ಕಳಿಂಗ ಯುದ್ಧಾನಂತರ ಮನಪರಿವರ್ತನೆಯಾಗಿ ಬೌದ್ಧಮತಾವಲಂಬಿಯಾದ ಅಶೋಕ ಮಹಾಶಯ ಆ ಪಂಥದ ಶ್ರೇಯಸ್ಸಿಗಾಗಿ ಅಪಾರವಾಗಿ ಶ್ರಮಿಸಿದನು. ಬೌದ್ಧ ಮತದ ಅಭಿವೃದ್ಧಿಗಾಗಿ ಅಶೋಕನು ಮಾಡಿದ ಸ್ಮರಣಾರ್ಹ ಸೇವೆಯ ಹಿನ್ನೆಲೆಯಲ್ಲಿ ಆತನನ್ನು 2ನೇ ಬುದ್ಧನೆಂದು ಹೆಸರಿಸಲಾಗಿದೆ. ಪೊ|| ಆರ್.ಸತ್ಯನಾಥ ಅಯ್ಯರ್ ‘ಅಶೋಕನು ಭಗವಾನ್ ಬುದ್ಧನ ಉಪದೇಶಗಳ ಸಾರವನ್ನು ಅಧಿಕೃತವಾಗಿ ಪ್ರಸಾರಮಾಡಿದನು’ ಎಂದಿದ್ದಾರೆ. ಬೌದ್ಧಪಂಥದ ಶ್ರೇಯೋಭಿವೃದ್ದಿಗಾಗಿ 5 ಮಾರ್ಗಗಳನ್ನು ಅನುಸರಿಸಿದನು.
1) ಧರ್ಮ ಮಹಾಮಾತ್ರರ ನೇಮಕ,
2) ಬೌದ್ಧ ಸಂಘಗಳ ಸ್ಥಾಪನೆ,
3) ಧಾರ್ಮಿಕ ಯಾತ್ರೆಗಳು,
4) ಶಿಲಾಶಾಸನ ಪದ್ಧತಿ,
5) ಬೌದ್ಧಯತಿಗಳ ನೇಮಕ.
1.ಧರ್ಮಮಹಾಮಾತ್ರರ ನೇಮಕ : ಬೌದ್ಧಧರ್ಮದ ಸಂವರ್ಧನೆಗಾಗಿ ಧರ್ಮಮಹಾಮಾತ್ರರನ್ನು ನೇಮಿಸಲಾಗಿತ್ತು. 13ನೇ ಬಂಡೆಕಲ್ಲು ಶಾಸನ ತಿಳಿಸುವಂತೆ ಧರ್ಮಪ್ರಚಾರ ಮಾಡಲು ಮತ್ತು ಪ್ರಚಾರವಾದುದು ಕಾರ್ಯಗತವಾಗಿದೆಯೇ ಎಂದು ಪರಿಶೀಲಿಸಲು 256ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದನು. ಧಮ್ಮಮಹಾಮಾತ್ರರನ್ನು ಧರ್ಮಆಯುಕ್ತರೆಂದು ಸಹ ಕರೆಯಲಾಗುತ್ತಿತ್ತು.
2. ಬೌದ್ಧಸಂಘಗಳ ಸ್ಥಾಪನೆ : ಬೌದ್ಧಸನ್ಯಾಸಿ, ಸನ್ಯಾಸಿನಿಯರಿಂದ ಕೂಡಿದ ಸಂಘವು ಧರ್ಮದ ಶ್ರೇಯಸ್ಸಿಗಾಗಿ ಅಪಾರ ಶ್ರಮಿಸುತ್ತಿತ್ತು. ಸಂಘದ ಪಾತ್ರ ಕುರಿತು ‘ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ’ ಎಂಬ ಅಂಶ ಪ್ರಧಾನವಾದುದು. ಬೌದ್ಧ ಸಂಘದ ಬಗ್ಗೆ ಅಶೋಕ ಮಹಾಶಯನ ಅಭಿಪ್ರಾಯ ʻಸಾಂಚಿ ಹಾಗೂ ಸಾರನಾಥ’ ಶಾಸನಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ‘ನನ್ನ ಪುತ್ರ. ಪೌತ್ರರಿರುವವರೆಗೂ ಸೂರ್ಯ ಚಂದ್ರರಿರುವವರೆಗೂ ಬೌದ್ಧ ಬಿಕ್ಷು-ಚಿಕ್ಷುಣಿಯರ ಸಂಘವು ಸಮಗ್ರವಾಗಿರತಕ್ಕದ್ದು’ ಎಂದು ಹೇಳಿದ್ದಾನೆ.
3. ಧಾರ್ಮಿಕ ಯಾತ್ರೆಗಳು : ಧರ್ಮಪ್ರಚಾರಕ್ಕಾಗಿ ಧಾರ್ಮಿಕ ಯಾತ್ರೆಗಳನ್ನು ನಡೆಸಿದನು. ಬುದ್ಧನಿಗೆ ಸಂಬಂಧಿಸಿದ ಪ್ರದೇಶಗಳಾದ ಲುಂಬಿನಿವನ, ಕಪಿಲವಸ್ತು, ಸಾರನಾಥ, ಕುಶೀನಗರ ಮೊದಲಾದ ಪ್ರದೇಶಗಳಿಗೆ ಧರ್ಮಯಾತ್ರೆ ಕೈಗೊಂಡನು.
4. ಬೌದ್ಧಯತಿಗಳ ನೇಮಕ : ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧಯತಿಗಳನ್ನು ನೇಮಿಸಿದನು. ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಧರ್ಮ ಪ್ರಚಾರಕ್ಕಾಗಿ ಸಿಲೋನ್ ಗೆ ಕಳುಹಿಸಿದನು. ಅಶೋಕನು ಈ ಕೆಳಕಂಡ ಪ್ರದೇಶಗಳಿಗೆ ವಿವಿಧ ಪ್ರಚಾರಕರನ್ನು ಕಳುಹಿಸಿದನು. ಮಜ್ಜಾಂತಿಕ- ಕಾಶ್ಮೀರ ಮತ್ತು ಗಾಂಧಾರ, ಮಹಾರಕ್ಷಿತ-ಯವನದೇಶ, ಮಜ್ಜಿಮ-ಹಿಮಾಲಯ ದೇಶ, ಮಹಾಧರ್ಮ ರಕ್ಷಿತ-ಮಹಾರಾಷ್ಟ್ರ, ರಕ್ಷಿತ-ವಾರಣಾಸಿ, ಮಹಾದೇವ-ಮಹಿಷಾ ಮಂಡಲ(ಮೈಸೂರು-ಕರ್ನಾಟಕ), ಸೋನ ಮತ್ತು ಉತ್ತರ-ಸುವರ್ಣ ಭೂಮಿ ಮತ್ತು ಪೆಗು.
5. 3ನೇ ಬೌದ್ಧ ಸಮ್ಮೇಳನ : ಬೌದ್ಧ ಪಂಥದ ಅಭ್ಯುದಯ ಮತ್ತು ಶ್ರೇಯಸ್ಸು ಹಾಗೂ ಐಕ್ಯತೆಯ ಸ್ಥಾಪನೆಗಾಗಿ ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು. ಈ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಚಾರ್ಯ ಮೊಗ್ಗಲಿಪುತ್ರತಿಸ್ಸ ವಹಿಸಿದ್ದನು. ಕ್ರಿ.ಪೂ 234ರಲ್ಲಿ ಆದ ಮೂರನೇ ಬೌದ್ಧ ಸಮ್ಮೇಳನವು ಮಹತ್ವದ ಸಾಧನೆ ಮಾಡಿತು. ಈ ಸಮ್ಮೇಳನದ ಮೂಲಕ ಉಪಖಂಡದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲಾಯಿತು. ಜನಸಾಮಾನ್ಯರನ್ನು ಧರ್ಮದ ಕಡೆಗೆ ಆಕರ್ಷಿಸಲು ಸ್ತೂಪಗಳನ್ನು ಕಟ್ಟಿಸಿದನು. ಅಶೋಕನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಬೌದ್ಧಧರ್ಮದ ತತ್ವಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಠಿಯಿಂದ ಕಲ್ಲುಬಂಡೆಗಳ ಮೇಲೆ ಬೌದ್ಧ ಧಾರ್ಮಿಕ ತತ್ವಗಳನ್ನು ಕೆತ್ತಿಸಿದನು.
ಅಶೋಕನ ಧರ್ಮಪ್ರಚಾರ ಕಾರ್ಯವನ್ನು ಗಮನಿಸಿಯೇ ಡಾ|| ಆರ್.ಎಸ್.ಶರ್ಮರವರು ʻಪ್ರಾಚೀನ ವಿಶ್ವದ ಇತಿಹಾಸದಲ್ಲಿ ಅಶೋಕಮಹಾಶಯ ಅತ್ಯುತ್ತಮ ಧರ್ಮಪ್ರಚಾರಕ’ ಎಂದಿದ್ದಾರೆ. ಡಾ||ಆರ್.ಕೆ.ಮುಖರ್ಜಿ ಯವರು ತಮ್ಮ ಕೃತಿಯಾದ ‘ಹಿಸ್ಟರಿ ಆಫ್ ಏನ್ಸಿಯಂಟ್ ಇಂಡಿಯಾ’ ದಲ್ಲಿ ‘ನಾಗರೀಕ ಪ್ರಪಂಚದ ಸವಿಸ್ತಾರ ಪ್ರದೇಶದ ಮೇಲೆ ಭಾರತೀಯ ಸಂಸ್ಕೃತಿಯ ನೈತಿಕ ಪ್ರಾಬಲ್ಯತೆಯನ್ನು ತರುವಲ್ಲಿ ಅಶೋಕ ಸಾಧನವಾಗಿ ವರ್ತಿಸಿದನು’ ಎಂದಿದ್ದಾರೆ. ಬೌದ್ಧ ಮತದ ಅಭಿವೃದ್ಧಿಗಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಅಶೋಕ ಮಹಾಶಯನನ್ನು 2ನೇ ಬುದ್ದನೆಂದೇ ಹೆಸರಿಸಲಾಗಿದೆ. ಧರ್ಮಾಶೋಕನ ಅಪಾರ ಪರಿಶ್ರಮದಿಂದ ಬೌದ್ಧಧರ್ಮವು ದೇಶ ವಿದೇಶಗಳಲ್ಲಿ ಹರಡಲ್ಪಟ್ಟ ಪ್ರಧಾನ ಧರ್ಮವಾಯಿತು.