಯೋನ್ಮುಖವಾಗಿದೆ.
1. ಕುಟುಂಬದ ಗಾತ್ರವನ್ನು ತಗ್ಗಿಸುವುದು: ಸಣ್ಣ ಕುಟುಂಬ ಸುಖಿ ಕುಟುಂಬ, ಸುಖಸಂಸಾರಕ್ಕೆ ಮಕ್ಕಳೆರಡೇ ಇರಲಿ, ನಾವಿಬ್ಬರು ನಮಗಿಬ್ಬರು, ಹತ್ತು ಹಡೆಯುವುದಕ್ಕಿಂತ ಒಂದು ಮುತ್ತು ಹಡಿ, ನೂರು ಇಲಿಗಳಿಗಿಂತ ಒಂದು ಹುಲಿ ಮುಖ್ಯ, ಒಂದು ಮತ್ತು ಎರಡನೇ ಮಗುವಿನ ನಡುವೆ ಸಾಕಷ್ಟು ಅಂತರವಿರಲಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ನಾಣ್ಣುಡಿಗಳನ್ನು ಸರ್ಕಾರ ಘೋಷಿಸಿದೆ.
2. ಕುಟುಂಬದ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು: ಒಂದು ಅಥವಾ ಎರಡು ಮಕ್ಕಳು ಜನಿಸಿದ ನಂತರ ತಂದೆ ತಾಯಿಗಳು ಶಸ್ತ್ರ ಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮಕ್ಕಳಾಗುವುದನ್ನು ತಡೆಗಟ್ಟಬಹುದು.
3. ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು: ಮೊದಲು ಹಾಗೂ ಎರಡನೇ ಮಗುವಿನ ಜನನದ ನಡುವೆ ಸಾಕಷ್ಟು ಅಂತರವನ್ನು ತಂದೆ-ತಾಯಿಗಳು ಪಾಲಿಸಿದರೆ ಪ್ರತಿ ಮಗುವಿನ ಲಾಲನೆ-ಪಾಲನೆ ಕೂಡ ಸಮರ್ಪಕವಾಗಿ ಆಗುತ್ತದೆ. ಇದರಿಂದ ಶಿಶುಗಳ ಆರೋಗ್ಯ ವೃದ್ಧಿಸಿ ಮರಣದ ಪ್ರಮಾಣ ಇಳಿಕೆಯಾಗುತ್ತದೆ. ಪದೇ ಪದೆ ಮಕ್ಕಳನ್ನು ಹೇರುವುದು ಮತ್ತು ಗರ್ಭಪಾತಕ್ಕೆ ಒಳಗಾಗುವುದರಿಂದ ತಾಯಿಯ ಆರೋಗ್ಯ ಹದಗೆಟ್ಟು ಅವಳ ಪ್ರಾಣಕ್ಕೂ ಅಪಾಯ ಬರಬಹುದು.
4. ಜನನ ನಿಯಂತ್ರಣ ಸಾಧನಗಳು: ಗಂಡ-ಹೆಂಡತಿಯರಿಬ್ಬರೂ ತಾತ್ಕಾಲಿಕ ಗರ್ಭ ನಿಯಂತ್ರಣ ಸಾಧನೆಗಳನ್ನು ಬಳಸಬಹುದು. ಅವುಗಳ ಬಳಕೆಯ ಮೂಲಕ ಗರ್ಭಧಾರಣೆಯನ್ನು ಮುಂದೂಡಬಹುದು.
5. ಕುಟುಂಬ ಸದಸ್ಯರ ಪಾತ್ರ: ಕುಟುಂಬದ ಸದಸ್ಯರು ಶಿಶುಗಳ ಮತ್ತು ತಾಯಂದಿರ ಆರೋಗ್ಯ ರಕ್ಷಣೆಯ ಮಹತ್ವವನ್ನು ಅರಿತುಕೊಂಡು ಅವರ ಹಾರೈಕೆಯನ್ನು ಕ್ರಮಬದ್ಧವಾಗಿ ಮಾಡಬೇಕು. ಇದರೊಂದಿಗೆ ಶಿಶುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳನ್ನು ತೊಡೆದು ಹಾಕುವುದು, ಅದಕ್ಕೆ ಸೂಕ್ತ ಲಸಿಕೆ ನೀಡುವುದು, ಗರ್ಭಿಣಿಯರ ಹಾಗೂ ಮಾತೆಯರ ಆರೋಗ್ಯ ತಪಾಸಣೆ ಮಾಡುವುದು ಮುಂತಾದ ಕಾರ್ಯಗಳನ್ನು ದಾದಿಯರು ಹಾಗೂ ವೈದ್ಯಾಧಿಕಾರಿಗಳು ನಿರ್ವಹಿಸುತ್ತಾರೆ.
6. ನೈತಿಕ ನಿಯಂತ್ರಣವನ್ನು ಅನುಸರಿಸುವುದು: ಕುಟುಂಬ ಯೋಜನೆಯ ಪ್ರಮುಖ ಕಾರ್ಯಗಳಲ್ಲಿ ಒಂದಾದ ನೈತಿಕ ನಿಯಂತ್ರಣ ವಿಧಾನದಲ್ಲಿ ವಿವಾಹವನ್ನು ಮುಂದೂಡುವುದು, ವಿವಾಹದ ವಯಸ್ಸನ್ನು ಹೆಚ್ಚಿಸುವುದು ಬ್ರಹ್ಮಚರ್ಯೆ ಪಾಲನೆ, ಆತ್ಮಸಂಹಮ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ಜನನವನ್ನು ತಡೆಗಟ್ಟುವುದು.
7. ಗರ್ಭ ನಿರೋಧಕ ಕ್ರಮಗಳು: ಈ ವಿಧಾನದಲ್ಲಿ ಗರ್ಭನಿರೋಧಕಗಳ ಬಳಕೆ, ವಂಕಿಧಾರಣೆ, ಶಸ್ತ್ರಚಿಕಿತ್ಸೆ ಸುರಕ್ಷಾವಧಿ ಅನುಕರಣೆ, IUDS , ಇತ್ಯಾದಿಗಳ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು.
8. ಕುಟುಂಬ ಯೋಜನೆಗಳಿಗೆ ಒಳಪಡುವವರಿಗೆ ಪ್ರೋತ್ಸಾಹ: ಕುಟುಂಬ ಯೋಜನೆಗೆ ಒಳಪಡುವ ಗ್ರಾಮೀಣ ದಂಪತಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎರಡು ಮಕ್ಕಳಾದ ನಂತರ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ದಂಪತಿಗಳಿಗೆ ಪ್ರೋತ್ಸಾಹ ಧನ, ಸರ್ಕಾರಿ ನೌಕರರಿಗೆ ಭಡ್ತಿ, ಮುಂತಾದವುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಸಣ್ಣ ಕುಟುಂಬವನ್ನು ಪ್ರೋತ್ಸಾಹಿಸುವುದರೊಂದಿಗೆ ದೊಡ್ಡ ಕುಟುಂಬಗಳಿಗೆ ಕೆಲವು ಸರ್ಕಾರಿ ಸೌಲತ್ತುಗಳನ್ನು ಮತ್ತು ಅವಕಾಶಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರಿಗೆ ನಿರುತ್ತೇಜನಗೊಳಿಸುವ ಕಾರ್ಯವನ್ನು ಮಾಡಬೇಕು. ಉದಾ: ಪಡಿತರ ಆಹಾರವನ್ನು ತಡೆಹಿಡಿಯುವುದು, ಚುನಾವಣೆಯಲ್ಲಿ ಭಾಗವಹಿಸಿದಂತೆ ಕ್ರಮ ಜರುಗಿಸುವುದು, ಸರ್ಕಾರಿ ಕೆಲಸಗಳನ್ನು ನೀಡದಿರುವುದು ಮುಂತಾದ ಕ್ರಮಗಳನ್ನು ಜಾರಿಗೆ ತರಬೇಕು.
9. ಭಾರತವು ಬಹುಧರ್ಮಿಯ ಜಾತಿಗಳ ಹಾಗೂ ಭಾಷೆಗಳನ್ನಾಡುವ ದೇಶವಾದ ಕಾರಣ ಎಲ್ಲರಿಗೂ ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು.
10. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ದೊರೆಯುವಂತೆ ಮಾಡಬೇಕು.
11. ಶಾಲಾ ಕಾಲೇಜುಗಳ ಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ನೀಡಬೇಕು.
12. ಕುಟುಂಬ ಯೋಜನೆಗೆ ಒಳಗಾದವರಿಗೆ ಸೂಕ್ತ ವಸತಿಯೋಜನೆ, ಮಕ್ಕಳ ಪೌಷ್ಟಿಕಾಂಶ ಲಸಿಕೆ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರವು ಮಾಡಬೇಕು.
ಉಪಸಂಹಾರ
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣವು ಸರ್ಕಾರದ ಹೊಣೆಗಾರಿಕೆಯಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಕುಟುಂಬ ಯೋಜನೆ, ಮಹಿಳಾ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾರ್ವಜನಿಕ ಜಾಗೃತಿ ಇವುಗಳ ಸಮನ್ವಯದಿಂದ ಮಾತ್ರ ಜನಸಂಖ್ಯೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಸಣ್ಣ ಕುಟುಂಬದ ಮೂಲಕವೇ ಸುಸ್ಥಿರ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು.