ಘನ ತ್ಯಾಜ್ಯಗಳ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳು

ಘನ ತ್ಯಾಜ್ಯಗಳ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳು

ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರೀಕರಣ ಮತ್ತು ಜನಸಂಖ್ಯಾ ವೃದ್ಧಿಯ ಪರಿಣಾಮವಾಗಿ ಘನ ತ್ಯಾಜ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬಳಸಿ ಎಸೆಯುವ ಸಂಸ್ಕೃತಿ ಹಾಗೂ ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಪರಿಸರ  ಸಮತೋಲನವನ್ನು ಹದಗೆಡಿಸುತ್ತಿದೆ. ಸರಿಯಾದ ತ್ಯಾಜ್ಯ ನಿರ್ವಹಣೆ ಇಲ್ಲದಿದ್ದರೆ ಮಣ್ಣು, ನೀರು ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಮಾನವನ ಆರೋಗ್ಯದ ಮೇಲೆ ಮಾತ್ರವಲ್ಲದೆ ಪ್ರಾಣಿ–ಪಕ್ಷಿ ಹಾಗೂ ಜಲಚರ ಜೀವಿಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ಘನ ತ್ಯಾಜ್ಯದ ಪರಿಣಾಮಗಳು ಮತ್ತು ಅದರ ನಿಯಂತ್ರಣ ಕ್ರಮಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.

ಘನ ತ್ಯಾಜ್ಯಗಳ ಪರಿಣಾಮಗಳು : (Results of Solid Waste) 

1. ಪರಿಸರ ಮಾಲಿನ್ಯ:  ಘನ ತ್ಯಾಜ್ಯ ವಸ್ತುಗಳನ್ನು ರಸ್ತೆಗಳು, ಚರಂಡಿಗಳು, ಖಾಲಿ ಜಾಗಗಳು, ಸಾರ್ವಜನಿಕ ಪ್ರದೇಶಗಳು, ಆಸ್ಪತ್ರೆ ಆವರಣ, ಶಾಲಾ ಕಾಲೇಜುಗಳ ಸುತ್ತಮುತ್ತ, ಕಾರ್ಖಾನೆಗಳ ಸುತ್ತಮುತ್ತ, ಎಲ್ಲೆಂದರಲ್ಲಿ ಎಸೆಯುವುದರ ಫಲಶೃತಿಯಂದರೆ ಅದು ಪರಿಸರ ಮಾಲಿನ್ಯ.

2. ಸಾರ್ವಜನಿಕ ಆರೋಗ್ಯ ಸಮಸ್ಯೆ:  ಅಲ್ಲಲ್ಲಿ ರಾಶಿಯಾಗಿ ಹಾಕಲಾದ ಕೊಳೆತ ಆಹಾರ ಪದಾರ್ಥಗಳು, ತರಕಾರಿ ಸಿಪ್ಪೆಗಳು, ಜೈವಿಕ ತ್ಯಾಜ್ಯಗಳು, ಮುಂತಾದವುಗಳಲ್ಲಿ ಇಲಿಗಳು, ಹೆಗ್ಗಣಗಳು, ನೊಣಗಳು, ಹಂದಿಗಳು ಸೇರಿ ರೋಗವನ್ನು ಎಲ್ಲೆಡೆ ಹರಡುತ್ತವೆ. ಕೊಳೆಯುತ್ತಿರುವ ಪದಾರ್ಥಗಳ ಮೇಲೆ ಕುರಿತ ನೊಣಗಳು ಟೈಪಾಯಿಡ್‌, ವಾಂತಿಭೇದಿ, ಕರುಳುಬೇನೆ, ಜಠರದ ರೋಗಗಳು ಹಾಗೂ ಸಾಲ್ಮನೆಲ್ಲೋಸಿಸ್‌  ನಂತಹ ರೋಗಗಳನ್ನು ತರುತ್ತವೆ. ಅದರ ಮೇಲೆ ಕುಳಿತ ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿ ಜ್ವರ, ಇಲಿಜ್ವರ, ಆನೆಕಾಲು ರೋಗ ಮುಂತಾದ ರೋಗಗಳಿಗೆ ಕಾರಣವಾಗಿವೆ.

3. ಕೈಗಾರಿಕೆ ಹಾಗೂ ನಗರಗಳ ತ್ಯಾಜ್ಯದ ಸಮಸ್ಯೆ:  ಕೈಗಾರಿಕೆಗಳು ಹಾಗೂ ನಗರಗಳಿಂದ ಹೊರಬೀಡುವ ಘನ ವಸ್ತುಗಳು ಹೆಚ್ಚು ಅಪಾಯಕಾರಿಯಾಗಿದ್ದು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಪ್ಲಾಸ್ಟಿಕ್, ರಾಸಾಯನಿಕಗಳು, ಕೀಟನಾಶಕಗಳು ಮತ್ತು ತವರ ಮುಂತಾದವುಗಳು ಕರುಳು ಬೆನೆ, ಕ್ಯಾನ್ಸರ್, ಉಬ್ಬಸ ರೋಗ, ಕೆಮ್ಮು ಮುಂತಾದ ರೋಗ ಕಾರಕಗಳಾಗಿವೆ.

4. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಭೂಮಿಯಲ್ಲಿನ ಪ್ಲಾಸ್ಟಿಕ್ ಚೀಲ ನೀರನ್ನು ತುಂಬಿಕೊಳ್ಳುವುದರಿಂದ ಅದರ ಕೊಳಕು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಡೈಯಾಕ್ಲಿನ್‌ ಎಂಬ ರಾಸಾಯನಿಕ ತಾಯಿಯ ಹಾಲಿನ ಮೂಲಕ ಮಗುವಿಗೆ ರವಾನೆಯಾಗುತ್ತದೆ. ಪ್ಲಾಸ್ಟಿಕ್‌ ಮಾನವ ಮತ್ತು ವನ್ಯಜೀವಿಗಳ ಸಂತಾನೋತ್ಪತ್ತಿ ಕ್ರಿಯೆಗಳನ್ನು ಕುಂಠಿತಗೊಳಿಸುತ್ತದೆ. ಪ್ಲಾಸಿಕ್‌ ಸುಡುವುದರಿಂದ ʻʻಡಯಕ್ಲಿನ್‌ ಹಾಗೂ ಪೈರಾನ್‌ ಎಂಬ ವಿಷಕಾರಿ ರಸಾಯನಿಕ ವಾತಾವರಣದಲ್ಲಿ ಬಿಡುಗಡೆಯಾಗುತ್ತದೆ. ಇವು ಪರಿಸರ ನಾಶಕ್ಕೆ ಕಾರಣವಾಗುತ್ತವೆ. ಪ್ಲಾಸ್ಟಿಕ್‌ನ್ನು ಎಸೆಯುವುದರಿಂದ ಚರಂಡಿಗಳು ಹಾಗೂ ಮಣ್ಣಿನ ರಂಧ್ರಗಳು ಮುಚ್ಚಿ ನೀರನ್ನು ಭೂಮಿಯೊಳಗೆ ಇಂಗದಂತೆ ತಡೆಯುತ್ತವೆ. ಭೂಮಿಯ ಮೇಲಿನ ಎಷ್ಟೋ ಪ್ಲಾಸ್ಟಿಕ್‌ಗಳನ್ನು ತಿಂದ ದನಕರುಗಳು ಹಾಗೂ ಜಲಚರ ಪ್ರಾಣಿಗಳು ಸಾವನ್ನಪ್ಪಿದ ಅದೆಷ್ಟೋ ಘಟನೆಗಳಿವೆ. ಅದೆಷ್ಟೋ ಪ್ರಾಣಿಗಳಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಪ್ಲಾಸ್ಟಿಕ್‌ ಸುರುಳಿಗಳನ್ನು ಹೊರ ತಗೆದ್ದಿದೆ. ಇಂತಹ ನೂರಾರು ಘಟನೆಗಳು ದೇಶದಲ್ಲಿ ಸಂಭವಿಸುತ್ತಿವೆ. ಆದರೂ ಸರ್ಕಾರವಾಗಲಿ ಸಂಘ-ಸಂಸ್ಥೆಗಳಾಗಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿವೆ.

5. ಆಸ್ಪತ್ರೆ ತ್ಯಾಜ್ಯ ಸಮಸ್ಯೆ:  ನಮ್ಮ ದೇಶದಲ್ಲಿ ಆಸ್ಪತ್ರೆಗಳಿಂದಲೇ ದಿನಕ್ಕೆ ೬೦೦ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ನೋಂದಣಿಯಾಗದ ನರ್ಸಿಂಗ್ ಹೋಂಗಳು, ನಕಲಿ ವೈದ್ಯರು ಉತ್ಪಾದಿಸುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗಿದೆ. ಈ ತ್ಯಾಜ್ಯಗಳಿಂದ ಹಲವಾರು ರೋಗಗಳು ಬರುತ್ತವೆ. ವಾಂತಿ, ಭೇದಿ, ಕರುಳು ಬೇನೆ, ಅತಿಸಾರ, ಅಮಶಂಕೆ, ಟೈಫಾಯಿಡ್, ಜ್ವರ, ಮುಂತಾದ ರೋಗಗಳು ಇಂದು ಸಾಮಾನ್ಯವೆಂಬಂತೆ ಕಾಣಿಸುತ್ತದೆ.

ಘನ ತ್ಯಾಜ್ಯದ ನಿಯಂತ್ರಣ ಕ್ರಮಗಳು : 

1. ತೆರೆದ ಹಳ್ಳಗಳು:  ಇವುಗಳು ಒಂದು ರೀತಿಯ ತಗ್ಗು ಪ್ರದೇಶಗಳಾಗಿವೆ. ಇಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತದೆ. ಈ ಹಳ್ಳಗಳನ್ನು ಮುಚ್ಚದೆ ಇರುವ ಕಾರಣ ಇಲಿಗಳು, ನೊಣಗಳು ಹಾಗೂ ಬೇರೆ ಬೇರೆ ಕೀಟಗಳು ಬಂದು ಸೇರಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಆಗ ಸುತ್ತಲಿನ ಪ್ರದೇಶಗಳಿಗೆ ರೋಗ ಹರಡುತ್ತದೆ. ತೆರೆದ ಹಳ್ಳಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಅದರ ಅಕ್ಕ ಪಕ್ಕದ ಭೂಮಿಗಳ ನೀರು ಸಹ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

2. ಘನ ತ್ಯಾಜ್ಯವನ್ನು ಭೂಮಿಯಲ್ಲಿ ಹೂಳೂವುದು: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಭೂಮಿಯಲ್ಲಿ ಆಳವಾಗಿ ಗುಂಡಿಯನ್ನು ತೋಡಿ ಘನ ತ್ಯಾಜ್ಯವನ್ನು ಅದರೊಳಗೆ ಹಾಕಿ ಮುಚ್ಚಲಾಗುತ್ತದೆ. ಹೀಗೆ ಮಾಡುವುದರಿಂದ ನೊಣಗಳು ಹಾಗೂ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ಮಾಡಲು ತಡೆಯಬಹುದು ಹಾಗೂ ರೋಗ ಹರಡದಂತೆ ಕ್ರಮ ಕೈಗೊಳ್ಳಬಹುದು.

3. ನೈರ್ಮಲ್ಯ ನೆಲ ಇವುಗಳನ್ನು ಆರೋಗ್ಯಕರವಾಗಿ ರಚಿಸಿ ಅದರೊಳಗೆ ಘನ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ನೆಲದ ಅಡಿಪಾಯವನ್ನು ಗಟ್ಟಿಗೊಳಿಸಲು ಪ್ಲಾಸ್ಟಿಕ್ ಹಾಗೂ ಜೇಡಿ ಮಣ್ಣಿನಿಂದ ಸುತ್ತಲೂ ಕವಚವನ್ನು ಮಾಡಲಾಗುತ್ತದೆ.

4. ದಹನ ಕ್ರಿಯೆ:   ಆಮ್ಲಜನಕದ ಸಹಾಯದಿಂದ ತ್ಯಾಜ್ಯ ವಸ್ತುಗಳನ್ನು ಸುಡುವ ಪ್ರಕ್ರಿಯೆಯನ್ನು ದಹನ ಕ್ರಿಯೆ ಎಂದು ಕರೆಯುತ್ತಾರೆ. ಅನಿಲ ಹಾಗೂ ದ್ರವಗಳನ್ನು ಇಂಧನವಾಗಿ ಬಳಸಲಾಗುತ್ತದೆ.

5. ಕಾಂಪೋಸ್ಟಿಂಗ್ :  ಇದು ಒಂದು ಜೈವಿಕ ಪ್ರಕ್ರಿಯೆ. ಸೂಕ್ಷ್ಮಾಣು ಜೀವಿಗಳಾದ ಶಿಲೀಂಧ್ರಗಳು ಹಾಗೂ ಬ್ಯಾಕ್ಟೀರಿಯಗಳು ವಿಘಟನೆ ಹೊಂದುವಂತಹ ಸಾವಯವ ತ್ಯಾಜ್ಯಗಳನ್ನು ಆಮ್ಲಜನಕದ ಅನುಪಸ್ಥಿತಿಯಲ್ಲಿ ಗೊಬ್ಬರವಾಗಿ ಮಾರ್ಪಾಡಿಸಲಾಗುವುದು.

6. ಎರೆಹುಳು ಗೊಬ್ಬರ:   ಎರೆಹುಳುಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ಆಗ ಎರೆಹುಳು ಮಲಗೊಬ್ಬರವನ್ನು ಹೆಚ್ಚು ಪೋಷಕಾಂಶಯುಕ್ತವಾಗಿ ಮಾಡುತ್ತದೆ.

7. ಪೌರಘನ ತ್ಯಾಜ್ಯ ನಿಯಮಾವಳಿಗಳು 2016ರ ಪ್ರಕಾರ ಹಸಿಕಸವನ್ನು ಮತ್ತು ಒಣಕಸವನ್ನು ಬೇರೆ ಬೇರೆ ಮಾಡಿ ಸಾಗಾಣಿಕೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ.

8. ಪೌರಘನ ತ್ಯಾಜ್ಯ ಅಧಿನಿಯಮ 2016ರ ನಿಯಮ 4(a) ರಂತೆ ಎಲ್ಲಾ ಸಂಸ್ಥೆಗಳು ಮನೆ ಮನೆಗೆ ಹೋಗಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸಾಗಾಣಿಕೆ ಮಾಡುವುದು ಕಡ್ಡಾಯವಾಗಿದೆ. ಅದೇ ರೀತಿ ಪೌರಸಭೆ ಈ ಕೆಲಸವನ್ನು ನಿರ್ವಹಿಸುತ್ತಿದೆ.

9. ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಏನು? ಅದರ ಕಾರ್ಯಕ್ಷಮತೆಯ ಸಾಧನೆಯಿಂದ ಆಗುವ ಅನುಕೂಲತೆಗಳು ಯಾವುವು ಎಂಬುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಅದರ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಮಾಹಿತಿ ನೀಡುವುದು.

10. ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಗೊಬ್ಬರ ತಯಾರಿಕೆ, ಜೈವಿಕ ಮಿಥೇನ್ ಅನಿಲ ತಯಾರಿಕೆ RDF ಉರುವಲು ಹಾಗೂ ಇತರೆ ಶಕ್ತಿ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು.

11. ತ್ಯಾಜ್ಯ ಸಂಸ್ಕರಣೆಯನ್ನು ಶೇ 100 ರಷ್ಟು ಸಾಧಿಸಲು ವಲಯವಾರು ಬೇರ್ಪಡಿಸುವಿಕೆ ಹಾಗೂ ಸಂಸ್ಕರಣಾ ವ್ಯವಸ್ಥೆಯನ್ನು ಸ್ಥಾಪಿಸುವುದು.

12. ಪೌರಘನ ತ್ಯಾಜ್ಯ ನಿಯಮಗಳು 2016ರ ಅದಿನಿಯಮದ ಮಾದರಿ ಉಪನಿಯಮ 2019ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ತ್ಯಾಜ್ಯಗಳ ಉತ್ಪಾದನೆಯನ್ನು ತಡೆಯುವ ಸಲುವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಈ ಕೆಳಗಿನ ಮೂರುವಿಧಾನಗಳನ್ನು ಅನುಸರಿಸಬೇಕು.

ಉಪಸಂಹಾರ

ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಪರಿಸರ ಮಾಲಿನ್ಯ ಹಾಗೂ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗುತ್ತಿದೆ. ತ್ಯಾಜ್ಯವನ್ನು ಮೂಲದಲ್ಲೇ ಕಡಿಮೆ ಮಾಡುವುದು, ಬೇರ್ಪಡಿಸುವುದು ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸುವುದು ಅತ್ಯಗತ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕೀಲಕವಾಗಿದೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಮತ್ತು ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು. ಇದು ನಮ್ಮ ಜವಾಬ್ದಾರಿ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯೂ ಹೌದು.

ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಆಧುನಿಕ ಯುಗದಲ್ಲಿ ಕೈಗಾರಿಕೆಕರಣ, ನಗರೀಕರಣ ಮತ್ತು ವಾಹನಗಳ ಹೆಚ್ಚಳದಿಂದ ಶಬ್ಧ ಮಾಲಿನ್ಯವು ಗಂಭೀರ ಪರಿಸರ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಯಾದ ಹಾಗೂ ಅಸಮಂಜಸ ಶಬ್ಧವು ಮನುಷ್ಯನ ದೈನಂದಿನ ಜೀವನದಲ್ಲಿ ಅಶಾಂತಿಯನ್ನುಂಟುಮಾಡುತ್ತದೆ. ಇದು ಕೇವಲ ಕಿವಿಗೆ ಮಾತ್ರವಲ್ಲದೆ ದೇಹದ ಇತರೆ ಅಂಗಗಳು ಹಾಗೂ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಶಬ್ಧ ಮಾಲಿನ್ಯದಿಂದ ಏಕಾಗ್ರತೆ ಕುಂಠಿತವಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಶಬ್ಧ ಮಾಲಿನ್ಯದ ಪರಿಣಾಮಗಳು: (Results of Sound Pollution)

 ಶಬ್ಧ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳೆಂದರೆ

  1. ಶಬ್ಧಗಳಲ್ಲಿನ ಏರುಪೇರಿನಿಂದ ಕೇಳುಗರಿಗೆ ಕಿರಿಕಿರಿಯುಂಟಾಗುತ್ತದೆ.
  2.  ಶಬ್ಧ ಮಾಲಿನ್ಯದಿಂದ ಶ್ರವಣೇಂದ್ರಯಗಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ.
  3.  ಅತಿಯಾದ ಶಬ್ಧದಿಂದ ಮನುಷ್ಯನ ಏಕಾಗ್ರತೆ ಹಾಳಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ.
  4.  ಶಬ್ಧದ ತೀವ್ರತೆಯು 100db  ಮೀರಿದರೆ ಹೃದಯ ಬಡಿತ ಹೆಚ್ಚುತ್ತದೆ
  5. ಶಬ್ಧದ ತೀವ್ರತೆಯು 120 db  ಮೀರಿದರೆ ನೋವಿನ ಸಂವೇದನೆ ಹೆಚ್ಚುತ್ತದೆ.
  6. ಶಬ್ಧದ ತ್ರೀವ್ರತೆ 130 db  ಮೀರಿದರೆ ವಿಪರೀತ ವಾಂತಿ ಹಾಗೂ ಮಂಪರು ಉಂಟಾಗುತ್ತದೆ.
  7. ಶಬ್ಧದ ತ್ರೀವ್ರತೆ 140 db  ಮೀರಿದರೆ  ಕರ್ಣಪಟಲ ಹರಿದು ಹೋಗುತ್ತದೆ.
  8. ಶಬ್ಧಮಾಲಿನ್ಯದಿಂದ ಶಾರೀರಿಕ ದಣಿವು ಉಂಟಾಗಿ ಮಾನಸಿಕ ದುಗುಡ, ವ್ಯಾಕುಲತೆ, ಭಾವೋದ್ವೇಗ ಹಾಗೂ ರಕ್ತದೊತ್ತಡ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.
  9. ಶಬ್ಧ ಮಾಲಿನ್ಯದಿಂದ ನಿದ್ರಾಹೀನತೆ, ದೃಷ್ಞಿದೋಷ, ಕಾಣಿಸಿಕೊಳ್ಳುತ್ತವೆ.
  10. ಅತಿಯಾದ ಶಬ್ಧಮಾಲಿನ್ಯದಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳ ವರ್ತನೆಯ ಮೇಲೆಯೂ ಪರಿಣಾಮ ಬೀರುತ್ತದೆ. ಗರ್ಭಿಣಿ ಸ್ತ್ರೀಯರ ಹಾಗೂ ಮಕ್ಕಳ ಮೇಲೂ ಶಬ್ಧ ಮಾಲಿನ್ಯ ಪರಿಣಾಮ ಬೀರುತ್ತದೆ.

ಶಬ್ಧ ಮಾಲಿನ್ಯದ ನಿವಾರಣೋಪಾಯಗಳು:

 ಶಬ್ಧ ಮಾಲಿನ್ಯವನ್ನು ತಡೆಗಟ್ಟಲು ಇರುವ ನಿವಾರಣೋಪಾಯಗಳು ಈ ಕೆಳಗಿನಂತಿವೆ.

  1.  ಅತೀ ಹೆಚ್ಚು ಶಬ್ಧವನ್ನು ಉತ್ಪತ್ತಿ ಮಾಡುವ ಕಾರ್ಖಾನೆಗಳನ್ನು ಜನವಸತಿ ಪ್ರದೇಶಗಳಿಂದ ದೂರದಲ್ಲಿ ನಿರ್ಮಿಸಬೇಕು. ಅತಿಯಾದ ಶಬ್ಧವು ಹೊರಗೆ ಬರದಂತೆ ತಡೆಗೋಡೆಗಳನ್ನು ಕಾರ್ಖಾನೆಯ ಸುತ್ತ ಎತ್ತರವಾಗಿ ನಿರ್ಮಿಸಬೇಕು.
  2.  ಗೃಹಪಯೋಗಿ ಉಪಕರಣಗಳು ವಾಹನಗಳು ಹಾಗೂ ಕಾರ್ಖಾನೆಗಳಿಗೆ ಶಬ್ಧವನ್ನು ನಿಯಂತ್ರಣ ಮಾಡುವ ಉಪಕರಣಗಳನ್ನು ಅಳವಡಿಸಬೇಕು.
  3. ಅನಾವಶ್ಯಕ ಹಾರನ್‌ಗಳು, ಸೈರನ್‌ಗಳು ಹಾಗೂ ದ್ವನಿವರ್ಧಕಗಳನ್ನು ನಿಷೇಧಿಸಬೇಕು.
  4.  ಹಳೆಯದಾದ ಅತಿ ಹೆಚ್ಚು ಶಬ್ಧ ಮಾಡುವ ಯಂತ್ರೋಪಕರಣಗಳು ಹಾಗೂ ಇತರೆ ವಸ್ತುಗಳನ್ನು  ಅವಧಿ ಮೀರಿದ ನಂತರ ಬದಲಾಯಿಸಬೇಕು.
  5.  ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಶ್ರವಣಶಕ್ತಿ ಸಂರಕ್ಷಣಾ ಉಪಕರಣಗಳನ್ನು ಪೂರೈಸಬೇಕು.
  6.  ಶಬ್ಧವನ್ನು ನಿಯಂತ್ರಿಸುವ ಆಧುನಿಕ ವಿನ್ಯಾಸವುಳ್ಳ ಬಾಗಿಲು ಕಿಟಕಿಗಳನ್ನು ಮನೆಗಳಿಗೆ ಹಾಗೂ ಕಾರ್ಖಾನೆಗಳಿಗೆ ಅಳವಡಿಸಬೇಕು.
  7.  ಶಾಲಾ ಕಾಲೇಜು, ಆಸ್ಪತ್ರೆ, ಗ್ರಂಥಾಲಯ ಸಾರ್ವಜನಿಕ ಕಚೇರಿಗಳು ಹಾಗೂ ನ್ಯಾಯಾಲಯದ ಸುತ್ತಮುತ್ತ ಶಬ್ಧಕ್ಕೆ ಕಾರಣವಾಗುವ ಯಾವುದೇ ವಾಹನಗಳ ದುರಸ್ತಿ ಕಾರ್ಯಗಾರ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಿದಂತೆ ಎಚ್ಚರಿಕೆ ವಹಿಸಬೇಕು.
  8. ವಿಮಾನ ನಿಲ್ದಾಣಗಳನ್ನು ವಸತಿ ಕೇಂದ್ರಗಳಿಂದ ಬಹು ದೂರದಲ್ಲಿ ನಿರ್ಮಿಸಬೇಕು.
  9.  ಶಬ್ಧವನ್ನುಂಟು ಮಾಡುವ ಭಾರಿ ವಾಹನಗಳನ್ನು ಊರ ಹೊರಗೆ ನಿಲುಗಡೆ ಮಾಡುವ ವ್ಯವಸ್ಥೆ ಮಾಡಬೇಕು.
  10.  ಶಬ್ಧ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಶಾಸನಗಳನ್ನು ರಚಿಸಬೇಕು.
  11.  ಪರಿಸರ ಶಿಕ್ಷಣ ಹಾಗೂ ಸಂಶೋಧನೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಬೇಕು.
  12.  ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಬೇಕು.
  13.  ಶಬ್ಧವನ್ನು ನಿಯಂತ್ರಿಸುವ ವಿವಿಧ ಜಾತಿಯ ಮರಗಳನ್ನು ಕಾರ್ಖಾನೆಯ ಸುತ್ತ ಹಾಗೂ ಕಟ್ಟಡಗಳ ಸುತ್ತಲೂ ಬೆಳೆಸಬೇಕು.

 ಧ್ವನಿವರ್ಧಕಗಳನ್ನು ಅಗತ್ಯವೆನಿಸಿದಾಗ ಮಾತ್ರ ಬಳಕೆ ಮಾಡಬೇಕು. ಉಪಯೋಗಿಸಲೇಬೇಕಾದ ಸಮಯದಲ್ಲಿ ಶಬ್ಧವು ಜೋರಾಗಿ ಕೇಳಿಸದಂತೆ ಹಿತಮಿತವಾಗಿ ಬಳಕೆ ಮಾಡಬೇಕು.

ಉಪಸಂಹಾರ

ಶಬ್ಧ ಮಾಲಿನ್ಯವು ಮನುಷ್ಯನ ಆರೋಗ್ಯ, ಏಕಾಗ್ರತೆ ಹಾಗೂ ಸಾಮಾಜಿಕ ಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಒತ್ತಡ, ನಿದ್ರಾಹೀನತೆ ಹಾಗೂ ಶ್ರವಣಶಕ್ತಿ ಹಾನಿ ಹೆಚ್ಚುತ್ತಿದೆ. ಆದ್ದರಿಂದ ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕ ಜಾಗೃತಿ ಹಾಗೂ ಸಹಕಾರ ಅತ್ಯಂತ ಅಗತ್ಯ. ಶಾಂತ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನಾವು ಎಲ್ಲರೂ ಕೈಜೋಡಿಸಬೇಕಾಗಿದೆ

ಶಬ್ಧ ಮಾಲಿನ್ಯಕ್ಕೆ ಕಾರಣಗಳು

ಶಬ್ಧ ಮಾಲಿನ್ಯಕ್ಕೆ ಕಾರಣಗಳು

ಶಬ್ಧವು ಸಂವಹನದ ಪ್ರಮುಖ ಮಾಧ್ಯಮವಾಗಿದ್ದರೂ, ಅದರ ಅತಿಯಾದ ಬಳಕೆ ಮಾಲಿನ್ಯವಾಗಿ ಪರಿವರ್ತಿತವಾಗುತ್ತದೆ. ಇಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಲ್ಲೂ ಶಬ್ಧ ಮಾಲಿನ್ಯ ವೇಗವಾಗಿ ಹೆಚ್ಚುತ್ತಿದೆ. ಯಂತ್ರೋಪಕರಣಗಳು, ವಾಹನ ಸಂಚಾರ, ಧ್ವನಿವರ್ಧಕಗಳು ಹಾಗೂ ಸಾಮಾಜಿಕ ಸಮಾರಂಭಗಳು ಶಬ್ಧ ಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಇದರಿಂದ ನಿದ್ರಾಭಂಗ, ಕಿವಿ ಹಾನಿ, ತಲೆನೋವು ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಶಬ್ಧ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.

ಶಬ್ಧ ಮಾಲಿನ್ಯಕ್ಕೆ ಕಾರಣಗಳು:

  1. ಗುಡುಗು, ಸಿಡಿಲು, ಜ್ವಾಲಾಮುಖಿ, ಭೂಕಂಪ, ಭಾರಿ ಮಳೆ, ಜಲಪಾತ ಹಾಗೂ ಸಮುದ್ರದ ಅಲೆಗಳು ಇತ್ಯಾದಿ ಮೂಲಗಳಿಂದ ಶಬ್ಧಗಳು  ಹೊರ ಬರುತ್ತಿವೆಯಾದರೂ ಇವುಗಳು ಕಿವಿಗೆ ಅಷ್ಟೊಂದು ಅಪಾಯಕಾರಿಯಾಗಿ ಪರಿಣಮಿಸಲಾರವು.
  2.  ಹಿಟ್ಟಿನ ಗಿರಣಿಗಳು, ಬಾವಿ ತೋಡುವುದು, ರೈಲು ಮಾರ್ಗಗಳನ್ನು ಕೊರೆಯುವುದು, ಗಣಿಗಾರಿಕೆಯನ್ನು ಕೊರೆಯುವುದು ಹಾಗೂ ಕಾರ್ಖಾನೆಯಿಂದ ಹೊರಡುವ ಶಬ್ಧಗಳು ಕಿವಿಗೆ ಅಸಹನೀಯವಾಗುತ್ತವೆ.
  3.  ರಸ್ತೆಯ ಮೇಲಿನ ವಾಹನಗಳು, ರೈಲು, ವಿಮಾನ, ಲಾರಿಗಳು, ಬೈಕ್‌ಗಳು, ಅಗ್ನಿಶಾಮಕ ದಳದ ವಾಹನಗಳು ಆಂಬುಲೆನ್ಸ್, ಪೊಲೀಸ್ ವಾಹನಗಳು, ಬುಲ್ಡೋಜರ್, ಟ್ರ್ಯಾಕ್ಟರ್ ಹಾಗೂ ಜೆಟ್‌ಗಳ ಓಡಾಟದಿಂದ ಹೊರಡುವ ಶಬ್ಧ ಕಿವಿಗೆ ಅಪ್ಪಳಿಸಿದಂತಾಗುತ್ತದೆ.
  4. ಸಾಮಾಜಿಕ ಸಮಾರಂಭಗಳಲ್ಲಿ ಹಾಕಲಾಗುವ ಲೌಡ್‌ಸ್ಪೀಕರ್ ಹಾಗೂ ಗಣೇಶ ವಿಸರ್ಜನೆ ಸಮಯದಲ್ಲಿ ಹಾಕುವ ಡಿಜೇ ಸೌಂಡ್ ಹೃದಯವೇ ಒಡೆದು ಹೋದಂತಹ ಅನುಭವವನ್ನು ಉಂಟುಮಾಡುತ್ತದೆ.
  5.  ಮನೆ ಬಳಕೆಯ ವಸ್ತುಗಳಾದ ಗ್ರಾಂಡರ್, ಮಿಕ್ಸಿ, ವಾಷಿಂಗ್ ಮಷೀನ್, ಕೂಲರ್, ವ್ಯಾಕ್ಯೂಮ್ ಕ್ಲೀನರ್, ಹವಾ ನಿಯಂತ್ರಕಗಳು, ಫ್ಯಾನ್‌ಗಳು, ರೇಡಿಯೋ, ದೂರದರ್ಶನ, ವಾದ್ಯ ಸಂಗೀತ ಉಪಕರಣ, ಧ್ವನಿವರ್ಧಕಗಳು, ಶಬ್ಧ ಮಾಲಿನ್ಯಕ್ಕೆ  ಕಾರಣವಾಗಿವೆ.
  6. ನಗರಗಳಲ್ಲಿನ ಬೀದಿ ನಾಯಿಗಳು, ಬೆಕ್ಕುಗಳು ಬೊಗಳುವಾಗ ಹಾಗೂ ಚೀರಾಡುವಾಗ ಬರುವ ಶಬ್ಧಗಳಿಂದ ರಾತ್ರಿ ನಿದ್ರೆಗೆ ಭಂಗ ಉಂಟಾಗುತ್ತದೆ.
  7.  ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳ ಶಿಖರಗಳ ಮೇಲೆ ಲೌಡ್‌ಸ್ಪೀಕರ್ ಇಟ್ಟು ಬೆಳಗ್ಗೆ ಮತ್ತು ರಾತ್ರಿ ಅತಿ ಹೆಚ್ಚು ಸೌಂಡನ್ನು ಇಟ್ಟು ಹಾಡುಗಳನ್ನು ಹಾಕುವುದರಿಂದ ಜನರಿಗೆ ಮಾತನಾಡಲು ಕಿರಿಕಿರಿಯನ್ನುಂಟು ಮಾಡುತ್ತದೆ.
  8.  ಸಭೆ, ಸಮಾರಂಭ, ಮದುವೆ, ನಾಮಕರಣ ಹಾಗೂ ಸೀಮಂತ ಕಾರ್ಯಗಳಲ್ಲಿ ಇಂದು ಧ್ವನಿವರ್ಧಕಗಳನ್ನು ಬಳಸುವುದರಿಂದ ಸಾರ್ವಜನಿಕರಿಗೆ ಬಹಳ ಮುಜುಗರ ಉಂಟಾಗುತ್ತದೆ.
  9.  ನಗರ ಪ್ರದೇಶದಲ್ಲಿ ಜನಸಂದಣಿ ಇಂದ ಕೂಡಿದ ಮಾರುಕಟ್ಟೆ ಸಂಕೀರ್ಣ ಶಬ್ಧ ಮಾಲಿನ್ಯದ ಕೇಂದ್ರಗಳಾಗಿವೆ. ಗಿರಾಕಿಗಳನ್ನು ಜೋರಾಗಿ ಕೂಗುವ ವ್ಯಾಪಾರಿಗಳು, ಚೌಕಾಶಿಯಲ್ಲಿ ತೊಡಗಿದ ಗ್ರಾಹಕರು, ಓಡಾಡುವ ವಾಹನಗಳು ಪ್ರಚಾರ ಮಾಡುವವರು ಬಳಸುವ ದ್ವನಿವರ್ಧಕಗಳು, ಕರ್ಕಶವಾದ ಪರಿಸರವನ್ನು ಸೃಷ್ಟಿಸುತ್ತವೆ.
  10. ಸೈರನ್‌ಗಳು, ವಾಹನಗಳ ಹಾರನ್‌ಗಳು, ಪಟಾಕಿಗಳು, ಸಿಡಿಮದ್ದುಗಳು, ಡೈನಾಮೆಟ್‌ಗಳು, ಬಾಂಬ್‌ಗಳು ಹಾಗೂ ಡಿಸ್ಕೋ ಪಾರ್ಟಿಗಳು ಶಬ್ಧ ಮಾಲಿನ್ಯಕ್ಕೆ ಕಾರಣಗಳಾಗಿವೆ.

ಶಬ್ಧವನ್ನು ಗ್ರಹಿಸುವ ಪ್ರಮುಖ ಸಾಧನವೆಂದರೆ ಅದು ಕಿವಿಗಳು ಮಾತ್ರ. ಇವುಗಳು ಮಾನವನ ಪ್ರಮುಖ ಶ್ರವಣಕೇಂದ್ರಗಳಿದ್ದಂತೆ. ಮಾನವನ ಕಿವಿಗಳು ಅತಿ ಸೂಕ್ಷ್ಮತೆಯಿಂದ ಕೂಡಿವೆ. ಶಬ್ಧವನ್ನು ಗ್ರಹಿಸುವುದು ಧ್ವನಿ, ಸ್ವರ, ಸದ್ದು ಹಾಗೂ ಕಂಪನಗಳ ಮುಖಾಂತರ ಶಬ್ಧವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಲಿಸುತ್ತದೆ. ಶಬ್ಧವು ಒಂದು ಸೆಕೆಂಡಿಗೆ 330 ಮೀಟರ್ ವೇಗದಲ್ಲಿ ಚಲಿಸುತ್ತದೆ. ಶಬ್ಧವನ್ನು ಡೆಸಿಬಲ್‌ (Decibel dB) ಎಂಬ ಮೂಲ ಮಾನದಿಂದ ಅಳೆಯುತ್ತಾರೆ. ಒಂದು ಡೆಸಿಬಿಲ್ ಎಂದರೆ ಮನುಷ್ಯ ಕೇಳಬಹುದಾದ ಅತ್ಯಂತ ಸೂಕ್ಷ್ಮ ಪ್ರಮಾಣದ ಶಬ್ಧ ವಿಶ್ವಸಂಸ್ಥೆಯ WHO ಆರೋಗ್ಯ ಸಂಸ್ಥೆಯ ಶಿಫಾರಸು ಮಾಡಿದ ಶಬ್ಧದ ತೀವ್ರತೆಯ ಮಟ್ಟವಾಗಿದೆ.

ಮೂಲಗಳು

ತೀವ್ರತೆ

ಹಗಲು

ರಾತ್ರಿ

1

ಮನುಷ್ಯನ ಉಸಿರಾಟ

10db

 ಕೈಗಾರಿಕಾ ಪ್ರದೇಶ      75

70db

2

 ಮೆಲ್ಲನೆ ಕಿವಿಮಾತು

20 ರಿಂದ 30db

 ವಾಣಿಜ್ಯ ಪ್ರದೇಶ    65

53db

3

 ಗ್ರಂಥಾಲಯ

30-35db

 ವಾಸದ ಸ್ಥಳಗಳು  55

45db

4

 ಸಾಮಾನ್ಯ ಸಂಭಾಷಣೆ

40-60db

 ನಿಶಬ್ಧ ವಲಯ  50

40db

5

 ವಾಹನ ಸಂಚಾರ

60-90 db

6

 ಮೋಟಾರ್ ಬೈಕ್

105db

7

ಸಿಂಹ ಘರ್ಜನೆ 

105 ರಿಂದ 110 db

8

ಜೆಟ್

120db

9

 ರಾಕೆಟ್ ಉಡಾವಣೆ

170-180db

ಉಪಸಂಹಾರ

ಶಬ್ಧ ಮಾಲಿನ್ಯವು ಕೇವಲ ಕಿವಿಗೆ ಮಾತ್ರವಲ್ಲದೆ ಮನಸ್ಸು, ಹೃದಯ ಹಾಗೂ ದೈನಂದಿನ ಜೀವನದ ಗುಣಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ನಿಯಂತ್ರಣರಹಿತ ಧ್ವನಿವರ್ಧಕ ಬಳಕೆ, ವಾಹನಗಳ ಹಾರ್ನ್ ಹಾಗೂ ಕೈಗಾರಿಕಾ ಶಬ್ಧಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. WHO ಶಿಫಾರಸು ಮಾಡಿದ ಶಬ್ಧ ಮಿತಿಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಸಾರ್ವಜನಿಕ ಜಾಗೃತಿ ಮತ್ತು ಕಾನೂನು ಪಾಲನೆಯ ಮೂಲಕ ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಶಾಂತ ಪರಿಸರವೇ ಆರೋಗ್ಯಕರ ಸಮಾಜದ ಆಧಾರ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಡೆದುಕೊಳ್ಳಬೇಕು.

ಮಣ್ಣಿನ ಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಿಸುವ ನಿವಾರಣೋಪಾಯಗಳು

ಮಣ್ಣಿನ ಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಿಸುವ ನಿವಾರಣೋಪಾಯಗಳು

ಕೈಗಾರೀಕರಣ, ನಗರೀಕರಣ ಮತ್ತು ಆಧುನಿಕ ಕೃಷಿ ಪದ್ಧತಿಗಳ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ಇದರಿಂದ ಪರಿಸರ ಸಮತೋಲನ ಹಾಗೂ ಮಾನವನ ಆರೋಗ್ಯ ಎರಡಕ್ಕೂ ಗಂಭೀರ ಸಮಸ್ಯೆಗಳು ಎದುರಾಗಿವೆ.

ಮಣ್ಣಿನ ಮಾಲಿನ್ಯದ ಪರಿಣಾಮಗಳು:        

  1.  ಭೂಮಿಯ ಮಾಲಿನ್ಯದಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನಲ್ಲಿನ ಬೌದ್ಧಿಕ ಹಾಗೂ ಜೈವಿಕ ರಸಾಯನಿಕಗಳು ನಾಶವಾಗುತ್ತವೆ. ಮಣ್ಣಿನ ಉಷ್ಣಾಂಶತೆ ಹಾಗೂ ಆರ್ದ್ರತೆಯಲ್ಲಿ ಏರುಪೇರು ಕಂಡು ಬರುತ್ತದೆ, ಇದರಿಂದ ಭೂಮಿ ಒಣಗಿ ಬಿರುಕು ಬಿಡುತ್ತದೆ.
  2.  ಕೃಷಿ ಕಾರ್ಯಗಳಿಂದ ಮಣ್ಣಿನ ಸವೆತ ಹೆಚ್ಚಾಗಿ, ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ ಇಳುವರಿ ಕಡಿಮೆಯಾಗಿ ಲವಣಾಂಶ ಹೆಚ್ಚುತ್ತದೆ. ಕೆರೆ ಹಾಗೂ ಜಲಾಶಯಗಳಲ್ಲಿ ನೀರು ತುಂಬಿ ಕೃಷಿ ನೀರಿನ ಕೊರತೆ ಕಂಡು ಬರಬಹುದು.
  3. ಅಪಾಯಕಾರಿ ರಸಾಯನಿಕಗಳ ಬಳಕೆಯಿಂದ ಮಾನವನು ಹಲವಾರು ರೋಗಗಳಿಗೆ ತುತ್ತಾಗಬಹುದು.
  4.  ಸಸ್ಯಗಳ ಫಲವತ್ತತೆ ಕಡಿಮೆಯಾಗುವುದರ ಜೊತೆಗೆ ಪರಿಸರದಲ್ಲಿ ಅಸಮತೋಲನ ಕಂಡುಬರುತ್ತದೆ. ಮಣ್ಣಿನ ಮಾಲಿನ್ಯದಿಂದ ಮಣ್ಣಿನಲ್ಲಿರುವ ಪ್ರಾಣಿ ಹಾಗೂ ಸಸ್ಯವರ್ಗಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗಬಹುದು.
  5.  ಮಣ್ಣಿನ ಮಾಲಿನ್ಯದಿಂದ ನಗರದ ಚರಂಡಿಗಳು ತುಂಬಿಕೊಂಡು ನೀರು ಮನೆಯೊಳಗೂ ಪ್ರವೇಶಿಸಬಹುದು. ಬೆಂಗಳೂರಿನಂತಹ ನಗರದಲ್ಲಿ ಮನೆಯೊಳಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಹೀಗೆ ಆದಾಗ ಅಸಹನೆಯುಕ್ತ ವಾಸನೆ ಕಂಡುಬರುತ್ತದೆ. ತ್ಯಾಜ್ಯ ನಿರ್ವಹಣೆಗೆ ತೊಂದರೆ ಕಾಣಿಸಬಹುದು.
  6. ಮಣ್ಣಿನ ಶಿಥಿಲೀಕರಣದಿಂದ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಬಂಜರುಭೂಮಿ ನಿರ್ಮಾಣವಾಗಬಹುದು.
  7.  ರೋಗನಿರೋಧಕ ಔಷಧಿಗಳು, ಕೀಟನಾಶಕಗಳು ಹಾಗೂ ಕಳೆನಾಶಕಗಳು ಮಣ್ಣಿನಲ್ಲಿ ಸೇರಿ ಸಸ್ಯ ಬೇರುಗಳಿಗೆ ಸೇರಿಕೊಳ್ಳುತ್ತವೆ. ಇದು ಮಾನವನ ಶರೀರಕ್ಕೂ ಸೇರಿ ಆರೋಗ್ಯವನ್ನು ಹದಗೆಡಿಸಬಹುದು.
  8.  ವಿಷಕಾರಿ ಲೋಹಗಳು ಮಣ್ಣಿನಲ್ಲಿ ಸೇರುವುದರಿಂದ ಸೂಕ್ಷ್ಮಜೀವಿಗಳ ಉಳಿವಿಗೆ ತೊಂದರೆಯಾಗುತ್ತದೆ.
  9.  ಸತ್ತಪ್ರಾಣಿಗಳ ಕಳೇಬರ, ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕೊಳೆತ ವಸ್ತುಗಳು ಹಾಗೂ ಹಳಸಿದ ಪದಾರ್ಥಗಳು ಮಣ್ಣಿನಲ್ಲಿ ಸೇರುವುದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.
  10. ಜನರು ಎಸೆಯುವ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಪ್ಪುಗಳು, ಮಣ್ಣಿನಲ್ಲಿ ಕೊಳೆಯದೆ ಹಾಗೆ ಉಳಿದುಬಿಡುತ್ತವೆ. ಕೃಷಿ ಕಾರ್ಯ ಕೈಗೊಂಡ ಸಮಯದಲ್ಲಿ ಸಸ್ಯಗಳ ಬೇರುಗಳು ಹೆಚ್ಚು ಆಳಕ್ಕೆ ಇಳಿಯದಂತೆ ಈ ಪ್ಲಾಸ್ಟಿಕ್ ತಡೆಯುತ್ತದೆ. ಜೋರಾಗಿ ಗಾಳಿ ಬೀಸಿದರೆ ಫಲವತ್ತಾಗಿ ಬೆಳೆದ ಬೆಳೆಗಳು ಉದುರಿ ಬೀಳುತ್ತವೆ. ಇದರಿಂದ ಇಳುವರಿ ಕಡಿಮೆಯಾಗಿ ಆಹಾರದ ಅಭಾವ ಕಾಣಿಸಿಕೊಳ್ಳುತ್ತದೆ.

ಮಣ್ಣು ಮಾಲಿನ್ಯವನ್ನು ನಿಯಂತ್ರಿಸುವ ನಿವಾರಣೋಪಾಯಗಳು:

  1.  ಮಣ್ಣಿನ ಮಾಲಿನ್ಯವನ್ನು ತಡೆಯಬೇಕೆಂದರೆ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು.
  2. ಜೈವಿಕ ಕಿಟನಾಶಕಗಳು ಹಾಗೂ ಜೈವಿಕ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಆಗ ಇಳುವರಿ ಹೆಚ್ಚಾಗುತ್ತದೆ. ಮಣ್ಣಿನ ಮಾಲಿನ್ಯವು ಕಡಿಮೆಯಾಗುತ್ತದೆ.
  3. ಆಧುನಿಕ ಬೇಸಾಯ ಪದ್ಧತಿಯನ್ನು ನಿಲ್ಲಿಸಿ ಸಾವಯವ ಕೃಷಿ ಪದ್ಧತಿಯನ್ನು ಹಮ್ಮಿಕೊಳ್ಳಬೇಕು.
  4. ಸಾಮಾಜಿಕ ಅರಣ್ಣೀಕರಣ ರೈತರ ಹಾಗೂ ಸಾರ್ವಜನಿಕರ ಗುರಿಯಾಗಬೇಕು.
  5.   ಘನ ತ್ಯಾಜ್ಯವನ್ನು ಶುದ್ಧೀಕರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಮಣ್ಣಿನ ಮಾಲಿನ್ಯ ಕಡಿಮೆಯಾಗುತ್ತದೆ.
  6.  ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಇಳಿಜಾರು ಕ್ರಮದಲ್ಲಿ ಕೃಷಿ ಕಾರ್ಯಗಳನ್ನು ಮಾಡಬೇಕು ನೀರು ಹರಿದು ಹೋಗದಂತೆ ಇಳಿಜಾರಿಗೆ ಅಡ್ಡಲಾಗಿ ಬದುಕುಗಳನ್ನು ನಿರ್ಮಿಸಬೇಕು.
  7.  ಕೈಗಾರಿಕಾ ವಲಯದ ಕೊಳಕು ನೀರು ಹಾಗೂ ನಗರಗಳ ಚರಂಡಿ ನೀರನ್ನು ಹೊಲಗಳ ಕಡೆಗೆ ಹರಿದು ಬರದಂತೆ ನಿಯಂತ್ರಣ ಮಾಡಬೇಕು.
  8.  ಹೊಲಗಳಲ್ಲಿ ಡಿ.ಡಿ.ಟಿಯನ್ನು ಬಳಸದಂತೆ ನಿಷೇಧ ಹೇರಬೇಕು.
  9.  ಜೋಳ, ಭತ್ತದ ಹೊಟ್ಟು, ಕಬ್ಬಿನ ಸಿಪ್ಪೆ, ತಂಬಾಕು, ಸೆಣಬು, ತೆಂಗಿನನಾರು ಸಿಪ್ಪೆ, ಕಬ್ಬಿನ ಸಿಪ್ಪೆ, ಮುಂತಾದವುಗಳನ್ನು ವ್ಯರ್ಥವಾಗಿ ಎಸೆಯುವ ಬದಲಾಗಿ ಕಾಗದ ಹಾಗೂ ರಟ್ಟು ತಯಾರಿಸಲು ಬಳಸಬೇಕು.
  10. ಪರಿಸರ ಕಾಳಜಿ ಪ್ರದರ್ಶನಗಳನ್ನು ಮಾಡುವುದರಿಂದ ರೈತರು ಅದರ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಉಪಸಂಹಾರ

ಮಣ್ಣಿನ ಮಾಲಿನ್ಯವು ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ. ರಸಾಯನಿಕಗಳ ಅತಿಯಾದ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಕೈಗಾರಿಕಾ ಮಲಿನ ನೀರುಗಳು ಮಣ್ಣಿನ ಫಲವತ್ತತೆಯನ್ನು ಹದಗೆಡಿಸುತ್ತಿವೆ. ಇದನ್ನು ನಿಯಂತ್ರಿಸಲು ಸಾವಯವ ಕೃಷಿ, ಜೈವಿಕ ಗೊಬ್ಬರಗಳ ಬಳಕೆ ಹಾಗೂ ಸಾರ್ವಜನಿಕ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ಪರಿಸರದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಮಾತ್ರ ಆರೋಗ್ಯಕರ ಮಣ್ಣು ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಬಹುದು.

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು

ಮಣ್ಣು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಮಾನವನ ಆಹಾರ, ವಾಸಸ್ಥಳ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಆಧಾರವಾಗಿದೆ. ಕೃಷಿ, ಕೈಗಾರಿಕೆ ಮತ್ತು ನಗರೀಕರಣದ ವೇಗವಾದ ಬೆಳವಣಿಗೆಯಿಂದ ಮಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದೆ. ಮಾನವ ನಿರ್ಮಿತ ಚಟುವಟಿಕೆಗಳಿಂದ ಮಣ್ಣಿನಲ್ಲಿ ವಿಷಪೂರಿತ ರಸಾಯನಿಕಗಳು ಸೇರಿ ಅದರ ಸಹಜ ಗುಣಗಳನ್ನು ಹಾಳುಮಾಡುತ್ತಿವೆ. ಮಣ್ಣಿನ ಮಾಲಿನ್ಯವು ಬೆಳೆಗಳ ಗುಣಮಟ್ಟ ಕುಗ್ಗಿಸುವುದರ ಜೊತೆಗೆ ಜೀವವೈವಿಧ್ಯತೆ ನಾಶಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಮಣ್ಣಿನ ಮಾಲಿನ್ಯದ ಕಾರಣಗಳು ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಮಣ್ಣಿನ ಮಾಲಿನ್ಯದ ಕಾರಣಗಳು ಅಥವಾ ಮೂಲಗಳು:

1. ಕೈಗಾರಿಕೆಗಳ ತ್ಯಾಜ್ಯಗಳು: ರಸಾಯನಿಕಗಳಾದ ಪಾದರಸ, ತಾಮ್ರ, ಸೀಸ, ಸತು, ಕಾಡ್ಮಿಯಂ ,ಸೈನೆಡ್‌ಗಳು, ಕ್ರೋಮೇಟ್‌ಗಳು, ಆಮ್ಲಗಳು, ಆಲ್ಕಲಿಸ್ ಹಾಗೂ ಜೈವಿಕ ವಸ್ತುಗಳು ಮಣ್ಣಿನಲ್ಲಿ ಸೇರಿ ಮಾಲಿನ್ಯಗೊಳಿಸುತ್ತವೆ. ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾವಸ್ತುಗಳಲ್ಲಿ ಶೇಕಡ 50ರಷ್ಟು ವ್ಯರ್ಥವಾದ ಪದಾರ್ಥಗಳಿರುತ್ತವೆ. ಅದರಲ್ಲಿ ಶೇ. 15 ರಷ್ಟು ವಿಷಪೂರಿತವಾಗಿರುತ್ತದೆ. ಇದರ ಜೊತೆಗೆ ಗಣಿಗಾರಿಕೆಯಿಂದಲೂ ಸಾಕಷ್ಟು ವ್ಯರ್ಥ ಪದಾರ್ಥಗಳು ಉತ್ಪತ್ತಿಯಾಗುವುದರ ಮೂಲಕ ಮಣ್ಣಿನ ಮಾಲಿನ್ಯತೆಗೆ ಕಾರಣವಾಗುತ್ತದೆ.

2. ಕೀಟನಾಶಕಗಳು:  ಆಧುನಿಕ ಬೇಸಾಯ ಪದ್ಧತಿಯಲ್ಲಿ ಫಸಲುಗಳನ್ನು ಬೇಗ ಬೇಗ ಪಡೆಯಬೇಕೆನ್ನುವ ಆಸೆಯಿಂದ ಕಾಯಿಗಳು ದಪ್ಪವಾಗಿ ಇರಬೇಕೆಂಬ ಕಾರಣಗಳಿಂದ  ರೈತರು ಕೀಟಗಳ ನಿಯಂತ್ರಣಕ್ಕಾಗಿ ಔಷಧಿಗಳು ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಎಲ್ಲಾ ಬಗೆಯ ಕೀಟಗಳು ನಾಶವಾಗಿ ಜೀವವೈವಿಧ್ಯತೆಗಳು ನಾಶವಾಗುತ್ತಿವೆ. ಕೆಲವು ಔಷಧಿಗಳು ಹಾಳಾಗದೆ ಆಹಾರದ ಸರಪಳಿಯಲ್ಲಿ ಅಂಟಿಕೊಂಡು ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಸಾಗಿಸಲ್ಪಡುವುದರಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ. ರೈತರು ಹೆಚ್ಚಾಗಿ ಡಿಡಿಟಿಯನ್ನು ಬಳಸುವುದರಿಂದ ಅದು ಎಲೆಯ ಕಾಂಡದಲ್ಲಿ ಹಾಗೆ ಉಳಿದುಕೊಳ್ಳುವುದು. ಮಳೆಗಾಲದಲ್ಲಿ ಈ ರಸಾಯನಿಕ ಪದಾರ್ಥವು ಮಣ್ಣಿನಲ್ಲಿ ಸೇರುವುದರಿಂದ ಮಣ್ಣು ಮಲಿನವಾಗುತ್ತದೆ.

3. ತಿರಸ್ಕರಿಸಲ್ಪಟ್ಟ ವಸ್ತುಗಳು:  ಬೇಡವಾದ ವಸ್ತುಗಳಾದ ಕಾಂಕ್ರೀಟ್, ಡಾಂಬರ್, ಚರ್ಮ, ಕ್ಯಾನ್‌ಗಳು, ಪ್ಲಾಸ್ಟಿಕ್ ಗ್ಲಾಸ್‌, ಬಿಸಾಕಿದ ಆಹಾರ ಪದಾರ್ಥ, ಕಾಗದ ಮತ್ತು ಇತರ ವಸ್ತುಗಳು ಮಣ್ಣಿನೊಳಗೆ ಬೆರೆತು ಮಣ್ಣಿನ ಮಲಿನತೆಯನ್ನು ಉಂಟುಮಾಡುತ್ತವೆ.

4. ಆಸ್ಪತ್ರೆ ತ್ಯಾಜ್ಯಗಳು:  ಇಂದು ಭಾರತದಲ್ಲಿ ಆಸ್ಪತ್ರೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆಸ್ಪತ್ರೆಯ ತ್ಯಾಜ್ಯ ವಸ್ತುಗಳಾದ ಸಿರಿಂಜ್, ಕೈಗೆ ಹಾಕುವ ಗ್ಲೌಸ್, ಔಷಧಿ ಬಾಟಲಿಗಳು, ನಿರುಪಯುಕ್ತ ಪದಾರ್ಥಗಳು, ಶಸ್ತ್ರಚಿಕಿತ್ಸೆಯ ನಂತರ ಕಲೆಹಾಕಿದ ಮಲಿನಕಾರಕ ವಸ್ತುಗಳು ಮುಂತಾದವುಗಳನ್ನು ಇಂದು ರಾಶಿ ರಾಶಿಯಾಗಿ ಎಲ್ಲೆಂದರಲ್ಲಿ ಗುಡ್ಡೆ ಹಾಕಲಾಗುತ್ತದೆ. ಮಳೆಗಾಲದಲ್ಲಿ ಇದರಲ್ಲಿನ ದ್ರವ ಪದಾರ್ಥಗಳು ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಆಗ ಮಣ್ಣು ಮಲಿನವಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

5. ಜೈವಿಕ ಮೂಲಗಳು:  ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕಸದ ಕೊಳೆತ ಪದಾರ್ಥಗಳು, ಮನೆಗಳಿಂದ ಹೊರ ಹಾಕಿದ ತ್ಯಾಜ್ಯಗಳು, ಮಣ್ಣಿನಲ್ಲಿ ಸೇರಿಕೊಂಡು ಮಣ್ಣುಮಲಿನವಾಗುವುದಕ್ಕೆ ಕಾರಣವಾಗುತ್ತದೆ.

6. ಮಣ್ಣಿನ ಸವೆತ : ವೇಗವಾಗಿ ಹರಿಯುವ ನೀರು, ಬೀಸುವ ಗಾಳಿ, ಹಿಮ, ಸಮುದ್ರದ ಅಲೆಗಳು ಮುಂತಾದ ನೈಸರ್ಗಿಕ ಕ್ರಿಯೆಗಳಿಂದ ಮಣ್ಣು ಸವಕಳಿ ಹೊಂದುತ್ತದೆ. ಮೇಲ್ಪದರು ಕೊಚ್ಚಿ ಹೋದ ನಂತರ ಕೆಳಗಿನ ಮಣ್ಣಿನ ಪದರು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಇದರ ಜೊತೆಗೆ ಧನ ಕರುಗಳನ್ನು ಅತಿಯಾಗಿ ಮೇಯಿಸುವುದು, ವ್ಯವಸಾಯ ಕ್ಷೇತ್ರದ ವಿಸ್ತಾರ ಮುಂತಾದ ಕಾರಣಗಳಿಂದ ಮಣ್ಣು ಮಾಲಿನ್ಯವಾಗುತ್ತದೆ. ಭಾರತದ ಒಟ್ಟು ಭೂಪ್ರದೇಶದ 28ರಲ್ಲಿ ಶೇಕಡ 15ರಷ್ಟು ಮಣ್ಣು ಹಾಳಾಗಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 53000 ದಶಲಕ್ಷ ಟನ್ ಮಣ್ಣನ್ನು ವಿವಿಧ ಕಾರಣಗಳಿಂದಾಗಿ ಸಾಗಿಸುವುದರಿಂದ ಉತ್ಪಾದನಾ ಮಟ್ಟ ಕುಂಠಿತವಾಗುತ್ತದೆ.

7. ಜೀವಿ ಪರಿಸರ ವ್ಯವಸ್ಥೆಯ ನಾಶ: ಸಾಮಾನ್ಯವಾಗಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 300 ದಶಲಕ್ಷ ಜೀವಿಗಳು ವಾಸಿಸುತ್ತವೆ ಎಂದು ಹೇಳಲಾಗುತ್ತಿದೆ. ಇಲಿ, ಹೆಗ್ಗಣ, ಕೀಟಗಳು, ಹಾವು, ಜೇಡ, ಪ್ರೋಟೋಜೋವ್‌ ಮುಂತಾದ ಹಲವು ಜೀವಿಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಬೇಸಾಯ ಕ್ರಮದಿಂದ ರಸಾಯನಿಕ ಬಳಕೆ ಮಾಡುತ್ತಿರುವುದು ಈ ಜೈವಿಕ ವ್ಯವಸ್ಥೆ ಹಾಳಾಗಲು ಕಾರಣವಾಗಿದೆ.

8. ಜನಸಂಖ್ಯಾ ಬೆಳವಣಿಗೆ: ಜನಸಂಖ್ಯೆ ವೇಗವಾಗಿ ಬೆಳೆದಂತೆ ಅವನ ಅಗತ್ಯತೆಗಳು ಸಹ ಹೆಚ್ಚಾಗುತ್ತವೆ. ವಸತಿಗಾಗಿ ಕಾಡುಗಳನ್ನು ಕಡೆಯುವುದು, ಕೃಷಿ ಭೂಮಿಯನ್ನು ವಿಸ್ತರಿಸುವುದು, ಅಣೆಕಟ್ಟುಗಳನ್ನು ನಿರ್ಮಿಸುವುದು, ಸೇತುವೆಗಳ ನಿರ್ಮಾಣ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಅತಿ ಹೆಚ್ಚು ಭೂಮಿಯನ್ನು ಬಳಸಿಕೊಳ್ಳುತ್ತಾನೆ. ಇದರಿಂದ ಭೂಮಿಗೆ ಧಕ್ಕೆ ಉಂಟಾಗುತ್ತದೆ.

9. ಆಮ್ಲೀಕರಣ: ಮಿತಿಮೀರಿದ ಆಮ್ಲೀಕರಣ ಗುಣಗಳುಳ್ಳ ರಸಗೊಬ್ಬರಗಳ ಬಳಕೆ ಮತ್ತು ಆಮ್ಲ ಮಳೆಗಳ ಕಾರಣದಿಂದ ಮಣ್ಣಿನಲ್ಲಿ ಆಮ್ಲಿಯತೆ ಅಧಿಕಗೊಳ್ಳುತ್ತದೆ. ಇದರಿಂದ ಹುಳಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

10. ಮಣ್ಣಿನ ಮೇಲ್ಪದರು ಗಟ್ಟಿಯಾಗುವುದು: ಭೂಮಿಯ ಮೇಲ್ಪದರು ಗಟ್ಟಿಯಾದರೆ ಕೃಷಿಕಾರ್ಯಕ್ಕೆ ತೊಂದರೆಯಾಗುತ್ತದೆ. ಬೀಜಗಳು ಮೊಳಕೆಯೊಡೆದು ಸಸಿಗಳು ಹೊರಬರಲು ಗಟ್ಟಿಮಣ್ಣು ತಡೆಯೊಡ್ಡುತ್ತದೆ. ಮಣ್ಣಿನಲ್ಲಿ ನೀರು ಇಂಗಲು ಸಾಧ್ಯವಾಗುವುದಿಲ್ಲ. ನೀರು ಇಂಗುವಿಕೆ ಕಡಿಮೆಯಾದಾಗ ನೀರಿನ ಹರಿಯುವ ಪ್ರಮಾಣ ಹೆಚ್ಚಾಗಿ ಸವಕಳಿಯ ಪ್ರಮಾಣವು ಹೆಚ್ಚುತ್ತದೆ.

11. ಭೂಕುಸಿತಗಳು: ಗುಡ್ಡಗಳ ಇಳಿಜಾರು ಭಾಗದಲ್ಲಿ ಅರಣ್ಯಗಳು ಹಾಗೂ ಸಸ್ಯಗಳು ಅಲ್ಲಿನ ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಆದರೆ ಸಸ್ಯಗಳು ಹಾಗೂ ಅರಣ್ಯಗಳು ನಾಶವಾದಂತೆ ಅಲ್ಲಿನ ಮಣ್ಣು ಸಡಿಲಗೊಳ್ಳುತ್ತದೆ. ವಿಪರೀತ ಮಳೆ ಬಂದರೆ ಇಂತಹ ಭೂಪ್ರದೇಶಗಳು ಕುಸಿಯಲು ಆರಂಭಿಸುತ್ತವೆ.  ಇದನ್ನೇ ಭೂ ಕುಸಿತ ಎಂದು ಕರೆಯುವರು. ಗಣಿಗಾರಿಕೆ ಹಾಗೂ ರೈಲು ಮಾರ್ಗಗಳನ್ನು ನಿರ್ಮಾಣ ಮಾಡುವಾಗ ಭೂಕುಸಿತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಉಪಸಂಹಾರ

ಮಣ್ಣಿನ ಮಾಲಿನ್ಯವು ಕೃಷಿ ಉತ್ಪಾದನೆ, ಜೀವವೈವಿಧ್ಯತೆ ಮತ್ತು ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ರಸಾಯನಿಕ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಅರಣ್ಯ ನಾಶವನ್ನು ತಡೆಯುವುದು ಅತ್ಯಂತ ಅಗತ್ಯವಾಗಿದೆ. ಪರಿಸರ ಸ್ನೇಹಿ ಕೃಷಿ ವಿಧಾನಗಳು, ತ್ಯಾಜ್ಯ ವಿಂಗಡಣೆ ಮತ್ತು ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಒಟ್ಟಾಗಿ ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಮಣ್ಣಿನ ಮಾಲಿನ್ಯವನ್ನು ನಿಯಂತ್ರಿಸಬಹುದು. ಭವಿಷ್ಯದ ತಲೆಮಾರಿಗಾಗಿ ಮಣ್ಣನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಜಲಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಜಲಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳು

ನೀರು ಜೀವದ ಮೂಲವಾಗಿದ್ದು ಮಾನವ ಹಾಗೂ ಪ್ರಕೃತಿಯ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಆದರೆ ಮಾನವ ಕ್ರಿಯೆಗಳ ಪರಿಣಾಮವಾಗಿ ಇಂದು ಜಲಮೂಲಗಳು ಭಾರೀ ಪ್ರಮಾಣದಲ್ಲಿ ಮಾಲಿನ್ಯಗೊಳ್ಳುತ್ತಿವೆ.

ಜಲಮಾಲಿನ್ಯದ ಪರಿಣಾಮಗಳು: (Results of Water Pollution)

  1. ಜಲಮಾಲಿನ್ಯದಿಂದಾಗಿ ಹಲವಾರು ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಉದಾ:  ಕಾಲರಾ, ಟೈಪಾಯಿಡ್‌, ಅತಿಸಾರ, ಅಮಶಂಕೆ, ಕಾಮಾಲೆ, ಡೆಂಗ್ಯೂ, ಚಿಕನ್ ಗುನ್ಯಾ, ಕರೋನಾ ಮೊದಲಾದವುಗಳು.
  2. 1955ರಲ್ಲಿ ದೆಹಲಿಯ ನಿವಾಸಗಳು ಕೊಳಚೆ ನೀರಿನ ಮಾಲಿನ್ಯದಿಂದ ಸುಮಾರು 35000 ಜನರು ಕಾಮಾಲೆ ರೋಗಕ್ಕೆ ತುತ್ತಾದರು.
  3. ಪ್ರತಿ ವರ್ಷ ಸಮುದ್ರಕ್ಕೆ ಸೇರುವ ತೈಲದಿಂದ ನೀರು ಮಾಲಿನ್ಯಕಾರಕವಾಗುವುದರಿಂದ ಸಸ್ಯಗಳು ಹಾಗೂ ಮೀನುಗಳು ಸಾವನ್ನಪ್ಪುತ್ತವೆ. ಪ್ರತಿವರ್ಷ 50,000 ದಿಂದ 2,50,000ದಷ್ಟು ಪಕ್ಷಿಗಳು ಸಾವನ್ನಪ್ಪುತ್ತವೆ ಎಂದು ವರದಿಯಾಗಿದೆ.
  4. ಪ್ರತಿ ವರ್ಷ ಸುಮಾರು 10000 ಜನರು ಕೀಟನಾಶಕಗಳ ಪ್ರಭಾವದಿಂದ ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
  5. ಮಲಿನಗೊಂಡ ಸರೋವರ, ನದಿ, ಕೆರೆ ಹಾಗೂ ಅಂತರ್ಜಲದ ನೀರನ್ನು ಬಳಸುವುದರಿಂದ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ.
  6. ಗಂಗಾ ನದಿಯ ದಂಡೆಯ ರುದ್ರ ಭೂಮಿಗಳಿಂದ ದಿನವೊಂದಕ್ಕೆ 100-120 ಅರೆಬೆಂದ ಶವಗಳು ಹಾಗೂ ಗಂಗಾ ನದಿಯ ಸಮೀಪವಿರುವ ತೈಲ ಕೇಂದ್ರ ಸಂರಕ್ಷಣಾ ಕೇಂದ್ರವೊಂದರಿಂದ ಹರಿದು ಬಂದ ವ್ಯರ್ಥ ವಸ್ತುವಿನಿಂದ 1968ರಲ್ಲಿ ಮಾಂಘೈರ್ ನದಿ ಹೊತ್ತಿ ಉರಿಯಿತು.
  7. ವಿವಿಧ ಪ್ರಕಾರದ ಕೀಟನಾಶಕಗಳು ಹಾಗೂ ಕ್ರಿಮಿನಾಶಕಗಳು ಆಧುನಿಕ ವ್ಯವಸಾಯ ಪದ್ಧತಿಗೆ ಬಳಕೆಯಾಗುತ್ತಿರುವುದರಿಂದ ಇವುಗಳಿಂದ ಹೊರಹೊಮ್ಮುವ ವಿಷಕಾರಿ ರಸಾಯನಿಕಗಳು ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತವೆ. ನರಮಂಡಲದ ತೊಂದರೆ, ಲಿವರ್ ಹಾಗೂ ಮೂತ್ರ ಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
  8. ಸೀಸ ಒಂದು ವಿಷಯುಕ್ತವಾದ ರಸಾಯನಿಕವಾಗಿದ್ದು ಕೈಗಾರಿಕಾ ತ್ಯಾಜ್ಯಗಳ ಮೂಲಕ ನದಿಯ ನೀರನ್ನು ಸೇರಿಕೊಳ್ಳುತ್ತದೆ. ಇದರಿಂದ ಅನೀಮಿಯ ರಕ್ತಹೀನತೆಯಂತಹ ಖಾಯಿಲೆಗಳು ಬರುತ್ತವೆ. ದೇಹದಲ್ಲಿ ಸೀಸದ ಪ್ರಮಾಣ ಹೆಚ್ಚಾದರೆ ನರಮಂಡಲದ ಕಾಯಿಲೆಯಿಂದಾಗಿ ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆ ಹೆಚ್ಚು. ಈ ರೀತಿ ಪಾಶ್ವ ವಾಯುವಿಗೆ ʻʻಲೆಡ್‌ಪಾಲ್ಸಿʼʼ ಎಂದು ಕರೆಯುವರು.
  9. ದೇಹದಲ್ಲಿ ಕ್ಲೋರೈಡ್ ಪ್ರಮಾಣ ಹೆಚ್ಚಾದರೆ ಹಲ್ಲಿನ ವಿರೂಪತೆ, ಮೂಳೆಗಳು ಬಿರುಸು ಹಾಗೂ ಗಡಸಾಗುವುದು, ಕೀಲು ನೋವು ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ. ಇದರ ಪರಿಣಾಮದಿಂದಾಗಿ ಫ್ಲೋರೋಸಿಸ್ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ.
  10. ನೀರಿನ ವಿಕಿರಣ ಮಾಲಿನ್ಯದಿಂದ ಥೈರೊಯ್ಡ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್‌ಗಳು ಬರುತ್ತವೆ.
  11. ರಸಾಯನಿಕ ಗೊಬ್ಬರಗಳ ಬಳಕೆಯಿಂದ ನೀರಿನಲ್ಲಿ ರಸಾಯನಿಕ ನೈಟ್ರೇಟ್ ಸೇರಿಕೊಳ್ಳುತ್ತದೆ. ಇದರಿಂದ ಮಕ್ಕಳಲ್ಲಿ ನೀಲಿ ಶಿಶು ಕಾಯಿಲೆ ಕಾಣಿಸಿಕೊಳ್ಳುತ್ತದೆ.
  12. ಅರ್ಸೆನಿಕ್‌ ಒಂದು ವಿಷಕಾರಿ ರಸಾಯನಿಕವಾಗಿದೆ. ಇದರಿಂದ ಕಪ್ಪು ಪಾದರೋಗ ಬರುತ್ತದೆ. ಕೀಟನಾಶಕಗಳು ನೀರಿನಲ್ಲಿ ಸೇರಿದಾಗ ಅದರ ಜೊತೆಗೆ ಅರ್ಸೆನಿಕ್ ಸಹ ನೀರಿನಲ್ಲಿ ಸೇರಿಕೊಳ್ಳುತ್ತದೆ.
  13. ತುಂಗಭದ್ರ ನದಿಯ ದಡದಲ್ಲಿರುವ ಕಾರ್ಖಾನೆಯಿಂದ ಹೊರ ಸೂಸಲ್ಪಟ್ಟ ನೀರು ತುಂಗಭದ್ರ ನದಿಯನ್ನು ಸೇರಿತು. ಅಲ್ಲಿನ ನಲವಾಗಲು ಎಂಬ ಗ್ರಾಮದ ಜನರು ನದಿಯ ನೀರನ್ನು ಸೇವಿಸಿದಾಗ ಅವರಿಗೆ ಯಕೃತ್ತಿನ ಕಾಯಿಲೆ, ಕಣ್ಣು ಉರಿ, ಗಂಟಲು ಉರಿ, ಚರ್ಮರೋಗ, ಎದೆ ಉರಿ, ಕೆಮ್ಮು ಮುಂತಾದ ರೋಗಗಳು ಕಾಣಿಸಿಕೊಂಡವು.  ಹರಿಹರದ ಭಾಗದ 4 ಹಳ್ಳಿಗಳ 40,000 ಜನ ಭದ್ರಾವತಿಯ ಭದ್ರಾ ನದಿ ದಂಡೆಯ 9 ಹಳ್ಳಿಯ 13,000 ಜನ ತೀವ್ರತರವಾದ ಹಲವು ಕಾಯಿಲೆಗಳಿಂದ ಇಂದಿಗೂ ಬಳಲುತ್ತಿದ್ದಾರೆ.
  14. ಭಾರವಾದ ಲೋಹಗಳಾದ ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷಕಾರಕವಾದ ರಸಾಯನಿಕಗಳು ಮೀನಮಾಟ, ಇಟಾಯಿ ಇಟಾಯಿ ಎಂಬ ಹೊಸ ಹೊಸ ಕಾಯಿಲೆಗಳಿಗೆ ಕಾರಣವಾಗುತ್ತಿವೆ.

ರೋಗ

ಜೀವಿ

ರೋಗಲಕ್ಷಣ

1

ಕಾಲಾರಾ

ಬ್ಯಾಕ್ಟೀರಿಯಾ

 ತೀವ್ರ ವಾಂತಿ ಭೇದಿ ನಿರ್ಜಲೀಕರಣ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಾಪಾಯ

2

 ಟೈಪಾಯಿಡ್‌

 ಬ್ಯಾಕ್ಟೀರಿಯ

 ಕರುಳು ಬೇನೆ ಚಿಕಿತ್ಸೆ ಬಹಳ ಮುಖ್ಯ

3

 ಹೆಪಾಟೈಟಸ್‌

 ವೈರಸ್

 ಹಳದಿ ಕಾಮಾಲೆ ಚರ್ಮ ಕಾಯಿಲೆ ಯಕೃತ್ ಊತ ವಾಂತಿ ಹೊಟ್ಟೆ ನೋವು

4

ಅತಿಸಾರ

 ಬ್ಯಾಕ್ಟೀರಿಯಾ

 ತೀವ್ರವಂತಿ ಭೇದಿ ಅತಿಸಾರ ನಿರ್ಜಲೀಕರಣ

5

ಅಮಿಬಿಕ್‌ ಅತಿಸಾರ 

 ಪ್ರೋಟೋಜೋವಾ

ಭೇದಿ ಬಹು ದಿನಗಳವರೆಗೆ

ಜಲ ಮಾಲಿನ್ಯದ ನಿವಾರಣೋಪಾಯಗಳು:

  1.  ನದಿ ತೀರದಲ್ಲಿ ಬಫರ್ ವಲಯಗಳನ್ನು ಸ್ಥಾಪಿಸುವುದು
  2.  ಚರಂಡಿಯ ನೀರು ನದಿ, ಸರೋವರ, ಕೊಳ, ಕೆರೆ ಹಾಗೂ ಹೊಂಡಗಳಿಗೆ ಹರಿದು ಹೋಗದಂತೆ ನಿಯಂತ್ರಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು.
  3.  ಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ನೀರನ್ನು ನದಿ ನೀರಿಗೆ ಸೇರಿಸುವ ಮುಂಚೆ ಸಂಸ್ಕರಿಸಬೇಕು.
  4.  ಅಣು ವಿದ್ಯುತ್ ಹಾಗೂ ಥರ್ಮಲ್ ವಿದ್ಯುತ್ ಸ್ಥಾವರಗಳಿಂದ ಬಿಡುವ ಬಿಸಿ ನೀರನ್ನು ತಂಪಾಗಿಸಿ ನಂತರ ಬಿಡಬೇಕು.
  5.  ಧಾರ್ಮಿಕ ಹಾಗೂ ಮೂಢನಂಬಿಕೆಗೆ ಒಳಗಾಗಿ ಹೆಣಗಳನ್ನು ಹಾಗೂ ಅವುಗಳ ಬಟ್ಟೆಗಳನ್ನು ನದಿಗಳಲ್ಲಿ ಬಿಡುವುದನ್ನು ತಡೆಗಟ್ಟಬೇಕು.
  6.  ಕೆರೆ, ಹೊಳೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ದನ ಕರುಗಳನ್ನು ಈಜಲು ಬಿಡುವುದು ಮತ್ತು ಅವುಗಳ ಮೈತೊಳೆಯುವುದನ್ನು ನಿಯಂತ್ರಿಸಬೇಕು.
  7.  ಕೃಷಿ ಭೂಮಿಗಳಿಗೆ ಅತಿಯಾದ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸುವುದನ್ನು ತಡೆಯಬೇಕು.
  8.  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಲಮೂತ್ರಗಳನ್ನು ಶುದ್ಧೀಕರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.
  9.  ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನರು ಬಯಲು ಶೌಚಾಲಯವನ್ನು ಬಳಸುತ್ತಿದ್ದಾರೆ. ಹಾಗಾಗಿ ಅಧಿಕ ಸಂಖ್ಯೆಯಲ್ಲಿ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಲ್ಲಿ ಸ್ಥಳಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು.
  10.  ನಾಯಿ, ನರಿ, ಪ್ರಾಣಿಗಳು, ದನ ಕರುಗಳು ಹಾಗೂ ಮುಂತಾದವುಗಳ ಸತ್ತ ದೇಹಗಳನ್ನು ನದಿಯಲ್ಲಿ ಎಸೆಯದಂತೆ ನಿರ್ಬಂಧ ಹೇರಬೇಕು.
  11.  ನೀರಿನ ಬಳಕೆಯನ್ನು ಇತಿಮಿತಿಗೊಳಿಸಬೇಕು.
  12. ಜಲ ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  13.  ಪ್ರವಾಸ ಹಾಗೂ ನದಿ ನೀರಿನಲ್ಲಿ ಈಜಲು ಹೋದಾಗ ತಿಂದು ಬಿಸಾಕಿದ ಪದಾರ್ಥಗಳು ರಟ್ಟು, ಪ್ಲಾಸ್ಟಿಕ್ ಬಾಟಲಿಗಳು, ಟೀ ಕಪ್ಪುಗಳು, ಊಟದ ತಟ್ಟೆಗಳು, ಮಾಂಸದ ತುಂಡುಗಳನ್ನು ನದಿಗಳಲ್ಲಿ ಎಸೆಯದಂತೆ ಕ್ರಮ ಕೈಗೊಳ್ಳಬೇಕು.
  14.  ಸಮುದ್ರದಲ್ಲಿ ಹಡಗುಗಳಿಂದ ತೈಲ ಸೋರಿಕೆಯನ್ನು ತಡೆಗಟ್ಟುವುದು.
  15.  ಜಲ ಮಾಲಿನ್ಯವನ್ನು ನಿಯಂತ್ರಿಸಲು 1974ರಲ್ಲಿ ಜಲಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲಾಗಿದೆ.

ಉಪಸಂಹಾರ

ಜಲಮಾಲಿನ್ಯವು ಮಾನವ ಜೀವನ, ಪ್ರಾಣಿ–ಪಕ್ಷಿಗಳು ಹಾಗೂ ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಶುದ್ಧ ನೀರಿನಿಂದ ಅನೇಕ ಮಾರಕ ರೋಗಗಳು ಹರಡುತ್ತಿದ್ದು ಜನಜೀವನ ಸಂಕಷ್ಟಕ್ಕೆ ಒಳಗಾಗುತ್ತಿದೆ. ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಜಲಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಶುದ್ಧ ನೀರನ್ನು ಉಳಿಸಿಕೊಳ್ಳುವುದೇ ಭವಿಷ್ಯದ ಆರೋಗ್ಯಕರ ಸಮಾಜದ ಮೂಲಾಧಾರವಾಗಿದೆ.