ಪರಿಸರ ಎಂಬ ಪದವು ಬಹು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಪರಿಸರವು ನಿಸರ್ಗ ಹಾಗೂ ಮಾನವ ನಿರ್ಮಿತವಾಗಿದೆ. ಪರಿಸರವನ್ನು
1. ನೈಸರ್ಗಿಕ ಪರಿಸರ
2. ಮಾನವ ನಿರ್ಮಿತ ಪರಿಸರ ಎಂಬ ಎರಡು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ.
1. ನೈಸರ್ಗಿಕ ಪರಿಸರ(Natural Environment)
ನಿಸರ್ಗದತ್ತವಾಗಿ ಜೀವಂತ ಅಥವಾ ಜೀವಂತವಾಗಿರದ ಪರಿಸರವನ್ನು ನೈಸರ್ಗಿಕ ಪರಿಸರ ಎಂದು ಕರೆಯಲಾಗಿದೆ. ಇದನ್ನು ಮತ್ತೆ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ಭೌತಿಕ ಪರಿಸರ (Physical Environment)
ʻʻಇದನ್ನು ಭೌಗೋಳಿಕ ಪರಿಸರ ಎಂದು ಕರೆಯುತ್ತಾರೆ.ʼʼ ಇದು ಸಾಗರ, ನೆಲ, ಹಳ್ಳ, ಸರೋವರ, ಗಾಳಿ, ನದಿ, ಸಮುದ್ರ, ಅರಣ್ಯ, ಖನಿಜ ಸಂಪತ್ತು, ಬೆಟ್ಟಗುಡ್ಡ, ಪರ್ವತ, ಗ್ರಹ, ನಕ್ಷತ್ರ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈ ಭೌಗೋಳಿಕ ಪರಿಸರವು ಭೂಮಿಯ ಮೇಲೆ ವಾಸಿಸುವ ಜನರ ಹಾಗೂ ಸಮುದಾಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಉದಾ: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳ ಜನರ ಜೀವನಕ್ಕೂ ಹಾಗೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರ ಜೀವನಗಳ ನಡುವೆ ಸಾಕಷ್ಟು ಭೇದಗಳು ಕಂಡುಬರುತ್ತವೆ. ಮರುಭೂಮಿಯಲ್ಲಿ ವಾಸಿಸುವ ಜನರ ಹಾಗೂ ಸಮುದ್ರ ತೀರದಲ್ಲಿ ವಾಸಿಸುವ ಜನರ ನಡುವಿನ ಜೀವನಕ್ಕೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಆದಿವಾಸಿಗಳ ಆಹಾರ, ಉಡುಗೆ, ತೊಡುಗೆ, ಲೋಕರೂಢಿ, ಆಚಾರ, ವಿಚಾರಗಳು, ಹಬ್ಬ, ಹರಿದಿನಗಳು ಹಾಗೂ ಜಾತ್ರೆಗಳ ಪದ್ಧತಿಯು ನಗರ ಜೀವನದ ಜನರ ಆಹಾರ ಪದ್ಧತಿ, ಆಚಾರ, ವಿಚಾರ, ಉಡುಗೆತೊಡುಗೆ, ಜಾತ್ರೆ ಹಾಗೂ ಸಂಪ್ರದಾಯಗಳು ಬೇರೆ ಬೇರೆಯಾಗಿರುತ್ತದೆ. ಕಾಡಿನ ಜನರು ಕಾಡು ಉತ್ಪನ್ನಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸಿದರೆ, ಸಮುದ್ರ ತೀರದ ಜನರು ಮೀನು, ಸೀಗಡಿ, ಏಡಿ ಮುಂತಾದವುಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸುತ್ತಾರೆ. ಹೀಗಾಗಿ ಮಾನವನ ಜೀವನಕ್ಕೂ ಹಾಗೂ ಅವರು ವಾಸಿಸುವ ಪರಿಸರಕ್ಕೂ ಬಹಳ ಸಂಬಂಧ ಇರುವುದನ್ನು ಇದರಿಂದ ಗಮನಿಸಬಹುದು.
ಜೈವಿಕ ಪರಿಸರ (Biological Environment)
ʻʻ ಸಸ್ಯಸಂಕುಲ, ಪ್ರಾಣಿಸಂಕುಲ, ಪಕ್ಷಿ, ಮಾನವನನ್ನು ಒಳಗೊಂಡಿರುವ ಪರಿಸರವನ್ನು ಜೈವಿಕ ಪರಿಸರ ಎಂದು ಕರೆಯಬಹುದಾಗಿದೆ.ʼʼ ಇದರಲ್ಲಿ ಕೋಟಿ ಕೋಟಿ ಜೀವ ಪ್ರಬೇಧಗಳನ್ನು ಕಾಣಬಹುದಾಗಿದೆ. ಈ ಜೀವರಾಶಿಗಳ ಜೀವನ ಶೈಲಿಯ ಪೂರಕ ಪರಿಸರವನ್ನು ಗುರುತಿಸಬಹುದಾಗಿದೆ. ಜೈವಿಕ ಪರಿಸರದ ಮೇಲೆ ಭೌತಿಕ ಪರಿಸರದ ಪ್ರಭಾವ ಹೆಚ್ಚಾಗಿರುತ್ತದೆ. ಈ ಎರಡು ಪರಿಸರಗಳು ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ಈ ಕಾರಣದಿಂದಾಗಿಯೇ ಪರಿಸರದಲ್ಲಿ ಸಮತೋಲನ ಕಂಡುಬರುತ್ತದೆ.
2. ಮಾನವ ನಿರ್ಮಿತ ಪರಿಸರ (Man Made Environment)
ʻʻ ಮಾನವನು ತನ್ನ ಜೀವನವನ್ನು ನಡೆಸುವುದಕ್ಕಾಗಿ ಕೃತಕವಾಗಿ ನಿರ್ಮಿಸಿಕೊಂಡ ಪರಿಸರವನ್ನು ಮಾನವ ನಿರ್ಮಿತ ಪರಿಸರ ಎಂದು ಕರೆಯಲಾಗಿದೆ.ʼʼ ಮಾನವನ ಆಧುನಿಕ ಜೀವನ ವಿಧಾನ ಬಹಳ ಕೃತಕವಾಗಿದೆ. ತನ್ನ ದಿನನಿತ್ಯದ ಚಟುವಟಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಾನವನು ನೈಸರ್ಗಿಕ ಪರಿಸರವನ್ನು ತನಗೆ ಮನಸ್ಸಿಗೆ ಬಂದ ಹಾಗೆ ಪರಿವರ್ತಿಸಿಕೊಳ್ಳುತ್ತಿದ್ದಾನೆ. ಉದಾ: ನಗರೀಕರಣ, ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವುದು, ಅಣೆಕಟ್ಟುಗಳು, ಸೇತುವೆಗಳು, ರಸ್ತೆಗಳ ನಿರ್ಮಾಣ ಹಾಗೂ ರೈಲು ಹಳಿ ನಿರ್ಮಾಣದಂತಹ ಕಾರ್ಯಗಳನ್ನು ಮಾಡುತ್ತಿದ್ದಾನೆ. ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಿ ಇಂದಿನ ಹಾಗೂ ಮುಂದಿನ ಪೀಳಿಗೆಯು ಸಂಕಷ್ಟದಲ್ಲಿ ಸಿಲುಕುವುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣನಾಗುತ್ತಿದ್ದಾನೆ. ಮಾನವ ನಿರ್ಮಿತ ಪರಿಸರವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ.
ಸಾಮಾಜಿಕ ಪರಿಸರ (Social Environment)
ಆರ್ಥಿಕ ಪರಿಸರ(Econamic Environment)
ಸಾಮಾಜಿಕ ಪರಿಸರ (Social Environment)
ಮಾನವ ಸಾಮಾಜಿಕ ಜೀವಿ. ಸಮಾಜವನ್ನು ಹೊರತುಪಡಿಸಿ ಅವನೆಂದೂ ಬದುಕಲಾರ. ಹೀಗಾಗಿ ಆತ ತನ್ನ ಸುತ್ತಲೂ ಒಂದು ಸಾಮಾಜಿಕ ಕ್ಷೇತ್ರವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಸಮಾಜದಲ್ಲಿನ ಆಚಾರ-ವಿಚಾರ, ಲೋಕರೂಢಿ, ರೀತಿ-ನೀತಿಗಳು, ಸಾಮಾಜಿಕ ಕಟ್ಟುಪಾಡುಗಳು, ಆಧುನಿಕ ಜೀವನ ರೂಪ, ಕಲೆ, ಶಿಕ್ಷಣ ಹಾಗೂ ತಾಂತ್ರಿಕತೆ ತನ್ನದೇ ಆದ ರೀತಿಯಲ್ಲಿ ಮಾನವನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಹೀಗಾಗಿ ಆತ ಸಾಮಾಜಿಕ ಬಲೆಯೊಳಗೆ ಸಿಲುಕಿಕೊಂಡಿದ್ದಾನೆ. ಉದಾ: ಒಬ್ಬ ವ್ಯಕ್ತಿ ಬೇರೊಬ್ಬ ವ್ಯಕ್ತಿಯ ಜೊತೆ ಹೊಂದಿರಬಹುದಾದ ಸಂಬಂಧದ ಸ್ವರೂಪವೇ ಒಂದು ರೀತಿಯದ್ದಾಗಿದ್ದರೆ, ಅದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜೊತೆಗೆ ಇಟ್ಟುಕೊಂಡ ಸಂಬಂಧದ ಸ್ವರೂಪವೇ ಇನ್ನೊಂದು ರೀತಿಯಲ್ಲಿರುತ್ತದೆ. ವ್ಯಕ್ತಿಯೊಬ್ಬನು ತನ್ನ ತಂದೆ ತಾಯಿಗಳ ಜೊತೆ ಹೊಂದಿದ ಸಂಬಂಧಕ್ಕೂ ಮಗ, ಮಗಳ ಜೊತೆ ಹೊಂದಿರುವ ಸಂಬಂಧಕ್ಕೂ ಹಾಗೆ ಹೆಂಡತಿಯ ಜೊತೆ ಹೊಂದಿದ ಸಂಬಂಧಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಸಹೋದರ, ಸಹೋದರಿ, ವ್ಯಾಪಾರಿ, ಗಿರಾಕಿ ಹಾಗೂ ಉಮೇದುವಾರ ಮುಂತಾದವರ ಜೊತೆ ನಡೆದುಕೊಳ್ಳುವ ರೀತಿ ಬಹಳ ವಿಶಿಷ್ಟವಾಗಿರುತ್ತದೆ. ಭಾರತೀಯ ಸಮಾಜ ಅನೇಕ ಪಿಡುಗುಗಳಿಂದ ಕೂಡಿದೆ. ಇಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಸಹಗಮನ, ದೇವದಾಸಿ ಪದ್ಧತಿ ಮುಂತಾದ ಸಮಾಜ ಬಾಹಿರ ಆಚರಣೆಗಳಿದ್ದು ಆಧುನಿಕ ಸಮಾಜ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ. ಮನೆಯಲ್ಲಿನ ಸದಸ್ಯರ ಬೆಳವಣಿಗೆಗೆ ಕುಟುಂಬ ಹಲವಾರು ಕಟ್ಟುಪಾಡುಗಳನ್ನು ಹಾಕುತ್ತದೆ. ಕುಟುಂಬದ ಹಿರಿಯರು ಕಿರಿಯರ ಮೇಲೆ ದಿನನಿತ್ಯ ಪ್ರಭಾವವನ್ನು ಬೀರುತ್ತಾರೆ. ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚಾರಗಳು ಕಟ್ಟುನಿಟ್ಟಿನಿಂದ ಕೂಡಿರುತ್ತವೆ. ಇದರ ಜೊತೆಗೆ ಪುಸ್ತಕಗಳು, ಪತ್ರಿಕೆಗಳು, ಬಾನುಲಿಗಳು, ಧ್ವನಿ ಮುದ್ರಿಕೆಗಳು, ಸಿನಿಮಾಗಳು ಹಾಗೂ ದೂರದರ್ಶನಗಳು ವ್ಯಕ್ತಿಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ವ್ಯಕ್ತಿಯು ಹೇಗೆ ಬೆಳೆಯಬೇಕು ಮತ್ತು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಮೊದಲ ಸಂಸ್ಥೆಯೆಂದರೆ ಅದು ಸಾಮಾಜಿಕ ಪರಿಸರ.
ಆರ್ಥಿಕ ಪರಿಸರ (Econamic Environment)
ಆರ್ಥಿಕ ಪರಿಸರವು ಮಾನವನ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ. ಮಾನವನ ಅಳಿವು ಉಳಿವು ಆರ್ಥಿಕ ಕ್ಷೇತ್ರವನ್ನು ಅವಲಂಬಿಸಿದೆ. ಒಂದು ದೇಶದ ಆರ್ಥಿಕ ಪ್ರಗತಿಯು ಆ ದೇಶದ ಮಾನವನ ಆರ್ಥಿಕ ಸ್ಥಿತಿಗತಿಗಳನ್ನು ಒಳಗೊಂಡಿರುತ್ತದೆ. ಅಂದರೆ ಉತ್ಪಾದನೆ, ವಿತರಣೆ, ಸರಕು ಸಾಗಾಣಿಕೆ, ಬೇಡಿಕೆ, ಸರಬರಾಜು, ಉಪಯೋಗ, ವಿತರಣೆ ಮುಂತಾದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರ್ಥಿಕ ಪರಿಸರ ಎಂದು ಕರೆಯಬಹುದು. ಉದಾ: ಆದಿವಾಸಿ ಜೀವನ, ಕಾಡು ಜನರ ಜೀವನ, ಗ್ರಾಮೀಣ ಜೀವನ, ನಗರ ಜೀವನ ಕ್ರಮಗಳು ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ.
ಉಪಸಂಹಾರ
ಪರಿಸರವು ಮಾನವನ ಜೀವನದ ಪ್ರತಿಯೊಂದು ಅಂಶಕ್ಕೂ ನೇರವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ನೈಸರ್ಗಿಕ ಪರಿಸರವು ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿದ್ದರೆ, ಮಾನವ ನಿರ್ಮಿತ ಪರಿಸರವು ಮಾನವನ ಸಾಮಾಜಿಕ ಹಾಗೂ ಆರ್ಥಿಕ ಬದುಕನ್ನು ರೂಪಿಸುತ್ತದೆ. ಭೌತಿಕ ಮತ್ತು ಜೈವಿಕ ಪರಿಸರಗಳು ಪರಸ್ಪರ ಅವಲಂಬಿತವಾಗಿರುವಂತೆ, ಸಾಮಾಜಿಕ ಮತ್ತು ಆರ್ಥಿಕ ಪರಿಸರಗಳು ಮಾನವನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಆದರೆ ಮಾನವನು ನೈಸರ್ಗಿಕ ಪರಿಸರವನ್ನು ಅತಿಯಾಗಿ ದುರುಪಯೋಗಪಡಿಸಿಕೊಂಡರೆ ಪರಿಸರ ಸಮತೋಲನ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು ಇಂದಿನ ಅತ್ಯಂತ ಅಗತ್ಯವಾಗಿದೆ. ಪರಿಸರದ ಮಹತ್ವವನ್ನು ಅರಿತು ಜವಾಬ್ದಾರಿಯುತವಾಗಿ ವರ್ತಿಸುವುದೇ ಭವಿಷ್ಯದ ಸುರಕ್ಷತೆಗೆ ದಾರಿ ಮಾಡಿಕೊಡುತ್ತದೆ.