ಭಾರತವು ಪ್ರಾಚೀನ ಕಾಲದಿಂದಲೂ ಯುರೋಪಿನ ರಾಷ್ಟ್ರಗಳೊಂದಿಗೆ ವ್ಯಾಪಾರದ ಸಂಬಂಧವನ್ನು ಹೊಂದಿತ್ತು. ಭಾರತದಲ್ಲಿ ಸಿಗುತ್ತಿದ್ದ ಮುತ್ತು, ರತ್ನ, ಹವಳ, ಬೆಳ್ಳಿ, ರೇಷ್ಮೆ, ಶ್ರೀಗಂಧ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬಾರೀ ಬೇಡಿಕೆಯಿತ್ತು. ಈ ವ್ಯಾಪಾರ ಕಾನ್ ಸ್ಟಾಂಟಿನೋಪಲ್ ಮಾರ್ಗದ ಮೂಲಕ ನಡೆಯುತ್ತಿತ್ತು. ಇದು ಪೂರ್ವ ಹಾಗೂ ಪಶ್ಚಿಮನಾಡುಗಳ ನಡುವಿನ ಪ್ರಮುಖ ವ್ಯಾಪಾರಿ ಮಾರ್ಗವನ್ನು ಕಲ್ಪಿಸಿತ್ತು. ಕ್ರಿ.ಶ. 1453ರಲ್ಲಿ ಅಟೋಮನ್ ತುರ್ಕರು ಕಾನ್ ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡು ಪೂರ್ವ ಹಾಗೂ ಪಶ್ಚಿಮ ನಾಡುಗಳ ನಡುವಿನ ವ್ಯಾಪಾರಿ ಮಾರ್ಗವನ್ನು ಮುಚ್ಚಿದರು. ಇದರಿಂದ ಪೂರ್ವದ ಪ್ರಮುಖ ವಸ್ತುಗಳು ಯುರೋಪಿಯನ್ನರಿಗೆ ದೊರಕದಾದವು. ಭಾರತದ ವಸ್ತುಗಳಿಲ್ಲದೆ ಯುರೋಪಿಯನ್ನರ ಬದುಕು ದುಸ್ತರವಾಯಿತು. ಹೀಗಾಗಿ ಯುರೋಪಿಯನ್ನರು ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಹೀಗೆ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು.

1. ಬಾರ್ಥೋಲೋಮೀಯೋ ಡಯಾಸ್(Bartolomeu Dias):

ಪೋರ್ಚುಗೀಸ್ ರಾಜಕುಮಾರನಾದ ಹೆನ್ರಿಯ ಬೆಂಬಲದಿಂದ ಈತ ಕ್ರಿ.ಶ. 1487ರಲ್ಲಿ ಆಫ್ರಿಕಾದ ಕೇಪ್ ಆಫ್ ಗುಡ್‌ಹೋಪ್ ಭೂಶಿರವನ್ನು ಶೋಧಿಸಿದ.

2.ವಾಸ್ಕೋ-ಡ-ಗಾಮಾ(Vascoda Gama)(1498-1502):

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ ನಾವಿಕ ವಾಸ್ಕೋ-ಡ-ಗಾಮ. ಈತ ಪೋರ್ಚುಗಲ್‌ನ ರಾಜ ಇಮ್ಯಾನುಯಲ್‌ನ ಆರ್ಥಿಕ ಸಹಾಯದೊಂದಿಗೆ ಕ್ರಿ.ಶ. 1497ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಶೋಧಿಸಲು ಲಿಸ್ಟನ್ ನಗರದಿಂದ ಹೊರಟು ಕೇಪ್ ಆಫ್ ಗುಡ್‌ಹೋಪ್ ಭೂಶಿರದ ಮೂಲಕ ಮೋಸಾಂಬಿಕಕ್ಕೆ ಬಂದು ತಲುಪಿದನು. ಅನಂತರ ಅರಬ್ ನಾವಿಕನ ಸಹಾಯದಿಂದ ಅರಬ್ಬಿಸಮುದ್ರದ ಗುಂಟ ಸಾಗಿ 1498ನೇ ಮೇ 17ರಂದು ಭಾರತದ ಮಲಬಾರ್ ಕರಾವಳಿಯ ಕಲ್ಲಿಕೋಟೆಗೆ ಬಂದು ತಲುಪಿದ. ಕಲ್ಲಿಕೋಟೆಯ ದೊರೆ ಜಾಮೋರಿನ್ ವಾಸ್ಕೋ-ಡ-ಗಾಮನನ್ನು ಆದರದಿಂದ ಬರಮಾಡಿಕೊಂಡು ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿಯನ್ನು ನೀಡಿದನು. 

3. ಕೆಬ್ರಾಲ್ Pedro Álvares Cabral (1500):

ಪೆಟ್ರೋ ಅಲ್ವಾರಿಸ್ ಕೆಬ್ರಾಲ್ ತನ್ನ 13 ನೌಕೆಗಳೊಂದಿಗೆ ಲಿಸ್ಟನ್ ಬಂದರಿನಿಂದ ಹೊರಟು ಅರಬ್ಬಿಸಮುದ್ರದ ಮೂಲಕ ಸಾಗಿ ಭಾರತಕ್ಕೆ ಬಂದು ತಲುಪಿದನು. 

4. ವಾಸ್ಕೋ-ಡ-ಗಾಮನ ಪುನರಾಗಮ:

ಕ್ರಿ.ಶ. 1502ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಎರಡನೆಯ ಬಾರಿಗೆ ಆಗಮಿಸಿದ. ಆಗ ಈತ ಕಣ್ಣಾನೂರು, ಕೊಚ್ಚಿನ್ ಹಾಗೂ ಕಲ್ಲಿಕೋಟೆಗಳಲ್ಲಿ ವ್ಯಾಪಾರಿ ಕೋಠಿಗಳನ್ನು ನಿರ್ಮಿಸಿದ.

5. ಪ್ರಾನ್ಸಿಸ್ಕೋ-ಡಿ-ಅಲ್ವೇಡಾ Francisco de Almeida (1505):

ಪ್ರಾನ್ಸಿಸ್ಕೋ-ಡಿ-ಅಡಾ ಭಾರತಕ್ಕೆ ಬಂದ ಪೋರ್ಚುಗೀಸರ ಪ್ರಥಮ ವೈಸರಾಯ್. ಈತ ಭಾರತದೊಂದಿಗೆ ಜಲಮಾರ್ಗದ ಮೂಲಕ ವ್ಯಾಪಾರ ಮಾಡುವ ಇರಾದೆಯನ್ನು ಹೊಂದಿದ್ದ. ಹೀಗಾಗಿ ಈತನ ನೀತಿಯನ್ನು ‘ನೀಲಿಜಲನೀತಿ’ ಎಂದು ಕರೆಯಲಾಗಿದೆ.

6. ಅಲ್ಪಾನೊ-ಡಿ-ಆಲ್ಬುಕರ್ಕ Afonso de Albuquerque (1509):

ಈತ ಭಾರತಕ್ಕೆ ಬಂದ ಪೋರ್ಚುಗೀಸರ ಎರಡನೆಯ ವೈಸ್‌ರಾಯ್. ಅಲ್ಬುಕರ್ಕ ಒಬ್ಬ ದಕ್ಷ ಆಡಳಿತಗಾರ. ಮುತ್ಸದ್ದಿ ಹಾಗೂ ಸಮಾಜ ಸುಧಾರಕನಾಗಿದ್ದ. ಈತ ಪೋರ್ಚುಗೀಸ್ ಸಾಮ್ರಾಜ್ಯಕ್ಕೆ ಭದ್ರವಾದ ತಳಹದಿಯನ್ನು ಹಾಕಿದ. ಹೀಗಾಗಿ ಈತನನ್ನು “ಭಾರತದಲ್ಲಿನ ಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ” ಎಂದು ಕರೆಯಲಾಗಿದೆ. 

ಅಲ್ಬುಕರ್ಕನ ಸಾಧನೆಗಳು:

1. ಕ್ರಿ.ಶ. 1510ರಲ್ಲಿ ಗೋವಾ ಬಂದರನ್ನು ವಿಜಾಪುರದ ಸುಲ್ತಾನನಿಂದ ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ.

2. ಅಲ್ಬುಕರ್ಕ್ ತನ್ನ 6 ವರ್ಷದ ಅಧಿಕಾರವಧಿಯಲ್ಲಿ ಗುಜರಾತಿನ ಡಿಯು-ದಮನ್, ಗೋವಾ, ಪರ್ಶಿಯನ್ ಕೊಲ್ಲಿಯ ಓರ್ಮುಜ್ ಹಾಗೂ ಮಲಕ್ಕಾವನ್ನು ಗೆದ್ದುಕೊಂಡ.

3. ಈತ ಡಿಯು, ದಮನ್, ಗೋವಾ, ಕಲ್ಲಿಕೋಟೆ, ಚೌಲ್, ಕೊಚ್ಚಿನ್, ಕಣ್ಣಾನೂರ ಹಾಗೂ ಸಾಲ್‌ಸೆಟ್‌ಗಳಲ್ಲಿ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿದನು.

4. ಮಲಬಾರ್ ಕರಾವಳಿಯ ರಾಜರಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿ ಅಲ್ಲಿ ಪೋರ್ಚುಗೀಸರ ಪ್ರಭಾವವನ್ನು ಹೆಚ್ಚಿಸಿದನು.

5. ಪೋರ್ಚುಗೀಸ್ ಆಡಳಿತದಲ್ಲಿ ಹಿಂದುಗಳಿಗೆ ಅವಕಾಶ ನೀಡುವ ಮೂಲಕ ಭಾರತೀಯರ ಪ್ರೀತಿಗೆ ಪಾತ್ರನಾದನು.

6. ಭಾರತದಲ್ಲಿ ಪೋರ್ಚುಗೀಸರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅಲ್ಬುಕರ್ಕ್ ಪೋರ್ಚುಗೀಸ್ ಪುರುಷರು ಭಾರತೀಯ ಸ್ತ್ರೀಯರನ್ನು ಮದುವೆಯಾಗುವಂತೆ ಪ್ರೋತ್ಸಾಹ ನೀಡಿದನು.

7. ಪೋರ್ಚುಗೀಸರ ಕೋಠಿಗಳು : ಕೊಚ್ಚಿನ್, ಕಣ್ಣಾನೂರು, ಕ್ವಿಲಾನ್, ಮಂಗಳೂರು, ಗೋವಾ, ಡಿಯು, ದಮನ್, ಬಸೈನ್, ಸಾಲೈಟ್, ಸೂರತ್, ಚಿತ್ತಗಾಂಗ್ ಹಾಗೂ ಹೂಗ್ಲಿ.

ಪೋರ್ಚುಗೀಸ್ ಸಂಪರ್ಕದಿಂದ ಉಂಟಾದ ಪರಿಣಾಮಗಳು:

1. ಪೋರ್ಚುಗೀಸರ ಆಗಮನದಿಂದ ಭಾರತದ ಬಟ್ಟೆ, ಅಕ್ಕಿ ಹಾಗೂ ಸಾಂಬಾರ ಪದಾರ್ಥಗಳಿಗೆ ಯುರೋಪಿನಲ್ಲಿ ಬಾರಿ ಬೇಡಿಕೆಯುಂಟಾಯಿತು.

2. ಪೋರ್ಚುಗೀಸರು ಅಮೇರಿಕದ ಬೆಳೆಗಳಾದ ತಂಬಾಕು, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಆಲೂಗಡ್ಡೆ ಹಾಗೂ ಗೋಡಂಬಿಗಳನ್ನು ಭಾರತದಲ್ಲಿ ಪರಿಚಯಿಸಿದರು.

3. ಪೋರ್ಚುಗೀಸರು ಗೇರುಬೀಜ, ಟೊಮ್ಯಾಟೋ, ಅನಾನಸ್ ಹಾಗೂ ಪಪ್ಪಾಯಿಗಳನ್ನು ತಂದು ಭಾರತದಲ್ಲಿ ಬೆಳೆಯಲು ಆರಂಭಿಸಿದರು.

ಪೋರ್ಚುಗೀಸರ ಅವನತಿಗೆ ಕಾರಣಗಳು:

ಪೋರ್ಚುಗೀಸರು ಕ್ರಮೇಣ ತಮ್ಮ ವಸಾಹತುಗಳನ್ನು ಕಳೆದುಕೊಳ್ಳಲಾರಂಬಿಸಿದರು. ಹೀಗಾಗಿ ಅವರ ಅವನತಿ ಸನ್ನಿಹಿತವಾದಂತೆ ಕಂಡು ಬಂದಿತು. ಪೋರ್ಚುಗೀಸರ ಅವನತಿಗೆ ಈ ಕೆಳಗಿನ ಕಾರಣಗಳನ್ನು ಕೊಡಬಹುದು.

1. ಅಲ್ಬುಕರ್ಕನ ನಂತರ ಬಂದ ಅಧಿಕಾರಿಗಳು ಅಸಮರ್ಥರಾಗಿದ್ದರು.

2. ಪೋರ್ಚುಗೀಸ್ ಅಧಿಕಾರಿಗಳು ಭ್ರಷ್ಟರೂ ಹಾಗೂ ವಿಷಯ ಲಂಪಟರೂ ಆಗಿದ್ದರು.

3. ಪೋರ್ಚುಗೀಸರ ಧಾರ್ಮಿಕ ನೀತಿ ಅಸಹನೆಯಿಂದ ಕೂಡಿದುದಾಗಿತ್ತು.

4. ಇಂಗ್ಲೀಷರು ಹಾಗೂ ಡಚ್ಚರು ಸ್ಪ್ಯಾನಿಷ್ ಆರ್ಮುಡಾವನ್ನು ವಶಪಡಿಸಿಕೊಂಡುದುದು ಪೋರ್ಚುಗೀಸರ ಅವನತಿಗೆ ಕಾರಣವಾಯಿತು.

5. ಪೋರ್ಚುಗೀಸ್ ಅಧಿಕಾರಿಗಳು ವಿಜಯನಗರದ ಅರಸರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಕ್ರಿ.ಶ.1565 ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಸಂಪೂರ್ಣವಾಗಿ ಪರಾಭವಗೊಂಡರು. ಹೀಗಾಗಿ ಪೋರ್ಚುಗೀಸರು ವಿಜಯನಗರವನ್ನೇ ಅವಲಂಬಿಸಿದ್ದರಿಂದ ಅವರ ವ್ಯಾಪಾರಕ್ಕೆ ಕಟ್ಟುಬಿದ್ದಿತು.

6. ಮರಾಠರು ಸಾಲೈಟ್ ಹಾಗು ಬಸೈನ್‌ಗಳನ್ನು ವಶಪಡಿಸಿಕೊಂಡು ಮಹಾರಾಷ್ಟ್ರದ ಕರಾವಳಿಯಿಂದ ಪೋರ್ಚುಗೀಸರನ್ನು ಹೊರಹಾಕಿದರು.

7. ಪೋರ್ಚುಗೀಸರ ಭೂಸೈನ್ಯ ಹಾಗೂ ನೌಕಾಸೈನ್ಯ ಪ್ರಬಲವಾಗಿರಲಿಲ್ಲ. ಇದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು.

8. ಭಾರತಕ್ಕಿಂತ ಅತ್ಯಂತ ಹೆಚ್ಚು ಸಂಪದ್ಭರಿತವಾಗಿದ್ದ ಬ್ರೆಜಿಲ್ ಪೋರ್ಚುಗಿಸರನ್ನು ಆ ಕಡೆಗೆ ಆಕರ್ಷಿಸಿತು.

9. ಪೋರ್ಚುಗಲ್ ಚಿಕ್ಕ ರಾಷ್ಟ್ರವಾಗಿದ್ದು ಭಾರತದಂತಹ ದೊಡ್ಡ ರಾಷ್ಟ್ರವನ್ನು ಎದುರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ.

10. ಉತ್ತರದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪನೆಯಾಗಿದ್ದರಿಂದ ಪೋರ್ಚುಗೀಸರು ತಮ್ಮ ಪ್ರಭಾವವನ್ನು ಅಲ್ಲಿ ಹೆಚ್ಚಿಸಿಕೊಳ್ಳಲು ಅಸಮರ್ಥರಾದರು.

11. ಪೋರ್ಚುಗೀಸರು ಡಿಯು, ದಾಮನ್ ಹಾಗೂ ಗೋವಾ ಹೊರತು ಪಡಿಸಿ ತಮ್ಮ ಎಲ್ಲಾ ವಸಹಾತುಗಳನ್ನು ಕಳೆದುಕೊಂಡರು.

12. ಫ್ರೆಂಚರು ಹಾಗೂ ಬ್ರಿಟಿಷರು ತಮ್ಮ ಪ್ರಬಲವಾದ ನೌಕಾಶಕ್ತಿಯಿಂದ ಪೋರ್ಚುಗೀಸರನ್ನು ಸೋಲಿಸಿ ಭಾರತದಿಂದ ಹೊರಹಾಕಿದರು.