ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು

ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳಂತೆಯೇ ಸಾಹಿತ್ಯಾಧಾರಗಳು ಸಹ ಭಿನ್ನವಾದ ಐತಿಹಾಸಿಕ ವಿಚಾರಗಳ ಸಂಗ್ರಹಣೆಗೆ ಅನುಕೂಲಕರವಾಗಿದೆ. ಸಾಹಿತ್ಯಾಧಾರಗನ್ನು ಅವುಗಳ ಲಭ್ಯತೆಗೆ ಅನುಸಾರವಾಗಿ 2 ವಿಭಾಗಗಳಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

  1. ದೇಶೀಯ ಸಾಹಿತ್ಯಾಧಾರಗಳು 2. ವಿದೇಶಿಯ ಸಾಹಿತ್ಯಾಧಾರಗಳು.
  1. ದೇಶೀಯ ಸಾಹಿತ್ಯಾಧಾರಗಳು : ದೇಶೀಯ ಸಾಹಿತ್ಯಾಧಾರಗಳೆಂದರೆ ಆಸ್ಥಾನದ ಕವಿಗಳು ಮತ್ತು ಚರಿತ್ರಾಕಾರರಿಂದ ರಚಿಸಲ್ಪಟ್ಟ ಬರವಣಿಗೆಗಳು. ದೇಶೀಯ ಆಕರಗಳು ಚರಿತ್ರೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ನಿರೂಪಿಸಲು ಸಹಕಾರಿಯಾಗಿವೆ. ಅಂತಹ ಆಧಾರಗಳೆಂದರೆ,

(ಅ) ಧಾರ್ಮಿಕ ಗ್ರಂಥಗಳು: ದೀಪವಂಶ ಮತ್ತು ಮಹಾವಂಶ ಕೃತಿಗಳು ತ್ರಿಪಿಠಕಗಳು, ಜೈನ ಆಗಮ ಸಿದ್ದಾಂತಗಳು, ಅಂಗಗಳು, ಉಪಾಂಗಗಳು ಬೌದ್ಧ ಮತ್ತು ಜೈನ ಧರ್ಮದ ಇತಿಹಾಸ ರಚನೆಗೆ ಹೆಚ್ಚು ಸಹಕಾರಿಯಾಗಿವೆ.

ವೇದವಾಙ್ಮಯ : ವೈದಿಕ ಸಂಸ್ಕೃತಿಯನ್ನು ಅರಿಯಲು ವೇದವಾಙ್ಮಯವೇ ಮೂಲಾಧಾರ. ವೇದವಾಙ್ಮಯದಲ್ಲಿ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ಗಳು ಅಡಕವಾಗಿವೆ.

(ಆ) ಮಹಾಕಾವ್ಯಗಳು, ಪುರಾಣಗಳು: ಭಾರತೀಯರ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಆರ್ಯರು ಮತ್ತು ಗಂಗಾ ನದಿಯ ಬಯಲಿನ ರಾಜರ ಸಂತತಿಯ ಬಗ್ಗೆ ವಿವರ ನೀಡುತ್ತವೆ. ಪ್ರಾಚೀನ ಇತಿಹಾಸದ ರಚನೆಯಲ್ಲಿ ಪುರಾಣಗಳು ಮತ್ತು ಸ್ಮೃತಿಗಳಪಾತ್ರವು ಕಂಡುಬರುತ್ತದೆ.

(ಇ) ಚಾರಿತ್ರಿಕ ಗ್ರಂಥಗಳು: ಕೌಟಿಲ್ಯನ ಅರ್ಥಶಾಸ್ತ್ರ, ಕಲ್ಹಣನ ರಾಜತರಂಗಿಣಿ, ಚರಕನ ಚರಕ ಸಂಹಿತೆ, ಸುಶೃತನ ಸುಶೃತಸಂಹಿತೆ, ಸಮುದ್ರಗುಪ್ತನ ಕೃಷ್ಣಚರಿತ, ಮಹೇಂದ್ರವರ್ಮನ ಮತ್ತವಿಲಾಸ ಪ್ರಹಸನ, ಇಳಂಗೋಅಡಿಗಳ್ ರವರ ತಿಲಪ್ಪದಿಕಾರಂ, ಸಾತ್ತನಾರ್‌ನ ಮಣಿಮೇಖಲೈ, ತಿರುತಕ್ಕದೇವರ್‌ನ ಜೀವಿಕ ಚಿಂತಾಮಣಿ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಿವಮಾರನ ಗಜಶತಕ, 3ನೇ ಸೋಮೇಶ್ವರನ ಮಾನಸೋಲ್ಲಾಸ, ನಾಗವರ್ಮನ ಛಂದೋಂಬುದಿ ಮೊದಲಾದ ಗ್ರಂಥಗಳಲ್ಲಿ ಹೆಚ್ಚು ಚಾರಿತ್ರಿಕ ವಿಷಯಗಳು ಮೂಡಿಬಂದಿವೆ. ಅಶ್ವಘೋಶನ ಬುದ್ಧ ಚರಿತ, ಬಾಣಭಟ್ಟನ ಹರ್ಷಚರಿತೆ, ಹೇಮಚಂದ್ರನ ಕುಮಾರಪಾಲಚರಿತೆ, ಚಾಂದ್ ಬರ್ದಾಯಿಯ ಪೃಥ್ವಿರಾಜ ರಾಸೋ, ಬಿಲ್ಲಣನ ವಿಕ್ರಮಾಂಕ ದೇವಚರಿತೆ, ರನ್ನನ ಗದಾಯುದ್ಧ – ಈ ಕೃತಿಗಳು ರಾಜರ ಆಸ್ಥಾನದಲ್ಲಿದ್ದ ಚರಿತ್ರಾಕಾರರಿಂದ ರಚನೆಗೊಂಡಿದ್ದು ಹೆಚ್ಚು ಐತಿಹಾಸಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ) ನಾಟಕಗಳು: ಕಾಳಿದಾಸನ ರಘುವಂಶ, ಮಾಳವಿಕಾಗ್ನಿಮಿತ್ರ, ವಿಶಾಖದತ್ತನ ಮುದ್ರಾರಾಕ್ಷಸ, ಶೂದ್ರಕನ ಮೃಚ್ಚಕಟಿಕ ಮೊದಲಾದ ನಾಟಕರೂಪದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಚಾರಿತ್ರಿಕ ಮಾಹಿತಿ ಲಭ್ಯವಾಗುತ್ತದೆ.

  1. ವಿದೇಶಿಯ ಸಾಹಿತ್ಯಾಧಾರಗಳು (ವಿದೇಶಿಯರ ಬರವಣಿಗೆಗಳು):

ಭಾರತವು ಪ್ರಾಚೀನ ಕಾಲದಿಂದ ನಾಗರೀಕತೆ ಸಂಸ್ಕೃತಿಯ ಆವಾಸಸ್ಥಾನ ರಾಷ್ಟ್ರವಾದುದರಿಂದ ಅನೇಕ ವಿದೇಶಿ ಪ್ರವಾಸಿಗರು, ಮತಪ್ರಚಾರಕರು, ವ್ಯಾಪಾರ ವಾಣಿಜ್ಯೋದ್ಯಮಿಗಳು ಭಾರತಕ್ಕೆ ಭೇಟಿನೀಡಿದ್ದರು. ಹಾಗೆ ಬಂದ ವಿದೇಶಿಯರು ತಾವು ಕಂಡು ಕೇಳಿದ ವಿಚಾರಗಳನ್ನು ತಮ್ಮ ಬರವಣಿಗೆಗಳಲ್ಲಿ, ಪ್ರವಾಸ ಕಥನಗಳಲ್ಲಿ ನಮೂದಿಸಿದ್ದಾರೆ. ಅಂತಹ ಬರವಣಿಗೆಗಳು ಭಾರತೀಯ ಚರಿತ್ರೆಯ ಹಲವು ಹತ್ತು ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ.

1. ಗ್ರೀಕ್ ರೋಮನ್ನರ ಬರವಣಿಗೆಗಳು:

  1. ಹೆರೋಡಾಟಸ್‌ನ ಬರವಣಿಗೆಗಳಲ್ಲಿ ಪರ್ಷಿಯನ್ನರ ಆಕ್ರಮಣದ ವಿವರಗಳಿವೆ.
  2. ಪ್ಲಿನಿ ಮತ್ತು ಟಾಲಮಿಯ ಪ್ರಾಕೃತಿಕ ಚರಿತ್ರೆ ಮತ್ತು ಭೂಗೋಳಶಾಸ್ತ್ರ ಕೃತಿಗಳಲ್ಲಿ ಭಾರತವು ಪ್ರಾಚೀನ ಕಾಲದಲ್ಲಿ ಹೊಂದಿದ್ದ ವ್ಯಾಪಾರ ವಾಣಿಜ್ಯದ ವಿವರಗಳು, ತೀರಪ್ರದೇಶದ ಬಂದರುಗಳ ಪಾತ್ರ ವಿವರಿಸಲ್ಪಟ್ಟಿದೆ.
  3. ಮೆಗಾಸ್ಥನೀಸನ ಇಂಡಿಕಾ ಮೌರ್ಯರ ಇತಿಹಾಸ ಬಗ್ಗೆ ಬೆಳಕು ಚೆಲ್ಲುತ್ತದೆ.
  4. ಗ್ರೀಕ್ ಅನಾಮಧೇಯನಿಂದ ರಚನೆಗೊಂಡ ʻದಿ ಪರಿಪ್ಲಸ್ ಆಫ್ ದಿ ಎರಿತ್ರಿಯನ್‌’ ಕ್ರಿಶ 1ನೇಶತಮಾನದ ವ್ಯಾಪಾರ ವಹಿವಾಟಿನ ವಿವರಗಳನ್ನೊಳಗೊಂಡಿದೆ.
ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಪೀಠಿಕೆ : ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ. ಇವರ ಕಲೆಯು ಕೇವಲ ಒಂದು ಸ್ಥಳದಲ್ಲಿ ಕೇಂದ್ರೀಕೃತವಾಗದೆ ಮಥುರಾ, ಕಾಶಿ, ಪಟ್ನಾ ಮತ್ತಿತರ ಕಡೆಗಳಲ್ಲಿ ಹರಡಿದೆ.

ಗುಪ್ತರ ಕಾಲದ ಕಲೆಯಲ್ಲಿ ಪರಿಶುದ್ಧತೆ, ಸರಳತೆ, ಆದ್ಯಾತ್ಮಿಕತೆ, ಲಾವಣ್ಯ ಮತ್ತು ಸೌಂದರ್ಯವಿದೆ. ಈ ಕಾಲಾವಧಿಯಲ್ಲಿನ ಕಲೆ ಗಾಢವಾದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಅಂಶಗಳನ್ನು ಒಳಗೊಂಡು ಅತ್ಯುನ್ನತ ಮಟ್ಟವನ್ನು ತಲುಪಿತು. ಆದ್ದರಿಂದಲೇ ವಿ.ಎ.ಸ್ಮಿತ್ ರವರು ‘ಗುಪ್ತರ ಕಲೆಯು ಹಿಂದೂ ಕಲೆಯ ಅತ್ಯುನ್ನತಿಯನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ.

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲು ಕಲ್ಲಿನಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪರಂಪರೆ ಗುಪ್ತರ ಕಾಲದಿಂದ ಪ್ರಾರಂಭವಾಯಿತು. ಅಲ್ಲದೆ ಗುಪ್ತರ ಯುಗವು ‘ಸುವರ್ಣಯುಗ’ವೆಂದು ಪರಿಗಣಿತವಾಗಲು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸಾಧಿಸಿದ ಸಿದ್ಧಿಯೂ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಯಾವ ಯುಗದಲ್ಲೂ ಕಂಡುಬರದ ಕಲಾಚಟುವಟಿಕೆಗಳು ಈ ಕಾಲದಲ್ಲಿ ಕಂಡುಬಂದಿದೆ. ಎ.ಕೆ.ಕುಮಾರಸ್ವಾಮಿಯವರು ‘ಆ ವೇಳೆಗಾಗಲೇ ಆಚರಣೆಯಲ್ಲಿದ್ದ ನಮ್ಮ ಕಲಾ ಪರಂಪರೆಯ ಪುಷ್ಪ ಗುಪ್ತರ ಕಲೆ’ ಎಂದಿದ್ದಾರೆ.

ಗುಪ್ತರ ದೇವಾಲಯದ ಲಕ್ಷಣಗಳು ಕೆಳಕಂಡಂತಿವೆ.

  1. ಅದಿಷ್ಠಾನದ (ಜಗುಲಿಯ) ಮೇಲೆ ನಿಂತ ದೇವಾಲಯ.
  2. ದೇಗುಲಕ್ಕೆ ಹೋಗಲು ಮೆಟ್ಟಿಲುಗಳ ಸಾಲು.
  3. ಚೌಕಾಕಾರದ ಕೆಲವೊಮ್ಮೆ ಆಯತಾಕಾರದ ದೇವಾಲಯದ ನಕ್ಷೆ.
  4. ಒಳಗರ್ಭಗೃಹದ ಸುತ್ತ ಮುಚ್ಚಿದ ಪ್ರದಕ್ಷಿಣಾ ಪಥವಿರುವುದು.
  5. ಗರ್ಭಗೃಹದ ಅಲಂಕೃತ ಬಾಗಿಲು.
  6. ಮುಖ ಮಂಟಪದ ಅಲಂಕೃತ ಕಂಬಗಳು.
  7. ಸಮತಟ್ಟಾದ ಚಾವಣಿ
  8. ನಂತರ ಕಾಲದಲ್ಲಿ ಮೇಲ್ಟಾವಣಿ ಮೇಲೆ ನಿಂತ ರೇಖಾನಾಗರ ಶಿಖರ.
  9. ಸರಳ ನಿರಾಡಂಬರ ಹೊರಗೋಡೆ.
  10. ಸಭಾಮಂಟಪ ಇಲ್ಲದೆ ಇರುವುದು.

ನಂತರದ ಲಕ್ಷಣಗಳು :

  1. ಚಿಕ್ಕ ದೇವಾಲಯಗಳನ್ನು ದೊಡ್ಡದನ್ನಾಗಿ ಮಾಡಿರುವುದು- ಹಲವು ಭಾಗಗಳ ಸೇರ್ಪಡೆ.
  2. ಆಯತಾಕಾರದ ನಕ್ಷೆ.
  3. ಸಭಾಮಂಟಪ ಇರುವುದು.
  4. ಸಭಾಮಂಟಪ ಮತ್ತು ಮುಖಮಂಟಪವನ್ನು ಸೇರಿಸುವ ಕೈಸಾಲೆ.
  5. ಜಗುಲಿಯಲ್ಲಿ ಶಿಲ್ಪಸಾಲು
  6. ದೇವಾಲಯದ ಹೊರಗೋಡೆಗಳನ್ನು ಶಿಲ್ಪಕೋಷ್ಟಗಳಿಂದ ಹಾಗೂ ಅರೆಗಂಭಗಳಿಂದ ಅಲಂಕರಿಸಿರುವುದು.
  7. ದೇವಾಲಯದ ಗೋಡೆಗಳ ಮೇಲೆ ಶಿಲ್ಪ.
  8. ಮೇಲ್ಛಾವಣಿಯ ಮೇಲೆ ಪಿರಮಿಡ್ ಆಕಾರದ ಶಿಖರ.

ನಾಗರ ಮತ್ತು ದ್ರಾವಿಡ ಶೈಲಿಗಳ ಉಗಮ : ಗುಪ್ತರ ಕಾಲದ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಆಗಮನವನ್ನು ಸೂಚಿಸುವ ಲಕ್ಷಣಗಳನ್ನು ಗುರುತಿಸಬಹುದು. ನಾಗರ ಶೈಲಿಯ ಪ್ರಮುಖ ಲಕ್ಷಣವಾದ ರೇಖಾನಾಗರ ಶಿಖರವನ್ನು ಬಿಟರ್‌ಗಾವ್ ನ ಇಟ್ಟಿಗೆಯ ದೇವಾಲಯದಲ್ಲಿ ಗಮನಿಸಬಹುದು.

ದ್ರಾವಿಡ ಶೈಲಿಯ ಪ್ರಮುಖ ಲಕ್ಷಣವಾದ ಪಿರಮಿಡ್ ಆಕಾರದ ಶಿಖರವನ್ನು ಭೋಧಗಯಾದ ಮಹಾಭೋಧಿ ದೇವಾಲಯದಲ್ಲಿ ಗಮನಿಸಬಹುದು. ಇದರಿಂದ ಗುಪ್ತರಕಾಲವು ಈ ಎರಡೂ ಶೈಲಿಗಳ ಉಗಮಸ್ಥಾನವಾಗಿದ್ದು, ನಂತರ ಕಾಲದಲ್ಲಿ ಪರಿಪಕ್ವವಾಯಿತೆಂದು ತಿಳಿಯುತ್ತದೆ.

ದೇವಫರ್‌ನ ದಶಾವತಾರ ದೇವಾಲಯ : ಇದು ಗುಪ್ತರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಇದು 40 ಅಡಿ ಎತ್ತರದ ಶಿಖರವನ್ನು ಒಳಗೊಂಡಿದೆ. ದೇವಾಲಯದ ಬಾಗಿಲು ಹೆಚ್ಚು ಅಲಂಕಾರಭರಿತವಾಗಿದೆ. ಗಂಗಾ-ಯಮುನ ನದಿಗಳ ಸಂಗಮದ ಚಿತ್ರ ಮನೋಜ್ಞವಾಗಿದೆ. ಬಾಗಿಲಿನಲ್ಲಿ ಪೂರ್ಣಘಟ, ಮಿಥುನ ಚಿತ್ರಗಳು, ಪತ್ರಾವಳಿ ಮನೋಹರವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನದ ಸುಂದರ ದೃಶ್ಯಾವಳಿಯನ್ನು ಈ ದೇವಾಲಯ ಒಳಗೊಂಡಿದೆ.

ಇತರ ಪ್ರಮುಖ ದೇವಾಲಯಗಳು :

  1. ಜಬ್ಬಲ್‌ಪುರ ಜಿಲ್ಲೆಯ ತಿಗಾವದಲ್ಲಿರುವ ವಿಷ್ಣುದೇವಾಲಯ
  2. ಭುಮರದಲ್ಲಿರುವ ಶಿವ ದೇವಾಲಯ
  3. ಅಜಯ್‌ಗರ್‌ನ ಪಾರ್ವತಿ ದೇವಾಲಯ
  4. ಖೋಹದಲ್ಲಿರುವ ಏಕಮುಖ ಶಿವಲಿಂಗ ದೇವಾಲಯ
  5. ಗುಪ್ತರ ವಾಸ್ತುಶಿಲ್ಪದ ಮಾದರಿಯಲ್ಲಿರುವ ಐಹೊಳೆಯ ದುರ್ಗಾದೇವಾಲಯ

ಶಿಲ್ಪಕಲೆ : ಗುಪ್ತರ ಕಾಲದ ಶಿಲ್ಪಕಲೆಯು ಅಪೂರ್ವವಾದ ಸೌಂದಯ್ಯಕ್ಕೆ ಹೆಸರುವಾಸಿಯಾಗಿದೆ. ಅರುಣ್ ಭಟ್ಟಾಚಾರ್ಜಿಯವರ ಅಭಿಪ್ರಾಯದಲ್ಲಿ ‘ಶಿಲ್ಪಕಲೆಯಲ್ಲಿ ಗುಪ್ತಶಿಲ್ಪಗಳ ಉಳಿ ನಿರ್ಜೀವ ಶಿಲೆಗೆ ಚೇತನ ಹಾಗೂ ಲಾವಣ್ಯವನ್ನಿತ್ತಿದೆ’.

ಗುಪ್ತರ ಶಿಲ್ಪಕಲೆಯ ಲಕ್ಷಣಗಳು :

  1. ಎಲ್ಲಾ ಪ್ರಾಣಿ ಮತ್ತು ಸಸ್ಯ ವಿನ್ಯಾಸಗಳು ಮುಖ್ಯ ಶಿಲ್ಪದ ಕಥಾನಕದಿಂದ ಪೂರ್ತಿ ಹೊರಗೆ ಅಂಚಿಗೆ (ಬಾರ್ಡ‌ರ್‌ ಗೆ) ದೂಡಲ್ಪಟ್ಟಿರುವುದು.
  2. ಗುಪ್ತರ ಶಿಲ್ಪವು ಬಾಹ್ಯ ಲಕ್ಷಣ ಮತ್ತು ಅಂತಃಶಕ್ತಿಯ ಸಮ್ಮಿಲನ.
  3. ಗುಪ್ತರ ಕಾಲದ ಶಿಲ್ಪವು ಕುಳಿತಿರಲಿ, ನಿಂತಿರಲಿ ಅಥವಾ ಬಾಗಿರಲಿ ಸಮತೋಲನ ಸ್ಥಿತಿಯನ್ನು ತಲುಪಿರುವುದು.
  4. ಗುಪ್ತರ ಶಿಲ್ಪವು ಗ್ರೀಕರ ಅಥವಾ ಇನ್ಯಾವುದೇ ಶೈಲಿಯ ಪ್ರಭಾವಕ್ಕೆ ಒಳಗಾಗದೆ ಭಾರತೀಯತೆಯನ್ನು ಒಳಗೊಂಡಿರುವುದು.
  5. ಗುಪ್ತ ಶಿಲ್ಪದಲ್ಲಿ ಕಾಣುವ ತೇಜಸ್ಸು, ಪಾರದರ್ಶಕ ವಸ್ತ್ರ, ಅಲಂಕಾರಿಕ ಪ್ರಭಾವಳಿ.

ಕೆಲವು ಶಿಲ್ಪಾಕೃತಿಗಳು :

  1. ಸಾರನಾಥ ಆಸನ ರೂಢ ಬುದ್ಧನ ವಿಗ್ರಹ
  2. ಉದಯ ಗಿರಿಯ ಶಿಲ್ಪಗಳು
  3. ಬೆಸ್ನಗರದ ಗಂಗಾದೇವಿ ವಿಗ್ರಹ
  4. ಮಥುರಾದ ಬುದ್ಧನ ಪೂರ್ಣ ವಿಗ್ರಹ
  5. ಗ್ವಾಲಿಯರ್‌ನ ಅಪ್ಸರೆಯರ ಮೂರ್ತಿಗಳು
ಗುಪ್ತರ ಕಾಲದ ಆಡಳಿತ

ಗುಪ್ತರ ಕಾಲದ ಆಡಳಿತ

ಗುಪ್ತರ ಆಡಳಿತ : ಗುಪ್ತ ದೊರೆಗಳು ದೊಡ್ಡ ಸಾಮ್ರಾಜ್ಯದ ಅಧಿಪತಿಗಳಾಗಿದ್ದರು. ಪಾಟಲಿಪುತ್ರ ಅವರ ರಾಜಧಾನಿಯಾಗಿತ್ತು. ಎರಡನೆ ಚಂದ್ರಗುಪ್ತನ ಕಾಲದಲ್ಲಿ ಕೆಲವು ಕಾಲ ಉಜೈನಿ ರಾಜಧಾನಿಯಾಗಿದ್ದಿತಾದರೂ, ನಂತರ ಪಾಟಲಿಪುತ್ರವೇ ರಾಜಧಾನಿಯಾಗಿ ಮುಂದುವರೆಯಿತು. ಗುಪ್ತ ದೊರೆಗಳು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನೇಮಿಸಿಕೊಂಡು ಸುಭದ್ರ ಆಡಳಿತವನ್ನು ನೀಡಿದರು.

ರಾಜ :

ರಾಜನೇ ರಾಜ್ಯದ ಮುಖ್ಯಸ್ಥನಾಗಿದ್ದನು. ಆತನ ಮಾತೆ ಅಂತಿಮವಾಗಿತ್ತು. ರಾಜನನ್ನು ದೈವಾಂಶ ಸಂಭೂತನೆಂದು ಪರಿಗಣಿಸಲಾಗಿತ್ತು. ರಾಜನನ್ನು ದೇವರ ಪ್ರತಿನಿಧಿಯೆಂದು ಸಹ ಕರೆಯಲಾಗುತ್ತಿತ್ತು. ರಾಜ್ಯದಲ್ಲಿ ಧರ್ಮವನ್ನು ಪಾಲಿಸುವುದು, ವಿದೇಶಿಯರ ದಾಳಿಯನ್ನು ಎದುರಿಸಿ ದೇಶದ ಜನರನ್ನು ರಕ್ಷಿಸುವುದು, ರಾಜನ ಆದ್ಯ ಕರ್ತವ್ಯವಾಗಿದ್ದಿತು. ನ್ಯಾಯ ನಿರ್ಣಯ ಮಾಡುವುದು, ಸೈನ್ಯದ ನಾಯಕತ್ವ ವಹಿಸುವುದು ಸಹ ಈತನ ಕರ್ತವ್ಯಗಳಾಗಿದ್ದವು. ಇಷ್ಟೆಲ್ಲ ಅಧಿಕಾರಗಳನ್ನು ಹೊಂದಿದ್ದರೂ ರಾಜನು ನಿರಂಕುಶಾಧಿಕಾರಿಯಾಗಿರಲು ಸಾಧ್ಯವಿರಲಿಲ್ಲ.

ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ : ಗುಪ್ತರ ಆಡಳಿತವು ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ. ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವಿಪಾಲ, ಪರಮಭಟ್ಟಾರಕ, ಪರಮದೇವತಾ, ಸಾರ್ವಬೌಮ, ಸಾಮ್ರಾಟ್ ಮೊದಲಾದ ಬಿರುದುಗಳನ್ನು ಧರಿಸಿದ್ದರೂ ನಿರಂಕುಶ ದೊರೆಗಳಾಗಿರಲಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತಾಂಗದ ಅಧಿಪತಿಗಳಾಗಿದ್ದರಿಂದ ಎಲ್ಲಾ ಅಧಿಕಾರಗಳು ಕಟ್ಟಕಡೆಗೆ ಅವರಲ್ಲಿ ಕೇಂದ್ರೀಕೃತವಾಗಿತ್ತು. ಆದಾಗ್ಯೂ ಕೆಲವೊಂದು ಅಡೆತಡೆಗಳಿದ್ದವು. ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕಾಗಿತ್ತು. ಗುರುಹಿರಿಯರ, ಪಂಡಿತರ, ಮಂತ್ರಿಗಳ ಮತ್ತು ಸಲಹಾ ಸಮಿತಿಯ ಅಭಿಪ್ರಾಯವನ್ನು ಆಲಿಸಬೇಕಾಗಿತ್ತು. ಅಲ್ಲದೆ ಪರಂಪರಾಗತ ನಂಬಿಕೆ, ಆಚರಣೆ, ಧರ್ಮ-ಸಂಪ್ರದಾಯಗಳು ಅರಸರು ಸ್ವೇಚ್ಛಾಧಿಕಾರ ಚಲಾಯಿಸದಂತೆ ಅಡ್ಡಿಯಾಗಿದ್ದವು.

ಮಂತ್ರಾಲೋಚನ ಸಭೆ(ಮಂತ್ರಿಪರಿಷತ್ತು): ಆಡಳಿತ ನಿರ್ವಹಣೆಯಲ್ಲಿ ಅರಸರಿಗೆ ಸಲಹೆ ಸೂಚನೆಗಳನ್ನು ನೀಡಲು ಮಂತ್ರಾಲೋಚನ ಸಭೆ ಇರುತ್ತಿತ್ತು. ಇದು ಮುಖ್ಯಮಂತ್ರಿ, ಆರ್ಥಿಕ ಮಂತ್ರಿ, ನ್ಯಾಯಾಂಗ ಸಚಿವ, ಮುಖ್ಯ ದಂಡನಾಯಕ ಮತ್ತು ಯುವರಾಜನನ್ನು ಒಳಗೊಂಡಿತ್ತು. ಪ್ರಮುಖ ವಿಷಯಗಳನ್ನು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.

ವಿವಿಧ ಅಧಿಕಾರಿಗಳು : ಗುಪ್ತರ ಶಾಸನಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾದಿಕೃತ, ಸಂಧಿವಿಗ್ರಹಿ, ದಂಡಪಸಾಧಿಕರಣ, ವಿನಯಸ್ಥಿತಿ ಸ್ಥಾಪಕ ಮೊದಲಾದ ಹುದ್ದೆಗಳ ಪ್ರಸ್ತಾಪ ಬರುತ್ತದೆ. ಇದರಿಂದ ಈ ಅಧಿಕಾರಿಗಳು ಸಂಬಂಧಿತ ಆಡಳಿತದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೆಂಬುದು ತಿಳಿಯುತ್ತದೆ.

ಕಂದಾಯ ಆಡಳಿತ : ಗುಪ್ತರ ಕಾಲದಲ್ಲಿ ಭೂಕಂದಾಯವೇ ಆದಾಯದ ಪ್ರಮುಖ ಮೂಲವಾಗಿತ್ತು. ಆದ್ದರಿಂದ ಗುಪ್ತ ದೊರೆಗಳು ಕಂದಾಯ ಆಡಳಿತಕ್ಕೆ ಮಹತ್ವ ನೀಡಿದ್ದರು. ಭೂ ಉತ್ಪನ್ನದ 1/6 ಭಾಗ ಭೂ ಕಂದಾಯವೆಂದು ನಿಗಧಿಪಡಿಸಿದ್ದರು. ಅಲ್ಲದೆ 18 ವಿಧದ ವಿವಿಧ ತೆರಿಗೆಗಳನ್ನು ಹೇರಿದ್ದರು.

ಇದಲ್ಲದೆ ಅರಸನ ಸೈನ್ಯ ಹೋಗುವ ದಾರಿಯಲ್ಲಿರುವ ಜನ ಅದರ ನಿರ್ವಹಣೆಯ ಹೊಣೆಯನ್ನು ಹೊರಬೇಕಿತ್ತು. ‘ಭೋಗ’ ಎಂಬ ನಗರ ಪ್ರವೇಶ ತೆರಿಗೆಯಿಂದಲೂ ಆದಾಯ ಬರುತ್ತಿತ್ತು. ಇವುಗಳ ಜೊತೆಗೆ ಉತ್ಪನ್ನ ಹಾಗೂ ಉಪ್ಪಿನ ಗಣಿಗಳಿಂದಲೂ ತೆರಿಗೆ ಬರುತ್ತಿತ್ತು. ವಿಷ್ಠಿ ಎಂಬ ಕಡ್ಡಾಯ ಉಚಿತ ಶ್ರಮ ಪದ್ಧತಿಯೂ ಜಾರಿಯಲ್ಲಿದ್ದಿತು.

ನ್ಯಾಯಾಂಗ ಆಡಳಿತ : ಅರಸನು ನ್ಯಾಯಾಂಗದ ಅಧಿಪತಿಯಾಗಿದ್ದನು. ಆದಾಗ್ಯೂ ನ್ಯಾಯಾಧೀಶರನ್ನು ನೇಮಿಸಿಕೊಳ್ಳಲಾಗಿತ್ತು. ಮಹಾ ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಹಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು. ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ. ವಿಶಾಲ ಸಾಮ್ರಾಜ್ಯವನ್ನು ಹೊಂದಿದ್ದ ಗುಪ್ತರು ತಮ್ಮ ರಾಜ್ಯ ರಕ್ಷಣೆಗಾಗಿ ಬಲಿಷ್ಠ ಸೇನೆಯನ್ನು ಕಟ್ಟಿದ್ದರು. ಇವರ ಸೈನ್ಯದಲ್ಲಿ ಪದಾತಿ, ಅಶ್ವಪಡೆ ಹಾಗೂ ಗಜಪಡೆ ಇದ್ದಿತು. ಸೈನ್ಯದಲ್ಲಿ ರಥಗಳನ್ನು ಬಳಸುತ್ತಿರಲಿಲ್ಲ. ಮರಳುಗಾಡಿನಲ್ಲಿ ಮಾತ್ರ ಒಂಟೆಗಳನ್ನು ಬಳಸುತ್ತಿದ್ದರು. ಸೈನ್ಯದ ಮೇಲ್ವಿಚಾರಣೆಗಾಗಿ “ಮಹಾಸೇನಾಪತಿ” ನೇಮಕಗೊಂಡಿದ್ದನು. ಈತನ ಕೈಕೆಳಗೆ ಮಹಾದಂಡನಾಯಕ, ರಣಬಂಡಾರಿಕ ಭಟಶ್ವಪತಿ ಎಂಬ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಸೇವಾಡಳಿತದ ಪುಮುಖ ಮುಖ್ಯಸ್ಥರುಗಳನ್ನು ಈ ಕೆಳಗಿನಂತೆ ಅಭ್ಯಸಿಸಬಹುದು.

1) ಸೈನ್ಯದ ಮುಖ್ಯಸ್ಥ – ಮಹಾಸೇನಾಪತಿ

2) ಅಶ್ವಪಡೆ – ಮಹಾಅಶ್ವಪತಿ, ಅಶ್ವಪತಿ

3) ಗಜಪಡೆ- ಮಹಾಪಿಲುಪತಿ ಅಥವಾ ಕಟುಕ

4) ಪಿಲುಪಡೆ – ದಂಡನಾಯಕ

ಸೈನಿಕರಿಗೆ ಹಣದ ರೂಪದಲ್ಲಿ ಸಂಬಳ ವಿತರಣೆ ಮಾಡಲಾಗುತ್ತಿತ್ತು. ಯುದ್ದದಲ್ಲಿ ಬಿಲ್ಲು, ಬಾಣ, ಕತ್ತಿ, ಈಟಿ, ಕೈಗೊಡಲಿ, ಭರ್ಚಿ, ಭಲ್ಲೆ, ಶಿರಾಸ್ತ್ರಣ, ಕಬ್ಬಿಣದ ಕವಚ ಮೊದಲಾದ ಆಯುಧಗಳನ್ನು ಬಳಸಲಾಗುತ್ತಿತ್ತು. ಈ ಅವಧಿಯಲ್ಲಿ ಅಶ್ವಪಡೆ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿತು.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು.

ಬಲಾಧಿಕರಣಿಕ – ಸೈನ್ಯದ ಮುಖ್ಯಸ್ಥ

ದಂಡಪಸೌಧಿಕರಣಿಕ – ಪೋಲೀಸ್ ಅಧಿಕಾರಿ

ರಣಭಂಡಾರಿಕ – ಸೈನ್ಯದ ದಂಡಾಧಿಕಾರಿ

ವಿನಯಸ್ಥಿತಿಸ್ಥಾಪಕ – ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಾತ

ಭಟಸ್ವಪತಿ – ಅಶ್ವದಳ ಮತ್ತು ಕಾಲ್ಗಳದ ದಂಡನಾಯಕ

ಮಹಾಪಿಲ್ಲುಪತ – ಗಜಸೈನ್ಯದ ಮುಖ್ಯಸ್ಥ

ಜಿಲ್ಲಾಡಳಿತ : ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಅದನ್ನು ‘ವಿಷಯ’ ಎಂದು ಕರೆಯುತ್ತಿದ್ದರು. ಅದರ ಅಧಿಪತಿ ವಿಷಯಪತಿ. ಅವನು ಜಿಲ್ಲಾ ನ್ಯಾಯಾಧೀಶನಾಗಿಯೂ ಕೆಲಸಮಾಡುತ್ತಿದ್ದನು. ಅವನಿಗೆ ಸಲಹೆ ನೀಡಲು ಒಂದು ಸಲಹಾಸಮಿತಿ ಇತ್ತು. ಇದು ಕೆಳಕಂಡವರನ್ನು ಒಳಗೊಂಡಿತ್ತು.

ನಗರ ಶ್ರೇಷ್ಠಿ – ನಗರ ಸಭೆಯ ಅಧ್ಯಕ್ಷ           ಪ್ರಥಮ ಕುಲಿಕ – ಉದ್ದಿಮೆಗಳ ಪ್ರತಿನಿಧಿ

ಸಾರ್ಥವಾಹ – ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿ      ಪ್ರಥಮ ಕಾಯಸ್ಥ –  ಕರಣಿಕರ ಮುಖ್ಯಸ್ಥ

ನಗರಾಡಳಿತ : ನಗರ ಮುಖ್ಯಸ್ಥ ಪುರಪಾಲ ಅಥವಾ ನಗರ ರಕ್ಷಕನಾಗಿದ್ದ. ನಗರಾಡಳಿತದ ಸಲಹೆಗೆ ಪರಿಷತ್ ಎಂಬ ಸಂಸ್ಥೆಯಿತ್ತು. ಇದು ನಗರಶ್ರೇಷ್ಠಿ ಎಂಬ ಅಧಿಕಾರಿಯನ್ನು ಒಳಗೊಂಡಿತ್ತು.

ಗ್ರಾಮಗಳ ಆಡಳಿತ : ಗ್ರಾಮವು ಆಡಳಿತದ ಕಟ್ಟಕಡೆಯ ಘಟಕವಾಗಿತ್ತು. ಗ್ರಾಮಾಧಿಕಾರಿಯು ಸರ್ಕಾರದಿಂದ ನೇಮಿಸಲ್ಪಡು ತ್ತಿದ್ದನು. ಗ್ರಾಮದ ಆಡಳಿತ ನಿರ್ವಹಣೆಯು ಪಂಚಾಯಿತಿಯ ಮೂಲಕ ನಡೆಯುತ್ತಿತ್ತು.

ನ್ಯಾಯಾಡಳಿತ :

ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ವಿಶಾಲ ಸಾಮ್ರಾಜ್ಯದ ನ್ಯಾಯಾಡಳಿತವನ್ನು ನೋಡಿಕೊಳ್ಳಲು ಒಬ್ಬನಿಂದಲೇ ಸಾಧ್ಯವಿಲ್ಲದ ಕಾರಣ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಧೀಶರಿಗೆ ಶೇಶ್ ಮತ್ತು ಕಾಯಸ್ಥರು ನೆರವಾಗುತ್ತಿದ್ದರು. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ನ್ಯಾಯ ತೀರ್ಮಾನ ಮಾಡುತ್ತಿತ್ತು. ಕಾಳಿದಾಸನು ರಾಜನ ರಾಜಧಾನಿಯ ನ್ಯಾಯಾಲಯವನ್ನು ಧರ್ಮಸ್ಥಾನ ಎಂದು ಕರೆದಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಗಳು ಕಠಿಣವಾಗಿದ್ದವು.

ಮುಕ್ತಾಯ : ಗುಪ್ತರು ತಮ್ಮ ಹಿಂದಿನ ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದ್ದು ಕಂಡು ಬರುತ್ತದೆ.

ಗುಪ್ತರ ಅವನತಿಗೆ ಕಾರಣಗಳು

ಗುಪ್ತರ ಅವನತಿಗೆ ಕಾರಣಗಳು

ಎರಡನೆಯ ಚಂದ್ರಗುಪ್ತನ ನಂತರ ಕುಮಾರಗುಪ್ತ, ಸ್ಕಂದಗುಪ್ತ ಕ್ರಮವಾಗಿ ರಾಜ್ಯವಾಳಿದರು. ಸ್ಕಂದಗುಪ್ತನ ನಂತರ ಗುಪ್ತರಾಜ್ಯ ಅವನತಿಯ ಹಾದಿಯನ್ನು ಹಿಡಿಯಿತು. ಈ ವಂಶದ ಕೊನೆಯ ದೊರೆ ವಿಷ್ಣುಗುಪ್ತ ಕ್ರಿ.ಶ. 570ರವರೆಗೆ ಆಳಿದನು. ಅನಂತರ ಹೂಣರ ದಾಳಿಗೆ ಸಿಕ್ಕ ಗುಪ್ತರಾಜ್ಯ ನಲುಗಿತು. ಹೂಣರ ನಾಯಕರಾದ ತೋರಮಾನ ಹಾಗೂ ಮಿಹಿರಗುಲರು ಗುಪ್ತರ ವಂಶವನ್ನು ನಿರ್ನಾಮಗೊಳಿಸಿದರು. ಗುಪ್ತರ ಅವನತಿಗೆ ಕಾರಣವಾದ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1) ಅಸಮರ್ಥ ಉತ್ತರಾಧಿಕಾರಿಗಳು : ಸ್ಕಂದಗುಪ್ತನ ನಂತರ ಬಂದ ಅವನ ಉತ್ತರಾಧಿಕಾರಿಗಳು ವಿಶಾಲವಾದ ಗುಪ್ತ ಸಾಮ್ರಾಜ್ಯವನ್ನು ರಕ್ಷಿಸುವ ಸಾಮರ್ಥ್ಯವುಳ್ಳವರಾಗಿರಲಿಲ್ಲ. ಪುರಗುಪ್ತ, ನರಸಿಂಹಗುಪ್ತ, ಕುಮಾರಗುಪ್ತ ಹಾಗೂ ಬುದ್ಧಗುಪ್ತರು ದುರ್ಬಲ ದೊರೆಗಳಾಗಿದ್ದು ಗುಪ್ತ ಸಾಮ್ರಾಜ್ಯದ ವರ್ಚಸ್ಸಿಗೆ ಧಕ್ಕೆ ತಂದರಲ್ಲದೆ ಹಿಂದಿನ ಅರಸರಂತೆ ಕ್ಷಾತ್ರತೇಜಸ್ಸು, ಆಕರ್ಷಕ ವ್ಯಕ್ತಿತ್ವ ಹಾಗೂ ಶಕ್ತಿಯನ್ನು ಹೊಂದಿರಲಿಲ್ಲ. ಇಂತಹ ಗುಣಲಕ್ಷಣಗಳಿಲ್ಲದ ರಾಜರು ಅಧಿಕಾರಕ್ಕೆ ಬಂದದ್ದೇ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.

2) ಉತ್ತರಾಧಿಕಾರದ ಸ್ಪರ್ಧೆ: ರಾಜತ್ವ ವಂತಪಾರಂಪರ್ಯವಾಗಿದ್ದರೂ ಗುಪ್ತರ ಕಾಲದಲ್ಲಿ ಅದು ನಿರ್ದಿಷ್ಟ ನೀತಿ ನಿಯಮಗಳನ್ನು ಹೊಂದಿರಲಿಲ್ಲ. ರಾಜ ಸತ್ತ ನಂತರ ಅವನ ಮಕ್ಕಳಲ್ಲಿ ಉತ್ತರಾಧಿಕಾರಕ್ಕಾಗಿ ಅಂತಃಕಲಹಗಳು ಆರಂಭವಾಗುತ್ತಿದ್ದವು. ಖಡ್ಗಬಲವೇ ಸಿಂಹಾಸನದ ಹಕ್ಕನ್ನು ಪ್ರತಿಪಾದಿಸುತ್ತಿದ್ದುದರಿಂದ ಅಲ್ಲಿ ರಾಜತ್ವಕ್ಕೆ ಬೆಲೆ ಇರಲಿಲ್ಲ. ಈ ರೀತಿಯ ಆಂತರಿಕ ಹೋರಾಟಗಳು ಗುಪ್ತ ಸಾಮ್ರಾಜ್ಯವನ್ನು ಬಲಹೀನಗೊಳಿಸಿದವಲ್ಲದೆ ಅನ್ಯರಿಗೆ ದಾರಿಮಾಡಿಕೊಟ್ಟವು.

3) ಬೌದ್ಧ ಧರ್ಮದ ಪ್ರಭಾವ : ಗುಪ್ತ ಸಾಮ್ರಾಟರಾದ ಬಲಾದಿತ್ಯ ಹಾಗೂ ಬುದ್ಧ ಗುಪ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರಿಂದ ಅವರ ಸೈನಿಕರು ಅಹಿಂಸಾ ಧರ್ಮವನ್ನು ಪಾಲಿಸಿದರು. ಪರಿಣಾಮವಾಗಿ ಯುದ್ಧದ ಸಮಯದಲ್ಲಿ ಸೈನಿಕರ ಮೇಲೆ ಈ ಅಹಿಂಸಾ ನೀತಿ ನಕಾರಾತ್ಮಕ ಪರಿಣಾಮವನ್ನು ಬೀರಿತು. ಹೂಣರು ಗುಪ್ತ ಸಾಮ್ರಾಜ್ಯದ ವಿರುದ್ಧ ಯುದ್ಧ ಘೋಷಿಸಿದಾಗ ಅಲ್ಲಿನ ಸೈನಿಕರು ಸಮರ್ಥವಾಗಿ ವೈರಿಗಳನ್ನು ಎದುರಿಸಲಿಲ್ಲವಾದ್ದರಿಂದ ಸಾಮ್ರಾಜ್ಯ ಅವನತಿಯನ್ನು ಹೊಂದಿತು.

4) ಗಡಿಭಾಗಗಳ ನಿರ್ಲಕ್ಷತೆ : ಸ್ಕಂದಗುಪ್ತನ ನಂತರ ಬಂದ ದೊರೆಗಳು ತಮ್ಮ ರಾಜ್ಯದ ಗಡಿಭಾಗಗಳ ರಕ್ಷಣೆಯನ್ನು ನಿರ್ಲಕ್ಷಿಸಿದರು. ಹೀಗಾಗಿ ವಿದೇಶಿ ದಾಳಿಕಾರರು ಅದರಲ್ಲೂ ಹೂಣರು ಯಾರ ಹೆದರಿಕೆಯಿಲ್ಲದೆ ಗುಪ್ತ ಸಾಮ್ರಾಜ್ಯದ ಮಧ್ಯಭಾಗದವರೆಗೂ ದಾಳಿ ಮಾಡಿ ದೇಶದೊಳಗೆ ಸುಲಭವಾಗಿ ಪ್ರವೇಶಿಸಿದರು. ಇದರಿಂದ ಪ್ರೇರಿತರಾದ ಇನ್ನಿತರ ದಾಳಿಕಾರರೂ ಸಹ ಗುಪ್ತಸಾಮ್ರಾಜ್ಯದ ಗಡಿಭಾಗ ಸುರಕ್ಷಿತವಲ್ಲ ಎಂಬುದನ್ನು ಗಮನಿಸಿ ತಾವು ರಾಜ್ಯದೊಳಗೆ ನುಸುಳಿದರು. ಹೀಗೆ ಒಬ್ಬರ ನಂತರ ಒಬ್ಬರಂತೆ ಬಂದ ವಿದೇಶಿ ದಾಳಿಕಾರರನ್ನು ಗುಪ್ತರು ಎದುರಿಸದ ಕಾರಣ ಸಾಮ್ರಾಜ್ಯ ಪತನಗೊಂಡಿತು.

5) ಸೈನಿಕ ಅಸಾಮರ್ಥ್ಯ : ಆರಂಭದ ಗುಪ್ತ ಅರಸರು ಸದಾ ಯುದ್ಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದುದರಿಂದ ಅವರ ಸೈನ್ಯ ಅತ್ಯಂತ ಬಲಿಷ್ಠವಾಗಿದ್ದಿತು. ಹೀಗಾಗಿ ಅವರು ಕೈಗೊಳ್ಳುತ್ತಿದ್ದ ಎಲ್ಲಾ ಯುದ್ಧಗಳಲ್ಲಿ ಜಯವನ್ನು ಸಾಧಿಸುತ್ತಿದ್ದರು. ಸ್ಕಂದಗುಪ್ತನ ನಂತರ ಅಧಿಕಾರಕ್ಕೆ ಬಂದ ದೊರೆಗಳ ಕಾಲದಲ್ಲಿ ರಾಜ್ಯವು ಶಾಂತಿ, ಸುಭಿಕ್ಷೆಯಿಂದಿದ್ದುದರಿಂದ ಜನರು ಆರ್ಥಿಕವಾಗಿ ಶ್ರೀಮಂತರಾಗಿ ವಿಲಾಸ ಜೀವನವನ್ನು ನಡೆಸಲಾರಂಭಿಸಿದರು. ಸೈನಿಕರು ಸಹ ದೀರ್ಘಾವಧಿಯವರೆಗೆ ಯುದ್ಧಗಳಲ್ಲಿ ಭಾಗವಹಿಸದಿದ್ದುದರಿಂದ ಅವರಲ್ಲಿ ಜಡತ್ವ ಉಂಟಾಗಿ ತರಬೇತಿಯಿಲ್ಲದೆ ಸಾಮರ್ಥ್ಯ ಕುಸಿಯಿತು. ಇಂತಹ ಸಂದರ್ಭದಲ್ಲಿ ಹೂಣರು ಗುಪ್ತ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ ಸೈನಿಕರು ಅಸಾಮರ್ಥ್ಯವನ್ನು ಪ್ರದರ್ಶಿಸಿದರು. ಇದು ವೈರಿಗಳ ವಿಜಯಕ್ಕೆ ಕಾರಣವಾಯಿತು.

6) ವಿಶಾಲ ಸಾಮ್ರಾಜ್ಯ : ಸಮುದ್ರಗುಪ್ತನ ಅಧಿಕಾರಾವಧಿಯಲ್ಲಿ ಗುಪ್ತ ಸಾಮ್ರಾಜ್ಯ ಬಹಳ ವಿಶಾಲವಾಗಿದ್ದಿತು. ಆದರೂ ಅವನು ವಿಶಾಲ ಸಾಮ್ರಾಜ್ಯವನ್ನು ದಕ್ಷತೆಯಿಂದ ಆಳಿದ ನಿದರ್ಶನವು ಉಂಟು. ಈತನ ನಂತರ ಬಂದ ರಾಜಕುಮಾರರಿಗೆ ವಿಶಾಲ ಸಾಮ್ರಾಜ್ಯವನ್ನು ಆಳುವ ಶಕ್ತಿ ಇರಲಿಲ್ಲ. ಸಾರಿಗೆ ಸಂಪರ್ಕಗಳಿಲ್ಲದ ಆ ಕಾಲದಲ್ಲಿ ಬೃಹತ್ ಸಾಮ್ರಾಜ್ಯವನ್ನು ಕೇಂದ್ರದ ಹಿಡಿತಕ್ಕೆ ತರುವುದು ಬಹಳ ಕಷ್ಟವಾಯಿತು. ದೂರದ ಗಡಿಭಾಗದ ಅರಸರು ದಂಗೆಯೆದ್ದಾಗ ಗುಪ್ತ ಸೈನ್ಯವು ಆ ಪ್ರದೇಶವನ್ನು ತಲುಪುವಷ್ಟರಲ್ಲೇ ಅವರು ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಿದ್ದರು. ಹೀಗಾಗಿ ಸಾಮ್ರಾಜ್ಯದ ವಿಶಾಲತೆಯು ಸಹ ಗುಪ್ತರ ಅವನತಿಗೆ ಕಾರಣವಾಯಿತು.

7) ಆರ್ಥಿಕ ದುಸ್ಥಿತಿ : ಸ್ಕಂದಗುಪ್ತ ಹಾಗೂ ಕುಮಾರಗುಪ್ತರ ಕಾಲದಲ್ಲಿ ಹೂಣರು ಪದೇ ಪದೇ ಗುಪ್ತರ ವಿರುದ್ಧ ದಂಡಯಾತ್ರೆ ಕೈಗೊಳ್ಳುತ್ತಿದ್ದುದರಿಂದಾಗಿ ಅವರ ಖಜಾನೆ ಪೂರ್ತಿ ಖಾಲಿಯಾಯಿತು. ಇದನ್ನು ಸ್ಕಂದಗುಪ್ತ ಹೊರಡಿಸಿದ ಚಿನ್ನದ ನಾಣ್ಯಗಳಲ್ಲಿ ಚಿನ್ನದ ಅಂಶ ಕಡಿಮೆಯಾಗಿರುವುದು ಹಾಗೂ ಚಿನ್ನದ ನಾಣ್ಯಗಳಲ್ಲಿ ವಿವಿಧ ಲೋಹಗಳನ್ನು ಮಿಶ್ರಣ ಮಾಡಿರುವುದರಿಂದ ತಿಳಿದುಕೊಳ್ಳಬಹುದು. ಹೀಗೆ ಸಾಮ್ರಾಜ್ಯದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ರಾಜ್ಯದ ದೈನಂದಿನ ಆಡಳಿತಕ್ಕೆ ತಡೆನ್ನೊಡ್ಡಿತು.

8) ಹೂಣರ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಹೂಣರ ದಾಳಿಯೇ ಕಾರಣವಾಯಿತು ಎಂದು ಅನೇಕ ವಿದ್ವಾಂಸರು ಹೇಳಿದ್ದಾರೆ. ಸ್ಕಂದಗುಪ್ತನ ಮರಣದ ನಂತರ ಗುಪ್ತ ದೊರೆಗಳಲ್ಲಿ ಆಂತರಿಕ ಕಲಹ ಉಂಟಾಯಿತು. ಇಂತಹ ಸಂದರ್ಭದಲ್ಲಿ ಹೂಣರ ನಾಯಕರಾದ ತೋರಮಾನ ಮತ್ತು ಮಿಹಿರಕುಲರು ಗುಪ್ತರ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದರು. ಇದು ಗುಪ್ತ ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾಯಿತು.

9) ಯಶೋವರ್ಮನ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಯಶೋವರ್ಮನಂತಹ ಮಹತ್ವಾಕಾಂಕ್ಷಿ ದೊರೆ ಕಾರಣನಾದನು. ಈತ ಗುಪ್ತ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಲೆಕ್ಕಿಸದೆ ಸ್ವತಂತ್ರರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಲು ಮುಂದಾದನು. ಹೀಗೆ ಯಶೋವರ್ಮನಿಂದ ಉಂಟಾದ ದಾಳಿಯಿಂದ ಗುಪ್ತ ಸಾಮ್ರಾಜ್ಯ ಅವನತಿಯನ್ನು ಕಂಡಿತು.

10) ಪುಷ್ಯಮಿತ್ರರ ನಡುವಣ ಹೋರಾಟ : ಚಂದ್ರಗುಪ್ತನು ಪುಷ್ಯಮಿತ್ರರೊಡನೆ ಸ್ನೇಹಪೂರ್ವಕವಾದ ಸಂಬಂಧವನ್ನು ಹೊಂದಿದ್ದನು. ಆದರೆ ಕುಮಾರ ಗುಪ್ತನ ಕಾಲದಲ್ಲಿ ಈ ಸಂಬಂಧ ಹದಗೆಟ್ಟಿತು. ಹೀಗಾಗಿ ಪುಷ್ಯಮಿತ್ರರು ಕುಮಾರ ಗುಪ್ತನ ಮಗನನ್ನೇ ಸೆರೆಹಿಡಿದು ಅವನ ಮೇಲಿನ ಸೇಡು ತೀರಿಸಿಕೊಂಡರು. ಈ ರೀತಿಯ ವೈರತ್ವ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.

11) ವಾಕಟಾಕರ ಬಗೆಗಿನ ನೀತಿ :

ತಮ್ಮ ಪಕ್ಷದಲ್ಲಿಯೇ ವಾಕಟಾಕರು ಪ್ರಬಲ್ಯಕ್ಕೆ ಬರುತ್ತಿರುವುದನ್ನು ಗುಪ್ತರು ಗಮನಿಸದೇ ಹೋದುದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು. ಗುಪ್ತರು ವಾಕಟಾಕರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿ ಅವರ ಪ್ರಾಬಲ್ಯಕ್ಕೆ ಗುಪ್ತರು ಕಾರಣರಾದರು. ಗುಪ್ತರು ಇವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ನರೇಂದ್ರಸೇನ ಹಾಗೂ ಹರಿಸೇನರು ಗುಪ್ತರ ಮೇಲೆ ದಾಳಿ ಮಾಡಿ ಗುಪ್ತರ ಅವನತಿಗೆ ಕಾರಣರಾದರು.

12) ಊಳಿಗ ಮಾನ್ಯ ಪದ್ಧತಿ :

ಗುಪ್ತರು ಜಾರಿಗೆ ತಂದಿದ್ದ ಊಳಿಗಮಾನ್ಯ ಪದ್ಧತಿಯ ಪರಿಣಾಮವಾಗಿ ಜಮೀನುದಾರ ವರ್ಗವೊಂದು ತಲೆ ಎತ್ತಿತು. ಅದು ಅವರ ಸ್ವತಂತ್ರ ಪ್ರವೃತ್ತಿಗೆ ಕಾರಣವಾಗಿ ಗುಪ್ತ ಸಂತತಿ ಕ್ರಮೇಣ ಅವನತಿ ಹೊಂದಲಾರಂಭಿಸಿತು. ಬ್ರಾಹ್ಮಣರಿಗೆ ಶಾಶ್ವತವಾದ ಭೂಮಿಗಳನ್ನು ನೀಡಿದ್ದು, ತೆರಿಗೆರಹಿತ ಭೂ ಹಿಡುವಳಿ ದಯಪಾಲಿಸಿದ್ದು ಹಾಗೂ ಅಧಿಕಾರವನ್ನು ಶಾಶ್ವತವಾಗಿ ನೀಡುದುದರಿಂದ ಗುಪ್ತ ಸಾಮ್ರಜ್ಯ ತನ್ನ ಹಿಡಿತವನ್ನು ಕಳೆದುಕೊಂಡಿತು. ಈ ಪದ್ಧತಿ ಹರ್ಷನ ಕಾಲದವರೆಗೆ ಮುಂದುವರೆಯಿತು. ಸರ್ಕಾರಿ ಅಧಿಕಾರಿಗಳ ಖರ್ಚು ವೆಚ್ಚಗಳಿಗಾಗಿ 1/4 ಭಾಗದಷ್ಟು ರಾಜ್ಯಾದಾಯವನ್ನು ಮೀಸಲಾಗಿಡಲಾಯಿತು. ರಾಜ್ಯಪಾಲರು, ದಂಡಾಧಿಕಾರಿಗಳು, ಭೂ ಮಾಲಿಕರು ಹಾಗೂ ಮಂತ್ರಿಗಳು ಭೂಮಿಗಳನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡುತ್ತಿದ್ದುದು ಗುಪ್ತರ ಅವನತಿಗೆ ಕಾರಣವಾಯಿತು.

13) ವಿದೇಶಾಂಗ ನೀತಿ

ಗುಪ್ತರ ಆರಂಭದಲ್ಲಿ ತಮ್ಮ ದೂರದೃಷ್ಟಿ ನೀತಿಯಿಂದಾಗಿ ನೆರೆಹೊರೆ ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದ್ದರು. ಪರಿಣಾಮವಾಗಿ ಅವುಗಳ ನಡುವಿನ ಸಂಬಂಧ ಗಟ್ಟಿಯಾಗಿದ್ದಿತು. ದಿನಗಳೆದಂತೆ ಗುಪ್ತರು ವೈವಾಹಿಕ ಸಂಬಂಧವನ್ನು ನಿಲ್ಲಿಸಿಬಿಟ್ಟರು. ಇದರಿಂದ ಗುಪ್ತರ ಪ್ರಾಬಲ್ಯಕ್ಷೀಣಿಸಲಾರಂಭಿಸಿತು.

14) ಗೌರ್ನರುಗಳ ಮಹಾತ್ವಾಕಾಂಕ್ಷೆ

ಗುಪ್ತರು ತಮ್ಮ ವಿಶಾಲ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಅವುಗಳನ್ನು ಗೌರ್ನರುಗಳ ಕೈಗೆ ನೀಡಿದರು. ಆಸೆಬುರುಕ ಗೌರರುಗಳು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಇಡೀ ಸಾಮ್ರಾಜ್ಯವನ್ನು ಅವನತಿಯತ್ತ ಕೊಂಡೊಯ್ದರು.

15) ಸಾಂಸ್ಕೃತಿಕ ಪ್ರಗತಿ

ಕಲೆ ಸಾಹಿತ್ಯದಲ್ಲಿ ಪ್ರಗತಿಯಾದಂತೆ ಗುಪ್ತರ ಕಾಲದ ಪ್ರಜೆಗಳು ಹಾಗೂ ಯುವರಾಜರು ವಿಲಾಸ ಜೀವನದಲ್ಲಿ ಮಗ್ನರಾದರು. ಅಸಮರ್ಥ ದೊರೆಗಳ ಕಾಲದಲ್ಲಿಯೂ ಈ ವಿಲಾಸ ಜೀವನ ಮುಂದುವರೆಯಿತು. ಜನ ಸೋಮಾರಿಗಳಾಗಿ ತಮ್ಮ ಕ್ಷಾತ್ರಗುಣಗಳನ್ನು ಕಳೆದುಕೊಂಡು ಯುದ್ಧ ಸಮಯದಲ್ಲಿ ಉದ್ದೇಶಪೂರಕವಾಗಿ ಸೋಲನುಭವಿಸಲಾರಂಭಿಸಿದರು. ಇದು ಗುಪ್ತ ಸಾಮ್ರಾಜ್ಯದ ಏಳಿಗೆಗೆ ಹೊಡೆತಕೊಟ್ಟಿತು.

ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು

ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು

ಪೀಠಿಕೆ:

ಅರಬ್ಬರು ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸಲ್ಮಾನರು. ಇವರು ಕೇವಲ ಸಿಂಧ್‌ ಪ್ರಾಂತ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಭಾರತದ ಇತರ ಭೂಭಾಗಗಳನ್ನು ನಿರ್ಲಕ್ಷಿಸಿದ್ದರು. ಆದರೆ ನಂತರದಲ್ಲಿ ಭಾರತದ ಮೇಲೆ ದಂಡಯಾತ್ರೆಯನ್ನು ಕೈಗೊಂಡ ಟರ್ಕರು ಭಾರತದ ಇನ್ನುಳಿದ ಕೆಲವು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಶಾಶ್ವತವಾಗಿ ನೆಲೆಯೂರಲು ಕಾರಣರಾದರು. ಟರ್ಕರು ಅರಬ್ಬರಿಗಿಂತ ದೈಹಿಕವಾಗಿ ಬಲಾಡ್ಯರಾಗಿದ್ದು ಪ್ರಬಲ ಆಯುಧಗಳನ್ನು ಹೊಂದಿದ್ದರು. ಟರ್ಕರು ಭಾವಜೀವಿಗಳೂ ಆಗಿದ್ದರು. ಅವರಲ್ಲಿ ಶ್ರದ್ಧೆ ಇತ್ತು. 8 ಹಾಗೂ 9ನೇ ಶತಮಾನದಲ್ಲಿ ಬಾಗ್ದಾದಿನ ಖಲೀಪರ ಮೇಲೆ ಹಿಡಿತವನ್ನು ಸಾಧಿಸಿದ ಟರ್ಕರು ಅಬ್ಬಾಸಿದ್‌ ಖಲೀಪರ ಮರಣದ ನಂತರ ಮಧ್ಯ ಏಷ್ಯಾದಲ್ಲಿ ಅವರ ಸಾಮಂತರಾದ ಸಮಸಿದ್‌ ಮನೆತನದವರನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಅಬ್ದುಲ್‌ ಮಲಿಕ್‌ ಎಂಬಾತನು ಸಮಸಿದ್‌ ಮನೆತನದ ಅರಸನಾಗಿದ್ದನು. ಈತನ ಸಾವಿನ ನಂತರ ಅವನ ಗುಲಾಮನಾಗಿದ್ದ ಅಲಪ್ತಗಿನ್‌ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಮಧ್ಯ ಏಷಿಯಾದ ರಾಜಕೀಯ ಬೆಳವಣಿಗೆಗೆ ಕಾರಣನಾದನು. ಈತ ರಾಜ್ಯವನ್ನು ಕಟ್ಟಿದ ಕೆಲವೇ ತಿಂಗಳಲ್ಲಿ ನಿಧನ ಹೊಂದಿದನು. ಈತನ ಮರಣದ 14 ವರ್ಷಗಳ ನಂತರ ಸಬಕ್ತಗಿನ್‌ ಕ್ರಿ.ಶ 977ರಲ್ಲಿ ಘಜ್ನಿಯಲ್ಲಿ ಸಿಂಹಾಸನಕ್ಕೆ ಬಂದನು. ಅಲಪ್ತಗಿನ್‌ ಹಾಗೂ ಸಬಕ್ತಗಿನ್‌ರು ಆಗಲೇ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಹಿಂದೂ ದೊರೆಗಳಿಂದ ಅಪಾರ ಪ್ರಮಾಣದಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆದರು. ಕ್ರಿ.ಶ 997ರಲ್ಲಿ ಸಬಕ್ತಗಿನ್‌ ಮರಣ ಹೊಂದಿದನು. ಆಗ ಈತನ ಮೆಚ್ಚಿನ ಸೇವಕನಾದ ಮಹಮ್ಮದ್‌ ಘಜ್ನಿಯು ಸಿಂಹಾಸನಕ್ಕೆ ಬಂದನು. ಈತ ಭಾರತದ ಸಂಪತ್ತಿನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕಾರಣದಿಂದ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈತ ಸಾಕಷ್ಟು ಪ್ರಮಾಣದಲ್ಲಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದನು. ಇವನ ಸಾವಿನ ನಂತರ ಇವನ ಆಪ್ತ ಸೇವಕನಾದ ಘೋರಿ ಮಹಮ್ಮದ್‌ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಅಗಾಧ ಪ್ರಮಾಣದಲ್ಲಿ ಸಂಪತ್ತನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತದಲ್ಲಿ ಇಸ್ಲಾಂ ಧರ್ಮ ಶಾಶ್ವತವಾಗಿ ಬೇರು ಬಿಡಲು ಕಾರಣನಾದನು.

ಹೀಗೆ ಘೋರಿ ಮಹಮ್ಮದನ ಪ್ರಯತ್ನದ ಫಲವಾಗಿ ಭಾರತದಲ್ಲಿ ಕಾಲಿರಿಸಿದ ಇಸ್ಲಾಂ ಧರ್ಮ ಸಹಜವಾಗಿ ಹಿಂದೂ ಧರ್ಮದೊಂದಿಗೆ ಸ್ಪರ್ಧೆಗೆ ಇಳಿಯಿತು. ಇವುಗಳ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏರಿಳಿತಗಳು ಕಂಡುಬಂದವು. ಈ ಹಿಂದೆ ಕುಶಾನರು, ಗ್ರೀಕರು, ಪರ್ಶಿಯನ್ನರು ಹಾಗೂ ಶಕರು ಭಾರತಕ್ಕೆ  ಬಂದರಾದರೂ ಅವರಿಂದ ಭಾರತದ ಮೇಲೆ ಯಾವುದೇ ಪರಿಣಾಮಗಳು ಬೀರಲಿಲ್ಲ. ಈ ನೆಲದಲ್ಲಿಯೇ ಹುಟ್ಟಿದ ಜೈನ ಹಾಗೂ ಬೌದ್ಧ ಧರ್ಮಗಳು ಭಾರತೀಯ ಸಮಾಜದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯನ್ನು ಮಾಡಲಿಲ್ಲ. ಅವರು ಹಿಂದುಗಳೊಂದಿಗೆ ಹೊಂದಾಣಿಕೆಯ ಸಹಜೀವನ ನಡೆಸಿದರು. ಆದರೆ ಭಾರತಕ್ಕೆ ಕಾಲಿಟ್ಟ ಇಸ್ಲಾಂ ಧರ್ಮವು ಮಾತ್ರ ತನ್ನತನವನ್ನು ಬಿಟ್ಟುಕೊಡದೆ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆಯಲಿಲ್ಲ. ಹೀಗಾಗಿ ಟರ್ಕರ ಆಕ್ರಮಣವು ಭಾರತದ ಈ ಕೆಳಗಿನ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತಂದಿತು.

1) ರಾಜಕೀಯ ಬದಲಾವಣೆಗಳು:

ರಾಜಕೀಯವಾಗಿ ಟರ್ಕರ ಆಕ್ರಮಣದ ಪರಿಣಾಮಗಳು ಈ ಕೆಳಗಿನಂತಿವೆ.

೧. ನಂತರದ ಆಕ್ರಮಣಗಳಿಗೆ ನೆಲೆ:  

ಟರ್ಕರ ಆಕ್ರಮಣಗಳು ತರೈನ್‌ ಕದನಗಳಿಗೆ (ಘೋರಿ ಮಹಮ್ಮದ್ ಮತ್ತು  ಪೃಥ್ವಿರಾಜ್ ಚೌಹಾನ್ ನಡುವೆ ನಡೆದ) ಕಾರಣವಾಯಿತು. ಇದು ಉತ್ತರ ಭಾರತದ ಅನೇಕ ಪ್ರದೇಶಗಳ ಮೇಲೆ ಸುಲ್ತಾನರ ಆಳ್ವಿಕೆಯನ್ನು ವಿಸ್ತರಿಸಲು ಕಾರಣವಾಯಿತು. ಘಜ್ನಿ ಮಹಮದ್‌ ಪಂಜಾಬನ್ನು ಗೆದ್ದದ್ದು, ಮುಂದೆ ಘೋರಿ ಮಹಮ್ಮದ್ ಮತ್ತಷ್ಟು ಪ್ರದೇಶದ ಮೇಲೆ ದಾಳಿ ಮಾಡಲು ನೆಲೆ ಒದಗಿಸಿತು.

೨. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣ:

ಘೋರಿ ಮಹಮ್ಮದ್ ಹಿಂತಿರುಗುವಾಗ ತನ್ನ ನಂಬಿಕಸ್ತ ಕುತುಬ್-ಉದ್ದಿನ್-ಐಬಕ್‌ನನ್ನು ತನ್ನ ಪ್ರತಿನಿಧಿಯಾಗಿ ಗೆದ್ದ ಪ್ರದೇಶಗಳನ್ನು ನೋಡಿಕೊಳ್ಳಲು ಜವಾಬ್ದಾರಿ ವಹಿಸಿ ತೆರಳಿದನು. ಈ ನಂಬಿಕಸ್ತನೇ (ಕುತುಬ್-ಉದ್ದಿನ್-ಐಬಕ್‌) ಮುಂದೆ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣನಾದನು. ಅಂದರೆ ಘೋರಿ ಮಹಮದ್‌ನ ಆಕ್ರಮಣ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು.

೩. ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳ ಪ್ರವೇಶ:

ಟರ್ಕರು ಸ್ವತಂತ್ರ ಆಡಳಿತವನ್ನು ನಡೆಸುತ್ತಿದ್ದರು. ಆದರೂ ಬಾಗ್ದಾದಿನ ಖಲೀಫನಿಗೆ ಗೌರವವನ್ನು ನೀಡಿ ಅವರ ಮಾರ್ಗದರ್ಶನವನ್ನು ಬಯಸುತ್ತಿದ್ದರು.  ಅಲ್ಲದೆ ದೆಹಲಿ ಆಡಳಿತವು ವಿಶ್ವ ಮುಸ್ಲಿಮರ ಆಳ್ವಿಕೆಯ ಭಾಗವೆಂದು ಪರಿಗಣಿಸಿದ್ದರು. ಹೀಗಾಗಿ ಬಾಗ್ದಾದಿನ ಖಲೀಫನ ಸಾರ್ವಬೌಮತ್ವವನ್ನು ಮನ್ನಿಸಿದ್ದರು. ಇದು ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳು ಎದ್ದು ಕಾಣುವಂತಾಯಿತು.

೪. ಆಡಳಿತದಲ್ಲಿ ಟರ್ಕರ ಸಾರ್ವಭೌಮಾಧಿಕಾರದ ಸ್ಥಾಪನೆ:

ಭಾರತೀಯರ ರಾಜಕೀಯ ಏಕತೆಯ ಕೊರತೆಯ ಕಾರಣದಿಂದ ಟರ್ಕರು ಭಾರತೀಯರನ್ನು ಸುಲಭವಾಗಿ ಸೋಲಿಸಿ ತಮ್ಮ ರಾಜಕೀಯ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿದರು. ಭಾರತೀಯರು ತಮ್ಮ ಎಲ್ಲಾ ಅಧಿಕಾರವನ್ನು ಟರ್ಕರ ಕೈಗೆ ಹಸ್ತಾಂತರಿಸಿ ಹಲ್ಲು ಕಿತ್ತ ಹಾವಿನಂತಾದರು. ರಾಜಕೀಯ ಮೇಲಾಟದಲ್ಲಿ ಮೆರೆಯುತ್ತಿದ್ದ ಭಾರತೀಯರು ತಮ್ಮ ಅಧಿಕಾರವನ್ನು ಕಳೆದುಕೊಂಡು ದ್ವಿತೀಯ ದರ್ಜೆಯ ಗುಲಾಮರಂತೆ ಬದುಕಿದರು. ಆಡಳಿತದಲ್ಲಿನ ಉನ್ನತ ಹುದ್ದೆಗಳು ಟರ್ಕರಿಗೆ ಮಾತ್ರ ಮೀಸಲಾಗಿದ್ದವು. ಇದರಿಂದ ಹಿಂದೂಗಳು ಮತ್ತು ಇತರೆ ಮುಸ್ಲಿಂರು ಉನ್ನತ ಹುದ್ದೆಯಿಂದ ವಂಚಿತರಾದರು.

೫. ಹಿಂದೂಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಟ್ಟರು:

ಟರ್ಕರು ಭಾರತದ ಮೇಲೆ ದಾಳಿ ಮಾಡಿ ಹಿಂದೂಗಳಿಂದ ಬಲವಂತವಾಗಿ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ರಾಜ್ಯದ ಶ್ರೇಷ್ಠ ಹುದ್ದೆಗಳು ಟರ್ಕರ ಪಾಲಾಗಿ ಕೆಳದರ್ಜೆಯ ಹುದ್ದೆಗಳನ್ನು ಹಿಂದುಗಳಿಗೆ ನೀಡಲಾಯಿತು. ಪರಿಣಾಮವಾಗಿ ಭಾರತೀಯ ನೈಸರ್ಗಿಕ ಸಂಪತ್ತು ಹಾಗೂ ವಿವಿಧ ಸೌಲಭ್ಯಗಳನ್ನು ಟರ್ಕರು ಅನಾಯಾಸವಾಗಿ ಅನುಭವಿಸುವಂತಾಯಿತು. ಹಿಂದೂಗಳು ದನಗಳಿಗಿಂತಲೂ ಕೀಳು ದರ್ಜೆಯ ಬದುಕನ್ನು ಸಾಗಿಸುವಂತಾಯಿತು. ಮಹಮ್ಮದ್‌ ಘಜ್ನಿ, ಮಹಮ್ಮದ್‌ ಘೋರಿ ಹಾಗೂ ಅಲ್ಲಾವುದ್ದೀನ್‌ ಖಿಲ್ಜಿ ಮತ್ತು ಇಬ್ರಾಹಿಂ ಲೂದಿಯಂತಹ ಮತಾಂಧರುಗಳು ಹಿಂದೂಗಳ ಏಳಿಗೆಯನ್ನು ಸ್ವಲ್ಪವೂ ಸಹಿಸಲಿಲ್ಲ. ಹಿಂದುಗಳನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸಿ ಪ್ರಾಣಿಗಳಂತೆ ನಡೆಸಿಕೊಂಡರು. ಹೀಗೆ ಟರ್ಕರಿಂದ ಹಿಂದೂಗಳು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದರು.

೬. ಆಡಳಿತದಲ್ಲಿ ಕೆಲವು ಹಿಂದೂಗಳು ನೇಮಕ:  

ಟರ್ಕರು ದಕ್ಷ ಆಡಳಿತಾಧಿಕಾರಿಗಳೇನು ಆಗಿರಲಿಲ್ಲ. ಅವರು ಕೆಲವು ಬುದ್ಧಿವಂತ ಹಿಂದೂಗಳನ್ನೇ ಆಡಳಿತದಲ್ಲಿ ನೇಮಿಸಿಕೊಂಡು ಅವರಿಂದಲೇ ರಾಜಕೀಯ ಲಾಭವನ್ನು ಪಡೆದುಕೊಂಡರು. ಅವರಿಂದಲೇ ತಮ್ಮ ಅಧಿಕಾರದ ಬೇಳೆಯನ್ನು ಬೇಯಿಸಿಕೊಂಡರು. ಭಾರತದಲ್ಲಿ ಗ್ರಾಮಾಡಳಿತದಿಂದ ಹಿಡಿದು ಕೇಂದ್ರ ಸರ್ಕಾರದವರೆಗಿನ ವಿವಿಧ ಹುದ್ದೆಗಳಿಗೆ ಹಿಂದೂಗಳನ್ನು ನೇಮಕ ಮಾಡಿದ ಟರ್ಕರು ಅವರ ಮಾರ್ಗದರ್ಶನದಲ್ಲಿ ಭಾರತದ ಆಡಳಿತವನ್ನು ನಡೆಸಿಕೊಂಡು ಬಂದರು. ಉದಾ: ಚಾಂದೇರಿಯ ಮೇದಿನಿರಾಯ್‌, ಬಂಗಾಳದಲ್ಲಿ ರೂಪ್‌ ಹಾಗೂ ಸನ್‌ಕನ್‌ ಮುಂತಾದವರು. ಹಾಗೆಯೇ ಗೋಲ್ಕಂಡ ಸುಲ್ತಾನ್‌, ಬಿಜಾಪುರದ ಯೂಸುಪ್‌ ಆದಿಲ್‌ ಷಾ ಸಹ ಹಿಂದೂಗಳನ್ನು ಆಡಳಿತದಲ್ಲಿ ನೇಮಕಮಾಡಿಕೊಂಡಿದ್ದರು.

೭. ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ಪ್ರಹಾರ:

ಮಹಮ್ಮದ್‌ ಘಜ್ನಿ 1026ರಲ್ಲಿ ವಿಶ್ವಪ್ರಸಿದ್ಧ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿ ಅಲ್ಲಿನ ಶಿವಲಿಂಗವನ್ನು ಒಡೆದು ಹಾಕಿದನು. ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ಮುತ್ತು, ರತ್ನ ಹಾಗೂ ವಜ್ರ ವೈಡೂರ್ಯಗಳನ್ನು ದೋಚಿಕೊಂಡು ಹೋದನು. ಇದು ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ನಡೆದ ಪ್ರಹಾರವಾಗಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ಒಬ್ಬ ಹಿಂದೂ ಸಹ ಪ್ರತಿರೋಧ ಒಡ್ಡಲಿಲ್ಲ. ಹಾಗೆಯೇ ಮಹಮ್ಮದ್‌ ಘೋರಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದ ಸಂದರ್ಭದಲ್ಲಿಯೂ ಸಹ ರಜಪೂತ್‌ ದೊರೆಗಳು ಮೂಕ ಪ್ರೇಕ್ಷಕರಂತೆ ನಿಂತು ನೋಡಿದರೇ ಹೊರತು ಯಾರೂ ಸಹ ಘೋರಿಯ ವಿರುದ್ಧ ಕಂಕಣ ಕಟ್ಟಿ ಹೋರಾಟಕ್ಕೆ ಇಳಿಯಲಿಲ್ಲ. ಮುಂದೊಂದು ದಿನ ಇಂತಹ ಪರಿಸ್ಥಿತಿ ತಮಗೂ ಬರಬಹುದು ಎಂಬ ಕನಿಷ್ಟ ಜ್ಞಾನವೂ ರಜಪೂತ ದೊರೆಗಳಿಗೆ ಇಲ್ಲದೆ ಹೋದುದು ಅತ್ಯಂತ ದುಃಖದ ಸಂಗತಿ ಎಂದು ಹೇಳಬಹುದು. ಇದಕ್ಕೆಲ್ಲಾ ಮೂಲ ಕಾರಣವೆಂದರೆ ಭಾರತೀಯ ಸಮಾಜದಲ್ಲಿದ್ದ ಒಡಕು.

೮. ಪರ್ಶಿಯನ್‌ ಆಡಳಿತ ಭಾಷೆಯಾಯಿತು:

ಟರ್ಕರ ಆಕ್ರಮಣದ ಪರಿಣಾಮವಾಗಿ ಭಾರತದಲ್ಲಿ ಸಂಸ್ಕೃತ ಭಾಷೆಯ ಬದಲಾಗಿ ಪರ್ಶಿಯನ್‌ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು. ಅದು ಮೊಗಲರ ಕಾಲದವರೆಗೂ ಮುಂದುವರೆಯಿತು. ಭಾರತೀಯ ಅನೇಕ ಹಿಂದೂ ಪಂಡಿತರು, ಲೇಖಕರು ಹಾಗೂ ಕವಿಗಳಿಗೆ ಟರ್ಕರು ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಅವರ ಮೂಲಕ ಅನೇಕ ಹಿಂದೂ ಗ್ರಂಥಗಳನ್ನು ಪರ್ಶಿಯನ್‌ ಭಾಷೆಗೆ ತರ್ಜುಮೆಗೊಳಿಸಿದರು.

೯. ರಾಜಧಾನಿಯ ಬದಲಾವಣೆ:

ಟರ್ಕರ ದಾಳಿಯ ಪರಿಣಾಮವಾಗಿ ಈ ಹಿಂದೆ ಇದ್ದ ಲಾಹೋರಿನ ಕೇಂದ್ರ ಸ್ಥಾನವನ್ನು ಬದಲಾಯಿಸಿ ಅದನ್ನು ದೆಹಲಿಗೆ ಸ್ಥಳಾಂತರಗೊಳಿಸಿದರು. ಹೀಗಾಗಿ ಘಜ್ನಿ ಹಾಗೂ ಘೋರಿ ಮಹಮ್ಮದರಿಂದ ಹಿಡಿದು ಮೊಗಲ್‌ ಸಾಮ್ರಾಜ್ಯದ ಕೊನೆಯ ದಿನಗಳವರೆಗೂ ದೆಹಲಿಯು ಮುಸ್ಲೀಂರ ಕೇಂದ್ರ ಸ್ಥಾನವಾಯಿತು. ದೆಹಲಿಯಿಂದಲೇ ಮುಸ್ಲೀಂರ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದವು.

೧೦. ಉತ್ತರಾಧಿಕಾರದ ಕಾನೂನು ಇಲ್ಲದಿರುವುದು ರಕ್ತಪಾತಕ್ಕೆ ಕಾರಣವಾಯಿತು:

ಮುಸ್ಲೀಂರ ರಾಜಕೀಯ ವ್ಯವಸ್ಥೆ ಅಂದು ಬಹಳ ಗೊಂದಲಗಳಿಂದ ಕೂಡಿತ್ತು. ಅವರಲ್ಲಿ ಉತ್ತರಾಧಿಕಾರದ ಕುರಿತು ಯಾವುದೇ ನಿರ್ದಿಷ್ಟವಾದ ಕಾನೂನುಗಳು ಇರಲಿಲ್ಲ. ಉತ್ತರಾಧಿಕಾರತ್ವ ಅನುವಂಶೀಯವಾಗಿರಲಿಲ್ಲ. ಅದು ಕೇವಲ ಖಡ್ಗ ಬಲದ ಆಧಾರದ ಮೇಲೆ ನಿಂತಿತ್ತು. ಯಾರು ಬಲಿಷ್ಟರಾಗಿರುತ್ತಾರೋ ಅವರೇ ಸಿಂಹಾಸನಕ್ಕೆ ಬರುತ್ತಿದ್ದರು. ಹೀಗಾಗಿ ಉತ್ತರಾಧಿಕಾರದ ಸಂದರ್ಭಗಳಲ್ಲಿ ಸುಲ್ತಾನರ ಮಕ್ಕಳ ನಡುವೆ ನಿರಂತರವಾಗಿ ಘರ್ಷಣೆಗಳು ಸಂಭವಿಸುತ್ತಿದ್ದವು. ಈ ಘರ್ಷಣೆಯಲ್ಲಿ ರಕ್ತಪಾತ ಸಹಜವೆಂಬಂತೆ ಇತ್ತು.

೧೧. ಊಳಿಗಮಾನ್ಯ ಪದ್ಧತಿ ನಿರ್ನಾಮವಾಯಿತು:

ಟರ್ಕರು ತಮ್ಮ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಇಕ್ತಾಗಳಾಗಿ (ಪ್ರಾಂತ್ಯಗಳಾಗಿ)ವಿಭಜಿಸಿದ್ದರು.  ಪರಿಣಾಮವಾಗಿ ಸಣ್ಣಪುಟ್ಟ ಅರಸರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು. ಇಕ್ತಾಗಳನ್ನು ನೋಡಿಕೊಳ್ಳಲು ಇಕ್ತಾದಾರರನ್ನು ನೇಮಿಸಿದ್ದರು. ಇಕ್ತಾದಾರನು ಇಕ್ತಾಗಳಿಂದ ವಸೂಲಾಗುವ ಆದಾಯದಲ್ಲಿ ಸೈನ್ಯದ ನಿರ್ವಹಣೆ ಮಾಡುತ್ತ ಉಳಿದ ಆದಾಯವನ್ನು ಸುಲ್ತಾನನಿಗೆ ಸಲ್ಲಿಸಬೇಕಾಗಿತ್ತು. ಇದರಿಂದ ಕೇಂದ್ರ ಸರಕಾರದ ಆಳ್ವಿಕೆ ಬಲವಾಯಿತು. ಪ್ರಾಚೀನ ಕಾಲದಲ್ಲಿ  ಯುದ್ಧದ ಸಂದರ್ಭಗಳಲ್ಲಿ ಮಾತ್ರ ಊಳಿಗಮಾನ್ಯ ಸೈನ್ಯವನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಯುದ್ಧದ ಸಮಯದಲ್ಲಿ ಸದಾ ಸಿದ್ಧವಿದ್ದ ಸೇನೆಯನ್ನು (Permanent Standing Army)ಸಂಘಟಿಸಿ ಅದಕ್ಕೆ ಸಂಪೂರ್ಣ ತರಬೇತಿಯನ್ನು ನೀಡಿ ಯುದ್ಧಕ್ಕೆ ಸನ್ನದ್ಧಗೊಳಿಸಲಾಗುತ್ತಿತ್ತು. ಹೀಗಾಗಿ ಊಳಿಗಮಾನ್ಯ ಸೈನ್ಯವು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಊಳಿಗಮಾನ್ಯ ವ್ಯವಸ್ಥೆ (Feudal System) ಅವನತಿ ಕಾಣುವಂತಾಯಿತು.

೧೨. ಕ್ಷತ್ರಿಯರೊಂದಿಗೆ ಸೈನ್ಯಕ್ಕೆ ಬೇರೆ ಜನರ ಸೇರ್ಪಡೆ:

ಪ್ರಾಚೀನ ಹಾಗೂ ಮಧ್ಯಕಾಲೀನ ಆಡಳಿತದ ಸಮಯದಲ್ಲಿ ರಜಪೂತರಲ್ಲಿ ಕ್ಷತ್ರೀಯ ಹಿನ್ನೆಲೆಯಿಂದ ಬಂದವರು ಮಾತ್ರ ಸೈನ್ಯವನ್ನು ಸೇರಬಹುದಾಗಿತ್ತು. ದೇಶ ರಕ್ಷಣೆಯ ವಿಷಯ ಬಂದಾಗ ಕ್ಷತ್ರೀಯರು ಮಾತ್ರ ಹೋರಾಟದಲ್ಲಿ ತೊಡಗಬೇಕು ಎಂಬ ನಿಯಮವಿತ್ತು. ಬೇರೆ ಜಾತಿ ಜನಾಂಗಗಳಲ್ಲಿ ಎಷ್ಟೇ ಬಲಿಷ್ಠರು ಇದ್ದರೂ ಸಹ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಕ್ಷತ್ರೀಯರು ಯುದ್ಧದಲ್ಲಿ ಸೋತರೆ ಇಡೀ ದೇಶವೇ ಸೋತಂತೆ ಎಂಬ ತೀರ್ಮಾನಕ್ಕೆ ಬರಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಕ್ಷತ್ರೀಯರು ಮಾತ್ರವಲ್ಲ, ಬೇರೆ ಯಾವುದೇ ಜಾತಿ ಜನಾಂಗದವರು ಸೇನೆಯನ್ನು ಸೇರಬಹುದು ಎಂಬ ಪತ್ವಾವನ್ನು ಹೊರಡಿಸಿದರು. ಹೀಗಾಗಿ ಭಾರತೀಯ ಸೇನೆಯಲ್ಲಿ ಬೇರೆ-ಬೇರೆ ಜಾತಿ ಜನಾಂಗದ ಸೈನಿಕರು ಸೇರಲು ಅವಕಾಶ ಸಿಕ್ಕಂತಾಯಿತು.

2) ಆರ್ಥಿಕ ಬದಲಾವಣೆಗಳು:

ಟರ್ಕರ ದಂಡಯಾತ್ರೆಗಳ ಪರಿಣಾಮದಿಂದ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳು ಈ ಕೆಳಗಿನಂತಿವೆ.

೧. ಅಪಾರ ಪ್ರಮಾಣದ ಸಂಪತ್ತಿನ ಲೂಟಿ:

ಮಹಮ್ಮದ್‌ ಘಜ್ನಿಯ ಭಾರತದ ಮೇಲಿನ ದಾಳಿಗೆ ಕಾರಣ ಅಪಾರ ಪ್ರಮಾಣದ ಸಂಪತ್ತನ್ನು ದೋಚುವುದಾಗಿತ್ತು. ಅವನು ಸಂಪತ್ತಿನ ಮೇಲೆ ಅತಿಯಾದ ಮೋಹವುಳ್ಳವನಾಗಿದ್ದನು. ಆ ಸಂಪತ್ತಿನ ದಾಹವನ್ನು ಇಂಗಿಸಿಕೊಳ್ಳಲು ಆತ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆ ಕೈಗೊಂಡು ದೇಶದ ಅರ್ಧದಷ್ಟು ಸಂಪತ್ತನ್ನು ಲೂಟಿ ಮಾಡಿದನು. ಆದರೆ ಘೋರಿ ಮಹಮ್ಮದ್‌ ಭಾರತದ ಸಂಪತ್ತನ್ನು ಲೂಟಿ ಮಾಡುವುದು ಹಾಗೂ ಸಾಮ್ರಾಜ್ಯವನ್ನು ವಿಸ್ತರಿಸುವುದು ಈ ಎರಡು ಮೂಲಗುರಿಗಳನ್ನು ಇಟ್ಟುಕೊಂಡು ಭಾರತದ ಮೇಲೆ ದಾಳಿ ಮಾಡಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದನು. ಇವರಿಬ್ಬರ ದಾಳಿಯ ಪರಿಣಾಮವಾಗಿ ಭಾರತ  ಬಡ ರಾಷ್ಟ್ರವಾಯಿತು. ಒಂದು ಅಂದಾಜಿನ ಪ್ರಕಾರ ಅವರು ಕೊಳ್ಳೆ ಹೊಡೆದ ಚಿನ್ನ, ಬೆಳ್ಳಿ, ರತ್ನ, ವಜ್ರಗಳ ಮೌಲ್ಯ ಫೆರಿಸ್ತಾ ಹೇಳಿದಂತೆ 7 ಲಕ್ಷ ಚಿನ್ನದ ದಿನಾರು, 700 ಮಣ ಚಿನ್ನ ಹಾಗೂ ಬೆಳ್ಳಿ, 200 ಮಣ ಚಿನ್ನದ ಗಟ್ಟಿ, 200 ಮಣ ಕಚ್ಛಾ ಬೆಳ್ಳಿ, 20 ಮಣ ಆಭರಣಗಳು ಸೇರಿದ್ದವು.

೨. ಆರ್ಥಿಕ ಮುಗ್ಗಟ್ಟು:

ಟರ್ಕರು ಭಾರತವನ್ನು ಆಕ್ರಮಣ ಮಾಡಿಕೊಂಡ ನಂತರ ಭಾರತದ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡಿದರು. ನಂತರ ಭಾರತದ ಹಿಂದೂಗಳ ಮೇಲೆ ಜಜಿಯಾ ತೆರಿಗೆಗಳನ್ನು ಹೇರಿದರು. ತೆರಿಗೆ ಕೊಡಲಾಗದ ಅನೇಕ ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕರಣಗೊಂಡಿತು. ಈ ಸಂಪತ್ತನ್ನು ಅವರು ಪ್ರಜೆಗಳ ಕಲ್ಯಾಣಕ್ಕಾಗಿ ಬಳಕೆ ಮಾಡಲಿಲ್ಲ. ಬದಲಾಗಿ ಸುಖ ಭೋಗದ ಜೀವನಕ್ಕಾಗಿ ಬಳಕೆ ಮಾಡಿಕೊಂಡರು. ಹೀಗಾಗಿ ಭಾರತೀಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

೩. ತೆರಿಗೆ ಪದ್ಧತಿಯಲ್ಲಿ ಬದಲಾವಣೆ:

ಟರ್ಕರು ಮುಸ್ಲಿಂ ಆಗಿದ್ದರಿಂದ ಇಸ್ಲಾಮಿಕ್ ಕಾಯ್ದೆಯ ಪ್ರಕಾರ ತೆರಿಗೆ ವಸೂಲಿ ಮಾಡುತ್ತಿದ್ದರು.

೧. ಜಕಾತ್ ತೆರಿಗೆ(Zakat):  ಪ್ರತಿ ಮುಸಲ್ಮಾನರು ತಮ್ಮ ಆದಾಯದಲ್ಲಿ ೨% ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕಾಗಿತ್ತು.

೨. ಖಮ್ಸ್‌ (Khams):  ಯುದ್ಧದ ಸಂದರ್ಭದ ಲೂಟಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೩. ಜಜಿಯಾ(Jajiya): ಹಿಂದುಗಳು ತಮ್ಮ ರಕ್ಷಣೆಗಾಗಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೪. ಖಿರಾಜ್(Khiraj):   ರೈತರು ತಮ್ಮ ಜಮೀನಿನ ಉತ್ಪತ್ತಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಶೇಕಡ 50ರಷ್ಟು.

3) ಸಾಮಾಜಿಕ ಬದಲಾವಣೆಗಳು:

ಇಸ್ಲಾಂ ಸಂಸ್ಕೃತಿ ಹಾಗೂ ನಾಗರಿಕತೆಗಳು ಭಾರತೀಯ ಸಮಾಜದ ಮೇಲೆ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಬೀರಿ ಭಾರತೀಯ ಸಮಾಜದ ಬದಲಾವಣೆಗೆ ಕಾರಣವಾದವು. ಅವುಗಳನ್ನು ಈ ರೀತಿಯಾಗಿ ನೋಡಬಹುದು.

೧. ಭಾರತೀಯ ಸಮಾಜದ ವಿಭಜನೆಗೆ ಕಾರಣವಾಯಿತು:

ಟರ್ಕರು ಭಾರತದ ಮೇಲೆ ದಾಳಿ ಮಾಡುವ ಮೂಲಕ ಅವರು ಇಲ್ಲಿಯೇ ನೆಲೆಯೂರಿದರು. ಪರಿಣಾಮವಾಗಿ ಭಾರತೀಯ ಸಮಾಜವು ಹಿಂದೂ ಸಮಾಜ ಹಾಗೂ ಮುಸ್ಲೀಂ ಸಮಾಜ ಎಂಬ ಎರಡು ಭಾಗಗಳಾಗಿ ವಿಭಜನೆ ಹೊಂದಿತು. ಇವರಿಬ್ಬರ ನಡುವೆ ಮೇಲು-ಕೀಳು, ಕರಿಯ-ಬಿಳಿಯ ಹಾಗೂ ವರ್ಣಭೇದಗಳು ಕಾಣಿಸಿಕೊಂಡವು. ಇದು ಅತಿಯಾದಂತೆ ಪರಸ್ಪರರಲ್ಲಿ ಜಗಳ, ಕದನ ಆರಂಭಗೊಂಡು ಸೌಹಾರ್ದತೆ ಕ್ಷೀಣಿಸುತ್ತಾ ಹೋಯಿತು.

೨. ಜಾತಿ ಪದ್ಧತಿಗೆ ವಿರೋಧ ಮತ್ತು ಅದರ ಕರಾಳತೆಗೆ ಕಾರಣವಾಯಿತು:

ಇಸ್ಲಾಂ ಧರ್ಮದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಇದರಿಂದ ಹಿಂದೂ ಧರ್ಮದಲ್ಲಿದ್ದ ಜಾತಿಪದ್ಧತಿ, ವರ್ಣಾಶ್ರಮ ಧರ್ಮಕ್ಕೆ ಯಾವುದೇ ಮಾನ್ಯತೆಯನ್ನು ಸುಲ್ತಾನರು ನೀಡಲಿಲ್ಲ. ಹೀಗಾಗಿ ಜಾತಿಪದ್ಧತಿ ತನ್ನ ಜಟಿಲತೆಯನ್ನು ಕಳೆದುಕೊಂಡಿತು. ಟರ್ಕರ ಆಗಮನದ ಪರಿಣಾಮವಾಗಿ ಇಸ್ಲಾಂ ಧರ್ಮ ತನ್ನ ಪ್ರಚಾರವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಹೊರಟಿತು. ಇದರಿಂದ ಹೆದರಿದ ಹಿಂದುಗಳು ಹಿಂದೂ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಜಾತಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಇದರಿಂದ ಭಾರತದಲ್ಲಿ ಜಾತಿ ಪದ್ಧತಿ ಅಳಿಸಿ ಹೋಗುವುದರ ಬದಲಾಗಿ ಮತ್ತಷ್ಟು ತನ್ನ ಕರಾಳ ರೂಪವನ್ನು ತೋರಿಸಿತು. ಹೀಗೆ ಜಾತಿ ಪದ್ಧತಿಯು ತನ್ನ ಜಟಿಲತೆಯನ್ನು ಕಳೆದುಕೊಂಡದ್ದು ಹಾಗೂ ಅದರ ಕರಾಳತೆಯ ಪ್ರದರ್ಶನ ಎರಡೂ ಏಕಕಾಲದಲ್ಲಿ ಘಟಿಸಿದವು.

೩. ನಗರ ಪ್ರದೇಶಗಳಲ್ಲಿ ಬದಲಾವಣೆ:

 ಟರ್ಕರ ಆಡಳಿತ ಕಾಲದಲ್ಲಿ ನಗರ ಪ್ರದೇಶದಲ್ಲಿ ಎಲ್ಲಾ ರೀತಿಯ ಜನರು ವಾಸಿಸಲು ಅನುಕೂಲವಾಯಿತು. ಜಾತಿ ಧರ್ಮದ ಹಂಗಿಲ್ಲದೆ ಒಟ್ಟಿಗೆ  ವಾಸಿಸುವ ವ್ಯವಸ್ಥೆ  ಸೃಷ್ಟಿಯಾಯಿತು.  ಯಾಕೆಂದರೆ ಜಾತಿಯನ್ನು ಪೋಷಿಸುವ ಮತ್ತು ಜಾತಿ ವ್ಯವಸ್ಥೆಯನ್ನು ಕಾಪಾಡುವ ಅವಶ್ಯಕತೆ ಮುಸ್ಲಿಂ ಮುಖಂಡರಿಗೆ ಅಥವಾ ಸುಲ್ತಾನರಿಗೆ ಇರಲಿಲ್ಲ. ಅದರಲ್ಲಿ ಅವರಿಗೆ ಯಾವುದೇ ಆಸಕ್ತಿಯೂ ಇರಲಿಲ್ಲ.

೪. ವೈಭವದ ವಿಲಾಸಿ ಜೀವನ ಶೈಲಿಗೆ ಪರಿವರ್ತನೆ:

ರ್ಕರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ ನಂತರ, ಉಪಖಂಡದ ಅಪಾರ ಸಂಪತ್ತು ಅವರ ಜೀವನ ವಿಧಾನದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. ಅವರು ಗಳಿಸಿದ ಸಂಪತ್ತು ಪರ್ಷಿಯನ್ನರಂತೆಯೇ ಐಷಾರಾಮಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಅರಮನೆಗಳು, ಉತ್ತಮ ಉಡುಪುಗಳು, ಸುಗಂಧ ದ್ರವ್ಯಗಳು, ಶ್ರೀಮಂತ ಆಹಾರ ಮತ್ತು ಮನರಂಜನೆ ಗಣ್ಯ ಸಂಸ್ಕೃತಿಯ ಭಾಗವಾಯಿತು. ಸೌಕರ್ಯ ಮತ್ತು ಭವ್ಯತೆಯ ಈ ಹೊಸ ಅಭಿರುಚಿ ಕ್ರಮೇಣ ಸಾಮ್ರಾಜ್ಯದಾದ್ಯಂತ ಹರಡಿತು. ಇದು ಪ್ರಮುಖ ನಗರಗಳಲ್ಲಿನ ಅನೇಕ ಜನರ ಜೀವನಶೈಲಿಯ ಮೇಲೆ ಪ್ರಭಾವ ಬೀರಿತು.

ಕಾಲಕ್ರಮೇಣ, ಈ ಐಷಾರಾಮಿತನ ಕೆಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು. ಮದ್ಯಪಾನ, ಜೂಜಾಟ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚು ವ್ಯಾಪಕವಾಗಿ ಹರಡಿತು. ಇದು ಆಡಳಿತ ವರ್ಗ ಮತ್ತು ಹಿಂದೂ ಸಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಐತಿಹಾಸಿಕ ವೃತ್ತಾಂತಗಳು ಉಲ್ಲೇಖಿಸುತ್ತವೆ. ಜನರು ಸೌಕರ್ಯ ಮತ್ತು ಭೋಗ ಜೀವನದತ್ತ ಆಕರ್ಷಿತರಾಗುತ್ತಿದ್ದಂತೆ, ಸಾಂಪ್ರದಾಯಿಕ ನೈತಿಕ ಮೌಲ್ಯಗಳು ದುರ್ಬಲಗೊಳ್ಳಲು ಪ್ರಾರಂಭಿಸಿದವು. ಹೀಗಾಗಿ, ಟರ್ಕರ ವಿಜಯವು ಹೊಸ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸಿದ್ದಲ್ಲದೆ, ಸಾಮಾಜಿಕ ದುರ್ಗುಣಗಳ ಉದಯಕ್ಕೂ ಕಾರಣವಾಯಿತು, ಇದು ಮಧ್ಯಕಾಲೀನ ಭಾರತೀಯ ಸಮಾಜದಲ್ಲಿ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿತು.

೫. ಉಡುಗೆ ತೊಡುಗೆಗಳಲ್ಲಿ ಬದಲಾವಣೆ:

ಭಾರತಕ್ಕೆ ತುರ್ಕರು ಮತ್ತು ಇತರ ಮುಸ್ಲಿಂ ಸಮುದಾಯಗಳ ಆಗಮನವು ಹೊಸ ಮತ್ತು ಆಕರ್ಷಕ ಶೈಲಿಯ ಉಡುಗೆ ತೊಡುಗೆ, ಆಹಾರ ಪದ್ಧತಿ, ಸುಗಂಧ ದ್ರವ್ಯಗಳು ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಪರಿಚಯಿಸಿತು. ಮುಸ್ಲಿಂ ಗಣ್ಯರು ಮತ್ತು ಸೈನಿಕರು ರೇಷ್ಮೆ ನಿಲುವಂಗಿಗಳು, ಮಸ್ಲಿನ್ ಬಟ್ಟೆಗಳು, ಕಸೂತಿ ಮಾಡಿದ ಪೇಟಗಳು ಮತ್ತು ಅಲಂಕಾರಿಕ ಬೆಲ್ಟ್‌ಗಳಂತಹ ಸೊಗಸಾದ ಉಡುಪುಗಳನ್ನು ಧರಿಸುತ್ತಿದ್ದರು. ಇದು ಅವರ ನೋಟವನ್ನು ಆಕರ್ಷಕ ಮತ್ತು ಅತ್ಯಾಧುನಿಕವಾಗಿಸಿತು. ಅವರ ಸಂಸ್ಕರಿಸಿದ ಆಹಾರ ಪದ್ಧತಿಗಳು, ಸುಗಂಧ ದ್ರವ್ಯಗಳ ಬಳಕೆ ಮತ್ತು ಸುಸಂಘಟಿತ ಜೀವನ ಶೈಲಿಗಳು ಸ್ಥಳೀಯ ಜನರ ಮೇಲೆ ಸಾಂಸ್ಕೃತಿಕ ಪ್ರಭಾವವನ್ನು ಬೀರಿದವು.

ಸಾಂಪ್ರದಾಯಿಕವಾಗಿ ಸರಳವಾದ ಬಟ್ಟೆ ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಅನುಸರಿಸುತ್ತಿದ್ದ ಹಿಂದೂಗಳು ಸ್ವಾಭಾವಿಕವಾಗಿ ಈ ಹೊಸ ಪ್ರಭಾವಗಳಿಂದ ಆಕರ್ಷಿತರಾದರು. ಕಾಲಾನಂತರದಲ್ಲಿ, ಅನೇಕ ಹಿಂದೂಗಳು ವಿಶೇಷವಾಗಿ ಪಟ್ಟಣಗಳು, ವ್ಯಾಪಾರ ಕೇಂದ್ರಗಳು ಮತ್ತು ಅರಮನೆಯ ಸುತ್ತಮುತ್ತ ವಾಸಿಸುವವರು ಮುಸ್ಲಿಂ ಉಡುಗೆ ತೊಡುಗೆ, ಆಹಾರ ಮತ್ತು ಶಿಷ್ಟಾಚಾರದ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಕ್ರಮೇಣ ಈ ಅನುಕರಣೆ ಮಧ್ಯಕಾಲೀನ ಭಾರತದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಅನೇಕ ಹಿಂದೂಗಳಲ್ಲಿ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಿದವು.

೬. ಉಳಿಗಮಾನ್ಯ ಪ್ರಭುಗಳ ಸ್ಥಾನಕ್ಕೆ ಕುತ್ತಾಯಿತು:

 ಇಕ್ತಗಳೆಂದರೆ ಪ್ರಾಂತಗಳು. ಅದರ ನೇತೃತ್ವ ವಹಿಸಿದ್ದ ಇಕ್ತದಾರರು ಸರಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ಹೀಗಾಗಿ ಹಿಂದೆ ಇದೇ ಕೆಲಸ ಮಾಡುತ್ತಿದ್ದ ಉಳಿಗಮಾನ್ಯ ಮುಖಂಡರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಅವರು ಸರಕಾರದ ಸವಲತ್ತುಗಳಿಂದಲೂ ಹಾಗೂ ಜನರ ಭಯ ಭಕ್ತಿಯಿಂದಲೂ ದೂರವಾದರು.

೭. ಪರ್ದಾ ಪದ್ಧತಿಯ ಪರಿಚಯ:

ಟರ್ಕರು ಭಾರತಕ್ಕೆ ಬರುವ ಮೊದಲು ಭಾರತದಲ್ಲಿ ಪರ್ದಾ ಪದ್ಧತಿ ಜಾರಿಯಲ್ಲಿ ಇರಲಿಲ್ಲ. ಈ ಪದ್ಧತಿ ಮುಸ್ಲೀಂ ಸಮಾಜಕ್ಕೆ ಮಾತ್ರ ಮೀಸಲಾಗಿತ್ತು. ಪರಿಸ್ಥಿತಿ ಬದಲಾದಂತೆ ಹಿಂದೂಗಳು ಸಹ ಪರ್ದಾ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಕಾರಣ ಮುಸ್ಲೀಂ ಕಾಮಾಂಧರ ಕಣ್ಣಿಗೆ ಹಿಂದೂ ಸುಂದರ ಹುಡುಗಿಯರು ಬೀಳದಿರಲಿ ಎಂಬ ಉದ್ದೇಶದಿಂದ ಈ ಪದ್ಧತಿಯನ್ನು ಅನುಸರಿಸಿದರು. ಹೀಗೆ ಭಾರತೀಯ ಸಮಾಜದಲ್ಲಿ ಪರ್ದಾ ಪದ್ಧತಿ ಕಾಲಿರಿಸಿತು.

೮. ಬಾಲ್ಯವಿವಾಹ ಜನಪ್ರಿಯವಾಯಿತು:

ಮುಸ್ಲೀಂ ರಾಜರು, ಕುಲೀನರು ಹಾಗೂ ಸೈನಿಕರು ಹಿಂದೂ ಸ್ತ್ರೀಯರನ್ನು ಬಲಾತ್ಕಾರದಿಂದ ಮದುವೆಯಾಗಲು ಆರಂಭಿಸಿದರು. ಕೆಲವರು ಹಿಂದೂ ಹುಡುಗಿಯರನ್ನು ಅಪಹರಿಸಿ ಮದುವೆಯಾಗುತ್ತಿದ್ದರು. ಈ ಕಾರಣದಿಂದ ಹಿಂದೂಗಳು ತಮ್ಮ ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಗೆ ಬರುವ ಮೊದಲೇ ಮದುವೆ ಮಾಡಿ ಮುಗಿಸುತ್ತಿದ್ದರು. ಹಿಂದೆ ಕಡಿಮೆ ಪ್ರಮಾಣದಲ್ಲಿ ಜಾರಿಯಲ್ಲಿದ್ದ ಬಾಲ್ಯವಿವಾಹ ಟರ್ಕರು ಭಾರತಕ್ಕೆ ಬಂದ ನಂತರ ಅದು ಹೆಚ್ಚು ಪ್ರಚಲಿತವಾಯಿತು. ಮುಸ್ಲೀಂರಿಂದ ತಮ್ಮ ಹೆ‍ಣ್ಣು ಮಕ್ಕಳನ್ನು ರಕ್ಷಿಸಲು ಹಿಂದೂಗಳು ಹೆಣ್ಣು ಮಗು ಜನಿಸಿದ ಕೂಡಲೇ ಅದನ್ನು ಕೊಲ್ಲುವಂತಹ ಅಮಾನುಷ ಕೃತ್ಯಕ್ಕೂ ಇಳಿದರು. ಇದರಿಂದ ಹೆಣ್ಣು ಶಿಶು ಹತ್ಯೆ ಸರ್ವೇಸಾಮಾನ್ಯವಾಯಿತು.

೯. ಮಹಿಳಾ ಸ್ವಾತಂತ್ರ್ಯಕ್ಕೆ ನಿರ್ಬಂಧ:

ಟರ್ಕರ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಪುರುಷನಿಗೆ ಸರಿಸಮಾನವಾಗಿ ನಿಲ್ಲುವ ಹಕ್ಕು ಸ್ತ್ರೀಯರಿಗೆ ನಿರಾಕರಿಸಲಾಗಿತ್ತು. ಸಭೆ-ಸಮಾರಂಭಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅವರು ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಇದು ಭಾರತೀಯ ಹಿಂದೂಗಳ ಮೇಲೆ ಪ್ರಭಾವ ಬೀರಿತು. ತಾವು ಸಹ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದನ್ನು ನಿರ್ಬಂಧಿಸಿದರು. ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಕಾಲಕಳೆಯುವಂತೆ ಮಾಡಲಾಯಿತು.

೧೦. ಸತಿಸಹಗಮನ ಹಾಗೂ ಜೋಹಾರ್‌ ಪದ್ಧತಿಯ ಜನಪ್ರಿಯತೆ:

ಟರ್ಕರ ಆಕ್ರಮಣದ ಸಂದರ್ಭದಲ್ಲಿ ಸಾವಿರಾರು ಸ್ತ್ರೀಯರನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುವುದು, ಮಾರುವುದು ಹಾಗೂ ಗುಲಾಮಳನ್ನಾಗಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳು ಆರಂಭವಾದವು. ಹೀಗಾಗಿ ಹಿಂದೂ ಸ್ತ್ರೀಯರು ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಸಾಮೂಹಿಕವಾಗಿ ಅಗ್ನಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಜೋಹಾರ್‌ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಜೊತೆಗೆ ಪತಿ ತೀರಿಕೊಂಡಾಗ ವೈಯಕ್ತಿಕವಾಗಿ ಪ್ರಾಣ ಕಳೆದುಕೊಳ್ಳುವ ಸತಿ ಪದ್ಧತಿಯೂ ಜನಪ್ರಿಯವಾಯಿತು.

೧೧. ಗುಲಾಮಗಿರಿಯ ಜನನ:

ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸ್ಥಾಪನೆಯು ದೊಡ್ಡ ಪ್ರಮಾಣದ ಗುಲಾಮಗಿರಿ ವ್ಯವಸ್ಥೆಯನ್ನು ಪರಿಚಯಿಸಿತು. ಇದು ಆಡಳಿತಗಾರರಲ್ಲಿ ಪ್ರತಿಷ್ಠೆ, ಸಂಪತ್ತು ಮತ್ತು ಅಧಿಕಾರದ ಗುರುತಾಯಿತು. ಅನೇಕ ಮುಸ್ಲಿಂ ರಾಜರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಹೊಂದುವುದು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರು. ಯುದ್ಧಗಳ ಸಮಯದಲ್ಲಿ ಸೆರೆಹಿಡಿಯಲಾದ ಸೈನಿಕರು, ಗಣ್ಯರು ಮತ್ತು ರಾಜಮನೆತನದ ಸದಸ್ಯರು ಸೇರಿದಂತೆ ಅವರನ್ನು ಹೆಚ್ಚಾಗಿ ಗುಲಾಮಗಿರಿಗೆ ತಳ್ಳಲಾಗುತ್ತಿತ್ತು ಮತ್ತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡಲಾಗುತ್ತಿತ್ತು. ಈ ಗುಲಾಮ ವ್ಯಕ್ತಿಗಳನ್ನು ಮನೆಗಳು, ಮಿಲಿಟರಿ ಶಿಬಿರಗಳು, ಅರಮನೆಗಳು ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು. ಇದು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಆಡಳಿತಗಾರರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.

ಕಾಲಕ್ರಮೇಣ, ಕೆಲವು ಆಡಳಿತಗಾರರ ಅಡಿಯಲ್ಲಿ ಗುಲಾಮಗಿರಿಯು ಅಸಾಧಾರಣ ಪ್ರಮಾಣದಲ್ಲಿ ವಿಸ್ತರಿಸಿತು. ಅಲಾವುದ್ದೀನ್ ಖಿಲ್ಜಿ ಸುಮಾರು 84,000 ಗುಲಾಮರನ್ನು ಇಟ್ಟುಕೊಂಡಿದ್ದಾಗಿ ದಾಖಲಿಸಲಾಗಿದೆ. ಆದರೆ ಫಿರೋಜ್ ಷಾ ತುಘಲಕ್ ಇನ್ನೂ ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಇಟ್ಟುಕೊಂಡಿದ್ದನು. ಇವನ ಹತ್ತಿರ ಸುಮಾರು 1,80,000 ಗುಲಾಮರು ಇದ್ದರು. ಈ ಗುಲಾಮರು ಸ್ಥಳೀಯ ಸೇವೆಯಿಂದ ಕೌಶಲ್ಯಪೂರ್ಣ ಕಾರ್ಮಿಕರವರೆಗೆ ಮತ್ತು ಆಡಳಿತಾತ್ಮಕ ಕಾರ್ಯಗಳವರೆಗೆ ವ್ಯಾಪಕ ಶ್ರೇಣಿಯ ಕರ್ತವ್ಯಗಳನ್ನು ನಿರ್ವಹಿಸಿದರು. ಗುಲಾಮರನ್ನಾಗಿ ಮಾಡಿಕೊಂಡ ಜನರ ಬೃಹತ್ ಸಂಖ್ಯೆಯು ಆಡಳಿತಗಾರರ ರಾಜಕೀಯ ಅಧಿಕಾರವನ್ನು ಪ್ರತಿಬಿಂಬಿಸುತ್ತದೆ. ಆದರೆ ತಮ್ಮ ಕುಟುಂಬಗಳಿಂದ ಬಲವಂತವಾಗಿ ಕರೆದೊಯ್ಯಲ್ಪಟ್ಟವರು ಮತ್ತು ಜೀವನದುದ್ದಕ್ಕೂ ಸೇವೆ ಸಲ್ಲಿಸಲು ಒತ್ತಾಯಿಸಲ್ಪಟ್ಟವರು ಎದುರಿಸಿದ ಕಠೋರ ವಾಸ್ತವಗಳನ್ನು ಸಹ ಎತ್ತಿ ತೋರಿಸುತ್ತದೆ.

4) ಧಾರ್ಮಿಕ ಬದಲಾವಣೆಗಳು:

ಟರ್ಕರು ಭಾರತಕ್ಕೆ ಆಗಮಿಸಿದ ನಂತರ ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಅವುಗಳು ಈ ರೀತಿಯಾಗಿವೆ.

೧. ಇಸ್ಲಾಂ ಧರ್ಮದ ಪ್ರಚಾರ:

ಮುಸಲ್ಮಾನರು ಭಾರತದಲ್ಲಿ ನೆಲೆಯೂರಿದ ನಂತರ ಇಸ್ಲಾಂ ಧರ್ಮವು ಹೆಚ್ಚು ಬಲಿಷ್ಠವಾಗುತ್ತಾ ಹೊರಟಿತು.  ಅವರ ಮತಾಂತರ ಕಾರ್ಯಕ್ಕೆ ವೇಗ ಬಂದಿತು. ಏಕೆಂದರೆ ಅನೇಕ ಮುಸ್ಲೀಂ ರಾಜರುಗಳು ಹಿಂದೂಗಳಿಗೆ ಅನೇಕ ಆಸೆ ಆಮಿಷಗಳನ್ನು ಒಡ್ಡಿ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದರು. ಹಿಂದೂ ದೇವಾಲಯಗಳನ್ನು ಭಗ್ನಗೊಳಿಸಿದರು. ಕೆಲವರಂತೂ ಮೂರ್ತಿಭಂಜಕರು ಎಂಬ ಬಿರುದನ್ನೇ ಪಡೆದರು. ಹಿಂದೂಗಳ ಮೇಲೆ ಅಮಾನವೀಯ ತೆರಿಗೆಗಳನ್ನು ಹೇರಿದರು. ತೆರಿಗೆ ನೀಡಲು ಅಸಮರ್ಥರಾದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಇಸ್ಲಾಂನ ಏಕೀಶ್ವರ ವಾದವು ಅನೇಕ ಹಿಂದೂಗಳನ್ನು ಆಕರ್ಷಿಸಿತು. ಇಸ್ಲಾಂ “ರಾಜ್ಯ ಧರ್ಮ” (State Religion)ವಾಯಿತು. ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಎಲ್ಲಾ ರೀತಿಯ ಅಮಾನುಷ ಅಸಮಾನತೆಯನ್ನು ಅನುಭವಿಸಿದವರು ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ಮತಾಂತರವಾದರು. ಇದರಿಂದ ಭಾರತೀಯ ಸಮಾಜದಲ್ಲಿದ್ದ ಕೆಲವೊಂದು ಅನಿಷ್ಟ ಪದ್ಧತಿಗಳು ತೊಲಗಲು ಆರಂಭಿಸಿದವು. ಪರಿಣಾಮವಾಗಿ ಬ್ರಾಹ್ಮಣರ ಸ್ಥಾನಮಾನಗಳು ಕುಸಿದು ಹೋದವು.

೨. ಧಾರ್ಮಿಕ ಮತ್ತು ಸಾಮಾಜಿಕ ಸಹಿಷ್ಣುತೆಗೆ ಚಾಲನೆ ಸಿಕ್ಕಿತು:

ಆರಂಭದಲ್ಲಿ ಹಿಂದೂ-ಮುಸಲ್ಮಾನರಲ್ಲಿ ಸಾಕಷ್ಟು ಭಿನ್ನತೆಗಳು ಕಂಡುಬಂದವು. ಆದರೆ ಕಾಲಾನಂತರ ಅವರು ಹೊಂದಾಣಿಕೆಯ ಗುಣಗಳನ್ನು ಅಳವಡಿಸಿಕೊಂಡರು. ಮತಾಂಧತೆ ಭಾವನೆಗಳನ್ನು ತೊಲಗಿಸಿ ಸಮತಾಭಾವನೆಯನ್ನು ರೂಢಿಸಿಕೊಂಡರು. ಭಕ್ತಿಸಂತರ ಬೋಧನೆಗಳಿಂದ ಇಬ್ಬರೂ ಪ್ರಭಾವಿತರಾದರು. ಮುಸಲ್ಮಾನರ ಧಾರ್ಮಿಕ ಚಿಂತನೆಗಳು ಹಾಗೂ ಆಚರಣೆಗಳನ್ನು ಹಿಂದೂಗಳು, ಹಿಂದೂಗಳ ಧಾರ್ಮಿಕ ಚಿಂತನೆ ಹಾಗೂ ಆಚರಣೆಗಳನ್ನು ಮುಸಲ್ಮಾನರು ಅಳವಡಿಸಿಕೊಳ್ಳಲು ಆರಂಭಿಸಿದರು. ಆರಂಭದಲ್ಲಿ “ ನ ರೋಟಿ ನ ಬೇಟಿ” ಎಂಬ ನೀತಿಯನ್ನು ಅನುಸರಿಸಿದ ಹಿಂದೂ-ಮುಸಲ್ಮಾನರು ಕಾಲ ಕ್ರಮೇಣ ಮದುವೆ ಹಾಗೂ ಊಟೋಪಚಾರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡರು. ಮುಸಲ್ಮಾನರ ಉಡುಗೆ-ತೊಡುಗೆ, ಆಹಾರ ಪದ್ಧತಿಯನ್ನು ಹಿಂದೂಗಳು, ಹಿಂದೂಗಳ ಆಹಾರ ಪದ್ಧತಿ, ವೇಷ ಭೂಷಣಗಳನ್ನು ಮುಸಲ್ಮಾನರು ರೂಢಿಸಿಕೊಂಡರು.

೩. ಭಕ್ತಿ ಹಾಗೂ ಸೂಫಿ ಪಂಥಗಳ ಬೆಳವಣಿಗೆ:

ಆರಂಭದಲ್ಲಿ ಹಿಂದೂ-ಮುಸಲ್ಮಾನರ ನಡುವೆ ದೊಡ್ಡದಾದ ಧಾರ್ಮಿಕ ಕಂದಕವೇ ಏರ್ಪಟ್ಟಿತ್ತು. ಇಂತಹ ಕಂದಕವನ್ನು ದೂರಮಾಡಿ ಅವರಿಬ್ಬರಲ್ಲಿ ಸಹೋದರ ಭಾವನೆಯನ್ನು ಮೂಡಿಸಲು ಭಕ್ತಿಪಂಥ ಹಾಗೂ ಸೂಫಿ ಪಂಥಗಳು ಪ್ರಯತ್ನಿಸಿದವು. ಭಕ್ತಿಪಂಥ ಹಾಗೂ ಸೂಫಿ ಪಂಥಗಳ ಸಂತರು ದೇವರ ಏಕತೆ, ಸಮಾನತೆ, ಸರಳ ಮತಾಚರಣೆಗಳನ್ನು ಬೋಧಿಸಿದರು. ಇವುಗಳು ಹಿಂದೂ-ಮುಸ್ಲೀಂರ ಮೇಲೆ ತೀವ್ರ ಪರಿಣಾಮಗಳನ್ನು ಬೀರಿದವು. ಇವರ ಚಿಂತನೆಗಳು ಜನರ ನಡುವೆ ಸುಸ್ಥಿರ ಮನೋಭಾವನೆಯ ಬೆಳವಣಿಗೆಗೆ ಕಾರಣವಾದವು.

೪. ಬೌದ್ಧ ಧರ್ಮದ ಅವನತಿ:

ಭಾರತಕ್ಕೆ ಬಂದ ಮುಸಲ್ಮಾನರು ಭೌದ್ಧ ಧರ್ಮ ಹಾಗೂ ಅದರ ಅಹಿಂಸಾ ನೀತಿಯನ್ನು ವಿರೋಧಿಸಿದರು. ಹೀಗಾಗಿ ಮುಸಲ್ಮಾನರು ಸಾವಿರಾರು ಬೌದ್ಧರನ್ನು ಸೆರೆ ಹಿಡಿದು ಕುರಿಗಳನ್ನು ಕಡಿದಂತೆ ಕಡಿದು ಹಾಕಿದರು. ಹಿಂದೂಗಳು ಸಹ ಅಹಿಂಸಾ ನೀತಿಯನ್ನು ಒಪ್ಪಿಕೊಳ್ಳದೆ ಅದರಿಂದ ದೂರವಾದರು.

5) ಸಾಂಸ್ಕೃತಿಕ ಬದಲಾವಣೆಗಳು:

ಟರ್ಕರ ಆಗಮನದಿಂದ ಭಾರತೀಯ ಸಮಾಜದ ಸಾಂಸ್ಕೃತಿಕ ಬದಲಾವಣೆಗಳು ಈ ಕೆಳಗಿನಂತಿವೆ.

೧. ಉರ್ದು ಭಾಷೆಯ ಉಗಮ:

ಮುಸ್ಲೀಂ ಆಕ್ರಮಣಕಾರರು ಅಂದು ಪರ್ಶಿಯನ್‌ ಹಾಗೂ ಅರೇಬಿಕ್‌ ಭಾಷೆಗಳನ್ನು ಮಾತನಾಡುತ್ತಿದ್ದರು. ಹಾಗೆಯೇ ಹಿಂದೂಗಳು ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಿದ್ದರು. ಭಾರತಕ್ಕೆ ಬಂದ ಮುಸಲ್ಮಾನರು ಹಾಗೂ ಭಾರತೀಯ ಹಿಂದೂಗಳು ಇವರಿಬ್ಬರಿಗೂ ಒಂದೇ ಭಾಷೆಯ ಅಗತ್ಯವಿತ್ತು. ಹೀಗಾಗಿ ಹಿಂದೂ-ಮುಸ್ಲೀಂರ ಸಮ್ಮಿಲನದ ಫಲಶೃತಿಯಾಗಿ ಉರ್ದುಭಾಷೆ ಉಗಮಗೊಂಡಿತು. ಉರ್ದು ಜನರ ಆಡುಭಾಷೆಯಾಗಿ ಜನಪ್ರಿಯತೆಗಳಿಸಿತು. ಅನೇಕ ಮುಸ್ಲೀಂ ಕವಿಗಳು ಹಿಂದಿಯಲ್ಲಿಯೂ ಹಾಗೂ ಅನೇಕ ಹಿಂದೂ ಕವಿಗಳು ಉರ್ದುವಿನಲ್ಲಿ ಕವಿತೆ, ಗೀತೆ ಹಾಗೂ ಕೃತಿಗಳನ್ನು ರಚಿಸಿದರು.

೨. ಹಿಂದವಿ ಭಾಷೆಯ ಬೆಳವಣಿಗೆ :

ಹಿಂದವಿ ಭಾಷೆಯು ೧೦ ರಿಂದ ೧೩ನೇ ಶತಮಾನಗಳ ಸುಮಾರಿಗೆ ದೆಹಲಿ ಪ್ರದೇಶದಲ್ಲಿ ಮಾತನಾಡುತ್ತಿದ್ದ ಅಪಭ್ರಂಶ ಉಪಭಾಷೆಗಳಿಂದ ಹೊರಹೊಮ್ಮಿತು. ಇದೇ ಹೊತ್ತಿನಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಯೂ ಪ್ರಾರಂಭವಾಗಿ ಇಂಡೋ ಆರ್ಯನ್‌ ಉಪಭಾಷೆಗಳನ್ನು ಪರ್ಶಿಯನ್‌ ಮತ್ತು ಅರೇಬಿಕ್‌ ಪದಗಳೊಂದಿಗೆ ಬೆರೆಸಿ ಮಾತನಾಡುವ ಪ್ರಕ್ರಿಯೆಯಿಂದಾಗಿ ಹಿಂದವಿ ಸಾಕಷ್ಟು ಬೆಳೆಯಿತು. ಪರ್ಶಿಯನ್‌ ಆಡಳಿತಗಾರರು ಮತ್ತು ಅಮೀರ್‌ ಖುಸ್ರು ಮುಂತಾದ ಕವಿಗಳು ವಿಶಿಷ್ಟವಾಗಿ ಬೆಳವಣಿಗೆಯಾಗುತ್ತಿರುವ ಈ ಭಾಷೆಯನ್ನು  ಹಿಂದವಿ ಅಥವಾ ದಹ್ಲವಿ ಎಂದು ಕರೆದರು. ಇದು ಆಧುನಿಕ ಹಿಂದಿ ಮತ್ತು ಉರ್ದುವಿನ ಹಿಂದಿನ ಬೆಳವಣಿಗೆಯ ಆರಂಭಿಕ ಹಂತವಾಗಿದೆ.(ಪೂರ್ವಜವಾಗಿದೆ).  

೩. ಇಂಡೋ-ಸಾರ್ಸೆನಿಕ್‌ ಶೈಲಿಯ ಉದಯ:

ಹಿಂದೂ ಮುಸ್ಲೀಂ ಸಂಸ್ಕೃತಿಯ ಬೆರೆಕೆಯ ಪರಿಣಾಮವಾಗಿ ಇಂಡೋ-ಇಸ್ಲಾಮಿಕ್‌ ಅಥವಾ ಇಂಡೋ-ಸಾರ್ಸೆನಿಕ್‌ ಎಂಬ ಹೊಸಶೈಲಿ ಉಗಮಗೊಂಡಿತು. ಕಾಲಾನಂತರ ಹಿಂದೂಸ್ತಾನಿ ಸಂಗೀತವು ಸಹ ಬೆಳವಣಿಗೆಯಾಯಿತು. ಮುಸಲ್ಮಾನರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿ ಅದಕ್ಕೆ ಇಂಡೋ- ಸಾರ್ಸೆನಿಕ್‌ ಕಲೆಯ ರೂಪವನ್ನು ನೀಡಿದರು.

೪. ಹಿಂದೂ ಹಬ್ಬಗಳ ಮತ್ತು ಸಂಪ್ರದಾಯ ಆಚರಣೆಗಳ ಅನುಸರಣೆ:

ಮುಸಲ್ಮಾನರು ಹಿಂದೂ ಧಾರ್ಮಿಕ ಪದ್ಧತಿ ಹಾಗೂ ರೂಢಿ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು. ಉದಾ: ಅಖೀಬಾ ಹಾಗೂ ಬಿಸ್ಮಿಲ್ಲಾ ಪದ್ಧತಿಯ ಆಚರಣೆಗಳು, ಹಿಂದೂಗಳ ಚೌಲಕರ್ಮ ಹಾಗೂ ಉಪನಯನ ಕಾರ್ಯಕ್ರಮ ನಡೆಸುವ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಶಿವರಾತ್ರಿ ಹಬ್ಬದಂತೆ ಷಬ್-ಎ-ಬರಾತ್‌ ಹಬ್ಬವನ್ನು ಆಚರಿಸುತ್ತಿದ್ದರು. ಹಿಂದೂಗಳಲ್ಲಿದ್ದ ಸಾಧು ಸಂತರನ್ನು ಪೂಜಿಸುವುದು, ಅವರ ಸಮಾಧಿ ಸ್ಥಳಗಳಿಗೆ ಭೇಟಿ ನೀಡುವುದು ಮುಂತಾದ ಪದ್ಧತಿಗಳನ್ನು ಮುಸಲ್ಮಾನರೂ ಸಹ ಅಳವಡಿಸಿಕೊಂಡರು. ಹಿಂದೂ ಚಿಂತನೆಗಳು ಸಹ ಮುಸಲ್ಮಾನರಲ್ಲಿ ಆಳವಾಗಿ ಬೇರೂರಿದವು. ಕೆಲವು ಮುಸಲ್ಮಾನರು ಮಾತ್ರ ಬಹುಪತ್ನಿತ್ವವನ್ನು ಕೈಬಿಟ್ಟು ಏಕಪತ್ನಿ ಪದ್ಧತಿಯನ್ನು ಅನುಸರಿಸಿದರು. ಹಿಂದೂ ವಿವಾಹ ಪದ್ಧತಿಯಂತೆ ಮುಸಲ್ಮಾನರೂ ಸಹ ತಮ್ಮಲ್ಲಿ ಅನುಸರಿಸಿದರು. ಹಿಂದೂ ರಾಜರು ತುಲಾಭಾರ ಮಾಡಿಸಿಕೊಳ್ಳುವಂತೆ ಮುಸಲ್ಮಾನ ರಾಜರು ಸಹ ತುಲಾಭಾರವನ್ನು ಮಾಡಿಸಿಕೊಳ್ಳಲು ಆರಂಭಿಸಿದರು.

೫. ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳ ಅವನತಿ:

ಪ್ರಾಚೀನ ಕಾಲದ ಪ್ರಸಿದ್ಧ ಕಲಿಕಾ ಕೇಂದ್ರಗಳಾದ ನಲಂದಾ, ತಕ್ಷಶಿಲಾ, ವಿಕ್ರಮಶಿಲಾ, ಉಜ್ಜಯಿನಿ, ಕಾಶಿ ಮುಂತಾದವುಗಳು ಟರ್ಕರ ದಾಳಿಗೆ ಸಿಕ್ಕು ಹೇಳ ಹೆಸರಿಲ್ಲದಂತೆ ನಾಶವಾದವು. ಅಲ್ಲಿನ ಅಮೂಲ್ಯ ಗ್ರಂಥ ಭಂಡಾರವನ್ನು ಟರ್ಕರು ಬೆಂಕಿಗೆ ಹಾಕಿ ಸುಟ್ಟರು.

೬.  ʻಘಜ್ನಿʼ ನಗರಕ್ಕೆ  ಆಧುನಿಕತೆಯ ಸ್ಪರ್ಶ:

ಘಜ್ನಿಯ ಮಹಮ್ಮದ್ ಆಳ್ವಿಕೆಯಲ್ಲಿ ಘಜ್ನಿ ನಗರವು ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು. ಇದಕ್ಕೆ ಹೆಚ್ಚಾಗಿ ಅವನು ಭಾರತದಿಂದ ಲೂಟಿ ಮಾಡಿದ ಅಪಾರ ಸಂಪತ್ತಿನ ಹಣಕಾಸು ಒದಗಿಸಿದನು. ಈ ನಿಧಿಯಿಂದ, ಘಜ್ನಿಯನ್ನು ಸುಂದರಗೊಳಿಸಲಾಯಿತು ಮತ್ತು ಅದರ ಕಾಲಕ್ಕೆ ತಕ್ಕ ಶಕ್ತಿ, ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುವ ಭವ್ಯವಾದ, ಪ್ರವರ್ಧಮಾನಕ್ಕೆ ಬಂದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಯಿತು. ಘಜ್ನವಿಡ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಲು ಭವ್ಯವಾದ ಅರಮನೆಗಳು, ಎತ್ತರದ ಮಸೀದಿಗಳು, ಉದ್ಯಾನಗಳು, ಅಮೃತಶಿಲೆಯ ರಚನೆಗಳು ಮತ್ತು ಕಲಾತ್ಮಕ ಸ್ಮಾರಕಗಳನ್ನು ನಿರ್ಮಿಸಲಾಯಿತು. ವಿವಿಧ ಪ್ರದೇಶಗಳಿಂದ ನುರಿತ ವಾಸ್ತುಶಿಲ್ಪಿಗಳು, ಕುಶಲಕರ್ಮಿಗಳು, ಕವಿಗಳು ಮತ್ತು ವಿದ್ವಾಂಸರನ್ನು ಆಹ್ವಾನಿಸಲಾಯಿತು, ಘಜ್ನಿಯನ್ನು ಸಂಸ್ಕೃತಿ, ಕಲಿಕೆ ಮತ್ತು ಆಡಳಿತದ ರೋಮಾಂಚಕ ಕೇಂದ್ರವನ್ನಾಗಿ ಮಾಡಲಾಯಿತು. ಹೀಗಾಗಿ, ಭಾರತದಿಂದ ತೆಗೆದುಕೊಂಡ ಹೋದ (ಲೂಟಿ ಮಾಡಿದ) ಸಂಪತ್ತು ಘಜ್ನಿ ಎಂಬ ನಗರಕ್ಕೆ ಹೊಸ, ಆಧುನಿಕ ಮತ್ತು ಭವ್ಯವಾದ ಗುರುತನ್ನು ಮತ್ತು ಆಧುನಿಕ ಸ್ಪರ್ಶವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅದನ್ನು ಮಧ್ಯಕಾಲೀನ ಇಸ್ಲಾಮಿಕ್ ಪ್ರಪಂಚದ ಅತ್ಯಂತ ವೈಭವದ  ರಾಜಧಾನಿಗಳಲ್ಲಿ ಒಂದನ್ನಾಗಿ ಪರಿವರ್ತಿಸಲಾಯಿತು.

ಉಪಸಂಹಾರ

ಟರ್ಕರ ಆಡಳಿತದ ಅವಧಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ನಡುವಿನ ಪರಸ್ಪರ ಸಂಬಂಧವು ಸಹಕಾರ ಮತ್ತು ಸಂಘರ್ಷ ಎರಡನ್ನೂ ತಂದಿತು. ಹಲವಾರು ಕಾರಣಗಳಿಂದ ಹಿಂದೂ ಮುಸ್ಲೀಂ ಸಂಸ್ಕೃತಿಗಳು ಸಂಪೂರ್ಣ ಬೆರೆಯಲಿಲ್ಲ.

ಅನೇಕ ಮುಸ್ಲಿಂ ಆಡಳಿತಗಾರರು ಮತಾಂತರವನ್ನು ಪ್ರೋತ್ಸಾಹಿಸುವ ನೀತಿಗಳನ್ನು ಅನುಸರಿಸಿದರು, ಹಿಂದೂ ಸಮಾಜದ ಮೇಲೆ ಕುರಾನ್‌ನ ತತ್ವಗಳನ್ನು ಜಾರಿಗೊಳಿಸಿದರು, ಗೋಹತ್ಯೆಯನ್ನು ಅನುಮತಿಸಿದರು ಮತ್ತು ಕೆಲವೊಮ್ಮೆ ಹಿಂಸೆ ಅಥವಾ ತಾರತಮ್ಯಕ್ಕೆ ಕಾರಣವಾಗುವ ಇಸ್ಲಾಮಿಕ್ ಕಾನೂನುಗಳನ್ನು ಹೇರಿದರು. ಈ ಅಂಶಗಳು ಸಮಾಜದ ಉನ್ನತ ಹಂತಗಳಲ್ಲಿ ಪೂರ್ಣ ಸಾಂಸ್ಕೃತಿಕ ಸಾಮರಸ್ಯಕ್ಕೆ ಅಡೆತಡೆಗಳನ್ನು ಸೃಷ್ಟಿಸಿದವು.

ಆದಾಗ್ಯೂ, ಟರ್ಕರ ಆಕ್ರಮಣವು ಭಾರತದಲ್ಲಿ ಹೊಸ ರಾಜಕೀಯ ಮತ್ತು ಸಾಂಸ್ಕೃತಿಕ ಯುಗದ ಆರಂಭವನ್ನು ಗುರುತಿಸಿತು. ದೆಹಲಿ ಸುಲ್ತಾನರು ಭಾರತೀಯ ಆಡಳಿತವನ್ನು ಮರುರೂಪಿಸಿದ ಬಲವಾದ, ಕೇಂದ್ರೀಕೃತ ಆಡಳಿತವನ್ನು ಪರಿಚಯಿಸಿದರು. ಅವರ ಆಗಮನವು ಇಸ್ಲಾಂ ಧರ್ಮದ ಹರಡುವಿಕೆಯನ್ನು ಪ್ರೋತ್ಸಾಹಿಸಿತು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಮಾರ್ಗಗಳನ್ನು ತೆರೆಯಿತು. ಈ ಅವಧಿಯು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ನಗರಾಭಿವೃದ್ಧಿ ಮತ್ತು ಮಿಲಿಟರಿ ತಂತ್ರಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಯಿತು, ಇದರಲ್ಲಿ ಅಶ್ವಸೈನ್ಯದ ಬಳಕೆ, ಹೊಸ ಶಸ್ತ್ರಾಸ್ತ್ರಗಳು ಮತ್ತು ಮುಂದುವರಿದ ಯುದ್ಧ ತಂತ್ರಗಳು ಸೇರಿವೆ. ಟರ್ಕರ ಆಕ್ರಮಣದಿಂದಾಗಿ ಮೇಲಿನ ಸ್ತರದಲ್ಲಿ ಹಿಂದೂ ಮತ್ತು ಮುಸ್ಲಿಂರ ನಡುವೆ ಘರ್ಷಣೆಯ ವಾತಾವರಣವಿತ್ತು. ಆದರೆ ಕೆಳಸ್ತರದಲ್ಲಿ (ಆಂತರ್ಯದಲ್ಲಿ) ಸಾಮಾನ್ಯ ಹಿಂದು ಮತ್ತು ಮುಸ್ಲಿಂರ ನಡುವೆ ಒಡನಾಟ, ಪರಸ್ಪರ ನಂಬಿಕೆ, ವಿಶ್ವಾಸಗಳು ನೆಲೆಯೂರ ತೊಡಗಿದವು. ಇದು ವಿಶಿಷ್ಟ ಪರಸ್ಪರ ಸಾಂಸ್ಕೃತಿಕ ಅನುಭವಕ್ಕೆ ಅಡಿಪಾಯ ಹಾಕಿತು. ಹೀಗಾಗಿ, ಟರ್ಕರ ಪ್ರಭಾವವು ಭಾರತದ ರಾಜಕೀಯ ರಚನೆ, ಸಾಂಸ್ಕೃತಿಕ ಜೀವನ ಮತ್ತು ಸಾಮಾಜಿಕ ವಿಕಾಸದ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿತು.

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ

ಪೀಠಿಕೆ

ಪ್ರಪಂಚದ ಅತ್ಯಂತ ಹಳೆಯ ನಗರ ನಾಗರೀಕತೆಯಲ್ಲಿ ಸಿಂಧೂ ಕಣಿವೆ ನಾಗರಿಕತೆಯು ಒಂದಾಗಿದೆ. ಇದು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ. ನಾವು ಮಾತೃ ದೇವತೆ, ಪಶುಪತಿ, ಪ್ರಕೃತಿಯ ಆರಾಧನೆಗಳು ಮತ್ತು ಶವ ಸಂಸ್ಕಾರ ಪದ್ಧತಿಗಳ ಮೂಲಕ ಅವರ ಧಾರ್ಮಿಕ ಜೀವನದ ಮಹತ್ವದ ಅಂಶಗಳನ್ನು ತಿಳಿಯುತ್ತೇವೆ.

ಧಾರ್ಮಿಕ ಜೀವನದ ಪ್ರಮುಖ ಅಂಶಗಳು

  1. ಮಾತೃದೇವತೆಯ ಆರಾಧನೆ

ಮಾತೃದೇವತೆ ಸಿಂಧೂ ಜನರ ಪ್ರಧಾನ ಆರಾಧನಾ ದೇವತೆಯಾಗಿದ್ದಿತು. ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ದೊರೆತಿರುವ ಸ್ತ್ರೀಮೂರ್ತಿಗಳು ಇದನ್ನು ಪುಷ್ಠಿಕರಿಸುತ್ತಿವೆ. ಮಾತೃದೇವತೆಯನ್ನು ಇವರು ಶಕ್ತಿ, ದುರ್ಗಿ, ಅಮ್ಮ ಹಾಗೂ ಅಂಬೆ ಎಂಬ ವಿವಿಧ ಹೆಸರುಗಳಿಂದ ಪೂಜಿಸುತ್ತಿದ್ದರು. ಮಾತೃ ದೇವತೆಯ ಆರಾಧನೆ, ಫಲವತ್ತತೆ ಮತ್ತು ಮಾತೃತ್ವದ ಸಂಕೇತವಾಗಿ ಪೂಜಿಸಲ್ಪಟ್ಟಿದೆ. ಈ ಆರಾಧನೆಯು ಅವರ ಸಮಾಜದಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ತೋರಿಸುತ್ತದೆ.

  1. ಪಶುಪತಿಯ ಆರಾಧನೆ

ಸಿಂಧೂ ಕಣಿವೆಯ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ವ್ಯಕ್ತಿ ಪಶುಪತಿ, ಆಗಾಗ್ಗೆ ಯೋಗಿ ಎಂದು ಚಿತ್ರಿಸಲಾಗಿದೆ. ಹರಪ್ಪಾ, ಮೊಹೆಂಜೋದಾರೋ ಮತ್ತು ಕಾಲಿಬಂಗನ್‌ನ ಮುದ್ರೆಗಳು ಪದ್ಮಾಸನದಲ್ಲಿ ಕುಳಿತಿರುವ ಮೂರು ಕೊಂಬಿನ ಯೋಗಿಯ ಚಿತ್ರಗಳನ್ನು ಬಹಿರಂಗಪಡಿಸುತ್ತವೆ. ಈ ಯೋಗಿಯು ತಲೆಯಲ್ಲಿ ಮೂರು ಕೊಂಬುಗಳನ್ನು ಹೊಂದಿದ್ದು ಕೈಯಲ್ಲಿ ತ್ರಿಶೂಲ ಹಾಗೂ ನಾಲ್ಕು ಕೈಗಳಿವೆ.  .ಯೋಗಿಯ ಸುತ್ತಲೂ ವಿವಿಧ ಪ್ರಾಣಿಗಳು ಸುತ್ತುವರಿದಿದೆ. ವಿದ್ವಾಂಸರು ಈ ಯೋಗಿಯನ್ನು ʻಪಶುಪತಿ’ ಅಥವಾ ʻತ್ರಿಮೂರ್ತಿ’ ಎಂದು ಉಲ್ಲೇಖಿಸಿದ್ದಾರೆ.

  1. ಪ್ರಕೃತಿ ಮತ್ತು ಪ್ರಾಣಿಗಳ ಆರಾಧನೆ

ಸಿಂಧೂ ಜನರು ಪ್ರಕೃತಿ ಹಾಗೂ ಪ್ರಾಣಿಗಳ ಆರಾಧಕರಾಗಿದ್ದರು. ಅವರು ಅವುಗಳ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದರು, ಅವರು ಬೆಂಕಿ, ನದಿಗಳು, ಭೂಮಿ ಮತ್ತು ಆಕಾಶವನ್ನು ಪ್ರತಿನಿಧಿಸುವ ವಿವಿಧ ನೈಸರ್ಗಿಕ ದೇವತೆಗಳನ್ನು ಸಾಮಾನ್ಯವಾಗಿ ಭಯ ಮತ್ತು ಭಕ್ತಿಯ ಮಿಶ್ರಣದಿಂದ ಪೂಜಿಸಿದರು. ಗೂಳಿಯನ್ನು ಪವಿತ್ರವೆಂದು ಪರಿಗಣಿಸಿದ್ದರು. ಇದು ಶಕ್ತಿ ಮತ್ತು ಫಲವತ್ತತೆಯನ್ನು ಸಂಕೇತಿಸುತ್ತದೆ. ಪಾರಿವಾಳಗಳಂತಹ ಪಕ್ಷಿಗಳು ಸಹ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದವು, ಜೊತೆಗೆ ಅಶ್ವತ್ಥ ಮರವನ್ನು ಪವಿತ್ರ ಮರವೆಂದು ನಂಬಿದ್ದರು. ಇದು ಪ್ರಾಣಿಗಳು ಮತ್ತು ಪ್ರಕೃತಿಯೊಂದಿಗೆ ನಾಗರಿಕತೆಯ ಆಳವಾದ ಸಂಬಂಧವನ್ನು ಸೂಚಿಸುತ್ತದೆ, ಅಲ್ಲದೇ ಆಧ್ಯಾತ್ಮಿಕ ಅರ್ಥವನ್ನು ದ್ವನಿಸುತ್ತದೆ.

  1. ಶವಸಂಸ್ಕಾರದ ಆಚರಣೆಗಳು

ಸಿಂಧೂ ಕಣಿವೆ ನಾಗರಿಕತೆಯ ಜನರು ವಿಶಿಷ್ಟವಾದ ಶವಸಂಸ್ಕಾರ ಪದ್ಧತಿಗಳನ್ನು ಹೊಂದಿದ್ದರು. ಇದು ಜೀವನ, ಸಾವು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಗಳನ್ನು ಪ್ರದರ್ಶಿಸುತ್ತದೆ. ಹರಪ್ಪಾದಲ್ಲಿ ಮಾರ್ಟಿಮರ್ ವೀಲರ್ ನೇತೃತ್ವದ ಉತ್ಖನನವು ಸತ್ತವರ ಸಂಸ್ಕಾರದ ಬಗ್ಗೆ ಅವರು ಅನುಸರಿಸುತ್ತಿದ್ದ ವಿವಿಧ ವಿಧಾನಗಳನ್ನು ತಿಳಿಸುತ್ತದೆ. ಇಲ್ಲಿ ಸುಮಾರು 67 ಗೋರಿಗಳನ್ನು ಉತ್ಕನನ ಮಾಡಿದ್ದು ಪ್ರತಿಯೊಂದು ಅಭ್ಯಾಸ ಯೋಗ್ಯವಾಗಿದೆ.

  1. ಸತ್ತನಂತರ ದೇಹಗಳನ್ನು ರಣಹದ್ದುಗಳು ಮತ್ತು ಕಾಗೆಗಳಿಗೆ ತಿನ್ನಲು ಬಿಡುತ್ತಿದ್ದರು. ಉಳಿದ ಮೂಳೆಗಳನ್ನು ನಂತರ ಸಮಾಧಿ ಮಾಡುತ್ತಿದ್ದರು.
  2. ಮತ್ತೆ ಕೆಲವು ಶವಗಳನ್ನು ಸುಡುತಿದ್ದರು. ಅದರ ಚಿತಾಭಸ್ಮವನ್ನು ಮಡಿಕೆಯಲ್ಲಿ ಇರಿಸಿ ನಂತರ ಅದನ್ನು ಸಮಾಧಿಯಲ್ಲಿ ಹೂಳುತ್ತಿದ್ದರು.
  3. ಕೆಲವು ದೇಹಗಳನ್ನು ಸಮಾಧಿ ಮಾಡುತ್ತಿದ್ದು, ನಂತರ ನಿರ್ದಿಷ್ಟ ವಿಧಿವಿಧಾನಗಳ ಪ್ರಕಾರ ದಹನ ಮಾಡುತ್ತಿದ್ದರು. ಒಂದೇ ಸಮಾಧಿಯಲ್ಲಿ ಎರಡು ದೇಹಗಳನ್ನು ಸುಡುವ ನಿದರ್ಶನಗಳನ್ನು ಲೋಥಾಲ್‌ನಲ್ಲಿ ಗಮನಿಸಬಹುದು.

ಈ ಅಭ್ಯಾಸಗಳು ಸಾವಿನ ಸಂಕೀರ್ಣ ತಿಳುವಳಿಕೆಯನ್ನು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ.

ಉಪಸಂಹಾರ

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನವು ಪ್ರಕೃತಿಯೊಂದಿಗೆ ಆಳವಾಗಿ ಬೇರೂರಿರುವ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಮಾತೃ ದೇವತೆ ಮತ್ತು ಪಶುಪತಿಯಂತಹ ದೇವತೆಗಳ ಆರಾಧನೆ ಮತ್ತು ಸಂಕೀರ್ಣ ಸಮಾಧಿ ಆಚರಣೆಗಳ ಮೂಲಕ ಅವರ ಧಾರ್ಮಿಕ ಜೀವನದ ವಿವಿಧ ಮಗ್ಗಲುಗಳ ಪರಿಚಯವಾಗುತ್ತದೆ. ಜೊತೆಗೆ ಇತಿಹಾಸದ ಅತ್ಯಂತ ಆಕರ್ಷಕ ಸಂಸ್ಕೃತಿಗಳ ಧಾರ್ಮಿಕ ಆಧ್ಯಾತ್ಮಿಕ ಪ್ರಪಂಚದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೇವೆ.

CSS to this text in the module Advanced settings.