1) ಸಾಮಾಜಿಕ ಜೀವನ:

ರಜಪೂತರ ಸಮಾಜದ ಮುಖ್ಯ ಲಕ್ಷಣವೆಂದರೆ ಜಾತಿ ಪದ್ಧತಿಯ ಪ್ರಾಧಾನ್ಯತೆ. ಚತುರ್ವಣ್ರಗಳಲ್ಲದೆ ಹಲವಾರು ಜಾತಿ ಉಪಜಾತಿಗಳೂ ಆಕಾಲದಲ್ಲಿ ಪ್ರಚಲಿತದಲ್ಲಿದ್ದವು. ರಜಪೂತ ಸಮಾಜದಲ್ಲಿ ಬ್ರಾಹ್ಮಣರು ಉನ್ನತಸ್ಥಾನವನ್ನು ಪಡೆದಿದ್ದರೆ ಶೂದ್ರರು ಕೆಳಸ್ಥರದಲ್ಲಿದ್ದರು. ಅಸ್ಪೃಶ್ಯರು ಗ್ರಾಮದ ಹೊರಗಡೆ ವಾಸಿಸುತ್ತಿದ್ದರು. ಜಾತಿಯ ಕಟ್ಟುಪಾಡುಗಳು ಬಿಗಿಯಾಗಿದ್ದವು. ಸಮಾಜದಲ್ಲಿ ಅಂತರ್ ಜಾತೀಯ ವಿವಾಹಗಳು ಚಾಲ್ತಿಯಲ್ಲಿದ್ದವು. ವೃತ್ತಿಗನುಗುಣವಾಗಿ ನೇಯ್ದೆ, ಅಕ್ಕಸಾಲಿಗ, ಗಾಣಿಗ, ಗೌಳಿಗ, ಬಡಗಿ ಇನ್ನೂ ಮುಂತಾದ ಉಪಜಾತಿಗಳು ಏರ್ಪಟ್ಟವು.

2) ಸ್ತ್ರೀಯರ ಸ್ಥಾನಮಾನ:

ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿದ್ದಿತು. ಪರ್ದಾಪದ್ಧತಿ ಇರಲಿಲ್ಲ. ಸ್ತ್ರೀಯರು ಸಾಮಾಜಿಕ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಬಹುದಿತ್ತು. ಕನೈಯು ತನ್ನ ಪತಿಯ ಆಯ್ಕೆಯಲ್ಲಿ ಸ್ವಾತಂತ್ರ್ಯವನ್ನು ಹೊಂದಿದ್ದಳು. ರಜಪೂತರಲ್ಲಿ ಸ್ವಯಂವರ ಪದ್ಧತಿ ರೂಢಿಯಲ್ಲಿತ್ತು. ಬಾಲ್ಯವಿವಾಹ ರೂಢಿಯಲ್ಲಿರಲಿಲ್ಲ. ಸ್ತ್ರೀಯರು ಸುಶಿಕ್ಷಿತರಾಗಿದ್ದು ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ಅನೇಕ ಸ್ತ್ರೀಯರು ಕವಿಗಳಾಗಿ, ವಿದ್ವಾಂಸರಾಗಿ ಹಾಗೂ ಬರಹಗಾರರಾಗಿ ಬೆಳಗಿದರು. ಆ ಕಾಲದ ಪ್ರಸಿದ್ದ ಸ್ತ್ರೀಯರೆಂದರೆ ಆವಂತಿ ಸುಂದರಿ, ಇಂದುಲೇಖ, ಮರುಳಾ, ಶೀಲಾ, ಸುಭದ್ರ, ಲಕ್ಷ್ಮಿ, ವಿಜ್ಜಿಕಾ, ಮೋರಿಕಾ, ಪದ್ಮಶ್ರೀ ಮತ್ತು ಮದಲಸಾ ಪ್ರಮುಖರಾದವರು. ರಜಪೂತರಲ್ಲಿ ‘ಜೋಹಾರ್ ಪದ್ಧತಿ ಇದ್ದಿತು. ಪರಕೀಯರ ದಾಳಿಯಿಂದ ಮಾನರಕ್ಷಿಸಿಕೊಳ್ಳಲು ರಜಪೂತ್ ಸ್ತ್ರೀಯರು ಸಾಮೂಹಿಕವಾಗಿ ಅಗ್ನಿಪ್ರವೇಶ ಮಾಡುವುದನ್ನು ಜೋಹಾರ್ ಪದ್ಧತಿ ಎಂದು ಕರೆಯಲಾಗಿದೆ. ಸತಿಸಹಗಮನ ಪದ್ಧತಿ ಸಹ ಆಚರಣೆಯಲ್ಲಿತ್ತು. ಗಂಡನ ಮರಣದ ನಂತರ ಅವನ ಹೆಂಡತಿ ಗಂಡನ ಚಿತೆಯಲ್ಲಿ ಹಾರಿ ಪ್ರಾಣಬಿಡುವುದನ್ನು ಸತಿಸಹಗಮನ ಎಂದು ಕರೆಯಲಾಗಿದೆ. ವಿಧವಾ ವಿವಾಹ ಜಾರಿಯಲ್ಲಿರಲಿಲ್ಲ. ಬಾಲ ವಿಧವೆಯರ ಜೀವನ ಅತ್ಯಂತ ದುಸ್ತರವಾಗಿದ್ದಿತು.

3) ಸಾಹಿತ್ಯದ ಬೆಳವಣಿಗೆ:

ರಜಪೂತರು ಶ್ರೇಷ್ಠ ವಿದ್ವಾಂಸರು ಹಾಗೂ ಬರಹಗಾರರು ಆಗಿದ್ದರು. ಜೊತೆಗೆ ಅನೇಕ ಸಾಹಿತಿಗಳಿಗೆ ಹಾಗೂ ಕವಿಗಳಿಗೆ ಪ್ರೋತ್ಸಾಹ ನೀಡಿದರು. ಹೀಗಾಗಿ ಇವರ ಅವಧಿಯಲ್ಲಿ ಅನೇಕ ಕೃತಿಗಳು ರಚಿಸಲ್ಪಟ್ಟವು. ಆ ಕಾಲದ ಪ್ರಮುಖ ಕೃತಿಗಳು ಹಾಗೂ ಕವಿಗಳ ಕುರಿತು ಈ ಕೆಳಗಿನಂತೆ ಬರೆಯಲಾಗಿದೆ.

 

ಕವಿಗಳು

ಕೃತಿಗಳು

1)  ಭಟ್ಟ

ರಾವಣವಧ

2) ಮಾಘ 

ಶಿಶುಪಾಲವಧೆ

3) ಶ್ರೀಹರ್ಷ 

 ನೈಷದ ಚರಿತೆ

4) ಪದ್ಮಗುಪ್ತ  

ನವಸಾಹಸಾಂಕ ಚರಿತ್ರ

5) ದಾಮೋದರ ಗುಪ್ತ 

ಕಲ್ತನಿಮಾತಾ

6) ಜಯದೇವ 

ಗೀತಗೋವಿಂದ

ಗದ್ಯ ಕೃತಿಗಳು

1) ದಂಡಿ 

ದಶಕುಮಾರ ಚರಿತ

2) ದಮ್ಮಪಾಲ 

ತಿಲಕಮಂಜರಿ

3) ಯಶಸ್ತಿಲಕ  

ವಾಸವದತ್ತ

4) ಸುಬಂಧು

ಕಾದಂಬರಿ

ನಾಟಕಗಳು

1) ಭವಭೂತಿ  ಮಾಲತಿಮಾಧವ, ಮಹಾವೀರ ಚರಿತ, ಉತ್ತರ ರಾಮ ಚರಿತ

2) ಆನಂದವರ್ಧನ  ಪ್ರಭೋದ ಚಂದ್ರ

3) ರಾಜಶೇಖರ ಕರ್ಪೂರ ಮಂಜರಿ

ಐತಿಹಾಸಿಕ ಕೃತಿಗಳು

1) ಕಲ್ಹಣ   ರಾಜತರಂಗಿಣಿ

2)  ಬಿಲ್ಹಣ ವಿಕ್ರಮಾಂಕ ದೇವ ಚರಿತ

3) ಸಂಧ್ಯಾಕಾರಿಂದಿತನ ರಾಮಚರಿತ

ವ್ಯಕ್ತಿ ಚರಿತ್ರೆ

1) ಚಾಂದ್ ಬರ್ದಾಯಿ-ಪೃಥ್ವಿರಾಜರಾಸೋ

2) ಹೇಮಚಂದ್ರ-  ಕುಮಾರಪಾಲ ಚರಿತ

ವೈದ್ಯಕೀಯ ಮತ್ತು ಖಗೋಳಶಾಸ್ತ್ರ

1) ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ

2) ವಾಗೃಟ – ಅಷ್ಟಾಂಗ ಸಂಗ್ರಹ

3) ಭಾಸ್ಕರಾಚಾರ್ಯ -ಸಿದ್ಧಾಂತ ಶಿರೋಮಣಿ

4) ಧಾರ್ಮಿಕ ನೀತಿ:

ರಜಪೂತರು ಬಹುದೇವತಾ ಆರಾಧಕರಾಗಿದ್ದರು. ಇವರು ಶಿವ, ಸೂರ್ಯ, ಕಾಳಿ, ದುರ್ಗಿ ಮೊದಲಾದ ದೇವರುಗಳನ್ನು ಪೂಜಿಸುತ್ತಿದ್ದರು. ದಸರಾ, ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನು ಆಚರಿಸುತ್ತಿದ್ದರು. ರಜಪೂತರು ಹಿಂದೂ ಮತಾವಲಂಬಿಗಳಾಗಿದ್ದರೂ ಜೈನ ಹಾಗೂ ಬೌದ್ಧ ಧರ್ಮವನ್ನು ಕಡೆಗಣಿಸಿರಲಿಲ್ಲ.

5) ಕಲೆ ಹಾಗೂ ವಾಸ್ತುಶಿಲ್ಪ:

ರಜಪೂತರು ಕಲೋಪಾಸಕರು, ವಾಸ್ತುಶಿಲ್ಪ ಪ್ರಿಯರು ಹಾಗೂ ಕಲಾಪರಂಪರೆಗೆ ಹೆಚ್ಚು ಆದ್ಯತೆ ನೀಡಿದವರೂ ಆಗಿದ್ದರು. ಇವರು ಅನೇಕ ಕೋಟೆಕೊತ್ತಲಗಳು, ಕಟ್ಟಡಗಳು, ದೇವಾಲಯಗಳು, ಅರಮನೆಗಳು, ಸ್ನಾನ ಘಟ್ಟಗಳು ಹಾಗೂ ನೀರಾವರಿ ಆಣೆಕಟ್ಟುಗಳನ್ನು ನಿರ್ಮಿಸಿದರು. ಇವರು ನಿರ್ಮಿಸಿದ ಪ್ರಮುಖ ಸ್ಮಾರಕಗಳು ಚಿತ್ತೋರಗಡ್, ರಣಥಂಬೂರ್, ಅಮೀರ್‌ಗಡ್, ಅಂಬೇರ ಹಾಗೂ ಚೋದಪುರಗಳಲ್ಲಿ ಕಂಡು ಬಂದಿವೆ. ಇವರು ನಿರ್ಮಿಸಿದ ಪ್ರಮುಖ ಸ್ಮಾರಕಗಳೆಂದರೆ

1) ಚಿತ್ತೂರಿನ ಒಳಗಡೆ ರಾಣ ಕಂಬನು ನಿರ್ಮಿಸಿದ ವಿಜಯಸ್ತಂಭ

2) ಉದಯಪುರದ ಜಲಾವೃತ ಅರಮನೆ

3) ಜಯಪುರದ ಹವಾಮಹಲ್

4) ಗ್ವಾಲಿಯರ್‌ನಲ್ಲಿರುವ ಮಾನಸಿಂಗ್ ಅರಮನೆ ಮುಂತಾದವುಗಳು ರಜಪೂತರ ಕಲಾ ಅಭಿರುಚಿಗೆ ಜೀವಂತ ಸಾಕ್ಷಿಯಾಗಿವೆ ಉದಯಪುರದ ಉದಯೇಶ್ವರ ದೇವಾಲಯ, ಮೇವಾಡದ ಕಿರಾಡದಲ್ಲಿರುವ ಸೋಮೇಶ್ವರ ದೇವಾಲಯ, ಮಾರವಾಡದ ಒಸಿಯಾದ ಸೂರ್ಯದೇವಾಲಯ, ಕಾಥೇವಾಡದ ಸೆಜೆಕಪುರದ ನವಲಖ ದೇವಾಲಯ, ಅಭಿಪರ್ವತದ ಮೇಲಿನ ದಿಲ್ವಾರ, ವಿಮಲಶಾಹಿ ದೇಗುಲಗಳು, ಮುಂಬೈನ ಹತ್ತಿರವಿರುವ ಅಂಬರನಾಥದ ಮಹದೇವ ದೇವಾಲಯ, ಬೃಂದಾವನದ ಗೋವಿಂದದೇವ ದೇಗುಲ, ನಾಸಿಕ್ ಜಿಲ್ಲೆಯ ಸಿನ್ನಾರನ ಗಂಡೇಶ್ವರ ದೇವಾಲಯ ಮುಂತಾದವು ಭಾರತದ ಅತ್ಯಂತ ಚಲುವಿನ ದೇಗುಲಗಳು.

1) ಚಿತ್ತೂರಿನ ಒಳಗಡೆ ರಾಣ ಕಂಬನು ನಿರ್ಮಿಸಿದ ವಿಜಯಸ್ತಂಭ
2) ಉದಯಪುರದ ಜಲಾವೃತ ಅರಮನೆ
3) ಜಯಪುರದ ಹವಾಮಹಲ್
4) ಗ್ವಾಲಿಯರ್‌ನಲ್ಲಿರುವ ಮಾನಸಿಂಗ್ ಅರಮನೆ
1) ಖುಜರಾಹೋ

ಇದು ಮಧ್ಯಪ್ರದೇಶದ ಬಂದೇಲಖಂಡದ ಚಿತ್ತಾಪುರ ಜಿಲ್ಲೆಯ ಖುಜರಾಹೋದಲ್ಲಿ ಇದೆ. ಇದು ರಾಜಪೂತರ ಪ್ರಮುಖ ವಾಸ್ತುಶಿಲ್ಪದಲ್ಲಿ ಅತ್ಯಂತ ಪ್ರಮುಖವಾದುದು. ಇಲ್ಲಿ 8 ಚದರ ಕಿ.ಮೀ ವ್ಯಾಪ್ತಿಯಲ್ಲಿ 85ಕ್ಕೂ ಹೆಚ್ಚು ದೇವಾಲಯಗಳ ಸಂಕೀರ್ಣವಿದೆ. ಇವುಗಳಲ್ಲಿ ಈಗ ಕೇವಲ 30 ದೇವಾಲಯಗಳು ಮಾತ್ರ ಉಳಿದಿವೆ. ಖಜರಾಹೋದಲ್ಲಿನ ಬಹುತೇಕ ದೇವಾಲಯಗಳನ್ನು ಬಂದೇಲ್ ಖಂಡದ ಚಾಂದೇಲರು ನಿರ್ಮಿಸಿದ್ದಾರೆ. ಈ ದೇವಾಲಯಗಳು ನಾಗರಶೈಲಿಯಲ್ಲಿ ಇವೆ. ಈ ದೇವಾಲಯಗಳು ಶೃಂಗಾರ ಶೈಲಿಗೆ ಹೆಸರಾಗಿವೆ. ಕಲಾತ್ಮಕ ದೃಷ್ಟಿಯಿಂದ ನೋಡಿದಾಗ ಚಾಂದೇಲರ ಕಾಲವು ಅತ್ಯಂತ ವೈಭವದ ಶಿಖರವನ್ನು ಮುಟ್ಟಿದ್ದಿತು ಎಂದು ಹೇಳಬಹುದಾಗಿದೆ. ಇಲ್ಲಿನ ದೇವಾಲಯಗಳು ದೊಡ್ಡ ಶಿಖರದ ಸುತ್ತ ಚಿಕ್ಕ ಶಿಖರಗಳನ್ನು ಹೊಂದಿವೆ. ಗಾತ್ರ ಹಾಗೂ ಸಾಮ್ಯತೆಯ ದೃಷ್ಟಿಯಿಂದ ಖುಜರಾಹೋ ದೇವಾಲಯಗಳನ್ನು 3 ಭಾಗಗಳನ್ನಾಗಿ ವಿಂಗಡಿಸಲಾಗಿದೆ.

1) ಪಶ್ಚಿಮ ದೇವಾಲಯದ ಸಮುಚ್ಚಯ:

ಪಶ್ಚಿಮ ದೇವಾಲಯದ ಸಮುಚ್ಛಯವು ಲಕ್ಷ್ಮಣ, ವರಾಹ, ಮಾತಂಗೇಶ್ವರ, ವಿಶ್ವನಾಥ, ನಂದಿ, ಮಹಾದೇವ, ಜಗದಂಬ, ಚಿತ್ರಗುಪ್ತ, ಚತುರ್ಬುಜ ಮಹಾದೇವ ಮುಂತಾದ ದೇವಾಲಯಗಳನ್ನು ಹೊಂದಿದೆ.

2) ಪೂರ್ವದೇವಾಲಯದ ಸಮುಚ್ಚಯ:

ಈ ಸಮುಚ್ಚಯವು ಬ್ರಹ್ಮ ಜವರಿ, ಗಂಟೆ ಹಾಗೂ ವರುಣ ದೇವಾಲಯಗಳನ್ನು ಹೊಂದಿದೆ.

3) ದಕ್ಷಿಣ ದೇವಾಲಯ ಸಮುಚ್ಚಯ

ಇಲ್ಲಿ ದುಲ್‌ಹಾದೇವ್ ಮತ್ತು ಚತುರ್ಬುಜ ದೇವಾಲಯಗಳಿವೆ.

ರಜಪೂತರ ಕಲಾನೈಪೂಣ್ಯ ಕಂಡುಬರುವುದು ಕಂದರಿಯಾ ಮಹಾದೇವ ದೇವಾಲಯದಲ್ಲಿ ಎಂದು ಹೇಳಬಹುದು. ಇದು 101 ಅಡಿ ಉದ್ದ 66 ಅಡಿ ಅಗಲ ಹಾಗೂ 116 ಅಡಿ ಎತ್ತರವಾಗಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕಂಬಗಳನ್ನು ಹೊಂದಿದೆ. ಇಲ್ಲಿ ಪೌರಾಣಿಕ ಕಥೆಗಳು, ರತಿಕ್ರೀಡೆಗಳು, ನಾಗ-ನಾಗಿನಿಯರ ಚಿತ್ರಗಳು ಹಾಗೂ ಪಕ್ಷಿಗಳನ್ನು ಕೆತ್ತಿದ್ದಾರೆ.

2) ಕೋನಾರ್ಕ Konark

ಇದು ಓರಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿದೆ. ಇಲ್ಲಿನ ವಿಶ್ವವಿಖ್ಯಾತ ಸೂರ್ಯ ದೇವಾಲಯವು ನೋಡುಗರ ಮನಸೂರೆಗೊಳ್ಳುತ್ತದೆ. ಈ ದೇವಾಲಯವನ್ನು ಪೂರ್ವದ ಗಂಗರಸ 1ನೆಯ ನರಸಿಂಹದೇವನು ಕ್ರಿ.ಶ1238-64 ಅವಧಿಯಲ್ಲಿ ನಿರ್ಮಿಸಿದನು. ಈ ದೇವಾಲಯವನ್ನು ಸೂರ್ಯದೇವನಿಗೆ ಅರ್ಪಿಸಲಾಗಿದೆ. ಈ ದೇವಾಲಯದ ವೈಶಿಷ್ಟ್ಯವೆಂದರೆ, ಇದನ್ನು ರಥದ ಮಾದರಿಯಲ್ಲಿ ನಿರ್ಮಿಸಿದುದು. ದೇವಾಲಯದ ತಳಭಾಗದಲ್ಲಿ 24 ಬೃಹತ್ ಚಕ್ರಗಳನ್ನು ಕೆತ್ತಲಾಗಿದೆ. ಇದರ ಮುಂಬಾಗದಲ್ಲಿ 7 ಕುದುರೆಗಳನ್ನು ಕೆತ್ತಲಾಗಿದೆ. ದೇವಾಲಯದ ಗೋಪುರವು 227ಅಡಿ ಎತ್ತರವಾಗಿದೆ. ದೇವಾಲಯದ ಗೋಡೆಗಳು ಅನೇಕ ಶಿಲ್ಪಗಳಿಂದ ಶೃಂಗಾರಗೊಂಡಿದೆ. ಈ ದೇವಾಲಯದ ಗೋಡೆಯ ಮೇಲಿರುವ ರತಿ ಕ್ರೀಡೆಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ದೇವಾಲಯದೊಳಗೆ ಪ್ರವೇಶಿಸಲು ನಾಲ್ಕು ಕಡೆಗಳಿಂದ ನಾಲ್ಕು ಮಹಾದ್ವಾರಗಳಿವೆ. ಅದರ ಗರ್ಭಗುಡಿಯ ಮೇಲೆ 3 ಸೂರ್ಯದೇವನ ವಿಗ್ರಹಗಳನ್ನು ಕೆತ್ತಲಾಗಿದೆ. ಅವುಗಳನ್ನು ಹೇಗೆ ನಿರ್ಮಿಸಲಾಗಿದೆಂಯೆಂದರೆ, ಸೂರ್ಯೋದಯ, ಮದ್ಯಾಹ್ನ ಹಾಗೂ ಸೂರ್ಯಸ್ತನ ಕಾಲದಲ್ಲಿ ಸೂರ್ಯನ ಕಿರಣಗಳು ಅವುಗಳ ಮೇಲೆ ಬೀಳುತ್ತವೆ. ಇಲ್ಲಿರುವ ಬೃಹತ್ ಸೂರ್ಯನ ಚಕ್ರ ಎಲ್ಲರ ಗಮನವನ್ನು ಸೆಳೆಯುತ್ತದೆ. ಇಲ್ಲಿ ಒಟ್ಟು 28ದೇವಾಲಯಗಳಿದ್ದರೂ ಅವುಗಳಲ್ಲಿ ಸೂರ್ಯ ದೇವಾಲಯವೇ ಅತ್ಯಂತ ದೊಡ್ಡದಾಗಿದೆ. ಇದನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಈ ಸೂರ್ಯ ದೇವಾಲಯವನ್ನು “ಬ್ಲಾಕ್ ಪಗೋಡ” ಎಂದು ಕರೆಯಲಾಗುತ್ತಿದೆ.