ರಾಜ್ಯ ವಿಧಾನಸಭೆಯನ್ನು ಶಾಸಕಾಂಗದ ಕೆಳಮನೆ ಎಂದು ಕರೆಯಲಾಗುತ್ತದೆ. ವಿಧಾನ ಸಭೆಯ ಸದಸ್ಯರು ನೇರವಾಗಿ ಪ್ರಜೆಗಳಿಂದ ಆಯ್ಕೆಯಾಗುವ ಕಾರಣ ಇದನ್ನು ಜನತಾ ಸದನ ಎಂದು ಕರೆಯುತ್ತಾರೆ. ಕೇಂದ್ರದಲ್ಲಿ ಲೋಕಸಭೆಯ ಹಾಗೆ ರಾಜ್ಯದಲ್ಲಿ ವಿಧಾನಸಭೆ ಪ್ರಭಾವಶಾಲಿಯಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳು ಇದ್ದರೂ ವಿಧಾನಸಭೆಯಷ್ಟು ವಿಧಾನ ಪರಿಷತ್ತು ಪ್ರಭಾವಶಾಲಿಯಾಗಿಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳು ಈ ಕೆಳಗಿನಂತಿವೆ.
1. ಶಾಸನೀಯ ಅಧಿಕಾರಿಗಳು: (Legislative Power)
ರಾಜ್ಯ ಶಾಸಕಾಂಗದ ಯಾವುದೇ ಸದನದಲ್ಲಿ ಸಾಮಾನ್ಯ ಮಸೂದೆಯನ್ನು ಮಂಡಿಸಬಹುದು. ಮೊದಲು ವಿಧಾನ ಪರಿಷತ್ತಿನಲ್ಲಿ ಮಸೂದೆಯೊಂದು ಮಂಡಿಸಲ್ಪಟ್ಟರೆ ಅದನ್ನು ಅಂಗೀಕರಿಸಿ ವಿಧಾನ ಸಭೆಯ ಅಂಗೀಕಾರಕ್ಕಾಗಿ ಕಳುಹಿಸಕೊಡಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದರೆ ಅದು ರಾಜ್ಯಪಾಲರ ಒಪ್ಪಿಗೆಗೆ ಹೋಗುತ್ತದೆ. ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿದರೆ ಅದು ಶಾಸನವಾಗುತ್ತದೆ. ಒಂದು ವೇಳೆ ವಿಧಾನ ಪರಿಷತ್ ಅಂಗೀಕರಿಸಿದ ಮಸೂದೆಯನ್ನು ವಿಧಾನಸಭೆ ತಿರಸ್ಕರಿಸಿದರೆ ಆ ಮಸೂದೆ ನಾಶವಾಗುತ್ತದೆ. ಹಾಗೆ ವಿಧಾನಸಭೆಯಲ್ಲಿ ಮೊದಲು ಮಂಡಿಸಲ್ಪಟ್ಟ ಮಸೂದೆಯನ್ನು ಅಂಗೀಕರಿಸಿ ವಿಧಾನ ಪರಿಷತ್ತಿನ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನ ಪರಿಷತ್ತು ಒಪ್ಪಿಗೆ ನೀಡಿದರೆ ರಾಜ್ಯಪಾಲರ ಅಂಕಿತದೊಂದಿಗೆ ಶಾಸನವಾಗುತ್ತದೆ. ಇಲ್ಲವೆ ವಿಧಾನ ಪರಿಷತ್ತು ಮಸೂದೆಯನ್ನು ೪ ತಿಂಗಳುಗಳ ಕಾಲ ತಡೆ ಹಿಡಿಯಬಹುದು. ಅಂತಿಮವಾಗಿ ಅದು ಒಪ್ಪಿಗೆ ನೀಡಲೇಬೇಕಾಗುತ್ತದೆ. ಒಂದು ವೇಳೆ ಒಪ್ಪಿಗೆ ನೀಡದಿದ್ದರೆ ವಿಧಾನಸಭೆ ಅದನ್ನು ರಾಜ್ಯಪಾಲರ ಬಳಿ ಕಳುಹಿಸಿ ಅವರಿಂದ ಅಂಕಿತವನ್ನು ಪಡೆಯುತ್ತದೆ. ವಿಧಾನ ಪರಿಷತ್ತಿಗೆ ಯಾವುದೇ ಮಸೂದೆಯನ್ನು ತಡೆ ಹಿಡಿಯುವ ಅಧಿಕಾರ ಇಲ್ಲ.
2. ಕಾರ್ಯಾಂಗೀಯ ಅಧಿಕಾರಿಗಳು: (Excutive Power)
ಕಾರ್ಯಾಂಗವು ನೇರವಾಗಿ ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುತ್ತದೆ. ಎಲ್ಲಿಯವರೆಗೆ ವಿಧಾನಸಭೆಯು ನಂಬಿಕೆಗೆ ಪಾತ್ರರಾಗಿರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತದೆ. ಸದಸ್ಯರು ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರದಿಂದ ವಿಷಯವನ್ನು ಸಂಗ್ರಹಿಸಬಹುದು. ಸದಸ್ಯರ ಪ್ರಶ್ನೆಗಳಿಗೆ ಯಾವುದೇ ಆತಂಕಕ್ಕೊಳಗಾಗದೇ ಸಮಾಧಾನದಿಂದ ಉತ್ತರಿಸುವುದು ಮಂತ್ರಿಗಳ ಜವಾಬ್ದಾರಿಯಾಗಿದೆ. ಮಂತ್ರಿಗಳು ಸುಳ್ಳು ಹೇಳುವ ಅಥವಾ ಸದನವನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿದರೆ ಸದನದಿಂದ ಅವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
ಚರ್ಚೆಯ ಸಮಯದಲ್ಲಿ ವಿಧಾನಸಭೆಯು ಸರ್ಕಾರದಿಂದ ಅವಶ್ಯಕ ಮಾಹಿತಿಯನ್ನು ಹೊರಗೆಳೆಯಬಹುದಾಗಿದೆ. ಪ್ರಶ್ನೆವೇಳೆ, ನಿಲುವಳಿ ಸೂಚನೆ, ಶೂನ್ಯ ವೇಳೆ, ಕಡಿತದ ಸೂಚನೆ, ಗಮನ ಸೆಳೆಯುವ ಸೂಚನೆ ಇತ್ಯಾದಿ ಸಂದರ್ಭದಲ್ಲಿ ಜಾಗರೂಕತನದಿಂದ ಉತ್ತರಗಳನ್ನು ನೀಡಬೇಕಾಗುತ್ತದೆ. ಪ್ರಶ್ನೆಗಳನ್ನು ಎದುರಿಸಲು ಮಂತ್ರಿಗಳು ಸಾಕಷ್ಟು ಮನೆಗೆಲಸಗಳನ್ನು ಮಾಡಿಕೊಂಡು ಬರಬೇಕು. ಉತ್ತರಗಳು ಸಿದ್ಧವಿರದಿದ್ದಲ್ಲಿ ಮಂತ್ರಿಗಳು ಸದನದಿಂದ ಸಮಯವನ್ನು ಪಡೆದು ನಂತರ ಉತ್ತರ ನೀಡಬಹುದು. ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಪರಿಣಾಮಕಾರಿ ಅಸ್ತ್ರವೆಂದರೆ ಅವಿಶ್ವಾಸ ಮತ ನಿರ್ಣಯ ಸರಕಾರವು ಅವಿಶ್ವಾಸ ನಿರ್ಣಯದಲ್ಲಿ ಸೋತರೆ ಅಧಿಕಾರದಿಂದ ಕೆಳಗಿಳಿದು ನಡೆಯಬೇಕಾಗುತ್ತದೆ.
3. ಹಣಕಾಸಿನ ಅಧಿಕಾರಿಗಳು: (Financial Powers)
ಹಣಕಾಸಿನ ಮಸೂದೆಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಲ್ಪಡುತ್ತದೆ. ನಂತರ ಮಂಡಿಸಿದ ಹಣಕಾಸು ಮಸೂದೆಯನ್ನು ಅಂಗೀಕಾರಕ್ಕಾಗಿ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಲಾಗುತ್ತದೆ. ಆಗ ವಿಧಾನಪರಿಷತ್ತು 14 ದಿನದೊಳಗೆ ಅಂಗೀಕಾರವನ್ನು ನೀಡಬೇಕು, ಇಲ್ಲವಾದಲ್ಲಿ ಎರಡು ಸದನಗಳು ಅಂಗೀಕರಿಸಿವೆ ಎಂದು ಭಾವಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯಪಾಲರ ಅಂಕಿತದೊಂದಿಗೆ ಮಸೂದೆ ಶಾಸನವಾಗುತ್ತದೆ. ಕೆಳಮನೆಯ ಒಪ್ಪಿಗೆ ಇಲ್ಲದೆ ಯಾವ ಇಲಾಖೆಯು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಮತ್ತು ತೆರಿಗೆಯನ್ನು ವಿಧಿಸಿ ಸಾರ್ವಜನಿಕರಿಂದ ವಸೂಲಿ ಮಾಡುವಂತೆಯೂ ಇಲ್ಲ. ರಾಜ್ಯದ ಆಯವ ಪಟ್ಟಿಯನ್ನು ವಿಧಾನಸಭೆಯ ಮುಂದೆ ಇಡಬೇಕಾಗುತ್ತದೆ. ಇಲಾಖೆಯಿಂದ ಬರುವ ಹಣದ ಬೇಡಿಕೆಗಳ ಬಗ್ಗೆ ಚರ್ಚಿಸಿ ಬೇಡಿಕೆಗಳನ್ನು ಕಡಿಮೆ ಮಾಡುವ ಅಥವಾ ನಿರಾಕರಿಸುವ ಅಧಿಕಾರ ವಿಧಾನಸಭೆಗೆ ಇದೆ. ವಿಧಾನಸಭೆಯ ಅನುಮತಿ ಇಲ್ಲದೆ ಯಾವ ತೆರಿಗೆಯನ್ನು ವಿಧಿಸಲು ಸಾಧ್ಯವಿಲ್ಲ.
4. ಚುನಾವಣಾ ಅಧಿಕಾರಿಗಳು: (Election Power)
- ವಿಧಾನಸಭೆಯ ಸದಸ್ಯರು ಮತದಾನದ ಮೂಲಕ ತಮ್ಮೊಳಗೆ ಒಬ್ಬ ಸಭಾಧ್ಯಕ್ಷ ಹಾಗೂ ಒಬ್ಬ ಉಪಸಭಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
- ವಿಧಾನ ಪರಿಷತ್ತು ಇರುವ ರಾಜ್ಯಗಳಲ್ಲಿ ವಿಧಾನ ಸಭೆಯ ಸದಸ್ಯರು ವಿಧಾನ ಪರಿಷತ್ತಿನ ೧/೩ ರಷ್ಟು ಸದಸ್ಯರನ್ನು ಮತ ನೀಡುವ ಮೂಲಕ ಚುನಾಯಿಸಿಕೊಳ್ಳುತ್ತಾರೆ.
- ವಿಧಾನ ಸಭೆಯ ಸದಸ್ಯರು ಆಯಾ ರಾಜ್ಯಕ್ಕೆ ಸಂವಿಧಾನದಲ್ಲಿ ನಿಗದಿಪಡಿಸಿದಷ್ಟು ಸದಸ್ಯರನ್ನು ರಾಜ್ಯಸಭೆಗೆ ಮತ ನೀಡುವ ಮೂಲಕ ಚುನಾಯಿಸುತ್ತಾರೆ.
- ರಾಷ್ಟ್ರಪತಿ ಚುನಾವಣೆಯಲ್ಲಿ ವಿಧಾನಸಭಾ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ.
5. ಸಂವಿಧಾನ ತಿದ್ದುಪಡಿ ಅಧಿಕಾರಗಳು: (Power of Constitution Amensment)
ಸಂವಿಧಾನ ತಿದ್ದುಪಡಿಯಲ್ಲಿಯೂ ವಿಧಾನಸಭೆಯ ಪಾತ್ರ ಅತಿ ಮುಖ್ಯವಾಗಿದೆ. ಸಂಸತ್ತು ಸಂವಿಧಾನದ ಕೆಲವು ಪ್ರಮುಖ ವಿಷಯಗಳನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಅಂಗೀಕರಿಸಿದಾಗ ಒಟ್ಟು ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳು ತಮ್ಮ ಅಲ್ಪ ಮತದೊಂದಿಗೆ ಅನುಮೋದನೆಯನ್ನು ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರ ಯಾವುದಾದರೂ ಒಂದು ಭೂಪ್ರದೇಶವನ್ನು ಪುನರ್ರಚಿಸಲು ಇಚ್ಛಿಸಿದಾಗ ರಾಷ್ಟ್ರಪತಿಗಳು ಆ ರಾಜ್ಯದ ವಿಧಾನಸಭೆಯ ಅಭಿಪ್ರಾಯ ಕೇಳುತ್ತಾರೆ. ಆಗ ರಾಜ್ಯದ ವಿಧಾನಸಭೆ ಒಪ್ಪಿಗೆ ನೀಡುವುದು ಅಥವಾ ಬಿಡುವುದು ಅದಕ್ಕೆ ಸೇರಿದುದು.
6. ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಅಧಿಕಾರಗಳು: (Power of Public Grivances)
ವಿಧಾನಸಭೆ ಸದಸ್ಯರು ಜನರಿಂದಲೇ ನೆರವಾಗಿ ಆಯ್ಕೆಯಾದ ಕಾರಣ ಅವರು ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಶ್ರಮಿಸಬೇಕು. ವಿಧಾನ ಸಭೆಯ ಪ್ರತಿಯೊಬ್ಬ ಸದಸ್ಯನು ತಾನು ಆಯ್ಕೆಯಾದ ಮತ ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪಟ್ಟಿ ಮಾಡಿ ಅಧಿವೇಶನದ ಸಮಯದಲ್ಲಿ ಕಾರ್ಯಾಂಗದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಒತ್ತಾಯಿಸುವನು. ಇದರ ಜೊತೆಗೆ ರಾಜ್ಯವನ್ನು ಬಾಧಿಸುವ ಸಮಸ್ಯೆಗಳನ್ನು ಸಹ ಸದಸ್ಯರು ಅಧಿವೇಶನದಲ್ಲಿ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವರು. ಈ ವಿಷಯದಲ್ಲಿ ಸದಸ್ಯರುಗಳು ಪ್ರಶ್ನಾತೀತ ಮತ್ತು ಪಕ್ಷಾತೀತವಾಗಿ ಹೋರಾಡಬೇಕು. ಆ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕು. ಪರಿಹಾರವನ್ನು ಒದಗಿಸಿಕೊಡಬೇಕು. ಇಲ್ಲವಾದರೆ ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಉಪಸಂಹಾರ
ಒಟ್ಟಾರೆ ವಿಧಾನಸಭೆ ರಾಜ್ಯ ಆಡಳಿತದ ಕೇಂದ್ರಬಿಂದುವಾಗಿದ್ದು, ಕಾನೂನು, ಹಣಕಾಸು ಮತ್ತು ಕಾರ್ಯಾಂಗದ ಮೇಲ್ವಿಚಾರಣೆಯಲ್ಲಿ ಮಹತ್ವದ ಅಧಿಕಾರ ಹೊಂದಿದೆ. ಜನರ ಆಶಯಗಳನ್ನು ಪ್ರತಿನಿಧಿಸುವ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕು. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಧಾನಸಭೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ.