ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು. ಖಗೋಳ ಶಾಸ್ತ್ರ, ವೈದ್ಯಕೀಯ, ಗಣಿತ ಶಾಸ್ತ್ರ, ಲೋಹ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಸಂಪಾದಿಸಿದರು. ಪರಿಣಾಮವಾಗಿ ವೈಜ್ಞಾನಿಕ ಸಾಹಿತ್ಯ ರೂಪ ತಳೆಯಿತು.
ಆರ್ಯಭಟ : ಇವನು ಗುಪ್ತರ ಕಾಲದ ಶ್ರೇಷ್ಠ ಖಗೋಳ ವಿಜ್ಞಾನಿ ಮತ್ತು ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಖಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದಿಂದ ಪ್ರತ್ಯೇಕಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಪ್ರಖ್ಯಾತ ಕೃತಿಗಳೆಂದರೆ, ‘ಆರ್ಯಭಟೀಯಂ’ ಮತ್ತು ‘ಸೂರ್ಯ ಸಿದ್ಧಾಂತ’
- ಆರ್ಯಭಟನು ತನ್ನ ಕೃತಿಯಲ್ಲಿ ಭೂಮಿ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾರಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ‘ಭೂಗೋಲ: ಸರ್ವತೋ ವೃತಃ’.
- ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದರಿಂದ ಹಗಲು ರಾತ್ರಿಗಳಾಗುತ್ತಿವೆ ಎಂದು ಪ್ರಕಟ ಪಡಿಸಿದ್ದಾನೆ.
- ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಗ್ರಹಣಗಳಾಗುತ್ತವೆ ಎಂದು ಜಗತ್ತಿಗೆ ಸಾರಿ ಹೇಳಿದನು.
- ಸೂರ್ಯ ವರ್ಷದ (ಒಂದು ವರ್ಷದ) ಅವಧಿಯನ್ನು 365,3586805 ದಿನಗಳೆಂದು ಗೊತ್ತು ಪಡಿಸಿದನು.
- ಪ್ರಾಚೀನರಿಗೆ ಗೊತ್ತಿಲ್ಲದ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ಕೊಟ್ಟ ಶ್ರೇಯಸ್ಸು ಆರ್ಯಭಟನಿಗೆ ಸಲ್ಲುತ್ತದೆ. ಅವನ ಅಂಕನ ಪದ್ಧತಿಯಲ್ಲಿ ಇದು ಬರುತ್ತದೆ. ಆದಾಗ್ಯೂ ಈ ಪದ್ಧತಿಯನ್ನು ಆರ್ಯಭಟನೇ ಹುಟ್ಟುಹಾಕಿದನೋ ಅಥವಾ ಅಸ್ತಿತ್ವದಲ್ಲಿ ಇದ್ದ ಪದ್ಧತಿಯೊಂದನ್ನು ಸುಧಾರಿಸಿದನೋ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
- ಪೈ ನ ಸರಿಯಾದ ಮೌಲ್ಯ 3,1416 ಎಂದು ಪ್ರತಿಪಾಧಿಸಿದನು.
ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟನ ಕೊಡುಗೆ ಅಸಾಧಾರಣವಾದುದು. ಒಟ್ಟಿನಲ್ಲಿ ಇಡೀ ಪ್ರಪಂಚದ ಖಗೋಳ ಶಾಸ್ತ್ರಜ್ಞರ ಮಧ್ಯೆ ಅತಿ ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾನೆ.
ವರಾಹಮಿಹಿರ : ವರಹಮಿಹಿರನು ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ಇವನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತಶಾಸ್ತ್ರ, ಜಾತಕಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳೆಂದು ವಿಭಜಿಸಿದ್ದಾನೆ. ಅಲ್ಲದೆ ಖಗೋಳ ವಿಜ್ಞಾನಕ್ಕಿಂತ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾನೆ.
ವರಾಹಮಿಹಿರನ ಪ್ರಸಿದ್ಧ ಕೃತಿ ‘ಬೃಹತ್ ಸಂಹಿತ’ ಇದನ್ನು ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ರಹಗಳ ಚಲನ ವಲನಗಳು, ಮನುಷ್ಯರ ಮೇಲೆ ಅವುಗಳ ಪರಿಣಾಮಗಳು, ಕೆರೆಗಳನ್ನು ತೋಡುವುದು, ತೋಟವನ್ನು ಮಾಡುವುದು, ಬೇರೆ-ಬೇರೆ ವರ್ಗದ ಸ್ತ್ರೀಯರ ಹಾಗೂ ಪ್ರಾಣಿಗಳ ಲಕ್ಷಣಗಳು, ಶಕುನಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ರತ್ನಪರೀಕ್ಷೆ, ವಿವಾಹ ಮೊದಲಾದವುಗಳ ಬಗ್ಗೆ ಮಾಹಿತಿ ಈ ಗ್ರಂಥದಲ್ಲಿದೆ. ಇವನ ಮತ್ತೊಂದು ಕೃತಿ ಪಂಚಸಿದ್ಧಾಂತಿಕ. ಇದರಲ್ಲಿ ಖಗೋಳ ವಿಜ್ಞಾನದ ಐದು ಪಂಥಗಳ ಬಗ್ಗೆ ಬರೆದಿದ್ದಾನೆ.
ಬ್ರಹ್ಮಗುಪ್ತ : ಇವನೂ ಸಹ ಪ್ರಸಿದ್ಧ ಖಗೋಳ ಮತ್ತು ಗಣಿತಶಾಸ್ತ್ರಜ್ಞನಾಗಿದ್ದನು. ಇವನ ಎರಡು ಕೃತಿಗಳೆಂದರೆ
ಬ್ರಹ್ಮ ಸಿದ್ಧಾಂತ ಮತ್ತು ಖಂಡಖಾದ್ಯ. ಇವನು ತನ್ನ ಕೃತಿಗಳಲ್ಲಿ ಚೌಕೋನ, ಷಟ್ಕೋನ, ತ್ರಿಕೋನ, ಜ್ಯಾಮಿತಿ, ಲಂಬಕೋನ, ವೃತ್ತ ಮುಂತಾದವುಗಳ ಬಗ್ಗೆ ಬರೆದಿದ್ದಾನೆ. ಗ್ರಹಗಳ ಸ್ಥಾನಗಳನ್ನು, ಗ್ರಹಣಗಳ ಲೆಕ್ಕಾಚಾರಗಳನ್ನು ಗುಣಿಸುವುದನ್ನು ವಿವರಿಸಿದ್ದಾನೆ. ಜಗತ್ತಿಗೆ ಆಕರ್ಷಿಸುವ ಶಕ್ತಿ ಇರುವುದರಿಂದಲೇ ಎಲ್ಲಾ ವಸ್ತುಗಳು ನೆಲಕ್ಕೆ ಬೀಳುತ್ತವೆ ಎಂಬ ಸಿದ್ಧಾಂತವನ್ನು ನ್ಯೂಟನ್‌ಗಿಂತ ಹಲವು ಶತಮಾನಗಳ ಹಿಂದೆಯೇ ಪ್ರಕಟಿಸಿದ್ದನು.
ವಾಗ್ಬಟ : ವಾಗ್ದಟನ ಪ್ರಸಿದ್ಧ ಕೃತಿ ‘ಅಷ್ಟಾಂಗ ಸಂಗ್ರಹ’. ಇದೊಂದು ವೈದ್ಯಶಾಸ್ತ್ರದ ಗ್ರಂಥವಾಗಿದ್ದು, ಆಯುರ್ವೇದದ ಬೆಳವಣಿಗೆಗೆ ಸಹಾಯಕವಾಯಿತು.
ಪಾಲಕಾಪ್ಯ : ಇವನ ಕೃತಿ ‘ಹಸ್ತಾ ಆಯುರ್ವೇದ’, ಅಂಗದೇಶದ ರಾಜನಾದ ರೋಮಪಾದ ಹಾಗೂ ಪಾಲಕಾಪ್ಯಮುನಿ ಇವರ ಸಂಭಾಷಣೆಯೇ ಗ್ರಂಥರೂಪವನ್ನು ಪಡೆದಿದೆ. ಇದರಲ್ಲಿ ಆನೆಗೆ ಬರುವ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ದೊರೆಯುತ್ತದೆ.
ಚರಕ, ಶುಶೃತ, ಧನ್ವಂತರಿ : ಇವರುಗಳು ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಚರಕನ ‘ಚರಕಸಂಹಿತೆ’, ಸುಶೃತನ ‘ಸುಶೃತ ಸಂಹಿತೆ’ ಮತ್ತು ಧನ್ವಂತರಿಯ ‘ಆಯುರ್ವೇದ ನಿಘಂಟು’ ಪ್ರಾಚೀನ ಚಿಕಿತ್ಸಾ ಪದ್ಧತಿಯ ಪ್ರಸಿದ್ಧ ಕೃತಿಗಳಾಗಿವೆ.
ಲೋಹ ಜ್ಞಾನ : ಗುಪ್ತರ ಕಾಲದಲ್ಲಿ ಲೋಹ ವಿದ್ಯೆಯು ಅಭಿವೃದ್ಧಿಯಾಯಿತು. ಅವರ ಕಾಲದ ನಾಣ್ಯಗಳು ಮತ್ತು ಲೋಹಸ್ತಂಭಗಳು ಇದಕ್ಕೆ ಆಧಾರವಾಗಿವೆ. ದೆಹಲಿ ಬಳಿಯಿರುವ ಮೆಹರೌಲಿ ಎಂಬ ಹಳ್ಳಿಯಲ್ಲಿರುವ ಬೃಹತ್ ಕಬ್ಬಿಣದ ಸ್ತಂಭ ಜಗತ್ ಪ್ರಸಿದ್ಧವಾಗಿದೆ. ಇದು ಎರಡನೇ ಚಂದ್ರಗುಪ್ತನ ಕಾಲಕ್ಕೆ ಸೇರಿದ್ದು, ಅಂದಿನ ಲೋಹಜ್ಞಾನಕ್ಕೆ ಕನ್ನಡಿಯಾಗಿದೆ. ಇದು 23 ಅಡಿ 8 ಅಂಗುಲ ಉದ್ದವಿದೆ. 6000 ಕಿಲೋಗ್ರಾಂ ತೂಕವಿದೆ. ನೂರಾರು ವರ್ಷಗಳು ಕಳೆದರೂ ಮಳೆ, ಗಾಳಿಗೆ ಸ್ವಲ್ಪವೂ ತುಕ್ಕುಹಿಡಿಯದೆ ನಿಂತ ಪರಿ ಅಂದಿನ ಲೋಹ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.
ಬುದ್ಧನ ತಾವುದ ಮೂರ್ತಿ: ಗುಪ್ತರ ಕಾಲದ ಬುದ್ಧನ ತಾಮ್ರದ ಮೂರ್ತಿಯೊಂದು ದೊರೆತ್ತಿದ್ದು, ಅದೀಗ ‘ಬರ್ಮಿಂಗ್ ಹ್ಯಾಂ’ ವಸ್ತು ಸಂಗ್ರಹಾಲಯದಲ್ಲಿದೆ. ಇದು 71/2 ಅಡಿ ಎತ್ತರವಿದೆ. 1000 ಕೆ.ಜಿ. ತೂಕವಿದೆ. ಇದೂ ಸಹ ಗುಪ್ತರಕಾಲದ ಲೋಹ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಬಣ್ಣದ ತಯಾರಿಕೆ ಬಹಳ ಚೆನ್ನಾಗಿ ಬೆಳೆಯಿತು. ಇಂದಿಗೂ ಮಾಸದೇ ಉಳಿದ ವರ್ಣಲೇಪಿತ ಅಜಂತಾ ಚಿತ್ರಗಳು ಗುಪ್ತರ ಕಾಲದ ಅತ್ಯುತ್ತಮ ಕಲಾ ಕೊಡುಗೆಗಳಾಗಿವೆ. ಎ.ಎಲ್. ಭಾಷ್ಯಂ ರವರ ಪ್ರಕಾರ ʻದ ವಂಡರ್ ದಟ್ ವಾಸ್ ಇಂಡಿಯಾ’ ಎಂಬ ಕೃತಿಯಲ್ಲಿ ಹೇಳಿರುವಂತೆ ಗುಪ್ತರ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಳಕೆಯಲ್ಲಿತ್ತು. ಎರಡನೆ ನಾಗಾರ್ಜುನನು ರಸಾಯನ ಶಾಸ್ತ್ರದಲ್ಲಿ ಬಹು ದೊಡ್ಡ ಪಂಡಿತನಾಗಿದ್ದನು. ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.