ರಾಜ್ಯವರ್ಧನನ ಮರಣದ ನಂತರ ಹರ್ಷವರ್ಧನ ಕ್ರಿ.ಶ. 606ರಲ್ಲಿ ಥಾನೇಶ್ವರದ ಸಿಂಹಾಸನಾಧೀಶ್ವರನಾದನು. ಆಗ ಹರ್ಷನಿಗೆ ಕೇವಲ 16 ವರ್ಷ ವಯಸ್ಸು. ದಕ್ಷ ಹಾಗೂ ಪ್ರತಿಭಾವಂತನಾಗಿದ್ದ ಹರ್ಷವರ್ಧನನು ತಾನು ಅಧಿಕಾರವಹಿಸಿಕೊಂಡ ನೆನಪಿಗಾಗಿ ಹರ್ಷಶಕೆ ಎಂಬ ಹೊಸ ಶಕೆಯನ್ನು ಆರಂಭಿಸಿದನು. ಇವನು ಅಧಿಕಾರಕ್ಕೆ ಬಂದಾಗ ಈತನ ಮುಂದೆ ಹಲವಾರು ಸಮಸ್ಯೆಗಳಿದ್ದವು. ಹೀಗಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ನಡುವೆ ತನ್ನ ಅಣ್ಣ ಹಾಗೂ ಭಾವನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಮತ್ತು ತಂಗಿಯಾದ ರಾಜಪ್ರಿಯನ್ನು ಬಂಧನದಿಂದ ಬಿಡುಗಡೆಗೊಳಿಸುವಂತಹ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಬೇಕಿತ್ತು. ರಾಜತ್ರಿಯನ್ನು ಬಿಡುಗಡೆಗೊಳಿಸಬೇಕೆಂಬ ಚಿಂತೆಯಲ್ಲಿರುವಾಗಲೇ ರಾಜಶ್ರೀ ಬಂಧನದಿಂದ ತಪ್ಪಿಸಿಕೊಂಡು ವಿಂಧ್ಯ ಪರ್ವತದ ಕಡೆಗೆ ಹೋದಳು. ಬೌದ್ಧ ಆಶ್ರಮವನ್ನು ಸೇರಿದ ಇವಳಿಗೆ ಅಲ್ಲಿಯೂ ನೆಮ್ಮದಿ ದೊರೆಯದಿದ್ದಾಗ ಅವಳು ಇನ್ನೇನು ಅನುಮರಣ ಮಾಡಬೇಕೆನ್ನುವಷ್ಟರಲ್ಲಿ ಅವಳ ಮನಸ್ಸನ್ನು ಬದಲಿಸಿ ರಾಜಧಾನಿಗೆ ಕರೆತಂದನು. ಅದೊಂದು ಕರುಣಾಜನಕ ಪ್ರಸಂಗ. ಈ ಸನ್ನಿವೇಶವನ್ನು ಬಾಣ ಅತ್ಯಂತ ಕಾವ್ಯಮಯವಾಗಿ ಹಾಗೂ ಹೃದಯಂಗಮಯವಾಗಿ ಚಿತ್ರಿಸಿದ್ದಾನೆ. ಕನೌಜಿನ ರಾಜ್ಯದಲ್ಲಿ ಗೃಹವರ್ಮನ ಉತ್ತರಾಧಿಕಾರಿಗಳು ಯಾರು ಇರದಿದ್ದುದರಿಂದಾಗಿ ಅದರ ಆಡಳಿತವನ್ನು ನೋಡಿಕೊಳ್ಳುವ ಹೊಣೆ ಸಹ ಈತನ ಹೆಗಲಮೇಲೆ ಬಿತ್ತು. ಹೀಗಾಗಿ ಹರ್ಷವರ್ಧನ ಅಧಿಕಾರವಹಿಸಿಕೊಂಡ ತಕ್ಷಣ ರಾಜಧಾನಿಯನ್ನು ಥಾನೇಶ್ವರದಿಂದ ಕನೌಜಿಗೆ ವರ್ಗಾಯಿಸಿದನು.
ಹರ್ಷವರ್ಧನನ ದಿಗ್ವಿಜಯಗಳು : ಹರ್ಷನ ದಿಗ್ವಿಜಯಗಳೇನೂ ಇತಿಹಾಸದಲ್ಲಿ ಮಹಾನ್ ಸಾಧನೆಯನ್ನು ಮಾಡಲಿಲ್ಲ. ಈತನ ಪ್ರಮುಖ ಯುದ್ಧಗಳು ಈ ಕೆಳಗಿನಂತಿವೆ.
1) ಶಶಾಂಕನ ವಿರುದ್ಧ ದಂಡಯಾತ್ರೆ :
ತನ್ನ ಅಣ್ಣನಾದ ರಾಜ್ಯವರ್ಧನನ್ನು ಹತ್ಯೆಗೈದ ಶಶಾಂಕನ ವಿರುದ್ಧ ಹರ್ಷವರ್ಧನ ತನ್ನ ಸೇನಾಪತಿಯಾದ ಬಂಡಿಯನನ್ನು ಕನೌಜವನ್ನು ಆಕ್ರಮಿಸಲು ಕಳುಹಿಸಿದನು. ಆದರೆ ಶಶಾಂಕನು ಕನೌಜವನ್ನು ಬಿಟ್ಟು ಮಾಳವಕ್ಕೆ ಹಿಂತಿರುಗಿದನು. ಇಷ್ಟೇ ವಿನಹ ಶಶಾಂಕನ ವಿರುದ್ಧ ಹರ್ಷ ಇನ್ನೇನು ಸಾಧಿಸಲಿಲ್ಲ, ಕ್ರಿ.ಶ. 637ರವರೆಗೂ ಶಶಾಂಕ ಬಂಗಾಳದಲ್ಲಿ ನಿರಂತರವಾಗಿ ಆಳ್ವಿಕೆ ನಡೆಸಿದನು. ಆತನ ಮರಣದ ನಂತರವೇ ಹರ್ಷನು ಪೂರ್ವ ಭಾರತದ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದನು.
2) ಗುಜರಾತ ಮೇಲೆ ದಾಳಿ :
ಹರ್ಷನು ವಲ್ಲಭಿಯ ದೊರೆ ಗೂರ್ಜರ ಎರಡನೆಯ ಧ್ರುವಸೇನನನ್ನು ಸೋಲಿಸಿದನು ಎಂದು ಬಾಣಭಟ್ಟ ತನ್ನ ಕೃತಿಯಾದ ಹರ್ಷಚರಿತದಲ್ಲಿ ಬರೆದಿದ್ದಾನೆ. ಆದರೆ ಧ್ರುವಸೇನನು ಕ್ಷಿಪ್ರದಲ್ಲಿಯೇ ಚೇತರಿಸಿಕೊಂಡು ಹರ್ಷನ ವಿರುದ್ಧ ಯುದ್ಧ ಸಾರಿದನು. ಈ ಯುದ್ಧವನ್ನು ಎದುರಿಸಲಾಗದ ಹರ್ಷ ಧ್ರುವಸೇನನಿಗೆ ತನ್ನ ಮಗಳನ್ನು ಕೊಟ್ಟು ಸಂಬಂಧ ಬೆಳೆಸಿದನು ಎಂದು ಹೂಯೆನ್‌ತ್ಸಾಂಗ್ ಹೇಳಿದ್ದಾನೆ.
3) ಹಿಮಾಲಯ ಪರ್ವತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು :
ಹರ್ಷವರ್ಧನ ಹಿಮಾಲಯ ಪರ್ವತ ಪ್ರದೇಶವಾದ ಕಾಶ್ಮೀರ, ಸಿಂಥ್ ಪ್ರಾಂತ್ಯ ಹಾಗೂ ನೇಪಾಳವನ್ನು ಗೆದ್ದು ತನ್ನ ಅಧಿಕಾರವನ್ನು ಸ್ಥಾಪಿಸಿದನು ಎಂದು ಬಾಣಭಟ್ಟ ಹೇಳುತ್ತಾನೆ.
4) ಪುಲಕೇಶಿಯೊಂದಿಗೆ ಯುದ್ಧ (ಕ್ರಿ.ಶ. 630)
ಪಶ್ಚಿಮ ಭಾರತವನ್ನು ಗೆದ್ದ ಹರ್ಷವರ್ಧನನ ಗಮನ ದಕ್ಷಿಣ ಭಾರತದ ಕಡೆಗೆ ಹರಿಯಿತು. ಸಕಲಉತ್ತರಾಧಿಪಥೇಶ್ವರ ಎಂಬ ಬಿರುದನ್ನು ಪಡೆದಿದ್ದ ಹರ್ಷವರ್ಧನ ಸಕಲ ದಕ್ಷಿಣಾಧಿಪಥೇಶ್ವರ ಎಂಬ ಬಿರುದನ್ನು ಗಳಿಸಿದ್ದ ಎರಡನೆಯ ಪುಲಕೇಶಿಯ ವಿರುದ್ಧ ಯುದ್ಧ ಸಾರಿದನು. ಶಕ್ತಿಯಲ್ಲಿ ಇವರಿಬ್ಬರೂ ಸರಿಸಮಾನರು, ಹರ್ಷನು ವಲ್ಲಭಿ ವ್ಯವಹಾರದಲ್ಲಿ ತಲೆಹಾಕಿ ಅದರ ಅರಸ ಧ್ರುವಸೇನನಿಗೆ ರಾಜ್ಯವನ್ನು ಮರಳಿ ಕೊಡಬೇಕೆಂದು ಹಾಗೂ ಆತನೊಂದಿಗೆ ಸ್ನೇಹದಿಂದ ಇರಬೇಕೆಂದು ಪುಲಕೇಶಿಯ ಬಳಿಗೆ ರಾಯಭಾರಿಯನ್ನು ಕಳುಹಿಸಿದನು. ಇದರಿಂದ ಕುಪಿತಗೊಂಡ ಪುಲಕೇಶಿಗೆ ಕೋಪನೆತ್ತಿಗೇರಿತು. ಹೀಗಾಗಿ ಆತ ಇದನ್ನು ಯುದ್ಧವೇ ತೀರ್ಮಾನಿಸಲಿ ಎಂದು ಹೇಳಿ ಕಳುಹಿಸಿದನು. ಹರ್ಷವರ್ಧನ ಸುಮಾರು 6000 ಆನೆಗಳನ್ನು ಹೊಂದಿದ್ದನು. ಇವರಿಬ್ಬರ ನಡುವೆ ನರ್ಮದಾ ನದಿಯ ದಡದ ಮೇಲೆ ಕ್ರಿ.ಶ. 630ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಹರ್ಷವರ್ಧನನು ಸೋಲುವ ಮೂಲಕ ಆತನ ಹರ್ಷ ಸಂಪೂರ್ಣವಾಗಿ ಅಡಗಿ ಹೋಯಿತು ಎಂದೂ ಪುಲಕೇಶಿ ವಿಜಯಶಾಲಿಯಾದನೆಂದು ಐಹೊಳೆ ಶಾಸನವು ಹೇಳುತ್ತದೆ. ಈ ಯುದ್ಧಾನಂತರ ಎರಡನೆಯ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಸೋತ ಹರ್ಷನೊಂದಿಗೆ ಸ್ನೇಹ ಹಸ್ತ ನೀಡಿದ ಪುಲಕೇಶಿ ಅವನಿಗೆ ಕಾಣಿಕೆ ನೀಡಿ ಕಲಾವಿದರನ್ನು ವಿನಿಮಯ ಮಾಡಿಕೊಂಡರು. ನರ್ಮದಾ ನದಿಯು ಇವರಿಬ್ಬರ ನಡುವಿನ ಗಡಿಯಾಯಿತು.
5) ವಿದೇಶಿ ಸಂಬಂಧ :
ಹರ್ಷನು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದನು. ಕ್ರಿಶ. 641ರಲ್ಲಿ ಟಾಂಗ್ ವಂಶದ ಚಕ್ರವರ್ತಿ ಟಾಯ್‌ತುಂಗನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು. ಚೀನಾದ ರಾಯಭಾರ ನಿಯೋಗವು ಕ್ರಿ.ಶ. 643ರಲ್ಲಿ ಹರ್ಷನ ಆಸ್ಥಾನಕ್ಕೆ ಭೇಟಿ ನೀಡಿತು. ಕ್ರಿ.ಶ. 647ರಲ್ಲಿ ಹರ್ಷವರ್ಧನ ನಿಧನನಾದನು.
6) ಸಾಮ್ರಾಜ್ಯದ ವ್ಯಾಪ್ತಿ :
ಹರ್ಷನ ಸಾಮ್ರಾಜ್ಯವು ಪೂರ್ವಪಂಜಾಬ್, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾಗಳನ್ನು ಒಳಗೊಂಡಿತ್ತು. ರಜಪೂತಾನ್, ಸಿಂದ್ ಹಾಗೂ ಪಂಜಾಬಿನ ಬಹುಭಾಗ ಅವನ ಸಾಮ್ರಾಜ್ಯಕ್ಕೆ ಸೇರಿರಲಿಲ್ಲ.
1) ಹರ್ಷನ ಧಾರ್ಮಿಕ ನೀತಿ :
ಪುಷ್ಯಭೂತಿ ಶೈವನಾಗಿದ್ದು, ಪ್ರಭಾಕರವರ್ಧನನೂ ಸಹ ಶಿವನ ಆರಾಧಕನಾಗಿದ್ದನು. ಆದರೆ ಹರ್ಷವರ್ಧನ ಆರಂಭದಲ್ಲಿ ನಿಷ್ಟಾವಂತ ಶೈವನಾಗಿದ್ದರೂ ಹೂಯೆನ್‌ತ್ಸಾಂಗನ ಭೇಟಿಯ ನಂತರ ಹರ್ಷನು ಬೌದ್ಧ ಧರ್ಮದ ಉತ್ಕಟ ಅಭಿಮಾನಿಯಾದನು. ಬೌದ್ಧ ಧರ್ಮವನ್ನು ಸ್ವೀಕರಿಸಿದ ಹರ್ಷವರ್ಧನನು
1) ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಲ್ಲಿಸಿದನು.
2) ಸಾವಿರಾರು ಸ್ತೂಪಗಳು, ವಿಹಾರಗಳು ಹಾಗೂ ಚೈತ್ಯಗಳನ್ನು ನಿರ್ಮಿಸಿದನು.
3) ಪ್ರಯಾಣಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ಹಾಗೂ ಅರವಟ್ಟಿಗೆಗಳನ್ನು ಸ್ಥಾಪಿಸಿದನು.
4) ಬೌದ್ಧ ಭಿಕ್ಷುಕರಿಗಾಗಿ ಮಠಗಳನ್ನು ಸ್ಥಾಪಿಸಿದನು.
5) ಪ್ರತಿ ಐದು ವರ್ಷಗಳಿಗೊಮ್ಮೆ ಎಲ್ಲಾ ಧರ್ಮದ ಪ್ರತಿನಿಧಿಗಳನ್ನು ಸಮಾವೇಶಗೊಳಿಸಿ ತಾನು ಗಳಿಸಿದ ಸಂಪತ್ತನ್ನು ದಾನವಾಗಿ ನೀಡುತ್ತಿದ್ದನು.ಅ
6) ಬೌದ್ಧ ಭಿಕ್ಷುಕರ ಸಮಾವೇಶಗಳನ್ನು ಏರ್ಪಡಿಸಿ ಬೌದ್ಧ ಧರ್ಮದ ಕುರಿತು ಚರ್ಚೆಯನ್ನು ಏರ್ಪಡಿಸುತ್ತಿದ್ದನು.
ವರ್ಧನರು ಧಾರ್ಮಿಕ ವಿಷಯದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದರು. ಪ್ರಭಾಕರವರ್ಧನನು ಸೂರ್ಯನ ಆರಾಧಕನಾಗಿದ್ದರೆ, ರಾಜ್ಯವರ್ಧನನು ಬೌದ್ಧ ಮತಾವಲಂಭಿಯಾಗಿದ್ದನು. ಹರ್ಷವರ್ಧನನು ಶಿವ, ಸೂರ್ಯ ಮತ್ತು ಬುದ್ಧನ ಆರಾಧಕನಾಗಿದ್ದನು. ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ರಾಜ್ಯಶ್ರೀ ಮತ್ತು ಡ್ಯೂಯನ್ ತ್ಸಾಂಗ್ ಪ್ರಭಾವಕ್ಕೊಳಗಾಗಿ ಬೌದ್ಧಧರ್ಮಕ್ಕೆ ಮತಾಂತರವಾದನು. ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ತನ್ನ ಒಲವು ತೋರಿಸತೊಡಗಿದನು. ಹಲವಾರು ಧಾರ್ಮಿಕ ಗೋಷ್ಠಿಗಳನ್ನು ನಡೆಸಿದನು. ವಿದ್ವಾಂಸ ರೊಂದಿಗೆ ಧಾರ್ಮಿಕ ಚರ್ಚೆಯಲ್ಲಿ ಪಾಲ್ಗೊಂಡನು. ಇದರಲ್ಲಿ ಪ್ರಸಿದ್ಧವಾದವುಗಳೆಂದರೆ ಕನೌಜ್ ಸಮ್ಮೇಳನ ಮತ್ತು ಪ್ರಯಾಗ ಸಮ್ಮೇಳನ.
ಕನೌಜ್ ಸಮ್ಮೇಳನ-ಕ್ರಿ.ಶ 643 : ಹರ್ಷವರ್ಧನನು ಕ್ರಿಶ 643 ರಲ್ಲಿ ಕನೌಜ್ ಸಮ್ಮೇಳನವನ್ನು ನಡೆಸಿದನು. ಇದರ ಉದ್ದೇಶ
- ಹೂಯನ್ ತ್ಸಾಂಗ್‌ಗೆ ಗೌರವ ಸಲ್ಲಿಸುವುದು.
- ಮಹಾಯಾನ ಪಂಥವನ್ನು ಮೆರೆಸುವುದು.
- ತನ್ನ ಧಾರ್ಮಿಕ ಧೋರಣೆಯನ್ನು ಸ್ಪಷ್ಟಪಡಿಸುವುದು.
ಹೂಯನ್ ತ್ಸಾಂಗ್‌ನು ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರು ಆಗಮಿಸಿದ್ದರು. 3000 ಬೌದ್ಧ ಸನ್ಯಾಸಿಗಳು, 3000 ಬ್ರಾಹ್ಮಣರು ಮತ್ತು ನಳಂದ ವಿಶ್ವವಿದ್ಯಾಲಯವೊಂದರಿಂದಲೇ 1000 ವಿದ್ಯಾರ್ಥಿಗಳು ಬಂದಿದ್ದರು. ವಿವಿಧ ರಾಜ್ಯಗಳ ಸುಮಾರು 20 ಅರಸರು ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಮತಗಳ, ಪಂಗಡಗಳ ಪ್ರತಿನಿಧಿಗಳೂ ಆಗಮಿಸಿದ್ದರು, ಗಂಗಾನದಿಯ ದಡದಲ್ಲಿ ವಿಶೇಷವಾಗಿ ರಚಿಸಲಾದ ಮಂಟಪದಲ್ಲಿ 23 ದಿನಗಳ ಕಾಲ ಸಮ್ಮೇಳನ ನಡೆಯಿತು. ಭಗವಾನ್ ಬುದ್ಧನ ಚಿನ್ನದ ವಿಗ್ರಹವನ್ನು ಮಂಟಪದಲ್ಲಿ ಇಡಲಾಗಿತ್ತು. ಮೂರಡಿ ಎತ್ತರದ ಉತ್ಸವ ಮೂರ್ತಿಯೊಂದನ್ನು ಪ್ರತಿದಿನವೂ ಮೆರವಣಿಗೆ ಮಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಡ್ಯೂಯನ್ ತ್ಸಾಂಗ್‌ನು ಪಾಂಡಿತ್ಯಪೂರ್ಣ ಭಾಷಣಮಾಡಿದನು. ನಂತರ ಸಭಿಕರ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೆ ಉತ್ತರಿಸಿದನು. ಬಹಳ ಉದಾರಿಯಾದ ಹರ್ಷವರ್ಧನನು ಜನರಿಗೆ ಉದಾರ ದಾನ ಧರ್ಮಗಳನ್ನು ಮಾಡಿದನು. ಹರ್ಷನು ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರನ್ನು ಆಹ್ವಾನಿಸಿದ್ದರೂ ಬೌದ್ಧಧರ್ಮದ ಪ್ರಚಾರಕ್ಕೆ ಹಮ್ಮಿಕೊಂಡಿದ್ದ ಧರ್ಮಸಮ್ಮೇಳನದಂತೆ ಪರಿವರ್ತಿತವಾಯಿತು. ಇದನ್ನು ಸಹಿಸದ ಕೆಲವು ವಿರೋಧಿಗಳು ಸಮ್ಮೇಳನದ ಮಂಟಪಕ್ಕೆ ಬೆಂಕಿ ಇಟ್ಟು ಕೊಲ್ಲಲು ಪ್ರಯತ್ನಿಸಿದರು. ಆದರೆ ಹರ್ಷವರ್ಧನನು ದುಷ್ಕರ್ಮಿಗಳನ್ನು ಸೆರೆಹಿಡಿದು ತನಗೆ ರಕ್ಷಣೆ ಕೊಟ್ಟನೆಂದು ಹೂಯನ್ ತ್ಸಾಂಗ್ ಹೇಳಿ ಕೊಂಡಿದ್ದಾನೆ.
ಪ್ರಯಾಗ ಸಮ್ಮೇಳನ-ಕ್ರಿ.ಶ 643 : ಕನೌಜ್ ಸಮ್ಮೇಳನ ನಡೆದ ವರ್ಷವೇ ಹರ್ಷನು ಪ್ರಯಾಗದಲ್ಲಿ ಸಮ್ಮೇಳನವೊಂದನ್ನು ನಡೆಸಿದನು. ಇದು ಐದು ವರ್ಷಕ್ಕೊಮ್ಮೆ ನಡೆಸುತ್ತಿದ್ದ ‘ಮಹಾಮೋಕ್ಷ ಪರಿಷತ್’ ಆಗಿತ್ತು. ಗಂಗಾ ಮತ್ತು ಯಮುನೆಯರ ಸಂಗಮ ಸ್ಥಳದಲ್ಲಿ ನಡೆದ ಈ ಸಮ್ಮೇಳನದ ಉದ್ದೇಶ:
- ಧಾನ ಧರ್ಮಗಳನ್ನು ಮಾಡುವುದು.
- ಧಾರ್ಮಿಕ ಆಸಕ್ತಿಯನ್ನು ತೋರಿಸುವುದು.
- ಬೌದ್ಧಮತದ ಮಹಾಯಾನ ಪಂಥದ ಮಹತ್ವವನ್ನು ಸಾರುವುದು.
ಈ ಸಮ್ಮೇಳನವು 75 ದಿನಗಳ ಕಾಲ ನಡೆಯುತು. 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸಮ್ಮೇಳನಕ್ಕೆ ವಿವಿಧ ರಾಜ್ಯಗಳ 18 ಅರಸರು, ವಿದ್ವಾಂಸರು, ಧಾರ್ಮಿಕ ಮುಖಂಡರು, ಸನ್ಯಾಸಿಗಳು, ಬ್ರಾಹ್ಮಣರು ಮತ್ತು ಜೈನರು ಭಾಗವಹಿಸಿದ್ದರು. ಪ್ರತಿ ದಿನವೂ ಭಗವಾನ್ ಬುದ್ಧನ ಚಿನ್ನದ ವಿಗ್ರಹದ ಪೂಜೆ ಯೊಂದಿಗೆ ಶಿವ ಮತ್ತು ಸೂರ್ಯರ ಆರಾಧನೆಯನ್ನು ಮಾಡಲಾಗುತ್ತಿತ್ತು.
ಕೊಡುಗೈ ದೊರೆಯಾದ ಹರ್ಷವರ್ಧನನು ಬೌದ್ಧ ಬಿಕ್ಷುಗಳಿಗೆ, ಬ್ರಾಹ್ಮಣರಿಗೆ, ಜೈನರಿಗೆ ದಾನಧರ್ಮ ಗಳನ್ನು ಮಾಡಿದನು. ಅಲ್ಲದೆ ದೂರದ ಊರುಗಳಿಂದ ಬಂದ ಯಾತ್ರಿಕರಿಗೂ ದಾನ ನೀಡಿದನು. ಒಂದು ತಿಂಗಳ ಕಾಲ ಬಡವರು, ಅನಾಥರು, ಮತ್ತು ನಿರ್ಗತಿಕರಿಗೂ ಸಹಾಯ ಮಾಡಿದನು. ಹೂಯನ್ ತ್ಸಾಂಗ್‌ನ ವರದಿಯ ಪ್ರಕಾರ ಪ್ರಯಾಗ ಸಮ್ಮೇಳನದಲ್ಲಿ ಸಕಲವನ್ನೂ ದಾನಮಾಡಿದ ಹರ್ಷನು ಖಜಾನೆಯನ್ನೆಲ್ಲಾ ಖಾಲಿಮಾಡಿ ಕೊಂಡನು. ಅಲ್ಲದೆ ತಾನು ಧರಿಸಿದ್ದ ಅಮೂಲ್ಯ ಪೋಷಾಕು, ದೇಹದ ಆಭರಣವನ್ನೆಲ್ಲ ದಾನಮಾಡಿ ಸೋದರಿಯಿಂದ ಒಂದು ಸಾಮಾನ್ಯ ಬಟ್ಟೆಯನ್ನು ಪಡೆದುಕೊಂಡು ಅದನ್ನು ಧರಿಸಿ ದಶದಿಕ್ಕುಗಳ ಬುದ್ಧರನ್ನು ಆರಾಧಿಸಿದನು. ಆಗಷ್ಟೆ ಸಾರ್ಥಕ್ಯದ ಮನೋಭಾವನೆ ಹರ್ಷನಿಗಾಯಿತು ಎಂದು ಬರೆದಿದ್ದಾನೆ.
ಉಪಸಂಹಾರ : ಹರ್ಷವರ್ಧನನು ಅಶೋಕ ಚಕ್ರವರ್ತಿಯಂತೆ ಧರ್ಮ ಛತ್ರಗಳನ್ನು, ಆಸ್ಪತ್ರೆಗಳನ್ನು, ಸಾಲುಮರಗಳನ್ನು, ರಸ್ತೆಗಳನ್ನು ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು. ಬೌದ್ಧ ಧರ್ಮದ ಏಳೆಗಾಗಿ ಶ್ರಮಿಸಿದನು. ಆದ್ದರಿಂದ ಹರ್ಷನನ್ನು ಎರಡನೆಯ ಅಶೋಕನೆಂದು ಕರೆಯಲಾಗುತ್ತದೆ. ಹರ್ಷನು ಬೌದ್ಧಧರ್ಮದ ಅನುಯಾಯಿಯಾದರೂ, ಶಿವ ಮತ್ತು ಸೂರ್ಯನ ಆರಾಧಕನೂ ಆಗಿದ್ದನು. ಕನೌಜ್ ಮತ್ತು ಪ್ರಯಾಗ ಸಮ್ಮೇಳನದಲ್ಲಿ ಈ ಮೂರು ದೇವರ ಪೂಜೆ ಹಾಗೂ ವಿವಿಧ ಮತ ಪಂಥಿಯರಿಗೆ ನೀಡಿದ ದಾನ ಹರ್ಷನ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಯಾವುದೇ ಧರ್ಮವನ್ನು ಕಡೆಗಣಿಸದೆ ಬಹುಮುಖ್ಯವಾಗಿ ಎಲ್ಲರ ಔದಾರ್ಯವನ್ನು ಗಳಿಸುವ ಗುಟ್ಟು ಇದರಲ್ಲಡಗಿತ್ತು.