ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ ಗಳು. ಇವುಗಳನ್ನು ಒಟ್ಟಾರೆ ಹೆಸರಿಸಿರುವುದು ʻವೇದವಾಜ್ಯಯ’ ಎಂಬುದಾಗಿ. ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಎರಡು ಪ್ರಮುಖ ಮಹಾಕಾವ್ಯಗಳಿವೆ.
ಎ) ಚತುರ್ವೇದಗಳು : ʻವೇದ’ ಎಂಬುದು ಸಂಸ್ಕೃತ ಭಾಷೆಯ ‘ವಿದ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಜ್ಞಾನ’ ಎಂಬುದಾಗಿ ಚತುರ್ವೇದಗಳು ಜ್ಞಾನಕಾಂಡದ ಅಂಗಗಳು. ಆರ್ಯರು ತಮ್ಮ ಪೂರ್ವಿಕರಿಂದ ಪಡೆದ ಮಂತ್ರಗಳನ್ನು ಸ್ವರಬದ್ಧವಾಗಿ ಪಠಿಸುತ್ತಿದ್ದರು. ಅವುಗಳೇ ಋಕ್ಕುಗಳು ಅಥವಾ ಸೂಕ್ತಗಳು, ಚತುರ್ವೇದಗಳು ಇಂತಹ ಸೂಕ್ತಗಳಿಂದ ಕೂಡಿವೆ.
ವೇದಗಳು ನಾಲ್ಕು 1) ಋಗ್ವೇದ, 2) ಯಜುರ್ವೇದ, 3) ಸಾಮವೇದ 4) ಅಥರ್ವಣವೇದ.
1) ಋಗ್ವೇದ : ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ , ಋಗ್ವೇದದಲ್ಲಿ 1028 ಸೂಕ್ತಗಳಿವೆ. ಇದನ್ನು 10 ಮಂಡಲಗಳಾಗಿ ವಿಂಗಡಿಸಲಾಗಿದೆ.’ ಋಗ್ವೇದದ ಕಾಲಮಾನ ಕ್ರಿ.ಪೂ 2000 ದಿಂದ 1500. ಆರ್ಯರ ನಾಗರೀಕತೆಯ ಆರಂಭದ ಚಾರಿತ್ರಿಕ ವಿಚಾರಗಳ ಬಗ್ಗೆ ಋಗ್ವೇದವು ಹೆಚ್ಚು ವಿವರ ನೀಡುತ್ತದೆ. ಹಾಗಾಗಿ ಋಗ್ವೇದವು ಒಂದು ಚಾರಿತ್ರಿಕ ಆಧಾರ.
2) ಯಜುರ್ವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹವೇ ಯಜುರ್ವೇದವಾಗಿದೆ. ಯಜುರ್ವೇದವನ್ನು ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದವೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಯಜುರ್ವೇದವು ಉತ್ತರ ವೈದಿಕ ಕಾಲದಲ್ಲಿ ರಚನೆಯಾಗಿದೆ.
3) ಸಾಮವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹಣೆಯೇ ಸಾಮವೇದ. ಇವುಗಳನ್ನು ಗಾನಮಯವಾಗಿ ರಚಿಸಲಾಗಿದೆ. ಇದರಲ್ಲಿ 78 ಮಂತ್ರಗಳು ಮಾತ್ರ ಹೊಸದಾಗಿ ಸೇರ್ಪಡೆಯಾಗಿವೆ. ಸಾಮವೇದದ ಸೂಕ್ತಗಳನ್ನು ಪಠಿಸುವಾಗ ಗಾನಮಯವಾಗಿಯೇ ಪಠಿಸಬೇಕಾಗಿತ್ತು. ಇದರಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಸಪ್ತಸ್ವರಗಳು ಪ್ರಯೋಗಿಸಲ್ಪಟ್ಟಿವೆ ಎಂಬುದು ಕೆಲವರ ಅನಿಸಿಕೆ, ಆರ್ಯರ ಸಂಗೀತ ಜ್ಞಾನದ ಬಗ್ಗೆ ಇದು ವಿವರ ನೀಡುತ್ತದೆ.
4) ಅಥರ್ವಣವೇದ : ವೇದಗಳಲ್ಲಿ ಕೊನೆಯದು ಅಥರ್ವಣವೇದ, ಅಥರ್ವಣವೇದವು ಪದ್ಯ ಮತ್ತು ಗದ್ಯ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ಇದರಲ್ಲಿ ʻ6000′ ಮಂತ್ರಗಳಿವೆ.
ಇದರಲ್ಲಿರುವ ವಿಷಯ ಮತ್ತು ವಿಚಾರಗಳೆಂದರೆ:- ವಿವಾಹ ಪದ್ಧತಿ, ಶವಸಂಸ್ಕಾರ, ರಾಜನ ಆಯ್ಕೆ, ಗೃಹನಿರ್ಮಾಣ, ಮಾಯ, ಮಾಟ, ಮಂತ್ರ ಮತ್ತು ದುಷ್ಟಶಕ್ತಿಗಳನ್ನು ದೂರವಿಡುವ ತಂತ್ರಗಳು, ದೀರ್ಘಾಯುಕ್ರಮ, ಆರೋಗ್ಯಕ್ರಮ, ಸತ್ಯವ್ರತ, ಶ್ರೇಯಸ್ಸು, ರೋಗಗಳ ನಿವಾರಣೆ, ಔಷಧಿಗಳ ವಿವರ ಇನ್ನೂ ಅನೇಕ ವಿಷಯಗಳಿಂದ ಕೂಡಿರುವುದರಿಂದ ಇದಕ್ಕೆ ʻಬ್ರಹ್ಮವೇದ’ ಎಂದು ಕರೆಯಲಾಗುತ್ತಿತ್ತು.
ಬಿ) ವೇದಾಂಗಗಳು ಮತ್ತು ಉಪವೇದಗಳು : ವೇದಾಂಗಗಳು ಮತ್ತು ಉಪವೇದಗಳು ವೈದಿಕ ಸಾಹಿತ್ಯದ ಅನುಬಂಧ ಭಾಗಗಳಾಗಿವೆ. ವೇದಾಂಗಗಳು ಆರು. ಅವುಗಳೆಂದರೆ:- ಶಿಕ್ಷ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ, ಜ್ಯೋತಿಷ್ಯ. ವೇದಾಂಗಗಳು ಧರ್ಮಸೂತ್ರ, ಧಾರ್ಮಿಕ ರೀತಿ ನಿಬಂಧನೆ, ಲೌಕಿಕ ಮತ್ತು ವ್ಯಾಪಾರ ಜೀವನಕ್ಕೆ ಸಂಬಂಧಿಸಿದ ನೀತಿ ನಿಯಮಗಳ ಬಗ್ಗೆ ತಿಳಿಸುತ್ತವೆ. ಉಪವೇದಗಳಾದ ಆಯುರ್ವೇದ, ಧನುರ್ವೇದ, ಶಿಲ್ಪ ಮತ್ತು ಗಂಧರ್ವ ವೇದಗಳು ಲೌಕಿಕ ವಿಷಯಗಳನ್ನು ಒಳಗೊಂಡಿವೆ.
ಸಿ) ಬ್ರಾಹ್ಮಣಗಳು : ವೇದಗಳ ಕಾಲದ ಕೆಲವು ಸೂಕ್ತಗಳನ್ನು ಗದ್ಯದ ರೂಪದಲ್ಲಿ ಸಂಗ್ರಹಿಸಿಲಾಗಿದೆ. ಅವುಗಳೇ ಬ್ರಾಹ್ಮಣಗಳು. ಐತ್ತರೇಯ ಬ್ರಾಹ್ಮಣ, ತೈತ್ತರೇಯ ಬ್ರಾಹ್ಮಣ, ಗೋಪಥ ಬ್ರಾಹ್ಮಣ ಮತ್ತು ಛಾಂದೋಗ್ಯ ಬ್ರಾಹ್ಮಣಗಳು ಪ್ರಮುಖವಾಗಿದೆ. ಇವುಗಳು ಉತ್ತರ ವೈದಿಕ ಕಾಲದಲ್ಲಿ ರಚಿಸಲ್ಪಟ್ಟಿದ್ದು ಆ ಕಾಲದ ಜನಜೀವನದ ಬಗ್ಗೆ ವಿವರ ನೀಡುತ್ತವೆ.
ಡಿ) ಅರಣ್ಯಕಗಳು : ಉತ್ತರ ವೈದಿಕಕಾಲದಲ್ಲಿ ಋಷಿಮುನಿಗಳು ಪ್ರಶಾಂತವಾದ ಅರಣ್ಯಗಳಲ್ಲಿ ಕುಳಿತು ರಚಿಸಿದ ಸೂಕ್ತಗಳೇ ಅರಣ್ಯಕಗಳು.
ಇ) ಉಪನಿಷತ್ತುಗಳು : ಅರಣ್ಯಕಗಳನ್ನು ಕಾಲಾನಂತರ ಉಪನಿಷತ್ತುಗಳೆಂದು ಹೆಸರಿಸಲಾಯಿತು. ಒಟ್ಟು ಹನ್ನೆರಡು ಉಪನಿಷತ್ತುಗಳಿವೆ. ಈಶ, ಕೇನ, ಕಠ, ಪ್ರಶ್ನೆ, ಮುಂಡಕ, ಮಾಂಡೂಕ್ಯ, ಐತ್ತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಉಪನಿಷತ್ತುಗಳಲ್ಲಿ ಹಿಂದೂ ಧರ್ಮದ ಪರಮಸತ್ಯದ ಸ್ವರೂಪವು ವಿವರವಾಗಿ ನಿರೂಪಿತವಾಗಿದೆ. ಇ.ಇ.ಪಾರ್ಗಿಟರ್‌ರವರ ಪ್ರಕಾರ ‘ವಿಶ್ವದ ತತ್ವಜ್ಞಾನ ರಾಶಿಗೆ ಭಾರತ ಅರ್ಪಿಸಿರುವ ಅಮೂಲ್ಯವಾದ ಕೊಡುಗೆಗಳೇ ಉಪನಿಷತ್ತುಗಳು’.