ತಾಲೂಕು ಪಂಚಾಯತ್

ತಾಲೂಕು ಪಂಚಾಯತ್

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಪಂಚಾಯತನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿಯು ಇಡೀ ತಾಲೂಕಿನ ಮೇಲೆ ಅಧಿಕಾರವನ್ನು ಹೊಂದಿರುತ್ತದೆ. ಮೂರು ಹಂತದ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿಯೂ ಒಂದಾಗಿದೆ. ಇದು ಗ್ರಾಮ ಪಂಚಾಯಿತಿಯ ಮೇಲಿನ ಹಾಗೂ ಜಿಲ್ಲಾ ಪಂಚಾಯಿತಿಯ ಕೆಳಗಿನ ಮಾಧ್ಯಮಿಕ ಸ್ಥರದಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಯಾಗಿದೆ.

ರಚನೆ: (Structure)

ಪ್ರತಿಯೊಂದು ತಾಲೂಕು ಪಂಚಾಯತ್ ಚುನಾಯಿತ ಸದಸ್ಯರನ್ನು ಹೊಂದಿದೆ. ಸಾರ್ವತ್ರಿಕ ಮತದಾನ ಪದ್ಧತಿಯ ಮೂಲಕ ಅಂದರೆ 18 ವರ್ಷ ತುಂಬಿದ ಪ್ರತಿಯೊಬ್ಬ ಸ್ತ್ರೀ ಪುರುಷರು ಮತದಾನ ಮಾಡುವ ಮೂಲಕ ತಾಲೂಕು ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಇವರೊಂದಿಗೆ ತಾಲೂಕನ್ನು ಪ್ರತಿನಿಧಿಸುವ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ತಾಲೂಕಿನ ಮತದಾರರ ಪಟ್ಟಿಯಲ್ಲಿರುವ ರಾಜ್ಯ ವಿಧಾನಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರು ಮತದಾನ ಮಾಡುವ  ಹಕ್ಕನ್ನು ಹೊಂದಿರುತ್ತಾರೆ. ತಾಲೂಕು ಪಂಚಾಯಿತಿಗೆ 10,000 ಜನಸಂಖ್ಯೆಗೆ  ಒಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣೆ: (Election) 

ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರತಿ 10೦೦೦ ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ತಾಲೂಕು ಪಂಚಾಯಿತಿಗೆ ಆಯ್ಕೆಯಾಗುತ್ತಾರೆ. ಈ ಚುನಾವಣೆಯು ಏಕವ್ಯಕ್ತಿ ಏಕಮತ ಹಾಗೂ ರಹಸ್ಯ ಮತದಾನ ತತ್ವವನ್ನು ಆಧರಿಸುತ್ತದೆ.

ಮೀಸಲಾತಿ :  (Reservation)

ತಾಲೂಕು ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ ಶೇಕಡ 15 ರಷ್ಟು ಪರಿಶಿಷ್ಟ ಜಾತಿಯವರಿಗೆ, ಶೇಕಡ ೩% ರಷ್ಟು ಪರಿಶಿಷ್ಟ ಪಂಗಡದವರಿಗೆ ಹಾಗೂ ಮೂರನೇ ಒಂದರಷ್ಟು ಸ್ಥಾನಗಳನ್ನು ಇತರೆ  ಹಿಂದುಳಿದವರಿಗೆ ಮೀಸಲಾಗಿರಿಸಲಾಗುತ್ತದೆ. ಇಲ್ಲಿ ಮಹಿಳಾ ಮೀಸಲಾತಿಯನ್ನು ಸಹ ನೀಡಲಾಗುತ್ತದೆ.

ಅರ್ಹತೆಗಳು ಮತ್ತು ಅನರ್ಹತೆಗಳು: (Qualification and UnQualification)

ತಾಲೂಕು ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ  ಹೆಸರಿರುವವರು ಹಾಗೂ 21 ವರ್ಷ ತುಂಬಿದವರು ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಕಾನೂನಿನ ಅನ್ವಯ ಅನರ್ಹರಾಗಿದ್ದರೆ, ಕ್ರಿಮಿನಲ್ ಮೊಕದ್ದಮೆಗಾಗಿ ಶಿಕ್ಷೆಗೆ ಒಳಪಟ್ಟಿದ್ದರೆ ಹಾಗೂ 21 ವರ್ಷ ವಯಸ್ಸಾಗದೆ ಇದ್ದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಅಧಿಕಾರಾವಧಿ: (Term of Office)

ತಾಲೂಕು ಪಂಚಾಯತ ಸದಸ್ಯರ ಅಧಿಕಾರಾವಧಿಯು ಐದು ವರ್ಷಗಳು. ಸದಸ್ಯರು ರಾಜೀನಾಮೆ ನೀಡಿದರೆ, ಪಕ್ಷಾಂತರ ಮಾಡಿದರೆ ಹಾಗೂ ದುರ್ನಡತೆಗಾಗಿ ಅವರನ್ನು ತೆಗೆದು ಹಾಕಿದರೆ ಅವರ ಸ್ಥಾನಖಾಲಿಯಾದಾಗ ಮರುಚುನಾವಣೆ ಮಾಡಬೇಕು. ಸದಸ್ಯರು ಒಂದು ವೇಳೆ ರಾಜೀನಾಮೆ ನೀಡುವ ಸಂದರ್ಭ ಒದಗಿ ಬಂದರೆ ʻʻಅವರು ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ನೀಡಿ ಪದತ್ಯಾಗ ಮಾಡಬೇಕು.ʼʼ

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು: (President and Vice President)

ತಾಲೂಕು ಪಂಚಾಯತ್ ಅದಿನಿಯಮದ ಪ್ರಕಾರ ತಾಲೂಕು ಪಂಚಾಯಿತಿಯ ಸದಸ್ಯರು ಒಬ್ಬ ಅಧ್ಯಕ್ಷ ಹಾಗೂ ಉಪಾಧ್ಯಕ್ಷನನ್ನು ತಮ್ಮೊಳಗೆ ಆಯ್ಕೆ ಮಾಡಿಕೊಳ್ಳುತ್ತಾರೆ̤ ಅಧ್ಯಕ್ಷರು ತಾಲೂಕು ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ̤ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಆಯ್ಕೆಯಲ್ಲಿಯೂ ಪರಿಶಿಷ್ಟ ಜಾತಿ ಅಥವಾ ವರ್ಗ, ಹಿಂದುಳಿದ ಜಾತಿ ಅಥವಾ ವರ್ಗ ಹಾಗೂ ಮಹಿಳೆಯರಿಗೂ ಮೀಸಲಾತಿಯನ್ನು ಅನುಸರಿಸಲಾಗುತ್ತದೆ.

ಸಭೆ: (Meeting)

ತಾಲೂಕು ಪಂಚಾಯತಿಯು ಎರಡು ತಿಂಗಳಿಗೆ ಒಮ್ಮೆಯಾದರೂ ಸಭೆಯನ್ನು ನಡೆಸಬೇಕು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರೇ ನಿರ್ವಹಿಸುತ್ತಾರೆ. ಅಧ್ಯಕ್ಷರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ತಾಲೂಕು ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ ೧/೩ ಸದಸ್ಯರು ಹಾಜರಿದ್ದು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.

ಕಾರ್ಯನಿರ್ವಾಹಕ ಅಧಿಕಾರಿ: (Excutive Officer)

ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ಕಾರ್ಯನಿರ್ವಾಹಕ ಅಧಿಕಾರಿ ನೇಮಕವಾಗುತ್ತಾನೆ. ಈತ ಇಡೀ ತಾಲೂಕು ಪಂಚಾಯಿತಿಯ ಕಾರ್ಯಾಂಗದ ಮೇಲೆ ಹತೋಟಿಯನ್ನು ಹೊಂದಿರುತ್ತಾನೆ. ಇವರೊಂದಿಗೆ ಒಬ್ಬ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಜವಾನರು ಕಾರ್ಯನಿರ್ವಹಿಸುತ್ತಾರೆ.

ತಾಲೂಕು ಪಂಚಾಯಿತಿಯ ಕಾರ್ಯಗಳು: (Functions of Taluk Panchayat)

1)  ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಗಳಿಂದ ನಿರ್ವಹಿಸಿದ ಕಾರ್ಯಗಳನ್ನು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸುವುದು.

2)  ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವಾರ್ಷಿಕ ಯೋಜನೆಗಳನ್ನು ಕ್ರೋಢೀಕರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವುದು.

3) ತಾಲೂಕಿನ ಮುಂಗಡಪತ್ರವನ್ನು ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸುವುದು.

4) ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ ಆದೇಶಿಸಿದ ಕಾರ್ಯಗಳನ್ನು ನೆರವೇರಿಸುವುದು.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.   

8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು

ಉಪಸಂಹಾರ

ಒಟ್ಟಾರೆ ತಾಲೂಕು ಪಂಚಾಯಿತಿಯು ಸ್ಥಳೀಯ ಸ್ವಾಯತ್ತ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಅಭಿವೃದ್ಧಿ, ಕಲ್ಯಾಣ ಮತ್ತು ಆಡಳಿತ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಇದು ಗ್ರಾಮೀಣ ಸಮಾಜದ ಉನ್ನತಿಗೆ ಸಹಕಾರ ನೀಡುತ್ತದೆ. ಜನಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಹೀಗಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿಯೇ ಉಳಿದಿದೆ.

ನಗರ ಪಾಲಿಕೆಯ ಕಾರ್ಯಗಳು

ನಗರ ಪಾಲಿಕೆಯ ಕಾರ್ಯಗಳು

ಮಹಾನಗರ ಪಾಲಿಕೆಯು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಿ ದೊಡ್ಡ ಸಂಸ್ಥೆಯಾಗಿದೆ. ಮೂರು ಲಕ್ಷ ಅಧಿಕ ಸಂಖ್ಯೆಯುಳ್ಳ ನಗರಗಳಲ್ಲಿ ಮಹಾನಗರ ಪಾಲಿಕೆಯನ್ನು ರಚಿಸಲಾಗುತ್ತದೆ. ಆಯಾ ನಗರ ಪಾಲಿಕೆಯ ಜನಸಂಖ್ಯೆಯ ಆಧಾರದ ಮೇಲೆ ಸದಸ್ಯರ ಆಯ್ಕೆಯಾಗುತ್ತದೆ. ಮಹಾನಗರ ಪಾಲಿಕೆಯು 30 ರಿಂದ 100 ಜನ ಸದಸ್ಯರನ್ನು ಹೊಂದಿದೆ. ʻʻಮಹಾನಗರ ಪಾಲಿಕೆ ಸದಸ್ಯರನ್ನು ಕೌನ್ಸಿಲರ್ ಎಂದು ಕರೆಯಲಾಗುತ್ತದೆ.ʼʼ ನಗರ ಪಾಲಿಕೆಯ ವಾರ್ಡಗಳ ಜನರಿಂದ ಚುನಾಯಿತಗೊಳ್ಳುವ ಸದಸ್ಯರ ಜೊತೆಗೆ ಆ ನಗರವನ್ನು ಪ್ರತಿನಿಧಿಸುವ ವಿಧಾನಸಭಾ, ವಿಧಾನಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಭಾಗವಹಿಸಿ ಮತ ಚಲಾಯಿಸುತ್ತಾರೆ. ಇವರೊಂದಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಕ್ಷೇತ್ರ ತಜ್ಞರು ಇರುತ್ತಾರೆ.

ನಗರ ಪಾಲಿಕೆಯ ಕಾರ್ಯಗಳು: (Functions of Corporation)

 ಮಹಾನಗರ ಪಾಲಿಕೆಯ ಕಾರ್ಯಗಳು ಈ ಕೆಳಗಿನಂತಿವೆ.

1) ಕಟ್ಟಡಗಳ ನಿರ್ಮಾಣ ಮತ್ತು ಭೂ-ಉಪಯೋಗ ನಿಯಂತ್ರಣ

2)  ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆ.

3)  ಸಾರ್ವಜನಿಕರ ರಸ್ತೆ ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿ.

4)  ಗೃಹ ಕೈಗಾರಿಕೆ ಹಾಗೂ ವ್ಯಾಪಾರದ ಉದ್ದೇಶಗಳಿಗೆ ನೀರು ಸರಬರಾಜು.

5)  ಸಾರ್ವಜನಿಕ ಆರೋಗ್ಯ ಒಳ ಚರಂಡಿ ವ್ಯವಸ್ಥೆ ಕೊಳಚೆ ನೀರನ್ನು ಸಂಗ್ರಹಿಸಿ ಸಮರ್ಥ ರೀತಿಯಲ್ಲಿ ಬಳಕೆ ಮಾಡುವುದು.

6)  ಸಾರ್ವಜನಿಕ ರಸ್ತೆ ಬೀದಿ ಹಾಗೂ ಮಾರುಕಟ್ಟೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ.

7)  ನಗರ ಅರಣ್ಯ ಹಾಗೂ ಪರಿಸರ ಸಂರಕ್ಷಣೆ.

8) ಸಾಮಾಜಿಕವಾಗಿ ಹಿಂದುಳಿದವರು ಸೇರಿದಂತೆ ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರನ್ನು ರಕ್ಷಿಸುವುದು.

9)  ನಗರ ಪ್ರದೇಶದ ಬಡತನವನ್ನು ನಿರ್ಮೂಲನೆಗೊಳಿಸುವುದು.

10)  ರಸ್ತೆಗಳ ನಾಮಕರಣ ಹಾಗೂ ಮನೆ ನಂಬರ್ ಗಳನ್ನು ಹಾಕುವುದು.

11)  ಸಾರ್ವಜನಿಕ ಮಾರುಕಟ್ಟೆಗಳ ನಿರ್ಮಾಣ ಮತ್ತು ಸಂರಕ್ಷಣೆ.

12)  ಸಾಂಕ್ರಾಮಿಕ ರೋಗಗಳು ಬರದಂತೆ ಕ್ರಮ ಕೈಗೊಳ್ಳುವುದು.

13)  ಆಹಾರ ಪದಾರ್ಥ, ಹಾಲು ಮತ್ತು ಔಷಧಿಗಳ ಕಲಬೆರಕೆಯನ್ನು ತಡೆಯುವುದು.

14)  ಜನನ ಮತ್ತು ಮರಣಗಳ ದಾಖಲೆ ಇಡುವುದು.

15)  ಪ್ರಾಥಮಿಕ ಶಾಲೆಗಳ ಸ್ಥಾಪನೆ ಮತ್ತು ಸಂರಕ್ಷಣೆ.

16)  ಪಾರ್ಕುಗಳು ಉದ್ಯಾನವನಗಳು ಹಾಗೂ ಆಟದ ಮೈದಾನಗಳ ನಿರ್ಮಾಣ ಮತ್ತು ಸಂರಕ್ಷಣೆ.

17)  ಸ್ಮಶಾನಗಳು ಮತ್ತು ಸ್ಮಶಾನ ಸ್ಥಳಗಳು ಹಾಗೂ ವಿದ್ಯುತ್ ಶವಗಾರಿಗಳನ್ನು ನೋಡಿಕೊಳ್ಳುವುದು.

18)  ಗೋಶಾಲೆಗಳ ನಿರ್ವಹಣೆ.

19)  ಸಸಿಗಳನ್ನು ನೆಡುವುದು ಮತ್ತು ಅವುಗಳ ರಕ್ಷಣೆ.

20)  ಶಿಶು ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ.

21)  ಈಜುಕೊಳ ಹಾಗೂ ಸ್ನಾನ ಘಟ್ಟಗಳ ನಿರ್ಮಾಣ ಹಾಗೂ ನಿರ್ವಹಣೆ.

22)  ಪ್ರಾಣಿಗಳ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ.

23)  ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿಗಳ ಸ್ಥಾಪನೆ ಮತ್ತು ಸಂರಕ್ಷಣೆ

24)  ಪ್ರಕೃತಿ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯ ಮಾಡುವುದು.

25)  ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ಸ್ಥಾಪನೆ.

26)  ಕಸಾಯಿ ಖಾನೆ ಮತ್ತು ಚರ್ಮ ಹದ ಮಾಡುವ ಕಸಾಯಿ  ಖಾನೆಗಳನ್ನು ನಿರ್ವಹಿಸುವುದು

ಕರ್ನಾಟಕದಲ್ಲಿ ಸದ್ಯ ಹುಬ್ಬಳ್ಳಿ, ಧಾರವಾಡ, ಮೈಸೂರು, ಗುಲ್ಬರ್ಗ, ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳಲ್ಲಿ ಮಹಾನಗರ ಪಾಲಿಕೆಗಳು ಕಾರ್ಯ ನಿರ್ವಹಿಸುತ್ತವೆ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿ ಇದೆ.

ಉಪಸಂಹಾರ

ಒಟ್ಟಿನಲ್ಲಿ ಮಹಾನಗರ ಪಾಲಿಕೆ ನಗರಗಳ ಸಮಗ್ರ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ. ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೂ ಸಹಕಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವದ್ದು. ಉತ್ತಮ ನಗರ ಜೀವನಕ್ಕಾಗಿ ಮಹಾನಗರ ಪಾಲಿಕೆಯ ಕಾರ್ಯಗಳು ಅನಿವಾರ್ಯವಾಗಿವೆ.

ಗ್ರಾಮ ಪಂಚಾಯಿತಿಯ ಕಾರ್ಯಗಳು

ಗ್ರಾಮ ಪಂಚಾಯಿತಿಯ ಕಾರ್ಯಗಳು

ಕರ್ನಾಟಕ ಪಂಚಾಯತ್ ಅದಿನಿಯಮ 1993ರ ಪ್ರಕರಣ ೪ರ ಅನ್ವಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು 5,000 ಕ್ಕಿಂತ ಕಡಿಮೆ ಇಲ್ಲದ ಹಾಗೂ 7,000 ಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಯನ್ನು ಹೊಂದಿರುವ ಒಂದು ಗ್ರಾಮವನ್ನು ಅಥವಾ ಗ್ರಾಮಗಳ ಗುಂಪನ್ನು ಒಳಗೊಂಡಿರುವ ಯಾವುದೇ ಪ್ರದೇಶವನ್ನು ಗ್ರಾಮ ಪಂಚಾಯಿತಿ ಎಂದು ಘೋಷಿಸಬಹುದು. ಆದರೆ ಮಲೆನಾಡು ಪ್ರದೇಶಗಳಾದ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 25೦೦ ಕ್ಕಿಂತ ಕಡಿಮೆಯಿಲ್ಲದ ಜನಸಂಖ್ಯೆಯುಳ್ಳ ಪ್ರದೇಶವನ್ನು ಗ್ರಾಮ ಪಂಚಾಯತ್‌ ಎಂದು ಘೋಷಿಸಬಹುದು.

ಗ್ರಾಮ ಪಂಚಾಯಿತಿಯ ಕಾರ್ಯಗಳು: (Functions of Grama Panchayat)        

 ಗ್ರಾಮ ಪಂಚಾಯಿತಿ ಕಾರ್ಯಗಳು ಈ ಕೆಳಗಿನಂತಿವೆ

1)  ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು, ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು, ಹಾಗೂ ಗ್ರಾಮಗಳ ಅಂಕಿ ಅಂಶಗಳನ್ನು ಶೇಖರಿಸುವುದು.

2) ಕೃಷಿ ಹಾಗೂ ತೋಟಗಾರಿಕೆ ಫಾರಂಗಳನ್ನು ತೆರೆಯುವುದು ಹಾಗೂ ಅವುಗಳ ನಿರ್ವಹಣೆ ಮಾಡುವುದು ದಾಸ್ತಾನು ಮಳೆಗೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ವಸ್ತುಪ್ರದರ್ಶನಗಳನ್ನು ಏರ್ಪಡಿಸುವುದು.

3)  ಜಲಾನಯನ ಅಭಿವೃದ್ಧಿ, ಅಂತರ್ಜಲ ಮೂಲಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿ ನಿರ್ಮಾಣ.

4)  ಹಂದಿ ಸಾಗಾಣಿಕೆ, ಕೋಳಿ, ಹೈನು ಹಾಗೂ ಪಶುಸಾಗಾಣಿಕೆ ಪ್ರೋತ್ಸಾಹ, ಪಶು ಆಸ್ಪತ್ರೆಗಳ ನಿರ್ಮಾಣ ಮತ್ತು ಪಶುಗಳಿಗೆ ತಗಲುವ ಅಂಟುರೋಗಗಳ ನಿವಾರಣೆ.

5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.

6)  ಗ್ರಾಮೀಣ ಗುಡಿ ಕೈಗಾರಿಕೆಗೆ, ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.

7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.   

8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು.

9)  ಶುದ್ಧವಾದ ಕುಡಿಯುವ ನೀರಿನ ಸರಬರಾಜು ಮಾಡುವುದು ಹಾಗೂ ಗ್ರಾಮ ನೈರ್ಮಲ್ಯವನ್ನು ಕಾಪಾಡುವುದು.

1೦) ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಮೇವು ಅಭಿವೃದ್ಧಿಗೆ ಒತ್ತು ನೀಡುವುದು. ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು.

11) ಗ್ರಾಮೀಣ ರಸ್ತೆಗಳು, ಕಾಲುದಾರಿ, ಅಣೆಕಟ್ಟುಗಳ ನಿರ್ಮಾಣ ಮತ್ತು ನಿರ್ವಹಣೆ.

12)  ಅಸಂಪ್ರದಾಯಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹ.

13)  ಗ್ರಾಮೀಣ ಭಾಗದ ಜನರ ಬಡತನವನ್ನು ಹೋಗಲಾಡಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

14)  ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ. ಆಶ್ರಮ ಶಾಲೆಗಳು ಹಾಗೂ ಅನಾಥಾಶ್ರಮಗಳ ಸ್ಥಾಪನೆ.

15)  ಗ್ರಾಮೀಣ ಕರಕುಶಲ ಮತ್ತು ವೃತ್ತಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆ.

16)  ಅನೌಪಚಾರಿಕ ಶಿಕ್ಷಣವನ್ನು ಆರಂಭಿಸುವುದು ಮತ್ತು ವಯಸ್ಕ ಸಾಕ್ಷರತಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು.

17)  ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಮಾರುಕಟ್ಟೆಗಳನ್ನು ನಿಯಂತ್ರಿಸುವುದು.

18)  ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಿರ್ಮಾಣ ಹಾಗೂ ನಿರ್ವಹಣೆ. ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ. ರೋಗನಿರೋಧಕ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

19)  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವುದು.

20) ಅಂಗವಿಕಲರು, ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವುದು.

21)  ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟಜಾತಿ/ಜನಾಂಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡುವುದು.

22)  ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು  ನೋಡಿಕೊಳ್ಳುವುದು.

23)  ಗ್ರಾಮೀಣ ವಿದ್ಯುದ್ಧೀಕರಣ

24)  ಸಹಕಾರ ಚಟುವಟಿಕೆಗಳಿಗೆ ಪ್ರೋತ್ಸಾಹ.

25)  ಸಂತೆಗಳನ್ನು ಏರ್ಪಡಿಸುವುದು ಮತ್ತು ನಿಯಂತ್ರಿಸುವುದು.

26)  ಗ್ರಂಥಾಲಯಗಳ ಹಾಗೂ ವಾಚನಾಲಯ ಕೊಠಡಿಗಳ ನಿರ್ಮಾಣ ಹಾಗೂ ನಿರ್ವಹಣೆ.

27)  ಸಾರ್ವಜನಿಕ ಉದ್ಯಾನವನಗಳ ಹಾಗೂ  ಕ್ರೀಡಾಂಗಣಗಳ ಸಂರಕ್ಷಣೆ.

28)  ರುದ್ರ ಭೂಮಿ ಸಂರಕ್ಷಣೆ.

ಉಪಸಂಹಾರ

ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಸ್ತಿವಾರವಾಗಿದೆ. ಜನರ ಭಾಗವಹಿಸುವಿಕೆಯಿಂದ ಇದು ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ. ಸ್ಥಳೀಯ ಸ್ವರಾಜ್ಯದ ತತ್ವವನ್ನು ಕಾರ್ಯರೂಪಕ್ಕೆ ತಂದು ಗ್ರಾಮಗಳ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯನ್ನು ಗ್ರಾಮ ಮಟ್ಟದಲ್ಲಿ ಪ್ರತಿಬಿಂಬಿಸುವ ಸಂಸ್ಥೆಯಾಗಿದೆ.

73 ಮತ್ತು 74 ನೇ ಸಂವಿಧಾನ ತಿದ್ದುಪಡಿ

73 ಮತ್ತು 74 ನೇ ಸಂವಿಧಾನ ತಿದ್ದುಪಡಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಲುಪಿಸಲು 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಪ್ರಮುಖ ಪಾತ್ರವಹಿಸಿವೆ. ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆಗಳವರೆಗೆ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಿಕ ಮಾನ್ಯತೆ ನೀಡಲಾಯಿತು. ಇವು ರಾಜಕೀಯ ವಿಕೇಂದ್ರೀಕರಣಕ್ಕೆ ಬಲ ನೀಡಿದವು. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನತೆ ಸಾಧಿಸಲಾಯಿತು.

73ನೇ ಸಂವಿಧಾನ ತಿದ್ದುಪಡಿ: (73rd Constitutional Ammendment)

ಸಂವಿಧಾನದ 73ನೇ ತಿದ್ದುಪಡಿ ಭಾರತದ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿದಾಗಲೂ ಸಾಧ್ಯವಾಗದಿದ್ದ  ರಾಜಕೀಯ ವಿಕೇಂದ್ರೀಕರಣವನ್ನು ಜಾರಿಗೆ ತಂದದ್ದು ಈ ತಿದ್ದುಪಡಿಯ ಸಾಧನೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಎಂಬ ಎರಡು ಹಂತಗಳೊಂದಿಗೆ ಗಾಂಧೀಜಿಯ ಕನಸಿನ ಸ್ಥಳಿಯ ಸರ್ಕಾರವೆಂಬ ಮೂರನೇ ಹಂತದ ಆಡಳಿತ ಘಟಕಗಳಿಗೆ ಮಾನ್ಯತೆ  ಒದಗಿಸಿದಂತಾಯಿತು. ರಾಜೀವಗಾಂಧಿಯವರ ಕನಸನ್ನು ನನಸು ಮಾಡಲು ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿತು. ಪರಿಣಾಮವಾಗಿ ಸಂವಿಧಾನದ 73ನೇ ತಿದ್ದುಪಡಿಗೆ ಸಂಸತ್ತಿನ ಅಂಗೀಕಾರ 1992 ರಲ್ಲಿ ದೊರಕಿತು. 1993 ಏಪ್ರಿಲ್ 24ರಂದು ಪಂಚಾಯತ್ ರಾಜ್ಯ ಕಾನೂನು ಜಾರಿಗೆ ಬಂದಿತು. ʻʻದಿ ಪಂಚಾಯತ್ಸ್‌ʼʼ  ಶೀರ್ಷಿಕೆಯನ್ನು ಒಳಗೊಂಡ ೯ನೇ ಭಾಗವನ್ನು ಸಂವಿಧಾನದಲ್ಲಿ ಸೇರಿಸಿ 243 ರಿಂದ 243(೦) ವರೆಗೆ  ೧೬ ಹೊಸ ವಿಧಿಗಳನ್ನು ಅಳವಡಿಸಲಾಗಿದೆ. ಸುಮಾರು 29 ಕಾರ್ಯಗಳನ್ನು ಪಂಚಾಯತಿಗಳು ನಿರ್ವಹಿಸಬೇಕೆಂದು ಅದರಲ್ಲಿ ಸೂಚಿಸಲಾಗಿದೆ. 

1. ಸಂವಿಧಾನದ 243 (B)  ವಿಧಿಯ ಪ್ರಕಾರ ಪ್ರತಿ ರಾಜ್ಯದಲ್ಲಿ ಮೂರು ಹಂತದ ಅಂದರೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ಗಳನ್ನು ರಚಿಸುವುದು. 20 ಲಕ್ಷಕ್ಕಿಂತ ಕಡಿಮೆ ಇರುವ ರಾಜ್ಯದಲ್ಲಿ ತಾಲೂಕು ಪಂಚಾಯಿತಿಯನ್ನು ರಚಿಸುವಂತಿಲ್ಲ.

2.  ಸಂವಿಧಾನದ 243 (C ) ವಿಧಿಯಂತೆ ನೇರ ಚುನಾವಣೆಗಳ ಮೂಲಕ ಸದಸ್ಯರು ಪ್ರಜೆಗಳಿಂದ ಆಯ್ಕೆಯಾಗಬೇಕು. ಗ್ರಾಮ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆಯನ್ನು ಪರೋಕ್ಷವಾಗಿ ನಡೆಸಬೇಕು.

3. 243 (D)  ವಿಧಿಯಂತೆ ಪ್ರತಿಯೊಂದು ಹಂತದ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆಗೆ ಅನುಸಾರವಾಗಿ ಕೆಲವು ಸ್ಥಾನಗಳನ್ನು ಮೀಸಲಾಗಿಡಬೇಕು. ಈ ವರ್ಗಗಳಿಗೆ ನಿಗದಿಪಡಿಸಿದ ಒಟ್ಟು ಮೀಸಲು ಕ್ಷೇತ್ರಗಳಲ್ಲಿ ೧/೩ ಕ್ಕೆ  ಕಡಿಮೆ ಇಲ್ಲದಂತೆ ಈ ವರ್ಗಗಳ ಮಹಿಳೆಯರಿಗೆ ಮೀಸಲು ಸ್ಥಾನಗಳ ಅವಕಾಶವಿದೆ.

4.  ಸಂವಿಧಾನದ 243 (E ) ವಿಧಿಯಂತೆ ಪಂಚಾಯಿತಿಗಳ ಅವಧಿ ಮೊದಲ ಸಭೆ ಸೇರುವ ದಿನದಿಂದ ಐದು ವರ್ಷಗಳು ಅವಧಿ  ಮುಗಿಯುವುದರೊಳಗೆ ಚುನಾವಣೆ ನಡೆಯಬೇಕು. ಒಂದು ವೇಳೆ ವಿಸರ್ಜನೆಯಾದರೆ ಆರು ತಿಂಗಳೊಳಗೆ ಚುನಾವಣೆ ನಡೆದು ಪಂಚಾಯಿತಿಯನ್ನು ರಚಿಸಬೇಕು.

5. ಸಂವಿಧಾನದ 243 (G) ವಿಧಿಯ ಪ್ರಕಾರ ಪಂಚಾಯಿತಿಗಳು ಸ್ವಯಂ ಸರ್ಕಾರಗಳಂತೆ ಕೆಲಸ ನಿರ್ವಹಿಸಲು ರಾಜ್ಯ ಶಾಸಕಾಂಗ ಕಾನೂನು ರಚಿಸಿ ಅವುಗಳಿಗೆ ಅಧಿಕಾರದ ಜವಾಬ್ದಾರಿಯನ್ನು ನೀಡಬೇಕು.

6.  ಸಂವಿಧಾನದ 243 (I) ಹೇಳುವಂತೆ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿಯ ಪರಿಶೀಲನೆಗೆ ಹಾಗೂ ಶಿಫಾರಸ್ಸುಗಳಿಗೆ 73ನೇ ತಿದ್ದುಪಡಿ ಜಾರಿಗೆ ಬಂದ ಒಂದು ವರ್ಷದೊಳಗೆ ಹಾಗೂ ನಂತರ ಪ್ರತಿ ಐದು ವರ್ಷಕ್ಕೊಮ್ಮೆ ರಾಜ್ಯಪಾಲರು ಹಣಕಾಸು ಆಯೋಗವನ್ನು ನೇಮಿಸುವುದು.

7. ಸಂವಿಧಾನದ 243 (K)  ವಿಧಿಯ ಪ್ರಕಾರ ಪಂಚಾಯಿತಿಗಳ ಚುನಾವಣೆಗಾಗಿ ಮತದಾರರ ಪಟ್ಟಿಯನ್ನು  ಸಿದ್ಧಪಡಿಸಿ ಮೇಲ್ವಿಚಾರಣೆ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

8. ಸಂವಿಧಾನದ 243 (M)  ವಿಧಿಯಂತೆ ಸಂವಿಧಾನದ 9ನೇ ಭಾಗವು ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂ, ಮಣಿಪುರ ಹಾಗೂ  ದಾರ್ಜಿಲಿಂಗ್‌ಗಳಿಗೆ ಅನ್ವಯಿಸುವುದಿಲ್ಲ.

9.  ಸಂವಿಧಾನದ 243 (O )  ಪಂಚಾಯಿತಿಗಳ  ಸ್ಥಾನ ಗೊತ್ತುಪಡಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

74ನೇ ಸಂವಿಧಾನ ತಿದ್ದುಪಡಿ: 74th Ammendment of Constitution)

 1993ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕೆ 9 (A ) ಭಾಗ ಮತ್ತು 243(P) ಯಿಂದ 243 (ZD) ವರೆಗಿನ ವಿಧಿಗಳನ್ನು ಸೇರಿಸಿತು. ಇಲ್ಲಿ ಸರ್ಕಾರಗಳು ನಿರ್ವಹಿಸಬೇಕಾದ 18 ಕಾರ್ಯಗಳನ್ನು 12ನೇ ಅನುಸೂಚಿಯಲ್ಲಿ ಭಾರತ ಸಂವಿಧಾನಕ್ಕೆ ಸೇರಿಸಿತು.

1.  ಸಂವಿಧಾನದ 243 (P ) ವಿಧಿಯು ನಗರಸಭೆ, ಮಹಾನಗರ ಪಾಲಿಕೆ ಮುಂತಾದ ಪದಗಳ ಅರ್ಥವನ್ನು ತಿಳಿಸುತ್ತದೆ.

2. ಸಂವಿಧಾನದ 243 (G ) ಪ್ರಕಾರ ರಾಜ್ಯದಲ್ಲಿ ನಗರಸಭೆ, ಮುನ್ಸಿಪಲ್ ಕೌನ್ಸಿಲ್ ಹಾಗೂ ಮಹಾನಗರ ಪಾಲಿಕೆ ಆರಂಭವಾಗಬೇಕೆಂದು ತಿಳಿಸಿತು.

3. ಸಂವಿಧಾನದ 243 (R) ವಿಧಿಯು ಪ್ರಕಾರ ವಿವಿಧ  ಹಂತದ ಎಲ್ಲಾ ಸ್ಥಳೀಯ ನಗರ ಸಂಸ್ಥೆಗಳು ತಮ್ಮ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ನೆಲೆಸಿರುವ ಮತದಾರರಿಂದ ಚುನಾಯಿತಗೊಂಡ ಸದಸ್ಯರಿಂದ ಕೂಡಿರಬೇಕೆಂದು ಸೂಚಿಸಿದೆ.

4.  ಸಂವಿಧಾನದ 243 (T) ವಿಧಿಯ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಮಹಿಳಾ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಒದಗಿಸಬೇಕು ಎಂದು ತಿಳಿಸಿದೆ.

5.  ಸಂವಿಧಾನದ 243 (U ) ವಿಧಿ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ೫ ವರ್ಷಗಳು ಎಂಬುದನ್ನು ಸೂಚಿಸುತ್ತದೆ. ಅವಧಿ ಮುಕ್ತಾಯಗೊಂಡ ಅಥವಾ ಅವಧಿಗೆ ಮುನ್ನ ವಿಸರ್ಜನೆಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಆರು ತಿಂಗಳ ಒಳಗಾಗಿ ಚುನಾವಣೆಗಳನ್ನು ನಡೆಸಬೇಕು.

6.  ಸಂವಿಧಾನದ 243 (X ) ಶಾಸಕಾಂಗಗಳು ಜಾರಿಗೆ ತರುವ ಕಾನೂನಿನ ಪರಿಮಿತಿಯೊಳಗೆ ನಗರ ಸ್ಥಳೀಯ ಸಂಸ್ಥೆಗಳ ಹಣಕಾಸಿನ ಅಧಿಕಾರಗಳನ್ನು ಅಂದರೆ ತೆರಿಗೆ ಸಂಗ್ರಹದ ಮಾಹಿತಿಯನ್ನು ಒದಗಿಸುತ್ತದೆ.

7. ಸಂವಿಧಾನದ 243(V) ವಿಧಿಯಂತೆ ಸದಸ್ಯರ ಅರ್ಹತೆಯ ಬಗ್ಗೆ ತಿಳಿಸುತ್ತದೆ.

8.  243 (W ) ಸರ್ಕಾರದ ಅಧಿಕಾರಗಳು ಹಾಗೂ ಜವಾಬ್ದಾರಿಯನ್ನು ನಮೂದಿಸಲಾಗಿದೆ.

9. 243 (Y )  ವಿಧಿಯ ಪ್ರಕಾರ ರಾಜ್ಯದ ಹಣಕಾಸು ಆಯೋಗ ಈ ಸ್ಥಳೀಯ ಸರ್ಕಾರ ಹಣಕಾಸು ಪರಿಸ್ಥಿತಿಯನ್ನು ಪರಿಶೀಲಿಸಿ ಬೇಕಾದ ಶಿಫಾರಸ್ಸು ಮಾಡುತ್ತದೆ.

10.  243 (ZA )  ಪ್ರಕಾರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ.

11.  243 (ZD )  ವಿಧಿಯ ಪ್ರಕಾರ ಜಿಲ್ಲಾ ಯೋಜನಾ ಸಮಿತಿ ರಚನೆಯ ಬಗ್ಗೆ ತಿಳಿಸುತ್ತದೆ.

ಉಪಸಂಹಾರ

73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದ ಮೂಲಭೂತ ಕಾಯ್ದೆಗಳಾಗಿವೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸಮೀಪದಿಂದ ಪರಿಹಾರ ನೀಡುವ ಅವಕಾಶ ಪಡೆದಿವೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಭಾಗವಹಿಸುವಿಕೆ ಹೆಚ್ಚಾಗಿದೆ. ಇವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿಗೆ ಸಾಕಾರ ರೂಪ ನೀಡಿದಂತಾಗಿದೆ.

ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ ಮತ್ತು ಮಿತಿಗಳು

ಶಾಸಕಾಂಗ ಹಾಗೂ ಕಾರ್ಯಾಂಗ ಹೇಗೆ ಪ್ರಮುಖವಾದವುಗಳೋ ಹಾಗೆಯೇ ನ್ಯಾಯಾಂಗವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ದೇಶದ ಕಾನೂನು ಹಾಗೂ ಸಂವಿಧಾನವನ್ನು ಅರ್ಥೈಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸರಿಯಾದ ನ್ಯಾಯವನ್ನು ಒದಗಿಸಿಕೊಡುವಲ್ಲಿ ನ್ಯಾಯಾಂಗದ ಪಾತ್ರ ಪ್ರಮುಖವಾದದು. ಭಾರತೀಯ ಸಂವಿಧಾನವು ಲಿಖಿತ ರೂಪದಲ್ಲಿ ಇದ್ದು ಉಳಿದೆರಡು ಅಂಗಗಳನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಂಗ ಶ್ರಮಿಸುತ್ತದೆ. ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿಯೂ ನ್ಯಾಯಾಂಗದ ಪಾತ್ರ ದೊಡ್ಡದು. ಸಂವಿಧಾನವನ್ನು ಬೆಂಬಲಿಸಿ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ನ್ಯಾಯಾಂಗದ ತೀರ್ಪುಗಳು ಸಹಕಾರಿ. ನ್ಯಾಯಾಂಗದ ವಿಮರ್ಶಾಧಿಕಾರವನ್ನು ಅಮೇರಿಕದಿಂದ ಎರವಲು ಪಡೆಯಲಾಗಿದೆ. 18೦3 ರಲ್ಲಿ ಮಾರ್ಬರಿ ಮತ್ತು ಮ್ಯಾಡಿಸನ್ ಮೊಕದ್ದಮೆಯ ಸಮಯದಲ್ಲಿ ನ್ಯಾಯ ಮೂರ್ತಿ ಜಾನ್ ಮಾರ್ಷಲ್ ಮೊಟ್ಟಮೊದಲು ನ್ಯಾಯಾಂಗ ವಿಮರ್ಶಾಧಿಕಾರವನ್ನು ಪ್ರತಿಪಾದಿಸಿದರು. ಮುಂದೆ ಲಿಖಿತ ಸಂವಿಧಾನದಲ್ಲಿ ಏಕ ಪರಿಕಲ್ಪನೆಯನ್ನು ಅಮೆರಿಕ ಅಳವಡಿಸಿಕೊಂಡಿತು. ಭಾರತದ ಸಂವಿಧಾನದಲ್ಲಿ ಈ ಶಬ್ದವನ್ನು ಬಳಸಿಲ್ಲವಾದರೂ ನ್ಯಾಯಾಧೀಶರು ಸಂವಿಧಾನಿಕ ಅವಕಾಶವನ್ನು ಬಳಸಿಕೊಂಡು ವಿಮರ್ಶಾಧಿಕಾರವನ್ನು ಚಲಾಯಿಸುತ್ತಿದ್ದಾರೆ.

ನ್ಯಾಯಾಂಗ ವಿಮರ್ಶಾಧಿಕಾರದ ಅರ್ಥ: (Meaning of the Power of Judicial Reviws)              

ಶಾಸಕಾಂಗ ಹಾಗೂ ಕಾರ್ಯಾಂಗದ ಶಾಸನಗಳು ಮತ್ತು ಆದೇಶಗಳು ಸಂವಿಧಾನಕ್ಕೆ ಪೂರಕವಾಗಿವೆಯೇ  ಎಂಬುದನ್ನು ಪರಿಶೀಲಿಸಿ ಒಂದು ವೇಳೆ ವಿರುದ್ಧವಾಗಿವೆ ಎಂದು ಕಂಡುಬಂದರೆ ಅವುಗಳನ್ನು ರದ್ದುಗೊಳಿಸುವ ನ್ಯಾಯಾಧೀಶರ ಅಧಿಕಾರವನ್ನು ನ್ಯಾಯಾಂಗದ ವಿಮರ್ಶೆ ಎಂದು ಕರೆಯಲಾಗಿದೆ. ಶಾಸನಗಳಿಂದ ಸಂವಿಧಾನಾತ್ಮಕತೆಯನ್ನು ರಕ್ಷಿಸಲು ನ್ಯಾಯಾಂಗ ವಿಮರ್ಶಾಧಿಕಾರವು ಅನಿವಾರ್ಯ ಎಂದು ಎಂ.ವಿ ಪೈಲಿ ಹೇಳಿದ್ದಾರೆ ಶಾಸಕಾಂಗದ ಸಾರ್ವಭೌಮತ್ವದಿಂದ ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಂರಕ್ಷಿಸುವ ಸಾಧನ ಎಂಬುದು ಜಸ್ಟಿನ್ ಮುಖರ್ಜಿಯವರ ಅಭಿಪ್ರಾಯವಾಗಿದೆ.

ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ: (Scope of the Power of Judicial Review)

 ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ ಈ ಕೆಳಗಿನಂತಿವೆ.

  1. ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಕಾಯಿದೆಗಳು.
  2. ರಾಷ್ಟ್ರೀಕೃತ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರಗಳು.
  3. ಕೇಂದ್ರ ಕಾರ್ಯಾಂಗ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಡಿಸಿದ ಆದೇಶಗಳು ಸುತ್ತೋಲೆಗಳು ಹಾಗೂ ನಿರ್ಧಾರಗಳು.
  4. ಸಂಸತ್ತು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳು ಹೊರಡಿಸಿದ ಶಾಸನಗಳು.

ನ್ಯಾಯಾಂಗ ವಿಮರ್ಶಾಧಿಕಾರದ ಮಿತಿಗಳು: (Limitation of the Power of Judicial Review)

ನ್ಯಾಯಾಂಗ ವಿಮರ್ಶೆಗಳು ಸಂವಿಧಾನದ ಭಾಗವಾಗಿದ್ದರೂ ಪ್ರಜೆಗಳು ಅವುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ನ್ಯಾಯಾಲಯಗಳ ಮೇಲೆ ಸಂವಿಧಾನವೇ ಕೆಲವೊಂದು ಮಿತಿಗಳನ್ನು ಏರಿದೆ ಅವುಗಳೆಂದರೆ.

  1. ಸಂವಿಧಾನದ ನಾಲ್ಕನೇ ಭಾಗದಲ್ಲಿನ ರಾಜ್ಯ ನಿರ್ದೇಶಕ ತತ್ವಗಳು.
  2. ಸಂವಿಧಾನದ 163ನೇ ವಿಧಿಯ ಪ್ರಕಾರ ರಾಜ್ಯ ಮಂತ್ರಿಮಂಡಲದಿಂದ ರಾಜ್ಯಪಾಲರು ಪಡೆಯುವ ಸಲಹೆಗಳು.
  3. ಸಂವಿಧಾನದ 122 ಹಾಗೂ 212ನೇ ವಿಧಿಯ ಅನ್ವಯ ಕ್ರಮವಾಗಿ ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರು ಹಾಗೂ ಅವರ ಕಾರ್ಯಕಲಾಪಗಳು.
  4. ಚುನಾವಣಾ ಮತಕ್ಷೇತ್ರಗಳ ಪುನರ್ ವಿಂಗಡನ ಆಯೋಗ ಹಾಗೂ ಸ್ಥಾನಗಳ ಹಂಚಿಕೆ.
  5. ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲಾದ ಶಾಸನಗಳು.

ಉಪಸಂಹಾರ

ಒಟ್ಟಾರೆ, ನ್ಯಾಯಾಂಗ ವಿಮರ್ಶಾಧಿಕಾರವು ಸಂವಿಧಾನದ ರಕ್ಷಣೆಗೆ ಹಾಗೂ ಪ್ರಜಾಪ್ರಭುತ್ವದ ಸ್ಥಿರತೆಗೆ ಅಗತ್ಯವಾದ ಶಕ್ತಿ ಆಗಿದೆ. ಇದು ಸರ್ಕಾರದ ಮೂರು ಅಂಗಗಳ ಮೇಲೆ ಸಮತೋಲನ ಸಾಧಿಸುತ್ತದೆ. ಆದರೆ ಸಂವಿಧಾನವು ವಿಧಿಸಿರುವ ಮಿತಿಗಳನ್ನು ಗೌರವಿಸುವುದು ಕೂಡ ಅವಶ್ಯಕವಾಗಿದೆ. ಹೀಗಾಗಿ ನ್ಯಾಯಾಂಗ ವಿಮರ್ಶಾಧಿಕಾರವು ಹಕ್ಕು ಮತ್ತು ಜವಾಬ್ದಾರಿಗಳ ಸಮನ್ವಯದ ಪ್ರತಿರೂಪವಾಗಿದೆ.

ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಲಯಗಳು

ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಲಯಗಳು

ಸಂವಿಧಾನದಲ್ಲಿ ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವುಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ಪ್ರಜೆಗಳಿಂದ ಚ್ಯುತಿ ಬರದಂತೆ ಕಾಪಾಡುವುದು ಉಚ್ಛ ನ್ಯಾಯಾಲಯದ ಕರ್ತವ್ಯವಾಗಿದೆ. ಸರ್ವೋಚ್ಛ ನ್ಯಾಯಾಲಯದ ಹಾಗೆಯೇ ಉಚ್ಛ ನ್ಯಾಯಾಲಯವು ಸಂವಿಧಾನಿಕ ರಿಟ್‌ಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿದೆ ಅವುಗಳೆಂದರೆ.

1. ಹೇಬಿಯಸ್ಕಾರ್ಪಸ್ (ಬಂಧಿ ಪ್ರತ್ಯಕ್ಷಿಕರಣ) : ಹೇಬಿಯಸ್ ಕಾರ್ಪಸ್ ಎಂದರೆ ʻʻದೇಹ ಸಮೇತ ಹಾಜರುಪಡಿಸುವುದು ಎಂದರ್ಥ. ಬಂಧನಕ್ಕೆ ಒಳಗಾದ ವ್ಯಕ್ತಿಯು ವ್ಯಕ್ತಿಯ ಸಂಬಂಧಿಕರು ಅಥವಾ ಸ್ನೇಹಿತರು ಆತಂಕದಿಂದ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು.  ಬಂಧಿತ ವ್ಯಕ್ತಿಯನ್ನು 24 ಗಂಟೆಗಳೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕೆಂದು ನ್ಯಾಯಾಲಯಗಳು ಆಜ್ಞೆ ಮಾಡುತ್ತವೆ. ಬಂಧನಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸರ್ಕಾರಿ ಅಧಿಕಾರಿಗಳು ಅಥವಾ ಖಾಸಗಿ ಅಧಿಕಾರಿಗಳ ವಿರುದ್ಧ ಹೊರಡಿಸುವ ರಿಟ್‌ ಇದಾಗಿದೆ.

2. ಮ್ಯಾಂಡಮಸ್(ಪರಮಾದೇಶ): ಮ್ಯಾಂಡಮಸ್ ಎಂದರೆ ʻʻಆದೇಶ ಎಂದರ್ಥʼʼ ಈ ರಿಟ್‌ ಮೂಲಕ ವ್ಯಕ್ತಿಯೊಬ್ಬನು ತನ್ನ ಕರ್ತವ್ಯದ ಕುರಿತು ಉದಾಸೀನತೆ ತೋರಿದರೆ ಇದರಿಂದ ತೊಂದರೆಗೊಳಗಾದ ವ್ಯಕ್ತಿಗಳು. ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯಗಳಲ್ಲಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮನವಿಯನ್ನು ಸಲ್ಲಿಸುತ್ತಾರೆ. ಆಗ ಸಾರ್ವಜನಿಕ ಉದ್ಯೋಗಿಗೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆಜ್ಞೆ ಮಾಡುತ್ತದೆ. ಈ ರೀತಿಯ ರಿಟ್‌ನ್ನು ಸರ್ಕಾರಿ ಉದ್ಯೋಗಿಯ ವಿರುದ್ಧ ಹೊರಡಿಸಬಹುದೇ ಹೊರತು ಖಾಸಗಿ ವ್ಯಕ್ತಿಗಳ ವಿರುದ್ಧ ಅಲ್ಲ.

3. ಪ್ರೋಹಿಬಿಷನ್‌ (ಪ್ರತಿಬಂಧಕ) ಪ್ರೋಹಿಬಿಷನ್ ಎಂದರೆ ʻʻತಡೆʼʼ ಎಂದರ್ಥ. ಅದೀನ ನ್ಯಾಯಾಲಯಗಳಿಗೆ ತಮ್ಮ ತೀರ್ಪಿನ ದಾಖಲೆಗಳನ್ನು ಪರಿಶೀಲಿಸಲು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆಯನ್ನು ಪ್ರೋಹಿಬಿಷನ್ ಎಂದು ಕರೆಯುತ್ತೇವೆ. ಕೆಳ ನ್ಯಾಯಾಲಯಗಳು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸಿದರೆ. ಅದನ್ನು ಚಲಾಯಿಸದಂತೆ ತಡೆಯುವ ಅಧಿಕಾರವನ್ನು ಉಚ್ಛ ನ್ಯಾಯಾಲಯ ಹೊಂದಿದೆ.

4. ಸರ್ಕಿಯೋರರಿ(ಉತ್ಪ್ರೇಕ್ಷಣಾ) : ಇದರ ಪ್ರಕಾರ ಕೆಳಗಿನ ನ್ಯಾಯಾಲಯಗಳ ತೀರ್ಪುಗಳಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದರೆ ಅಂತಹ ಮೊಕದ್ದಮೆಗಳನ್ನು ಕೆಳಗಿನ ನ್ಯಾಯಾಲಯಗಳು ಮೇಲಿನ ನ್ಯಾಯಾಲಗಳಿಗೆ ವರ್ಗಾಯಿಸಬೇಕೆಂದು ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆದೇಶ ಹೊರಡಿಸುತ್ತದೆ.  ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ತೀರ್ಪು ನೀಡಿದ ಅಧೀನ ನ್ಯಾಯಾಲಯಗಳ ಕ್ರಮವನ್ನು ಪ್ರೋಹಿಬಿಷನ್ ತಡೆದರೆ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ನಡೆಯುತ್ತಿರುವ  ವಿಚಾರಣೆಯನ್ನು  ಸರ್ಶಿರೋರರಿ ತಡೆಯುತ್ತದೆ.

5. ಕೋವಾರಂಟೊ(ಅಧಿಕಾರ ವೆಚ್ಚ) : ʻʻಸಾರ್ವಜನಿಕ ಹುದ್ದೆಯನ್ನು ಅಕ್ರಮವಾಗಿ ಪಡೆದುಕೊಂಡವರ ವಿರುದ್ಧ ಮತ್ತು ಆ ಹುದ್ದೆಯನ್ನು ತೆರೆವುಗೊಳಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆ ಇದಾಗಿದೆ. ಜೇಷ್ಠತೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಒಂದು ಹುದ್ದೆಯನ್ನು ಒಬ್ಬಾತ ಪಡೆದಿದ್ದರೆ ಜೇಷ್ಠತೆಯಿಂದ ವಂಚಿತನಾದ ವ್ಯಕ್ತಿಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಆಗ ನ್ಯಾಯಾಲಯವು  ಕೋವಾರಂಟೋ ಹೊರಡಿಸುತ್ತದೆ. ಇದರಿಂದ ವ್ಯಕ್ತಿಗೆ ಸಲ್ಲಬೇಕಾದ ನ್ಯಾಯ ಸಲ್ಲಿಸಿದಂತಾಗುತ್ತದೆ.

ಉಪಸಂಹಾರ

ಮೂಲಭೂತ ಹಕ್ಕುಗಳ ಸಮರ್ಥನೆ ಪ್ರಜಾಪ್ರಭುತ್ವದ ಹೃದಯವಾಗಿದೆ. ರಿಟ್‌ಗಳ ಮೂಲಕ ನ್ಯಾಯಾಲಯಗಳು ಪ್ರಜೆಗಳ ಹಕ್ಕುಗಳನ್ನು ಕಾಪಾಡಿ ನ್ಯಾಯವನ್ನು ಸ್ಥಾಪಿಸುತ್ತವೆ. ಇದು ಸಂವಿಧಾನದ ಮಹತ್ವವನ್ನು ಹಾಗೂ ನ್ಯಾಯಾಂಗದ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಹೀಗಾಗಿ ರಿಟ್‌ಗಳು ನಾಗರಿಕರ ಹಕ್ಕುಗಳ ರಕ್ಷಣೆಗೆ ಬಲವಾದ ಸಾಧನಗಳಾಗಿವೆ.