ಮಹಾನಗರ ಪಾಲಿಕೆಯು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಿ ದೊಡ್ಡ ಸಂಸ್ಥೆಯಾಗಿದೆ. ಮೂರು ಲಕ್ಷ ಅಧಿಕ ಸಂಖ್ಯೆಯುಳ್ಳ ನಗರಗಳಲ್ಲಿ ಮಹಾನಗರ ಪಾಲಿಕೆಯನ್ನು ರಚಿಸಲಾಗುತ್ತದೆ. ಆಯಾ ನಗರ ಪಾಲಿಕೆಯ ಜನಸಂಖ್ಯೆಯ ಆಧಾರದ ಮೇಲೆ ಸದಸ್ಯರ ಆಯ್ಕೆಯಾಗುತ್ತದೆ. ಮಹಾನಗರ ಪಾಲಿಕೆಯು 30 ರಿಂದ 100 ಜನ ಸದಸ್ಯರನ್ನು ಹೊಂದಿದೆ. ʻʻಮಹಾನಗರ ಪಾಲಿಕೆ ಸದಸ್ಯರನ್ನು ಕೌನ್ಸಿಲರ್ ಎಂದು ಕರೆಯಲಾಗುತ್ತದೆ.ʼʼ ನಗರ ಪಾಲಿಕೆಯ ವಾರ್ಡಗಳ ಜನರಿಂದ ಚುನಾಯಿತಗೊಳ್ಳುವ ಸದಸ್ಯರ ಜೊತೆಗೆ ಆ ನಗರವನ್ನು ಪ್ರತಿನಿಧಿಸುವ ವಿಧಾನಸಭಾ, ವಿಧಾನಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಭಾಗವಹಿಸಿ ಮತ ಚಲಾಯಿಸುತ್ತಾರೆ. ಇವರೊಂದಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಕ್ಷೇತ್ರ ತಜ್ಞರು ಇರುತ್ತಾರೆ.
ನಗರ ಪಾಲಿಕೆಯ ಕಾರ್ಯಗಳು: (Functions of Corporation)
ಮಹಾನಗರ ಪಾಲಿಕೆಯ ಕಾರ್ಯಗಳು ಈ ಕೆಳಗಿನಂತಿವೆ.
1) ಕಟ್ಟಡಗಳ ನಿರ್ಮಾಣ ಮತ್ತು ಭೂ-ಉಪಯೋಗ ನಿಯಂತ್ರಣ
2) ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆ.
3) ಸಾರ್ವಜನಿಕರ ರಸ್ತೆ ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿ.
4) ಗೃಹ ಕೈಗಾರಿಕೆ ಹಾಗೂ ವ್ಯಾಪಾರದ ಉದ್ದೇಶಗಳಿಗೆ ನೀರು ಸರಬರಾಜು.
5) ಸಾರ್ವಜನಿಕ ಆರೋಗ್ಯ ಒಳ ಚರಂಡಿ ವ್ಯವಸ್ಥೆ ಕೊಳಚೆ ನೀರನ್ನು ಸಂಗ್ರಹಿಸಿ ಸಮರ್ಥ ರೀತಿಯಲ್ಲಿ ಬಳಕೆ ಮಾಡುವುದು.
6) ಸಾರ್ವಜನಿಕ ರಸ್ತೆ ಬೀದಿ ಹಾಗೂ ಮಾರುಕಟ್ಟೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ.
7) ನಗರ ಅರಣ್ಯ ಹಾಗೂ ಪರಿಸರ ಸಂರಕ್ಷಣೆ.
8) ಸಾಮಾಜಿಕವಾಗಿ ಹಿಂದುಳಿದವರು ಸೇರಿದಂತೆ ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರನ್ನು ರಕ್ಷಿಸುವುದು.
9) ನಗರ ಪ್ರದೇಶದ ಬಡತನವನ್ನು ನಿರ್ಮೂಲನೆಗೊಳಿಸುವುದು.
10) ರಸ್ತೆಗಳ ನಾಮಕರಣ ಹಾಗೂ ಮನೆ ನಂಬರ್ ಗಳನ್ನು ಹಾಕುವುದು.
11) ಸಾರ್ವಜನಿಕ ಮಾರುಕಟ್ಟೆಗಳ ನಿರ್ಮಾಣ ಮತ್ತು ಸಂರಕ್ಷಣೆ.
12) ಸಾಂಕ್ರಾಮಿಕ ರೋಗಗಳು ಬರದಂತೆ ಕ್ರಮ ಕೈಗೊಳ್ಳುವುದು.
13) ಆಹಾರ ಪದಾರ್ಥ, ಹಾಲು ಮತ್ತು ಔಷಧಿಗಳ ಕಲಬೆರಕೆಯನ್ನು ತಡೆಯುವುದು.
14) ಜನನ ಮತ್ತು ಮರಣಗಳ ದಾಖಲೆ ಇಡುವುದು.
15) ಪ್ರಾಥಮಿಕ ಶಾಲೆಗಳ ಸ್ಥಾಪನೆ ಮತ್ತು ಸಂರಕ್ಷಣೆ.
16) ಪಾರ್ಕುಗಳು ಉದ್ಯಾನವನಗಳು ಹಾಗೂ ಆಟದ ಮೈದಾನಗಳ ನಿರ್ಮಾಣ ಮತ್ತು ಸಂರಕ್ಷಣೆ.
17) ಸ್ಮಶಾನಗಳು ಮತ್ತು ಸ್ಮಶಾನ ಸ್ಥಳಗಳು ಹಾಗೂ ವಿದ್ಯುತ್ ಶವಗಾರಿಗಳನ್ನು ನೋಡಿಕೊಳ್ಳುವುದು.
18) ಗೋಶಾಲೆಗಳ ನಿರ್ವಹಣೆ.
19) ಸಸಿಗಳನ್ನು ನೆಡುವುದು ಮತ್ತು ಅವುಗಳ ರಕ್ಷಣೆ.
20) ಶಿಶು ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ.
21) ಈಜುಕೊಳ ಹಾಗೂ ಸ್ನಾನ ಘಟ್ಟಗಳ ನಿರ್ಮಾಣ ಹಾಗೂ ನಿರ್ವಹಣೆ.
22) ಪ್ರಾಣಿಗಳ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ.
23) ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿಗಳ ಸ್ಥಾಪನೆ ಮತ್ತು ಸಂರಕ್ಷಣೆ
24) ಪ್ರಕೃತಿ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯ ಮಾಡುವುದು.
25) ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ಸ್ಥಾಪನೆ.
26) ಕಸಾಯಿ ಖಾನೆ ಮತ್ತು ಚರ್ಮ ಹದ ಮಾಡುವ ಕಸಾಯಿ ಖಾನೆಗಳನ್ನು ನಿರ್ವಹಿಸುವುದು
ಕರ್ನಾಟಕದಲ್ಲಿ ಸದ್ಯ ಹುಬ್ಬಳ್ಳಿ, ಧಾರವಾಡ, ಮೈಸೂರು, ಗುಲ್ಬರ್ಗ, ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳಲ್ಲಿ ಮಹಾನಗರ ಪಾಲಿಕೆಗಳು ಕಾರ್ಯ ನಿರ್ವಹಿಸುತ್ತವೆ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿ ಇದೆ.
ಉಪಸಂಹಾರ
ಒಟ್ಟಿನಲ್ಲಿ ಮಹಾನಗರ ಪಾಲಿಕೆ ನಗರಗಳ ಸಮಗ್ರ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ. ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೂ ಸಹಕಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವದ್ದು. ಉತ್ತಮ ನಗರ ಜೀವನಕ್ಕಾಗಿ ಮಹಾನಗರ ಪಾಲಿಕೆಯ ಕಾರ್ಯಗಳು ಅನಿವಾರ್ಯವಾಗಿವೆ.