ಭಾರತದಲ್ಲಿ ಜಲಮಾಲಿನ್ಯವನ್ನು ತಡೆಗಟ್ಟಿ ನೀರಿನ ಗುಣಮಟ್ಟವನ್ನು ಕಾಪಾಡಲು ಜಲ ಮಾಲಿನ್ಯ ಕಾಯಿದೆಯನ್ನು 1974ರಲ್ಲಿ ಜಾರಿಗೆ ತರಲಾಯಿತು. ನಂತರ ಇದನ್ನು 1988 ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರಿಂದ ಜಲಮಾಲಿನ್ಯ ನಿಯಂತ್ರಣ ಮಂಡಳಿಗೆ ಹೆಚ್ಚು ಅಧಿಕಾರ ಸಿಕ್ಕಂತಾಯಿತು. ಈ ಕಾಯಿದೆಯು 8 ಅಧ್ಯಾಯ ಹಾಗೂ 64 ವಿಭಾಗಗಳನ್ನು ಒಳಗೊಂಡಿದೆ.

ಕೇಂದ್ರ ಮಂಡಳಿಯ ಕಾರ್ಯಗಳು: 

  1. ಪ್ರವಾಹದ ನೀರು ಹಾಗೂ ಬಾವಿಗಳ ನೀರನ್ನು ಶುದ್ಧೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವುದು.
  2.  ರಾಜ್ಯ ಮಂಡಳಿ ಹಾಗೂ ರಾಜ್ಯ ಸರಕಾರ ಸಹಕಾರ ಮಂಡಳಿಗಳ ನಡುವಿನ ಬಿಕ್ಕಟ್ಟನ್ನು ಬಗೆ ಹರಿಸುವುದು.
  3.  ಜಲ ಸಂರಕ್ಷಣೆ ಹಾಗೂ ಮಾಲಿನ್ಯ ತಡೆ ನಿಯಂತ್ರಣಕ್ಕೆ ತಾಂತ್ರಿಕ ಸಹಾಯ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದು. 
  4. ಮಾಲಿನ್ಯಕ್ಕೆ ಕಾರಣವಾದ ಅಂಶಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ತರುವಾಯ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ನೀಡುವುದು.
  5.  ತ್ಯಾಜ್ಯ ಉಪಚಾರ ಹಾಗೂ ತ್ಯಾಜ್ಯ ವಿಲೇವಾರಿ ಮಾನದಂಡಗಳನ್ನು ರೂಪಿಸುವುದು.
  6.  ಜಲಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೋದ್ಯಮಗಳ ಮೇಲೆ ಕಾನೂನು ಕ್ರಮ ಜರುಗಿಸುವುದು. ಶಿಕ್ಷೆ ಹಾಗೂ ದಂಡಗಳನ್ನು ವಿಧಿಸುವುದು.
  7.  ಕೊಳಚೆ ನೀರು ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಉತ್ಪತ್ತಿಯಾಗುವ ವ್ಯರ್ಥ ಪದಾರ್ಥಗಳನ್ನು ಹೊರ ಹಾಕುವ ಮೊದಲು ಸಂರಕ್ಷಣೆಗೊಳಿಸಿದ ಬಗ್ಗೆ ಮಾಹಿತಿ ನೀಡುವುದು.
  8.  ನೀರಿಗೆ ಕಲ್ಮಷಗಳನ್ನು ಸೇರಿಸುವುದನ್ನು ತಡೆಯುವುದು.
  9.  ಪ್ರಾಣಿ, ಸಸ್ಯ ಹಾಗೂ ಜಲಚರ ಜೀವಿಗಳಿಗೆ ಹಾನಿಕಾರಕವಾಗದಂತೆ ನೀರಿನ ಗುಣಮಟ್ಟವನ್ನು ಪರೀಕ್ಷಿಸುವುದು.
  10.  ಕೈಗಾರಿಕೆ ಸಂಸ್ಥೆಗಳು ಜಲಮಾಲಿನ್ಯವನ್ನು ಮಾಡುತ್ತಿರುವುದು ಕಂಡು ಬಂದರೆ ಅವುಗಳಿಗೆ ವಿದ್ಯುತ್ ಹಾಗೂ ನೀರಿನ ಸರಬರಾಜನ್ನು ಕಡಿತಗೊಳಿಸುವುದು.

ರಾಜ್ಯ ಮಂಡಳಿಯ ಕಾರ್ಯಗಳು: 

  1. ಜಲ ಸಂರಕ್ಷಣೆ ಹಾಗೂ ಜಲಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡುವುದು.
  2. ಜಲ ಮಾಲಿನ್ಯಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಗಳೆರಡೂ ಸೇರಿ ಕಾರ್ಯಕ್ರಮವನ್ನು ನಿರೂಪಿಸುವುದು.
  3. ಉದ್ಯಮಗಳಿಂದ ವಿಸರ್ಜಿಸಲ್ಪಡುವ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ಅವುಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡುವುದು.
  4.  ಜಲ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆ ಹಾಗೂ ಪ್ರಯೋಗಾಲಯಗಳನ್ನು ಸೂಕ್ತವಾದ ಸ್ಥಳಗಳಲ್ಲಿ ಸ್ಥಾಪಿಸುವಂತೆ ಸಲಹೆಗಳನ್ನು ನೀಡುವುದು.
  5.  ವಾರ್ಷಿಕ ತ್ಯಾಜ್ಯ ಸಂರಕ್ಷಣೆಯ ಮಾನದಂಡಗಳನ್ನು ನೀಡುವುದು.
  6.  ಜಲಮಾಲಿನ್ಯ ಮತ್ತು ಸಂರಕ್ಷಣೆಗೆ ಅಗತ್ಯ ಯೋಜನೆಗಳನ್ನು ರೂಪಿಸುವುದು ಮತ್ತು ಅನುಷ್ಠಾನಕ್ಕೆ ತರುವುದು.

ಉಪಸಂಹಾರ

ಜಲಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1974ವು ನೀರಿನ ಮೂಲಗಳನ್ನು ರಕ್ಷಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಕೇಂದ್ರ ಹಾಗೂ ರಾಜ್ಯ ಜಲಮಾಲಿನ್ಯ ನಿಯಂತ್ರಣ ಮಂಡಳಿಗಳ ಕಾರ್ಯಗಳಿಂದ ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನ ನಿಯಂತ್ರಣ ಸಾಧ್ಯವಾಗಿದೆ. ಈ ಕಾಯಿದೆಯು ಪರಿಸರ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಸಾರ್ವಜನಿಕ ಸಹಕಾರ ಮತ್ತು ಕಾನೂನು ಅನುಷ್ಠಾನದಿಂದ ಮಾತ್ರ ಶುದ್ಧ ನೀರನ್ನು ಮುಂದಿನ ತಲೆಮಾರಿಗೆ ಉಳಿಸಬಹುದು. ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.