ಸೆಪ್ಟೆಂಬರ್‌ 22, 1599ರಲ್ಲಿ ಭಾರತದೊಂದಿಗೆ ವ್ಯಾಪಾರಮಾಡಲು ಸಂಸ್ಥೆಯೊಂದನ್ನು ಸ್ಥಾಪಿಸಲು(ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ) ಲಂಡನ್‌ ನಲ್ಲಿ ಸಭೆ ಸೇರಿರುವ ದೃಶ್ಯ ಮೇಲಿದೆ. 

ಇಂಗ್ಲಿಷ್ ವರ್ತಕರು ಪೂರ್ವದ ದೇಶಗಳೊಂದಿಗೆ ವ್ಯಾಪಾರ ಮಾಡಲು ತುಂಬಾ ಆಸಕ್ತರಾಗಿದ್ದರು. ಪರಿಣಾಮವಾಗಿ ಅವರು ಕ್ರಿಸ್ತಶಕ 1600 ಡಿಸೆಂಬರ್ 31 ರಂದು “ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ” ಯನ್ನು ಸ್ಥಾಪಿಸಿ ಇಂಗ್ಲೆಂಡಿನ ರಾಣಿ ಎಲಿಜೆಬೆತ್‌ಳಿಂದ 15 ವರ್ಷಗಳವರೆಗೆ ವ್ಯಾಪಾರ ಸನ್ನದನ್ನು(ಅನುಮತಿಯನ್ನು) ಪಡೆದರು. ಆರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಸಾಂಬಾರ ದ್ವೀಪಗಳೆಂದು ಹೆಸರಾದ ಜಾವಾ, ಸುಮಾತ್ರಾ, ದ್ವೀಪಗಳಿಗೆ ಹಲವು ನೌಕೆಗಳನ್ನು ಕಳುಹಿಸಿತು. ತದನಂತರ 1609ರ ವೇಳೆಗೆ ಆಂಗ್ಲರು ಭಾರತದಲ್ಲಿ ತಮ್ಮ ವ್ಯಾಪಾರಿ ಕೋಠಿಗಳನ್ನು ಸ್ಥಾಪಿಸಲು ಆರಂಭಿಸಿದರು. ಬ್ರಿಟಿಷ್ ಕಂಪನಿಯು ಕ್ಯಾಪ್ಟನ್ ಹಾಕಿನ್ಸ್ ಎಂಬುವವನನ್ನು ಭಾರತಕ್ಕೆ ಕಳುಹಿಸಿತು. ಇಂಗ್ಲೆಂಡಿನ ದೊರೆ ಮೊದಲನೆಯ ಜೇಮ್ಸ್‌ನಿಂದ ಪರವಾನಿಗೆ ಪತ್ರವನ್ನು ಪಡೆದುಕೊಂಡು ಬಂದ ಹಾಕಿನ್ಸ್ ಮೊಗಲ್ ದೊರೆ ಜಹಾಂಗೀರನಿಂದ ಪುರಸ್ಕೃತನಾಗಿ ಕ್ರಿ.ಶ. 1609 ರಿಂದ 1611 ರವರೆಗೆ ಮೊಗಲರ ಆಸ್ಥಾನದಲ್ಲಿದ್ದನು. ನಂತರ ಗುಜರಾತಿನ ಸೂರತ್ ನಗರದಲ್ಲಿ ಬ್ರಿಟಿಷ್ ವ್ಯಾಪಾರಿ ಕೋಠಿಯನ್ನು ಆರಂಭಿಸುವ ಅಭಿಲಾಷೆಯನ್ನು ಚಕ್ರವರ್ತಿಯ ಮುಂದೆ ಇಟ್ಟನು. ಆದರೆ ಮೊಗಲರ ಆಸ್ಥಾನದಲ್ಲಿ ಈಗಾಗಲೇ ತಮ್ಮ ಪ್ರಭಾವವನ್ನು ಸ್ಥಾಪಿಸಿದ್ದ ಪೋರ್ಚುಗೀಸರು ಬ್ರಿಟಿಷರು ಕೋಠಿಯನ್ನು ನಿರ್ಮಿಸಲು ಅವಕಾಶ ಕೊಡಲಿಲ್ಲ. ಈ ವಿಷಯವಾಗಿ ಪೋರ್ಚುಗೀಸರು ಜಹಾಂಗೀರನಿಗೆ ಚಾಡಿ ಹೇಳಿದರು. ಪರಿಣಾಮವಾಗಿ ಜಹಾಂಗೀರ್ ಆಂಗ್ಲರ ಬೇಡಿಕೆಯನ್ನು ತಿರಸ್ಕರಿಸಿದನು.‌

ಸ್ವಾಲಿ ಯುದ್ಧ (1612)

ತಮ್ಮ ವ್ಯಾಪಾರಿ ಕೋಠಿಯನ್ನು ನಿರ್ಮಿಸಲು ತಡೆಗೋಡೆಯಾಗಿದ್ದ ಪೋರ್ಚುಗೀಸರನ್ನು ಬಗ್ಗು ಬಡಿಯಲು ಬ್ರಿಟಿಷರು ಸರ್‌ಥಾಮಸ್‌‌ ಬೆಸ್ಟ್ ಎಂಬ ಆಂಗ್ಲ ಸೇನಾನಿಯನ್ನು ಕಳುಹಿಸಿದರು. ಕ್ರಿಸ್ತಶಕ 1612ರಲ್ಲಿ ಥಾಮಸ್‌ಬೆಸ್ಟ್ ಭಾರತಕ್ಕೆ ಬಂದು ಪೋರ್ಚುಗೀಸರನ್ನು ಸ್ವಾಲಿ ಎಂಬಲ್ಲಿ ಪರಾಭವಗೊಳಿಸಿದನು. ಬ್ರಿಟಿಷರ ವಿಜಯವು ಸಾಮ್ರಾಟನ ಮೇಲೆ ಪ್ರಭಾವ ಬೀರಿತು. ಮರುವರ್ಷವೇ ಅಂದರೆ 1613ರಲ್ಲಿ ಸೂರತ್‌ನಲ್ಲಿ ಒಂದು ಖಾಯಂ ಕೋಠಿಯನ್ನು ನಿರ್ಮಿಸಲು ಇಂಗ್ಲಿಷರಿಗೆ ಜಹಾಂಗೀರ್ ಪರ್ಮಾನ್(ಅನುಮತಿ ಆದೇಶ) ನೀಡಿದನು. ಹೀಗೆ ಆಂಗ್ಲರು ಸೂರತ್‌ನಲ್ಲಿ ತಮ್ಮ ಪ್ರಥಮ ವ್ಯಾಪಾರಿ ಕೋಠಿಯನ್ನು ನಿರ್ಮಿಸಿದರು.

ಸರ್‌ ಥಾಮಸ್‌ರೋನ ಭೇಟಿ : ಕ್ರಿಸ್ತಶಕ 1615ರಲ್ಲಿ ಬ್ರಿಟಿಷ್ ಕಂಪನಿ ಸರ್‌ಥಾಮಸ್ ರೋ ಎಂಬಾತನನ್ನು ಮೊಗಲ್ ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಕಳುಹಿಸಿತು. ಆತ ಕ್ರಿಸ್ತಶಕ 1615 ರಿಂದ 1618 ರವರೆಗೆ ಭಾರತದಲ್ಲಿದ್ದು ಅಹಮದಾಬಾದ್, ಬ್ರೋಚ್, ಆಗ್ರಾಗಳಲ್ಲಿ ಕೋಠಿಗಳನ್ನು ನಿರ್ಮಿಸಲು ಅನುಮತಿಯನ್ನು ಪಡೆದುಕೊಂಡನು. ಕ್ರಿಸ್ತಶಕ 1668ರಲ್ಲಿ ಮೊದಲು ಪೋರ್ಚುಗೀಸರ ವಸಾಹತುವಾಗಿದ್ದು ಅನಂತರ ಬ್ರಿಟಿಷರಿಗೆ ಸೇರಿದ್ದ ಬೊಂಬಾಯಿ ನಗರವನ್ನು ಇಂಗ್ಲೆಂಡಿನ ದೊರೆ ಚಾರ್ಲ್ಸನು ಕಂಪನಿಯ ಅಧೀನಕ್ಕೆ ವರ್ಗಾಯಿಸಿದನು.

ಮದ್ರಾಸ್‌ ಸ್ಥಾಪನೆ (1639):

ಕ್ರಿಸ್ತಶಕ 1639ರಲ್ಲಿ ಪ್ರಾನ್ಸಿಸ್ ಡೇ ಎಂಬಾತನು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಗರವನ್ನು ಪಡೆದು ಅಲ್ಲಿ ಬಲವಾದ ಕೋಟೆಯೊಂದನ್ನು ಕಟ್ಟಿಸಿದನು. ಇದನ್ನೇ ಪೋರ್ಟ್‌ಸೇಂಟ್ ಚಾರ್ಜ್ ಎಂದು ಕರೆಯಲಾಯಿತು. ಮುಂದೆ ಇದರ ಸುತ್ತ ಮದ್ರಾಸ್ ನಗರವು ಬೃಹದಾಕಾರವಾಗಿ ಬೆಳೆಯಿತು. ಅದು ಕೋರಮಂಡಲ ಕರಾವಳಿಯಲ್ಲಿ ಬ್ರಿಟಿಷರ ಮುಖ್ಯ ವ್ಯಾಪಾರ ಕೇಂದ್ರವಾಗಿ ಪ್ರಸಿದ್ಧಿಯನ್ನು ಪಡೆಯಿತು. ಪೂರ್ವ ಕರಾವಳಿಯುದ್ದಕ್ಕೂ ಉತ್ತರಾಭಿಮುಖವಾಗಿ ಸಾಗಿ ಕಂಪನಿಯು ಓರಿಸ್ಸಾದ ಹರಿಹರಪುರ ಮತ್ತು ಬಾಲಸೋರ್ ಗಳಲ್ಲಿ ಕೋಠಿಗಳನ್ನು(ದಾಸ್ತಾನು ಕೊಠಡಿ ಮತ್ತು ಕಛೇರಿ) ಸ್ಥಾಪಿಸಿತು. ಬಂಗಾಳದಲ್ಲಿ ಹೂಗ್ಲಿ ಮತ್ತು ಕಾಸೀಂ ಬಜಾರಗಳು, ಬಿಹಾರದಲ್ಲಿ ಪಾಟ್ನಾ ಬ್ರಿಟಿಷರ ವಸಾಹತುಗಳಾಗಿ ಹೆಸರು ಪಡೆದವು.

ಬಾಂಬೆ ಸ್ಥಾಪನೆ (1720) :

ಇಂಗ್ಲೆಂಡಿನ ಅರಸನಾದ ಎರಡನೆಯ ಚಾರ್ಲ್ಸ್ ಪೋರ್ಚುಗೀಸರ ರಾಜಕುಮಾರಿ ಕ್ಯಾಥರೀನ್ ಬೃಗಾಂಜಳನ್ನು ಮದುವೆಯಾದನು. ಆಗ ಪೋರ್ಚುಗೀಸರು ಚಾರ್ಲ್ಸ್ ಗೆ ವರದಕ್ಷಿಣೆಯಾಗಿ ಮುಂಬೈ ಪ್ರಾಂತ್ಯವನ್ನು ನೀಡಿದರು. ಎರಡನೆಯ ಚಾರ್ಲ್ಸ್ ನು ನಂತರದ ದಿನಗಳಲ್ಲಿ ಮುಂಬೈ ಪ್ರಾಂತ್ಯವನ್ನು ಬ್ರಿಟಿಷರಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ನೀಡಿದನು. ಆರಂಭದಲ್ಲಿ ಒಂದು ಹಳ್ಳಿಯಂತಿದ್ದ ಮುಂಬೈ ಮುಂದೆ ಅದು ಸೂರತ್‌ನ್ನು ಮೀರಿ ಬೆಳೆಯಿತು. ಬ್ರಿಟಿಷರು ಅದರ ಸುತ್ತಲೂ ಒಂದು ಕೋಟೆಯನ್ನು ನಿರ್ಮಿಸಿದರು.

ಕಲ್ಕತ್ತ ಸ್ಥಾಪನೆ (1696) :

ಬಂಗಾಳದಲ್ಲಿಯೂ ಬ್ರಿಟಿಷರು ತಮ್ಮ ಪ್ರಭಾವವಲಯವನ್ನು ವಿಸ್ತರಿಸಿದರು. ಚಕ್ರವರ್ತಿ ಷಾಹಜಹಾನನ ಪುತ್ರ ಷೂಜನು ಬಂಗಾಳದ ಪ್ರಾಂತಾಧಿಕಾರಿಯಾಗಿದ್ದಾಗ ಮೂರುಸಾವಿರ ರೂಗಳ ವಾರ್ಷಿಕ ಪೊಗದಿಯ ಪಾವತಿಯ ಷರತ್ತಿನ ಮೇಲೆ ಯಾವುದೇ ತೆರಿಗೆಗಳಿಲ್ಲದೆ ಬಂಗಾಳದಲ್ಲಿ ವ್ಯಾಪಾರ ಮಾಡಲು ಕಂಪನಿಗೆ ಅನುಮತಿ ನೀಡಿದನು. ಆದರೆ ನಂತರದ ವರ್ಷಗಳಲ್ಲಿ ಆಂಗ್ಲರು ಹಾಗೂ ಮೊಗಲರ ನಡುವೆ ಘರ್ಷಣೆಗಳು ನಡೆದು ಬ್ರಿಟಿಷರು ಬಂಗಾಳದಿಂದ ಮದ್ರಾಸಿಗೆ ಪಲಾಯನ ಮಾಡಿದರು. ಕ್ರಿಸ್ತಶಕ 1690ರ ಅವಧಿಯಲ್ಲಿ ಆಂಗ್ಲರು ಮೊಗಲರೊಂದಿಗೆ ಶಾಂತಿಯನ್ನು ಏರ್ಪಡಿಸಿಕೊಂಡು ಮತ್ತೆ ಬಂಗಾಳಕ್ಕೆ ಬಂದರು. ಅದೇ ವರ್ಷ ಜಾಬ್‌ಚಾರ್ನಾರ್ ಎಂಬ ಬ್ರಿಟಿಷ್ ಅಧಿಕಾರಿಯು ಗಂಗಾನದಿಯ ದಂಡೆಯ ಮೇಲಿನ ಸುತಾನತಿ ಎಂಬ ಹಳ್ಳಿಯಲ್ಲಿ ಒಂದು ವ್ಯಾಪಾರದ ನೆಲೆಯನ್ನು ಸ್ಥಾಪಿಸಿದನು. ಅದುವೆ ಮುಂದೆ ಕಲ್ಕತ್ತಾ ಮಹಾನಗರವಾಗಿ ಬೆಳೆಯಿತು ಕ್ರಿಸ್ತಶಕ 1696ರ ವೇಳೆಗೆ ಈ ಕೋಠಿಯ ನೆರೆಯ ಪ್ರದೇಶದ ಜನರು ಆಂಗ್ಲರ ವಿರುದ್ಧ ದಂಗೆ ಎದ್ದರು. ಇದು ಕಲ್ಕತ್ತಾದ ವ್ಯಾಪಾರ ನೆಲೆಯ ಸುತ್ತಲೂ ಒಂದು ಬಲವಾದ ಕೋಟೆಯನ್ನು ನಿರ್ಮಿಸಲು ಕಾರಣವಾಯಿತು. ಕೋಟೆಯನ್ನು ನಿರ್ಮಿಸಿ ಅದರ ಸುತ್ತಲೂ ರಕ್ಷಣಾ ಸೈನ್ಯವನ್ನು ನೇಮಿಸಿದ ಬ್ರಿಟಿಷ್ ಕಂಪನಿಯು ಕಾಲಕ್ರಮೇಣ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಕಲ್ಕತ್ತಾದ ಕೋಟೆಗೆ ಅಂದಿನ ಬ್ರಿಟಿಷ್ ಚಕ್ರವರ್ತಿಯಾದ ಮೂರನೆಯ ವಿಲಿಯಂನ ಹೆಸರನ್ನಿಟ್ಟು ಪೋರ್ಟವಿಲಿಯಂ ಎಂದು ಕರೆಯಲಾಯಿತು. ಇದು ಕ್ರಿಸ್ತಶಕ 1911ರ ವರೆಗೆ ಬ್ರಿಟಿಷ್ ಭಾರತದ ರಾಜಧಾನಿಯಾಗಿ ಮುಂದುವರೆಯಿತು. ಕ್ರಿಸ್ತಶಕ 1750ರ ವೇಳೆಗೆ ಕಲ್ಕತ್ತಾದ ಜನಸಂಖ್ಯೆ 2 ಲಕ್ಷಕ್ಕೆ ಏರಿತು. ಕಂಪನಿಯ ವೈದ್ಯ ಗೇಬ್ರಿಯಲ್ ಬೋಲ್ಟನು ಬಂಗಾಳದ ಸುಬೇದಾರನ ರೋಗವನ್ನು ಗುಣಪಡಿಸಿ ಅವನಿಂದ ಮತ್ತಷ್ಟು ವ್ಯಾಪಾರದ ರಿಯಾಯ್ತಿಗಳನ್ನು ಪಡೆದನು. ಕ್ರಿಸ್ತಶಕ 1717ರಲ್ಲಿ ಮುಂಬೈ, ಕಲ್ಕತ್ತಾ ಹಾಗೂ ಮದ್ರಾಸ್‌ನ ಬ್ರಿಟಿಷ್ ಸಮಿತಿಗಳು ಸರ್ ಜಾನ್ ಸರ್‌ಮಾನನ ನೇತೃತ್ವದಲ್ಲಿ ಮೊಗಲ್ ಚಕ್ರವರ್ತಿ ಫರೂಕ್ಷಿಯಾರನ ಆಸ್ಥಾನಕ್ಕೆ ನಿಯೋಗವೊಂದನ್ನು ಕಳುಹಿಸಿದವು. ಈತ ಬಂಗಾಳದಲ್ಲಿ ತೆರಿಗೆರಹಿತವಾಗಿ ವ್ಯಾಪಾರ ಮಾಡಲು ಖಾಯಂ ಆಗಿ ಅನುಮತಿ ನೀಡಿದನು. ಹೀಗೆ ಫರುಕ್ಷಿಯಾರ್ ಆಂಗ್ಲರಿಗೆ ನೀಡಿದ ಫರ್ಮಾನಿಗೆ ಮ್ಯಾಗ್ನಾಕಾರ್ಟ್ ಎಂದು ಕರೆಯಲಾಗಿದೆ.

ಸರ್ಮನ್ ಆಯೋಗ ಮತ್ತು ಅವಿವೇಕಿ ಫರೂಖ್ಸಿಯಾರ್

ಸರ್ಮನ್ ಆಯೋಗದ ಭೇಟಿಯನ್ನು (1715ರಲ್ಲಿ) ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವುಗಳಲ್ಲಿ ಒಂದೆಂದು ಉಲ್ಲೇಖಿಸಲಾಗುತ್ತದೆ. ಇದು ಕಂಪನಿಯನ್ನು ಇತರೇ ವಿದೇಶಿ ವ್ಯಾಪಾರಿಗಳಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಕಾನೂನುಬದ್ಧವಾಗಿ ಸಂರಕ್ಷಿತ ರಾಜಕೀಯ ಘಟಕವಾಗಿ ಪರಿವರ್ತಿಸಿತು. ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ ಇತಿಹಾಸಕಾರರು ಈಸ್ಟ್ ಇಂಡಿಯಾ ಕಂಪನಿಯ “ಮ್ಯಾಗ್ನಾ ಕಾರ್ಟಾ” ಎಂದು ಕರೆಯುವುದಕ್ಕೆ ಕಾರಣವಾಯಿತು.

1715ರಲ್ಲಿ, ಮೊಘಲ್ ಚಕ್ರವರ್ತಿ ಫರೂಖ್ಸಿಯಾರ್ ತೀವ್ರ ಅನಾರೋಗ್ಯಕ್ಕೆ ತುತ್ತಾದನು. ಅವನ ಕಾಯಿಲೆಯನ್ನು ಗುಣಪಡಿಸಲು ದೇಶದ ಅನೇಕ ವೈದ್ಯರು ಪ್ರಯತ್ನಿಸಿದರು. ಆದರೆ ಯಾರಿಂದಲೂ ಅವನ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದ ಆಂಗ್ಲ ವ್ಯಾಪಾರಿಗಳು, ವ್ಯಾಪಾರ ರಿಯಾಯಿತಿಗಳನ್ನು ಪಡೆಯುವ ಸಲುವಾಗಿ ಚಕ್ರವರ್ತಿ ಫರೂಖ್ಸಿಯಾರ್ ನನ್ನು ಬೇಟಿಯಾಗಲು ಅರಮನೆಗೆ ಬೇಟಿನೀಡಿದರು. ಇದರ ನೇತೃತ್ವವನ್ನು ಜಾನ್ ಸರ್ಮನ್ ವಹಿಸಿದ್ದನು. ಈ ತಂಡದಲ್ಲಿ ವಿಲಿಯಂ ಹ್ಯಾಮಿಲ್ಟನ್ ಎಂಬ ಪ್ರತಿಭಾನ್ವಿತ ವೈದ್ಯನೂ ಇದ್ದನು. ಇವನು ಫರೂಖ್ಸಿಯಾರ್ ನ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಿದನು. ಈ ಕಾಯಿಲೆಯನ್ನು ಸಾಮಾನ್ಯವಾಗಿ ಗೆಡ್ಡೆ ಅಥವಾ ತೀವ್ರವಾದ ತೊಡೆಸಂದು ಬಾವು ಎಂದು ಗುರುತಿಸಲಾಗಿದೆ.

ಹೀಗೆ ಹ್ಯಾಮಿಲ್ಟನ್‌ನ ಯಶಸ್ವಿ ಶಸ್ತ್ರಚಿಕಿತ್ಸೆಯು ಚಕ್ರವರ್ತಿಯ ನೋವನ್ನು ನಿವಾರಿಸಿದ್ದಲ್ಲದೆ, ಅಂತಿಮವಾಗಿ ಜೋಧ್‌ಪುರದ ರಾಜಕುಮಾರಿಯನ್ನು ಮದುವೆಯಾಗಲು ಅವಕಾಶ ಮಾಡಿಕೊಟ್ಟಿತು.

ಇದರಿಂದ ಸಂತೃಪ್ತನಾದ ಚಕ್ರವರ್ತಿ ಫರೂಖ್ಸಿಯಾರ್ ಕೃತಜ್ಞತೆಯಿಂದ, ಹ್ಯಾಮಿಲ್ಟನ್‌ಗೆ ತಾನು ಏನು ಬೇಕಾದರೂ ಕೇಳಬಹುದು ಎಂದು ಹೇಳಿದನು. ಹ್ಯಾಮಿಲ್ಟನ್ ತನ್ನ ಉದ್ಯೋಗದಾತರಿಗೆ ಹೆಚ್ಚಿನ ನಿಷ್ಠೆಯನ್ನು ತೋರಿಸುತ್ತಾ, ವೈಯಕ್ತಿಕ ಸಂಪತ್ತಿಗಿಂತ ಕಂಪನಿಯ ವ್ಯಾಪಾರ ಅರ್ಜಿಗಳನ್ನು ಪೂರೈಸುವಂತೆ ಕೇಳಿದನು.

ಆಗ ಚಕ್ರವರ್ತಿ ಫರೂಖ್ಸಿಯಾರ್ ಆಂಗ್ಲರ ಕೋರಿಕೆಯ ಮೇರೆಗೆ ಕೆಲವು ಫಾರ್ಮನ್‌ಗಳನ್ನು (ರಾಜಮನೆತನದ ಆಜ್ಞೆಗಳು) ಹೊರಡಿಸಿದನು.

ಈ ಕಾನೂನುಗಳು ಬ್ರಿಟಿಷರ ಅದೃಷ್ಟವನ್ನೇ ಬದಲಾಯಿಸಿತು:

೧. ಸುಂಕಗಳಿಂದ ವಿನಾಯಿತಿ ವ್ಯಾಪಾರ: ಬಂಗಾಳದಲ್ಲಿ, 3,000 ರೂಪಾಯಿಗಳ ಅಲ್ಪ ವಾರ್ಷಿಕ ಪಾವತಿಗೆ ಬದಲಾಗಿ ಕಂಪನಿಯನ್ನು ಎಲ್ಲಾ ಕಸ್ಟಮ್ಸ್ ಸುಂಕಗಳಿಂದ ವಿನಾಯಿತಿ ನೀಡಲಾಯಿತು.

೨. ದಸ್ತಕ್ಸ್ ಗಳ ಅವಕಾಶ: ಕಂಪನಿಯು ತಮ್ಮ ಸರಕುಗಳ ಚಲನೆಗೆ ದಸ್ತಕ್ಸ್ (ಪಾಸ್‌ಗಳು) ನೀಡಲು ಅನುಮತಿಸಲಾಯಿತು. ಸ್ಥಳೀಯ ಅಧಿಕಾರಿಗಳು ಈ ಸರಕುಗಳನ್ನು ಪರಿಶೀಲಿಸುವುದನ್ನು ನಿಷೇಧಿಸಲಾಯಿತು.

೩. ಭೂಸ್ವಾಧೀನ: ಕಂಪನಿಗೆ ಕಲ್ಕತ್ತಾದ ಸುತ್ತಮುತ್ತಲಿನ ಹೆಚ್ಚುವರಿ ಹಳ್ಳಿಗಳನ್ನು ಬಾಡಿಗೆಗೆ ಪಡೆಯುವ ಹಕ್ಕನ್ನು ನೀಡಲಾಯಿತು.

೪. ಕರೆನ್ಸಿ ಹಕ್ಕುಗಳು: ಬಾಂಬೆಯಲ್ಲಿ ಮುದ್ರಿಸಲಾದ ಕಂಪನಿಯ ನಾಣ್ಯಗಳನ್ನು ಇಡೀ ಮೊಘಲ್ ಸಾಮ್ರಾಜ್ಯದಾದ್ಯಂತ ಮಾನ್ಯ ಕರೆನ್ಸಿ ಎಂದು ಘೋಷಿಸಲಾಯಿತು.

ಐತಿಹಾಸಿಕ ಪರಿಣಾಮ ಇತಿಹಾಸಕಾರ ಓರ್ಮ್ ಈ ಫಾರ್ಮನ್ ಅನ್ನು “ಕಂಪನಿಯ ಮ್ಯಾಗ್ನಾ ಕಾರ್ಟಾ” ಎಂದು ಕರೆದನು. ಯಾಕೆಂದರೆ

೧. ಇದು ಅವರಿಗೆ ಇತರ ಯುರೋಪಿಯನ್ ಶಕ್ತಿಗಳು (ಫ್ರೆಂಚ್ ಮತ್ತು ಡಚ್‌ನಂತಹ) ಮತ್ತು ಸ್ಥಳೀಯ ವ್ಯಾಪಾರಿಗಳ ಮೇಲೆ ಕಾನೂನು ಮತ್ತು ನೈತಿಕ ಹಕ್ಕನ್ನು ನೀಡಿತು.

೨. ಪರಿಣಾಮವಾಗಿ ಇದು ಮೊಗಲರ ಖಜಾನೆಗೆ ಬೃಹತ್ ತೆರಿಗೆಯ ಆದಾಯ ಪಾವತಿಯಾಗದೇ ಆಂಗ್ಲರಿಗೆ ಅನುಕೂಲವಾಯಿತು..

೩. ಬಂಗಾಳದ ನವಾಬನ ಅಧಿಕಾರವನ್ನು ದುರ್ಬಲಗೊಳಿಸಿತು.

೪. ಕಂಪನಿ ಅಧಿಕಾರಿಗಳು ದಸ್ತಕ್‌ಗಳನ್ನು(ಉಚಿತ ಪಾಸ್‌ಗಳು) ತಮ್ಮ ಖಾಸಗಿ ವ್ಯಾಪಾರಕ್ಕಾಗಿ ಬಳಸಿಕೊಂಡಿದ್ದರಿಂದ  ಅವುಗಳ ದುರುಪಯೋಗವಾಯಿತು. ಇದು ಬ್ರಿಟಿಷರು ಮತ್ತು ಬಂಗಾಳದ ನವಾಬರ ನಡುವಿನ ಘರ್ಷಣೆಗೆ ಪ್ರಾಥಮಿಕ ಕಾರಣವಾಯಿತು.

ಇದೇ ಅಂತಿಮವಾಗಿ 1757 ರಲ್ಲಿ ಪ್ಲಾಸಿ ಕದನಕ್ಕೆ ಮತ್ತು ನಂತರ ಬಕ್ಸಾರ್‌ ಕದನಕ್ಕೆ ಕಾರಣವಾಗಿ ಭಾರತದಲ್ಲಿ ಬ್ರಿಟೀಷ್‌ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯವಾಯಿತು.

ರಾಜಕೀಯದ ಮೇಲೆ ಐರೋಪ್ಯ ಕಂಪನಿಗಳ ಪ್ರಭಾವ

1) ಭಾರತಕ್ಕೆ ಬಂದ ಯೂರೋಪಿಯನ್ನರು ಇಲ್ಲಿ ರಾಜಕೀಯ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಲು ಪರಸ್ಪರ ಕಚ್ಚಾಟದಲ್ಲಿ ತೊಡಗಿ ಭಾರತವನ್ನು ರಣಭೂಮಿಯನ್ನಾಗಿ ಮಾಡಿದರು. ಕೊನೆಯದಾಗಿ ಆಂಗ್ಲರು ಭಾರತದ ಸಾರ್ವಭೌಮರಾಗಿ ಮೆರೆದರು.

2) ಯೂರೋಪಿಯನ್ನರ ಆಡಳಿತ ಪದ್ಧತಿ ಮತ್ತು ಅವರ ರಾಜಕೀಯ ವಿಚಾರಧಾರೆಗಳು ಭಾರತದ ರಾಜಕೀಯದ ಮೇಲೆ ಪ್ರಭಾವ ಬೀರಿದವು.

3) ಭಾರತೀಯರು ಯೂರೋಪಿಯನ್ನರ ಯುದ್ಧಕಲೆ ಮತ್ತು ರಾಜ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡರು.

4) ಭಾರತದಲ್ಲಿ ಕೋಮುವಾದ ಜನ್ಮ ತಾಳಲು ಬ್ರಿಟಿಷ್ ನೀತಿಯೇ ಕಾರಣವಾಯಿತು.

5) ಬ್ರಿಟಿಷರು ಭಾರತದಲ್ಲಿ ಕೋಮುವಾದದ ಬೀಜ ಬಿತ್ತಿ ವರ್ಗ ಸಂಘರ್ಷಕ್ಕೆ ಕಾರಣರಾದರು.

6) ಭಾರತದ ಮೆಣಸಿನಕಾಳು ಮತ್ತು ಮಸ್ಲಿನ್ ಬಟ್ಟೆಗೆ ಯೂರೋಪಿನಲ್ಲಿ ಬೇಡಿಕೆ ಹೆಚ್ಚಿತು