ಪೀಠಿಕೆ:
ಭಾರತದಲ್ಲಿ ಅಶೋಕನಿಂದಲೇ ಶಾಸನಗಳ ರಚನೆ ಪ್ರಾರಂಭವಾಯಿತು. ಆದ್ದರಿಂದ ಅಶೋಕನನ್ನು ‘ಶಾಸನಗಳ ಆದ್ಯಪ್ರವರ್ತಕ’ನೆಂದೇ ಹೆಸರಿಸಲಾಗಿದೆ. ತನ್ನ ಆಳ್ವಿಕೆಯ ಅವಧಿಯಲ್ಲಿ ಸಾಮ್ರಾಜ್ಯದಾದ್ಯಂತ ಶಾಸನಗಳನ್ನು ಕೆತ್ತಿಸಿದ್ದನು. ಹೀಗೆ ಕೆತ್ತಿಸಿದ ಬಹುಸಂಖ್ಯಾತ ಶಾಸನಗಳು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ದೊರೆತಿವೆ. ವಿವಿಧ ಭಾಷೆ ಮತ್ತು ಲಿಪಿಗಳಲ್ಲಿ ರಚನೆಗೊಂಡ ಶಾಸನಗಳು ಲಭ್ಯವಾಗಿವೆ. ಅಶೋಕನ ಹೆಚ್ಚು ಶಾಸನಗಳು ಪ್ರಾಕೃತ ಭಾಷೆ ಹಾಗೂ ಬ್ರಾಹ್ಮಲಿಪಿಯಲ್ಲಿವೆ. ವಾಯುವ್ಯ ಭಾರತದಲ್ಲಿ ದೊರೆತ ಅಶೋಕನ ಶಾಸನಗಳು ಪ್ರಾಕೃತ ಭಾಷೆ ಹಾಗೂ ಖರೋಷ್ಠಿ ಲಿಪಿಯಲ್ಲಿವೆ. ಅಫಘಾನಿಸ್ತಾನದ ಕಂದಹಾರ್‌ನಲ್ಲಿನ ಶಾಸನಗಳು ಗ್ರೀಕ್ ಮತ್ತು ಅರಾಮಿಕ್ ಭಾಷೆಗಳನ್ನು ಮತ್ತು ಗ್ರೀಕ್ ಲಿಪಿಯನ್ನು ಒಳಗೊಂಡಿವೆ. ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಅಧ್ಯಯನ ಮಾಡಿ ಅರ್ಥೈಸಿದ ಕೀರ್ತಿ ಜೇಮ್ಸ್ ಪ್ರಿನ್ಸೆಫ್ ಗೆ ಸಲ್ಲುತ್ತದೆ. ಅಶೋಕನ ಶಾಸನಗಳನ್ನು ಅವುಗಳ ರಚನೆಯ ಆಧಾರದ ಮೇಲೆ ಹಲವು ಭಾಗಗಳಾಗಿ ವರ್ಗೀಕರಿಸಿ ನೋಡಬಹುದು.
1. ಮುಖ್ಯ ಶಿಲಾಶಾಸನಗಳು :
ಮುಖ್ಯ ಶಿಲಾಶಾಸನಗಳಲ್ಲಿ 14 ಶಿಲಾಶಾಸನಗಳು ಕಂಡುಬಂದಿವೆ. ಅವುಗಳು ವಿವಿಧ ಸ್ಥಳಗಳಲ್ಲಿ ದೊರೆತಿವೆ. ಮುಖ್ಯವಾದವುಗಳೆಂದರೆ
- ಗಿರ್ನಾರ್ ಶಾಸನ (ಗುಜರಾತ್ ರಾಜ್ಯ),
- ಕಾಲ್ಸಿ (ಉತ್ತರಾಂಚಲ್ ರಾಜ್ಯ),
- ಶಹಬಾಜ್ ಘರಿ ಶಿಲಾಶಾಸನ (ಪಾಕಿಸ್ತಾನ),
- ಮನ್‌ಸೆಹ್ರ ಶಾಸನ (ಪಾಕಿಸ್ತಾನ),
- ದೌಲಿ ಶಿಲಾಶಾಸನ (ಒರಿಸ್ಸಾ),
- ಔಗಢ ಶಿಲಾಶಾಸನ (ಒರಿಸ್ಸಾ)
- ಬಾಂಬೆಸೊಪಾರ ಶಾಸನ (ಮಹಾರಾಷ್ಟ್ರ),
- ಯರಗುಡಿ ಶಿಲಾಶಾಸನ (ಆಂಧ್ರಪ್ರದೇಶ),
- ಮಸ್ಕಿ ಶಾಸನ (ಕರ್ನಾಟಕ).
2. ಗೌಣಶಿಲಾ ಶಾಸನಗಳು :
- ರೂಪನಾಥ್ ಶಿಲಾಶಾಸನ (ಮದ್ಯಪ್ರದೇಶ),
- ಸಹಸ್ರಾಮ್ ಶಿಲಾಶಾಸನ (ಬಿಹಾರ),
- ಬೈರತ್ ಶಿಲಾಶಾಸನ (ರಾಜಸ್ಥಾನ),
- ಕಲ್ಕತ್ತ-ಬೈರತ್ ಶಿಲಾಶಾಸನ: ಇದನ್ನು ಭಟ್ರುಶಿಲಾಶಾಸನವೆಂದು ಕರೆಯಲಾಗಿದೆ.
- ಮಸ್ಕಿ ಶಿಲಾಶಾಸನ (ಕನಾಟಕ),
- ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ (ಕರ್ನಾಟಕ),
- ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು (ಕರ್ನಾಟಕ),
- ರಜುಲಮಂಡಗಿರಿ ಶಿಲಾಶಾಸನ (ಆಂಧ್ರಪ್ರದೇಶ),
- ಗರ್ಜಾ ಶಾಸನ (ಮದ್ಯಪ್ರದೇಶ).
ಮಸ್ಕಿ ಶಾಸನದಲ್ಲಿ ಅಶೋಕನನ್ನು ʻದೇವಾನಾಂಪ್ರಿಯ ಅಶೋಕಸ’ ಎಂದು ಸಂಬೋಧಿಸಿದ್ದರೆ, ಗರ್ಜಾ ಶಾಸನದಲ್ಲಿ ‘ದೇವನಾಂಪಿಯ ಪಿಯದಸಿ’ ಎಂಬ ವಿವರವಿದೆ. ಗೌಣಶಿಲಾ ಶಾಸನಗಳಿಂದ ಅಶೋಕನ ವೈಯುಕ್ತಿಕ ಇತಿಹಾಸ, ಧರ್ಮದ ಸಾರಾಂಶ, ಅಶೋಕನ ಬಿರುದುಗಳ ವಿವರಗಳು ಕಂಡುಬರುತ್ತವೆ.
3. ಮುಖ್ಯಸ್ತಂಭ ಶಾಸನಗಳು :
- ದೆಹಲಿ – ತೊಪ್ರಾಸ್ತಂಭ ಶಾಸನ,
- ದೆಹಲಿ – ಮೀರತ್ ಸ್ತಂಭ ಶಾಸನ,
- ಲೋರಿಯಾ – ಅರಾರಜ್ ಮತ್ತು ಲೋರಿಯನಂದನ್ ಘರ್ ಸ್ತಂಭಗಳು,
- ರಾಮ್ ಪೂರ್ವಸ್ತಂಭ ಶಾಸನ
- ಅಲಹಾಬಾದ್-ಕೋಸಂ ಸ್ತಂಭಶಾಸನ
ಮುಖ್ಯ ಸ್ತಂಭಶಾಸನಗಳನ್ನು ಶಿಲಾ ಶಾಸನಗಳ ಅನುಬಂಧಗಳು ಅಥವಾ ಪುರವಣಿಗಳೆಂದು ಪರಿಗಣಿಸಲಾಗಿದೆ.
4. ಗೌಣಸ್ತಂಭಶಾಸನಗಳು :
- ಸಾಂಚಿ ಸ್ತಂಭ ಶಾಸನ (ಮದ್ಯಪ್ರದೇಶ),
- ಸಾರನಾಥ್ ಸ್ತಂಭ ಶಾಸನ,
- ಅಲಹಾಬಾದ್-ಕೋಸಂ ಸ್ತಂಭ ಶಾಸನ : ಇವುಗಳು ಬೌದ್ಧಸಂಘದಲ್ಲಿ ಉಂಟಾಗಿದ್ದ ಒಡಕನ್ನು ಬಗೆಹರಿಸಿ ಏಕತೆಯನ್ನು ಕಾಪಾಡಲು ಅಶೋಕ ಪ್ರಯತ್ನಿಸಿದ ಅಂಶವನ್ನು ದಾಖಲಿಸುತ್ತವೆ.
5. ಸ್ಮರಣಾರ್ಥ ಸ್ತಂಭಶಾಸನಗಳು :
- ರುಮ್ಮಿಂಡೈ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ),
- ನಿಗಾಲಿಸಾಗರ್ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ).
6. ಗುಹಾ ಶಾಸನಗಳು :
ಗುಹಾ ಶಾಸನಗಳು ಗಯಾದಿಂದ 24ಕೀ.ಮೀ ದೂರದಲ್ಲಿರುವ ಬಾರಾಬರ್ ಬೆಟ್ಟ ಪ್ರದೇಶದಲ್ಲಿದೆ. ಈ ಬೆಟ್ಟಗಳು ಎರಡು ವಿಧದ ಗುಹೆಗಳನ್ನೊಳಗೊಂಡಿದೆ. ಅವುಗಳೆಂದರೆ ಬಾರಾಬರ್ ಮತ್ತು ನಾಗಾರ್ಜುನ. ಬಾರಾಬರ್ ಬೆಟ್ಟದಲ್ಲಿ ಅಶೋಕನು ಗುಹಾಲಯಗಳನ್ನು ನಿರ್ಮಿಸಿ ಅಜೀವಿಕ ಪಂಥದವರಿಗೆ ದಾನನೀಡಿದ್ದನೆಂದು ಹಾಗೂ ಶಾಸನಗಳ ಹೊರಡಿಸಿದ್ದನೆಂದು ತಿಳಿದುಬರುತ್ತದೆ.
ಅಶೋಕನ ಆತ್ಮಕಥನಗಳೆಂದು ಪರಿಗಣಿಸಲ್ಪಟ್ಟಿರುವ ಈ ಶಾಸನಗಳು ಅಂದಿನ ರಾಜಕೀಯ, ಧಾರ್ಮಿಕ ಹಾಗೂ ವಿದೇಶ ಸಂಬಂಧವನ್ನು ಅರಿಯಲು ಸಹಾಯಕವಾಗಿದೆ. ಡಾ|| ಆರ್.ಎಸ್.ಶರ್ಮ ಅಭಿಪ್ರಾಯದಂತೆ ಇವುಗಳು ಅಶೋಕನ ‘ದೇಶೀಯ ಹಾಗೂ ವಿದೇಶೀಯ ನೀತಿಗಳನ್ನು ಮತ್ತು ಸಾಮ್ರಾಜ್ಯದ ಎಲ್ಲೆಯನ್ನು ಅರಿಯಲು ಸಹಾಯಕವಾಗಿದೆ’.