ಶ್ರೀ ಕೃಷ್ಣದೇವರಾಯನ ಸಾಧನೆಗಳು

ಶ್ರೀ ಕೃಷ್ಣದೇವರಾಯನ ಸಾಧನೆಗಳು

ಕೃಷ್ಣದೇವರಾಯ (1509-1529): ಈತ ವಿಜಯನಗರ ಅರಸರಲ್ಲಿಯೇ ಅಲ್ಲದೆ ಇಡೀ ಭಾರತದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸಾ.ಶ.1509 ಅಗಸ್ಟ್ 8ನೆಯ ತಾರೀಖು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣದೇವರಾಯನು ಪಟ್ಟಾಭಿಷಿಕ್ತನಾದನು. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು. ಸಾ.ಶ. 1509 ರಿಂದ 1529 ರವರೆಗೆ ಸುಮಾರು 20 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಈತ ವಿಜಯನಗರವನ್ನು ವೈಭವ ಹಾಗೂ ಕೀರ್ತಿಯ ಉನ್ನತ ಶಿಖರಕ್ಕೆ ಏರಿಸಿದನು. ಕೃಷ್ಣದೇವರಾಯ ಒಬ್ಬ ದಕ್ಷ ಆಡಳಿತಗಾರ, ವೀರಯೋಧ, ಅಪ್ರತಿಮ ಸಾಹಸಿ, ಚತುರ ರಾಜಕಾರಣಿ ಹಾಗೂ ಕಲೆ ವಾಸ್ತುಶಿಲ್ಪಗಳ ಆರಾಧಕನಾಗಿದ್ದನು.

ಕೃಷ್ಣದೇವರಾಯನ ದಿಗ್ವಿಜಯಗಳು
1) ವಿಜಾಪೂರ ಸುಲ್ತಾನನೊಂದಿಗೆ ಯುದ್ಧ (ಕ್ರಿ.ಶ. 1509):

ಕೃಷ್ಣದೇವರಾಯ ಸಿಂಹಾಸನಾಧೀಶ್ವರನಾದ ಕೆಲವೇ ದಿನಗಳಲ್ಲಿ ವಿಜಾಪುರದ ಸುಲ್ತಾನ ಯೂಸುಫ್ ಆದಿಲ್‌ಷಾ ಬಹಮನಿಯ ಸುಲ್ತಾನನಾಗಿದ್ದ ಮಹಮದ್‌ಷಾನ ಜೊತೆ ಸೇರಿ ರಾಯನ ಮೇಲೆ ಯುದ್ಧ ಸಾರಿದನು. ಆಗ ಕೃಷ್ಣದೇವರಾಯ ಸಿಡಿಲಿನಂತೆ ಅವರ ಮೇಲೆರಗಿ ‘ಡೋಣಿ’ ಎಂಬಲ್ಲಿ ಅವರನ್ನು ಸೋಲಿಸಿದನು. ಸೋತ ಮಹಮದ್ ಷಾ ಯುದ್ಧ ರಂಗದಿಂದ ಪಲಾಯನ ಮಾಡಿದನು. ಯೂಸಫ್ ಆದಿಲ್‌ ಷಾನನ್ನು ಕೋವಿಲಕೊಂಡದ ಬಳಿ ಸೋಲಿಸಿದನು. ಯೂಸಫ್ ಆದಿಲ್‌ಷಾ ರಣರಂಗದಲ್ಲಿ ವೀರಮರಣವನ್ನು ಹೊಂದಿದನು.

2) ಬೀದರ್ ಮುತ್ತಿಗೆ (ಕ್ರಿ.ಶ. 1514):

ವಿಜಾಪುರದ ಸುಲ್ತಾನನನ್ನು ಸೋಲಿಸಿದ ಕೃಷ್ಣದೇವರಾಯ ಬೀದರಿಗೆ ಮುತ್ತಿಗೆ ಹಾಕಿ ಅಲ್ಲಿ ತನ್ನ ಪ್ರಧಾನಮಂತ್ರಿಯಿಂದ ಬಂಧಿತನಾಗಿದ್ದ ಎರಡನೆಯ ಮಹಮ್ಮದ್ಾನನ್ನು ಬಂಧನದಿಂದ ಬಿಡುಗಡೆಗೊಳಿಸಿ ಪುನಃ ಸಿಂಹಾಸನದ ಮೇಲೆ ಕೂಡಿಸಿದನು. ಇದರಿಂದಾಗಿ ರಾಯನು ‘ಯವನರಾಜ ಪ್ರತಿಷ್ಠಾಪನಚಾರ್ಯ’ ಎಂಬ ಬಿರುದನ್ನು ಪಡೆದನು.

3) ಉಮ್ಮತ್ತೂರಿನ ಮುತ್ತಿಗೆ:

ಉಮ್ಮತ್ತೂರಿನ ಪಾಳೆಯಗಾರ ಗಂಗರಾಜನು ಬಂಡೆದ್ದು ಪೆನುಕೊಂಡೆಯನ್ನು ಆಕ್ರಮಿಸಿದನು. ಇವನ ಸೊಕ್ಕನ್ನು ಅಡಗಿಸಲು ಕೃಷ್ಣದೇವರಾಯನು ಸೈನ್ಯ ಸಮೇತ ಅಲ್ಲಿಗೆ ಧಾವಿಸಿ ಬಂದು ಪಾಳೆಯಗಾರನ ಮುಖ್ಯ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಹಾಗೂ ಶಿವನಸಮುದ್ರಗಳನ್ನು ಮುತ್ತಿ ಅವುಗಳನ್ನು ವಶಪಡಿಸಿಕೊಂಡನು. ನಂತರ ಅವುಗಳ ಆಡಳಿತವನ್ನು ಬೆಂಗಳೂರು ಕೆಂಪೇಗೌಡನಿಗೆ ವಹಿಸಿಕೊಟ್ಟನು.

4) ಕಳಿಂಗ, ಆಂಧ್ರಗಳ ಮುತ್ತಿಗೆ (ಕ್ರಿ.ಶ. 1513):

ಸಾ.ಶ. 1513ರಲ್ಲಿ ಕೃಷ್ಣದೇವರಾಯನು ಓರಿಸ್ಸಾದ ಪ್ರತಾಪರುದ್ರನ ವಿರುದ್ಧ ಯುದ್ಧವನ್ನು ಘೋಷಿಸಿ ಅವನನ್ನು ಸೋಲಿಸಿ ಉದಯಗಿರಿಯನ್ನು ಗೆದ್ದುಕೊಂಡನು. ನಂತರ ಕಳಿಂಗ ಕದನದಲ್ಲಿ ಆದಂಕಿ ಕಂದಕೂರು, ಪೆನುಕೊಂಡ, ನಾಗಾರ್ಜುನಕೊಂಡ, ಬಿಲ್ಲಮಕೊಂಡ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡನು.ನಂತರ ತನ್ನ ದಿಗ್ವಿಜಯ ಯಾತ್ರೆಯನ್ನು ಓರಿಸ್ಸಾದವರೆಗೆ ಮುಂದುವರೆಸಿ ಅದರ ರಾಜಧಾನಿಯಾಗಿದ್ದ ‘ಕಟಕ್’ನ್ನು ಗೆದ್ದುಕೊಂಡನು. ಗಜಪತಿ ಪ್ರತಾಪರುದ್ರ ವಿಧಿಯಿಲ್ಲದೆ ಕೃಷ್ಣದೇವರಾಯನಿಗೆ ಶರಣಾದನು. ನಂತರ ಕೃಷ್ಣದೇವರಾಯನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್‌ಮೋಹಿನಿಯನ್ನು ರಾಯನಿಗೆ ಕೊಟ್ಟು ಮದುವೆ ಮಾಡಿದನು.

5) ಗೋಲ್ಕಂಡ ಯುದ್ಧ (ಕ್ರಿ.ಶ.1512):

ಗೋಲ್ಕಂಡದ ಕುಲಿ ಕುತುಬ್‌ ಷಾ ವಿಜಯನಗರದ ಮೇಲೆ ದಾಳಿ ಮಾಡಿದನು. ಇವನನ್ನು ಎದುರಿಸಲು ರಾಯನು ಸಾಳುವ ತಿಮ್ಮರಸನ ನೇತೃತ್ವದಲ್ಲಿ ಸೈನ್ಯವನ್ನು ರವಾನಿಸಿದನು. ತಿಮ್ಮರಸ ಗೋಲ್ಕಂಡದ ಸುಲ್ತಾನನನ್ನು ಸೋಲಿಸಿ ಅಲ್ಲಿಂದ ಓಡಿಸಿದನು.

6) ರಾಯಚೂರು ಯುದ್ಧ (ಕ್ರಿ.ಶ.1520):

ವಿಜಾಪುರದ ಸುಲ್ತಾನ ಇಸ್ಮಾಯಿಲ್ ಆದಿಲ್‌ಷಾ ರಾಯಚೂರಿನ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡನು. ಇದರಿಂದ ಕುಪಿತಗೊಂಡ ಕೃಷ್ಣದೇವರಾಯನು ಇಸ್ಮಾಯಿಲ್‌ನನ್ನು ರಾಯಚೂರು ಕದನದಲ್ಲಿ ಸೋಲಿಸಿದನು. ನಂತರ ಸೋತ ಇಸ್ಮಾಯಿಲ್ ಅಲ್ಲಿಂದ ಪಲಾಯನ ಮಾಡಿದನು.

7) ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧ:

ಸಾ.ಶ. 1510ರಲ್ಲಿ ಪೋರ್ಚುಗೀಸರು ಗೋವೆಯನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ರಾಯನು ಪರೋಕ್ಷವಾಗಿ ಬೆಂಬಲ ನೀಡಿದ್ದನು. ಇದರಿಂದ ಸಂತೃಪ್ತರಾಗಿದ್ದ ಪೋರ್ಚುಗೀಸರು ಕೃಷ್ಣದೇವರಾಯನೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿದ್ದರಲ್ಲದೆ. ಅವನಿಗೆ ಕುದುರೆಗಳನ್ನು ಸರಬರಾಜು ಮಾಡಿದರು.

8) ದಖನ್ ದಂಡಯಾತ್ರೆ:

ಕೃಷ್ಣದೇವರಾಯನ ಸೇನಾನಾಯಕನಾದ ವಿಜಯಪ್ಪ ಎಂಬುವವನು ದಕ್ಷಿಣ ಭಾರತದ ಮೇಲೆ ದಾಳಿಮಾಡಿ ಚೋಳ ಹಾಗೂ ಪಾಂಡ್ಯರನ್ನು ಸೋಲಿಸಿ ಕೊಡಗು ಹಾಗೂ ಮಲಬಾರನ್ನು ವಶಪಡಿಸಿಕೊಂಡನು.

9) ಶ್ರೀಲಂಕಾದ ವಿರುದ್ಧ ಯುದ್ಧ:

ಸಿಂಹಳದ ಪ್ರಜೆಗಳು ಅಲ್ಲಿನ ದೊರೆ ರಾಜವಿಜಯಬಾಹುವನ್ನು ದೇಶ ಬಿಟ್ಟು ಹೊರಹಾಕಿದರು. ಹೀಗೆ ದೇಶ ಭ್ರಷ್ಟನಾಗಿ ಬಂದ ರಾಜವಿಜಯ ಬಾಹು ಶ್ರೀಕೃಷ್ಣದೇವರಾಯನ ಸಹಾಯ ಯಾಚಿಸಿದನು. ಆಗ ರಾಯನು ರಾಜವಿಜಯಬಾಹುವಿನ ಪರವಾಗಿ ಹೋರಾಟ ಮಾಡಿ ಸಿಂಹಳಿಯರನ್ನು ಸೋಲಿಸಿ ವಿಜಯ ಬಾಹುವಿನ ಮಗನಾದ “ಭುವನೈಕ್ಯಬಾಹುವನ್ನು” ಸಿಂಹಳದ ಸಿಂಹಾಸನಕ್ಕೆ ತಂದನು. ಆಗ ಕೃಷ್ಣದೇವರಾಯನು ದಕ್ಷಿಣಾಧಿಪತಿ ಎಂಬ ಬಿರುದನ್ನು ಪಡೆದನು.

10) ಸಾಂಸ್ಕೃತಿಕ ಸಾಧನೆಗಳು:

ಕೃಷ್ಣದೇವರಾಯನು ವೈಷ್ಣವನಾಗಿದ್ದರೂ, ಅನ್ಯಧರ್ಮಗಳನ್ನು ಎಂದೂ ಕಡೆಗಣಿಸಲಿಲ್ಲ. ರಾಯನು ಕ್ರೈಸ್ತ, ಇಸ್ಲಾಂ, ಶೈವ, ಬೌದ್ಧ ಹಾಗೂ ಜೈನ ಧರ್ಮಗಳಿಗೆ ದಾನ ದತ್ತಿಗಳನ್ನು ನೀಡಿದನು. ಉದಯಗಿರಿಯಿಂದ ಬಾಲಗೋಪಾಲ ವಿಗ್ರಹವನ್ನು ತಂದು ರಾಜಧಾನಿಯಲ್ಲಿ ಪ್ರತಿಷ್ಠಾಪಿಸಿದನು. ಹಂಪೆಯ ವಿರುಪಾಕ್ಷ ದೇವಾಲಯದ ಪೂಜೆ ಮಾಡಲು ಸಕಲ ಕ್ರಮ ಕೈಗೊಂಡನು. ರಾಯನ ಆಸ್ಥಾನಕ್ಕೆ ಯಾರೇ ಬಂದರೂ ಅವರನ್ನು ಕ್ರೈಸ್ತರೇ? ಯಹೂದಿಗಳೇ?ಜೈನರೇ? ಮುಸಲ್ಮಾನರೇ? ಎಂದು ಪ್ರಶ್ನಿಸದೇ ಅವರನ್ನು ಉದಾರವಾಗಿ ಕಾಣುತ್ತಿದ್ದನು.

11)ಕಲೆ ಮತ್ತು ವಾಸ್ತುಶಿಲ್ಪ:

ಕೃಷ್ಣದೇವರಾಯನು ಮಹಾ ನಿರ್ಮಾಣಕಾರನಾಗಿದ್ದನು. ಇವನು ಹಂಪಿಯಲ್ಲಿ ಉಗ್ರನರಸಿಂಹ, ಏಕಶಿಲಾರಥ, ಭವ್ಯ ಕಟ್ಟಡಗಳು ಹಾಗೂ ಮೂರ್ತಿಗಳನ್ನು ನಿರ್ಮಿಸಿದ್ದಾನೆ. ಹಂಪಿಯ ಹಜಾರರಾಮಸ್ವಾಮಿ ದೇವಾಲಯ, ಕೃಷ್ಣಸ್ವಾಮಿ, ವಿಜಯವಿಠಲಸ್ವಾಮಿ ಹಾಗೂ ಮಹಾನವಮಿ ದಿಬ್ಬಗಳನ್ನು ನಿರ್ಮಾಣಮಾಡಿದನು. ಅದಲ್ಲದೆ ರಾಯಗೋಪುರ, ಕಲ್ಯಾಣಮಂಟಪ, ಗೋಪುರ ಮುಂತಾದವುಗಳು ಇವನ ಕಾಲದಲ್ಲಿ ಆರಂಭಗೊಂಡವು. ರಾಯನು ತನ್ನ ತಾಯಿ ನಾಗಲಾಂಬ ಹೆಸರಿನಲ್ಲಿ ನಾಗಲಾಪುರವನ್ನು ಮತ್ತು ತನ್ನ ರಾಣಿ ತಿರುಮಲಾದೇವಿಯ ಹೆಸರಿನಲ್ಲಿ ಹೊಸಪೇಟೆಯನ್ನು ನಿರ್ಮಿಸಿದನು. ತನ್ನ ಪ್ರೀತಿಯ ಮಡದಿ ಚಿನ್ನಾಂಬೆಯ ಹೆಸರಿನಲ್ಲಿ ಒಂದು ನಗರವನ್ನು ನಿರ್ಮಿಸಿದನು. ಅಲ್ಲದೆ ಅನೇಕ ಕೋಟೆಗಳು, ಕೆರೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಿಸಿದನು. ಇವನಿಗೆ ಕನ್ನಡರಾಜ್ಯರಮಾರಮಣ,ಕವಿಪುಂಗವ, ಕರ್ನಾಟಕಾಂದ್ರಭೋಜ ಮತ್ತು ಯವನರಾಜ್ಯಪ್ರತಿಸ್ಥಾಪನಾಚಾರ್ಯಎಂಬ ಬಿರುದುಗಳಿದ್ದವು.

12) ಸಾಹಿತ್ಯ:

ಕೃಷ್ಣದೇವರಾಯನ ಕಾಲದಲ್ಲಿ ಸಾಹಿತ್ಯ ಸಾಕಷ್ಟು ಹುಲುಸಾಗಿ ಬೆಳೆಯಿತು. ಇವನು ಸ್ವತಃ ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದನು. ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಅಮುಕ್ತಮಲ್ಯದ ಹಾಗೂ ಸಂಸ್ಕೃತದಲ್ಲಿ ಜಾಂಬುವತಿ ಕಲ್ಯಾಣ, ಉಷಾಪರಿಣಯ, ಮದಲಸ ಚರಿತ ಮುಂತಾದವುಗಳನ್ನು ರಚಿಸಿದನು. ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜರು ಎಂಬ ಎಂಟು ಕವಿಗಳಿದ್ದರು. ಅವರುಗಳೆಂದರೆ.

1. ಅಲ್ಲಸಾನಿ ಪೆದ್ದಣ್ಣ

2. ನಂದಿ ತಿಮ್ಮಣ್ಣ

3. ಮಾದಯ್ಯಗಾರಿ ಮಲ್ಲಣ್ಣ  

4. ರಾಮರಾಜ ಭೂಷಣ

5. ಪಿಂಗಳಿ ಸೂರಣ್ಣ

6. ರಾಮಭದ್ರಿಯ

7.ತೆನಾಲಿ ರಾಮಕೃಷ್ಣ

8. ದೂರ್ಜಟಿ.

ಕೃಷ್ಣದೇವರಾಯ ಒಬ್ಬ ಶ್ರೇಷ್ಠ ಆಡಳಿತಗಾರ, ರಾಜನೀತಿನಿಪುಣ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಮಹಾಪೋಷಕನಾಗಿದ್ದನು. ಕೃಷ್ಣದೇವರಾಯ ಉತ್ತಮ ಕವಿ, ನ್ಯಾಯಪರ ಹಾಗೂ ನಿಷ್ಪಕ್ಷಪಾತಿ ದೊರೆಯಾಗಿದ್ದನು. ಪೋರ್ಚುಗೀಸ್ ಪ್ರವಾಸಿ ಪೇಯಿಸ್ ಹೇಳಿರುವಂತೆ “ರಾಯನು ಮಧ್ಯಮ ಎತ್ತರದವನಾಗಿದ್ದು ಆಕರ್ಷಕ ಮೈಬಣ್ಣ ಹಾಗೂ ಮೈಕಟ್ಟನ್ನು ಹೊಂದಿದ್ದಾನೆ. ಇವನ ಮುಖದ ಮೇಲೆ ಸಿಡುಬಿನ ಕಲೆಗಳಿವೆ. ಇವನು ಸದಾ ಹಸನ್ಮುಖಿಯಾಗಿದ್ದು ವಿನೋಧಪರನಾಗಿದ್ದಾನೆ” ಎಂದಿದ್ದಾನೆ.