ಅರ್ಥ:

‘ಹಣದುಬ್ಬರ’ ಅಥವಾ ‘ಹಣದ ಅತಿಪ್ರಸರಣ’ ಎಂಬ ಪದಕ್ಕೆ ಸರಿಯಾದ ಹಾಗೂ ಸಮರ್ಪಕವಾದ ವ್ಯಾಖ್ಯೆಯನ್ನು ನೀಡುವುದು ಬಹು ಕಠಿಣ. ವಿವಿಧ ಅರ್ಥಶಾಸ್ತ್ರಜ್ವರು ತಮ್ಮದೇ ಆದ ರೀತಿಯಲ್ಲಿ ಅದರ ವ್ಯಾಖ್ಯೆಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ಒಂದೇ ಸಮನೆ ಬೆಲೆಗಳ ಏರಿಕೆಯ ಸ್ಥಿತಿಗೆ ‘ಹಣದುಬ್ಬರ’ ಎಂದು ಹೆಸರು. ಅಂದರೆ ಹಣದ ಮೌಲ್ಯವು ಇಳಿಯುತ್ತಿರುವ ಹಾಗೂ ಸರಕು ಮತ್ತು ಸೇವೆಗಳ ಬೆಲೆಗಳು ಸತತವಾಗಿ ಏರುತ್ತಿರುವ ಸ್ಥಿತಿಯೇ ಹಣದುಬ್ಬರ. ಹಣದುಬ್ಬರದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದರ ಮೇಲಿರುವ ಪ್ರಮುಖ ವ್ಯಾಖ್ಯೆಗಳನ್ನು ಪರಿಶೀಲಿಸುವುದು ಅಗತ್ಯ.

ಪ್ರೊ || ಕ್ರೌಥರ್ : ಹಣದುಬ್ಬರವೆಂದರೆ ಹಣದ ಮೌಲ್ಯವು ಇಳಿಮುಖವಾಗುತ್ತಿರುವ ಮತ್ತು ಬೆಲೆಗಳು ಏರಿಕೆಯಾಗುತ್ತಿರುವ ಪರಿಸ್ಥಿತಿಯಾಗಿದೆ.

ಪ್ರೊ|| ಕೆಮ್ಮರ್ : ಉದ್ಯಮದ ಭೌತಿಕ ಗಾತ್ರಕ್ಕೆ ಹೋಲಿಸಿದಂತೆ ಮಿತಿಮೀರಿದ ಪ್ರಮಾಣದ ಹಣದ ಇರುವಿಕೆಯೇ ಹಣದುಬ್ಬರ.

ಪ್ರೊ|| ಕೋಲ್‌ಬರ್ನ್ : ಅತಿ ಹೆಚ್ಚು ಪ್ರಮಾಣದ ಹಣವು ಅತಿ ಕಡಿಮೆ ಸರಕುಗಳನ್ನು ಬೆನ್ನಟ್ಟುವ ಸ್ಥಿತಿಯೇ ಹಣದುಬ್ಬರವಾಗಿದೆ.

ಮಿಲ್ಟನ್ ಫ್ರೀಡ್‌ಮನ್ : ಹಣದ ಮೌಲ್ಯವು ಇಳಿಯುತ್ತಿರುವ ಪರಿಸ್ಥಿತಿ, ಅಂದರೆ ಸರಕು ಮತ್ತು ಸೇವೆಗಳ ಬೆಲೆಗಳು ಏರುತ್ತಿರುವ ಪರಿಸ್ಥಿತಿಯೇ ಹಣದುಬ್ಬರ.

ಹಣದುಬ್ಬರದ ವಿಧಗಳು (Types of Inflation)

ಹಣದುಬ್ಬರದ ಸ್ವರೂಪ ಮತ್ತು ಕಾರಣಗಳನ್ನು ಅನ್ವೇಷಿಸುವಾಗ ಅದನ್ನು ಎರಡು ವಿಶಾಲ ಭಾಗಗಳಾಗಿ

ವಿಭಜಿಸಬಹುದು ಅವುಗಳೆಂದರೆ,

1. ಬೇಡಿಕೆ ಪ್ರೇರಿತ ಹಣದುಬ್ಬರ ಅಥವಾ ಬೇಡಿಕೆ ಎಳೆತದ ಹಣದುಬ್ಬರ

2. ವೆಚ್ಚ ಪ್ರೇರಿತ ಹಣದುಬ್ಬರ ಅಥವಾ ವೆಚ್ಚ ತಳ್ಳುವ ಹಣದುಬ್ಬರ

ಅ. ಬೇಡಿಕೆ ಎಳೆತದ ಹಣದುಬ್ಬರ (Demand -Pull Inflation)

ಉತ್ಪಾದನೆ ಕಡಿಮೆಯಾಗಿರುವ ಅಥವಾ ಉತ್ಪಾದನೆಯು ಸ್ಥಗಿತವಾಗಿರುವ ಸಂದರ್ಭದಲ್ಲಿ ಬೇಡಿಕೆಯು ನಿರಂತರವಾಗಿ ಮತ್ತು ರಭಸವಾಗಿ ಏರುತ್ತಿದ್ದರೆ ಹಣದುಬ್ಬರ ಉಂಟಾಗುತ್ತದೆ. ಇದೇ ‘ಬೇಡಿಕೆ ಎಳೆತದ ಹಣದುಬ್ಬರ’. ಏಕೆಂದರೆ ಆಗಾಧವಾಗಿ ಏರುತ್ತಿರುವ ಬೇಡಿಕೆಯು ಬೆಲೆಗಳನ್ನು ಮೇಲಕ್ಕೆ ಎಳೆಯುತ್ತದೆ. ಸರಕುಗಳ ಪೂರೈಕೆಗಿಂತ ಹಣದ ಪೂರೈಕೆಯು ಅತಿ ಹೆಚ್ಚಾಗಿರುವುದುದೇ ಬೆಲೆ ಏರಿಕೆಗೆ ಕಾರಣವೆಂಬುದು ಬೇಡಿಕೆ-ಎಳೆತ ಹಣದುಬ್ಬರದ ಸಿದ್ಧಾಂತವಾಗಿದೆ. ಹಣದ ಪೂರೈಕೆಯ ಹೆಚ್ಚಳದಿಂದ ಸ್ವಾಭಾವಿಕವಾಗಿ ಜನರ ಆದಾಯಗಳು ಜಾಸ್ತಿಯಾಗುತ್ತದೆ. ಹಣದ ಪೂರೈಕೆ ಮತ್ತು ಆದಾಯಗಳ ಹೆಚ್ಚಳದ ಜೊತೆಗೆ ಉತ್ಪಾದನೆಯೂ ಹೆಚ್ಚಿದರೆ ಬೆಲೆಯ ಏರಿಕೆಗೆ ಒತ್ತಡ ಗೋಚರಿಸುವುದಿಲ್ಲ. ಆದರೆ ಜನರ ಆದಾಯದ ಮತ್ತು ಬೇಡಿಕೆಯ ಮಟ್ಟದಲ್ಲಿ ಏರಿಕೆಯಾದಾಗ ಅದಕ್ಕೆ ತಕ್ಕನಾಗಿ ಉತ್ಪಾದನೆ ಮತ್ತು ಪೂರೈಕೆಗಳು ಏರದಿದ್ದರೆ ಹಣದುಬ್ಬರ ಸಂಭವಿಸುತ್ತದೆ. ಹೀಗೆ ಬೆಲೆಗಳ ಏರಿಕೆಗೆ ಹೆಚ್ಚಿದ ಬೇಡಿಕೆಯು ಪ್ರೇರಣೆಯನ್ನು ಒದಗಿಸುತ್ತದೆ.

ಆ. ವೆಚ್ಚ-ತಳ್ಳಿದ ಹಣದುಬ್ಬರ (Cost-push Inflation)

ಕೆಲವು ಸಂದರ್ಭಗಳಲ್ಲಿ ವೆಚ್ಚ ಹಾಗೂ ಉತ್ಪಾದನಾಂಗಗಳ ಬೆಲೆಯ ಹೆಚ್ಚಳದಿಂದ ಬೆಲೆ ಏರಿಕೆ ತಲೆದೋರಿರಬಹುದು. ಉದಾಹರಣೆಗೆ ಕಾರ್ಮಿಕ ಸಂಘಗಳ ಮುಷ್ಕರದ ಬೆದರಿಕೆಯಿಂದ ಮಾಲೀಕರು ವೇತನಗಳನ್ನು ಹೆಚ್ಚಿಸಬೇಕಾಗಬಹುದು. ಈ ಪರಿಣಾಮವಾಗಿ ಉತ್ಪಾದನಾ ವೆಚ್ಚ ಏರುವುದರಿಂದ ಹೆಚ್ಚಿನ ಬೆಲೆಯನ್ನು ನಿರ್ಧರಿಸಲೇಬೇಕಾಗುತ್ತದೆ. ಉದ್ಯಮಿಗಳು ಹೆಚ್ಚು ಲಾಭದ ದರವನ್ನು ನಿಗದಿಪಡಿಸಿ ಸರಕುಗಳ ಮಾರಾಟದಲ್ಲಿ ತೊಡಗಿದಾಗಲೂ ಬೆಲೆಗಳು ಏರುತ್ತವೆ. ಸರ್ಕಾರದಿಂದ ಹೊಸ ತೆರಿಗೆಗಳನ್ನು ವಿಧಿಸುವಿಕೆ ಹಾಗೂ ಅಸ್ತಿತ್ವದಲ್ಲಿರುವ ತೆರಿಗೆಗಳ ದರವನ್ನು ಹೆಚ್ಚಿಸುವಿಕೆಯು ಉತ್ಪಾದನಾ ವೆಚ್ಚವನ್ನು ಏರಿಸುವ ಮೂಲಕ ಬೆಲೆಯ ಹೆಚ್ಚಳದಲ್ಲಿ ಪರಿಣಮಿಸುತ್ತದೆ. ಹೀಗೆ ಏರಿದ ವೆಚ್ಚವು ಬೆಲೆಗಳನ್ನು ಮೇಲಕ್ಕೆ (ಏರಿಕೆಗೆ) ತಳ್ಳುವುದರಿಂದ ಇದಕ್ಕೆ ವೆಚ್ಚ-ತಳ್ಳಿದ ಹಣದುಬ್ಬರ ಎಂದು ಕರೆಯಲಾಗುತ್ತದೆ.

ಹಣದುಬ್ಬರದ ತೀವ್ರತೆಯನ್ನು ಆಧರಿಸಿ ಅದರಲ್ಲಿ ಇನ್ನೊಂದು ರೀತಿಯ ವಿಭಜನೆಯನ್ನು ಕಾಣಬಹುದಾಗಿದೆ.

1) ತೆವಳುವ ಹಣದುಬ್ಬರ (Creeping Inflation)

ಬೆಲೆಗಳು ಅತಿ ನಿಧಾನವಾಗಿ, ಬಹಳ ಕಡಿಮೆ ದರದಲ್ಲಿ ಏರುತ್ತಿದ್ದರೆ ಅದಕ್ಕೆ ತೆವಳುವ ಹಣದುಬ್ಬರವೆಂದು ಹೆಸರು.

2) ನಡೆಯುತ್ತಿರುವ ಹಣದುಬ್ಬರ (Walking Inflation) :

ಹಣದುಬ್ಬರ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಬೆಲೆಗಳು ಸ್ವಲ್ಪ ಹೆಚ್ಚಿನ ದರದಲ್ಲಿ ಏರುತ್ತಿರುವುದು ಗೋಚರಿಸತೊಡಗುತ್ತದೆ. ಈ ಸನ್ನಿವೇಶದಲ್ಲಿ ಸಾವಕಾಶವಾಗಿ ಮಗು ಆರಂಭದಲ್ಲಿ ನಡೆಯಲು ಪ್ರಾರಂಭಿಸಿದಂತೆ ಏರತೊಡಗುತ್ತವೆ. ಇದು ನಡೆಯುತ್ತಿರುವ ಹಣದುಬ್ಬರವಾಗಿದೆ.

3) ಓಡುತ್ತಿರುವ ಹಣದುಬ್ಬರ (Running Inflation) :

ಬೆಲೆಗಳು ನಿರಂತರವಾಗಿ ಅಪಾಯಕಾರಿ ಮಟ್ಟದಲ್ಲಿ ಏರುವ ಸನ್ನಿವೇಶವೇ ಓಡುತ್ತಿರುವ ಹಣದುಬ್ಬರ, ಈ ಸನ್ನಿವೇಶದಲ್ಲಿ ಬೆಲೆಗಳು ವೇಗದಿಂದ ಅಂದರೆ ಮಗು ನಡೆಯಲು ಕಲಿತ ನಂತರ ಓಡಲು ಹೇಗೆ ಪ್ರಾರಂಭಿಸುವುದೋ ಹಾಗೆಯೇ ಏರುತ್ತದೆ.

4) ನಾಗಾಲೋಟದ ಹಣದುಬ್ಬರ (Galloping Inflation) :

ಬೆಲೆಗಳು ಬಹಳ ಹೆಚ್ಚಿನ ದರದಲ್ಲಿ, ಎಲ್ಲ ನಿಯಂತ್ರಣ ವಿಧಾನಗಳನ್ನು ಮೀರಿ ರಭಸವಾಗಿ ಏರುತ್ತಿರುವ ಸ್ಥಿತಿಯೇ ನಾಗಾಲೋಟದ ಹಣದುಬ್ಬರ, ಜರ್ಮನಿಯಲ್ಲಿ 1923-24ರ ಅವಧಿಯಲ್ಲಿ ಸಂಭವಿಸಿದ ಬೆಲೆ ಏರಿಕೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಹಣದುಬ್ಬರದ ನಿಯಂತ್ರಣ ಅಥವಾ ಅನಿಯಂತ್ರಣದ ಮೇರೆಗೆ ಅದನ್ನು ಮತ್ತೂ ಒಂದು ವಿಧದಲ್ಲಿ ವರ್ಗಿಕರಿಸಬಹುದಾಗಿದೆ.
1.ತೆರೆದ ಹಣದುಬ್ಬರ (Open Inflation):

ಸರ್ಕಾರದ ನಿಯಂತ್ರಣಕ್ಕೆ ಒಳಗಾಗದೆ ಬೆಲೆಗಳು ಏರುವ ಸ್ಥಿತಿಗೆ ತೆರೆದ ಹಣದುಬ್ಬರ ಎಂದು ಹೆಸರು. ಇಲ್ಲಿ ಬೆಲೆಗಳು ಮುಕ್ತವಾಗಿ ಏರುತ್ತದೆ. ಹಣದುಬ್ಬರದ ನಿಯಂತ್ರಣಕ್ಕೆ ಸರಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ.

2.ಹತ್ತಿಕ್ಕಿದ ಹಣದುಬ್ಬರ (Suppressed Inflation):

ಸರ್ಕಾರದ ಬೆಲೆ ನಿಯಂತ್ರಣ ಕ್ರಮಗಳ ಮೂಲಕ ಹತೋಟಿಗೆ ಒಳಗಾದ ಬೆಲೆ ಏರಿಕೆಗೆ ಹತ್ತಿಕ್ಕಿದ ಹಣದುಬ್ಬರವೆಂದು ಹೆಸರು. ಬೆಲೆಗಳ ಏರಿಕೆಗೆ ಸೂಕ್ತ ಅವಕಾಶಗಳಿದ್ದರೂ ಸರ್ಕಾರದ ಕ್ರಮಗಳಿಂದ ಅದು ನಿಯಂತ್ರಿಸಲ್ಪಟ್ಟಿರುತ್ತದೆ.