ಪ್ರಯಾಣ ಮಾಡುವ ಎಲ್ಲರನ್ನೂ ಪ್ರವಾಸಿಗರು ಎಂದು ಪರಿಗಣಿಸಲು ಬರುವುದಿಲ್ಲ. ಯಾರು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರೋ ಅವರನ್ನು ಮಾತ್ರ ಪ್ರವಾಸಿಗರು ಎಂದು ಹೇಳಬಹುದು.
1. ಪ್ರಯಾಣಿಕರು: ತಮ್ಮ ಕೆಲಸ, ಸಂಬಳ ಹಾಗೂ ವಾಸಸ್ಥಾನಗಳನ್ನು ಅರಸಿ ಪ್ರಯಾಣ ಮಾಡುವವರನ್ನು ಪ್ರಯಾಣಿಕರು ಎಂದು ಕರೆಯಬಹುದಾಗಿದೆ. ಇವರು ಯಾವುದೇ ಮನರಂಜನೆ, ವಿರಾಮ ಹಾಗೂ ನಿಖರವಾದ ಉದ್ದೇಶಗಳಿಗಾಗಿ ಪ್ರಯಾಣಿಸುವವರಲ್ಲ. ಇವರಿಗೆ ತಾವು ಪ್ರಯಾಣಿಸುವ ದೂರ ಹಾಗೂ ಸ್ಥಳದ ಬಗ್ಗೆ ನಿರ್ಬಂಧವಿರುವುದಿಲ್ಲ.
2. ಪ್ರವಾಸಿಗರು: ಒಬ್ಬ ವ್ಯಕ್ತಿ ಸಂತೋಷ, ಮನರಂಜನೆ, ವಿರಾಮ ಹಾಗೂ ಕ್ರೀಡಾ ಉದ್ದೇಶಗಳನ್ನು ಇಟ್ಟುಕೊಂಡು ಪ್ರಯಾಣಿಸಿದರೆ ಅವನನ್ನು ಪ್ರವಾಸಿಗ ಎಂದು ಕರೆಯಬಹುದಾಗಿದೆ. ಅಂತವರು ತಾವು ತಮ್ಮ ಮೂಲ ವಾಸ ಸ್ಥಳದಿಂದ ಹೊರಗೆ ಕನಿಷ್ಠ 24 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಹೋಗಿ ಸಂತೋಷವಾಗಿ ಕಾಲ ಕಳೆಯುತ್ತಾರೆ. ಇವರು ತಮ್ಮ ಸ್ವಂತ ಖರ್ಚಿನಿಂದಲೇ ಪ್ರವಾಸವನ್ನು ಕೈಗೊಂಡು ವಿರಾಮದಲ್ಲಿ ತೊಡಗುತ್ತಾರೆ. ಇವರು ಸ್ವಂತ ಸಂಪಾದನೆಗೆ ಬೇರೆಡೆಗೆ ಹೋದವರಲ್ಲ ಇವರಿಗೆ ಯಾವುದೇ ಸ್ವಂತ ಮನೆಗಳು ಅಲ್ಲಿ ಇರುವುದಿಲ್ಲ. ಇವರು ತಾತ್ಕಾಲಿಕವಾಗಿ ನೆಲೆ ನಿಂತು ಮತ್ತೆ ತಮ್ಮ ಸ್ವಂತ ಸ್ಥಳಕ್ಕೆ ಬರುತ್ತಾರೆ.
3. ವಿಹಾರಿಗಳು: 24 ಗಂಟೆಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ತಂಗುವ ತಾತ್ಕಾಲಿಕ ಸಂದರ್ಶಕವನ್ನು ವಿಹಾರಿಗಳು ಎಂದು ಕರೆಯುವರು. ಇವರು ತಮ್ಮ ವಾಸ ಸ್ಥಳದಿಂದ ಹೊರಟು 24 ಗಂಟೆಗಳ ಅವಧಿಯ ಒಳಗೆ ತಮ್ಮ ನಿವಾಸವನ್ನು ಬಂದು ಸೇರಿಕೊಳ್ಳುತ್ತಾರೆ. ಉದಾ: ಶಿವಮೊಗ್ಗದಿಂದ ಹೊರಟ ಸಂದರ್ಶಕನು ಅದೇ ದಿನ ಜೋಗ ಜಲಪಾತವನ್ನು ನೋಡಿಕೊಂಡು ಮತ್ತೆ ಶಿವಮೊಗ್ಗಕ್ಕೆ ಹಿಂತಿರುಗುತ್ತಾನೆ. ವಿಮಾನಯಾನ ಮಾಡುವವರು ನೌಕಯಾನಿಗಳು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ.
4. ಸ್ವದೇಶಿ ಪ್ರವಾಸಿಗರು: ದೇಶದ ಪರಿಮಿತಿ ಒಳಗೆ ತನ್ನ ಸ್ವಸ್ಥಾನದಿಂದ ಹೊರಟು 24 ಗಂಟೆಗಳಿಗಿಂತ ಹೆಚ್ಚು ಹಾಗೂ 12 ತಿಂಗಳುಗಳ ಒಳಗೆ ಹೊರಗೆ ಹೋಗಿ ವಿರಾಮ ಅಥವಾ ಸಂತೋಷದಿಂದ ಕಾಲ ಕಳೆದು ಬರುವ ಪ್ರವಾಸಿಗನನ್ನು ಸ್ವದೇಶಿ ಪ್ರವಾಸಿಗ ಎಂದು ಕರೆಯಲಾಗಿದೆ ಈ ರೀತಿ ಪ್ರಯಾಣವನ್ನು ಮಾಡುವವರು ಕಡ್ಡಾಯವಾಗಿ ವೀಸಾ, ವಿದೇಶಿ ಹಣ ಹಾಗೂ ಪಾಸ್‌ಪೋರ್ಟ್‌ನ್ನು ಪಡೆಯಬೇಕಾಗಿಲ್ಲ.
5. ವಿದೇಶಿ ಪ್ರವಾಸಿಗರು: ಒಬ್ಬ ವ್ಯಕ್ತಿ ತನ್ನ ದೇಶದ ಗಡಿ ಭಾಗವನ್ನು ದಾಟಿಕೊಂಡು ಹೋಗಿ ವಿದೇಶದಲ್ಲಿ ಕನಿಷ್ಟ 24 ಗಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ಪ್ರವಾಸ ಕೈಗೊಂಡರೆ ಆತನನ್ನು ವಿದೇಶಿ ಪ್ರವಾಸಿಗ ಎಂದು ಕರೆಯುತ್ತಾರೆ. ಈತ ಕನಿಷ್ಟ 12 ತಿಂಗಳುಗಳ ಕಾಲ ವಿದೇಶಗಳಲ್ಲಿ ವಿಹಾರ ಮಾಡಬೇಕೆ ಹೊರತು ಯಾವುದೇ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಬಾರದು. ಇವರಿಗೆ ವೀಸಾ, ಪಾಸ್‌ಪೋರ್ಟ್ ಹಾಗೂ ವಿದೇಶಿ ಕರೆನ್ಸಿ ಕಡ್ಡಾಯವಾಗಿ ಬೇಕೇ ಬೇಕು.
6. ಹಂಗಾಮಿ ಅತಿಥಿ: ಒಬ್ಬ ಪ್ರವಾಸಿಯು ಒಂದು ದೇಶದಿಂದ ಬೇರೊಂದು ದೇಶಕ್ಕೆ ಹೋಗುವಾಗ ಕನಿಷ್ಟ 12 ಗಂಟೆಗಳಿಗಿಂತಲೂ ಕಡಿಮೆ ಅವಧಿಯವರೆಗೆ ಉಳಿದುಕೊಳ್ಳುವವರನ್ನು ಹಂಗಾಮಿ ಅತಿಥಿ ಎಂದು ಕರೆಯುತ್ತಾರೆ. ಉದಾ: ಪ್ರವಾಸಿ ಚೀನಾ ದೇಶಕ್ಕೆ ಹೋಗುವಾಗ ಭಾರತದ ದೆಹಲಿಯಲ್ಲಿ ಇಳಿದು ಕೆಲವು ತಾಸುಗಳವರೆಗೆ ಸುತ್ತಾಡಿ ಎಲ್ಲಿಯೂ ನಿಲ್ಲದೆ ಚೀನಾಕ್ಕೆ ಹೋದರೆ ಅವನನ್ನು ಹಾದುಹೋಗುವ ಸಂದರ್ಶಕ ಎಂದು ಕರೆಯುತ್ತಾರೆ.
7. ವಲಸಿಗ: ಒಬ್ಬ ಪ್ರವಾಸಿಗನು ಭಾರತಕ್ಕೆ ಬಂದು ಒಂದು ವರ್ಷವಿಡೀ ಇಲ್ಲಿಯೇ ಉಳಿದುಕೊಂಡರೆ ಅವನು ಪ್ರವಾಸಿಗ ಅನಿಸಿಕೊಳ್ಳದೆ ವಲಸಿಗನೆಂದು ಕರೆಸಿಕೊಳ್ಳುತ್ತಾನೆ.
ಒಬ್ಬ ವ್ಯಕ್ತಿ ಪ್ರವಾಸಕ್ಕೆ ಹೋಗುತ್ತಾನೆ ಎಂದರೆ ಅವನು ಸಂತೋಷ, ವಿನೋದ ಹಾಗೂ ವಿರಾಮವನ್ನು ಪಡೆಯಲು ಕಾತುರನಾಗಿದ್ದಾನೆ ಎಂದರ್ಥ. ಇದರೊಂದಿಗೆ ಆತ ವಿರಾಮದ ಸಮಯವನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಾನೆ. ತಾನು ವಾರವಿಡೀ ದುಡಿದು ದಣಿದಿದ್ದ ಕಾರಣದಿಂದ ಅವನು ದಣಿವಾರಿಸಿಕೊಳ್ಳಲು ಬಯಸುತ್ತಾನಲ್ಲದೆ ಹೊಸ ಚೈತನ್ಯ ಪಡೆಯುವ ಆಸೆಯನ್ನು ಹೊಂದಿರುತ್ತಾನೆ.