
ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ
ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ನವೀನ ಶೈಲಿಯೊಂದು ಹುಟ್ಟಿಕೊಂಡಿತು. ಇಂತಹ ಶೈಲಿಯನ್ನು ‘ದ್ರಾವಿಡ ಶೈಲಿ’ ಎಂದು ಹೆಸರಿಸಲಾಗಿದೆ. ದ್ರಾವಿಡ ಶೈಲಿಯನ್ನಾದರಿಸಿ ಉತ್ತಮ ಕಲಾಸ್ಮಾರಕಗಳು ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡವು ಪಲ್ಲವರ ವಾಸ್ತುಶಿಲ್ಪವನ್ನು ಅದರ ಬೆಳವಣಿಗೆಗೆ ಅನುಗುಣವಾಗಿ 2 ಭಾಗಗಳಲ್ಲಿ ವಿಂಗಡಿಸಬಹುದು.
1. ಗುಹಾ ದೇವಾಲಯಗಳು,
2. ದೇವಾಲಯಗಳು,
1. ಗುಹಾ ದೇವಾಲಯಗಳು:
ಗುಹಾ ದೇವಾಲಯಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ನೋಡಬಹುದು.
ಎ) ಸ್ತಂಭಮಂಟಪಗಳು,
ಬಿ) ಏಕಶಿಲೆಯ ದೇವಾಲಯಗಳು.
ಎ) ಸ್ತಂಭಮಂಟಪಗಳು:
1ನೇ ಮಹೇಂದ್ರವರ್ಮನ ಕಾಲದಲ್ಲಿ ಈ ಶೈಲಿಯು ಬೆಳವಣಿಗೆ ಹೊಂದಿದ್ದರಿಂದ ಮಹೇಂದ್ರವರ್ಮನ ಶೈಲಿಯೆಂದು ಸಹ ಕರೆಯಲಾಗಿದೆ. ಸ್ತಂಭ ಮಂಟಪಗಳ ಗುಹಾದೇವಾಲಯಗಳು ಮಹಾಬಲಿಪುರಂನಲ್ಲಿರುವ 100 ಆಡಿ ಎತ್ತರದಲ್ಲಿ ಹಬ್ಬಿರುವ ಶಿಲಾಬೆಟ್ಟದಲ್ಲಿ ಕಂಡುಬರುತ್ತವೆ. ಸ್ತಂಭ ಮಂಟಪಗಳ ನಿರ್ಮಾಣಕ್ಕೆ ಇಟ್ಟಿಗೆ, ಮರ, ಲೋಹ ಅಥವಾ ಗಾರೆಯನ್ನು ಬಳಸಿರುವುದಿಲ್ಲ. ಸರಳವಾದ ಸ್ತಂಭಮಂಟಪಗಳಾಗಿದ್ದು ಒಂದು ಅಥವಾ ಎರಡು ಗರ್ಭಗೃಹಗಳನ್ನು ಒಳಗೊಂಡಿವೆ. ಈ ಶೈಲಿಯ ಪ್ರಮುಖ ಲಕ್ಷಣವೆಂದರೆ ಸ್ತಂಭಮಂಟಪಗಳ ಮುಂಭಾಗ ಏಳು ಅಡಿಗಳ ಸ್ತಂಭಗಳ ಸಾಲನ್ನು ಒಳಗೊಂಡಿರುವುದು.
ಬಿ) ಏಕಶಿಲಾ ದೇವಾಲಯಗಳು:
ಈ ಶೈಲಿಯು ನರಸಿಂಹವರ್ಮನ್ ಕಾಲದಲ್ಲಿ ಬೆಳವಣಿಗೆಯಾದ ಕಾರಣ ನರಸಿಂಹವರ್ಮನ್ ಶೈಲಿಯೆಂದೇ ಹೆಸರಾಗಿದೆ. ಈ ಶೈಲಿಯಲ್ಲಿ ಕೆತ್ತಲ್ಪಟ್ಟ ಮಂಟಪಗಳು ಮಹಾಬಲಿಪುರಂ ನಲ್ಲಿ ಕಂಡುಬರುತ್ತವೆ. ಅಂತಹ ಪ್ರಮುಖ 8 ರಥಗಳೆಂದರೆ, ಭೀಮ, ಅರ್ಜುನ, ಧರ್ಮರಾಯ, ನಕುಲ, ಸಹದೇವ ಇವು ಪಂಚಪಾಂಡವರ ಹೆಸರಿನಲ್ಲಿದ್ದರೆ, ಉಳಿದೆರೆಡು ರಥಗಳೆಂದರೆ ಗಣೇಶ ರಥ ಮತ್ತು ಒಳ್ಳೆಯಾನ್ ಕುಟ್ಟಿರಥ ಅತೀ ಉದ್ದವಾದ ಮತ್ತು ಪೂರ್ಣಗೊಂಡ ರಥವೆಂದರೆ ಧರ್ಮರಾಜರಥ. ಇದರಲ್ಲಿ ಪಲ್ಲವ ಶೈಲಿಯ ಲಕ್ಷಣಗಳು ಕಂಡುಬರುತ್ತವೆ. ಭೀಮ, ಗಣೇಶ ಮತ್ತು ಸಹದೇವ ರಥಗಳನ್ನು ಚಚೌಕ ಆಕಾರದಲ್ಲಿ ಕೆತ್ತಲಾಗಿದೆ. ಎರಡು ಮತ್ತು ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಬ್ರೌಪದಿ ರಥವು ಅತ್ಯಂತ ಚಿಕ್ಕ ರಥವಾಗಿದ್ದರೆ, ಭೀಮರಥ ಅತ್ಯಂತ ದೊಡ್ಡ ರಥವಾಗಿದೆ. ಪ್ರತಿಯೊಂದು ರಥವನ್ನು ಒಂದೇ ಆಖಂಡ ಶಿಲೆಯಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದು ರಥವು ಒಂದು ದೇವಾಲಯದ ವಿನ್ಯಾಸವನ್ನು ಹೊಂದಿದೆ.
2. ದೇವಾಲಯಗಳು:
ಪಲ್ಲವರ ಕಾಲದ ದೇವಾಲಯಗಳನ್ನು
ಎ)ರಾಜಸಿಂಹ ಶೈಲಿ,
ಬಿ)ಅಪರಾಜಿತ ಶೈಲಿಯ ದೇವಾಲಯಗಳೆಂದು ವಿಂಗಡಿಸಿ ನೋಡಬಹುದು.
ಎ) ರಾಜಸಿಂಹಶೈಲಿ:
ರಾಜಸಿಂಹನು ಈ ಶೈಲಿಯ ಕರ್ತೃವಾಗಿದ್ದನು. ಈ ಶೈಲಿಯ ಕಲಾಕೃತಿಗಳೆಂದರೆ ಮಹಾಬಲಿಪುರಂನಲ್ಲಿನ ತೀರದ ದೇವಾಲಯ, ಈಶ್ವರ ದೇವಾಲಯ ಮತ್ತು ಮುಕುಂದ ದೇವಾಲಯಗಳು, ಕಂಚಿಯಲ್ಲಿ ನಿರ್ಮಾಣ ಗೊಂಡಿರುವ ಕೈಲಾಸನಾಥ ದೇವಾಲಯ ಮತ್ತು ವೈಕುಂಟ ಪೆರುಮಾಳ್ ದೇವಾಲಯಗಳು ಈ ಶೈಲಿಯಲ್ಲಿನ ಎತ್ತರದ ಗೋಪುರಗಳನ್ನು ಒಳಗೊಂಡ ದೇವಾಲಯಗಳಾಗಿದೆ. ಇಂತಹ ದೇವಾಲಯಗಳ ಶಿಲ್ಪಗಳಲ್ಲಿ ರಾಜ-ರಾಣಿಯರ ಪೂರ್ಣ ವಿಗ್ರಹಗಳಿವೆ.
ತೀರದೇವಾಲಯ:
ಮಹಾಬಲಿಪುರಂ ನಲ್ಲಿರುವ ‘ತೀರ ದೇವಾಲಯ’ ಪಲ್ಲವರ ಕಾಲದ ಪ್ರಮುಖ ದೇವಾಲಯಗಳಲ್ಲಿ ಒಂದು. ಈ ದೇವಾಲಯದಲ್ಲಿ ಪಲ್ಲವರ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಸಮುದ್ರ ದಂಚಿನಲ್ಲಿರುವ ದೇವಾಲಯ ವಾದುದರಿಂದ ಅಲೆಗಳ ಹೊಡೆತಕ್ಕೆ ಸಿಕ್ಕು ಶಿಥಿಲಗೊಂಡಿದೆ. ಕೈಲಾಸನಾಥ ದೇವಾಲಯದಲ್ಲಿ ಪಿರಮಿಡ್ಡಿನಾಕಾರದ ಶಿಖರ, ಸಮತಟ್ಟಾದ ಭಾವಣಿಯ ಮಂಟಪ ಹಾಗೂ ಮಂಟಪದ ಸ್ತಂಭಗಳಿಗೆ ಸಿಂಹಪೋಷಕವಾಗಿರುವಂತೆ ಕೆತ್ತಲಾಗಿದೆ. ಈ ದೇವಾಲಯ ಪಲ್ಲವರ ಶೈಲಿಯಲ್ಲಿನ ಮುಖಮಂಟಪ, ಸಭಾಮಂಟಪ ಹಾಗೂ ಗರ್ಭಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದಲ್ಲಿ ಪಲ್ಲವರ ಶೈಲಿಯ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ. ಈ ದೇವಾಲಯದ ತಳಭಾಗದ ಕಟ್ಟಡಕ್ಕೆ ಗ್ರಾನೈಟ್ ಶಿಲೆಯನ್ನು ಬಳಸಿದ್ದಾರೆ. ಮೇಲ್ಕಟ್ಟಡಕ್ಕೆ ಮರಳು ಶಿಲೆಯನ್ನು ಬಳಸಲಾಗಿದೆ.
ವೈಕುಂಠ ಪೆರುಮಾಳ್ ದೇವಾಲಯ ಕೈಲಾಸನಾಥ ದೇವಾಲಯಕ್ಕಿಂತಲೂ ವಿಸ್ತ್ರತವಾಗಿದೆ. ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದ ಮೇಲ್ಬಾಗದಲ್ಲಿ ಗೋಪುರವು ಕಂಡುಬರುತ್ತದೆ.
ಬಿ) ಅಪರಾಜಿತ ಶೈಲಿ:
ಕ್ರಿಶ 9ನೇ ಶತಮಾನಕ್ಕೆ ಸೇರಿದ ಕಟ್ಟಡಗಳನ್ನು ‘ಅಪರಾಜಿತ ಶೈಲಿ’ ಎಂದು ಗುರುತಿಸಿ ಅದೇ ಹೆಸರಿನಲ್ಲಿ ಕರೆಯಲಾಗಿದೆ. ಚೋಳಕಲೆಗೆ ಅಪರಾಜಿತ ಶೈಲಿಯು ಸ್ಪಷ್ಟ ನಿದರ್ಶನವಾಗಿವೆ. ಈ ಶೈಲಿಯಲ್ಲಿ ಲಿಂಗಗಳನ್ನು ವರ್ತುಲಾಕಾರದಲ್ಲಿ ನಿರ್ಮಿಸಲಾಗಿದೆ.
ಮೂರ್ತಿಶಿಲ್ಪ:
ಪಲ್ಲವರ ಕಾಲದಲ್ಲಿ ಮೂರ್ತಿಶಿಲ್ಪ ಕೂಡ ಅಭಿವೃದ್ಧಿಗೊಂಡಿತ್ತು, ಮಹಾಬಲಿಪುರಂ ನಲ್ಲಿರುವ ‘ದೇವಗಂಗೆಯ ಭೂಸ್ಪರ್ಶ’ ಅಥವಾ ‘ಗಂಗಾವತರಣ’ ಶಿಲ್ಪವು ಅತ್ಯುತ್ತಮ ಉದಾಹರಣೆ ಎನಿಸಿದೆ. ಈ ಶಿಲ್ಪಕಲೆಯ ದೃಶ್ಯವನ್ನು ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಈ ಶಿಲೆಯು 99 ಅಡಿ ಉದ್ದ, 45 ಅಡಿ ಅಗಲ ಮತ್ತು 30ಅಡಿ ಎತ್ತರವಿದೆ.
ಮೊದಲನೇ ಮಹೇಂದ್ರವರ್ಮನು ಚಿತ್ರಕಲೆಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರಿಂದ ‘ಚಿತ್ತಕಾರಪುಲಿ’ (ಚಿತ್ರಕಾರರಲ್ಲಿ ಹುಲಿ) ಎಂಬ ಬಿರುದಿಗೆ ಪಾತ್ರನಾಗಿದ್ದನು. ಮಹಾಬಲಿಪುರಂನ ಮಂಟಪದಲ್ಲಿನ ಅನಂತಶಯನ, ಮಹಿಷಾಸುರಮರ್ದಿನಿ ಹಾಗೂ ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿಹಿಡಿದಿರುವ ದೃಶ್ಯ ನೋಡಲು ನಯನ ಮನೋಹರವಾಗಿದೆ.
ಪಲ್ಲವರ ಕಾಲದ ಗುಹಾ ದೇವಾಲಯಗಳಲ್ಲಿ ಭಿತ್ತಿಚಿತ್ರಗಳ ಬೆಳವಣಿಗೆಯನ್ನು ಕಾಣಬಹುದು. ಸಿತ್ತನ್ನವಾಸಲ್ ನಲ್ಲಿ ನೃತ್ಯಭಂಗಿಯಲ್ಲಿರುವ ಅಪ್ಸರೆಯರ ಚಿತ್ರಗಳಿವೆ.
ಕಂಚಿಯ ಪಲ್ಲವರ ಕಲಾಭಿವೃದ್ಧಿಯನ್ನು ಅವಲೋಕಿಸಿ ಪ್ರಖ್ಯಾತ ಕಲಾತಜ್ಞ ‘ಪರ್ಸಿಬ್ರೌನ್’ ದಕ್ಷಿಣಭಾರತದ ಕಲಾಶೈಲಿಯ ಅಭ್ಯುದಯಕ್ಕೆ ಪಲ್ಲವರು ಅಡಿಪಾಯಹಾಕಿದರು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿ.ಎ.ಸ್ಮಿತ್ ರವರು ‘ದಕ್ಷಿಣ ಭಾರತದ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯ ಚರಿತ್ರೆ 6ನೇ ಶತಮಾನದ ಅಂತ್ಯದಲ್ಲಿ ಆರಂಭಗೊಂಡಿತು’ ಎಂದಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಪಲ್ಲವರ ಕಾಲವು ಸಾಂಸ್ಕೃತಿಕ ವೈಭವದ ಮೇಲ್ಪಂಕ್ತಿಯ ಕಾಲವೆನಿಸಿದೆ.