ಭಾರತದ ಸಂವಿಧಾನಾತ್ಮಕ ಇತಿಹಾಸ
ಪೀಠಿಕೆ: ಜಗತ್ತಿನ ಪ್ರತಿಯೊಂದು ದೇಶಗಳೂ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ. ಈ ಸಂವಿಧಾನವು ತನ್ನದೇ ಆದ ಇತಿಹಾಸವನ್ನು ಸಹ ಹೊಂದಿದೆ. ಹಾಗೆಯೇ ಭಾರತದ ಸಂವಿಧಾನವು ಸಹ ವಿಶ್ವದ ಇತರೆ ಸಂವಿಧಾನಗಳಿಗಿಂತ ವಿಶೇಷವಾದ ಇತಿಹಾಸವನ್ನು ಹೊಂದಿದೆ. ಇದಕ್ಕೆ ಮೂಲ ಕಾರಣ ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆ. ಆರಂಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟ ಭಾರತದಲ್ಲಿ ಏಕಪಕ್ಷಿಯ ಆಡಳಿತ, ಕಂಪನಿಯ ಸರ್ವಾಧಿಕಾರ ಹಾಗೂ ಜನ ವಿರೋಧಿ ನೀತಿಗಳು ಜಾರಿಯಲ್ಲಿದ್ದವು. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರಿಗೆ ಸ್ವಾತಂತ್ರ್ಯದ ಕನಸು ಚಿಗುರೊಡೆಯಲು ಬುನಾದಿಯನ್ನು ಹಾಕಿತು. ತದನಂತರ 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಕ್ರಮೇಣ ಭಾರತೀಯರು ಸ್ವಾತಂತ್ರ್ಯ ಹೊಂದಬೇಕೆಂಬ ಪ್ರಯತ್ನಗಳು ಗರಿಗೆದರಿದಾಗ ಸಂವಿಧಾನಾತ್ಮಕ ನಿಲುವುಗಳು ಸ್ಪಷ್ಟವಾದವು. ಈ ಸಂವಿಧಾನಾತ್ಮಕ ಇತಿಹಾಸವನ್ನು ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ ಮತ್ತು ಸಂವಿಧಾನಾತ್ಮಕ ಬೇಡಿಕೆ ಇತಿಹಾಸ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ: (History and development of constitution)
ಆರಂಭದಲ್ಲಿ ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಕಾಲಕ್ರಮೇಣ ಭಾರತೀಯ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು. ಕಂಪನಿಯ ನೌಕರರು ಸ್ವಾರ್ಥ, ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಲಂಚಗುಳಿತನದಲ್ಲಿ ಭಾಗಿಗಳಾಗಿ ಕಂಪನಿಗೆ ಕೆಟ್ಟ ಹೆಸರು ತಂದರು. ಆಗ ಕಂಪನಿಯನ್ನು ನಿಯಂತ್ರಿಸಿ ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲು ಬ್ರಿಟಿಷ್ ಸಂಸತ್ತು ಕಾಲ ಕಾಲಕ್ಕೆ ಕೆಲವು ಕಾನೂನುಗಳನ್ನು ಜಾರಿಗೆ ತಂದಿತು. ಈ ಕಾನೂನುಗಳು ಅಂದಿನ ಸಂವಿಧಾನದ ಸ್ವರೂಪವನ್ನು ಪಡೆದಿದ್ದವಲ್ಲದೆ ಪ್ರಸ್ತುತ ಭಾರತದ ಸಂವಿಧಾನಕ್ಕೆ ಆಧಾರಗಳೆನಿಸಿದವು. ಹೀಗೆ ಆಂಗ್ಲ ಸರ್ಕಾರ ಆಗಾಗ ಕಾನೂನುಗಳನ್ನು ಜಾರಿಗೊಳಿಸಿದುದು ಭಾರತದ ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸವನ್ನು ಸ್ಪಷ್ಟ ಪಡಿಸುತ್ತದೆ. ಅಂತಹ ಕಾನೂನುಗಳು ಈ ಕೆಳಗಿನಂತಿವೆ,
1. ರೆಗ್ಯುಲೇಟಿಂಗ್ ಆಕ್ಟ್: 1773: ಇದು ಭಾರತದಲ್ಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಣದಲ್ಲಿ ಇಡಲು ಬ್ರಿಟಿಷ್ ಸಂಸತ್ತು ರಚಿಸಿದ ಮೊದಲ ಕಾಯಿದೆಯಾಗಿತ್ತು. ರೆಗ್ಯುಲೇಟಿಂಗ್ ಆಕ್ಟ್ ಪ್ರಕಾರ ಬಂಗಾಳದ ಗವರ್ನರ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡಲಾಯಿತು. ಮುಂಬೈ ಮತ್ತು ಮದ್ರಾಸ್ ಪ್ರಾಂತ್ಯಗಳು ಈತನ ಅಧೀನಕ್ಕೊಳಪಟ್ಟವು. ಗವರ್ನರ್ ಜನರಲ್ ನ ಸಲಹಾ ಸಮಿತಿಗೆ ನಾಲ್ಕು ಜನ ಸದಸ್ಯರುಗಳನ್ನು ನೇಮಕ ಮಾಡಲಾಯಿತು. ಮೂರು ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕಲ್ಕತ್ತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ೧೭೭೪ ರಲ್ಲಿ ಸ್ಥಾಪಿಸಲಾಯಿತು. ಕಂಪನಿಯ ನೌಕರರು ಲಂಚ ಪಡೆಯದಂತೆ ಮತ್ತು ಖಾಸಗಿ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಂತೆ ನಿರ್ಬಂಧ ಹೇರಲಾಯಿತು. ಇನ್ನು ಮುಂದೆ ಕಂಪನಿಯ ಆಡಳಿತ ಮಂಡಳಿಯು ಭಾರತದ ಕಂದಾಯ, ನಾಗರಿಕ ಹಾಗೂ ಸೈನಿಕ ಆಡಳಿತದ ಕುರಿತಂತೆ ಕಾಲಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.
2. ಪಿಟ್ಸ್ ಇಂಡಿಯಾ ಕಾಯ್ದೆ 1784: ಬ್ರಿಟಿಷರು ಜಾರಿಗೆ ತಂದ ಭಾರತದಲ್ಲಿನ ಎರಡನೇ ಅತಿ ಮುಖ್ಯ ಕಾಯಿದೆಯಾಗಿದೆ. ಪಿಟ್ಸ್ ಇಂಡಿಯಾ ಕಾಯ್ದೆಯ ಪ್ರಕಾರ ಭಾರತದ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರವನ್ನು ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಭಾರತದ ಆಡಳಿತದ ವ್ಯವಹಾರಗಳನ್ನು ಕೋರ್ಟ್ ಆಫ್ ಡೈರೆಕ್ಟರ್ಗಳಿಗೆ ವಹಿಸಿಕೊಡಲಾಯಿತು. ಗೌರ್ನರ್ ಜನರಲ್‌ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ನಾಲ್ಕರಿಂದ ಮೂರಕ್ಕೆ ಇಳಿಸಲಾಯಿತು. ಈ ಕಾಯ್ದೆಯು ಮದ್ರಾಸ್ ಹಾಗೂ ಮುಂಬೈ ಪ್ರಾಂತ್ಯಗಳ ಗವರ್ನರ್ ಗಳನ್ನು ಭಾರತದ ಗವರ್ನರ್ ಜನರಲ್ ನ ಹತೋಟಿಗೆ ಒಳಪಡಿಸಲಾಯಿತು. ಭಾರತದ ಗವರ್ನರ್ ಜನರಲ್ ಇಂಗ್ಲೆಂಡ್ ಪಾರ್ಲಿಮೆಂಟಿನ ಅನುಮತಿಯನ್ನು ಪಡೆಯದ ಹೊರತು ಯುದ್ಧ ಹೂಡುವುದು ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವುದನ್ನು ನಿರ್ಬಂಧಿಸಿತು. ಕಂಪನಿಯ ನೌಕರರ ಅಕ್ರಮವನ್ನು ತಡೆಯಲು ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಿತು. ಗವರ್ನರ್ ಜನರಲ್ ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳ ಆದೇಶವನ್ನು ಪಾಲಿಸಬೇಕಿತ್ತು.
3. ಚಾರ್ಟರ್ ಕಾಯ್ದೆಗಳು: 1773ರ ರೆಗ್ಯೂಲೇಟಿಂಗ್ ಕಾಯ್ದೆಯನ್ನು ಪುನರ್ ನವೀಕರಿಸಲು 20 ವರ್ಷಗಳಿಗೊಮ್ಮೆ ಚಾರ್ಟರ್ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಬ್ರಿಟಿಷ್ ಪಾರ್ಲಿಮೆಂಟಿನಿಂದ ಅನುಮೋದನೆ ಪಡೆದ ನಂತರ ಚಾರ್ಟರ್ ಕಾಯ್ದೆಗಳನ್ನು 1793, ೧813, 1833 ಹಾಗೂ ೧೮೫೩ ರಲ್ಲಿ ಕಾರ್ಯರೂಪಕ್ಕೆ ತರಲಾಯಿತು.
- ಚಾರ್ಟರ್ಕಾಯಿದೆ 1793: 1793ರಲ್ಲಿ ಜಾರಿಗೆ ಬಂದ ಚಾರ್ಟರ್ ಕಾಯ್ದೆಯ ಪ್ರಕಾರ ಕಂಪನಿಯ ವ್ಯಾಪಾರದ ಏಕಸ್ವಾಮ್ಯ ಮತ್ತು ವಿಶೇಷ ಸವಲತ್ತುಗಳನ್ನು ಮುಂದಿನ 20 ವರ್ಷಗಳವರೆಗೆ ಅಂದರೆ 1813ರ ವರೆಗೆ ನವೀಕರಿಸಲಾಯಿತು. ಕಂಪನಿಗೆ ಭಾರತದ ಪ್ರದೇಶಗಳಿಂದ ಬರುವ ಕಂದಾಯದಿಂದ ಕಂಪನಿಯ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಯಿತು.
- ಚಾರ್ಟರ್ ಕಾಯ್ದೆ 1813: 1813ರ ಚಾರ್ಟರ್ ಕಾಯ್ದೆಯು ಕಂಪನಿಯ ವ್ಯಾಪಾರದ ಏಕಸ್ವಾಮ್ಯವನ್ನು ರದ್ದುಪಡಿಸಿ ಕಂಪನಿಯ ಪ್ರದೇಶಗಳನ್ನು ಬ್ರಿಟಿಷ್ ಇಂಡಿಯಾ ಪ್ರದೇಶಗಳೆಂದು ಹೆಸರಿಸಲಾಯಿತು. ಜೊತೆಗೆ ಇಂಗ್ಲೆಂಡಿನ ಪ್ರಜೆಗಳು ಭಾರತದಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಅನುಮತಿ ನೀಡಲಾಯಿತು. ಈ ಕಾಯ್ದೆಯ ಪ್ರಕಾರ ಭಾರತದಲ್ಲಿ ಶಿಕ್ಷಣ ಅಭಿವೃದ್ಧಿಗಾಗಿ ಪ್ರತಿ ವರ್ಷ ಒಂದು ಲಕ್ಷ ರೂಗಳನ್ನು ವಿನಿಯೋಗಿಸಲು ಅವಕಾಶ ಕಲ್ಪಿಸಲಾಯಿತು.
- ಚಾರ್ಟರ್ ಕಾಯ್ದೆ 1833: 1833ರ ಕಾಯಿದೆಯು ಉದಾರವಾದಿ ಸಿದ್ಧಾಂತವನ್ನು ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಈಗಾಗಲೇ ಇದ್ದ ಮೂರು ಜನರಿಂದ ಕೂಡಿದ ಗವರ್ನರ್ ಜನರಲ್ ಕೌನ್ಸಿಲ್ ಗೆ ನಾಲ್ಕನೆಯದಾಗಿ ಕಾನೂನು ಸದಸ್ಯನನ್ನು ನೇಮಕ ಮಾಡಲಾಯಿತು. ಭಾರತೀಯ ಕಾನೂನುಗಳ ಕ್ರೋಢೀಕರಣಕ್ಕಾಗಿ ಟಿ.ಬಿ ಮೆಕಾಲೆಯವರ ಅಧ್ಯಕ್ಷತೆಯಲ್ಲಿ ಒಂದು ಕಾನೂನು ಆಯೋಗವನ್ನು ರಚಿಸಲಾಯಿತು. ಕಂಪನಿಯ ಆಡಳಿತಾತ್ಮಕವಾದ ವಾಣಿಜ್ಯ ಸೌಲಭ್ಯಗಳನ್ನು ರದ್ದುಪಡಿಸಿ ಕೇವಲ ಆಡಳಿತದ ಕಡೆಗೆ ಗಮನಹರಿಸುವಂತೆ ಮಾಡಲಾಯಿತು.
- ಚಾರ್ಟರ್ ಕಾಯ್ದೆ 1853: ಈ ಕಾಯ್ದೆಯ ಪ್ರಕಾರ ಗವರ್ನರ್ ಜನರಲ್ ನ ಶಾಸನೀಯ ಮತ್ತು ಕಾರ್ಯಾಂಗೀಯ ಅಧಿಕಾರಿಗಳು ಬೇರ್ಪಟ್ಟವು. ಜೊತೆಗೆ ಆರು ಜನ ಸದಸ್ಯರನ್ನು ಒಳಗೊಂಡ ಕೇಂದ್ರ ಶಾಸನ ಪರಿಷತ್ತನ್ನು ರಚಿಸಲಾಯಿತು. ಭಾರತದಲ್ಲಿ ಪ್ರಥಮ ಬಾರಿಗೆ ನಾಗರಿಕ ಸೇವಾ ಹುದ್ದೆಗಳ ನೇಮಕಕ್ಕಾಗಿ ಭಾರತೀಯರ ಮುಕ್ತ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಯಿತು.
4. ಭಾರತ ಸರ್ಕಾರ ಕಾಯ್ದೆ 1858 : 1857ರ ಭಾರತದ ಸಿಪಾಯಿ ದಂಗೆಯ ನಂತರ ಜಾರಿಗೊಂಡ ಮೊದಲ ಕಾಯಿದೆಯಾಗಿದೆ. ಈ ಕಾಯ್ದೆಯು ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿತು. ನಂತರ ಕಂಪನಿಯ ಆಡಳಿತವು ನೇರವಾಗಿ ಬ್ರಿಟನ್ ರಾಣಿಯ ಕೈಗೆ ಹಸ್ತಾಂತರಗೊಂಡಿತು. ರಾಣಿಯ ಪರವಾಗಿ ಭಾರತದ ಆಡಳಿತವನ್ನು ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಯು ನೋಡಿಕೊಳ್ಳಲು ಅನುಮತಿಸಲಾಯಿತು. ಭಾರತದ ಗವರ್ನರ್ ಜನರಲ್ ಈಗ ಭಾರತದ ವೈಸರಾಯ್ ಆದನು. ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳು ರದ್ದಾದವು. ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಗೆ ಸಲಹೆ ನೀಡಲು ಹದಿನೈದು ಸದಸ್ಯರುಗಳನ್ನೊಳಗೊಂಡ ಭಾರತೀಯ ಪರಿಷತ್ತು ನೇಮಕವಾಯಿತು. ಭಾರತದಲ್ಲಿ ಜಾರಿಯಾಗುವ ಕಾಯಿದೆಗಳನ್ನು ಈ ಪರಿಷತ್ತು ವಿಮರ್ಶೆ ಮಾಡುವ ಅಧಿಕಾರವನ್ನು ಹೊಂದಿತ್ತು.
5. ಭಾರತ ಸರ್ಕಾರ ಕಾಯ್ದೆ 1861: ವೈಸರಾಯ ಕಾರ್ಯಕಾರಿ ಮಂಡಳಿ ಹಾಗೂ ಶಾಸನೀಯ ಮಂಡಳಿಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವನ್ನು ನೀಡಲಾಯಿತು. ಜೊತೆಗೆ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಯಿತು. ಪ್ರಥಮ ಬಾರಿಗೆ ಮುಂಬೈ ಹಾಗೂ ಮದ್ರಾಸ್ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಚಾಲನೆ ನೀಡಲಾಯಿತು.
6. ಭಾರತದ ಕಾಯ್ದೆ 1892: ಈ ಕಾಯ್ದೆಯು ಪರೋಕ್ಷ ಚುನಾವಣೆಗೆ ಅವಕಾಶ ಕಲ್ಪಿಸಿತು. ಮುಂದುವರೆದು ಶಾಸನಸಭೆಗಳ ಗಾತ್ರವನ್ನು ಹೆಚ್ಚಿಸಿತ್ತು. ಮುಂಗಡಪತ್ರದ ಕುರಿತು ಚರ್ಚಿಸುವ ಮತ್ತು ಕಾರ್ಯಕಾರಿ ನಡುವಳಿಕೆಗಳನ್ನು ಪ್ರಶ್ನಿಸುವ ಅಧಿಕಾರಗಳನ್ನು ಶಾಸನ ಸಭೆಗೆ ನೀಡಲಾಯಿತು.
7. ಭಾರತೀಯ ಸರ್ಕಾರದ ಕಾಯಿದೆ 1909: ಈ ಕಾಯ್ದೆಯನ್ನು ಮಾರ್ಲೆ-ಮಿಂಟೋ ಸುಧಾರಣೆ ಎಂದು ಕರೆಯುತ್ತಾರೆ. ಇದು ಶಾಸನಸಭೆಗಳಿಗೆ ಪ್ರತ್ಯೇಕ ಚುನಾವಣೆಯನ್ನು ಜಾರಿಗೊಳಿಸಿ ಜನತಾ ಪ್ರಾತಿನಿಧ್ಯಕ್ಕೆ ಸೀಮಿತವಾದ ಅವಕಾಶ ಕಲ್ಪಿಸಿತು. ಕೇಂದ್ರ ಶಾಸನಸಭೆಯನ್ನು ಇಂಪೀರಿಯಲ್ ಕೌನ್ಸಿಲ್ ಎಂದು ಬದಲಾಯಿಸಿತು. ಈ ಕಾಯ್ದೆಯಿಂದ ಕೇಂದ್ರ ಶಾಸಕಾಂಗದ ಸದಸ್ಯತ್ವವನ್ನು 16 ರಿಂದ 60 ಕ್ಕೆ ಏರಿಸಲಾಯಿತು. ಇದು ಮುಸಲ್ಮಾನರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಾಗಿರಿಸಿತು. ಪರೋಕ್ಷವಾಗಿ ಈ ಕಾಯ್ದೆಯು ಕೋಮುವಾರು ಚುನಾವಣಾ ಪದ್ಧತಿಯನ್ನು ಜಾರಿಗೆ ತಂದಿತು.
8. ಮಾಂಟೆಗ್ಯೂ-ಚೇಮ್ಸ್ ಫರ್ಡ್ ಕಾಯ್ದೆ 1919: 1909ರ ಕಾಯ್ದೆಯು ಭಾರತೀಯರ ಆಶೋತ್ತರಗಳನ್ನು ಈಡೇರಿಸಲು ವಿಫಲವಾದ ಕಾರಣ ಭಾರತೀಯರು ಬಾಲಗಂಗಾಧರ ತಿಲಕರ ಅಧ್ಯಕ್ಷತೆಯಲ್ಲಿ ಹೋಂ ರೂಲ್ ಚಳುವಳಿಯನ್ನು ಆರಂಭಿಸಿದರು. ಈ ಮಧ್ಯ ಸೂರತ್ ಅದಿವೇಶನದಲ್ಲಿ ಇಬ್ಬಾಗವಾಗಿದ್ದ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು 1916ರಲ್ಲಿ ಮತ್ತೆ ಒಂದಾಗಿ ಸ್ವರಾಜ್ಯ ಹೋರಾಟವನ್ನು ಮುಂದುವರಿಸಿದರು. ಇವರೊಂದಿಗೆ ಮುಸ್ಲಿಂ ಲೀಗ್ ಸಹ ಕೈಜೋಡಿಸಿತು. ಆಗ ಭಾರತೀಯರನ್ನು ಸಮಾಧಾನಗೊಳಿಸಲು ಭಾರತದ ವ್ಯವಹಾರಗಳ ಕಾರ್ಯದರ್ಶಿ ಮಾಂಟೆಗ್ಯೂ ಹಾಗೂ ಭಾರತದ ಗವರ್ನರ್ ಜನರಲ್ ಜೇಮ್ಸ್ ಫರ್ಡ್ ಭಾರತೀಯರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವ ವರದಿಯೊಂದನ್ನು ತಯಾರಿಸಿದರು. ಈ ವರದಿಯನ್ನೇ 1919ರ ಭಾರತ ಸರ್ಕಾರದ ಕಾಯ್ದೆ ಎಂದು ಕರೆಯುತ್ತಾರೆ. ಈ ಕಾಯ್ದೆಯ ಪ್ರಕಾರ ಆಡಳಿತ ವಿಷಯಗಳನ್ನು ಕೇಂದ್ರ ಹಾಗೂ ಪ್ರಾಂತ್ಯ ವಿಷಯಗಳು ಎಂದು ವಿಭಾಗಿಸಿ ಮುಂದುವರೆದು ಪ್ರಾಂತ್ಯ ವಿಷಯಗಳನ್ನು ಮೀಸಲು ಹಾಗೂ ವರ್ಗಾಯಿಸಿದ ವಿಷಯಗಳು ಎಂಬುದಾಗಿ ವಿಂಗಡಿಸಲಾಯಿತು.
9. ಭಾರತ ಸರ್ಕಾರ ಕಾಯ್ದೆ 1935: 1919ರ ಮಾಂಟೆಗೋ ಚೇಮ್ಸ್ ಫರ್ಡ್ ಸುಧಾರಣೆಯು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಶಾಸನಸಭೆಯಲ್ಲಿ ಈ ಕಾಯ್ದೆಯ ಕುರಿತು ವ್ಯಾಪಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಲಾಯಿತು. ಭಾರತದಲ್ಲಿ ಎಲ್ಲಾ ಪಕ್ಷಗಳು ಮೋತಿಲಾಲ್ ನೆಹರು ನೇತೃತ್ವದಲ್ಲಿ ಸಮಿತಿ ಒಂದನ್ನು ರಚಿಸಿದವು. ಈ ನೆಹರು ಸಮಿತಿ ತನ್ನ ವರದಿಯಲ್ಲಿ ಸಂಯುಕ್ತ ಪದ್ಧತಿಯನ್ನು ಮತ್ತು ಪೂರ್ಣ ಸ್ವರಾಜ್ಯವನ್ನು ಶಿಫಾರಸ್ಸು ಮಾಡಿತು. ನೆಹರು ವರದಿಯ ಬೆನ್ನಲ್ಲೇ ಲಂಡನ್ ನಲ್ಲಿ ಮೂರು ದುಂಡು ಮೇಜಿನ ಪರಿಷತ್ತುಗಳು ನಡೆದವು. ಕಾಂಗ್ರೆಸ್ ಈ ಪರಿಷತ್ತನ್ನು ಬಹಿಷ್ಕರಿಸಿದರೆ, ಡಾ. ಬಿಆರ್ ಅಂಬೇಡ್ಕರ್ ಈ ಸಮ್ಮೇಳನದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಭಾರತದ ಗುರಿ ಎಂದು ಘೋಷಿಸಿದರು. ಆಗ ಭಾರತದ ಸುಧಾರಣೆಗಳ ಕುರಿತು ಬ್ರಿಟಿಷ್ ಸರ್ಕಾರ 1933ರಲ್ಲಿ ಒಂದು ಶ್ವೇತಪತ್ರವನ್ನು ಹೊರಡಿಸಿ ಅಂತಿಮವಾಗಿ ಪಾರ್ಲಿಮೆಂಟಿನಲ್ಲಿ ಮಸೂದೆ ಅಂಗೀಕರಿಸಲ್ಪಟ್ಟಿತ್ತು. ಇದು ಆಗಸ್ಟ್ 2 1935 ರಂದು ಬ್ರಿಟಿಷ್ ರಾಣಿಯ ಒಪ್ಪಿಗೆ ಪಡೆದು ಕಾಯ್ದೆಯಾಯಿತು.
ಈ ಕಾಯ್ದೆಯ ಪ್ರಕಾರ ಬ್ರಿಟಿಷರಿಂದ ನೇರವಾಗಿ ಆಳಲ್ಪಡುತ್ತಿದ್ದ ಬ್ರಿಟಿಷ್ ಪ್ರಾಂತ್ಯಗಳು ಹಾಗೂ ದೇಶಿಯ ರಾಜ ಮಹಾರಾಜರಿಂದ ಆಳಲ್ಪಡುತ್ತಿದ್ದ ದೇಶಿಯ ಸಂಸ್ಥಾನಗಳು ಎಂಬ ಎರಡು ಬಗೆಯ ಆಡಳಿತಾತ್ಮಕ ಘಟಕಗಳುಳ್ಳ ಸಂಯುಕ್ತ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು.
10. ಭಾರತದ ಸ್ವತಂತ್ರ ಕಾಯ್ದೆ 1947: 1935 ರ ಭಾರತ ಸರ್ಕಾರದ ಕಾಯ್ದೆಯೂ ಸಹ ಭಾರತೀಯರ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತು. ಈ ನಡುವೆ 1939ರಲ್ಲಿ ದ್ವಿತೀಯ ಪ್ರಪಂಚದ ಮಹಾಯುದ್ಧ ನಡೆಯಿತು. ಆಂಗ್ಲರು ಭಾರತೀಯರಿಂದ ಯುದ್ಧದಲ್ಲಿ ಸಹಾಯಬೇಡಿ 1940ರಲ್ಲಿ ಆಗಸ್ಟ್ ಕೊಡುಗೆ ಮತ್ತು 1942 ರಲ್ಲಿ ಕ್ರಿಪ್ಸ್ ಆಯೋಗದ ಮೂಲಕ ಭಾರತೀಯರನ್ನು ಸಮಾಧಾನಗೊಳಿಸಿ ತನ್ನತ್ತ ಸೆಳೆಯಲು ಪ್ರಯತ್ನಿಸಿತು. ಈ ನಡುವೆ ಮಹಾತ್ಮ ಗಾಂಧೀಜಿಯವರು 1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಆರಂಭಿಸಿದರು. 1945ರಲ್ಲಿ ಯುದ್ಧ ಮುಕ್ತಾಯವಾಯಿತು. 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಆಗಮಿಸಿ ಮಧ್ಯಂತರ ಸರ್ಕಾರವನ್ನು ರಚಿಸುವುದು ಮತ್ತು ದೇಶ ವಿಭಜನೆಯ ನಿರಾಕರಣೆಯ ಸಲಹೆಗಳನ್ನು ಪ್ರಸ್ತಾಪಿಸಿತು. ದೇಶ ವಿಭಜನೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು. ಅಂತಿಮವಾಗಿ ಲಾರ್ಡ್ ಮೌಂಟ್ ಬ್ಯಾಟನ್ ರ ಯೋಜನೆಯಂತೆ ದೇಶವನ್ನು ವಿಭಜಿಸಲಾಯಿತು. ಮತ್ತು ಬ್ರಿಟಿಷ್ ಸರ್ಕಾರ ಸ್ವತಂತ್ರ ಕಾಯ್ದೆಯನ್ನು 1947ರಲ್ಲಿ ಅಂಗೀಕರಿಸಿತು. ಈ ಕಾಯ್ದೆಯ ಮುಖ್ಯ ಅಂಶಗಳೆಂದರೆ.
೧) 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಮತ್ತು ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್ ರಾಷ್ಟ್ರಗಳಾಗಿ ವಿಭಜಿಸುವುದು.
೨) 1947 ಆಗಸ್ಟ್ 15ಕ್ಕೆ ಭಾರತ ಮೇಲಿನ ಬ್ರಿಟಿಷ್ ಸಾರ್ವಭೌಮತ್ವ ಅಂತ್ಯಗೊಳ್ಳುವುದು ನಂತರ ಬ್ರಿಟಿಷ್ ಸರ್ಕಾರಕ್ಕೆ ಸ್ವತಂತ್ರ ರಾಷ್ಟ್ರಗಳ ಮೇಲೆ ಯಾವುದೇ ಆಡಳಿತಾತ್ಮಕವಾದ ಅಧಿಕಾರ ಇರುವುದಿಲ್ಲ.
೩) ದೇಶಿಯ ಸಂಸ್ಥಾನಗಳು ಭಾರತಕ್ಕಾದರೂ ಸೇರಬಹುದು ಇಲ್ಲವೇ ಪಾಕಿಸ್ತಾನಕ್ಕಾದರೂ ಸೇರಬಹುದು.
೪) ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ಸಿಂಧ್ ಮತ್ತು ಬಲೂಚಿಸ್ಥಾನ್ ಪ್ರಾಂತ್ಯಗಳ ಹಾಗೂ ಅಸ್ಸಾಂನ ಸಿಲ್ಹೆಟ್ ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಸೇರುವುದು. ಉಳಿದಂತೆ ಎಲ್ಲಾ ಪ್ರದೇಶಗಳು ಭಾರತದಲ್ಲಿಯೇ ಉಳಿಯುವುದು.
೫) ಎರಡು ದೇಶಗಳ ನಡುವೆ ಉದ್ಭವವಾಗುವ ವಿವಾದಗಳನ್ನು ಬಗೆಹರಿಸಲು ಒಂದು ನ್ಯಾಯಮಂಡಳಿಯನ್ನು ರಚಿಸುವುದು.
೬) ಭಾರತದ ಚಕ್ರವರ್ತಿ ಎಂಬ ಬ್ರಿಟನ್ ಚಕ್ರವರ್ತಿಯ ಬಿರುದು ರದ್ದುಪಡಿಸಲಾಯಿತು.
೭) ಭಾರತದ ರಾಜ್ಯ ಕಾರ್ಯದರ್ಶಿಯ ಹುದ್ದೆ ಹಾಗೂ ಇಂಡಿಯನ್ ಆಫೀಸ್ ರದ್ದಾಯಿತು.
೮) ಬ್ರಿಟನ್ ಚಕ್ರವರ್ತಿಯಿಂದ ಆದ ನೇಮಕಗಳು ಹಾಗೂ ರಾಜರೊಂದಿಗೆ ಮಾಡಿಕೊಂಡ ಬ್ರಿಟನ್ ಒಪ್ಪಂದಗಳು 1947 ಆಗಸ್ಟ್ 15ಕ್ಕೆ ಅಂತ್ಯಗೊಳ್ಳುವುದು.
ಉಪಸಂಹಾರ
ಬ್ರಿಟಿಷ್ ಆಡಳಿತದಲ್ಲಿ ಜಾರಿಗೊಂಡ ವಿವಿಧ ಕಾಯ್ದೆಗಳು ಭಾರತದ ಆಡಳಿತ ವ್ಯವಸ್ಥೆಯನ್ನು ಕ್ರಮೇಣ ರೂಪಿಸಿದವು. ಈ ಕಾಯ್ದೆಗಳು ಜನಪ್ರಾತಿನಿಧ್ಯ, ಅಧಿಕಾರ ವಿಕೇಂದ್ರೀಕರಣ ಮತ್ತು ಸಂಯುಕ್ತ ಪದ್ಧತಿಯ ಕಲ್ಪನೆಯನ್ನು ಪರಿಚಯಿಸಿದವು. Government of India Act 1935 ಭಾರತದ ಸಂವಿಧಾನಕ್ಕೆ ನೇರವಾದ ಆಧಾರವಾಗಿತ್ತು. ಈ ಇತಿಹಾಸವನ್ನು ಅರಿಯುವುದು ಭಾರತದ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿಯಲು ಅತ್ಯಂತ ಅಗತ್ಯವಾಗಿದೆ.

