ಭಾರತದ ಶಾಸಕಾಂಗವು ವರ್ಷದಲ್ಲಿ ಎರಡು ಬಾರಿ ಸಭೆ ಸೇರಬೇಕು ಮತ್ತು ಎರಡು ಸಮಾವೇಶಗಳ ನಡುವಿನ ಅಂತರ ೬ ತಿಂಗಳ ಹೆಚ್ಚಾಗಿರಬಾರದೆಂದು ಭಾರತ ಸಂವಿಧಾನದ 85 ನೇ ವಿಧಿಯು ಸ್ಪಷ್ಟಪಡಿಸುತ್ತದೆ. ಅಧಿಕಾರ ಮತ್ತು ಕಾರ್ಯಗಳು ಈ ಎರಡು ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥ ಪದಗಳಾಗಿ ಬಳಕೆಗೆ ತರಲಾಗಿದೆ. ಇದಕ್ಕೆ ಕಾರಣವೆಂದರೆ ಒಬ್ಬ ಅಧಿಕಾರಿಯು ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾದರೆ ಅದಕ್ಕೆ ಅಗತ್ಯವಿರುವ ಅಧಿಕಾರವಿರಬೇಕು. ರಾಜ್ಯಸಭೆಯ ಕಾರ್ಯಗಳು ಈ ಕೆಳಗಿನಂತಿವೆ.

1. ಶಾಸನೀಯ ಕೆಲಸ ಕಾರ್ಯಗಳು: (Legislative Functions)

ಹಣಕಾಸಿನ ಮಸೂದೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸನೀಯ ಅಧಿಕಾರದಲ್ಲಿ ರಾಜ್ಯಸಭೆಯು ಲೋಕಸಭೆಯಷ್ಟೇ ಸಮಾನವಕಾಶವನ್ನು ಹೊಂದಿದೆ. ಹಣಕಾಸಿಗೆ ಸಂಬಂಧಿಸಿದ ಮಸೂದೆಗಳು ರಾಜ್ಯಸಭೆಯಲ್ಲಿ ೨/೩  ಬಹುಮತ ಪಡೆದ ನಂತರವೇ ಮುಂದಿನ ನಿರ್ಧಾರಕ್ಕಾಗಿ ಲೋಕಸಭೆಗೆ ಹೋಗುತ್ತದೆ. ಯಾವುದೇ ಮಸೂದೆಯು ಕಾನೂನು ರೂಪ ತಾಳಲು ಎರಡೂ ಸದನಗಳ ಒಪ್ಪಿಗೆ ಬೇಕು. ಒಂದು ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದರೆ ಆಗ ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನಗಳನ್ನು ಕರೆಯಬಹುದು. ಈ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ನಿರ್ವಹಿಸುತ್ತಾರೆ. ನಂತರ ಎರಡು ಸದನಗಳ ಹಾಜರಿರುವ ಒಟ್ಟು ಸದಸ್ಯರುಗಳ ಸಂಖ್ಯೆಯ ಬಹುಮತದ  ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯ ಸದಸ್ಯರುಗಳ ಸಂಖ್ಯಾಬಲ ಹೆಚ್ಚಿರುವ ಕಾರಣದಿಂದ ಲೋಕಸಭೆಯ ಅಭಿಪ್ರಾಯಕ್ಕೆ ಮನ್ನಣೆ ಸಿಗುವ ಸಂಭವ ಹೆಚ್ಚು.

ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನು ಒಪ್ಪಿಗೆಗಾಗಿ ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಸಭೆಯು ಆ ವಸೂದೆಯನ್ನು ಆರು ತಿಂಗಳವರೆಗೆ ತಡೆಹಿಡಿಯಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮುಂದೂಡಲು ಬರುವುದಿಲ್ಲ. ಆರು ತಿಂಗಳೊಳಗೆ ಮಸೂದೆಗೆ ಅನುಮೋದನೆ ನೀಡಬೇಕು. ಒಂದು ವೇಳೆ ಲೋಕಸಭೆಯಲ್ಲಿ ತೀರ್ಮಾನಿಸಿದ ಮಸೂದೆಗೆ 180 ದಿನಗಳಲ್ಲಿ ಅನುಮೋದನೆ ನೀಡದಿದ್ದಲ್ಲಿ ಆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರಕಿದೆ ಎಂದು ಪರಿಗಣಿಸಲಾಗುವುದು.

 2.  ಹಣಕಾಸಿನ ಕಾರ್ಯಗಳು: (Financial Functions)

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯೇ ಸಾರ್ವಭೌಮತ್ವವನ್ನು ಹೊಂದಿದೆ. ಸಂವಿಧಾನದ 10ನೇ ವಿಧಿಯ ಅನ್ವಯ ಹಣಕಾಸಿನ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡುವ ಅಧಿಕಾರವಿಲ್ಲದಿರುವುದೇ  ಇದಕ್ಕೆ ಕಾರಣ. ಹಾಗಾಗಿ ಹಣಕಾಸಿನ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು. ಲೋಕಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ನಂತರ ಅದನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ಆಗ ರಾಜ್ಯಸಭೆಯು ಈ ಮಸೂದೆಯ ಬಗ್ಗೆ ಚರ್ಚಿಸಬಹುದು ಅಥವಾ ಕೆಲವಾರು ತಿದ್ದುಪಡಿ ಮಾಡಲು ಸೂಚನೆ ನೀಡಬಹುದು. ಆದರೆ ರಾಜ್ಯಸಭೆಯ ಸೂಚನೆಯನ್ನು ಒಪ್ಪುವುದು ಮತ್ತು ಬಿಡುವುದು ಲೋಕಸಭೆಗೆ ಬಿಟ್ಟ ವಿಚಾರ. ಹಣಕಾಸು ಮಸೂದೆ ಕೈ ಸೇರಿದ 14 ದಿನದೊಳಗೆ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ಸೂಚಿಸಬೇಕು. ಒಂದು ವೇಳೆ 14 ದಿನದೊಳಗೆ ಒಪ್ಪಿಗೆಯನ್ನು ಸೂಚಿಸಿ ಲೋಕಸಭೆಗೆ ಹಿಂತಿರುಗಿಸದಿದ್ದರೆ ಆ ವಸೂದೆಯನ್ನು ಉಭಯ ಸದನಗಳು ಒಪ್ಪಿಕೊಂಡಿವೆ ಎಂದು ಅರ್ಥ. ಹಾಗಾಗಿ ಹಣಕಾಸಿನ ಮಸೂದೆಯ ಮೇಲೆ ರಾಜ್ಯಸಭೆಗೆ ಯಾವ ಅಧಿಕಾರವನ್ನು ಸಂವಿಧಾನ ನೀಡಿಲ್ಲ. ಗ್ರ್ಯಾಂಟುಗಳ ಬೇಡಿಕೆಯನ್ನು ಸಹ ರಾಜ್ಯಸಭೆಯ ಮುಂದಿಡುವ ಅಗತ್ಯತೆ ಇಲ್ಲ.

3. ಕಾರ್ಯಾಂಗದ ಅಧಿಕಾರಗಳು: (Executive Powers)

 ಭಾರತದಲ್ಲಿ ಸಂಸದೀಯ ಪದ್ಧತಿ ಜಾರಿಯಲ್ಲಿರುವುದರಿಂದ ನೈಜಕಾರ್ಯಾಂಗವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆಯೇ ವಿನಹ ರಾಜ್ಯಸಭೆಗೆ ಅಲ್ಲ. ಪ್ರಧಾನಿ ನಾಯಕತ್ವದ ಕೇಂದ್ರ ಮಂತ್ರಿ ಮಂಡಲವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ. ಲೋಕಸಭೆ ಅವಿಶ್ವಾಸ ಗೊತ್ತುವಳಿಯ ಮೂಲಕ ಕೇಂದ್ರ ಮಂತ್ರಿ ಮಂಡಳವನ್ನು ಅಧಿಕಾರದಿಂದ ಕಿತ್ತೊಗೆಯುವ ಅಧಿಕಾರವನ್ನು ಹೊಂದಿದೆ. ರಾಜ್ಯಸಭೆಗೆ ಕಾರ್ಯಾಂಗದ ಮೇಲೆ ಅಧಿಕಾರವಿಲ್ಲದಿದ್ದರೂ ಸರ್ಕಾರದ ಕಾರ್ಯಾಚರಣೆಯ ಕುರಿತು ಅವಶ್ಯ ಮಾಹಿತಿಯನ್ನು ಸಮಯದಿಂದ ಸಮಯಕ್ಕೆ ಪಡೆಯಬಹುದಾಗಿದೆ. ಆದರೆ ರಾಜ್ಯಸಭೆಯ ಅನುಮತಿಯನ್ನು ಪಡೆಯದೇ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ವಸೂಲಿ ಮಾಡುವಂತೆಯೂ ಇಲ್ಲ. ರಾಷ್ಟ್ರಪತಿ ಮತ್ತು ಅಂತರಾಷ್ಟ್ರ ಮಟ್ಟದ ವಿಷಯಗಳ ಕುರಿತು ರಾಜ್ಯಸಭೆಯ ಸದಸ್ಯರು ಸರ್ಕಾರವನ್ನು ಪ್ರಶ್ನೆ ವೇಳೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ಕಡಿತದ ಸೂಚನೆ ಹಾಗೂ ಗಮನಸೆಳೆಯುವ ಸೂಚನೆ ಮುಂತಾದ ಚರ್ಚಾ ಸಮಯಗಳಲ್ಲಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುವ ಮೂಲಕ ನಿಯಂತ್ರಿಸಬಹುದು.

 4.  ನ್ಯಾಯಾಂಗಿಯ ಅಧಿಕಾರಗಳು: (Judicial Power)

ರಾಜ್ಯಸಭೆಯು ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತು ನ್ಯಾಯ ನಿರ್ಣಯವನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯಸಭೆಯು ಲೋಕಸಭೆಯೊಂದಿಗೆ ಸೇರಿ ಸಂವಿಧಾನ ಉಲ್ಲಂಘನೆಗಾಗಿ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಅಧಿಕಾರ ಹೊಂದಿದೆ. ಹಾಗೆಯೇ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು  ಪದಚ್ಯುತಗೊಳಿಸುವ ಅಧಿಕಾರವನ್ನು ಪಡೆದಿದೆ. ಇದಕ್ಕೆ ಸದನದಲ್ಲಿ ೨/೩ ಬಹುಮತದ ನಿರ್ಣಯಬೇಕು. ಆಗ ರಾಷ್ಟ್ರಪತಿಗಳು ಮತ್ತು ನ್ಯಾಯಾಧೀಶರು ಪದತ್ಯಾಗ ಮಾಡುತ್ತಾರೆ. ಇದನ್ನೇ ʻʻವಾಗ್ದಂಡನೆ  ಅಥವಾ ಮಹಾಭಿಯೋಗ ಎಂದು ಕರೆಯುತ್ತಾರೆ. ಆದರೆ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸಲು ಮಹಾಭಿಯೋಗದ ಅಗತ್ಯ ಇರುವುದಿಲ್ಲ. ರಾಜ್ಯಸಭೆಯ ಹೆಚ್ಚಿನ ಸದಸ್ಯರು ಒಂದು ಮಂಡನೆಯನ್ನು ಹೊರಡಿಸುತ್ತಾರೆ.  ನಂತರ ಅದಕ್ಕೆ ಲೋಕಸಭೆಯ ಒಪ್ಪಿಗೆ ದೊರಕಿದರೆ ಉಪರಾಷ್ಟ್ರಪತಿಗಳು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಅದೇ ರೀತಿ ಮುಖ್ಯ ಚುನಾವಣಾ ಅಧಿಕಾರಿಗಳು ಮಹಾಲೇಖಪಾಲಕರು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ಗಳು ಹಾಗೂ ಮುಖ್ಯವಿಜಿಲೆನ್ಸ್ ಅಧಿಕಾರಿಗಳನ್ನು ಪದಚ್ಯುತಿಗೊಳಿಸುವಲ್ಲಿ ರಾಜ್ಯಸಭೆಯ ಪಾತ್ರವಿರುತ್ತದೆ.

5. ಚುನಾವಣಾ ಅಧಿಕಾರಗಳು: (Election Powers)

ರಾಜ್ಯಸಭೆಯ ಸದಸ್ಯರು ವಿಶೇಷ ಮತದಾನದ ಹಕ್ಕನ್ನು ಪಡೆದಿದ್ದಾರೆ. ಉದಾಹರಣೆ ರಾಜ್ಯಸಭೆಯ ಚುನಾಯಿತ ಸದಸ್ಯರು ಲೋಕಸಭೆ ಹಾಗೂ ಎಲ್ಲಾ ವಿಧಾನಸಭಾ ಸದಸ್ಯರೊಂದಿಗೆ ಸೇರಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ರಾಜ್ಯಸಭೆಯ ಸದಸ್ಯರು ಹಾಗೂ ಲೋಕಸಭಾಸದಸ್ಯರು ಸೇರಿ ಉಪ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭಾ ಸದಸ್ಯರು ತಮ್ಮೊಳಗೆ ಒಬ್ಬನನ್ನು ರಾಜ್ಯಸಭಾ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

6. ಸಂವಿಧಾನ ತಿದ್ದುಪಡಿ ಅಧಿಕಾರ: (Power of Constitutional Amendments)

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು. ಸಂವಿಧಾನ ತಿದ್ದುಪಡಿ ಮಸೂದೆ ಮೊದಲು ರಾಜ್ಯಸಭೆಯಲ್ಲಿ ಮಂಡನೆಯಾದಾಗ ಅದರ ಅನುಮೋದನೆಗಾಗಿ ಲೋಕಸಭೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಆ ಮಸೂದೆಯು ಶಾಸನವಾಗಿ ಹೊರ ಬರಬೇಕಾದರೆ ಸದನದಲ್ಲಿ ಹಾಜರಾಗಿರುವ ೨/೩  ಬಹುಮತದ ಸದಸ್ಯರ ಬೆಂಬಲ ಬೇಕು. ತಿದ್ದುಪಡಿ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆಯೇ ಸಾರ್ವಭೌಮತ್ವವನ್ನು  ಹೊಂದಿದೆ. ಒಂದು ವೇಳೆ ತಿದ್ದುಪಡಿಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾದರೆ ಜಂಟಿ ಸಮಾವೇಶದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಭಾರತದ ಸಂವಿಧಾನದಲ್ಲಿ ಇಲ್ಲ. ರಾಜ್ಯಸಭೆಯು ತಿದ್ದುಪಡಿ ಮಸೂದೆಯನ್ನು ಒಂದು ವೇಳೆ ಅಂಗೀಕರಿಸದೆ ಹೋದರೆ ತಿದ್ದುಪಡಿ ಮಸೂದೆಯು ಬಿದ್ದು ಹೋಗುತ್ತದೆ.

7. ತುರ್ತು ಪರಿಸ್ಥಿತಿಯನ್ನು ಅನುಮೋದಿಸುವುದು: (Passing the Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಒಂದು ತಿಂಗಳೊಳಗೆ ಸಂಸತ್ತಿನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲವಾದರೆ ತುರ್ತು ಪರಿಸ್ಥಿತಿ ರದ್ದಾಗುತ್ತದೆ. ಒಂದು ವೇಳೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಲೋಕಸಭೆ ವಿಸರ್ಜನೆಗೊಂಡಿದ್ದರೆ ರಾಜ್ಯಸಭೆಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆದರೆ ಹೊಸ ಲೋಕಸಭೆಯು ಅಸ್ತಿತ್ವಕ್ಕೆ ಬಂದ ನಂತರ 30 ದಿನದೊಳಗೆ ತುರ್ತು ಪರಿಸ್ಥಿತಿಗೆ ಲೋಕಸಭೆಯು ಅಂಗೀಕಾರ ಪಡೆದುಕೊಳ್ಳಬೇಕು.

 8. ಇತರೆ ಅಧಿಕಾರಗಳು: (Other Powers)

ಸಂವಿಧಾನದ 249ನೇ ವಿಧಿಯ ಪ್ರಕಾರ ರಾಜ್ಯಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ಮೂರನೇ ಎರಡಕ್ಕಿಂತ ಹೆಚ್ಚಿನ ಸದಸ್ಯರ ಬಹುಮತದೊಂದಿಗೆ ರಾಜ್ಯ ಪಟ್ಟಿಯ ವಿಷಯವನ್ನು ರಾಷ್ಟ್ರೀಯ ಮಹತ್ವವುಳ್ಳ ವಿಷಯವೆಂದು ತೀರ್ಮಾನಿಸಲಾಗಿದೆ.

ಸಂವಿಧಾನದ 312ನೇ ವಿಧಿಯಂತೆ ರಾಜ್ಯಸಭೆ ೨/೩  ಹೆಚ್ಚಿನ ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಒಂದು ಅಥವಾ ಹೆಚ್ಚಿನ ಅಖಿಲ ಭಾರತೀಯ ಸೇವೆಗಳನ್ನು ರಚಿಸಬಹುದಾಗಿದೆ.

ಉಪಸಂಹಾರ

ಒಟ್ಟಾರೆ ರಾಜ್ಯಸಭೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಲೋಕಸಭೆಯ ಮೇಲೆ ಸಮತೋಲನ ಸಾಧಿಸುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಶಾಸನ, ಸಂವಿಧಾನ ತಿದ್ದುಪಡಿ, ತುರ್ತು ಪರಿಸ್ಥಿತಿ ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ರಾಜ್ಯಸಭೆಯ ಪಾತ್ರ ಅನನ್ಯವಾಗಿದೆ. ಹೀಗಾಗಿ ರಾಜ್ಯಸಭೆಯ ಕಾರ್ಯಗಳು ಭಾರತೀಯ ಸಂಸತ್ತಿನ ಸ್ಥಿರತೆ ಮತ್ತು ಸಮರ್ಥತೆಗೆ ಬಲ ನೀಡುತ್ತವೆ.