ಉಚ್ಛ ನ್ಯಾಯಾಲಯಗಳ ರಚನೆ

ಉಚ್ಛ ನ್ಯಾಯಾಲಯಗಳ ರಚನೆ

ಉಚ್ಛ ನ್ಯಾಯಾಲಯಗಳ ರಚನೆ: (Composition of High Court)

ಉಚ್ಛ ನ್ಯಾಯಾಲಯಗಳ ರಚನೆಯನ್ನು ಈ ಕೆಳಗಿನಂತೆ ಕಾಣಬಹುದು.

1. ನ್ಯಾಯಾಧೀಶರ ಸಂಖ್ಯೆ: (Total Number of Judges)

ಭಾರತದ ಎಲ್ಲಾ ಉಚ್ಛ ನ್ಯಾಯಾಲಯಗಳು ಒಬ್ಬ ಮುಖ್ಯ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳನ್ನು ಒಳಗೊಂಡಿರುತ್ತವೆ. ಆದರೆ ದೇಶದ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರ ಸಂಖ್ಯೆ ಒಂದೇ ಆಗಿರುವುದಿಲ್ಲ. ಆಯಾ ಉಚ್ಛ ನ್ಯಾಯಾಲಯಗಳ ಕಾರ್ಯಭಾರದ ಆಧಾರದ ಮೇಲೆ ನ್ಯಾಯಾಧೀಶರ ಸಂಖ್ಯೆಯನ್ನು ನಿಗದಿಪಡಿಸಲಾಗಿರುತ್ತದೆ. ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪ್ರಸ್ತುತ ಭಾರತದ 25 ರಾಜ್ಯಗಳ ಉಚ್ಛ ನ್ಯಾಯಾಲಯಗಳಲ್ಲಿ ಒಟ್ಟು 815 ಕಾಯಂ ನ್ಯಾಯಾಧೀಶರ ಅನುಮೋದಿತ ಹುದ್ದೆಗಳಿವೆ.

2. ನ್ಯಾಯಾಧೀಶರ ನೇಮಕ: (Appointment of Judges)

ʻʻಸಂವಿಧಾನದ 217 ನೇ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಇತರೆ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕಮಾಡುತ್ತಾರೆ.ʼʼ ರಾಷ್ಟ್ರಪತಿಗಳು ಉಚ್ಛನ್ಯಾಯಾಲಯದ ನ್ಯಾಯಾಧೀಶರನ್ನು ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಸಲಹೆ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಸಂಬಂಧಿಸಿದ ರಾಜ್ಯಪಾಲರೊಂದಿಗೆ ಸಮಾಲೋಚಿಸಿ ನೇಮಕ ಮಾಡುತ್ತಾರೆ.

3. ಅರ್ಹತೆಗಳು: (Qualification)

 ಉಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು

  1. ಭಾರತದ ಪ್ರಜೆಯಾಗಿರಬೇಕು.
  2. ಜಿಲ್ಲಾ ಮಟ್ಟದ ಅಥವಾ ಅದಕ್ಕಿಂತ ಕೆಳಹಂತದ ನ್ಯಾಯಾಲಯಗಳಲ್ಲಿ ಕನಿಷ್ಠ 10 ವರ್ಷ ನ್ಯಾಯವಾದಿಯಾಗಿ ಕೆಲಸ ಮಾಡಿದ ಅನುಭವವಿರಬೇಕು.
  3. ಒಂದು ಅಥವಾ ಹೆಚ್ಚು ಉಚ್ಛ ನ್ಯಾಯಾಲಯಗಳಲ್ಲಿ ನ್ಯಾಯವಾದಿಯಾಗಿ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು.
  4. ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ ಆತ ಉತ್ತಮ  ನ್ಯಾಯಶಾಸ್ತ್ರಜ್ಞನಾಗಿರಬೇಕು.

4. ಪ್ರಮಾಣವಚನ: (Oath)

 ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ ನೇಮಕಗೊಳ್ಳುವವರಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನವನ್ನು ಬೋಧಿಸುತ್ತಾರೆ.

5. ಅಧಿಕಾರಾವಧಿ: (Term of Power)

ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ನಿರ್ದಿಷ್ಟ ವಯೋಮಿತಿಯನ್ನು ತಿಳಿಸಿಲ್ಲ. ಆದರೆ 62 ವರ್ಷ ವಯೋಮಿತಿ ಆದ ನಂತರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಅಧಿಕಾರದಿಂದ ನಿರ್ಗಮಿಸಬೇಕು. ರಾಜೀನಾಮೆ, ಮರಣ ಹಾಗೂ ದುರ್ನಡತೆಯಿಂದ ನ್ಯಾಯಾಧೀಶರನ್ನು ಅವಧಿಗೆ ಮುನ್ನವೇ ಅಧಿಕಾರದಿಂದ ವಜಾಗೊಳಿಸಬಹುದು. 62 ವರ್ಷ ಮುನ್ನವೇ ರಾಜೀನಾಮೆ ನೀಡಲು ಬಯಸಿದರೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ನೀಡುವ ಮೂಲಕ ಪದತ್ಯಾಗ ಮಾಡಬೇಕು.

6. ವರ್ಗಾವಣೆ: (Transfer)

ಸಂವಿಧಾನದ 2೨2ರ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಸಂಪರ್ಕಿಸಿ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬಹುದು.

7. ಪದಚ್ಯುತಿ: (Impeachment) 

ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ರೀತಿಯಲ್ಲಿಯೇ ಪದಚ್ಯುತಿಗೊಳಿಸುತ್ತಾರೆ. ನ್ಯಾಯಾಧೀಶರನ್ನು ಭ್ರಷ್ಟಾಚಾರ, ಅವಿಧೇಯತೆ ಅಥವಾ ಸಂವಿಧಾನದ ಉಲ್ಲಂಘನೆ ಕಾರಣದಿಂದ ರಾಷ್ಟ್ರಪತಿಗಳು ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸುತ್ತಾರೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತ್ಯೇಕವಾಗಿ ಆ ಸದನದ ೨/೩ ಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯರ ಸಂಖ್ಯೆಯ ಬಹುಮತದೊಂದಿಗೆ ಪದಚ್ಯುತಿ ಪ್ರಸ್ತಾವನೆಯನ್ನು ಅನುಮೋದಿಸಬೇಕಾಗುತ್ತದೆ.

8. ವೇತನ ಮತ್ತು ಭತ್ಯೆಗಳು: (Salary and Allowances)

ಉಚ್ಛ ನ್ಯಾಯಾಲಯಗಳ ಮುಖ್ಯನ್ಯಾಧೀಶರು ಹಾಗೂ ಇತರ ನ್ಯಾಯಾದೀಶರ ವೇತನವನ್ನು ಸಂಸತ್ತು ಆಗಾಗ ಪರಿಪ್ಕರಿಸಿ ನೀಡುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಆಯಾ ರಾಜ್ಯಗಳ ʻʻರಾಜ್ಯ ಸಂಚಿತ ನಿಧಿಯಿಂದ ʻʻಭರಿಸಲಾಗುತ್ತದೆ. ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾದೀಶರು ೨,೫೦,೦೦೦ ಹಾಗೂ ಇತರ ನ್ಯಾಯಾದೀಶರು ೨,೨೫,೦೦೦ ರೂಗಳನ್ನು ಮಾಸಿಕ ವೇತನವಾಗಿ ಪಡೆಯುತ್ತಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ ಸೌಲಭ್ಯ, ವಿದ್ಯುತ್‌ ಸೌಲಭ್ಯ ಹಾಗೂ ಅಂತರ್‌ಜಾಲ ಸೌಲಭ್ಯಗಳನ್ನು ಒದಸಲಾಗುತ್ತದೆ. ಇದರೊಂದಿಗೆ ತಿಂಗಳಿಗೆ ೨೫೦೦೦ ಸೇವಕರ ಭತ್ಯೆಯನ್ನು ನೀಡಲಾಗುತ್ತದೆ. ಮುಂದುವರೆದು ಎರಡು ವಾಹನಗಳು, ಪೋಲಿಸ್‌ ಭದ್ರತೆ, ವಾರ್ಷಿಕ 30 ಸಾರಿ ಉಚಿತ ವಿಮಾನ ಪ್ರಯಾಣ, ವೈದ್ಯಕೀಯ ವೆಚ್ಚ ಹಾಗು ನಿವೃತ್ತಿ ವೇತನದಂತದ ಸೌಲಭ್ಯಗಳನ್ನು ನ್ಯಾಯಾಧೀಶರಿಗೆ ನೀಡಲಾಗುತ್ತದೆ. ನಿವೃತ್ತಿಯ ಬಳಿಕ ತಾನು ಕಾರ್ಯನಿರ್ವಹಿಸಿದ ನ್ಯಾಯಾಲಯವನ್ನು ಹೊರತುಪಡಿಸಿ ಉಳಿದ ಉಚ್ಛ ನ್ಯಾಯಾಲಯಗಳಲ್ಲಿ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. 

ಉಪಸಂಹಾರ

ಒಟ್ಟಿನಲ್ಲಿ, ಉಚ್ಛ ನ್ಯಾಯಾಲಯಗಳ ರಚನೆ ಮತ್ತು ಕಾರ್ಯಪದ್ಧತಿ ಭಾರತೀಯ ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನ್ಯಾಯಾಧೀಶರ ನೇಮಕ, ವರ್ಗಾವಣೆ ಮತ್ತು ಪದಚ್ಯುತಿ ಕ್ರಮಗಳು ನ್ಯಾಯಾಂಗದ ಸ್ವಾಯತ್ತತೆಯನ್ನು ಬಲಪಡಿಸುತ್ತವೆ. ವೇತನ ಮತ್ತು ಸೌಲಭ್ಯಗಳ ಮೂಲಕ ನ್ಯಾಯಾಧೀಶರ ಗೌರವವನ್ನು ಕಾಪಾಡಲಾಗುತ್ತದೆ. ಈ ವ್ಯವಸ್ಥೆ ದೇಶದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಆಡಳಿತವನ್ನು ಸ್ಥಾಪಿಸಲು ಸಹಾಯಕವಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ರಚನೆ

ಭಾರತದ ನ್ಯಾಯಾಲಯಗಳು ಏಣಿಯೋಪಾದಿಯಲ್ಲಿ ರಚನೆಯಾಗಿವೆ. ಈ ಏಣಿಯೋಪಾದಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅತ್ಯುನ್ನತ ಹಂತದಲ್ಲಿದೆ. ನಂತರ ಉಚ್ಛ ನ್ಯಾಯಾಲಯ, ಅದರ ಕೆಳಗೆ ಅಧೀನದ ನ್ಯಾಯಾಲಯಗಳು ಬರುತ್ತವೆ. ಸುಪ್ರೀಂಕೋರ್ಟ್ ನೀಡುವ ತೀರ್ಪು ಅದರ ಕೆಳಗಿನ ಎಲ್ಲ ನ್ಯಾಯಾಲಯಗಳಿಗೆ ಸಂಬಂಧಿಸಿರುತ್ತದೆ. ೧೯೫೦ ಜನವರಿ ೨೮ ರಂದು ಸರ್ವೋಚ್ಚ ನ್ಯಾಯಾಲಯವು ಸ್ಥಾಪನೆಯಾಯಿತು. ʻʻಧರ್ಮವಿದ್ದಲ್ಲಿ ನ್ಯಾಯʼʼ ಎಂಬುದು ಸರ್ವೋಚ್ಚ ನ್ಯಾಯಾಲಯದ ದ್ಯೇಯ ವಾಕ್ಯವಾಗಿದೆ. ಭಾರತದ ಸಂವಿಧಾನದ ೫ನೇ ಭಾಗದ ೪ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಯವರೆಗೆ ಸರ್ವೋಚ್ಚ ನ್ಯಾಯಾಲಯದ ರಚನೆ ಹಾಗೂ ಅದರ ಅಧಿಕಾರ ವ್ಯಾಪ್ತಿಯನ್ನು ವಿವರಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ರಚನೆ: (Composition of Suprime Court)

 ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲ್ಪಂಕ್ತಿಯಲ್ಲಿರುವ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.

1. ಒಟ್ಟು ನ್ಯಾಯಾಧೀಶರ ಸಂಖ್ಯೆ: (Total Number of Judges)

1950 ಜನವರಿ 28ರಂದು ಸರ್ವೋಚ್ಚ ನ್ಯಾಯಾಲಯವು ತನ್ನ ಕಾರ್ಯವನ್ನು ಆರಂಭಿಸಿದಾಗ ಒಬ್ಬ ಮುಖ್ಯ ನ್ಯಾಯಾಧೀಶ ಹಾಗೂ ಏಳು ಮಂದಿ ನ್ಯಾಯಾಧೀಶರು ಹಾಜರಿದ್ದರು. ಸಂಸತ್ತು ಕಾಲಕ್ರಮೇಣ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿತು. 1956 ರಲ್ಲಿ 10, 1960ರಲ್ಲಿ 13, 1977ರಲ್ಲಿ 17, 1985ರಲ್ಲಿ 25, 2008ರಲ್ಲಿ 30, ಹಾಗೂ 2019ರಲ್ಲಿ 33ಕ್ಕೆ ಹೆಚ್ಚಿಸಿತು. ಪ್ರಸ್ತುತ ಈಗ ಸರ್ವೋಚ್ಚ ನ್ಯಾಯಾಲಯವು ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು 33 ನ್ಯಾಯಾಧೀಶರುಗಳನ್ನು ಒಳಗೊಂಡಿದೆ. ʻʻನವದೆಹಲಿ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಕಚೇರಿಯಾಗಿದೆ.ʼʼ

2. ನ್ಯಾಯಾಧೀಶರ ನೇಮಕ: (Appointment Of Judges)

ʻʻ ಸಂವಿಧಾನದ 124 (೧)  ವಿಧಿಯ ಅನ್ವಯ ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಯು ನೇಮಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಿಸುವಾಗ ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಅಲ್ಲಿನ ಹಿರಿಯ ವಕೀಲರು ಮತ್ತು ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ʻʻಕೊಲಿಜಿಯಂ ಸಲಹೆಯನ್ನು ಪಡೆಯಲಾಗುತ್ತದೆ. ಇದರಿಂದ ನ್ಯಾಯಾಧೀಶರ ನೇಮಕದಲ್ಲಿ ರಾಜಕೀಯ ಒತ್ತಡಗಳಿಗೆ ಹೆಚ್ಚು ಅವಕಾಶ ಇರುವುದಿಲ್ಲ. ಆದರೆ ನ್ಯಾಯಾಧೀಶರ ನೇಮಕದಲ್ಲಿ ರಾಷ್ಟ್ರಪತಿ ತಮ್ಮ ವಿವೇಚನೆಯನ್ನು ಉಪಯೋಗಿಸಬಹುದು.

3. ಅರ್ಹತೆಗಳು: (Qualification)

 ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದ 124 (೩)  ವಿಧಿಯ ಪ್ರಕಾರ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. a) ಭಾರತದ ಪ್ರಜೆಯಾಗಿರಬೇಕು.
  2. b) ಯಾವುದೇ ಉಚ್ಛ ನ್ಯಾಯಾಲಯದಲ್ಲಿ ಐದು ವರ್ಷ ನ್ಯಾಯಾಧೀಶನಾಗಿ ಅಥವಾ ಹತ್ತು ವರ್ಷ ನ್ಯಾಯವಾದಿಯಾಗಿ ಅನುಭವ ಪಡೆದಿರಬೇಕು.
  3. c) ರಾಷ್ಟ್ರಪತಿಯ ದೃಷ್ಟಿಯಲ್ಲಿ ಉತ್ತಮ ಕಾನೂನು ಪಂಡಿತನ ಆಗಿರಬೇಕು.

4. ನ್ಯಾಯಾಧೀಶರ ಪ್ರಮಾಣವಚನ: (Oath of Chief Justice)

ಸಂವಿಧಾನದ 124 (೬)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚವನ್ನು ಬೋಧಿಸುತ್ತಾರೆ.ʼʼ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಮುಖ್ಯ ನ್ಯಾಯಾಧೀಶರು ಭಾರತದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯಲು ಯಾವ ಭಯ ಅಥವಾ ಪಕ್ಷಪಾತವಿಲ್ಲದೆ ನ್ಯಾಯ ವಿತರಣೆ ಮಾಡುವ ಘೋಷಣೆಯನ್ನು ಮೂರನೇ ಅನುಸೂಚಿಯಲ್ಲಿ ತಿಳಿಸಿರುವಂತೆ ಪ್ರತಿಜ್ಞೆ ಮಾಡುತ್ತಾರೆ.

5. ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿ: (Term of Power of the Chief Justice)

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ಯಾವುದೇ ಕನಿಷ್ಠ ವಯೋಮಿತಿಯನ್ನಾಗಲಿ ಅಥವಾ ನಿರ್ದಿಷ್ಟ ಅಧಿಕಾರಾವಧಿಯನ್ನಾಗಲಿ ಸ್ಪಷ್ಟಪಡಿಸಿಲ್ಲ ಹೀಗಾಗಿ ನ್ಯಾಯಾಧೀಶರಾಗಿ ನೇಮಕಗೊಂಡ ವ್ಯಕ್ತಿ ತಾನು ನೇಮಕಗೊಂಡ ದಿನದಿಂದ 65 ವರ್ಷ ವಯಸ್ಸಾಗುವವರೆಗೆ ಅಧಿಕಾರಾವಧಿ ಹೊಂದಿರುತ್ತಾನೆ. ರಾಜೀನಾಮೆ ಮರಣ ಅಥವಾ ಪದಚ್ಯುತಿ ಕಾರಣಗಳಿಂದ 65 ವರ್ಷದೊಳಗೆ ನ್ಯಾಯಾಧೀಶರ ಅವಧಿಯಲ್ಲಿ ಕಡಿತಗೊಳ್ಳುವ ಸಾಧ್ಯತೆ ಇದೆ.

6. ವೇತನ ಮತ್ತು ಭತ್ಯೆಗಳು:  (Salary and Allowances)

ಸಂಸತ್ತು ಕಾಲ ಕಾಲಕ್ಕೆ ನಿಗದಿಪಡಿಸಿದ ಮಾಸಿಕ ವೇತನ ಹಾಗೂ ಇತರ ಸೌಲಭ್ಯಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ೨,80,000 ಹಾಗೂ ಇತರೆ ನ್ಯಾಯಾಧೀಶರು ಎರಡು ಲಕ್ಷದ ಐವತ್ತು ಸಾವಿರ ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ, ಉಚಿತ ವಿದ್ಯುತ್ ಹಾಗೂ ಅಂತರ್ಜಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಜೊತೆಗೆ ಮಾಸಿಕ 25000 ಸೇವಕರ ಭತ್ಯೆಯನ್ನು ನ್ಯಾಯಾಧೀಶರು ಪಡೆಯುತ್ತಾರೆ. ಮುಂದುವರೆದು ಅವರಿಗೆ ಎರಡು ವಾಹನ, ಪೊಲೀಸ್ ಭದ್ರತೆ, ವಾರ್ಷಿಕ 30 ಬಾರಿ ಉಚಿತ ವಿಮಾನ ಪ್ರಯಾಣ. ವೈದ್ಯಕೀಯ ವೆಚ್ಚ ಹಾಗೂ ನಿವೃತ್ತಿ ಸೌಲಭ್ಯಗಳನ್ನು ದೊರೆಯುತ್ತವೆ. ನ್ಯಾಯಾಧೀಶರು ಹಾಗೂ ಇತರೆ ಸಿಬ್ಬಂದಿಗಳ ವೇತನಗಳನ್ನು ʻʻಭಾರತದ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ.ʼʼ

7. ನ್ಯಾಯಾಧೀಶರ ಪದಚ್ಯುತಿ: (Impeachment of Chief Justice)

ಸಂವಿಧಾನದ 124ನೇ ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅಸಮರ್ಥತೆ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸಲು ಅವಕಾಶವಿದೆ. ನ್ಯಾಯಾಧೀಶರನ್ನು ವಾಗ್ದಂಡನೆಗೆ ಗುರಿಪಡಿಸುವ ನಿರ್ಣಯವನ್ನು ಕನಿಷ್ಟ ಪಕ್ಷ 100 ಲೋಕಸಭಾ ಸದಸ್ಯರು ಹಾಗೂ 50 ರಾಜ್ಯಸಭಾ ಸದಸ್ಯರು ಸಹಿ ಹಾಕಿ ರಾಷ್ಟ್ರಪತಿಗಳ ಮೂಲಕ ಎಂದು ನಮೂದಿಸಿ ನಿರ್ಣಯವನ್ನು ಲೋಕಸಭಾಪತಿ ಅಥವಾ ರಾಜ್ಯಸಭಾಪತಿಗೆ ನೀಡಬೇಕು. ನಂತರ ಇಬ್ಬರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಒಬ್ಬ ನ್ಯಾಯ ತಜ್ಞರನ್ನು ಒಳಗೊಂಡ ಸಮಿತಿಯು ನ್ಯಾಯಾಧೀಶರು ದೋಷಿ ಎಂದು ಪರಿಗಣಿಸಬೇಕು. ಹಾಗೂ ಯಾವ ಸದನದಲ್ಲಿ ಪದಚ್ಯುತಿ ನಿರ್ಣಯ ಉದ್ಭವವಾಗುತ್ತದೆಯೋ ಆ ಸದನದಲ್ಲಿ ಸಮಿತಿಯ ವರದಿ ಹಾಗೂ ಪದಚ್ಯುತಿ ನಿರ್ಣಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರಪತಿಯನ್ನು ಉದ್ದೇಶಿಸಿ ಉಭಯ ಸದನಗಳು ಒಟ್ಟು ಸದನದಲ್ಲಿ ಹಾಜರಿದ್ದು ಮತಚಲಾಯಿಸಿದ ಸದಸ್ಯರಲ್ಲಿ ೨/೩  ಬಹುಮತದಿಂದ ಮಂಡಿಸಿದಾಗ ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತರೆ ಮಾತ್ರ ಮುಖ್ಯ ನ್ಯಾಯಾಧೀಶರನ್ನು ಪದಚ್ಯುತಗೊಳಿಸಬಹುದು.

8. ನ್ಯಾಯಾಧೀಶರ ಸ್ವಾತಂತ್ರ್ಯ: (Independence of Judges)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ನ್ಯಾಯ ವಿತರಣೆ ಮಾಡಲು ಸಂವಿಧಾನದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ನ್ಯಾಯಾಧೀಶರು ನಿರ್ಭೀತಿಯಿಂದ ಯಾರ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ನ್ಯಾಯ ದಾನ ಮಾಡಲು ಸಂವಿಧಾನ ರಚನಕಾರರು ಈ ಕೆಳಗಿನ ಅಂಶಗಳನ್ನು ಅಳವಡಿಸಿದ್ದಾರೆ.

a) ನ್ಯಾಯಾಧೀಶರು ಕೊಟ್ಟ ತೀರ್ಪು, ಅವರ ಕೆಲಸ ಕಾರ್ಯಗಳು ಮುಂತಾದವುಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ. ಪೌರರಲ್ಲಿ ನ್ಯಾಯಾಲಯದ ಬಗ್ಗೆ ಅಗೌರವ ಅವಿಶ್ವಾಸಗಳನ್ನು ಹುಟ್ಟಿಸುವಂತೆ ಹಾಗೂ ನ್ಯಾಯಾಧೀಶರುಗಳಿಗೆ ಅಗೌರವ ತರುವಂತಹ ರೀತಿಯಲ್ಲಿ ಟೀಕೆಗಳನ್ನು ಮಾಡುವಂತಿಲ್ಲ.

b) ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುವಾಗ ಕಡ್ಡಾಯವಾಗಿ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ಮಾಡಬೇಕು. ಹೀಗಾದಾಗ ನೇಮಕಾತಿಗಳು ರಾಜಕೀಯ ಒತ್ತಡಕ್ಕೆ ಒಳಗಾಗುವುದಿಲ್ಲ ಇದು ನ್ಯಾಯಾಧೀಶರನ್ನು ಕಾರ್ಯಾಂಗದ ಮಧ್ಯಪ್ರವೇಶಿಸುವಿಕೆಯಿಂದ ತಡೆಗಟ್ಟುತ್ತದೆ

c) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮನಬಂದಂತೆ ಪದಚ್ಯುತಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದಿಲ್ಲ. ಉಭಯ ಸದನಗಳು ೨/೩ ಬಹುಮತದಿಂದ ನಿರ್ಣಯವನ್ನು ಪಾಸು ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿದರೆ ಮಾತ್ರ ರಾಷ್ಟ್ರಪತಿಗಳು ನ್ಯಾಯಾಧೀಶರನ್ನು ಪದಚ್ಯುತಗೊಳಿಸುತ್ತಾರೆ. ಇದರಿಂದ ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

d) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಕಾರ್ಯಾಂಗದ ಸಲಹೆ ಮೇರೆಗೆ ನೇಮಕಾತಿ ಮಾಡುತ್ತಾರೆ. ಹೀಗಾಗಿ ನ್ಯಾಯಾಧೀಶರು ರಾಷ್ಟ್ರಪತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುವುದಿಲ್ಲ ಅವರು ತಮ್ಮ ಉತ್ತಮವಾದ ನಡತೆಯಿಂದ ಕಾರ್ಯನಿರ್ವಹಿಸುತ್ತಾರೆ. ನ್ಯಾಯಾಧೀಶರ ಅಸಭ್ಯ ವರ್ತನೆ ಹಾಗೂ ಅಸಮರ್ಥತೆಯ ಕಾರಣದಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಆದರೂ ಶಾಸಕಾಂಗದ ೨/೩ ಬಹುಮತದ ಆಧಾರದ ಮೇಲೆ ರಾಷ್ಟ್ರಪತಿಯವರನ್ನು ಉದ್ದೇಶಿಸಿ ನಿರ್ಣಯ ಮಂಡಿಸಬೇಕು.

e) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಸಂಸತ್ತು ಕಾಲ ಕಾಲಕ್ಕೆ ಪರಿಷ್ಕರಿಸಿ ನೀಡುತ್ತದೆ. ಆದರೆ ವೇತನವನ್ನು ಕಡಿತಗೊಳಿಸಿ ನೀಡುವ ಅಧಿಕಾರ ಸಂಸತ್ತಿಗೆ ಇಲ್ಲ. 360 ನೇ ವಿಧಿಯ ಪ್ರಕಾರ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೆ ಮಾತ್ರ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಕಡಿತಗೊಳಿಸಬಹುದು ವಿಧಿ 125 (3).

f)ಸಂವಿಧಾನದ 146 (3)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಆಡಳಿತಾತ್ಮಕ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

g) ಸಂವಿಧಾನದ 121 ನೇ ವಿಧಿಯ ಪ್ರಕಾರ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಸಂದರ್ಭವನ್ನು ಹೊರತುಪಡಿಸಿ ನ್ಯಾಯಾಧೀಶರ ನಡುವಳಿಕೆಯ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ.

h) ಸಂವಿಧಾನದ 124 (೭) ವಿಧಿಯಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತಿಯ ನಂತರ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಮಾಡುವಂತಿಲ್ಲ. ಇದು ನ್ಯಾಯಾಧೀಶರು ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದಂತೆ ತಡೆಯುತ್ತದೆ.

ಉಪಸಂಹಾರ

ಒಟ್ಟಾರೆ, ಸರ್ವೋಚ್ಚ ನ್ಯಾಯಾಲಯವು ಭಾರತದ ಸಂವಿಧಾನದ ಆತ್ಮವನ್ನು ಉಳಿಸಿ ಕಾಯುವ ಮಹತ್ವದ ಸಂಸ್ಥೆಯಾಗಿದೆ. ನ್ಯಾಯಾಧೀಶರ ಸ್ವಾತಂತ್ರ್ಯ, ಭದ್ರತೆ ಮತ್ತು ನಿಯಮಿತ ನೇಮಕಾತಿ ವಿಧಾನಗಳು ನ್ಯಾಯಾಂಗದ ಗೌರವವನ್ನು ಹೆಚ್ಚಿಸುತ್ತವೆ. ಮಹಾಭಿಯೋಗದಂತಹ ಕಠಿಣ ವಿಧಾನವು ನ್ಯಾಯಾಂಗದ ಪಾವಿತ್ರ್ಯವನ್ನು ಕಾಯ್ದುಕೊಳ್ಳುತ್ತದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯವು ದೇಶದ ನ್ಯಾಯ ಮತ್ತು ಸಮಾನತೆಯ ಮೂಲಸ್ತಂಭವಾಗಿದೆ.

ಮಂತ್ರಿಮಂಡಲದ ಕಾರ್ಯಗಳು

ಮಂತ್ರಿಮಂಡಲದ ಕಾರ್ಯಗಳು

ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮಂತ್ರಿಮಂಡಲವು ಕಾರ್ಯಾಂಗದ ಹೃದಯವಾಗಿದೆ. ಇದು ವಿಧಾನಸಭೆಯೊಂದಿಗೆ ಸಮನ್ವಯ ಸಾಧಿಸಿ ಶಾಸನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರಾಜ್ಯದ ಹಣಕಾಸು ವ್ಯವಸ್ಥೆ, ನೇಮಕಾತಿ ಪ್ರಕ್ರಿಯೆಗಳು ಮತ್ತು ವಿವಿಧ ಇಲಾಖೆಗಳ ಮೇಲ್ವಿಚಾರಣೆಯ ಮೂಲಕ ಸುಸೂತ್ರ ಆಡಳಿತವನ್ನು ಒದಗಿಸುತ್ತದೆ.

 ರಾಜ್ಯ ಮಂತ್ರಿ ಮಂಡಲದ ಕಾರ್ಯಗಳು ಈ ಕೆಳಗಿನಂತಿವೆ;

1. ಶಾಸನೀಯ ಕಾರ್ಯಗಳು: (Legislative Powers)

ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ, ವಿವರಿಸುವ ಹಾಗೂ ಸಮರ್ಥಿಸುವ ಕಾರ್ಯವನ್ನು ಮಂತ್ರಿ ಮಂಡಲದ ಮಂತ್ರಿಗಳು ಮಾಡಬೇಕಾಗುತ್ತದೆ. ವಿಧಾನಸಭೆಯ ಅಧಿವೇಶನದ ಕಾಲಾವಧಿ ಮತ್ತು ಕಲಾಪಗಳನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ. ಹೀಗಾಗಿ ಮಂತ್ರಿ ಮಂಡಲ ಕಾರ್ಯಾಂಗದ ಭಾಗವಾಗಿದ್ದರೂ ಶಾಸನಾತ್ಮಕ ಕಾರ್ಯಗಳನ್ನು ಸಹ ನಿರ್ವಹಿಸಬೇಕು.

2. ನೀತಿ ನಿರೂಪಣಾ ಕಾರ್ಯಗಳು:

 ರಾಜ್ಯದ ಆಂತರಿಕ ಭದ್ರತೆ ಮತ್ತು ಅಂತರಾಜ್ಯ ನೀತಿಗಳನ್ನು ನಿರ್ಧರಿಸುವ ಕಾರ್ಯವನ್ನು ರಾಜ್ಯ ಮಂತ್ರಿ ಮಂಡಲ ಮಾಡುತ್ತದೆ. ಜೊತೆಗೆ ಜನರ ಜೀವನವನ್ನು ನಿರೂಪಿಸುವ ಶಿಕ್ಷಣ, ಅರಣ್ಯ, ಕೈಗಾರಿಕೆ ಹಾಗೂ ಸಾರಿಗೆ ಮುಂತಾದ ರಂಗಗಳ ನೀತಿಗಳನ್ನು ನಿರ್ಧರಿಸುತ್ತದೆ. ಇದರ ಜೊತೆಗೆ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ.

3. ಕಾರ್ಯಾಂಗ ನಿಯಂತ್ರಣ ಕಾರ್ಯಗಳು:

ರಾಜ್ಯಪಾಲರು ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವ ಮಂತ್ರಿ ಮಂಡಲ ರಾಜ್ಯಪಾಲರಿಗೆ ಸಹಾಯ ಸಹಕಾರ ನೀಡುತ್ತದೆ. ಕಾರ್ಯಾಂಗದ ಪ್ರತಿಯೊಬ್ಬ ಸಚಿವ ಸಹ ತನ್ನ ಖಾತೆಯ ಮೇಲೆ ನಿಯಂತ್ರಣಾಧಿಕಾರವನ್ನು ಹೊಂದಿರುತ್ತಾನೆ.

4. ನೇಮಕಾತಿ ಕಾರ್ಯಗಳು: (Appointment Powers)

ನ್ಯಾಯವಾದಿ, ಲೆಕ್ಕ ಪರಿಶೋಧಕರು ಮುಂತಾದ ನೇಮಕಾತಿ ಸಂದರ್ಭಗಳಲ್ಲಿ ಮಂತ್ರಿಮಂಡಲವು ರಾಜ್ಯಪಾಲರಿಗೆ ಸಹಕಾರ ನೀಡುತ್ತದೆ. ಹಾಗೆಯೇ ರಾಜ್ಯ ಲೋಕಸೇವಾ ಆಯೋಗ ಮತ್ತು ಹಣಕಾಸು ಆಯೋಗಗಳ ನೇಮಕಾತಿಯಲ್ಲಿಯೂ ಸಚಿವ ಸಂಪುಟ ಭಾಗಿಯಾಗುತ್ತದೆ.

5. ಹಣಕಾಸಿನ ಕಾರ್ಯಗಳು: (Finanacial Powers) 

ರಾಜ್ಯ ಹಣಕಾಸಿನ ಮೇಲೆ ಮಂತ್ರಿಮಂಡಲದ ನಿಯಂತ್ರಣವನ್ನು ಹೊಂದಿದೆ. ಪ್ರತಿಯೊಬ್ಬ ಸಚಿವನು ತನ್ನ ಖಾತೆಗೆ ನಿಗದಿಪಡಿಸಲಾದ ಮೊತ್ತಕ್ಕೆ ವಿಧಾನಸಭೆಯಿಂದ ಅಂಗೀಕಾರ ಪಡೆದುಕೊಳ್ಳುತ್ತಾನೆ.

ಉಪಸಂಹಾರ

ಒಟ್ಟಾರೆ, ರಾಜ್ಯ ಮಂತ್ರಿಮಂಡಲವು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಾಸನೀಯ, ಕಾರ್ಯಾಂಗ, ಹಣಕಾಸು ಹಾಗೂ ನೇಮಕಾತಿ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ದಿಕ್ಕು ನೀಡುತ್ತದೆ. ಜನಪರ ನೀತಿಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಜನರ ಕಲ್ಯಾಣವನ್ನು ಸಾಧಿಸುವುದು ಮಂತ್ರಿಮಂಡಲದ ಮುಖ್ಯ ಉದ್ದೇಶವಾಗಿದೆ.

ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು

ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು

ರಾಜ್ಯ ವಿಧಾನಸಭೆಯನ್ನು ಶಾಸಕಾಂಗದ ಕೆಳಮನೆ ಎಂದು ಕರೆಯಲಾಗುತ್ತದೆ. ವಿಧಾನ ಸಭೆಯ ಸದಸ್ಯರು ನೇರವಾಗಿ ಪ್ರಜೆಗಳಿಂದ ಆಯ್ಕೆಯಾಗುವ ಕಾರಣ ಇದನ್ನು ಜನತಾ ಸದನ ಎಂದು ಕರೆಯುತ್ತಾರೆ. ಕೇಂದ್ರದಲ್ಲಿ ಲೋಕಸಭೆಯ ಹಾಗೆ ರಾಜ್ಯದಲ್ಲಿ ವಿಧಾನಸಭೆ ಪ್ರಭಾವಶಾಲಿಯಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳು ಇದ್ದರೂ ವಿಧಾನಸಭೆಯಷ್ಟು ವಿಧಾನ ಪರಿಷತ್ತು ಪ್ರಭಾವಶಾಲಿಯಾಗಿಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳು ಈ ಕೆಳಗಿನಂತಿವೆ.

1. ಶಾಸನೀಯ ಅಧಿಕಾರಿಗಳು: (Legislative Power)

ರಾಜ್ಯ ಶಾಸಕಾಂಗದ ಯಾವುದೇ ಸದನದಲ್ಲಿ ಸಾಮಾನ್ಯ ಮಸೂದೆಯನ್ನು ಮಂಡಿಸಬಹುದು. ಮೊದಲು ವಿಧಾನ ಪರಿಷತ್ತಿನಲ್ಲಿ ಮಸೂದೆಯೊಂದು ಮಂಡಿಸಲ್ಪಟ್ಟರೆ ಅದನ್ನು ಅಂಗೀಕರಿಸಿ ವಿಧಾನ ಸಭೆಯ ಅಂಗೀಕಾರಕ್ಕಾಗಿ ಕಳುಹಿಸಕೊಡಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದರೆ ಅದು ರಾಜ್ಯಪಾಲರ ಒಪ್ಪಿಗೆಗೆ ಹೋಗುತ್ತದೆ. ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿದರೆ ಅದು ಶಾಸನವಾಗುತ್ತದೆ. ಒಂದು ವೇಳೆ ವಿಧಾನ ಪರಿಷತ್ ಅಂಗೀಕರಿಸಿದ ಮಸೂದೆಯನ್ನು ವಿಧಾನಸಭೆ ತಿರಸ್ಕರಿಸಿದರೆ ಆ ಮಸೂದೆ ನಾಶವಾಗುತ್ತದೆ. ಹಾಗೆ ವಿಧಾನಸಭೆಯಲ್ಲಿ ಮೊದಲು ಮಂಡಿಸಲ್ಪಟ್ಟ ಮಸೂದೆಯನ್ನು ಅಂಗೀಕರಿಸಿ ವಿಧಾನ ಪರಿಷತ್ತಿನ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನ ಪರಿಷತ್ತು ಒಪ್ಪಿಗೆ ನೀಡಿದರೆ ರಾಜ್ಯಪಾಲರ ಅಂಕಿತದೊಂದಿಗೆ ಶಾಸನವಾಗುತ್ತದೆ. ಇಲ್ಲವೆ  ವಿಧಾನ ಪರಿಷತ್ತು ಮಸೂದೆಯನ್ನು ೪ ತಿಂಗಳುಗಳ ಕಾಲ ತಡೆ ಹಿಡಿಯಬಹುದು. ಅಂತಿಮವಾಗಿ ಅದು ಒಪ್ಪಿಗೆ ನೀಡಲೇಬೇಕಾಗುತ್ತದೆ. ಒಂದು ವೇಳೆ ಒಪ್ಪಿಗೆ ನೀಡದಿದ್ದರೆ ವಿಧಾನಸಭೆ ಅದನ್ನು ರಾಜ್ಯಪಾಲರ ಬಳಿ ಕಳುಹಿಸಿ ಅವರಿಂದ ಅಂಕಿತವನ್ನು ಪಡೆಯುತ್ತದೆ. ವಿಧಾನ ಪರಿಷತ್ತಿಗೆ ಯಾವುದೇ ಮಸೂದೆಯನ್ನು ತಡೆ ಹಿಡಿಯುವ ಅಧಿಕಾರ ಇಲ್ಲ.

2. ಕಾರ್ಯಾಂಗೀಯ ಅಧಿಕಾರಿಗಳು: (Excutive Power)

ಕಾರ್ಯಾಂಗವು ನೇರವಾಗಿ ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುತ್ತದೆ. ಎಲ್ಲಿಯವರೆಗೆ ವಿಧಾನಸಭೆಯು ನಂಬಿಕೆಗೆ ಪಾತ್ರರಾಗಿರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತದೆ. ಸದಸ್ಯರು ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರದಿಂದ ವಿಷಯವನ್ನು ಸಂಗ್ರಹಿಸಬಹುದು. ಸದಸ್ಯರ ಪ್ರಶ್ನೆಗಳಿಗೆ ಯಾವುದೇ ಆತಂಕಕ್ಕೊಳಗಾಗದೇ ಸಮಾಧಾನದಿಂದ ಉತ್ತರಿಸುವುದು ಮಂತ್ರಿಗಳ ಜವಾಬ್ದಾರಿಯಾಗಿದೆ. ಮಂತ್ರಿಗಳು ಸುಳ್ಳು ಹೇಳುವ ಅಥವಾ ಸದನವನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿದರೆ ಸದನದಿಂದ ಅವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಚರ್ಚೆಯ ಸಮಯದಲ್ಲಿ ವಿಧಾನಸಭೆಯು ಸರ್ಕಾರದಿಂದ ಅವಶ್ಯಕ ಮಾಹಿತಿಯನ್ನು ಹೊರಗೆಳೆಯಬಹುದಾಗಿದೆ. ಪ್ರಶ್ನೆವೇಳೆ, ನಿಲುವಳಿ ಸೂಚನೆ, ಶೂನ್ಯ ವೇಳೆ, ಕಡಿತದ ಸೂಚನೆ, ಗಮನ ಸೆಳೆಯುವ ಸೂಚನೆ ಇತ್ಯಾದಿ ಸಂದರ್ಭದಲ್ಲಿ ಜಾಗರೂಕತನದಿಂದ ಉತ್ತರಗಳನ್ನು ನೀಡಬೇಕಾಗುತ್ತದೆ.  ಪ್ರಶ್ನೆಗಳನ್ನು ಎದುರಿಸಲು ಮಂತ್ರಿಗಳು ಸಾಕಷ್ಟು ಮನೆಗೆಲಸಗಳನ್ನು ಮಾಡಿಕೊಂಡು ಬರಬೇಕು. ಉತ್ತರಗಳು ಸಿದ್ಧವಿರದಿದ್ದಲ್ಲಿ ಮಂತ್ರಿಗಳು ಸದನದಿಂದ ಸಮಯವನ್ನು ಪಡೆದು ನಂತರ ಉತ್ತರ ನೀಡಬಹುದು. ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಪರಿಣಾಮಕಾರಿ ಅಸ್ತ್ರವೆಂದರೆ ಅವಿಶ್ವಾಸ ಮತ ನಿರ್ಣಯ ಸರಕಾರವು ಅವಿಶ್ವಾಸ ನಿರ್ಣಯದಲ್ಲಿ ಸೋತರೆ ಅಧಿಕಾರದಿಂದ ಕೆಳಗಿಳಿದು ನಡೆಯಬೇಕಾಗುತ್ತದೆ.

3. ಹಣಕಾಸಿನ ಅಧಿಕಾರಿಗಳು: (Financial Powers)

ಹಣಕಾಸಿನ ಮಸೂದೆಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಲ್ಪಡುತ್ತದೆ. ನಂತರ ಮಂಡಿಸಿದ ಹಣಕಾಸು ಮಸೂದೆಯನ್ನು ಅಂಗೀಕಾರಕ್ಕಾಗಿ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಲಾಗುತ್ತದೆ. ಆಗ ವಿಧಾನಪರಿಷತ್ತು 14 ದಿನದೊಳಗೆ ಅಂಗೀಕಾರವನ್ನು ನೀಡಬೇಕು, ಇಲ್ಲವಾದಲ್ಲಿ ಎರಡು ಸದನಗಳು ಅಂಗೀಕರಿಸಿವೆ ಎಂದು ಭಾವಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯಪಾಲರ ಅಂಕಿತದೊಂದಿಗೆ ಮಸೂದೆ ಶಾಸನವಾಗುತ್ತದೆ. ಕೆಳಮನೆಯ ಒಪ್ಪಿಗೆ ಇಲ್ಲದೆ ಯಾವ ಇಲಾಖೆಯು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಮತ್ತು ತೆರಿಗೆಯನ್ನು ವಿಧಿಸಿ ಸಾರ್ವಜನಿಕರಿಂದ ವಸೂಲಿ ಮಾಡುವಂತೆಯೂ ಇಲ್ಲ. ರಾಜ್ಯದ ಆಯವ ಪಟ್ಟಿಯನ್ನು ವಿಧಾನಸಭೆಯ ಮುಂದೆ ಇಡಬೇಕಾಗುತ್ತದೆ. ಇಲಾಖೆಯಿಂದ ಬರುವ ಹಣದ ಬೇಡಿಕೆಗಳ ಬಗ್ಗೆ  ಚರ್ಚಿಸಿ ಬೇಡಿಕೆಗಳನ್ನು ಕಡಿಮೆ ಮಾಡುವ ಅಥವಾ ನಿರಾಕರಿಸುವ ಅಧಿಕಾರ ವಿಧಾನಸಭೆಗೆ ಇದೆ. ವಿಧಾನಸಭೆಯ ಅನುಮತಿ ಇಲ್ಲದೆ ಯಾವ ತೆರಿಗೆಯನ್ನು ವಿಧಿಸಲು ಸಾಧ್ಯವಿಲ್ಲ.

4. ಚುನಾವಣಾ ಅಧಿಕಾರಿಗಳು: (Election Power)

  1. ವಿಧಾನಸಭೆಯ ಸದಸ್ಯರು ಮತದಾನದ ಮೂಲಕ ತಮ್ಮೊಳಗೆ ಒಬ್ಬ ಸಭಾಧ್ಯಕ್ಷ ಹಾಗೂ ಒಬ್ಬ ಉಪಸಭಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
  2. ವಿಧಾನ ಪರಿಷತ್ತು ಇರುವ ರಾಜ್ಯಗಳಲ್ಲಿ ವಿಧಾನ ಸಭೆಯ ಸದಸ್ಯರು ವಿಧಾನ ಪರಿಷತ್ತಿನ ೧/೩  ರಷ್ಟು ಸದಸ್ಯರನ್ನು ಮತ ನೀಡುವ ಮೂಲಕ ಚುನಾಯಿಸಿಕೊಳ್ಳುತ್ತಾರೆ.
  3. ವಿಧಾನ ಸಭೆಯ ಸದಸ್ಯರು ಆಯಾ ರಾಜ್ಯಕ್ಕೆ ಸಂವಿಧಾನದಲ್ಲಿ ನಿಗದಿಪಡಿಸಿದಷ್ಟು ಸದಸ್ಯರನ್ನು ರಾಜ್ಯಸಭೆಗೆ ಮತ ನೀಡುವ ಮೂಲಕ ಚುನಾಯಿಸುತ್ತಾರೆ.
  4. ರಾಷ್ಟ್ರಪತಿ ಚುನಾವಣೆಯಲ್ಲಿ ವಿಧಾನಸಭಾ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ.

5. ಸಂವಿಧಾನ ತಿದ್ದುಪಡಿ ಅಧಿಕಾರಗಳು: (Power of Constitution Amensment)

ಸಂವಿಧಾನ ತಿದ್ದುಪಡಿಯಲ್ಲಿಯೂ ವಿಧಾನಸಭೆಯ ಪಾತ್ರ ಅತಿ ಮುಖ್ಯವಾಗಿದೆ. ಸಂಸತ್ತು ಸಂವಿಧಾನದ ಕೆಲವು ಪ್ರಮುಖ ವಿಷಯಗಳನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಅಂಗೀಕರಿಸಿದಾಗ ಒಟ್ಟು ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳು ತಮ್ಮ ಅಲ್ಪ ಮತದೊಂದಿಗೆ ಅನುಮೋದನೆಯನ್ನು ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರ ಯಾವುದಾದರೂ ಒಂದು ಭೂಪ್ರದೇಶವನ್ನು ಪುನರ್ರಚಿಸಲು ಇಚ್ಛಿಸಿದಾಗ ರಾಷ್ಟ್ರಪತಿಗಳು ಆ ರಾಜ್ಯದ ವಿಧಾನಸಭೆಯ ಅಭಿಪ್ರಾಯ ಕೇಳುತ್ತಾರೆ. ಆಗ ರಾಜ್ಯದ ವಿಧಾನಸಭೆ ಒಪ್ಪಿಗೆ ನೀಡುವುದು ಅಥವಾ ಬಿಡುವುದು ಅದಕ್ಕೆ ಸೇರಿದುದು.

6. ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಅಧಿಕಾರಗಳು: (Power of Public Grivances)

ವಿಧಾನಸಭೆ ಸದಸ್ಯರು ಜನರಿಂದಲೇ ನೆರವಾಗಿ ಆಯ್ಕೆಯಾದ ಕಾರಣ ಅವರು ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಶ್ರಮಿಸಬೇಕು. ವಿಧಾನ ಸಭೆಯ ಪ್ರತಿಯೊಬ್ಬ ಸದಸ್ಯನು ತಾನು ಆಯ್ಕೆಯಾದ ಮತ ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪಟ್ಟಿ ಮಾಡಿ ಅಧಿವೇಶನದ ಸಮಯದಲ್ಲಿ ಕಾರ್ಯಾಂಗದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಒತ್ತಾಯಿಸುವನು. ಇದರ ಜೊತೆಗೆ ರಾಜ್ಯವನ್ನು ಬಾಧಿಸುವ ಸಮಸ್ಯೆಗಳನ್ನು ಸಹ ಸದಸ್ಯರು ಅಧಿವೇಶನದಲ್ಲಿ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವರು. ಈ ವಿಷಯದಲ್ಲಿ ಸದಸ್ಯರುಗಳು ಪ್ರಶ್ನಾತೀತ ಮತ್ತು ಪಕ್ಷಾತೀತವಾಗಿ ಹೋರಾಡಬೇಕು. ಆ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕು. ಪರಿಹಾರವನ್ನು ಒದಗಿಸಿಕೊಡಬೇಕು. ಇಲ್ಲವಾದರೆ ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಉಪಸಂಹಾರ

ಒಟ್ಟಾರೆ ವಿಧಾನಸಭೆ ರಾಜ್ಯ ಆಡಳಿತದ ಕೇಂದ್ರಬಿಂದುವಾಗಿದ್ದು, ಕಾನೂನು, ಹಣಕಾಸು ಮತ್ತು ಕಾರ್ಯಾಂಗದ ಮೇಲ್ವಿಚಾರಣೆಯಲ್ಲಿ ಮಹತ್ವದ ಅಧಿಕಾರ ಹೊಂದಿದೆ. ಜನರ ಆಶಯಗಳನ್ನು ಪ್ರತಿನಿಧಿಸುವ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕು. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಧಾನಸಭೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ.

ವಿಧಾನಸಭೆಯ ರಚನೆ

ವಿಧಾನಸಭೆಯ ರಚನೆ

ವಿಧಾನಸಭೆಯು ಶಾಸಕಾಂಗದ ಕೆಳಮನೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಹಾಗೆ ರಾಜ್ಯ ಶಾಸಕಾಂಗಗಳಲ್ಲಿ ಕೆಳಮನೆಯಾದ ವಿಧಾನ ಸಭೆಯು ಭಾರತದ ಎಲ್ಲಾ ರಾಜ್ಯಗಳಲ್ಲೂ ಜಾರಿಯಲ್ಲಿರುತ್ತದೆ. ದ್ವಿ ಸದನಗಳಲ್ಲಿ ವಿಧಾನಸಭೆಯೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಇಲ್ಲಿ ಪ್ರಜೆಗಳಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳಿರುತ್ತಾರೆ.

1. ವಿಧಾನಸಭೆಯ ಸದಸ್ಯರ ಸಂಖ್ಯೆ: (Total number of members of Legislative Assembly)

ಸಂವಿಧಾನದ 170 (೧)ನೇ ವಿಧಿಯ ಪ್ರಕಾರ ರಾಜ್ಯವೊಂದರ ವಿಧಾನಸಭೆಯ ಸದಸ್ಯರ ಸಂಖ್ಯೆ 500ನ್ನು ಮೀರುವಂತಿಲ್ಲ ಹಾಗೂ ಕನಿಷ್ಠ ೬೦ಕ್ಕಿಂತ ಕಡಿಮೆ ಇಡಬಾರದು ಹೇಳಿದೆ. ಮುಂದುವರೆದು ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಸಂವಿಧಾನವೇ ಪ್ರತಿಯೊಂದು ರಾಜ್ಯದ ವಿಧಾನ ಸಭೆಯ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ. ಉದಾಹರಣೆ ಆಂಧ್ರಪ್ರದೇಶ ೨೯೪, ಬಿಹಾರ್ 242, ಗುಜರಾತ್ 182, ಕರ್ನಾಟಕ 224, ಕೇರಳ 140, ಮಧ್ಯಪ್ರದೇಶ ೨೩೦, ಮಹಾರಾಷ್ಟ್ರ 288 ಹಾಗೂ ಉತ್ತರ ಪ್ರದೇಶಗಳಿಗೆ 403 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಅಂದರೆ ಆಯಾ ರಾಜ್ಯಗಳ ಜನಸಂಖ್ಯೆ ಆಧಾರದ ಮೇಲೆ ವಿಧಾನಸಭಾ ಸ್ಥಾನಗಳು ಹಂಚಿಕೆಯಾಗಿವೆ. ಆದರೆ ಚಿಕ್ಕ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಇರುತ್ತದೆ. ಉದಾಹರಣೆ ಗೋವಾ 40, ಸಿಕ್ಕಿಂ 32, ಮಿಜೋರಾಂ 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

2. ಚುನಾವಣಾ ವಿಧಾನ: (Election Method)

ವಿಧಾನಸಭಾ ಸದಸ್ಯರು ಪ್ರಜೆಗಳಿಂದ ನೇರವಾಗಿ ಚುನಾಯಿತರಾಗುತ್ತಾರೆ. ಸಂವಿಧಾನದ 61ನೇ ತಿದ್ದುಪಡಿಯ ಪ್ರಕಾರ 18 ವರ್ಷ ಪೂರೈಸಿದ ಪುರುಷ ಮತ್ತು ಮಹಿಳೆಯರು ಪ್ರತಿ ೫ ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಮತದಾನ ಪದ್ದತಿಯ ಮೂಲಕ ಮತ ಚಲಾಯಿಸುತ್ತಾರೆ. ಪ್ರಜೆಗಳು ಯಾವುದೇ ಆಮಿಷಕ್ಕೆ ಒಳಗಾಗದೆ, ಅಡ್ಡಿ ಆತಂಕಗಳಿಲ್ಲದೆ ವಿಧಾನಸಭಾ ಸದಸ್ಯರನ್ನು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಲೋಕಸಭಾ ಸ್ಥಾನದಂತೆಯೇ ಇಲ್ಲಿಯೂ ಕೂಡ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಕೆಲವೊಂದು ಸ್ಥಾನಗಳನ್ನು ಮೀಸಲಿಡಲಾಗುತ್ತದೆ.

3. ವಿಧಾನಸಭಾ ಸದಸ್ಯರ ಅರ್ಹತೆಗಳು: (Qualifications of Legislative Members)

 ವಿಧಾನಸಭಾ ಸದಸ್ಯನಾಗಲು ಈ ಕೆಳಗಿನ ಅರ್ಹತೆಗಳು ಇರಲೇಬೇಕು

1. ಸಂವಿಧಾನದ 173 ನೇ ವಿಧಿಯ ಪ್ರಕಾರ ಆತ ಭಾರತದ ಪ್ರಜೆಯಾಗಿರಬೇಕು.

2. ಆತ ಕನಿಷ್ಠ 25 ವರ್ಷ ವಯಸ್ಸಿನವನಾಗಿರಬೇಕು.

3. ಸಂಸತ್ತಿನ ಅಥವಾ ಕಾನೂನಿನಿಂದ ನಿಗದಿಪಡಿಸಲ್ಪಟ್ಟ ಅರ್ಹತೆಗಳಿರಬೇಕು.

4. ಸಂವಿಧಾನಕ್ಕೆ  ವಿಧೇಯನಾಗಿರಬೇಕು.

5. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

6. ದಿವಾಳಿ, ಮತಿವಿಕಲ ಅಥವಾ ಬುದ್ಧಿಮಾಂದ್ಯನಾಗಿರಬಾರದು.

4. ಸದಸ್ಯರ ಅಧಿಕಾರಾವಧಿ: (Terms and Power of Members)

 ಸಾಮಾನ್ಯವಾಗಿ ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ ೫ ವರ್ಷಗಳು, ಅವಧಿಗಿಂತ ಮೊದಲೇ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬಹುದು. ಆಗ ಅಧಿಕಾರ ಅವಧಿ ಕಡಿಮೆಯಾಗುತ್ತದೆ. ಸಂವಿಧಾನದ 356ನೇ ವಿಧಿಯ ಪ್ರಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ರಾಷ್ಟ್ರಪತಿಯೂ ಸಹ ವಿಧಾನಸಭೆಯನ್ನು ವಿಸರ್ಜಿಸಬಹುದು. ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ ವಿದಾನ ಸಭೆಯ ಅವಧಿಯನ್ನು ಸಂಸತ್ತು ಒಂದು ವರ್ಷದವರೆಗೆ ಮುಂದುವರಿಸಬಹುದು. ತುರ್ತು ಪರಿಸ್ಥಿತಿ ರದ್ದಾದ ೬ ತಿಂಗಳೊಳಗಾಗಿ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ವಿಧಾನಸಭೆಯ ಅಧಿವೇಶನವನ್ನು ಕರೆಯುವುದು ಅಥವಾ ಮುಂದೂಡುವುದು ರಾಜ್ಯಪಾಲರ ವಿವೇಚನೆಗೆ ಸೇರಿರುತ್ತದೆ. ವಿಧಾನ ಸಭೆಯು ವಾರ್ಷಿಕ 3 ಬಾರಿ ಅಧಿವೇಶನವನ್ನು ಕರೆಯಬೇಕು. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನಸಭಾ ಅಧಿವೇಶನಗಳ ನಡುವಿನ ಅಂತರ ಕನಿಷ್ಠ ೬ ತಿಂಗಳು ಮೀರುವಂತಿಲ್ಲ. ಅಂದರೆ ವಾರ್ಷಿಕವಾಗಿ ಎರಡು ಬಾರಿಯಾದರೂ ಅಧಿವೇಶನವನ್ನು ಕರೆಯಲೇಬೇಕು. 

6. ಕೋರಂ: (Quoram)

ʻʻವಿಧಾನಸಭೆ ಅಧಿವೇಶನದಲ್ಲಿ ಕನಿಷ್ಠ ಸಂಖ್ಯೆಯ ಸದಸ್ಯರು ಹಾಜರಿರಬೇಕಾದ ಕ್ರಮವನ್ನು ಕೋರಂ ಎಂದು ಕರೆಯಲಾಗುತ್ತದೆʼʼ. ವಿಧಾನಸಭೆಯ ಅಧಿವೇಶನಕ್ಕೆ ಕನಿಷ್ಠ ೧/೧೦  ಭಾಗದಷ್ಟು ಸದಸ್ಯರು ಹಾಜರಿರಲೇಬೇಕು. ಅಂದರೆ ೨24 ಸದಸ್ಯರ ಪೈಕಿ 23 ಜನ ಸದಸ್ಯರು ಹಾಜರಾದರೆ ಕೋರಂ ಬಂದ ಹಾಗೆಯೇ. ಒಂದು ವೇಳೆ ಕೋರಂ ಇಲ್ಲದ್ದರೆ ಸಭಾಧ್ಯಕ್ಷರು ಅಧಿವೇಶನವನ್ನು ಮುಂದೂಡುತ್ತಾರೆ.

7. ಸಭಾಪತಿ ಮತ್ತು ಉಪ ಸಭಾಪತಿ: (Speaker and Deputy Speaker)

ವಿಧಾನಸಭೆ ಚುನಾವಣೆಯ ನಂತರ ಬಹುಮತ ಪಡೆದ ಪಕ್ಷದ ಸದಸ್ಯರು ಸೇರಿ ತಮ್ಮಲ್ಲಿ ಒಬ್ಬನನ್ನು ಸಭಾಪತಿ ಮತ್ತು ಇನ್ನೊಬ್ಬನನ್ನು ಉಪ ಸಭಾಪತಿಯನ್ನಾಗಿ ತಮ್ಮಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯಾದ ಸಭಾಪತಿಯು ವಿಧಾನ ಸಭೆಯ ಕಾರ್ಯಕಲಾಪಗಳ ಜವಾಬ್ದಾರಿಯನ್ನು ಹೊರುತ್ತಾರೆ. ಸಭಾಪತಿ ಹಾಗೂ ಉಪಸಭಾಪತಿಗಳು ೫ ವರ್ಷಗಳ ಅವಧಿಗೆ ಅಧಿಕಾರದಲ್ಲಿ ಇರುತ್ತಾರೆ. ಸದನದ ಶಾಸಕೀಯ ವ್ಯವಹಾರಗಳನ್ನು ಸುಸೂತ್ರವಾಗಿ ಗೌರವ, ಶಿಸ್ತು ಹಾಗೂ ಗಂಭೀರವಾಗಿ ನಡೆಸುವ ಜವಾಬ್ದಾರಿಯ ಸಹ ಸಭಾಪತಿಯ ಮೇಲಿರುತ್ತದೆ. ವಿಧಾನಸಭಾ ಸಭಾಪತಿಗಳು ಜಂಟಿ ಸಮಾವೇಶಗಳ ಅಧ್ಯಕ್ಷತೆಯನ್ನು ವಹಿಸುವ ಕಾರ್ಯವನ್ನಲ್ಲದೆ ಲೋಕಸಭಾ ಅಧ್ಯಕ್ಷರು ನಿರ್ವಹಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಭಾಪತಿಗಳ ಗೈರುಹಾಜರಿ, ನಿಧನ, ಅನಾರೋಗ್ಯ ಮತ್ತು ವಿದೇಶಿ ಪ್ರವಾಸದಂತಹ ಸಮಯದಲ್ಲಿ ಉಪಸಭಾಪತಿಗಳು ಸಭಾಪತಿಗಳ ಕಾರ್ಯವನ್ನು ನಿರ್ವಹಿಸುತ್ತಾರೆ.

ಅ) ಸದನದ ಎಲ್ಲಾ ಆದೇಶಗಳನ್ನು ಸಭಾಪತಿಯ ಮೂಲಕವೇ  ನೆರವೇರಿಸಲಾಗುತ್ತದೆ.

ಆ)  ರಾಜ್ಯಪಾಲರಿಂದ ಬರುವ ಯಾವುದೇ ಸಂದೇಶಗಳನ್ನು ಸಭಾಪತಿಯ ಮೂಲಕವೇ ಸದನಕ್ಕೆ ತಿಳಿಸಲಾಗುತ್ತದೆ.

ಇ)  ಒಂದು ಮಸೂದೆ ಅದು ಹಣಕಾಸು ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಧಿಕಾರ ಸಭಾಪತಿಗೆ ಇರುತ್ತದೆ.

ಈ) ಸಭಾಪತಿಯ ನಿರ್ಣಯಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಉ) ಯಾವುದೇ ಸದಸ್ಯರು ಸಭಾಪತಿಯ ಅನುಮತಿಯನ್ನು ಪಡೆಯದ ಹೊರತು ಸದನದಲ್ಲಿ ಮಾತನಾಡುವಂತಿಲ್ಲ.

ಊ) ಒಂದು ಮಸೂದೆಯನ್ನು ಮಂಡಿಸುವಾಗ ಸದನದಲ್ಲಿ ಸರಿ ಸಮಾನವಾದ ಮತಗಳು ಬಂದಾಗ ಸಭಾಪತಿಗೆ ನಿರ್ಣಾಯಕ ಮತ ನೀಡುವ ಹಕ್ಕು ಇದೆ. ಸದನದಲ್ಲಿ ಈ ಕೆಳಗಿನ ಶಬ್ದಗಳನ್ನು ಬಳಸಿದಂತೆ ನಿರ್ಬಂಧ ಹೇರಲಾಗಿದೆ. ಸುಳ್ಳುಗಾರ, ಗೂಂಡಾ, ನರಕ, ರಾಷ್ಟ್ರದೋಹಿ, ಕೆಲಸಕ್ಕೆ ಬಾರದವನು, ಕುರಿ, ಮೂರ್ಖ, ಬಾಡಿಗೆ ಜನ, ದುರಹಂಕಾರಿ, ರೌಡಿ ಅಯೋಗ್ಯ ಮುಂತಾದವುಗಳು.  ʻʻಸಭಾಪತಿಗಳು ತಮ್ಮ ರಾಜೀನಾಮೆಯನ್ನು ಡೆಪ್ಯೂಟಿ ಸ್ಪೀಕರವರಿಗೆ ನೀಡಬೇಕು.ʼʼ ಡೆಪ್ಯೂಟಿ ಸ್ಪೀಕರ್ ತಮ್ಮ ರಾಜೀನಾಮೆಯನ್ನು  ಸ್ಪೀಕರವರಿಗೆ ನೀಡಬೇಕು.

8. ವೇತನ ಮತ್ತು ವಿನಾಯಿತಿಗಳು: (Salary and Immunities)

ವಿಧಾನಸಭಾ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಾದ ವೇತನ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಅವರಿಗೆ ಮಾಸಿಕವೇತನ ಮತ್ತು ನಿವೃತ್ತಿವೇತನ ನೀಡಲಾಗುತ್ತದೆ. ಜೊತೆಗೆ ಉಚಿತ ದೂರವಾಣಿ ಕರೆಗಳು, ಉಚಿತ ನಿವಾಸ ಸೌಲಭ್ಯ, ಆರೋಗ್ಯ ಸೇವೆ, ವಿದ್ಯುತ್‌ ಸೌಲಭ್ಯಗಳನ್ನು ಪಡೆಯುತ್ತಾರೆ.

ಉಪಸಂಹಾರ

ಒಟ್ಟಾರೆ ವಿಧಾನಸಭೆ ರಾಜ್ಯ ಪ್ರಜಾಪ್ರಭುತ್ವದ ಮೂಲಸ್ತಂಭವಾಗಿದೆ. ಜನರ ಆಶಯಗಳನ್ನು ಕಾನೂನಿನ ರೂಪಕ್ಕೆ ತರಲು ಹಾಗೂ ಸರ್ಕಾರವನ್ನು ಜವಾಬ್ದಾರಿಯುತವಾಗಿ ನಡೆಸಲು ಇದು ಸಹಾಯಕವಾಗಿದೆ. ಸಭಾಪತಿ, ಸದಸ್ಯರು ಮತ್ತು ಅಧಿವೇಶನಗಳ ಮೂಲಕ ರಾಜ್ಯದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಆದ್ದರಿಂದ ವಿಧಾನಸಭೆಯ ರಚನೆ ಮತ್ತು ಕಾರ್ಯವಿಧಾನವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ವಿಧಾನಪರಿಷತ್ ರಚನೆ

ವಿಧಾನಪರಿಷತ್ ರಚನೆ

ಭಾರತೀಯ ಸಂವಿಧಾನದ 169 ಮತ್ತು 171ನೇ ವಿಧಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ತು ರಚನೆಯಾಗಿದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನಪರಿಷತ್ತು ಅಸ್ತಿತ್ವದಲ್ಲಿದೆ. ಇದು ರಾಜ್ಯ ವಿಧಾನಸಭೆಗೆ ಸಹಾಯಕವಾಗಿದ್ದು ಶಾಸನ ಪ್ರಕ್ರಿಯೆಯಲ್ಲಿ ಸಮತೋಲನವನ್ನು ಕಾಪಾಡುತ್ತದೆ. ವಿಶೇಷ ವರ್ಗಗಳ ಪ್ರತಿನಿಧಿತ್ವಕ್ಕೆ ಅವಕಾಶ ನೀಡುವ ಮೂಲಕ ಜನಪ್ರಾತಿನಿಧ್ಯವನ್ನು ವಿಸ್ತರಿಸುತ್ತದೆ.

ವಿಧಾನಪರಿಷತ್ ರಚನೆ: (Compostition of Legislative Council or Upper House)

ʻʻವಿಧಾನ ಪರಿಷತ್ತನ್ನು ರಾಜ್ಯ ಶಾಸಕಾಂಗದ ಮೇಲ್ಮನೆಯಂದು ಕರೆಯಲಾಗಿದೆʼʼ. ಭಾರತದ ಒಕ್ಕೂಟದ ಎಲ್ಲಾ ರಾಜ್ಯಗಳ ಶಾಸಕಾಂಗಗಳು ವಿಧಾನ ಪರಿಷತ್ತನ್ನು ಹೊಂದಿಲ್ಲ. ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ರಚನೆಯಾಗಿರುವುದು ಕಂಡುಬರುತ್ತದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್ ಮತ್ತು ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ಅಸ್ತಿತ್ವದಲ್ಲಿದೆ. ಸಂವಿಧಾನದ 169 ನೇ ವಿಧಿಯ ಪ್ರಕಾರ ಸಂಸತ್ತು ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಹೊಸದಾಗಿ ರಚಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ತನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ. ಆದರೆ ವಿಧಾನಪರಿಷತ್ತಿನ ರಚನೆ ಮತ್ತು ರದ್ದತಿಗೆ ಆಯಾ ರಾಜ್ಯ ವಿಧಾನ ಸಭೆಯ ೨/೩ ರಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯ ಸ್ಥಾನಗಳ ಅರ್ಧಕ್ಕಿಂತಲೂ ಹೆಚ್ಚು ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಅದನ್ನು ಸಂಸತ್ತಿಗೆ ಕಳುಹಿಸಿಕೊಡಬೇಕು. ಆಗ ಸಂಸತ್ತು ಸರಳ ಬಹುಮತದೊಂದಿಗೆ ಅಂಗೀಕರಿಸಿ ಕಾನೂನಾಗಿ ಮಾಡಿ ವಿಧಾನಸಭೆಯ ನಿರ್ಣಯಕ್ಕೆ ಸಂವಿಧಾನಾತ್ಮಕ ಸ್ಥಾನವನ್ನು ನೀಡುತ್ತದೆ.

1. ಒಟ್ಟು ಸದಸ್ಯರ ಸಂಖ್ಯೆ: (Total Number of Members)

ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಇಷ್ಟೇ ಇರಬೇಕು ಎಂಬುದನ್ನು ನಿಗದಿಪಡಿಸಿರುವುದಿಲ್ಲ.  ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಆಯಾ ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40 ಕ್ಕಿಂತ ಕಡಿಮೆ ಇರಬಾರದು ಮತ್ತು ಸಂಬಂಧಿಸಿದ ರಾಜ್ಯ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ೧/೩ಕ್ಕಿಂತ ಹೆಚ್ಚಿರಬಾರದು ಎಂದು ಸೂಚಿಸಿದೆ. ಹೀಗಾಗಿ ಕರ್ನಾಟಕದಲ್ಲಿ 224 ಚುನಾಯಿತ ಹಾಗೂ ಒಬ್ಬ ಆಂಗ್ಲೋ ಇಂಡಿಯನ್ ಸದಸ್ಯ ಸೇರಿದಂತೆ ವಿಧಾನ ಸಭೆಯು 225 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ವಿಧಾನ ಪರಿಷತ್ತು ವಿಧಾನಸಭೆಯ ೧/೩ ರಷ್ಟು ಸ್ಥಾನಗಳನ್ನು ಅಂದರೆ 75 ಸದಸ್ಯರಿಂದ ಕೂಡಿದೆ.

2. ಚುನಾವಣಾ ವಿಧಾನ: (Election Method)

ವಿಧಾನಸಭೆಯ ಸದಸ್ಯರಂತೆ ವಿಧಾನ ಪರಿಷತ್ತಿನ ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ. ಬದಲಾಗಿ ವಿವಿಧ ವರ್ಗಗಳ ವಿಶೇಷ ಮತದಾರರಿಂದ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಕೊಳ್ಳುತ್ತಾರೆ. ಈ ಸದನದ ಎಲ್ಲಾ ಸದಸ್ಯರು ವಿವಿಧ ಕ್ಷೇತ್ರಗಳಿಂದ ಏಕ ಮತವನ್ನು ವರ್ಗಾಯಿಸುವ ಪ್ರಮಾಣಾನುಗುಣ ಪದ್ಧತಿಯ ಮೂಲಕ ಚುನಾಯಿತರಾಗುತ್ತಾರೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸದಸ್ಯರು ಕೆಳಕಂಡಂತೆ ಚುನಾಯಿತರಾಗುತ್ತಾರೆ.

  1. ೧/೩ ರಷ್ಟು ಭಾಗದಷ್ಟು ಸದಸ್ಯರು ಸ್ಥಳೀಯ ಸಂಸ್ಥೆಗಳಾದ ಮುನಸಿಲಾಲಿಟಿ, ಜಿಲ್ಲಾ ಮಂಡಳಿ ಹಾಗೂ ಸಂಸತ್ತಿನ ಕಾನೂನಿನಿಂದ ರಾಜ್ಯದಲ್ಲಿ ನಿರ್ಧರಿಸಲ್ಪಡುವ ಇತರ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗುತ್ತಾರೆ.
  2. ರಾಜ್ಯ ವಿಧಾನ ಸಭೆಯ ಸದಸ್ಯರು ೧/೩  ಭಾಗದಷ್ಟು ಸದಸ್ಯರನ್ನು ವಿಧಾನ ಸಭೆಯ ಸದಸ್ಯರಲ್ಲದವರನ್ನು ಚುನಾಯಿಸುತ್ತಾರೆ.
  3. ೧/೧೨ ಭಾಗದಷ್ಟು ಸದಸ್ಯರು ದೇಶದ ಯಾವುದೇ ವಿಶ್ವವಿದ್ಯಾಲಯದಿಂದಲಾದರೂ ಪದವಿಯನ್ನು ಪಡೆದ ಪದವೀಧರರಿಂದ ಚುನಾಯಿತರಾಗುತ್ತಾರೆ.
  4. ೧/೧೨ಭಾಗದಷ್ಟು ಸದಸ್ಯರು ಕನಿಷ್ಟ ಪಕ್ಷ ಮೂರು ವರ್ಷಗಳವರೆಗೆ ಸೆಕೆಂಡರಿ ಶಾಲೆಗಿಂತ ಕಡಿಮೆ ಇರದ ವಿದ್ಯಾಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರಿಂದ ಚುನಾಯಿತರಾಗುತ್ತಾರೆ.
  5. ೧/೬ ಭಾಗದಷ್ಟು ಸದಸ್ಯರನ್ನು ವಿಜ್ಞಾನ ಕಲೆ, ಸಮಾಜಿಕ ಸೇವೆಗಳಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವ ಪಡೆದವರನ್ನು ರಾಜ್ಯಪಾಲರು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಿಸುತ್ತಾರೆ.

3. ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು: (Qualification of Legislative Council)

ಸಂವಿಧಾನ 173 ನೇ ವಿಧಿಯ ಪ್ರಕಾರ ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು ಈ ಕೆಳಗಿನಂತಿವೆ:

  1. ಅವರು ಭಾರತದ ಪ್ರಜೆಯಾಗಿರಬೇಕು.
  2. ಅವರಿಗೆ 30 ವರ್ಷ ವಯಸ್ಸಾಗಿರಬೇಕು.
  3. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
  4. ಅವನು ಹುಚ್ಚಮತಿ ವಿಕಲ ಅಥವಾ ಅಪರಾಧಿಯಾಗಿರಬಾರದು.
  5. ಸಂಸತ್ತು ನಿರ್ಧರಿಸುವ ಇತರೆ ಅರ್ಹತೆಗಳನ್ನು ಹೊಂದಿರಬೇಕು.

ಸದಸ್ಯರು ಚುನಾಯಿತರಾದ ಮೇಲೆ 191ನೇ ವಿಧಿಯಲ್ಲಿ ನಮೂದಿಸಿದ ಅರ್ಹತೆಗಳನ್ನು ಹೊಂದಿರದಿದ್ದರೆ ಆತ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. 190(೩) (b)  ವಿಧಿಯ ಅನ್ವಯ ವಿಧಾನ ಪರಿಷತ್ತಿನ ಚೇರ್‌ಮೆನ್‌ರವರಿಗೆ ರಾಜೀನಾಮೆ ಪತ್ರ ಬರೆದು ಸದಸ್ಯತ್ವವನ್ನು ತ್ಯಜಿಸಬಹುದು. ಇದೇ ವಿಧಿಯ (೪)ನೇ ಉಪವಿಧಿಯ ಅನ್ವಯ ಸದನದ ಆರಮತಿ ಇಲ್ಲದೆ 60 ದಿನಗಳು ಎಲ್ಲಾ ಸಭೆಗಳಿಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ.

4. ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ: (Terms and Power of Legislative Council)

 ಸಾಮಾನ್ಯವಾಗಿ ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ ಅವಧಿ ೬ ವರ್ಷಗಳು. ಅವಧಿಗಿಂತ ಮುಂಚಿತವಾಗಿ ಯಾರಾದರೂ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ, ಉಳಿದ ಅವಧಿಗೆ ಚುನಾವಣೆ ನಡೆಯುತ್ತದೆ. ೬ ವರ್ಷದ ಅವಧಿ ಮುಗಿದ ೧/೩  ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ. ಆಗ ೧/೩ ಭಾಗದಷ್ಟು ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸಂವಿಧಾನದ 1೭2 (೨)ನೇ ಎರಡು ವಿಧಿಯ ಪ್ರಕಾರ ವಿಧಾನ ಪರಿಷತ್ತನ್ನು ವಿಸರ್ಜಿಸುವಂತಿಲ್ಲ.

5. ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ: (Oath of Legislative Council)

 ಸಂವಿಧಾನದ 188 ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬೇಕು. ಸಂವಿಧಾನದ ೩ನೇ ಅನುಸೂಚಿಯಲ್ಲಿ ನಮೂದಿಸಿರುವಂತೆ ಸಂವಿಧಾನವನ್ನು ಗೌರವಿಸಿ ದೇಶದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದು ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು. ಪ್ರಮಾಣವಚನವನ್ನು ಸ್ವೀಕರಿಸದೆ ಸದನದಲ್ಲಿ ಹಾಜರಾದರೆ ಅಥವಾ ಮತ ಚಲಾಯಿಸಿದರೆ ಪ್ರತಿದಿನ 500ರೂಗಳ ದಂಡ ನೀಡಬೇಕು ಎಂದು ಸಂವಿಧಾನ ೧೯೩ ನೇ ವಿಧಿತಿಳಿಸುತ್ತದೆ. ಹಾಗೆಯೇ ಸದಸ್ಯತ್ವವನ್ನು ಕಳೆದುಕೊಂಡು ಸದನಕ್ಕೆ ಹಾಜರಾದರೆ 500ರೂ ದಂಡ ವಿಧಿಸಲಾಗುವುದು.

6. ಅಧಿವೇಶನಗಳು: (Sessions)

ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ತಿನ ಅಧಿವೇಶನವನ್ನು ಕರೆಯುವ ಹಾಗೂ ಮುಂದೂಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಪರಿಷತ್ತು ವರ್ಷದಲ್ಲಿ ಮೂರು ಬಾರಿ ಸಭೆ ಸೇರುತ್ತದೆ. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನ ಪರಿಷತ್ತಿನ ಎರಡು ಸದನಗಳ ನಡುವಿನ ಅಂತರ ೬ ತಿಂಗಳುಗಳನ್ನು ಮೀರುವಂತಿಲ್ಲ. ಅಂದರೆ ವರ್ಷದಲ್ಲಿ ಎರಡು ಬಾರಿ ಅಧಿವೇಶನಗಳು ನಡೆಯಲೇಬೇಕು.

7. ಕೋರಂ: (Quoram)

ಅಧಿವೇಶನದ ಅವಧಿಯಲ್ಲಿ ವಿಧಾನ ಪರಿಷತ್ತಿನ ಕಲಾಪಗಳು ಜರುಗಲು ಹಾಜರಾಗಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರ ಪೈಕಿ ೮ ಸದಸ್ಯರು ಹಾಜರಾದರೆ ಸಾಕು ಕೋರಂ ಬಂದಂತೆ ಎಂದಾಗುತ್ತದೆ. ಒಂದು ವೇಳೆ ಸದನದಲ್ಲಿ ಕೋರಂ ಇಲ್ಲದೆ ಹೋದರೆ ಸಭಾಪತಿಗಳು ಅಧಿವೇಶನವನ್ನು ಮುಂದೂಡುವ ಅಧಿಕಾರವನ್ನು ಹೊಂದಿರುತ್ತಾರೆ.

8. ಸಭಾಪತಿ ಮತ್ತು ಉಪ ಸಭಾಪತಿ: (Chairman and Deputy Chairman)

ವಿಧಾನಪರಿಷತ್ತಿನ ಚುನಾವಣೆಯ ನಂತರ ಆಯ್ಕೆಯಾದ ಸದಸ್ಯರುಗಳು ತಮ್ಮಲ್ಲಿ ಒಬ್ಬ ಸಭಾಪತಿ ಹಾಗೂ ಒಬ್ಬ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಭಾಪತಿಯಾದವನು ವಿಧಾನ ಪರಿಷತ್ತಿನ ಕಲಾಪಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಾನೆ. ಆತ ಸದನದಲ್ಲಿ ಶಿಸ್ತು, ಸಂಯಮದಿಂದ ನಡೆದುಕೊಂಡು ಸದನದ ಗೌರವವನ್ನು ಕಾಪಾಡುವಂತೆ ಸದಸ್ಯರಿಗೆ ಮನವಿ ಮಾಡುತ್ತಾರೆ. ಒಂದು ವೇಳೆ ಅಧ್ಯಕ್ಷರು ಗೈರು ಹಾಜರಾದರೆ ಉಪಾಧ್ಯಕ್ಷರು ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ.

9. ವೇತನ ಹಾಗೂ ವಿನಾಯಿತಿಗಳು: (Salary and Immunities)

ಸಂವಿಧಾನದ 195 ನೇ ವಿಧಿಯ ಪ್ರಕಾರ ರಾಜ್ಯಗಳ ಶಾಸಕರಿಗೆ ಕಾನೂನಿನ ಮೂಲಕ ವೇತನ ಹಾಗೂ ಇತರೆ ಭತ್ಯೆಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇದೆ. ಕರ್ನಾಟಕ ಶಾಸಕಾಂಗ ಎಂ.ಎಲ್.ಎ ಹಾಗೂ ಎಂ.ಎಲ್‌.ಸಿ ಗಳ ವೇತನ ಹಾಗೂ ಭತ್ಯೆಗಳನ್ನು ಆಗಾಗ ಪರಿಷ್ಕರಿಸಿದೆ. ವಿಧಾನ ಪರಿಷತ್ತಿನ ಶಾಸಕರಿಗೆ 40,000 ಮಾಸಿಕ ವೇತನ ನೀಡಲಾಗುತ್ತದೆ. ಇದರ ಜೊತೆಗೆ ದೂರವಾಣಿ ಭತ್ಯೆ, ಚುನಾವಣಾ ಕ್ಷೇತ್ರದ ಭತ್ಯೆ, ಅಂಚೆ ವೆಚ್ಚಗಳ ಭತ್ಯೆ, ಪ್ರತಿ ಅಧಿವೇಶನಕ್ಕೆ ಹಾಜರಾದಾಗ ದಿನವೊಂದಕ್ಕೆ 200೦ ರೂಗಳ ಭತ್ಯೆ, ತಿಂಗಳಿಗೆ ಕನಿಷ್ಠ ಪಿಂಚಣಿ ೧೫೦೦೦ ದಿಂದ 25,000 ವರೆಗೆ ನೀಡಲಾಗುತ್ತದೆ. ಅದು ಅಲ್ಲದೆ ವೈದ್ಯಕೀಯ ಸೌಲಭ್ಯ, ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಹಾಗೂ ವಾಹನಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.

ಉಪಸಂಹಾರ

ವಿಧಾನಪರಿಷತ್ತು ರಾಜ್ಯದ ಶಾಸನಾತ್ಮಕ ವ್ಯವಸ್ಥೆಗೆ ಸ್ಥಿರತೆ ಮತ್ತು ಗಂಭೀರತೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಇದು ವಿಧಾನಸಭೆಯ ನಿರ್ಣಯಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಕಾನೂನು ರಚನೆಗೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಿವಿಧ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡಿರುವುದರಿಂದ ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುತ್ತದೆ. ಹೀಗಾಗಿ ವಿಧಾನಪರಿಷತ್ತು ರಾಜ್ಯ ಆಡಳಿತದಲ್ಲಿ ಸಮತೋಲನ ಮತ್ತು ಸಮರ್ಥತೆಯನ್ನು ಒದಗಿಸುವ ಮಹತ್ವದ ಸದನವಾಗಿದೆ.