ಪೀಠಿಕೆ:

ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಲು ಭಾರತ ಸರ್ಕಾರವು 1945ರಲ್ಲಿ ಸರ್‌.ಜಾನ್ ಸಾರ್ಜೆಂಟ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಾರ್ಜೆಂಟ್ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ 1958 ರಲ್ಲಿ ಸಾರಿಗೆ ಸಚಿವಾಲಯವು ಪ್ರತ್ಯೇಕ ಪ್ರವಾಸ ಉದ್ಯಮ ಇಲಾಖೆಯನ್ನು ರಚಿಸಿತು. ಈ ಪ್ರವಾಸೋದ್ಯಮ ಇಲಾಖೆಯು ಕಾಲಕಾಲಕ್ಕೆ ಪ್ರವಾಸೋದ್ಯಮದ ಬೆಳವಣಿಗೆಯ ಕುರಿತು ಅನೇಕ ಕಾನೂನುಗಳು, ನೀತಿ ನಿಯಮಗಳು ಹಾಗೂ ಸಲಹೆ ಸೂಚನೆಗಳನ್ನು ಪಾಸು ಮಾಡಿತು. ಪರಿಣಾಮವಾಗಿ ಪ್ರವಾಸೋದ್ಯಮ ಇಲಾಖೆಯು ದೆಹಲಿ, ಕಲ್ಕತ್ತಾ, ಮುಂಬೈ ಹಾಗೂ ಮದ್ರಾಸ್‌ಗಳಲ್ಲಿ ತನ್ನ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿತು. ಈ ಕೇಂದ್ರಗಳಲ್ಲಿ ಪ್ರವಾಸೋದ್ಯಮದ ಕುರಿತು ಪ್ರಚಾರ ಕೈಗೊಳ್ಳಲಾಯಿತು. ಮುಂದೆ 1963ರಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಎಲ್‌.ಕೆ.ಜಾ ಸಮಿತಿ ನೇಮಕವಾಯಿತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಇಟ್ಟುಕೊಂಡು 1966ರಲ್ಲಿ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಯನ್ನು   ಸ್ಥಾಪಿಸಲಾಯಿತು. ITDC ಯು ಭಾರತೀಯ ರೈಲ್ವೆ ಇಲಾಖೆಯ ಸಹಭಾಗಿತ್ವದೊಂದಿಗೆ ಋತುಮಾನದ ಪ್ರವಾಸಗಳು, ಪ್ಯಾಕೇಜ್ ಪ್ರವಾಸ, ಕ್ರೀಡೆ ಹಾಗೂ ಜಾತ್ರಾ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿತು. ಈ ನಿಟ್ಟಿನಲ್ಲಿ ಅಶೋಕ ಗ್ರೂಪ್‌ ಆಫ್‌ ಹೋಟೆಲ್‌ನ ಪ್ರಯತ್ನ ಶ್ಲಾಘನೀವಾದುದು. ಅದು ಪ್ರವಾಸಿಗರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತ ಪ್ರವಾಸಿಗರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಈ ಹಿಂದೆ ಇದ್ದ ಪ್ರವಾಸೋದ್ಯಮ ಇಲಾಖೆಯ ಸಾರಿಗೆ ಸಚಿವಾಲಯದ ಸಹಭಾಗಿತ್ವವನ್ನು ರದ್ದುಗೊಳಿಸಿ 1967ರಲ್ಲಿ ಪ್ರತ್ಯೇಕವಾದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಸೃಷ್ಟಿಸಲಾಯಿತು. ಭಾರತದ ಪ್ರವಾಸೋದ್ಯಮವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ 1982ರ ಪ್ರವಾಸೋದ್ಯಮ ನೀತಿ ಹಾಗೂ ರಾಷ್ಟ್ರೀಯ ಪ್ರವಾಸ ಉದ್ಯಮ ಸಮಿತಿ-1986.

1. 1982ರ ಪ್ರವಾಸೋದ್ಯಮ ನೀತಿ (Tourism Policy of 1982)

1982 ರಲ್ಲಿ ಭಾರತೀಯ ಪ್ರವಾಸೋದ್ಯಮ ನೀತಿಯು ದೇಶದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ, ಉತ್ತೇಜಿಸುವ ಹಾಗೂ ಪ್ರದರ್ಶಿಸುವ ಗುರಿಯನ್ನು ಹೊಂದಿದ್ದ ಪ್ರಥಮ ಸಮಗ್ರ ನೀತಿಯಾಗಿದೆ. ಈ ನೀತಿಯು ಸಾಮಾಜಿಕ- ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪ್ರವಾಸಿಗರಿಗೆ ಮೂಲ ಸೌಕರ್ಯ, ಸುರಕ್ಷತೆ ಹಾಗೂ ಸಹಕಾರದ ಮೇಲೆ ಕೇಂದ್ರಿಕರಿಸಿತು. ಈ ನೀತಿಯನ್ನು ಪ್ರಥಮ ಬಾರಿಗೆ ದೇಶದಲ್ಲಿ ಪರಿಚಯಿಸಿದವರು ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು. ಈ ನೀತಿಯ ಪ್ರಮುಖ ಅಂಶಗಳು ಹೀಗಿವೆ.

  1. ಪ್ರವಾಸೋದ್ಯಮದ ಮುಖಾಂತರ ಭಾರತದ ಐತಿಹಾಸಿಕ ಸ್ಥಳಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಅವುಗಳು ಹಾಳಾಗದಂತೆ ಉಳಿಸಿಕೊಂಡು ಬರುವುದು.
  2. ಪ್ರವಾಸೋದ್ಯಮವು ಒಂದು ಉದ್ಯಮವಾಗಿದ್ದು ಅದನ್ನು ಆರ್ಥಿಕ ಅಭಿವೃದ್ಧಿ, ಆದಾಯ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಯ ಸಾಧನವನ್ನಾಗಿ ಬಳಸಿಕೊಳ್ಳುವುದು.
  3. ಪ್ರವಾಸಿ ತಾಣಗಳಿಗೆ ಬಂದ ಪ್ರವಾಸಿಗರಿಗೆ ಉತ್ತಮ ಸ್ವಾಗತ, ಪ್ರವಾಸೋದ್ಯಮದ ಕುರಿತು ಮಾಹಿತಿ, ತಾವು ಪ್ರವಾಸಿಗರಿಗೆ ನೀಡುವ ಸುರಕ್ಷತೆ ಹಾಗೂ ಪ್ರವಾಸೋದ್ಯಮ ನೀಡುವ ಮೂಲ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
  4. ಸುರಕ್ಷತೆ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನವನ್ನು ಸಾಧಿಸುವುದು.
  5. ಪ್ರವಾಸೋದ್ಯಮದ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಿಳುವಳಿಕೆಯನ್ನು ನೀಡುವುದು.
  6. ಉದ್ಯೋಗದ ಜೊತೆಗೆ ಪರಿಸರ ರಕ್ಷಣೆ ಮಾಡುವುದು.
  7. ಧಾರ್ಮಿಕ ಪ್ರವಾಸವನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಜನರಲ್ಲಿ ಐಕ್ಯತೆಯನ್ನು ತರುವುದು.

2. ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 1986 (National Tourism Committee)

ಭಾರತದಲ್ಲಿ ಪ್ರವಾಸೋದ್ಯಮ ನೀತಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯು 1986ರ ದಶಕದಲ್ಲಿ ಮಹತ್ವದ ಬದಲಾವಣೆಯನ್ನು ಕಂಡಿತು. ಈ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಗುರುತಿಸಿತು. ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮವನ್ನು ಬಂಡವಾಳ ಹೂಡಿಕೆಗೆ ಅಗ್ರ ವಲಯವಾಗಿ ಘೋಷಿಸುವಂತೆ ಸೂಚಿಸಲಾಯಿತು. ಹೀಗಾಗಿ ಅಂದಿನ ಭಾರತದ ಪ್ರಧಾನಿ ರಾಜೀವಗಾಂಧಿ ಸರ್ಕಾರ ಹಾಗೂ 15 ರಾಜ್ಯ ಸರ್ಕಾರಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಘೋಷಿಸಿದವು. ಇದಕ್ಕಾಗಿ 1989ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಣಕಾಸು ನಿಗಮವನ್ನು ಸ್ಥಾಪಿಸಲಾಯಿತು. ಸ್ವತಃ ಪ್ರವಾಸೋದ್ಯಮ ಸಚಿವರಾಗಿದ್ದ ರಾಜೀವಗಾಂಧಿ ಅವರು “ಟ್ರೇಡ್ ಫೇರ್ ಅಥಾರಿಟಿ ಆಫ್ ಇಂಡಿಯಾ” ಅಧ್ಯಕ್ಷರಾಗಿದ್ದ ಮೊಹಮ್ಮದ್ ಯೂನಿಸ್‌ರವರ ನೇತೃತ್ವದಲ್ಲಿ ನ್ಯಾಷನಲ್ ಟೂರಿಸಂ ಕೌನ್ಸಿಲ್‌ನ್ನು ನೇಮಿಸಿದರು. ಇವರು 1987 ನವೆಂಬರ್‌ನಲ್ಲಿ ತಮ್ಮ ವರದಿಯನ್ನು ಸಲ್ಲಿಸಿದರು. ಅದರ ಮುಖ್ಯಾಂಶಗಳು ಹೀಗಿವೆ.

  1. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವುದು.
  2. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ನೀಡುವುದು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ಅವರಿಗೆ ಮಾಹಿತಿ ಒದಗಿಸುವುದು.
  3. ಪ್ರವಾಸೋದ್ಯಮವನ್ನು ವಿದೇಶಿ ವಿನಿಮಯ ಗಳಿಕೆಯ ಸಾಧನವಾಗಿ ಬಳಸಿಕೊಳ್ಳುವುದು.
  4. ಕ್ರಿ.ಶ 2000ದ ವೇಳೆಗೆ ಪ್ರವಾಸೋದ್ಯಮವು 5000 ಕೋಟಿ ಆದಾಯ ಗಳಿಕೆಯ ಉದ್ಯಮವನ್ನಾಗಿ ರೂಪಿಸುವುದು.
  5. ವಿದೇಶಗಳಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಹೋಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಉತ್ತಮ ಗುಣಮಟ್ಟದ ವಸತಿ ಹಾಗೂ ಆಹಾರ ಪೂರೈಕೆ ಮಾಡುವುದು.
  6. ಭಾರತೀಯ ವಸ್ತುಗಳನ್ನು ವಿದೇಶಿಯರು ಖರೀದಿ ಮಾಡುವ ಹಾಗೆ ಪ್ರಚಾರ ಮಾಡುವುದು.
  7. ವಿದೇಶಿ ಪ್ರವಾಸಿಗರ ಸಂಚಾರ ಸೌಲಭ್ಯಗಳನ್ನು ದ್ವಿಗುಣಗೊಳಿಸುವುದು.
  8. ಇಂಡಿಯನ್‌ ಏರ್‌ಲೈನ್ಸ್‌ನ್ನು ಖಾಸಗೀಕರಣಗೊಳಿಸಿ ಹೊಸ ವಿಮಾನಯಾನ ಕಂಪನಿಗಳನ್ನು ಆರಂಭಿಸುವುದು.
  9. ರಾಷ್ಟ್ರೀಯ ಪ್ರವಾಸೋದ್ಯಮ ಮಂಡಲಿಯ ಕಾರ್ಯಕ್ಷೇತ್ರದ ವಿಸ್ತರಣೆ.
  10. ಪ್ರವಾಸೋದ್ಯಮಕ್ಕೆ ನೇಮಕ ಮಾಡುವ ನೌಕರರಿಗೆ ತರಬೇತಿ ನೀಡಲು ತರಬೇತಿ ಸಂಸ್ಥೆಗಳನ್ನು ಆರಂಭಿಸುವುದು.

1985ರ ವೇಳೆಗೆ ಭಾರತ ಸರ್ಕಾರವು ಪ್ರವಾಸೋದ್ಯಮವನ್ನು ಒಂದು ಉದ್ದಿಮೆ ಎಂದು ಪರಿಗಣಿಸಿತು. ಆಗ ಪ್ರವಾಸೋದ್ಯಮದಲ್ಲಿ ಬಂಡವಾಳವನ್ನು ತೊಡಗಿಸುವವರಿಗೆ ತೆರಿಗೆ ವಿನಾಯಿತಿ ಸಹಾಯಧನ ಸೌಲಭ್ಯಗಳನ್ನು ನೀಡಲಾಯಿತು. 1991ರಲ್ಲಿ ಪ್ರವಾಸೋದ್ಯವನ್ನು ವಿದೇಶಿ ಬಂಡವಾಳ ಹೂಡಿಕೆಯ ಅಗ್ರವಲಯ ಎಂದು ಘೋಷಣೆ ಮಾಡಲಾಯಿತು.

3. CRZ: ಕರಾವಳಿ ನಿಯಂತ್ರಣ ವಲಯ:

 ಕರಾವಳಿ ತೀರಗಳು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಸರಾಗಿವೆ. ಇಲ್ಲಿ ಸಮುದ್ರ ಕ್ರೀಡೆಗಳಾದ ಸರ್ಪಿಂಗ್‌, ಸೇಲಿಂಗ್, ವಿಂಡ್ ಸರ್ಫಿಂಗ್ ಹಾಗೂ ಈಜುವುದು ಮೊದಲಾದ ಕ್ರೀಡೆಗಳು ನಡೆಯುತ್ತಿವೆ. 1986ರಲ್ಲಿ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯನ್ನು ಹೊರಡಿಸಲಾಯಿತು. CRZ  ನಿಯಮಗಳು ಭಾರತದ ಸೂಕ್ಷ್ಮ ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದರೊಂದಿಗೆ ಅಭಿವೃದ್ಧಿ ಅಗತ್ಯಗಳನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. 1986ರ ಕಾಯಿದೆ ಪ್ರಕಾರ ಕರಾವಳಿ ತೀರವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

  1. CRZ-1 ಇವು ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆಗೆ ನಿರ್ಣಾಯಕವಾದ ಪರಿಸರ ಸೂಕ್ಷ್ಮ ಸ್ಥಳಗಳಾಗಿವೆ.
  2. CRZ-2ಕರಾವಳಿಯಿಂದ ಕರಾವಳಿಯವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಎಲ್ಲಾ ಸ್ಥಳಗಳನ್ನು ಒಳಗೊಂಡಿದೆ.
  3. CRZ-3ಈ ವಲಯವುಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಒಳಗೊಂಡಿದೆ.
  4. CRZ-4 ಈ ಪ್ರದೇಶಗಳು ಲಕ್ಷ ದ್ವೀಪ ಅಂಡಮಾನ್, ನಿಕೋಬಾರ್ ದ್ವೀಪಗಳು ಹಾಗೂ ಕೆಲವು ಚಿಕ್ಕ ದ್ವೀಪಗಳನ್ನು ಒಳಗೊಂಡಿದೆ.

CRZ ನ ನಿಯಮಗಳು:

  1. ಕರಾವಳಿಯ ಸಮೀಪ ಮಾನವ ಚಟುವಟಿಕೆ ಜೊತೆಗೆ ಕೈಗಾರಿಕಾ ಚಟುವಟಿಕೆಯನ್ನು ನಿಯಂತ್ರಿಸುವುದು.
  2. ಕರಾವಳಿಯಿಂದ ನಿರ್ದಿಷ್ಟ ಅಂತರದಲ್ಲಿ ಕೆಲವು ಕಾರ್ಯಾಚರಣೆಗಳನ್ನು ಮಿತಿಗೊಳಿಸುವುದು. ಉದಾಹರಣೆಗೆ ಹೊಸ ವ್ಯವಹಾರ ಸ್ಥಾಪನೆ, ಅಪಾಯಕಾರಿ ವಸ್ತುಗಳ ಸಂಗ್ರಹಣೆ, ಗಣಿಗಾರಿಕೆ ಹಾಗೂ ಬದು ನಿರ್ಮಾಣ.
  3. CRZನ2011ರ ತಿದ್ದುಪಡಿಯಂತೆ ನವೀ ಮುಂಬೈ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪರಮಾಣು ಇಂಧನ ಇಲಾಖೆಯ ಯೋಜನೆಗಳ ಅಭಿವೃದ್ಧಿಗಾಗಿ ಹೊರಗಿಡಲಾಗಿದೆ.
  4. ಇತ್ತೀಚಿನ 2018-19ರ CRZಅಧಿನಿಯಮದ ಪ್ರಕಾರ ಕೆಲವು ಅಭಿವೃದ್ಧಿ ನೀತಿಗಳನ್ನು ತೆಗೆದುಹಾಕಲಾಗಿದೆ.
  5. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಮುದ್ರ ಹಿನ್ನೀರಿನ 400 ಮೀಟರ್ ಪ್ರದೇಶವನ್ನು ರಕ್ಷಿತ ವಲಯ ಎಂದು ಘೋಷಿಸಿ ಅಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧ ಏರುವುದು.

4. ರಾಷ್ಟ್ರೀಯ ಕಾರ್ಯಯೋಜನೆ 1992 (National Action Plan) 

1992ರಲ್ಲಿ ಆಗಿನ ಪ್ರವಾಸೋದ್ಯಮ ಸಚಿವರಾದ ಮಾಧವರಾವ್ ಸಿಂಧಿಯಾರವರು ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರಚಿಸಿದರು. ಇದರ ಮೂಲ ಗುರಿ ಭಾರತದಲ್ಲಿ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಇದು ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಗುರುತಿಸುವುದು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದೇ ಆಗಿದೆ. ಇದರ ಇತರೆ ಉದ್ದೇಶಗಳು ಹೀಗಿವೆ.

  1. ಪ್ರವಾಸೋದ್ಯಮದ ಮೂಲಕ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
  2. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ವಿದೇಶಿ ವಿನಿಮಯವನ್ನು ಹೆಚ್ಚಿಸುವುದು.
  3. ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವುದು.
  4. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಪ್ರವಾಸಿ ಸೌಲಭ್ಯಗಳನ್ನು ಹೆಚ್ಚಿಸುವುದು.
  5. ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಕೈಗೆಟುಕುವ ದರಗಳಲ್ಲಿ ವಸತಿ ಸೌಕರ್ಯಗಳನ್ನು ಕಲ್ಪಿಸುವುದು.
  6. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ನವೀಕರಣ.
  7. ಟ್ರೇನಿಂಗ್ ಟ್ರಕ್ಕಿಂಗ್ ಹಾಗೂ ಬೀಚ್ ರೆಸಾರ್ಟ್‌ಗಳಂತಹ ವಿಶೇಷ ಪ್ರವಾಸೋದ್ಯಮ ಪ್ರಕಾರಗಳನ್ನು ಅಭಿವೃದ್ಧಿಪಡಿಸುವುದು.
  8. ಹೋಟೆಲ್ ವಸತಿಯನ್ನು ಮುಂದಿನ 3 ವರ್ಷಗಳಲ್ಲಿ 44,000 ಕೊಠಡಿಗಳಿಂದ 1,20,000 ಕೊಠಡಿಗಳಿಗೆ ಹೆಚ್ಚಿಸುವುದು.

5. 1998ರ ನೂತನ ನೀತಿ (New Tourism Planning Policy of 1998)

ಭಾರತ ಸರ್ಕಾರವು 1998ರಲ್ಲಿ ನೂತನ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಿತು. ಅದರ ಪ್ರಕಾರ ರಾಷ್ಟ್ರೀಯತೆ, ಸಮಗ್ರತೆ ಹಾಗೂ ಐಕ್ಯತೆಯನ್ನು ಕಾಪಾಡುವುದು ಮತ್ತು ಯುವಕರಿಗೆ ಉದ್ಯೋಗಾವಕಾಶವನ್ನು ನೀಡುವ ಉದ್ದಿಮೆಯಾಗಿ ಪ್ರವಾಸೋದ್ಯಮವನ್ನು ರೂಪಿಸುವುದು ಈ ನೀತಿಯ ಉದ್ದೇಶವಾಗಿದೆ. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಪರಿಸರ ಸಂರಕ್ಷಣೆಯ ಸಾಧನವಾಗಿ ಪ್ರವಾಸೋದ್ಯಮವನ್ನು ಗುರುತಿಸಲಾಯಿತು.

1999 ಮತ್ತು 2000ರ ನೂತನ ಸಹಸ್ರಮಾನದ ನೆನಪಿಗಾಗಿ ಭಾರತದ ಪ್ರವಾಸೋದ್ಯಮವನ್ನು “ಎಕ್ಸ್‌ಪ್ಲೋರ್‌ ಇಂಡಿಯಾ” ಎಂಬ ವರ್ಷಾಚರಣೆಯನ್ನಾಗಿ ಘೋಷಿಸಿ ಹಲವಾರು ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಬ್ಬಗಳು, ಜಾತ್ರೆ, ಸಂಗೀತ, ನೃತ್ಯ, ಕರಕುಶಲತೆ, ವಾಣಿಜ್ಯ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಯಿತು.