ಗುಪ್ತರ ಕಾಲದಲ್ಲಿ ಹಿಂದೂ ಧರ್ಮ
ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.
1. ಹಿಂದೂ ಕಲಾ ಮತ್ತು ವಾಸ್ತು ಪರಂಪರೆಯ ಪ್ರಾರಂಭ : ಗುಪ್ತರಿಗಿಂತ ಹಿಂದೆ ಹಿಂದು ದೇವರ ವಿಗ್ರಹ ಕೆತ್ತುವ ಅಥವಾ ದೇವಾಲಯ ನಿರ್ಮಿಸುವ ಪರಿಪಾಠವಿರಲಿಲ್ಲ. ಅದನ್ನು ಪ್ರಾರಂಭ ಮಾಡಿದವರೇ ಗುಪ್ತರು. ಪರಿಣಾಮವಾಗಿ ದೇವಾನು ದೇವತೆಗಳ ವಿಗ್ರಹಗಳು ಮತ್ತು ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ಗುಪ್ತ ದೊರೆಗಳು ಹೇರಳವಾಗಿ ಧನಸಹಾಯವನ್ನೂ ಮಾಡಿದರು. ಆ ಮೂಲಕ ಗುಪ್ತರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ.
2. ಬ್ರಾಹ್ಮಣರಿಗೆ ಪ್ರಥಮ ಪ್ರಾಶಸ್ಯ : ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ ಮೊದಲಿನದಾಗಿದೆ. ಆದರೆ ಮೌರ್ಯರ ಮತ್ತು ಕುಶಾನರ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಸ್ಥಾನಮಾನ ಮಂಕಾಗಿತ್ತು. ಯಾವಾಗ ಗುಪ್ತರು ಅಧಿಕಾರಕ್ಕೆ ಬಂದರೋ ಅವರು ಸನಾತನ ಧರ್ಮಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಪರಿಣಾಮವಾಗಿ ಸನಾತನ ಧರ್ಮ ಅಥಾರ್ತ್ ಬ್ರಾಹ್ಮಣಧರ್ಮದ ವಾರಸುದಾರರಂತಿದ್ದ ಬ್ರಾಹ್ಮಣರಿಗೂ ಪ್ರಥಮ ಪ್ರಾಶಸ್ತ್ರ ಲಭ್ಯವಾಯಿತು. ಅರಮನೆಗಳಲ್ಲಿ, ಆಡಳಿತದಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಮಹತ್ವ ನೀಡತೊಡಗಿದ್ದರಿಂದ ಅವರ ಸ್ಥಾನ ಹೆಚ್ಚಾಯಿತು.
3 ಯಜ್ಞ-ಯಾಗಗಳ ಏಲ್ಲೆ : ಹಿಂದೂ ಧರ್ಮದ ವಿಶೇಷ ಲಕ್ಷಣಗಳಲ್ಲಿ ಯಜ್ಞ ಯಾಗಗಳು ಬರುತ್ತವೆ. ಹಿಂದೂಧರ್ಮದ ಅನುಯಾಯಿಗಳಾದ ಗುಪ್ತರು ಯಜ್ಞ- ಯಾಗಾಧಿಗಳಿಗೆ ಪ್ರಾಶಸ್ತ್ರ ನೀಡತೊಡಗಿದರು. ಪರಿಣಾಮವಾಗಿ ಅಶ್ವಮೇದ, ವಾಜಪೇಯ, ರಾಜಸೂಯ ಯಾಗಗಳು ಬಹು ಜನಪ್ರಿಯವಾದವು.
4. ಶೈವ ಮತ್ತು ಶಾಕ್ತ ಪಂಥಗಳ ಪ್ರಚಾರ : ಗುಪ್ತರ ಕಾಲದಲ್ಲಿ ಲಕುಲೀಶನಿಂದ ಶೈವ ಪಂಥ ಹೆಚ್ಚು ಪ್ರಚಾರವಾಯಿತು. ಹಾಗೆಯೇ ಶಾಕ್ತ ಪಂಥಗಳು ಅಥವಾ ದೇವಿ/ಶಕ್ತಿಯ ಆರಾಧನೆ ಕೂಡ ಜನಪ್ರಿಯವಾಯಿತು.
5. ವಿವಿಧ ಹೆಸರುಗಳಿಂದ ದೇವರ ಆರಾಧನೆ : ಗುಪ್ತರ ಕಾಲಾವಧಿಯಲ್ಲಿ ಶಿವ ಮತ್ತು ವಿಷ್ಣುರ ಅವತಾರಗಳು ಜನಪ್ರಿಯವಾದವು. ವಿಷ್ಣುವನ್ನು ಕೃಷ್ಣ, ಜನಾರ್ಧನ, ಅನಂತಶಯನ, ಗದಾಧರ, ವಾಸುದೇವ, ಗೋವಿಂದ, ನಾರಾಯಣ ಎಂಬುದಾಗಿ ಕರೆದು ವಿವಿಧ ರೂಪಗಳಲ್ಲಿ ಆರಾಧಿಸತೊಡಗಿದರು. ಶಿವನನ್ನು ಜನಾರ್ಧನ, ಶಂಕರ, ಹರನೆಂದು ಪೂಜಿಸತೊಡಗಿದರು. ಪಾರ್ವತಿಯು ಆಧಿಶಕ್ತಿ, ಭಗವತಿಯಾಗಿ ಕಂಡು ಬಂದಳು. ವಿಗ್ರಹಾರಾಧನೆ ಬಹು ಜನಪ್ರಿಯವಾಯಿತು.
6. ಪುರಾಣಗಳ ಪರಿಪೂರ್ಣತೆ : ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾದ 18 ಪುರಾಣಗಳು ಪರಿಪೂರ್ಣವಾಗಿ ರಚಿಸಲ್ಪಟ್ಟಿದ್ದು ಗುಪ್ತರ ಕಾಲಾವಧಿಯಲ್ಲಿ. ಅವು ಪುನಃ ಬರೆಯಲ್ಪಟ್ಟಿದ್ದು ಮತ್ತು ಪರಿಷ್ಕಾರವಾದದ್ದೂ ಆ ಕಾಲಾವಧಿಯಲ್ಲೆ.
7. ವೈಷ್ಣವ ಪಂಥದ ಪ್ರಾಧಾನ್ಯತೆ : ಗುಪ್ತ ಅರಸರು ಬಹುಮುಖ್ಯವಾಗಿ ವಿಷ್ಣು ಆರಾಧಕರಾಗಿದ್ದರು. ತಮ್ಮನ್ನು ಪರಮ ಭಾಗವತರೆಂದು ಕರೆದುಕೊಂಡಿದ್ದಾರೆ. ಗುಪ್ತರ ನಾಣ್ಯಗಳಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿಯ ಚಿತ್ರ ಮುದ್ರಿಸಲ್ಪಟ್ಟಿದೆ. ಅರಸರು ವಿಷ್ಣುವಿನ ವಾಹನವಾದ ಗರುಡನ ಚಿತ್ರವನ್ನು ಬಳಸುತ್ತಿದ್ದರು. ಅವರ ಬಾವುಟವನ್ನು ವಿಷ್ಣು ದ್ವಜವೆಂದು ಕರೆಯುತ್ತಿದ್ದರು
8. ಸಪ್ತ ಮಾತೃಕೆಯರ ಆರಾಧನೆ : ಗುಪ್ತರ ಕಾಲದಲ್ಲಿ ಸಪ್ತಮಾತೃಕೆಯರ ಹೆಸರುಗಳು ಕಂಡು ಬರುತ್ತವೆ. ಬ್ರಾಹ್ಮ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಂದ್ರಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರ ಆರಾಧನೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ.