ಈತ ಗುಪ್ತವಂಶದ ದೊರೆಗಳಲ್ಲಿಯೇ ಅತ್ಯಂತ ಪ್ರಸಿದ್ಧನಾಗಿದ್ದನು. ದಿಗ್ವಿಜಯವೇ ಈತನ ಮೂಲ ಗುರಿಯಾಗಿದ್ದಿತು. ಯುದ್ಧ ಭೂಮಿಯಲ್ಲಿ ಸೋಲಿಲ್ಲದ ಸರದಾರ. ಈತನ ಸಾಧನೆಗಳನ್ನು ಗಮನಿಸಿದ ಡಾ. ವಿ.ಎ. ಸ್ಮಿತ್ ಈತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.
ಸಿಂಹಾಸನಾರೋಹಣ : ಸಮುದ್ರಗುಪ್ತನು ಮೊದಲನೆಯ ಚಂದ್ರಗುಪ್ತನ ಜೇಷ್ಠ ಪುತ್ರನೇನೂ ಆಗಿರಲಿಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ರಾಜತ್ವ ವಂಶಪಾರಂಪರ್ಯವಾಗಿರಬೇಕಿತ್ತು. ಅಂದರೆ ಹಿರಿಯಮಗನೇ ತಂದೆಯ ನಂತರ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಸಮುದ್ರಗುಪ್ತ ಬಹಳ ಬುದ್ದಿವಂತ ಹಾಗೂ ಪರಾಕ್ರಮಿಯಾಗಿದ್ದರಿಂದ ಚಂದ್ರಗುಪ್ತ ತನ್ನ ಉತ್ತರಾಧಿಕಾರಿಯಾಗಿ ಸಮುದ್ರಗುಪ್ತನನ್ನೇ ಆಯ್ಕೆ ಮಾಡಿದನು. ಪ್ರಜೆಗಳ ಮತ್ತು ಮಾಂಡಳಿಕರ ಸನ್ನಿಧಿಯಲ್ಲಿ ಸಮುದ್ರಗುಪ್ತನಿಗೆ ಪಟ್ಟಕಟ್ಟಿ ಜಗತ್ತನ್ನೇ ಆಳು ಎಂದು ಆಶೀರ್ವದಿಸಿದನು.
ಸಮುದ್ರಗುಪ್ತನ ದಿಗ್ವಿಜಯಗಳು : ಸಮುದ್ರಗುಪ್ತ ತನ್ನ ದಿಗ್ವಿಜಯಗಳಿಂದ ಹೆಸರುವಾಸಿಯಾಗಿದ್ದಾನೆ. ಈತ ಕೈಗೊಂಡ ಎಲ್ಲಾ ದಂಡಯಾತ್ರೆಗಳಲ್ಲಿ ಜಯಶೀಲನಾಗಿದ್ದಾನೆ. ಈತನ ದಿಗ್ವಿಜಯಗಳ ಬಗ್ಗೆ ತಿಳಿದುಕೊಳ್ಳಲು ಅಲಹಾಬಾದ್ ಸ್ತಂಭಶಾಸನ ಅತಿ ಉಪಯುಕ್ತ ಆಧಾರವಾಗಿದೆ.
ಅಲಹಾಬಾದ್ ಶಾಸನ : ಈ ಶಾಸನವು ಇಂದು ಅಲಹಾಬಾದ್ ಕೋಟೆಯೊಳಗೆ ಇದೆ. ಇದಕ್ಕಿಂತ ಮುಂಚೆ ಅದು ಅಲಹಾಬಾದ್‌ನಿಂದ 28 ಮೈಲು ದೂರದ ಕೌಶಾಂಬಿಯಲ್ಲಿ ಇತ್ತು. ಈ ಸ್ತಂಭದ ಒಂದು ಭಾಗದಲ್ಲಿ ಅಶೋಕನ ಶಾಸನವಿದೆ. ಮತ್ತೊಂದು ಭಾಗದಲ್ಲಿ ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನವಿದೆ. ಸಮುದ್ರಗುಪ್ತನ ದಂಡನಾಯಕ ಮತ್ತು ಸಂಧಿವಿಗ್ರಹಿಯಾಗಿದ್ದ ಹರಿಶೇಣನು ಅಲಹಾಬಾದ್ ಸ್ತಂಭ ಶಾಸನದ ಕರ್ತೃ. ಇದು ಸಂಸ್ಕೃತ ಭಾಷೆಯಲ್ಲಿದೆ. ಚಂಪೂ ಶೈಲಿಯಲ್ಲಿದ್ದ ಇದು ಗದ್ಯ ಪದ್ಯಗಳೆರಡರಿಂದಲೂ ಮಿಶ್ರಣಗೊಂಡಿದೆ.
ಸಮುದ್ರಗುಪ್ತನ ದಿಗ್ವಿಜಯಗಳ ಕುರಿತು ಡಾ. ಆರ್. ಎಸ್. ತ್ರಿಪಾಟಿಯವರು ಯುದ್ಧ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಹಾಗೂ ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ಧವಾಗಿದ್ದನು ಎಂದಿದ್ದಾರೆ. ಅಲಹಾಬಾದ್ ಸ್ತಂಭ ಶಾಸನದ ಪ್ರಕಾರ ಸಮುದ್ರಗುಪ್ತನ ದಿಗ್ವಿಜಯಗಳು ಈ ಕೆಳಗಿನಂತಿವೆ.
1) ಉತ್ತರ ಭಾರತದ ದಿಗ್ವಿಜಯಗಳು :
100 ಕದನಗಳ ಸಿಂಹ ಎಂದು ಹೆಸರಾದ ಸಮುದ್ರಗುಪ್ತನು ತನ್ನ ಅಧಿಕಾರವನ್ನು ವಿರೋಧಿಸಿದ ಉತ್ತರ ಭಾರತದ ಒಟ್ಟು 9 ಜನ ಅರಸರನ್ನು ಸೋಲಿಸಿದನು. ಅವರುಗಳೆಂದರೆ
| ರಾಜರು | ಆಳುತ್ತಿದ್ದ ಪ್ರದೇಶ | ಈಗಿನ ರಾಜ್ಯಗಳು |
| 1) ನಾಗಸೇನ | 1) ಪದ್ಮಾವತಿ | 1) ಮಧ್ಯಪ್ರದೇಶ |
| 2) ಅಚ್ಯುತ | 2) ಅಹಿಶ್ಚತ್ರ | 2) ಉತ್ತರಪ್ರದೇಶ |
|
3) ಗಣಪತಿನಾಗ 4) ರುದ್ರದೇವ |
3) ಮಥುರ ಅಥವಾ ವಿಧಿಶ |
3) ಉತ್ತರಪ್ರದೇಶ 4) ಮಧ್ಯಪ್ರದೇಶ |
| 5) ಮತ್ತಿಲ | 4) ವಾಕಟಾಕ ರಾಜ | 5) ದೆಹಲಿ |
| 6) ನಾಗದತ್ತ | 5) ಬುಲಂದ ಶಹರ | 6) ಮಥುರ |
| 7) ಚಂದ್ರವರ್ಮ | 6) ನಾಗದೊರೆ | 7) ಬಂಗಾಳ |
| 8) ನಂದಿ | 7) ಪುಷ್ಕರಣದ ರಾಜ | 8) ಉತ್ತರ ಪ್ರದೇಶ |
| 9) ಬಲವರ್ಮನ್ | 8) ನಾಗದೊರೆ | 9) ಅಸ್ಸಾಂ |
| 9) ಅಸ್ಸಾಂ |
2) ಅಡವಿ ರಾಜ್ಯಗಳನ್ನು ಸೆದೆಬಡಿದದ್ದು : ಉತ್ತರ ಪ್ರದೇಶ, ಮಧ್ಯಪ್ರದೇಶ, ನಾಗಪುರ, ಬಾಗೇಲ್ ಖಂಡ, ರೇವಾ ಹಾಗೂ ವಿಂದ್ಯ ಪರ್ವತದ ಅಡವಿ ರಾಜ್ಯಗಳನ್ನು ಗೆದ್ದುಕೊಂಡ ಸಮುದ್ರಗುಪ್ತ ಅವುಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.
3) ದಕ್ಷಿಣ ಭಾರತದ ದಿಗ್ವಿಜಯಗಳು : ಆರ್ಯಾವರ್ತವನ್ನು ಗೆದ್ದುಕೊಂಡ ನಂತರ ಸಮುದ್ರಗುಪ್ತನು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದಕ್ಷಿಣದ ಕಡೆಗೆ ಗಮನಹರಿಸಿದನು. ನಂತರ ದಕ್ಷಿಣದ ಎಲ್ಲಾ 12 ರಾಜರನ್ನು ಸೋಲಿಸಿದನೆಂದು ಅಲಹಾಬಾದ್ ಸ್ತಂಭಶಾಸನ ಹೇಳುತ್ತದೆ. ಅವುಗಳೆಂದರೆ
ರಾಜನ ಹೆಸರು ಇಂದಿನ ಪ್ರದೇಶ
1) ಮಹಾಕಾಂತಾರದ ವ್ಯಾಘ್ರರಾಜ ಒರಿಸ್ಸಾ ಅಥವಾ ಬುಂದೇಲ ಖಂಡದ ಒಂದು ಪ್ರದೇಶ
2) ಕೋಸಲದ ಮಹೇಂದ್ರ ದಕ್ಷಿಣ ಕೋಸ
(ರಾಯಪುರ, ಸಂಬಲಪುರ, ಬಿಲಾಸ್ ಪುರ)
3) ಕೊಟ್ಟೂರಿನ ಸ್ವಾಮಿದತ್ತ ಗಂಜಾಂ ಜಿಲ್ಲೆಯ ಮಹೇಂದ್ರಗಿರಿಯ ಹತ್ತಿರ ಕೊತ್ತೂರು
4) ಷಿಷ್ಠಪುರದ ಮಹೇಂದ್ರಗಿರಿ ಪಶ್ಚಿಮ ಗೋದಾವರಿ ಜಿಲ್ಲೆಯ ಇಂದಿನ ಪೀರಾಪುರಂ
5) ಕೌರಾಲದ ಮಾಂತರಾಜ ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರದೇಶ
6) ಏರಂಡಪಲ್ಲದ ದಮನ ವಿಶಾಖಪಟ್ಟಣದ ಪ್ರದೇಶ
7) ಕಂಚಿಯ ವಿಷ್ಣುಗೋಪ ತಮಿಳುನಾಡಿನ ಕಂಚಿ
8) ಅವಮುಕ್ತದ ನೀಲರಾಜ ಕಂಚಿಯ ಹತ್ತಿರದ ಪ್ರದೇಶ
9) ವೆಂಗಿಯ ಹಸ್ತಿವರ್ಮ ಕೃಷ್ಣಾ-ಗೋದಾವರಿ ನಡುವಣ ಪ್ರದೇಶ
10) ಪಾಲಕ್ಕದ ಉಗ್ರಸೇನ ನೆಲ್ಲೂರು ಜಿಲ್ಲೆಯ ಪಾಲಕ್ಕಾಡ
11) ದೇವರಾಷ್ಟ್ರದ ಕುಬೇರ ಮಹಾರಾಷ್ಟ್ರದ ಸತಾರಾ ಜಿಲ್ಲೆ
12) ಕುಸ್ತಲಪುರದ ಧನಂಜಯ ಉತ್ತರ ಅರ್ಕಾಟ ಜಿಲ್ಲೆ
ದಕ್ಷಿಣದ ಈ ಪ್ರಾಂತ್ಯಗಳು ಪಾಟಲಿಪುತ್ರದಿಂದ ಬಹಳ ದೂರವಿದ್ದುದರ ಕಾರಣ ಅವುಗಳನ್ನು ನೇರ ಆಳ್ವಿಕೆಗೆ ಒಳಪಡಿಸಲು ಸಮುದ್ರಗುಪ್ತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ತನ್ನ ಸಾರ್ವಭೌಮವನ್ನು ಒಪ್ಪಿಕೊಂಡ ಅರಸರಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ಆ ಪ್ರದೇಶಗಳನ್ನು ಆಯಾ ರಾಜರುಗಳಿಗೆ ಒಪ್ಪಿಸಿದನು.
4) ಗಡಿನಾಡ ರಾಜ್ಯಗಳನ್ನು ಗೆದ್ದುಕೊಂಡದ್ದು : ಸಮುದ್ರಗುಪ್ತನ ಶಕ್ತಿ ಸಾಮರ್ಥ್ಯವನ್ನು ಕೇಳಿ ತಿಳಿದುಕೊಂಡಿದ್ದ ಗಡಿರಾಜ್ಯಗಳಾದ ಅಸ್ಸಾಂನ ಕಾಮರೂಪ, ಉತ್ತರ ಅಸ್ಸಾಂನ ದೇವಕ, ಬಂಗಾಳದ ಸಮತಟ, ನೇಪಾಳದ ಕರ್ತೃಪುರ ಹಾಗೂ ರೋಹಿಲ್ ಖಂಡಗಳ ರಾಜರು ತಾವಾಗಿಯೇ ಬಂದು ಸಮುದ್ರಗುಪ್ತನಿಗೆ ಕಪ್ಪಕಾಣಿಕೆ ಸಲ್ಲಿಸಿ ಸಾರ್ವಭೌಮತ್ವವನ್ನು ಒಪ್ಪಿಕೊಂಡರು
5) ಗಣರಾಜ್ಯಗಳ ವಿರುದ್ಧ ಯುದ್ಧ : ಗಣರಾಜ್ಯಗಳಾದ ಮಾಳ್ವರು, ಕಾಕರು, ಸಂಕನಿಕರು, ಕ್ಷುದ್ರಕರು, ಅಭೀರರು, ಅರ್ಜುನಾಯನರು, ಪ್ರರ್ಜನರು, ಯೌದೇಹರು ಹಾಗೂ ಮಾದ್ರಕರು ಸಮುದ್ರಗುಪ್ತನಿಂದ ಸೋತು ಸಾರ್ವಭೌಮತ್ವವನ್ನು ಸ್ವೀಕರಿಸಿದರು.
ವಿದೇಶಗಳಲ್ಲಿ ಅವನ ಮಹಿಮೆ : ಸಮುದ್ರಗುಪ್ತನ ಕೀರ್ತಿ ವಿದೇಶಗಳಿಗೂ ಹರಡಿತ್ತು. ಶಕರ ಹರಿಶೇಣನು ಗುಪ್ತರಿಗೆ ಹೆಚ್ಚು ಗೌರವ ನೀಡಿದ್ದನು. ಅದರಲ್ಲೂ ಕಾಬೂಲಿನ ಕುಶಾನ ಅರಸನಾದ ದೇವಪುತ್ರಶಾಹಿ ತನ್ನ ರಾಯಭಾರಿಗಳನ್ನು ಸಮುದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದನು. ಸಿಂಹಳದ ಅರಸ ಬುದ್ಧಗಯಾದಲ್ಲಿ ಒಂದು ಬೌದ್ಧವಿಹಾರವನ್ನು ನಿರ್ಮಿಸಲು ಸಮುದ್ರಗುಪ್ತನಿಂದ ಅನುಮತಿ ಪಡೆದನು.
6) ಸಮುದ್ರಗುಪ್ತನ ರಾಜ್ಯ ವಿಸ್ತಾರ : ಡಾ. ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯ ಉತ್ತರ ಹಿಮಾಲಯದಿಂದ ಹಿಡಿದು ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಹಾಗೂ ಪಂಜಾಬಿನಿಂದ ಹಿಡಿದು ಬ್ರಹ್ಮಪುತ್ರಾ ನದಿಯವರೆಗೂ ಹಬ್ಬಿದ್ದಿತು.
7) ಅಶ್ವಮೇಧಾಚರಣೆ : ಅನೇಕ ದಿಗ್ವಿಜಯಗಳನ್ನು ಪೂರ್ಣಗೊಳಿಸಿದ ಸಮುದ್ರಗುಪ್ತನು ಅವುಗಳ ನೆನಪಿಗಾಗಿ ಅಶ್ವಮೇಧಯಾಗವನ್ನು ಮಾಡಿದನು. ಹಾಗೂ ಅಶ್ವಮೇಧ, ಪರಾಕ್ರಮಿ, ರಾಜಾಧಿರಾಜ ಹಾಗೂ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದನು. ತನ್ನ ವಿಜಯದ ಸಂಕೇತವಾಗಿ ಅನೇಕ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದನು. ಅವುಗಳ ಮೇಲೆ ಕುದುರೆಯ ಚಿತ್ರವನ್ನು ಟಂಕಿಸಿದನು. ಅದಲ್ಲದೆ ವಿವಿಧ ಬಗೆಯ 9 ಚಿನ್ನದ ನಾಣ್ಯಗಳನ್ನು ಟಂಕಿಸಿದನು. ಅವುಗಳೆಂದರೆ 1) ಹುಲಿಮಾದರಿ 2) ವೀಣಾಪಾಣಿ 3) ಅಶ್ವಮೇಧ 4) ಭರ್ಚಿ 5) ಧನಸ್ಸು 6) ಶಂಖ 7) ಛತ್ರಿ 8) ಗಂಡುಗೊಡಲಿ ಇತ್ಯಾದಿ.
8) ಸಮುದ್ರಗುಪ್ತನ ಕಲಾಪೋಷಣೆ : ಕಲೆ, ಸಾಹಿತ್ಯ, ನೃತ್ಯ ಹಾಗೂ ಶಿಲ್ಪಕಲೆಗಳಿಗೆ ಗುಪ್ತರು ಮಹಾನ್ ಕಾಣಿಕೆಯನ್ನು ನೀಡಿದ್ದಾರೆ. ಅವನ ನಾಣ್ಯಗಳ ಮೇಲೆ ವೀಣಾಪಾಣನಾಗಿ ಕುಳಿತಿರುವ ಚಿತ್ರವನ್ನು ನೋಡಿದರೆ ಅವರಿಗೆ ಸಂಗೀತದ ಬಗ್ಗೆ ಇದ್ದ ಅಭಿರುಚಿಯನ್ನು ತಿಳಿಸುತ್ತದೆ. ಸಮುದ್ರಗುಪ್ತ ತನ್ನ ಆಸ್ಥಾನದಲ್ಲಿ ಅನೇಕ ಕವಿಗಳು ಹಾಗೂ ಪಂಡಿತರಿಗೆ ಆಶ್ರಯ ನೀಡಿದ್ದನು. ಅಹಲಾಬಾದ್ ಶಾಸನ ಸಮುದ್ರಗುಪ್ತನನ್ನು ಕವಿರಾಜ ಎಂದು ವರ್ಣಿಸಿದೆ. ಸ್ವತ ಅವನೇ ಕೃಷ್ಣ ಚರಿತ್ರೆಯನ್ನು ರಚಿಸಿದನು.
ವ್ಯಕ್ತಿತ್ವ : ಸಮುದ್ರಗುಪ್ತ ಅಸಾಧಾರಣ ಪ್ರತಿಭೆಯನ್ನು ಹೊಂದಿದ ಧೀಮಂತ ನೂರಾರು ಕದನಗಳಲ್ಲಿ ಹೋರಾಡಿ ಅಪಾರ ಗೆಲವು ಸಾಧಿಸಿದ ವೀರ. ಈತ ಅಲೆಕ್ಸಾಂಡರನಂತೆ ಯಶಸ್ವಿ ದಿಗ್ವಿಜಯಶಾಲಿ, ದಕ್ಷ ಆಡಳಿತಗಾರ, ಮಹಾಸಾಮ್ರಾಜ್ಯದ ನಿರ್ಮಾಪಕನಾಗಿ ಇಡೀ ಗುಪ್ತರಲ್ಲಿಯೇ ಪ್ರಸಿದ್ಧ ಅರಸನಾಗಿದ್ದನು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಂದುಗೂಡಿಸಿ ಏಕಚಕ್ರಾಧಿಪತ್ಯಕ್ಕೆ ಒಳಪಡಿಸಿದುದು ಸಮುದ್ರಗುಪ್ತನ ಮಹಾನ್ ಸಾಧನೆಯಾಗಿದೆ. ಆರ್.ಸಿ ಮುಜಂದಾರ್ ಬರೆದಂತೆ ಸಮುದ್ರಗುಪ್ತನು ಭಾರತೀಯ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿ, ವಿಶಿಷ್ಟ ದೊರೆ, ಸೇನಾನಿಯಾಗಿ ಹಾಗೂ ಆಡಳಿತಗಾರನಾಗಿ ಅವನ ಸಾಧನೆ ಅಪಾರ. ಇವನು ಭಾರತದ ಇತಿಹಾಸದಲ್ಲಿ ನವಯುಗಕ್ಕೆ ನಾಂದಿಹಾಡಿದನು. ಅದೇ ಮುಂದೆ ಸುವರ್ಣಯುಗಕ್ಕೆ ದಾರಿಯಾಯಿತು.